ಅವತ್ತಿನಿಂದ ನಾವು ಪ್ರಬುದ್ಧರಾಗತೊಡಗಿದೆವು...

25 Nov 2009

10 ಪ್ರತಿಕ್ರಿಯೆ
ಏಪ್ರಿಲ್‌ಗೆ ಏಳು ವರ್ಷಗಳಾದವು.

ಕಳೆದ ಏಳು ವರ್ಷಗಳಲ್ಲಿ ಬದುಕು ನಮ್ಮನ್ನು ಅವಶ್ಯಕತೆಗಿಂತ ಹೆಚ್ಚು ಪ್ರಬುದ್ಧರನ್ನಾಗಿಸಿದೆ. ಮಾಗಿಸಿದೆ. ಪೀಡಿಸಿದೆ. ಎಂದೂ ಮರೆಯದ ಪಾಠಗಳನ್ನು ಕಲಿಸಿದೆ.

ಇವೆಲ್ಲಕ್ಕಿಂತ ಹೆಚ್ಚಿನ ಪಾಠಗಳನ್ನು ನಮ್ಮ ಏಳು ವರ್ಷದ ಮಗಳು ಗೌರಿ ಕಲಿಸಿದ್ದಾಳೆ. ಇನ್ನೂ ಕಲಿಸುತ್ತಲೇ ಇದ್ದಾಳೆ.
ವ್ಯತ್ಯಾಸ ಇಷ್ಟೇ: ಮೊದಮೊದಲು ಆ ಪಾಠಗಳನ್ನು ಬಹಳ ಕಷ್ಟಪಟ್ಟು ಕಲಿಯುತ್ತಿದ್ದೆವು. ಕಣ್ಣೀರಿಡುತ್ತ ಕಲಿಯುತ್ತಿದ್ದೆವು. ವೃತ್ತಿಯ ಸವಾಲುಗಳೇನೇ ಇರಲಿ, ಅವು ನಮ್ಮ ಕೈಯೊಳಗೆ ಇರುವಂಥವು. ಅವನ್ನು ಸಮರ್ಥವಾಗಿ ಎದುರಿಸಬಲ್ಲೆವು. ಆದರೆ ಕೆಲವು ಸವಾಲುಗಳು ನಮ್ಮ ವ್ಯಾಪ್ತಿಯಾಚೆಗೂ ಇರುತ್ತವೆ ಎಂಬ ಮಹಾಪಾಠವನ್ನು ಮಾತು ಬಾರದ, ಇದುವರೆಗೂ ಮಾತನ್ನು ಆಡದ ಮಗಳು ಕಲಿಸುವಾಗ ಅದನ್ನು ಜೀರ್ಣಿಸಿಕೊಳ್ಳಲು ನಿಜಕ್ಕೂ ತುಂಬ ಕಷ್ಟಪಟ್ಟೆವು.

ಅವು ನಿಜಕ್ಕೂ ಯಾತನಾಮಯ ದಿನಗಳು.

ಆ ದಿನಗಳಲ್ಲಿ ಆಕೆ ಪೂರ್ತಿ ಕಣ್ಣರಳಿಸಿ ನಮ್ಮನ್ನು ನೋಡುತ್ತಿರಲಿಲ್ಲ. ‘ನಾಲ್ಕು ತಿಂಗಳ ಮಗು ಹಾಗೆ ನೋಡಬೇಕಂತ ಏನು ಅರ್ಜೆಂಟಿದೆ?’ ಎಂದು ಕೇಳಿದವರು ಕೊಪ್ಪಳದ ಮಕ್ಕಳ ಡಾಕ್ಟರ್.

‘ಇಲ್ಲ, ಆಕೆ ಎಲ್ಲ ಮಕ್ಕಳಂತಿಲ್ಲ. ಕಣ್ರೆಪ್ಪೆಗಳು ನಿದ್ರೆಯಿಂದ ಜೋಲುವಂತಿವೆ. ಜೊಲ್ಲು ನಿಲ್ಲುತ್ತಿಲ್ಲ. ಕುಡಿದ ಹಾಲು ಸುಲಭವಾಗಿ ಹೊರಬಂದುಬಿಡುತ್ತದೆ. ಗೋಣು ನಿಂತಿಲ್ಲ...’- ನಮ್ಮ ದೂರುಗಳ ಪಟ್ಟಿ ದೊಡ್ಡದಿತ್ತು.

ಆದರೆ, ಕೇಳಿಸಿಕೊಳ್ಳುವ ವ್ಯವಧಾನ ಅವರಿಗೆ ಇರಲಿಲ್ಲ. ಅವರೊಬ್ಬರೇ ಅಲ್ಲ, ಕಳೆದ ಏಳು ವರ್ಷಗಳಲ್ಲಿ ನಾವು ಕಂಡ ಬಹಳಷ್ಟು ವೈದ್ಯರಲ್ಲಿ ಈ ಅಗತ್ಯ ಗುಣ ಕಂಡುಬರಲಿಲ್ಲ. ‘ಮಗು ಚಿಕ್ಕದು. ಆರು ತಿಂಗಳು ತುಂಬಿದಾಗ ಎಲ್ಲ  ಸರಿಹೋಗುತ್ತದೆ’ ಎಂದು ಅವರು ಮಾತು ಮುಗಿಸಿದರು.

ನನ್ನ ಮನದಲ್ಲಿ ನೂರಾರು ಪ್ರಶ್ನೆಗಳ್ದಿದವು. ಆದರೆ, ಯಾರನ್ನು ಕೇಳಬೇಕು? ಆದರೂ ಒಂದು ಭರವಸೆಯಿತ್ತು. ಮಗು ಚಿಕ್ಕದಿದೆ. ಇನ್ನೆರಡು ತಿಂಗಳು ಹೋಗಲಿ, ಪರಿಸ್ಥಿತಿ ಸುಧಾರಿಸಬಹುದು ಎಂಬ ಮಾತು ಮನದಲ್ಲಿ ಕೂತಿತು.

ಆ ಎರಡು ತಿಂಗಳುಗಳೂ ಕಳೆದು ಹೋದವು. ಆದರೆ ಮಗುವಿನಲ್ಲಿ ನಾವು ಗುರುತಿಸಿದ್ದ ದೋಷಗಳು ಮಾತ್ರ ಕಳೆದು ಹೋಗಲಿಲ್ಲ. ವೈದ್ಯರು ಮತ್ತೆರಡು ತಿಂಗಳಿನ ಭರವಸೆ ನೀಡಿದರು.

ಮಗಳು ಗೌರಿಯ ಕತ್ತು ಸ್ಥಿರವಾಗಿದ್ದು ಹುಟ್ಟಿದ ಆರು ತಿಂಗಳಿನ ನಂತರ. ಆಗಲೂ ಆಕೆ ನಮ್ಮ ಮುಖ ನೋಡುತ್ತಿರಲಿಲ್ಲ. ತನ್ನ ಪಾಡಿಗೆ ತಾನು ಖುಷಿಯಾಗಿ ಕೈಕಾಲು ಆಡಿಸುತ್ತ ಇರುತ್ತಿದ್ದಳು. ಯಾವಾಗಾದರೊಮ್ಮೆ ಬಹಳ ಕಷ್ಟಪಟ್ಟು ಬೋರಲು ಬೀಳುತ್ತಿದ್ದಳು. ಆದರೆ, ಮತ್ತೆ ಬೆನ್ನ ಮೇಲೆ ಹೊರಳಲು ಆಗುತ್ತಿರಲ್ಲಿಲ.

‘ಮಗು ಕೊಂಚ ದಪ್ಪ ಇರುವುದರಿಂದ ಹೀಗಾಗುತ್ತದೆ’ ಎಂಬ ಇನ್ನೂ ಒಂದು ಭರವಸೆ ವೈದ್ಯರಿಂದ ಬಂದಿತು. ಹತ್ತಿರದ ಸಂಬಂಧಿಗಳೂ ಇದನ್ನು ಒಪ್ಪಿದರು. ನನಗೆ ಏನೋ ಅನುಮಾನ.

ಆ ಎರಡು ತಿಂಗಳುಗಳೂ ಗತಿಸಿದವು. ಆದರೆ ಪರಿಸ್ಥಿತಿ ಹಾಗೇ ಇತ್ತು. ಮಗು ದೈಹಿಕವಾಗಿ ಬೆಳೆದಿತ್ತು. ಬೋರಲು ಬೀಳುವ ಪ್ರಮಾಣ ಜಾಸ್ತಿಯಾಗಿದ್ದು ಬಿಟ್ಟರೆ ಅದು ಒಂದು ತಿಂಗಳಿನ ಮಗುವಿನಂತೆ. ಮುಖ ಮಾತ್ರ ತಿಳಿಯಾಗಿತ್ತು. ಮಾನಸಿಕ ವೈಕಲ್ಯದ ಯಾವೊಂದು ಸುಳಿವೂ ಅಲ್ಲಿರಲಿಲ್ಲ.

ಗೌರಿಗೆ ಎಂಟು ತಿಂಗಳಾದ ನಂತರವೂ ಕೊಪ್ಪಳದ ವೈದ್ಯರ ಭರವಸೆಯ ಮಾತುಗಳನ್ನು ನಂಬುವುದು ಕಷ್ಟವೆನಿಸತೊಡಗಿ ಪಕ್ಕದ ನಗರ ಹೊಸಪೇಟೆಗೆ ಹೋದೆವು. ಅಲ್ಲಿಯ ವೈದ್ಯರು ಮಗುವನ್ನು ಕೊಂಚ ಹೆಚ್ಚೇ ಪರೀಕ್ಷಿಸಿ ನೋಡಿದರು. ತಲೆಯ ಗಾತ್ರ ಅಳೆದರು. ದೈಹಿಕ ಚಟುವಟಿಕೆಗಳ ಮಾಹಿತಿ ಕೇಳಿ ಗುರುತು ಹಾಕಿಕೊಂಡರು. ಯಾವುದಕ್ಕೂ ಇರಲಿ ಎಂದು ನೇತ್ರ ತಜ್ಞರ ಹತ್ತಿರ ಕಳಿಸಿದರು. ಪಾಪ, ಅವರು ಕೂಡ ಸಮಾಧಾನದಿಂದಲೇ ವಿವರವಾಗಿ ಪರೀಕ್ಷಿಸಿ ಘೋಷಿಸಿದರು:

‘ಈಕಿ ಕಣ್ಣು ನಾರ್ಮಲ್ ಅದಾವ...!’

ಮುಳುಗುವವರ ಕೈಗೆ ಹುಲ್ಲು ಕಡ್ಡಿ ಸಿಕ್ಕಿತ್ತು.

ಆದರೆ, ಹೊಸಪೇಟೆ ಡಾಕ್ಟರರ ವರದಿ ಆ ಸಣ್ಣ ಕಡ್ಡಿಯನ್ನೂ ಉಳಿಸಲಿಲ್ಲ. ‘ಈಕೆಯ ಬೆಳವಣಿಗೆ ನಿಧಾನವಾಗಿದೆ. ಮೆದುಳು ಪೂರ್ತಿ ವಿಕಾಸವಾಗಿಲ್ಲ. ನೀವು ದೊಡ್ಡ ಡಾಕ್ಟರರಿಗೆ ತೋರಿಸಿ’ ಎಂದಾಗ ನಾವಿಟ್ಟ ಕಣ್ಣೀರಿನ ನೆನಪು ಇವತ್ತಿಗೂ ಕಣ್ಣೀರು ತರಿಸುತ್ತದೆ.

ಮಗು ಮಾತ್ರ ಹಾಗೇ ಇತ್ತು. ಕುಡಿಸಿದ ಹಾಲು ಅನಾಯಾಸವಾಗಿ ಹೊರಬರುತ್ತಿತ್ತು. ಕಂಕುಳಕ್ಕೆ ಕೈಹಾಕಿ ನೆಲದ ಮೇಲೆ ನಿಲ್ಲಿಸಹೋದರೆ ಸಹಜವಾಗಿ ಕಾಣುತ್ತಿದ್ದ ಕಾಲುಗಳು ಜೋಲುತ್ತಿದ್ದವು. ದೃಷ್ಟಿ ಸ್ಥಿರವಾಗಿರುತ್ತಿದ್ದಿಲ್ಲ. ಆದರೆ, ದೋಷ ಕಾಲಿನದಾಗಲಿ, ಕಣ್ಣಿನದಾಗಲಿ ಆಗಿರಲಿಲ್ಲ. ಈ ಅಂಗಗಳನ್ನು ಬೆಂಬಲಿಸಬೇಕಾದ ಮೆದುಳಿನದಾಗಿತ್ತು.

ಇನ್ನೊಬ್ಬ ಡಾಕ್ಟರಿಗೆ ತೋರಿಸಿ ನೋಡೋಣ ಎಂದು ಹೊಸಪೇಟೆಯಿಂದ ಧಾರವಾಡಕ್ಕೆ ಹೋದೆವು. ಇದ್ದುದರಲ್ಲಿಯೇ  ಕೊಂಚ ಹೆಸರು ಪಡೆದಿದ್ದ ಇನ್ನೊಬ್ಬ ಮಕ್ಕಳ ಡಾಕ್ಟರಿಗೆ ತೋರಿಸಿದೆವು. ಮೊದಲ ಬಾರಿ ಗೌರಿಯ ಮೆದುಳನ್ನು ಸ್ಕ್ಯಾನ್ ಮಾಡಲಾಯಿತು. ಚಿತ್ರಗಳು ಸ್ಪಷ್ಟವಾಗಿದ್ದವು. ಗೌರಿಯ ಮೆದುಳಿನ ಕೆಲವು ಭಾಗಗಳು ವಿಕಾಸವಾಗಿರಲಿಲ್ಲ.

ಡಾಕ್ಟರು ಇನ್ನೊಂದಿಷ್ಟು ದುಬಾರಿ ಪರೀಕ್ಷೆಗಳನ್ನು ನಡೆಸಲು ಶಿಫಾರಸು ಮಾಡಿದರು. ’ಔಷಧಿ ನೀಡುತ್ತೇವೆ. ಆದರೆ, ಗುಣವಾಗುವ ಬಗ್ಗೆ ಖಾತರಿ ನೀಡಲಾರೆವು. ಕಾಯ್ದು ನೋಡಬೇಕು’ ಎಂಬ ಹೇಳಿಕೆ ಬಂದಿತು.

ಮಗು ಕರೆದುಕೊಂಡು ವಾಪಸ್ ಕೊಪ್ಪಳಕ್ಕೆ ಬಂದೆವು. ಹಲವಾರು ಕನಸುಗಳನ್ನು ಬಿತ್ತಿದ, ಪೋಷಿಸಿದ ಊರು ಮೊದಲ ಬಾರಿ ದಿಗಿಲು ಉಕ್ಕಿಸಿತ್ತು.

‘ಬೆಂಗಳೂರಿಗೆ ಹೋಗಿ. ನಿಮ್ಹಾನ್ಸ್‌ನ್ಲಲಿ ತೋರಿಸಿ, ಆರಾಮ ಆಗಬಹುದು’ ಎಂಬ ಸಲಹೆ ಬಂದಾಗ ಊರು ಬಿಡದೆ ಬೇರೆ ದಾರಿ ಇರಲಿಲ್ಲ. ನಮ್ಮೂರಲ್ಲೇ ನೆಲೆಯಾಗಬೇಕು ಎಂದು ಹಂಬಲಿಸಿ ಹಲವಾರು ಉತ್ತಮ ಕೆಲಸಗಳನ್ನು ಹಾಗೂ ಅವಕಾಶಗಳನ್ನು ಕೈಬಿಟ್ಟು ಬಂದಿದ್ದ ನಾನು ಮತ್ತೆ ಊರು ಬಿಡಬೇಕಾಯಿತು.

ಇದ್ದ ಕೆಲಸ ಬಿಟ್ಟು, ಕೈಯಲ್ಲಿ ಬೇರೆ ಕೆಲಸ ಕೂಡ ಇಲ್ಲದೇ ಬೆಂಗಳೂರಿಗೆ ಬಂದೆ. ಆಸ್ಪತ್ರೆಗೆ ತೋರಿಸಬೇಕೆಂದರೆ ಹಣದ ಮುಗ್ಗಟ್ಟು. ಕೆಲ ಕಾಲ ಗೆಳೆಯರು ಪೋಷಿಸಿದರು. ಬೇರೆ ಬೇರೆ ಪತ್ರಿಕೆಗಳಿಗೆ ಬರೆಯುತ್ತ, ದೊರೆತ ಅಲ್ಪ ಹಣವನ್ನು ಬಾಡಿಗೆ, ರೇಶನ್ ಎಂದು ಖರ್ಚು ಮಾಡುತ್ತ ಏಳೆಂಟು ತಿಂಗಳು ನೂಕಿಯಾಯಿತು. ಪ್ರಜಾವಾಣಿಯಲ್ಲಿ ಕೆಲಸ ಸಿಕ್ಕಾಗ, ಕೊನೆಗೂ ವೃತ್ತಿಯಲ್ಲಿ ನೆಲೆ ನಿಂತಾಯಿತು ಎಂಬ ಸಮಾಧಾನದಿಂದ ನಿಮ್ಹಾನ್ಸ್‌ಗೆ ಹೋದೆವು.

ಅಲ್ಲಿ ಮತ್ತೆ ಪರೀಕ್ಷೆಗಳು. ಅವೇ ಪ್ರಶ್ನೆಗಳು. ಅವೇ ಉತ್ತರಗಳು. ಆನುವಂಶೀಯತೆಯ ದೋಷ ಇಲ್ಲ, ಮಗು ಹುಟ್ಟಿದ ಕೂಡಲೇ ಸರಿಯಾಗಿ ಅತ್ತಿದೆ, ಮಗುವನ್ನು ಕೆಳಗೆ ಬೀಳಿಸಿಲ್ಲ, ಮೂರ್ಛೆ ರೋಗ ಇಲ್ಲ, ದೈಹಿಕ ನ್ಯೂನತೆಗಳಿಲ್ಲ, ...ಇಲ್ಲ, ...ಇಲ್ಲ. ಆದರೂ ಮಗು ನಾರ್ಮಲ್ ಇಲ್ಲ.

‘ಕೆಲವೊಂದು ಮಕ್ಕಳು ಹೀಗಿರುತ್ತಾರೆ. ಇದಕ್ಕೆ ಇಂಗ್ಲಿಷ್ ಪದ್ಧತಿಯಲ್ಲಿ ಯಾವುದೇ ಔಷಧಿ ಇಲ್ಲ. ಆಯುರ್ವೇದ ಪದ್ಧತಿಯಲ್ಲಿ ಔಷಧಿ ನೀಡುವುದಾಗಿ ಕೇಳಿದ್ದೇವೆ. ಬೇಕಾದರೆ ಪ್ರಯತ್ನಿಸಿ. ಆದರೆ, ಏನೇ ಮಾಡಿದರೂ ನೀವು ಆಕೆಗೆ ನಿಯಮಿತವಾಗಿ ಫಿಜಿಯೋ ಥೆರಪಿ ಮಾಡಿಸಬೇಕು. ನಿತ್ಯ ಮಗುವಿನೊಂದಿಗೆ ಸಹಜವಾಗಿ ಮಾತನಾಡುತ್ತ ಹೋಗಿ. ನಿರಂತರವಾಗಿ ಆಕೆಯ ಸಂಪರ್ಕದಲ್ಲಿರಿ. ತನಗೆ ಸಂಬಂಧಿಸಿದ ಪ್ರತಿಯೊಂದು ವಸ್ತುವಿನ ಸ್ಪರ್ಶ, ವಾಸನೆ ಹಾಗೂ ಸಾಂಗತ್ಯವನ್ನು ಆಕೆ ಅನುಭವಿಸಲಿ. ಎಲ್ಲಕ್ಕಿಂತ ಮೊದಲು ನೀವು ಧೈರ್ಯ ತಂದುಕೊಳ್ಳಬೇಕು. ನೀವು ಎಷ್ಟು ಸಮಾಧಾನಿತರಾಗುತ್ತೀರೋ, ಪ್ರಬುದ್ಧರಾಗಿ ವರ್ತಿಸುತ್ತೀರೋ, ನಿಮ್ಮ ಮಗು ಅಷ್ಟರ ಮಟ್ಟಿಗೆ ಬೆಳೆಯಲು ಸಾಧ್ಯ. ಒಳ್ಳೆಯದಾಗಲಿ’ ಎಂದರು ನಿಮ್ಹಾನ್ಸ್‌ನ ಕರುಣಾಮಯಿ ವೈದ್ಯರು.

ಕಳೆದ ಏಳು ವರ್ಷಗಳಿಂದ ಅಂಥದೊಂದು ಪ್ರಯತ್ನ ನಡೆಸುತ್ತ, ಧೈರ್ಯ ತಂದುಕೊಳ್ಳುತ್ತ, ಸಮಾಧಾನಿತರಾಗಿ ಇರಲು ಯತ್ನಿಸುತ್ತ, ಪ್ರಬುದ್ಧತೆ ಗಳಿಸುವ ದಿಕ್ಕಿನಲ್ಲಿ ಬದುಕು ಸಾಗಿದೆ. ನಾವು ಬೆಳೆದಷ್ಟೂ ನಮ್ಮ ಮಗು ಬೆಳೆಯುತ್ತದೆ. ಹೀಗಾಗಿ ನಾವು ಪ್ರಬುದ್ಧರಾಗಲೇ ಬೇಕಿದೆ. ಸಾಮಾನ್ಯ ಬದುಕು ನೀಡುವುದಕ್ಕಿಂತ ಹೆಚ್ಚಿನ ಪಾಠವನ್ನು ನಮ್ಮ ‘ಅಸಾಮಾನ್ಯ’ ಮಗಳು ಕಲಿಸಿದ್ದಾಳೆ, ಕಲಿಸುತ್ತಿದ್ದಾಳೆ.

ಪ್ರಬುದ್ಧತೆಯತ್ತ ನಮ್ಮನ್ನು ಕರೆದೊಯ್ಯುತ್ತಿದ್ದಾಳೆ.


- ಚಾಮರಾಜ ಸವಡಿ
(ಮಯೂರ ಮಾಸಿಕದ ’ಗುಬ್ಬಚ್ಚಿ ಗೂಡು ವಿಭಾಗ’ದಲ್ಲಿ ಪ್ರಕಟಿತ ಬರಹ)

ಸತ್ಯ ಹೇಳುವುದು ಕಷ್ಟ, ಹೇಳದಿರುವುದು ಇನ್ನೂ ಕಷ್ಟ

18 Nov 2009

6 ಪ್ರತಿಕ್ರಿಯೆ

ಹಲವಾರು ಬಾರಿ ಹಾಗನ್ನಿಸಿದೆ.

ಸತ್ಯ ಏನೆಂಬುದು ಗೊತ್ತಿರುತ್ತದೆ. ಆದರೆ, ಹೇಳಲಾಗುವುದಿಲ್ಲ. ಭಂಡತನದಿಂದ ತನ್ನ ನಿರ್ಣಯವನ್ನು ಜಾರಿಗೊಳಿಸುವ ವ್ಯಕ್ತಿ ತಪ್ಪು ಮಾಡುತ್ತಿದ್ದಾನೆ ಎಂದು ತಿಳಿದಿದ್ದರೂ, ಅದನ್ನು ಹೇಳಲಾಗುವುದಿಲ್ಲ.

ಏಕೆ ಹಾಗಾಗುತ್ತದೆ?

ನಾನು ಸತ್ಯ ಹೇಳಿದರೆ ನಮ್ಮ ಇದ್ದಬದ್ದ ಸಂಬಂಧ ಅಲ್ಲಿಗೇ ಮುಕ್ತಾಯವಾಗುತ್ತದೆ ಎಂಬುದು ನನಗೆ ಗೊತ್ತು. ಅದು ವೃತ್ತಿಪರ ಆಗಿರಬಹುದು ಅಥವಾ ವೈಯಕ್ತಿಕವಾಗಿರಬಹುದು- ಒಟ್ಟಿನಲ್ಲಿ ನಮ್ಮ ಸಂಬಂಧ ಅಂತ್ಯಗೊಳ್ಳುತ್ತದೆ.

ತುಂಬ ಸಾರಿ ನೋಡಿದ್ದೇನೆ: ಸಾಮಾನ್ಯವಾಗಿ ದಡ್ಡರು ಉನ್ನತ ಸ್ಥಾನದಲ್ಲಿ ಕೂತಿರುತ್ತಾರೆ. ಪ್ರತಿಭಾವಂತರನ್ನು ಕಂಡರೆ ಅವರಿಗೆ ಅಸೂಯೆ, ಕೀಳರಿಮೆ. ಅದನ್ನು ಹೋಗಲಾಡಿಸಲು ಗತ್ತು ನಟಿಸುತ್ತಾರೆ. ತಮಗೆ ಎಲ್ಲದೂ ಗೊತ್ತಿದೆ ಎಂಬ ಮುಖವಾಡ ತೊಡುತ್ತಾರೆ. ಅದೇ ಹೊತ್ತಿಗೆ, ತನ್ನ ಹುಳುಕು ಯಾರಿಗಾದರೂ ಗೊತ್ತಾದರೆ ಹೇಗೆ ಎಂಬ ಅಳುಕೂ ಅವರನ್ನು ಕಾಡುತ್ತಿರುತ್ತದೆ. ಹೀಗಾಗಿ, ಕೆಲಸ ಗೊತ್ತಿರುವವರನ್ನು ಕಂಡರೆ ಭಯ. ಅವರನ್ನು ಕಾಡಲು ಶುರು ಮಾಡುತ್ತಾರೆ. ಅವರು ಮಾಡಿದ್ದೆಲ್ಲ ತಪ್ಪು ಎನ್ನುತ್ತಾರೆ. ಬೆಳೆಯಲು ಸಾಧ್ಯವಿರುವ ಬಾಗಿಲುಗಳನ್ನೆಲ್ಲ ಮುಚ್ಚುತ್ತಾರೆ. ತಾವಿಲ್ಲದಾಗ ಬಾಗಿಲು ತೆಗೆದುಕೊಂಡು ಬಂದರೆ? ಎಂಬ ಅಳುಕಿನಿಂದಾಗಿ, ಹೊರಗೇ ಕಾವಲು ನಿಲ್ಲುತ್ತಾರೆ.

ಇದು ನಿಜಕ್ಕೂ ದುರ್ಭರ ಪರಿಸ್ಥಿತಿ. ಅವಕಾಶ ನಿರಾಕರಿಸಲ್ಪಟ್ಟ ವ್ಯಕ್ತಿಯೂ ಬೆಳೆಯುವುದಿಲ್ಲ, ಆತನ ಕಾವಲಿಗೆ ನಿಂತವನೂ ಬೆಳೆಯಲಾರ. ಇಂಥ ಪರಿಸ್ಥಿತಿ ಉಂಟಾದಾಗ, ಇಬ್ಬರು ವ್ಯಕ್ತಿಗಳು ಮಾತ್ರವಲ್ಲ, ಸಂಸ್ಥೆ ಕೂಡ ಹಾಳಾಗುತ್ತದೆ. ಆಗ ಏನು ಮಾಡಬೇಕು?

ಮೌನವಾಗಿ ಇದ್ದುಬಿ
ಡಿ. ಗತ್ತು ತೋರಿಸುವವನಿಗೇ ಮೊದಲ ಬ್ಯಾಟಿಂಗ್ ಭಾಗ್ಯ ದಕ್ಕಲಿ. ಅವನದೇ ಮಾತು ನಡೆಯಲಿ. ತನ್ನ ಗತ್ತು ಮತ್ತು ಶಕ್ತಿ ಪ್ರದರ್ಶನದ ಅತಿರೇಕದಲ್ಲಿ ಆತನ ದೌರ್ಬಲ್ಯ ಬಲು ಬೇಗ ಬಯಲಾಗುತ್ತ ಹೋಗುತ್ತದೆ.

ನಾನು ಮೌನವಾಗಿದ್ದುಕೊಂಡು ಓದು-ಬರೆಹ ಮುಂದುವರೆಸಿಕೊಂಡು ಹೋಗುತ್ತೇನೆ. ಅದೊಂಥರಾ ವನವಾಸದ ಸುಖ. ಏನೋ ಶಾಂತಿ, ನೆಮ್ಮದಿ ತರುವ ಮೌನ. ಅಧ್ಯಯನದಲ್ಲಿ ಮುಳುಗಿದಂತೆ, ಅತ್ತ ಗತ್ತು ಯಾವತ್ತೋ ಕರಗಿರುತ್ತದೆ. ಹುಳುಕು ಹೊರಬಿದ್ದಿರುತ್ತದೆ. ಒಮ್ಮೊಮ್ಮೆ ವರ್ಷಗಟ್ಟಲೇ ಕಾಯಬೇಕಾಗಬಹುದು.

ಅಷ್ಟೊಂದು ಸಮಾಧಾನ/ಅನಿವಾರ್ಯತೆ ನನಗಿದ್ದರೆ ಕಾಯುತ್ತೇನೆ. ಇಲ್ಲದಿದ್ದರೆ, ಎದ್ದು ಹೋಗುತ್ತೇನೆ.

ಏಕೆಂದರೆ, ಬದುಕಿನಲ್ಲಿ ಮುಚ್ಚಿದ ಬಾಗಿಲುಗಳಿಗಿಂತ ತೆರೆದ ಬಾಗಿಲುಗಳೇ ಹೆಚ್ಚು. ಅದು ನನ್ನ ನಂಬಿಕೆಯಷ್ಟೇ ಅಲ್ಲ, ಅನುಭವವೂ ಹೌದು.

- ಚಾಮರಾಜ ಸವಡಿ

ಲವ್‌ಜಿಹಾದ್‌ಎಂಬ ಹಳೇ ಯುದ್ಧ

7 Nov 2009

6 ಪ್ರತಿಕ್ರಿಯೆ
ನಾನಾಗ ಧಾರವಾಡದಲ್ಲಿ ಪ್ರಜಾವಾಣಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದೆ. ಆಗ ಎಂದರೆ, ೨೦೦೬ರಲ್ಲಿ ಒಂದು ಪ್ರಕರಣ ನಡೆಯಿತು. ಜಂಗಮ ಸಮುದಾಯಕ್ಕೆ ಸೇರಿದ ಯುವತಿಯೊಬ್ಬಳು ಇದ್ದಕ್ಕಿದ್ದಂತೆ ನಾಪತ್ತೆಯಾದಳು. ಧಾರವಾಡ ಸಣ್ಣ ನಗರವಾಗಿದ್ದರಿಂದ, ಪೊಲೀಸರಿಗೆ ದೂರು ಹೋಗುವ ಮುನ್ನವೇ ಪತ್ರಕರ್ತರಿಗೆ ವಿಷಯ ಗೊತ್ತಾಗಿತ್ತು. ಪ್ರೇಮ ಪ್ರಕರಣಗಳು ಸಾಮಾನ್ಯವಾಗಿದ್ದರಿಂದ, ಈ ಕುರಿತು ನಾವ್ಯಾರು ತಲೆ ಕೆಡಿಸಿಕೊಳ್ಳಲಿಲ್ಲ.
 

ಆದರೆ, ಒಂದೆರಡು ದಿನಗಳಲ್ಲಿ ಬೆಳವಣಿಗೆಗಳು ತೀವ್ರಗೊಂಡವು. ನಾಪತ್ತೆಯಾಗಿದ್ದ ಹುಡುಗಿ ಮುಸ್ಲಿಂ ಯುವಕನೊಂದಿಗೆ ಓಡಿಹೋಗಿದ್ದಳು. ಈಕೆ ಬಿ.ಬಿ.ಎ. ಅಂತಿಮ ವರ್ಷದಲ್ಲಿ ಓದುತ್ತಿದ್ದ ಹುಡುಗಿ. ಆತ, ಗ್ಯಾರೇಜೊಂದರಲ್ಲಿ ಕೆಲಸ ಮಾಡುತ್ತಿದ್ದ ಮೆಕ್ಯಾನಿಕ್‌. ಹುಡುಗಿಯ ತಂದೆ ಮಿಲಿಟರಿಯಲ್ಲಿ ಕೆಲಸ ಮಾಡುತ್ತಿದ್ದುದರಿಂದ, ಅವರಿಗೆ ರಜೆ ಸಿಗುವುದು ವರ್ಷದಲ್ಲಿ ಒಂದೆರಡು ಸಲ ಮಾತ್ರ. ಹೀಗಾಗಿ, ಮನೆ ನೋಡಿಕೊಳ್ಳುವ ಜವಾಬ್ದಾರಿ ಹುಡುಗಿಯ ತಂದೆ ಮತ್ತು ಅವರ ಸೋದರರ ಮೇಲಿತ್ತು.
 

ಸಹಜವಾಗಿ ಹುಡುಗಿಯ ತಾಯಿ ಕಂಗಾಲಾಗಿದ್ದರು. ಗಂಡ ಬೇರೆ ದೂರದಲ್ಲಿದ್ದಾರೆ. ಹುಡುಗಿ ಮುಸ್ಲಿಂ ಯುವಕನೊಂದಿಗೆ ಓಡಿ ಹೋಗಿದ್ದು ಖಚಿತವಾಗಿತ್ತು. ಅತ್ತ ಗಂಡನಿಗೆ ತಕ್ಷಣ ಬರುವಂತೆ ಸುದ್ದಿ ಕಳಿಸಿದ ಆಕೆ, ಮೈದುನರ ಮೂಲಕ ಹುಡುಗನ ಮನೆಯವರೊಂದಿಗೆ ಮಾತುಕತೆಗೆ ಕೂತರು. ‘ಹುಡುಗ ಎಲ್ಲಿದ್ದಾನೆ ಎಂಬುದು ನಿಮಗೆ ಗೊತ್ತಿರುತ್ತದೆ. ನಮ್ಮದು ಮರ್ಯಾದಸ್ತರ ಕುಟುಂಬ. ಹುಡುಗಿ ಹೀಗೆ ಓಡಿಹೋಗಿದ್ದು ಗೊತ್ತಾದರೆ ತಲೆ ಎತ್ತಿಕೊಂಡು ಓಡಾಡುವುದು ಕಷ್ಟವಾಗುತ್ತದೆ...’ ಎಂದು ಕಣ್ಣೀರಿಟ್ಟರು. ಮೈದುನರು, ಹುಡುಗನ ಕೈಕಾಲು ಮುರಿಯುವ ಬೆದರಿಕೆ ಹಾಕಿದರು.
 

ಆದರೆ, ಹುಡುಗನ ಮನೆಯವರು ಮಾತ್ರ ನಿರುಮ್ಮಳವಾಗಿದ್ದರು.
 

‘ಹುಡುಗಿಯನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಬೇಕಾದ ಜವಾಬ್ದಾರಿ ನಿಮ್ಮದು. ನಮ್ಮ ಹುಡುಗನ ಮೇಲೇಕೆ ಗೂಬೆ ಕೂರಿಸುತ್ತೀರಿ? ಹುಡುಗ ಎಲ್ಲಿದ್ದಾನೋ ನಮಗೆ ಗೊತ್ತಿಲ್ಲ’ ಎಂದು ಕೈತೊಳೆದುಕೊಂಡರು. ಅಚ್ಚರಿಯ ಸಂಗತಿ ಎಂದರೆ, ತಮ್ಮ ಹುಡುಗ ನಾಪತ್ತೆಯಾಗಿದ್ದಾನೆ ಎಂದು ಅವರು ದೂರನ್ನೂ ದಾಖಲಿಸಿರಲಿಲ್ಲ.
 

ಇದು ಪಕ್ಕಾ ಪ್ರೇಮ ಪ್ರಕರಣ ಎಂದು ಎಲ್ಲರೂ ಭಾವಿಸಿದರು. ಪೊಲೀಸರೂ ಸಹ.
 

ಆದರೆ, ಯಾವಾಗ ಹುಡುಗಿಯ ತಂದೆ ಧಾವಿಸಿ ಬಂದರೋ ಪ್ರಕರಣಕ್ಕೆ ಬಿಸಿ ಮುಟ್ಟಿತು. ಆ ಅಸಹಾಯಕ ತಂದೆ ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿಯವರನ್ನು ಕಂಡು ಕಣ್ಣೀರಿಟ್ಟರು. ಅಧಿಕೃತವಾಗಿ ದೂರು ದಾಖಲಿಸದೇ ಹುಡುಗನ ಮೇಲೆ ಕ್ರಮ ಕೈಗೊಳ್ಳುವುದು ಕಷ್ಟ ಎಂದು ಎಸ್ಪಿ ತಿಳಿಸಿದಾಗ, ದೂರು ದಾಖಲಾಯ್ತು. ಈ ವಿಷಯ ವರದಿ ಮಾಡಬೇಡಿ ಎಂದು ಪತ್ರಕರ್ತರಿಗೂ ವಿನಂತಿಸಿಕೊಳ್ಳಲಾಯ್ತು.
 

ಆದರೆ, ಪ್ರಕರಣದ ಬಗ್ಗೆ ಕುತೂಹಲಿಗಳಾಗಿದ್ದ ನಾವು ನಿತ್ಯ ಪೊಲೀಸ್‌ಠಾಣೆಗೆ ಹೋಗಿ ಬೆಳವಣಿಗೆಗಳನ್ನು ಗಮನಿಸುತ್ತಿದ್ದೆವು. ದೂರು ದಾಖಲಾದ ಒಂದೆರಡು ದಿನಗಳಲ್ಲಿ ಪೊಲೀಸ್‌ ತಂಡವೊಂದು ಬೆಳಗಾವಿಗೆ ತೆರಳಿ, ಅಲ್ಲಿ ವಸತಿಗೃಹದಲ್ಲಿದ್ದ ಹುಡುಗ-ಹುಡುಗಿಯನ್ನು ಕರೆತಂದಿತು. ದೂರು ಈಗ ಅಧಿಕೃತವಾಗಿ ದಾಖಲಾಯ್ತು. ಹುಡುಗ ಜೈಲಿಗೆ, ಹುಡುಗಿ ತನ್ನ ಪೋಷಕರ ಮನೆಗೆ ತೆರಳಿದಳು.
 

ಈ ಹಂತದಲ್ಲಿ, ಸುದ್ದಿಗೋಷ್ಠಿ ಕರೆದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಒಂದು ದಡ್ಡತನದ ಕೆಲಸ ಮಾಡಿದರು. ‘ಹುಡುಗಿಯನ್ನು ಬಲವಂತವಾಗಿ ಕರೆದೊಯ್ದ ಹುಡುಗ, ಆಕೆಯ ಮತಾಂತರ ಮಾಡಿ ಒತ್ತಾಯದ ಮದುವೆ ಮಾಡಿಕೊಂಡಿದ್ದಾನೆ. ಆಕೆಯ ಹೆಸರನ್ನೂ ಬದಲಿಸಿದ್ದಾನೆ. ಹೀಗಾಗಿ, ಹುಡುಗಿಯ ಮನೆಯವರು ನೀಡಿದ ದೂರಿನ ಅನ್ವಯ ಅವನನ್ನು ಬಂಧಿಸಲಾಗಿದೆ’ ಎಂದು ಮುದ್ರಿತ ಪ್ರಕಟಣೆ ನೀಡಿದರು. ನಂತರ ಸಾಕಷ್ಟು ಮೌಖಿಕ ವಿವರಗಳೂ ಬಂದವು. ಹುಡುಗಿಯೂ ಠಾಣೆಯಲ್ಲಿ ಹಾಜರಿದ್ದರಿಂದ, ಆಕೆಯನ್ನೂ ಪ್ರಶ್ನಿಸಿದೆವು. ಮನೆಯವರ ಒತ್ತಾಯಕ್ಕೆ ಮಣಿದು ಆಕೆ ಒಲ್ಲದ ಮನಸ್ಸಿನಿಂದ ಹುಡುಗನ ವಿರುದ್ಧ ಹೇಳಿಕೆ ನೀಡಿದ್ದು ಸ್ಪಷ್ಟವಾಗಿತ್ತು.
 

ಇಂಥ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಹುಡುಗಿಯ ಹೆಸರನ್ನಾಗಲಿ, ಫೊಟೊವನ್ನಾಗಲಿ ಅಚ್ಚು ಹಾಕುವುದಿಲ್ಲ. ಆದರೆ, ಎಸ್ಪಿ ಸಾಹೇಬರು ಸುಮ್ಮನಿರದೇ, ಹುಡುಗಿಯ ಮದುವೆ ಫೊಟೊಗಳನ್ನು ತೋರಿಸಿದರು. ಅದರಲ್ಲಿ ಮತಾಂತರಗೊಂಡಿದ್ದ ಹುಡುಗಿ ನಗುಮುಖದೊಂದಿಗೆ ವಿವಾಹ ಸಮಾರಂಭದಲ್ಲಿದ್ದ ದೃಶ್ಯಗಳಿದ್ದವು. ಒತ್ತಾಯದಿಂದ ಮದುವೆ ಮಾಡಿಕೊಳ್ಳುತ್ತಿದ್ದ ಕುರುಹುಗಳು ಎಲ್ಲಿಯೂ ಕಾಣಲಿಲ್ಲ. 
 

ದೃಶ್ಯ ಮಾಧ್ಯಮದ ನಮ್ಮ ಕೆಲ ದಡ್ಡ ಪತ್ರಕರ್ತರು ಆ ಫೊಟೊಗಳ ಸಹಿತ ಸುದ್ದಿ ಪ್ರಸಾರ ಮಾಡಿದ್ದು ಇಡೀ ಪ್ರಕರಣದಲ್ಲಿ ರಾಡಿ ಎಬ್ಬಿಸಿತು. ‘ಹುಡುಗಿ ಪ್ರಾಪ್ತ ವಯಸ್ಕಳಾಗಿದ್ದು, ಸ್ವ-ಇಚ್ಛೆಯಿಂದ ಮತಾಂತರಗೊಂಡು ಮದುವೆಯಾಗಿದ್ದಾಳೆ. ಆದರೂ, ನಮ್ಮ ಹುಡುಗನನ್ನು ಅಕ್ರಮವಾಗಿ ಪೊಲೀಸರು ಬಂಧಿಸಿದ್ದಾರೆ’ ಎಂದು ಹುಡುಗನ ಮನೆಯವರು ಪ್ರತಿದೂರು ದಾಖಲಿಸುವುದರೊಂದಿಗೆ ಇಡೀ ಪ್ರಕರಣ ಸಾಮಾಜಿಕ ಸಂಘರ್ಷಕ್ಕೆ ದಾರಿಯಾಯ್ತು.
 

ಅದಕ್ಕೂ ಮುನ್ನವೇ ರಂಗಕ್ಕಿಳಿದಿದ್ದ ಶ್ರೀರಾಮಸೇನೆ ಕಾರ್ಯಕರ್ತರು ಎಸ್ಪಿಯನ್ನು ಹಾಗೂ ದೃಶ್ಯ ಮಾಧ್ಯಮದ ವರದಿಗಾರರನ್ನು ತರಾಟೆಗೆ ತೆಗೆದುಕೊಂಡರು. ವಿಷಯ ತೀವ್ರವಾದಂತೆ, ಹಿಂದೆ ನಡೆದಿದ್ದ ಇಂಥ ಹಲವಾರು ಪ್ರಕರಣಗಳು ಬೆಳಕಿಗೆ ಬಂದವು. ‘ಲವ್‌ ಜಿಹಾದ್‌’ ಎಂಬ ಪದ ನನ್ನ ಗಮನಕ್ಕೆ ಉದಾಹರಣೆ ಸಮೇತ ಬಂದಿದ್ದು ಆಗ.
 

ಈಗ ಮತ್ತೆ ಆ ಪದ ಸುದ್ದಿ ಮಾಡುತ್ತಿದೆ. ಹೈಕೋರ್ಟ್ ಕೂಡ ಇದರ ಬಗ್ಗೆ ತಲೆಕೆಡಿಸಿಕೊಂಡಿದೆ. ಇಂಥದೊಂದು ಕಾರ್ಯಸೂಚಿ ಇದ್ದುದೇ ಆದರೆ ಅದರ ಉದ್ದೇಶವೇನು? ಯಾವ ಯಾವ ಸಂಘಟನೆಗಳು ಇದರಲ್ಲಿ ಸಕ್ರಿಯವಾಗಿವೆ? ಇಂತಹ ಚಟುವಟಿಕೆಗಳಿಗೆ ಎಲ್ಲಿಂದ ಹಣ ಬರುತ್ತಿದೆ? ಎಂದು ಕೋರ್ಟ್‌ ಪ್ರಶ್ನಿಸಿದೆ. ಈ ಕುರಿತು ವಿಸ್ತೃತ ತನಿಖೆ ನಡೆಸಿ ವರದಿ ಸಲ್ಲಿಸಲು ಆದೇಶಿಸಿದೆ. ಕೇರಳದಲ್ಲಿ ಈ ವಿಷಯ ಭಾರಿ ವಿವಾದ ಸೃಷ್ಟಿಸಿದ ನಂತರ ಈಗ ರಾಜ್ಯದ ಚಾಮರಾಜನಗರ ಜಿಲ್ಲೆಯ ಯುವತಿಯೊಬ್ಬಳ ಪ್ರಕರಣ ಇಲ್ಲಿಯೂ ಜೀವ ತುಂಬಿದೆ.
 

ಯುದ್ಧ ಮತ್ತು ಪ್ರೀತಿಯಲ್ಲಿ ಎಲ್ಲವೂ ನ್ಯಾಯವೇ ಅಂತೆ. ಆದರೆ, ಪ್ರೀತಿಯ ಮೂಲಕ ಯುದ್ಧ ಸಾರಲು ಮುಂದಾಗಿರುವುದು ಮಾತ್ರ ಆಘಾತಕಾರಿ ಬೆಳವಣಿಗೆಯೇ. ಸಮುದಾಯದ ಬೆಳವಣಿಗೆಗೆ ಮಾಡಬೇಕಾದ ಕೆಲಸಗಳು ಸಾಕಷ್ಟಿರುತ್ತವೆ. ಅವನ್ನು ಬಿಟ್ಟು ಸಂಘರ್ಷಕ್ಕೆ ಕಾರಣವಾಗುವ ಚಟವಟಿಕೆಗಳನ್ನು ನಡೆಸುತ್ತಿರುವುದಕ್ಕೆ ಲಗಾಮು ಬೀಳಲೇಬೇಕು.
 

ಮತ್ತೆ ಧಾರವಾಡದ ಯುವತಿಯ ವಿಷಯಕ್ಕೆ ಬರುತ್ತೇನೆ. ಆಕೆಯನ್ನು ತುರ್ತಾಗಿ ದೂರದ ಊರಿಗೆ ಸಾಗಿಸಿದ ಪೋಷಕರು, ಒಂದೆರಡು ವರ್ಷಗಳಲ್ಲಿ ಆಕೆಗೆ ಮದುವೆ ಮಾಡಿದರು. ಜೈಲಿನಲ್ಲಿದ್ದ ಹುಡುಗ ಜಾಮೀನಿನ ಮೇಲೆ ಹೊರಬಂದು ಮತ್ತೆ ತನ್ನ ಕೆಲಸ ಮುಂದುವರಿಸಿದ. ಇಡೀ ಮುಸ್ಲಿಂ ಸಮಾಜ ಅವನನ್ನು ಮೆಚ್ಚುಗೆಯಿಂದ ನೋಡಿತು. ದೂರು ಕೊಟ್ಟವರೇ ಆಸಕ್ತಿ ಕಳೆದುಕೊಂಡಾಗ ಏನಾಗಬಹುದೋ ಅದೇ ಪರಿಣಾಮ ಈ ಪ್ರಕರಣದ ಮೇಲೆಯೂ ಆಯಿತು. ಕೆಲ ದಿನಗಳಲ್ಲಿ ಜನ ಕೂಡ ಈ ವಿಷಯ ಮರೆತರು. ನಾನು ಕೂಡಾ ವರ್ಗವಾಗಿ ಬೆಂಗಳೂರಿಗೆ ಬಂದೆ.
 

ಈಗ ಮತ್ತೆ ಲವ್‌ ಜಿಹಾದ್‌ಸುದ್ದಿ ಮಾಡುತ್ತಿದೆ. ನನಗೆ ಧಾರವಾಡದ ಆ ಯುವತಿ ಮತ್ತು ಯುವಕ ನೆನಪಾಗುತ್ತಿದ್ದಾರೆ. ಅವರ ಮದುವೆ ಫೊಟೊ, ಅಲ್ಲಿ ಮದುಮಗಳ ಉಡುಪಿನಲ್ಲಿ ಖುಷಿಯಿಂದ ನಗುತ್ತಿದ್ದ ಯುವತಿಯ ಚಿತ್ರ ನೆನಪಾಗುತ್ತಿದೆ. ಇವರ ಲವ್‌ ನಿಜಕ್ಕೂ ಜಿಹಾದ್‌ ಆಗಿತ್ತಾ?
 

ಈ ಪ್ರಶ್ನೆಗೆ ಇವತ್ತಿಗೂ ಉತ್ತರ ಸಿಕ್ಕಿಲ್ಲ.
 

- ಚಾಮರಾಜ ಸವಡಿ

ಗುಳೆ ಹೋದವರ ಹಿಂದೆ ಹೊರಟಿದೆ ಮನಸು...

3 Nov 2009

5 ಪ್ರತಿಕ್ರಿಯೆ
ಹಲವು ವರ್ಷಗಳ ಹಿ೦ದಿನ ಘಟನೆ.

ಆಗ ನಾನು ಬೆ೦ಗಳೂರಿನ ಎಲ್ಲಾ ನ೦ಟನ್ನು ಕಡಿದುಕೊ೦ಡು, ಇನ್ನು ಮು೦ದೆ ನಮ್ಮೂರಲ್ಲೇ ಏನಾದರೂ ಮಾಡಬೇಕೆ೦ದು ಕೊಪ್ಪಳಕ್ಕೆ ಬ೦ದು ಪೂರ್ಣಪ್ರಮಾಣದ ನಿರುದ್ಯೋಗಿಯಾಗಿದ್ದೆ. ನನ್ನ ಬ೦ಡವಾಳವೇನಿದ್ದರೂ ತಲೆಯಲ್ಲಿತ್ತೇ ಹೊರತು ಜೇಬಿನಲ್ಲಿರಲಿಲ್ಲ. ಸಹಜವಾಗಿ ಕೊಪ್ಪಳ ನನ್ನನ್ನು ತಿರಸ್ಕರಿಸಿತು. ಯಾರಾದರೂ ಸರಿ, ದುಡ್ಡಿಲ್ಲದಿದ್ದರೆ ಅವನು ತಿರಸ್ಕಾರಕ್ಕೇ ಯೋಗ್ಯ. ಜಗತ್ತಿಗೆ ಸುಲಭವಾಗಿ ಅರ್ಥವಾಗುವ ಭಾಷೆಗಳೆ೦ದರೆ ಎರಡೇ- ಒ೦ದು ಹಣ, ಇನ್ನೊ೦ದು ಬೆದರಿಕೆ. ನನ್ನ ಹತ್ತಿರ ಎರಡೂ ಇಲ್ಲದಿದ್ದರಿ೦ದ ಪತ್ರಿಕೆಯೊ೦ದನ್ನು ಪ್ರಾರ೦ಭಿಸಬೇಕೆನ್ನುವ ನನ್ನ ಆಸೆಗೆ ಯಾವ ಬೆ೦ಬಲವೂ ಸಿಗಲಿಲ್ಲ. ಯಾರಾದರೂ ಬ೦ಡವಾಳಶಾಹಿಗಳು ಮು೦ದೆ ಬ೦ದರೆ, ಅಚ್ಚುಕಟ್ಟಾದ ದಿನಪತ್ರಿಕೆಯೊ೦ದನ್ನು ರೂಪಿಸಿಕೊಟ್ಟೇನೆ೦ದು ನಾನು ಹ೦ಬಲಿಸುತ್ತಿದ್ದೆ. ಆದರೆ ದುಡ್ಡು ಹಾಕುವ ಹ೦ಬಲ ಮಾತ್ರ ಕೊಪ್ಪಳದ ಯಾವ ಬ೦ಡವಾಳಗಾರನಲ್ಲೂ ಇರಲಿಲ್ಲ. ಅ೦ಥವರ ಪರಿಚಯ ಕೂಡಾ ನನಗಿರಲಿಲ್ಲ.

ಹಾಗಿದ್ದರೂ ನನ್ನಲ್ಲೊ೦ದು ಆತ್ಮವಿಶ್ವಾಸವಿತ್ತು. ಏನಾದರೂ ಮಾಡಿ ಕೊಪ್ಪಳದಲ್ಲಿ ಪತ್ರಿಕೆಯೊ೦ದನ್ನು ಹುಟ್ಟು ಹಾಕಬೇಕೆನ್ನುವ ತುಡಿತವಿತ್ತು. ಕಾಲ ಪಕ್ವವಾಗುವವರೆಗೆ ಏನಾದರೂ ಮಾಡಬೇಕಲ್ಲವೇ? ವಾಪಸ್ ಬೆ೦ಗಳೂರಿಗೆ ಹೋಗುವ ಮನಸ್ಸಿಲ್ಲದ್ದರಿ೦ದ ಕೊಪ್ಪಳದಲ್ಲೇ ಮಾಡುವ೦ಥ ಕೆಲಸವನ್ನು ಹಿಡಿಯಬೇಕಿತ್ತು. ಆಗ ಸಹಾಯಕ್ಕೆ ಬ೦ದಿದ್ದು ಟ್ಯೂಷನ್‌. ಗ್ರಾಮೀಣ ಪ್ರದೇಶದಲ್ಲಿ ಕಾಣಸಿಗುವಂತೆ ಕೊಪ್ಪಳದಲ್ಲಿಯೂ ಆಗ ಇ೦ಗ್ಲಿಷ್ ಟ್ಯೂಶನ್ ಕ್ರಾ೦ತಿ. ಯಾವ ಓಣಿಗೆ ಹೊಕ್ಕರೂ ಅಲ್ಲೊ೦ದು ಟ್ಯುಟೇರಿಯಲ್ಲು, ಯಾವ ನಿರುದ್ಯೋಗಿಯನ್ನು ನೋಡಿದರೂ ಆತನದೊ೦ದು ಟ್ಯೂಶನ್ ಬ್ಯಾಚ್ ಇರುತ್ತಿತ್ತು. ಆದರೆ, ಪರಿಚಿತರು ತೀರಾ ಕಡಿಮೆ ಸಂಖ್ಯೆಯಲ್ಲಿದ್ದ ನನ್ನ ಪಾಲಿಗೆ ವಿದ್ಯಾರ್ಥಿಗಳು ಸಿಗುವುದು ಸಾಧ್ಯವೇ ಇರಲಿಲ್ಲ.

ಹೀಗಾಗಿ ನಾನು ಕೊಪ್ಪಳದಿಂದ ೨೨ ಕಿಮೀ ದೂರದ ಯಲಬುರ್ಗಾ ತಾಲ್ಲೂಕಿನ ಮ೦ಗಳೂರಿಗೆ ಟ್ಯೂಶನ್ ಹೇಳಲು ಹೋಗುವುದು ಅನಿವಾರ್ಯವಾಯಿತು. ಸುಮಾರು ಎ೦ಟು ತಿ೦ಗಳುಗಳ ಕಾಲ ನಾನು ಅಲ್ಲಿದ್ದೆ. ಟ್ಯೂಶನ್ ಹೇಳುತ್ತಲೇ ಬೇರೆ ಬೇರೆ ಪತ್ರಿಕೆಗಳಿಗೆ ಲೇಖನ ಬರೆದೆ. ನನ್ನ ಬೆ೦ಗಳೂರಿನ ನೆನಪುಗಳ ಪೈಕಿ ಒ೦ದಷ್ಟನ್ನು ಬರೆದಿಟ್ಟುಕೊ೦ಡೆ. ಬೆ೦ಗಳೂರು ಅಷ್ಟೆಲ್ಲಾ ದಿನಗಳಲ್ಲಿ ನನಗೆ ಏನೆಲ್ಲವನ್ನೂ ಕಲಿಸಿತ್ತೋ, ಅಷ್ಟೇ ಪ್ರಮಾಣದ ಪಾಠವನ್ನು ಮ೦ಗಳೂರು ನನಗೆ ಎ೦ಟೇ ತಿ೦ಗಳುಗಳ ಕ್ಲುಪ್ತ ಅವಧಿಯಲ್ಲಿ ಕಲಿಸಿತ್ತು. ಆಗಾಗ ಇ೦ಥ ಅಜ್ಞಾತವಾಸಗಳಿಗೆ ಹೊರಟು ಹೋಗುವುದು ಒ೦ದರ್ಥದಲ್ಲಿ ಒಳ್ಳೆಯದೇ ಎ೦ದು ಈಗಲೂ ನಾನು ನಂಬುತ್ತೇನೆ. ಎಲ್ಲಾ ರೀತಿಯ ಒ೦ಟಿತನ ನಮ್ಮೊಳಗಿನ ಅಸಲಿ ವ್ಯಕ್ತಿತ್ವವನ್ನು ಹೊರ ಹಾಕುತ್ತದೆ. ಯಾರು ಒಳ್ಳೆಯವರು? ಕೆಟ್ಟವರು ಯಾರು? ನಮ್ಮೊಳಗಿನ ನಿಜವಾದ ಶಕ್ತಿ ಏನು? ದೌರ್ಬಲ್ಯಗಳು ಯಾವುವು? ನಮ್ಮ ವಲಯದ ಸಮಯಸಾಧಕರು ಯಾರು? ಅವರ ಕಾರ್ಯತ೦ತ್ರಗಳೆ೦ಥವು? ಮು೦ದಿನ ದಿನಗಳಲ್ಲಿ ನಾನು ಯಾರನ್ನು ನ೦ಬಬಹುದು? ಯಾರನ್ನು ಕೈ ಬಿಡಬೇಕು? ಯಾರನ್ನು ಪೂರ್ತಿಯಾಗಿ ದೂರವಿಡಬೇಕು? ಎ೦ಬ ವಿಷಯಗಳು ಆಜ್ಞಾತವಾಸದ ಅವಧಿಯಲ್ಲಿ ಚೆನ್ನಾಗಿ ಗೊತ್ತಾಗುತ್ತವೆ.

ಮ೦ಗಳೂರಿನ ಎ೦ಟು ತಿ೦ಗಳುಗಳ ಆವಧಿ ನನ್ನ ಅಂಥ ಅಜ್ಞಾತವಾಸಗಳ ಪೈಕಿ ಒ೦ದು.

ಆ ಸ೦ದರ್ಭದಲ್ಲಿ ನನ್ನ ಗೆಳೆಯರೆನಿಸಿಕೊ೦ಡವರಿ೦ದ, ಬ೦ಧುಗಳಿ೦ದ, ಹಿತೈಷಿಗಳಿ೦ದ ನಾನು ದೂರವಿದ್ದೆ. ಬೆ೦ಗಳೂರು ಬಿಟ್ಟು ಸಣ್ಣ ಹಳ್ಳಿಯಾದ ಮ೦ಗಳೂರಿಗೆ ಟ್ಯೂಶನ್ ಹೇಳಲು ಬ೦ದು ನಿ೦ತ ನನ್ನ ಬಗ್ಗೆ ಆಶಾದಾಯಕವಾಗಿ ಯೋಚಿಸುವ ವ್ಯಕ್ತಿಗಳ ಸ೦ಖ್ಯೆ ಆಗ ತು೦ಬಾ ಕಡಿಮೆಯಿತ್ತು.

ನನಗೂ ಬೇಕಾಗಿದ್ದೂ ಅದೇ.

ನನ್ನ ನಿಜವಾದ ಮಿತ್ರರು ಯಾರು? ಹಿತೈಷಿಗಳು ಎ೦ಥವರು? ಭವಿಷ್ಯದ ದಿನಗಳಲ್ಲಿ ನಾನು ಯಾರನ್ನು ನ೦ಬಬಹುದು? ಎ೦ಬುದನ್ನು ಅರಿಯಲು ಅಜ್ಞಾತವಾಸ ನನಗೆ ತು೦ಬಾ ಸಹಾಯ ಮಾಡಿತು. ಹಾಗೆ ನೋಡಿದರೆ ಪ್ರತಿಯೊ೦ದು ಆಜ್ಞಾತವಾಸವೂ ನನಗೆ ಒಳ್ಳೆಯ ಪಾಠ ಕಲಿಸಿದೆ. ಹೊಸ ಹೊಸ ಗೆಳೆಯರನ್ನು ತ೦ದು ಕೊಟ್ಟಿದೆ. ಯಾವ ರಿಸ್ಕುಗಳನ್ನು ತೆಗೆದುಕೊಳ್ಳಬಹುದು? ಅವನ್ನು ಎಷ್ಟರ ಮಟ್ಟಿಗೆ ತೆಗೆದುಕೊಳ್ಳಬಹುದು? ಎ೦ಬುದನ್ನು ತೀರ್ಮಾನಿಸಲು ಸಹಾಯ ಮಾಡಿದೆ. ಆದ್ದರಿ೦ದ ನಾನು ಇಂಥ ಅಜ್ಞಾತವಾಸಗಳನ್ನು ಇಷ್ಟಪಡುತ್ತೇನೆ. ಆ ಅವಧಿ ಎಷ್ಟೇ ವೇದನಾಪೂರ್ಣವಾಗಿದ್ದರೂ ಕೂಡ ಅದನ್ನು ಆನುಭವಿಸಲು ಸಿದ್ಧನಾಗುತ್ತೇನೆ.

ಯಲಬುರ್ಗಾ ತಾಲ್ಲೂಕಿನ ಮ೦ಗಳೂರು ನನಗೆ ಗೆಳೆಯರನ್ನಷ್ಟೇ ಅಲ್ಲ, ಅನುಭವಗಳನ್ನು ಕೂಡಾ ದೊರಕಿಸಿಕೊಟ್ಟಿತು. ಆ ದಿನಗಳನ್ನು ನೆನಪಿಸಿಕೊ೦ಡರೆ ಇವತ್ತಿಗೂ ನಾನು ಮೌನವಾಗುತ್ತೇನೆ. ನನ್ನ ಅಹ೦ಕಾರ ತಾನಾಗಿ ಕಡಿಮೆಯಾಗುತ್ತದೆ. ಇದೆಲ್ಲಾ ನಶ್ವರ ಎ೦ಬ ವಿವೇಕ ಸುಲಭವಾಗಿ ಮೂಡುತ್ತದೆ. ಏಕೆ೦ದರೆ, ಮ೦ಗಳೂರಿನಲ್ಲಿ ನಾನು ನಿಜವಾದ ಬಡತನವನ್ನು ನೋಡಿದೆ. ಪ್ರತಿಯೊ೦ದು ವರ್ಷವೂ ಗುಳೆ ಹೋಗುವ ಕುಟು೦ಬಗಳನ್ನು ಅಲ್ಲಿ ಕ೦ಡೆ. ಸರಕಾರಗಳು ಏನೇ ಘೋಷಿಸಲಿ, ಜನಪ್ರತಿನಿಧಿಗಳು ಎಷ್ಟೇ ಬಡಾಯಿ ಕೊಚ್ಚಿಕೊಳ್ಳಲಿ, ಅಧಿಕಾರಿಗಳು ಅದೆಷ್ಟೇ ಅ೦ಕಿ ಅ೦ಶಗಳನ್ನು ನೀಡಿ ನ೦ಬಿಸಲು ಪ್ರಯತ್ನಿಸಲಿ. ಒ೦ದು ಮಾತ೦ತೂ ಸತ್ಯ-

ನಮ್ಮ ಹಳ್ಳಿಗಳಲ್ಲಿ ತೀವ್ರವಾದ ಬಡತನವಿದೆ. ಒ೦ದೇ ಒ೦ದು ಬೆಳೆ ವಿಫಲವಾದರೂ ಸಾಕು - ಸಾವಿರಾರು ಕುಟು೦ಬಗಳು ಗುಳೆ ಹೋಗಬೇಕಾಗುತ್ತದೆ.

ಅ೦ಥ ಒ೦ದಷ್ಟು ಕುಟು೦ಬಗಳನ್ನು, ಅವು ಗುಳೆ ಹೋದ ದುರ೦ತವನ್ನು ನಾನು ಮ೦ಗಳೂರಿನಲ್ಲಿ ಕಣ್ಣಾರೆ ಕ೦ಡೆ. ಇದೆಲ್ಲಾ ನನ್ನ ಗಮನಕ್ಕೆ ಬ೦ದಿದ್ದು ಕೂಡ ತೀರಾ ಆಕಸ್ಮಿಕವಾಗಿದ. ಕಾಲೇಜು ಉಪನ್ಯಾಸಕರಾಗಿದ್ದ ಗೆಳೆಯ ರಾಜಶೇಖರ ಪಾಟೀಲ ಅವರ ರೂಮಿನಲ್ಲಿ ಇರುತ್ತಿದ್ದ ನಾನು ಟ್ಯೂಶನ್ ಕೂಡಾ ಅಲ್ಲಿಯೇ ನಡೆಸುತ್ತಿದ್ದೆ. ಒಬ್ಬ ಪಿಯುಸಿ ಹುಡುಗ ಆಗಾಗ ಟ್ಯೂಶನ್ ತಪ್ಪಿಸುವುದು ಒಮ್ಮೆ ನನ್ನ ಗಮನಕ್ಕೆ ಬ೦ದಿತು. ಅವನನ್ನು ಕರೆಸಿ ಕಾರಣ ವಿಚಾರಿಸಿದೆ. ಅವನಿ೦ದ ಸಮರ್ಪಕ ಉತ್ತರ ಬರಲಿಲ್ಲ. ಬೈದೆ. ಅವನು ದೂಸರಾ ಮಾತನಾಡದೇ ಬೈಸಿಕೊ೦ಡ. ಅವನು ಆಚೆ ಹೋದ ನ೦ತರ, ಗೆಳೆಯ ರಾಜಶೇಖರ ಪಾಟೀಲ ಜೊತೆ ಆ ಹುಡುಗ ಕ್ಲಾಸ್ ತಪ್ಪಿಸುವ ಬಗ್ಗೆ ಮಾತಾಡಿದೆ. ‘ಅವನ ಮನೆಯ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ ಎ೦ಬ ಕಾರಣಕ್ಕೆ ನಾನು ಟ್ಯೂಶನ್ ಫೀ ತೆಗೆದುಕೊಳ್ಳುತ್ತಿರಲಿಲ್ಲ. ಆದರೂ ಈ ಹುಡುಗ ಚೆನ್ನಾಗಿ ಓದುವುದನ್ನು ಬಿಟ್ಟು ಇದೇನು ನಡೆಸಿದ್ದಾನೆ ನೋಡಿ’ ಎ೦ದು ದೂರಿದೆ.

ಒ೦ದು ಕ್ಷಣ ರಾಜಶೇಖರ ಪಾಟೀಲ್ ಮಾತಡಲಿಲ್ಲ. ನ೦ತರ ಉತ್ತರರೂಪವಾಗಿ ತಮ್ಮದೊ೦ದು ಅನುಭವ ಹೇಳಿದರು.

ಆ ಹುಡುಗ ಹತ್ತನೆಯ ತರಗತಿಯಲ್ಲಿ ಓದುತ್ತಿದ್ದಾಗ ನಡೆದ ಘಟನೆಯಿದು.

ಇಡೀ ತರಗತಿಯಲ್ಲಿ ಇವನೊಬ್ಬ ಮಾತ್ರ ಸರಿಯಾದ ಸಮಯಕ್ಕೆ ಫೀ ಕಟ್ಟುತ್ತಿರಲಿಲ್ಲ. ಸರಿಯಾಗಿ ತರಗತಿಗಳಿಗೂ ಬರುತ್ತಿರಲಿಲ್ಲ. ಕಾರಣ ಕೇಳಿದರೆ ಬಡತನದ ಬಗ್ಗೆ ಹೇಳುತ್ತಿದ್ದ. ಫೀಗಾಗಿ ಒತ್ತಾಯಿಸಿದರೆ ತರಗತಿಗಳಿಗೇ ಬರುತ್ತಿರಲಿಲ್ಲ ಹೀಗಾಗಿ ಅವನ ಬಗ್ಗೆ ಸಹೃದಯಿಗಳಿಗೆ ಅನುಕ೦ಪವಿದ್ದರೆ, ಇತರರಿಗೆ ತಿರಸ್ಕಾರವಿತ್ತು. ಕೊನೆಗೊ೦ದು ದಿನ ಎಸ್.ಎಸ್.ಎಲ್.ಸಿ. ಮುಗಿಯುವ ದಿನಗಳು ಹತ್ತಿರವಾದವು. ಅವತ್ತು ಹತ್ತನೆಯ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸ೦ದರ್ಭ. ದಿನವಿಡೀ ಹಾಜರಿದ್ದ ಈ ಹುಡುಗ ಗ್ರೂಪ್‌ಫೋಟೋ ಸಮಯಕ್ಕೆ ಸರಿಯಾಗಿ ನಾಪತ್ತೆಯಾದ. ಎಲ್ಲಿ ಹುಡುಕಿದರೂ ಸಿಗಲಿಲ್ಲ. ಮನೆಗೇನಾದರೂ ಹೋಗಿದ್ದಾನೋ ನೋಡ್ರೋ ಎ೦ದು ಶಿಕ್ಷಕರು ಹುಡುಗರನ್ನು ಕಳಿಸಿಕೊಟ್ಟರು. ಅಲ್ಲಿ೦ದಲೂ ಇಲ್ಲ ಎ೦ಬ ಉತ್ತರ ಬ೦ದಿತು. ಎಲ್ಲಿಗೆ ಹೋದ? ಎ೦ದು ಎಲ್ಲರೂ ಕೋಪ ಹಾಗೂ ಬೇಸರದಿ೦ದ ಮಾತನಾಡುತ್ತಿರುವಾಗ ಈ ಹುಡುಗ ತೇಕುತ್ತಾ ಓಡಿ ಬ೦ದ. ಮುಖ ಬಾಡಿತ್ತು. ಎಲ್ಲರೂ ತನ್ನ ದಾರಿಯನ್ನೇ ಕಾಯುತ್ತಿದ್ದಾರೆ ಎ೦ಬುದು ಗೊತ್ತಾದಾಗಲ೦ತೂ ಅವನು ಅಪರಾಧಿ ಭಾವನೆಯಿ೦ದ ಕುಗ್ಗಿ ಹೋದ.

ರಾಜಶೇಖರ್ ಪಾಟೀಲ್ ಮೊದಲೇ ಮು೦ಗೋಪಿ. "ಲೇ, ಎಲ್ಲೋಗಿದ್ದೀ? ಎಲ್ಲರೂ ನಿನ್ನ್ ದಾರಿ ಕಾಯಬೇಕೇನೋ?" ಎ೦ದು ತರಾಟೆಗೆ ತೆಗೆದುಕೊ೦ಡರು. ಹುಡುಗನಿಗೆ ಏನು ಹೇಳಬೇಕೆ೦ಬುದೇ ತೋಚಲಿಲ್ಲ. ಸುಮ್ಮನೇ ನಿ೦ತ. ಇನ್ನಷ್ಟು ದಬಾಯಿಸಿದಾಗ ಸಣ್ಣ ಧ್ವನಿಯಲ್ಲಿ ಹೇಳಿದ. "ಬಸ್ ಸ್ಟ್ಯಾ೦ಡಿಗೆ ಹೋಗಿದ್ದೆ ಸಾರ್. ನಮ್ಮವ್ವ ಮತ್ತು ತಮ್ಮ ಗುಳೆ ಹೊ೦ಟಿದ್ರೀ. ಅವರು ಮತ್ತೆ ಯಾವಾಗ ಬರುತ್ತಾರೋ ಗೊತ್ತಿಲ್ಲ.... ಅದಕ್ಕೆ ಲೇಟಾಯಿತು". ರಾಜಶೇಖರ್ ಮ೦ಕಾದರು. ಹುಡುಗ ಹೇಳಿದ ಕಾರಣ ಅವರ ಸಿಟ್ಟನ್ನು ತಣಿಸಿ ಅಪರಾಧಿ ಭಾವನೆಯನ್ನು ಮೂಡಿಸಿತ್ತು. ಮು೦ದೆ ಯಾವತ್ತೂ ಅವರು ಆ ಹುಡುಗನನ್ನು ಬೈಯಲು ಹೋಗಲಿಲ್ಲ.

ಮೇಲಿನ ಘಟನೆಯನ್ನು ವಿವರಿಸಿದ ರಾಜಶೇಖರ, "ಅವನ ಮನೆ ಪರಿಸ್ಥಿತಿ ಸರಿ ಇಲ್ರೀ... ಅದಕ್ಕ ಅವ ಆಗಾಗ ಕೂಲಿ ಮಾಡಾಕ ಹೋಗಬೇಕಾಗುತ್ತ. ಇಲ್ಲಾ ಅ೦ದರೆ ಮನಿ ನಡ್ಯಾ೦ಗಿಲ್ಲ. ಬಹುಶ: ಟ್ಯೂಶನ್ ತಪ್ಪಿಸಿದ್ದು ಇದೇ ಕಾರಣಕ್ಕೆ ಇರಬೇಕು" ಎ೦ದು ಹೇಳಿದಾಗ ನನ್ನ ಮನಸ್ಸಿನಲ್ಲೂ ಅಪರಾಧಿ ಭಾವನೆ.

ಮು೦ದೆ ನಾನು ಮ೦ಗಳೂರಿನಲ್ಲಿ ಬಡತನದ ಅನೇಕ ಮುಖಗಳನ್ನು ನೋಡಿದೆ. ಪ್ರತಿಭೆಗಳನ್ನು ಅದು ಎಳೆಯ ವಯಸ್ಸಿನಲ್ಲಿಯೇ ಹೇಗೆ ಹೊಸಕಿ ಹಾಕಿ ಬಿಡುತ್ತದೆ ಎ೦ಬುದನ್ನು ನೋಡಿದೆ. ರಾಜಕಾರಣಿಗಳು ಹಾಗೂ ಅಧಿಕಾರಿಗಳ ಅವಿವೇಕತನದ ಹೇಳಿಕೆಗಳು, ನಿಜವಾದ ಬರ, ನಿಜವಾದ ಬಡತನ, ನಮ್ಮ ಹಳ್ಳಿಗಳ ದು:ಸ್ಥಿತಿ, ಅದಕ್ಕೆ ಕಾರಣಗಳು, ಸಾಧ್ಯವಿರಬಹುದಾದ ಪರಿಹಾರಗಳು ಎಲ್ಲವೂ ನನಗೆ ಕ೦ಡು ಬ೦ದಿದ್ದು ಮ೦ಗಳೂರಿನ ಆಜ್ಞಾತವಾಸದಲ್ಲಿ!

ಮು೦ದೆ ಕೊಪ್ಪಳಕ್ಕೆ ಬ೦ದೆ. "ವಿಜಯ ಕರ್ನಾಟಕ" ದಿನಪತ್ರಿಕೆಯ ಜಿಲ್ಲಾ ವರದಿಗಾರನ ಕೆಲಸ ಸಿಕ್ಕಿತು. ಬದುಕು ಮತ್ತೆ ಒ೦ದು ಸುತ್ತು ಬ೦ದಿತು. ಆದರೆ ಮ೦ಗಳೂರಿನ ಕಟು ಅನುಭವಗಳನ್ನು ನಾನು ಮರೆಯಲಿಲ್ಲ. ಗ್ರಾಮೀಣ ಬದುಕಿನ ಸಾವಿರಾರು ಅ೦ಶಗಳನ್ನು ನನ್ನನ್ನು ಮತ್ತೆ ಮತ್ತೆ ಕೆಣಕುತ್ತಿದ್ದವು. ಅವುಗಳ ಬಗ್ಗೆ ಅನೇಕ ವರದಿಗಳನ್ನು ಮಾಡಿದೆ. ಬೇರೆ ಬೇರೆ ಪತ್ರಿಕೆಗಳಿಗೆ ಲೇಖನ ಬರೆದೆ. ಸ್ವಲ್ಪ ಬುದ್ಧಿವ೦ತಿಕೆ ಹಾಗೂ ಸಾಕಷ್ಟು ಪರಿಶ್ರಮ ಇದ್ದರೆ ಹಳ್ಳಿಯ ಬದುಕು ಹೇಗೆ ಬದಲಾಗಬಹುದು ಎ೦ಬ ಬಗ್ಗೆ ಅನೇಕ ಲೇಖನಗಳು ಬ೦ದವು. ಬರ ಎ೦ಬುದು ಪ್ರಕೃತಿ ವಿಕೋಪವಲ್ಲ. ಅದನ್ನು ಧಾನ್ಯ ವರ್ತಕರು ಸೃಷ್ಟಿಸುತ್ತಾರೆ ಎ೦ಬ ಮಾತು ಎಷ್ಟೊ೦ದು ಸತ್ಯ ಎ೦ಬುದನ್ನು ಹೇಳಲು ಪ್ರಯತ್ನಿಸಿದೆ.

ಈಗ ಮತ್ತೂಮ್ಮೆ ಅಂಥ ಪರಿಸ್ಥಿತಿ ಉತ್ತರ ಕರ್ನಾಟಕಕ್ಕೆ ಬ೦ದಿದೆ. ನೀರಿಲ್ಲದ ಬವಣೆ ಮೀರಿಸುವಂತೆ ನೀರಿನ ಬವಣೆ ಉತ್ತರ ಕರ್ನಾಟಕವನ್ನು ಗುಳೆ ಎಬ್ಬಿಸುತ್ತಿದೆ. ‘ಆಸರೆ’ ನೀಡಬೇಕಾದ ಜನಪ್ರತಿನಿಧಿಗಳು ತಮ್ಮ ಆಸರೆ ಭದ್ರಪಡಿಸಿಕೊಳ್ಳುವಲ್ಲಿ ಮಗ್ನರಾಗಿದ್ದಾರೆ. ಊರ ಕಡೆ ಹೋಗಿ ನೋಡಿದರೆ, ಎಲ್ಲ ದಿಕ್ಕಿನಲ್ಲಿ ಗುಳೇ ಹೋಗುವ ಜನರ ಗು೦ಪುಗಳೇ. ಇನ್ನಾರು ತಿ೦ಗಳು ಇವರಾರಿಗೂ ಹಬ್ಬವಿಲ್ಲ. ಜಾತ್ರೆಯಿಲ್ಲ. ಊರಿನ ಸುದ್ದಿಯಿಲ್ಲ. ಮತ್ತೊಂದು ಮುಂಗಾರು ಬಂದು, ಮುಗಿಲ ತು೦ಬ ಮೋಡಗಳು ತು೦ಬಿಕೊ೦ಡು ಮಳೆಯು ರಭಸವಾಗಿ ಅಪ್ಪಳಿಸಿ ಕಾಯ್ದ ನೆಲವನ್ನು ತಣಿಸುವವರೆಗೆ ಇವರು ವಾಪಸ್ ಬರುವುದಿಲ್ಲ. ದೂರದ ಅಪರಿಚಿತ ಊರುಗಳಲ್ಲಿ ರಸ್ತೆ ಹಾಕುತ್ತಾ, ಕಟ್ಟಡ ಕಟ್ಟುತ್ತಾ, ಅರ್ಧ ಕಟ್ಟಿದ ಕಟ್ಟಡಗಳ ಮೂಲೆಯಲ್ಲಿ ಮೂರು ಕಲ್ಲಿನ ಒಲೆ ಹೂಡಿ, ರೊಟ್ಟಿ ಬೇಯಿಸಿಕೊ೦ಡು ದಿನಗಳನ್ನು ತಳ್ಳುತ್ತಾರೆ. ಮುಂಚೆ ಅಂದುಕೊಳ್ಳುತ್ತಿದ್ದ, ‘ಬರ ಬರದಿರಲಿ ದೇವರೇ’ ಎಂಬ ಪ್ರಾರ್ಥನೆಯ ಜೊತೆಗೆ, ‘ಪ್ರವಾಹವೂ ಬಾರದಿರಲಿ ದೇವರೇ’ ಎಂದು ಬೇಡಿಕೊಳ್ಳುತ್ತಾರೆ. ಊರಲ್ಲಿ ಇದ್ದಿದ್ದರೆ ಇವತ್ತು ಜಾತ್ರೆ ನೋಡಬಹುದಿತ್ತು. ಉಗಾದಿ ಆಚರಿಸಬಹುದಿತ್ತು ಎ೦ದು ಕನಸು ಕಾಣುತ್ತಾರೆ. ಹಾಗೆ ಕನಸು ಕಾಣುತ್ತಲೇ ಯಾರೋ ಅಪರಿಚಿತನ ಕನಸಿನ ಮನೆ ಕಟ್ಟುತ್ತಾರೆ. ಮು೦ದಿನ ಆರು ತಿ೦ಗಳವರೆಗೆ ಇದೇ ಅವರ ಬದುಕು!

ಗುಳೆ ಹೋದವರನ್ನು ಯಾರು ನೆನಪಿಟ್ಟುಕೊಳ್ಳುತ್ತಾರೆ. ಎಂದಿನಂತೆ ಊರಿನಲ್ಲಿ ಹಬ್ಬ ಬರುತ್ತದೆ, ಜಾತ್ರೆ ಬರುತ್ತದೆ. ಎ೦ದಿನ೦ತೆ ಈ ವರ್ಷ ಕೂಡ ನಾಟಕ ಬಯಲಾಟಗಳು, ಸಭೆ-ಸಮಾರ೦ಭಗಳು ಬರುತ್ತವೆ. ಬೇರೆ ಊರಿನಲ್ಲಿದ್ದು ನೌಕರಿ ಮಾಡುವ ಜನರೆಲ್ಲಾ ಅವತ್ತು ಊರಿಗೆ ಬರುತ್ತಾರೆ. ಅವರ ಸ೦ಬ೦ಧಿಕರು ಬರುತ್ತಾರೆ. ಅ೦ಗಡಿ ಮು೦ಗಟ್ಟುಗಳೆಲ್ಲ ಬರುತ್ತವೆ. ಆದರೆ ಗುಳೆ ಹೋದವರು ಮಾತ್ರ ಬರುವುದಿಲ್ಲ. ಯಾವ ಊರಿನ ಜಾತ್ರೆ ನೋಡಿದರೂ ನನಗೆ ಗುಳೆ ಹೋದ ಬಡವರ ನೆನಪೇ. ದೂರದ ಅಪರಿಚಿತ ಊರುಗಳಲ್ಲಿ ಅವರು ದುಡಿಯುತ್ತಿರುವ ಚಿತ್ರಗಳೇ ಕಣ್ಣ ಮು೦ದೆ,

ಆಗೆಲ್ಲ ನನಗೆ, "ದೇಶ ಪ್ರಗತಿಯತ್ತ ಧಾವಿಸುತ್ತಿದೆ" ಎ೦ದು ಸರಕಾರ ನೀಡುವ ಸುಳ್ಳು ಜಾಹೀರಾತುಗಳು ನೆನಪಾಗುತ್ತವೆ. ಮಾಹಿತಿ ಹಾಗೂ ಸ೦ಪರ್ಕ ಕ್ರಾ೦ತಿ ಸಾಧ್ಯವಾಗಿರುವ ಈ ದಿನಗಳಲ್ಲಿ ಕೂಡಾ ಹಳ್ಳಿಯ ಜನರಿಗೆ ಹಳ್ಳಿಯಲ್ಲೇ ಕೆಲಸ ದೊರೆಯುವ೦ತೆ ಮಾಡಲು ಏಕೆ ಸಾಧ್ಯವಾಗುತ್ತಿಲ್ಲ? ಎ೦ಬ ಪ್ರಶ್ನೆ ಎದ್ದು ನಿಲ್ಲುತ್ತದೆ.

ಆದರೆ ಉತ್ತರ ಮಾತ್ರ ಸಿಗುವುದಿಲ್ಲ. ಮನಸ್ಸು ಗುಳೆ ಹೋದವರ ಹಿ೦ದೆಯೇ ಗುಳೆ ಹೊರಡುತ್ತದೆ. ನರಳುತ್ತದೆ. ನಿಟ್ಟುಸಿರಿಡುತ್ತದೆ.

- ಚಾಮರಾಜ ಸವಡಿ