ಹೊಸ ರೂಪದಲ್ಲಿ ಕೃಷಿ ಸಂಪದ

30 Jul 2009

4 ಪ್ರತಿಕ್ರಿಯೆ
Krushi Sampada

ನಾಲ್ಕು ವರ್ಷಗಳ ಹಿಂದೆ ಪ್ರಯೋಗಾರ್ಥ ಪ್ರಾರಂಭವಾದ ಯೋಜನೆ, ಸಂಪದ. ಅಂತರ್ಜಾಲದಲ್ಲಿ ಕನ್ನಡವನ್ನು ಹೆಚ್ಚಾಗಿ ಬಳಸುವಂತೆ ಪ್ರೋತ್ಸಾಹಿಸಲು ಆಕಸ್ಮಿಕವಾಗಿ ಪ್ರಾರಂಭವಾದ ಯೋಜನೆಯಿದು.

ಇಂದು, ಅಂತರ್ಜಾಲದಲ್ಲಿ ತನ್ನ ಅಸ್ತಿತ್ವದ ಐದನೇ ವರ್ಷಕ್ಕೆ ಕಾಲಿಡುತ್ತಿರುವ ಸಂಪದ ಹಾಗು ಇದರಲ್ಲಿರುವ ಸಮುದಾಯ ಮತ್ತಷ್ಟು ಗುರುತರ, ಮಹತ್ವದ ಕೆಲಸಗಳನ್ನು ಡಿಜಿಟಲ್ ಜಗತ್ತಿನಲ್ಲಿ ಮಾಡುವ ಕ್ಷಮತೆಯುಳ್ಳದ್ದಾಗಿದೆ. ನಮ್ಮ ಭಾಷೆ ತಂತ್ರಜ್ಞಾನದಲ್ಲಿ ಮತ್ತಷ್ಟು ಅಳವಡಿಕೆಯಾಗುವಂತೆ ಮಾಡುವ ಕೆಲಸ ಆಗಬೇಕಿದೆ. ಇದು ನಮ್ಮ ರಾಜ್ಯಕ್ಕೆ, ನಮ್ಮ ಭಾಷೆಗೆ ಮಹತ್ತರ ಬದಲಾವಣೆ ತರಬಹುದಾದ ಕೆಲಸವಾಗಬಲ್ಲುದು.

ಸಂಪದದಲ್ಲಿ ಪದೆ ಪದೆ ಚರ್ಚೆಗೆ ಬರುವ ಸಂಗತಿಗಳಲ್ಲಿ ಕೆಲವು - ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಜನರ ಅಭ್ಯುದಯಕ್ಕೆ ಬಳಸುವುದು ಹೇಗೆ ಎಂಬುದು. ಇದರಿಂದ ಬೇರುಮಟ್ಟದ ಜನರಿಗೆ ನೆರವಾಗಬೇಕು, ಅವರಿಗೂ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಆಸಕ್ತಿ ಹುಟ್ಟಬೇಕು, ಅವರನ್ನು ಸಹಭಾಗಿಗಳನ್ನಾಗಿಸಲು ಪ್ರಯತ್ನಿಸಬೇಕು, ಗೊತ್ತಿರುವ ಜ್ಞಾನವನ್ನು ಅವರೊಂದಿಗೆ ಹಂಚಿಕೊಳ್ಳಬೇಕು ಹಾಗೂ ಚರ್ಚಿಸಬೇಕು. ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ಕೃಷಿ ಕ್ಷೇತ್ರ.ಬೌದ್ಧಿಕ ಜಗತ್ತಿನಲ್ಲಿ ಕೃಷಿ ಕ್ಷೇತ್ರ ಬಹುತೇಕ ನಿರ್ಲಕ್ಷ್ಯಿತ ಕ್ಷೇತ್ರ. ಆದರೆ, ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಈ ದಿನಗಳಲ್ಲಿ, ಭೌಗೋಳಿಕ ಮಿತಿ ದಾಟಿ ಪರಸ್ಪರ ಸಂಪರ್ಕಿಸುವುದು ಸಾಧ್ಯವಾಗಿದೆ. ಇದು ಕೃಷಿ ಕ್ಷೇತ್ರದಲ್ಲಿ ಹೊಸ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದ್ದು, ಡಿಜಿಟಲ್‌ ಡಿವೈಡ್‌ ಗೆಲ್ಲಲು ನೆರವಾಗುತ್ತಿದೆ. ಇವತ್ತಿಗೂ ಕೃಷಿ ನಮ್ಮ ಪ್ರಗತಿಯ ಬುನಾದಿ ಕ್ಷೇತ್ರವಾಗಿದ್ದರಿಂದ, ಇದನ್ನು ಬಲಪಡಿಸಲು, ಬೆಳೆಸಲು ತಂತ್ರಜ್ಞಾನದ ಬಳಕೆ ಹೆಚ್ಚಬೇಕಿದೆ.

ಈಗಾಗಲೇ ಕೃಷಿ ಸಂಪದವೂ ಸೇರಿದಂತೆ ವಿವಿಧ ಕ್ಷೇತ್ರಗಳ ಬೆಳವಣಿಗೆಗಳಿಗೆ ವೇದಿಕೆ ಇದೆ. ಆದರೆ, ಕೃಷಿ ಸಂಪದ ಪೂರ್ಣಮಟ್ಟದ ಆನ್‌ಲೈನ್‌ ಮ್ಯಾಗಝಿನ್‌ ಥರ, ಕೃಷಿ ಪತ್ರಿಕೆಯಾಗಿ ವಿಸ್ತಾರವಾಗಬೇಕು. ಕೃಷಿ ಪರಿಣಿತರ ಜೊತೆ ನಮ್ಮ ರೈತರೂ ಅದರಲ್ಲಿ ಪಾಲ್ಗೊಳ್ಳುವಂತಾಗಬೇಕು. ಇದ್ದ ಭೂಮಿಯಲ್ಲೇ, ಲಭ್ಯವಿರುವ ಸಂಪನ್ಮೂಲಗಳಲ್ಲೇ ಅತ್ಯುತ್ತಮ ಬೆಳೆ ಬೆಳೆಯುವುದು ಹೇಗೆಂಬ ಮಾಹಿತಿ ನಮ್ಮ ರೈತರಿಗೆ ದಕ್ಕುವಂತಾಗಬೇಕು. ನೇಗಿಲಯೋಗಿಗೆ ಸಂಪದದ ಕೊಡುಗೆಯೂ ತಲುಪುವಂತಾಗಬೇಕು. ಹಳ್ಳಿಹಳ್ಳಿಯಲ್ಲಿಯೂ ಸಮೃದ್ಧಿ ಉಂಟಾದಾಗ ಮಾತ್ರ ದೇಶ ಬೆಳೆದೀತು.

ಆದ್ದರಿಂದ, ಸಂಪದ ಬಳಗದ ನಾವು ಕೆಲ ಜನ, ಕೃಷಿ ಕ್ಷೇತ್ರಕ್ಕೆ ಒತ್ತು ನೀಡುವ ಪ್ರಯತ್ನ ಮಾಡಲು ಹೊರಟಿದ್ದೇವೆ. ಇದೊಂದು ಸಮೂಹ ಯೋಜನೆಯಾಗಿದ್ದು, ನಿಮ್ಮೆಲ್ಲರ ಪಾಲ್ಗೊಳ್ಳುವಿಕೆಯನ್ನು ಅಪೇಕ್ಷಿಸುತ್ತಿದ್ದೇವೆ, ಆಮಂತ್ರಿಸುತ್ತಿದ್ದೇವೆ.

ಕೃಷಿ ಕ್ಷೇತ್ರದ ಸಮಗ್ರ ಬೆಳವಣಿಗೆ ಕುರಿತಂತೆ ವಿಚಾರ ವಿನಿಮಯಕ್ಕೆ, ತಂತ್ರಜ್ಞಾನ ಮಾಹಿತಿ ಹಂಚಿಕೊಳ್ಳಲು ಆನ್‌ಲೈನ್‌ ವ್ಯವಸ್ಥೆ ಕಲ್ಪಿಸಲಾಗುವುದು. ಈ ಉದ್ದೇಶಕ್ಕಾಗಿ ಆನ್‌ಲೈನ್‌ ಮಾಸಿಕ ಪತ್ರಿಕೆಯನ್ನೂ ಹೊರತರುವ ವಿಚಾರವಿದೆ. ಕೃಷಿ ಕ್ಷೇತ್ರದಲ್ಲಾಗಿರುವ ಹಾಗೂ ಆಗುತ್ತಿರುವ ಅಷ್ಟೂ ತಾಂತ್ರಿಕ ಮಾಹಿತಿ, ಮಾರುಕಟ್ಟೆ ದರ, ಯಾವ ಭೂಮಿಗೆ ಯಾವ ಬೆಳೆ ಒಗ್ಗುತ್ತದೆ, ಕೃಷಿ ಕ್ಷೇತ್ರದ ಸಮಸ್ಯೆಗಳಿಗೆ ಏನು ಪರಿಹಾರ, ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳುವುದು ಹೇಗೆ ಎಂಬೆಲ್ಲ ಮಾಹಿತಿ ಆನ್‌ಲೈನ್‌ ಪತ್ರಿಕೆಯ ಮೂಲಕ ರೈತರಿಗೆ ಲಭ್ಯವಾಗಲಿದೆ. ನಾಡಿನಾದ್ಯಂತ ಹರಡಿರುವ ಸಂಪದಿಗರು ಈ ಮಾಹಿತಿಯನ್ನು ರೈತರಿಗೆ ತಲುಪಿಸುವಂತಾಗಬೇಕು. ಗ್ರಾಮೀಣ ಪ್ರದೇಶದಲ್ಲೂ ವಿಸ್ತರಿಸುತ್ತಿರುವ ಇಂಟರ್‌ನೆಟ್‌ನ ಸೌಲಭ್ಯ ಪಡೆಯುವ ಹುಮ್ಮಸ್ಸು ನಮ್ಮ ರೈತರಲ್ಲೂ ಮೂಡುವಂತಾಗಬೇಕು.

ಇದಕ್ಕಾಗಿ ಆಸಕ್ತರಿಂದ ಸಾಂಕೇತಿಕ ಮೊತ್ತದ ಚಂದಾ ಹಣ ಪಡೆಯುವ ಉದ್ದೇಶವಿದ್ದು, ಇದನ್ನು ಆಯ್ದ ಬರಹಗಾರರಿಗೆ ಗೌರವಧನದ ರೀತಿ ನೀಡುವ ಯೋಜನೆಯಿದೆ. ಸಂಪದದಲ್ಲಿ ಬರುವ ಲೇಖನಗಳಲ್ಲಿಯೂ ಕೆಲವನ್ನು ಹೆಕ್ಕಿಕೊಂಡು ಆನ್‌ಲೈನ್‌ ಮಾಸಿಕ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು. ಸಂಪಾದಕೀಯ ಜವಾಬ್ದಾರಿಯನ್ನು ಈ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಹೊಂದಿರುವ ಹಿರಿಯರಾದ ಅಡ್ಡೂರ್‌ ಕೃಷ್ಣರಾವ್‌ ವಹಿಸಿಕೊಳ್ಳಲಿದ್ದಾರೆ.

ಅವರ ಹೊರತಾಗಿ ಕೃಷಿ ಸಂಪದ ತಂಡದಲ್ಲಿ ನಾ. ಕಾರಂತ ಪೆರಾಜೆ, ಭೂಷಣ್‌ ಮಿಡಿಗೇಶಿ, ಮಲ್ಲಿಕಾರ್ಜುನ ಹೊಸಪಾಳ್ಯ, ಶಾಮ ಕಶ್ಯಪ ಜೊತೆ ನಾನೂ ಇರುತ್ತೇನೆ. ಎಲ್ಲಕ್ಕಿಂತ ಮಿಗಿಲಾಗಿ ನೀವಿರುತ್ತೀರಿ. ಬನ್ನಿ, ನೇಗಿಲಯೋಗಿಯ ಹೆಗಲಿಗೆ ಹೆಗಲು ಜೋಡಿಸೋಣ.

(ಸೂಚನೆ: ಈ ಯೋಜನೆ ಕುರಿತಂತೆ ಈ ಕೆಳಗಿನ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಮನವಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಕೂಡ ಕಳಿಸಿಕೊಡಬಹುದು.)