Showing posts with label ಪ್ರೀತಿ. Show all posts
Showing posts with label ಪ್ರೀತಿ. Show all posts

ಒಳಗೊಳಗೇ ಉಳಿದು, ಬೆಳೆದು...

3 Jun 2012

0 ಪ್ರತಿಕ್ರಿಯೆ

ಇವತ್ತು ನನಗೀ ಮಾತಿನ ಯಂತ್ರದ ಹಂಗಿಲ್ಲ
ಹೃದಯಕ್ಕೆ ಮಾತಾಡುವದ ಕಲಿಸಿದ್ದೇನೆ
*****
ಪದೆ ಪದೆ ನೋಡುವಾಸೆ ಮೂಡದಿರಲೆಂದು
ನಿನ್ನ ಜೀವಂತವಾಗಿ ಎದೆಯಲ್ಲಿಟ್ಟುಕೊಂಡಿದ್ದೇನೆ
*****
ಕೈಗೆಟುಕದ ದೂರದಲ್ಲಿದ್ದರೇನು ನೀನು
ಇಲ್ಲೇ ಮಿಡಿಯುತ್ತೀ ಒಳಗೊಳಗೇ
*****
ಜಗವೆಲ್ಲ ಹುಡುಕ್ಹುಡುಕಿ ನಿರಾಶವಾಯಿತು
ಒಳಗೊಳಗೇ ನಕ್ಕ ನಿನ್ನ ನಗೆ ಕೇಳದಾಯಿತು
*****
ಕೊರಳ ದಾಟಿ ಹೊರಗ್ಹರಿಯದ ನಿನ್ನುಲಿಯ
ಅಪಾರ ದೂರದಿಂದ ತನ್ಮಯನಾಗಿ ಆಲಿಸಿದೆ
*****
ಬಿಡು ಮರುಳೆ, ಇರು ಅಲ್ಲೇ, ದೂರ ದೂರ
ಮಾಯೆಯಂಥ ಪ್ರೀತಿ ಅಂತರ ಮಾಯವಾಗಿಸಿದೆ
*****
ಇನ್ನು ನಿನ್ನ ಕರೆಯುವುದಿಲ್ಲ, ಮೊರೆಯಿಡುವುದಿಲ್ಲ
ಇನ್ನೇನಿದ್ದರೂ ಒಳಗೊಳಗೇ ನಿವೇದನೆ, ವೇದನೆ

- ಚಾಮರಾಜ ಸವಡಿ

ಒಳಗಡಲು ಉಕ್ಕಿದಾಗೆಲ್ಲ ಆ ದಿವ್ಯ ನೆನಪು

29 Apr 2012

2 ಪ್ರತಿಕ್ರಿಯೆ
ಇನ್ನು ಆಡಲು ಮಾತುಗಳಿಲ್ಲ ಅಂತಾದಾಗ, ಅಷ್ಟು ದೂರ ನಂಜೊತೆ ಬರ್ತೀಯಾ? ಅಂತ ಕೇಳಿದೆ.

ಧ್ವನಿಯಲ್ಲಿ ದೈನ್ಯತೆಯಿತ್ತು. ಇನ್ನಿದು ಮುಗಿಯಿತು ಎಂದಾಗ, ಇನ್ನೆಂದೂ ಇದು ಕೊನರುವುದಿಲ್ಲ ಎಂಬುದು ಗಟ್ಟಿಯಾದಾಗ, ಉಳಿಯುವ ಕೊನೆಯ ಭಾವವದು.

ಆಕೆಗೆ ಏನನ್ನಿಸಿತೋ, ಸುಮ್ಮನೇ ಎದ್ದಳು.

ನಾವು ಮೌನವಾಗಿ ಹೊರಟೆವು. ನಂಗೆ ಗೊತ್ತಿತ್ತು, ಇದು ನಾವು ಜೊತೆಯಾಗಿ ಇಡುತ್ತಿರುವ ಕೊನೆಯ ಹೆಜ್ಜೆ ಎಂದು.

ಆಕೆ ತಲೆ ತಗ್ಗಿಸಿಕೊಂಡು, ಕೈಗಳನ್ನು ಕಟ್ಟಿಕೊಂಡು, ಮೌನವಾಗಿ ಹೆಜ್ಜೆ ಹಾಕುತ್ತಿದ್ದಳು.

ಅಷ್ಟು ದೂರದಲ್ಲಿ ರಸ್ತೆ ಹೊರಳಿಕೊಂಡಿತ್ತು. ಜೋರು ಹೆಜ್ಜೆಯಿಟ್ಟರೆ ಎರಡು ನಿಮಿಷದ ದಾರಿ.

ಅಲ್ಲಿಗೆ ತಲುಪಿದರೆ, ಹಿಂದಿರುಗಬೇಕಾಗುತ್ತೆ.

ಆಗ, ಆಕೆ ಹೋಗಿಬಿಡುತ್ತಾಳೆ, ಒಂದೂ ಮಾತಾಡದೇ.

ನಾನೂ ಮೌನವಾಗಿ ಹೆಜ್ಜೆ ಹಾಕುತ್ತಿದ್ದೆ. ಸಾಗರವೊಂದು ಎದೆಯೊಳಗೆ ಭೋರ್ಗರೆದು ಅಪ್ಪಳಿಸುವ ಶಬ್ದ ಇಷ್ಟು ಹತ್ತಿರದಲ್ಲಿದ್ದೂ ದೂರವಿರುವ ಆಕೆಗೆ ಕೇಳಿಸಿತಾದರೂ ಹೇಗೆ?

ನಾನು ಹೆಜ್ಜೆಗಳನ್ನು ಎಣಿಸುತ್ತಿದ್ದೆನಾ? ಇನ್ನೇನು ಆ ತಿರುವು ಬಂದೇಬಿಟ್ಟಿತು ಎಂದು ಅಳುಕುತ್ತಿದ್ದೆನಾ?

ಒಂದೂ ತಿಳಿಯಲಿಲ್ಲ. ಸಾವಿನೆಡೆಗೆ ಹೊರಟವನಂತೆ, ಬದುಕಿನ ಕೊನೆಯ ಹೆಜ್ಜೆಗಳಿವು ಎಂಬಂತೆ ನಡೆಯುತ್ತಿದ್ದೆ.

ಮಾತಾಡಬಾರದೆಂಬಂತೆ ಆಕೆ ಗಂಭೀರಳಾಗಿದ್ದಳು. ಏನು ಮಾತಾಡುವುದಿನ್ನು ಎಂದು ನಾನು ಮೌನವಾಗಿದ್ದೆ.

ಒಳಗೆ ಮೇರೆಯುಕ್ಕುವ ಅಳಲ ಕಡಲು.

ತಿರುವು ಹತ್ತಿರವಾಗುತ್ತಿತ್ತು.

ಏಕೋ ನನ್ನ ಹೆಜ್ಜೆಗಳು ಸೋಲುತ್ತಿದ್ದವು. ಇನ್ನು ಕೆಲ ಹೆಜ್ಜೆಗಳನ್ನಿಟ್ಟರೆ, ತಿರುವು ಬಂದುಬಿಡುತ್ತಿತ್ತು.

ಥಟ್ಟನೇ ನಿಂತೆ. ಆಕೆಯೂ ನಿಂತಳು. ಅವಳ ಮುಖದಲ್ಲಿ ಪ್ರಶ್ನೆ.

‘ಥ್ಯಾಂಕ್ಸ್‌ ಜೊತೆಗೆ ಬಂದಿದ್ದಕ್ಕೆ’ ಎಂದೆ.

ಆಕೆಯ ಮುಖದಲ್ಲಿ ಅದೇ ಪ್ರಶ್ನೆ.

’ಆ ತಿರುವು ಮುಟ್ಟಲು ಕೆಲ ಹೆಜ್ಜೆಗಳೇ ಸಾಕು. ಅವನ್ನೂ ಕ್ರಮಿಸಿಬಿಟ್ಟರೆ ಜೀವನದುದ್ದಕ್ಕೂ ನನಗೆ ಮತ್ತೆ ನಿನ್ನ ಜೊತೆ ಸಿಗಲ್ಲ. ಈ ಸವಿ ನೆನಪಲ್ಲಿ, ನಾನು ಹೀಗೇ, ಆ ತಿರುವನ್ನೇ ಧೇನಿಸುತ್ತ ಇದ್ದುಬಿಡುತ್ತೇನೆ. ಇನ್ನು ಕೆಲ ಹೆಜ್ಜೆಗಳನ್ನಿಟ್ಟಿದ್ದರೆ... ಎಂಬ ದಿವ್ಯ ಊಹೆಯಲ್ಲಿ ಬದುಕನ್ನು ಸಾಗಿಸುತ್ತೇನೆ. ಕೊನೆಯಾಗುವ ಈ ಹಂತದಲ್ಲಿ, ಈ ಸವಿ ನೆನಪಾದರೂ ಜೊತೆಗಿರಲಿ ಬಿಡು...’

ಎಷ್ಟೋ ಹೊತ್ತು ಆಕೆ ಸುಮ್ಮನೇ ನಿಂತಿದ್ದಳು. ನಂತರ ನಿಧಾನವಾಗಿ, ಬಲು ನಿಧಾನವಾಗಿ, ಕಾಲೆಳೆಯುತ್ತ, ಬಂದ ದಾರಿಯತ್ತ ತಿರುಗಿ ಹೊರಟಳು.

ನಾನು ಮಾತ್ರ ಅಲ್ಲಿಯೇ ನಿಂತಿದ್ದೆ, ಅದೇ ಕೊನೆಯ ಗಮ್ಯ ಎಂಬಂತೆ.

*****

ಒಡಲೊಳಗಿನ ಅಳಲ ಕಡಲು ಭೋರ್ಗರೆದಾಗೆಲ್ಲ, ಮತ್ತೆ ಆ ತಿರುವಿನತ್ತ ಹೋಗುತ್ತೇನೆ.

ಜೊತೆಯಾಗಿ ನಡೆದ ನೆನಪು ಅಲ್ಲೆಲ್ಲ.

ಕೆಲ ಹೊತ್ತು ಅಲ್ಲಿ ಕೂಡುತ್ತೇನೆ, ಒಬ್ಬನೇ, ಸುಮ್ಮನೇ. ಅದು ದಿವ್ಯ ಮೌನಾನುಸಂಧಾನ.

ಒಳಗಡಲು ಶಾಂತವಾದಾಗ ಮೌನವಾಗಿ ಎದ್ದು ಬರುತ್ತೇನೆ.

ಅವಳಿಲ್ಲದ ಬದುಕೀಗ, ಅವಳ ನೆನಪಿನಲ್ಲಿ ಸಾಗುತ್ತಿದೆ ಹೀಗೇ.

*****

ಥ್ಯಾಂಕ್ಸ್‌ ಕಣೇ, ನೆಮ್ಮದಿಯ ಗಮ್ಯವೊಂದನ್ನು ಕೊಟ್ಟುಹೋಗಿದ್ದಕ್ಕೆ!

- ಚಾಮರಾಜ ಸವಡಿ

ನಿನ್ನೆ, ಇಂದು ಮತ್ತು ನಾಳೆ

28 Feb 2011

2 ಪ್ರತಿಕ್ರಿಯೆ
ನಾನಿಲ್ಲಿ ಸುಮ್ಮನೇ ನಿಂತಿದ್ದೇನೆ.

ನಿನ್ನೆದುರು ನಿನ್ನ ಬದುಕಿದೆ. ನನ್ನ ಬದುಕು ನನ್ನೆದುರು. ನಮ್ಮಿಬ್ಬರೆದುರು ನಮ್ಮ ಬದುಕಿದೆ.

ನನ್ನ ನಿನ್ನೆಗಳು ನಿನಗೆ ಮತ್ತು ನಿನ್ನ ನಿನ್ನೆಗಳು ನನಗೆ ಗೊತ್ತಿಲ್ಲ. ಇನ್ನು ನಮ್ಮಿಬ್ಬರ ನಿನ್ನೆ-ನಾಳೆಗಳ ಬಗ್ಗೆ ಇಬ್ಬರಿಗೂ ತಿಳಿದಿಲ್ಲ.

ನಾಳೆಗಳ ಬಗ್ಗೆಯೂ ನಮಗೆ ಏನೂ ಗೊತ್ತಿಲ್ಲ. ಆದರೆ, ನಾವು ಇಂದಿನ ಬಗ್ಗೆ ಖಂಡಿತವಾಗಿ ಯೋಚಿಸಬಹುದು. ಇಂದಿನ ನಮ್ಮ ಬದುಕು, ನಾಳೆಯ ನಮ್ಮ ಬದುಕಾಗುತ್ತದೆ. ಅಲ್ಲವೆ?

ನಿನ್ನ ನಿನ್ನೆಗಳನ್ನು ಬಿಟ್ಹಾಕು. ನಾನೂ ಬಿಟ್ಹಾಕಿದ್ದೇನೆ. ಅದು ಆಗಿ ಹೋದ ಬದುಕು. ಓದಿಟ್ಟ ಪುಸ್ತಕ. ನೋಡಿಯಾಗಿರುವ ಚಿತ್ರ. ಅದನ್ನು ನಾವಿಬ್ಬರೂ ಬದಲಿಸಲಾರೆವು. ಬದಲಿಸುವ ಯತ್ನವೂ ಬೇಡ.

ನಿನ್ನೆಯನ್ನು ನೆನೆದು ಇಂದು ಕಣ್ಣೀರಿಡುವುದೇಕೆ? ಅದು ನಾಳೆಗೆ ಏನನ್ನೂ ಕೊಡಲಾರದು. ಇವತ್ತಿನ ಬಗ್ಗೆ ಯೋಚಿಸು. ಇಂದಿನ ಬದುಕನ್ನು ನೀನು ಬದಲಿಸಬಲ್ಲೆ. ನಾಳೆಯನ್ನು ರೂಪಿಸಬಲ್ಲೆ. ನಾಳೆಯ ಭವಿಷ್ಯದ ಮರದ ಬೀಜವನ್ನು ಇಂದೇ ಬಿತ್ತು. ನಿನ್ನ ವಿಫಲ ಕನಸಿನ ಕಣ್ಣೀರ ಹನಿಸು. ಕನಸನ್ನು ಬೆರೆಸು. ನಿನ್ನಾಸೆಯ ನಾಳೆ ನಿನ್ನದಾದೀತು.

ಎಷ್ಟಂತ ಅಳುತ್ತೀಯಾ? ಕಣ್ಣೀರ ಹನಿಗಳು ಕುಸಿದ ಕನಸನ್ನು ಹೇಳುತ್ತವೆ. ವಿಫಲ ಯತ್ನಗಳನ್ನು ಬಣ್ಣಿಸುತ್ತವೆ, ನಿಜ. ಆದರೆ, ಅವು ನಾಳೆಗೇನೂ ಕೊಡಲಾರವು. ಅಳುವ ಕಣ್ಣುಗಳಿಗಿಂತ, ಅರಳುವ ಕಣ್ಣುಗಳು ನಾಳೆಯನ್ನು ರೂಪಿಸಬಲ್ಲವು ಎಂಬುದನ್ನು ಮರೆಯದಿರು.

ನೀನು ಎಲ್ಲವನ್ನೂ ಬಲ್ಲೆ ಎಂಬುದನ್ನು ನಾನು ಬಲ್ಲೆ. ನಿನಗೆ ಎಲ್ಲವೂ ಅರ್ಥವಾಗುತ್ತದೆ ಎಂಬುದೂ ನನಗರ್ಥವಾಗಿದೆ. ಬದುಕಿನ ತಿರುವು ದಾರಿಯುದ್ದಕೂ ಪೊರೆಯಬೇಕಿರುವುದು ನಿನ್ನ ಕಂಗಳ ದೀಪದ ಬೆಳಕು ಎಂಬುದನ್ನೂ ನೀನು ತಿಳಿದುಕೊಳ್ಳಬೇಕು. ಆ ಕಂಗಳು ಅಳದಿರಲಿ. ಆ ಬೆಳಕು ಮಸುಕಾಗದಿರಲಿ. ಒರೆಸಿಕೋ ಕಣ್ಣೀರ. ತಂದುಕೋ ಮುಗುಳ್ನಗೆಯ. ಎದೆಯಾಳದಲಿ ಮಿಣುಕುತ್ತಿರುವ ಆ ಮಿಣುಕುಬೆಳಕು ನಿನ್ನ ಕಂಗಳಿಂದಿಳಿದು ತಿರುವು ದಾರಿಯುದ್ದಗಲಕೂ ಹರಡಲಿ. ನಿನ್ನ ನಡೆ ನಿನಗೆ ನಿಚ್ಚಳವಾಗಲಿ.

ಈಚೆ ತೀರದಿ ನಿಂತು ದಾರಿ ಕಾಯುವ ಹುಚ್ಚು ಪಥಿಕ ನಾನು. ಅರ್ಧ ದಾರಿಯನ್ನು ಈಜಿ ಬರಬಲ್ಲೆ. ಇನ್ನರ್ಧ ನೀನೇ ಈಜಬೇಕು. ಈ ಎರಡು ಅರ್ಧಗಳ ನಡುವೆ ಅಲ್ಲೆಲ್ಲೋ ಸಂಗಮವಿದೆ. ಅದನ್ನು ನಾವು ಜೊತೆಯಾಗಿ ತಲುಪಬೇಕಿದೆ. ಅಲ್ಲಿಂದ ಬದುಕು ಜೊತೆಯಾಗಿ ಬೆರೆತು ಹರಿಯಬೇಕಿದೆ. ತೀರದಲ್ಲೇ ಬದುಕು ತೀರಿ ಹೋಗದಿರಲಿ. ಇಡು ಹೆಜ್ಜೆ. ಈಜು ನಿನ್ನರ್ಧ ಪಾಲಿನ ನೀರ. ಸಂಗಮದೆಡೆಗೆ ತಲುಪು. ನಾನೂ ಇಳಿದೇನು. ಈಜಿಯೇನು. ಸಂಗಮದಲಿ ಜೊತೆಯಾದೇನು. ಬಾಳ ಪೂರ್ತಿ ಜೊತೆಯಾಗಿ ಹರಿದೇನು. ಮುಂದೆಲ್ಲೋ ಕಡಲಲ್ಲಿ ಲೀನವಾಗುವವರೆಗೆ ಎದೆ ದೀಪಕ್ಕೆ ಬತ್ತಿಯಾದೇನು. ಎಣ್ಣೆಯಾದೇನು. ನಿನ್ನ ಕಂಗಳ ಬೆಳಕಾದೇನು. ಎದೆಯಾಳದಲಿ ಇಳಿದು ಹೊಸ ಕನಸಾದೇನು. ನನಸಾದೇನು.

ಇಳಿವ ಮುನ್ನ ಸಾವಿರ ಬಾರಿ ಯೋಚಿಸು. ಮಾಡುವುದಾದರೆ ಹೊಸ ತಪ್ಪ ಮಾಡು. ಇಡುವುದಾದರೆ ಮುಂದಡಿಯಿಡು. ಈಜುವುದಾದರೆ, ಕಡಲೆಡೆಗೆ ಹರಿಯುವ ನದಿಯನ್ನೀಜು. ಕಾಣುವುದಾದರೆ ಹೊಸ ಕನಸ ಕಾಣು. ಆಗ ನಿನ್ನ ಕಣ್ಣೀರು ನದಿಯಲ್ಲಿ ಒಂದಾಗಿ ಬೆರೆಯುತ್ತದೆ. ಕಡಲೆಡೆಗೆ ಕರೆದೊಯ್ಯುತ್ತದೆ.

ಇದು ಹುಸಿ ಭರವಸೆಯಲ್ಲ. ಮರುಳು ಮಾತೂ ಅಲ್ಲ. ನಿನ್ನನ್ನಳಿಸುವ ನಿನ್ನೆಗಳನ್ನ ಅಳಿಸಿಹಾಕುವ ದಾರಿಯಿದು. ತೆರೆದುಕೋ ಮನಸ. ಕರೆದುಕೋ ಕನಸ. ಎಲ್ಲಾ ನಿರಾಶೆಗಳ ನಿರಿಗೆಕಟ್ಟಿ, ಸವಾಲುಗಳ ಕಚ್ಚೆ ಕಟ್ಟಿ, ಮುಂದಡಿಯಿಡು. ಗತ ಬದುಕಿಗೆ ಕುರುಡಾಗು. ಟೀಕೆಗಳಿಗೆ ಕಿವುಡಾಗು. ಹತಾಶತೆಗೆ ಮೂಕಳಾಗು. ಹಿಂದೆ ನೋಡದೇ ಎದ್ದು ಬಂದ ಬುದ್ಧನಂತೆ, ಎದ್ದು ಬಾ. ಖಂಡಿತ ಗೆದ್ದು ಬರುವೆ.

ಇನ್ಯಾವ ಅಳುಕು? ಇನ್ಯಾವ ಯಾತನೆ? ಹೊಸ ಕನಸಿನ ನಾಳೆಗಾಗಿ ಇಂದೇ ಹೊರಡು. ಭವವ ತೊರೆವವರನ್ನು ಭಯವೂ ತೊರೆವುದು. ಹನಿಸಿದ ಕಣ್ಣೀರ ಲೆಕ್ಕ ಮರೆತು, ಕುಸಿದ ಕನಸುಗಳ ನೋವು ಮರೆತು, ಸುರಿಸಲೊಂದಿಷ್ಟು ಆನಂದಬಾಷ್ಪಗಳನ್ನು ಹುಷಾರಾಗಿ ಎತ್ತಿಕೊಂಡು ಬಾ. ಈಚೆ ತೀರದಲಿ ನಾನು ಕಾಯುತ್ತಲೇ ಇದ್ದೇನೆ. ಕಾಯುತ್ತಲೇ ಇರುತ್ತೇನೆ. ಅಲುಗುವುದಿಲ್ಲ. ಅಗಲುವುದಿಲ್ಲ. ಕನಲುವುದಿಲ್ಲ. ಕರಗುವುದಿಲ್ಲ. ಶಿಲೆಯಾದ ಶಾಪಗ್ರಸ್ತನಂತೆ ನಿಂತೇ ಇರುತ್ತೇನೆ. ಅದು ಖಂಡಿತ.

ಬರುತ್ತೀಯಲ್ಲ?

- ಚಾಮರಾಜ ಸವಡಿ

ಮೌನ ಸಾಂಗತ್ಯ

3 Nov 2010

6 ಪ್ರತಿಕ್ರಿಯೆ
ತಾನು ಬೀಸಿಯೇ ಇಲ್ಲ ಎಂಬಂತೆ
ಗಾಳಿ ಸುಮ್ಮನಾಯಿತು

ತಾನು ಉಕ್ಕಿಯೇ ಇಲ್ಲ ಎಂಬಂತೆ
ಕಡಲು ಸುಮ್ಮನಾಯಿತು

ಆದರೆ,
ಬೋರಲು ಬಿದ್ದ ತೆಂಗಿನ ಮರಕ್ಕೆ
ಹಾಗೆ ಅಂದುಕೊಳ್ಳಲು ಆಗಲಿಲ್ಲ

ನನ್ನ ಸ್ಥಿತಿಯೂ ಅದೇ

ಪ್ರೀತಿಸಿಯೇ ಇಲ್ಲ ಎಂದು ಹೇಗೆ ಹೇಳಲಿ?

- ಚಾಮರಾಜ ಸವಡಿ

ಕಿತ್ತಾಡೋರ ಕಂಡು ನಗುತ್ತಿದೆ ಪ್ರೀತಿ...

14 Feb 2010

7 ಪ್ರತಿಕ್ರಿಯೆ
ಮನಸ್ಸು ಖಾಲಿಯಾಯ್ತು ಅಂತ ಅನ್ನಿಸಿದಾಗೆಲ್ಲ ವಿದ್ಯಾರ್ಥಿ ಜೀವನದ ದಿನಗಳನ್ನು ನೆನಪಿಸಿಕೊಳ್ಳುತ್ತೇನೆ.

ಕಂಪ್ಯೂಟರುಗಳಿಲ್ಲದ, ಖಾಸಗಿ ಚಾನೆಲ್‌ಗಳಿಲ್ಲದ, ಮೊಬೈಲುಗಳಿಲ್ಲದ ಹಾಗೂ ಜೇಬಿನಲ್ಲಿ ದುಡ್ಡಿಲ್ಲದ ದಿನಗಳವು. ಆದರೂ, ಮನಸ್ಸಿನೊಳಗಿನ ಭಾವನೆಗಳು ಸಮೃದ್ಧವಾಗಿದ್ದವು. ಅವನ್ನು ಹೊರಹಾಕಲು ಪತ್ರಗಳಿದ್ದವು. ಮಿತ್ರರಿದ್ದರು ಹಾಗೂ ದಿನಚರಿ ಎಂಬ ಅದ್ಭುತ ಸಂಗಾತಿಯಿತ್ತು. ಎಲ್ಲಕ್ಕಿಂತ ಮುಖ್ಯ, ಶೈಕ್ಷಣಿಕ ವರ್ಷದ ಕೊನೆಯ ದಿನಗಳಲ್ಲಿ, ಇಂಥ ಭಾವನೆಗಳಿಗೆ ಸೂಕ್ತ ಹರಿವು ಕೊಡುವ ಆಟೊಗ್ರಾಫ್‌ಗಳಿದ್ದವು. ಒಂದಲ್ಲ ಒಂದು ಮನಸ್ಸಿಗೆ ಮುದ ನೀಡುತ್ತಿತ್ತು. ಹೊಸ ಕನಸಿಗೆ ಪ್ರೇರಣೆ ಒದಗಿಸುತ್ತಿತ್ತು.
 

ಆಗ ವ್ಯಾಲೆಂಟೈನ್ಸ್‌ ಡೇ ಎಂಬುದೇ ಇದ್ದಿಲ್ಲ. ಹೀಗಾಗಿ, ವರ್ಷ ಪೂರ್ತಿ ರೋಮ್ಯಾಂಟಿಕ್‌ ಮೂಡ್‌. ಅದಕ್ಕೆ ತಕ್ಕಂತೆ ಚುಟುಕು ಬರೆಯುವ ಹುಮ್ಮಸ್ಸು. ಅವನ್ನು ಆಗೀಗ ಪತ್ರಿಕೆಗಳಿಗೆ ಕಳಿಸಿ, ಅವು ಅಚ್ಚಾಗಿದ್ದನ್ನು ನೋಟ್‌ಬುಕ್‌ನಲ್ಲಿ ಅಂಟಿಸಿ, ಅದನ್ನೇ ಕವಿತಾ ಸಂಕಲನದಂತೆ ಮೂಡಿಸಿ ಮೆರೆಯುತ್ತಿದ್ದ ಖುಷಿಯಿತ್ತು. ಕಾಲೇಜಿನ ವಾರ್ಷಿಕ ದಿನಾಚರಣೆ ಅಂಥ ಖುಷಿಯನ್ನು ಸಾರ್ವತ್ರಿಕಗೊಳಿಸುತ್ತಿದ್ದ ಸಂದರ್ಭ. ಎಷ್ಟೋ ಜನರ ಅವಿತಿಟ್ಟಿದ್ದ ಪ್ರತಿಭೆ ಪ್ರದರ್ಶನವಾಗುತ್ತಿದ್ದುದೇ ಇಂಥ ಸಂದರ್ಭದಲ್ಲಿ.
 

ನಾಳೆ ವ್ಯಾಲೆಂಟೈನ್ಸ್‌ ಡೇ ಎಂಬ ವಿಷಯ ಈ ಎಲ್ಲ ವಿಷಯಗಳನ್ನು ಮತ್ತೆ ಮತ್ತೆ ನೆನಪಿಸುತ್ತಿದೆ.
 

ಇಂಥದೊಂದು ದಿನಾಚರಣೆ ಬೇಕೆ-ಬೇಡವೆ? ಎಂಬ ವಿಷಯ ಹಿಡಿದುಕೊಂಡು ಸಾರ್ವಜನಿಕವಾಗಿ ಕಿತ್ತಾಡುವ ಚಾಳಿ ಈಗ ಸಾಮಾನ್ಯವಾಗಿಬಿಟ್ಟಿದೆ. ಪ್ರತಿಯೊಬ್ಬರಿಗೂ ತಮ್ಮ ಧೋರಣೆಯೇ ಸರಿ ಎಂಬ ಹಮ್ಮು. ಎಷ್ಟು ಸಾಧ್ಯವೋ ಅಷ್ಟು ಪ್ರಚಾರ ಗಿಟ್ಟಿಸಿಕೊಳ್ಳುವ ದುರ್ಬುದ್ಧಿ. ವರ್ಷದಲ್ಲಿ ಒಂದು ದಿನಕ್ಕೆ ಸೀಮಿತವಾಗಿರುವ ಈ ಆಚರಣೆಯನ್ನು ವಿರೋಧಿಸದಿದ್ದರೆ, ಇಡೀ ಸಂಸ್ಕೃತಿಯೇ ಹದಗೆಟ್ಟು ಹೈದರಾಬಾದ್‌ ಆಗುತ್ತದೆ ಎಂಬುದನ್ನು ತೋರಿಸಿಕೊಳ್ಳುವ ಅವಿವೇಕತನ. ಇದೊಂದು ದಿನ ಕೈಬಿಟ್ಟರೆ, ಜೀವನಪೂರ್ತಿ ಎಂದಿಗೂ ಪ್ರೀತಿಯನ್ನು ವ್ಯಕ್ತಪಡಿಸಲಾರೆವೇನೋ ಎಂಬಂತೆ ಹಪಾಹಪಿ ಪ್ರದರ್ಶಿಸುತ್ತಿರುವ ವರ್ಗ ಇನ್ನೊಂದೆಡೆ. ಈ ಎರಡೂ ಬಣಗಳ ಕಿತ್ತಾಟವನ್ನು ತಂತಮ್ಮ ಲಾಭಕ್ಕೆ ಬಳಸಿಕೊಳ್ಳಲು ಯತ್ನಿಸುವ ಮಾಧ್ಯಮ ಹಾಗೂ ಅದನ್ನು ನೋಡುತ್ತ ಇದ್ದ ಸಮಯವನ್ನು ಹಾಳು ಮಾಡಿಕೊಳ್ಳುತ್ತಿರುವ ಜನ ಮತ್ತೊಂದೆಡೆ.
 

ಇವರ ಮಧ್ಯೆ, ಇಂಥ ಅವಿವೇಕತನದ ಮಧ್ಯೆ ಪ್ರೀತಿ ಇರಲು ಸಾಧ್ಯವೆ?
 

ಮೂಡಿದ್ದು ಎಷ್ಟೋ ಸಾರಿ ಗೊತ್ತೇ ಆಗದಂಥ ಮಾಧುರ್ಯಯುತ ಭಾವನೆ ಈ ಪ್ರೀತಿ. ಅದನ್ನು ಪ್ರದರ್ಶನದ ವಸ್ತುವಾಗಿಸಿದ್ದೇ ಮೊದಲ ಅವಿವೇಕತನ. ಅದರ ಹೆಸರಿನಲ್ಲಿ ಕಿತ್ತಾಟ ಶುರು ಮಾಡಿದ್ದು ಅವಿವೇಕತನದ ಮುಂದುವರಿಕೆ. ಒಂಚೂರು ಆಳಕ್ಕೆ ಇಳಿದು ನೋಡಿದರೆ, ಪರ-ವಿರೋಧಿ ಬಣಗಳ ಸಾಮಾನ್ಯ ಆಶಯ ಪ್ರಚಾರ ಪಡೆಯುವ ಸರ್ಕಸ್ಸೇ ಹೊರತು ಅದರಲ್ಲಿ ಎಂಥ ಆದರ್ಶವೂ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಆದರೂ ಎಲ್ಲರಿಗೂ ನಾಟಕ ನೋಡುವ ಚಪಲ. ಹೀಗಾಗಿ, ನಟಿಸುವವರ ಸಂಖ್ಯೆ ಪ್ರತಿ ವರ್ಷ ಹೆಚ್ಚುತ್ತಿದೆ. ಇದೊಂಥರಾ ವಾರ್ಷಿಕ ನಾಟಕ ಸ್ಪರ್ಧೆ.
 

ವಾದ ಮಾಡುವ ಬಹುತೇಕರು ಫಾರ್ಟಿ ಪ್ಲಸ್‌ ವರ್ಗದವರು. ‘ವ್ಯಾಲೆಂಟೈನ್ಸ್‌ ಡೇ ಆಚರಿಸೋದು ಬಿಡೋದು ವೈಯಕ್ತಿಕ ಕಣ್ರೀ. ನಿಮ್ಮ ಅಭಿಪ್ರಾಯ ಯಾರಿಗೆ ಬೇಕು’ ಎಂದು ಉಗಿಯುವ ಯುವ ವರ್ಗವನ್ನು ಚರ್ಚೆಗೆ ಕರೆಯಬೇಕೆಂಬ ಕಾಮನ್‌ಸೆನ್ಸೇ ತುಂಬ ಜನರಿಗಿಲ್ಲ. ಹೀಗಾಗಿ ಚರ್ಚೆ ಎಂಬುದೇ ಪ್ರಹಸನ. ಅದರ ಹೆಸರಿನಲ್ಲಿ ಆಗುವ ಇತರ ಕ್ರಿಯೆ ಅಭಾಸಕರ.
 

ರೈತ ನಾಯಕರು ಏಳಬೇಕೆಂದರೆ ಕರೆಂಟ್‌ ಹೋಗಬೇಕು, ಅಥವಾ ರೈತರ ಪಂಪ್‌ಸೆಟ್‌ಗಳಿಗೆ ಮೀಟರ್‌ ಹಾಕಬೇಕು ಅಥವಾ ಬಿಟಿ ಬದನೆ ಬರಬೇಕು. ಧಾರ್ಮಿಕ ನಾಯಕರು ಏಳಲು ವ್ಯಾಲೆಂಟೈನ್ಸ್‌ ಡೇಯೋ, ಮತಾಂತರದಂಥ ವಿಷಯವೋ ಬರಬೇಕು. ದಲಿತ ನಾಯಕರು ಏಳಬೇಕೆಂದರೆ, ಅಂಬೇಡ್ಕರ್‌ ಪ್ರತಿಮೆಗೆ ಅವಮಾನವಾಗಬೇಕು. ಜಾತಿ ನಾಯಕರು ಏಳಬೇಕೆಂದರೆ, ಅವರ ಜಾತಿಯ ವಿಷಯಕ್ಕೆ ಸಂಬಂಧಿಸಿದಂತೆ ಮೀಸಲಾತಿ ಕಟ್‌ ಆಗಬೇಕು ಅಥವಾ ಯಾರಾದರೂ ಟೀಕಿಸಿ ಬರೆದಿರಬೇಕು. ಒಟ್ಟಿನಲ್ಲಿ ಎಲ್ಲರಿಗೂ ಏಳಲು ಒಂದು ಕಾರಣ ಬೇಕು. ಅಂಥದೊಂದು ಕಾರಣ ಸಿಕ್ಕ ಕೂಡಲೇ ಎದ್ದು, ಎಗರಾಡಿ, ಸಾಧ್ಯವಾದಷ್ಟೂ ರಾಡಿ ಎಬ್ಬಿಸಿ ಮಲಗಿದರೆಂದರೆ, ಮತ್ತೆ ಅವರು ಏಳಲು ಇನ್ನೊಂದು ಘಟನೆಯೇ ನಡೆಯಬೇಕು. ಇಂಥ ಬೂಟಾಟಿಕೆಯ ಮಧ್ಯೆ ಪ್ರೀತಿ ಎಂಬುದು ಕೂಡ ಮಾರಾಟದ, ಹಾರಾಟದ, ಒಣ ಚರ್ಚೆಯ ಹಾಗೂ ಸೋಗಲಾಡಿತನದ ವಿಷಯವಾಗುತ್ತಿದೆ.
 

ನನಗೆ ಪಿ. ಲಂಕೇಶರ ‘ಎಲ್ಲಿದ್ದೆ ಇಲ್ಲೀತಂಕ, ಎಲ್ಲಿಂದ ಬಂದ್ಯವ್ವ, ನಿನ ಕಂಡು ನಾನ್ಯಾಕೆ ಕರಗಿದೆನೋ’ ಎಂಬ ಸೊಗಸಾದ ಕವಿತೆ ನೆನಪಾಗುತ್ತಿದೆ. ಪ್ರೀತಿ ಎಂಬುದು ಸಾರ್ವಕಾಲಿಕ, ಅದು ಎಲ್ಲರ ಮನಸ್ಸಿನಲ್ಲಿ ಹೊಂಗನಸ ಅರಳಿಸುವಂಥದು, ಎಲ್ಲರ ಯೌವನವನ್ನು ಸ್ಮರಣೀಯವಾಗಿಸುವಂಥದು. ಯಾರು ಎಷ್ಟೇ ಚರ್ಚೆ ಮಾಡಿದರೂ, ಬಡಿದಾಡಿದರೂ ಅದು ವ್ಯಕ್ತವಾಗುತ್ತಲೇ ಹೋಗುತ್ತದೆ. ಅದಕ್ಕಾಗಿ ಫೆಬ್ರವರಿ ಹದಿನಾಲ್ಕೇ ಬರಬೇಕೆಂದೇನಿಲ್ಲ.
 

ಹಾಗಂತ, ಫೆಬ್ರವರಿ ಹದಿನಾಲ್ಕರಂದು ಆಚರಿಸಬಾರದು ಅಂತಾನೂ ಇಲ್ಲ. ಏಕೆಂದರೆ, ಇಂಥ ದಿನವೇ ಉಕ್ಕಬೇಕು ಎನ್ನಲು ಪ್ರೀತಿ ಎಂಬುದು ಕಾವೇರಿ ತೀರ್ಥೋದ್ಭವವಲ್ಲ. ಅವರವರ ಪಾಲಿನ ಹೊಂಗನಸದು. ಅದನ್ನು ಕಸಿಯುವ ಹಕ್ಕು ಯಾರಿಗೂ ಇಲ್ಲ. ಯಾರಿಗೂ ಆ ಹಕ್ಕು ದಕ್ಕಲಾರದು ಕೂಡ.
 

ಏಕೆಂದರೆ, ಪ್ರೀತಿ ಎಂಬುದೇ ಹಾಗೆ. ಅದನ್ನು ಬಂಧಿಸಲಾಗದು. ಅದುಮಿಡಲಾಗದು. ಹೇಗೆ ಅದಕ್ಕೆ ಜಾತಿ, ಧರ್ಮ, ಭಾಷೆ, ವರ್ಗ, ಅಂತಸ್ತುಗಳ ಹಂಗಿಲ್ಲವೋ ಹಾಗೇ ದಿನಾಂಕದ ಹಂಗೂ ಇಲ್ಲ.
ಹೀಗಾಗಿ, ಪ್ರೀತಿ ನಿತ್ಯನೂತನ.

- ಚಾಮರಾಜ ಸವಡಿ

ಬೆರಳ್ಹಿಡಿದು ಜಗವ ತೋರಿಸಿದಾತ...ಅಪ್ಪ!

18 Aug 2009

0 ಪ್ರತಿಕ್ರಿಯೆ
ಆತ ನಮ್ಮ ಬಾಲ್ಯದ ಹೀರೊ. ಅಮ್ಮನ ಮಡಿಲಿನಿಂದ ಕೆಳಗಿಳಿದು ನಡೆಯಲು ಕಲಿತಾಗಿನಿಂದ ಆತ ನಮ್ಮ ಪಾಲಿನ ದೊಡ್ಡ ಭರವಸೆ. ಸಹಪಾಠಿಗಳೊಂದಿಗೆ ಜಗಳವಾದಾಗ, ನಾವು ದೂರು ಹೇಳಿದ್ದು ಆತನಿಗೆ. ಮೊದಲ ಮಿಠಾಯಿ ಕೊಡಿಸಿದ್ದು ಆತನೇ. ಬೆದರಿದಾಗ ಎತ್ತಿಕೊಂಡು ಸಂತೈಸಿದ, ಭರವಸೆ ತುಂಬಿದ ಮೊದಲ ವ್ಯಕ್ತಿ ಆತ. ಬಾಲ್ಯದ ನೂರೆಂಟು ನೆನಪುಗಳನ್ನು ಸಮೃದ್ಧವಾಗಿಸಿದ ಆತ ನಮ್ಮ ಅಪ್ಪ.

ಆತ ಎಲ್ಲ ಕಡೆ ಸಿಗುತ್ತಾನೆ. ಪಾರ್ಕ್‌‌ಗಳಲ್ಲಿ, ಬಸ್‌ಸ್ಟಾಪ್‌ಗಳಲ್ಲಿ, ಶಾಲೆಯ ಗೇಟಿನ ಹೊರಗೆ, ಅಂಗಡಿ ಎದುರು- ಎಲ್ಲೆಲ್ಲಿ ಮಕ್ಕಳು ಕಾಣುತ್ತಾರೋ ಅಲ್ಲೆಲ್ಲ ಆತನೂ ಇರುತ್ತಾನೆ. ಕಂಡದ್ದನ್ನೆಲ್ಲ ಕೊಡಿಸು ಎಂದು ಕೈಚಾಚುವ ಮಕ್ಕಳಿಗೆ ಪ್ರೀತಿಯಿಂದ ತಿಳಿ ಹೇಳುತ್ತ, ಚೆನ್ನಾಗಿವೆ ಅನಿಸಿದ್ದನ್ನು ಕೊಡಿಸುತ್ತ, ಮಕ್ಕಳು ಖುಷಿಯಿಂದ ಕೇಕೆ ಹಾಕುವಾಗ ಸದ್ದಿಲ್ಲದೇ ತೃಪ್ತಿಯಿಂದ ನಗುತ್ತಾನೆ.

ಜಗಳ ತಂದಾಗ ಬಗೆಹರಿಸಿದ್ದಾನೆ ಅಪ್ಪ. ತಪ್ಪು ಮಾಡಿದಾಗ ತಿಳಿ ಹೇಳಿದ್ದಾನೆ. ಪಕ್ಕ ಕೂತು ಪಾಠ ಮಾಡಿದ್ದಾನೆ. ಹೋಂ ವರ್ಕ್‌ ಮಾಡಿಸಿದ್ದಾನೆ. ನಮ್ಮ ಹ್ಯಾಪಿ ಬರ್ತ್‌‌ಡೇಗಳಿಗೆ ಹೊಸ ಬಟ್ಟೆ ತಂದಿದ್ದಾನೆ. ಅಚ್ಚರಿಯ ಗಿಫ್ಟ್‌ಗಳನ್ನು ನೀಡಿದ್ದಾನೆ. ನಮ್ಮ ಬಾಲ್ಯಕ್ಕೆ ಸಾವಿರಾರು ನೆನಪುಗಳನ್ನು ತುಂಬಿದ್ದಾನೆ.

ಅಪ್ಪನ ಹೆಗಲೇ ನಮ್ಮ ಮೊದಲ ವಾಹನ. ಅಲ್ಲಿಂದ ಇಣುಕಿದಾಗ ಕಂಡ ಜಗತ್ತು ಅದ್ಭುತ. ಆತನ ಬೆರಳ್ಹಿಡಿದೇ ನಾವು ಮನೆಯಿಂದ ಹೊರಗೆ ಕಾಲಿಟ್ಟಿದ್ದು. ಸಂತೆಗೆ ಹೋಗಿದ್ದು, ಜಾತ್ರೆಯಲ್ಲಿ ಸುತ್ತಾಡಿದ್ದು, ಮೃಗಾಲಯಗಳಿಗೆ ಭೇಟಿ ಕೊಟ್ಟಿದ್ದು. ಅಪ್ಪ ನಮ್ಮ ಪಾಲಿಗೆ ಹೀರೋ, ಗೈಡ್‌, ಫ್ರೆಂಡ್‌ ಎಲ್ಲಾ.

ದೊಡ್ಡವರಾದಂತೆ ಅಪ್ಪ ನಮಗೆ ಪಾಕೆಟ್‌ ಮನಿ ಕೊಡುವ ಕ್ಯಾಷಿಯರ್‌. ಪ್ರೊಗ್ರೆಸ್‌ ಕಾರ್ಡ್‌‌ಗೆ ಸಹಿ ಹಾಕುವ ಮ್ಯಾನೇಜರ್‌. ತಪ್ಪು ಮಾಡಿದಾಗ ಶಿಕ್ಷಿಸುವ ಪೊಲೀಸ್‌. ಏನು ಮಾಡಬೇಕೆಂದು ಆಜ್ಞೆ ಮಾಡುವ ಜಡ್ಜ್‌. ನಮ್ಮ ಆಟಗಳಿಗೆ ಆತನೇ ಕೋಚ್‌, ಅಂಪೈರ್‌ ಮತ್ತು ರೆಫ್ರೀ. ಬಿದ್ದು ಗಾಯ ಮಾಡಿಕೊಂಡಾಗ ಆತನೇ ಡಾಕ್ಟರ್‌.

ಮುಂದೆ ಪ್ರಾಯ ಬಂದಿತು. ಮೈಯೊಳಗೆ ಮಾಯೆ ತುಂಬಿತು. ಒಂದಿಷ್ಟು ತಂತ್ರಜ್ಞಾನ, ಫ್ಯಾಶನ್‌ ಕಲಿತ ನಮಗೆ ಅಪ್ಪ ಯಾವುದೋ ಕಾಲದ ವ್ಯಕ್ತಿಯಂತೆ ಕಾಣತೊಡಗುತ್ತಾನೆ. ಅಲ್ಲಿಯವರೆಗೆ, ಅಮ್ಮನಿಗೆ ಏನೂ ಗೊತ್ತಾಗಲ್ಲ ಅನ್ನುತ್ತಿದ್ದ ನಾವು ಅಪ್ಪನನ್ನೂ ಆ ಸಾಲಿಗೆ ಸೇರಿಸತೊಡಗುತ್ತೇವೆ. ಎಲ್ಲವನ್ನೂ ಕಲಿಸಿದ್ದ ಅಪ್ಪನನ್ನೇ, ನಿನಗೇನೂ ಗೊತ್ತಿಲ್ಲ ಅನ್ನತೊಡಗುತ್ತೇವೆ. ಅಪ್ಪನ ಅಭ್ಯಾಸಗಳು ಅಸಹನೀಯ ಅನಿಸತೊಡಗುತ್ತವೆ. ಎಲ್ಲ ಸುಖವನ್ನೂ ನಮಗಾಗಿ ಕಟ್ಟಿಕೊಟ್ಟ ಅಪ್ಪನೇ, ನಮ್ಮ ಸುಖಕ್ಕೆ ಅಡ್ಡಿ ಎಂದು ಅನ್ನಿಸತೊಡಗುತ್ತಾನೆ.

ಆದರೆ, ಮದುವೆಯಾಗಿ ಮಕ್ಕಳಾದ ಮೇಲೆ ಗೊತ್ತಾಗುತ್ತದೆ: ಅಪ್ಪನಿಗೆ ಎಷ್ಟೊಂದು ವಿಷಯಗಳು ಗೊತ್ತಿದ್ದವು ಅಂತ. ಅಪ್ಪ ಇಂಥವನ್ನೆಲ್ಲ ನಿಭಾಯಿಸಿದ್ದಾದರೂ ಹೇಗೆ ಎಂದು ಅಚ್ಚರಿಯಾಗುತ್ತದೆ. ಈಗ ಅಪ್ಪ ಜೊತೆಗಿರಬೇಕಿತ್ತು ಎಂಬ ಹಳಹಳಿ ಶುರುವಾಗುತ್ತದೆ. ಕೆಲಸದ ಹಂಗಿನಲ್ಲಿ ದೂರ ಹೋದ ನಮ್ಮಂಥವರಿಗೆ ಅಪ್ಪ ನೆನಪುಗಳ ಕಣಜ. ಒಂದು ಶಾಶ್ವತ ಅಚ್ಚರಿ.

- ಚಾಮರಾಜ ಸವಡಿ