Saturday, August 16, 2008

ಜಾತ್ಯತೀತರೆಂಬ ಕೋಮುವಾದಿಗಳು (ಭಾಗ-೧)

(ಈ ಲೇಖನ ಡಿ.ಎಸ್‌. ನಾಗಭೂಷಣ ಅವರ ’ಕಾಶ್ಮೀರ ಬೆಂಕಿ: ಎಚ್ಚರವಿರಲಿ’ ಎಂಬ ಲೇಖನಕ್ಕೆ ಪ್ರತಿಕ್ರಿಯೆ. ಮೂಲ ಲೇಖನವನ್ನು http://sampada.net/article/10890 ದಲ್ಲಿ ನೋಡಬಹುದು)

ಸನ್ಮಾನ್ಯ ಡಿ.ಎಸ್‌. ನಾಗಭೂಷಣ ಅವರ ’ಕಾಶ್ಮೀರ ಬೆಂಕಿ: ಎಚ್ಚರವಿರಲಿ’ ಲೇಖನ ಜಾತ್ಯತೀತ ಹೆಸರಲ್ಲಿ ಹುಷಾರಾಗಿ ಹೆಣೆದ ಲೇಖನ ಎಂದು ಹೇಳಲು ಬಯಸುತ್ತೇನೆ. ಇಡೀ ವಿವಾದದಲ್ಲಿ ಮುಸ್ಲಿಮರನ್ನು ನೇರವಾಗಿ ಖಂಡಿಸದೇ, ಅವರ ಧೋರಣೆಯ ಹಿಂದಿರುವ ಧರ್ಮಾಂಧತೆಯನ್ನು ಬಯಲಿಗೆ ತಾರದೇ, ಇಡೀ ವಿವಾದದ ಹಿಂದೆ ಹಿಂದು ಧರ್ಮ ಪರ ಸಂಘಟನೆಗಳ ಹುನ್ನಾರ ಇದೆ ಎಂಬಂತೆ ಬಿಂಬಿಸಲು ಲೇಖಕರು ಯತ್ನಿಸಿದ್ದಾರೆ.

ಇದಕ್ಕೆ ಬೆಂಬಲವಾಗಿ ಸತ್ಯವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡಿದ್ದಾರೆ ನಾಗಭೂಷಣ ಅವರು.

ಅವರ ಲೇಖನದ ಈ ಸಾಲುಗಳನ್ನೇ ನೋಡಿ:

’’ಆಗಸ್ಟ್ 14ರವರೆಗೂ ತನ್ನ ಪ್ರತಿಭಟನೆಯನ್ನು ಮುಂದುವರೆಸಲು ನಿರ್ಧರಿಸಿರುವ ಜಮ್ಮು ಸಂಘರ್ಷ ಸಮಿತಿ 62ನೇ ಸ್ವಾತಂತ್ರ್ಯೋತ್ಸವಕ್ಕೆ ತನ್ನ ವಿಶಿಷ್ಟ ಕೊಡುಗೆಯನ್ನು ಸಲ್ಲಿಸಿದೆ ಎಂದೇ ಹೇಳಬೇಕು. ರಾಜ್ಯದ ಈವರೆಗಿನ ರಾಜಕಾರಣ; ಕಾಶ್ಮೀರ ಕಣಿವೆ ಮುಸ್ಲಿಮರದ್ದೂ, ಜಮ್ಮು ತಪ್ಪಲು ಹಿಂದೂಗಳದ್ದು ಎಂಬ ವಿಭಾಗೀಕರಣಕ್ಕೆ ಕಾರಣವಾಗಿರುವುದರಿಂದ ಸದ್ಯದ ಈ ಸಮಸ್ಯೆಗೆ ದಟ್ಟ ಕೋಮು ಬಣ್ಣ ಕೂಡಾ ಬಂದಿದೆ.”

ಇದು ಇವತ್ತಿನ ಬಣ್ಣವಲ್ಲ ನಾಗಭೂಷಣ ಅವರೇ. ಜಮ್ಮು ಕಾಶ್ಮೀರ ರಾಜ್ಯ ರಚನೆಯಾದಾಗಿನಿಂದ ಇರುವಂಥದ್ದು. ಇತಿಹಾಸದ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತಿರುವುದರಿಂದ, ಮತ್ತು ತಕ್ಕಮಟ್ಟಿಗೆ ಬಹಳಷ್ಟು ಜನರೂ ಅದನ್ನು ಅರಿತುಕೊಂಡಿರುವುದರಿಂದ, ಕೋಮುಬಣ್ಣ ಇವತ್ತಿನದಲ್ಲ ಎಂಬುದನ್ನು ಮತ್ತೆ ವಿವರಿಸಬೇಕಾಗಿಲ್ಲ ಅನಿಸುತ್ತದೆ.

ನಿಮ್ಮ ಮುಂದಿನ ಸಾಲುಗಳು ಕೂಡಾ ಮುಸ್ಲಿಂ ಪರ ಸಂಘಟನೆಗಳು ಹಾಗೂ ಉಗ್ರವಾದಿಗಳ ಮೇಲಿನ ಅನುಕಂಪವನ್ನೇ ವ್ಯಕ್ತಪಡಿಸುತ್ತವೆ ”ಇದರಿಂದ ನಿರಂತರವಾಗಿ ಲಾಭ ಪಡೆಯುತ್ತಿರುವವರೆಂದರೆ, ಕಾಶ್ಮೀರದ ಪ್ರತ್ಯೇಕತಾವಾದಿ ಗುಂಪುಗಳು ಮತ್ತು ಉಗ್ರವಾದಿ ಸಂಸ್ಥೆಗಳು. ಮೊನ್ನೆ ಜಮ್ಮು ಬಂದ್ ವಿರುದ್ಧ ಶ್ರೀನಗರದಲ್ಲಿ ನಡೆದ ಮೆರವಣಿಗೆಯಲ್ಲಿ ಅನೇಕ ಉಗ್ರವಾದಿ ಗುಂಪುಗಳು ಬಹಿರಂಗವಾಗಿ ಕಾಣಿಸಿಕೊಂಡು ರಾಷ್ಟ್ರವಿರೋಧಿ ಘೋಷಣೆಗಳನ್ನು ಕೂಗತೊಡಗಿದ್ದು ಮತ್ತು ಇದನ್ನು ನಮ್ಮ ಭದ್ರತಾ ಪಡೆಗಳು ಮೂಕ ಪ್ರೇಕ್ಷಕರಾಗಿ ನೋಡುತ್ತಾ ನಿಲ್ಲುವಂತಾದದ್ದು ಇದಕ್ಕೊಂದು ಉದಾಹರಣೆ.” ಎಂದು ಹೇಳುತ್ತೀರಿ. ಅದರ ನಂತರದ ಘಟನೆಗಳನ್ನೇಕೆ ಉದಾಹರಿಸಿಲ್ಲ? ಶ್ರೀನಗರದ ಲಾಲ್‌ಚೌಕದಲ್ಲಿ ಆಗಸ್ಟ್‌ ೧೫ರಂದು ಹಾರಿಸಲಾಗಿದ್ದ ರಾಷ್ಟ್ರಧ್ವಜವನ್ನು ಮಧ್ಯಾಹ್ನ ೩.೪೫ರ ಹೊತ್ತಿಗೆ ಇಳಿಸಿದ ಮುಸ್ಲಿಂ ಸಂಘಟನೆಗಳು ಹಾಗೂ ಉಗ್ರವಾದಿಗಳು, ಅಲ್ಲಿ ತಮ್ಮ ಸಂಘಟನೆಗಳ ಧ್ವಜಗಳನ್ನು ಹಾರಿಸಿದರು. ಸಂಘಟನೆಗೆ ಸೇರಿದ ಮಹಿಳಾ ಸದಸ್ಯರು ರಾಷ್ಟ್ರಧ್ವಜ ಸುಟ್ಟರು. ನೀವು ಹೇಳಿದಂತೆ ನಮ್ಮ ಭದ್ರತಾ ಪಡೆಗಳು ಅದನ್ನು ಮೂಕಪ್ರೇಕ್ಷರಾಗಿ ನೋಡುತ್ತಾ ನಿಂತಿದ್ದರು. ಏಕೆ ಗೊತ್ತೆ? ಆಗ ಅವರು ರಂಗಕ್ಕೆ ಇಳಿದಿದ್ದರೆ ಮತ್ತೊಂದು ರಕ್ತಪಾತವಾಗುತ್ತಿತ್ತು. ಅದೂ ಸ್ವಾತಂತ್ರ ದಿನದಂದು. ಅದಕ್ಕೇ ಸುಮ್ಮನಿದ್ದರು. (ಟೈಮ್ಸ್‌ ಆಫ್‌ ಇಂಡಿಯಾ ೧೬-೮-೨೦೦೮)

ಮುಂದೆ ನೀವು ಕಾಶ್ಮೀರ ಸಮಸ್ಯೆ ಉಲ್ಬಣವಾಗಿದ್ದು ಹೇಗೆ ಎಂಬುದನ್ನು ಹೇಳುತ್ತ, ಕೇವಲ ಕೇಂದ್ರ ಸರ್ಕಾರ ಮತ್ತು ಅದು ಸ್ಥಾಪಿಸಿದ್ದ ಕೈಗೊಂಬೆ ರಾಜ್ಯ ಸರ್ಕಾರಗಳು ಇವತ್ತಿನ ಪರಿಸ್ಥಿತಿಗೆ ಕಾರಣ ಎನ್ನುತ್ತೀರಿ. ಇದಕ್ಕೆ ಸಮರ್ಥನೆಯಾಗಿ ”ಬಾಬ್ರಿ ಮಸೀದಿ ನಾಶ ಹಾಗೂ ಆಫ್ಘನಿಸ್ಥಾನ ಮತ್ತು ಇರಾಕ್‌ಗಳ ಮೇಲಿನ ಅಮೆರಿಕಾದ ಆಕ್ರಮಣಗಳ ನಂತರವಂತೂ ಈ ಸಮಸ್ಯೆಗೆ ಜಾಗತಿಕ ಆಯಾಮ ದೊರೆತು, ಪ್ರತ್ಯೇಕತಾವಾದ ಕೋಮುವಾದವಾಗಿ ಪರಿವರ್ತಿತವಾಗಿ, ಸಮಸ್ಯೆಯನ್ನು ಉಲ್ಬಣಗೊಳಿಸಿದೆ” ಎಂದು ಬರೆಯುತ್ತೀರಿ. ಅಂದರೆ, ಬಾಬ್ರಿ ಮಸೀದಿ ನಾಶ ಹಾಗೂ ಆಫ್ಘನಿಸ್ತಾನ ಮತ್ತು ಇರಾಕ್‌ ಮೇಲಿನ ಅಮೆರಿಕ ಆಕ್ರಮಣದಿಂದ ಕಾಶ್ಮೀರ ಸಮಸ್ಯೆಗೆ ಜಾಗತಿಕ ಆಯಾಮ ದೊರೆತು, ಪ್ರತ್ಯೇಕತಾವಾದ ಕೋಮುವಾದವಾಗಿ ಪರಿವರ್ತನೆಯಾಯಿತು ಎಂಬುದು ನಿಮ್ಮ ಬರಹದ ಅರ್ಥ. ಅಂದರೆ, ಮೇಲಿನ ಬೆಳವಣಿಗೆಗಳ ಮುಂಚೆ ಜಮ್ಮು ಕಾಶ್ಮೀರದಲ್ಲಿ ಕೋಮುವಾದ ಇರಲಿಲ್ಲವೆ? ಜಗತ್ತಿನ ಇಂತಹ ಸಮಸ್ಯೆಗಳ ಹಿನ್ನೆಲೆ ಅವಲೋಕಿಸಿದರೆ, ಕೋಮುವಾದವೇ ಪ್ರತ್ಯೇಕತಾವಾದವಾಗಿ ಬದಲಾಗಿದ್ದು ಸರಳವಾಗಿ ಗೋಚರಿಸುತ್ತದೆ. ನಮ್ಮ ದೇಶ ವಿಭಜನೆಯಾಗಿದ್ದೇ ಕೋಮುವಾದದಿಂದ ಎಂಬುದನ್ನು ಏಕೆ ಮರೆಯುತ್ತೀರಿ?

ನಿಮ್ಮ ಲೇಖನದ ಮುಂದಿನ ಪ್ಯಾರಾವಂತೂ ಜಾತ್ಯತೀತ ಹೆಸರಿನ ಬಹುತೇಕ ಕೋಮುವಾದಿಗಳ ದೃಷ್ಟಿಕೋನವನ್ನೇ ಪ್ರತಿಫಲಿಸುತ್ತದೆ.

”ಆದರೆ ಸ್ವಾತಂತ್ರ್ಯೋತ್ತರ ಭಾರತದ ರಾಜಕಾರಣ ರಾಷ್ಟ್ರೀಯ ಏಕತೆಯ ಹೆಸರಿನಲ್ಲಿ, ಸಂವಿಧಾನ ಪ್ರತಿಪಾದಿಸಿದ್ದ ಒಕ್ಕೂಟ ರಾಷ್ಟ್ರದ ಭಾವನೆಯ ವಿರುದ್ಧ ಆಚರಿಸಿಕೊಂಡು ಬರುತ್ತಿರುವ ಕೇಂದ್ರೀಕೃತ ಆಡಳಿತ ನೀತಿಯ ಫಲವಾಗಿ ವಿವಿಧ ರಾಜ್ಯಗಳ ಭಾಷೆ-ಸಂಸ್ಕೃತಿ ಸಂಪ್ರದಾಯಗಳು ಘಾಸಿಗೊಂಡಿರುವಂತೆ, ಇಲ್ಲೂ ಆ ಬಹು ಸಂಸ್ಕೃತಿಯ ಸಂಪ್ರದಾಯ ಘಾಸಿಗೊಂಡಿದೆ. ಸ್ಥಳೀಯ ಸಂಸ್ಕೃತಿಯ ಪರಿಮಳ ನಾಶವಾಗಿ ಈ ಮುಸ್ಲಿಂ ಬಹುಸಂಖ್ಯಾತರ ರಾಜ್ಯ, ರಾಷ್ಟ್ರೀಯತೆಯ ಅತಿಗಳಿಗೆ ಸಿಕ್ಕಿ ಕೋಮುವಾದಕ್ಕೆ ಬಲಿಯಾಗಿದೆ. ಇದರಿಂದಾಗಿ, ಭಾರತದ ಬಹು ಸಂಪ್ರದಾಯಗಳ ಸಂಸ್ಕೃತಿಗೆ ಹತ್ತಿರವಿದ್ದ ಕಾರಣದಿಂದಾಗಿ ಭಾರತದಲ್ಲಿ ಸಹಜವಾಗಿ ಒಂದಾಗಬೇಕಿದ್ದ ಈ ರಾಜ್ಯ, ಈಗ ತನ್ನ ಮುಕ್ತಿಗಾಗಿ ಪಾಕಿಸ್ತಾನದ ಕಡೆ ನೋಡುವಂತಾಗಿದೆ.” ಈ ವಾಕ್ಯಗಳನ್ನು ಬರೆಯುವುದಕ್ಕೆ ಜಾತ್ಯತೀತರೆನ್ನಿಸಿಕೊಳ್ಳುವ ಹಂಬಲ ಬಿಟ್ಟು ಬೇರೆ ಏನೂ ನನಗೆ ಕಾಣುತ್ತಿಲ್ಲ. ನಿಮ್ಮ ಪ್ರಕಾರ, ಕಾಶ್ಮೀರದ ಇವತ್ತಿನ ಸಮಸ್ಯೆಗೆ ಕೇಂದ್ರ ಸರ್ಕಾರದ ನೀತಿಯೇ ಕಾರಣವೇ ಹೊರತು, ಸ್ಥಳೀಯ ಬಹುಸಂಖ್ಯಾತ ಮುಸ್ಲಿಂ ಕಾಶ್ಮೀರಿಗಳ ಕೊಡುಗೆ ಏನೇನೂ ಇಲ್ಲ. ಇದನ್ನು ಒಪ್ಪಲು ಸಾಧ್ಯವೆ? ದೇಶ ಸ್ವಾತಂತ್ರವಾದಾಗಿನಿಂದ ಇಂದಿನವರೆಗೆ, ದೇಶದ ಮುಖ್ಯವಾಹಿನಿಯ ಚಟುವಟಿಕೆಗಳಲ್ಲಿ ಈ ಮುಸ್ಲಿಂ ಬಹುಸಂಖ್ಯಾತ ಕಾಶ್ಮೀರಿಗಳು ಎಷ್ಟರ ಮಟ್ಟಿಗೆ ಪಾಲ್ಗೊಂಡಿದ್ದಾರೆ? ಈ ದೇಶವನ್ನು ತಮ್ಮದು ಎಂಬ ಭಾವನೆಯಲ್ಲಿ ಯಾವತ್ತು ನೋಡಿದ್ದಾರೆ? ನೀವೇ ಹೇಳುವಂತೆ ಜಮ್ಮು ಕಾಶ್ಮೀರದಲ್ಲಿ ಹಿಂದು, ಮುಸ್ಲಿಂ ಮತ್ತು ಬೌದ್ಧ ಧರ್ಮೀಯರು ಬಹುಸಂಖ್ಯಾತರು. ಆದರೆ, ಇವತ್ತು ಮುಸ್ಲಿಂರ ಪ್ರಾಬಲ್ಯ ಬಿಟ್ಟರೆ ಎಷ್ಟರ ಮಟ್ಟಿಗೆ ಇತರ ಧರ್ಮೀಯರು ನೀತಿ ನಿರ್ಣಯದ ಶಕ್ತಿ ಹೊಂದಿದ್ದಾರೆ?

ಇಷ್ಟೇ ಅಲ್ಲ, ಶ್ರೀನಗರ ಹೆದ್ದಾರಿ ಬಂದ್‌ನಿಂದಾಗಿ ವ್ಯಾಪಾರ ಕಳೆದುಕೊಂಡಿರುವ ಕಾಶ್ಮೀರಿಗಳು ಅನಿವಾರ್ಯವಾಗಿ ತಮ್ಮ ಸರಕನ್ನು ಮಾರಲು ಪಾಕ್‌ ಆಕ್ರಮಿತ ಕಾಶ್ಮೀರದ ಕಡೆ ಹೊರಳಿದ್ದಾರೆ ಎಂದು ಸಹಾನುಭೂತಿ ವ್ಯಕ್ತಪಡಿಸಿದ್ದೀರಿ (ಹಾಗಾಗಿಯೇ, ಈಗ ಜಮ್ಮು ಕಡೆ ವಾಹನ ಸಂಚಾರ ಸ್ತಬ್ಧಗೊಂಡಿರುವ ಹಿನ್ನೆಲೆಯಲ್ಲಿ ಕಾಶ್ಮೀರಿ ವ್ಯಾಪಾರಿಗಳು ತಮ್ಮ ಸರಕಿನ ಉಳಿವಿಗಾಗಿ ಅದನ್ನು ಈ 'ಆಝಾದ್ ಕಾಶ್ಮೀರ'ದೆಡೆಗೆ ತಿರುಗಿಸದೆ ವಿಧಿಯಿಲ್ಲವೆಂದು ಹೇಳುತ್ತಿದ್ದಾರೆ. ಆದರೆ ಇದನ್ನು ರಾಷ್ಟ್ರ ವಿರೋಧಿ ಕ್ರಮ ಎಂದು ಕರೆದಿರುವ ಜಮ್ಮು ಸಂಘರ್ಷ ಸಮಿತಿಗೆ, ತಾನು ನಿರಂತರ ಬಂದ್ ಹೆಸರಿನಲ್ಲಿ ರಸ್ತೆ ತಡೆ ನಡೆಸುತ್ತಾ ಕಾಶ್ಮೀರಕ್ಕೆ ಆರ್ಥಿಕ ದಿಗ್ಬಂಧನ ಹೇರಿರುವುದು ಕೂಡಾ ರಾಷ್ಟ್ರ ವಿರೋಧಿ ಕ್ರಮ....) ಇದು ಯಾವ ಜಾತ್ಯತೀತ ನಿಲುವು ಸ್ವಾಮಿ?

ಲೇಖನ ಉದ್ದವಾದೀತೆಂಬ ಅಳುಕಿನಿಂದ, ಅಮರನಾಥ ಕುರಿತ ಸಂಗತಿಗಳನ್ನು ಈ ಲೇಖನದ ಎರಡನೇ ಭಾಗದಲ್ಲಿ ಬರೆಯುತ್ತೇನೆ. ಮುಸ್ಲಿಂರನ್ನು ಓಲೈಸುವುದೇ ಜಾತ್ಯತೀತ ಧೋರಣೆ ಎಂದು ನಿಮ್ಮಂಥವರು ನಂಬಿಕೊಂಡಿದ್ದೀರಿ. ಅದಕ್ಕೆ ಪುರಾವೆ ಒದಗಿಸಲು, ಸತ್ಯ ಸಂಗತಿಗಳನ್ನು ಆಯ್ದು ತಿರುಚಿ ಪ್ರಕಟಿಸುತ್ತೀರಿ. ಪ್ರತ್ಯೇಕತಾವಾದ ಹುಟ್ಟಿದ್ದೇ ಕೇಂದ್ರ ಸರ್ಕಾರದ ನೀತಿಯಿಂದ ಎನ್ನುತ್ತೀರಿ. ಆದರೆ, ಕೇಂದ್ರದ ನೀತಿ ಎಲ್ಲ ರಾಜ್ಯಗಳ ಮಟ್ಟಿಗೂ ಒಂದೇ ಇದೆ ಎಂಬುದನ್ನೇಕೆ ಮರೆಯುತ್ತೀರಿ? ರಾಷ್ಟ್ರದ ಮುಖ್ಯವಾಹಿನಿಯನ್ನು ಮೊದಲಿನಿಂದಲೂ ದ್ವೇಷಿಸುತ್ತ ಬಂದಿರುವ ಮುಸ್ಲಿಂ ಧರ್ಮಾಂಧರ ಪರ ನಿಲ್ಲುವುದು ನಿಮ್ಮಂಥ ಕೆಲ ಕೋಮುವಾದಿ ’ಜಾತ್ಯತೀತ’ರ ನಿಲುವಾಗಿದೆ. ಸರಿಯಾಗಿ ಹೇಳಬೇಕೆಂದರೆ, ಚಟವಾಗಿದೆ. ಹಾಗೆ ಮಾಡಿದರೆ ಮಾತ್ರ ನಿಮ್ಮಂಥವರಿಗೆ ಪ್ರತ್ಯೇಕ ಮನ್ನಣೆ ಸಿಗುತ್ತದೆ.

ಇದನ್ನೆಲ್ಲ ಏಕೆ ಹೇಳಿದೆನೆಂದರೆ, ಈ ಲೇಖನ ಬರೆಯುವ ಸಮಯದಲ್ಲಿ ಅಹ್ಮದಾಬಾದ್‌ನ ಇತ್ತೀಚಿನ ಬಾಂಬ್‌ ಸ್ಫೋಟಗಳ ಹಿಂದೆ ಸಿಮಿ ಕೈವಾಡ ಇದೆ ಎಂಬುದು ಪ್ರಾಥಮಿಕ ತನಿಖೆಯಿಂದ ಸಾಬೀತಾಗಿದೆ. ಅದಕ್ಕೆ ಪುರಾವೆಯಾಗಿ ಕೆಲವು ವ್ಯಕ್ತಿಗಳನ್ನು ಗುಜರಾತ್‌ ಪೊಲೀಸರು ಬಂಧಿಸಿದ್ದೂ ಆಗಿದೆ. ಇದಕ್ಕೂ ಸಾಕಷ್ಟು ಮುಂಚೆಯೇ ಸಿಮಿ ಕೈವಾಡ ಈ ಸ್ಫೋಟಗಳ ಹಿಂದಿತ್ತು ಎಂಬುದನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬಹಿರಂಗವಾಗಿ ಹೇಳಿದ್ದವು. ಹೀಗಿದ್ದರೂ ಕೋಮು ವಿರೋಧಿ ವೇದಿಕೆಯವರು, ನಿಮ್ಮಂಥ ಪ್ರಜ್ಞಾವಂತರು ಸ್ಫೊಟದ ಹಿಂದಿನ ಧರ್ಮಾಂಧರನ್ನು, ಅವರ ಉದ್ದೇಶಗಳನ್ನು, ಅವರು ಹಿಡಿದ ನೀಚ ಮಾರ್ಗವನ್ನು ಖಂಡಿಸಲಿಲ್ಲ. ಬಾಬಾ ಬುಡನ್‌ಗಿರಿ ವಿಷಯಕ್ಕೆ ಸಂಬಂಧಿಸಿದಂತೆ ನೀಡಿದ ಹೇಳಿಕೆಗಳು, ನಡೆದ ಮಾರ್ಗ ಹಾಗೂ ನಾಟಕೀಯತೆ ತೋರುವ ಚಟುವಟಿಕೆಗಳು ಇಂತಹ ವಿಷಯಗಳಲ್ಲಿ ಯಾವತ್ತೂ ವ್ಯಕ್ತವಾಗಿಲ್ಲ.

ಹೀಗಾಗಿ, ನಿಮ್ಮಂಥವರು ಕೋಮುವಾದ, ಧರ್ಮಾಂಧತೆ ಎಂದು ಬರೆದಾಗೆಲ್ಲ, ನೀವು ಕೂಡಾ ಕಣ್ಣಿಗೆ ಧರ್ಮಾಂಧತೆಯ ಕನ್ನಡಕ ಹಾಕಿಕೊಂಡೇ ಬರೆಯುತ್ತೀರಿ ಎಂದು ಬಲವಾಗಿ ಅನ್ನಿಸತೊಡಗುತ್ತದೆ. ಇಲ್ಲದಿದ್ದರೆ, ಕೆಟ್ಟದ್ದನ್ನು ಯಾರು ಮಾಡಿದರೇನು ಎಂದು ನೇರವಾಗಿ ಅವರ ದೋಷಗಳನ್ನೂ ಟೀಕಿಸುತ್ತಿದ್ದಿರಿ. ಖಂಡಿಸುತ್ತಿದ್ದಿರಿ. ಅಂಥದ್ದು ಆಗಿಲ್ಲ ಎಂಬ ಕಾರಣಕ್ಕೆ ನಿಮ್ಮ ಈ ಲೇಖನ, ನಿಮ್ಮಂಥವರು ನೀಡುವ ಹೇಳಿಕೆ, ಬರೆದ ಲೇಖನಗಳು, ಮಾಡಿದ ಚಳವಳಿಗಳು ಹಾಸ್ಯಾಸ್ಪದವಾಗಿ ಕಾಣುತ್ತವೆ. ಎಲ್ಲೋ ವಿದೇಶದಲ್ಲಿ ವ್ಯಂಗ್ಯಚಿತ್ರವೊಂದು ಪ್ರವಾದಿಯನ್ನು ಕುರಿತಾಗಿತ್ತು ಎಂಬ ವಿಷಯಕ್ಕೆ ಭಾಷೆ, ವಿಷಯ, ಚಿತ್ರ ಗೊತ್ತಿರದ ಮುಸ್ಲಿಮರು ಪ್ರತಿಭಟನೆ ನಡೆಸುವುದನ್ನು ನೋಡಿದರೆ ಯಾವ ಭಾವನೆ ಉಂಟಾಗುತ್ತದೋ, ಅಂಥದೇ ಭಾವನೆ ನಿಮ್ಮಂಥವರು ಅದನ್ನು ಬೆಂಬಲಿಸಿ ಬರೆದಾಗ, ಹೇಳಿಕೆ ನೀಡಿದಾಗ, ಹಾಗೂ ಹಿಂದು ದೇವತೆಗಳ ಅವಹೇಳನ ಬಹಿರಂಗವಾದಾಗಲೂ ನೋಡಿಕೊಂಡು ಸುಮ್ಮನಿದ್ದಾಗ ಆಗುತ್ತದೆ.

ತಪ್ಪು ಯಾರೇ ಮಾಡಿರಲಿ, ಅವರ ಜಾತಿ, ಹಿನ್ನೆಲೆ ನೋಡದೇ ಅದನ್ನು ತಪ್ಪು ಎಂದು ಸರಳವಾಗಿ ಹೇಳಲು ನಿಮ್ಮಂಥವರಿಗೆ ಏಕೆ ಸಾಧ್ಯವಾಗುವುದಿಲ್ಲ? ಏಕೆ ಈ ದ್ವಂದ್ವ?

- ಚಾಮರಾಜ ಸವಡಿ

Wednesday, August 13, 2008

ಮಧ್ಯಮದಲ್ಲೇ ಉಳಿದ ಮಾಧ್ಯಮ

(ಶಶಿಕುಮಾರ್‌ ಅವರು ಸಂಪದದಲ್ಲಿ ಬರೆದಿದ್ದ ಲೇಖನಕ್ಕೆ ಪ್ರತಿಕ್ರಿಯೆ/ಪೂರಕವಾಗಿ ಇದನ್ನು ಬರೆಯುತ್ತಿದ್ದೇನೆ. ಮೂಲ ಲೇಖನವನ್ನು http://sampada.net/article/10660 ದಲ್ಲಿ ನೋಡಬಹುದು )

ಶಶಿಕುಮಾರ್‌ ಅವರು ’ಸುದ್ದಿಸೂಳೆಯ ಬೆನ್ನತ್ತಿ ಹೊರಟಿರುವ ಮಾಧ್ಯಮಗಳು’ (ಭಾಗ-೧)ರಲ್ಲಿ ಸಾಕಷ್ಟು ಮುಖ್ಯ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಮಾಧ್ಯಮ ಹೇಗೆ ಮಧ್ಯಮ ಹಂತದಲ್ಲೇ ಉಳಿದುಬಿಟ್ಟಿದೆ ಎಂಬುದನ್ನು ವಿವರವಾಗಿಯೇ ಬರೆದಿದ್ದಾರೆ. ಅವರು ಬರೆದಿದ್ದು ಒಂದೇ ಕಂತು ಹಾಗೂ ಇತರ ಕಂತುಗಳು ಇನ್ನೂ ಬರಬೇಕಿವೆ. ಆದರೆ, ಮೊದಲನೇ ಕಂತಿನಲ್ಲಿ ಪ್ರಸ್ತಾಪವಾಗಿರುವ ವಿಷಯಗಳು ಹಾಗೂ ಧೋರಣೆ ನೋಡಿದರೆ, ಇತರ ಕಂತುಗಳು ಬರಬಹುದಾದ ರೀತಿಯನ್ನು ತಕ್ಕಮಟ್ಟಿಗೆ ಊಹಿಸಬಹುದು.

ನಾನೂ ಪತ್ರಕರ್ತ. ವೃತ್ತಿಗಷ್ಟೇ ಅಲ್ಲ, ಪ್ರವೃತ್ತಿಗೂ ಅದನ್ನೇ ನೆಚ್ಚಿಕೊಂಡವನು. ಮಾಡುತ್ತಿದ್ದ ಸರ್ಕಾರಿ ಕೆಲಸ ಬಿಟ್ಟು ಪತ್ರಕರ್ತನಾದವನು. ಆದ್ದರಿಂದ, ವೃತ್ತಿಯ ಬಗ್ಗೆ ನನಗೆ ಸಾಕಷ್ಟು ಬದ್ಧತೆ, ಆಸಕ್ತಿ ಹಾಗೂ ಪ್ರೀತಿ ಇದೆ. ಹಾಗಂತ ಅದರ ದೋಷಗಳನ್ನು ಸಮರ್ಥಿಸುವುದಿಲ್ಲ. ಸಂಸ್ಥೆಯೊಂದರಲ್ಲಿ ಕೆಲಸ ಮಾಡುವಾಗ, ತೋರಲೇಬೇಕಾದ ಅನಿವಾರ್ಯತೆಗಳನ್ನು ಹೊರತುಪಡಿಸಿ, ಅದನ್ನು ಕಟುವಾಗಿ ಟೀಕಿಸುತ್ತಲೇ ಬಂದಿದ್ದೇನೆ. ಹೀಗಾಗಿ, ಶಶಿಕುಮಾರ ಹೇಳಲು ಹೊರಟಿರುವ ವಿಷಯಗಳ ಬಗ್ಗೆ ಅಧಿಕೃತವಾಗಿ ಪ್ರತಿಕ್ರಿಯೆ ಬರೆಯುವ ಅಧಿಕಾರ ನನಗಿದೆ. ಅದಕ್ಕಿಂತ ಹೆಚ್ಚಾಗಿ, ಬರೆಯಲೇಬೇಕಾದ ಜವಾಬ್ದಾರಿಯೂ ಇದೆ.

ಮಾಧ್ಯಮ ವರ್ತಿಸುತ್ತಿರುವ ರೀತಿಯ ಬಗ್ಗೆ ನನಗೆ ಸಾಕಷ್ಟು ಆಕ್ಷೇಪಣೆಗಳಿವೆ.

ಜನಾಕರ್ಷಣೆಯೇ ಮಾಧ್ಯಮದ ಮುಖ್ಯ ಗುರಿಯಾಗಿರುವುದು ಮೊದಲನೇ ಆಕ್ಷೇಪಣೆ. ಏನಾದರೂ ಸರಿ, ಓದುಗರನ್ನು/ವೀಕ್ಷಕರನ್ನು ಸೆಳೆಯಬೇಕು ಎಂಬುದು ಇವತ್ತಿನ ಮಾಧ್ಯಮದ ಅಲಿಖಿತ ನಿಯಮ. ಬದ್ಧತೆ, ಸಾಮಾಜಿಕ ಜವಾಬ್ದಾರಿ, ವಿವೇಚನೆ ಮುಂತಾದ ವಿಷಯಗಳು ಅಥವಾ ಭಾವನೆಗಳನ್ನು ನನ್ನ ವೃತ್ತಿ ಜೀವನದಲ್ಲಿ ನಾನು ಕಂಡಿದ್ದು ಅತಿ ವಿರಳ ಎಂದೇ ಹೇಳಬಹುದು. ಒಂದು ವಿಷಯವನ್ನು ಹೇಗೆ ಪ್ರಸ್ತುತಪಡಿಸಬೇಕು ಎಂಬುದಕ್ಕಿಂತ, ಹೇಗೆ ಪ್ರಸ್ತುತಪಡಿಸಿದರೆ ಇತರರಿಗಿಂತ ಹೆಚ್ಚು ವೀಕ್ಷಕರು/ಓದುಗರನ್ನು ಅದು ಆಕರ್ಷಿಸುತ್ತದೆ ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳುವವರೇ ಹೆಚ್ಚು. ಇದೊಂದು ರೋಗದಂತೆ ಮಾಧ್ಯಮ ಕಚೇರಿಗಳನ್ನು ಆವರಿಸಿದ್ದು, ಇಂಥದೇ ರೀತಿಯಲ್ಲಿ ಸುದ್ದಿ ಬರೆಯಿರಿ ಎಂದು ತಮ್ಮ ಆಧೀನ ಪತ್ರಕರ್ತ ಸಹೋದ್ಯೋಗಿಗಳ ಮೇಲೆ ಒತ್ತಡ ಹೇರಲಾಗುತ್ತದೆ. ಪತ್ರಿಕೋದ್ಯಮ ಕೇವಲ ವೃತ್ತಿಯಾಗುತ್ತಿರುವ ಈ ದಿನಗಳಲ್ಲಿ, ಹಿರಿಯ ಪತ್ರಕರ್ತರ ಆಜ್ಞೆಯನ್ನು ಉಲ್ಲಂಘಿಸಲು ಆದೀತೆ? ಒಂದು ವೇಳೆ ಉಲ್ಲಂಘಿಸಿದರೂ, ಅವನು ಬಹುಕಾಲ ಆ ಸಂಸ್ಥೆಯಲ್ಲಿ ಇರಲಾರ. ಇರುವಂತಹ ವಾತಾವರಣವೂ ಅವನ ಪಾಲಿಗೆ ಉಳಿಯುವುದಿಲ್ಲ. ಹಲವಾರು ಪತ್ರಿಕಾ ಕಚೇರಿಗಳಲ್ಲಿ, ಟಿವಿ ಮಾಧ್ಯಮದಲ್ಲಿ ನಾನು ಕೆಲಸ ಮಾಡುವಂತಾಗಲು ಇಂತಹ ಉಲ್ಲಂಘನೆಯೂ ಒಂದು ಮುಖ್ಯ ಕಾರಣ.

ಹೀಗಿರುವಾಗ, ಸುದ್ದಿಯ ಔಚಿತ್ಯ ಹಾಗೂ ಅದನ್ನು ಪ್ರಸ್ತುತಪಡಿಸುವ ಔಚಿತ್ಯದ ಬಗ್ಗೆ ಯಾರು ಯೋಚಿಸಬೇಕು? ಯಾರು ಅದನ್ನು ಸಮದೃಷ್ಟಿಯಿಂದ ಜಾರಿಗೊಳಿಸಬೇಕೋ, ಅವರೇ ರಂಜನೀಯವಾಗಿ ಅದನ್ನು ಬಿಂಬಿಸಲು ಮುಂದಾಗಿರುವಾಗ, ತೀರ ಕೆಳ ಹಂತದಲ್ಲಿರುವ ವಿವೇಚನೆಯುಳ್ಳ ಪತ್ರಕರ್ತ ತನ್ನ ಹೃದಯದ ಮಾತನ್ನು ನಡೆಸಲು ಹೇಗೆ ಸಾಧ್ಯವಾದೀತು?

ಮಾಧ್ಯಮ ಕಚೇರಿಯಲ್ಲಿ ನಿತ್ಯ ಹಲವಾರು ರೀತಿಯ ಸುದ್ದಿಗಳು ಬರುತ್ತಿರುತ್ತವೆ. ಎಲ್ಲವನ್ನೂ ಹೃದಯಕ್ಕೆ ಹತ್ತಿರವಾಗಿ ತೆಗೆದುಕೊಂಡು ವಿಶ್ಲೇಷಿಸುವುದು ಸಾಧ್ಯವಾಗದು. ಅಲ್ಲಿ ಭಾವನೆಗಿಂತ, ಕರ್ತವ್ಯಪ್ರಜ್ಞೆಯೇ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ನಿಜ. ಹಾಗಂತ, ನಿರ್ಭಾವುಕರಾಗಿ ಕೆಲಸ ಮಾಡಲಾಗದು. ವೃತ್ತಿ ಪ್ರಜ್ಞೆಯೊಂದಿಗೆ ವಿವೇಚನೆಯಿಂದಲೂ ಕೆಲಸ ಮಾಡುವುದು ನಿಜವಾದ ವೃತ್ತಿಪರತೆ. ಆದರೆ, ನಮ್ಮ ಮಾಧ್ಯಮ ಸಂಸ್ಥೆಗಳಲ್ಲಿ ಆ ಬದ್ಧತೆ ತೀರಾ ವಿರಳವಾಗುತ್ತಿದೆ.

ನಾನೂ ತುಂಬ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದೇನೆ. ಇಂತಹ ಬದ್ಧತೆ ಇಟ್ಟುಕೊಂಡು ಕೆಲಸ ಮಾಡಿದವರನ್ನು ನೋಡಿದ್ದು ಬಲು ಅಪರೂಪ. ಸಮದೃಷ್ಟಿ ಇರುವ ಹಿರಿಯ ಪತ್ರಕರ್ತರು ಸಾಕಷ್ಟಿದ್ದರೂ, ಮ್ಯಾನೇಜ್‌ಮೆಂಟ್‌ನ ಒತ್ತಡಗಳಿಗೆ ಸಿಲುಕಿ ಅವರ ಸಮದೃಷ್ಟಿ ಹೊರಟುಹೋಗಿದೆ. ಅವರಿಂದ ಉತ್ತಮ ಪ್ರತಿಕ್ರಿಯೆ ನಿರೀಕ್ಷಿಸಲು ಆಗದು.

ಇದಕ್ಕೆ ಪರಿಹಾರ ಎಂದರೆ, ನಮ್ಮ ನಮ್ಮ ಮಿತಿಯಲ್ಲಿ ಸುದ್ದಿಯನ್ನು ರಂಜನೀಯ ಮಾಡಲು ಹೋಗದಿರುವುದು. ಅದನ್ನು ನಾನು ವೃತ್ತಿ ಜೀವನದುದ್ದಕ್ಕೂ ಪಾಲಿಸುತ್ತ ಬಂದಿದ್ದೇನೆ. ಅದಕ್ಕಾಗಿ ಕೆಲ ಬಾರಿ ನೌಕರಿಯನ್ನೂ ಕಳೆದುಕೊಂಡಿದ್ದೇನೆ. ಆದರೂ, ನನ್ನ ಮಿತಿಯಲ್ಲಿ ಅದನ್ನು ಪಾಲಿಸುವಲ್ಲಿ ಹಿಂದೇಟು ಹಾಕಿಲ್ಲ. ಬಹಳಷ್ಟು ಸಾರಿ, ಅಂತಹ ವಿವೇಚನೆಯುಳ್ಳ ಬರವಣಿಗೆಗಾಗಿ ಹಿರಿಯ ಸಹೋದ್ಯೋಗಿಗಳಿಂದ ಬೈಸಿಕೊಂಡಾಗಿದೆ. ಬರೆದಿದ್ದನ್ನು ರಂಜನೀಯವಾಗುವಂತೆ ತಿದ್ದಿಕೊಡುವ ಅನಿವಾರ್ಯತೆಗೂ ಸಿಲುಕಿದ್ದಾಗಿದೆ. ಆದರೂ, ಮೊದಲ ಬರವಣಿಗೆ ರಂಜನೀಯವಾಗದಂತೆ ನೋಡಿಕೊಳ್ಳುವ ಪ್ರಯತ್ನ ಮಾತ್ರ ಬಿಟ್ಟಿಲ್ಲ.

ಶಶಿಕುಮಾರ್‌ ಬರೆದಂತೆ, ಮಾಧ್ಯಮಗಳು ಸುದ್ದಿಸೂಳೆಯ ಬೆನ್ನತ್ತಿ ಹೊರಟಿವೆ. ಅದರಲ್ಲಿ ಎರಡು ಮಾತಿಲ್ಲ. ಆದರೆ, ಹಾಗೆ ಬೆನ್ನು ಹತ್ತುವ ಭರದಲ್ಲಿ ಅವು ಎಲ್ಲರನ್ನೂ ಸೂಳೆಯರು ಎಂಬಂತೆ ನೋಡುತ್ತಿರುವುದು ನಿಜಕ್ಕೂ ಅಪಾಯಕಾರಿ. ಕಂಡ ಪ್ರತಿಯೊಂದು ಹೆಣ್ಣೂ ಬೆಲೆವೆಣ್ಣು ಇರಬಹುದೆ ಎಂಬ ಅನುಮಾನ ಖಂಡಿತ ಆರೋಗ್ಯಕರವಲ್ಲ. ಇದು ಇಡೀ ಸಮಾಜವನ್ನು ಹಾದಿ ತಪ್ಪಿಸುವ ಬೆಳವಣಿಗೆ. ಇದಕ್ಕೆ ಬೇಕಾದಷ್ಟು ಕಾರಣಗಳಿರಬಹುದು, ಬೇಕಾದಷ್ಟು ಅನಿವಾರ್ಯತೆಗಳಿರಬಹುದು. ಆದರೆ, ಅವ್ಯಾವೂ ಈ ದೃಷ್ಟಿಕೋನಕ್ಕೆ ಸಮರ್ಥನೆಗಳಲ್ಲ ಹಾಗೂ ಅಂತಹ ವಿವರಣೆಯನ್ನು ಒಪ್ಪುವುದು ಸಾಧ್ಯವೂ ಇಲ್ಲ.

ದುರಂತವೆಂದರೆ, ರಂಜನೀಯ ಸುದ್ದಿಗಳನ್ನು ಕೊಡದ ಮಾಧ್ಯಮಗಳು ವೀಕ್ಷಕರನ್ನು ಸೆಳೆಯುವಲ್ಲಿ, ಓದುಗರನ್ನು ಆಕರ್ಷಿಸುವಲ್ಲಿ ಹಿಂದೆ ಬೀಳುತ್ತಿವೆ. ಮಾಧ್ಯಮ ಕೂಡಾ ಒಂದು ವೃತ್ತಿ. ಅಲ್ಲಿ ಹಣ ಹಾಕಿ ಹಣ ಗಳಿಸಬೇಕಿದೆ. ಹೀಗಾಗಿ, ಹೆಚ್ಚು ಲಾಭ ಬರುವ ಸರಕನ್ನು ಮಾರಲು ಮಾಧ್ಯಮ ಸಂಸ್ಥೆಗಳು ಯತ್ನಿಸುತ್ತಿವೆ. ಇದು ತಪ್ಪಬೇಕೆಂದರೆ, ಓದುಗರಲ್ಲಿ ಹೆಚ್ಚಿನ ಜಾಗೃತಿ ಮೂಡಬೇಕು. ಜೊತೆಜೊತೆಗೆ ಮಾಧ್ಯಮಗಳಿಗೂ ಒಂದು ಮಟ್ಟದ ಅಂಕುಶ ಬೇಕೇಬೇಕು. ಎರಡೂ ಕಡೆಯಿಂದ ಈ ಕ್ರಿಯೆ ನಡೆದಾಗ ಮಾತ್ರ, ಮಾಧ್ಯಮ ಕೊಂಚ ಜವಾಬ್ದಾರಿ ಕಲಿಯಲು ಸಾಧ್ಯ. ಇಲ್ಲದಿದ್ದರೆ, ಬಲುಬೇಗ ಇಡೀ ಸಮಾಜದ ಸ್ವಾಸ್ಥ್ಯ ಕೆಟ್ಟುಹೋಗುತ್ತದೆ.

ಒಂದಂತೂ ನಿಜ. ಸಮಾಜದಲ್ಲಿ ಏನು ನಡೆಯುತ್ತಿದೆಯೋ, ಮಾಧ್ಯಮದಲ್ಲಿ ಅದೇ ಬರುತ್ತದೆ. ಸಮಾಜಕ್ಕೆ ಹೊರತಾದ ಯಾವುದನ್ನೂ ಮಾಧ್ಯಮ ನೀಡಲು ಹೋಗುವುದಿಲ್ಲ. ಸಮಾಜದಲ್ಲಿರುವ ಅನಾಚಾರ, ಕೊಳಕು, ದುಷ್ಟತನದ ಚಿತ್ರಣವೇ ಮಾಧ್ಯಮದಲ್ಲಿಯೂ ಕಾಣುತ್ತಿದೆ. ಆದರೆ, ಕೇವಲ ಈ ಚಿತ್ರಣ ಮಾತ್ರ ಕಾಣುವಂತಾಗಿರುವುದು ಅಪಾಯಕಾರಿ. ಈ ಕೊಳಚೆಯ ಹೊರತಾಗಿಯೂ ಸಮಾಜದಲ್ಲಿ ಉತ್ತಮವಾದ ವಿಷಯಗಳು ಬೇಕಾದಷ್ಟಿವೆ. ಅವನ್ನು ಪ್ರಸ್ತುತಪಡಿಸುವ ಜವಾಬ್ದಾರಿಯನ್ನು ಮಾಧ್ಯಮ ಬೆಳೆಸಿಕೊಳ್ಳಬೇಕು. ಅದೇ ರೀತಿ, ಅಂತಹ ವಿಷಯಗಳನ್ನು ಆಸ್ವಾದಿಸುವ ಅಭಿರುಚಿಯನ್ನು ಓದುಗ/ವೀಕ್ಷಕರೂ ಬೆಳೆಸಿಕೊಳ್ಳಬೇಕಿದೆ.

ಇಷ್ಟೆಲ್ಲ ಹೇಳಿದ ನಂತರವೂ, ಮಾಧ್ಯಮ ಇವತ್ತು ತುಳಿಯುತ್ತಿರುವ ಹಾದಿ ಸರಿಯಲ್ಲ ಎಂದು ಮತ್ತೆ ಒಪ್ಪಿಕೊಳ್ಳುತ್ತೇನೆ. ಇದಕ್ಕೊಂದು ಅಂಕುಶ ಇರಲಿ. ಸ್ವಯಂ ಸಂಯಮ ಸಾಧ್ಯವಿಲ್ಲ ಎಂಬುದು ಈಗಾಗಲೇ ಸಾಬೀತಾಗಿರುವುದರಿಂದ, ಕಾನೂನು ಅಂಕುಶ ಸ್ವಲ್ಪಮಟ್ಟಿಗೆ ಕೆಲಸ ಮಾಡಬಲ್ಲುದು. ಆದರೆ, ಸರ್ಕಾರಿ ಅಂಕುಶ ಅಭಿವ್ಯಕ್ತಿ ಸ್ವಾತಂತ್ರವನ್ನು ಕಿತ್ತುಕೊಳ್ಳದಿರಲಿ. ಗಾಳಿಪಟದ ಸೂತ್ರದಂತೆ, ಪಟವನ್ನು ಹಿಡಿದಿಟ್ಟಿರಲಿ. ಆದರೆ, ಅದರ ಹಾರಾಟಕ್ಕೆ ಧಕ್ಕೆ ತಾರದಿರಲಿ.

ಬಹುಶಃ ಶಶಿಕುಮಾರ್‌ ಹಾಗೂ ಅವರಂಥ ಸಾವಿರಾರು ಮಿತ್ರರ, ಸಹೃದಯಿ ಓದುಗ/ವೀಕ್ಷಕರ ಬಯಕೆಯೂ ಇದೇ ಇರಬಹುದು.
- ಚಾಮರಾಜ ಸವಡಿ

Thursday, August 7, 2008

ಮತ್ತದೇ ಖಾಲಿತನ, ಬೇಸರ



ಹಾಡುಗಳ ಸಿಡಿ ಇಟ್ಟಲ್ಲೇ ಇದೆ. ಒಂದೇ ಕ್ಲಿಕ್ಕಿಗೆ ಕಿಶೋರ್‌ ಹಾಡತೊಡಗುತ್ತಾನೆ. ಆದರೆ ಬೆರಳುಗಳು ಚಲಿಸುವುದಿಲ್ಲ.

ಕೈ ಚಾಚಿದರೆ ಕಗ್ಗ ಸಿಗುತ್ತದೆ. ಡಿವಿಜಿ ವೇದಾಂತ ಹೇಳುತ್ತಾರೆ. ಡಾಮ್ನಿಕ್‌ ಲ್ಯಾಪಿಯರ್‌ ಚೆಂದಗೆ ಕತೆ ಹೇಳುತ್ತಾನೆ. ತರುಣ್‌ ತೇಜ್‌ಪಾಲ್‌ ಇದ್ದಕ್ಕಿದ್ದಂತೆ ಖಾಲಿಯಾದ ಸ್ಥಿತಿ ವರ್ಣಿಸುತ್ತಾನೆ. ಭೈರಪ್ಪನವರು ಸಾರ್ಥ ಹೊರಡುತ್ತಾರೆ. ತಾವು ಖಾಲಿಯಾಗಿದ್ದೇವೆ ಎಂಬುದನ್ನು ಅನಂತಮೂರ್ತಿ ಋಜುವಾತು ಮಾಡುತ್ತಾರೆ. ಆದರೂ ಕೈ ಚಾಚುವುದಿಲ್ಲ.

ಜೇಬಲ್ಲೇ ಇದೆ ಕೀಲಿ. ಬೆರಳೊತ್ತಿದರೆ ಸ್ಕೂಟಿ ಶುರುವಾಗುತ್ತದೆ. ಎಂಟೂ ದಿಕ್ಕುಗಳಿಗೆ ಯಾತ್ರೆ ಹೊರಡಬಲ್ಲುದು. ಆದರೂ ಕೈ ಸುಮ್ಮನಿದೆ.


ಎರಡೇ ಬಟನ್ನಿಗೆ ಮೆಚ್ಚಿನ ಚಾನೆಲ್‌ ಪ್ರತ್ಯಕ್ಷವಾಗುತ್ತದೆ. ಗಂಟೆ ಒಂಬತ್ತಾಯಿತೆ? ಪ್ರೈಮ್‌ ನ್ಯೂಸ್‌ ಬರುತ್ತಿರುತ್ತವೆ. ಏಕೋ ಸುದ್ದಿಗಳು ಬೇಸರ ಹುಟ್ಟಿಸುತ್ತವೆ. ರಿಮೋಟ್‌ ಅಲ್ಲೇ ಕೂತಿದೆ. ಆಜ್ಞೆಗಾಗಿ ಕಾಯುವ ಸಾಕುನಾಯಿಯಂತೆ.


ಯಾವಾಗ ಬೇಕಾದರೂ ಮೊಳಗಬಲ್ಲ ಮೊಬೈಲ್‌ ಪಕ್ಕಕ್ಕಿದೆ, ಥೇಟ್‌ ಸಿಡಿಯಲು ಸಿದ್ಧವಾದ ಬಾಂಬ್‌ನಂತೆ. ಬೆರಳೊತ್ತಿದರೆ ಇಷ್ಟಪಡುವ ಹಲವಾರು ಮಿತ್ರರು ಅಂಕೆಗಳಾಗಿ ಕಾಯುತ್ತಿದ್ದಾರೆ. ಆದರೂ ಕೈ ಅತ್ತ ಸರಿಯುತ್ತಿಲ್ಲ.


ಹಳೆಯ ಫೊಟೊಗಳ ಆಲ್ಬಮ್ಮುಗಳಿವೆ. ಅಚ್ಚಾದ ರಾಶಿರಾಶಿ ಪತ್ರಿಕೆಗಳಿವೆ. ಅಚ್ಚಿಗೆ ಕೊಡದೇ ಹಾಗೇ ಇಟ್ಟುಕೊಂಡ ನೂರಾರು ಬರಹಗಳಿವೆ. ಕಣ್ಣು ಮುಚ್ಚಿದರೆ ಮನಸ್ಸು ಮೂವತ್ತು ವರ್ಷ ಹಿಂದಕ್ಕೂ ಹೋಗಬಲ್ಲುದು. ಎಳೆಎಳೆಯನ್ನೂ ಹೆಕ್ಕಿ ನೆನಪಿನ ಚಾದರ ನೇಯಬಲ್ಲುದು. ಯಾವುದೋ ಎಳೆ ಹಿಡಿದೆಳೆದರೆ ಹಾಡಾಗುತ್ತದೆ, ಪ್ರಬಂಧವಾಗುತ್ತದೆ, ಕತೆಯಾಗುತ್ತದೆ, ಕೊಂಚ ಶ್ರದ್ಧೆಯಿಂದ ಕೂತರೆ ಕವಿತೆಯೂ ಆಗುತ್ತದೆ. ಆದರೂ ಮನಸ್ಸು ಸುಮ್ಮನಿದೆ.


ಕಿಟಕಿಯಾಚೆಯ ಬಾಳೆ ಗಿಡವೂ ಸುಮ್ಮನಿದೆ. ಜೊತೆಗಿದ್ದು ನೆಮ್ಮದಿ ನೀಡುತ್ತಿದ್ದ ಪೆನ್ನೂ ಸುಮ್ಮನಿದೆ. ರಿಮೋಟ್‌ ಸುಮ್ಮನಿದೆ. ಗಾಡಿಯ ಇಗ್ನಿಷನ್‌ ಕೀ ಸುಮ್ಮನಿದೆ. ಮೊಬೈಲ್‌ ಅನ್ನು ನಾನೇ ಸುಮ್ಮನಾಗಿಸಿದ್ದೇನೆ. ಏಕೋ ಗದ್ದಲ ಮಾಡುವ ಮಕ್ಕಳೂ ಮಲಗಿದ್ದಾರೆ. ಮತ್ತೇನು ವಿಶೇಷ ಎನ್ನುವ ಮಡದಿಯೂ ಮಲಗಿದ್ದಾಳೆ. ಏನೂ ವಿಶೇಷ ಇಲ್ಲವೆನ್ನುವಂತೆ ಬೆಂಗಳೂರಿನ ಗದ್ದಲದ ಟ್ರಾಫಿಕ್ಕೂ ಮೌನವಾಗಿದೆ.


ಬೀಟ್‌ ಪೋಲೀಸನ ಸಿಳ್ಳೆಯೂ ಕೇಳುತ್ತಿಲ್ಲ. ಸಂಗಾತಿಗಾಗಿ ಬೊಗಳುವ ನಾಯಿಯೂ ಸುಮ್ಮನಿದೆ. ಇಷ್ಟೊತ್ತಿಗೆ ಹೋಗಬೇಕಿದ್ದ ಕರೆಂಟ್‌ ಕೂಡ ಏತಕ್ಕೋ ಕಾಯುವಂತೆ ಬೆಳಗುತ್ತಲೇ ಇದೆ. ಮೋಡ ಚೆದುರಿ ಅಚ್ಚರಿಯಿಂದ ಚಂದ್ರ ಕೂಡ ಹೊರಬಂದಿದ್ದಾನೆ.


ಮರೆಯದೇ ಗೇಟ್‌ ಬೀಗ ಹಾಕಿದ್ದೇನೆ. ಗಾಡಿ ಲಾಕ್‌ ಮಾಡಿದ್ದೇನೆ. ಚಾರ್ಜಿಂಗ್‌ ದೀಪಗಳನ್ನು ಪ್ಲಗ್ಗಿಗೆ ಸಿಕ್ಕಿಸಿದ್ದೇನೆ. ಬಾಗಿಲುಗಳನ್ನು ಭದ್ರವಾಗಿ ಮುಚ್ಚಿದ್ದೇನೆ. ನಿನ್ನೆಯ ಕೆಲಸಗಳು ಕರಾರುವಾಕ್ಕಾಗಿ ಮುಗಿದಿವೆ. ನಾಳೆ ಏನು ಮಾಡಬೇಕೆಂಬುದು ಇಂದೇ ಸ್ಪಷ್ಟವಾಗಿದೆ.


ಇವತ್ತು ಮಾಡುವುದು ಏನು?


ಮತ್ತದೇ ಬೇಸರ, ಖಾಲಿತನ, ಏಕಾಂತ !

- ಚಾಮರಾಜ ಸವಡಿ

ಕಿಟಕಿಯಾಚೆಯ ಚಿತ್ರ

ಸಣ್ಣಗೇ ಮಳೆ ಸುರಿಯುತ್ತಿದೆ.

ಕಂಪ್ಯೂಟರ್‌ ಇಟ್ಟಿರುವ ಕೋಣೆಯ ಕಿಟಕಿಯಾಚೆ, ಮಳೆ ಪಟ ಪಟ ಎಂದು ಬಾಳೆ ಎಲೆ ಮೇಲೆ ಬೀಳುವುದು ಕಾಣುತ್ತಿದೆ. ಪಕ್ಕದ ಕಟ್ಟಡದಲ್ಲಿರುವ ಅವಿವಾಹಿತ ಹುಡುಗರು ಯಾವಾಗಲೋ ನೆಟ್ಟಿದ್ದು. ಎಲೆ ಅಗಲಿಸಿ ಬೆಳೆಯುತ್ತಿದೆ. ಅದರ ನೆರಳಡಿ ಪುಟ್ಟ ಬಾವಿ. ಸಿಮೆಂಟ್‌ ರಿಂಗ್‌ಗಳನ್ನು ಪೇರಿಸಿ ಕಟ್ಟಿರುವ ನಗರದ ಬಾವಿ. ಅದಕ್ಕೊಂದು ಜಾಲರಿಯುಳ್ಳ ಮುಚ್ಚಳ. ಆಗೀಗ ಮುಚ್ಚಳ ತೆರೆದು, ಹಗ್ಗ ಇಳಿಬಿಟ್ಟು ನೀರೆತ್ತುತ್ತಾರೆ ಹುಡುಗರು. ಅವರು ಬಳಸಿದ ನೀರನ್ನು ಹೀರಿಕೊಂಡು ಬೆಳೆಯುತ್ತಿದೆ ಬಾಳೆ.


ಮಳೆ ಬೀಳುತ್ತಿರುವುದರಿಂದ ಹುಡುಗರಾರೂ ಕಾಣುತ್ತಿಲ್ಲ. ಬಾವಿಯ ಜಾಲರಿ ಬಾಗಿಲು ಮುಚ್ಚಿಕೊಂಡಿದೆ. ಬಾಳೆ ಗಿಡದ ಹಿಂದೆ ಮಳೆಯ ಮಂಕಿನಲ್ಲಿ ನಿಂತ ಎರಡಂತಸ್ತಿನ ಮನೆಗಳು. ಅದರಾಚೆ ಕಪ್ಪುಗಟ್ಟಿರುವ ಮೋಡ. ಮಧ್ಯಾಹ್ನದವರೆಗೆ ಬಿಸಿಲು ಚೆನ್ನಾಗಿತ್ತು. ಇದ್ದಕ್ಕಿದ್ದಂತೆ ಮೋಡಗಳು ಧಾವಿಸಿ ಬಂದವು. ನೋಡನೋಡುತ್ತಲೇ ಸಣ್ಣಗೆ ಶುರುವಾದ ಮಳೆ ಬಿಟ್ಟೇ ಇಲ್ಲ.

ಈಗ ಕಿಟಕಿಯಾಚೆಯ ಚಿತ್ರಣ ಪೂರ್ತಿ ಬದಲಾಗಿದೆ. ಬಿಸಿಲಿನಲ್ಲಿ ಮಂಕಾದಂತೆ ಕಾಣುತ್ತಿದ್ದ ಬಾಳೆಯ ಎಲೆಗಳಲ್ಲಿ ಈಗ ಹಸಿರಿನ ಹೊಸ ರಂಗು. ಎಲೆಗಳ ಮೇಲೆ ಮಳೆಯ ಮುತ್ತಿನ ಹನಿಗಳು. ತುಸು ಗಾಳಿ ಬೀಸಿದರೂ ಮುತ್ತುಗಳು ಉದುರುತ್ತವೆ. ಹೊಸ ಮುತ್ತುಗಳು ಬಂದು ಸೇರುತ್ತವೆ. ಬಾವಿಯ ಜಾಲರಿ ಮೇಲೆ ಬೀಳುವ ಹನಿಗಳು ಒಡೆದು ಅಲ್ಲೊಂದು ವಿಸ್ಮಯ ಲೋಕ ಸೃಷ್ಟಿಯಾಗಿದೆ.

ಕ್ರಮೇಣ ಮೋಡಗಳು ಚೆದುರಿದವು. ಬೆಳಕು ತೂರಿ ಬಂತು. ಬಾಳೆಗಿಡ ಮೊದಲಿಗಿಂತ ಹೆಚ್ಚು ಸ್ಪಷ್ಟವಾಗಿ ನಳನಳಿಸಿತು. ಅದರ ಎಲೆಗಳಲ್ಲೀಗ ಸಮಾಗಮದ ನಂತರದ ಹೆಣ್ಣಿನ ಸೊಗಸು. ಮಳೆಯಲ್ಲಿ ಮಿಂದು ಬಾವಿಯ ಜಾಲರಿ ಸ್ವಚ್ಛವಾಗಿದೆ. ಕಿಟಕಿಯಾಚೆಗಿನ ಚಿತ್ರ ಈಗ ಮೊದಲಿಗಿಂತ ಸ್ಪಷ್ಟ, ಸ್ಫುಟ.

ಇಡೀ ಕಿಟಕಿಯ ಚೌಕಟ್ಟೇ ಚಿತ್ರವೊಂದರ ಚೌಕಟ್ಟಿನಂತಾಗಿ, ಆಚೆಯ ದೃಶ್ಯಗಳು ಚಿತ್ರವಾಗಿವೆ. ಯಾರು ಬಿಡಿಸಿದರು ಇದನ್ನು? ಮಳೆಯೆ, ಮೋಡವೆ, ನೆಟ್ಟ ಬಾಳೆ ಗಿಡವೇ, ತಿಳಿ ಸಂಜೆಯ ಮುಂಚಿನ ರಂಗೇ? ಎಲ್ಲ ಕೈ ಜೋಡಿಸಿ ಬಿಡಿಸಿದ ಚಿತ್ರಕ್ಕೆ ಕೋಣೆಯ ಕಿಟಕಿಯ ಚೌಕಟ್ಟು. ಅದರ ಹಿಂದೆ ನಾನು. ಹಣ ನೀಡದ, ಹಣ ನೀಡಿದರೂ ಸಿಗದ ಅಪೂರ್ವ ಚಿತ್ರವೊಂದನ್ನು ನೋಡುತ್ತ ನೋಡುತ್ತ ಅದರಲ್ಲೇ ಮುಳುಗಿಹೋದೆ.

ಥ್ಯಾಂಕ್ಸ್‌ ಬದುಕೇ. ಪಕ್ಕದ ಮನೆಯಲ್ಲಿ ಒಂದಿಷ್ಟು ಜಾಗ ಉಳಿಸಿದ್ದಕ್ಕೆ, ಅಲ್ಲಿ ನೆಲೆಸಲು ಬಂದ ಹುಡುಗರಲ್ಲಿ ವೃಕ್ಷಪ್ರೀತಿ ಹುಟ್ಟಿಸಿದ್ದಕ್ಕೆ, ಆವರಣದಲ್ಲೊಂದು ಬಾವಿ ತೋಡಿಸಿದ್ದಕ್ಕೆ, ಮಧ್ಯಾಹ್ನ ಬಂದ ಅಕಾಲಿಕ ಮಳೆಗೆ, ನೆರಳು-ಬೆಳಕಿನಾಟ ಆಡಿದ ಸೂರ್ಯನಿಗೆ, ನಾನಿರುವ ಮನೆಯ ಕಿಟಕಿಗೆ,

ಹಾಗೂ ಅದರ ಮೂಲಕ ಅಪೂರ್ವ ಚಿತ್ರಣ ನೋಡಬಲ್ಲ ಮನಃಸ್ಥಿತಿಯನ್ನು ನನ್ನಲ್ಲಿ ಉಳಿಸಿದ್ದಕ್ಕೆ.

- ಚಾಮರಾಜ ಸವಡಿ

Saturday, August 2, 2008

ಮುಚ್ಚಳವಿಲ್ಲದ ಪೆನ್ನು

ತುಂಬ ದಿನವಾಗಿತ್ತು ಪೆನ್ನು ಹೊರ ತೆಗೆದು ಬರೆಯಲು ಕೂತು.

ಹಳೆಯ ಪೆನ್ನು. ಅಂದರೆ, ಬಳಸದೇ ತುಂಬ ದಿನವಾಗಿತ್ತು. ಮಸಿ ಒಣಗಿದೆಯೇ ಎಂಬ ಅನುಮಾನ ಕಾಡಿದರೂ, ಪಕ್ಕದಲ್ಲೇ ಇದ್ದ ಪತ್ರಿಕೆಯೊಂದರ ಜಾಹೀರಾತಿನ ಮೇಲೆ ಗೀಚಿ ನೋಡಿದೆ. ಮೊದಲೊಂದಿಷ್ಟು ಉದ್ದ ಮಸಿ ಕಾರದೇ ಎಳೆದುಕೊಂಡು ಹೋದ ಪೆನ್ನು, ನಂತರ ಚೆಂದನೆಯ ಡೊಂಕು ಗೆರೆ ಕೊರೆಯಿತು. ಪರವಾಗಿಲ್ಲ, ಬದುಕಿದೆ ಎಂದು ಪೆನ್ನನ್ನು ಕೈಲಿ ಹಿಡಿದುಕೊಂಡು ಬರೆಯಲೆಂದೇ ತಂದುಕೊಂಡಿದ್ದ ಎ-೪ ಗಾತ್ರದ ಸುರುಳಿ ಕಟ್ಟಿನ ಹಾಳೆ ಪುಸ್ತಕ ತೆರೆದೆ.

ಮನಸ್ಸು ಅರೆಕ್ಷಣ ಎಲ್ಲೋ ಸಿಕ್ಕಿ ಹಾಕಿಕೊಂಡಿತು.

ತುಂಬ ದಿನಗಳ ಹಿಂದೆ, ಅಂದರೆ, ಪತ್ರಿಕಾ ಕಚೇರಿಯಲ್ಲಿ ಕೈಬರಹದ ಬರವಣಿಗೆ ನಿಷೇಧಿಸುವುದಕ್ಕೆ ಮುಂಚೆ, ನಿತ್ಯ ಹೀಗೇ ಬರೆಯುತ್ತಿದ್ದೆ. ಆಗ ಪೆನ್ನೆತ್ತಿಕೊಂಡರೆ ವರದಿಗಳು ಸರಾಗವಾಗಿ ಹರಿಯುತ್ತಿದ್ದವು. ಬರೆದಿದ್ದನ್ನು ಓದಿ, ಒಂದಿಷ್ಟು ಕಾಗುಣಿತ ತಪ್ಪುಗಳನ್ನು ಅಲ್ಲೇ ತಿದ್ದಿ, ಫೋಟೊಗಳ ಹಿಂದೆ ವಿವರ ಹಾಗೂ ವರದಿ ಶೀರ್ಷಿಕೆ ಬರೆದು, ಕ್ಲಿಪ್‌ನಲ್ಲಿ ಬಂಧಿಸಿ, ಲಕೋಟೆಯಲ್ಲಿಟ್ಟು ಬಸ್‌ ಡ್ರೈವರ್‌ ಮೂಲಕ ಕಳಿಸುತ್ತಿದ್ದೆ. ಮರುದಿನ ಬೆಳಗಿನ ನಿದ್ದೆಗಣ್ಣಲ್ಲಿ ಬಾಗಿಲ ಮುಂದೆ ಬಿದ್ದ ಪತ್ರಿಕೆ ಎತ್ತಿಕೊಂಡಾಗ, ನಿನ್ನೆಯ ಕೈಬರಹ ವರದಿ ಅಚ್ಚುಕಟ್ಟಾಗಿ ಅಚ್ಚಾಗಿ ಬಂದಿರುತ್ತಿತ್ತು. ಓಹ್‌, ನಿದ್ದೆಗಣ್ಣಿನಲ್ಲಿಯೂ ಅಪಾರ ಸಂತಸ.

ಅದಾದ ನಂತರ, ಬದುಕು ಊರುಗಳನ್ನು ಸುತ್ತಿಸಿತು. ಹಲವಾರು ಪತ್ರಿಕಾ ಕಚೇರಿಗಳ ಮೆಟ್ಟಿಲೇರಿ ಇಳಿಸಿತು. ಆದರೆ, ಪೆನ್ನು ಯಾವತ್ತೂ ಜೇಬಿನಿಂದ ಕದಲಿರಲಿಲ್ಲ. ಇದೇ ಪೆನ್ನಿನ ಮೂಲಕ ಕೆಲಸಕ್ಕೆ ಅರ್ಜಿ ಬರೆದಿದ್ದೆ. ನೌಕರಿ ದಕ್ಕಿದ್ದಕ್ಕೆ ಧನ್ಯವಾದ ಬರೆದಿದ್ದೆ. ಮುಂದೆ ವರ್ಷಗಟ್ಟಲೇ ವರದಿ/ಲೇಖನಗಳನ್ನು ಬರೆದೆ. ರಾಜೀನಾಮೆಗಳನ್ನೂ ಬರೆದಿದ್ದೇನೆ. ಎಷ್ಟೊಂದು ಬರೆದರೂ ಪೆನ್ನು ಎಂದೂ ಬಸವಳಿಯಲಿಲ್ಲ.

ಆದರೆ, ಕಂಪ್ಯೂಟರ್‌ ಎಂಬ ಯಂತ್ರ ಬಂದ ಕೂಡಲೇ ಅದರ ಮಸಿಯೇ ಆರಿದಂತಾಯಿತು.

’ಮುಂದಿನ ತಿಂಗಳ ಒಂದನೇ ತಾರೀಖಿನಿಂದ, ಫ್ಯಾಕ್ಸ್‌ ಅಥವಾ ಕೊರಿಯರ್‌ ಮೂಲಕ ಕಳಿಸುವ ಕೈಬರಹದ ವರದಿಗಳನ್ನು ಅಚ್ಚು ಹಾಕುವುದಿಲ್ಲ. ಏನಿದ್ದರೂ ಕಂಪ್ಯೂಟರ್‌ನಲ್ಲೇ ಟೈಪ್‌ ಮಾಡಿ ಮೋಡೆಮ್‌ ಮೂಲಕ ಕಳಿಸಬೇಕು’ ಎಂಬ ಪತ್ರ ಸಂಪಾದಕರಿಂದ ಬಂದಾಗ, ನನಗಿಂತ ಪೆನ್ನಿಗೇ ಹೆಚ್ಚು ಬೇಸರವಾಗಿತ್ತು. ಮೊದಲ ಬಾರಿ ಕಂಪ್ಯೂಟರ್‌ ಮುಂದೆ ಕೂತು, ಕೀಲಿಮಣೆಗಳನ್ನು ತೊಡರುತ್ತ ಒತ್ತುವಾಗ, ಪೆನ್ನು ಅಪನಂಬಿಕೆಯಿಂದ ನೋಡಿತ್ತು.

ಮೊದಮೊದಲು ತುಂಬ ಬೇಸರವಾಗಿತ್ತು. ಆದರೆ, ದಿನಗಳು ಬಲುಬೇಗ ಬದಲಾದವು. ನೋಟ್ಸ್‌ ತೆಗೆದುಕೊಳ್ಳುವಾಗ ಹೊರತುಪಡಿಸಿ, ಇತರ ಸಮಯದಲ್ಲಿ ಜೇಬಿನಿಂದ ಇಳಿಯುವ ಅವಕಾಶ ಪೆನ್ನಿಗೆ ಬರಲೇ ಇಲ್ಲ. ಮೊದಮೊದಲು ಕಾಡಿದ್ದ ಹಳಹಳಿ ನಂತರ ರೂಢಿಯಾಯಿತು. ಕೀಬೋರ್ಡ್‌ ಸರಾಗವಾಯಿತು. ಮನಸ್ಸಿನಲ್ಲಿ ವಿಚಾರಗಳು ಮೂಡುವ ವೇಗದಲ್ಲೇ ಬೆರಳುಗಳೂ ಕೀಬೋರ್ಡ್‌ ಮೇಲೆ ಹರಿದಾಡುವುದು ರೂಢಿಯಾಗಿ, ಪೆನ್ನು ಕೇವಲ ಅಲಂಕಾರಿಕ ವಸ್ತುವಾಗಿಬಿಟ್ಟಿತು.

ಆದರೂ, ಅದರ ಸಂಗ ತೊರೆಯಲಿಲ್ಲ.

ಅದು ಜೇಬಿನಲ್ಲಿದ್ದರೆ ಎಂಥದೋ ನೆಮ್ಮದಿ. ತುಂಬ ಬೇಸರವಾದಾಗ, ಅದನ್ನು ಕೈಗೆ ತೆಗೆದುಕೊಂಡು, ಕ್ಯಾಪ್‌ ತೆರೆದು, ಬೆರಳುಗಳ ನಡುವೆ ತಿರುಗಿಸುತ್ತ ಕೂತರೆ ಎಂಥದೋ ಸಮಾಧಾನ. ವಿಚಾರಗಳು ತಾನೇ ತಾನಾಗಿ ಬರುತ್ತವೆ. ಹೊಸ ವಿಚಾರಗಳು ಮೂಡುತ್ತವೆ. ಬರೆಯಬೇಕೆಂದುಕೊಂಡಿದ್ದು ಕೈಬೆರಳಿನ ಮೂಲಕ ಇಳಿದು, ಇನ್ನೇನು ಪೆನ್ನಿನ ಮೂಲಕ ಮಸಿಯಾಗಿ ಹರಿದು ಅಕ್ಷರಗಳಾಗಿಬಿಡುತ್ತವೆ ಎನ್ನುವಂತೆ ಉಕ್ಕುತ್ತವೆ. ಆದರೆ, ಭಾವನೆ ಉಕ್ಕುತ್ತಲೇ ಪೆನ್ನು ಪಕ್ಕಕ್ಕಿಟ್ಟ ಕೈಗಳು ಕಂಪ್ಯೂಟರ್‌ ಕೀಬೋರ್ಡ್‌‌ನ ಮೇಲೆ ಹರಿದಾಡುತ್ತವೆ. ಪೆನ್ನು ಅಸಹಾಯಕತೆಯಿಂದ, ಅವಮಾನದಿಂದ ನೋಡುತ್ತಿರುವಂತೆ, ಚೆಂದನೆಯ ಅಕ್ಷರಗಳು ಮಾನಿಟರ್‌ ಮೇಲೆ ಮೂಡತೊಡಗುತ್ತವೆ. ಕ್ಯಾಪ್‌ ಇಲ್ಲದ ಬೋಳು ಪೆನ್ನನ್ನು ನಾನೂ ಮರೆತುಬಿಡುತ್ತೇನೆ.

ವರ್ಷಗಟ್ಟಲೇ ಇದು ನಡೆದುಕೊಂಡು ಬಂದಿತ್ತು.

ಇವತ್ತು ಏಕೋ ಮನಸ್ಸು ಖಾಲಿ ಖಾಲಿ. ವೀಕ್‌ ಆಫ್‌ ಇದ್ದುದರಿಂದ, ನಿತ್ಯದ ವೃತ್ತಿ ವಾತಾವರಣ ಇಲ್ಲದೇ ಬೇಸರವಾಗಿದೆಯೇನೋ ಅಂದುಕೊಂಡು ಸ್ವಲ್ಪ ಹೊತ್ತು ಸುಮ್ಮನೇ ಅದು ಇದು ಓದುತ್ತ ಕೂತೆ. ಆದರೂ ಸಮಾಧಾನವಾಗಲಿಲ್ಲ. ಕೀ ಬೋರ್ಡ್‌ ಪಕ್ಕಕ್ಕಿಟ್ಟ ಪೆನ್ನು ಕರೆದಂತಾಯಿತು. ಎತ್ತಿಕೋ ಎಂದಂತಾಯಿತು. ಎತ್ತಿಕೊಂಡೆ. ಮನಸ್ಸಿಗೆ ಹಾಯ್‌ ಅನ್ನಿಸಿತು. ಸ್ವಲ್ಪ ಹೊತ್ತು ಅದನ್ನೇ ತಿರುಗಿಸುತ್ತ ಕೂತೆ. ಭಾವನೆಗಳು ಉಕ್ಕಿದವು. ಭೋರ್ಗರೆದವು. ಪೆನ್ನನ್ನು ಪಕ್ಕಕ್ಕಿಟ್ಟು ಕಂಪ್ಯೂಟರ್‌ ಆನ್‌ ಮಾಡಿ ನೋಡುತ್ತೇನೆ:

ಪೆನ್‌ ಮುಖದಲ್ಲಿ ನೋವಿನ ಛಾಯೆ !

ಇಲ್ಲ ಮಿತ್ರ, ಇವತ್ತೇನಿದ್ದರೂ ನಿನ್ನ ಬಗ್ಗೆಯೇ ಬರೆಯುತ್ತೇನೆ ಎಂದುಕೊಂಡೆ. ಕೀ ಬೋರ್ಡ್‌ ಸಹಕರಿಸಿತು. ಬೆರಳುಗಳು ನಲಿದಾಡಿದವು. ಬರೆದಾದ ಮೇಲೆ, ತೃಪ್ತಿಯಿಂದ ಪೆನ್‌ ಕಡೆ ನೋಡಿದೆ.

ಅದರ ಮುಖದ ಮೇಲೂ ತೃಪ್ತಿಯ ಬೆಳಕು !

- ಚಾಮರಾಜ ಸವಡಿ

Wednesday, July 23, 2008

ಬಾರೋ ಸಾಧನಕೇರಿಗೆ...


ಅದೊಂದು ಸುಂದರ ಕೆರೆ.


ಮುಂಗಾರಿಗೆ ಭರ್ತಿಯಾಗಿದೆ. ನಟ್ಟನಡುವೆ ಪುಟ್ಟ ನಡುಗಡ್ಡೆ. ಒಂದಿಷ್ಟು ಮರಗಿಡಗಳು. ಹೂ ಚಿಗುರು. ಶುಭ್ರ ಹಿಮಕ್ಕೆ ಜೀವ ಮೂಡಿದಂತಿರುವ ಕೊಕ್ಕರೆಗಳು. ಬಟ್ಟಲಂತಿರುವ ಕೆರೆಯನ್ನು ಕದಡಿ ಧಿಗ್ಗೆಂದು ಜಿಗಿದು ಬೀಳುವ ಮೀನುಗಳು. ತಿಳಿಗಾಳಿ. ಮೆಲು ಅಲೆಗಳು.

ಅದು ಧಾರವಾಡದ ಸಾಧನಕೇರಿಯ ಕೆರೆ.

ಅದರ ಎದುರೇ ಭವ್ಯ ಬೇಂದ್ರೆ ಭವನ. ಪಕ್ಕದಲ್ಲಿ ಅವರು ಬಾಳಿ ಬದುಕಿ ಸಾಧನೆಗೈದ ಮನೆ. ಸುತ್ತಲೂ ಇವತ್ತಿಗೂ ನಿಶ್ಯಬ್ದವನ್ನೇ ಹ್ದೊದಿರುವಂತಹ ವಸತಿ ಪ್ರದೇಶ. ಕೆಟ್ಟು ಹೋಗಿರುವ ರಸ್ತೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ತೇಕುತ್ತ ಹೋಗುವ ಸದ್ದು ಬಿಟ್ಟರೆ, ಕೇಳಿ ಬರುವ ಕಲರವ ಕೆರೆ ದಂಡೆಯಲ್ಲಿರುವ ಪ್ರಾಥಮಿಕ ಶಾಲೆಯ ಮಕ್ಕಳದ್ದು ಮಾತ್ರ.

ಧಾರವಾಡದ ಪೂರ್ವ ಬಯಲೊ ಬಯಲು

ಅಪೂರ್ವ‘ಕಲ್ಯಾಣ’ದಾಚೆಗಿದೆ ಭಾಗ್ಯನಗರಿ,

ಕರೆನಾಡು ಎರೆನಾಡು, ನಡುವೆ ಅಂದದ ಕಾಡು

ಗಂಡೆರಳೆ ಸುತ್ತಿರುವ ಹಿಂಡು ಚಿಗರಿ


ಪಡುವಣಕೆ ಇದೆ ಘಟ್ಟ, ಅಲಿ ಕಾನಿಗೆ ಪಟ್ಟ,

ಬೆಟ್ಟ ಇಳಿದರೆ ಉಳಿವೆ ಆಚೆ ಕಡಲು,

ಅಂಚು ಮಿರಿಮಿರಿ ಮಿಂಚು ಮೀನ ಮುತ್ತಿನ ಸಂಚು

ಘಟ್ಟ ತಪ್ಪಲು ಭೂಮಿತಾಯಿ-ಒಡಲು


ತಲೆಯಲ್ಲಿ ಬೆಳುಗಾವಿ, ಬಲಕೆ ಬೀಜಾಪೂರು,

ಎಡಕೆ ಕನ್ನಡ ಕರಾವಳಿಯ ತೋಳು,

ಮೈ ಎಲ್ಲ ಮೈಸೂರು ಇನ್ನೂರು ಮುನ್ನೂರು

ನೀಲಗಿರಿ ಪೀಠದಲಿ ನಮ್ಮ ಬಾಳು


(‘ನೆನವು’ ಇದೊಂದು ಅಪೂರ್ಣ ಕವಿತೆ)


ಹಾಗಂತ ಒಂದು ಕಡೆ ಬರೆದಿರುವ ಬೇಂದ್ರೆ ಅವರ ಕಾವ್ಯಕ್ಕೆ ಜೀವ ತುಂಬಿರುವುದು ಧಾರವಾಡ ಹಾಗೂ ಸಾಧನಕೇರಿ ಪ್ರದೇಶ. ಬೆಳ್ಳಂಬೆಳಿಗ್ಗೆ, ಸುರಿಯುತ್ತಿರುವ ಜಿನುಗು ಮಳೆಯಲ್ಲಿ, ಸುಮ್ಮನೇ ನಡೆಯುತ್ತ ಹೋದರೆ ಸಾಧನಕೇರಿ ದೊಡ್ಡ ಹಳ್ಳಿಯಂತೆ, ರಸ್ತೆಯ ಪಕ್ಕ ಕಟ್ಟಿ ಮರೆತು ಹೋದ ಕಟ್ಟಡಗಳ ಪ್ರದೇಶದಂತೆ ಕಾಣುತ್ತದೆ. ಕೆಟ್ಟ ರಸ್ತೆಯನ್ನು ತುಂಬಿರುವ ಹೊಂಡಗಳಲ್ಲಿ ಚಹದಂತಹ ಮಳೆ ನೀರು. ಸಾಲು ಮರಗಳಿಂದ ತೊಟ್ಟಿಕ್ಕುತ್ತಿರುವ ಹನಿಗಳು. ಮಂಜಿನ ಮಳೆಯಲ್ಲಿ ಮಸಕಾಗಿ ಕಾಣುವ ಬೆಳ್ಳಗಿನ ಬೇಂದ್ರೆಭವನ.


ಆ ಊರು ಈ ಊರು ಯಾ ಊರು ಆದರೂ

ತವರೂರು ತಮತಮಗೆ ತಾನೆ ಚಂದ,

ಕಟ್ಟಿ ಕೂಡುವುದಲ್ಲ ಬಿಚ್ಚಿ ಬಿಡುವುದು ಅಲ್ಲ

ಹೊಕ್ಕಳಿನ ಹುರಿಯಂಥ ಭಾವಬಂಧ


ಧಾರವಾಡದ ಶಿಲೆಯು ನಮ್ಮ ಶಾಲಿಗ್ರಾಮ

ಮಾವುಮಲ್ಲಿಗೆ ಚಿಗುರು ನಮ್ಮ ತುಳಸಿ

ಮುತ್ತುರುಳಬಹುದೆಂದು ದಿಕ್‌ನಾಗ ಜಡೆಯುವರೆ?

ಇಲ್ಲಿ ನಾಗರ ಖಂಡ ಸುತ್ತ ಬಳಸಿ


ಗುಪ್ತಗಾಮಿನಿ ನಮ್ಮ ಶಾಲ್ಮಲೆಯು ಸೆಲೆ

ಆಳಸಂಜೆ-ನಂಜನು ತೊಳೆಯೆ ಧುಮುಕುತಿಹಳು

ಏಕಾಂಗಿ, ನಿಃಸಂಗಿ, ಗಂಗಾವಳಿಯ ಭಂಗಿ

ಕನ್ನಡವ ಒಪ್ಪಿಡಿಯಲಮುಕುತಿಹಳು


ಹೊತ್ತೇರುತ್ತಿದ್ದಂತೆ, ಸೂರ್ಯ ಕಾಣದಿದ್ದರೂ ಮಕ್ಕಳನ್ನು ಹೊತ್ತ ಆಟೊಗಳು ಸಾಧನಕೇರಿಯ ಬೇಂದ್ರೆ ಮನೆ ಎದುರಿನ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬಂದು ನಿಲ್ಲುತ್ತವೆ. ಜೀವಂತಿಕೆ ತುಂಬಿ ತುಳುಕುವ ಮಕ್ಕಳು ಕೂಗುತ್ತ ಕೆಳಗಿಳಿಯುತ್ತವೆ. ಎದುರು ಬೇಂದ್ರೆ ಮನೆ, ಹಿಂದೆ ಕೆರೆ, ನಡುವೆ ಇರುವ ಈ ಶಾಲೆ ಸಾವಿರಾರು ನೆನಪುಗಳನ್ನು ತುಂಬಿಕೊಂಡಿದೆ. ಇಲ್ಲಿಯೇ ಒಂದು ಕಾಲದಲ್ಲಿ ಬೇಂದ್ರೆ ಓಡಾಡಿದ್ದರು. ಕಟ್ಟೆಯ ಮೇಲೆ ಕೂತು ಕವಿತೆ ಓದಿದ್ದರು. ಅರ್ಧಮರ್ಧ ಮಟ್ಟದ ಕವಿಗಳನ್ನು ಟೀಕಿಸಿದ್ದರು. ಜಗಳ ಕಾಯ್ದಿದ್ದರು. ಪ್ರೀತಿ ತೋರಿದ್ದರು. ಬೇರೆಯವರ ಉತ್ತಮ ರಚನೆಗಳಿಗೆ ತಲೆದೂಗಿ ಮೈಮರೆತಿದ್ದರು.


ಇಲ್ಲೀಗ ಮಕ್ಕಳು ಆಡುತ್ತಿವೆ. ‘ಜೈಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ’ ಪ್ರಾರ್ಥನೆ ಕೇಳುತ್ತಿದೆ. ಕೆರೆಯ ಆಚೆ ದಡದಲ್ಲಿರುವ ಪೊಲೀಸ್ ತರಬೇತಿ ಕೇಂದ್ರ ಹಾಗೂ ಪೊಲೀಸ್ ಕೇಂದ್ರ ಕಚೇರಿಗಳಿಂದ ಉಕ್ಕಿಬರುವ ಕೊಚ್ಚೆ ನೀರು ಸದ್ದಿಲ್ಲದೇ ಕೆರೆಯ ಒಡಲನ್ನು ವಿಷಗೊಳಿಸುತ್ತಿರುವುದು ದಡದಲ್ಲಿ ಆಡುತ್ತಿರುವ ಪೋರ-ಪೋರಿಯರಿಗೆ ಗೊತ್ತಿಲ್ಲ. ಜೋರು ಮಳೆಗೆ ತುಂಬಿರುವ ಕೆರೆಗೆ ಇನ್ನು ನಾಲ್ಕು ತಿಂಗಳಲ್ಲಿ ತನ್ನೊಡಲಿನ ತುಂಬ ಕೊಳಚೆ ತುಂಬುತ್ತದೆ ಎಂಬ ಸತ್ಯ ತಿಳಿದಿದ್ದರೂ ಅದು ಮಕ್ಕಳಿಗೆ ಹೇಳುವುದಿಲ್ಲ.


ಒಬ್ಬ ಡಾ. ಎಂ.ಎಂ. ಕಲಬುರ್ಗಿ ಸರ್ ಮಾತ್ರ ಮಿಡುಕುತ್ತಾರೆ. ‘ಬಾರೋ ಸಾಧನಕೇರಿಗೆ ಪ್ರಾಧಿಕಾರ ರಚಿಸಿ ಇಡೀ ಇನ್ನೂರು ಎಕರೆ ಪ್ರದೇಶವನ್ನು ವಶಕ್ಕೆ ತೆಗೆದುಕೊಂಡು ಅಭಿವೃದ್ಧಿಪಡಿಸಬೇಕು. ಕನ್ನಡದ ಅಷ್ಟೇ ಏಕೆ, ಜಗತ್ತಿನ ಅತಿ ಶ್ರೇಷ್ಠ ಕವಿಯೊಬ್ಬನಿಗೆ ಸ್ಫೂರ್ತಿ ನೀಡಿದ ನೆಲವನ್ನು ಸಾಧ್ಯವಾದಷ್ಟೂ ಮಟ್ಟಿಗೆ ಅದಿರುವಂತೆ ಉಳಿಸುವ ಆಸೆ ಇದೆ. ಕೆರೆ ಮತ್ತು ಬೇಂದ್ರೆ ಭವನಗಳೆರಡೂ ಸರ್ಕಾರದ ಆಸ್ತಿಗಳೇ. ಉಳಿದಿದ್ದು ಸುತ್ತಲಿನ ರಸ್ತೆಗಳನ್ನು ಅಭಿವೃದ್ಧಿಪಡಿಸುವುದು. ಕೆರೆಯ ಹೂಳೆತ್ತಿಸಿ, ಕೊಚ್ಚೆ ಅಲ್ಲಿ ಬಾರದಂತೆ ತಡೆ ಒಡ್ಡಿ, ದಂಡೆಯುದ್ದಕ್ಕೂ ಕೂಡಲು ಆಸನಗಳು ಹಾಗೂ ಒಂದು ಭಾಗದಲ್ಲಿ ಸಂಗೀತ ಕಚೇರಿಗೆ ವೇದಿಕೆ ಏರ್ಪಡಿಸಬೇಕು. ಕೆರೆಯಲ್ಲಿ ದೋಣಿಗಳ್ದಿದರೆ ಜನ ಬರುತ್ತಾರೆ. ಬೇಂದ್ರೆ ಜೀವನ ಸಂದೇಶ ಸಾರುವ ವಾತಾವರಣವನ್ನು ಸೃಷ್ಟಿಸಿದರೆ, ಧಾರವಾಡ ಅಕ್ಷರ ಯಾತ್ರಾಸ್ಥಳವಾಗುತ್ತದೆ’ ಎಂದು ಹಂಬಲಿಸುತ್ತಾರೆ.


ದ.ರಾ. ಬೇಂದ್ರೆ ರಾಷ್ಟ್ರೀಯ ಟ್ರಸ್ಟ್‌ನ ಅಧ್ಯಕ್ಷರಾಗಿರುವ ಡಾ. ಎಂ.ಎಂ. ಕಲಬುರ್ಗಿ ಇಂಥದೊಂದು ಯೋಜನೆ ತಯಾರಿಸಿಕೊಂಡು ಬೆಂಗಳೂರಿಗೆ ಹಲವಾರು ಬಾರಿ ರೈಲೇರಿದ್ದಾರೆ. ಆದರೆ ಬೆಂಗಳೂರಿನ ಆಯಕಟ್ಟಿನ ಜಾಗಗಳಲ್ಲಿ ಕೂತಿರುವ ಅಧಿಕಾರಿಗಳಿಗೆ ಸೊನಾಲಿ ಬೇಂದ್ರೆ ಗೊತ್ತೇ ಹೊರತು ದ.ರಾ. ಬೇಂದ್ರೆ ಅಲ್ಲ. ಕನ್ನಡವೇ ಸರಿಯಾಗಿ ಗೊತ್ತಿರದವರಿಗೆ ಮುಗಿಲ ಮಾರಿ, ರಾಗ ರತಿ, ನೀ ಹಿಂಗ ನೋಡಬ್ಯಾಡ, ಪಾತರಗಿತ್ತಿ ಪಕ್ಕ, ಯಾರಿಗೂ ಹೇಳೋಣು ಬ್ಯಾಡ ಎಂಬ ಪದ ಸಂಜೀವಿನಿ ಗೊತ್ತಾಗುವುದಾದರೂ ಹೇಗೆ?


ಹೀಗಾಗಿ ಯೋಜನೆಗೆ ಸರ್ಕಾರದ ತರಹೇವಾರಿ ನೆವಗಳು. ಇನ್ನು ಧಾರವಾಡಿಗರಿಗೆ ಬೇಂದ್ರೆ ಬಗ್ಗೆ ಇರುವಷ್ಟೇ ಅಭಿಮಾನ ನಿಷ್ಕ್ರಿಯತೆ ಬಗ್ಗೆಯೂ ಇರುವುದರಿಂದ ಅವರೂ ಇತ್ತ ನೋಡುತ್ತಿಲ್ಲ. ‘ಇದೇ ಬೇಂದ್ರೆ ಬೇರೆಡೆ ಹುಟ್ಟಿದ್ದರೆ ರಾಷ್ಟ್ರೀಯ ಹೀರೋ ಆಗಿರುತ್ತಿದ್ದರು’ ಎಂದು ಕತೆ ಹೇಳುತ್ತ ಅವರು ಆರಾಮವಾಗಿದ್ದಾರೆ. ಇನ್ನು ಬೇಂದ್ರೆ ಅವರ ಮಗ ವಾಮನ ಬೇಂದ್ರೆ ಕಾಪಿರೈಟ್ ನೆವದಲ್ಲಿ ದ.ರಾ. ಬೇಂದ್ರೆಯವರನ್ನು ಕಟ್ಟಿಟ್ಟಿದ್ದಾರೆ. ಹೀಗಾಗಿ ಬೇಂದ್ರೆ ಗೀತೆಗಳನ್ನು ಹಾಡಿ ಕ್ಯಾಸೆಟ್-ಸಿಡಿ ಮಾಡಲು ಗಾಯಕರು ಅಳುಕುತ್ತಾರೆ.


ಆದರೂ ಸಾಧನಕೇರಿಗೆ ತನ್ನದೇ ಆದ ಕಳೆ ಇದೆ. ಕೊಳೆ ಇದೆ. ಇಲ್ಲಿಗೆ ಬರುವ ಬಹುತೇಕ ಜನರು ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರನ್ನು ಹುಡುಕಿಕೊಂಡು ಬರುತ್ತಾರೆ. ಆದರೆ ಅವರಿಗೆ ಎದುರಾಗುವುದು ವಾಮನ ಬೇಂದ್ರೆ. ನಿರಾಶರಾದವರಿಗೆ ಪಕ್ಕದಲ್ಲಿಯೇ ಇರುವ ಬೇಂದ್ರೆ ಭವನ ಸ್ವಲ್ಪ ಮಟ್ಟಿಗೆ ಸಂತೈಸುತ್ತದೆ. ಎದುರಿಗೆ ಇರುವ ಶಾಲೆ, ಅದರಾಚೆಗೆ ಇರುವ ಕೆರೆಗಳು ಇನ್ನಷ್ಟು ಸಂತೈಸುತ್ತವೆ. ಕೆಟ್ಟ ರಸ್ತೆ ದಾಟಿ ಕೆರೆಯ ಅಂಚಿಗೆ ನಿಂತರೆ, ಆಗ ಸಂಜೆಯಾಗಿದ್ದರೆ, ‘ಮುಗಿಲ ಮಾರಿಗೆ ರಾಗ ರತಿಯ ನಂಜು’ ಏರಿರುವುದು ಕಂಡರೂ ಕಾಣಬಹುದು.
ಈ ವಾತಾವರಣದಲ್ಲಿಯೇ ಬೇಂದ್ರೆ ಅವರ ಅದ್ಭುತ ಕೃತಿಗಳು ಸೃಷ್ಟಿಯಾಗಿವೆ. ನಾಡಿನ ಖ್ಯಾತನಾಮರನ್ನು ತನ್ನೆಡೆ ಸೆಳೆದಿವೆ. ಜಾತಿ, ಧರ್ಮ, ಪ್ರಾದೇಶಿಕ ಭಿನ್ನತೆ ಮೀರಿ ಅವರ ಗೀತೆಗಳು ನಾಡಿನುದ್ದಗಲಕ್ಕೂ ಸಂಚರಿಸಿವೆ. ಅಕ್ಷರ ಬಲ್ಲವರು, ಪಾಮರರು, ಸಾಮಾನ್ಯರು, ಸಾಧಕರು- ಹೀಗೆ ಎಲ್ಲರನ್ನೂ ಪ್ರಭಾವಿತರನ್ನಾಗಿಸಿವೆ.


ವಾಮನ ಬೇಂದ್ರೆ ಅವರ ಲಕ್ಷ್ಮಣರೇಖೆಯ ಮಿತಿಯಲ್ಲಿದ್ದರೂ ಬೇಂದ್ರೆ ಬಗ್ಗೆ ಜನರ ಕುತೂಹಲ, ಪ್ರೀತಿ ಇನ್ನೂ ತಣಿದಿಲ್ಲ. ಧಾರವಾಡದ ಎಸ್.ಡಿ.ಎಂ. ಎಂಜನಿಯರಿಂಗ್ ಕಾಲೇಜಿನ ಉತ್ಸಾಹಿಗಳು ಮುಂದಾಗಿ ಉಚಿತವಾಗಿ ಅಂತರ್ಜಾಲ ತಾಣವನ್ನು ತಯಾರಿಸಿಕೊಟ್ಟಿದ್ದಾರೆ. ಯಥಾಪ್ರಕಾರ ಅಲ್ಲಿಯೂ ಕಾಪಿರೈಟ್‌ನದೇ ಸಮಸ್ಯೆ. ಹೀಗಾಗಿ ಬೇಂದ್ರೆ ಅವರ ಸಾಹಿತ್ಯದ ಬದಲಾಗಿ ಇತರ ಒಣ ವಿವರಗಳನ್ನು ತುಂಬಬೇಕಾಗಿದ್ದರಿಂದ ವೆಬ್‌ಸೈಟ್‌ನಲ್ಲಿ ಜೀವಂತಿಕೆ ಮಾಯವಾಗಿದೆ. ಇನ್ನು ಬಹುತೇಕ ಹಳೆಯ ಕವಿ, ಲೇಖಕರ ಗ್ರಂಥಗಳು ಪಳಪಳ ಹೊಳೆಯುವ ಮರು ಮುದ್ರಣ ಕಂಡು ನಳನಳಿಸುತ್ತಿರುವಾಗ ಬೇಂದ್ರೆಯವರ ಪುಸ್ತಕಗಳು ಮಾತ್ರ ಇಪ್ಪತ್ತು ವರ್ಷಗಳ ಹಿಂದಿನ ಕೆಟ್ಟ ಮುದ್ರಣದ ಗೈಡ್‌ಗಳಂತೆ ಕಳಪೆಯಾಗಿದ್ದು, ನಾಡಿನ ಬಹುತೇಕ ಪುಸ್ತಕಾಲಯಗಳಲ್ಲಿ ಕಾಣಸಿಗದ ಪರಿಸ್ಥಿತಿಗೆ ಒಳಗಾಗಿವೆ.


ಇಷ್ಟೆಲ್ಲ ಲೋಪಗಳಿದ್ದರೂ ಬೇಂದ್ರೆ ಮತ್ತೆ ಮತ್ತೆ ಸೆಳೆಯುತ್ತಾರೆ.

ಒಲವೆಂಬ ಹೊತ್ತಿಗೆಯನೋದ ಬಯಸುತ ನೀನು

ಬೆಲೆಯೆಷ್ಟು ಎಂದು ಕೇಳುತಿಹೆ? ಹುಚ್ಚ!

ಹಗಲಿರುಳು ದುಡಿದರೂ ಹಲ ಜನುಮ ಕಳೆದರೂ

ನೀ ತೆತ್ತಲಾರೆ ಬರಿ ಅಂಚೆ ವೆಚ್ಚ

ಎಂದು ಗದರಿದಂತಾಗುತ್ತದೆ.


ಮಳೆ ಬರುವ ಕಾಲಕ್ಕಒಳಗ್ಯಾಕ ಕೂತೇವೊ

ಇಳೆಯೊಡನೆ ಜಳಕ ಮಾಡೋಣ

ನಾವೂನು, ಮೋಡಗಳ ಆಟ ನೋಡೋಣ


ಎಂದು ಕರೆದಂತಾಗುತ್ತದೆ.


ಸಾಧನಕೇರಿಯಲ್ಲಿ ಇಂತಹ ಸಾವಿರ ಕರೆಗಳಿವೆ. ಕೊರೆಗಳಿವೆ. ಹುಡುಕುವವರಿಗೆ ಅಲ್ಲಿಯ ಕಲ್ಲಕಲ್ಲಿನಲ್ಲಿಯೂ, ನೀರಿನ ಪ್ರತಿ ತೆರೆಯಲ್ಲಿಯೂ ಬೇಂದ್ರೆ ಸಿಗುತ್ತಾರೆ. ಬೆಳ್ಳಂಬೆಳಿಗ್ಗೆ ವಾಕಿಂಗ್ ಹೋಗಿ, ಕೆರೆ ದಡದಲ್ಲಿ ಅಡ್ಡಾಡಿ, ಶಾಲೆಯ ನಿಶ್ಯಬ್ದದಲ್ಲಿ ಮೌನವಾಗಿ ನಿಂತವರಿಗೆ ಬೇಂದ್ರೆ ಖಂಡಿತ ಸಿಗುತ್ತಾರೆ. ಮೌನವಾಗಿಯೇ ಮಾತಿಗಿಳಿಯುತ್ತಾರೆ. ಕನಸು ಕೆದಕುತ್ತಾರೆ. ಎದೆಯೊಳಗಿನ ಸಾವಿರ ಭಾವಗಳಿಗೆ ಹಾಡಾಗುತ್ತಾರೆ.


ತೋಟ ಮೂಡಿದೆ ನೋಡು ಕಾಡಿದ್ದ ಎಡೆಯಲ್ಲಿ

ಅಲ್ಲಿ ಮೌನದ ತಂತಿ ಮೀಟುತಿಹುದು

ಶ್ರುತಿಗು ನಿಲುಕದ ನುಡಿಯು ದನಿಗುಡುವದಾಗೀಗ