Showing posts with label Chamaraj Savadi. Show all posts
Showing posts with label Chamaraj Savadi. Show all posts

ನಕ್ಷತ್ರಗಳಿಗೊಂದು ಮೊರೆ

16 Apr 2011

2 ಪ್ರತಿಕ್ರಿಯೆ
ಹೊರಗೆ ಸಣ್ಣಗೆ ಮಳೆ.
ಒಳಗೆ ದಟ್ಟೈಸಿದ ಕಾರ್ಮೋಡ. ಮಿಂಚಿಲ್ಲ, ಗುಡುಗಿಲ್ಲ. ಹನಿಯುತ್ತಿರುವ ಸೋನೆ ಮಳೆ ಬಿರುಮಳೆಯಾಗುವ ಸೂಚನೆಯೂ ಇಲ್ಲ.
ನನ್ನ ಹುಟ್ಟೂರು ಅಳವಂಡಿ ನೆನಪಾಗುತ್ತಿದೆ. 
ಯಾವುದೇ ಸಣ್ಣ ಖುಷಿಯಿರಲಿ, ನೋವಿರಲಿ, ವಂಚನೆ ಆಘಾತ ಕಳವಳ ಖಿನ್ನತೆ ಅಪರಾಧಿ ಭಾವನೆ- ಹೀಗೆ ಯಾವ ಭಾವ ಉಕ್ಕಿದರೂ ಜೊತೆಗೆ ಊರ ನೆನಪು ಉಕ್ಕುತ್ತದೆ. ಇವತ್ತೂ ಹಾಗೇ ಆಯಿತು. ಬಹುದಿನಗಳಿಂದ ರೂಢಿ ಮಾಡಿಕೊಂಡಿರುವ, ಇನ್ನೂ ಅನಾವರಣಗೊಳ್ಳಬೇಕಾಗಿರುವ ವೆಬ್‌ಸೈಟೊಂದಕ್ಕೆ ಎಂದಿನಂತೆ ದಿನದ ಸುದ್ದಿಗಳನ್ನು ಪೋಣಿಸುತ್ತಿದ್ದ ಹೊತ್ತಿನಲ್ಲಿ, ಸದ್ದಿಲ್ಲದೇ ಕರೆಂಟ್ ಮಾಯ. ನಾನಿದ್ದೇನೆ ಬಿಡು ಎಂಬಂತೆ ಯುಪಿಎಸ್ ವಿದ್ಯುತ್ ಬೆಳಗಿದರೂ ಹೊರಗೆ ಓಣಿಯಲ್ಲೆಲ್ಲ ಕವಿದ ಕತ್ತಲಲ್ಲಿ, ಲೈಟಿರುವ ನನ್ನ ಮನೆ ವಿಚಿತ್ರವಾಗಿ ಕಾಣುತ್ತಿದೆ. ಮನೆಯೊಳಗಿನ ಅನಗತ್ಯ ದೀಪಗಳನ್ನಾರಿಸಿ, ಮತ್ತೆ ನನ್ನ ಕೋಣೆಯಲ್ಲಿ ಬಂದು ಕೂತೆ. 
ಹೊರಗೆ ಬೆಳಕಿದ್ದರೂ ಒಳಗೆ ಕತ್ತಲು.
ನನ್ನ ಬಹುತೇಕ ಬದುಕು ಸಾಗಿ ಬಂದ ಪರಿಗೆ ಸಾಕ್ಷಿಯೆಂಬಂತೆ ಈ ವೈರುದ್ಧ್ಯ ರಾಚುತ್ತದೆ. ಹೊರಗೆ ಬೆಳಕಿದ್ದಾಗ ನನ್ನೊಳಗೆ ಕತ್ತಲು, ಒಳಗೆ ಬೆಳಕು ಅರಳಿ ನಿಂತ ಹೊತ್ತಿನಲ್ಲಿ ಹೊರಗೆ ಕತ್ತಲು ಕವಿದಿರುತ್ತದೆ. ಸ್ವಾನುಕಂಪವಲ್ಲ. ಹುಚ್ಚುತನವೂ ಅಲ್ಲ. ಎಷ್ಟೋ ಸಾರಿ ಈ ವೈರುದ್ಧ್ಯ ಕುರಿತು ಯೋಚಿಸಿದ್ದೇನೆ. ಪದೆ ಪದೆ ಏಕೆ ಹೀಗಾಗುತ್ತದೆ ಅಂತ ಅಚ್ಚರಿಪಟ್ಟಿದ್ದೇನೆ. ಬ್ಯಾಟಿಂಗ್ ಬರುವ ಹೊತ್ತಿಗೆ ಓವರ್‌ಗಳು ಮುಗಿದಂತೆ, ನಿರೀಕ್ಷಿಸಿದ್ದು ಬಂತೆಂಬ ಸಡಗರದಿಂದ ಎದ್ದು ನಿಲ್ಲುವ ಮುನ್ನವೇ ಅದು ಸದ್ದಿಲ್ಲದೇ ಇಲ್ಲವಾಗಿರುತ್ತದೆ.
ಹೊರಗೆ ಸಣ್ಣಗೆ ಮಳೆ.
ಸುದ್ದಿ ಜೋಡಿಸಿಯಾಯ್ತು. ದಿನದ ಮುಖ್ಯ ಘಟ್ಟವೊಂದು ಮುಗಿದ ನಿರಾಳತೆ. ಸಿದ್ಧಗೊಳ್ಳುತ್ತಿರುವ ವೆಬ್‌ಸೈಟ್‌ನಲ್ಲಿ ಈ ಸುದ್ದಿಗಳು ಹೇಗೆ ಕಾಣಬಹುದೆಂಬ ಬಸಿರಿ ತಾಯಿಯ ಕನಸೊಂದು ಎಂದಿನಂತೆ ಅರಳುತ್ತದೆ. ಕೆಲ ಕ್ಷಣ ಆ ನಿರಾಳತೆಯಲ್ಲಿ ಮನಸಾರೆ ಮುಳುಗುತ್ತೇನೆ. 
ಆದರೆ, ಅದು ಕೆಲ ಕ್ಷಣಗಳ ಕಾಲ ಮಾತ್ರ.
ಸಣ್ಣಗೇ ಉಕ್ಕತೊಡಗುವ ಖಿನ್ನತೆ ಊರಿನ ನೆನಪುಗಳನ್ನು ಹೊತ್ತು ತರುತ್ತದೆ. ನನ್ನೂರಿನ ಮಣ್ಣಿನ ಮಾಳಿಗೆಯ ಮೇಲೆ, ನೆಲದ ಮೇಲೆ ಏನನ್ನೂ ಹಾಸದೇ, ಹಾಗೇ ಮಲಗಿ, ಕಣ್ಣು ಕೋರೈಸುವ ನಕ್ಷತ್ರಗಳನ್ನು ದಿಟ್ಟಿಸುತ್ತಿದ್ದ ದಿನಗಳು ನೆನಪಾಗುತ್ತವೆ. ನನ್ನೊಳಗಿರುವ ಕನಸುಗಳಿಗೆ ಶಕ್ತಿ ಕೊಟ್ಟ ದಿವ್ಯ ದೇವತೆಗಳವು. ಸವಾಲುಗಳನ್ನು ಎದುರಿಸುವ ಕೆಚ್ಚು ತುಂಬಿದ ಕಿಡಿಗಳವು. ಇವತ್ತೇಕೋ ಹನಿಯುತ್ತಿರುವ ಮಳೆಯ ನಡುವೆ, ಉಕ್ಕತೊಡಗಿರುವ ಖಿನ್ನತೆಯ ಮಧ್ಯೆ, ನನ್ನೂರಿನ ದಿವ್ಯ ಆಗಸದ ಆ ನಕ್ಷತ್ರಕಿಡಿಗಳು ಮತ್ತೆ ಮತ್ತೆ ನೆನಪಾಗತೊಡಗಿವೆ.
ಕೆಲಸ ಮುಗಿದಿದ್ದರಿಂದ, ಯುಪಿಎಸ್ ಏಕೆ ದಣಿಸಬೇಕೆಂದು ಲೈಟಾರಿಸಿ ಕತ್ತಲಲ್ಲಿ ಸುಮ್ಮನೇ ಕೂಡುತ್ತೇನೆ. ಊರ ಮುಗಿಲಿನೊಳಗೆ ಅರಳಿ ನಿಲ್ಲುತ್ತಿದ್ದ ನಕ್ಷತ್ರಗಳು ಛಾವಣಿಯಲ್ಲಿ ಕಂಡಾವೇನೋ ಎಂಬ ವಿಚಿತ್ರ ಆಸೆ. ಆದರೆ, ಬೆಂಗಳೂರಿನ ಬಯಲಲ್ಲಿ ನಿಂತರೂ ಬೆಳಕಿನ ಮೋಡದ ಮಧ್ಯೆ ಮಂಕಾಗುವ ನಕ್ಷತ್ರಗಳು, ಲೈಟಾರಿಸಿದ ಛಾವಣಿಯಲ್ಲಿ ಕಂಡಾವಾದರೂ ಹೇಗೆ? ಮತ್ತದೇ ಕತ್ತಲು, ಏಕಾಂತ, ಖಿನ್ನತೆ. 
ಒಂದು ಸ್ನಿಗ್ಧ ಪ್ರೀತಿಗಾಗಿ ಹಂಬಲಿಸುತ್ತಿದ್ದ ದಿನಗಳು ನೆನಪಾಗುತ್ತಿವೆ. ಓದಲು ಪಠ್ಯಪುಸ್ತಕ ಬಿಟ್ಟು ಬೇರೊಂದು ಸಿಗದ ವಾತಾವರಣದಲ್ಲಿ ಪುಕ್ಕಟೆ ಕನಸುಗಳನ್ನು ಕಾಣುವುದು ಬಿಟ್ಟು ಬೇರೆ ದಾರಿ ಇದ್ದಿಲ್ಲ. ರಜಾ ದಿನಗಳು ಬಂದಾಗ, ಪಠ್ಯಪುಸ್ತಕಗಳ ಓದೂ ಇಲ್ಲವಾಗುತ್ತಿತ್ತು. ನನ್ನ ಮುಂದಿನ ತರಗತಿಯ ಕನ್ನಡ ವಿಷಯದ ಪುಸ್ತಕವನ್ನು ಅದ್ಹೇಗೋ ಹೊಂಚಿಕೊಂಡು ಒಂದೇ ದಿನದಲ್ಲಿ ಓದಿ ಮುಗಿಸುತ್ತಿದ್ದೆ. ನಂತರ ಬಿರು ಬಿಸಿಲು, ಕಡು ಸೆಕೆ ಮತ್ತು ಕನಸುಗಳೊಳಗೆ ಬದುಕು ಮುಳುಗಿಹೋಗುತ್ತಿತ್ತು. ಮನೆಯಲ್ಲಿ ನಡೆಯುತ್ತಿದ್ದ ಹಪ್ಪಳ-ಸಂಡಿಗೆ-ಉಪ್ಪಿನಕಾಯಿ-ಶ್ಯಾವಿಗೆ ತಯಾರಿಯ ಸಡಗರದಲ್ಲಿ ಅರೆಮನಸ್ಸಿನಿಂದ ತೊಡಗಿಕೊಂಡ ಮನಸ್ಸು ಸಂಜೆಯಾಗುವುದನ್ನೇ ಕಾಯುತ್ತಿತ್ತು.
ಸಾಮಾನ್ಯವಾಗಿ ಕರೆಂಟಿಲ್ಲದಿರುತ್ತಿದ್ದ ರಾತ್ರಿಗಳಲ್ಲಿ ಮಾಳಿಗೆ ಮೇಲೆ ಹೋಗಿ ಅಂಗಾತ ಮಲಗಿಕೊಂಡು ನಕ್ಷತ್ರಗಳನ್ನು ದಿಟ್ಟಿಸುತ್ತಿದ್ದೆ. ಸಾವಿರಾರು ಕನಸುಗಳನ್ನು ಆ ನಕ್ಷತ್ರಗಳು ನನ್ನೊಳಗೆ ತುಂಬಿವೆ. ಅವುಗಳೊಂದಿಗೆ ಸುದೀರ್ಘ ಮೌನ ಸಂಭಾಷಣೆ ನಡೆಸಿದ್ದೇನೆ. ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡಿದ್ದೇನೆ. ನನ್ನ ನಿರಾಶೆಗಳನ್ನು ಅವು ಸಂತೈಸಿವೆ. ನೋವನ್ನು ಸಹನೀಯವಾಗಿಸಿವೆ. ಮೌನ ಸಾಂಗತ್ಯದಲ್ಲೂ ಪರಮಶಕ್ತಿಯಿದೆ ಎಂಬುದನ್ನು ಮೌನವಾಗಿಯೇ ನನ್ನೊಳಗೆ ತುಂಬಿವೆ. ನಕ್ಷತ್ರಗಳ ಲೋಕದೊಳಗಿನ ಆ ಪಯಣ ಇವತ್ತಿಗೂ ನನ್ನ ಅತ್ಯಂತ ಸ್ಮರಣೀಯ ನೆನಪುಗಳಲ್ಲಿ ಒಂದು.
‘ಕತ್ತಲ್ದಾಗ ಒಬ್ನ ಕೂತು ಏನ್ ಮಾಡ್ತೀ?’ ಎಂದು ಮನೆಯವರು ಆಗಾಗ ಕೇಳುತ್ತಿದ್ದರು. ಏನಂತ ಹೇಳೋದು. ಓರಗೆಯ ಹುಡುಗರು ಕತ್ತಲು ತುಂಬಿದ ಓಣಿಗಳಲ್ಲಿ ಕಳ್ಳ-ಪೊಲೀಸ್ ಆಟವಾಡುತ್ತಿರುವಾಗ ಇವನೊಬ್ಬ ಮೇಲೆ ಹೋಗಿ ಏನು ಮಾಡ್ತಾನೆ ಎಂಬ ಗೊಂದಲ ಅವರದಾಗಿತ್ತು. ಕ್ರಮೇಣ ನನ್ನ ಅನ್ಯಮನಸ್ಕತೆ, ಅಂತರ್ಮುಖತೆ ಅವರಿಗೆ ಅರ್ಥವಾಯಿತೋ ಅಥವಾ ಇವನಿಗೆ ಹೇಳಿ ಉಪಯೋಗವಿಲ್ಲ ಎಂದು ಅಂದುಕೊಂಡರೋ- ಒಟ್ಟಿನಲ್ಲಿ ಪ್ರಶ್ನಿಸುವುದು ತಪ್ಪಿತು. ನಾನು ಮತ್ತಷ್ಟು ಆನಂದದಿಂದ ನಕ್ಷತ್ರ ಸಾಂಗತ್ಯದಲ್ಲಿ ಮುಳುಗಿಹೋದೆ.
ಎಸ್ಸೆಸ್ಸೆಲ್ಸಿ ಮುಗಿಸಿ ಮುಂದಿನ ಓದಿಗೆಂದು ಮೊದಲ ಬಾರಿ ಹುಟ್ಟಿ ಬೆಳೆದ ಊರು ಬಿಡಬೇಕಾಗಿ ಬಂದಾಗ ಇವೇ ನಕ್ಷತ್ರಗಳ ಬಳಿ ಅತ್ತಿದ್ದೆ. ಮುಂದಿನ ಬದುಕು ಹೇಗೋ ಎಂದು ಕಳವಳಪಟ್ಟಿದ್ದೆ. ಉಕ್ಕುತ್ತಿದ್ದ ಕನಸುಗಳಿಗೆ, ನವಿರು ಭಾವನೆಗಳಿಗೆ ಸ್ಪಷ್ಟರೂಪ ಕೊಡಲಾಗದೇ ಒದ್ದಾಡಿದ್ದೆ. ಏರ್‌ಫೋರ್ಸ್‌ಗೆ ನೇಮಕವಾದಾಗಲೂ ಇವೇ ನಕ್ಷತ್ರಗಳು ನನಗೆ ದಾರಿ ತೋರಿದ್ದವು. ನನ್ನೂರಿನಲ್ಲಿ ಕಂಡ ಅವೇ ನಕ್ಷತ್ರಗಳನ್ನು ಕಚ್ಛ್‌ನ ರಣಪ್ರದೇಶದ ಆಗಸದಲ್ಲೂ ಕಂಡಿದ್ದೇನೆ. ಊರು ಸೇರಿದ ನೆಮ್ಮದಿ ಅನುಭವಿಸಿದ್ದೇನೆ.
ಮೋಡ ಮುಸುಕಿ ಮುಸುಮುಸು ಅಳುತ್ತಿರುವ ಬೆಂಗಳೂರಿನ ಆಗಸ ಏಕೋ ನನ್ನೂರ ನಕ್ಷತ್ರಗಳನ್ನು ನೆನಪಿಸುತ್ತಿದೆ. ಸಣ್ಣಗೇ ಖಿನ್ನತೆ ಉಕ್ಕುತ್ತಿದೆ. ಅಂದುಕೊಂಡಿದ್ದಕ್ಕಿಂತ ವೇಗವಾಗಿ ಬದಲಾಗುತ್ತಿರುವ ವೃತ್ತಿ ಜೀವನದ ಮಧ್ಯೆ ನನ್ನ ಪ್ರವೃತ್ತಿ ಬದಲಾಗದೇ ಹಾಗೇ ಉಳಿದಿರುವ ಬಗ್ಗೆ ಅಚ್ಚರಿಯೂ ಆಗುತ್ತಿದೆ. ನನ್ನ ಸೋಲುಗಳಿಗೆ ಈ ನಿರ್ಲಿಪ್ತಭಾವವೇ ಕಾರಣವಾ ಎಂಬ ಗೊಂದಲವೂ ಕಾಡುತ್ತಿದೆ.
ಕೂತ ಕೋಣೆಯ ಛಾವಣಿಯನ್ನೇ ಮತ್ತೆ ಮತ್ತೆ ದಿಟ್ಟಿಸುತ್ತೇನೆ. ಇವತ್ತೇಕೋ ನಾನು ಗೊಂದಲದಲ್ಲಿದ್ದೇನೆ. ಮಿತಿ ದಾಟಿದ ಮಾತೊಂದು ಮನನೋಯಿಸಿತಾ ಎಂಬ ಅಪರಾಧಿ ಭಾವನೆಯೊಂದಿದೆ. ಇತ್ತೀಚೆಗೇಕೋ ತೋರದ ಹಸಿವು ಬಾರದ ನಿದ್ದೆಗಳ ಬಗ್ಗೆ ತಕರಾರಿದೆ. ಇವೆಲ್ಲ ಸೇರಿ ಗೊಂದಲಗೊಂಡಿದ್ದೇನೆ. ಮಂಕಾಗಿದ್ದೇನೆ. ನಕ್ಷತ್ರಗಳ ಬಳಿ ಪರಿಹಾರ ಕಂಡುಕೊಳ್ಳಬೇಕಿದೆ.
ಆದರೆ, ಹೊರಗೆ ಮೋಡ ಮುಸುಕಿದ ಆಗಸ. ಒಳಕೋಣೆಯ ಛಾವಣಿಯೂ ಏಕೋ ಖಾಲಿಖಾಲಿ. ಕರೆಂಟಿಲ್ಲದ ರಾತ್ರಿಯಾಗಿದ್ದರೂ ನಕ್ಷತ್ರಗಳು ಕಾಣುತ್ತಿಲ್ಲ. ಮನಸ್ಸಿನ ಮಂಕು ಕಳೆಯುತ್ತಿಲ್ಲ. ನಾನು ಮತ್ತೆ ಮತ್ತೆ ಅವನ್ನು ಕರೆಯುತ್ತಿದ್ದೇನೆ. ನನ್ನೂರಿನ ಕಡು ಕತ್ತಲೆಯ ಆಗಸದಲ್ಲಿ ಸದ್ದಿಲ್ಲದೇ ಮಿನುಗುತ್ತ ಸಂತೈಸುತ್ತಿದ್ದ ಅವು ಮತ್ತೆ ಮತ್ತೆ ನೆನಪಾಗುತ್ತಿವೆ. 
ಮಳೆ ಸದ್ದಿಲ್ಲದೇ ಹನಿಯುತ್ತಲೇ ಇದೆ, ಒಳಮನೆಯೊಳಗೆ ಕೂತ ನನ್ನಳಲನ್ನು ಅರ್ಥ ಮಾಡಿಕೊಂಡಂತೆ!
- ಚಾಮರಾಜ ಸವಡಿ

ಮರೆಯಬೇಕೆಂದು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಾ...

8 Apr 2011

4 ಪ್ರತಿಕ್ರಿಯೆ
Art just makes verses; only the heart is a poet.
- Andre Chenier 
ತುಂಬಾ ದಿನಗಳ ಹಿಂದೆ ಬರೆದಿಟ್ಟುಕೊಂಡಿರುವ ಈ ಸಾಲುಗಳನ್ನು ಮತ್ತೆ ಮತ್ತೆ ಓದಿಕೊಳ್ಳುತ್ತಾ ರಾತ್ರಿಯಿಡೀ ಕೂತಿದ್ದೇನೆ. ಕವಿತೆ ಬರೆಯುವುದು ಇತ್ತೀಚೆಗೆ ಕಷ್ಟವಾಗತೊಡಗಿರುವುದರ ಕಾರಣವೇನಾದರೂ ಈ ಸಾಲುಗಳಲ್ಲಿದೆಯಾ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಗುತ್ತಿಲ್ಲ. 
ಅದೇಕೋ ಗೊತ್ತಿಲ್ಲ, ಮುಂಚಿನಂತೆ ಕವಿತೆ ಬರೆಯುವುದು ಆಗುತ್ತಿಲ್ಲ. ಕವಿತೆ ನನ್ನ ಅತ್ಯಂತ ಇಷ್ಟದ ವಿಷಯ. ಅಷ್ಟೇ ಕಷ್ಟದ ಅಭಿವ್ಯಕ್ತಿಯೂ ಹೌದು. ಎಂಥ ನಿರಾಸೆಯ ನಡುವೆಯೂ ಗದ್ಯವನ್ನು ಒಂದಷ್ಟು ಚೆನ್ನಾಗಿ ಕಾಣುವಂತೆ ಬರೆದುಬಿಡಬಹುದು. ಆದರೆ, ಪದ್ಯದ ವಿಷಯದಲ್ಲಿ ಹಾಗಾಗದು. ಅದು ಒಲಿಯಬೇಕು. ಒಲಿಯುವವರೆಗೆ ಪ್ರಯತ್ನಿಸಬೇಕು. ಎಲ್ಲಿಯೂ ಹದ ತಪ್ಪಬಾರದು. ಒಂದೇ ಒಂದು ಅನಗತ್ಯ ಶಬ್ದ ಇಡೀ ಭಾವವನ್ನೇ ಹಾಳು ಮಾಡಿಬಿಡಬಹುದು. ಅಲ್ಲಿ ಅನುಭವ ಕೆಲಸಕ್ಕೆ ಬಾರದು. 
ಹೀಗಾಗಿ, ಪ್ರತಿಯೊಂದು ಕವಿತೆಯೂ ಹೊಸ ಪ್ರಯತ್ನವೇ. ಥೇಟ್ ಪ್ರೀತಿಯನ್ನು ಒಲಿಸಿಕೊಂಡಂತೆ.
ಸಾಮಾನ್ಯವಾಗಿ ಗದ್ಯಕ್ಕೆ ನಿಲುಕದ ಭಾವನೆಗಳನ್ನು ಕವಿತೆ ಎತ್ತಿಕೊಡುತ್ತದೆ. ಇದನ್ನು ಗದ್ಯದಲ್ಲಿ ಇಷ್ಟು ಚೆನ್ನಾಗಿ, ಇಷ್ಟು ಕಡಿಮೆ ಶಬ್ದಗಳಲ್ಲಿ, ಇಷ್ಟು ಅರ್ಥಗರ್ಭಿತವಾಗಿ, ಮನಸ್ಸಿಗೆ ತಟ್ಟುವಂತೆ ಬರೆಯಲಾಗದು. ಎಷ್ಟೇ ಸಲ ಓದಿದರೂ ಮತ್ತೆ ಮತ್ತೆ ಓದುವ ಭಾವ ಮೂಡುವಂತೆ, ಓದಿದ ಪ್ರತಿ ಸಲವೂ ಹೊಸ ಅರ್ಥಗಳನ್ನು ಹುಟ್ಟುಹಾಕುವಂತೆ ಮಾಡಲಾಗದು. ಪದ್ಯದ ಸೊಗಸದು. ಅದು ಹಾಗಿದ್ದರೇ ಚೆನ್ನ. 
ಹೀಗಾಗಿ, ಕವಿತೆ ಇತ್ತೀಚೆಗೆ ಕಷ್ಟವಾಗುತ್ತಿದೆ. 
ಮನಸ್ಸಿನ ಏರಿಳಿತಗಳ ನಡುವೆ ಯಾವುದೋ ಭಾವವೊಂದು ಕಾರ್ಮುಗಿಲ ನಡುವೆ ಮಿಂಚಿ ಮರೆಯಾಗುವ ಬೆಳಕಿನಂತೆ ಥಟ್ಟನೇ ಹೊಳೆಯುತ್ತದೆ. ಮನಸ್ಸು ಅದನ್ನು ಮತ್ತೆ ಮತ್ತೆ ಕಾಣಲು ಹಂಬಲಿಸುವುದೇ ಕವಿತೆ ಕಟ್ಟುವ ಸಮಯ. ಬಂದರೆ ಅದು ಇಡಿಯಾಗಿ ಬಂದುಬಿಡುತ್ತದೆ. ಇಲ್ಲದಿದ್ದರೆ, ಏನೇ ಪ್ರಯತ್ನಿಸಿದರೂ ಚಿತ್ರವಾಗದು. 
ನಿಜವಾದ ಫಜೀತಿ ಶುರುವಾಗುವುದೇ ಆಗ. ಶಬ್ದಗಳನ್ನು ಹೇಗೋ ಮಾಡಿ, ಆಕರ್ಷಕವಾಗಿ ಜೋಡಿಸಿಬಿಡಬಹುದು. ಆದರೆ, ಅದು ಕವಿತೆಯಾಗದು. ತಾನಾಗಿ ಉಕ್ಕದೇ ಒಲವಾಗದಲ್ಲ, ಹಾಗೆ. 
ಹಾಗಂತ, ಅದನ್ನು ಅಷ್ಟಕ್ಕೇ ಕೈಬಿಡಲೂ ಆಗುವುದಿಲ್ಲ. ಮನಸ್ಸಿನಲ್ಲಿ ಅದೊಂಥರಾ ಗೀಳಾಗಿ ಕಾಡಲು ಶುರುವಾಗುತ್ತದೆ. ಅಪರಾತ್ರಿಯಲ್ಲಿ ನಿದ್ದೆಗೆಡಿಸುತ್ತದೆ. ನಿತ್ಯದ ಕೆಲಸಗಳಿಗೆ ವಿಮುಖನನ್ನಾಗಿಸುತ್ತದೆ. ಪದೆ ಪದೆ ಕರೆಯುತ್ತದೆ. ಮತ್ತೆ ಮತ್ತೆ ಸೋಲಿಸುತ್ತದೆ. ಬೇರೆ ಏನನ್ನೂ ಬರೆಯದ ಮನಃಸ್ಥಿತಿಗೆ ತಂದೊಡ್ಡಿ ಮಂಕಾಗಿಸುತ್ತದೆ.
ನನ್ನ ಬಹುತೇಕ ನಿದ್ದೆಗೇಡಿ ರಾತ್ರಿಗಳಿಗೆ ಕಾರಣ ಇಂಥ ಎಟುಕದ ಕವಿತಾಭಾವ. ಎಷ್ಟೋ ಸಲ ರಾತ್ರಿಯಿಡೀ ಕೂತರೂ ಒಂದು ಭಾವವನ್ನು ತೀರಕ್ಕೆ ತಲುಪಿಸುವುಲ್ಲಿ ಸೋತಿದ್ದೇನೆ. ಮತ್ತೆ ಮತ್ತೆ ಪ್ರಯತ್ನಿಸಿ, ಸಾಧ್ಯವಾಗದೇ ಹತಾಶನಾಗಿದ್ದೇನೆ. ಸಮಾಧಾನವಾಗದೇ, ಅದೇ ಭಾವವನ್ನು ಗದ್ಯಕ್ಕೆ ಬದಲಿಸಿ ಸುಮ್ಮನಾಗಿದ್ದೇನೆ. ಓದಿದವರು ಏನೇ ಹೇಳಲಿ, ಎಷ್ಟೇ ಮೆಚ್ಚಲಿ, ಪದ್ಯವಾಗಬೇಕಿದ್ದ ಭಾವವೊಂದು ಗದ್ಯವಾಗಿದ್ದರ ಕೊರತೆ ಬರೆದ ನನಗೆ ಮಾತ್ರ ಗೊತ್ತು. ಅಂಥ ಗದ್ಯ ಬರಹವನ್ನು ಓದಿದಾಗೊಮ್ಮೆ, ಕೈಗೆ ಸಿಗದ ಪದ್ಯ ತುಂಟತನದಿಂದ ಕೆಣಕುತ್ತದೆ. ಮತ್ತೆ ಮತ್ತೆ ಕವಿತೆ ಬರೆಯಲು ಪ್ರೇರೇಪಿಸುತ್ತದೆ.
ಇವತ್ತೂ ಅಂಥದೇ ದುಃಸ್ಥಿತಿ. 
ಮನಸ್ಸಿನ ಸುನೀತ ಭಾವವೊಂದು ಹಾಡಾಗುತ್ತಿಲ್ಲ ಎಂಬ ನೋವು. ರಾತ್ರಿಯಿಡೀ ಪ್ರಯತ್ನಿಸಿದರೂ ಅದು ದಕ್ಕುತ್ತಿಲ್ಲ. ಪದೆ ಪದೆ ಪ್ರಯತ್ನ ಕೈಬಿಟ್ಟು ಏನೇನೋ ಓದುತ್ತ ಕೂತರೂ, ಕಾಡುವ ಭಾವ ಹಾಡಾಗುತ್ತಿಲ್ಲ. ಏನೋ ಕೊರತೆ. ಯಾವುದೋ ವಿಷಾದ. ತಿಳಿಯಾಗದ ಹಳೆಯ ನೋವು. ಮರೆಯಬೇಕೆಂದು ಮತ್ತೆ ಮತ್ತೆ ನೆನಪಿಸಿಕೊಂಡಂತೆ, ಎಷ್ಟೇ ಯತ್ನಿಸಿದರೂ ದಕ್ಕದೇ ಹೋದಂತೆ, ಏನೇನೋ ಭಾವಾತಿರೇಕಗಳು. ಆದರೆ, ಯಾವೊಂದು ಭಾವವೂ ಅರ್ಥಪೂರ್ಣ ಸಾಲುಗಳಾಗುತ್ತಿಲ್ಲ. ಇಡಿಯಾಗಿ ಒಡಮೂಡುತ್ತಿಲ್ಲ. 
ಅಂದುಕೊಂಡಂತೆ ಮೂಡದ ಕವಿತೆ ಕಳೆದುಕೊಂಡ ಪ್ರೀತಿಯಂತೆ. ಎಷ್ಟೇ ಪ್ರಯತ್ನಿಸಿದರೂ ಸಿಗದೇ ನುಣುಚಿಕೊಳ್ಳುತ್ತದೆ. ಮತ್ತೆ ಮತ್ತೆ ಸುಳಿಯುತ್ತದೆ. ಮತ್ತೆ ಮತ್ತೆ ಕಾಡುತ್ತದೆ. ಕಣ್ಣೆದುರೇ ಇರುತ್ತದೆ, ಹಿಡಿಯಲಾಗದು. ಮತ್ತೆ ಮತ್ತೆ ಪ್ರಯತ್ನಿಸಿ ಸೋತಾಗ, ತಣ್ಣಗೇ ಕೆಣಕುತ್ತದೆ. ಹತಾಶನನ್ನಾಗಿಸುತ್ತದೆ.
ಹೀಗೆ ಸೋತು ಕೂತವನನ್ನು ಸೆಳೆದಿದ್ದು ಈ ಸಾಲು: Art just makes verses; only the heart is a poet.
ನಿಜ. ಎದೆಯೊಳಗೆ ಉಕ್ಕದಿದ್ದುದು ಕವಿತೆಯಾಗದು. ಮನಸ್ಸಿನೊಳಗೆ ಹೊಳೆದ ಮಿಂಚೊಂದು ಎದೆಯೊಳಗೆ ಅರಳಬೇಕು. ಬೆಳೆಯಬೇಕು. ಮೊಗ್ಗೊಂದು ಅರಳಿ ಹೂವಾದಂತೆ, ಕವಿತೆಯಾಗಬೇಕು. ಥೇಟ್ ಪ್ರೀತಿಯಂತೆ. ತಾನಾಗೇ ಉಕ್ಕದೇ ಕವಿತೆಯಾಗದು. ಅದಾಗೇ ಒಲಿಯದೇ ಪ್ರೀತಿಯಾಗದು. 
ಇವತ್ತು ಅದು ನನಗೆ ಮತ್ತೆ ಸಾಧ್ಯವಾಗಲಿಲ್ಲ. ಇತ್ತೀಚೆಗೆ ಅದು ಏಕೋ ಸಾಧ್ಯವಾಗುತ್ತಿಲ್ಲ. ಹೀಗಾಗಿ ಮತ್ತೆ ಗದ್ಯದ ಮೊರೆ ಹೋಗುತ್ತಿದ್ದೇನೆ. 
ಕ್ಷಮಿಸು ಕವಿತಾ ದೇವತೆಯೇ!
- ಚಾಮರಾಜ ಸವಡಿ

ನೆನಪೆಂಬ ಶಕ್ತಿ, ಸೋಲೆಂಬ ಮಿತ್ರ...

10 Mar 2011

4 ಪ್ರತಿಕ್ರಿಯೆ
I am only one, but still I am one. I cannot do everything, but still I can do something; and because I cannot do everything, I will not refuse to do something that I can do. 

ಹೆಲೆನ್‌ ಕೆಲರ್‌ಳ ಈ ಮಾತುಗಳನ್ನು ಓದುತ್ತ ಒಬ್ಬನೇ ಕೂತಿದ್ದೇನೆ.
ಮನೆಯ ಪಕ್ಕದ ಸಾಕಿದ ನಾಯಿಗಳು ಏಕೋ ಬೊಗಳುತ್ತವೆ. ಹಗಲು ಹೊತ್ತು ಸುಮ್ಮನಿರುವ ಈ ನಾಯಿಗಳಿಗೆ ರಾತ್ರಿ ಮಾತ್ರ ಪೂರ್ತಿ ಡ್ಯೂಟಿ.

ನಾನು ಮತ್ತೆ ಹೆಲನ್‌ ಕೆಲರ್‌ಳ ಮಾತುಗಳನ್ನು ದಿಟ್ಟಿಸುತ್ತೇನೆ. ಹೊರಗೆ ನಾಯಿಗಳ ಆರ್ಭಟ. ನನ್ನ ಮನಸ್ಸಿನಲ್ಲೂ ನೂರಾರು ನಾಯಿಗಳ ಬೊಗಳುವಿಕೆ.
ಮನಸ್ಸಿನಲ್ಲಿ ಬೊಗಳುತ್ತಿರುವ ನಾಯಿಗಳನ್ನು ಒಂದೊಂದಾಗಿ ದಿಟ್ಟಿಸಿ ನೋಡುತ್ತೇನೆ. ಅವು ಕಚ್ಚುತ್ತಾವೆಂಬ ಭಯವಿಲ್ಲ. ಕಚ್ಚಬಲ್ಲ ಶಕ್ತಿ ಅವಕ್ಕಿಲ್ಲ. ಬೊಗಳುವುದೊಂದೇ ಅವು ಮಾಡಬಹುದಾದ ಕೆಲಸ. ಬೊಗಳಿ ಬೊಗಳಿ ಸುಸ್ತಾದಾಗ, ಮಾಲೀಕ ಹಾಕುವ ತಿಂಡಿಯೆಡೆಗೆ ಆಸೆಗಣ್ಣಿಂದ ದಿಟ್ಟಿಸುತ್ತ ನಿಲ್ಲುತ್ತವೆಂಬುದು ನನಗೆ ಗೊತ್ತು.
ಮನಸ್ಸಿನೊಳಗಿನ ನಾಯಿಗಳನ್ನೊಮ್ಮೆ ಮೌನವಾಗಿ ದಿಟ್ಟಿಸಿ ನೋಡುತ್ತೇನೆ. ಅವು ಸುಮ್ಮನಾಗುತ್ತವೆ.
ನನಗೆ ಮತ್ತೆ ಏಕಾಂತ.
ಆಕೆ ಅಲ್ಲೆಲ್ಲೋ ಮಗುವಿನಂತೆ ಮಗ್ಗುಲಾಗಿ ಮಲಗಿರಬೇಕು. ಆಕೆಯ ಮನಸ್ಸಿನಲ್ಲೂ ಬೊಗಳುತ್ತಿರುವ ನಾಯಿಗಳು ಸುಮ್ಮನಾಗಿರಬೇಕು. ಸುಂದರಿಯ ಕೊರಳ ವಜ್ರಾಹಾರದಂತೆ ಹೊರಗೆ ಬಾನೊಡಲಲ್ಲಿ ಕಂಗೊಳಿಸುವ ಬಿದಿಗೆ ಚಂದಿರ ಆಕೆಯ ಮನಸ್ಸಿನಲ್ಲೂ ನಗುತ್ತಿರಬಹುದು. ಅವನ ಬೆಳ್‌ನಗೆಯನ್ನು ನಾಚಿಸುವಂತೆ ಈಕೆಯೂ ನಿದ್ದೆಯಲ್ಲೇ ಮುಗುಳ್ನಕ್ಕಿರಬೇಕು. ಇಲ್ಲಿ ನನ್ನ ಜೀವ ’ಹಾ’ ಎಂದಿತು.
ಅಬ್ಬಾ ಮನಸ್ಸೇ!
ಮೆಚ್ಚಿದ ಜೀವ ಬರೀ ಮುಗುಳ್ನಗುತ್ತಿರುವಂತೇ ಭಾಸವಾಗುತ್ತದೆ. ಈ ಅಪರಾತ್ರಿಯಲ್ಲಿ ನಾನಿಲ್ಲಿ ಎದ್ದು ಕೂತಿದ್ದರೂ, ನಿದ್ದೆ ಇಲ್ಲದೇ ಮಂಕಾಗಿದ್ದರೂ, ಆಕೆ ಮಗ್ಗುಲಾಗಿ ಮಲಗಿ ಹೊಂಗನಸ ಕಾಣುತ್ತಿದ್ದಾಳೆಂದು ಊಹಿಸುತ್ತದೆ. ಜೀವ ತುಂಬಿದ, ಭಾವ ತುಂಬಿದ, ಬೆಚ್ಚನೆಯ ಜೀವದಂತಲ್ಲದೇ ಆಕೆಯನ್ನು ಬೇರೆ ಯಾವ ರೀತಿಯೂ ಊಹಿಸಿಕೊಳ್ಳದು. ಆಕೆ ಗಾಡಿ ಏರಿದರೆ, ಹುಷಾರಾಗಿ ಬಾರೇ ಹುಡುಗೀ ಅನ್ನುತ್ತದೆ. ರಭಸದಿಂದ ಗಾಡಿ ಓಡಿಸಬೇಡ. ಸುಂದರಿ ಕೂಡ ಒರಟಾಗಿ ನಡೆದುಕೊಂಡಾಳೆಂದು ರಸ್ತೆ ಬೇಸರಪಡುತ್ತದೆ ಎಂದು ಎಚ್ಚರಿಸುತ್ತದೆ. ಅವಳು ಕಳಿಸುವ ಕಿರು ಸಂದೇಶಗಳಲ್ಲಿಯೂ ನಗೆಯ ಚಿಹ್ನೆಯನ್ನೇ ಹುಡುಕುತ್ತದೆ. ಆಕೆಯ ನೋಟಕ್ಕೆ ಮಾಂತ್ರಿಕ ಶಕ್ತಿ ಕಲ್ಪಿಸುತ್ತದೆ. ಮಾತಿಗೆ ನೆಮ್ಮದಿ ಹೊಂದುತ್ತದೆ. ಜಗಳವನ್ನೂ ಆಸ್ವಾದಿಸುತ್ತದೆ. ಮುನಿಸನ್ನೂ ಇಷ್ಟಪಡುತ್ತದೆ. ನಡೆದರೂ ಚೆನ್ನ, ನುಡಿದರೂ ಚೆನ್ನ. ಏಕೆಂದರೆ, ಆಕೆ ಚಿನ್ನ.
ನನ್ನ ಮನಸ್ಸು, ಅಲ್ಲೆಲ್ಲೋ ಸದ್ದಿಲ್ಲದ ನಿದ್ದೆಯಲ್ಲಿರಬಹುದಾದ ಆಕೆಯೆಡೆಗೆ ಹೊರಳುತ್ತದೆ.
ನಾನಿಲ್ಲಿ ಒಂಟಿ.
ಷೆಲ್ಫಿನೊಳಗಿನ ಪುಸ್ತಕಗಳು, ಅವುಗಳೊಳಗೆ ಅಡಗಿರಬಹುದಾದ ಸಾವಿರ ಸಾವಿರ ಭಾವನೆಗಳು, ಸಂಗತಿಗಳು ನನ್ನನ್ನು ಸಂತೈಸುತ್ತವೆ. ಬೊಗಳುವ ನಾಯಿಗಳು ಸಂತೈಸುತ್ತವೆ. ಫುಟ್‌ಪಾತ್‌ನ ಕಲ್ಲುಗಳ ಮೇಲೆ ಕುಟ್ಟುವ ಗೂರ್ಖಾನ ಕೋಲಿನ ಶಬ್ದ ಸಂತೈಸುತ್ತದೆ. ರಾತ್ರಿ ಸಂಚಾರದಲ್ಲಿರುವ ಹೆಗ್ಗಣಗಳು ನೆಲ ಕೆದರುವ ಸದ್ದು ಸಂತೈಸುತ್ತದೆ.
ನಾನು ಕೊಂಚ ಸಮಾಧಾನ ತಂದುಕೊಳ್ಳುತ್ತೇನೆ.
ನಾನು ಒಂಟಿಯಲ್ಲ. ಏಕೆಂದರೆ, ನೆನಪುಗಳು ಜೊತೆಗಿವೆ.
ಹೆಲೆನ್‌ ಕೆಲರ್‌ಳ ಸಾಲುಗಳನ್ನು ದಿಟ್ಟಿಸುತ್ತೇನೆ: I am only one, but still I am one.
ಹೌದಲ್ಲ! ಎಂದು ಅಚ್ಚರಿಪಡುತ್ತೇನೆ. ಅವಳು ಜೊತೆಗಿರಬೇಕಿತ್ತು ಎಂದು ಮನ ಹಂಬಲಿಸುತ್ತಿದ್ದರೂ, ನಾನು ಅರ್ಧ ಅಲ್ಲ, ಒಂದು ಎಂದು ಸಂತೈಸಿಕೊಳ್ಳುತ್ತೇನೆ. ನಿಜ, I cannot do everything, but still I can do something.
ಬದುಕಿನಲ್ಲಿ ಮುರಿದುಬಿದ್ದ ಕನಸುಗಳು ನೆನಪಾಗುತ್ತವೆ. ಸೋತ ಆಸೆಗಳು ನೆನಪಾಗುತ್ತವೆ. ವಂಚಿಸಲ್ಪಟ್ಟ ಅವಕಾಶಗಳು, ನಿರಾಕರಿಸಲ್ಪಟ್ಟ ಮನ್ನಣೆಗಳು, ತಿರಸ್ಕರಿಸಲ್ಪಟ್ಟ ಘಟನೆಗಳು ಕಣ್ಮುಂದೆ ಸುಳಿಯುತ್ತವೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ನಾನು ಏನೋ ಆಗಬಿಡುತ್ತಿದ್ದೆ ಎಂಬ, ಒಂದು ದಶಕದ ಹಿಂದೆಯೇ ಮರೆತುಬಿಟ್ಟಿದ್ದ, ಸ್ವಾನುಕಂಪದ ಭಾವ ನೆನಪಾಗುತ್ತದೆ. ಪೂರ್ಣಗೊಳ್ಳದ ಕವಿತೆಗಳಂತೆ ಬಿಡಿ ಬಿಡಿ ಸಾಲುಗಳಾಗಿ ನಿಲ್ಲುತ್ತವೆ.
ನಿಜ. ಕನಸುಗಳು ಮುರಿದುಬಿದ್ದಿವೆ. ಆದರೆ, ಹೊಸ ಕನಸುಗಳು ಮೊಳೆತಿವೆ. ಆಸೆಗಳು ಸೋತಿವೆ ನಿಜ, ಹೊಸ ಆಸೆಗಳೂ ಚಿಗುರಿವೆ. ವಂಚಿತನಾಗಿದ್ದೇನೆ ನಿಜ. ಆದರೆ, ಎಲ್ಲವನ್ನೂ ಕಳೆದುಕೊಂಡಿಲ್ಲ. ಮನ್ನಣೆ ಎಂಬುದು ಪ್ರಶಸ್ತಿ ಫಲಕಗಳಲ್ಲಿಲ್ಲ, ನೇಮಕಾತಿ ಪತ್ರಗಳಲ್ಲಿಲ್ಲ. ಅಲ್ಲೆಲ್ಲೋ ಸವಿನಿದ್ದೆಯಲ್ಲಿರಬಹುದಾದ ಜೀವ, ಮುಖ ನೋಡಿರದಿದ್ದರೂ ಮೆಚ್ಚಿದ ಜನಗಳ ಮಧ್ಯೆ ಜೀವಂತವಾಗಿದೆ. ತಿರಸ್ಕರಿಸಲ್ಪಟ್ಟಿದ್ದೇನೆ ನಿಜ. ಆದರೆ, ಹೊಸ ಜೀವ, ಭಾವಗಳು ತಬ್ಬಿಕೊಂಡಿವೆ. ಜೀವಸೆಲೆ ತುಂಬಿ ಪೊರೆಯುತ್ತಿವೆ.
ಅಂದುಕೊಂಡ ಎಲ್ಲವನ್ನೂ ಮಾಡಲಾಗಲಿಕ್ಕಿಲ್ಲ. ಹಾಗಂತ ಏನನ್ನೂ ಅಂದುಕೊಳ್ಳದೇ ಹೇಗಿರಲಿ? ಸೋಲುವುದಕ್ಕೇ ಅಳುಕಿದರೆ ಗೆಲ್ಲುವುದಾದರೂ ಯಾವತ್ತು? ಸೋಲಿನ ಮಧ್ಯೆಯೇ ಗೆಲುವು ಬರುವುದು. ನೋವಿನೊಳಗಿಂದಲೇ ನಲಿವು ಉಕ್ಕುವುದು. ಕಣ್ಣೀರಿಟ್ಟ ಕಂಗಳಿಂದಲೇ ನಗು ಅರಳಬೇಕು. ಅಲೆಯೆದ್ದ ಜಾಗದಲ್ಲೇ ಅಲೆ ನಿಲ್ಲಬೇಕು. ಚೂರಿ ಹಾಕುವ ಕೈಗಳಿರುವಂತೆ, ನೇವರಿಸುವ ಕೈಗಳೂ ಇವೆ.
ನೆಲಕ್ಕುರುಳಿದ ಮರದೊಡಲಿಂದ ಹೊಸ ಚಿಗುರು ಮೊಳೆತಂತೆ, ಮುರಿದುಬಿದ್ದ ಹಳೆ ಕನಸುಗಳ ಜಾಗದಲ್ಲಿ ಹೊಸ ಕನಸುಗಳು ಚಿಗುರಬೇಕು. ಸೋತ ಸವಾಲೆದುರಿಸಲು ಹೊಸ ಪ್ರಯತ್ನ ಮಾಡಬೇಕು. Because I cannot do everything, I will not refuse to do something that I can do.
ಹೆಲೆನ್‌ ಕೆಲರ್‌ಳ ಅಮೋಘ ಸಾಲುಗಳನ್ನು ಮತ್ತೆ ಮತ್ತೆ ಓದಿಕೊಂಡೆ.
ಆಕೆ ಅಲ್ಲೆಲ್ಲೋ ನಿದ್ದೆಯಲ್ಲಿ ಮುಗುಳ್ನಕ್ಕಿರಬೇಕು. ಇಲ್ಲಿ, ನನ್ನೊಳಗೂ ಮುಗುಳ್ನಗುವೊಂದು ಅರಳಿತು. ಆಕೆ ಏಳುವ ಸಮಯಕ್ಕೆ ನಾನಿಲ್ಲಿ ಮಲಗಲು ಹೊರಟಿದ್ದೇನೆ. ನನ್ನ ಕಣ್ರೆಪ್ಪೆಯೊಳಗೂ ಆಕೆಯನ್ನು ಮುದಗೊಳಿಸಿದ ಸವಿಗನಸುಗಳು ಅರಳಲಿ. ಬೆಳಗು ಸೂರ್ಯನ ಹೊಂಗಿರಣಗಳೊಂದಿಗೆ ಅವಳನ್ನು ತಲುಪಿ ಪುಳಕಗೊಳಿಸಲಿ.
- ಚಾಮರಾಜ ಸವಡಿ
(ಚಿತ್ರ ಕೃಪೆ: ಗಣಪತಿ ಹೆಗ್ಡೆ)

ಕಳೆದುಹೋಗಬೇಕು...

26 Feb 2011

2 ಪ್ರತಿಕ್ರಿಯೆ
If I loved you less, I might be able to talk about it more?


ಹಾಗಂತ ಬರೆದುಕೊಂಡು ತುಂಬ ದಿನಗಳಾದವು. ಈ ನಡುವೆ ಗಂಭೀರವಾಗಿ ಏನೇ ಮಾಡಲು ಹೋದರೂ ಅದನ್ನು ಪೂರ್ತಿಗೊಳಿಸಲಾಗದೇ ಒದ್ದಾಡುವಂತಾಗುತ್ತಿದೆ. ಸುಮ್ಮನೇ ಪುಸ್ತಕದ ಷೆಲ್ಫ್ ದಿಟ್ಟಿಸುವುದು, ಅದರೊಳಗಿಂದ ಯಾವುದಾದರೂ ಪುಸ್ತಕ ಹೊರತೆಗೆಯುವುದು, ಒಂದಿಷ್ಟು ಪುಟಗಳನ್ನು ತಿರುವಿಹಾಕುವುದು, ಕೆಲ ಸಾಲುಗಳ ಓದು, ಇನ್ನು ಕೆಲ ಸಾಲುಗಳ ಮನನ-

ಅಷ್ಟೊತ್ತಿಗೆ ಮನಸ್ಸು ಎಲ್ಲೋ ಕಳೆದುಹೋಗಿರುತ್ತದೆ.

ಮಧ್ಯವಯಸ್ಕನ ಗೊಂದಲ ಶುರುವಾಯ್ತಾ ಅಂತ ಆಗೀಗ ಅನಿಸುತ್ತಿರುವುದು ನಿಜವಾದರೂ, ಅದನ್ನು ಒಪ್ಪಿಕೊಳ್ಳುವುದು ಮನಸ್ಸಿಗೆ ಕಷ್ಟ. ಛೇ ಇರಲಾರದು ಎಂದು ಸಮಾಧಾನ ಹೇಳಿಕೊಂಡರೂ, ಗೊಂದಲ ಹಾಗೇ ಇರುತ್ತದೆ. ನಿರ್ದಿಷ್ಟವಾಗಿ ಏನನ್ನೂ ಮಾಡಲು ಆಗುತ್ತಿಲ್ಲ. ಹಾಗಂತ ಸುಮ್ಮನೇ ಕೂಡಲೂ ಆಗುತ್ತಿಲ್ಲ.

ಮೋಡ ದಟ್ಟೈಸಿದೆ, ಗಾಳಿ ತಂಪಾಗಿದೆ. ನೆಲವೂ ಕಾದಿದೆ. ಬೇಂದ್ರೆಯವರ ನೀ ಹೀಂಗ ನೋಡಬ್ಯಾಡ ನನ್ನ ಕವಿತೆಯ ಸಾಲುಗಳು ನೆನಪಾಗುತ್ತವೆ. 

‘ನಿನ್ನ ಕಣ್ಣಿನಲಿ ಕಾಲೂರಿ ನದಿಯು, ನಡನಡುವೆ ಹುಚ್ಚು ನಗಿ ಯಾಕ?

ಹನಿ ಒಡೆಯಲಿಕ್ಕೆ ಬಂದಂಥ ಮೋಡ, ತಡೆದ್ಹಾಂಗ ಗಾಳಿಯ ನೆವಕ...’

ಹನಿ ಒಡೆಯಲೆಂದು ಮನಸ್ಸು ಹಂಬಲಿಸುತ್ತದೆ. ಒಳಗಿನದೆಲ್ಲ ಯಾವುದೋ ನೆಪವೊಡ್ಡಿಕೊಂಡು ಹೊರಗುಕ್ಕಲಿ, ಹರಿದು ಹಗುರವಾಗಲಿ ಅಂತ ಒರಲುತ್ತದೆ. 

ಆದರೆ, ಊಹೂಂ, ಹನಿ ಒಡೆಯುತ್ತಿಲ್ಲ. ಮೋಡ ಹಾಗೇ ಬಿಗಿದುಕೊಂಡಿದೆ. 

ಬರೆದು ಹಗುರಾಗಬೇಕೆಂದು ಹಂಬಲಿಸಿದ್ದಾಯ್ತು. ಆದರೆ, ಮನಸ್ಸನ್ನು ತೀವ್ರವಾಗಿ ಕಾಡುವಂಥ ಭಾವನೆಗಳನ್ನು ತಕ್ಷಣಕ್ಕೆ ಬರೆಯುವುದು ಕಷ್ಟಕರ. ತೀವ್ರತರ ಭಾವನೆಗಳು ಹದಗೊಳ್ಳಬೇಕು, ಕೊಂಚ ತಣಿಯಬೇಕು, ಕೊಂಚ ಇಂಗಬೇಕು. ಅಷ್ಟೊತ್ತಿಗೆ, ಹನಿ ಒಡೆಯಬೇಕಾದ ಘಳಿಗೆ ಬಂದು, ಧೋ ಎಂದು ಸಾಲುಗಳು ಉಕ್ಕತೊಡಗುತ್ತವೆ.

ಅದೊಂಥರಾ ನಾರ್ಮಲ್ ಹೆರಿಗೆ.

ಆದರೆ, ಅದೇ ಸಾಧ್ಯವಾಗುತ್ತಿಲ್ಲ ಎಂಬುದು ಸದ್ಯದ ಸಮಸ್ಯೆ. ಅರ್ಜೆಂಟಾಗಿ ಮನಸ್ಸನ್ನು ಬಿಗಿದಿಟ್ಟಿರುವ ಒತ್ತಡ ಹೊರಬೀಳಬೇಕು. ಅತ್ತೋ, ಬರೆದೋ ಹಗುರಾಗಬೇಕು. ಗಂಡಸಾಗಿ ಅಳೋದಾ? ಎಂಬ ಯಾವ ಸೆಂಟಿಮೆಂಟನ್ನೂ ಇಟ್ಟುಕೊಂಡವನಲ್ಲ ನಾನು. ಅಷ್ಟಕ್ಕೂ ಅಳಬೇಕೆನ್ನುವುದು ಯಾವ ದುಃಖಕ್ಕೂ ಅಲ್ಲ.

ಏಕೆಂದರೆ, ಅಳು ಬರಲು ದುಃಖವೇ ಆಗಬೇಕೆಂದೇನೂ ಇಲ್ಲ.

ವಿಪರೀತ ಸೆಂಟಿಮೆಂಟಾದರೂ ಕಣ್ಣೀರು ಉಕ್ಕುತ್ತದೆ. ತೀವ್ರ ಖುಷಿಯಾದಾಗಲೂ. ನನಗೆ ದುಃಖಕ್ಕಿಂತ ಇಂಥ ಸಂದರ್ಭಗಳಲ್ಲಿ ಕಣ್ಣೀರು ಸುರಿದಿದ್ದೇ ಹೆಚ್ಚು.

ಈ ಸಲ ಅದ್ಯಾವುದೂ ಇಲ್ಲ. 

ಮತ್ಯಾಕೆ ಗಂಟು ಬಿತ್ತೀ ದುಗುಡ ಎಂದು ಖಿನ್ನವಾಗುತ್ತಿದೆ ಮನಸ್ಸು. ಕಾಣದ ತೀರಕ್ಕೆ ಹಂಬಲಿಸಿದೆ ಮನ ಎಂಬ ಕವಿವಾಣಿ ನಿಜವಾಗುವ ಮನಸ್ಸು ಹತ್ತಿರ ಬಂತೆ ಅಂತ ಅಂದುಕೊಳ್ಳುತ್ತೇನೆ. ಕಾಣದ ತೀರವನ್ನು ಪದೆ ಪದೆ ಹುಡುಕಿಕೊಂಡು ಹೋದ, ಬದುಕು ಕಟ್ಟಿಕೊಂಡವನು ನಾನು ಎಂದು ಸಮಾಧಾನ ತಂದುಕೊಳ್ಳುತ್ತೇನೆ. 

ಆದರೂ, ದುಗುಡ. 

ವಿಪರೀತ ಸೆಂಟಿಮೆಂಟ್ ಆಗುವುದೇ ದೊಡ್ಡ ಸಮಸ್ಯೆ ಅಂತ ಪದೆ ಪದೆ ಅಂದುಕೊಂಡರೂ, ದುಗುಡ ಶಮನವಾಗುತ್ತಿಲ್ಲ. ಈ ದುಗುಡದಾಳದಿಂದಲೇ ನೆಮ್ಮದಿ ಉಕ್ಕಲಿ ಎಂದು ಹಂಬಲಿಸುವುದೂ ನಿಂತಿಲ್ಲ. ಮನೋವಿಜ್ಞಾನಿಗಳು ಹೇಳುವ ಕೆಮಿಕಲ್ ಇಂಬ್ಯಾಲೆನ್ಸ್ ಇರಬಹುದೇ ಎಂದು ಸಣ್ಣ ಸಂಶಯ. 

ಅದೇನೇ ಇದ್ದರೂ, ಉಕ್ಕಿದ ಸಾಗರ, ಉಕ್ಕಿದಲ್ಲೇ ಶಮನವಾಗಬೇಕು. ಅದು ಮತ್ತೆಲ್ಲಿ ಹೋದೀತು? ಎದ್ದ ಕಡೆಯೇ ಅಲೆ ನಿಲ್ಲಬೇಕು, ಅಳು ನಿಲ್ಲಬೇಕು. ಮುದುಡಿದ ಕಡೆಯೇ ಬದುಕು ಅರಳಬೇಕು. ಅದು ನಿಯಮ.

ಹಾಗಂದುಕೊಂಡು ಮತ್ತೆ ಪುಸ್ತಕಗಳ ಮೊರೆ ಹೋಗುತ್ತೇನೆ. Our sweetest songs are those, which tell our saddest thoughts ಎಂಬ ಪಿ.ಬಿ. ಷೆಲ್ಲಿ ಮಹಾನುಭಾವನ ಕವಿವಾಣಿ ಕಣ್ಣಿಗೆ ಬೀಳುತ್ತದೆ.

ಅರೆ, ಹೌದಲ್ಲವೆ? ಎಂದು ಮನಸ್ಸು ಕೊಂಚ ಅರಳಿತು. 

ಅಳುವ ಮನಸು ಅರಳುವ ಪರಿಯೇ ವಿಚಿತ್ರ. ಇದ್ದಕ್ಕಿದ್ದಂತೆ ದುಗುಡ ಕರಗುವ ಛಾಯೆ. ಮೋಡ ಹನಿ ಒಡೆದ ಅನುಭವ. ದಟ್ಟೈಸಿದ ಎಲ್ಲವೂ ಕರಗತೊಡಗಿದ ಭಾವ. ವಿಚಿತ್ರ ನೆಮ್ಮದಿ ಅಲೆಅಲೆಯಾಗಿ ಆವರಿಸಿದಂತೆ, ಯಾವ ಮದಿರೆಯೂ ನೀಡದ ನೆಮ್ಮದಿಯನ್ನು ನೀಡಿದಂತೆ, ಅದ್ಭುತ ಕವಿತೆಯೊಂದನ್ನು ಓದಿದ ತೃಪ್ತಿಯಂತೆ, ಮನಸ್ಸು ಹಂತಹಂತವಾಗಿ ತಣಿಯತೊಡಗಿತು.

ಅಷ್ಟೇ-

ಅದೆಲ್ಲಿ ಅಡಗಿದ್ದವೋ ಕಣ್ಣೀರು ಉಕ್ಕತೊಡಗಿದವು. ರಾತ್ರಿಯ ನೀರವ ಮೌನದಲ್ಲಿ, ದನಿ ಕೂಡ ಹೊರಬರಲು ಆಸ್ಪದ ನೀಡದಂತೆ ಕಣ್ಣೀರು ಇಳಿದವು. ಜೊತೆಗೆ, ದಟ್ಟ ದುಗುಡ. ಮುಂದೈದು ನಿಮಿಷದಲ್ಲಿ ಅಬ್ಬರಿಸುತ್ತಿದ್ದ ಕಡಲು ಪ್ರಶಾಂತವಾಗಿ, ಕವಿದ ಕಾರ್ಮೋಡ ಕರಗಿ, ಅಪರಾತ್ರಿಯ ಕಾಳವದಲ್ಲಿ ನಕ್ಷತ್ರಗಳು ಸುಮ್ಸುಮ್ಮನೇ ನಕ್ಕವು.

ನಾನೂ ನಕ್ಕೆ. ನನ್ನನ್ನೇ ನೋಡಿಕೊಂಡು. 

- ಚಾಮರಾಜ ಸವಡಿ

ಆತ್ಮದಷ್ಟು ಹತ್ತಿರ, ಆಕಾಶದಷ್ಟು ದೂರ

18 Feb 2011

0 ಪ್ರತಿಕ್ರಿಯೆ
ಇಷ್ಟೇ ಸಾಕೆಂದಿದ್ದೆಯಲ್ಲೋ...

ಹಾಗಂತ ಎಷ್ಟೋ ಸಾರಿ ಅಂದುಕೊಳ್ಳುತ್ತೇನೆ: ಇಷ್ಟಾದರೆ ಸಾಕು. ಹನಿ ಪ್ರೀತಿ, ಒಂದು ಸಾಂತ್ವನದ ಮಾತು, ಜೊತೆಗಿದ್ದೇನೆ ಎಂಬ ಭಾವ, ಖರ್ಚಿಗೊಂದಿಷ್ಟು ಹಣ, ಮಾಡಲೊಂದು ಆಸಕ್ತಿದಾಯಕ ಕೆಲಸ, ಒಂದು ಸಾಂಗತ್ಯ, ಒಂದು ನೆನಪು, ಒಂದು ಕನಸು- ಇಷ್ಟಾದರೆ ಸಾಕು, ಮತ್ತೇನೂ ಬೇಡ ಅಂತ ಎಷ್ಟೋ ಸಲ ಅಂದುಕೊಳ್ಳುತ್ತೇನೆ.

ಹಾಗೆ ಅಂದುಕೊಂಡಿದ್ದು ದಕ್ಕಿದ ಕೂಡಲೇ ಹೊಸ ಕನಸುಗಳು ಮೊಳೆಯುತ್ತವೆ. ಅವಿಷ್ಟಾದರೆ ಸಾಕೆಂಬ ಹೊಸ ಆಸೆ.

ಸನ್ಯಾಸಿಯ ಲಂಗೋಟಿ ಕತೆಯಂಥ ಸರಪಳಿ ಇದು. ಬಿಟ್ಟೆನೆಂದರೂ ಬಿಡದ ಮಾಯೆ. ಬದುಕೆಂಬ ಮಾಯೆಯ ಚಕ್ರ ಬಿಟ್ಟೂಬಿಡದೇ ಸುತ್ತುತ್ತಲೇ ಇರುತ್ತದೆ. ಅದರ ಜೊತಗೆ ನಾವೂ ಸುತ್ತುತ್ತಾ ಹೋಗುತ್ತೇವೆ.

ಹೀಗಾಗಿ, ಪದೆ ಪದೆ ಶುರು ಮಾಡಿದ ಸ್ಥಳಕ್ಕೇ ಬಂದು ತಲುಪಬೇಕಾಗುತ್ತದೆ. ಮತ್ತೆ ಕತೆ ಹೊಸದಾಗಿ ಶುರು.

ಈಗ ಅಂಥ ಮತ್ತೊಂದು ಸುತ್ತಿನ ಹತ್ತಿರ ಬಂದು ನಿಂತಿದ್ದೇನೆ.

ಬದುಕಿನ ಚಕ್ರ ಈಗ ಮತ್ತೊಂದು ಸುತ್ತಿಗೆ ಸಿದ್ಧವಾಗಬೇಕು. ಅನುಭವದ ಬಲ ಜೊತೆಗಿದ್ದರೂ ಕೂಡ, ಎಂದಿನಂತೆ ಹೊಸತನ ತರುವ ತಾಜಾ ಅಳುಕು ಆತ್ಮವಿಶ್ವಾಸವನ್ನು ಕುಗ್ಗಿಸುತ್ತಿದೆ. ವಿಚಿತ್ರ ಗೊಂದಲ. ಈ ಸುತ್ತು ನನಗೆ ಬೇಕಿತ್ತಾ ಎಂಬ ಹಳೇ ಪ್ರಶ್ನೆ. ಅಪರಿಚಿತ ಊರಲ್ಲಿ ರಾತ್ರಿಯ ಕೊನೇ ಬಸ್‌ ತಪ್ಪಿಸಿಕೊಂಡ ಪ್ರಯಾಣಿಕನಿಗಿರುವಂಥ ವಿಚಿತ್ರ ಗೊಂದಲ, ತಳಮಳ. ರಾತ್ರಿ ಕಳೆದರೆ ಸಾಕು, ನಸುಕಿನಲ್ಲಿ ಮೊದಲ ಬಸ್‌ ಹೊರಡುತ್ತದೆ ಎಂದು ಗೊತ್ತಿದ್ದರೂ ಸುಮ್ಮಸುಮ್ಮನೇ ಬಸ್‌ಸ್ಟ್ಯಾಂಡ್‌ ಇಡೀ ಓಡಾಡುವಂತಹ ಭಾವ. ಇನ್ನೊಂದು ಬಸ್‌ ಬರಬಹುದು ಎಂಬ ವಿಚಿತ್ರ ಭರವಸೆ. ರಾತ್ರಿಯೇ ಊರು ತಲುಪಬಿಡಬಹುದು ಎಂಬ ಕನಸು.

ಆದರೆ, ತಪ್ಪಿಸಿಕೊಂಡ ಬಸ್‌ ಮತ್ತೆ ಬರುವುದಿಲ್ಲ. ಅದರ ಬದಲಾಗಿ ಇನ್ಯಾವುದೋ ವಾಹನವೂ ಬರುವುದಿಲ್ಲ. ಬದುಕಿನಲ್ಲಿ ಆಕಸ್ಮಿಕಗಳು ಅದೃಷ್ಟವಾಗುವುದು ತುಂಬಾ ಅಪರೂಪ. ಅಂತಹ ಕನಸು ಕಾಣದಿರು ಮರುಳೇ ಅಂದುಕೊಳ್ಳುತ್ತ ಬದಲಾಗಲೇಬೇಕಾದ ಪರಿಸ್ಥಿತಿಗೆ ಹೊಂದಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ.

ಆ ದಿನ ಮತ್ತೆ ಮತ್ತೆ ನೆನಪಾಗುತ್ತಿದೆ. ರಾತ್ರಿಯಿಡೀ ಅರಳಿದ ಹೂವೊಂದಕ್ಕೆ ಬೆಳಿಗ್ಗೆ ಗಂಧ ಸೇರಿಕೊಂಡಂತೆ, ಮತ್ತದೇ ರಸ್ತೆಯಲ್ಲಿ ಜೊತೆಯಾಗಿ ನಡೆದಂತೆ, ಮಾತಾಡಿಕೊಂಡಂತೆ, ಮೊಗೆದಷ್ಟೂ ಉಕ್ಕುವ ನೆನಪುಗಳನ್ನು ಮತ್ತೆ ಮತ್ತೆ ಆಸ್ವಾದಿಸಿದಂತೆ- ವಿಚಿತ್ರ ಹಳವಂಡಗಳು. ತೀರಾ ಆಕಸ್ಮಿಕವಾಗಿ ಶುರುವಾದ ಸುನೀತ ಭಾವವೊಂದು ಮೆಲು ಹಾಡಾದ ಆ ಪರಿಯನ್ನು ಹೇಳುವುದು ಹೇಗೆ? ಹೇಳದಿರುವುದು ಹೇಗೆ? ಇಷ್ಟೇ ಸಾಕು ಅಂತ ಅದೆಷ್ಟೋ ಸಲ ಅಂದುಕೊಂಡರೂ, ಊಹೂಂ, ಇಷ್ಟೇ ಸಾಕಾಗುವುದಿಲ್ಲ ಎಂಬುದು ಬಲು ಬೇಗ ಗೊತ್ತಾದಾಗ, ಆವರಿಸಿದ್ದು ಮತ್ತದೇ ಖಿನ್ನತೆ. ಮತ್ತದೇ ಗೊಂದಲ.

ಪ್ರತಿಯೊಂದು ಗೊಂದಲವೂ, ಪ್ರತಿಯೊಂದು ಖಿನ್ನತಾ ಘಳಿಗೆಯೂ ಕೆಲಸದ ಮೇಲೆ ಪರಿಣಾಮ ಬೀರುತ್ತದೆಂಬುದು ಗೊತ್ತಿದ್ದರೂ, ಆಸೆಬುರುಕ ಕುಡುಕನಂತೆ, ಖಿನ್ನತೆಯನ್ನು ಮೊಗೆಮೊಗೆದು ಕುಡಿಯುತ್ತಿದ್ದೇನೆ. ಮತ್ತಷ್ಟು ತೀವ್ರ ಖಿನ್ನತೆಗೆ ಈಡಾಗುತ್ತಿದ್ದೇನೆ. ಪ್ರತಿಯೊಂದು ಅತಿರೇಕದಾಚೆಗೆ ಅದರ ಅಂತ್ಯ ಇರುವಂತೆ, ಉಕ್ಕಿಬರುವ ಈ ಖಿನ್ನತೆಯ ಪರಮೋಚ್ಚ ಸ್ಥಿತಿ ತಲುಪಿಬಿಡಬೇಕೆಂಬ ಹಠಕ್ಕೆ ಬಿದ್ದಿದ್ದೇನೆ. ಕಂಪ್ಯೂಟರ್‌ ಮುಂದೆ ಗಂಟೆಗಟ್ಟಲೇ ಮೌನವಾಗಿ ಕೂಡುತ್ತೇನೆ. ಷೆಲ್ಫಿನಲ್ಲಿರುವ ಇಷ್ಟಪಟ್ಟ ಹಲವಾರು ಪುಸ್ತಕಗಳನ್ನು ಸುಮ್‌ಸುಮ್ಮನೇ ತಿರುವಿ ಹಾಕುತ್ತೇನೆ. ಅಲ್ಲಲ್ಲಿ ಸಾಲುಗಳು ಮಿಂಚುತ್ತವೆ. ಗಾಢಾಂಧಕಾರ ತುಂಬಿದ ಅರಣ್ಯದೊಳಗಿನ ಮಿಂಚುಹುಳುಗಳಂತೆ, ಅವು ಮಿಣುಕಿ ಮರೆಯಾಗುತ್ತವೆ. ಊಹೂಂ, ಇವ್ಯಾವೂ ಮನದ ಕತ್ತಲನ್ನು ಹೊಡೆದೋಡಿಸುವಷ್ಟು, ನೆಮ್ಮದಿಯ ಬೆಳಕನ್ನು ತರಬಲ್ಲಷ್ಟು ಶಕ್ತಿಶಾಲಿಯಲ್ಲ ಎಂದು ನಿಡುಸುಯ್ಯುತ್ತೇನೆ. ಈ ಅಂಧಕಾರವನ್ನು ಆ ನಗೆಮಿಂಚು ಮಾತ್ರ ದೂರ ಮಾಡಬಲ್ಲದು ಎಂದು ಮತ್ತೆ ಮನಸ್ಸು ಆಸೆಪಡುತ್ತದೆ.

ರಾತ್ರಿಗೂ ಹಗಲಿಗೂ ನಡುವಿನ ವ್ಯತ್ಯಾಸವೇ ಅಳಿದುಹೋದಂತಾಗಿರುವ ಈ ಘಳಿಗೆಗಳ ಆಚೆಗೆ ಭರವಸೆಯ ಬದುಕಿದೆ. ಅದನ್ನು ತಲುಪಬೇಕೆಂಬ ಉತ್ಕಟ ಆಸೆಯ ಜೊತೆಗೆ, ಹೇಗೆ ತಲುಪುವುದೆಂಬುದು ಗೊತ್ತಿಲ್ಲದ ಗೊಂದಲ. ವೃತ್ತಿ-ಪ್ರವೃತ್ತಿಗಳ ನಡುವಿನ ಘರ್ಷಣೆಯ ನಡುವೆ, ಹಾಗೇ ಉಳಿದಹೋದ ನೂರಾರು ಕನಸುಗಳು, ಸಾವಿರಾರು ಸುನೀತ ಭಾವನೆಗಳು. ಅರೆತೆರೆದ ಪುಸ್ತಕದೊಳಗಿನ ಸಾವಿರಾರು ಭಾವನೆಗಳಂತೆ, ಘಟನೆಗಳಂತೆ, ಅಕ್ಷರಗಳಂತೆ, ಆಹ್ವಾನದಂತೆ ಇಷ್ಟೇ ಸಾಕೆಂದಿದ್ದ ಕನಸು ಕ್ಷಣಕ್ಷಣಕ್ಕೂ ಸೆಳೆಯುತ್ತದೆ. ಮನಸ್ಸು ಮತ್ತದೇ ದಾರಿಗುಂಟ ಯಾತ್ರೆ ಹೊರಡುತ್ತದೆ.

ಕೆಲವೊಂದು ಭಾವನೆಗಳೇ ಹಾಗೆ. ಅವು ಮನಸ್ಸೊಳಗೆ ಮಾಗುತ್ತಲೇ ಹೋಗುತ್ತವೆ. ಅರಳುತ್ತಲೇ ಇರುತ್ತವೆ. ಯಾವೊಂದು ಶಕ್ತಿಗೂ ಈ ವಿಕಸನವನ್ನು ತಡೆಯಲಾಗದು. ಈ ಕನಸನ್ನು ಕಮರಿಸಲಾಗದು. ಚೆಲ್ಲವರಿದು ಹಬ್ಬುತ್ತ, ಹರಡುತ್ತ, ಹೊಸ ಕನಸುಗಳಿಗೆ ಜೀವ ಕೊಡುತ್ತ, ಹೊಸ ಸಾಧ್ಯತೆಗಳಿಗೆ ತೆರೆದುಕೊಳ್ಳುತ್ತ ಇವು ನಿರಂತರವಾಗಿ ಪ್ರೇರಣೆ ನೀಡುತ್ತ ಹೋಗುತ್ತವೆ. ಮೂಕನ ಮನದಾಳದಂತೆ, ಹೇಳಲಾಗದು, ಹೇಳದಿರಲಾಗದು. ತನ್ನದೇ ರೀತಿಯಲ್ಲಿ ವ್ಯಕ್ತವಾಗುತ್ತ, ಅವ್ಯಕ್ತವಾಗುತ್ತಲೇ ಅರ್ಥಪೂರ್ಣವಾಗುತ್ತ, ಗೊತ್ತಾಯ್ತಾ ಎಂದು ಪ್ರಶ್ನಿಸುತ್ತ, ಗೊತ್ತಿಲ್ಲದೇ ಇದ್ದೀತೆ ಎಂಬ ಭಾವ ಹೊತ್ತು ನಿಲ್ಲುವ ಈ ಭಾವನೆಗಳ ತೀವ್ರತೆ ಅನುಭವಿಸುವುದು ಕಷ್ಟ. ಅನುಭವಿಸದಿರೆ ಬದುಕು ವ್ಯರ್ಥ.

ಬಹುಶಃ ಬದುಕು ಮತ್ತೊಂದು ಪ್ರಮುಖ ತಿರುವಿನಲ್ಲಿ ಬಂದು ನಿಂತಂತಿದೆ. ಇದು ನನ್ನನ್ನು ಮತ್ತೆ ಒಕ್ಕಲೆಬ್ಬಿಸುತ್ತದೋ, ದಿಕ್ಕುಗೆಡಿಸುತ್ತದೋ, ದಿಕ್ಕುಗಾಣಿಸುತ್ತದೋ ಗೊತ್ತಿಲ್ಲ. ಅಲೆಮಾರಿ ಜಂಗಮನಂತೆ, ಮತ್ತೊಂದು ಊರಿನತ್ತ ನನ್ನ ಬದುಕು ಮುಖ ಮಾಡುತ್ತಿದೆ. ಇಲ್ಲಿಯದೆಲ್ಲವನ್ನೂ ಇಲ್ಲಿಯೇ ಬಿಟ್ಟು, ಇನ್ನೆಲ್ಲೋ ಹೊರಟ ನನಗೆ, ನನ್ನೊಳಗೆ ಮಾಗುತ್ತಿರುವ, ಅರಳುತ್ತಿರುವ, ಬೆಳೆಯುತ್ತಿರುವ ಕನಸೊಂದನ್ನು, ಪ್ರೇರಣೆಯೊಂದನ್ನು ಮಾತ್ರ ಬಿಡಲಾಗುತ್ತಿಲ್ಲ. ಬಿಟ್ಟರೆ ಬದುಕಲಾಗುವುದಿಲ್ಲ.

ದೂರ ಹೊರಟವನದೊಂದೇ ಬೇಡಿಕೆ: ನಾ ಹೋಗಬಹುದಾದ ದೂರಕ್ಕೂ ಆ ಪರಿಮಳ ಬರುವಂತಾಗಲಿ. ಆ ಕನಸು ಬೆನ್ಹತ್ತಲಿ. ಅದು ನೆಟ್ಟ ಕನಸಿನ ಬೀಜ ಮನದೊಳಗೆ ಮರವಾಗಿ, ಮರದೊಳಗೆ ಫಲವಾಗಿ, ಫಲದೊಳಗೆ ನನಸಾಗಲಿ. ಆ ನನಸನ್ನು, ಆ ದೂರದಿಂದಲೇ ಆಸ್ವಾದಿಸುವಂತಾಗಲಿ. ಮೊದಲು ಇಷ್ಟೇ ಸಾಕೆಂದಿದ್ದೆನಾದರೂ, ಊಹೂಂ, ಇಷ್ಟು ಸಾಕಾಗುವುದಿಲ್ಲ ಎಂಬ ಇವತ್ತಿನ ನಿರಾಶೆ, ಮುಂದೊಂದಿನ ಸಂತಸವಾಗಲಿ. ನೆಮ್ಮದಿಯಾಗಲಿ. ಅಸಾಧ್ಯ ಕನಸುಗಳನ್ನು ಮತ್ತೆ ಮತ್ತೆ ಕಾಣುವ ಹುಚ್ಚಿಗೆ ಕಿಚ್ಚಾಗಲಿ. ಮತ್ಯಾವತ್ತೋ ನಾನು ಹೊರಟಲ್ಲಿಗೇ ತಲುಪಿದಾಗ, ಆ ಕನಸು ಮಾಗಿರಲಿ, ನನ್ನ ಕಂಡು ಮುಗುಳ್ನಗಲಿ. ಮಂಜುಕವಿದ ಮುಂಜಾವಿನ ಸೂರ್ಯನಂತೆ ಬೆಚ್ಚಗೇ ಬೆಳಗಲಿ, ನನ್ನೊಳಗಿನ ಶಾಶ್ವತ ಮಂಕನ್ನು ಕಳೆಯಲಿ.

ನಿನಗಿದೆಲ್ಲ ಅರ್ಥವಾಯಿತಾ? ಅರ್ಥವಾಗದೇ ಇದ್ದೀತಾ!

- ಚಾಮರಾಜ ಸವಡಿ

ವೃತ್ತದೊಳಗಿನ ಬದುಕು ಮತ್ತು ಲೊಳಲೊಟ್ಟೆ

24 Jul 2010

13 ಪ್ರತಿಕ್ರಿಯೆ
ತುಂಬ ದಿನಗಳಿಂದ ಏನನ್ನೂ ಬರೆದಿಲ್ಲ. ಪ್ರೋಗ್ರಾಂಗಳಿಗೆ ಸ್ಕ್ರಿಪ್ಟ್‌ಗಳನ್ನು ಬರೆಯುವ ವೃತ್ತಿ ಕೆಲಸ ಹೊರತುಪಡಿಸಿ, ಗೂಗಲ್‌ ಬಝ್‌ನಲ್ಲಿ ಒಂದಿಷ್ಟು ಹರಟೆ ಹೊಡೆದಿದ್ದು ಬಿಟ್ಟರೆ ಮತ್ತೇನನ್ನೂ ಬರೆದಿರಲಿಲ್ಲ. ಬರೆಯುವ ಮನಸ್ಸಿದ್ದರೂ, ಒತ್ತಡ ಸಾಕಷ್ಟಿರಲಿಲ್ಲ.

ಆದರೂ ಒಂಥರಾ ಅಸಮಾಧಾನ ಮಾತ್ರ ಕಾಡುತ್ತಿತ್ತು. ಹಾಗೆ ನೋಡಿದರೆ, ಬರೆಯುವುದು ಸಾಕಷ್ಟಿದೆ. ಅದೊಂಥರಾ ಒರತೆಯಂತೆ. ಮೊಗೆದಷ್ಟೂ ಉಕ್ಕುತ್ತದೆ. ಮೊಗೆಯುವುದನ್ನು ಬಿಟ್ಟರೆ, ಒರತೆಯಲ್ಲಿ ಎಷ್ಟಿರಬೇಕೋ, ಅಷ್ಟು ಮಾತ್ರ ನಿಲ್ಲುತ್ತದೆ.

ಹೀಗಾಗಿ, ಅಸಮಾಧಾನ ಹಾಗೇ ಉಳಿದಿತ್ತು. ಒಂದೆರಡು ಬಾರಿ ಕವಿತೆ ಬರೆಯಲು ಯತ್ನಿಸಿದೆನಾದರೂ, ಅದು ಮುಂದುವರೆಯಲಿಲ್ಲ. ಕಚೇರಿಯಲ್ಲಿ ಕೂತಾಗ ಉಕ್ಕುವ ಭಾವನೆಗಳನ್ನು ಅಕ್ಷರಗಳನ್ನಾಗಿಸಲು ಯತ್ನಿಸಿದರೂ ಅದಕ್ಕೆ ಏನೇನೋ ಸಣ್ಣಪುಟ್ಟ ಅಡ್ಡಿಗಳು.

ಒಂದು ವಿಷಯ ತುಂಬ ದಿನದಿಂದ ಕಾಡುತ್ತಿದೆ.

ಪ್ರತಿಯೊಬ್ಬರೂ ತಮ್ಮದೇ ಆದ ಒಂದು ವೃತ್ತವನ್ನು, ಬಳಗವನ್ನು, ತಂಡವನ್ನು ಕಟ್ಟಿಕೊಳ್ಳುವ ಪರಿ ಅಚ್ಚರಿ ಹುಟ್ಟಿಸುತ್ತದೆ. ಅದು ಮನುಷ್ಯಸಹಜ ಗುಣವಾದರೂ, ಅದರ ಮಿತಿ ಅರಿಯದೇ ನಾವು ವೃತ್ತವೊಂದಕ್ಕೆ ಕಟ್ಟುಬೀಳುವುದೇ ಅಚ್ಚರಿಯ ಸಂಗತಿ. ಒಂದೇ ರೀತಿಯ ವಿಚಾರ ಹೊಂದಿರುವವರು, ವೃತ್ತಿಯಲ್ಲಿರುವವರು, ಪ್ರದೇಶದಲ್ಲಿರುವವರು, ಜಾತಿಯವರು, ಭಾಷೆಯವರು- ಹೀಗೆ ನಾನಾ ಕಾರಣಗಳಿಗಾಗಿ ಜನ ಗುಂಪು ಕಟ್ಟಿಕೊಳ್ಳುತ್ತಾರೆ. ಅಲಿಖಿತ ನಿಯಮಗಳನ್ನು ಹಾಕಿಕೊಂಡು, ಅದರ ಮಿತಿಯೊಳಗೆ ಬದುಕುತ್ತ ಹೋಗುತ್ತಾರೆ. 
 
ಆ ವೃತ್ತದೊಳಗೆ ಪ್ರವೇಶಿಸುವುದು ಸುಲಭವಲ್ಲ. ‘ಹೊರಗಿನವರು’ ಎಂದು ಭಾವಿಸಿದ ಯಾರನ್ನೂ ಅವರು ಒಳಗೆ ಬಿಟ್ಟುಕೊಳ್ಳುವುದಿಲ್ಲ. ಅಂಥವರನ್ನು ಅನುಮಾನದಿಂದ ನೋಡುತ್ತಾರೆ. ಗೊತ್ತಿದ್ದೋ, ಗೊತ್ತಿಲ್ಲದೆಯೋ ತಮ್ಮ ವೃತ್ತದೊಳಗೆ ಪ್ರವೇಶಿಸಲು ಮುಂದಾದವನನ್ನು ಶತ್ರುವಿನಂತೆ ಕಾಣುತ್ತಾರೆ. ಪ್ರಾಣಿ-ಪಕ್ಷಿಗಳಲ್ಲಿ ಇದು ಸಾಮಾನ್ಯ ಸಂಗತಿಯಾಗಿದ್ದರೂ, ಸೂಕ್ಷ್ಮವಾಗಿ ನೋಡಿದರೆ, ನಮ್ಮ ಸುತ್ತಮುತ್ತಲೇ ಅಂಥ ಹಲವಾರು ವೃತ್ತಗಳು ಕಾಣಿಸುತ್ತವೆ.

ನೀವು ಎಷ್ಟೇ ಆತ್ಮೀಯರಾಗಿರಿ, ಎಷ್ಟೇ ಬುದ್ಧಿವಂತರಾಗಿರಿ, ಅವರು ಯಾವ ಕಾರಣಕ್ಕೂ ನಿಮ್ಮನ್ನು ‘ತಮ್ಮವ’ ಎಂದು ಕಾಣುವುದಿಲ್ಲ. ನಿಮ್ಮ ಜೊತೆಗೇ ಇದ್ದರೂ, ನೀರಿನಲ್ಲಿನ ಎಣ್ಣೆಯಂತೆ ಬೇರೆಯಾಗೇ ಇರುತ್ತಾರೆ. ಎಂದೆಂದೂ ನಿಮ್ಮೊಂದಿಗೆ ಆತ್ಮೀಯರಾಗುವುದಿಲ್ಲ. ವರ್ಷಗಟ್ಟಲೇ ಜೊತೆಗಿದ್ದರೂ ನಿಮ್ಮನ್ನು ತಮ್ಮೊಂದಿಗೆ ಸೇರಿಸಿಕೊಳ್ಳುವುದಿಲ್ಲ. ನೀವು ಪ್ರಯತ್ನಪಟ್ಟಷ್ಟೂ ನಿಮ್ಮನ್ನು ದೂರವಾಗೇ ಇಡುತ್ತ ಹೋಗುತ್ತಾರೆ.

ಮೊದಮೊದಲು ನನಗಿದು ಬೇಸರ, ಅಸಮಾಧಾನ, ನೋವು ಉಂಟು ಮಾಡುತ್ತಿತ್ತು. ಒಂದೇ ಪ್ರದೇಶಕ್ಕೆ ಸೇರಿದವರಾಗಿದ್ದರೂ, ಕೆಲವರು ಇನ್ಯಾವುದೋ ಕಾರಣಗಳಿಗಾಗಿ ಹೊರಗಿಡುತ್ತಾರೆ. ಒಂದೇ ಜಾತಿಯವರಾಗಿದ್ದರೂ, ಇಂಥವೇ ಮತ್ಯಾವುದೋ ಕಾರಣಗಳಿಗಾಗಿ ಪ್ರತ್ಯೇಕವಾಗಿ ನಿಲ್ಲುತ್ತಾರೆ. ಅವರ ವೃತ್ತದ ಅಲಿಖಿತ ಸಂವಿಧಾನ ನನ್ನಂಥವರಿಗೆ ಯಾವತ್ತೂ ಅರ್ಥವಾಗುವುದಿಲ್ಲ ಅನಿಸುತ್ತದೆ. ಏಕೆಂದರೆ, ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದಷ್ಟೂ ಅದು ಕಗ್ಗಂಟಾಗುತ್ತಲೇ ಹೋಗಿದೆ.

ಪ್ರತಿಯೊಂದು ಪತ್ರಿಕೆ, ಟಿವಿಗಳಲ್ಲೂ ಕೆಲ ವ್ಯಕ್ತಿಗಳಿರುತ್ತಾರೆ. ಅವರು ಪ್ರತಿಭಾಶೂನ್ಯರು. ತೀರಾ ತೆಳು ವಿಷಯಗಳ ಬಗ್ಗೆ ಮಾತ್ರ ಅವರ ಗಮನ. ಯಾರೂ ಅವರ ಬರಹ, ಪ್ರಸ್ತುತಿಯನ್ನು ಗಮನಿಸದೇ ಇದ್ದರೂ, ವೃತ್ತದೊಳಗಿನವರಿಗೆ ಮಾತ್ರ ಅವರು ಅದ್ಭುತ ವರದಿಗಾರಿಕೆ ಮಾಡಿದ್ದಾರೆ ಎನ್ನುವ ಹೆಮ್ಮೆ. ‘ಏನ್‌ ಚೆನ್ನಾಗಿ ಬರೆದಿದ್ದೀ ಕಣೆ, ಸೂಪರ್ ಆಗಿ ಬಂದಿದೆ’ ಎಂದು ಬೆನ್ನು ತಟ್ಟುತ್ತಿರುತ್ತಾರೆ ಅಥವಾ ತಟ್ಟಿಸಿಕೊಳ್ಳುತ್ತಿರುತ್ತಾರೆ. ಕಸದಂಥ ವರದಿ ತಂದವನನ್ನು ಅರುಣ್ ಶೌರಿಯಂತೆ ನೋಡುವವರಿದ್ದಾರೆ. ಆಭರಣ, ಸೀರೆ, ಫ್ಯಾಶನ್, ಮೇಕಪ್, ಋತುಚಕ್ರ ಸಮಸ್ಯೆಗಳ ಬಗ್ಗೆ ಏರಳಿತಗಳಿಲ್ಲದ, ಯಾವುದೇ ಹೊಸದೃಷ್ಟಿ ನೀಡದ ವರದಿ ಮಾಡಿದರೂ ಅಭಿನಂದನೆ ಅವರಿಗೆ ಕಾಯಂ. ಅದ್ಭುತ ವರದಿ ತಂದ, ರಿಸ್ಕ್ ಎದುರಿಸಿ ಗಮನ ಸೆಳೆಯುವ ವರದಿ ಮಾಡಿದವರು ಆಕಸ್ಮಿಕವಾಗಿ ಕೂಡ ಅವರ ಚರ್ಚೆಯ ವಿಷಯವಾಗುವುದಿಲ್ಲ. ತಮಗಿಂತ ಭಿನ್ನವಾಗಿ, ಉತ್ತಮವಾಗಿ ಇನ್ಯಾರೋ ಕೆಲಸ ಮಾಡಿದ್ದಾರೆ ಎಂಬುದನ್ನು ಅವರು ಯಾವತ್ತೂ ಗಮನಿಸುವುದಿಲ್ಲ.

ಬಹುಶಃ ಪ್ರತಿಯೊಂದು ವೃತ್ತಿಯಲ್ಲಿಯೂ ಇಂಥ ವೃತ್ತಗಳು, ‘ವೃತ್ತಪರರು’ ಇರುತ್ತಾರೆ ಅನಿಸುತ್ತದೆ. ಅಂಥ ಬಳಗದ ಒಬ್ಬರ ಕೆಲಸ ಇನ್ನೊಬ್ಬರಿಗೆ ಅತಿ ಮೆಚ್ಚಿನ ವಿಷಯ.  ವೃತ್ತದ ಹೊರಗಿನವರ ಸಾಧನೆ ಅದ್ಭುತವಾಗಿದ್ದರೂ, ಅದು ಅವರಿಗೆ ಕಾಲಕಸ!

ಇಂಥ ವಾತಾವರಣದಲ್ಲಿ ಕ್ರಿಯಾಶೀಲತೆ ಉಳಿಸಿಕೊಳ್ಳುವುದು ಹೇಗಪ್ಪಾ ಎಂದು ಮೊದಮೊದಲು ಚಿಂತೆ ಮಾಡುತ್ತಿದ್ದೆ. ಇವತ್ತು ಬ್ಲಾಗ್‌ಗಳಲ್ಲಿ, ವಿವಿಧ ಮಾಧ್ಯಮಗಳಲ್ಲಿ ಪತ್ರಕರ್ತರ ಈ ಪರಿಯ ‘ಕ್ರಿಯಾಶೀಲತೆ’ಯನ್ನು ಉಗಿಯುತ್ತಿರುವಾಗ, ನನಗೆ ಹಳೆಯ ಅಳುಕು ಮತ್ತೆ ಮತ್ತೆ ನೆನಪಾಗುತ್ತಿದೆ. ಯಾರೇ ಗುರುತಿಸಲಿ, ಬಿಡಲಿ, ನನಗೆ ಸರಿ ಅನಿಸಿದ್ದನ್ನು ಮಾಡುತ್ತ ಹೋಗುವುದೇ ಉತ್ತಮ ಮಾರ್ಗ ಎಂಬುದನ್ನು ಅನುಭವ ನನಗೆ ಕಲಿಸಿದೆ. ಚೆನ್ನಾಗಿ ಬರೆಯುವುದು, ವರದಿ ಮಾಡುವುದು ವೈಯಕ್ತಿಕ ಆನಂದದ ಕೆಲಸ. ಅದಕ್ಕೂ, ಮನ್ನಣೆಗೂ ಸಂಬಂಧ ಕಲ್ಪಿಸಬಾರದು ಎಂದು ವೃತ್ತಿಯ ಮೊದಲ ದಿನಗಳಲ್ಲಿ ನಾನು ತೆಗೆದುಕೊಂಡ ನಿರ್ಧಾರ ಇವತ್ತಿಗೂ ನನ್ನನ್ನು ಪೊರೆಯುತ್ತಿದೆ.

ಆದರೂ, ಹಳೆಯ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಒಂದು ಸೀಮಿತ ವಲಯಕ್ಕೆ, ವೃತ್ತಕ್ಕೆ ಸೀಮಿತವಾಗುವ ಜನರನ್ನು ಕಂಡಾಗೆಲ್ಲ ‘ಏಕೆ ಹೀಗೆ?’ ಎಂಬ ಪ್ರಶ್ನೆ ಮತ್ತೆ ಮತ್ತೆ ಕಾಡುತ್ತದೆ. ಮಾಧ್ಯಮಗಳಲ್ಲಿ ಚಿಲ್ಲರೆ ಸಂಗತಿಗಳಿಗೆ ಈಗ ದೊರೆಯುತ್ತಿರುವ ಪ್ರಾಶಸ್ತ್ಯ, ವಾಸ್ತವ ಗ್ರಹಿಸದೇ ತಮಗೆ ಸರಿ ಅನಿಸಿದಂತೆ ವರದಿ ಮಾಡುವುದನ್ನು ಕಂಡಾಗ, ರೇಗುವಂತಾಗುತ್ತದೆ. ಟಿವಿಗಳ ಬಹುತೇಕ ಕಾರ್ಯಕ್ರಮಗಳಲ್ಲಿ ಹಾಗೂ ವರದಿಯಲ್ಲಿ ಸಿನಿಮಾ ಹಾಡುಗಳನ್ನು, ಶೀರ್ಷಿಕೆಗಳನ್ನು, ಹಾಡುಗಳ ಸಾಲುಗಳನ್ನು ಭಾರಿ ಹೆಡ್ಡಿಂಗ್‌ಗಳಂತೆ ಬಳಸುವುದನ್ನು ಕಂಡಾಗ ನನಗೆ ಮತ್ತೆ ಮತ್ತೆ ‘ವೃತ್ತಪರರು’ ನೆನಪಾಗುತ್ತಾರೆ. ಇದರ ಜೊತೆಗೆ ಬೌದ್ಧಿಕ ದಿವಾಳಿತನ ಸೇರಿಕೊಂಡಾಗ ಮಾತ್ರ ಇಂಥ ಕಳಪೆ ಉತ್ಪನ್ನ ಬರಲು ಸಾಧ್ಯ.

ಹೀಗಾಗಿ, ಚಿಗುರೊಡೆಯದವರೂ ಪ್ರತಿಭಾವಂತರೆನಿಸಿಕೊಳ್ಳುತ್ತಿದ್ದಾರೆ. ಬಂಡವಾಳವೇ ಇಲ್ಲದವರು ಬುದ್ಧಿವಂತರೆನಿಸಿಕೊಂಡಿದ್ದಾರೆ. ಯಾವ ವ್ಯಕ್ತಿ ವೃತ್ತಿಯಲ್ಲಿ ತನಗಿಂತ ಕಿರಿಯರಾದವರಿಗೆ ಏನನ್ನೂ ಕಲಿಸಲಾರನೋ, ಅಂಥ ವ್ಯಕ್ತಿ ವೃತ್ತಿಯನ್ನು ಹಾಳುಮಾಡುತ್ತ ಹೋಗುತ್ತಾನೆ. ತನ್ನ ವೃತ್ತದೊಳಗೇ ಬದುಕುತ್ತ, ಅದರೊಳಗೆ ಯಾವ ಕ್ರಿಯಾಶೀಲತೆಯೂ ಪ್ರವೇಶಿಸದಂತೆ ತಡೆಯುತ್ತ ಬಾವಿಯೊಳಗಿನ ಕಪ್ಪೆಯಂತಾಗುತ್ತಾನೆ. ಒಂದ್ಹತ್ತು ವರ್ಷ ಹೀಗೆ ಮಾಡಿದ ನಂತರ, ಅವನಿಗೆ ಸೀನಿಯರ್ ಪಟ್ಟ ಸಿಗುತ್ತದೆ. ಅಲ್ಲಿಗೆ ಮುಗಿಯಿತು. ಅವನನ್ನು ತಡೆಯುವುದು ಸಾಧ್ಯವಿಲ್ಲ.

‘ಉದಯ ವಾರ್ತೆಗಳು’ ಚಾನೆಲ್ ಹಾಳಾಗಿದ್ದು ಹೀಗೆ. ಕನ್ನಡದ ಬಹುತೇಕ ಪ್ರಮುಖ ದಿನಪತ್ರಿಕೆಗಳು ಮೆನೋಪಾಸ್ ತಲುಪಿದ್ದು ಈ ಕಾರಣಕ್ಕಾಗಿ. ಒಂದು ಅರ್ಥಪೂರ್ಣ ವರದಿಗಾರಿಕೆ, ಬರಹ, ಪ್ರಸ್ತುತಿ ಅಪರೂಪವಾಗುತ್ತ ಹೋಗುತ್ತಿರುವುದು ಈ ಕಾರಣಗಳಿಂದಾಗಿ.

ಹಾಗಂತ ನಾನು ಅಂದುಕೊಂಡಿದ್ದೇನೆ. ಪದೆ ಪದೆ ಈ ಅನಿಸಿಕೆ ದೃಢವಾಗುತ್ತ ಹೋಗಿದೆ. ಪ್ರತಿ ದಿನ, ಪ್ರತಿ ಕ್ಷಣ, ಪ್ರತಿ ಸಂಸ್ಥೆ ಈ ವಿಷಯವನ್ನು ಮತ್ತೆ ಮತ್ತೆ ಮನದಟ್ಟು ಮಾಡುತ್ತ ಹೋಗಿವೆ. ಹೇಳೋದಕ್ಕೆ ‘ಮಾಧ್ಯಮ’ ಎಂಬ ಹೆಸರು. ಆದರೆ, ಜನರಿಗೂ ಸುದ್ದಿಸಂಸ್ಥೆಗೂ ಮಧ್ಯೆ ಇರಬೇಕಾದ ತಂತೇ ಕ್ಷೀಣವಾಗಿದೆ. ಎಲ್ಲವೂ ಸೆನ್ಸೇಶನಲ್, ಉದ್ರೇಕಕಾರಿ, ತಕ್ಷಣ ಗಮನ ಸೆಳೆಯುವಂಥದಾಗಿರಬೇಕು ಎಂಬ ಹಪಾಹಪಿಯಲ್ಲಿ ಸುದ್ದಿ/ಕಾರ್ಯಕ್ರಮ/ವರದಿ ಪ್ರಸ್ತುತಿಯ ಸೊಗಸು ಕಳೆದುಹೋಗುತ್ತಿದೆ. ಹೀಗಾಗಿ ಬಹುತೇಕ ಕಡೆ, ಬಹುತೇಕ ಸಮಯ, ನಮಗೆ ಕಂಡು ಬರುತ್ತಿರುವುದು ಸುದ್ದಿಯ ಇಂಥ ಶೀಘ್ರಸ್ಖಲನ.

ಈ ಭಾವನೆ ತೀವ್ರವಾಗಿ ಕಾಡಿದಾಗೆಲ್ಲ, ಏನಾದರೂ ಬರೆಯಬೇಕೆನ್ನುವ ಹಂಬಲ ದಟ್ಟವಾಗಿ ಉಕ್ಕತೊಡಗುತ್ತದೆ. ಇದುವರೆಗೆ ಬದುಕಿದ್ದೇ ಈ ಭಾವತೀವ್ರತೆಯಿಂದಾಗಿ. ಬಹುಶಃ ಮುಂದೆಯೂ ಹೀಗೇ.

ಪತ್ರಕರ್ತ ‘ವೃತ್ತಕರ್ತ’ನಾದರೆ ಅದು ನಿಜಕ್ಕೂ ದುರಂತ. ಕ್ಷೀಣಧ್ವನಿಯಾದರೇನಾಯ್ತು? ಮೌನವಾಗಿರುವುದಕ್ಕಿಂತ ಇದೇ ವಾಸಿ ಅಂತ ಅನಿಸುತ್ತದೆ. ಒಂದಿಷ್ಟು ಸಾರ್ಥಕ ಪ್ರಯೋಗಗಳಾಗಿದ್ದರೆ, ವೃತ್ತಿನೆಮ್ಮದಿ ದಕ್ಕಿದ್ದರೆ, ಅದು ಈ ಕ್ಷೀಣಧ್ವನಿಯಿಂದಾಗಿ.

ಆ ಧ್ವನಿ ಕಳೆದುಹೋಗದಿರಲಿ ಎಂಬುದೊಂದೇ ನನ್ನ ಆಸೆ. ಯಾವ ಕ್ರಿಯಾಶೀಲನೂ ಆ ಧ್ವನಿಯನ್ನು ಕಳೆದುಕೊಳ್ಳದಿರಲಿ ಎಂಬುದು ನನ್ನ ಶಾಶ್ವತ ಹಾರೈಕೆ.  

- ಚಾಮರಾಜ ಸವಡಿ

ಹುಟ್ಟೂರಿನಲ್ಲಿ ಮೂಡಿದ ’ಜೀವದನಿ’

12 Jun 2010

18 ಪ್ರತಿಕ್ರಿಯೆ



ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಕೆಲಸ ಬಿಡಿಸಿ ತವರು ಜಿಲ್ಲೆಗೆ ಅಟ್ಟಿದ ಪಾಪವೇನಾದರೂ ಇದ್ದರೆ, ಅದು ನನ್ನದು. ಪುಣ್ಯವೇನಾದರೂ ಇದ್ದರೆ, ಹುಟ್ಟು ಜಿಲ್ಲೆಯಲ್ಲಿ ಬದುಕು ಕಟ್ಟಿಕೊಂಡ ಗೆಳೆಯ ಸರ್ಜಾಶಂಕರ ಹರಳಿಮಠನದು.

ಸುಮಾರು ಇಪ್ಪತ್ತು ವರ್ಷಗಳ ಪರಿಚಯ, ಸ್ನೇಹ ನಮ್ಮಿಬ್ಬರದು. ನಾನಾಗ ಏರ್‌ಫೋರ್ಸ್‌‌ನಲ್ಲಿದ್ದೆ. ಮೊಬೈಲ್‌, ಕಂಪ್ಯೂಟರ್‌ಗಳಿಲ್ಲದ ಕಾಲವದು. ನನಗೋ ಬರೆಯುವ ಹುಚ್ಚು. ಶಂಕರನಿಗೆ (ಸರ್ಜಾಶಂಕರ) ಬರೆಯುವುದರ ಜೊತೆಗೆ ಅದನ್ನು ಪ್ರಕಟಿಸುವ ಹುಚ್ಚು. ನಮ್ಮಂಥ ಹುಚ್ಚರಿಗಾಗಿಯೇ ಕೆಲ ಹವ್ಯಾಸಿ ಪ್ರಕಾಶಕರಿದ್ದರು. ಬರೆಯುವ ಆಸೆ ಇರುವ, ಆದರೆ, ಸ್ವಂತ ಪುಸ್ತಕ ಹೊರತರಲು ಆಗದ ನಮ್ಮಂಥವರ ಬರಹಗಳನ್ನು ಅವರು ಅಚ್ಚು ಹಾಕುತ್ತಿದ್ದರು. ಆಗ ಬರುತ್ತಿದ್ದ ಬಹುತೇಕ ಪುಸ್ತಕಗಳು ಕವನ ಸಂಕಲನಗಳು. ಸಹಕಾರ ತತ್ವದಡಿ ಪ್ರಕಟವಾಗಬೇಕಿತ್ತು.

ಸಹಕಾರ ತತ್ವ ಬಹು ಸುಲಭ ವಿಧಾನ. ಯುವ ಬರಹಗಾರರು ತಮ್ಮ ಒಂದು ಕವಿತೆ/ಹನಿಗವನ ಪ್ರಕಟಣೆಗೆ ಐವತ್ತು ರೂಪಾಯಿಗಳನ್ನು ನೀಡಬೇಕಿತ್ತು. ಅಂಥ ೪೦-೫೦ ಬರಹಗಾರರನ್ನು ಸಂಪರ್ಕಿಸುತ್ತಿದ್ದ ಹವ್ಯಾಸಿ ಪ್ರಕಾಶಕರು, ಚಂದಾ ಸಂಗ್ರಹಿಸಿ, ತಮ್ಮ ಕೈಯಿಂದ ಒಂದಿಷ್ಟು ಹಾಕಿ ಪುಸ್ತಕ ಹೊರತರುತ್ತಿದ್ದರು. ಆಗ ಮೊಳೆಯಚ್ಚು ಮುದ್ರಣಾಲಯಗಳೇ ಹೆಚ್ಚು. ಅಲ್ಲಿ ಮುದ್ರಣ ಖರ್ಚು ಕಡಿಮೆ ಕೂಡಾ. ಆಫ್‌ಸೆಟ್‌ ಮುದ್ರಣ ಯಂತ್ರಗಳು ಕೇವಲ ದೊಡ್ಡ ನಗರಗಳಿಗೆ ಮಾತ್ರ ಸೀಮಿತವಾಗಿದ್ದವು.

ಸರ್ಜಾಶಂಕರನ ಬರಹವನ್ನು ನಾನು ಮೊದಲು ಓದಿದ್ದು ಇಂಥ ಚಂದಾಪುಸ್ತಕವೊಂದರಲ್ಲಿ.

ಪ್ರತಿ ಬರಹಗಾರನ ವಿಳಾಸವೂ ಅದರಲ್ಲಿ ಅಚ್ಚಾಗಿರುತ್ತಿತ್ತು. ಏರ್‌ಫೋರ್ಸ್‌‌ನಲ್ಲಿದ್ದ ನಾನು ಶಂಕರನ ಬರಹ ಓದಿ, ಅಲ್ಲಿದ್ದ ವಿಳಾಸಕ್ಕೆ ಅಂಚೆ ಕಾರ್ಡ್‌ ಬರೆದೆ. ಕ್ರಮೇಣ ಪರಿಚಯ ಬೆಳೆಯಿತು. ನಾವಿಬ್ಬರೂ ಸಾಹಿತ್ಯಕ್ಕಿಂತ ಹೆಚ್ಚಾಗಿ ಪರಸ್ಪರ ಪತ್ರಗಳನ್ನು ಬರೆದಿದ್ದೇ ಜಾಸ್ತಿ.

ಇದೆಲ್ಲ ಹದಿನೈದು ಇಪ್ಪತ್ತು ವರ್ಷಗಳ ಹಿಂದಿನ ಮಾತು.

ಮುಂದೆ ನಾನು ಏರ್‌ಫೋರ್ಸ್‌ ಬಿಟ್ಟು ಬೆಂಗಳೂರಿಗೆ ಬಂದೆ. ಶಂಕರ ಆಗಲೇ ಬೆಂಗಳೂರಿನಲ್ಲಿದ್ದ. ಸಣ್ಣಪುಟ್ಟ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ. ಒಂದೆರಡು ವರ್ಷಗಳ ನಂತರ ಬಹುರಾಷ್ಟ್ರೀಯ ಕಂಪನಿಯೊಂದಕ್ಕೆ ಸೇರಿಕೊಂಡ. ನಾನಾಗ, ‘ಹಾಯ್‌ ಬೆಂಗಳೂರ್’‌ ಸೇರಿಯಾಗಿತ್ತು.

‘ಏನಾದ್ರೂ ಮಾಡಬೇಕೆಂದಿದ್ದರೆ ನಮ್ಮೂರಲ್ಲಿ ಮಾಡಬೇಕು ಶಂಕರಾ. ಅದೇ ನಿಜವಾದ ಚಾಲೆಂಜ್‌’ ಎಂದೆ ಒಂದಿನ.

ಊರಿಗೆ ಹೋಗಿ ಏನು ಮಾಡಬೇಕೆಂಬುದು ಇಬ್ಬರಿಗೂ ಗೊತ್ತಿದ್ದಿಲ್ಲ! ಅಲ್ಲಿ ಹೋದ ನಂತರ ತಾನೇ ಗೊತ್ತಾಗುತ್ತದೆ ಎಂಬ ಉಡಾಫೆ.

ಉತ್ತಮ ಸಂಬಳ ಬರುವ ಕೆಲಸ ಬಿಡೋದು ಹೇಗೆ ಎಂಬ ಗೊಂದಲ ಶಂಕರನಿಗೆ. ವಿದೇಶಿ ಕಂಪನಿ ಚಾಕರಿಯಿಂದ ನಿನ್ಯಾವ ಕನಸುಗಳು ಈಡೇರುತ್ತವೆ ಎಂಬ ಪ್ರಶ್ನೆ ನನ್ನದು. ನನ್ನ ವರಾತ ಹೆಚ್ಚಾಯಿತೋ, ಅಥವಾ ನಿಜಕ್ಕೂ ಊರಿಗೆ ಹೋಗಬೇಕೆಂದು ಆತ ನಿರ್ಧರಿಸಿದನೋ ಗೊತ್ತಿಲ್ಲ. ಅದೊಂದಿನ, ವಾಪಸ್‌ ಶಿವಮೊಗ್ಗಕ್ಕೆ ಹೋಗ್ತೇನೆ ಎಂದು ಘೋಷಿಸಿದ ಶಂಕರ, ಬೆಂಗಳೂರು ಖಾಲಿ ಮಾಡಿದ.

ಅದಾದ ಸ್ವಲ್ಪ ದಿನಗಳಿಗೆ ‘ಹಾಯ್‌ ಬೆಂಗಳೂರ್‌’ಗೆ ಸಲಾಮ್‌ ಹೊಡೆದೂ ನಾನೂ ನನ್ನ ಜಿಲ್ಲೆ ಕೊಪ್ಪಳಕ್ಕೆ ಹೋದೆ.

ಇದ್ದ ಕೆಲಸ ಬಿಟ್ಟು, ಕೇವಲ ಕನಸುಗಳನ್ನು ಹೊತ್ತು ತಂದಿದ್ದ ನಮ್ಮನ್ನು, ನಮ್ಮ ಸ್ವಂತ ಜಿಲ್ಲೆಗಳು ಕಾಡಿಸಿದ್ದು ಅಷ್ಟಿಷ್ಟಲ್ಲ. ಬದುಕು ಕಟ್ಟಿಕೊಳ್ಳಲು ಶಂಕರ ಎಷ್ಟು ಕಷ್ಟಪಟ್ಟನೋ, ನಾನೂ ಅಷ್ಟೇ ಕಷ್ಟಪಡಬೇಕಾಯ್ತು. ಯಾಕಾದ್ರೂ ಕೆಲಸ ಬಿಟ್ಟೆವೋ ಅಂತ ಪದೆ ಪದೆ ಅನಿಸುವಷ್ಟು ಮೂಲಭೂತ ಸಮಸ್ಯೆಗಳು ಇಬ್ಬರನ್ನೂ ಕಾಡಿದವು.

ಪತ್ರಿಕೋದ್ಯಮದಲ್ಲೇ ಏನಾದ್ರೂ ಮಾಡಬೇಕು ಎಂದು ನಾನು ನಿರ್ಧರಿಸಿದ್ದೆನಾದರೂ, ಏನು ಮಾಡಬೇಕೆಂಬುದು ಸ್ಪಷ್ಟವಿದ್ದಿಲ್ಲ. ಶಂಕರನಿಗಂತೂ ಇನ್ನೂ ಗೊಂದಲ. ಬರವಣಿಗೆಯ ಹುಚ್ಚು ಸುಲಭಕ್ಕೆ ಬಿಡುವಂಥದಲ್ಲ. ಅದರಲ್ಲೂ, ಬರೆದಿದ್ದು ಅಚ್ಚಾಗಬೇಕೆಂಬ ಆಸೆ ಇದ್ದರೆ ಬಹಳ ಕಷ್ಟ.

ಈ ಹುಚ್ಚಿನ ನಡುವೆ, ಹೊಟ್ಟೆಪಾಡನ್ನು ಮರೆಯೋದಾದ್ರೂ ಹೇಗೆ? ಒಳ್ಳೆ ಸಂಬಳ ಬರುವ ಕೆಲಸ ಬಿಟ್ಟು ಬಂದಿದ್ದ ನಮ್ಮನ್ನು ಹುಚ್ಚರನ್ನು ನೋಡುವಂತೆ ನೋಡಿತು ಊರು. ಅದಕ್ಕೆ ತಕ್ಕಂತೆ ನಮ್ಮ ಹವ್ಯಾಸಗಳಿದ್ದವು. ದುಡಿದು ಬದುಕುವುದೇ ಕಷ್ಟವಾಗಿದ್ದ ದಿನಗಳಲ್ಲಿ, ಬರೆದು ಬದುಕುತ್ತೇನೆ ಎಂದು ಹೊರಟವರನ್ನು ನಮ್ಮೂರುಗಳು ಇನ್ಯಾವ ರೀತಿ ನೋಡಲು ಸಾಧ್ಯವಿತ್ತು?

ಕ್ರಮೇಣ ಬದುಕು ಚಿಗುರಿತು.

ಹಲವಾರು ಬಗೆಯ ಕೆಲಸಗಳನ್ನು ಮಾಡಿದ ನಂತರ, ನಾನು ‘ವಿಜಯ ಕರ್ನಾಟಕ’ ಸೇರಿಕೊಂಡೆ. ‘ನಿನ್ನ ಬರವಣಿಗೆ ಚೆನ್ನಾಗಿದೆ, ಸಾಪ್ತಾಹಿಕ ವಿಜಯ ನೋಡಿಕೊಳ್ಳುವಿಯಂತೆ, ಬೆಂಗಳೂರಿಗೆ ಬಾ’ ಎಂದು ಸಂಪಾದಕ ಈಶ್ವರ ದೈತೋಟ ಪರಿಪರಿಯಾಗಿ ಹೇಳಿದರೂ ಕೇಳದೇ ನಾನು ಕೊಪ್ಪಳ ಜಿಲ್ಲಾ ವರದಿಗಾರನಾಗಿಯೇ ಉಳಿದುಕೊಂಡೆ. ಶಂಕರ ನಿಧಾನವಾಗಿ ಚಳವಳಿಗಳಲ್ಲಿ ಗುರುತಿಸಿಕೊಳ್ಳತೊಡಗಿದ್ದ. ಅವನ ಬದುಕಿನ್ನೂ ಗೊಂದಲದಲ್ಲಿತ್ತು.

ಕೆಲ ವರ್ಷಗಳ ಕಾಲ ನಮ್ಮ ಸಂಪರ್ಕವೇನಿದ್ದರೂ ಪತ್ರಗಳ ಮೂಲಕ ಬದುಕಿತ್ತು.

ಮುಂದೆ ಬದುಕಿನ ಅನಿವಾರ್ಯತೆ ನನ್ನನ್ನು ಮತ್ತೆ ಬೆಂಗಳೂರಿಗೆ ಕರೆ ತಂದಿತು. ಶಂಕರ ಮಾತ್ರ ಶಿವಮೊಗ್ಗದಲ್ಲೇ ಉಳಿದ. ಚಳವಳಿಗಳ ಜೊತೆಗೆ ಪುಟ್ಟದಾಗಿ ದೇಸಿ ಸಂಸ್ಕೃತಿ ಅಂಗಡಿ ಪ್ರಾರಂಭಿಸಿದ. ಗ್ರಾಮೀಣ ಕುಶಲಕರ್ಮಿಗಳ ಉತ್ಪಾದನೆಗಳಿಗೆ ಮಾರಾಟ ವ್ಯವಸ್ಥೆ ರೂಪಿಸುವ ಪ್ರಯತ್ನದಲ್ಲಿ ತನ್ನ ಬದುಕು ರೂಪಿಸಿಕೊಂಡ. ಅವನನ್ನು ಅರ್ಥ ಮಾಡಿಕೊಳ್ಳುವ ಮಡದಿ ದಕ್ಕಿದಳು. ಆ ಹೆಣ್ಣುಮಗಳಿಗೆ ಸೂಕ್ತ ಸರ್ಕಾರಿ ಕೆಲಸವೂ ಸಿಕ್ಕಿತು. ಯಾವ ಆಮಿಷಕ್ಕೂ ಸಿಲುಕದ ಶಂಕರ ಮಾತ್ರ, ಕೊಟ್ಟ ಮಾತಿನಂತೆ ತನ್ನೂರಲ್ಲೇ ಉಳಿದ. ಬೆಳೆದ.

ಇದೆಲ್ಲ ನೆನಪಾಗಿದ್ದು, ಅವನು ಕಳಿಸಿದ ತನ್ನ ಇತ್ತೀಚಿನ ಪುಸ್ತಕ ’ಜೀವದನಿ’ಯಿಂದ. ತನ್ನ ಅಂಕಣ ಬರಹಗಳನ್ನು ಆಯ್ದು ಪ್ರಕಟಿಸಿದ ಅವನ ಮೊದಲ ಪುಸ್ತಕ ’ಬೆಚ್ಚಿ ಬೀಳಿಸಿದ ಬೆಂಗಳೂರು’ ಸಾಕಷ್ಟು ಗಮನ ಸೆಳೆದ ಕೃತಿ. ಆ ನಂತರ ಬಂದಿದ್ದು, ’ಬಾರಯ್ಯ ಬೆಳದಿಂಗಳೇ’. ಈಗ ಮೂರನೇ ಪುಸ್ತಕ ’ಜೀವದನಿ’ ಬಿಡುಗಡೆಗೆ ಸಿದ್ಧವಾಗಿದೆ. [ಜೀವದನಿ (ಅಂಕಣ ಬರಹಗಳು), ಪುಟಗಳು ೧೭೨, ಬೆಲೆ: ರೂ.೧೦೦, ಪ್ರಕಾಶನ: ಅಂತಃಕರಣ, ’ದೇಸಿ ಸಂಸ್ಕೃತಿ’, ಮೈಲಾರೇಶ್ವರ ಸಂಕೀರ್ಣ, ಬಿ.ಎಚ್‌. ರಸ್ತೆ, ಶಿವಮೊಗ್ಗ-೫೭೭ ೨೦೧, ದೂರವಾಣಿ: ೯೪೪೮೭ ೮೦೧೪೪]

ಇದೇ ಭಾನುವಾರ, ೧೩ ಜೂನ್‌ ೨೦೧೦ಕ್ಕೆ ಶಿವಮೊಗ್ಗದ ಕರ್ನಾಟಕ ಸಂಘದ ಸಭಾಂಗಣದಲ್ಲಿ ಪುಸ್ತಕದ ಬಿಡುಗಡೆಯಿದೆ. ಯಥಾಪ್ರಕಾರ, ಶಂಕರ ಫೋನ್‌ ಮಾಡಿ ಕರೆದಿದ್ದಾನೆ. ಇದು ಬರುವ ಆಸಾಮಿಯಲ್ಲ ಅಂತ ಅನ್ನಿಸಿತೋ ಏನೋ, ಬಿಡುಗಡೆಗೂ ಮುಂಚೆ ಪುಸ್ತಕದ ಪ್ರತಿಯೊಂದನ್ನು ಕಳಿಸಿದ್ದಾನೆ. ಅದರ ಬೆನ್ನುಪುಟದಲ್ಲಿರುವ ಶಂಕರನ ದೊಡ್ಡ ನಗುವಿನ ಫೋಟೊ ನೋಡುತ್ತ, ಈ ಅಪರಾತ್ರಿಯಲ್ಲಿ ನಮ್ಮ ಕಳೆದ ದಿನಗಳ ಕನಸುಗಳನ್ನು ನೆನಪಿಸಿಕೊಳ್ಳುತ್ತಾ ಕೂತಿದ್ದೇನೆ.

ಬದುಕಿನಲ್ಲಿ ಎಷ್ಟೋ ಕನಸುಗಳು ವಿಚಿತ್ರ ರೀತಿಯಲ್ಲಿ ತಿರುವು ಪಡೆಯುತ್ತ, ಮತ್ತೆ ಮತ್ತೆ ಪ್ರತ್ಯಕ್ಷವಾಗುತ್ತಿರುವ ಪರಿ ನೆನೆದು ಅಚ್ಚರಿಪಡುತ್ತಿದ್ದೇನೆ. ಬೆಂಗಳೂರಿನ ವೈಟ್‌ ಫೀಲ್ಡ್‌ನ ಅವನ ರೂಮಿನಲ್ಲಿ ಎಷ್ಟೊಂದು ಮಾತಾಡಿದ್ದೆವು. ಎಷ್ಟೊಂದು ಕನಸುಗಳನ್ನು ಹಂಚಿಕೊಂಡಿದ್ದೆವು. ಅವತ್ತಿನಿಂದ ಇವತ್ತಿನ ತನಕ, ಈ ಹದಿನೈದು ಇಪ್ಪತ್ತು ವರ್ಷಗಳಲ್ಲಿ ಶಂಕರ ಸಾಕಷ್ಟು ಮಾಗಿದ್ದಾನೆ. ಆದರೆ, ಕನಸುಗಳು ಮಾತ್ರ ತಾಜಾ ಆಗೇ ಉಳಿದಿವೆ. ಅವುಗಳ ಪೈಕಿ ಒಂದಿಷ್ಟು ನನಸಾಗಿವೆ. ಒಂದಿಷ್ಟು ಹೊಸ ಕನಸುಗಳು ಸೇರಿಕೊಂಡಿವೆ. ಶಂಕರನ ಪ್ರತಿಯೊಂದು ಸಾಹಸವೂ ನನಗೆ ಆ ದಿನಗಳನ್ನು ನೆನಪಿಸುತ್ತವೆ. ನನ್ನ ಕನಸುಗಳೂ ಮತ್ತೆ ಮತ್ತೆ ನೆನಪಾಗುತ್ತವೆ.

ಅವನನ್ನು ’ಬೆಚ್ಚಿ ಬೀಳಿಸಿದ ಬೆಂಗಳೂರು’ ನನಗೀಗ ಅನ್ನ ಹಾಕತೊಡಗಿದೆ. ಆದರೆ, ಈ ನಗರ ನನ್ನ ಕನಸುಗಳನ್ನು ಪೋಷಿಸುತ್ತದಾ? ಮತ್ತೆ ನನ್ನೂರಿಗೆ ಹಿಂತಿರುಗಿಸುತ್ತದಾ?

ಜೀವದ ಗೆಳೆಯನ ’ಜೀವನದಿ’ ಪುಸ್ತಕ ಮತ್ತೆ ಮತ್ತೆ ಆ ಪ್ರಶ್ನೆಗಳನ್ನು ಕೇಳತೊಡಗಿದೆ.

ಉತ್ತರ ಹೊಳೆಯದೇ ಮಂಕಾಗುತ್ತೇನೆ.

- ಚಾಮರಾಜ ಸವಡಿ

ಬದುಕೆಂಬ ಅಚ್ಚರಿಗಳ ಹುತ್ತ

12 Apr 2010

5 ಪ್ರತಿಕ್ರಿಯೆ
ಇದ್ಯಾವತ್ತೂ ಬದಲಾಗಲ್ಲ ಅಂತ ತೀವ್ರವಾಗಿ ಅನಿಸತೊಡಗಿದಾಗಲೇ ನಿಜವಾದ ಬದಲಾವಣೆ ಶುರುವಾಗತೊಡಗುತ್ತದೆ.

ಇದು ನನ್ನ ಹಳೆಯ ಅನುಭವ.  ಎಲ್ಲ ನಿಂತಂತೆ, ಏನೂ ಬದಲಾಗುತ್ತಿಲ್ಲ ಎಂದು ಅನಿಸತೊಡಗಿದಾಗ, ಎಲ್ಲೋ ಬದಲಾವಣೆ ಮಿಸುಕತೊಡಗಿರುತ್ತದೆ. ತೀವ್ರ ಕತ್ತಲಿನ ನಡುವೆ ಬೆಳಕು ಮೊಳಕೆಯೊಡೆದಂತೆ, ಬಿಕ್ಕುವಿಕೆ ಮಧ್ಯೆ ನೆಮ್ಮದಿ ಹುಟ್ಟಿದಂತೆ, ಬಿರುಬಿಸಿಲಿನ ಮಧ್ಯೆ ಕಾರ್ಮೋಡವೊಂದು ಕಣ್ತೆರೆದಂತೆ ಭರವಸೆ ಕಾಣಲು ಶುರುವಾಗುತ್ತದೆ.

ಇವತ್ತು ತುಂಬ ಸೆಕೆಯಿತ್ತು. ಧಗೆ ಎಷ್ಟು ತೀವ್ರವಾಗಿತ್ತೆಂದರೆ, ಮಳೆ ಬರಬಹುದು ಎಂಬ ಅನಿಸಿಕೆ ಬಲಗೊಳ್ಳುವಷ್ಟು. ಯಂತ್ರದಂತೆ ಹವಾಮಾನ ಕೂಡ ಖಚಿತ ಮಾನದಂಡಗಳನ್ನು ಹೊಂದಿರಬಹುದು ಅನಿಸುತ್ತದೆ. ಸಂಜೆ ಹೊತ್ತಿಗೆ ಒಂದೆರಡು ವರಸೆ ಮಳೆ ಬಂದೇಬಿಡ್ತು. ಸೆಕೆಯನ್ನು ಒಂದಿಷ್ಟು ಕಡಿಮೆ ಮಾಡಿತು.

ಅಂದುಕೊಂಡಿದ್ದಕ್ಕಿಂತ ಹೆಚ್ಚಾಗಿಯೇ ಕರೆಂಟ್‌ ಕಣ್ಣಾಮುಚ್ಚಾಲೆಯಾಡುತ್ತಿದ್ದ ಈ ದಿನಗಳಲ್ಲಿ, ವಿದ್ಯುತ್‌ ಕೈಕೊಟ್ಟಾಗ ಮೊದಮೊದಲು ತುಂಬ ಅಸಮಾಧಾನವಾಗುತ್ತಿತ್ತು. ಕ್ರಮೇಣ, ಇದೇ ಸಮಯವನ್ನು ಓದಲು ಬಳಸಲು ಶುರು ಮಾಡಿದೆ. ಕರೆಂಟ್‌ ಇರುವವರೆಗೆ ಕಂಪ್ಯೂಟರ್‌  ಮೇಲೆ ಕೆಲಸ. ಕರೆಂಟ್‌ ಹೋದಕೂಡಲೇ ಓದಲು ಶುರು. ಎಷ್ಟೋ ಸಾರಿ, ಓದಿನ ಗಮ್ಮತ್ತಿನ ನಡುವೆ, ಕರೆಂಟ್‌ ಬಂದರೂ ವಿಶೇಷ ಅನಿಸುತ್ತಿರಲಿಲ್ಲ. ಹೀಗಾಗಿ, ಕರೆಂಟ್‌ ಹೋದಷ್ಟೂ ಓದಲು ಹೆಚ್ಚು ಸಮಯ ಸಿಗುವಂತಾಗಿದೆ. 

ರಾತ್ರಿಯ ನಿಶ್ಯಬ್ದದಲ್ಲಿ ಹೊಸ ಕನಸುಗಳು ಮೊಳಕೆಯೊಡೆಯುತ್ತವೆ. ಓದಿನ ಮಧ್ಯೆ, ಹೊಸ ಬೆಳಕೊಂದು ಮಿಂಚುತ್ತದೆ. ನಿರಾಶೆಯ ಮಧ್ಯೆ ಹೊಸ ಭರವಸೆ. ಬಹುಶಃ ಏನೂ ಬದಲಾಗಲಿಕ್ಕಿಲ್ಲ ಎಂಬ ಅನಿಸಿಕೆಯ ತೀವ್ರತೆಯ ಮಧ್ಯೆಯೇ ಎಂಥದೋ ಬದಲಾವಣೆಯ ಸುಳಿವು. ಹೊಸ ಓದಿನ ಖುಷಿಯ ಮಧ್ಯೆ ಓದಿದ ಪುಸ್ತಕಗಳ ಭಾವಪ್ರವಾಹ. ತಂತ್ರಜ್ಞಾನದ ಸೊಗಸಿನ ನಡುವೆ ಬಾಲ್ಯದಲ್ಲಿ ಆಡಿದ ಮಣ್ಣಿನ ಆಟಿಕೆಗಳ ನೆನಪು.

ಬದುಕು ಹೀಗೇ ಸಾಗುತ್ತಿದೆ. ಪ್ರತಿಯೊಂದು ಬದಲಾವಣೆಯೂ, ಬೆಳವಣಿಗೆಯೂ ಹಳೆಯ ಬೇರುಗಳೊಂದಿಗೆ ನಂಟು ಬೆಸೆಯುತ್ತದೆ. ಹಳೆಯದರೊಂದಿಗೆ ಹೋಲಿಸಿ ನೋಡುತ್ತ ಹೊಸತನವನ್ನು ರೂಢಿಸಿಕೊಳ್ಳುತ್ತದೆ. ಎರಡರ ನಡುವೆ ಸಮನ್ವಯ ಆಯಿತೆನ್ನುವದರೊಳಗೆ ಮತ್ಯಾವುದೋ ಹೊಸ ಬೆಳವಣಿಗೆ. ಬದಲಾವಣೆ. 

ಎಫ್‌.ಎಂ. ಉದ್ಘೋಷಕರ ರಭಸದ ಮಾತುಗಳನ್ನು ಕೇಳುವಾಗ ಕೀರ್ತನಕಾರರ ಮಾತಿನ ಓಘದ ನೆನಪು. ಫ್ರಿಜ್‌ನ ತಣ್ಣೀರು ಸವಿಯುವಾಗ, ಮಡಕೆ ನೀರಿನ ತಂಪಿನ ತೀವ್ರತೆ. ಎಲ್ಲಿಯದೋ ನೆನಪುಗಳಿಗೆ ಇನ್ನೆಲ್ಲಿಯದೋ ಭಾವನೆಗಳೊಂದಿಗೆ ತಳುಕು. 

ಯಾವುದೋ ನೆನಪಿಗೆ ಇನ್ಯಾವುದೋ ತಂತು ಮೀಟುವುದು ಬದುಕಿನ ಚೋದ್ಯಗಳಲ್ಲೊಂದು. ಹುಡುಕುತ್ತ ಹೋದರೆ, ಪ್ರತಿಯೊಂದಕ್ಕೂ ಇನ್ನೊಂದರ ನಂಟಿದೆ ಅನಿಸುತ್ತದೆ. ಯಾವುದೂ ಹೊಸತಲ್ಲ, ಎಲ್ಲವೂ ಒಮ್ಮೆ ಕಂಡುಂಡ ಸಂಗತಿಗಳ ಮುಂದುವರಿಕೆ ಎಂದು ಭಾಸವಾಗುತ್ತದೆ. ಅಲ್ಲೆಲ್ಲೋ ಆಗಸದೆತ್ತರದಲ್ಲಿರುವ ಹೊಸ ಮೊಳಕೆಗೆ ಭೂಮಿಯಾಳದ ಬೇರಿನೊಂದಿಗೆ ನಂಟಿರುವಂತೆ, ಪ್ರತಿಯೊಂದಕ್ಕೂ ಯಾವುದೋ ನಂಟು. ಇನ್ಯಾವುದೋ ಪ್ರೇರಣೆ.

ನಿಜ. ಬದುಕು ಅಚ್ಚರಿಗಳ ಮೊತ್ತ. ಸಾವಿರ ಸಾವಿರ ನೆನಪುಗಳ ಹುತ್ತ.

- ಚಾಮರಾಜ ಸವಡಿ

ಬಿಸಿಲೆಂಬ ನೆನಪ ಸಂಜೀವಿನಿ

10 Apr 2010

4 ಪ್ರತಿಕ್ರಿಯೆ
ಕಣ್ಣು ಕುಕ್ಕುವಂಥ ಬಿಸಿಲ ಪ್ರದೇಶದಲ್ಲಿ ಹುಟ್ಟಿ ಬೆಳೆದವನು ನಾನು. ಬಿಸಿಲು ನನಗೆ ಚೇತೋಹಾರಿ. ಎಷ್ಟೇ ಸೆಕೆ ಕಾಡಿದರೂ, ಮನಸ್ಸು ನನ್ನೂರನ್ನು ನೆನಪಿಸಿಕೊಳ್ಳುತ್ತಿರುತ್ತದೆ. ಸರಾಸರಿ ೪೨ ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶದಲ್ಲಿ ಇಪ್ಪತ್ತೈದಕ್ಕೂ ಹೆಚ್ಚು ಬೇಸಿಗೆ ಕಳೆದ ನನಗೆ ಇವತ್ತಿಗೂ ಬಿಸಿಲು ಆಪ್ಯಾಯಮಾನ. 

ಬಿಸಿಲಿನಲ್ಲಿ ಅಷ್ಟೊಂದು ಓಡಾಡಿದರೂ ಆರಾಮವಾಗಿದ್ದೀಯಲ್ಲ ಮಾರಾಯ ಎಂದು ಗೆಳೆಯರು ಅಚ್ಚರಿಪಡುತ್ತಾರೆ. ಅದೇ ಬಿಸಿಲೂರಿನಿಂದ ಬಂದವಳಾಗಿದ್ದರೂ, ನನ್ನ ಹೆಂಡತಿಗೆ ಬಿಸಿಲು ಎಂದರೆ ಅಲರ್ಜಿ. ಆದರೆ, ನನಗೆ ಮಾತ್ರ ಬಿಸಿಲು ಎಂದರೆ ನನ್ನೂರು. ನಾನು ಹುಟ್ಟಿ ಬೆಳೆದ ಪರಿಸರ. ನನ್ನ ಬಾಲ್ಯ. ನನ್ನ ಪ್ರಾಥಮಿಕ ಕನಸುಗಳು. ನನ್ನ ಶಾಶ್ವತ ಕನವರಿಕೆ.

ಸಾವಿರ ಸಾವಿರ ನೆನಪುಗಳು ಬಿಸಿಲಿನೊಂದಿಗೆ ಹೆಣೆದುಕೊಂಡಿವೆ. ಬರ, ಬಡತನ, ಬವಣೆ, ಭಯವಷ್ಟೇ ಅಲ್ಲ, ನನ್ನ ಬದುಕು ಕೂಡ ಬಿಸಿಲ ಪ್ರದೇಶದಲ್ಲಿಯೇ ಅರಳಿದೆ. ಉರಿಯುವ ಸೂರ್ಯನೊಂದಿಗೆ, ಕಡು ಸೆಕೆಯೊಂದಿಗೆ ಶುರುವಾಗುವ ಬೇಸಿಗೆಯ ದಿನ, ಅದೇ ಕಡು ಸೆಕೆಯೊಂದಿಗೆ ಸಂಜೆಯಾಗಿ ಬದಲಾಗುತ್ತಿತ್ತು. ಕರೆಂಟಿಲ್ಲದ ರಾತ್ರಿಯ ಕಗ್ಗತ್ತಲೆಯಲ್ಲಿ, ಬೆಳಕಿನುಂಡೆಯಂಥ ನಕ್ಷತ್ರಗಳ ಆಗಸ. ಮಣ್ಣಿನ ಮನೆಯ ಮಾಳಿಗೆಯ ಮೇಲೆ ಹಳೆಯ ಜಮಖಾನಾ ಹಾಸಿಕೊಂಡು ಆಕಾಶಕ್ಕೆ ಮುಖವೊಡ್ಡಿ ಕಂಡ ಸಾವಿರ ಸಾವಿರ ಕನಸುಗಳು ಇವತ್ತಿಗೂ ನನ್ನ ಜೀವನದುಸಿರು. ಆ ಬಿಸಿಲ ಹೇಗೆ ಮರೆಯಲಿ?

ನನ್ನ ಮೊದಲ ತೀವ್ರ ನಿರಾಶೆ, ನೋವುಗಳು ಬಿಸಿಲಿನೊಂದಿಗೆ ಹೆಣೆದುಕೊಂಡಿವೆ. ಹತ್ತನೆಯ ತರಗತಿಯ ಪರೀಕ್ಷೆ ಬರೆಯಲು ಮೊದಲ ಬಾರಿ ಹದಿನೈದು ದಿನಕ್ಕಿಂತ ಹೆಚ್ಚು ಕಾಲ ತಂಗಿದ್ದ ಪಟ್ಟಣ ಕೊಪ್ಪಳ ನನ್ನಲ್ಲಿ ಉಕ್ಕಿಸಿದ್ದ ದಿಗ್ಭ್ರಮೆ, ಕನಸು, ಕನವರಿಕೆಯನ್ನು ನಾನು ಪದೆ ಪದೆ ಅನುಭವಿಸಿದ್ದು ನನ್ನೂರಿನ ಬಿಸಿಲ ದಿನದ ರಾತ್ರಿಗಳಲ್ಲಿ. ಪಿಯುಸಿ ಓದಲು ದೂರದ ನರೇಗಲ್ಲಿಗೆ ಹೋಗಬೇಕೆಂಬ ಕಳವಳವನ್ನೂ ಅಲ್ಲಿಯೇ ಅನುಭವಿಸಿದ್ದು. ಹುಟ್ಟಿದಾಗಿನಿಂದ ಊರು ಬಿಟ್ಟು ಹೋಗಿರದ ನನಗೆ, ನರೇಗಲ್ಲಿಗೆ ಹೋಗುವಾಗ, ಹೋದ ನಂತರ ಆದ ತಳಮಳ ಅಷ್ಟಿಷ್ಟಲ್ಲ. 

ಇಂಥ ಹಲವಾರು ನೆನಪುಗಳು ಬಿಸಿಲಿನೊಂದಿಗೆ ಹೆಣೆದುಕೊಂಡಿವೆ. ನಮ್ಮ ಹೊಲದಲ್ಲಿದ್ದ ಎರಡು ಜಾತಿಯ ಮಾವಿನ ಮರಗಳು, ಅವುಗಳ ಪರಿಮಳ, ಹಲ್ಲು ಚುಳಿಯುವಂತೆ ಮಾಡುತ್ತಿದ್ದ ಹುಳಿ ರುಚಿ, ಮಾವಿನ ಕಾಯಿಗಳನ್ನು ಹಣ್ಣಾಗಿಸಲು ಹಾಕಿದ್ದ ಬತ್ತದ ಹುಲ್ಲಿನ ವಿಚಿತ್ರ ಘಮ, ಕುಡಿಯುವ ನೀರು ತರಲು ಊರಾಚೆಯ ಕೆರೆಗೆ ಹೋಗುತ್ತಿದ್ದುದು, ಬತ್ತಿದ ದೊಡ್ಡ ಹಳ್ಳದ ಉಸುಕಿನ ಮಧ್ಯೆ ಕೂತು ಭವಿಷ್ಯದ ಕನಸುಗಳನ್ನು ಮಾತಾಗಿಸಿದ್ದು, ಕಾಡುತ್ತಿದ್ದ ಅಪಾರ ಹಸಿವು, ಏನು ಸಿಕ್ಕರೂ ಓದುವ ತೀವ್ರ ತುಡಿತ, ಕಾಣದ ಜಗತ್ತಿನೆಡೆಗಿನ ಬೆರಗು, ಪಟ್ಟಣಗಳು ಹುಟ್ಟಿಸುತ್ತಿದ್ದ ಕೀಳರಿಮೆ, ಅರಳುತ್ತಿದ್ದ ಪ್ರಾಯ, ಹೇಳತೀರದ ದುಗುಡ- ಇಂಥ ನೂರಾರು ಭಾವನೆಗಳಿಗೆ ಬಿಸಿಲು ಸಾಕ್ಷಿಯಾಗಿದೆ. 

ಇವತ್ತಿಗೂ ಶಿವರಾತ್ರಿ ಕಳೆದ ನಂತರ, ಮನಸ್ಸಿಗೆ ಸಣ್ಣಗೆ ದುಗುಡ ಕವಿಯಲಾರಂಭಿಸುತ್ತದೆ. ಬಿಸಿಲು ಬಲಿಯುತ್ತಿದ್ದಂತೆ ಊರಿನ ಹಂಬಲ, ಆಗಿನ ದಿನಗಳ ನೆನಪುಗಳು ಉಕ್ಕತೊಡಗುತ್ತವೆ. ಪತ್ರಿಕೆ ಓದುವಾಗ, ಬಿಸಿಲಿನ ಬಗ್ಗೆ ಬಂದ ವರದಿಗಳು ಊರನ್ನು ನೆನಪಿಸುತ್ತವೆ. ಅಲ್ಲಿ, ನನ್ನಂಥ ಇನ್ಯಾರದೋ ಪಾಲಿಗೆ ಈ ಬಿರು ಬಿಸಿಲು ಸಂಜೀವಿನಿಯಾಗುತ್ತಿದೆಯೇನೋ ಎಂಬ ಕುತೂಹಲ. ರಾತ್ರಿಯಾಗುತ್ತಿದ್ದಂತೆ, ಮಣ್ಣಿನ ಮನೆಗಳ ಮಾಳಿಗೆಗಳ ಮೇಲೆ ವಲಸೆ ಹೋಗುತ್ತಿದ್ದ ಜನ, ಅವರ ಕಷ್ಟಸುಖದ ಮಾತುಕತೆ, ಕಾಣುತ್ತಿದ್ದ ಕನಸು, ಮೇಲೆ ಕಪ್ಪಡರಿರುವ ಆಗಸದ ಚಾದರದೊಳಗಿಂದ ಕಿಂಡಿ ಕೊರೆದು ಇಣುಕಿ ನೋಡುವ ನಕ್ಷತ್ರ ಕಂಗಳು, ಅಲುಗದೇ ನಿಂತ ಮರದ ಎಲೆಗಳು, ಅಪರಾತ್ರಿ ಎಚ್ಚರವಾದಾಗ ತಾಕುತ್ತಿದ್ದ ನೀರವತೆ ಮತ್ತೆ ಮತ್ತೆ ನನಪಾಗುತ್ತವೆ. 

ಎಷ್ಟೋ ಸಾರಿ ರಾತ್ರಿ ಯೋಚಿಸುತ್ತ ಅಡ್ಡಾಗಿದ್ದವನಿಗೆ ಜೆಟ್‌ ವಿಮಾನಗಳ ಮಿಣುಕು ದೀಪಗಳು ಅಪಾರ ಅಚ್ಚರಿ ಹುಟ್ಟಿಸಿದ್ದಿದೆ. ನನ್ನೂರಾಚೆಯ ಜಗತ್ತು ನನಗೆ ತಿಳಿದಿರುವುದಕ್ಕಿಂತ ವಿಶಾಲವಾಗಿದೆ ಎಂಬ ಅಸ್ಪಷ್ಟ ಭಾವನೆಯನ್ನು ಬೆಳೆಸಿದ್ದಿದೆ. ಆ ಜಗತ್ತಿನೆಡೆಗೆ ನಾನು ಹೋಗಲೇಬೇಕಾಗುತ್ತದೆ ಎಂಬ ಅಸ್ಪಷ್ಟ ಅನಿಸಿಕೆ ದಿಗಿಲು ಮೂಡಿಸಿದ್ದಿದೆ. ಅಲ್ಲಿಯ ಜನ ಹೇಗೋ, ಅವರ ಬದುಕಿನ ರೀತಿ-ನೀತಿಗಳೇನೋ, ನಾನು ಅವನ್ನೆಲ್ಲ ಹೇಗೆ ಕಲಿತೇನು ಎಂಬ ಕಳವಳ ಉಕ್ಕಿಸಿದ್ದಿದೆ. ರಾತ್ರಿಯ ಕಡು ನೀರವತೆಯಲ್ಲಿ ಒಬ್ಬನೇ ಎದ್ದು ಕೂತು, ಜೋರು ನಿದ್ದೆಯಲ್ಲಿರುವವರನ್ನು ಕಂಡು ಅಚ್ಚರಿಪಟ್ಟಿದ್ದೇನೆ. ಸುತ್ತಲೂ ಹಬ್ಬಿದ ಕತ್ತಲನ್ನು ಮೂದಲಿಸುವಂತೆ ಬೆಳಗುವ ನಕ್ಷತ್ರಗಳನ್ನು ಕಂಡು ಮೋಹಗೊಂಡಿದ್ದೇನೆ. ಸಾವಿರಾರು ಸುನೀತ ಭಾವನೆಗಳು ಆ ಕತ್ತಲಲ್ಲಿ ಮೂಡಿವೆ. ನಿರಾಶೆಗಳಿಗೆ ಸಮಾಧಾನ ದೊರೆತಿದೆ. 

ರಾತ್ರಿ ತುಂಬ ಹೊತ್ತು ಒಬ್ಬನೇ ಕೂತು ಓದುವ, ಬರೆಯುವ ಈ ದಿನಗಳಲ್ಲಿ ಬಿಸಿಲು ಮತ್ತೆ ಮತ್ತೆ ಕಾಡುತ್ತದೆ. ನನ್ನೂರು ಅಳವಂಡಿ ಮತ್ತೆ ಮತ್ತೆ ನೆನಪಾಗುತ್ತದೆ. ಎಲ್ಲರೂ ಜರಿಯುವ, ಶಪಿಸುವ, ಭಯಪಡುವ ಈ ಬಿರುಬಿಸಿಲು ಅದ್ಹೇಗೆ ನನ್ನ ಪಾಲಿಗೆ ಚೇತೋಹಾರಿಯಾಗಿದೆ ಎಂದು ನೆನೆನೆನೆದು ಅಚ್ಚರಿಪಡುತ್ತೇನೆ. ಮೆತ್ತಗೇ ಗೇಟು ತೆರೆದು, ರಸ್ತೆ ಮಧ್ಯೆ ನಿಂತು, ಆಗಸ ದಿಟ್ಟಿಸಿದರೆ, ನಗರದ ರಾತ್ರಿ ಬೆಳಕಿನ ರಭಸಕ್ಕೆ ನಕ್ಷತ್ರಗಳು ಮಂಕಾಗಿರುವುದು ರಾಚುತ್ತದೆ. 

ಅದನ್ನು ನೋಡುತ್ತಿದ್ದಂತೆ, ನನ್ನ ಮನಸ್ಸೂ ಏಕೋ ಮಂಕಾಗುತ್ತದೆ. 

- ಚಾಮರಾಜ ಸವಡಿ

ನಡೆದಷ್ಟೂ ದಾರಿಯಿದೆ, ಪಡೆದಷ್ಟೂ ಭಾಗ್ಯವಿದೆ

4 Apr 2010

9 ಪ್ರತಿಕ್ರಿಯೆ
ಬದುಕು ಅಂದ್ರೆ ಇಷ್ಟೇನಾ?

ಹಾಗಂತ ನಾವು ಎಷ್ಟು ಸಾರಿ ಅಂದುಕೊಂಡಿಲ್ಲ? ಓಡುತ್ತಿದ್ದ ವಾಹನ ಇದ್ದಕ್ಕಿದ್ದಂತೆ ನಿಂತ ಹಾಗೆ, ಬದುಕು ಕೂಡ ಯಾವುದೋ ಒಂದು ಹಂತದಲ್ಲಿ ಇದ್ದಕ್ಕಿದ್ದಂತೆ ನಿಂತಂತಾಗುತ್ತದೆ. ಚಲಿಸುತ್ತಿದ್ದಾಗಿನ ಭಾವನೆಗಳೆಲ್ಲ ಮಾಯವಾದಂತಾಗಿ, ಕೂತವರು ತಕ್ಷಣ ಇಳಿಯಬೇಕಾಗಿ ಬಂದು, ’ಅರೆ, ಎಲ್ಲಿಗೆ ಬಂದೆ?’ ಎಂದು ಪ್ರಶ್ನಿಸುವಂತಾಗುತ್ತದೆ. ತಕ್ಷಣ ಏನೂ ಮಾಡಲು ತೋಚದೇ ಕಕ್ಕಾವಿಕ್ಕಿಯಾಗುತ್ತೇವೆ. 

ಬದುಕು ತಿರುವು ತೆಗೆದುಕೊಳ್ಳುತ್ತಿದೆ ಎಂಬುದರ ಮೊದಲ ಲಕ್ಷಣವದು.

ಕೆಲಸ ಬದಲಿಸಿದಾಗ, ಕೆಲಸ ಬಿಟ್ಟಾಗ, ಹೊಸ ಕೆಲಸಕ್ಕೆ ಹೋದಾಗ, ಊರು ಬದಲಿಸಿದಾಗ, ಮನೆ ಬದಲಿಸಿದಾಗ, ಹಳೆಯ ಸಂಬಂಧವನ್ನು ಮುರಿದುಕೊಂಡಾಗ- ಹೀಗೆ ಹತ್ತಾರು ಕಾರಣಗಳಿಗಾಗಿ ಸಹಜವಾದಂತಿದ್ದ ಜೀವನ ಇದ್ದಕ್ಕಿದ್ದಂತೆ ತಿರುವು ಪಡೆದುಕೊಳ್ಳುತ್ತದೆ. ಹಳೆಯದೆಲ್ಲ ಮರೆಯಾದಂತಾಗಿ, ಹೊಸತನ ರೂಢಿಯಾಗಬೇಕಿರುವಾಗ, ಬದುಕೆಂದರೆ ಇಷ್ಟೇನಾ ಎಂದು ಪ್ರಶ್ನಿಸಿಕೊಳ್ಳುವಂತಾಗುತ್ತದೆ.

ಏನೇ ಧೈರ್ಯ ಹೇಳಿಕೊಂಡರೂ, ಎಷ್ಟೇ ಪೂರ್ವಾನುಭವವಿದ್ದರೂ, ಹೊಸತನದ ಎದುರು ಅರೆ ಕ್ಷಣ ಮಂಕಾಗುವುದು ಸಹಜ. ಎಷ್ಟೇ ದೋಷಗಳಿದ್ದರೂ ಹಳೆಯದೇ ಚೆನ್ನಿತ್ತು ಎಂದು ಅನಿಸುತ್ತದೆ. ಅದನ್ನು ಬಿಡಬಾರದಿತ್ತು ಎಂದು ಹಳಹಳಿಸುತ್ತೇವೆ. ಮತ್ತೆ, ಅಲ್ಲಿಗೇ ಹೋಗಿಬಿಡಲಾ ಎಂದು ಪ್ರಶ್ನಿಸಿಕೊಳ್ಳುತ್ತೇವೆ. ಅದುವರೆಗೆ ಅಂದುಕೊಂಡ ಭಾವನೆಗಳೆಲ್ಲ ಕೈಕೊಟ್ಟಂತಾಗಿ ತಡವರಿಸುತ್ತೇವೆ. ಇದ್ಯಾವುದೋ ಹೊಸ ನೆಲ. ಇಲ್ಲಿರುವವರು ಹೊಸ ಜನ. ಇಲ್ಲಿರುವುದು ಹೊಸ ವಾತಾವರಣ. ಇದನ್ನೆಲ್ಲ ಗೆದ್ದು ಮತ್ತೆ ಗರಿಗೆದರುವುದು ಯಾವತ್ತೋ ಎಂದು ಕಂಗಾಲಾಗುತ್ತೇವೆ. 

ಎಷ್ಟೋ ಜನ ಮತ್ತೆ ಹಳೆಯದನ್ನು ಹುಡುಕಿಕೊಂಡು ವಾಪಸ್‌ ಹೋಗಲು ಯತ್ನಿಸುತ್ತಾರೆ. ಇನ್ನು ಕೆಲವರು ಹೊಸತನಕ್ಕೆ ಹೊಂದಿಕೊಳ್ಳಲಾಗದೇ ಪೂರ್ತಿಯಾಗಿ ಮಂಕಾಗುತ್ತಾರೆ. ಕೆಲವರು ಮಾತ್ರ ತಡವರಿಸುತ್ತಾ ಹೊಸತನಕ್ಕೆ ಹೊಂದಿಕೊಳ್ಳುವ ಕೆಲಸದಲ್ಲಿ ತೊಡಗುತ್ತಾರೆ. 

ಆದರೆ, ಬದುಕು ವಿರುದ್ಧ ದಿಕ್ಕಿನಲ್ಲಿ, ಬಂದ ದಾರಿಯತ್ತ ಮರಳಿ ಹೋಗುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳುವ ಹೊತ್ತಿಗೆ ಸಾಕಷ್ಟು ಸಮಯ ಕಳೆದುಹೋಗಿರುತ್ತದೆ. ಧೈರ್ಯದಿಂದ ಮುನ್ನುಗ್ಗಿದವರಿಗೆ ತಕ್ಷಣ ಯಶಸ್ಸು ಸಿಕ್ಕದಿದ್ದರೂ, ಬದುಕುವ ಸ್ಥೈರ್ಯ ದಕ್ಕಿರುತ್ತದೆ. ಅರೆ ಮನಸ್ಸಿನವರಿಗೆ ವಾಸ್ತವ ಬಲುಬೇಗ ಅರಿವಾಗುತ್ತದೆ. ಆದರೆ, ಭೂತಕಾಲದಲ್ಲೇ ಬದುಕುವವರಿಗೆ ಮಾತ್ರ ಬದುಕು ಕರುಣಾಮಯಿಯಾಗುವುದು ಬಲು ಅಪರೂಪ. 

ಹಲವಾರು ಬಾರಿ ಕೆಲಸಗಳನ್ನು, ಊರುಗಳನ್ನು, ಮನೆಗಳನ್ನು ಹಾಗೂ ಮಿತ್ರರನ್ನು ಬದಲಿಸಿರುವ ನನಗೆ ಇದೆಲ್ಲ ಅರ್ಥವಾಗುವ ಹೊತ್ತಿಗೆ ಅರ್ಧ ಆಯುಷ್ಯ ಕಳೆದುಹೋಗಿತ್ತು. ಮುಂದಿನ ಆಯುಷ್ಯಪೂರ್ತಿ ಬದುಕುವ ಗಟ್ಟಿತನವನ್ನು ಕಲಿಸಿತ್ತು. ’ಹೊತ್ತ ಒಜ್ಜೆಗಳೇನು, ಹಿಡಿದ ಗಿಂಡಿಗಳೇನು, ಹೆಜ್ಜೆ ಸಾಲಿನ ಪಯಣ, ನಾರಾಯಣ’ ಎಂದುಕೊಂಡು ಹೊಸ ದಿಕ್ಕಿನತ್ತ, ಹೊಸ ದಾರಿಯಲ್ಲಿ ನಡೆಯುವುದನ್ನು ರೂಢಿ ಮಾಡಿಸಿತ್ತು. 

ಮೊದಲ ಬಾರಿ ಕೆಲಸ ಬಿಡುವವರು, ಮನೆ ಬದಲಿಸುವವರು, ಊರು ಬಿಟ್ಟು ಬರುವವರು, ನವದಂಪತಿಗಳು, ನವ ವಿಚ್ಛೇದಿತರು- ಹೀಗೆ ತರಹೇವಾರಿ ವ್ಯಕ್ತಿಗಳಿಗೆ ನಾನು ಹೇಳುವುದು ಇದೇ ಮಾತನ್ನು. ಹೊಸತನ ರೂಢಿಯಾಗುವವರೆಗೆ ಗಟ್ಟಿಯಾಗಿರಿ. ನಿಂತಲ್ಲೇ ನಿಂತು ಕೊಳೆತುಹೋಗುವುದಕ್ಕಿಂತ, ಅಪರಿಚಿತ ದಾರಿಯಲ್ಲಿ ನಡೆಯುವುದು ಒಳ್ಳೆಯದು. ಅಪರಿಚಿತತೆ ನಮಗೆ ಬದುಕುವ ದಾರಿ ಕಲಿಸುತ್ತದೆ. ಸವಾಲುಗಳನ್ನು ಎದುರಿಸುವುದನ್ನು ಕಲಿಸುತ್ತದೆ. ನಮ್ಮ ಮೇಲೆ ನಾವು ಅವಲಂಬಿತರಾಗುವ ಅದ್ಭುತ ಕಲೆಯನ್ನು ಕಲಿಸುತ್ತದೆ. ಹೊಸ ದಾರಿಯಲ್ಲಿ ಶತ್ರುಗಳಷ್ಟೇ ಅಲ್ಲ, ಮಿತ್ರರೂ ಸಿಗುತ್ತಾರೆ. ಸಮಸ್ಯೆಗಳಷ್ಟೇ ಅಲ್ಲ, ಅವಕಾಶಗಳೂ ದಕ್ಕುತ್ತವೆ. ಎಲ್ಲಕ್ಕಿಂತ ಮುಖ್ಯ, ನಿಮಗೆ ನೀವೇ ಮಿತ್ರರಾಗುವುದು ಹೇಗೆಂಬುದು ಗೊತ್ತಾಗುತ್ತದೆ. ಆದ್ದರಿಂದ, ಹೊಸ ದಾರಿ ತುಳಿಯಲು ಹಿಂಜರಿಯದಿರಿ. ಅದಕ್ಕೂ ಮುನ್ನ ಸಾಕಷ್ಟು ಯೋಚಿಸಿ, ವಿಚಾರಿಸಿ, ಸಲಹೆ ಪಡೆಯಿರಿ. ಆದರೆ, ನಿರ್ಧಾರ ಮಾತ್ರ ನಿಮ್ಮದೇ. ಗೆದ್ದರೂ, ಸೋತರೂ ಅದಕ್ಕೆ ನೀವೇ ಜವಾಬ್ದಾರರು. ಇತರರ ಸಲಹೆಗಳೇನಿದ್ದರೂ ಬೀದಿ ದೀಪಗಳಂತೆ. ಅವು ನಿಮಗೆ ದಾರಿ ತೋರಬಹುದು. ಆದರೆ, ಜೊತೆಗೆ ಬರಲಾರವು. ಅವುಗಳ ಬೆಳಕಿನಲ್ಲಿ, ನಿಮ್ಮ ಹೆಜ್ಜೆಗಳಲ್ಲಿ ನಿಮ್ಮ ದಾರಿ ಸಾಗಬೇಕು. ನಡೆಯುವವರು ಮಾತ್ರ ನೀವೇ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ಸವಾಲು ಎದುರಿಸಿ.

ಏಕೆಂದರೆ, ಅಂಥ ಸವಾಲುಗಳನ್ನು ಎದುರಿಸಿ ಒಂಟಿಯಾಗಿ ಹೆಜ್ಜೆ ಹಾಕಿದ ಗಟ್ಟಿ ಅನುಭವ ನನ್ನದು. ಇವತ್ತು ಹಿಂತಿರುಗಿ ನೋಡಿದಾಗ, ನಡೆದ ದಾರಿಯ ದೋಷಗಳು, ಅವಕಾಶಗಳು, ಕಳೆದುಕೊಂಡಿದ್ದು, ದಕ್ಕಿದ್ದು ಎಲ್ಲವೂ ಸ್ಪಷ್ಟವಾಗಿ ಕಾಣುತ್ತಿವೆ. ಎಲ್ಲಾ ಲೆಕ್ಕಾಚಾರ ಹಾಕಿದಾಗ, ಪಡೆದುಕೊಂಡಿದ್ದೇ ಹೆಚ್ಚು ಎಂಬ ಅಂಶ ಸಮಾಧಾನ ನೀಡುತ್ತಿದೆ.

ಎಲ್ಲಕ್ಕಿಂತ ಮುಖ್ಯವಾಗಿ, ನನ್ನನ್ನು ನಾನು ಹೆಚ್ಚು ತಿಳಿದುಕೊಂಡೆ. ನನಗೆ ನಾನೇ ಉತ್ತಮ ಗೆಳೆಯನಾದೆ. ನನ್ನೊಳಗಿನ ನಾನು ನನ್ನ ಅತ್ಯುತ್ತಮ ಸಂಗಾತಿಯಾಯಿತು. ಯೋಗ್ಯ ಮಿತ್ರರು ದಕ್ಕಿದರು. ಶತ್ರುಗಳನ್ನು ನಿಖರವಾಗಿ ಗುರುತಿಸುವ ಕಲೆ ದಕ್ಕಿತು. ಹೊಸ ಸವಾಲುಗಳನ್ನು ಎದುರಿಸುವ ಆತ್ಮವಿಶ್ವಾಸ ಬಲಗೊಂಡಿತು.

ಎಲ್ಲಿಯೋ ಓದಿದ್ದ ಮಾತೊಂದು ನೆನಪಾಗುತ್ತಿದೆ: ನಡೆದಷ್ಟೂ ದಾರಿಯಿದೆ, ಪಡೆದಷ್ಟೂ ಭಾಗ್ಯವಿದೆ. ಆ ಮಾತು ಸತ್ಯ ಎಂಬುದು ಪದೆ ಪದೆ ಅರಿವಾಗುತ್ತಿದೆ.

- ಚಾಮರಾಜ ಸವಡಿ

ಎಲ್ಲೆಡೆ ಹರಡಲಿ ಅಕ್ಕಿ ಉತ್ಸವ

31 Mar 2010

0 ಪ್ರತಿಕ್ರಿಯೆ

ಚಿತ್ರಾ ಪ್ರಸನ್ನ ಅವರು ಕಳಿಸಿದ ಈ ಮೇಲ್‌ ಇದು:

Swadeshi Rice Utsav
@
Gandhi Bhavan, Kumara Krupa Road, Sheshadripuram, Bangalore
On
4th April 2010 (10:30am to 5:00pm)

Fellow Citizens & Consumers:

A Swadeshi rice utsav is organized to benefit the large number of nutrition hungry rice consumers in and around Bangalore. This rice utsav brings to you several traditional and rare rice varieties which you may discover for the first time. Some amongst it are proven to be beneficial for the current generation medical challenge like Diabetes and other lifestyle related medical challenges.

You will also discover rice varieties which are grown using organic farming practices through which hazardous fertilizers or pesticides are avoided in the process of farming.
All these varieties of rice are brought to you at very affordable prices and straight from the farmer.

Come along with your family and friends to celebrate this festival and be a part of consumer revolution who are conscious of rice nutrition and rich Indian rice tradition.

This festival is brought to you by Sahaja Samrudha (a farmers group practicing organic farming techniques), YORA (Year of Rice Action 2009-10) and Thanal (a public interest research, advocacy, education and Action Trust from Kerala)

ಇಂಥ ಉತ್ಸವಗಳು ಅಲ್ಲಲ್ಲಿ ನಡೆಯುತ್ತಿದ್ದರೂ, ಮೊದಲ ಬಾರಿ ದೊಡ್ಡ ಮಟ್ಟದ ಪ್ರಚಾರ ದೊರೆಯುತ್ತಿದೆ. ಇದು ನಿಜಕ್ಕೂ ಸ್ವಾಗತಾರ್ಹ.

ಸಾವಯವ/ನೈಸರ್ಗಿಕ ಕೃಷಿ ಹೆಸರಿನಲ್ಲಿ ಅನೇಕ ಜನ ಕಡಿಮೆ ದರದಲ್ಲಿ ಬೆಳೆದ ಕೃಷಿ ಉತ್ಪನ್ನಗಳನ್ನು ದುಬಾರಿ ಬೆಲೆಗೆ ಮಾರುವ ದಾರಿ ಕಂಡುಕೊಂಡರು. ಹೀಗಾಗಿ, ಇಂಥ ಉತ್ಸವಗಳು ಬಹಳಷ್ಟು ಕಡೆ ನಿರೀಕ್ಷಿಸಿದ ಯಶಸ್ಸು ಗಳಿಸಲಿಲ್ಲ. ಸಾವಯವ/ನೈಸರ್ಗಿಕ ವಿಧಾನದಲ್ಲಿ ಉತ್ಪಾದನಾ ಖರ್ಚು ಕಡಿಮೆಯಾಗುತ್ತದೆ ಎಂಬ ವಾದ ನಿಜವೇ ಆದರೆ, ಉತ್ಪಾದನೆಗಳಿಗೆ ಹೆಚ್ಚು ಬೆಲೆ ಏಕೆ ನಿಗದಿಪಡಿಸಲಾಯ್ತು? ಎಂಬ ಪ್ರಶ್ನೆಗೆ ಇದುವರೆಗೆ ಸಮಾಧಾನಕರ ಉತ್ತರ ಸಿಕ್ಕಿಲ್ಲ. ಅದೂ ಮಾರುಕಟ್ಟೆಯ ತಂತ್ರವಾಗಿರುವುದರಿಂದ, ನೈಸರ್ಗಿಕ ಉತ್ಪಾದನೆಗಳು ದುಬಾರಿ ಎಂಬ ಹಣೆಪಟ್ಟಿ ಅಂಟಿಸಿಕೊಂಡು ಜನರಿಂದ ದೂರವಾದವು.

ಅಕ್ಕಿ ಉತ್ಸವ ಇಂಥ ಅನೈತಿಕ ಅತಿರೇಕಗಳನ್ನು ನಿವಾರಿಸುವಂತಾಗಲಿ. ಉತ್ಪಾದನೆ ವೆಚ್ಚ ಕಡಿಮೆಗೊಳಿಸುವ, ಅನ್ನ ಬೆಳೆದವರಿಗೆ ಸರಿಯಾದ ಬೆಲೆ ತಂದುಕೊಡುವ ವೇದಿಕೆಯಾಗಿ ಮಾರ್ಪಡಲಿ.

- ಚಾಮರಾಜ ಸವಡಿ

ಅದೇ ಪ್ರಹಸನ, ಮತ್ತದೇ ದುರಂತ

29 Mar 2010

1 ಪ್ರತಿಕ್ರಿಯೆ
ಬಿಬಿಎಂಪಿ ಚುನಾವಣೆ ಮುಗಿದಿದೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಾಗಿ, ವಾರ್ಡ್‌‌ಗಳ ಪುನರ್ವಿಂಗಡಣೆಯಾಗಿ ೧೦೦ರಷ್ಟಿದ್ದ ವಾರ್ಡ್‌‌ಗಳ ಸಂಖ್ಯೆ ೧೯೮ಕ್ಕೆ ಏರಿದ ನಂತರ ನಡೆದ ಚುನಾವಣೆ ಎಂಬ ಹೆಗ್ಗಳಿಕೆ ಹೊರತುಪಡಿಸಿದರೆ, ಹಿಂದಿನ ಚುನಾವಣೆಗೂ ಈಗ ನಡೆದಿದ್ದಕ್ಕೂ ಏನೂ ವ್ಯತ್ಯಾಸವಿಲ್ಲ. 

ಅವೇ ವಿಷಯಗಳು, ಅವೇ ಪ್ರಹಸನಗಳು ಈ ಸಲವೂ ನಡೆದವು. ಮತದಾರನ ನಿರ್ಲಕ್ಷ್ಯವೂ ಅದೇ ತೆರನಾಗಿತ್ತು. ಚುನಾವಣಾ ಆಯೋಗ ಏನೇ ಬಿಗಿ ಕ್ರಮಗಳನ್ನು ಕೈಗೊಂಡರೂ, ಅಭ್ಯರ್ಥಿಗಳು ಬಹಿರಂಗವಾಗಿಯೇ ಅವನ್ನು ಉಲ್ಲಂಘಿಸಿದರು. ಐದು ಲಕ್ಷಕ್ಕಿಂತ ಹೆಚ್ಚು ಖರ್ಚು ಮಾಡುವಂತಿಲ್ಲ ಎಂಬ ಆಯೋಗದ ಕಟ್ಟುಪಾಡನ್ನು ಬಹುತೇಕ ಅಭ್ಯರ್ಥಿಗಳು ಉಲ್ಲಂಘಿಸಿದ್ದು ಮೇಲ್ನೋಟಕ್ಕೆ ಸ್ಪಷ್ಟವಾಗಿದ್ದರೂ, ಆಯೋಗ ಏನೂ ಮಾಡಲು ಆಗಿಲ್ಲ. ಜಾರಿಗೊಳಿಸದ ನಿಯಮಗಳ ಹಣೆಬರಹ ಏನಾಗುತ್ತದೆ ಎಂಬುದಕ್ಕೆ ಮತ್ತೊಂದು ತಾಜಾ ಉದಾಹರಣೆ ದಕ್ಕಿದಂತಾಯಿತು, ಅಷ್ಟೇ.
 

ಮತದಾರ ಏಕೆ ನಿರ್ಲಕ್ಷ್ಯ ತೋರುತ್ತಾನೆ? ಎಂಬ ಹಳೆಯ ಪ್ರಶ್ನೆ ಮತ್ತೆ ಮತ್ತೆ ಕಾಡಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ, ಶೇ. ೪೦ರಷ್ಟು ಮತದಾನವಾಗಿದೆ. ಅಂದರೆ, ಅರ್ಧಕ್ಕಿಂತ ಹೆಚ್ಚು ಮತದಾರರು ಮತಗಟ್ಟೆಗೆ ಬರಲಿಲ್ಲ. ಬಂದ ಎಷ್ಟೋ ಜನರ ಹೆಸರುಗಳೇ ಮತಪಟ್ಟಿಯಲ್ಲಿ ಇದ್ದಿಲ್ಲ. ಮತದಾನ ಮೂಲಭೂತ ಹಕ್ಕು ಎನ್ನುವುದಾದರೆ, ಒಬ್ಬ ವ್ಯಕ್ತಿ ತನ್ನ ಗುರುತನ್ನು ಸಾಬೀತುಪಡಿಸುವಂಥ ದಾಖಲೆಗಳನ್ನು ಹೊಂದಿದ್ದರೂ, ಮತದಾನ ಹಕ್ಕಿನಿಂದ ವಂಚಿತನಾಗುವುದನ್ನು ಚುನಾವಣಾ ಆಯೋಗ ಹೇಗೆ ವಿವರಿಸುತ್ತದೋ ಗೊತ್ತಿಲ್ಲ. ಆದರೆ, ಹಳೆಯ ಸಮಸ್ಯೆಗೆ ಈಗಿನ ವ್ಯವಸ್ಥೆ ಉತ್ತರ ಕೊಡಲು ವಿಫಲವಾಗಿದೆ ಎಂಬುದು ಮಾತ್ರ ಸ್ಪಷ್ಟ.
 

ಮತದಾನ ಮಾಡಲು ಜನ ಏಕೆ ನಿರ್ಲಕ್ಷ್ಯ ತೋರುತ್ತಾರೆ ಎಂಬುದಕ್ಕೆ ಹಲವಾರು ಕಾರಣಗಳಿವೆ. ಮತಪಟ್ಟಿಯಲ್ಲಿ ಹೆಸರಿಲ್ಲ ಎಂಬುದು ಒಂದು ಸಣ್ಣ ಅಂಶ ಮಾತ್ರ. ಒಟ್ಟು ಪ್ರಕ್ರಿಯೆ ಬಗ್ಗೆ ತಮಗಿರುವ ಅಸಮಾಧಾನವನ್ನು ಜನ ವ್ಯಕ್ತಪಡಿಸುವುದು ಹೀಗೆ. ಕಣದಲ್ಲಿರುವ ಅಭ್ಯರ್ಥಿಗಳ ಬಗ್ಗೆ ಅಸಮಾಧಾನ ಇದ್ದಾಗ, ಆರ್ಥಿಕ ಮಿತಿಯಲ್ಲಿ ಯೋಗ್ಯ ಅಭ್ಯರ್ಥಿಯೊಬ್ಬ ಸ್ಪರ್ಧಿಸಲು ಸಾಧ್ಯವಾಗದ ವಾತಾವರಣ ಇರುವಾಗ, ಮತದಾನ ಪ್ರಕ್ರಿಯೆ ಪ್ರಹಸನವಾಗುತ್ತದೆ ಎಂಬುದಕ್ಕೆ ಬಿಬಿಎಂಪಿ ಚುನಾವಣೆ ಮತ್ತೊಮ್ಮೆ ಸಾಕ್ಷ್ಯ ಒದಗಿಸಿದಂತಾಗಿದೆ. ಫಲಿತಾಂಶ ಬಂದಾಗ, ಯಾರೇ ಗೆಲ್ಲಲಿ, ಅವರಿಗೆ ವಾರ್ಡ್‌‌ನ ಅರ್ಧದಷ್ಟು ಜನರ ಮನ್ನಣೆ ಇಲ್ಲ ಎಂಬ ಅಂಶವೇ ಆಘಾತಕಾರಿ. ಹಾಗಿದ್ದ ಮೇಲೆ ಇದು ಜನಮತ ಹೇಗಾಗುತ್ತದೆ?
 

ಹಣಬಲ ಅಥವಾ ರಾಜಕೀಯ ನಂಟಿರುವ ವ್ಯಕ್ತಿಗಳು ಮಾತ್ರ ಚುನಾವಣೆ ಎದುರಿಸುವ ವಾತಾವರಣ ಇರುವವರೆಗೆ, ಮತದಾನದ ಬಗ್ಗೆ ಜನರ ನಿರ್ಲಕ್ಷ್ಯವೂ ಹೀಗೇ ಮುಂದುವರಿಯುತ್ತದೆ. ತಮಗೆ ಉತ್ತಮ ಎನಿಸುವ ಅಭ್ಯರ್ಥಿ ಕಣದಲ್ಲಿ ಇಲ್ಲದಿದ್ದರೆ ಜನರಾದರೂ ಏನು ಮಾಡಬೇಕು? ಸಹಜವಾಗಿ ಅವರು ಮತಗಟ್ಟೆಯಿಂದ ದೂರ ಉಳಿಯುತ್ತಾರೆ. ಇಡೀ ಚುನಾವಣೆ ಎಂಬುದು ಪ್ರಹಸನವಾಗುತ್ತದೆ. ಈಗ ಆಗಿರುವುದೇ ಅದು.
 

ಸಮಾಜದ ಪ್ರತಿಯೊಂದು ಬೆಳವಣಿಗೆಯೂ ರಾಜಕಾರಣದ ಮೂಲಕವೇ ಬರಬೇಕು ಎಂಬ ಪರಿಸ್ಥಿತಿ ಇಂಥ ಪ್ರಹಸನಗಳನ್ನು ಸೃಷ್ಟಿಸುತ್ತದೆ. ತಂತಮ್ಮ ವೃತ್ತಿಯಲ್ಲಿ ಉತ್ತಮವಾಗಿ ಕೆಲಸ ಮಾಡುವವರು ನಿರ್ಲಕ್ಷ್ಯಕ್ಕೆ ಒಳಗಾಗುತ್ತಾರೆ. ಅವರ ಪರಿಣಿತಿಯನ್ನು, ಅನುಭವವನ್ನು ಸಮಾಜದ ಒಟ್ಟು ಅಭಿವೃದ್ಧಿಗೆ ಬಳಸಲು ಆಗದ ವಾತಾವರಣ ಸೃಷ್ಟಿಯಾಗುತ್ತದೆ. ರಾಜಕೀಯ ಹಾಗೂ ಇತರ ಕ್ಷೇತ್ರಗಳ ನಡುವಿನ ಅಂತರ ಹೆಚ್ಚುತ್ತಾ ಹೋಗುತ್ತದೆ. ಇಷ್ಟೊಂದು ಕಷ್ಟಪಟ್ಟು, ಹಣ ಖರ್ಚು ಮಾಡಿದರೆ ಮಾತ್ರ ಗೆಲ್ಲುವ ಸಾಧ್ಯತೆ ಎಂಬ ವಾಸ್ತವ ಇತರ ರಂಗದ ಪ್ರತಿಭಾವಂತರನ್ನು ರಾಜಕೀಯ ಕ್ಷೇತ್ರದಿಂದ ದೂರ ಇರಿಸುತ್ತದೆ. ಅಂಥ ಜನರನ್ನು ಶಾಸಕಾಂಗದೊಳಗೆ ತರಲೆಂದೇ ಮೇಲ್ಮನೆ, ರಾಜ್ಯಸಭೆಗಳು ಇವೆಯಾದರೂ, ಅವು ಕೂಡಾ ಕಲಬೆರಕೆಯಾಗಿದ್ದರಿಂದ, ರಾಜಕಾರಣವೇ ಬೇರೆ, ಇತರ ಕ್ಷೇತ್ರಗಳೇ ಬೇರೆ ಎನ್ನುವಂಥ ವಾತಾವರಣ ಸೃಷ್ಟಿಯಾಗಿದೆ. ಸ್ಥಳೀಯ ಸಂಸ್ಥೆಗಳಲ್ಲಾದರೂ ಮೂಲಭೂತ ಬದಲಾವಣೆಗಳಾಗದಿದ್ದರೆ, ಬರುವ ವರ್ಷಗಳಲ್ಲಿ ಈ ಅಂತರ ಇನ್ನಷ್ಟು ಹೆಚ್ಚುತ್ತದೆ. ಇತರ ರಂಗದ ಪ್ರತಿಭಾವಂತರ ಅನುಭವವನ್ನು ಬಳಸಿಕೊಳ್ಳಲಾಗದ ಸ್ಥಿತಿ ನಿಜಕ್ಕೂ ಅಪಾಯಕಾರಿ. ಬದಲಾವಣೆ ಸಾಧ್ಯವಾಗಿಸಬಲ್ಲ ವ್ಯಕ್ತಿಗಳೇ ದೂರ ಉಳಿಯುವಂತಾದರೆ, ಪ್ರಗತಿ ಸಾಧ್ಯವಾಗುವುದಾದರೂ ಹೇಗೆ?
 

ಎಲ್ಲವೂ ಮುಕ್ತಗೊಳ್ಳುತ್ತಿರುವ ಇಂದಿನ ದಿನಗಳಲ್ಲಿ ರಾಜಕೀಯ ಕ್ಷೇತ್ರವೂ ಇತರ ರಂಗದ ಪ್ರತಿಭಾವಂತರಿಗೆ ತೆರೆದುಕೊಳ್ಳಬಹುದಿತ್ತು. ಸ್ಥಳೀಯ ಸಂಸ್ಥೆಗಳ ಚುನಾವಣೆಯಾದರೂ ಅದಕ್ಕೆ ವೇದಿಕೆಯಾಗಬಹುದಿತ್ತು. ಆದರೆ, ಹಾಗಾಗುತ್ತಿಲ್ಲ ಎಂಬುದಕ್ಕೆ ನೀರಸವಾಗಿ ಮುಗಿದ ಬಿಬಿಎಂಪಿ ಚುನಾವಣೆ ಜ್ವಲಂತ ಸಾಕ್ಷಿ.

- ಚಾಮರಾಜ ಸವಡಿ

ಒಂದಿಷ್ಟು ಚುಟುಕಗಳು-1

28 Mar 2010

4 ಪ್ರತಿಕ್ರಿಯೆ

ಬುದ್ಧಿವಂತನಲ್ಲಿ 
ಭಾವನೆಗಳ ಪಸೆಯಿಲ್ಲ
ತಲೆ ಏರಿ ಕೂತರೆ
ಹೃದಯಕ್ಕೆ ಇಳಿಯುವುದೇ ಇಲ್ಲ

*****

ಬೆಳಿಗ್ಗೆ ಬೇಗ ಏಳಬೇಕು
ಅಂತ ಮಲಗಿದರೆ
ಕನಸಿನ ತುಂಬ
ಅಲಾರಾಂ ಮೊಳಗುವ ಸದ್ದು

*****

ಎಲ್ಲಿಂದಲೋ ಬಂದವರು
ಏಕೆ ಇಷ್ಟವಾಗುತ್ತಾರೋ...

*****

ಹುಚ್ಚನಂತೆ ಬದುಕುತ್ತಿದ್ದಾಗ
ಜೀವನವೆಷ್ಟು ಚಂದವಿತ್ತು!

*****

ಕಣ್ಣೀರ ಹನಿಗಳ ಲೆಕ್ಕವಿಟ್ಟೆಯಾ ಗೆಳೆಯಾ?
ಹಾಗಾದರೆ, ನೀನು ಕವಿಯಲ್ಲ, ಪ್ರೇಮಿಯೂ ಅಲ್ಲ

- ಚಾಮರಾಜ ಸವಡಿ

ಕಿತ್ತಾಡೋರ ಕಂಡು ನಗುತ್ತಿದೆ ಪ್ರೀತಿ...

14 Feb 2010

7 ಪ್ರತಿಕ್ರಿಯೆ
ಮನಸ್ಸು ಖಾಲಿಯಾಯ್ತು ಅಂತ ಅನ್ನಿಸಿದಾಗೆಲ್ಲ ವಿದ್ಯಾರ್ಥಿ ಜೀವನದ ದಿನಗಳನ್ನು ನೆನಪಿಸಿಕೊಳ್ಳುತ್ತೇನೆ.

ಕಂಪ್ಯೂಟರುಗಳಿಲ್ಲದ, ಖಾಸಗಿ ಚಾನೆಲ್‌ಗಳಿಲ್ಲದ, ಮೊಬೈಲುಗಳಿಲ್ಲದ ಹಾಗೂ ಜೇಬಿನಲ್ಲಿ ದುಡ್ಡಿಲ್ಲದ ದಿನಗಳವು. ಆದರೂ, ಮನಸ್ಸಿನೊಳಗಿನ ಭಾವನೆಗಳು ಸಮೃದ್ಧವಾಗಿದ್ದವು. ಅವನ್ನು ಹೊರಹಾಕಲು ಪತ್ರಗಳಿದ್ದವು. ಮಿತ್ರರಿದ್ದರು ಹಾಗೂ ದಿನಚರಿ ಎಂಬ ಅದ್ಭುತ ಸಂಗಾತಿಯಿತ್ತು. ಎಲ್ಲಕ್ಕಿಂತ ಮುಖ್ಯ, ಶೈಕ್ಷಣಿಕ ವರ್ಷದ ಕೊನೆಯ ದಿನಗಳಲ್ಲಿ, ಇಂಥ ಭಾವನೆಗಳಿಗೆ ಸೂಕ್ತ ಹರಿವು ಕೊಡುವ ಆಟೊಗ್ರಾಫ್‌ಗಳಿದ್ದವು. ಒಂದಲ್ಲ ಒಂದು ಮನಸ್ಸಿಗೆ ಮುದ ನೀಡುತ್ತಿತ್ತು. ಹೊಸ ಕನಸಿಗೆ ಪ್ರೇರಣೆ ಒದಗಿಸುತ್ತಿತ್ತು.
 

ಆಗ ವ್ಯಾಲೆಂಟೈನ್ಸ್‌ ಡೇ ಎಂಬುದೇ ಇದ್ದಿಲ್ಲ. ಹೀಗಾಗಿ, ವರ್ಷ ಪೂರ್ತಿ ರೋಮ್ಯಾಂಟಿಕ್‌ ಮೂಡ್‌. ಅದಕ್ಕೆ ತಕ್ಕಂತೆ ಚುಟುಕು ಬರೆಯುವ ಹುಮ್ಮಸ್ಸು. ಅವನ್ನು ಆಗೀಗ ಪತ್ರಿಕೆಗಳಿಗೆ ಕಳಿಸಿ, ಅವು ಅಚ್ಚಾಗಿದ್ದನ್ನು ನೋಟ್‌ಬುಕ್‌ನಲ್ಲಿ ಅಂಟಿಸಿ, ಅದನ್ನೇ ಕವಿತಾ ಸಂಕಲನದಂತೆ ಮೂಡಿಸಿ ಮೆರೆಯುತ್ತಿದ್ದ ಖುಷಿಯಿತ್ತು. ಕಾಲೇಜಿನ ವಾರ್ಷಿಕ ದಿನಾಚರಣೆ ಅಂಥ ಖುಷಿಯನ್ನು ಸಾರ್ವತ್ರಿಕಗೊಳಿಸುತ್ತಿದ್ದ ಸಂದರ್ಭ. ಎಷ್ಟೋ ಜನರ ಅವಿತಿಟ್ಟಿದ್ದ ಪ್ರತಿಭೆ ಪ್ರದರ್ಶನವಾಗುತ್ತಿದ್ದುದೇ ಇಂಥ ಸಂದರ್ಭದಲ್ಲಿ.
 

ನಾಳೆ ವ್ಯಾಲೆಂಟೈನ್ಸ್‌ ಡೇ ಎಂಬ ವಿಷಯ ಈ ಎಲ್ಲ ವಿಷಯಗಳನ್ನು ಮತ್ತೆ ಮತ್ತೆ ನೆನಪಿಸುತ್ತಿದೆ.
 

ಇಂಥದೊಂದು ದಿನಾಚರಣೆ ಬೇಕೆ-ಬೇಡವೆ? ಎಂಬ ವಿಷಯ ಹಿಡಿದುಕೊಂಡು ಸಾರ್ವಜನಿಕವಾಗಿ ಕಿತ್ತಾಡುವ ಚಾಳಿ ಈಗ ಸಾಮಾನ್ಯವಾಗಿಬಿಟ್ಟಿದೆ. ಪ್ರತಿಯೊಬ್ಬರಿಗೂ ತಮ್ಮ ಧೋರಣೆಯೇ ಸರಿ ಎಂಬ ಹಮ್ಮು. ಎಷ್ಟು ಸಾಧ್ಯವೋ ಅಷ್ಟು ಪ್ರಚಾರ ಗಿಟ್ಟಿಸಿಕೊಳ್ಳುವ ದುರ್ಬುದ್ಧಿ. ವರ್ಷದಲ್ಲಿ ಒಂದು ದಿನಕ್ಕೆ ಸೀಮಿತವಾಗಿರುವ ಈ ಆಚರಣೆಯನ್ನು ವಿರೋಧಿಸದಿದ್ದರೆ, ಇಡೀ ಸಂಸ್ಕೃತಿಯೇ ಹದಗೆಟ್ಟು ಹೈದರಾಬಾದ್‌ ಆಗುತ್ತದೆ ಎಂಬುದನ್ನು ತೋರಿಸಿಕೊಳ್ಳುವ ಅವಿವೇಕತನ. ಇದೊಂದು ದಿನ ಕೈಬಿಟ್ಟರೆ, ಜೀವನಪೂರ್ತಿ ಎಂದಿಗೂ ಪ್ರೀತಿಯನ್ನು ವ್ಯಕ್ತಪಡಿಸಲಾರೆವೇನೋ ಎಂಬಂತೆ ಹಪಾಹಪಿ ಪ್ರದರ್ಶಿಸುತ್ತಿರುವ ವರ್ಗ ಇನ್ನೊಂದೆಡೆ. ಈ ಎರಡೂ ಬಣಗಳ ಕಿತ್ತಾಟವನ್ನು ತಂತಮ್ಮ ಲಾಭಕ್ಕೆ ಬಳಸಿಕೊಳ್ಳಲು ಯತ್ನಿಸುವ ಮಾಧ್ಯಮ ಹಾಗೂ ಅದನ್ನು ನೋಡುತ್ತ ಇದ್ದ ಸಮಯವನ್ನು ಹಾಳು ಮಾಡಿಕೊಳ್ಳುತ್ತಿರುವ ಜನ ಮತ್ತೊಂದೆಡೆ.
 

ಇವರ ಮಧ್ಯೆ, ಇಂಥ ಅವಿವೇಕತನದ ಮಧ್ಯೆ ಪ್ರೀತಿ ಇರಲು ಸಾಧ್ಯವೆ?
 

ಮೂಡಿದ್ದು ಎಷ್ಟೋ ಸಾರಿ ಗೊತ್ತೇ ಆಗದಂಥ ಮಾಧುರ್ಯಯುತ ಭಾವನೆ ಈ ಪ್ರೀತಿ. ಅದನ್ನು ಪ್ರದರ್ಶನದ ವಸ್ತುವಾಗಿಸಿದ್ದೇ ಮೊದಲ ಅವಿವೇಕತನ. ಅದರ ಹೆಸರಿನಲ್ಲಿ ಕಿತ್ತಾಟ ಶುರು ಮಾಡಿದ್ದು ಅವಿವೇಕತನದ ಮುಂದುವರಿಕೆ. ಒಂಚೂರು ಆಳಕ್ಕೆ ಇಳಿದು ನೋಡಿದರೆ, ಪರ-ವಿರೋಧಿ ಬಣಗಳ ಸಾಮಾನ್ಯ ಆಶಯ ಪ್ರಚಾರ ಪಡೆಯುವ ಸರ್ಕಸ್ಸೇ ಹೊರತು ಅದರಲ್ಲಿ ಎಂಥ ಆದರ್ಶವೂ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಆದರೂ ಎಲ್ಲರಿಗೂ ನಾಟಕ ನೋಡುವ ಚಪಲ. ಹೀಗಾಗಿ, ನಟಿಸುವವರ ಸಂಖ್ಯೆ ಪ್ರತಿ ವರ್ಷ ಹೆಚ್ಚುತ್ತಿದೆ. ಇದೊಂಥರಾ ವಾರ್ಷಿಕ ನಾಟಕ ಸ್ಪರ್ಧೆ.
 

ವಾದ ಮಾಡುವ ಬಹುತೇಕರು ಫಾರ್ಟಿ ಪ್ಲಸ್‌ ವರ್ಗದವರು. ‘ವ್ಯಾಲೆಂಟೈನ್ಸ್‌ ಡೇ ಆಚರಿಸೋದು ಬಿಡೋದು ವೈಯಕ್ತಿಕ ಕಣ್ರೀ. ನಿಮ್ಮ ಅಭಿಪ್ರಾಯ ಯಾರಿಗೆ ಬೇಕು’ ಎಂದು ಉಗಿಯುವ ಯುವ ವರ್ಗವನ್ನು ಚರ್ಚೆಗೆ ಕರೆಯಬೇಕೆಂಬ ಕಾಮನ್‌ಸೆನ್ಸೇ ತುಂಬ ಜನರಿಗಿಲ್ಲ. ಹೀಗಾಗಿ ಚರ್ಚೆ ಎಂಬುದೇ ಪ್ರಹಸನ. ಅದರ ಹೆಸರಿನಲ್ಲಿ ಆಗುವ ಇತರ ಕ್ರಿಯೆ ಅಭಾಸಕರ.
 

ರೈತ ನಾಯಕರು ಏಳಬೇಕೆಂದರೆ ಕರೆಂಟ್‌ ಹೋಗಬೇಕು, ಅಥವಾ ರೈತರ ಪಂಪ್‌ಸೆಟ್‌ಗಳಿಗೆ ಮೀಟರ್‌ ಹಾಕಬೇಕು ಅಥವಾ ಬಿಟಿ ಬದನೆ ಬರಬೇಕು. ಧಾರ್ಮಿಕ ನಾಯಕರು ಏಳಲು ವ್ಯಾಲೆಂಟೈನ್ಸ್‌ ಡೇಯೋ, ಮತಾಂತರದಂಥ ವಿಷಯವೋ ಬರಬೇಕು. ದಲಿತ ನಾಯಕರು ಏಳಬೇಕೆಂದರೆ, ಅಂಬೇಡ್ಕರ್‌ ಪ್ರತಿಮೆಗೆ ಅವಮಾನವಾಗಬೇಕು. ಜಾತಿ ನಾಯಕರು ಏಳಬೇಕೆಂದರೆ, ಅವರ ಜಾತಿಯ ವಿಷಯಕ್ಕೆ ಸಂಬಂಧಿಸಿದಂತೆ ಮೀಸಲಾತಿ ಕಟ್‌ ಆಗಬೇಕು ಅಥವಾ ಯಾರಾದರೂ ಟೀಕಿಸಿ ಬರೆದಿರಬೇಕು. ಒಟ್ಟಿನಲ್ಲಿ ಎಲ್ಲರಿಗೂ ಏಳಲು ಒಂದು ಕಾರಣ ಬೇಕು. ಅಂಥದೊಂದು ಕಾರಣ ಸಿಕ್ಕ ಕೂಡಲೇ ಎದ್ದು, ಎಗರಾಡಿ, ಸಾಧ್ಯವಾದಷ್ಟೂ ರಾಡಿ ಎಬ್ಬಿಸಿ ಮಲಗಿದರೆಂದರೆ, ಮತ್ತೆ ಅವರು ಏಳಲು ಇನ್ನೊಂದು ಘಟನೆಯೇ ನಡೆಯಬೇಕು. ಇಂಥ ಬೂಟಾಟಿಕೆಯ ಮಧ್ಯೆ ಪ್ರೀತಿ ಎಂಬುದು ಕೂಡ ಮಾರಾಟದ, ಹಾರಾಟದ, ಒಣ ಚರ್ಚೆಯ ಹಾಗೂ ಸೋಗಲಾಡಿತನದ ವಿಷಯವಾಗುತ್ತಿದೆ.
 

ನನಗೆ ಪಿ. ಲಂಕೇಶರ ‘ಎಲ್ಲಿದ್ದೆ ಇಲ್ಲೀತಂಕ, ಎಲ್ಲಿಂದ ಬಂದ್ಯವ್ವ, ನಿನ ಕಂಡು ನಾನ್ಯಾಕೆ ಕರಗಿದೆನೋ’ ಎಂಬ ಸೊಗಸಾದ ಕವಿತೆ ನೆನಪಾಗುತ್ತಿದೆ. ಪ್ರೀತಿ ಎಂಬುದು ಸಾರ್ವಕಾಲಿಕ, ಅದು ಎಲ್ಲರ ಮನಸ್ಸಿನಲ್ಲಿ ಹೊಂಗನಸ ಅರಳಿಸುವಂಥದು, ಎಲ್ಲರ ಯೌವನವನ್ನು ಸ್ಮರಣೀಯವಾಗಿಸುವಂಥದು. ಯಾರು ಎಷ್ಟೇ ಚರ್ಚೆ ಮಾಡಿದರೂ, ಬಡಿದಾಡಿದರೂ ಅದು ವ್ಯಕ್ತವಾಗುತ್ತಲೇ ಹೋಗುತ್ತದೆ. ಅದಕ್ಕಾಗಿ ಫೆಬ್ರವರಿ ಹದಿನಾಲ್ಕೇ ಬರಬೇಕೆಂದೇನಿಲ್ಲ.
 

ಹಾಗಂತ, ಫೆಬ್ರವರಿ ಹದಿನಾಲ್ಕರಂದು ಆಚರಿಸಬಾರದು ಅಂತಾನೂ ಇಲ್ಲ. ಏಕೆಂದರೆ, ಇಂಥ ದಿನವೇ ಉಕ್ಕಬೇಕು ಎನ್ನಲು ಪ್ರೀತಿ ಎಂಬುದು ಕಾವೇರಿ ತೀರ್ಥೋದ್ಭವವಲ್ಲ. ಅವರವರ ಪಾಲಿನ ಹೊಂಗನಸದು. ಅದನ್ನು ಕಸಿಯುವ ಹಕ್ಕು ಯಾರಿಗೂ ಇಲ್ಲ. ಯಾರಿಗೂ ಆ ಹಕ್ಕು ದಕ್ಕಲಾರದು ಕೂಡ.
 

ಏಕೆಂದರೆ, ಪ್ರೀತಿ ಎಂಬುದೇ ಹಾಗೆ. ಅದನ್ನು ಬಂಧಿಸಲಾಗದು. ಅದುಮಿಡಲಾಗದು. ಹೇಗೆ ಅದಕ್ಕೆ ಜಾತಿ, ಧರ್ಮ, ಭಾಷೆ, ವರ್ಗ, ಅಂತಸ್ತುಗಳ ಹಂಗಿಲ್ಲವೋ ಹಾಗೇ ದಿನಾಂಕದ ಹಂಗೂ ಇಲ್ಲ.
ಹೀಗಾಗಿ, ಪ್ರೀತಿ ನಿತ್ಯನೂತನ.

- ಚಾಮರಾಜ ಸವಡಿ

ಕನಸು ಕಾಣಬಾರದು ಅಂದುಕೊಳ್ಳುತ್ತ...

28 Jan 2010

4 ಪ್ರತಿಕ್ರಿಯೆ
ಮತ್ತೆ ಮತ್ತೆ ಕೀಬೋರ್ಡ್‌ ಮುಟ್ಟುತ್ತೇನೆ. ಸುಮ್ಮನಾಗುತ್ತೇನೆ.

ಕಳೆದ ಕೆಲ ದಿನಗಳಿಂದ ಇದು ಹೀಗೇ ನಡೆದುಕೊಂಡು ಬರುತ್ತಿದೆ. ಏನೋ ಬರೆಯಬೇಕೆಂದು ಅಂದುಕೊಳ್ಳುತ್ತೇನೆ. ಎಳೆಯೊಂದು ಮನದ ಮೂಲೆಯಲ್ಲಿ ಕಾಣುತ್ತದೆ. ಮೆತ್ತಗೇ ಹಿಡಿದೆಳೆದರೆ, ಸೊಗಸಾದ ನೇಯ್ಗೆ ಬಂದೀತು ಅಂದುಕೊಳ್ಳುತ್ತೇನೆ. ಅಷ್ಟೊತ್ತಿಗೆ ಮತ್ತೇನೋ ನೆನಪಾಗುತ್ತದೆ. ಎಳೆ ಅಲ್ಲೇ ಒಣಗಿ ಹೋಗುತ್ತದೆ.

ಏಕೆ ಹೀಗಾಗುತ್ತದೆ?

ಮನಸ್ಸಿನ ಯೋಚನೆಯ ಒಂದು ಎಳೆ ಎಂತೆಂಥ ಕನಸುಗಳನ್ನು ತಂದಿಡುತ್ತದೆ ಎಂಬುದನ್ನು ಖುದ್ದು ಅನುಭವಿಸಿದವ ನಾನು. ಎಳೆ ಎಂಬುದು ಮಗುವಿನಂತೆ. ಅದರ ಸಾಧ್ಯತೆಗಳು ಅಪಾರ. ಅದನ್ನು ಬೆಳೆಸಬೇಕಾದ ಜವಾಬ್ದಾರಿಯೂ ಅಷ್ಟೇ ದೊಡ್ಡದು. ಮೊಳಕೆಯೊಡೆದ ಪ್ರತಿಯೊಂದು ಬೀಜಕ್ಕೂ ಪೂರ್ತಿ ಮರವಾಗುವ ಎಲ್ಲ ಸಾಧ್ಯತೆಗಳೂ ಇರುತ್ತವೆ.

ಆದರೆ, ಎಲ್ಲ ಮೊಳಕೆಗಳೂ ಮರವಾಗುವುದಿಲ್ಲ. ಬಹಳಷ್ಟು ಮೊಳಕೆಗಳು ಮುರುಟಿಹೋಗುತ್ತವೆ. ನಮ್ಮ ಬಾಲ್ಯದ ಕನಸುಗಳಂತೆ.

ಎಲ್ಲೋ ಗಂಭೀರ ಚರ್ಚೆಯಲ್ಲಿದ್ದಾಗ, ವಾಹನದಲ್ಲಿದ್ದಾಗ, ನಿದ್ದೆ ಆವರಿಸಿಕೊಳ್ಳುವಾಗ, ನಿದ್ದೆ ತಿಳಿಯಾಗುವಾಗ ಎಷ್ಟೊಂದು ಸುನೀತ ಭಾವನೆಗಳು ಮೊಳಕೆಯೊಡೆಯುತ್ತವೆ. ಎಷ್ಟೋ ಸಾರಿ, ಅವಕಾಶ ಮಾಡಿಕೊಂಡು ಅವನ್ನೆಲ್ಲ ಒಂದು ಕಡೆ ಬರೆದಿಡುತ್ತೇನೆ. ಬಿಡುವಾದಾಗ ಈ ಭಾವನೆಗಳನ್ನು ಬೆಳೆಸಬೇಕು. ಅವಕ್ಕೊಂದು ಪೂರ್ಣರೂಪ ಕೊಡಬೇಕು ಅಂದುಕೊಳ್ಳುತ್ತೇನೆ. ಕೆಲವೊಂದು ಸಿದ್ಧಿಸುತ್ತವೆ. ಇನ್ನು ಕೆಲವು ಮುರುಟಿಹೋಗಿರುತ್ತವೆ.

ಪ್ರತಿಯೊಂದು ಅಪೂರ್ಣ ಕನಸೂ ಹೊಸ ಹೊಸ ಕನಸುಗಳ ಮರಿ ಹಾಕುತ್ತದೆ. ಪ್ರತಿಯೊಂದು ಹೊಸ ಕನಸೂ ಅಪಾರ ಸಾಧ್ಯತೆಗಳ ಕನಸನ್ನು ಸೃಷ್ಟಿಸುತ್ತದೆ. ಪರಿಪೂರ್ಣ ಅನಿಸುವಂಥ ಕಾಲ್ಪನಿಕ ಪ್ರಪಂಚವನ್ನು ಕಣ್ಣೆದುರು ತರುತ್ತವೆ. ನಿಶ್ಯಬ್ದ ತುಂಬಿದ ಈ ಕಾಳರಾತ್ರಿಯಲ್ಲಿ, ಎಲ್ಲ ಕನಸುಗಳನ್ನೂ ಪೋಷಿಸಬೇಕು. ಬೆಳೆಸಬೇಕು. ಅವನ್ನು ಪೂರ್ಣವಾಗಿಸಬೇಕು ಅಂತ ಅಂದುಕೊಳ್ಳುತ್ತೇನೆ. ಮತ್ತೆ ಮತ್ತೆ ಕೀಬೋರ್ಡ್‌ ಮುಟ್ಟುತ್ತೇನೆ. ಒಂದಿಷ್ಟು ಅಕ್ಷರಗಳನ್ನು ನೇಯುತ್ತೇನೆ. ಕನಸಿನ ಚಿತ್ರ ಅದರಲ್ಲಿ ಮೂಡುತ್ತಿದೆಯೇ ಅಂತ ಆಗಾಗ ಪರೀಕ್ಷಿಸುತ್ತೇನೆ. ಕೆಲವೊಮ್ಮೆ ಚಿತ್ರ ಸರಿಯಾಗಿರುತ್ತದೆ. ಬಹಳಷ್ಟು ಸಾರಿ, ಅಸ್ಪಷ್ಟ.

ಆಗೆಲ್ಲ ಬೇಸರ. ಇನ್ನು ಕನಸು ಕಾಣಬಾರದು ಅಂದುಕೊಳ್ಳುತ್ತೇನೆ. ಇರುವ ಕನಸುಗಳು ಈಡೇರಿದರೆ ಸಾಕು ಎಂದು ನಿರ್ಧರಿಸುತ್ತೇನೆ. ಕಂಪ್ಯೂಟರ್‌ ಮುಚ್ಚಿ, ಸ್ವಿಚ್‌ ಆಫ್‌ ಮಾಡಿ, ಕಣ್ಮುಚ್ಚಿಕೊಂಡ ಪರದೆ ದಿಟ್ಟಿಸುವಾಗ, ಅಲ್ಲಿ ಹೊಸಹೊಸ ಕನಸುಗಳು ಎದ್ದೆದ್ದು ಕುಣಿಯುತ್ತವೆ. ಆಸೆಬುರುಕ ಮಗುವಿನಂತೆ, ಮನಸ್ಸು ಹೊಸ ಹೊಸ ಕನಸುಗಳನ್ನು ಕಾಣತೊಡಗುತ್ತದೆ.

ಎಷ್ಟೊಂದು ಅಪಾರ ಸಾಧ್ಯತೆಗಳನ್ನು ಹೊಂದಿದೆ ಈ ಮನಸ್ಸು ಅಂತ ಅಚ್ಚರಿಯಾಗುತ್ತದೆ. ಹಿಂದಿದ್ದಂತೆ ಈಗಿಲ್ಲ, ಈಗಿರುವಂತೆ ಮುಂದಿರುವುದಿಲ್ಲ. ಪ್ರತಿ ಕ್ಷಣಕ್ಕೂ ಬದಲಾಗುತ್ತಲೇ ಹೋಗುತ್ತದೆ. ಮತ್ತೆ ಮತ್ತೆ ಮುದುಡುತ್ತದೆ, ಅರಳುತ್ತದೆ, ಅಚ್ಚರಿಪಡುತ್ತದೆ. ಎಲ್ಲ ಸೋಲುಗಳ ನಿರಾಶೆ ಉಂಡುಟ್ಟು ಮತ್ತೆ ನಳನಳಿಸುತ್ತದೆ. ಬೆಳೆಯುತ್ತದೆ. ಮುರುಟುತ್ತಲೇ ಹೊಸ ಚಿಗುರುಗಳನ್ನು ಅರಳಿಸುತ್ತದೆ. ಮತ್ತೆ ಕಂಪ್ಯೂಟರ್‌ ಆನ್‌ ಮಾಡುವಂತೆ ಮಾಡುತ್ತದೆ.

ಮನಸ್ಸಿನೆದುರು ಮೂಡುವ ಚಿತ್ರಗಳನ್ನು ಅಕ್ಷರಗಳನ್ನಾಗಿಸುವುದು ಸುಲಭವಲ್ಲ. ಹಾಗಂತ ಸುಮ್ಮನೆ ಕೂಡುವುದು ಸಾಧ್ಯವೂ ಇಲ್ಲ. ಒಂದಿಷ್ಟು ಬರೆಯುವುದು, ಅಳಿಸುವುದು, ಹೊಸ ಬರಹಗಳನ್ನು ಮೂಡಿಸುವುದು, ಛಕ್ಕಂತ ಹೊಳೆದ ಎಳೆಗಳನ್ನು ಹಿಡಿದೆಳೆಯುತ್ತ ಹೊಸ ನೇಯ್ಗೆಗೆ ಪ್ರಯತ್ನಿಸುವುದು, ಬರೆದುದನ್ನು ಓದುತ್ತ, ಮೆಚ್ಚುತ್ತ, ಅಳಿಸುತ್ತ, ಕೊನೆಗೊಮ್ಮೆ, ಪರವಾಗಿಲ್ಲ ಎಂಬ ಒಂದಿಷ್ಟು ಪ್ಯಾರಾಗಳನ್ನು ದಿಟ್ಟಿಸುವಾಗ-

ಛೇ, ಇದು ನಾನು ಕಂಡ ಕನಸೇ ಅಲ್ಲ ಎಂಬ ನಿರಾಶೆ.

ಶಿಶುನಾಳ ಶರೀಫರು ತಮಾಷೆ ಮಾಡಿದಂತಾಗುತ್ತದೆ: ತರವಲ್ಲ ತಗಿ ನಿನ್ನ ತಂಬೂರಿ ಸ್ವರ... ಎಷ್ಟೋ ಸಂದರ್ಭಗಳಲ್ಲಿ, ಬರೆದುದನ್ನೆಲ್ಲ ಅಳಿಸಿ, ಮತ್ತೆ ಕಂಪ್ಯೂಟರ್‌ ಮುಚ್ಚಿ, ಸುಮ್ಮನೇ ಕೂಡುತ್ತೇನೆ. ಮುಚ್ಚಿದ ಕಣ್ರೆಪ್ಪೆಗಳ ಒಳಗಿನ ಸ್ವಪ್ನಲೋಕದಲ್ಲಿ ಸಾವಿರ ಸಾವಿರ ಕನಸುಗಳ ಕಲಸುಮೇಲೋಗರ. ನಿತ್ಯನೂತನ ಚಿತ್ರಚಿತ್ತಾರ. ಅವನ್ನೇ ಧೇನಿಸುತ್ತ ಕೂತಾಗ, ಮನಸ್ಸು ಪಿಸುಗುಡುತ್ತದೆ:

ಜಗತ್ತಿನ ಸಮೃದ್ಧ ಭಾಷೆ- ಮೌನ.

ನಾನು ಮೌನವಾಗಿ ಮುಗುಳ್ನಗುತ್ತೇನೆ.

- ಚಾಮರಾಜ ಸವಡಿ

ಕಥೆಯು ಮುಗಿದೇ ಹೋದರೂ, ಮುಗಿಯದಿರಲಿ ಬಂಧನ...

30 Dec 2009

4 ಪ್ರತಿಕ್ರಿಯೆ

ಪರೀಕ್ಷೆ ಮುಗಿಯಲು ಇನ್ನು ಅರ್ಧ ಗಂಟೆ ಮಾತ್ರ ಬಾಕಿ ಇತ್ತು. ಬರೆದ ಉತ್ತರಗಳನ್ನು ಒಮ್ಮೆ ಪರೀಕ್ಷಿಸಿ, ಉಳಿದಿದ್ದ ಕೊನೆಯ ಪ್ರಶ್ನೆಗೆ ಬೇಗ ಬೇಗ ಉತ್ತರಿಸಲು ಶುರು ಮಾಡಿದೆ. ಹದಿನೈದು ನಿಮಿಷಗಳಲ್ಲಿ ಆ ಪ್ರಶ್ನೆಯ ಉತ್ತರವೂ ಮುಗಿಯಿತು. ಎಲ್ಲವೂ ಸರಿಯಾಗಿದೆ ಎಂದು ನೋಡಿಕೊಂಡು, ಇನ್ನೂ ಹತ್ತು ನಿಮಿಷಗಳು ಬಾಕಿ ಇರುವಂತೆ, ಉತ್ತರ ಪತ್ರಿಕೆಯನ್ನು ಕೊಠಡಿಯ ಮೇಲ್ವಿಚಾರಕನಿಗೆ ಕೊಟ್ಟು ದಡಬಡಾಯಿಸಿ ಹೊರಗೋಡಿದೆ. ‘ಏ ತಮ್ಮಾ, ಇನ್ನೂ ಹತ್ತು ನಿಮಿಷ ಐತಿ. ಸರಿಯಾಗಿ ಚೆಕ್‌ ಮಾಡು, ಲಾಸ್ಟ್‌ ಪೇಪರ್‌ ಇದು’ ಅಂತ ಆತ ಕೂಗುತ್ತಿದ್ದರೂ, ಹಿಂತಿರುಗಿ ಕೂಡ ನೋಡದೇ ರೂಮಿನ ಕಡೆ ಓಡುನಡಿಗೆಯಲ್ಲಿ ಹೊರಟೆ.

ಸಿದ್ಧವಾಗಿದ್ದ ಬ್ಯಾಗನ್ನು ಎತ್ತಿಕೊಂಡು, ರೂಮು ಪೂರ್ತಿಯಾಗಿ ಖಾಲಿಯಾಗಿರುವುದನ್ನು ಕಣ್ಣಂದಾಜಿನಲ್ಲೇ ಪರೀಕ್ಷಿಸಿ, ಬೀಗ ಹಾಕಿ ಮಾಲೀಕನಿಗೆ ಕೊಟ್ಟು, ರಜೆ ಮುಗಿದ ನಂತರ ಬರುವೆ ಎಂದು ಹೇಳಿದವನೇ ಒಂದು ಕಿಮೀ ದೂರವಿದ್ದ ಬಸ್‌ ಸ್ಟ್ಯಾಂಡ್‌ ಕಡೆ ಹೊರಟೆ. ಆಗ ಗಂಟೆ ಒಂದೂವರೆ.

ಪರೀಕ್ಷೆ ಮುಗಿಸಿಕೊಂಡು ಬಂದ ಮಿತ್ರ, ‘ಏನಂಥ ಅರ್ಜೆಂಟ್‌? ಇವತ್ತೊಂದಿನ ಇದ್ದು ನಾಳೆ ಹೋಗುವಿಯಂತೆ. ಊರಲ್ಲೇನು ಅಂಥ ಕೆಲಸ?’ ಎಂದು ಕೇಳುತ್ತಿದ್ದರೂ ಗಮನಿಸದೇ, ‘ಮಾರಾಯ, ನನ್ನ ಬಸ್‌ ಸ್ಟ್ಯಾಂಡ್‌ ಹತ್ರ ಬಿಡ್ತಿಯಾ?’ ಎಂದೆ. ಅವನ ಸೈಕಲ್‌ ಹಿಂದೆ ಕೂತು ಬಸ್‌ಸ್ಟ್ಯಾಂಡ್‌ ತಲುಪಿದಾಗ, ಗದಗ್‌ಗೆ ಹೊರಟಿದ್ದ ಬಸ್‌ನ ಬಾಗಿಲು ಹಾಕುತ್ತಿದ್ದ ಕಂಡಕ್ಟರ್‌. ಸೈಕಲ್‌ನಿಂದ ನೆಗೆದವನೇ, ಬಸ್‌ ಏರುತ್ತ, ಗೆಳೆಯನಿಗೆ ಕೈ ಬೀಸುತ್ತ, ಬೆವರೊರೆಸಿಕೊಳ್ಳುತ್ತ ಕೂತೆ.

ನರೇಗಲ್‌ನ ನನ್ನ ಪಿಯುಸಿ ಮೊದಲ ವರ್ಷದ ಪರೀಕ್ಷೆಯ ಕೊನೆಯ ಪೇಪರ್‌ ಮುಗಿಸಿ ನಾನಷ್ಟು ತುರ್ತಾಗಿ ಹೊರಟಿದ್ದು ಗದಗ್‌ಗೆ. ಬಸ್‌ಸ್ಟ್ಯಾಂಡ್‌ ಹತ್ತಿರದಲ್ಲೇ ಇರುವ ಕೃಷ್ಣಾ ಟಾಕೀಸನ್ನು ಮೂರು ಗಂಟೆಯೊಳಗೆ ತಲುಪುವುದು ನನ್ನ ಉದ್ದೇಶ. ಏಕೆಂದರೆ, ಮೂರು ಗಂಟೆಗೆ ಮ್ಯಾಟ್ನಿ ಷೋ ಶುರುವಾಗುತ್ತದೆ. ತಪ್ಪಿಸಿಕೊಂಡರೆ, ಒಂದನೇ ಷೋಗೇ ಹೋಗಬೇಕು. ಆಗ ಅಲ್ಲಿಂದ ಐವತ್ತು ಕಿಮೀ ದೂರವಿರುವ ಊರಿಗೆ ಹೋಗಲು ಬಸ್‌ ಸಿಗುವುದಿಲ್ಲ.

ಬಸ್‌ ತುಂಬ ನಿಧಾನವಾಗಿ ಹೋಗುತ್ತಿದೆ ಅನಿಸುತ್ತಿತ್ತು. ನರೇಗಲ್‌ನಿಂದ ಗದಗ್‌ ಕೇವಲ ೩೦ ಕಿಮೀ ದೂರದಲ್ಲಿದ್ದರೂ, ಕೆಟ್ಟ ರಸ್ತೆಯಿಂದಾಗಿ ಒಂದು ಗಂಟೆಯೊಳಗೆ ತಲುಪುವುದು ಸಾಧ್ಯವಿದ್ದಿಲ್ಲ. ಲೆಕ್ಕಾಚಾರದ ಪ್ರಕಾರ, ಬಸ್‌ ಎಲ್ಲಿಯೂ ಕೆಟ್ಟು ನಿಲ್ಲದಿದ್ದರೆ, ೨.೪೫ಕ್ಕೆ ಗದಗ್‌ ತಲುಪುತ್ತದೆ. ಕೃಷ್ಣಾ ಟಾಕೀಸ್‌ ತಲುಪಲು ಐದು ನಿಮಿಷಗಳು ಸಾಕು. ಟಿಕೆಟ್‌ ತಗೊಂಡು ಸೀಟಲ್ಲಿ ಕೂಡುವ ಹೊತ್ತಿಗೆ ಸರಿಯಾಗಿ ಸಿನಿಮಾ ಶುರುವಾಗುತ್ತದೆ ಎಂದು ಮನಸ್ಸು ಪದೆ ಪದೆ ಎಣಿಕೆ ಹಾಕುತ್ತಿತ್ತು.

ಅದೃಷ್ಟವಶಾತ್‌ ಬಸ್‌ ಕೆಟ್ಟು ನಿಲ್ಲಲಿಲ್ಲ. ಗದಗ್‌ ಹತ್ತಿರವಾಗುತ್ತಿದ್ದಂತೆ, ಬಾಗಿಲ ಹತ್ತಿರ ಬಂದು ನಿಂತಿದ್ದೆ. ಬಸ್‌ಸ್ಟ್ಯಾಂಡ್‌ ಪ್ರವೇಶಿಸುತ್ತಿದ್ದಂತೆ, ಬಾಗಿಲು ತೆರೆದು ಹೊರ ನೆಗೆದವ, ಮತ್ತದೇ ಓಡು ನಡಿಗೆಯಲ್ಲಿ ಕೃಷ್ಣಾ ಟಾಕೀಸ್‌ನತ್ತ ಹೊರಟೆ. ಆಗ ಗಂಟೆ ೨.೫೫.

ಟಿಕೆಟ್‌ ಕೌಂಟರ್‌ ಖಾಲಿಯಾಗಿತ್ತು. ಪಕ್ಕದಲ್ಲೇ ‘ಹೌಸ್‌ಫುಲ್‌’ ಬೋರ್ಡ್‌. ಅದನ್ನು ನೋಡುತ್ತಲೇ ಮನಸ್ಸು ಸೂಜಿ ಚುಚ್ಚಿದ ಬಲೂನಿನಂತಾಯ್ತು. ಅಭ್ಯಾಸ ಬಲದಿಂದ, ಆಚೀಚೆ ಕಳ್ಳನೋಟ ಹರಿಸಿದಾಗ, ಸೆಟಲ್‌ಮೆಂಟ್‌ ಪ್ರದೇಶದ ಯುವಕನೊಬ್ಬ ಸಮೀಪಿಸಿದ. ಪಿಸುದನಿಯಲ್ಲಿ, ‘ಎರಡು ಟಿಕೆಟ್ಟಿವೆ’ ಎಂದ. ಎಷ್ಟೆಂದು ಕೇಳಿದವ, ಹತ್ತು ಸೆಕೆಂಡ್‌ಗಳಲ್ಲಿ ಚೌಕಾಸಿ ಮುಗಿಸಿ, ಟಿಕೆಟ್‌ ಕೊಂಡು ಥೇಟರ್‌ ಪ್ರವೇಶಿಸಿದೆ. ನನ್ನ ನಂಬರ್‌ನ ಸೀಟ್‌ನಲ್ಲಿ ಕೂತು ಬೆವರೊರೆಸಿಕೊಳ್ಳುತ್ತಿದ್ದಂತೆ, ಲೈಟುಗಳು ಆರಿದವು.

ಹೃದಯಾಘಾತದಿಂದ ಮೃತರಾದ ಖ್ಯಾತ ನಟ ವಿಷ್ಣುವರ್ಧನ್‌ ಅವರ ‘ಬಂಧನ’ ಸಿನಿಮಾ ನಾನು ನೋಡಿದ್ದು ಹೀಗೆ.


*****

ಬೇಸಿಗೆ ರಜೆಯ ಎರಡು ತಿಂಗಳಿಡೀ ಬಂಧನ ಸಿನಿಮಾದ್ದೇ ಗುಂಗು. ನನಗೊಬ್ಬನಿಗಷ್ಟೇ ಅಲ್ಲ, ನನ್ನ ಓರಗೆಯ ಹುಡುಗರಿಗಷ್ಟೇ ಅಲ್ಲ, ಬಹುತೇಕ ಎಲ್ಲರಿಗೂ ಬಂಧನ ಸಿನಿಮಾ ಹುಚ್ಚು ಹಿಡಿಸಿತ್ತು. ರೇಡಿಯೋದಲ್ಲಿ ದಿನಕ್ಕೆ ಮೂರು ಹೊತ್ತು, ಸರಾಸರಿ ನಲ್ವತ್ತು ನಿಮಿಷ ಬರುತ್ತಿದ್ದ ರೇಡಿಯೋದ ಚಿತ್ರಗೀತೆಗಳಲ್ಲಿ ಆ ಸಿನಿಮಾದ ಎರಡು ಹಾಡುಗಳಂತೂ ಇದ್ದೇ ಇರುತ್ತಿದ್ದವು. ಹಾಡು ಕೇಳುತ್ತ, ಸಿನಿಮಾವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತ ನನ್ನ ಕಾಲೇಜಿನ ದಿನಗಳ ಮೊದಲ ದೀರ್ಘ ರಜೆಯನ್ನು ನಾನು ಹೀಗೆ ಕಳೆದಿದ್ದು ೧೯೮೫ರಲ್ಲಿ.

ಮುಂದೆ ಅದೇ ಸಿನಿಮಾ ೨೩ ಕಿಮೀ ದೂರದ ಕೊಪ್ಪಳಕ್ಕೆ ಬಂದಾಗ, ನನ್ನೂರು ಅಳವಂಡಿ ಹಾಗೂ ಸುತ್ತಲಿನ ಊರುಗಳ ಎಷ್ಟೋ ಜನ ಎತ್ತಿನ ಬಂಡಿ ಕಟ್ಟಿಕೊಂಡು ಹೋಗಿ ನೋಡಿ ಬಂದರು. ಆಗ ತಾನೆ ಕ್ಯಾಸೆಟ್‌ಗಳು ದೊಡ್ಡ ಪ್ರಮಾಣದಲ್ಲಿ ಬರಲಾರಂಭಿಸಿದ್ದವು. ಬಂಧನ ಸಿನಿಮಾದ ಕ್ಯಾಸೆಟ್‌ಗಳನ್ನು ಮಾರಿ ಮಾರಿಯೇ ಎಷ್ಟೋ ಜನ ಉದ್ಧಾರವಾಗಿ ಹೋದರು. ಸಿನಿಮಾವೊಂದು ಜನಮಾನಸವನ್ನು ಆವರಿಸಿಕೊಳ್ಳುತ್ತಿದ್ದ ಪರಿಯನ್ನು ನೆನಪಿಸಿಕೊಂಡರೆ ಈಗಲೂ ಅಚ್ಚರಿಯಾಗುತ್ತದೆ.

ಮುಂದೆ ವಿಷ್ಣುವರ್ಧನ್‌ ಅವರ ಎಷ್ಟೋ ಸಿನಿಮಾಗಳನ್ನು ನೋಡಿದೆ. ನಮ್ಮೂರಿನ ಟೆಂಟ್‌ ಟಾಕೀಸಿಗೆ ಬರುತ್ತಿದ್ದುವೇ ಹಳೆಯ ಸಿನಿಮಾಗಳು. ರಾಜ್‌ಕುಮಾರ್‌ ಹಾಗೂ ವಿಷ್ಣುವರ್ಧನ್‌ ಸಿನಿಮಾ ಬಂದರೆ ಮುಗೀತು, ಎರಡು-ಮೂರು ಬಾರಿ ನೋಡುವುದು ಗ್ಯಾರಂಟಿ. ಮನರಂಜನೆಗೆ ಬೇರೇನೂ ಇಲ್ಲದ ಸಣ್ಣ ಊರಿನಲ್ಲಿ ಈ ಸಿನಿಮಾ ಹಾಗೂ ಚಿತ್ರಗೀತೆಗಳೇ ನಮ್ಮ ಏಕೈಕ ಮನರಂಜನೆಯಾಗಿದ್ದವು.

ನನ್ನ ಯೌವನದ ಮೊದಲ ದಿನಗಳನ್ನು ಆಪ್ತ ನೆನಪಿನಿಂದ ಸಮೃದ್ಧವಾಗಿಸಿದ ಸಿನಿಮಾ ತಾರೆಯರ ಪೈಕಿ ವಿಷ್ಣುವರ್ಧನ್‌ ಹಲವಾರು ಕಾರಣಗಳಿಗಾಗಿ ಪ್ರಮುಖರು. ರಾಜಕುಮಾರ್‌ಗಿಂತ ಈ ವ್ಯಕ್ತಿ ಎಷ್ಟೋ ಭಿನ್ನ ಎಂದು ಯಾವಾಗಲೂ ಅನಿಸುತ್ತಿತ್ತು. ಸಿದ್ಧಮಾದರಿಯಲ್ಲದ ಚಿತ್ರಗಳಿಂದಾಗಿಯೂ ಅವರು ಇಷ್ಟವಾಗುತ್ತಿದ್ದರು. ಆಗ ತಾನೆ ಮೊಳಕೆಯೊಡೆಯುತ್ತಿದ್ದ ರಂಗಿನ ಕನಸುಗಳಿಗೆ ಈ ನಟ ಒದಗಿಸಿದ ವೇದಿಕೆ ಸಮೃದ್ಧವಾದದ್ದು. ಅವನ್ನು ಯಾವತ್ತೂ ಮರೆಯಲಾಗದು.


*****

ಎಂದಿನಂತೆ ರಾತ್ರಿ ತಡವಾಗಿ ಮಲಗಿದ್ದರಿಂದ ಬೆಳಿಗ್ಗೆ ಬೇಗ ಏಳದೇ ಮುಸುಕು ಹಾಕಿಕೊಂಡು ಮಲಗಿದ್ದವನನ್ನು ಎಬ್ಬಿಸಿದ್ದು ಮಿತ್ರ ಮಂಜುನಾಥ ಬಂಡಿ ಅವರ ಎಸ್ಸೆಮ್ಮೆಸ್‌. ವಿಷ್ಣುವರ್ಧನ್‌ ಇನ್ನಿಲ್ಲ ಎಂಬ ಎರಡಕ್ಷರದ ಸಂದೇಶ ಓದಿದ ಕೂಡಲೇ ನಿದ್ದೆ ಹಾರಿಹೋಗಿ, ಇನ್ನೊಂಥರದ ಮಂಕು ಆವರಿಸಿಬಿಟ್ಟಿತು. ಟಿವಿ ಹಾಕಿದರೆ, ಪುಂಖಾನುಪುಂಖವಾಗಿ ವಿವರಗಳು ಬರತೊಡಗಿದವು. ಹೃದಯಾಘಾತದಿಂದ ತಕ್ಷಣ ಸಾವನ್ನಪ್ಪಿದ ವಿಷ್ಣು, ಎಲ್ಲ ಬಂಧನಗಳಿಂದ ಮುಕ್ತರಾಗಿದ್ದರು.

ರಾಜ್‌ ಕುಟುಂಬದ ದಬ್ಬಾಳಿಕೆ ಸಹಿಸಿಯೂ ಈ ಪರಿಯ ಎತ್ತರಕ್ಕೆ ಬೆಳೆದಿದ್ದೊಂದೇ ಅಲ್ಲ, ಇಳಿವಯಸ್ಸಿನಲ್ಲಿಯೂ ಸೊಗಸಾಗಿ ನಟಿಸುತ್ತಿದ್ದುದು ವಿಷ್ಣು ಸಾಧನೆ. ಎಲ್ಲಿಯೂ ಬಾಯ್ಬಿಡದಂತೆ ಸಹ ಕಲಾವಿದರಿಗೆ ನೆರವಾಗುತ್ತಿದ್ದುದು ಅಪರೂಪದ ಹೃದಯವಂತಿಕೆ. ವಿವಾದಗಳಿಂದ ದೂರ ನಿಲ್ಲುತ್ತಿದ್ದ ವಿನಯ, ತಮಗೆ ಕಿರುಕುಳ ನೀಡಿದವರ ಬಗ್ಗೆ ಎಲ್ಲಿಯೂ ಪ್ರಸ್ತಾಪ ಮಾಡದ ಸಜ್ಜನಿಕೆ, ಬೇಸರವಾದರೆ ಮೌನವಾಗಿ ತಮ್ಮ ಪಾಡಿಗೆ ತಾವಿರುತ್ತಿದ್ದ ನಿರ್ಲಿಪ್ತತೆ- ಇವೆಲ್ಲ ಕಾರಣಗಳಿಗೂ ವಿಷ್ಣು ಇಷ್ಟವಾಗುತ್ತಾರೆ.

ಈಗ ಅವೆಲ್ಲ ಬರೀ ನೆನಪು ಮಾತ್ರ. ಸಿನಿಮಾ ಮುಗಿದಿದೆ. ಥೇಟರ್‌ ಖಾಲಿಯಾಗಿದೆ. ಉಳಿದಿದ್ದು ಸವಿ ಸವಿ ನೆನಪುಗಳು ಮಾತ್ರ. ಆದರೆ, ಈ ದುಃಖದ ಸಂದರ್ಭದಲ್ಲಿ, ಆ ನೆನಪುಗಳೂ ವಿಷಾದ ಒಸರಿಸತೊಡಗಿವೆ. ‘ಕಥೆಯು ಮುಗಿದೇ ಹೋದರೂ, ಮುಗಿಯದಿರಲಿ ಬಂಧನ...’ ಅಂತ ಮನಸ್ಸು ಒರಲತೊಡಗಿದೆ.

- ಚಾಮರಾಜ ಸವಡಿ

ಸುನೀತ ನೆನಪುಗಳಲ್ಲಿ ಅಶ್ವಥ್‌ ಜೀವಂತ

29 Dec 2009

0 ಪ್ರತಿಕ್ರಿಯೆ

ಹಾಡಿನ ಮೋಡಿಯಲ್ಲಿ ನಾಡನ್ನೆಲ್ಲ ಸಿಲುಕಿಸಿದ್ದ ಸುಗಮ ಸಂಗೀತದ ದಿಗ್ಗಜ ಸಿ. ಅಶ್ವಥ್‌ ಮೃತರಾಗಿದ್ದಾರೆಯೆ?

ಮಾಧ್ಯಮ ವಲಯದಲ್ಲಿ ಇಂಥದೊಂದು ಸುದ್ದಿ ಇವತ್ತು ತೀವ್ರವಾಗಿ ಕೇಳಿಬರತೊಡಗಿದೆ. ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಅಶ್ವಥ್‌ ಅವರನ್ನು ಬೆಂಗಳೂರಿನ ಯಶವಂತಪುರದ ಕೊಲಂಬಿಯಾ ಏಷ್ಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಪಿತ್ತಜನಕಾಂಗ ಹಾಗೂ ಮೂತ್ರಜನಕಾಂಗದ ಸಮಸ್ಯೆಯಿಂದ ಅವರು ತೀವ್ರವಾಗಿ ಬಳಲುತ್ತಿದ್ದರು. ಮೂರು ದಿನಗಳ ಹಿಂದೆಯೇ ಅವರ ಮೆದುಳು ಕೆಲಸ ಮಾಡುವುದನ್ನು ನಿಲ್ಲಿಸಿತ್ತು ಎಂಬ ವದಂತಿ ಇದೆ. 

ಆದರೆ, ಮಂಗಳವಾರ ಅವರ ೭೦ನೇ ಜನ್ಮದಿನದ ಕಾರ್ಯಕ್ರಮ ದೊಡ್ಡ ಪ್ರಮಾಣದಲ್ಲಿ ಏರ್ಪಾಟಾಗಿರುವುದರಿಂದ, ಕೊಮಾದಲ್ಲಿದ್ದ ಗಾಯಕನ ದೇಹಸ್ಥಿತಿಯ ಬಗ್ಗೆ ಮಾಹಿತಿ ನೀಡುವುದು ಬೇಡ ಎಂದು ಸಂಬಂಧಿಸಿದವರು ನಿರ್ಧರಿಸಿದ್ದಾಗಿ ಕೇಳಿಬರುತ್ತಿದೆ. ಈ ಕುರಿತು ಮಾಧ್ಯಮ ಮಿತ್ರರಲ್ಲೇ ತೀವ್ರ ಭಿನ್ನಾಭಿಪ್ರಾಯವೂ ಇದೆ. ಹಲವಾರು ಪತ್ರಿಕೆ ಹಾಗೂ ದೃಶ್ಯಮಾಧ್ಯಮದ ಹಿರಿಯರು, ಈ ಸುದ್ದಿಯನ್ನು ಅಧಿಕೃತ ಪ್ರಕಟಣೆ ಬರುವವರೆಗೆ ಪ್ರಸಾರ ಮಾಡುವುದು ಬೇಡ ಎಂದು ತೀರ್ಮಾನಿಸಿದ್ದಾಗಿಯೂ ಹೇಳಲಾಗಿದೆ.

ಈ ಎಲ್ಲ ವದಂತಿಗಳು ಸುಳ್ಳಾಗಲಿ. ಅಶ್ವಥ್‌ ಮತ್ತೆ ’ರೇ ರೇ ರೇ ರಾ...’ ಎಂದು ಹಾಡುತ್ತ ಆಸ್ಪತ್ರೆಯಿಂದ ಎದ್ದು ಬರಲಿ ಅಂತ ಹಾರೈಸುವೆ.

- ಚಾಮರಾಜ ಸವಡಿ
(ಚಿತ್ರ ಕೃಪೆ: http://www.kamat.org)

ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು

17 Dec 2009

3 ಪ್ರತಿಕ್ರಿಯೆ
ಒಮ್ಮೊಮ್ಮೆ ನೆನಪಿಸಿಕೊಂಡರೆ ಅಚ್ಚರಿಯಾಗುತ್ತದೆ: ನಾವೆಲ್ಲ ಎಂತೆಂಥ ಅನಾಹುತಕಾರಿ ಘಟ್ಟಗಳನ್ನು ದಾಟಿ ಬಂದಿರುತ್ತೇವಲ್ವೆ?

ಬಾಲ್ಯದಲ್ಲಿ ಚಿತ್ರವಿಚಿತ್ರ ಆಸೆಗಳಿರುತ್ತವೆ. ಅವತ್ತಿನ ಮಟ್ಟಿಗೆ ಅವೇ ದೊಡ್ಡವು. ಬಲು ಪಸಂದಾಗಿರುವಂಥವು. ಚಿಕ್ಕವನಿದ್ದಾಗ, ನಮ್ಮೂರಿನ ಹಿಟ್ಟಿನ ಗಿರಣಿಗೆ ನಿಯಮಿತವಾಗಿ ಹೋಗುತ್ತಿದ್ದೆ, ಜೋಳ ಬೀಸಿಕೊಂಡು ಬರಲು. ಅದೇ ಮುಖ್ಯ ಆಹಾರ ನಮಗೆ. ತೀರಾ ಕುಳ್ಳನಾಗಿದ್ದ ನನಗೆ, ಎತ್ತರದಲ್ಲಿದ್ದ ಹಿಟ್ಟು ಬೀಸುವ ಯಂತ್ರದ ಬಾಯಿಗೆ ಜೋಳದ ಬುಟ್ಟಿ ಎತ್ತಿ ಸುರುವಲು ಆಗುತ್ತಿರಲಿಲ್ಲ. ಗಿರಣಿಯ ಕೆಲಸಗಾರ, ನನ್ನ ತಲೆ ಮೇಲಿನ ಬುಟ್ಟಿ ಎತ್ತಿ, ಜೋಳ ಸುರುವಿ ಬುಟ್ಟಿಯನ್ನು ವಾಪಸ್‌ ಕೊಡುತ್ತಿದ್ದ. ಆಗ ಕೆಲ ಗಾಲಿಗಳನ್ನು ತಿರುವಿದ ಕೂಡಲೇ ಯಂತ್ರದ ಸದ್ದು ಬದಲಾಗಿ, ಇದ್ದಕ್ಕಿದ್ದಂತೆ ಹಿಟ್ಟು ಬುಟ್ಟಿಯಲ್ಲಿ ಬೀಳಲು ಶುರುವಾಗುತ್ತಿತ್ತು.

ನನಗೆ ಅದು ಬಹಳ ಕೌತುಕದ ಸಂಗತಿಯಾಗಿತ್ತು. ಯಂತ್ರದ ಬಾಯಿಂದ ಜೋಳ ಅದರ ಹೊಟ್ಟೆಗೆ ಹೇಗೆ ಹೋಗುತ್ತದೆ ಎಂಬುದನ್ನು ನೋಡುವ ಆಸೆ ನನ್ನದು. ಆದರೆ, ಗಿರಣಿಯವ ನನ್ನನ್ನು ಬಿಡುತ್ತಿರಲಿಲ್ಲ. ಅಲ್ಲದೇ, ಜೋಳ ಮುಗಿಯುತ್ತ ಬಂತು ಎಂಬುದು ಅವನಿಗೆ ಹೇಗೆ ಗೊತ್ತಾಗುತ್ತದೆ ಎಂಬುದನ್ನು ತಿಳಿಯುವ ಕುತೂಹಲವೂ ಸಾಕಷ್ಟಿತ್ತು. ಎಷ್ಟೇ ಪ್ರಯತ್ನಿಸಿದರೂ, ಆತ ಹೇಳುತ್ತಿರಲಿಲ್ಲ. ’ಅದಕ್ಕೆಲ್ಲ ತಲೆ ಬೇಕಾಗುತ್ತದೆ’ ಎಂದು ತನ್ನ ತಲೆ ಮುಟ್ಟಿ ನಗುತ್ತಿದ್ದ.

ಆಗ ನನ್ನ ದೊಡ್ಡ ಕನಸೆಂದರೆ, ಗಿರಣಿಯಲ್ಲಿ ಹಿಟ್ಟು ಬೀಸುವ ಕೆಲಸ ಮಾಡಬೇಕೆಂಬುದು. ದೊಡ್ಡವನಾದಾಗ, ಹಿಟ್ಟು ಬೀಸುವ ಕೆಲಸ ಮಾಡಬೇಕು. ಆಗ, ನನ್ನಂಥ ಚಿಕ್ಕಮಕ್ಕಳಿಗೆ ಗಿರಣಿ ಕೆಲಸ ಮಾಡುವುದನ್ನು ತೋರಿಸಿ ಅವರ ಅಚ್ಚರಿ ಗಮನಿಸಬೇಕೆಂಬ ವಿಚಿತ್ರ ಆಸೆ ಹುಟ್ಟಿತ್ತು. ನಾನು ಹೈಸ್ಕೂಲು ಮುಗಿಸುವವರೆಗೂ ಈ ಆಸೆ ಇತ್ತೆಂಬುದನ್ನು ಇವತ್ತು ನೆನೆದರೆ ನಗು ಬರುತ್ತದೆ.

ಮುಂದೆ ಇಂಥ ಹಲವಾರು ಆಸೆಗಳು ಹುಟ್ಟಿಕೊಂಡವು. ನಮ್ಮೂರಿನಲ್ಲಿದ್ದ ಟೆಂಟ್‌ ಸಿನಿಮಾ ಥೇಟರ್‌ನ ಗೇಟ್‌ಕೀಪರ್‌ ಆಗಬೇಕೆಂಬುದು ಅಂಥ ಕನಸುಗಳಲ್ಲಿ ಒಂದು. ಆಗ ದಿನಾ ಸಿನಿಮಾ ನೋಡಬಹುದು. ಅದಕ್ಕಾಗಿ ಕಾಸು ಕೊಡಬೇಕಿಲ್ಲ. ಅಷ್ಟೇ ಅಲ್ಲ, ಸಿನಿಮಾ ಯಾವಾಗ ಬದಲಾಗುತ್ತದೆ, ಹೊಸ ಸಿನಿಮಾ ಯಾವುದೆಂಬುದು ತಕ್ಷಣ ಗೊತ್ತಾಗುತ್ತದೆ ಎಂಬ ರೋಮಾಂಚನ. ಗೇಟ್‌ಕೀಪರ್‌ಗಳು ನನಗೆ ಗಂಧರ್ವ ಲೋಕದ ದ್ವಾರಪಾಲಕರಂತೆ ಕಾಣುತ್ತಿದ್ದರು. ಅವರೊಂದಿಗೆ ಗೆಳೆತನ ಬೆಳೆಸಿಕೊಳ್ಳಬೇಕೆಂದು ಎಷ್ಟೋ ಸಾರಿ ಆಸೆ ಪಟ್ಟಿದ್ದೆ. ಆದರೆ, ನನ್ನಂಥ ಚಿಕ್ಕಹುಡುಗರೊಂದಿಗೆ ಅವರು ಯಾವತ್ತೂ ಸಲಿಗೆಯಿಂದ ಇರುತ್ತಿರಲಿಲ್ಲ ಎಂಬುದೇ ಆಗ ನನಗೆ ವಿಷಾದದ ಹಾಗೂ ದಿನಗಟ್ಟಲೇ ಕಾಡಿದ ಚಿಂತೆಯ ವಿಷಯವಾಗಿತ್ತು.

ಒಂದೊಂದು ಕಾಲಘಟ್ಟದಲ್ಲೂ ನನ್ನ ಆಸೆಯ ರೀತಿಗಳು ಬದಲಾಗುತ್ತ ಹೋಗಿವೆ. ಕಾಲೇಜು ಪ್ರವೇಶಿಸಿದಾಗ, ಇಡೀ ತರಗತಿಯಲ್ಲಷ್ಟೇ ಏಕೆ, ಇಡೀ ಕಾಲೇಜಿನಲ್ಲಿ ನಾನೊಬ್ಬನೇ ಕುಳ್ಳ ವಿದ್ಯಾರ್ಥಿಯಾಗಿದ್ದೆ. ನನ್ನ ಸಹಪಾಠಿ ಹುಡುಗಿಯರೆಲ್ಲ ನನಗಿಂತ ಸಾಕಷ್ಟು ಎತ್ತರವಿದ್ದವರೇ. ಅವರು ಯಾವತ್ತೂ ನನ್ನನ್ನು ಸಹಪಾಠಿಯಂತೆ ಕಾಣಲಿಲ್ಲ. ತಮ್ಮ ಓಣಿಯ ಯಾರದೋ ಮನೆಯ ಪುಟ್ಟ ಹುಡುಗನಂತೆ ನನ್ನೊಂದಿಗೆ ವರ್ತಿಸುತ್ತಿದ್ದರು. ಆಗೆಲ್ಲ ಸಾಕಷ್ಟು ಸಿಟ್ಟು ಬರುತ್ತಿತ್ತು. ನಾನೂ ಎತ್ತರ ಬೆಳೆಯಬೇಕು ಎಂದು ಪದೆ ಪದೆ ಕನಸು ಕಾಣುತ್ತಿದ್ದೆ. ಬೆಳ್ಳಂಬೆಳಿಗ್ಗೆ ಎದ್ದು, ಕಾಲೇಜು ಮೈದಾನ ಹಾಗೂ ಸುತ್ತಮುತ್ತಲಿನ ಮರಗಿಡಗಳ ಕೈಗೆಟಕುವ ಕೊಂಬೆಗಳಿಗೆ ಜೋತು ಬೀಳುತ್ತಿದ್ದೆ. ಹಾಗೆ ಜೋತುಬೀಳುತ್ತಿದ್ದರೆ ಎತ್ತರವಾಗುತ್ತಾರೆ ಎಂದು ನನ್ನ ಗೆಳೆಯರು ಹೇಳಿದ್ದನ್ನು ನಂಬಿದ್ದೆ. ಅದರಿಂದ ಎತ್ತರವೇನೂ ಹೆಚ್ಚಾಗಲಿಲ್ಲ. ಆದರೆ, ಆರೋಗ್ಯಪ್ರಜ್ಞೆ ಚೆನ್ನಾಗಿ ಬೆಳೆಯಿತು. ಮುಂದೆ ನಾನು ಯೋಗಾಸನ ಕಲಿಯಲು ಈ ಪ್ರಯತ್ನ ತುಂಬ ನೆರವಾಯ್ತು.

ಯೋಗಾಸನ ಕಲಿತಿದ್ದು, ಹಿಪ್ನಾಟಿಸಂ ಕಲಿತಿದ್ದು, ಮುಂದೆ ಏರ್‌ಫೋರ್ಸ್‌ ಸೇರಲು ಬಾಲ್ಯ ಮತ್ತು ಕಾಲೇಜಿನ ದಿನಗಳ ಕನಸುಗಳ ಇಂಥ ಪ್ರೇರಣೆಗಳು ಅಪಾರ. ನಿತ್ಯದ ಊಟಕ್ಕೆ ಪರದಾಡಬೇಕಿದ್ದ ಕಾಲೇಜಿನ ದಿನಗಳು ನನ್ನಲ್ಲಿ ಅದೆಷ್ಟು ಅಸಹನೆ ಮೂಡಿಸಿದ್ದವೆಂದರೆ, ಮೊದಲ ಅವಕಾಶಕ್ಕೆ ಏರ್‌ಮನ್‌ ಕೆಲಸ ಸಿಕ್ಕಾಗ, ಎರಡನೇ ವಿಚಾರ ಕೂಡ ಮಾಡದೇ ಮಿಲಿಟರಿ ಸೇರಿಕೊಂಡಿದ್ದೆ. ಆದರೆ, ದುರದೃಷ್ಟ ಅಲ್ಲಿಯೂ ಒಕ್ಕರಿಸಿತ್ತು. ಇಡೀ ತಂಡದಲ್ಲಿ ನಾನೊಬ್ಬನೇ ಕುಳ್ಳ. ದೈಹಿಕ ಪರೀಕ್ಷೆಯಲ್ಲಿ ನನ್ನ ಎತ್ತರವನ್ನು ಮೂರು ಸಲ ಪರೀಕ್ಷಿಸಿದ್ದಾಯ್ತು. ಕೊನೆಗೂ ಕನಿಷ್ಟ ಮಟ್ಟಕ್ಕಿಂತ ಕೇವಲ ಎರಡು ಸೆಂ.ಮೀ. ಎತ್ತರವಿದ್ದುದನ್ನು ದೃಢಪಡಿಸಿಕೊಂಡ ನಂತರವೇ ನನ್ನ ನೇಮಕಾತಿ ಖಚಿತವಾಯ್ತು.

ಸಾಕಷ್ಟು ಎತ್ತರ ಬೆಳೆಯಲಿಲ್ಲ ಎಂಬ ಕೀಳರಿಮೆ ನನ್ನನ್ನು ಕಾಲು ಶತಮಾನ ಕಾಡಿದೆ. ಅದೇ ರೀತಿ ಒಂಚೂರು ದಪ್ಪವಾಗಬೇಕೆಂಬ ಬಯಕೆ ದಶಕಗಳ ಕಾಲ ಜೊತೆಗಿತ್ತು. ತಂತ್ರಜ್ಞಾನ ಕಲಿಯಬೇಕೆಂಬ ಹಂಬಲ, ಇಂಗ್ಲಿಷ್‌ ಓದಿ ಅರ್ಥ ಮಾಡಿಕೊಳ್ಳಬೇಕೆಂಬ ಆಸೆ ಹುಟ್ಟಿದ್ದೇ ಹೀಗೆ. ನಾನು ಪತ್ರಿಕೋದ್ಯಮ ಪ್ರವೇಶಿಸಿದ್ದೂ ಇಂಥದೇ ಒಂದು ಬೆಂಬಿಡದ ಬಯಕೆಯಿಂದಾಗಿ.

ಬರೆಯುತ್ತ ಹೋದರೆ, ಒಂದೊಂದು ಪ್ರಯೋಗದ ಬಗ್ಗೆಯೇ ಪುಟಗಟ್ಟಲೇ ಬರೆಯಬಹುದು. ಮುಂದೆಂದಾದರೂ ಅದನ್ನು ಬರೆದೇನು. ಮುಂದೆಂದೋ ನಕ್ಕುಬಿಡಬಹುದಾದಂಥ ಆಸೆಗಳು ಪ್ರತಿಯೊಬ್ಬ ವ್ಯಕ್ತಿಯನ್ನು ಹೀಗೇ ಕಾಡಿರಬಹುದು ಅಂತ ಅನಿಸುತ್ತದೆ. ಅವತ್ತಿನ ನನ್ನನ್ನು ಇವತ್ತಿನ ದಿನಕ್ಕೆ ಹೋಲಿಸಿದಾಗ, ಇತರರಿಗಿರಲಿ, ನನಗೇ ಸಾಕಷ್ಟು ಅಚ್ಚರಿ ಉಂಟಾಗುತ್ತದೆ. ಎಷ್ಟೊಂದು ದೂರವನ್ನು ಕ್ರಮಿಸಿ ಬಂದೆನೆಲ್ಲ ಎಂದು ಒಮ್ಮೊಮ್ಮೆ ದಿಗಿಲೂ ಆಗುತ್ತದೆ.

ಒಂದೇ ಎರಡೇ, ಇಂಥ ನೂರಾರು ಪ್ರಯೋಗಗಳನ್ನು ಮಾಡಿದ್ದೇನೆ. ಸಾಕಷ್ಟು ಸಾರಿ ದುಬಾರಿ ಬೆಲೆಯನ್ನೂ ಕೊಟ್ಟಿದ್ದೇನೆ. ವರ್ಷಕ್ಕೊಂದರಂತೆ ನೌಕರಿಗಳನ್ನು ಬದಲಿಸಿದ್ದೇನೆ. ಮನೆಗಳನ್ನು ಬದಲಿಸಿದ್ದೇನೆ. ಎಲ್ಲವೂ ಬದಲಾಯ್ತು ಎಂದು ಅನಿಸಿ, ಒಬ್ಬನೇ ಕೂತು ಯೋಚಿಸಿ ನೋಡಿದಾಗ, ನಾನು ಏನೇನೂ ಬದಲಾಗಿಲ್ಲ ಎಂದು ಮತ್ತೆ ಮತ್ತೆ ಅನ್ನಿಸಿದೆ.

ಏಕೆಂದರೆ, ಮಾಡಿದ ತಪ್ಪುಗಳು ಪ್ರಯೋಗನಿರತನಾದಾಗ ಆಗಿದ್ದೇ ಹೊರತು ಉದ್ದೇಶಪೂರ್ವಕವಲ್ಲ. ಮಾಡಿದ ಪ್ರತಿಯೊಂದು ತಪ್ಪಿನಿಂದಲೂ ಪಾಠ ಕಲಿತಿದ್ದೇನೆ. ಕಲಿಯಲು ಯತ್ನಿಸುತ್ತಿದ್ದೇನೆ. ಇವತ್ತು ಏನಾದರೂ ಒಂಚೂರು ವಿವೇಚನೆ, ಅನುಭವ, ಜೀವನಪ್ರೀತಿ ನನ್ನಲ್ಲಿ ಕಂಡು ಬಂದರೆ, ಅವತ್ತಿನ ’ಸಿಲ್ಲಿ’ ಕನಸುಗಳೇ ಅದಕ್ಕೆ ಕಾರಣ ಅಂತ ಮಾತ್ರ ಹೇಳಬಲ್ಲೆ.

ಹೀಗಾಗಿ, ಹೊಸ ತಪ್ಪುಗಳನ್ನು ಮಾಡಲು ಇಷ್ಟಪಡುತ್ತೇನೆ ಮತ್ತು ಅವನ್ನು ಎಂದಿನ ಉತ್ಸಾಹದಿಂದ ಮಾಡುತ್ತಲೇ ಇದ್ದೇನೆ.

- ಚಾಮರಾಜ ಸವಡಿ