ವಿಸ್ತಾರ ಜಗತ್ತಿನಲ್ಲಿ ವಸ್ತಾರೆ ಚೌಕಟ್ಟು...

30 May 2011

0 ಪ್ರತಿಕ್ರಿಯೆ

ನಾಗರಾಜ ವಸ್ತಾರೆ ಭಾನುವಾರದ ವಿಜಯ ಕರ್ನಾಟಕ ದಿನಪತ್ರಿಕೆಯ ಲವ್‌ಲವಿಕೆ ಪುರವಣಿಯಲ್ಲಿ ಬರೆದಿರುವ ಲೇಖನ ‘ಒಂದು ಮಿಡಿತ, ಒಂದು ಹೃದಯ...’ಕ್ಕೆ ನನ್ನ ವೈಯಕ್ತಿಕ ಪ್ರತಿಕ್ರಿಯೆ ಇದು.

ಇದನ್ನು ಲೇಖನ ಎನ್ನಲು ನನ್ನದೇ ಆದ ಆಕ್ಷೇಪಗಳಿವೆ. ಇದು ಲೇಖನವೋ, ವೈಯಕ್ತಿಕ ಅನಿಸಿಕೆಯೋ, ಪ್ರಬಂಧವೋ, ಅಥವಾ ಕತೆಯಾಗಲು ಹೊರಟ ವ್ಯಥೆಯೋ ಎನಿಸುತ್ತದೆ. ಅಂತ್ಯದಲ್ಲಿ ಲೇಖಕರು ಹೇಳಿರುವ ಎರಡು ಪ್ಯಾರಾದ ಸೂಕ್ಷ್ಮತೆಯನ್ನು ಇಡೀ ಲೇಖನದುದ್ದಕ್ಕೂ ಬಳಸಿದ್ದರೆ ಅದಕ್ಕೊಂದು ಮರ್ಯಾದೆಯ ಆಯಾಮವಾದರೂ ದಕ್ಕುತ್ತಿತ್ತು. ಆದರೆ ಹಾಗಾಗಿಲ್ಲ ಎಂಬುದೇ ಬೇಸರದ ಸಂಗತಿ. ಲವ್‌ಲವಿಕೆ ಎಂಬ ಮುದ್ದಾದ ಹೆಸರಿನ ಪುರವಣಿಗೆ ಈ ಬರಹ ತಕ್ಕುದಲ್ಲ ಎನಿಸುತ್ತದೆ.


 




ವಸ್ತಾರೆಯವರು ಹೇಳಹೊರಟಿದ್ದಾದರೂ ಏನು? ಅದೇ ಪುರವಣಿಯ ಮುಖ್ಯ ಲೇಖನವಾಗಿ ಪ್ರಕಟವಾದ ‘ಪತಿ, ಪತ್ನಿ ಮತ್ತು ಆಕೆ’ ಎಂಬ ಲೇಖನದ ಅಡಿ ಪ್ಯಾರಾದಂತೆ ಬಂದಿರುವ ಈ ಬರಹ, ಆ ಸ್ಥಾನಕ್ಕೂ ಯೋಗ್ಯವಲ್ಲ. ಮುಖ್ಯ ಲೇಖನಕ್ಕೆ ವ್ಯತಿರಿಕ್ತ ಎನಿಸುವಂತೆ ಭಾವನೆ ಹುಟ್ಟಿಸುವ ಬರಹ ಇದು. ಗಂಡು ಹೆಣ್ಣಿನ ಸಂಬಂಧ ಆಯಾ ಕಾಲಮಾನಕ್ಕೆ ತಕ್ಕಂತೆ ಬದಲಾಗುತ್ತ ಹೋಗುವಂಥದ್ದಾದರೂ, ಕೆಲ ಅಂಶಗಳು ಎಂದಿಗೂ ಬದಲಾಗದಂಥವು. ಆ ಅಂಶಗಳ ಬಗ್ಗೆ ವಸ್ತಾರೆ ಇನ್ನಷ್ಟು ನವಿರಾಗಿ, ಗೇಲಿ ಧ್ವನಿ ಇಲ್ಲದೇ ಹೇಳಬಹುದಿತ್ತು. ಮುಖ್ಯ ಲೇಖನದ ಧ್ವನಿ ನೋಡಿದರೆ, ಅದು ಅವಶ್ಯವೂ ಆಗಿತ್ತು. 

ಆದರೆ, ಅಂಥ ಸೂಕ್ಷ್ಮತೆಯೇನೂ ಇಲ್ಲದ ವಸ್ತಾರೆ ಬರಹ ಪೇಲವವಾಗಿ, ಗೇಲಿ ಮಾತಿನಲ್ಲೇ ಉಳಿದುಕೊಂಡಿದೆ. ವಸ್ತಾರೆಯವರಿಂದ ಇಂಥ ಬರಹವನ್ನು ಖಂಡಿತ ನಿರೀಕ್ಷಿಸಿರಲಿಲ್ಲ. 

ಸಂಬಂಧಗಳು ಅಷ್ಟು ಸುಲಭವಾಗಿ ವ್ಯಾಖ್ಯೆಯ ಚೌಕಟ್ಟಿಗೆ ಸಿಲುಕುವಂಥವಲ್ಲ. ಒಂದು ವೇಳೆ ಅವನ್ನು ಚೌಕಟ್ಟಿನೊಳಗೆ ಕಟ್ಟಿಹಾಕಲು ಹೊರಟರೆ, ಅವು ಸಂಬಂಧವಾಗಿ ಉಳಿಯುವುದಿಲ್ಲ. ಸಂಬಂಧ ಎಂಬುದು ವ್ಯಾಕರಣ ಅಲ್ಲ. ಅದು, ಬದುಕಿನಂಥದು. ಸದಾ ವಿಸ್ತರಿಸುವಂಥದು. ವಿಸ್ತರಿಸುತ್ತಿದ್ದರೂ, ಕೆಲ ಮೂಲ ಅಂಶಗಳನ್ನು ಕಾಪಾಡಿಕೊಂಡು ಬರುವಂಥದು. ದಟ್ಟ ಅರಣ್ಯದಂಥ ಸಂಕೀರ್ಣತೆ ಅದರದು. ಕೇವಲ ಗೇಲಿಯಂಥ ಭಾವನೆ ಇಟ್ಟುಕೊಂಡು ಸಂಬಂಧವನ್ನು ವಿಶ್ಲೇಷಿಸಲು ಹೊರಟರೆ ವಸ್ತಾರೆಯಂಥವರ ಬರಹಗಳೇ ಬರುತ್ತವೆ.

ಹೀಗಾಗಿ, ‘ಪತಿ, ಪತ್ನಿ ಮತ್ತು ಆಕೆ’ ಎಂಬುದು, ‘ಪತಿ, ಪತ್ನಿ ಮತ್ತು ಅವನು’ ಎಂದೂ ಆಗಬಹುದು. ಆದರೆ, ಇಂಥ ವಿಷಯಗಳಲ್ಲಿ ‘ಆಕೆ’ ಎಂಬ ಪದ ಕೊಡುವ ರೋಚಕತೆಯನ್ನು ‘ಅವನು’ ಎಂಬುದು ಕೊಡಲಾರದು ಎಂದು ತುಂಬ ಜನ ಭಾವಿಸಿರುವಂತಿದೆ. ಹೀಗಾಗಿ, ಇಂಥ ಬರಹಗಳು ಪದೆ ಪದೆ ‘ಆಕೆ’ಯ ಸುತ್ತಲೇ ಗಿರಕಿ ಹೊಡೆಯುತ್ತವೆಯೇ ಹೊರತು, ಅದರಾಚೆಗೆ ಇಣುಕಿ ನೋಡುವ ಕುತೂಹಲವನ್ನೂ ವಸ್ತಾರೆಯಂಥವರಲ್ಲಿ ಹುಟ್ಟಿಸುವುದಿಲ್ಲ.

ಪ್ರತಿಯೊಂದು ಭಾವನೆಗೂ, ಸಂಬಂಧಕ್ಕೂ, ಚೌಕಟ್ಟು ಹಾಕುವ ದೃಷ್ಟಿಕೋನ ಇರುವವರೆಗೆ ಇಂಥ ವಿಷಯಗಳ ಬರವಣಿಗೆಗೆ ಜೀವ ಬರುವುದಿಲ್ಲ. ಸಾಮಾನ್ಯ ಜನರ ಅಭಿಪ್ರಾಯಗಳನ್ನೇ ಹಸಿಹಸಿಯಾಗಿ ಹೇಳುವುದು ವರದಿಗಾರಿಕೆಯಾಗಬಹುದೇ ಹೊರತು ಖಂಡಿತ ಪುರವಣಿ ಬರಹವಾಗದು. ಸಂಬಂಧಗಳ ವಿಶ್ಲೇಷಣೆಗೆ ಮನಃಶಾಸ್ತ್ರಜ್ಞರೇ ಆಗಬೇಕಿಲ್ಲ. ನಾವು ಕಂಡುಂಡ ಬದುಕೇ ಅದಕ್ಕೆ ಸಾಕಷ್ಟು ಸಾಮಾಗ್ರಿಗಳನ್ನು ಒದಗಿಸಬಲ್ಲುದು. ದೊರಕಿದ ಅನುಭವ, ಮಾಹಿತಿಯನ್ನೇ ಅಚ್ಚುಕಟ್ಟಾಗಿ ಕಟ್ಟಿಕೊಟ್ಟರೆ ಉತ್ತಮ ಬರಹ ಖಂಡಿತ ದಕ್ಕುತ್ತದೆ. ಅಂಥದೊಂದು ಪ್ರಯತ್ನ ಮಾಡುವ ಮನಃಸ್ಥಿತಿ ವಸ್ತಾರೆಯವರ ಬರಹದಲ್ಲಿ ಕಾಣಲಿಲ್ಲ.

ಅದು ಕಾಣಬೇಕಿತ್ತು ಎಂಬುದು ನನ್ನಂಥವರ ಅನಿಸಿಕೆ. 

- ಚಾಮರಾಜ ಸವಡಿ

ಗುಳೆ ಹೋದವರ ಹಿಂದೆ ಹೊರಟಿದೆ ಮನಸು...

22 May 2011

4 ಪ್ರತಿಕ್ರಿಯೆ
(ಈ ಬರಹ ನವೆಂಬರ್‌ ೨೦೦೯ರಲ್ಲಿ ಬರೆದಿದ್ದು. http://chamarajsavadi.blogspot.com/2009/11/blog-post.html ಇದನ್ನು ಮತ್ತೊಮ್ಮೆ ನಿಮ್ಮ ಮುಂದೆ ತರಲು ಸಂಪಾದಕೀಯ ಬ್ಲಾಗ್‌ನ  ‘ಹಾನಗಲ್‌ ಪ್ರಭಾಕರನ ಪೂರ್ತಿ ವಿವರ, ಶಾಂತವ್ವಳ ನೋವಿನ ಕಥೆ...’ ಎಂಬ ಬರಹ ಕಾರಣ. http://sampadakeeya.blogspot.com/2011/05/blog-post_9662.html ಹೀಗಾಗಿ, ಈ ಬರಹವನ್ನು ಸಂಪಾದಕೀಯ ಬ್ಲಾಗ್‌ಗೆ ಅರ್ಪಿಸುತ್ತಿದ್ದೇನೆ...)

ಹಲವು ವರ್ಷಗಳ ಹಿ೦ದಿನ ಘಟನೆ.

ಆಗ ನಾನು ಬೆ೦ಗಳೂರಿನ ಎಲ್ಲಾ ನ೦ಟನ್ನು ಕಡಿದುಕೊ೦ಡು, ಇನ್ನು ಮು೦ದೆ ನಮ್ಮೂರಲ್ಲೇ ಏನಾದರೂ ಮಾಡಬೇಕೆ೦ದು ಕೊಪ್ಪಳಕ್ಕೆ ಬ೦ದು ಪೂರ್ಣಪ್ರಮಾಣದ ನಿರುದ್ಯೋಗಿಯಾಗಿದ್ದೆ. ನನ್ನ ಬ೦ಡವಾಳವೇನಿದ್ದರೂ ತಲೆಯಲ್ಲಿತ್ತೇ ಹೊರತು ಜೇಬಿನಲ್ಲಿರಲಿಲ್ಲ. ಸಹಜವಾಗಿ ಕೊಪ್ಪಳ ನನ್ನನ್ನು ತಿರಸ್ಕರಿಸಿತು. ಯಾರಾದರೂ ಸರಿ, ದುಡ್ಡಿಲ್ಲದಿದ್ದರೆ ಅವನು ತಿರಸ್ಕಾರಕ್ಕೇ ಯೋಗ್ಯ. ಜಗತ್ತಿಗೆ ಸುಲಭವಾಗಿ ಅರ್ಥವಾಗುವ ಭಾಷೆಗಳೆ೦ದರೆ ಎರಡೇ- ಒ೦ದು ಹಣ, ಇನ್ನೊ೦ದು ಬೆದರಿಕೆ. ನನ್ನ ಹತ್ತಿರ ಎರಡೂ ಇಲ್ಲದಿದ್ದರಿ೦ದ ಪತ್ರಿಕೆಯೊ೦ದನ್ನು ಪ್ರಾರ೦ಭಿಸಬೇಕೆನ್ನುವ ನನ್ನ ಆಸೆಗೆ ಯಾವ ಬೆ೦ಬಲವೂ ಸಿಗಲಿಲ್ಲ. ಯಾರಾದರೂ ಬ೦ಡವಾಳಶಾಹಿಗಳು ಮು೦ದೆ ಬ೦ದರೆ, ಅಚ್ಚುಕಟ್ಟಾದ ದಿನಪತ್ರಿಕೆಯೊ೦ದನ್ನು ರೂಪಿಸಿಕೊಟ್ಟೇನೆ೦ದು ನಾನು ಹ೦ಬಲಿಸುತ್ತಿದ್ದೆ. ಆದರೆ ದುಡ್ಡು ಹಾಕುವ ಹ೦ಬಲ ಮಾತ್ರ ಕೊಪ್ಪಳದ ಯಾವ ಬ೦ಡವಾಳಗಾರನಲ್ಲೂ ಇರಲಿಲ್ಲ. ಅ೦ಥವರ ಪರಿಚಯ ಕೂಡಾ ನನಗಿರಲಿಲ್ಲ. 

ಹಾಗಿದ್ದರೂ ನನ್ನಲ್ಲೊ೦ದು ಆತ್ಮವಿಶ್ವಾಸವಿತ್ತು. ಏನಾದರೂ ಮಾಡಿ ಕೊಪ್ಪಳದಲ್ಲಿ ಪತ್ರಿಕೆಯೊ೦ದನ್ನು ಹುಟ್ಟು ಹಾಕಬೇಕೆನ್ನುವ ತುಡಿತವಿತ್ತು. ಕಾಲ ಪಕ್ವವಾಗುವವರೆಗೆ ಏನಾದರೂ ಮಾಡಬೇಕಲ್ಲವೇ? ವಾಪಸ್ ಬೆ೦ಗಳೂರಿಗೆ ಹೋಗುವ ಮನಸ್ಸಿಲ್ಲದ್ದರಿ೦ದ ಕೊಪ್ಪಳದಲ್ಲೇ ಮಾಡುವ೦ಥ ಕೆಲಸವನ್ನು ಹಿಡಿಯಬೇಕಿತ್ತು. ಆಗ ಸಹಾಯಕ್ಕೆ ಬ೦ದಿದ್ದು ಟ್ಯೂಷನ್‌. 

ಗ್ರಾಮೀಣ ಪ್ರದೇಶದಲ್ಲಿ ಕಾಣಸಿಗುವಂತೆ ಕೊಪ್ಪಳದಲ್ಲಿಯೂ ಆಗ ಇ೦ಗ್ಲಿಷ್ ಟ್ಯೂಶನ್ ಕ್ರಾ೦ತಿ. ಯಾವ ಓಣಿಗೆ ಹೊಕ್ಕರೂ ಅಲ್ಲೊ೦ದು ಟ್ಯುಟೇರಿಯಲ್ಲು, ಯಾವ ನಿರುದ್ಯೋಗಿಯನ್ನು ನೋಡಿದರೂ ಆತನದೊ೦ದು ಟ್ಯೂಶನ್ ಬ್ಯಾಚ್ ಇರುತ್ತಿತ್ತು. ಆದರೆ, ಪರಿಚಿತರು ತೀರಾ ಕಡಿಮೆ ಸಂಖ್ಯೆಯಲ್ಲಿದ್ದ ನನ್ನ ಪಾಲಿಗೆ ವಿದ್ಯಾರ್ಥಿಗಳು ಸಿಗುವುದು ಸಾಧ್ಯವೇ ಇರಲಿಲ್ಲ.

ಹೀಗಾಗಿ ನಾನು ಕೊಪ್ಪಳದಿಂದ ೨೨ ಕಿಮೀ ದೂರದ ಯಲಬುರ್ಗಾ ತಾಲ್ಲೂಕಿನ ಮ೦ಗಳೂರಿಗೆ ಟ್ಯೂಶನ್ ಹೇಳಲು ಹೋಗುವುದು ಅನಿವಾರ್ಯವಾಯಿತು. ಸುಮಾರು ಎ೦ಟು ತಿ೦ಗಳುಗಳ ಕಾಲ ನಾನು ಅಲ್ಲಿದ್ದೆ. ಟ್ಯೂಶನ್ ಹೇಳುತ್ತಲೇ ಬೇರೆ ಬೇರೆ ಪತ್ರಿಕೆಗಳಿಗೆ ಲೇಖನ ಬರೆದೆ. ನನ್ನ ಬೆ೦ಗಳೂರಿನ ನೆನಪುಗಳ ಪೈಕಿ ಒ೦ದಷ್ಟನ್ನು ಬರೆದಿಟ್ಟುಕೊ೦ಡೆ. ಬೆ೦ಗಳೂರು ಅಷ್ಟೆಲ್ಲಾ ದಿನಗಳಲ್ಲಿ ನನಗೆ ಏನೆಲ್ಲವನ್ನೂ ಕಲಿಸಿತ್ತೋ, ಅಷ್ಟೇ ಪ್ರಮಾಣದ ಪಾಠವನ್ನು ಮ೦ಗಳೂರು ನನಗೆ ಎ೦ಟೇ ತಿ೦ಗಳುಗಳ ಕ್ಲುಪ್ತ ಅವಧಿಯಲ್ಲಿ ಕಲಿಸಿತ್ತು. 

ಆಗಾಗ ಇ೦ಥ ಅಜ್ಞಾತವಾಸಗಳಿಗೆ ಹೊರಟು ಹೋಗುವುದು ಒ೦ದರ್ಥದಲ್ಲಿ ಒಳ್ಳೆಯದೇ ಎ೦ದು ಈಗಲೂ ನಾನು ನಂಬುತ್ತೇನೆ. ಎಲ್ಲಾ ರೀತಿಯ ಒ೦ಟಿತನ ನಮ್ಮೊಳಗಿನ ಅಸಲಿ ವ್ಯಕ್ತಿತ್ವವನ್ನು ಹೊರ ಹಾಕುತ್ತದೆ. ಯಾರು ಒಳ್ಳೆಯವರು? ಕೆಟ್ಟವರು ಯಾರು? ನಮ್ಮೊಳಗಿನ ನಿಜವಾದ ಶಕ್ತಿ ಏನು? ದೌರ್ಬಲ್ಯಗಳು ಯಾವುವು? ನಮ್ಮ ವಲಯದ ಸಮಯಸಾಧಕರು ಯಾರು? ಅವರ ಕಾರ್ಯತ೦ತ್ರಗಳೆ೦ಥವು? ಮು೦ದಿನ ದಿನಗಳಲ್ಲಿ ನಾನು ಯಾರನ್ನು ನ೦ಬಬಹುದು? ಯಾರನ್ನು ಕೈ ಬಿಡಬೇಕು? ಯಾರನ್ನು ಪೂರ್ತಿಯಾಗಿ ದೂರವಿಡಬೇಕು? ಎ೦ಬ ವಿಷಯಗಳು ಆಜ್ಞಾತವಾಸದ ಅವಧಿಯಲ್ಲಿ ಚೆನ್ನಾಗಿ ಗೊತ್ತಾಗುತ್ತವೆ.

ಮ೦ಗಳೂರಿನ ಎ೦ಟು ತಿ೦ಗಳುಗಳ ಆವಧಿ ನನ್ನ ಅಂಥ ಅಜ್ಞಾತವಾಸಗಳ ಪೈಕಿ ಒ೦ದು.

ಆ ಸ೦ದರ್ಭದಲ್ಲಿ ನನ್ನ ಗೆಳೆಯರೆನಿಸಿಕೊ೦ಡವರಿ೦ದ, ಬ೦ಧುಗಳಿ೦ದ, ಹಿತೈಷಿಗಳಿ೦ದ ನಾನು ದೂರವಿದ್ದೆ. ಬೆ೦ಗಳೂರು ಬಿಟ್ಟು ಸಣ್ಣ ಹಳ್ಳಿಯಾದ ಮ೦ಗಳೂರಿಗೆ ಟ್ಯೂಶನ್ ಹೇಳಲು ಬ೦ದು ನಿ೦ತ ನನ್ನ ಬಗ್ಗೆ ಆಶಾದಾಯಕವಾಗಿ ಯೋಚಿಸುವ ವ್ಯಕ್ತಿಗಳ ಸ೦ಖ್ಯೆ ಆಗ ತು೦ಬಾ ಕಡಿಮೆಯಿತ್ತು.

ನನಗೂ ಬೇಕಾಗಿದ್ದೂ ಅದೇ.

ನನ್ನ ನಿಜವಾದ ಮಿತ್ರರು ಯಾರು? ಹಿತೈಷಿಗಳು ಎ೦ಥವರು? ಭವಿಷ್ಯದ ದಿನಗಳಲ್ಲಿ ನಾನು ಯಾರನ್ನು ನ೦ಬಬಹುದು? ಎ೦ಬುದನ್ನು ಅರಿಯಲು ಅಜ್ಞಾತವಾಸ ನನಗೆ ತು೦ಬಾ ಸಹಾಯ ಮಾಡಿತು. ಹಾಗೆ ನೋಡಿದರೆ ಪ್ರತಿಯೊ೦ದು ಆಜ್ಞಾತವಾಸವೂ ನನಗೆ ಒಳ್ಳೆಯ ಪಾಠ ಕಲಿಸಿದೆ. ಹೊಸ ಹೊಸ ಗೆಳೆಯರನ್ನು ತ೦ದು ಕೊಟ್ಟಿದೆ. ಯಾವ ರಿಸ್ಕುಗಳನ್ನು ತೆಗೆದುಕೊಳ್ಳಬಹುದು? ಅವನ್ನು ಎಷ್ಟರ ಮಟ್ಟಿಗೆ ತೆಗೆದುಕೊಳ್ಳಬಹುದು? ಎ೦ಬುದನ್ನು ತೀರ್ಮಾನಿಸಲು ಸಹಾಯ ಮಾಡಿದೆ. ಆದ್ದರಿ೦ದ ನಾನು ಇಂಥ ಅಜ್ಞಾತವಾಸಗಳನ್ನು ಇಷ್ಟಪಡುತ್ತೇನೆ. ಆ ಅವಧಿ ಎಷ್ಟೇ ವೇದನಾಪೂರ್ಣವಾಗಿದ್ದರೂ ಕೂಡ ಅದನ್ನು ಆನುಭವಿಸಲು ಸಿದ್ಧನಾಗುತ್ತೇನೆ. 

ಯಲಬುರ್ಗಾ ತಾಲ್ಲೂಕಿನ ಮ೦ಗಳೂರು ನನಗೆ ಗೆಳೆಯರನ್ನಷ್ಟೇ ಅಲ್ಲ, ಅನುಭವಗಳನ್ನು ಕೂಡಾ ದೊರಕಿಸಿಕೊಟ್ಟಿತು. ಆ ದಿನಗಳನ್ನು ನೆನಪಿಸಿಕೊ೦ಡರೆ ಇವತ್ತಿಗೂ ನಾನು ಮೌನವಾಗುತ್ತೇನೆ. ನನ್ನ ಅಹ೦ಕಾರ ತಾನಾಗಿ ಕಡಿಮೆಯಾಗುತ್ತದೆ. ಇದೆಲ್ಲಾ ನಶ್ವರ ಎ೦ಬ ವಿವೇಕ ಸುಲಭವಾಗಿ ಮೂಡುತ್ತದೆ. ಏಕೆ೦ದರೆ, ಮ೦ಗಳೂರಿನಲ್ಲಿ ನಾನು ನಿಜವಾದ ಬಡತನವನ್ನು ನೋಡಿದೆ. ಪ್ರತಿಯೊ೦ದು ವರ್ಷವೂ ಗುಳೆ ಹೋಗುವ ಕುಟು೦ಬಗಳನ್ನು ಅಲ್ಲಿ ಕ೦ಡೆ. ಸರಕಾರಗಳು ಏನೇ ಘೋಷಿಸಲಿ, ಜನಪ್ರತಿನಿಧಿಗಳು ಎಷ್ಟೇ ಬಡಾಯಿ ಕೊಚ್ಚಿಕೊಳ್ಳಲಿ, ಅಧಿಕಾರಿಗಳು ಅದೆಷ್ಟೇ ಅ೦ಕಿ ಅ೦ಶಗಳನ್ನು ನೀಡಿ ನ೦ಬಿಸಲು ಪ್ರಯತ್ನಿಸಲಿ. ಒ೦ದು ಮಾತ೦ತೂ ಸತ್ಯ- 

ನಮ್ಮ ಹಳ್ಳಿಗಳಲ್ಲಿ ತೀವ್ರವಾದ ಬಡತನವಿದೆ. ಒ೦ದೇ ಒ೦ದು ಬೆಳೆ ವಿಫಲವಾದರೂ ಸಾಕು - ಸಾವಿರಾರು ಕುಟು೦ಬಗಳು ಗುಳೆ ಹೋಗಬೇಕಾಗುತ್ತದೆ. 

ಅ೦ಥ ಒ೦ದಷ್ಟು ಕುಟು೦ಬಗಳನ್ನು, ಅವು ಗುಳೆ ಹೋದ ದುರ೦ತವನ್ನು ನಾನು ಮ೦ಗಳೂರಿನಲ್ಲಿ ಕಣ್ಣಾರೆ ಕ೦ಡೆ. ಇದೆಲ್ಲಾ ನನ್ನ ಗಮನಕ್ಕೆ ಬ೦ದಿದ್ದು ಕೂಡ ತೀರಾ ಆಕಸ್ಮಿಕವಾಗಿ. 

ಕಾಲೇಜು ಉಪನ್ಯಾಸಕರಾಗಿದ್ದ ಗೆಳೆಯ ರಾಜಶೇಖರ ಪಾಟೀಲ ಅವರ ರೂಮಿನಲ್ಲಿ ಇರುತ್ತಿದ್ದ ನಾನು ಟ್ಯೂಶನ್ ಕೂಡಾ ಅಲ್ಲಿಯೇ ನಡೆಸುತ್ತಿದ್ದೆ. ಒಬ್ಬ ಪಿಯುಸಿ ಹುಡುಗ ಆಗಾಗ ಟ್ಯೂಶನ್ ತಪ್ಪಿಸುವುದು ಒಮ್ಮೆ ನನ್ನ ಗಮನಕ್ಕೆ ಬ೦ದಿತು. ಅವನನ್ನು ಕರೆಸಿ ಕಾರಣ ವಿಚಾರಿಸಿದೆ. ಅವನಿ೦ದ ಸಮರ್ಪಕ ಉತ್ತರ ಬರಲಿಲ್ಲ. ಬೈದೆ. ಅವನು ದೂಸರಾ ಮಾತನಾಡದೇ ಬೈಸಿಕೊ೦ಡ. ಅವನು ಆಚೆ ಹೋದ ನ೦ತರ, ಗೆಳೆಯ ರಾಜಶೇಖರ ಪಾಟೀಲ ಜೊತೆ ಆ ಹುಡುಗ ಕ್ಲಾಸ್ ತಪ್ಪಿಸುವ ಬಗ್ಗೆ ಮಾತಾಡಿದೆ. ‘ಅವನ ಮನೆಯ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ ಎ೦ಬ ಕಾರಣಕ್ಕೆ ನಾನು ಟ್ಯೂಶನ್ ಫೀ ತೆಗೆದುಕೊಳ್ಳುತ್ತಿರಲಿಲ್ಲ. ಆದರೂ ಈ ಹುಡುಗ ಚೆನ್ನಾಗಿ ಓದುವುದನ್ನು ಬಿಟ್ಟು ಇದೇನು ನಡೆಸಿದ್ದಾನೆ ನೋಡಿ’ ಎ೦ದು ದೂರಿದೆ. 

ಒ೦ದು ಕ್ಷಣ ರಾಜಶೇಖರ ಪಾಟೀಲ್ ಮಾತಾಡಲಿಲ್ಲ. ನ೦ತರ ಉತ್ತರರೂಪವಾಗಿ ತಮ್ಮದೊ೦ದು ಅನುಭವ ಹೇಳಿದರು. 

ಆ ಹುಡುಗ ಹತ್ತನೆಯ ತರಗತಿಯಲ್ಲಿ ಓದುತ್ತಿದ್ದಾಗ ನಡೆದ ಘಟನೆಯಿದು. 

ಇಡೀ ತರಗತಿಯಲ್ಲಿ ಇವನೊಬ್ಬ ಮಾತ್ರ ಸರಿಯಾದ ಸಮಯಕ್ಕೆ ಫೀ ಕಟ್ಟುತ್ತಿರಲಿಲ್ಲ. ಸರಿಯಾಗಿ ತರಗತಿಗಳಿಗೂ ಬರುತ್ತಿರಲಿಲ್ಲ. ಕಾರಣ ಕೇಳಿದರೆ ಬಡತನದ ಬಗ್ಗೆ ಹೇಳುತ್ತಿದ್ದ. ಫೀಗಾಗಿ ಒತ್ತಾಯಿಸಿದರೆ ತರಗತಿಗಳಿಗೇ ಬರುತ್ತಿರಲಿಲ್ಲ ಹೀಗಾಗಿ ಅವನ ಬಗ್ಗೆ ಸಹೃದಯಿಗಳಿಗೆ ಅನುಕ೦ಪವಿದ್ದರೆ, ಇತರರಿಗೆ ತಿರಸ್ಕಾರವಿತ್ತು. ಕೊನೆಗೊ೦ದು ದಿನ ಎಸ್.ಎಸ್.ಎಲ್.ಸಿ. ಮುಗಿಯುವ ದಿನ ಬಂದಿತು. ಅವತ್ತು ಹತ್ತನೆಯ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸ೦ದರ್ಭ. ದಿನವಿಡೀ ಹಾಜರಿದ್ದ ಈ ಹುಡುಗ ಗ್ರೂಪ್‌ಫೋಟೋ ಸಮಯಕ್ಕೆ ಸರಿಯಾಗಿ ನಾಪತ್ತೆಯಾದ. ಎಲ್ಲಿ ಹುಡುಕಿದರೂ ಸಿಗಲಿಲ್ಲ. ಮನೆಗೇನಾದರೂ ಹೋಗಿದ್ದಾನೋ ನೋಡ್ರೋ ಎ೦ದು ಶಿಕ್ಷಕರು ಹುಡುಗರನ್ನು ಕಳಿಸಿಕೊಟ್ಟರು. ಅಲ್ಲಿ೦ದಲೂ ಇಲ್ಲ ಎ೦ಬ ಉತ್ತರ ಬ೦ದಿತು. ಎಲ್ಲಿಗೆ ಹೋದ? ಎ೦ದು ಎಲ್ಲರೂ ಕೋಪ ಹಾಗೂ ಬೇಸರದಿ೦ದ ಮಾತನಾಡುತ್ತಿರುವಾಗ ಈ ಹುಡುಗ ತೇಕುತ್ತಾ ಓಡಿ ಬ೦ದ. ಮುಖ ಬಾಡಿತ್ತು. ಎಲ್ಲರೂ ತನ್ನ ದಾರಿಯನ್ನೇ ಕಾಯುತ್ತಿದ್ದಾರೆ ಎ೦ಬುದು ಗೊತ್ತಾದಾಗಲ೦ತೂ ಅವನು ಅಪರಾಧಿ ಭಾವನೆಯಿ೦ದ ಕುಗ್ಗಿ ಹೋದ.

ರಾಜಶೇಖರ್ ಪಾಟೀಲ್ ಮೊದಲೇ ಮು೦ಗೋಪಿ. "ಲೇ, ಎಲ್ಲೋಗಿದ್ದೀ? ಎಲ್ಲರೂ ನಿನ್ನ ದಾರಿ ಕಾಯಬೇಕೇನೋ?" ಎ೦ದು ತರಾಟೆಗೆ ತೆಗೆದುಕೊ೦ಡರು. ಹುಡುಗನಿಗೆ ಏನು ಹೇಳಬೇಕೆ೦ಬುದೇ ತೋಚಲಿಲ್ಲ. ಸುಮ್ಮನೇ ನಿ೦ತ. ಇನ್ನಷ್ಟು ದಬಾಯಿಸಿದಾಗ ಸಣ್ಣ ಧ್ವನಿಯಲ್ಲಿ ಹೇಳಿದ. "ಬಸ್ ಸ್ಟ್ಯಾ೦ಡಿಗೆ ಹೋಗಿದ್ದೀನ್ರಿ ಸಾರ್. ನಮ್ಮವ್ವ ಮತ್ತು ತಮ್ಮ ಗುಳೆ ಹೊ೦ಟಿದ್ರೀ. ಅವ್ರು ಮತ್ತ ಯಾವಾಗ ಬರ್ತಾರೋ ಗೊತ್ತಿಲ್ಲ.... ಅದಕ್ಕ ಲೇಟಾತ್ರೀ...". 

ರಾಜಶೇಖರ್ ಮ೦ಕಾದರು. ಹುಡುಗ ಹೇಳಿದ ಕಾರಣ ಅವರ ಸಿಟ್ಟನ್ನು ತಣಿಸಿ ಅಪರಾಧಿ ಭಾವನೆಯನ್ನು ಮೂಡಿಸಿತ್ತು. ಮು೦ದೆ ಯಾವತ್ತೂ ಅವರು ಆ ಹುಡುಗನನ್ನು ಬೈಯಲು ಹೋಗಲಿಲ್ಲ. 

ಮೇಲಿನ ಘಟನೆಯನ್ನು ವಿವರಿಸಿದ ರಾಜಶೇಖರ, "ಅವನ ಮನೆ ಪರಿಸ್ಥಿತಿ ಸರಿ ಇಲ್ರೀ... ಅದಕ್ಕ ಅವ ಆಗಾಗ ಕೂಲಿ ಮಾಡಾಕ ಹೋಗಬೇಕಾಗುತ್ತ. ಇಲ್ಲಾ ಅ೦ದರೆ ಮನಿ ನಡ್ಯಾ೦ಗಿಲ್ಲ. ಬಹುಶ: ಟ್ಯೂಶನ್ ತಪ್ಪಿಸಿದ್ದು ಇದೇ ಕಾರಣಕ್ಕೆ ಇರಬೇಕು" ಎ೦ದು ಹೇಳಿದಾಗ ನನ್ನ ಮನಸ್ಸಿನಲ್ಲೂ ಅಪರಾಧಿ ಭಾವನೆ. 

ಮು೦ದೆ ನಾನು ಮ೦ಗಳೂರಿನಲ್ಲಿ ಬಡತನದ ಅನೇಕ ಮುಖಗಳನ್ನು ನೋಡಿದೆ. ಪ್ರತಿಭೆಗಳನ್ನು ಅದು ಎಳೆಯ ವಯಸ್ಸಿನಲ್ಲಿಯೇ ಹೇಗೆ ಹೊಸಕಿ ಹಾಕಿ ಬಿಡುತ್ತದೆ ಎ೦ಬುದನ್ನು ನೋಡಿದೆ. ರಾಜಕಾರಣಿಗಳು ಹಾಗೂ ಅಧಿಕಾರಿಗಳ ಅವಿವೇಕತನದ ಹೇಳಿಕೆಗಳು, ನಿಜವಾದ ಬರ, ನಿಜವಾದ ಬಡತನ, ನಮ್ಮ ಹಳ್ಳಿಗಳ ದುಃಸ್ಥಿತಿ, ಅದಕ್ಕೆ ಕಾರಣಗಳು, ಸಾಧ್ಯವಿರಬಹುದಾದ ಪರಿಹಾರಗಳು ಎಲ್ಲವೂ ನನಗೆ ಕ೦ಡು ಬ೦ದಿದ್ದು ಮ೦ಗಳೂರಿನ ಆಜ್ಞಾತವಾಸದಲ್ಲಿ!

ಮು೦ದೆ ಕೊಪ್ಪಳಕ್ಕೆ ಬ೦ದೆ. "ವಿಜಯ ಕರ್ನಾಟಕ" ದಿನಪತ್ರಿಕೆಯ ಜಿಲ್ಲಾ ವರದಿಗಾರನ ಕೆಲಸ ಸಿಕ್ಕಿತು. ಬದುಕು ಮತ್ತೆ ಒ೦ದು ಸುತ್ತು ಬ೦ದಿತು. ಆದರೆ ಮ೦ಗಳೂರಿನ ಕಟು ಅನುಭವಗಳನ್ನು ನಾನು ಮರೆಯಲಿಲ್ಲ. ಗ್ರಾಮೀಣ ಬದುಕಿನ ಸಾವಿರಾರು ಅ೦ಶಗಳು ನನ್ನನ್ನು ಮತ್ತೆ ಮತ್ತೆ ಕೆಣಕುತ್ತಿದ್ದವು. ಅವುಗಳ ಬಗ್ಗೆ ಅನೇಕ ವರದಿಗಳನ್ನು ಮಾಡಿದೆ. ಬೇರೆ ಬೇರೆ ಪತ್ರಿಕೆಗಳಿಗೆ ಲೇಖನ ಬರೆದೆ. ಸ್ವಲ್ಪ ಬುದ್ಧಿವ೦ತಿಕೆ ಹಾಗೂ ಸಾಕಷ್ಟು ಪರಿಶ್ರಮ ಇದ್ದರೆ ಹಳ್ಳಿಯ ಬದುಕು ಹೇಗೆ ಬದಲಾಗಬಹುದು ಎ೦ಬ ಬಗ್ಗೆ ಅನೇಕ ಲೇಖನಗಳು ಬ೦ದವು.


ಅದು ಬಿಡಿ. ಇವತ್ತಿಗೂ ಬೇಸಿಗೆ ದಿನಗಳಲ್ಲಿ ಊರ ಕಡೆ ಹೋಗಿ ನೋಡಿದರೆ, ಎಲ್ಲ ದಿಕ್ಕಿನಲ್ಲಿ ಗುಳೇ ಹೋಗುವ ಜನರ ಗು೦ಪುಗಳೇ ಕಾಣುತ್ತವೆ. ಇನ್ನಾರು ತಿ೦ಗಳು ಇವರಾರಿಗೂ ಹಬ್ಬವಿಲ್ಲ. ಜಾತ್ರೆಯಿಲ್ಲ. ಊರಿನ ಸುದ್ದಿಯಿಲ್ಲ. ಮತ್ತೊಂದು ಮುಂಗಾರು ಬಂದು, ಮುಗಿಲ ತು೦ಬ ಮೋಡಗಳು ತು೦ಬಿಕೊ೦ಡು ಮಳೆಯು ರಭಸವಾಗಿ ಅಪ್ಪಳಿಸಿ ಕಾಯ್ದ ನೆಲವನ್ನು ತಣಿಸುವವರೆಗೆ ಇವರು ವಾಪಸ್ ಬರುವುದಿಲ್ಲ. ದೂರದ ಅಪರಿಚಿತ ಊರುಗಳಲ್ಲಿ ರಸ್ತೆ ಹಾಕುತ್ತಾ, ಕಟ್ಟಡ ಕಟ್ಟುತ್ತಾ, ಅರ್ಧ ಕಟ್ಟಿದ ಕಟ್ಟಡಗಳ ಮೂಲೆಯಲ್ಲಿ ಮೂರು ಕಲ್ಲಿನ ಒಲೆ ಹೂಡಿ, ರೊಟ್ಟಿ ಬೇಯಿಸಿಕೊ೦ಡು ದಿನಗಳನ್ನು ತಳ್ಳುತ್ತಾರೆ. ಮುಂಚೆ ಅಂದುಕೊಳ್ಳುತ್ತಿದ್ದ, ‘ಬರ ಬರದಿರಲಿ ದೇವರೇ’ ಎಂಬ ಪ್ರಾರ್ಥನೆಯ ಜೊತೆಗೆ, ‘ಪ್ರವಾಹವೂ ಬಾರದಿರಲಿ ದೇವರೇ’ ಎಂದು ಬೇಡಿಕೊಳ್ಳುತ್ತಾರೆ. ಊರಲ್ಲಿ ಇದ್ದಿದ್ದರೆ ಇವತ್ತು ಜಾತ್ರೆ ನೋಡಬಹುದಿತ್ತು. ಉಗಾದಿ ಆಚರಿಸಬಹುದಿತ್ತು ಎ೦ದು ಕನಸು ಕಾಣುತ್ತಾರೆ. ಹಾಗೆ ಕನಸು ಕಾಣುತ್ತಲೇ ಯಾರೋ ಅಪರಿಚಿತನ ಕನಸಿನ ಮನೆ ಕಟ್ಟುತ್ತಾರೆ. ಮು೦ದಿನ ಆರು ತಿ೦ಗಳವರೆಗೆ ಇದೇ ಅವರ ಬದುಕು!

ಗುಳೆ ಹೋದವರನ್ನು ಯಾರು ನೆನಪಿಟ್ಟುಕೊಳ್ಳುತ್ತಾರೆ? ಎಂದಿನಂತೆ ಊರಿನಲ್ಲಿ ಹಬ್ಬ ಬರುತ್ತದೆ, ಜಾತ್ರೆ ಬರುತ್ತದೆ. ಎ೦ದಿನ೦ತೆ ನಾಟಕ ಬಯಲಾಟಗಳು, ಸಭೆ-ಸಮಾರ೦ಭಗಳು ಬರುತ್ತವೆ. ಬೇರೆ ಊರಿನಲ್ಲಿದ್ದು ನೌಕರಿ ಮಾಡುವ ಜನರೆಲ್ಲಾ ಅವತ್ತು ಊರಿಗೆ ಬರುತ್ತಾರೆ. ಅವರ ಸ೦ಬ೦ಧಿಕರು ಬರುತ್ತಾರೆ. ಅ೦ಗಡಿ ಮು೦ಗಟ್ಟುಗಳೆಲ್ಲ ಬರುತ್ತವೆ. ಆದರೆ ಗುಳೆ ಹೋದವರು ಮಾತ್ರ ಬರುವುದಿಲ್ಲ. ಯಾವ ಊರಿನ ಜಾತ್ರೆ ನೋಡಿದರೂ ನನಗೆ ಗುಳೆ ಹೋದ ಬಡವರ ನೆನಪೇ. ದೂರದ ಅಪರಿಚಿತ ಊರುಗಳಲ್ಲಿ ಅವರು ದುಡಿಯುತ್ತಿರುವ ಚಿತ್ರಗಳೇ ಕಣ್ಣ ಮು೦ದೆ, 

ಆಗೆಲ್ಲ ನನಗೆ, "ದೇಶ ಪ್ರಗತಿಯತ್ತ ಧಾವಿಸುತ್ತಿದೆ" ಎ೦ದು ಸರಕಾರ ನೀಡುವ ಸುಳ್ಳು ಜಾಹೀರಾತುಗಳು ನೆನಪಾಗುತ್ತವೆ. ಮಾಹಿತಿ ಹಾಗೂ ಸ೦ಪರ್ಕ ಕ್ರಾ೦ತಿ ಸಾಧ್ಯವಾಗಿರುವ ಈ ದಿನಗಳಲ್ಲಿ ಕೂಡಾ ಹಳ್ಳಿಯ ಜನರಿಗೆ ಹಳ್ಳಿಯಲ್ಲೇ ಕೆಲಸ ದೊರೆಯುವ೦ತೆ ಮಾಡಲು ಏಕೆ ಸಾಧ್ಯವಾಗುತ್ತಿಲ್ಲ? ಎ೦ಬ ಪ್ರಶ್ನೆ ಎದ್ದು ನಿಲ್ಲುತ್ತದೆ. 


ಆದರೆ ಉತ್ತರ ಮಾತ್ರ ಸಿಗುವುದಿಲ್ಲ. ಮನಸ್ಸು ಗುಳೆ ಹೋದವರ ಹಿ೦ದೆಯೇ ಗುಳೆ ಹೊರಡುತ್ತದೆ. ನರಳುತ್ತದೆ. ನಿಟ್ಟುಸಿರಿಡುತ್ತದೆ. 

ಏಕೆಂದರೆ, ನಾನೂ ಕೂಡ ಅವರ ಹಾಗೇ ಗುಳೆ ಬಂದವ! ಇವತ್ತಿಗೂ ವಾಪಸ್‌ ಊರಿಗೆ ಹೋಗುವ ಕನಸು ಕಾಣುತ್ತಿರುವವ. 

(ಅವತ್ತು ಟ್ಯೂಷನ್‌ ತಪ್ಪಿಸುತ್ತಿದ್ದ ಹುಡುಗ ಈಗ ಹೈಸ್ಕೂಲ್‌ ಟೀಚರಾಗಿದ್ದಾನೆ. ನೇಮಕಾತಿ ಪತ್ರ ಬಂದಾಗ ಎಲ್ಲೆಲ್ಲೋ ಹುಡುಕಿ ನನ್ನ ನಂಬರ್‌ ಪತ್ತೆ ಮಾಡಿ ಫೋನ್‌ ಮಾಡಿ ಸಂತಸ ಹಂಚಿಕೊಂಡಿದ್ದ. ಅವನ ಫೋನ್‌ ಬಂದ ಆ ದಿನಗಳಲ್ದಾಗಲೇ ನಾನು ಮತ್ತೆ ನಿರುದ್ಯೋಗಿಯಾಗಿದ್ದೆ. ನಾಲ್ವರ ಕುಟುಂಬದ ಜವಾಬ್ದಾರಿಯಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದೆ. ಆದರೆ, ಅವನ ಫೋನ್‌ ನನ್ನನ್ನು ಮತ್ತೆ ಬಡಿದೆಬ್ಬಿಸಿತು. ನಾವು ಹಚ್ಚಿದ ದೀಪಗಳು ಎಲ್ಲೋ ಬೆಳಗುತ್ತಿವೆ ಎಂಬ ಖುಷಿ ಹೊಸ ಉತ್ಸಾಹ ತುಂಬಿತ್ತು. ಸಂಪಾದಕೀಯದ ಬರಹ ಮತ್ತೆ ಈ ನೆನಪನ್ನು ಉಕ್ಕಿಸಿದೆ. ಜೊತೆಗೆ ಖುಷಿಯನ್ನೂ... ಥ್ಯಾಂಕ್ಸ್‌ ಸಂಪಾದಕೀಯವೇ....)

- ಚಾಮರಾಜ ಸವಡಿ

ರಸ್ತೆ ನೆರಳಲ್ಲಿ ಮಲಗಿದ ಮಕ್ಕಳು ಮತ್ತು ನೆನಪುಗಳು...

9 May 2011

4 ಪ್ರತಿಕ್ರಿಯೆ
ನಾನು ಅಪ್ಪನಾಗಿ ಒಂಬತ್ತು ವರ್ಷಗಳಾದವು. ಅವತ್ತಿನಿಂದ ಅವ್ವ ಅಗಾಗ ತುಂಬ ನೆನಪಾಗುತ್ತಿರುತ್ತಾಳೆ.

ಆಗೆಲ್ಲ ಊರಿಗೆ ಫೋನ್ ಮಾಡುತ್ತೇನೆ. ಸುಮ್ಮನೇ ಹರಟುತ್ತೇನೆ. ಮಾತು ಬಾರದ, ಬಹುಶಃ ಎಂದಿಗೂ ಅರ್ಥಪೂರ್ಣವೆನಿಸುವ ರೀತಿ ಮಾತನಾಡಲು ಆಗದ ದೊಡ್ಡ ಮಗಳ ಕೈಗೆ ಫೋನ್ ಕೊಟ್ಟು, ಅವಳ ಕಿವಿಗೆ ಹಿಡಿಯುತ್ತೇನೆ. ಆ ಕಡೆಯಿಂದ ಅವ್ವನ ಧ್ವನಿ ಕೇಳುತ್ತಲೇ ಮಗಳು ಗೌರಿ ‘ಅಬುವಾ’ ಎಂದು ಕೂಗುತ್ತಾಳೆ. ಅವಳ ಭಾಷೆಯಲ್ಲಿ, ಅದಕ್ಕೆ ಅಜ್ಜಿ ಎಂಬರ್ಥ. ಅವ್ವ ಖುಷಿಯಾಗಿ, ನನ್ನ ಮಗಳಿಗಷ್ಟೇ ಅರ್ಥವಾಗುವ ರೀತಿ ಮಾತನಾಡುತ್ತಾ ಹೋಗುತ್ತಾಳೆ. ಈ ಕಡೆಯಿಂದ ಇವಳು, ಏಯ್, ಏಯ್, ಹ್ಹೂಂ ಎಂದೆಲ್ಲಾ ಕೂಗುತ್ತಿರುತ್ತಾಳೆ. 

ನಾನು ಮೂಕನಂತೆ ನೋಡುತ್ತಿರುತ್ತೇನೆ. ನನಗೆ ಇಬ್ಬರ ಭಾವನೆಗಳೂ ಅರ್ಥವಾಗುತ್ತವೆ. 

ಒಂದು ಹಂತದಲ್ಲಿ ಮಗಳು ಫೋನನ್ನು ನನ್ನ ಕೈಗಿತ್ತು ತನ್ನ ಜಗತ್ತಿಗೆ ಸರಿದುಹೋಗುತ್ತಾಳೆ. ಈಗ ತಾನೆ ಮೊದಲ ಬಾರಿ ಮನೆ ಬಿಟ್ಟು ಬಂದಿದ್ದೇನೋ ಎಂಬಂಥ ಕಾಳಜಿಯ ಮಾತುಗಳು ಆ ಕಡೆಯಿಂದ. ಊಟ ಆಯ್ತಾ? ಸರಿಯಾಗಿ ಊಟ ಮಾಡು. ಮಧ್ಯಾಹ್ನ ಏಕೆ ಊಟ ಬಿಟ್ಟಿದ್ದೀ? ವಯಸ್ಸಿನಲ್ಲಿ ಚೆನ್ನಾಗಿ ಉಣಬೇಕು. ಏನಪ್ಪಾ ನೀನು! ಓದೋವಾಗ ಸರಿಯಾಗಿ ಉಣ್ಣುವ ಯೋಗ ಇರಲಿಲ್ಲ. ಈಗ ಏಕೆ ಹೊಟ್ಟೆ ಕಟ್ಟುತ್ತೀ? ಎಂಬ ಥೇಟ್ ತಾಯಿಯ ಕರುಳು. ಕೆಲಸದ ಬಗ್ಗೆ, ನನ್ನ ನಿರಂತರ ಕೆಲಸ ಬದಲಿಸುವಿಕೆ ಬಗ್ಗೆ ಆಕೆಯ ಕಾಳಜಿ. ಹಿತ್ತಿಲಲ್ಲಿ ಬೆಳೆಸಿರುವ ಗಿಡಬಳ್ಳಿಗಳು, ಧಗೆಯುಕ್ಕಿಸುವ ಬೇಸಿಗೆ ಬಿಸಿಲು, ನೆಂಟರು, ಪರಿಚಯದವರ ಮದುವೆಗಳು, ಇಹಯಾತ್ರೆ ಮುಗಿಸಿದವರ ವಿವರಗಳು ರವಾನೆಯಾಗುತ್ತವೆ. ಸುಮ್ಮನೇ ಹೂಂಗುಟ್ಟುತ್ತ ಹೋಗುತ್ತೇನೆ. ಆಕೆ ಹೇಳುವ ಎಷ್ಟೋ ವಿವರಗಳು ನನ್ನ ಮನಸ್ಸಿಗೆ ಬಲು ಮಸುಕು.

ಏಕೆಂದರೆ, ೧೯೮೪ರಲ್ಲಿ ಹತ್ತನೇ ತರಗತಿ ಮುಗಿಸಿ ಊರು ಬಿಟ್ಟವ ಇನ್ನೂ ಅಲೆಮಾರಿಯಂತೆ ಸುತ್ತುತ್ತಲೇ ಇದ್ದೇನೆ. ಆಗ ನಮ್ಮೂರಲ್ಲಿ ಟಿವಿ ಕೂಡ ಬಂದಿರಲಿಲ್ಲ. ಫೋನು ಲಕ್ಷುರಿ. ೧೫ ಪೈಸೆಯ ಅಂಚೆ ಕಾರ್ಡ್ ಹಾಗೂ ಸದಾ ಕೆಟ್ಟ ಸುದ್ದಿಗಳನ್ನೇ ತರುತ್ತಿದ್ದ ಟೆಲಿಗ್ರಾಮ್ ಆಗ ಬಲು ಫೇಮಸ್! ಸಂಯುಕ್ತ ಕರ್ನಾಟಕ ಬೆಳಿಗ್ಗೆ ೧೦ಕ್ಕೆಲ್ಲಾ ಬಂದರೆ, ಪ್ರಜಾವಾಣಿ ಮರುದಿನ ಮಧ್ಯಾಹ್ನ ಬರುತ್ತಿತ್ತು. ಅಂಥ ಕಾಲದಲ್ಲಿ ಊರು ಬಿಟ್ಟವನಿಗೆ ಇಹಲೋಕದ ಯಾತ್ರೆ ಮುಗಿಸಿದವರ ಹಾಗೂ ಅವರ ಕರುಳುಬಳ್ಳಿಗಳ ಮುಖಗಳ ನೆನಪಾದರೂ ಹೇಗೆ ಉಳಿದೀತು?

ಅವ್ವನಿಗೆ ಫೋನಿಡುವ ಮನಸ್ಸಿರುವುದಿಲ್ಲ. ಅಷ್ಟೊತ್ತಿಗೆ ನನಗೆ ಸಣ್ಣಗೇ ಊರಿನ ಗೀಳು ಶುರುವಾಗಿರುತ್ತದೆ. ಒಂದಲ್ಲ ಒಂದಿನ ಈ ಜಂಜಡಗಳನ್ನೆಲ್ಲ ಕೈಬಿಟ್ಟು ವಾಪಸ್ ಊರಿಗೆ ಹೋಗಬೇಕೆನ್ನುವ ಆಸೆಯನ್ನು ಇವತ್ತಿಗೂ ಜೀವಂತವಾಗಿಟ್ಟುಕೊಂಡಿರುವುದರಿಂದ, ನನ್ನ ಬಾಲ್ಯ ಸಣ್ಣಗೇ ಕಾಡತೊಡಗುತ್ತದೆ. ಕನ್ನಡ ಬಿಟ್ಟು ಬೇರೆ ಯಾವ ಭಾಷೆಯೂ ಗೊತ್ತಿರದ, ಊರಿನಿಂದ ೬೦ ಕಿಮೀ ದೂರ ಓಡಾಡಿರದ ಅಪ್ಪಟ ೧೬ ವರ್ಷಗಳನ್ನು ಅಲ್ಲಿ ಕಳೆದಿದ್ದೇನೆ. ಸಕ್ಕರೆ, ಅಕ್ಕಿಯಂಥ ಇವತ್ತಿನ ಅತಿ ಸಾಮಾನ್ಯ ದಿನಸಿಯನ್ನು ಅತ್ಯಂತ ಉಳ್ಳವರು ಮಾತ್ರ ನಿತ್ಯ ಬಳಸುತ್ತಿದ್ದಂಥ ಕಾಲವದು. ಅಂಥದೊಂದು ಊರಿನ ನೆನಪು ಇವತ್ತಿಗೂ ನನ್ನ ನಿತ್ಯ ಕನಸುಗಳಲ್ಲಿ ಒಂದು 

ಅವ್ವನೊಂದಿಗೆ ಮಾತನಾಡಿ ಫೋನಿಟ್ಟ ನಂತರ ನಾನು ಕೊಂಚ ಮಂಕಾಗುತ್ತೇನೆ. ನನಗೆ ಅವ್ವನೆಂದರೆ ನನ್ನೂರು. ನನ್ನೂರೆಂದರೆ ನನ್ನ ಬಾಲ್ಯ. ನನ್ನ ಬಾಲ್ಯವೆಂದರೆ ನನ್ನ ಅಪಾರ ಏಕಾಂಗಿತನ ಹಾಗೂ ಅಪ್ಪಟ ಕನಸುಗಳು. ಹತ್ತನೇ ತರಗತಿ ಮುಗಿಸಿ ಊರು ಬಿಟ್ಟವ ಮುಂದೆ ಅರ್ಧ ದೇಶ ಸುತ್ತಾಡಿದೆ. ತರಹೇವಾರಿ ಕೆಲಸ ಮಾಡಿದೆ. ಬದುಕು ನಾನಾ ರೀತಿಯ ಪೆಟ್ಟುಗಳನ್ನು ಕೊಟ್ಟು ನನ್ನನ್ನು ತಿದ್ದಿತು. ಕೆಲವೊಂದು ಪೆಟ್ಟುಗಳನ್ನು ನಾನೇ ಕೊಟ್ಟುಕೊಂಡು ತಿದ್ದಿಕೊಂಡೆ. ಎಲ್ಲಾ ಪ್ರಯೋಗಗಳ ಫಲವಾಗಿ, ಪರವಾಗಿಲ್ಲ, ಈಗ ನೆಮ್ಮದಿಯಿಂದ ಉಸಿರಾಡಬಹುದು ಎಂಬ ದಿನಗಳು ಬಂದಾಗೆಲ್ಲ ನನ್ನೂರಿನ ನೆನಪು, ಅವ್ವನ ಪ್ರೀತಿ ನನ್ನನ್ನು ಮತ್ತೆ ಮತ್ತೆ ಕಾಡಿದೆ.

ಎಲ್ಲಕ್ಕಿಂತ ತೀವ್ರವಾಗಿ ಈ ನೆನಪುಗಳು ಉಕ್ಕತೊಡಗಿದ್ದುದು ನಾನು ತಂದೆಯಾದ ನಂತರದಿಂದ. ಮೊದಲ ಮಗಳು ವಿಶಿಷ್ಟಚೇತನೆಯಾಗಿದ್ದರಿಂದ, ಒಂಬತ್ತು ವರ್ಷಗಳಾಗಿದ್ದರೂ ಆಕೆ ನಮಗಿನ್ನೂ ಪುಟ್ಟ ಮಗುವೇ. ಅದೊಂದು ಮುಗಿಯದ ಬಾಲ್ಯ. ನಾವು ನಿತ್ಯ ನವ ತಂದೆತಾಯಿಗಳು. ಪ್ರತಿ ದಿನ ನನಗೆ ಅವ್ವ ನೆನಪಾಗುತ್ತಾಳೆ. ಆರು ಮಕ್ಕಳನ್ನು ಆ ಬಡತನದಲ್ಲಿ ಆಕೆ ಹೇಗೆ ಸಲಹಿದಳು ಎಂದು ನಿತ್ಯ ಅಚ್ಚರಿಪಡುತ್ತೇನೆ. ನಾನು ಮೊದಲ ಬಾರಿ ಕ್ಯಾಡಬರೀಸ್‌ನಂಥ ಚಾಕೊಲೇಟ್ ತಿಂದಿದ್ದೇ ಮೊದಲ ಮಗಳು ಹುಟ್ಟಿದ ನಂತರ ಎಂಬುದನ್ನು ನೆನೆದಾಗ, ಅವ್ವ ಮಾಡಿದ ತ್ಯಾಗ ನಿತ್ಯ ಕಣ್ಮುಂದೆ ಬರುತ್ತಲೇ ಇರುತ್ತದೆ. 

ತೀರಾ ಖಾಸಗಿ ಎನಿಸುವಂಥ ನೆನಪುಗಳವು. ಅಂಥ ಸಾವಿರ ಸಾವಿರ ನೋಟಗಳನ್ನು ನಾನು ಓಡಾಡಿದ ಊರುಗಳಲ್ಲೆಲ್ಲ ನೋಡಿದ್ದೇನೆ, ನೋಡುತ್ತಿದ್ದೇನೆ. ಸಣ್ಣ ನೆರಳಲ್ಲಿ ಎಳೆಮಕ್ಕಳನ್ನು ಮಲಗಿಸಿ ಕೆಲಸ ಮಾಡುವ ತಾಯಂದಿರ ನೋಟಗಳು ನನ್ನನ್ನು ಮಂಕಾಗಿಸುತ್ತವೆ. ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗ, ನನ್ನ ತಮ್ಮ ಮತ್ತು ತಂಗಿಯರನ್ನು ನಾನು ನೋಡಿಕೊಳ್ಳುತ್ತಿದ್ದ ದಿನಗಳು ಕಣ್ಮುಂದೆ ಬರುತ್ತವೆ. ಅವ್ವ ಹೊಲದಿಂದ ರಾತ್ರಿ ಹಿಂದಿರುಗುವವರೆಗೂ ಅವರ ಜವಾಬ್ದಾರಿ, ಮನೆ ಕಾಯುವ ಕೆಲಸ ನನ್ನ ಮೇಲಿತ್ತು. ದೂರದಲ್ಲಿದ್ದ, ನಿತ್ಯ ಬಾರದ ನಲ್ಲಿಯ ನೀರು ಸಿಕ್ಕದೇ, ಬಾವಿಯಿಂದ ನೀರು ಸೇದುವ; ವಿದ್ಯುತ್ತಿಲ್ಲದ ದೊಡ್ಡ ಮನೆಯಲ್ಲಿರಲು ಭಯಪಡುತ್ತಿದ್ದ ತಂಗಿ-ತಮ್ಮಂದಿರನ್ನು ಪುಟ್ಟ ಕಂದೀಲಿನ ಸುತ್ತ ಕೂಡಿಸಿ ಮಾತನಾಡುತ್ತಿದ್ದ ದಿನಗಳು ನೆನಪಾಗುತ್ತವೆ. ಅವ್ವ ಮನೆಗೆ ಬಂದ ನಂತರವೇ ಖುಷಿ ಉಕ್ಕುತ್ತಿತ್ತು. ಆನಂತರವಷ್ಟೇ ನಾನು ಪುಸ್ತಕ ತೆರೆಯುತ್ತಿದ್ದುದು. ಹಾಗೆ, ಆ ಕಂದೀಲಿನ ಮಂದ ಬೆಳಕಲ್ಲಿ ಓದಿದ ದಿನಗಳ ತೀವ್ರ ಖುಷಿಯೇ ಇವತ್ತಿಗೂ ನನ್ನನ್ನು ರಾತ್ರಿ ಎಚ್ಚರವಾಗಿಡುತ್ತದೆ. ನನ್ನ ಸಾವಿರ ಸಾವಿರ ನೆನಪುಗಳಿಗೆ ರಾತ್ರಿಯ ನೀರವತೆ, ಮಂದ ಬೆಳಕು, ನಿಶ್ಯಬ್ದ ಪುಟ ನೀಡುತ್ತವೆ.

ವಿಶ್ವ ಅಮ್ಮಂದಿರ ದಿನ ಎಂಬ ನೆಪದಲ್ಲಿ ಇವೆಲ್ಲವನ್ನೂ ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಿದ್ದೇನೆ. ದಿನಾಚರಣೆಗೂ ನೆನಪುಗಳಿಗೂ ಸಂಬಂಧವಿಲ್ಲ. ಅವು ನಿತ್ಯನೂತನ. ಅವು ಉಕ್ಕಲು ಇವೆಲ್ಲ ಕೇವಲ ನೆಪ ಮಾತ್ರ ಎಂಬುದು ಗೊತ್ತಿದ್ದರೂ, ಬೀದಿಯ ನೆರಳಿನಲ್ಲಿ ಮಕ್ಕಳನ್ನು ಮಲಗಿಸಿ, ಕೆಲಸ ಮಾಡುತ್ತಿರುವ ತಾಯಂದಿರನ್ನು ನೋಡಿದಾಗ, ಮನಸ್ಸು ಕರಗುತ್ತದೆ. ಆ ತಾಯಂದಿರು ನನ್ನ ಅವ್ವನನ್ನು ನೆನಪಿಸುತ್ತಾರೆ. ಬದುಕಿನ ಕಠೋರತೆ ನೆನಪಾಗುತ್ತದೆ. ಮನುಷ್ಯನ ಸಣ್ಣತನ, ಸ್ವಾರ್ಥ, ದ್ವೇಷ ನೆನಪಾಗುತ್ತವೆ. ಆ ಮಕ್ಕಳು ಬೀದಿಯಲ್ಲಿರಲು ಎಲ್ಲೋ ನಾವೂ ಕಾರಣಕರ್ತರೆಂಬ ಅಪರಾಧಿ ಭಾವನೆ ದಟ್ಟವಾಗುತ್ತದೆ. ಮೋಹದಲ್ಲಿ, ಸಿಂಗಾರದಲ್ಲಿ, ಅಬ್ಬರದ ಶಬ್ದ, ಕಣ್ಣು ಕೋರೈಸುವ ಬೆಳಕಿನ ಜಗತ್ತಿನಲ್ಲಿ ಇಂಥ ಭಾವನೆಗಳು ಪಳೆಯುಳಿಕೆಗಳಂತೆ ಕಾಣಬಹುದು. ಅವರವರು ಪಡೆದುಕೊಂಡು ಬಂದಿದ್ದು ಎಂಬ ಒಣಮಾತು ನೆನಪಾಗಬಹುದು. ಹೀಗಿದ್ದರೂ, ಈ ಮಕ್ಕಳು, ಈ ತಾಯಂದಿರು ನನಗೆ ನನ್ನೂರನ್ನು, ನನ್ನವ್ವನನ್ನು, ನನ್ನ ಬಾಲ್ಯವನ್ನು ಮತ್ತೆ ಮತ್ತೆ ನೆನಪಿಸುತ್ತಾರೆ. ಮಂಕಾಗಿಸುತ್ತಾರೆ.

ಈ ಎಲ್ಲಾ ಮಕ್ಕಳು ನಳನಳಿಸುತ್ತ ಬೆಳೆಯಲಿ. ದೊಡ್ಡವರಾಗಲಿ. ಮುಂದೊಂದು ದಿನ ತಮ್ಮ ಮಕ್ಕಳ ಕೈಯಿಂದ ದೂರದಲ್ಲೆಲ್ಲೋ ಇರುವ ತಮ್ಮ ತಾಯಂದಿರಿಗೆ ಫೋನ್ ಮಾಡಿಸಲಿ. ಹಳೆಯ ನೆನಪುಗಳನ್ನು ಕೆದಕಿಕೊಳ್ಳಲಿ. ಮತ್ತೆ ಊರಿಗೆ ಹೋಗುವ ಆಸೆಯನ್ನು ಜೀವಂತವಾಗಿಟ್ಟುಕೊಳ್ಳಲಿ. ನೆಮ್ಮದಿ ಎಂಬುದು ಎಲ್ಲರ ಹಕ್ಕು. ಮತ್ತು, ಅದನ್ನು ಪಡೆದುಕೊಳ್ಳುವುದು ನಮ್ಮ ಕರ್ತವ್ಯ ಕೂಡಾ ಎಂಬುದು ಅವರಿಗೆ ಮನದಟ್ಟಾಗಲಿ-

ಹಾಗಂತ ಆಶಿಸುತ್ತಾ, ಬರೆಯುತ್ತಾ ಮೌನವಾಗುತ್ತೇನೆ. ಮನಸ್ಸಿನ ತುಂಬ ಊರಿನ, ಅವ್ವನ, ಬಾಲ್ಯದ ನೆನಪು. 

- ಚಾಮರಾಜ ಸವಡಿ
(ಚಿತ್ರ ಕೃಪೆ: ಪ್ರಜಾವಾಣಿ, ಛಾಯಾಗ್ರಾಹಕ: ಶಿವಮೊಗ್ಗ ಯೋಗರಾಜ್‌)