ಗುರುವಾದ ಮಗಳಿಗೆ ಈಗ ಹತ್ತು ವರ್ಷ
20 Apr 2012
ಅವರ ಗುಂಪಿನಿಂದ ದೂರ, ಮನೆ ಎದುರಿಗೆ ಹಾಸಿದ ಪುಟ್ಟ ಕಟ್ಟೆಯಂತಿರುವ ಜಾಗದಲ್ಲಿ ಆಯಾ ಮನೆಗಳ ತಾಯಂದಿರು, ಅಜ್ಜಿಯರು ಕೂತಿದ್ದಾರೆ. ಅವರ ಮಧ್ಯೆ ಮಗುವೊಂದು ಕೂತಿದೆ. ಅದಕ್ಕೆ ಆಡುವ ಮಕ್ಕಳ ಕೇಕೆಯ ಕಡೆ ಗಮನವಿಲ್ಲ. ಅದರ ಲೋಕವೇ ಬೇರೆ.
ಆಕೆ ಗೌರಿ.
ಹತ್ತು ವರ್ಷಗಳ ಹಿಂದೆ, ಇದೇ ದಿನ (ಏಪ್ರಿಲ್ ೧೯) ಗೌರಿ ಜನಿಸಿದಾಗ ನಾನು ಕೊಪ್ಪಳದಲ್ಲಿದ್ದೆ. ಬದುಕು ಕಟ್ಟಿಕೊಳ್ಳುವ ಹೆಣಗಾಟದ ದಿನಗಳವು. ಅನಿವಾರ್ಯವಾಗಿ ಶುರು ಮಾಡಿದ್ದ ವಾರಪತ್ರಿಕೆಯೊಂದಕ್ಕೆ ಬರೆಯುತ್ತ ಕೂತವನನ್ನು ಫೋನ್ ಮಾಡಿ ಕರೆಸಿದ್ದರು ಮಾವ. ನೀವು ಬಿಜಿ ಇರ್ತೀರಂತ ಹೇಳಿರಲಿಲ್ಲ. ರೇಖಾಳನ್ನು ನಿನ್ನೆ ರಾತ್ರಿಯೇ ಆಸ್ಪತ್ರೆಗೆ ಸೇರಿಸಿದ್ವಿ. ಬೇಗ ಬನ್ನಿ ಎಂದಿದ್ದರು.
ರಾತ್ರಿಯಿಡೀ ನಿದ್ದೆಗೆಟ್ಟವನು ಹಾಗೇ ಪೆನ್ನು ಮುಚ್ಚಿಟ್ಟು ಅವಸರದಲ್ಲಿ ಆಸ್ಪತ್ರೆಗೆ ಬಂದಿದ್ದೆ. ನನ್ನನ್ನೇ ಕಾಯುತ್ತಿದ್ದ ಡಾಕ್ಟರ್, ಸಿಸೇರಿಯನ್ ಆಗ್ಬೇಕು, ನೀವಿಲ್ಲಿ ಸೈನ್ ಮಾಡಿ ಎಂದು ಮುಂದೆ ಹಿಡಿದ ಹಾಳೆಯಲ್ಲಿ ಸಹಿ ಮಾಡಿ ಅರ್ಧ ಗಂಟೆ ಸುಮ್ಮನೇ ಕೂತಿದ್ದೆ. ವರ್ಷದ ಹಿಂದೆ ಡಿಗ್ರಿ ಕೊನೆಯ ವರ್ಷದ ಪರೀಕ್ಷೆ ಬರೆದು, ರಜೆಯಲ್ಲಿ ಮದುವೆಯಾಗಿದ್ದ ರೇಖಾ ಒಳಗೆ ಲೇಬರ್ ರೂಮಿನಲ್ಲಿ ತಾಯಾಗಲಿದ್ದಳು.
ಏನಿದ್ದವು ನನ್ನ ಭಾವನೆಗಳಾಗ?
ಇದ್ದ ಇಬ್ಬರೇ ಬಲು ಸಾಧಾರಣ ಜೀವನ ಸಾಗಿಸಲೂ ಕಷ್ಟಪಡಬೇಕಿತ್ತು. ಈಗ ನಮ್ಮ ಮಧ್ಯೆ ಇನ್ನೊಂದು ಜೀವ ಬರಲಿದೆ. ಅದಕ್ಕಾಗಿ ಹರ್ಷ ಪಡಬೇಕೋ, ಚಿಂತೆ ಮಾಡಬೇಕೋ ಎಂಬ ಗೊಂದಲ.
ಸುಮ್ಮನೇ ಕೂತವನೆದುರು ಬಂದು ನರ್ಸ್ ಹೇಳಿದ್ದಳು: ಹೆಣ್ಣುಮಗು!
ಗೌರಿ ಹುಟ್ಟಿದ್ದು ಹಾಗೆ.
*****
ಬಲು ಕೆಂಪಗಿತ್ತು ಮಗು. ಆಕೆಯನ್ನು ಮೊದಲ ಬಾರಿ ನೋಡಿದಾಗಿನ ಕ್ಷಣಗಳು ಇವತ್ತಿಗೂ ನೆನಪಿನಲ್ಲಿ ಹಚ್ಚಹಸಿರು. ಹೆರಿಗೆ ನೋವು, ಸಿಸೇರಿಯನ್ ರಗಳೆಯಲ್ಲಿ ಬಾಡಿದಂತಿದ್ದ ರೇಖಾಳ ಮೊಗದಲ್ಲಿ ಬೆಳದಿಂಗಳು. ಪಕ್ಕದಲ್ಲೇ ಮಲಗಿತ್ತು ಪುಟ್ಟ ಗೌರಿ- ಕೆಂಪಗೆ, ದಪ್ಪಗೆ, ಮುಷ್ಠಿ ಬಿಗಿದುಕೊಂಡು.
ಆ ಕ್ಷಣದಲ್ಲಿ, ಈಕೆ ಮುಂದೆ ನನಗೆ ಗುರುವಾಗುತ್ತಾಳೆಂದು ಖಂಡಿತ ಅಂದುಕೊಂಡಿರಲಿಲ್ಲ.
*****
ಮೂರು ತಿಂಗಳಾದರೂ ಗೌರಿಯ ಕತ್ತು ಸ್ಥಿರವಾಗಲಿಲ್ಲ. ದೃಷ್ಟಿ ಎತ್ತಲೋ. ಮಗು ಗೆಲುವಾಗಿತ್ತು. ಊಟ, ನಿದ್ದೆ, ತನ್ನ ಪಾಡಿಗೆ ತಾನು ಆಟವಾಡುವುದು ಎಲ್ಲಾ ಇದ್ದರೂ, ಸುತ್ತಲಿನ ಜಗತ್ತಿನೊಂದಿಗೆ ಸಂಬಂಧ ಇಲ್ಲದಂತಿತ್ತು. ತೊಟ್ಟಿಲ ಮೇಲೆ ಬಾಗಿ, ಲಟಿಕೆ ಹೊಡೆದು, ಗಿಲಿಗಿಲಿ ಆಡಿಸಿದರೂ ನಮ್ಮತ್ತ ದೃಷ್ಟಿ ಕೊಟ್ಟು ನೋಡುತ್ತಿರಲಿಲ್ಲ. ಶಬ್ದಕ್ಕೆ ಮುಖವರಳಿಸುತ್ತಿದ್ದುದನ್ನು ಬಿಟ್ಟರೆ, ಬಾಹ್ಯ ಜಗತ್ತಿಗೆ ಪ್ರತಿಕ್ರಿಯಿಸುತ್ತಿರಲಿಲ್ಲ.
‘ಕೆಲ ಮಕ್ಕಳು ಹಾಗೇ. ಅದರಲ್ಲೂ ಮೊದಲ ಮಗು ಕೊಂಚ ನಿಧಾನ’ ಅಂದರು ಹಿರಿಯರು.
ಆರು ತಿಂಗಳುಗಳಾದವು. ಕತ್ತು ಕೊಂಚ ಸ್ಥಿರವಾಗಿದ್ದರೂ, ಉಳಿದೆಲ್ಲ ವಿಷಯಗಳಲ್ಲಿ ಅದಿನ್ನೂ ಹಸುಗೂಸೇ.
‘ಕೆಲ ಮಕ್ಕಳು ಹಾಗೇ. ನಿಧಾನವಾಗಿ ಪ್ರತಿಕ್ರಿಯಿಸುತ್ತವೆ’ ಅಂದರು ಕೊಪ್ಪಳದ ಮಕ್ಕಳ ಡಾಕ್ಟರು.
ಎಂಟು ತಿಂಗಳಾದರೂ ಗೌರಿ ಅದೇ ಸ್ಥಿತಿಯಲ್ಲಿ ಉಳಿದಾಗ ಪಕ್ಕದ ಹೊಸಪೇಟೆಗೆ ಹೋಗಿ ಬೇರೊಬ್ಬ ಮಕ್ಕಳ ತಜ್ಞರಿಗೆ ತೋರಿಸಿದೆವು. ಕೆಲ ಪರೀಕ್ಷೆಗಳನ್ನು ಮಾಡಿ, ಗೌರಿಯ ತಲೆಯ ಗಾತ್ರವನ್ನು ಟೇಪ್‌ನಲ್ಲಿ ಅಳೆದ ಆ ವೈದ್ಯರು ಹೇಳಿದರು:
ಈಕೆಯ ಮೆದುಳಿನ ಬೆಳವಣಿಗೆ ಸಹಜವಾಗಿಲ್ಲ. ಬುದ್ಧಿಮಾಂದ್ಯತೆಯ ಲಕ್ಷಣಗಳು ಕಾಣಿಸ್ತಿವೆ. ನೀವೊಮ್ಮೆ ಸ್ಕ್ಯಾನ್ ಮಾಡಿಸೋದು ಉತ್ತಮ. ಹುಬ್ಬಳ್ಳಿ ಅಥವಾ ಬೆಂಗಳೂರಿಗೆ ಹೋಗಿ ಎಂದರು.
ಮಗುವನ್ನು ಕರೆದುಕೊಂಡು ಹತ್ತಿರದ ಒಣಗಿದ ಪಾರ್ಕ್‌ನಲ್ಲಿ ಮೌನವಾಗಿ ಕೂತೆವು. ರೇಖಾ ನಿರಂತರವಾಗಿ ಅಳುತ್ತಿದ್ದರೆ, ನಾನು ಒಳಗೊಳಗೇ ಅಳುತ್ತ ಮಂಕಾಗಿ ಕೂತಿದ್ದೆ. ಗೌರಿಯೊಬ್ಬಳೇ ತನ್ನ ಪಾಡಿಗೆ ತಾನು ನಗುತ್ತಿದ್ದಿದ್ದು.
*****
ಧಾರವಾಡದ ಮಕ್ಕಳ ವೈದ್ಯರು ಆಕೆಯ ಮೆದುಳಿನ ಬೆಳವಣಿಗೆ ಅಸಮರ್ಪಕವಾಗಿದ್ದನ್ನು ಸ್ಕ್ಯಾನಿಂಗ್ ಮಾಡಿ ತೋರಿಸಿದರು. ಅಲ್ಲಿಗೆ ಚಿತ್ರಣ ಸ್ಪಷ್ಟವಾಗಿತ್ತು.
ನಡೆಸುತ್ತಿದ್ದ ಪತ್ರಿಕೆ ಮುಚ್ಚಿ ರೇಖಾ ಮತ್ತು ಗೌರಿಯನ್ನು ಕರೆದುಕೊಂಡು ಬೆಂಗಳೂರಿಗೆ ಬಂದೆ. ಓ ಮನಸೇ ಪತ್ರಿಕೆಯಲ್ಲಿ ಕೆಲಸ ಮಾಡುತ್ತ ನಿಮ್ಹಾನ್ಸ್‌ನಲ್ಲಿ ಗೌರಿಯನ್ನು ತೋರಿಸಿದೆವು. ಅವರ ಚಿತ್ರಣ ಇನ್ನೂ ನಿಖರವಾಗಿತ್ತು. ಗೌರಿಯ ಮೆದುಳಿನ ಶೇ.೪೦ರಿಂದ ೪೫ ಭಾಗದಲ್ಲಿ ಚಟುವಟಿಕೆಯೇ ಇರಲಿಲ್ಲ.
‘ಸಾಮಾನ್ಯ ಮಗುವಿನೊಂದಿಗೆ ಮಾತಾಡುವಂತೆ ಆಕೆಯ ಜೊತೆ ಮಾತಾಡಿ. ಆಟ ಆಡಿಸಿ. ಫಿಸಿಯೋಥೆರಪಿ ಮಾಡಿಸಿ. ಆಕೆ ಸಾಮಾನ್ಯ ಸ್ಥಿತಿಗೆ ಬರುತ್ತಾಳೆಂದು ಹೇಳಲಾರೆವು. ಆದರೆ, ಆ ಸ್ಥಿತಿಗೆ ಹತ್ತಿರವಾಗಿಸಲು ಪ್ರಯತ್ನಿಸಿ. ಒಳ್ಳೆಯದಾಗಲಿ’ ಎಂದರು ನಿಮ್ಹಾನ್ಸ್‌ನ ಕರುಣಾಮಯಿ ವೈದ್ಯರು.
ಅವತ್ತು ಮತ್ತೆ ಅತ್ತಿದ್ದೆವು ಇಬ್ಬರೂ.
*****
ಈಕೆ ದೇವರಿಗೆ ಹರಕೆ ಹೊತ್ತಳು. ನಾನು ತಜ್ಞರ ಶೋಧದಲ್ಲಿ ತೊಡಗಿದೆ. ಭರವಸೆ ಹುಟ್ಟಿಸಿದ ಪ್ರತಿಯೊಬ್ಬ ವೈದ್ಯರಲ್ಲೂ ತೋರಿಸಿದೆವು. ಅವರ ಚಿಕಿತ್ಸಾ ವಿಧಾನಗಳನ್ನು ಅನುಸರಿಸಿದೆವು. ನಿಮ್ಹಾನ್ಸ್‌ನಲ್ಲೇ ಇದ್ದ ಆಯುರ್ವೇದ ವಿಭಾಗದಲ್ಲಿ ವಾರಪೂರ್ತಿ ಚಿಕಿತ್ಸೆ ಆಯಿತು. ಅವನ್ನೇ ಮನೆಯಲ್ಲೂ ಮಾಡುತ್ತ ಹೋದೆವು.
ಊಹೂಂ. ಅವ್ಯಾವೂ ತಕ್ಷಣದ ಭರವಸೆ ಮೂಡಿಸಲಿಲ್ಲ.
ಹೋಮಿಯೋಪತಿ ಚಿಕಿತ್ಸೆಯ ಬೆನ್ನು ಹಿಡಿದು ಹುಬ್ಬಳ್ಳಿ, ಪುಣೆ ಎಂದೆಲ್ಲಾ ಓಡಾಡಿದೆವು. ಯಾವುದೂ ಕೈ ಹಿಡಿಯಲಿಲ್ಲ.
ಅಷ್ಟೊತ್ತಿಗೆ ಪ್ರಜಾವಾಣಿ ಸೇರಿಕೊಂಡಿದ್ದ ನಾನು ಧಾರವಾಡಕ್ಕೆ ವರ್ಗ ಕೇಳಿ ಪಡೆದೆ. ಹೋದಲ್ಲೆಲ್ಲ ದೇವರು, ಶಾಸ್ತ್ರದವರು, ತಜ್ಞರು ಎಂದೆಲ್ಲಾ ಅಲೆದೆವು.
ಇವೆಲ್ಲ ಪ್ರಯೋಗಗಳು ಫಲ ನೀಡದೇ ಹೋದಾಗ ನಿಮ್ಹಾನ್ಸ್‌ನ ವೈದ್ಯರ ಮಾತು ನೆನಪಾದವು.
ಸಾಮಾನ್ಯ ಮಗುವಿನೊಂದಿಗೆ ಮಾತಾಡುವಂತೆ ಗೌರಿಯೊಂದಿಗೆ ಮಾತಾಡುವುದು ಶುರುವಾಯ್ತು. ಫಿಜಿಯೋಥೆರಪಿ ಪ್ರಾರಂಭಿಸಿದೆವು. ವಿಶೇಷ ಶಾಲೆಗೂ ಗೌರಿಯನ್ನು ಸೇರಿಸಿದೆವು. ಬದುಕು ನಿಧಾನವಾಗಿ ತಿರುಗಲು ಶುರುವಾಯ್ತು.
*****
ಗೌರಿ ಕೂಡಲು ಕಲಿತಿದ್ದು ಎರಡು ವರ್ಷಗಳ ನಂತರ. ಅಂಬೆಗಾಲಿಟ್ಟಿದ್ದು ನಾಲ್ಕು ವರ್ಷಗಳಿಗೆ. ತಡವರಿಸುತ್ತ ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟಿದ್ದು ಆರು ವರ್ಷಗಳ ನಂತರ.
ಇವತ್ತಿಗೂ ಆಕೆ ನಮ್ಮ ಕಣ್ಣನ್ನು ೨-೩ ಸೆಕೆಂಡ್‌ಗಳಿಗಿಂತ ಹೆಚ್ಚು ನೋಡುವುದಿಲ್ಲ. ಕೆಲವು ಶಬ್ದಗಳನ್ನು ಬಿಟ್ಟರೆ ಬೇರೆ ಶಬ್ದಗಳನ್ನು ಆಡಿಲ್ಲ. ಇವತ್ತಿಗೂ ನಡಿಗೆ ಅಸಹಜ. ತಂಗಿಯೊಂದಿಗೆ ಬೆರೆಯುವುದು ತೀರಾ ಕಡಿಮೆ.
ಆಟಿಸಂ ಮತ್ತು ಬುದ್ಧಿ ಮಾಂದ್ಯತೆಗಳೆರಡರ ಲಕ್ಷಣಗಳನ್ನೂ ಆಕೆಯಲ್ಲಿ ಗುರುತಿಸಿದ್ದಾರೆ ತಜ್ಞರು. ಈಗ ವಿಶೇಷ ಶಾಲೆಗೆ ಹೋಗುತ್ತಿದ್ದಾಳೆ. ಫಿಜಿಯೋಥೆರಪಿ, ಸ್ಪೀಚ್ ಥೆರಪಿ ಮುಂತಾದವೆಲ್ಲ ನಡೆದಿವೆ. ಈಗ ಆಕೆಗೆ ತಿಳಿವಳಿಕೆ ನಿಧಾನವಾಗಿ, ಬಲು ನಿಧಾನವಾಗಿ ಬೆಳೆಯುತ್ತಿದೆ. ಕೆಲವೊಂದು ಸರಳ ಮಾತುಗಳು ಅರ್ಥವಾಗುತ್ತವೆ. ಕೆಲವು ಸರಳ ಕೆಲಸಗಳನ್ನು ಮಾಡುತ್ತಾಳೆ. ಇವತ್ತಿಗೆ ಹತ್ತು ತುಂಬಿದ್ದರೂ ಗೌರಿ ನಮ್ಮ ಪಾಲಿಗೆ ಒಂದು ವರ್ಷದ ಮಗು.
*****
ಎಷ್ಟೋ ಸಾರಿ ಯೋಚಿಸುತ್ತೇನೆ: ಮಾತೇ ಆಡದ ಈಕೆ ನಮಗೆ ಎಷ್ಟೊಂದು ಕಲಿಸಿದಳಲ್ಲ ಎಂದು. ಆಕೆ ಬದುಕಿನ ರೀತಿ ನೀತಿಗಳ ಬಗ್ಗೆ ನನಗಿದ್ದ ಎಷ್ಟೊಂದು ಭ್ರಮೆಗಳನ್ನು ಹೋಗಲಾಡಿಸಿದಳು! ವಾಸ್ತವ ಪ್ರಪಂಚದ ಮಗ್ಗುಲಗಳನ್ನು ಪರಿಚಯಿಸಿದಳು. ನನಗೇ ಗೊತ್ತಿರದ ನನ್ನ ಮಿತಿ ಮತ್ತು ಸಾಮರ್ಥ್ಯವನ್ನು ತಿಳಿಸಿದಳು. ಕಿರಾಣಿ ಅಂಗಡಿಗೆ ಹೋಗಿ ರೇಶನ್ ತರಲು ಹಿಂಜರಿಯುತ್ತಿದ್ದ ರೇಖಾಳಿಗೆ ಇಡೀ ಬೆಂಗಳೂರನ್ನು ಕಾರಲ್ಲಿ ಸುತ್ತಿಬರುವಂತೆ ಮಾಡಿದಳು. ನಾನು ಕೆಲಸದ ಮೇಲೆ ಕೆಲಸಕ್ಕೆ ರಾಜೀನಾಮೆ ಬೀಸಾಡಿ ಬಂದು ಕೂತಾಗ, ಹೊಸ ಭರವಸೆ ಇನ್ನೂ ಇದೆ ಎಂಬುದನ್ನು ತೋರಿಸಿದಳು. ಮಂಕಾಗಿ ಕೂತವನಲ್ಲಿ ಹೊಸ ಕನಸು, ಸೋತ ಭಾವದ ಜಾಗದಲ್ಲಿ ಗೆಲುವಿನ ದಾರಿ ಮೂಡಿಸಿದಳು.
ಅವಳು ಮೂಡಿಸಿದ ಸ್ಫೂರ್ತಿಯಿಂದ ರೇಖಾ ಮತ್ತೆ ಸಂಗೀತ ಕಲಿಯಲು, ದಿನಾ ಜಿಮ್‌ಗೆ ಹೋಗಲು, ನಾನು ವೃತ್ತಿಯ ಹೊಸ ಸಾಧ್ಯತೆಗಳತ್ತ ಮುಖ ಮಾಡಲು ಸಾಧ್ಯವಾಯಿತು. ಗೌರಿಯಂಥ ಮಗುವನ್ನು ನಾವೇ ನೋಡಿಕೊಳ್ಳಬೇಕೆಂಬ ಅನಿವಾರ್ಯತೆ ನಮ್ಮನ್ನು ನಿತ್ಯ ಚುರುಕಾಗಿರಿಸಿದೆ. ನಿತ್ಯ ಗೆಲುವಾಗಿರಿಸಿದೆ. ಅಪರಿಚಿತರಲ್ಲಿ ಆತ್ಮೀಯರನ್ನು ಹುಟ್ಟುಹಾಕಿದೆ. ಸವಾಲಿನ ಜಾಗದಲ್ಲಿ ಅವಕಾಶ, ಸೋಲಿನ ಜಾಗದಲ್ಲಿ ಹೊಸ ಯತ್ನವನ್ನು ಮೂಡಿಸಿದೆ.
ಮಾತೇ ಆಡದ ಗೌರಿ ನಮಗೆ ಬದುಕಲು ಕಲಿಸಿದ್ದಾಳೆ. ಭರವಸೆ ಮೂಡಿಸಿದ್ದಾಳೆ. ನಿತ್ಯ ಹೊಸದೊಂದನ್ನು ಕಲಿಸುತ್ತ, ಹೊಸ ಭರವಸೆ ಮೂಡಿಸುತ್ತ, ತನ್ನ ಪಾಡಿಗೆ ತಾನು ನಗುತ್ತಲೇ ಇದ್ದಾಳೆ.
*****
ಥ್ಯಾಂಕ್ಸ್ ಗೌರಿ, ನೀನು ನಮ್ಮ ಮಗಳಾಗಿದ್ದಕ್ಕೆ. ನಮ್ಮ ಗುರುವಾಗಿದ್ದಕ್ಕೆ.
ಹ್ಯಾಪಿ ಬರ್ತ್‌ಡೇ ನಿನಗೆ.
- ಚಾಮರಾಜ ಸವಡಿ
ಬದುಕೆಂಬ ಅಚ್ಚರಿಗಳ ಹುತ್ತ
12 Apr 2010
ಇದು ನನ್ನ ಹಳೆಯ ಅನುಭವ. ಎಲ್ಲ ನಿಂತಂತೆ, ಏನೂ ಬದಲಾಗುತ್ತಿಲ್ಲ ಎಂದು ಅನಿಸತೊಡಗಿದಾಗ, ಎಲ್ಲೋ ಬದಲಾವಣೆ ಮಿಸುಕತೊಡಗಿರುತ್ತದೆ. ತೀವ್ರ ಕತ್ತಲಿನ ನಡುವೆ ಬೆಳಕು ಮೊಳಕೆಯೊಡೆದಂತೆ, ಬಿಕ್ಕುವಿಕೆ ಮಧ್ಯೆ ನೆಮ್ಮದಿ ಹುಟ್ಟಿದಂತೆ, ಬಿರುಬಿಸಿಲಿನ ಮಧ್ಯೆ ಕಾರ್ಮೋಡವೊಂದು ಕಣ್ತೆರೆದಂತೆ ಭರವಸೆ ಕಾಣಲು ಶುರುವಾಗುತ್ತದೆ.
ಇವತ್ತು ತುಂಬ ಸೆಕೆಯಿತ್ತು. ಧಗೆ ಎಷ್ಟು ತೀವ್ರವಾಗಿತ್ತೆಂದರೆ, ಮಳೆ ಬರಬಹುದು ಎಂಬ ಅನಿಸಿಕೆ ಬಲಗೊಳ್ಳುವಷ್ಟು. ಯಂತ್ರದಂತೆ ಹವಾಮಾನ ಕೂಡ ಖಚಿತ ಮಾನದಂಡಗಳನ್ನು ಹೊಂದಿರಬಹುದು ಅನಿಸುತ್ತದೆ. ಸಂಜೆ ಹೊತ್ತಿಗೆ ಒಂದೆರಡು ವರಸೆ ಮಳೆ ಬಂದೇಬಿಡ್ತು. ಸೆಕೆಯನ್ನು ಒಂದಿಷ್ಟು ಕಡಿಮೆ ಮಾಡಿತು.
ಅಂದುಕೊಂಡಿದ್ದಕ್ಕಿಂತ ಹೆಚ್ಚಾಗಿಯೇ ಕರೆಂಟ್ ಕಣ್ಣಾಮುಚ್ಚಾಲೆಯಾಡುತ್ತಿದ್ದ ಈ ದಿನಗಳಲ್ಲಿ, ವಿದ್ಯುತ್ ಕೈಕೊಟ್ಟಾಗ ಮೊದಮೊದಲು ತುಂಬ ಅಸಮಾಧಾನವಾಗುತ್ತಿತ್ತು. ಕ್ರಮೇಣ, ಇದೇ ಸಮಯವನ್ನು ಓದಲು ಬಳಸಲು ಶುರು ಮಾಡಿದೆ. ಕರೆಂಟ್ ಇರುವವರೆಗೆ ಕಂಪ್ಯೂಟರ್ ಮೇಲೆ ಕೆಲಸ. ಕರೆಂಟ್ ಹೋದಕೂಡಲೇ ಓದಲು ಶುರು. ಎಷ್ಟೋ ಸಾರಿ, ಓದಿನ ಗಮ್ಮತ್ತಿನ ನಡುವೆ, ಕರೆಂಟ್ ಬಂದರೂ ವಿಶೇಷ ಅನಿಸುತ್ತಿರಲಿಲ್ಲ. ಹೀಗಾಗಿ, ಕರೆಂಟ್ ಹೋದಷ್ಟೂ ಓದಲು ಹೆಚ್ಚು ಸಮಯ ಸಿಗುವಂತಾಗಿದೆ.
ರಾತ್ರಿಯ ನಿಶ್ಯಬ್ದದಲ್ಲಿ ಹೊಸ ಕನಸುಗಳು ಮೊಳಕೆಯೊಡೆಯುತ್ತವೆ. ಓದಿನ ಮಧ್ಯೆ, ಹೊಸ ಬೆಳಕೊಂದು ಮಿಂಚುತ್ತದೆ. ನಿರಾಶೆಯ ಮಧ್ಯೆ ಹೊಸ ಭರವಸೆ. ಬಹುಶಃ ಏನೂ ಬದಲಾಗಲಿಕ್ಕಿಲ್ಲ ಎಂಬ ಅನಿಸಿಕೆಯ ತೀವ್ರತೆಯ ಮಧ್ಯೆಯೇ ಎಂಥದೋ ಬದಲಾವಣೆಯ ಸುಳಿವು. ಹೊಸ ಓದಿನ ಖುಷಿಯ ಮಧ್ಯೆ ಓದಿದ ಪುಸ್ತಕಗಳ ಭಾವಪ್ರವಾಹ. ತಂತ್ರಜ್ಞಾನದ ಸೊಗಸಿನ ನಡುವೆ ಬಾಲ್ಯದಲ್ಲಿ ಆಡಿದ ಮಣ್ಣಿನ ಆಟಿಕೆಗಳ ನೆನಪು.
ಬದುಕು ಹೀಗೇ ಸಾಗುತ್ತಿದೆ. ಪ್ರತಿಯೊಂದು ಬದಲಾವಣೆಯೂ, ಬೆಳವಣಿಗೆಯೂ ಹಳೆಯ ಬೇರುಗಳೊಂದಿಗೆ ನಂಟು ಬೆಸೆಯುತ್ತದೆ. ಹಳೆಯದರೊಂದಿಗೆ ಹೋಲಿಸಿ ನೋಡುತ್ತ ಹೊಸತನವನ್ನು ರೂಢಿಸಿಕೊಳ್ಳುತ್ತದೆ. ಎರಡರ ನಡುವೆ ಸಮನ್ವಯ ಆಯಿತೆನ್ನುವದರೊಳಗೆ ಮತ್ಯಾವುದೋ ಹೊಸ ಬೆಳವಣಿಗೆ. ಬದಲಾವಣೆ.
ಎಫ್.ಎಂ. ಉದ್ಘೋಷಕರ ರಭಸದ ಮಾತುಗಳನ್ನು ಕೇಳುವಾಗ ಕೀರ್ತನಕಾರರ ಮಾತಿನ ಓಘದ ನೆನಪು. ಫ್ರಿಜ್‌ನ ತಣ್ಣೀರು ಸವಿಯುವಾಗ, ಮಡಕೆ ನೀರಿನ ತಂಪಿನ ತೀವ್ರತೆ. ಎಲ್ಲಿಯದೋ ನೆನಪುಗಳಿಗೆ ಇನ್ನೆಲ್ಲಿಯದೋ ಭಾವನೆಗಳೊಂದಿಗೆ ತಳುಕು.
ಯಾವುದೋ ನೆನಪಿಗೆ ಇನ್ಯಾವುದೋ ತಂತು ಮೀಟುವುದು ಬದುಕಿನ ಚೋದ್ಯಗಳಲ್ಲೊಂದು. ಹುಡುಕುತ್ತ ಹೋದರೆ, ಪ್ರತಿಯೊಂದಕ್ಕೂ ಇನ್ನೊಂದರ ನಂಟಿದೆ ಅನಿಸುತ್ತದೆ. ಯಾವುದೂ ಹೊಸತಲ್ಲ, ಎಲ್ಲವೂ ಒಮ್ಮೆ ಕಂಡುಂಡ ಸಂಗತಿಗಳ ಮುಂದುವರಿಕೆ ಎಂದು ಭಾಸವಾಗುತ್ತದೆ. ಅಲ್ಲೆಲ್ಲೋ ಆಗಸದೆತ್ತರದಲ್ಲಿರುವ ಹೊಸ ಮೊಳಕೆಗೆ ಭೂಮಿಯಾಳದ ಬೇರಿನೊಂದಿಗೆ ನಂಟಿರುವಂತೆ, ಪ್ರತಿಯೊಂದಕ್ಕೂ ಯಾವುದೋ ನಂಟು. ಇನ್ಯಾವುದೋ ಪ್ರೇರಣೆ.
ನಿಜ. ಬದುಕು ಅಚ್ಚರಿಗಳ ಮೊತ್ತ. ಸಾವಿರ ಸಾವಿರ ನೆನಪುಗಳ ಹುತ್ತ.
- ಚಾಮರಾಜ ಸವಡಿ
ನಡೆದಷ್ಟೂ ದಾರಿಯಿದೆ, ಪಡೆದಷ್ಟೂ ಭಾಗ್ಯವಿದೆ
4 Apr 2010
ಹಾಗಂತ ನಾವು ಎಷ್ಟು ಸಾರಿ ಅಂದುಕೊಂಡಿಲ್ಲ? ಓಡುತ್ತಿದ್ದ ವಾಹನ ಇದ್ದಕ್ಕಿದ್ದಂತೆ ನಿಂತ ಹಾಗೆ, ಬದುಕು ಕೂಡ ಯಾವುದೋ ಒಂದು ಹಂತದಲ್ಲಿ ಇದ್ದಕ್ಕಿದ್ದಂತೆ ನಿಂತಂತಾಗುತ್ತದೆ. ಚಲಿಸುತ್ತಿದ್ದಾಗಿನ ಭಾವನೆಗಳೆಲ್ಲ ಮಾಯವಾದಂತಾಗಿ, ಕೂತವರು ತಕ್ಷಣ ಇಳಿಯಬೇಕಾಗಿ ಬಂದು, ’ಅರೆ, ಎಲ್ಲಿಗೆ ಬಂದೆ?’ ಎಂದು ಪ್ರಶ್ನಿಸುವಂತಾಗುತ್ತದೆ. ತಕ್ಷಣ ಏನೂ ಮಾಡಲು ತೋಚದೇ ಕಕ್ಕಾವಿಕ್ಕಿಯಾಗುತ್ತೇವೆ.
ಬದುಕು ತಿರುವು ತೆಗೆದುಕೊಳ್ಳುತ್ತಿದೆ ಎಂಬುದರ ಮೊದಲ ಲಕ್ಷಣವದು.
ಕೆಲಸ ಬದಲಿಸಿದಾಗ, ಕೆಲಸ ಬಿಟ್ಟಾಗ, ಹೊಸ ಕೆಲಸಕ್ಕೆ ಹೋದಾಗ, ಊರು ಬದಲಿಸಿದಾಗ, ಮನೆ ಬದಲಿಸಿದಾಗ, ಹಳೆಯ ಸಂಬಂಧವನ್ನು ಮುರಿದುಕೊಂಡಾಗ- ಹೀಗೆ ಹತ್ತಾರು ಕಾರಣಗಳಿಗಾಗಿ ಸಹಜವಾದಂತಿದ್ದ ಜೀವನ ಇದ್ದಕ್ಕಿದ್ದಂತೆ ತಿರುವು ಪಡೆದುಕೊಳ್ಳುತ್ತದೆ. ಹಳೆಯದೆಲ್ಲ ಮರೆಯಾದಂತಾಗಿ, ಹೊಸತನ ರೂಢಿಯಾಗಬೇಕಿರುವಾಗ, ಬದುಕೆಂದರೆ ಇಷ್ಟೇನಾ ಎಂದು ಪ್ರಶ್ನಿಸಿಕೊಳ್ಳುವಂತಾಗುತ್ತದೆ.
ಏನೇ ಧೈರ್ಯ ಹೇಳಿಕೊಂಡರೂ, ಎಷ್ಟೇ ಪೂರ್ವಾನುಭವವಿದ್ದರೂ, ಹೊಸತನದ ಎದುರು ಅರೆ ಕ್ಷಣ ಮಂಕಾಗುವುದು ಸಹಜ. ಎಷ್ಟೇ ದೋಷಗಳಿದ್ದರೂ ಹಳೆಯದೇ ಚೆನ್ನಿತ್ತು ಎಂದು ಅನಿಸುತ್ತದೆ. ಅದನ್ನು ಬಿಡಬಾರದಿತ್ತು ಎಂದು ಹಳಹಳಿಸುತ್ತೇವೆ. ಮತ್ತೆ, ಅಲ್ಲಿಗೇ ಹೋಗಿಬಿಡಲಾ ಎಂದು ಪ್ರಶ್ನಿಸಿಕೊಳ್ಳುತ್ತೇವೆ. ಅದುವರೆಗೆ ಅಂದುಕೊಂಡ ಭಾವನೆಗಳೆಲ್ಲ ಕೈಕೊಟ್ಟಂತಾಗಿ ತಡವರಿಸುತ್ತೇವೆ. ಇದ್ಯಾವುದೋ ಹೊಸ ನೆಲ. ಇಲ್ಲಿರುವವರು ಹೊಸ ಜನ. ಇಲ್ಲಿರುವುದು ಹೊಸ ವಾತಾವರಣ. ಇದನ್ನೆಲ್ಲ ಗೆದ್ದು ಮತ್ತೆ ಗರಿಗೆದರುವುದು ಯಾವತ್ತೋ ಎಂದು ಕಂಗಾಲಾಗುತ್ತೇವೆ.
ಎಷ್ಟೋ ಜನ ಮತ್ತೆ ಹಳೆಯದನ್ನು ಹುಡುಕಿಕೊಂಡು ವಾಪಸ್ ಹೋಗಲು ಯತ್ನಿಸುತ್ತಾರೆ. ಇನ್ನು ಕೆಲವರು ಹೊಸತನಕ್ಕೆ ಹೊಂದಿಕೊಳ್ಳಲಾಗದೇ ಪೂರ್ತಿಯಾಗಿ ಮಂಕಾಗುತ್ತಾರೆ. ಕೆಲವರು ಮಾತ್ರ ತಡವರಿಸುತ್ತಾ ಹೊಸತನಕ್ಕೆ ಹೊಂದಿಕೊಳ್ಳುವ ಕೆಲಸದಲ್ಲಿ ತೊಡಗುತ್ತಾರೆ.
ಆದರೆ, ಬದುಕು ವಿರುದ್ಧ ದಿಕ್ಕಿನಲ್ಲಿ, ಬಂದ ದಾರಿಯತ್ತ ಮರಳಿ ಹೋಗುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳುವ ಹೊತ್ತಿಗೆ ಸಾಕಷ್ಟು ಸಮಯ ಕಳೆದುಹೋಗಿರುತ್ತದೆ. ಧೈರ್ಯದಿಂದ ಮುನ್ನುಗ್ಗಿದವರಿಗೆ ತಕ್ಷಣ ಯಶಸ್ಸು ಸಿಕ್ಕದಿದ್ದರೂ, ಬದುಕುವ ಸ್ಥೈರ್ಯ ದಕ್ಕಿರುತ್ತದೆ. ಅರೆ ಮನಸ್ಸಿನವರಿಗೆ ವಾಸ್ತವ ಬಲುಬೇಗ ಅರಿವಾಗುತ್ತದೆ. ಆದರೆ, ಭೂತಕಾಲದಲ್ಲೇ ಬದುಕುವವರಿಗೆ ಮಾತ್ರ ಬದುಕು ಕರುಣಾಮಯಿಯಾಗುವುದು ಬಲು ಅಪರೂಪ.
ಹಲವಾರು ಬಾರಿ ಕೆಲಸಗಳನ್ನು, ಊರುಗಳನ್ನು, ಮನೆಗಳನ್ನು ಹಾಗೂ ಮಿತ್ರರನ್ನು ಬದಲಿಸಿರುವ ನನಗೆ ಇದೆಲ್ಲ ಅರ್ಥವಾಗುವ ಹೊತ್ತಿಗೆ ಅರ್ಧ ಆಯುಷ್ಯ ಕಳೆದುಹೋಗಿತ್ತು. ಮುಂದಿನ ಆಯುಷ್ಯಪೂರ್ತಿ ಬದುಕುವ ಗಟ್ಟಿತನವನ್ನು ಕಲಿಸಿತ್ತು. ’ಹೊತ್ತ ಒಜ್ಜೆಗಳೇನು, ಹಿಡಿದ ಗಿಂಡಿಗಳೇನು, ಹೆಜ್ಜೆ ಸಾಲಿನ ಪಯಣ, ನಾರಾಯಣ’ ಎಂದುಕೊಂಡು ಹೊಸ ದಿಕ್ಕಿನತ್ತ, ಹೊಸ ದಾರಿಯಲ್ಲಿ ನಡೆಯುವುದನ್ನು ರೂಢಿ ಮಾಡಿಸಿತ್ತು.
ಮೊದಲ ಬಾರಿ ಕೆಲಸ ಬಿಡುವವರು, ಮನೆ ಬದಲಿಸುವವರು, ಊರು ಬಿಟ್ಟು ಬರುವವರು, ನವದಂಪತಿಗಳು, ನವ ವಿಚ್ಛೇದಿತರು- ಹೀಗೆ ತರಹೇವಾರಿ ವ್ಯಕ್ತಿಗಳಿಗೆ ನಾನು ಹೇಳುವುದು ಇದೇ ಮಾತನ್ನು. ಹೊಸತನ ರೂಢಿಯಾಗುವವರೆಗೆ ಗಟ್ಟಿಯಾಗಿರಿ. ನಿಂತಲ್ಲೇ ನಿಂತು ಕೊಳೆತುಹೋಗುವುದಕ್ಕಿಂತ, ಅಪರಿಚಿತ ದಾರಿಯಲ್ಲಿ ನಡೆಯುವುದು ಒಳ್ಳೆಯದು. ಅಪರಿಚಿತತೆ ನಮಗೆ ಬದುಕುವ ದಾರಿ ಕಲಿಸುತ್ತದೆ. ಸವಾಲುಗಳನ್ನು ಎದುರಿಸುವುದನ್ನು ಕಲಿಸುತ್ತದೆ. ನಮ್ಮ ಮೇಲೆ ನಾವು ಅವಲಂಬಿತರಾಗುವ ಅದ್ಭುತ ಕಲೆಯನ್ನು ಕಲಿಸುತ್ತದೆ. ಹೊಸ ದಾರಿಯಲ್ಲಿ ಶತ್ರುಗಳಷ್ಟೇ ಅಲ್ಲ, ಮಿತ್ರರೂ ಸಿಗುತ್ತಾರೆ. ಸಮಸ್ಯೆಗಳಷ್ಟೇ ಅಲ್ಲ, ಅವಕಾಶಗಳೂ ದಕ್ಕುತ್ತವೆ. ಎಲ್ಲಕ್ಕಿಂತ ಮುಖ್ಯ, ನಿಮಗೆ ನೀವೇ ಮಿತ್ರರಾಗುವುದು ಹೇಗೆಂಬುದು ಗೊತ್ತಾಗುತ್ತದೆ. ಆದ್ದರಿಂದ, ಹೊಸ ದಾರಿ ತುಳಿಯಲು ಹಿಂಜರಿಯದಿರಿ. ಅದಕ್ಕೂ ಮುನ್ನ ಸಾಕಷ್ಟು ಯೋಚಿಸಿ, ವಿಚಾರಿಸಿ, ಸಲಹೆ ಪಡೆಯಿರಿ. ಆದರೆ, ನಿರ್ಧಾರ ಮಾತ್ರ ನಿಮ್ಮದೇ. ಗೆದ್ದರೂ, ಸೋತರೂ ಅದಕ್ಕೆ ನೀವೇ ಜವಾಬ್ದಾರರು. ಇತರರ ಸಲಹೆಗಳೇನಿದ್ದರೂ ಬೀದಿ ದೀಪಗಳಂತೆ. ಅವು ನಿಮಗೆ ದಾರಿ ತೋರಬಹುದು. ಆದರೆ, ಜೊತೆಗೆ ಬರಲಾರವು. ಅವುಗಳ ಬೆಳಕಿನಲ್ಲಿ, ನಿಮ್ಮ ಹೆಜ್ಜೆಗಳಲ್ಲಿ ನಿಮ್ಮ ದಾರಿ ಸಾಗಬೇಕು. ನಡೆಯುವವರು ಮಾತ್ರ ನೀವೇ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ಸವಾಲು ಎದುರಿಸಿ.
ಏಕೆಂದರೆ, ಅಂಥ ಸವಾಲುಗಳನ್ನು ಎದುರಿಸಿ ಒಂಟಿಯಾಗಿ ಹೆಜ್ಜೆ ಹಾಕಿದ ಗಟ್ಟಿ ಅನುಭವ ನನ್ನದು. ಇವತ್ತು ಹಿಂತಿರುಗಿ ನೋಡಿದಾಗ, ನಡೆದ ದಾರಿಯ ದೋಷಗಳು, ಅವಕಾಶಗಳು, ಕಳೆದುಕೊಂಡಿದ್ದು, ದಕ್ಕಿದ್ದು ಎಲ್ಲವೂ ಸ್ಪಷ್ಟವಾಗಿ ಕಾಣುತ್ತಿವೆ. ಎಲ್ಲಾ ಲೆಕ್ಕಾಚಾರ ಹಾಕಿದಾಗ, ಪಡೆದುಕೊಂಡಿದ್ದೇ ಹೆಚ್ಚು ಎಂಬ ಅಂಶ ಸಮಾಧಾನ ನೀಡುತ್ತಿದೆ.
ಎಲ್ಲಕ್ಕಿಂತ ಮುಖ್ಯವಾಗಿ, ನನ್ನನ್ನು ನಾನು ಹೆಚ್ಚು ತಿಳಿದುಕೊಂಡೆ. ನನಗೆ ನಾನೇ ಉತ್ತಮ ಗೆಳೆಯನಾದೆ. ನನ್ನೊಳಗಿನ ನಾನು ನನ್ನ ಅತ್ಯುತ್ತಮ ಸಂಗಾತಿಯಾಯಿತು. ಯೋಗ್ಯ ಮಿತ್ರರು ದಕ್ಕಿದರು. ಶತ್ರುಗಳನ್ನು ನಿಖರವಾಗಿ ಗುರುತಿಸುವ ಕಲೆ ದಕ್ಕಿತು. ಹೊಸ ಸವಾಲುಗಳನ್ನು ಎದುರಿಸುವ ಆತ್ಮವಿಶ್ವಾಸ ಬಲಗೊಂಡಿತು.
ಎಲ್ಲಿಯೋ ಓದಿದ್ದ ಮಾತೊಂದು ನೆನಪಾಗುತ್ತಿದೆ: ನಡೆದಷ್ಟೂ ದಾರಿಯಿದೆ, ಪಡೆದಷ್ಟೂ ಭಾಗ್ಯವಿದೆ. ಆ ಮಾತು ಸತ್ಯ ಎಂಬುದು ಪದೆ ಪದೆ ಅರಿವಾಗುತ್ತಿದೆ.
- ಚಾಮರಾಜ ಸವಡಿ
ಬೆಳ್ಳಂಬೆಳಿಗ್ಗೆ ಅಪ್ಪಳಿಸಿದ ಆಘಾತ-೧
28 Apr 2009
ಅದು ಮಾರ್ಚ್ ತಿಂಗಳ ಮೂರನೇ ವಾರದ ಕೊನೆ. ಎಂದಿನಂತೆ ನಸುಕಿನಲ್ಲಿ ಎದ್ದು ಕಂಪ್ಯೂಟರ್ ಮುಂದೆ ಪತ್ರಿಕೆಗಳ ಅಂತರ್ಜಾಲ ತಾಣಗಳನ್ನು ಹುಡುಕಿ ಓದುತ್ತ, ನೋಟ್ಸ್ ಮಾಡಿಕೊಳ್ಳುತ್ತಾ ಕೂತಿದ್ದೆ. ಸಮಯ ಆಗಲೇ ಆರೂ ಕಾಲು. ಇನ್ನೊಂದು ಹದಿನೈದು ನಿಮಿಷ ಸಮಯ. ಮಕ್ಕಳು ಏಳುತ್ತವೆ. ಅವರ ಮುಖ ತೊಳೆದು, ಒಂದಿಷ್ಟು ಹಾಲು ಕುಡಿಸಿಕೊಂಡು ವಾಕಿಂಗ್ ಹೋಗುವುದು ರೂಢಿ.
ಮತ್ತೈದು ನಿಮಿಷದಲ್ಲಿ ಚಿಕ್ಕವಳು ಎದ್ದಳು. ರೇಖಾ ಅವಳನ್ನು ರೆಡಿ ಮಾಡುವಷ್ಟರಲ್ಲಿ ದೊಡ್ಡ ಮಗಳು ಗೌರಿ ಕೂಡ ಎದ್ದು ಕೂತಳು. ಹಾಗೇ ಬಿಟ್ಟರೆ ಹಾಸಿಗೆಯಲ್ಲೇ ಸೂಸೂ ಮಾಡುತ್ತಾಳೆಂದು ಅವಳನ್ನು ಎಬ್ಬಿಸಿದ ರೇಖಾ ಬಾತ್‌ರೂಮಿನ ಕಡೆ ನಡೆಸಿಕೊಂಡು ಬಂದಳು.
ಏಕೋ ಗೌರಿ ನಡೆಯಲು ಹಠ ಮಾಡಿದಳು. ಅದು ಹಳೆಯ ಅಭ್ಯಾಸ. ಬಾತ್‌ರೂಮಿನ ನೆಲ ತಂಪಗಿರುತ್ತದೆ. ಎದ್ದ ಕೂಡಲೇ ಕಾಲು ನೆನೆಸಿಕೊಳ್ಳಲು ಆಕೆ ಇಷ್ಟಪಡುವುದಿಲ್ಲ.
ಬಹುಶಃ ಅದೇ ಕಾರಣಕ್ಕೆ ನಡೆಯಲು ಹಠ ಮಾಡುತ್ತಿರಬಹುದೆಂದು ಭಾವಿಸಿ ಆಕೆ ಕೊಂಚ ಒತ್ತಾಯದಿಂದಲೇ ನಡೆಸಿಕೊಂಡು ಬಂದಳು. ಆದರೆ, ನಾನು ಕೂತಿದ್ದ ಕೋಣೆಯ ಬಾಗಿಲ ಚೌಕಟ್ಟನ್ನು ಗಟ್ಟಿಯಾಗಿ ಹಿಡಿದು ನಿಂತುಕೊಂಡ ಗೌರಿ ಹೆಜ್ಜೆ ಎತ್ತಿಡಲಿಲ್ಲ. ರೇಖಾ ಜಗ್ಗಿದರೂ ಈಕೆ ಕದಲಲಿಲ್ಲ. ’ಸೋಮಾರಿತನ ಮಾಡಬಾರದು ಪುಟ್ಟಾ’ ಎಂದು ಕೂತಲ್ಲಿಂದಲೇ ನಾನು ಮೆಲುವಾಗಿ ಗದರಿದೆ. ಆದರೂ, ಗೌರಿ ಅಲ್ಲಾಡಲಿಲ್ಲ. ’ಈಕೆಗೆ ನೀವೇ ಮುಖ ತೊಳೆಸಿ’ ಎಂದು ಆಕೆಯ ಕೈಬಿಟ್ಟ ರೇಖಾ ಚಿಕ್ಕವಳತ್ತ ಗಮನ ಹರಿಸಿದಳು.
ಈಗ ನಾನು ಏಳಲೇಬೇಕಾಯಿತು.
ಏಕೋ ಗೌರಿ ಕೊಂಚ ಹೊಯ್ದಾಡಿದಂತಾಯಿತು. ನಿದ್ದೆಗಣ್ಣಿನಲ್ಲಿ ಬಿದ್ದುಗಿದ್ದಾಳೆಂದು ನಾನು ತಕ್ಷಣ ಎದ್ದು ಆಕೆಯತ್ತ ಹೋಗುವಷ್ಟರಲ್ಲಿ, ಗೌರಿ ಏಕೋ ಅಸಹಜವಾಗಿದ್ದನ್ನು ಗಮನಿಸಿದೆ.
ಆಕೆಯ ಕಣ್ಣುಗಳು ವಿಚಿತ್ರವಾಗಿದ್ದವು. ದೃಷ್ಟಿ ಎಲ್ಲೋ ನೆಟ್ಟಿತ್ತು. ಮೈಯಲ್ಲಿ ಶಕ್ತಿ ಇಲ್ಲದವಳಂತೆ ನಿಂತಿದ್ದ ಆಕೆ ಯಾವ ಕ್ಷಣದಲ್ಲಾದರೂ ಬೀಳಬಹುದು ಅನಿಸಿತು.
ಹೋಗಿ ಆಕೆಯ ರೆಟ್ಟೆ ಹಿಡಿದುಕೊಂಡೆ. ಮೈಯಲ್ಲಿ ಶಕ್ತಿ ಇಲ್ಲದಂತೆ ನಿಂತಿದ್ದ ಆಕೆ ನಿಧಾನವಾಗಿ ಬಿಗಿಯಾಗತೊಡಗಿದಳು. ನಡೆಯಲು ಇಷ್ಟವಿಲ್ಲದಾಗ ಕುಸಿದು ಕೂಡುವಂತೆ ಕಾಣಲಿಲ್ಲ.
ತಕ್ಷಣ ಆಕೆಯನ್ನು ಎತ್ತಿಕೊಂಡು ಹೋಗಿ ಕುರ್ಚಿಯಲ್ಲಿ ಕೂರಿಸಿದೆ. ಆಕೆಯ ಮುಖ ಇನ್ನಷ್ಟು ಅಸಹಜವಾಯಿತು. ದೃಷ್ಟಿ ಎಲ್ಲೋ. ಒಂದು ಲೋಟ ತೆಗೆದುಕೊಂಡು ಅದನ್ನು ತಿರುಗಿಸಿದೆ. ಆ ರೀತಿ ತಿರುಗಿಸುವುದನ್ನು ನೋಡುವುದು ಆಕೆಗೆ ಇಷ್ಟ.
ಆದರೆ, ಗೌರಿ ಪ್ರತಿಕ್ರಿಯಿಸಲಿಲ್ಲ. ಮೈ ಶಕ್ತಿ ಇಲ್ಲದಂತೆ ಇಳಿಬೀಳತೊಡಗಿತು. ಕುರ್ಚಿಯಲ್ಲಿದ್ದರೂ ಆಕೆ ಬಿದ್ದುಬಿಡಬಹುದು ಅನಿಸಿದಾಗ ಮೊದಲ ಬಾರಿ ನಾನು ಕೊಂಚ ಗಾಬರಿಗೊಂಡೆ.
ತಕ್ಷಣ ಆಕೆಯನ್ನು ಎತ್ತಿಕೊಂಡು ದಿವಾನ್ ಮೇಲೆ ಮಲಗಿಸಿದೆ. ಗೌರಿಯ ನಡವಳಿಕೆ ವಿಚಿತ್ರವಾಯಿತು. ಕಣ್ಣಿನ ಅಸಹಜತೆ ನನ್ನನ್ನು ಮತ್ತಷ್ಟು ಗಾಬರಿಗೊಳಿಸಿತು. ರೇಖಾಳನ್ನು ಕೂಗಿ ಕರೆದೆ.
ಅಷ್ಟೊತ್ತಿಗೆ ಗೌರಿ ವಿಚಿತ್ರವಾಗಿ ವರ್ತಿಸತೊಡಗಿದಳು. ದೇಹ ಒಂದು ಕಡೆ ವಾಲಿತು. ಕುತ್ತಿಗೆ ಒಂದು ಭಾಗಕ್ಕೆ ತಿರುಚಿತು. ಬಾಯಿ ಅಸಹಜವಾಗಿ ತೆರೆದುಕೊಂಡಿತು. ನಮ್ಮ ಕಣ್ಮುಂದೆಯೇ ನಿಧಾನವಾಗಿ ಅಕೆಯ ಪ್ರಜ್ಞೆ ತಪ್ಪತೊಡಗಿತು.
ಅದನ್ನು ನೋಡಿ ರೇಖಾ ಅಳತೊಡಗಿದಳು. ಆಕೆಯ ಮೈ ಅಲುಗಿಸಿ ಮಾತನಾಡಿಸಲು ಯತ್ನಿಸಿದರೂ ಪ್ರತಿಕ್ರಿಯೆ ಬರಲಿಲ್ಲ. ಜಗತ್ತಿನ ಪರಿವೇ ಇಲ್ಲದಂತೆ ಆಕೆ ನಿಧಾನವಾಗಿ ಕುಸಿಯತೊಡಗಿದಳು. ನಾನು ಪೂರ್ತಿ ಗಾಬರಿಗೊಂಡೆ. ತಕ್ಷಣ ಏನು ಮಾಡಬೇಕೋ ತೋಚಲಿಲ್ಲ. ನಮ್ಮ ಅವಸ್ಥೆ ನೋಡಿ ಚಿಕ್ಕ ಮಗಳು ನಿಧಿ ಅಳಲು ಪ್ರಾರಂಭಿಸಿದಳು.
ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗದಿದ್ದರೆ ಅಪಾಯ ತಪ್ಪಿದ್ದಲ್ಲ ಎಂಬ ಭೀತಿಯಲ್ಲಿ ಕೆಳ ಅಂತಸ್ತಿನ ಗೌಡರ ಮನೆಯತ್ತ ಓಡಿ ಹೋದೆ. ಅವರ ಮನೆಯಲ್ಲಿ ಬೈಕಿತ್ತು. ಆ ಸಮಯದಲ್ಲಿ ಆಟೊ ಅಥವಾ ಆಂಬುಲೆನ್ಸ್ ಬರುವುದನ್ನು ಕಾಯುವುದಕ್ಕಿಂತ, ಗೌಡರ ಬೈಕ್‌ನಲ್ಲಿ ಗೌರಿಯನ್ನೆತ್ತಿ ಕೂತು ಹತ್ತಿರದಲ್ಲೇ ಇರುವ ೨೪ ಗಂಟೆಗಳೂ ತೆರೆದಿರುವ ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ನನ್ನ ಉದ್ದೇಶವಾಗಿತ್ತು. ಹೇಗೆ ಮೆಟ್ಟಿಲಿಳಿದೆನೋ ಗೊತ್ತಿಲ್ಲ. ಇನ್ನೇನು ಗೌಡರ ಮನೆಯ ಬಾಗಿಲು ತಟ್ಟಬೇಕು-
ಅಷ್ಟರಲ್ಲಿ ರೇಖಾ ಜೋರಾಗಿ ಚೀರಿದಳು.
ನನ್ನ ಜಂಘಾಬಲವೇ ಉಡುಗಿದಂತಾಯಿತು. ಬಂದ ವೇಗಕ್ಕಿಂತ ದುಪ್ಪಟ್ಟು ವೇಗದಲ್ಲಿ ಮೆಟ್ಟಿಲೇರಿ ಒಳಗೆ ಓಡಿದೆ. ಆ ದೃಶ್ಯವನ್ನು ಬಹುಶಃ ನನ್ನ ಜೀವಮಾನದಲ್ಲಿ ಎಂದಿಗೂ ಮರೆಯಲಾರೆ.
ಗೌರಿಯ ಮೈ ತರಗಲೆಯಂತೆ ಕಂಪಿಸುತ್ತಿದೆ. ಬಾಯಿ ವಿಚಿತ್ರವಾಗಿ ತೆರೆದುಕೊಂಡಿದೆ. ಕಣ್ಣುಗಳು ಅರೆತೆರೆದಿದ್ದವು. ಇಡೀ ದೇಹ ಅಲೆಅಲೆಯಾಗಿ ನಡುಗುತ್ತಿತ್ತು. ರೇಖಾ ಜೋರಾಗಿ ಅಳುತ್ತಿದ್ದಳು. ನಿಧಿ ಕೂಡಾ.
ಅದನ್ನು ನೋಡಿ ನಾನೂ ಅಳತೊಡಗಿದೆ. ನಮ್ಮ ಕಣ್ಣೆದುರೇ ಗೌರಿ ಜಾರಿ ಹೋಗುತ್ತಿರುವಂತೆ ಭಾಸವಾಯಿತು. ಗುರುವಾರದ ಆ ಬೆಳಿಗ್ಗೆ ಇದ್ದ ನಾಲ್ವರ ಪೈಕಿ ಮೂವರು ಅಳುತ್ತ ಕೂತಿದ್ದರೆ, ಗೌರಿ ಇಹದ ಪರಿವೆ ಇಲ್ಲದಂತೆ ಗಡಗಡ ನಡುಗುತ್ತ ಮಲಗಿದ್ದಳು. ಆ ಚಿತ್ರ ಇನ್ನೂ ಮರೆಯಾಗಲೊಲ್ಲದು.
*****
ಮುಕ್ಕಾಲು ನಿಮಿಷದ ಆ ನಡುಗುವಿಕೆ ನನ್ನ ಮನಸ್ಸನ್ನೇ ನಡುಗಿಸಿಬಿಟ್ಟಿದೆ. ಕನ್ನಡದಲ್ಲಿ ಅದಕ್ಕೆ ಮೂರ್ಛೆರೋಗ ಅನ್ನುತ್ತಾರೆ. ಇಂಗ್ಲಿಷ್‌ನಲ್ಲಿ ಫಿಟ್ಸ್, ಸಿಝರ್, ಅಟ್ಯಾಕ್ ಎಂದೆಲ್ಲ ಹೇಳುತ್ತಾರೆ. ವಿಶಿಷ್ಟಚೇತನ ಮಕ್ಕಳಲ್ಲಿ ಫಿಟ್ಸ್ ಬರುವ ಸಾಧ್ಯತೆ ನೂರಕ್ಕೆ ನೂರರಷ್ಟಿದೆ. ಆದರೆ, ಗೌರಿಗೆ ಕಳೆದ ಏಳು ವರ್ಷಗಳಿಂದ ಒಮ್ಮೆಯೂ ಬಂದಿದ್ದಿಲ್ಲ. ಆಕೆಯನ್ನು ಅದೆಷ್ಟು ಜತನವಾಗಿ ನೋಡಿಕೊಳ್ಳುತ್ತಿದ್ದೇವೆಂದರೆ, ಬಹುಶಃ ಆಕೆಗೆ ಎಂದಿಗೂ ಬರಲಾರದು ಎಂದೇ ಭಾವಿಸಿದ್ದೆವು.
ಆದರೆ, ಆ ಗುರುವಾರದ ಬೆಳ್ಳಂಬೆಳಿಗ್ಗೆ ನಮ್ಮ ನಂಬಿಕೆ ಛಿದ್ರವಾಯಿತು.
ಅದುವರೆಗೆ ಯಾರಿಗೂ ಫಿಟ್ಸ್ ಬಂದಿದ್ದನ್ನು ನಾನು ಕಣ್ಣಾರೆ ನೋಡಿದ್ದಿಲ್ಲ. ಆಸ್ಪತ್ರೆಗೆ ಹೋಗುವವರೆಗೆ ಗೌರಿಗೆ ಬಂದಿದ್ದು ಫಿಟ್ಸ್ ಎಂಬುದೂ ನಮಗೆ ಗೊತ್ತಿರಲಿಲ್ಲ. ತಪಾಸಣೆ ನಡೆಸಿದ ಡಾ. ಶಿವಾನಂದ್, ಫಿಟ್ಸ್ ಎಂದು ದೃಢಪಡಿಸಿದರು. ದಿನಕ್ಕೆ ಮೂರು ಸಲದಂತೆ ಸದ್ಯ ಮೂರು ವರ್ಷ ಔಷಧಿ ಕೊಡಿ. ಆಕೆಯ ಮೆದುಳು ಸ್ಕ್ಯಾನ್ ಮಾಡಿಸಿದ ನಂತರ ಮತ್ತೆ ಬನ್ನಿ ಎಂದು ಹೇಳಿದರು. ಅತ್ಯಂತ ಭಾರವಾದ ಹೃದಯದೊಂದಿಗೆ ಗೌರಿಯನ್ನು ಆಟೊದಲ್ಲಿ ಕೂಡಿಸಿಕೊಂಡು, ಆಕೆಯ ಶಾಲೆಗೆ ಹೋದೆವು.
*****
ಅಷ್ಟೊತ್ತಿಗೆ ಶಾಲೆಯಲ್ಲಿ ವಿಷಯ ಗೊತ್ತಾಗಿತ್ತು. ನಡೆದ ಘಟನೆ ವಿವರಿಸುತ್ತಿದ್ದಂತೆ ರೇಖಾಗೆ ದುಃಖ ಉಮ್ಮಳಿಸಿ ಬಂತು.
(ಎರಡನೇ ಭಾಗದಲ್ಲಿ ಮುಕ್ತಾಯ)
- ಚಾಮರಾಜ ಸವಡಿ
ಸಾವೆಂಬ ಪರಮಮಿತ್ರ
10 Mar 2009
ನಾಳೆ ಬಪ್ಪುದು ನಮಗಿ೦ದೇ ಬರಲಿಇ೦ದು ಬಪ್ಪುದು ನಮಗೀಗಲೇ ಬರಲಿ
ಇದಕಾರ೦ಜುವರು? ಇದಕಾರಳುಕುವರು?
ಎ೦ದರು ಶರಣರು. ಅವರು ಹೇಳಿದ್ದು ಮರಣದ ಬಗ್ಗೆ. ಧರ್ಮರಾಜನನ್ನು ಯಕ್ಷ ಕೇಳಿದ ಪ್ರಶ್ನೆಗಳ ಪೈಕಿ ಒ೦ದು ಪ್ರಶ್ನೆ ಬದುಕಿನ ಈ ಅಚ್ಚರಿಯ ಬಗ್ಗೆ ನಮ್ಮ ಗಮನವನ್ನು ಸೆಳೆಯುತ್ತದೆ.
ಯಕ್ಷ ಕೇಳಿದನ೦ತೆ: "ಜಗತ್ತಿನಲ್ಲಿ ಆಶ್ಚರ್ಯಕರವಾದ ವಿಷಯ ಯಾವುದು?"
ಧರ್ಮರಾಜ ಉತ್ತರಿಸಿದ: "ಒ೦ದಲ್ಲ ಒ೦ದು ದಿನ ತಾವು ಸಾಯಲೇಬೇಕೆ೦ಬುದು ಮನುಷ್ಯರಿಗೆ ತಿಳಿದಿದ್ದರೂ ಕೂಡ, ತಾವು ಅಮರರೆ೦ಬ೦ತೆ ಅವರು ಜಗತ್ತಿನ ಜ೦ಜಡಗಳಿಗೆ ಬಲವಾಗಿ ಅ೦ಟಿಕೊ೦ಡಿರುತ್ತಾರಲ್ಲ, ಅದು ಅಚ್ಚರಿ ತರುವಂಥದು".
ಇದಕ್ಕಿ೦ತ ಆಶ್ಚರ್ಯಕರವಾದುದು ಏನಿದೆ? ನಾವೆಲ್ಲಾ ಒ೦ದು ದಿನ ಸಾಯಲೇಬೇಕು. ಅದು ನಮಗೆ ಖಚಿತವಾಗಿ ಗೊತ್ತಿದೆ. ಮನುಷ್ಯನಿಗೆ ಸಾವಿದೆ. ಆದರೆ ಆತನ ಆಸೆಗಳಿಗೆ ಮಾತ್ರ ಸಾವಿಲ್ಲ. ಚಟ್ಟದ ಪಟ್ಟ ಏರುವವರೆಗೂ ಮನುಷ್ಯ ಲೆಕ್ಕ ಹಾಕುತ್ತಲೇ ಇರುತ್ತಾನೆ. ಬಾಕಿ ಉಳಿದ ಕೆಲಸಗಳ ಬಗಗೆ ಯೋಚಿಸುತ್ತಾನೆ. ಊರಿಗೆ ಹೋಗಿ ವಾಪಾಸ್ ಬರುತ್ತಾನೇನೋ ಎ೦ಬ೦ತೆ ಪ್ರತಿಯೊ೦ದು ವಿಷಯದ ಬಗ್ಗೆಯೂ ಮನೆಯವರಿಗೆ ಹಾಗೂ ಹತ್ತಿರದವರಿಗೆ ವಿಷಯದ ಬಗ್ಗೆಯೂ ಮನೆಯವರಿಗಾಗಿ ಹಾಗೂ ಹತ್ತಿರದವರಿಗೆ ಸೂಚನೆ ಕೊಡುತ್ತಾನೆ. ಹತ್ತಿರದವರನ್ನು ಹಾಗೂ ಮನೆಯವರನ್ನು ಹತ್ತಿರ ಕರೆಸುತ್ತಾನೆ. ಅವರೆಲ್ಲಾ ಬ೦ದು ಆತನ ಸುತ್ತ ನೆರೆದಿರುವಾಗಲೂ ಕೂಡ ಸಾಯುವ ಮನುಷ್ಯ ಮಾತಾಡುವುದು ಪ್ರಾಪ೦ಚಿಕ ವಿಷಯಗಳ ಬಗ್ಗೆಯೇ ಹೊರತು ವೈರಾಗ್ಯದ ಬಗ್ಗೆಯಾಗಲೀ, ಈ ಪ್ರಪ೦ಚದ ಟೊಳ್ಳಿನ ಬಗ್ಗೆಯಾಗಲೀ ಅಲ್ಲ.
ಇದು ಆಶ್ಚರ್ಯದ ವಿಷಯವಲ್ಲದೇ ಮತ್ತೇನು? ಪ್ರತಿದಿನ, ಪ್ರತಿಕ್ಷಣ ನಾವು ನಮ್ಮದೇ ಆದ ಸೀಮಿತ ವಲಯದಲ್ಲಿ ಬದುಕುತ್ತಾ ಹೋಗುತ್ತೇವೆ. ಸಾಮಾನ್ಯ ಮನುಷ್ಯನದು ಸಣ್ಣ ವಲಯವಾಗಿದ್ದರೆ, ದೊಡ್ಡ ಮನುಷ್ಯನದು ದೊಡ್ಡ ವಲಯ ಅಷ್ಟೇ. ಆದರೆ ಇಬ್ಬರೂ ಬದುಕುವುದು ವಲಯದ ಒಳಗೇ. ಇಬ್ಬರೂ ಜಗತ್ತನ್ನು ಅಷ್ಟೇ ಗಾಢವಾಗಿ ಅಪ್ಪಿಕೊ೦ಡಿರುತ್ತಾರೆ. ಇಬ್ಬರ ತುಡಿತಗಳೂ ಒ೦ದೇ. ಇಬ್ಬರ ಆಸೆಗಳೂ ಒ೦ದೇ. ಜೀವನಪರ್ಯ೦ತ ಇ೦ಥದೊ೦ದು ವಲಯದಲ್ಲಿ ಬದುಕಿದ ಮನುಷ್ಯ, ಸಾಯುವ ಕ್ಷಣದಲ್ಲಿ ಅದ್ಹೇಗೆ ಬದಲಾಗಲು ಸಾಧ್ಯ?
ಮನುಷ್ಯ, ಆತನ ಸಣ್ಣ ಸಣ್ಣ ಸ್ವಾರ್ಥಗಳು, ಸಾಯುತ್ತಿದ್ದರೂ ಕೂಡ ಸಣ್ಣತನವನ್ನು ಗಟ್ಟಿಯಾಗಿ ಅಪ್ಪಿಕೊ೦ಡಿರುವುದು, ಇನ್ನೊಬ್ಬರ ಗ೦ಟನ್ನು ಎತ್ತಿ ಹಾಕಲು ಪ್ರಯತ್ನಿಸುವುದು, ಯಾವುದಾದರೂ ವಿಧಾನದಿ೦ದ ಎದುರಾಳಿಯನ್ನು ಬಗ್ಗು ಬಡಿಯಲು ಪ್ರಯತ್ನಿಸುವುದು, ಹಾಗೆ ಪ್ರಯತ್ನಿಸುತ್ತಾ ತಾನೇ ಮುಗ್ಗಲಾಗಿ ಹೋಗುವುದು, ನಾಶವಾಗುತ್ತೇನೆ ಎ೦ಬುದು ಗೊತ್ತಿದ್ದರೂ ಮನಸ್ಸಿನೊಳಗೆ ಕೊ೦ಚ ಒಳ್ಳೆಯತನವನ್ನು ಬೆಳಸಿಕೊಳ್ಳದಿರುವುದು ಆಶ್ಚರ್ಯ ಹುಟ್ಟಿಸುತ್ತದೆ.
ಏಕೆ೦ದರೆ ನಾವೆಲ್ಲಾ ಈ ಭೂಮಿಗೆ ಬಟ್ಟ ಬೆತ್ತಲೆಯಾಗಿ ಬ೦ದಿರುತ್ತೇವೆ. ವಾಪಾಸ್ ಹೋಗುವಾಗ ನಾವು ಇಷ್ಟೊ೦ದು ಪ್ರೀತಿಸುವ ಶರೀರವೇ ನಮ್ಮ ಜೊತೆಗೆ ಬರುವುದಿಲ್ಲ. ಇನ್ನು ಬ೦ಧು - ಮಿತ್ರರು, ನಾವು ಗಳಿಸಿದ ಸ೦ಪತ್ತು, ಅಧಿಕಾರ, ಕೀರ್ತಿ ಹಾಗೂ ಸಾಧನೆಗಳು ಜೊತೆಗೆ ಬರುವ ಮಾತು ದೂರವೇ ಉಳಿಯಿತು. ಒ೦ದು ದಿನ ಹೇಳಹೆಸರಿಲ್ಲದ೦ತೆ ಹೋಗುತ್ತೇವೆ ಎ೦ಬುದು ಗೊತ್ತಿದ್ದರೂ ಕೂಡ ನಾವು ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಕೊನೆಗೆ ಸಾಯುವ ಕ್ಷಣ ಹತ್ತಿರ ಬ೦ದಾಗ ಕೂಡ ನಮ್ಮಲ್ಲಿ ನಿಜವಾದ ವೈರಾಗ್ಯ ಹುಟ್ಟುವುದಿಲ್ಲ. "ಏನಾದರೂ ಪವಾಡ ಸ೦ಭವಿಸಿ, ನಾನು ಇನ್ನೊ೦ದಿಷ್ಟು ದಿನ ಹೆಚ್ಚಿಗೆ ಬದುಕಲು ಸಾಧ್ಯವಿದ್ದರೆ....?" ಎ೦ದು ಕನಸು ಕಾಣುತ್ತೇವೆ. ಕೊನೆಗೊಮ್ಮೆ ಆ ಕನಸಿನ ನಡುವೆಯೇ ಸತ್ತು ಹೋಗುತ್ತೇವೆ.
ಸಾವು ನಮ್ಮ ಇ೦ದ್ರಿಯಗಳ ವ್ಯಾಪ್ತಿಯನ್ನು ಮೀರಿದ್ದು. ನಮ್ಮ ಪ್ರಜ್ನೆಗೆ ತಾಕುವ ಪ್ರತಿಯೊ೦ದು ವಸ್ತು, ವಿಷಯ, ಘಟನೆ ರೂಪಾ೦ತರ ಹೊ೦ದುತ್ತವೆ. ಮೊಗ್ಗು ಹೂವಾಗುತ್ತದೆ, ಕಾಯಾಗುತ್ತದೆ, ಹಣ್ಣಾಗುತ್ತದೆ, ಬಿದ್ದು ಸತ್ತು ಹೋಗುತ್ತದೆ. ಮತ್ತೆ ಬೀಜ ಚಿಗುರಿ, ಬೆಳೆದು, ಮೊಗ್ಗು, ಹೂವು, ಹಣ್ಣು..... ಎ೦ದು ಚಕ್ರ ಸುತ್ತತೊಡಗುತ್ತದೆ. ಸಾವು ಅ೦ಥ ಒ೦ದು ರೂಪಾ೦ತರ. ಅದು ಒ೦ದರ ಕೊನೆ, ಇನ್ನೊ೦ದರ ನಾ೦ದಿ. ಸಾವಿನ ಬಗ್ಗೆ ಅವಶ್ಯಕ ಭಯ ಬೇಡ. ಅದು ಬದುಕಿನ ಎಲ್ಲಾ ತೊ೦ದರೆಗಳಿಗೆ ಮುಕ್ತಾಯ ಹಾಡುತ್ತದೆ. ಹುಟ್ಟಿನಷ್ಟೇ ಸಾವು ಕೂಡ ಅನಿವಾರ್ಯ. ಅದನ್ನು ತಡೆಗಟ್ಟುವ ಯಾವ ಪ್ರಯತ್ನಗಳೂ ಯಶಸ್ವಿಯಾಗುವುದಿಲ್ಲ. ಹೆಚ್ಚೆ೦ದರೆ ಸಾವನ್ನು ಕೊ೦ಚ ಮು೦ದೂಡಬಹುದು ಅಷ್ಟೇ. ಹೀಗಾಗಿ ಸತ್ತೇ ಹೋಗುತ್ತೇವೆ ಎ೦ದು ಆತುರಾತುರವಾಗಿ ಇನ್ನಷ್ಟು ಕೆಟ್ಟ ಕೆಲಸಗಳನ್ನು ಮಾಡುವುದು ಬೇಡ. ಅದೇ ರೀತಿ ಗಾಬರಿಯಿ೦ದ ಫಕ್ಕನೇ ಸತ್ತು ಹೋಗುವುದೂ ಬೇಡ.
ಸಾವು ಬರುವ ಸಮಯದಲ್ಲಿ ಬರುತ್ತದೆ. ಅದು ನಮ್ಮ ಹತೋಟಿಯಲ್ಲಿ ಇಲ್ಲವಾದ ಕಾರಣ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ. ಅದು ಬರುವಾಗ ಬರಲಿ ಬಿಡಿ. ಅಲ್ಲಿಯವರೆಗೆ ನಾವು ನಿಶ್ಚಿ೦ತರಾಗಿ ನಮ್ಮ ನಮ್ಮ ಕೆಲಸ ಮಾಡೋಣ. ಸಾಯುವುದು ಖಚಿತವಾಗಿರುವುದರಿ೦ದ ಬದುಕಿರುವ ತನಕ ನೆಮ್ಮದಿಯಿ೦ದ ಬದುಕೋಣ. ಇತರರನ್ನು ಪೀಡಿಸಿ, ಅವರ ದುಡಿಮೆಯ ಫಲವನ್ನು ಕಿತ್ತುಕೊ೦ಡು, ಅವರ ಕಣ್ಣೀರಿನಲ್ಲಿ ನಮ್ಮ ಸುಖ ಕಾಣುವುದು ಬೇಡ. ನಮ್ಮದಲ್ಲದ ಫಲ ನಮಗೆ ದಕ್ಕುವುದಿಲ್ಲ.
ಇದನ್ನೆಲ್ಲ ಓದುತ್ತಿದ್ದ೦ತೆ ಏನೋ ವೇದಾ೦ತ ಬರೆಯುತ್ತಿದ್ದಾನಲ್ಲ? ಎ೦ಬ ಅಭಿಪ್ರಾಯ ನಿಮ್ಮಲ್ಲಿ ಮೂಡಬಹುದು. ಸಾವಿನ ವಿಷಯ, ನಿಸ್ವಾರ್ಥ ಜೀವನದ ವಿಷಯ, ಜೀವನದಲ್ಲಿ ಒ೦ದಷ್ಟು ಶಿಸ್ತು ಹಾಗೂ ಗುರಿಗಳನ್ನು ಇಟ್ಟುಕೊಳ್ಳುವ ವಿಷಯ ವೇದಾ೦ತವಾಗಬೇಕಿಲ್ಲ. ಅದು ಜೀವನದ ಒ೦ದು ಅ೦ಶ. ನಾವು ಅನುಭವಿಸಲೇಬೇಕಾದ ಹ೦ತ. ನಾವೆಲ್ಲಾ ಈ ಹ೦ತಗಳನ್ನು ದಾಟಲೇ ಬೇಕು. ಬೇರೆ ದಾರಿಯೇ ಇಲ್ಲ. ನಾವು ಏನೇ ಮೆರೆದಾಡಲಿ, ಉರಿದಾಡಲಿ, ಹೊಡೆದಾಡಲಿ - ಕೊನೆಗೊ೦ದು ದಿನ ಎಲ್ಲವನ್ನೂ ಇಲ್ಲೇ ಬಿಟ್ಟು ಹೋಗಬೇಕು. ನಮ್ಮ ಸಣ್ಣತನ, ಸ್ವಾರ್ಥ, ನೀಚತನ, ಜಗಳಗ೦ಟತನ, ಒಳ್ಳೆಯತನ, ಔದಾರ್ಯ, ಸಹಿಷ್ಣುತೆ - ಎಲ್ಲವೂ ಕೊನೆಗೊ೦ದು ದಿನ ಮಣ್ಣಾಗಲೇ ಬೇಕು. ಪರಮ ಪವಿತ್ರನ೦ತೆ ಪರಮ ಪಾಪಿ ಕೂಡ ಸಾಯುತ್ತಾನೆ. ಅದು ಪ್ರಕೃತಿಯ ನಿಯಮ.
ಅ೦ಥ ಅಮೂಲ್ಯ ಹ೦ತವಾದ ಸಾವನ್ನು ನಾವೇಕೆ ಭೀತಿಯಿ೦ದ ನೆನಪಿಸಿಕೊಳ್ಳುತ್ತೇವೆ? ಸತ್ತ ವ್ಯಕ್ತಿ ನಿಜಕ್ಕೂ ಸುಖಿ. ಏಕೆ೦ದರೆ ಆತ ಎಲ್ಲಾ ನೋವುಗಳಿ೦ದ ಹಾಗೂ ಜ೦ಜಡಗಳಿ೦ದ ಮುಕ್ತನಾಗಿರುತ್ತಾನೆ. ಆತನಿಗಿ೦ತ ತೃಪ್ತರು ಯಾರೂ ಇರುವುದಿಲ್ಲ. ಹಾಗಿದ್ದರೂ ಸಹ ನಾವು ಸಾವಿಗೆ ಭಯಪಡುತ್ತೇವೆ. ಅದರ ಬಗ್ಗೆ ಮಾತನಾಡುವುದಕ್ಕೂ ಅಳುಕುತ್ತೇವೆ. ಸಾಯುವುದು ಖಚಿತ ಅ೦ತ ಗೊತ್ತಿದ್ದರೂ ಇನ್ನಷ್ಟು ದಿನಗಳ ಕಾಲ ಬದುಕಲು, ದುಡಿಯಲು, ಸುಖ ಸ೦ಪತ್ತು ಅನುಭವಿಸಲು ಆಸೆ ಪಡುತ್ತೇವೆ. ಸಾಯುವ ಕ್ಷಣಗಳು ಹತ್ತಿರವಾದಾಗ ಕೂಡ ಜನರ ಮನಸ್ಸಿನಲ್ಲಿ ಬದುಕಬೇಕೆನ್ನುವ ಆಸೆ ಸಾಯುವುದಿಲ್ಲ. ವಿರಕ್ತಿ ಹುಟ್ಟುವುದಿಲ್ಲ. ಆತ ತನ್ನ ಕನಸುಗಳ ಲೋಕದಲ್ಲೇ ಮುಳುಗಿರುತ್ತಾನೆ. ಧರ್ಮರಾಜ ಆಶ್ಚರ್ಯ ಪಡುವುದು ಈ ವಿಷಯಕ್ಕೇ.
ತಾವೆಲ್ಲ ಒ೦ದಲ್ಲ ಒ೦ದು ದಿನ ಸಾಯುವುದು ಗೊತ್ತಿದ್ದರೂ ಕೂಡ ಜನ ಅದೇಕೆ ಮೋಹದಲ್ಲಿ ಮುಳುಗಿರುತ್ತಾರೋ? ಯಾವುದನ್ನೂ ಜೊತೆಗೆ ಒಯ್ಯುವುದು ಸಾಧ್ಯವಿಲ್ಲ ಎನ್ನುವುದು ಗೊತ್ತಿದ್ದರೂ ಕೂಡ ನಾವು ಅವರಿವರಿ೦ದ ಕಿತ್ತುಕೊ೦ಡು ಎಷ್ಟೊ೦ದು ಸ೦ಪತ್ತನ್ನು ಗಳಿಸಿರುತ್ತೇವೆ!! ನಮ್ಮ ಜೀವನದ ಅರ್ಧ ಕಾಲ ಗಳಿಸಲು ಹಾಗೂ ಇನ್ನರ್ಧ ಕಾಲ ಗಳಿಸಿದ್ದನ್ನು ಉಳಿಸಲು ಕಳೆದು ಹೋಗುತ್ತದೆ. ಈ ಜ೦ಜಡದ ನಡುವೆ ಬದುಕಿನ ಮೂಲ ಸೂತ್ರ, ವಿರಕ್ತಿ, ವೈರಾಗ್ಯ, ಯಾರಿಗೆ ತಾನೇ ನೆನಪಾಗುತ್ತದೆ? ನಾವು ಕೊ೦ಚ ಕಡಿಮೆ ಸ್ವಾರ್ಥಿಗಳಾದರೆ ಈ ಜಗತ್ತು ಈಗಿರುವುದಕ್ಕಿ೦ತ ಹೆಚ್ಚು ಸು೦ದರವಾಗುತ್ತದೆ ಅಂತ ಎಷ್ಟೋ ಸಾರಿ ಅನ್ನಿಸಿದೆ.
ನಿನ್ನೆಯ ಅನುಭವ ಇವತ್ತಿನ ಬದುಕಿಗೆ ಪಾಠವಾಗಬೇಕು. ಆಗ ನಾಳೆಯ ಬದುಕು ತನ್ನಿ೦ತಾನೇ ಸುಲಭವಾಗುವುದು. ಇದನ್ನು ಅರ್ಥಮಾಡಿಕೊಳ್ಳದೇ ನಾವು ಎಲ್ಲರ ತಲೆ ಒಡೆದು ಸ೦ಪತ್ತು ಗಳಿಸುತ್ತೇವೆ. ನ೦ತರ ಅದನ್ನು ಅನುಭವಿಸುವುದನ್ನು ಬಿಟ್ಟು ಕಾವಲುಗಾರನ೦ತೆ ಕಾಯುತ್ತಾ ಬದುಕು ಕಳೆಯುತ್ತೇವೆ. ಯಾವ ಒಳ್ಳೆಯ ಉದ್ದೇಶಗಳಿಗೂ ಕೈಯೆತ್ತಿ ಕೊಡದೇ, ಗಳಿಸಿದ ದುಡ್ಡನ್ನು ಪಾಪಿ ಸ೦ತಾನದ ಕೈಗೆ ಕೊಟ್ಟು ಕಣ್ಣು ಮುಚ್ಚುತ್ತೇವೆ. ಪಾಪ ಪ್ರಜ್ಞೆ ಅತಿಯಾಗಿ ಕಾಡಿದಾಗ ಗುಡಿ ಗು೦ಡಾರಗಳಿಗೆ, ಕಾವಿಧಾರಿಗಳಿಗೆ ದೇಣಿಗೆ ಕೊಟ್ಟು ಪುಣ್ಯ ಬ೦ತು ಎ೦ದುಕೊಳ್ಳುತ್ತೇವೆ. ಅಷ್ಟೇಕೆ ಸುಮ್ಮನಿರದೇ ನಾವು ದೇಣಿಗೆ ಕೊಟ್ಟಿದ್ದೂ ಜಗತ್ತಿಗೆಲ್ಲ ಗೊತ್ತಾಗಲಿ ಎ೦ದು ಹೆಸರನ್ನು ಬರೆಯಿಸಿಕೊಳ್ಳುತ್ತೇವೆ. ಸತ್ತ ನ೦ತರ ಹೋಗುವ ಜಗತ್ತಿನಲ್ಲಿ ಒ೦ದು ಸೀಟನ್ನು ಕಾಯ್ದಿರಿಸಿದ೦ತಾಯಿತು ಎ೦ದು ಸ೦ಭ್ರಮ ಪಟ್ಟುಕೊಳ್ಳುತ್ತೇವೆ.
ಆದರೆ, ಹುಟ್ಟುವ ಮೊದಲಿನ ಹಾಗೂ ಸತ್ತ ನ೦ತರ ಜಗತ್ತನ್ನು ಕ೦ಡವರು ಯಾರು? ಆದರೂ ನಾವು ಎಲ್ಲವನ್ನೂ ಕ೦ಡವರ೦ತೆ ನಮ್ಮ ಭ್ರಮೆಯಲ್ಲಿ ಬದುಕಿ ಭ್ರಮೆಯಲ್ಲೇ ಸತ್ತು ಹೋಗುತ್ತೇವೆ. ಅಳಿದು ಹೋಗುವ ಮುನ್ನ ಸುಂದರವಾದ ನೆನಪನ್ನು ಉಳಿಸುವಂತೆ ಬದುಕುವುದನ್ನೇ ಮರೆತಿರುತ್ತೇವೆ.
ಧರ್ಮರಾಜ ಅಚ್ಚರಿಪಟ್ಟುದರಲ್ಲಿ ಆಶ್ಚರ್ಯವೇನೂ ಇಲ್ಲ.
- ಚಾಮರಾಜ ಸವಡಿ
ಮರೆತೇನೆಂದರೆ ಮರೆಯಲಿ ಹ್ಯಾಂಗ...?
22 Feb 2009
’ಬಿಸಿಲು ಬಲಿಯುತ್ತಿದೆ’ ಹಾಗಂದುಕೊಂಡೇ ಪ್ರತಿ ದಿನ ಮಧ್ಯಾಹ್ನದ ಹೊತ್ತು ಸ್ಕೂಟಿ ಏರುತ್ತೇನೆ. ಮಗಳನ್ನು ಶಾಲೆಯಿಂದ ಕರೆ ತಂದಾಗಿರುತ್ತದೆ. ಲಘು ಊಟವೂ ಮುಗಿದಿರುತ್ತದೆ. ಸುದ್ದಿ ವಿಷಯಕ್ಕೆ ಸಂಬಂಧಿಸಿದಂತೆ ಇವತ್ತು ಅಂತಹ ಬೆಳವಣಿಗೆಗಳೇನೂ ಆಗಿಲ್ಲ ಅಂತ ಅಂದುಕೊಳ್ಳುತ್ತ ಸ್ಕೂಟಿ ಚಲಿಸುವಾಗ, ಬಿಸಿ ಗಾಳಿ ಮುಖಕ್ಕೆ ರಾಚುತ್ತದೆ.
ಹೌದು, ಬಿಸಿಲು ಬಲಿಯುತ್ತಿದೆ.
ಚಂದ್ರಾ ಲೇಔಟ್‌ನ ಎಲ್ಲೆಡೆ ಸಿಮೆಂಟ್, ಡಾಂಬರಿನದೇ ಕಾರುಬಾರು. ಬಿದ್ದ ಬಿಸಿಲನ್ನು ಹೀರಿಕೊಳ್ಳುವ ಮಣ್ಣಾಗಲಿ, ಹಸಿರಾಗಲಿ ಕಡಿಮೆ. ಬೆಳಿಗ್ಗೆ ಎಂಟು ಗಂಟೆಗೆಲ್ಲಾ ತಾರಸಿ ಏರಿ ನೋಡಿದರೆ, ಬಿಸಿಲಲ್ಲಿ ಫಡಫಡಿಸುವ ಕಟ್ಟಡಗಳೇ ಎಲ್ಲೆಡೆ ಕಣ್ಣಿಗೆ ಬೀಳುತ್ತವೆ. ಮಧ್ಯಾಹ್ನದ ಹೊತ್ತು ಹದವಾದ ಬಿಸಿ ಗಾಳಿ ತುಂಬಿಕೊಂಡು ರಸ್ತೆಗಳು ಮಂಕು ಮಂಕು. ಜೋರು ಊಟವಾದರೆ, ಸೀದಾ ಮಂಪರು ಪರೀಕ್ಷೆಗೆ ಸಿದ್ಧವಾದ ಆರೋಪಿಯಂತಾಗಿಬಿಡುವ ಭಯ. ಹೀಗಾಗಿ, ಲಘು ಭೋಜನ. ಆದರೂ, ಬಿಸಿ ಗಾಳಿಗೆ ಮನಸ್ಸು ಅಂಗಾತ ಮಲಗಿ ನಿದ್ರಿಸಲು ಚಡಪಡಿಸುತ್ತಿರುತ್ತದೆ.
ಮುಖ್ಯ ರಸ್ತೆ ಬರುವವರೆಗೆ ಸ್ಕೂಟಿಗೂ ಒಂಥರಾ ಮಂಕು. ಆದರೆ, ಜೋರು ಟ್ರಾಫಿಕ್ ನೋಡುತ್ತಲೇ ನಿದ್ದೆ ಹಾರಿಹೋಗಿ ಮನಸ್ಸು ಸ್ವಸ್ಥವಾಗುತ್ತದೆ. ರಸ್ತೆಯ ಏರಿಳಿತಗಳೊಂದಿಗೆ ಏರಿಳಿಯುತ್ತ, ಟ್ರಾಫಿಕ್ಕನ್ನು ಹುಷಾರಾಗಿ ನಿಭಾಯಿಸುತ್ತ ರೈಲ್ವೇ ಸಮಾನಾಂತರ ರಸ್ತೆಗೆ ಬರುವ ಹೊತ್ತಿಗೆ, ಅವತ್ತು ಮಾಡಬೇಕಾದ ಕೆಲಸಗಳ ಪಟ್ಟಿ ಮನಸ್ಸಿನ ತುಂಬ. ದಾರಿಯಲ್ಲಿ ಸಿಗುವ ಒಂದೆರಡು ಶಾಲೆಗಳ ಚಿಣ್ಣರನ್ನು ನೋಡುತ್ತ, ಮುದಗೊಳ್ಳುತ್ತ, ದಾರಿ ಸಾಗುವಾಗ, ಅರೆರೆ, ಆ ಮುದುಕ ನಮ್ಮೂರಿನವಂತೆ ಕಾಣುತ್ತಾನಲ್ಲ ಎಂದು ಫಕ್ಕನೇ ಅನಿಸಿಬಿಡುತ್ತದೆ.
ಆತ ನಮ್ಮೂರಿನವನಲ್ಲ ಎಂಬುದು ನನಗೆ ಚೆನ್ನಾಗಿ ಗೊತ್ತು. ಆದರೆ, ಊರ ನೆನಪಾಗಲು ಆ ಮುದುಕ ಒಂದು ನೆವ.
ಏಕೆ ಹೀಗನಿಸುತ್ತದೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ ಹೈಸ್ಕೂಲಿನ ತರಗತಿ ನೆನಪಾಗುತ್ತದೆ. ಶಾಲೆ ಮುಗಿಸಿ ಮನೆಗೆ ಬರುವಾಗಿನ ಓಣಿಯ ವಿವರಗಳು ಕಣ್ಮುಂದೆ ನಿಲ್ಲುತ್ತವೆ. ಯಾವುದೋ ದುಃಖಿ ನೆನಪುಗಳು, ಒಂಟಿತನ ಕಾಡಿದ ಕ್ಷಣಗಳು ಕಾಡತೊಡಗುತ್ತವೆ. ತಲೆ ಕೊಡವಿ ಮತ್ತೆ ರಸ್ತೆಯ ಕಡೆ ಗಮನ ಹರಿಸಿದರೂ, ಕಾಲಡಿ ಸುತ್ತುವ ಸಾಕಿದ ಬೆಕ್ಕಿನಂತೆ ನೆನಪುಗಳು ಅಲ್ಲೇ ಓಡಾಡುತ್ತಿರುತ್ತವೆ. ಅಂದಿನ ದಿನಗಳ ನಾನು, ಇಂದಿನ ಬದುಕಿನೊಂದಿಗೆ ಅವನ್ನು ಅನುಭವಿಸಬೇಕಾದ ರೀತಿಯೇ ವಿಚಿತ್ರ.
ದಾರಿಯುದ್ದಕ್ಕೂ ಇಂಥವೇ ನೆನಪುಗಳು. ರಸ್ತೆಯ ಕಡೆ ಎಷ್ಟೇ ಗಮನ ಕೊಟ್ಟರೂ, ಮನಸ್ಸಿನಲ್ಲಿ ನೆನಪುಗಳ ಕಲರವ ನಿಲ್ಲುವುದಿಲ್ಲ.
ಹಳೆ ಗುಡ್ಡದಹಳ್ಳಿಯ ಅಡ್ಡಮಾರ್ಗ ದಾಟಿಕೊಂಡು ಬಾಲಗಂಗಾಧರನಾಥ ಸ್ವಾಮೀಜಿ ಹೆಸರಿನ ಮೇಲ್ಸೇತುವೆ ಏರುವಾಗಲೂ ನಾನು ಹಳೆಯ ದಿನಗಳ ಗುಂಗಿನಲ್ಲೇ ಇರುತ್ತೇನೆ. ಮಾಡಬೇಕಾದ ಕೆಲಸಗಳ ಪಟ್ಟಿಯನ್ನು ಪದೆ ಪದೆ ನೆನಪಿಸಿಕೊಂಡರೂ, ಅದರ ಸಂದಿಯಲ್ಲಿ ತೂರಿ ನೆನಪುಗಳು ನುಗ್ಗುತ್ತವೆ. ಗಾಡಿ ಓಡಿಸುವಾಗ, ತೀರ ಗಂಭೀರವಾದ ಏನನ್ನೂ ಯೋಚಿಸುವುದಿಲ್ಲ. ಹಾಗಿದ್ದರೂ, ಆ ನಿಯಮ ದಾಟಿಕೊಂಡು ನೆನಪುಗಳು ನುಗ್ಗುತ್ತವೆ. ಹಿಂದಿನ ದಿನಗಳಿಗೆ ಕರೆದೊಯ್ಯುತ್ತವೆ.
ಮೇಲ್ಸೇತುವೆ ಇಳಿದು, ಮಾರುಕಟ್ಟೆಯ ಪಕ್ಕದ ಎಸ್‌ಪಿ ರಸ್ತೆಯ ಜಂಗುಳಿಯಲ್ಲಿ ತೂರಿಕೊಂಡು, ಹುಷಾರಾಗಿ ಹೊರಟು ಕಬ್ಬನ್ ಪಾರ್ಕ್ ಒಳಗಿನ ರಸ್ತೆ ಸೇರುವ ಹೊತ್ತಿಗೆ ಮನಸ್ಸು ಒಂಥರಾ ದಣಿದಿರುತ್ತದೆ. ಪಾರ್ಕ್‌ನ ತಾಜಾ ಗಾಳಿಗೆ ಮುಖವೊಡ್ಡಿ, ಎದೆಯ ತುಂಬ ಅದನ್ನು ಹೀರಿಕೊಳ್ಳುವ ಹೊತ್ತಿಗೆ ವಿಧಾನಸೌಧದ ಮುಂದಿನ ರಸ್ತೆಯಲ್ಲಿರುತ್ತೇನೆ. ಮತ್ತೆ ವಾಹನಗಳ ಭರಾಟೆ. ಇನ್‌ಫ್ಯಾಂಟ್ರಿ ರಸ್ತೆಯ ಜಂಗುಳಿ ದಾಟಿ ಕಚೇರಿಯ ಪಾರ್ಕಿಂಗ್‌ನಲ್ಲಿ ವಾಹನ ನಿಲ್ಲಿಸುವ ಹೊತ್ತಿಗೆ ಹೈಸ್ಕೂಲ್‌ನಿಂದ ವೃತ್ತಿಯ ಈ ಹಂತದವರೆಗಿನ ಪಯಣವನ್ನು ಅರ್ಧ ಗಂಟೆಯೊಳಗೆ ಮುಗಿಸಿದ ದಣಿವು.
ಅದೇ ಮೊದಲ ಬಾರಿ ಎಂಬಂತೆ ಕಚೇರಿ ಪ್ರವೇಶಿಸುತ್ತೇನೆ. ಸಹೋದ್ಯೋಗಿಗಳಿಗೆ ವಿಶ್ ಮಾಡುತ್ತ ನನ್ನ ಸ್ಥಾನಕ್ಕೆ ಬಂದು ಕೂಡುತ್ತೇನೆ. ಎದುರಿಗೆ ಕೂತಿರುವ ಕಂಪ್ಯೂಟರ್ ಪರದೆ ಬಾಲ್ಯದ ಚಿತ್ರ ಸಂಪುಟದಂತೆ ಕಾಣುತ್ತದೆ. ಸುದ್ದಿ ವಿಭಾಗದ ತಾಣಗಳನ್ನು ಒಂದೊಂದಾಗಿ ತೆರೆಯುತ್ತ, ನೆನಪುಗಳನ್ನು ಒಂದೊಂದಾಗಿ ಕಳಚುತ್ತ ನನ್ನ ಕೆಲಸದಲ್ಲಿ ಮುಳುಗುತ್ತೇನೆ. ಬ್ರೆಕಿಂಗ್ ನ್ಯೂಸ್‌ಗಳು, ಅಪ್‌ಡೇಟ್‌ಗಳು, ಪ್ಯಾಕೇಜ್‌ಗಳು ಒಂದಾದ ನಂತರ ಒಂದರಂತೆ ರಾಚತೊಡಗಿದಾಗ, ನಿರ್ಲಕ್ಷ್ಯಿಸಲ್ಪಟ್ಟ ಮಗುವಿನಂತೆ ನೆನಪುಗಳು ಮುರುಟಿಕೊಳ್ಳುತ್ತ ಹೋಗುತ್ತವೆ.
ಭೂತಕಾಲದಲ್ಲಿ ಬದುಕಬಾರದು ಎಂದು ಎಲ್ಲಿಯೋ ಓದಿದ್ದು ನೆನಪಾಗಿ ನಗು ಬರುತ್ತದೆ. ಬೇರುಗಳಿಲ್ಲದೇ ಮರವುಂಟೆ? ಭೂತಕಾಲವಿಲ್ಲದೇ ವರ್ತಮಾನವೂ ಇಲ್ಲ, ಭವಿಷತ್ತೂ ಇಲ್ಲ. ಬೇರುಗಳಂತೆ ಹಳೆಯ ದಿನಗಳ ನೆನಪುಗಳು, ಕನಸುಗಳು, ಕನವರಿಕೆಗಳು, ನೋವು-ನಲಿವುಗಳು ವರ್ತಮಾನಕ್ಕೆ ತಲುಪುತ್ತಲೇ ಇರುತ್ತವೆ. ಅವುಗಳನ್ನು ಜೀರ್ಣಿಸಿಕೊಂಡೇ ಬದುಕಬೇಕು. ಅವುಗಳನ್ನು ಹಳೆ ಫೊಟೊಗಳಿರುವ ಆಲ್ಬಮ್ಮಿನಂತೆ ಇಟ್ಟುಕೊಂಡು ಹೊಸ ಫೊಟೊಕ್ಕೆ ಮುಗುಳ್ನಗಬೇಕು.
ಹಾಗಂದುಕೊಂಡು, ಕೆಲಸದಲ್ಲಿ ಮಗ್ನನಾಗುತ್ತೇನೆ.
- ಚಾಮರಾಜ ಸವಡಿ
ಬದುಕೇ, ನಿನಗೊಂದು ಥ್ಯಾಂಕ್ಸ್
8 Oct 2008
ರೇಖಾ ಬೈಯುತ್ತಾಳೆ. ಯಾಕೆ ಇಷ್ಟೊಂದು ಕಟ್ಟು ಮಾಡಿಕೊಳ್ಳುತ್ತೀರಿ? ಒಂದಿಷ್ಟು ಶಿಸ್ತು ತಪ್ಪಿದರೆ ಏನು ಮಹಾ ಆಗುತ್ತದೆ? ಎನ್ನುತ್ತಾಳೆ.
ಆದರೆ, ಆಕೆ ಕೂಡ ಅಂಥದೊಂದು ಕಟ್ಟುಪಾಡನ್ನು ರೂಢಿಸಿಕೊಂಡಿದ್ದಾಳೆ. ಬಹುಶಃ ನಮ್ಮಿಬ್ಬರ ಮನಸ್ಸಿನೊಳಗೆ ಅಂಥದೊಂದು ಶಿಸ್ತು ಇಳಿದುಬಿಟ್ಟಿದೆ.
ಅದು ಅನಿವಾರ್ಯವೂ ಹೌದು. ನಾವು ಕಾಯಿಲೆ ಬೀಳಲಾರೆವು. ಅಂದರೆ, ಕಾಯಿಲೆ ಬೀಳುವಂತಿಲ್ಲ. ನೌಕರಿಯ ಹಂಗಿಗೆ ಸಿಲುಕಿ, ಊರು ತೊರೆದು ಬಂದಾಗಿನಿಂದ ಇಂಥದೊಂದು ಕಟ್ಟುಪಾಡು ನಮಗೆ ಸಹಜ ದಿನಚರಿಯಾಗಿದೆ. ಹಾಗಂತ, ಮುಂಚೆ ತೀರಾ ಅಶಿಸ್ತಿನಿಂದ ಇದ್ದೆವೆಂದೇನೂ ಅರ್ಥವಲ್ಲ. ಆದರೆ, ಗೌರಿ ಹುಟ್ಟಿದ ನಂತರ ಅಂಥದೊಂದು ಶಿಸ್ತು ಸಹಜವಾಗಿ ಬಂದಿದೆ.
ಏಕೆಂದರೆ, ನಾನು ಕಾಯಿಲೆ ಬಿದ್ದರೆ, ಕೆಲಸಕ್ಕೆ ಹೋಗಲು ಆಗುವುದಿಲ್ಲ. ನನ್ನ ನಿತ್ಯದ ಚಟುವಟಿಕೆಗಳು ಮೂಲೆ ಹಿಡಿಯುತ್ತವೆ. ಕಾಯಿಲೆ ಬಿದ್ದರೂ ಡಾಕ್ಟರ್ ಹತ್ತಿರ ನಾನೇ ಹೋಗಬೇಕು. ಏಕೆಂದರೆ, ಮಗುವನ್ನು ಕರೆದುಕೊಂಡು, ಕಾಯಿಲೆ ಬಿದ್ದ ನನ್ನನ್ನೂ ಸಂಭಾಳಿಸಲು ಆಕೆಗೆ ಕಷ್ಟ. ಎರಡನೇ ಮಗು ಹುಟ್ಟಿದ ನಂತರ, ಮನೆಯೇ ಆಕೆಯ ಕಾರ್ಯಕ್ಷೇತ್ರವಾಗಿದೆ. ಹೋದರೆ ಎಲ್ಲರೂ ಒಟ್ಟಿಗೇ ಹೋಗಬೇಕು. ಇಲ್ಲದಿದ್ದರೆ ನಾನೊಬ್ಬನೇ ಹೋಗಬೇಕು. ಅದರಲ್ಲೂ ಗೌರಿಯನ್ನು ಬಿಟ್ಟು ಹೋಗಲು ಆಗದು.
ಏಕೆಂದರೆ, ಗೌರಿ ವಿಶಿಷ್ಟಚೇತನ ಮಗು. ಆಕೆಯ ಬುದ್ಧಿ ಬೆಳವಣಿಗೆ ತೀರಾ ನಿಧಾನ.
ಬಹುಶಃ ಇದು ವಿಶಿಷ್ಟಚೇತನ ಮಕ್ಕಳನ್ನು ಹೊಂದಿದ ಎಲ್ಲಾ ಕುಟುಂಬಗಳ ದಿನಚರಿ ಎಂದು ನಾನು ಅಂದುಕೊಂಡಿದ್ದೇನೆ. ವಿಶಿಷ್ಟಚೇತನ ಮಕ್ಕಳನ್ನು ನೋಡಿಕೊಳ್ಳಲು ಒಬ್ಬರು ಬೇಕೇ ಬೇಕು. ಅದು ನಿರಂತರ ಕರ್ತವ್ಯ. ಅದರಲ್ಲಿ ಯಾಮಾರುವಂತಿಲ್ಲ. ನಿತ್ಯದ ಕೆಲಸಗಳನ್ನು ನಿರ್ಲಕ್ಷ್ಯಿಸುವಂತಿಲ್ಲ. ಗೌರಿಯನ್ನು ವಾಕಿಂಗ್ ಕರೆದುಕೊಂಡು ಹೋಗದಿರಲು ನೆಪಗಳನ್ನು ಹುಡುಕುವಂತಿಲ್ಲ. ಅವರಿಗೆ ಫಿಜಿಯೋಥೆರಪಿ ಮಾಡಿಸುವುದರಲ್ಲಿ ಲೋಪ ಮಾಡುವಂತಿಲ್ಲ. ನಾವು ಬೇಕಾದರೆ ಊಟ ಬಿಡಬಹುದು, ಟಿವಿ ನೋಡದಿರಬಹುದು. ಹರಟೆ ಕೊಚ್ಚದಿರಬಹುದು. ಅನಗತ್ಯ ಮೊಬೈಲ್ ಕರೆಗಳನ್ನು ಮಾಡದಿರಬಹುದು. ಆದರೆ, ಗೌರಿಯ ಕೆಲಸಗಳನ್ನು ನಿರ್ಲಕ್ಷ್ಯಿಸುವಂತಿಲ್ಲ.
ಹೀಗಾಗಿ, ನಾವು ಕಾಯಿಲೆ ಬೀಳಲಾರೆವು. ನಮಗೆ ಅದು ತೀರಾ ದುಬಾರಿ ಸಂಗತಿ. ನಾನು ಕಾಯಿಲೆ ಬಿದ್ದರೆ ಹೇಗೋ ನಿಭಾಯಿಸಬಹುದು. ಆದರೆ, ರೇಖಾ ಮಲಗಿಕೊಂಡರೆ ಮುಗೀತು. ಕಚೇರಿಗೆ ರಜೆ ಹಾಕುವುದು ಅನಿವಾರ್ಯ. ಪೇಪರ್ ಕೂಡಾ ನೋಡಲಾಗುವುದಿಲ್ಲ. ಎಷ್ಟೋ ಸಾರಿ ಮೊಬೈಲ್ ಬಡಿದುಕೊಳ್ಳುತ್ತಿದ್ದರೂ ಮಾತನಾಡುವುದಿರಲಿ, ಅದರ ಮುಖ ನೋಡಲೂ ಆಗುವುದಿಲ್ಲ. ಮಕ್ಕಳ ಜೊತೆಗೆ ಕಾಯಿಲೆ ಬಿದ್ದ ಹೆಂಡತಿಯನ್ನೂ ನೋಡಿಕೊಳ್ಳಬೇಕು. ಒಂದು ದಿನ ತಳ್ಳಬಹುದು. ಎರಡನೇ ದಿನ ಹೇಗೋ ನಿಭಾಯಿಸಬಹುದು. ಅದಕ್ಕಿಂತ ಹೆಚ್ಚಿಗೆ ಆಕೆ ಮಲಗಿದರೆ, ಊರಿನಿಂದ ಯಾರಾದರೂ ಒಬ್ಬರನ್ನು ಕರೆಸುವುದು ಅನಿವಾರ್ಯವಾಗುತ್ತದೆ.
ಅವರಾದರೂ ಎಷ್ಟು ಸಾರಿ ಬಂದಾರು? ಊರಿನಲ್ಲಿ ಅವರಿಗೂ ತಮ್ಮದೇ ಆದ ತಾಪತ್ರಯಗಳಿರುತ್ತವೆ. ಕಾಯಿಲೆ ಮಲಗಿದವಳ ಆರೈಕೆಗೆಂದು ಅಷ್ಟು ದೂರದಿಂದ ಹೇಗೆ ಬಂದಾರು? ನಮ್ಮದು ನಿತ್ಯದ ಗೋಳು. ಒಂದು ಸಾರಿ ಬರಬಹುದು, ಇನ್ನೊಂದು ಸಾರಿ ಬರಬಹುದು. ಅದಕ್ಕಿಂತ ಹೆಚ್ಚು ಬರಲು ಅವರಿಗೂ ಕಷ್ಟ. ಅದು ಗೊತ್ತಿದ್ದೂ ಅವರನ್ನು ಬರ ಹೇಳುವುದು ನಮಗೂ ಕಷ್ಟ.
ಹೀಗಾಗಿ, ನಾವು ಕಾಯಿಲೆ ಬೀಳದಂತೆ ನೋಡಿಕೊಳ್ಳುವುದನ್ನು ಕಲಿತಿದ್ದೇವೆ. ಮಕ್ಕಳಿಗೆ ಫಿಜಿಯೋಥೆರಪಿ ಮಾಡಿಸುವಾಗ ನಮ್ಮ ವ್ಯಾಯಾಮವೂ ಆಗುತ್ತದೆ. ಅವರಿಗೆ ವಾಕಿಂಗ್ ಮಾಡಿಸುತ್ತ ನಾವೂ ವಾಕ್ ಮಾಡಿ ಗಟ್ಟಿಯಾಗುತ್ತೇವೆ. ಅವರಿಗೆ ಕೊಡುವ ಉತ್ತಮ ಗುಣಮಟ್ಟದ ಆಹಾರ ಸೇವಿಸುತ್ತ ನಾವೂ ಉತ್ತಮವಾಗಿದ್ದೇವೆ. ಮಕ್ಕಳಿಗೆ ವರ್ಜ್ಯವಾದ ಬಹುತೇಕ ತಿನಿಸುಗಳು ನಮಗೂ ವರ್ಜ್ಯವೇ.
ಇದನ್ನು ನಾನು ತ್ಯಾಗ ಎಂದು ಕರೆಯುವುದಿಲ್ಲ. ಇದು ಒಂಥರಾ ರೂಢಿ. ಮೊದಮೊದಲು ಕಷ್ಟವಾಯಿತಾದರೂ, ಕ್ರಮೇಣ ನಾವು ಅದಕ್ಕೆ ಒಗ್ಗಿಕೊಂಡಿದ್ದೇವೆ. ನಾವು ಬೆಳೆದಷ್ಟೂ, ನಮ್ಮ ಮಕ್ಕಳು ಬೆಳೆಯುತ್ತಾರೆ ಎಂಬುದನ್ನು ಕಂಡುಕೊಂಡಿದ್ದೇವೆ. ನಾವು ಹಸನ್ಮುಖಿಯಾದಷ್ಟೂ ನಮ್ಮ ಮಕ್ಕಳು ಹಸನ್ಮುಖಿಗಳಾಗುತ್ತಾರೆ, ನಾವು ಬೆಳೆದಷ್ಟೂ ನಮ್ಮ ಮಕ್ಕಳೂ ಬೆಳೆಯುತ್ತವೆ ಎಂಬುದನ್ನು ಕಂಡುಕೊಂಡಿದ್ದೇವೆ.
ಹೀಗಾಗಿ, ನಾವು ಆರೋಗ್ಯವಾಗಿರಲು ಯತ್ನಿಸುತ್ತೇವೆ. ಹಸನ್ಮುಖಿಗಳಾಗಲು ಪ್ರಯತ್ನಿಸುತ್ತೇವೆ. ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಂಡಿದ್ದೇವೆ. ಈ ಅನಿವಾರ್ಯತೆ, ಈ ರೂಢಿ ನಮಗೆ ಬದುಕಿನ ಹಲವಾರು ಉತ್ತಮಾಂಶಗಳನ್ನು ನೀಡಿದೆ. ನಮ್ಮನ್ನು ನಿತ್ಯ ಪ್ರಬುದ್ಧರನ್ನಾಗಿಸುತ್ತಿದೆ. ಮಾಗಿಸುತ್ತಿದೆ. ಬೆಳೆಸುತ್ತಿದೆ. ಹೊಸ ಹೊಸ ಅನುಭವಗಳಿಗೆ ಒಡ್ಡುತ್ತಿದೆ.
ಇಂಥದೊಂದು ಮನಃಸ್ಥಿತಿಯನ್ನು ನಮಗೆ ನೀಡಿದ್ದಕ್ಕಾಗಿ, ಬದುಕೇ ನಿನಗೊಂದು ಥ್ಯಾಂಕ್ಸ್.
- ಚಾಮರಾಜ ಸವಡಿ

