ಮತ್ತದೇ ಕನಸು. ಮತ್ತದೇ ಕನವರಿಕೆ

1 Nov 2015

ಸುದೀರ್ಘ ಮೌನದ ನಂತರದ ಮಾತು ನಿಜಕ್ಕೂ ಕಷ್ಟ.

ಹಾಗಂತ ಮಾತಿರುವುದಿಲ್ಲ ಅಂತ ಏನಿಲ್ಲ. ಹೇಳಲಿಕ್ಕೆ, ಹಂಚಿಕೊಳ್ಳಲಿಕ್ಕೆ ಸಾವಿರಾರು ಸಂಗತಿಗಳಿರುತ್ತವೆ. ಈ ಸಂದರ್ಭಕ್ಕೆಂದೇ ಅಂದುಕೊಂಡಿದ್ದ ಸೊಗಸಾದ ಸಾಲುಗಳಿರುತ್ತವೆ. ಮೆಚ್ಚಿದ ಪದ್ಯ, ನಗಿಸಿದ ಹಾಸ್ಯ, ಆರ್ದ್ರವಾಗಿಸಿದ ಭಾವನೆಗಳಿರುತ್ತವೆ. ಹೇಳಬೇಕೆಂಬ ತುಡಿತವೂ ಬಲವಾಗಿರುತ್ತದೆ.

ಆದರೆ, ಹೇಳಲಾಗುವುದಿಲ್ಲ. ಹಾಗಂತ, ಹೇಳದಿರಲೂ ಆಗುವುದಿಲ್ಲ.

ನಿಜವಾದ ಕಷ್ಟ ಅದು. ಮನಸಿನ ಮಾತುಗಳು ನಿಜದ ಮಾತಾಗದಿರುವ ಕಷ್ಟ ಬಲು ಹಿಂಸೆ ಕೊಡುತ್ತದೆ.

ಬರಹವೂ ಹಾಗೇ.

ಏನೋ ಹೇಳಬೇಕೆಂದು ಅಕ್ಷರ ಜೋಡಿಸಲು ಹೊರಡುತ್ತೇವೆ. ಭಾವನೆಗಳು ಸಾಲುಗಳಾಗುವುದಿಲ್ಲ. ಬರೆದ ಸಾಲುಗಳು ಭಾವವನ್ನು ಬಿಂಬಿಸುವುದಿಲ್ಲ. ಬರೆದಿದ್ದನ್ನು ಅಳಿಸಿ, ಹೊಸದಾಗಿ ಬರೆಯಲು ಹೋಗಿ, ಅದು ಕಲಸುಮೇಲೋಗರವಾಗಿ, ಇದಾ ನನ್ನ ಭಾವತೀವ್ರತೆಯ ಪ್ರತಿಬಿಂಬ ಎಂದು ಬೇಸರವಾಗುತ್ತದೆ.

ಬರೆಯುವುದನ್ನು ನಿಲ್ಲಿಸಿ, ಸುಮ್ಮನೇ ಕೂತರೆ, ಎದೆಯೊಳಗಿನ ಭಾವಗಳು ಮಾತಿಗಿಳಿಯುತ್ತವೆ, ಸ್ವಗತವಾಗುತ್ತದೆ. ಒಬ್ಬನೇ ಇಬ್ಬಿಬ್ಬರಾಗಿ ಮಾತಾಡಿಕೊಂಡಂತೆ, ಅಂದುಕೊಂಡ ಭಾವಗಳೆಲ್ಲ ಸಲೀಸಾಗಿ ಹೊರಬಂದಂತೆ, ಅವಕ್ಕೊಂದು ಖಚಿತ ಅರ್ಥವೂ ದಕ್ಕಿದಂತೆ, ಆಹಾ. ಆ ಸ್ವಗತದ ಸೊಗಸೇ ಸೊಗಸು.

*****

ಇತ್ತೀಚೆಗೆ ಇಂಥ ಭಾವತೀವ್ರತೆ, ಹೇಳಲಾಗದ ತೊಳಲಾಡುವಿಕೆ ತುಂಬ ಕಾಡಿದೆ. ಕಾಡುತ್ತಲೇ ಇದೆ. ಏನೋ ಬರೆಯಬೇಕೆಂದುಕೊಳ್ಳುತ್ತಲೇ, ಅದು ಮತ್ತೇನೋ ಆಗಿ, ಛೇ ಇದು ಸರಿ ಹೋಗಲಿಲ್ಲ ಎಂದು ಅಳಿಸಿ, ಊಹೂಂ, ಅಳಿಸಬಾರದಿತ್ತೆಂದು ಹಳಹಳಿಸಿ, ಮತ್ತೆ ಮತ್ತೆ ಸುಮ್ಮನೇ ಕೂತು, ಭಾವಗಳೊಂದಿಗೆ ಸ್ವಗತಕ್ಕಿಳಿಯುವುದೇ ಹೆಚ್ಚಾಗುತ್ತಿದೆ. ತುಂಬ ದಿನ ಬರೆಯುವುದನ್ನು ಬಿಟ್ಟಿದ್ದರ ಪರಿಣಾಮ ಇದು ಎಂದು ಅನಿಸಿದರೂ, ಎಲ್ಲೋ ಕೊಂಡಿ ಜೋಡಣೆಯಾಗುತ್ತಿಲ್ಲ ಎಂದು ಮತ್ತೆ ಮತ್ತೆ ಅನಿಸುತ್ತದೆ. ಈ ಮಾತಿಗೆ, ಭಾವಕ್ಕೆ, ಮಾತು-ಭಾವ ಬೆಸೆಯುತ್ತಿದ್ದ ಮನಸ್ಸೊಂದು ದೂರವಾಗಿದೆ ಎಂಬ ಹಳಹಳಿ.

*****

ಕಳೆದುಕೊಳ್ಳುವುದೆಂದರೆ, ಭಾವತಿವ್ರತೆಯನ್ನು ಹೊರಹಾಕಲು ಸೋಲುವುದು. ಪದೆ ಪದೆ ಮನಸ್ಸಿನಲ್ಲಿ ಮೆಲುಕುಹಾಕುತ್ತಿದ್ದರೂ ಅದು ಮಾತಾಗದಿರುವುದು, ಅಕ್ಷರಗಳಾಗದಿರುವುದು, ಯಾವುದೇ ಕ್ರಿಯಾತ್ಮಕ ಕೆಲಸದಲ್ಲಿ ಹೊಮ್ಮದಿರುವುದು. ಅದು ಕೊಡುವ ಕಾಟ ಸಹಿಸಲಾಗದೇ, ಮತ್ತೆ ಮತ್ತೆ ಬರೆಯಲೆತ್ನಿಸುವುದು. ಸೋಲುವುದು. ಸೋತು ಸೋತು ಸ್ವಗತಕ್ಕಿಳಿಯುವುದು. ಸುದೀರ್ಘ ಕಾಲದವರೆಗೆ ಮತ್ತೆ ಮೌನವಾಗುವುದು.
*****
ಬಹುಶಃ ತುಂಬ ದಿನ ಇಂಥ ಸ್ಥಿತಿ ಉಳಿಯಲಿಕ್ಕಿಲ್ಲ. ಕೈಗಳು ಮತ್ತೆ ಮತ್ತೆ ಕೀಬೋರ್ಡ್ ಸವರುತ್ತವೆ. ಮಾತುಗಳಿಗೆ ಅಕ್ಷರರೂಪ ಕೊಡಲು ಯತ್ನಿಸುತ್ತವೆ. ಹಾಗೆ ಪ್ರಯತ್ನಿಸುತ್ತಲೇ ಸೋಲುತ್ತವೆ. ಬರೆದಿದ್ದನ್ನು ಅಳಿಸುತ್ತ, ಮತ್ತೆ ಮತ್ತೆ ಬರೆಯಲು ಯತ್ನಿಸುತ್ತ, ಬಿಡಿಬಿಡಿ ಭಾವಗಳನ್ನು ಇಡಿಯಾಗಿಸಲು ಪ್ರಯತ್ನಿಸುತ್ತಲೇ ಮನಸ್ಸನ್ನು ಜರಡಿಯಾಗಿಸುತ್ತ ಹೋಗುತ್ತೇನೆ. ಒಂದಾದರೂ ಮುತ್ತು ಉದುರೀತಾ ಎಂದು ಮತ್ತೆ ಮತ್ತೆ ನೋಡಿಕೊಳ್ಳುತ್ತೇನೆ.

ಇದೊಂದು ಮುಗಿಯದ ಕನಸು. ತೀರದ ದಾಹ. ಮತ್ತೆ ಮತ್ತೆ ಕನಸು. ಮತ್ತೆ ಮತ್ತೆ ದಾಹ.

ಹನಿಯೊಡೆಯದ ಕಾರ್ಮುಗಿಲನ್ನು ಕುದಿವ ಭೂಮಿ ದಿಟ್ಟಿಸುವಂತೆ, ಬೀಸುವ ಗಾಳಿಯ ನೆಪಕ್ಕೆ ಕಾಯ್ದಂತೆ, ಮನಸ್ಸು ಮತ್ತದೇ ಸ್ಪೂರ್ತಿಯನ್ನು ಹುಡುಕುತ್ತದೆ. ಹುಡುಕ್ಹುಡುಕಿ ನಿರಾಶೆಗೊಳ್ಳುತ್ತದೆ.

ಬಂದೀತು ಮತ್ತೆ ಮಳೆ ಸುಗ್ಗಿ, ಎಲ್ಲೆಗಳ ಮೀರೀತು ಹಿಗ್ಗಿ.

ಮತ್ತದೇ ಕನಸು. ಮತ್ತದೇ ಕನವರಿಕೆ.

- ಚಾಮರಾಜ ಸವಡಿ

No comments: