ಎಲೆ ಕವಿತೆ, ಎಲ್ಲಿ ಅವಿತೆ?

24 Aug 2009

4 ಪ್ರತಿಕ್ರಿಯೆ
ಒಂದು ಕವಿತೆ ಬರೆಯಲು ಕೂತೆ

ಗಡಿಯಾರ ಸುಮ್ಮನಾಯಿತು
ಅರಳಬೇಕಿದ್ದ ಹೂಗಳು, ರಾತ್ರಿಯ
ಸದ್ದುಗಳು ಸುಮ್ಮನಾದವು
ಹುಳು ಹಿಡಿಯಲು ಹೊಂಚು ಹಾಕಿದ್ದ
ಗೋಡೆಯ ಮೇಲಿನ ಹಲ್ಲಿಯೂ ಸುಮ್ಮನಾಯಿತು

ಅಲೆಯಾಗುತ್ತಿದ್ದ ಸಂಗೀತ ಮೌನವಾಯಿತು
ಷೆಲ್ಫ್‌ನಲ್ಲಿ ಕೂತ ಕವಿಗಳು ಕಿವಿಯಾದರು
ಎದೆಯಲ್ಲಿದ್ದ ಸಾವಿರಾರು ಭಾವನೆಗಳು
ಭೋರ್ಗರೆಯಲು ಪಾಳಿ ಹಚ್ಚಿದವು

ಕಂಬನಿಯಾದ ಕನಸುಗಳು
ಮಾತೇ ಆಗದ ಪಿಸುಮಾತುಗಳು
ನಾಳೆ ಖಂಡಿತ ಅಂದುಕೊಂಡ
ನಿನ್ನೆಯ ಹಳವಂಡಗಳು
ನಾ ಮುಂದು, ತಾ ಮುಂದು
ಎಂದು ಒಂದೇ ಸಮ ನುಗ್ಗಿದವು

ಕಕ್ಕಾವಿಕ್ಕಿಯಾಯಿತು ಕೀಲಿಮಣೆ
ತಡವರಿಸಿದವು ಬೆರಳುಗಳು
ಮಾನಿಟರೂ ಬೆಚ್ಚಿಬಿದ್ದಂತಿತ್ತು
ಸಮಸ್ತ ಕವಿಗಳಾಣೆ, ದಾರ್ಶನಿಕರಾಣೆ
ಅನುಭಾವಿಗಳಾಣೆ, ಚೇತನಗಳಾಣೆ
ಇವು ಸತ್ಯ, ಇವು ನಿತ್ಯ
ಹೊರಬರಲು ಹಂಬಲಿಸಿದ್ದವು
ಕುದಿಯಾಗಿದ್ದವು, ತಿದಿಯೊತ್ತಿದ್ದವು
ಬೆರಳುಗಳ ಭವ ಹರಿದು
ಹಾಳೆ, ಪರದೆಗಳ ಬಂಧನ ತೊರೆದು
ಹಾಡಾಗಲು ಹಾತೊರೆದಿದ್ದವು-

ಏನೇ ಅಂದುಕೊಂಡರೂ,
ಎಷ್ಟೇ ಅಂಗಲಾಚಿದರೂ
ಕವಿತೆ ಏಕೋ ಕನಸ ಕನ್ನಡಿಯಾಗಲಿಲ್ಲ
ಮೂಡಲಿಲ್ಲ, ಅರಳಲಿಲ್ಲ, ಭೋರ್ಗರೆಯಲಿಲ್ಲ
ಮೊದಲ ಸಂಗಮದ ಕನ್ಯೆಯಂತೆ
ಮುದುಡಿತ್ತು, ನಲುಗಿತ್ತು, ಹಸಿದಿತ್ತು
ಚಿಮ್ಮಿ ಬರುವ ಮೊದಲೇ ಕುಸಿದಿತ್ತು

***

‘ಆಯ್ತಾ ಕವಿತೆ ಬರೆದಿದ್ದು?’
ಎಂದು ಕೇಳುತ್ತ ನನ್ನವಳು ಒಳಬರುತ್ತಲೇ
ನಾಚಿ ಕಿಟಕಿಯಿಂದಾಚೆ ಹಾರಿಹೋಯಿತ್ತು.

- ಚಾಮರಾಜ ಸವಡಿ

ಜೊಳ್ಳಿನ ನಡುವೆ ಗಟ್ಟಿಕಾಳಿಗೆ ತವಕ

21 Aug 2009

7 ಪ್ರತಿಕ್ರಿಯೆ

'ಎಷ್ಟೊಂದು ಕೆಟ್ಟ ಬರಹಗಳು ಬರ್ತಿವೆಯಲ್ಲ ಮಾರಾಯಾ!' ಎಂದು ಬೇಸರಪಟ್ಟುಕೊಂಡ ಗೆಳೆಯ.

ಅವನು ಮಾತಾಡುತ್ತಿದ್ದುದು ಬ್ಲಾಗ್‌ ಮತ್ತು ಸಮೂಹತಾಣಗಳ ಬರವಣಿಗೆ ಬಗ್ಗೆ. ಚಿಲ್ಲರೆ ವಿಷಯಗಳ ಬಗ್ಗೆ ಬರೆಯುವುದು, ಚರ್ಚಿಸುವುದು ಮತ್ತು ಅದನ್ನೇ ಚ್ಯೂಯಿಂಗ್‌ಗಮ್‌ ಥರ ರಸ ಮುಗಿದ ನಂತರವೂ ಜಗಿಯುತ್ತಿರುವುದು ಅವನಿಗೆ ಬೇಸರ ತರಿಸಿತ್ತು. ನನಗೆ ಗೊತ್ತಿರುವಂತೆ ಅವನು ಪತ್ರಿಕೆಗಳ ನಿಯಮಿತ ಓದುಗ. ಉತ್ತಮ ಬರವಣಿಗೆಯನ್ನು ತಕ್ಷಣ ಗುರುತಿಸಬಲ್ಲ ಪ್ರಬುದ್ಧ.

ನಾನು ಪತ್ರಿಕೋದ್ಯಮಕ್ಕೆ ಕೊಂಚ ಬ್ರೇಕ್‌ ಕೊಟ್ಟು ಇಂಟರ್‌ನೆಟ್‌ನ ಕನ್ನಡ ಚಟುವಟಿಕೆಗಳಲ್ಲಿ ತೀವ್ರವಾಗಿ ತೊಡಗಿಕೊಳ್ಳುತ್ತಿರುವ ದಿನಗಳಿವು. ಬಹಳ ದಿನಗಳ ನಂತರ ಸಿಕ್ಕಿದ್ದ ಅವನ ಪ್ರತಿಕ್ರಿಯೆ ಕೇಳಿ ನಗು ಬಂತು. 'ಸದ್ಯ ನಾನು ಆ ಕೆಟ್ಟ ಬರಹದ ಲೋಕವನ್ನೇ ಸೀರಿಯೆಸ್‌ ಆಗಿ ತೆಗೆದುಕೊಂಡಿದ್ದೇನೆ. ಅಂದರೆ, ಅದರಲ್ಲೇ ಕೆಲಸ ಮಾಡಲು ಮುಂದಾಗಿದ್ದೇನೆ. ನೀನು ಹೀಗೆ ಪ್ರತಿಕ್ರಿಯೆ ಕೊಟ್ಟರೆ, ನಾನು ಅದರಲ್ಲಿ ಬದುಕು ಕಟ್ಟಿಕೊಳ್ಳುವುದು ಹೇಗೆ ಮಾರಾಯಾ?' ಎಂದು ಸುಳ್ಳೇ ಗಾಬರಿ ತೋರಿದೆ.

ಅವನು ಮತ್ತೆ ಬ್ಲಾಗ್‌ ಮತ್ತು ಸಮೂಹತಾಣಗಳಲ್ಲಿ ಕಾಣಿಸಿಕೊಳ್ಳುವ ಕಳಪೆ ಬರಹಗಳ ಬಗ್ಗೆ ಮಾತನಾಡಿದ. ಪತ್ರಿಕೆಗಳಲ್ಲಿಯೂ ಗುಣಮಟ್ಟ ಕುಸಿಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ. ಅವನೊಂದಿಗೆ ಮಾತನಾಡಿದ ಕೆಲ ವಿಷಯಗಳನ್ನಷ್ಟೇ ಇಲ್ಲಿ ಬರೆಯುವ ಮೂಲಕ, ಸಾರ್ವತ್ರಿಕೆ ಅಭಿಪ್ರಾಯಕ್ಕೆ ನನ್ನ ಅನಿಸಿಕೆಯನ್ನು ವ್ಯಕ್ತಪಡಿಸುತ್ತಿದ್ದೇನೆ.

ಬರಹದ ಗುಣಮಟ್ಟ ಕುಸಿಯುತ್ತಿದೆ ಎಂಬ ಆರೋಪ ನನಗೆ ಯಾವತ್ತೂ ಸರಿ ಅನಿಸಿಲ್ಲ. ಏಕೆಂದರೆ, ಹಿಂದೆ, ಅಂದರೆ ಪತ್ರಿಕೆಗಳ ಸಂಖ್ಯೆ ಹೆಚ್ಚುವ ಮುನ್ನ, ಇಂಟರ್‌ನೆಟ್‌ ಜನಪ್ರಿಯವಾಗುವ ಮುನ್ನ, ಕೆಲವೇ ಕೆಲವು ಜನ ನಿಯಮಿತವಾಗಿ ಬರೆಯುತ್ತಿದ್ದರು. ಪತ್ರಿಕೆಗಳ ಸಂಖ್ಯೆಯ ಜೊತೆಗೆ ಬರಹಗಾರರ ಸಂಖ್ಯೆಯೂ ಸೀಮಿತವಾಗಿತ್ತು. ಪತ್ರಿಕೆಗೆ ಬರೆಯಲು ಒಂದು ಮಟ್ಟದ ಪಾಂಡಿತ್ಯ ಮತ್ತು ಬರವಣಿಗೆ ಶೈಲಿ ಅವಶ್ಯ ಎಂದು ನಂಬಿದ್ದ ಹಾಗೂ ಅದನ್ನೇ ನಿರೀಕ್ಷಿಸುತ್ತಿದ್ದ ಕಾಲವದು. ಹೀಗಾಗಿ, ಬರೆದಿದ್ದೆಲ್ಲ ಚೆನ್ನಾಗಿಯೇ ಕಾಣುತ್ತಿತ್ತು.

ಕ್ರಮೇಣ ಪತ್ರಿಕೆಗಳ ಸಂಖ್ಯೆ ಹೆಚ್ಚಿತು. ಆದರೆ, ಆ ಪ್ರಮಾಣಕ್ಕೆ ತಕ್ಕಂತೆ ಬರಹಗಾರರ ಸಂಖ್ಯೆ ಹೆಚ್ಚಲಿಲ್ಲ. ಸಹಜವಾಗಿ, ಗುಣಮಟ್ಟ ಕಡಿಮೆ ಇರುವ ಜನ ಉದ್ಯಮ ಪ್ರವೇಶಿಸಿದರು. ಅಂಥ ಬಹುತೇಕರಿಗೆ ಪತ್ರಿಕೆಯಲ್ಲಿ ಕೆಲಸ ಮಾಡುವುದು ಒಂದು ವೃತ್ತಿಯಾಗಿತ್ತೇ ವಿನಾ ಅವರ ಪ್ರವೃತ್ತಿಗೆ ವೇದಿಕೆಯಾಗಿರಲಿಲ್ಲ. ಸಹಜವಾಗಿ ಬರವಣಿಗೆಯ ಗುಣಮಟ್ಟದಲ್ಲಿ ಮುಂಚೆ ಕಾಣುತ್ತಿದ್ದ ಗಟ್ಟಿತನ ಕಾಣಲಿಲ್ಲ. ಹೊಸಬರಲ್ಲಿ ತುಂಬ ಜನ ಚೆನ್ನಾಗಿ ಬರೆದರೂ, ಜೊಳ್ಳಿನ ಎದುರು ಅವರು ಅಷ್ಟಾಗಿ ಗಮನ ಸೆಳೆಯಲಿಲ್ಲ.

ಈ ಹಂತದಲ್ಲಿ ಇಂಟರ್‌ನೆಟ್‌ ಜನಪ್ರಿಯವಾಗಿ ಸಮೂಹತಾಣ, ಬ್ಲಾಗ್‌ಗಳು ಕಾಣಿಸಿಕೊಂಡವು. ಅದುವರೆಗೂ ಪತ್ರಿಕೆಗಳಲ್ಲಿ ಪ್ರಟಕವಾಗಬೇಕೆಂದರೆ, ಬರಹಗಳಿಗೆ ಒಂದು ಹಂತದ ಗುಣಮಟ್ಟ ಇರಲೇಬೇಕಿತ್ತು. ಆದರೆ, ಬ್ಲಾಗ್‌ಗಳಲ್ಲಿ ಬರೆಯಲು ಇಂಥ ಯಾವ ಅಡೆತಡೆಯೂ ಇರಲಿಲ್ಲ. ಯಾರು, ಯಾರ ಬಗ್ಗೆ ಏನು ಬೇಕಾದರೂ ಬರೆಯಬಹುದು ಎಂದಾದಾಗ, ಎಲ್ಲರೂ ಬರೆಯತೊಡಗಿದರು. ಜೊಳ್ಳು, ಪೊಳ್ಳು, ಕೊಳೆ, ಕೊಚ್ಚೆ, ವಿಷ, ನಂಜು- ಹೀಗೆ ಅದುಮಿಟ್ಟಿದ್ದ, ಮುಚ್ಚಿಟ್ಟಿದ್ದ ವಿಕೃತಿಯೆಲ್ಲವೂ ಧಾರಾಳವಾಗಿ ಹೊರಬರತೊಡಗಿತು. ಇವರ ನಡುವೆ ಅಸಲಿ ಪ್ರತಿಭಾವಂತರ ಬರವಣಿಗೆ ಗಮನ ಸೆಳೆದಿದ್ದು ಕಡಿಮೆ.

ನನ್ನ ಮಿತ್ರನಿಗೆ ಇದನ್ನೆಲ್ಲ ವಿವರಿಸಿ ಹೇಳಿದೆ. ಎಲ್ಲಾ ಕಾಲದಲ್ಲೂ ಅತ್ಯುತ್ತಮವಾದದ್ದು ಇದ್ದೇ ಇರುತ್ತದೆ. ಅದಕ್ಕಾಗಿ ಕೊಂಚ ಹುಡುಕಬೇಕು. ಜೊಳ್ಳನ್ನು ಸರಿಸಿ ನೋಡಿದರೆ, ಗಟ್ಟಿ ಕಾಳು ಸಿಕ್ಕೀತು. ಆದರೆ, ಜೊಳ್ಳಿನ ಪ್ರಮಾಣ ಜಾಸ್ತಿ ಇದೆ ಎಂಬ ಕಾರಣಕ್ಕೆ ಇಡೀ ವ್ಯವಸ್ಥೆಯನ್ನೇ ದೂರಬೇಡ. ಆ ಮೂಲಕ ಇರಬಹುದಾದ ಅಲ್ಪಸ್ವಲ್ಪ ಗಟ್ಟಿಕಾಳನ್ನೂ ನೀನು ಕಳೆದುಕೊಂಡು ಬಿಡುತ್ತೀ. ಪೇಲವ, ಟೊಳ್ಳು, ಕಡಿಮೆ ಗುಣಮಟ್ಟದ ಬರವಣಿಗೆ ಮಾಡುವವರು ಮಾಡುತ್ತ ಹೋಗಲಿಬಿಡು. ನಿನಗೆ ಬೇಕೆನಿಸಿದ್ದನ್ನು ಓದು, ಉಳಿದಿದ್ದನ್ನು ನಿರ್ಲಕ್ಷ್ಯಿಸು. 'ಅಯ್ಯೋ ಕಾಲ ಕೆಟ್ಟುಹೋಯಿತು' ಎಂಬ ವೃದ್ಧ ಗೊಣಗುವಿಕೆಗಿಂತ, ಸೂಕ್ತ ಆಯ್ಕೆ ಮತ್ತು ಜಾಣ ನಿರ್ಲಕ್ಷ್ಯ ಉತ್ತಮ ಎಂದು ಸಲಹೆ ನೀಡಿದೆ.

'ಅಲ್ಲ ಮಾರಾಯ, ಇಷ್ಟೊಂದು ಬ್ಲಾಗ್‌ಗಳು, ಬರವಣಿಗೆಗಳು ಬರುತ್ತಿರುವಾಗ, ಉತ್ತಮವಾದದ್ದನ್ನು ಹುಡುಕುವುದು ಹೇಗೆ? ಎಷ್ಟೊಂದು ಸಮಯ ವ್ಯರ್ಥವಾಗುತ್ತದಲ್ಲ' ಎಂದು ಆತ ಚಿಂತಿತನಾದ.

'ಅದಕ್ಕೆಂದೇ ಮಿತ್ರ ಸಿರಿ ಸಂಪದ ಎಂಬ ಹೊಸ ತಾಣ ಬರುತ್ತಿದೆ. ಈ ಕೆಲಸವನ್ನು ಅದು ಮಾಡುತ್ತದೆ. ಅಲ್ಲಿಯವರೆಗೆ ಕಾಯಿ, ಇಲ್ಲಾಂದ್ರೆ ಎಲ್ಲಾದ್ರೂ ಹೋಗಿ ಸಾಯಿ' ಎಂದೆ ನಗುತ್ತ.

ಅವನೂ ನಕ್ಕ.

- ಚಾಮರಾಜ ಸವಡಿ

ಹಂದಿಜ್ವರ ಇರೋದು ಮಂದಿ ಮನಸಲ್ಲಿ

20 Aug 2009

2 ಪ್ರತಿಕ್ರಿಯೆ
ಎಲ್ಲೆಲ್ಲೂ ಹಂದಿಜ್ವರದ್ದೇ ಭೀತಿ. ತೀರ ಹತ್ತಿರ ಬರುವವರೆಗೂ ಆಕೆ/ಆತ ಪರಿಚಿತರೆಂಬುದೇ ಗೊತ್ತಾಗುವುದಿಲ್ಲ. ಆಪರೇಶನ್‌ ಮಾಡಲು ಹೊರಟಿದ್ದಾರೋ ಎಂಬಂತೆ ಮುಖಕ್ಕೆ ಮಾಸ್ಕ್. ನಕ್ಕರೂ ಗೊತ್ತಾಗುವುದಿಲ್ಲ. ಸೋಟೆ ತಿರುವಿದರೂ ತಿಳಿಯುವುದಿಲ್ಲ. ಮಾತಾಡಿದರೆ, ಬೆದರಿಕೆ ಒಡ್ಡುತ್ತಿದ್ದಾರೋ ಎಂಬ ಅನುಮಾನ ಬರುವಂಥ ಧ್ವನಿ.

ಇದೇನಿದು, ನಿನ್ನೆ ಮೊನ್ನೆವರೆಗೆ ಚೆನ್ನಾಗಿಯೇ ಇದ್ದ ಮಂದಿಗೆ ಹಂದಿಜ್ವರದ ಭೀತಿ ಒಕ್ಕರಿಸಿದೆಯಲ್ಲ ಎಂದು ಗಾಬರಿಯಾಗುತ್ತದೆ. ಬೆಳ್ಳಂಬೆಳಿಗ್ಗೆಯೇ ಫೋನ್‌ ಮಾಡಿ, 'ಇಲ್ಲೆಲ್ಲ ಮಾಸ್ಕ್ ಖಾಲಿ. ನಿಮ್ಮಲ್ಲೇನಾದರೂ ಸಿಗುತ್ತದಾ' ಎಂದು ಟಾಯ್ಲೆಟ್‌ಗೆ ಅರ್ಜೆಂಟಾಗಿ ಹೊರಟವನನ್ನು ಫಜೀತಿಗೆ ಬೀಳಿಸಿದ ಮಿತ್ರರಿದ್ದಾರೆ. 'ಮಾಸ್ಕ್‌ ಇಲ್ಲ, ಟಿಷ್ಯೂ ಪೇಪರ್ ಪರವಾಗಿಲ್ವಾ?' ಎಂದು ಅಷ್ಟೇ ಕಾಳಜಿಯಿಂದ ಉತ್ತರಿಸಿ ನೆಮ್ಮದಿಯ ಮನೆಗೆ ಸುಮ್ಮನೇ ಹೋಗಿದ್ದೇನೆ.

ಇವರಿಗೆಲ್ಲೋ ಭ್ರಾಂತು. 'ನೀವು ಮುಖಕ್ಕೆ ಗವುಸು ಹಾಕಿಕೊಂಡಾಕ್ಷಣ, ಹಂದಿಜ್ವರದ ರೋಗಾಣುಗಳು ವಾಪಸ್ ಹೋಗಿಬಿಡುತ್ತವಾ? ಅಲ್ಲೇ ಹಣೆಯ ಮೇಲೆ, ಕಣ್ರೆಪ್ಪೆಗಳ ಮೇಲೆ, ಕಿವಿ ಹತ್ತಿರ, ಕೊರಳಪಟ್ಟಿಯಡಿ ಕಾಯುತ್ತ ಕೂಡುವುದಿಲ್ಲವೆ?' ಎಂದು ತಮಾಷೆ ಮಾಡಿ ಬೈಸಿಕೊಂಡಿದ್ದೇನೆ. ಉಡಾಫೆಯಾಗಿ ಮಾತಾಡುವ ನನ್ನನ್ನೇ ಹಂದಿಜ್ವರಪೀಡಿತನಂತೆ ನೋಡಿ ದೂರ ಹೋಗಿದ್ದಾರೆ. ಏನು ಮಾಡಲಿ, ರೋಗಕ್ಕೆ ಔಷಧಿ ಕೊಡಬಹುದು, ಭ್ರಾಂತಿಗೆ ಔಷಧಿ ಕೊಡೋದು ಕಷ್ಟ.

ಈ ಎಲ್ಲ ಘಟನೆಗಳ ನಡುವೆ ಸರ್ಕಾರವೇ ಹಂದಿಜ್ವರಪೀಡಿತನಂತೆ ಗಾಬರಿಯಿಂದ ಓಡಾಡುತ್ತಿದೆ. ಮಳೆ ಬರುತ್ತಿಲ್ಲ ಎಂಬ ಯೋಚನೆ ಯಾರಿಗೂ ಇಲ್ಲ. ಬರಪೀಡಿತ ಪ್ರದೇಶಗಳ ಹಣೆಬರಹ ಏನು ಎಂದು ವಿಚಾರಿಸುತ್ತಿಲ್ಲ. ಮಾಸ್ಕ್‌, ಹಂದಿಜ್ವರದ ಔಷಧಿಗಳ ಹೋಲ್‌ಸೇಲ್ ಖರೀದಿಗೆ ಈಗ ಭರ್ಜರಿ ಅವಕಾಶ. ನಿಯಮಗಳನ್ನು ಉಲ್ಲಂಘಿಸಿದರೂ ಕ್ಯಾರೇ ಅನ್ನುವವರಿಲ್ಲ. ಎಲ್ಲರ ಮನಸ್ಸಿನಲ್ಲೂ ಹಂದಿಜ್ವರದ ಸುಪ್ತ ಭೀತಿ.

ಹಂದಿಜ್ವರದ ಬಗ್ಗೆ ಹೊಸ ವರದಿ ತಾರದಿದ್ದರೆ ವರದಿಗಾರನ ಮೇಲೆ ಥೇಟ್ ಕೊಬ್ಬಿದ ಹಂದಿಯಂತೆ ಏರಿಬರುವ ಚೀಫ್‌ಗಳಿದ್ದಾರೆ. ಹೀಗಾಗಿ, ಪರಿಸ್ಥಿತಿಯನ್ನು ಅಗತ್ಯಕ್ಕಿಂತ ತೀವ್ರವಾಗಿ ಬಿಂಬಿಸುವುದು ವರದಿಗಾರರ ಕರ್ಮ. ಪತ್ರಿಕೆಗಳ ಪುಟ ತಿರುವಿದರೆ (ಪುಟ ತಿರುವುದೇನು ಬಂತು, ಮುಖಪುಟದಲ್ಲೇ ರಾಚುತ್ತಿರುತ್ತದೆ), ಚಾನೆಲ್‌ಗಳನ್ನು ಬದಲಿಸಿದರೆ ಎಲ್ಲೆಲ್ಲೂ ಮಾಸ್ಕುಗಳದೇ ಚಿತ್ರಣ. ಇದ್ದಕ್ಕಿದ್ದಂತೆ ನಮ್ಮ ದೇಶವೇ ಮಾಸ್ಕೋ ಆಗಿಬಿಟ್ಟಿದೆ ಅನಿಸುತ್ತಿದೆ. ಸದ್ಯಕ್ಕೆ ನ್ಯೂಸ್ ರೀಡರ್‌ಗಳು ಮಾಸ್ಕ್ ಹಾಕಿಕೊಂಡು ಸುದ್ದಿ ಓದುತ್ತಿಲ್ಲ ಎಂಬುದೊಂದೇ ಸಮಾಧಾನ.

ರಸ್ತೆಗಿಳಿದರೆ ಸಾಕು, ಮಾಸ್ಕ್ ಧರಿಸಿದ ಜನ ಘನಗಂಭೀರತೆಯಿಂದ ಓಡಾಡುತ್ತಿರುವುದು ಕಣ್ಣಿಗೆ ಬೀಳುತ್ತದೆ. ಅರೆಬರೆ ಸುಂದರಿಯರೂ ಮಾಸ್ಕ್ ಧರಿಸಿಕೊಂಡು ಸಕತ್ತಾಗಿ ಕಾಣತೊಡಗಿದ್ದಾರೆ. ಇದ್ದಕ್ಕಿದ್ದಂತೆ ಉಬ್ಬುಹಲ್ಲಿನವರು ಮಾಯವಾಗಿದ್ದಾರೆ. ಲಿಪ್‌ಸ್ಟಿಕ್‌ಗಳು ಕಾಣುತ್ತಿಲ್ಲ. ಭಾನುವಾರ ಬಂದರೂ ಹಂದಿಮಾಂಸದ ಅಂಗಡಿಗಳ ಬಾಗಿಲು ಹಾಕಿಯೇ ಇದೆ. ಎಲ್ಲ ಕಡೆ ಮಂದಿ ಮುಖಕ್ಕೆ ಗವುಸು ಹಾಕಿಕೊಂಡು ಓಡಾಡುತ್ತಿರುವುದನ್ನು ಬಹುಶಃ ಹಂದಿಗಳೂ ಆನಂದದಿಂದ ನೋಡುತ್ತಿವೆಯೇನೋ.

ಇದು ಸಮೂಹ ಸನ್ನಿಯಾ? ಅತಿರೇಕವಾ? ಬೆಂಗಳೂರಿನ ಭರ್ಜರಿ ಟ್ರಾಫಿಕ್‌ನಲ್ಲಿ ಗಾಡಿ ಓಡಿಸುವಾಗಲೂ ಮುಖಕ್ಕೆ ಕರ್ಚೀಫ್‌ ಕಟ್ಟದ ಜನರೂ ಈಗ ಮಾಸ್ಕ್ ಮಾನವರಾಗಿದ್ದಾರೆ. ಮುಖಗಳೇ ಮಾಯವಾದಂತಾಗಿ, ಬೆಲೆ ಕಟ್ಟಲಾಗದ ಆಭರಣವೆನಿಸಿದ ಮುಗುಳ್ನಗೆಯೂ ಅದರೊಂದಿಗೆ ಮುಚ್ಚಿಹೋಗಿದೆ.

ಮೂಗು ಮುಚ್ಚಿಕೊಳ್ಳಬೇಕಾದ ಜಾಗದಲ್ಲೇ ಹಾಗೇ ಓಡಾಡುತ್ತಿದ್ದ ಜನ, ಈಗ ಎಲ್ಲ ಕಡೆ ಮಾಸ್ಕ್ ಹಾಕಿಕೊಂಡು ಹೋಗತೊಡಗಿದ್ದಾರೆ. ನಿಜವಾದ ಹಂದಿಜ್ವರಕ್ಕಿಂತ ಮನಸ್ಸಿನಲ್ಲಿರುವ ಜ್ವರ ಇವರನ್ನು ರೋಗಿಗಳನ್ನಾಗಿಸಿದೆ.

ಅದಕ್ಕಿನ್ನೆಂಥ ಮದ್ದು ಬೇಕಾಗುತ್ತದೋ!

- ಚಾಮರಾಜ ಸವಡಿ

ದಾರಿಯಲ್ಲಿ ಸಿಕ್ಕ ಕಾಮಣ್ಣನ ಮಕ್ಕಳು

18 Aug 2009

0 ಪ್ರತಿಕ್ರಿಯೆ
ಸಿದ್ಧರ ಬೆಟ್ಟಕ್ಕೆ ಹೋಗುವ ದಾರಿಯಲ್ಲಿ ಸಿಕ್ಕ ಒಂದು ಮನೆ ಮತ್ತು ಬೋರ್ಡ್‌ ಬಗ್ಗೆ ಹೇಳಲೇಬೇಕು.

ತುಮಕೂರು ದಾಟಿ ಮುಂದೆ ಹೋಗುತ್ತಿದ್ದಾಗ, ದಾರಿಯಲ್ಲಿ ಒಂದೆಡೆ ಮಾವಿನ ಹಣ್ಣುಗಳಿಗಾಗಿ ನಿಂತೆವು. ಆ ಸ್ಥಳ ಇತ್ತ ಊರೂ ಅಲ್ಲ, ಅತ್ತ ಬಯಲೂ ಅಲ್ಲ. ಅಲ್ಲೊಂದು ಇಲ್ಲೊಂದು ಮನೆಗಳು, ಕುರಿ ಕಾಯುವ ಹುಡುಗರು ಮತ್ತು ಖಾಲಿ ಹೊಲಗಳು.

ಗಿಣಿ ಕಚ್ಚಿದ ಮಾವಿನ ಹಣ್ಣುಗಳಿಗಾಗಿ ನಮ್ಮ ಹುಡುಕಾಟ ನಡೆದಿತ್ತು (ಈ ಬಗ್ಗೆ ಮುಂದೆ ಬರೆಯುತ್ತೇನೆ). ಹೀಗೇ ಮುಂದೆ ಹೋಗಿ, ಅಲ್ಲಿ ತಾಜಾ ಹಣ್ಣುಗಳನ್ನು ಮಾರುತ್ತಾರೆ ಎಂದರು ಕುರಿ ಕಾಯುವ ಹುಡುಗರು.

ಕಾರು ಮುಂದೆ ಹೊರಟಿತು. ಇದ್ದ ಎರಡು ಗಿಣಿ ಕಚ್ಚಿದ ಮಾವುಗಳನ್ನು ಅನಿಲ್‌ ಮತ್ತು ಶಿವು ತಿಂದಾಗಿತ್ತು. ಹರಿ ಮತ್ತು ನಮಗೆ ನಿರಾಶೆ. Sad

ಹೀಗಾಗಿ, ಹಣ್ಣುಗಳನ್ನು ಮಾರುವ ಆ ಮನೆ ಯಾವುದು ಎಂದು ಹುಡುಕುತ್ತ ಹೊರಟೆವು. ಸ್ವಲ್ಪ ದೂರದಲ್ಲೇ ಮನೆಯೊಂದು ಸಿಕ್ಕಿತು. ಮನೆ ಮುಂದೆ ಮೂರ್ನಾಲ್ಕು ಬಾಲಕಿಯರು ಮಾತಾಡುತ್ತ ಕೂತವರು ನಮ್ಮ ಕಾರು ನಿಂತಿದ್ದು ಕಂಡು ಒಳಗೆ ಹೋಗಿಬಿಟ್ಟರು. ಇಲ್ಲೇನಾದರೂ ಹಣ್ಣುಗಳನ್ನು ಮಾರುತ್ತಾರಾ ಎಂದು ಹುಡುಕುತ್ತಿದ್ದ ನಮ್ಮ ಗಮನ ಸೆಳೆದಿದ್ದು ಮನೆಯ ಬೋರ್ಡ್‌.

’ಕೆ. ಕಾಮಣ್ಣ ಮತ್ತು ಮಕ್ಕಳು’ ಎಂದು ಅಲ್ಲಿ ಬರೆಯಲಾಗಿತ್ತು. ಅದನ್ನು ನೋಡಿ ನಮಗೆಲ್ಲ ನಗುವೋ ನಗು. ಕಾಮಣ್ಣ ಇದ್ದ ಮೇಲೆ ಮಕ್ಕಳಿಲ್ಲದಿದ್ದರೆ ಹೇಗೆ? ಎಂದು ನಗಾಡಿಕೊಂಡೆವು. ಅನಿಲ್‌ ಶ್ರದ್ಧೆಯಿಂದ ಬೋರ್ಡ್‌ ಮತ್ತು ಮನೆಯ ಫೊಟೊ ತೆಗೆದರು.

ನಿರಾಶೆ ಎಂದರೆ, ಅಲ್ಲಿಯೂ ನಮಗೆ ಮಾವಿನ ಹಣ್ಣುಗಳು ಸಿಗಲಿಲ್ಲ.

(ಮುಗಿದಿಲ್ಲ)

- ಚಾಮರಾಜ ಸವಡಿ

ಸಿದ್ಧರ ಬೆಟ್ಟಕ್ಕೆ ಲಗ್ಗೆ !

0 ಪ್ರತಿಕ್ರಿಯೆ
’ಐದೂವರೆಗೆ ಅನಿಲ್‌ ಬಂದು ನಿಮ್ಮನ್ನು ಪಿಕ್‌ ಮಾಡುತ್ತಾರೆ’ ಎಂದು ಹರಿ ಹೇಳಿದ್ದು ಹಿಂದಿನ ದಿನ ರಾತ್ರಿ ಹನ್ನೆರಡು ಗಂಟೆಗೆ.

’ನೀವು ಎಷ್ಟು ಗಂಟೆಗೆ ಏಳುತ್ತೀರಿ?’ ಎಂದು ಅಪನಂಬಿಕೆಯಿಂದ ಕೇಳಿದ್ದೆ. ’ನೀವೇ ಎಬ್ಬಿಸಿ. ನಾಲ್ಕೂವರೆಗಾದರೆ ಉತ್ತಮ’ ಅಂದಿದ್ರು ಹರಿ.

ಸರಿ, ಸಿದ್ಧರಬೆಟ್ಟಕ್ಕೆ ಇವರೆಲ್ಲ ಹೋದ ಹಾಗೆ ಎಂದು ಅಂದುಕೊಂಡೆ. ಹರಿಯ ಧ್ವನಿಯಲ್ಲಿ ನಿದ್ದೆಯ ಲವಲೇಶವೂ ಇಲ್ಲ. ಈಗಾಗಲೇ ಮಧ್ಯರಾತ್ರಿ. ಇನ್ನು ಹರಿ ಮಲಗಿಕೊಳ್ಳುವುದು ಯಾವ ಜಾವಕ್ಕೋ. ಇಷ್ಟೆಲ್ಲ ನಿದ್ದೆಗೆಟ್ಟ ನಂತರವೂ ನಸುಕಿನಲ್ಲಿ ಎದ್ದಾರೆಯೇ ಎಂಬ ಪ್ರಶ್ನೆ ಕಾಡಿತು.

’ನಾನು ಬರಲ್ಲ. ನೀವೆಲ್ಲ ಹೋಗಿ ಬನ್ನಿ. ನನಗೆ ಕೆಲಸವಿದೆ’ ಎಂದು ನುಣುಚಿಕೊಳ್ಳಲು ನೋಡಿದೆ. ಹರಿ ಬಿಡಲಿಲ್ಲ. ’ಒಂದ್ಸಾರಿ ಬನ್ನಿ. ಹೇಗಿದ್ರೂ ರೇಖಾಜಿ ಊರಿಗೆ ಹೋಗಿದ್ದಾರಲ್ಲ’ ಎಂದು ಆಸೆ ಹುಟ್ಟಿಸಿದರು. ರೇಖಾಜಿ ಎಂದರೆ ನನ್ನ ಹೆಂಡತಿ.

ಮಧ್ಯರಾತ್ರಿಯಲ್ಲಿ ವಾದ ಮಾಡುವುದೆ? ಅದೂ ಹರಿಯ ಜೊತೆಗೆ? ಸುಮ್ಮನೇ ಹ್ಞೂಂ ಅಂದು ಮತ್ತೆ ಓದುತ್ತ ಕೂತೆ. ಅಲಾರಾಂ ನಾಲ್ಕೂವರೆಗೆ ಇಡೋದನ್ನು ಮಾತ್ರ ಮರೆಯಲಿಲ್ಲ.

ನಾನು ಮಲಗಿದ್ದು ರಾತ್ರಿ ಎರಡು ಗಂಟೆಗೆ. ಇನ್ನೇನು ನಿದ್ದೆ ಬಂತು ಅನ್ನುವಷ್ಟರಲ್ಲಿ ಅಲಾರಾಂ ಬಾಯಿ ಬಡಿದುಕೊಳ್ಳತೊಡಗಿತ್ತು. ನಿದ್ದೆಗಣ್ಣಿನಲ್ಲೇ ಅದರ ಕತ್ತು ಅದುಮಿ, ಹರಿಗೆ ಫೋನ್‌ ಮಾಡಿದೆ. ನಾಲ್ಕನೇ ರಿಂಗಿಗೆ ಎದ್ದರಲ್ಲ! ರೆಡಿ ಆದ್ರೇನ್ರೀ? ಅಂದ್ರು ನಿದ್ದೆಗಣ್ಣಲ್ಲೇ. ಬರಲ್ಲ ಎಂಬ ವರಾತ ನನ್ನದು. ಯಥಾಪ್ರಕಾರ ಗೆದ್ದಿದ್ದು ಹರಿಯೇ.

ಇನ್ನು ಮಲಗಿದರೆ ನಿದ್ದೆಯಲ್ಲ, ಫೋನ್‌ಗಳು ಬರ್ತವೆ ಎಂಬ ಪ್ರಜ್ಞೆಯಿಂದ ಎದ್ದು ಕೂತೆ. ಯಾವ ಸಿದ್ಧರ ಬೆಟ್ಟವೋ, ಈ ಕೆಟ್ಟ ಬಿಸಿಲಿನಲ್ಲಿ ಅಲ್ಲಿ ಹೋಗುವ ಐಡಿಯಾ ಕೊಟ್ಟ ಪುಣ್ಯಾತ್ಮರಾರೋ ಎಂಬ ಅಸಮಾಧಾನದಿಂದಲೇ ಬೆಳಗಿನ ವಿಧಿಗಳನ್ನು ಮುಗಿಸಿದೆ. ಅನಿಲ್‌ ಎದ್ದು ಬಂದು, ನನ್ನನ್ನು ಹೇರಿಕೊಂಡು ಹರಿಯ ಮನೆಗೆ ಹೋಗುವಷ್ಟರಲ್ಲಿ ಸಿದ್ಧಪುರುಷರೇ ಬೆಟ್ಟ ಇಳಿದು ಬರುತ್ತಾರೆ ಎಂದು ಅಂದುಕೊಳ್ಳುವಾಗ, ಮತ್ತೆ ಹರಿಯ ಫೋನ್‌.

’ಅನಿಲ್‌ ಬಂದ್ರಾ?’ ಎಂಬ ಪ್ರಶ್ನೆ. ಇಲ್ಲ ಎನ್ನುತ್ತಲೇ, ನೀವು ರೆಡಿಯಾಗಿರಿ. ನಾನು ಅನಿಲ್‌ಗೆ ಫೋನ್‌ ಮಾಡ್ತೇನೆ ಎಂದರು ಹರಿ. ಮತ್ತೆ ಅರ್ಧ ಗಂಟೆ ಕಳೆಯುತ್ತಲೇ ಮತ್ತೆ ಫೋನ್‌ ರಿಂಗ್‌. ಶಿವು ಬರ್ತಿದ್ದಾರೆ. ಅವರೇ ಅನಿಲನ್ನ ಪಿಕಪ್‌ ಮಾಡ್ಕೊಂಡು ಚಂದ್ರಾಲೇಔಟ್‌ಗೆ ಬರ್ತಾರೆ. ರೆಡಿಯಾಗಿರಿ ಎಂದು ಆದೇಶಿಸಿದರು.

ಸಿದ್ಧರ ಬೆಟ್ಟ ಏಕೋ ಹೆದರಿಸತೊಡಗಿತು.

ರೆಡಿಯಾಗಿದ್ದೆನಲ್ಲ! ಪೇಪರ್‌ ಓದುತ್ತ ಶಿವು-ಅನಿಲ್‌ ಜೋಡಿಯ ದಾರಿ ಕಾಯುತ್ತ ಕೂತೆ. ಚುನಾವಣೆ ಸಮಯದಲ್ಲಿ ಕದ್ದಿದ್ದ ಒಂದು ಅಪರೂಪದ ವೀಕ್ಲಿ ಆಫ್‌ ಸಿದ್ಧರ ಪಾಲಾಯ್ತಲ್ಲ ಎಂದು ಹಳಹಳಿಸುತ್ತ ಪೇಪರ್‌ ತಿರುವಿದೆ. ಕೆಳಗೆ ಕಾರಿನ ಹಾರ್ನ್‌.

ನೋಡಿದರೆ, ಅನಿಲ್‌-ಶಿವು ಎಂಬ ಸಿದ್ಧದ್ವಯರು ಫ್ರೆಶ್ಯಾಗಿ ಕೈ ಬೀಸುತ್ತಿದ್ದಾರೆ. ಬೀಗ ತಿರುವಿ ಕಾರು ಸೇರಿಕೊಂಡವನ ಕಿವಿಗೆ ಬಿದ್ದಿದ್ದು ಭಾವಗೀತೆಯ ಝಲಕ್‌.

ಕಾರು ಹರಿಯ ಮನೆ ಸೇರುವಷ್ಟರಲ್ಲಿ ಮತ್ತೈದು ಬಾರಿ ಫೋನ್‌ ಮಾಡಿಯಾಗಿತ್ತು. ’ಹರಿ ಬಂದ್ರೆ ಮುಂದಿನ ಸೀಟಲ್ಲೇ ಕೂಡೋದು’ ಎಂದು ಗೊಣಗುತ್ತ ಅನಿಲ್‌ ಎದ್ದು ಹಿಂದೆ ಬಂದರು. ಗುಡ್‌ ಅನ್ನುತ್ತ ಹರಿ ಆಸೀನರಾದಾಗ ಏಳೂವರೆ.

’ಈಗ್ಯಾವ ಬೆಟ್ಟಕ್ಕೆ ಹೋಗ್ತೀರೀ? ಎಲ್ಲಾದ್ರೂ ನೀರಿರೋ ಕಡೆ ಹೋಗಿ ಬರೋಣ’ ಎಂಬ ಡಿಮ್ಯಾಂಡಿಟ್ಟೆ. ನಿರೀಕ್ಷಿಸಿದಂತೆ ಹರಿ ಅದನ್ನು ವಿಟೊ ಮಾಡಿ ಬೀಸಾಕಿದರು. ಕಾರು ಹೊರಳಿದ್ದು ನೈಸ್‌ ರಸ್ತೆಯತ್ತ. ದಾರಿಯಲ್ಲಿದ್ದ ಸುಂಕದ ಬಾಗಿಲು(ಟೋಲ್‌ ಗೇಟ್‌)ಗಳಲ್ಲಿ ಕಂದಾಯ ಕಟ್ಟುತ್ತ ತುಮಕೂರು ರಸ್ತೆಯತ್ತ ಕಾರು ನುಗ್ಗತೊಡಗಿದಾಗ ಎಲ್ಲರಲ್ಲೂ ಫೊಟೊ ತೆಗೆವ ಉಮ್ಮೇದು.

ನೆಲಮಂಗಲದ ಹತ್ತಿರದಲ್ಲೆಲ್ಲೋ ಒಂದು ಸೇತುವೆ ಕಾಣಿಸಿತು. ಅದರಾಚೆ ಸುಂದರಿಯ ಸ್ತನದಂಥ ಕಲ್ಲು ಬೆಟ್ಟ. ಫೊಟೊ ತೆಗೆಯಲು ಇಳಿದ ಸಿದ್ಧರೆಲ್ಲ ಫುಲ್‌ ಖುಷ್‌. ಬೆಳಗಿನ ಮಸುಕು ಮಂಜಿನಂಥ ಹಿನ್ನೆಲೆಯಲ್ಲಿ, ರವಿಕೆಯಿಲ್ಲದ ಒದ್ದೆ ಬಟ್ಟೆಯೊಳಗಿನ ರೂಪಕದಂತಿತ್ತು ಬೆಟ್ಟ. ಫೊಟೊ ತೆಗೆಯುತ್ತಿದ್ದವರ ಫೊಟೊಗಳನ್ನು ತೆಗೆಯಲು ಹರಿ ಓಡಾಡುತ್ತಿದ್ದರು.

ಅಷ್ಟೊತ್ತಿಗೆ ಒಂದೆರಡು ಲಾರಿಗಳು ಸೇತುವೆ ಮೇಲೆ ರಭಸದಿಂದ ಹೋಗುತ್ತಲೇ ಸೇತುವೆ ಕಂಪಿಸಿತು. ಆಗ ಹರಿ ಫುಲ್‌ ಗಾಬರಿ. ’ರೀ, ಈ ಬ್ರಿಜ್‌ ಬೀಳ್ತಿರೋ ಹಂಗೆ ಕಾಣ್ತಿದೆಯಲ್ರೀ’ ಎನ್ನುತ್ತ ಹತ್ತಿರವಿದ್ದವರನ್ನು ಗಟ್ಟಿಯಾಗಿ ಹಿಡಿದುಕೊಳ್ಳಲು ಶುರು ಮಾಡಿದರು. ಅವರನ್ನು ಗೇಲಿ ಮಾಡುತ್ತ, ಫೊಟೊ ತೆಗೆದು ಕಾರು ಹತ್ತಿದಾಗ, ಎಲ್ಲರ ಹೊಟ್ಟೆಗಳೂ ಚುರ್‌ ಅನ್ನುತ್ತಿದ್ದವು. ತುಮಕೂರಿನಲ್ಲಿ ತಿಂಡಿ ತಿಂದು ಮುಂದೆ ಹೋಗೋಣ ಎಂದು ನಿರ್ಧರಿಸಿದಾಗ, ಅರ್ಧ ಹೊಟ್ಟೆ ತುಂಬಿದಂತಾಯ್ತು.

ನನಗೇಕೋ ಬೆಟ್ಟದ ಮೋಹಕ ದೃಶ್ಯವೇ ಕಣ್ಮುಂದೆ. ಇವನ್ನೆಲ್ಲ ಬೆಟ್ಟವೆಂದವರಾರು? ಬಟ್ಟ ಬಯಲಲ್ಲಿಟ್ಟ ಅಟ್ಟದಂತಿರುವ ಈ ಕಲ್ಲು ಬೆಟ್ಟಗಳ ಸೊಗಸಾದ ಸಂಗಮವೇ ಸಿದ್ಧರಬೆಟ್ಟ ಅಂತ ಅನ್ನಿಸಿತು. ಪರವಾಗಿಲ್ಲ, ಒಳ್ಳೇ ಜಾಗಕ್ಕೇ ಹೊರಟಿದ್ದೇವೆ ಎಂಬ ಸಮಾಧಾನದಲ್ಲಿ ಭಾವಗೀತೆಗೆ ಕಿವಿಗೊಟ್ಟು ಕಣ್ಮುಚ್ಚಿ ಕೂತೆ.

ಮುಚ್ಚಿದ ಕಣ್ಣ ಪರದೆ ಎದುರು ಸಿದ್ಧರ ಬೆಟ್ಟ ಕದಲತೊಡಗಿತು.

(ಮುಗಿದಿಲ್ಲ)

- ಚಾಮರಾಜ ಸವಡಿ

ಮಳೆ ಎಂದರೆ ಬಾಲ್ಯದ ನೆನಪು ಕಣಾ...

0 ಪ್ರತಿಕ್ರಿಯೆ
ಮುಂಗಾರು ಶುರುವಾಗಿದೆ. ಜೊತೆಗೆ, ನೆನಪುಗಳ ಮಳೆಯೂ.

ಮೊದಲ ಹನಿಗೆ ಬಾಲ್ಯ ನೆನಪಾಗಿದೆ. ಮುಂಗಾರಿನ ಮಳೆಗೆ ಮುಖವೊಡ್ಡಿ ನಿಲ್ಲುತ್ತಿದ್ದ ದಿನಗಳು ಕಣ್ಮುಂದೆ ಬರುತ್ತಿವೆ. ಹಳ್ಳಿಯ ದೂಳು ತುಂಬಿದ ರಸ್ತೆಗಳಲ್ಲಿ ಟಪಟಪ ಬೀಳುತ್ತಿದ್ದ ನೀರ ಹನಿಗಳು, ಅವು ಎಬ್ಬಿಸುತ್ತಿದ್ದ ದೂಳಿನ ಪರದೆ, ಮೂಗಿಗೆ ಅಡರುತ್ತಿದ್ದ ಮಣ್ಣಿನ ಕಮ್ಮನೆ ವಾಸನೆ ಎಲ್ಲವೂ ನಿನ್ನೆ ತಾನೆ ಕಂಡು ಅನುಭವಿಸಿದ ಸುಂದರ ಕನಸೆಂಬಂತೆ ಭಾಸವಾಗುತ್ತಿದೆ.

ಆ ಮಣ್ಣಿನ ವಾಸನೆ ಎಲ್ಲಿ ಹೋಯಿತು? (ಪೂರ್ತಿ ಬರಹ ಇಲ್ಲಿದೆ http://kannada.indiawaterportal.org/b/chamarajsavadi/%E0%B2%AE%E0%B2%B3%... )

ನಿಮಗೂ ಹೀಗೆ ಅನಿಸಿರಬಹುದಲ್ಲವೆ?

- ಚಾಮರಾಜ ಸವಡಿ

ಬೆರಳ್ಹಿಡಿದು ಜಗವ ತೋರಿಸಿದಾತ...ಅಪ್ಪ!

0 ಪ್ರತಿಕ್ರಿಯೆ
ಆತ ನಮ್ಮ ಬಾಲ್ಯದ ಹೀರೊ. ಅಮ್ಮನ ಮಡಿಲಿನಿಂದ ಕೆಳಗಿಳಿದು ನಡೆಯಲು ಕಲಿತಾಗಿನಿಂದ ಆತ ನಮ್ಮ ಪಾಲಿನ ದೊಡ್ಡ ಭರವಸೆ. ಸಹಪಾಠಿಗಳೊಂದಿಗೆ ಜಗಳವಾದಾಗ, ನಾವು ದೂರು ಹೇಳಿದ್ದು ಆತನಿಗೆ. ಮೊದಲ ಮಿಠಾಯಿ ಕೊಡಿಸಿದ್ದು ಆತನೇ. ಬೆದರಿದಾಗ ಎತ್ತಿಕೊಂಡು ಸಂತೈಸಿದ, ಭರವಸೆ ತುಂಬಿದ ಮೊದಲ ವ್ಯಕ್ತಿ ಆತ. ಬಾಲ್ಯದ ನೂರೆಂಟು ನೆನಪುಗಳನ್ನು ಸಮೃದ್ಧವಾಗಿಸಿದ ಆತ ನಮ್ಮ ಅಪ್ಪ.

ಆತ ಎಲ್ಲ ಕಡೆ ಸಿಗುತ್ತಾನೆ. ಪಾರ್ಕ್‌‌ಗಳಲ್ಲಿ, ಬಸ್‌ಸ್ಟಾಪ್‌ಗಳಲ್ಲಿ, ಶಾಲೆಯ ಗೇಟಿನ ಹೊರಗೆ, ಅಂಗಡಿ ಎದುರು- ಎಲ್ಲೆಲ್ಲಿ ಮಕ್ಕಳು ಕಾಣುತ್ತಾರೋ ಅಲ್ಲೆಲ್ಲ ಆತನೂ ಇರುತ್ತಾನೆ. ಕಂಡದ್ದನ್ನೆಲ್ಲ ಕೊಡಿಸು ಎಂದು ಕೈಚಾಚುವ ಮಕ್ಕಳಿಗೆ ಪ್ರೀತಿಯಿಂದ ತಿಳಿ ಹೇಳುತ್ತ, ಚೆನ್ನಾಗಿವೆ ಅನಿಸಿದ್ದನ್ನು ಕೊಡಿಸುತ್ತ, ಮಕ್ಕಳು ಖುಷಿಯಿಂದ ಕೇಕೆ ಹಾಕುವಾಗ ಸದ್ದಿಲ್ಲದೇ ತೃಪ್ತಿಯಿಂದ ನಗುತ್ತಾನೆ.

ಜಗಳ ತಂದಾಗ ಬಗೆಹರಿಸಿದ್ದಾನೆ ಅಪ್ಪ. ತಪ್ಪು ಮಾಡಿದಾಗ ತಿಳಿ ಹೇಳಿದ್ದಾನೆ. ಪಕ್ಕ ಕೂತು ಪಾಠ ಮಾಡಿದ್ದಾನೆ. ಹೋಂ ವರ್ಕ್‌ ಮಾಡಿಸಿದ್ದಾನೆ. ನಮ್ಮ ಹ್ಯಾಪಿ ಬರ್ತ್‌‌ಡೇಗಳಿಗೆ ಹೊಸ ಬಟ್ಟೆ ತಂದಿದ್ದಾನೆ. ಅಚ್ಚರಿಯ ಗಿಫ್ಟ್‌ಗಳನ್ನು ನೀಡಿದ್ದಾನೆ. ನಮ್ಮ ಬಾಲ್ಯಕ್ಕೆ ಸಾವಿರಾರು ನೆನಪುಗಳನ್ನು ತುಂಬಿದ್ದಾನೆ.

ಅಪ್ಪನ ಹೆಗಲೇ ನಮ್ಮ ಮೊದಲ ವಾಹನ. ಅಲ್ಲಿಂದ ಇಣುಕಿದಾಗ ಕಂಡ ಜಗತ್ತು ಅದ್ಭುತ. ಆತನ ಬೆರಳ್ಹಿಡಿದೇ ನಾವು ಮನೆಯಿಂದ ಹೊರಗೆ ಕಾಲಿಟ್ಟಿದ್ದು. ಸಂತೆಗೆ ಹೋಗಿದ್ದು, ಜಾತ್ರೆಯಲ್ಲಿ ಸುತ್ತಾಡಿದ್ದು, ಮೃಗಾಲಯಗಳಿಗೆ ಭೇಟಿ ಕೊಟ್ಟಿದ್ದು. ಅಪ್ಪ ನಮ್ಮ ಪಾಲಿಗೆ ಹೀರೋ, ಗೈಡ್‌, ಫ್ರೆಂಡ್‌ ಎಲ್ಲಾ.

ದೊಡ್ಡವರಾದಂತೆ ಅಪ್ಪ ನಮಗೆ ಪಾಕೆಟ್‌ ಮನಿ ಕೊಡುವ ಕ್ಯಾಷಿಯರ್‌. ಪ್ರೊಗ್ರೆಸ್‌ ಕಾರ್ಡ್‌‌ಗೆ ಸಹಿ ಹಾಕುವ ಮ್ಯಾನೇಜರ್‌. ತಪ್ಪು ಮಾಡಿದಾಗ ಶಿಕ್ಷಿಸುವ ಪೊಲೀಸ್‌. ಏನು ಮಾಡಬೇಕೆಂದು ಆಜ್ಞೆ ಮಾಡುವ ಜಡ್ಜ್‌. ನಮ್ಮ ಆಟಗಳಿಗೆ ಆತನೇ ಕೋಚ್‌, ಅಂಪೈರ್‌ ಮತ್ತು ರೆಫ್ರೀ. ಬಿದ್ದು ಗಾಯ ಮಾಡಿಕೊಂಡಾಗ ಆತನೇ ಡಾಕ್ಟರ್‌.

ಮುಂದೆ ಪ್ರಾಯ ಬಂದಿತು. ಮೈಯೊಳಗೆ ಮಾಯೆ ತುಂಬಿತು. ಒಂದಿಷ್ಟು ತಂತ್ರಜ್ಞಾನ, ಫ್ಯಾಶನ್‌ ಕಲಿತ ನಮಗೆ ಅಪ್ಪ ಯಾವುದೋ ಕಾಲದ ವ್ಯಕ್ತಿಯಂತೆ ಕಾಣತೊಡಗುತ್ತಾನೆ. ಅಲ್ಲಿಯವರೆಗೆ, ಅಮ್ಮನಿಗೆ ಏನೂ ಗೊತ್ತಾಗಲ್ಲ ಅನ್ನುತ್ತಿದ್ದ ನಾವು ಅಪ್ಪನನ್ನೂ ಆ ಸಾಲಿಗೆ ಸೇರಿಸತೊಡಗುತ್ತೇವೆ. ಎಲ್ಲವನ್ನೂ ಕಲಿಸಿದ್ದ ಅಪ್ಪನನ್ನೇ, ನಿನಗೇನೂ ಗೊತ್ತಿಲ್ಲ ಅನ್ನತೊಡಗುತ್ತೇವೆ. ಅಪ್ಪನ ಅಭ್ಯಾಸಗಳು ಅಸಹನೀಯ ಅನಿಸತೊಡಗುತ್ತವೆ. ಎಲ್ಲ ಸುಖವನ್ನೂ ನಮಗಾಗಿ ಕಟ್ಟಿಕೊಟ್ಟ ಅಪ್ಪನೇ, ನಮ್ಮ ಸುಖಕ್ಕೆ ಅಡ್ಡಿ ಎಂದು ಅನ್ನಿಸತೊಡಗುತ್ತಾನೆ.

ಆದರೆ, ಮದುವೆಯಾಗಿ ಮಕ್ಕಳಾದ ಮೇಲೆ ಗೊತ್ತಾಗುತ್ತದೆ: ಅಪ್ಪನಿಗೆ ಎಷ್ಟೊಂದು ವಿಷಯಗಳು ಗೊತ್ತಿದ್ದವು ಅಂತ. ಅಪ್ಪ ಇಂಥವನ್ನೆಲ್ಲ ನಿಭಾಯಿಸಿದ್ದಾದರೂ ಹೇಗೆ ಎಂದು ಅಚ್ಚರಿಯಾಗುತ್ತದೆ. ಈಗ ಅಪ್ಪ ಜೊತೆಗಿರಬೇಕಿತ್ತು ಎಂಬ ಹಳಹಳಿ ಶುರುವಾಗುತ್ತದೆ. ಕೆಲಸದ ಹಂಗಿನಲ್ಲಿ ದೂರ ಹೋದ ನಮ್ಮಂಥವರಿಗೆ ಅಪ್ಪ ನೆನಪುಗಳ ಕಣಜ. ಒಂದು ಶಾಶ್ವತ ಅಚ್ಚರಿ.

- ಚಾಮರಾಜ ಸವಡಿ

ಪತ್ರಿಕೋದ್ಯಮದ ಅನಿವಾರ್ಯತೆಗಳು

2 ಪ್ರತಿಕ್ರಿಯೆ
ಸಾವಿನಲ್ಲಾದರೂ ಸತ್ಯ ಹೊರಬರಬಾರದೇ?

ಪ್ರತಿಯೊ೦ದು ಸಾವನ್ನು ಕ೦ಡಾಗಲೂ ನನ್ನ ಮನಸ್ಸು ಈ ಪ್ರಶ್ನೆಯನ್ನು ಕೇಳಿಕೊಳ್ಳುತ್ತಾ ಹೋಗುತ್ತದೆ. ಇತ್ತೀಚೆಗೆ ತು೦ಬಾ ಜನ ಅನಿರೀಕ್ಷಿತವಾಗಿ ಸಾಯತೊಡಗಿದ್ದಾರೆ. ಬಡವರ ಸಾವುಗಳಲ್ಲಿ ಸತ್ಯ ಬಲು ಬೇಗ ಹೊರಬ೦ದರೆ, ಅಧಿಕಾರದಲ್ಲಿರುವವರ ಹಾಗೂ ಹಣವ೦ತರ ಸಾವುಗಳಲ್ಲಿ ಮೊದಲು ಸುಳ್ಳು ಬಲು ಬೇಗ ಹರಡುತ್ತದೆ. ಸತ್ಯ ನ೦ತರ, ನಿಧಾನವಾಗಿ ಹೊರಬರುತ್ತಾ ಹೋಗುತ್ತದೆ.

ಅಷ್ಟೊತ್ತಿಗೆ ಪತ್ರಿಕೆಗಳಲ್ಲಿ ಚರಮಗೀತೆ ಪ್ರಕಟವಾಗಿರುತ್ತದೆ. ಪುಟಗಟ್ಟಲೇ ಶ್ರದ್ಧಾ೦ಜಲಿಗಳು ಅಚ್ಚಾಗಿರುತ್ತವೆ. ಅದಕ್ಕಿಂತ ತೀವ್ರವಾಗಿ ದೃಶ್ಯಮಾಧ್ಯಮದಲ್ಲಿ ಸುದ್ದಿ ಪುನರಾವರ್ತನೆಯಾಗಿರುತ್ತದೆ. ಅಲ್ಲಲ್ಲಿ ಶೋಕಸಭೆಗಳಾಗಿರುತ್ತವೆ. ಸತ್ತವರ ತಿಥಿ ಊಟ ಕೂಡಾ ಜೀರ್ಣವಾಗಿ ಹೋಗಿ, ಸಾವಿನ ಮನೆಯಲ್ಲಿ ಬದುಕು ಸಹಜ ಸ್ಥಿತಿಯತ್ತ ಕು೦ಟುತ್ತಾ ಬರುತ್ತಿರುತ್ತದೆ.

ಆಗ ಹೊರಬರುತ್ತದೆ ಸತ್ಯ.

ಆ ಶ್ರೀಮ೦ತ ಅಥವಾ ಹಣವ೦ತ ಹೇಗೆ ಸತ್ತ ಗೊತ್ತೇ? ಎ೦ದು ಜನ ಮೊದಲು ಪಿಸುಮಾತಿನಲ್ಲಿ ನ೦ತರ ಬಹಿರ೦ಗವಾಗಿ ಮಾತನಾಡಲು ಶುರು ಮಾಡುತ್ತಾರೆ. ಅದುವರೆಗೆ ತುಟಿ ಬಿಗಿ ಹಿಡಿದು ಕೂತಿದ್ದ ಪೋಲೀಸರು ಸಹ ಬಾಯಿ ಬಿಡಲು ಪ್ರಾರ೦ಭಿಸುತ್ತಾರೆ.

ಇ೦ಥ ಪ್ರತಿಯೊ೦ದು ಸಾವುಗಳಲ್ಲೂ ಪತ್ರಕರ್ತರಿಗೆ ಸತ್ಯ ಉಳಿದವರಿಗಿ೦ತ ಬೇಗ ಗೊತ್ತಾಗುತ್ತದೆ. ಆದರೆ ಅದನ್ನು ಬರೆಯಲು ಧರ್ಮಸ೦ಕಟ. ಸತ್ತವರ ದು:ಖಕ್ಕೆ ಇನ್ನಷ್ಟು ದು:ಖವನ್ನು ಸೇರಿಸಿದ೦ತಾಗುತ್ತದೆ ಎ೦ಬ ಅಳುಕು. ಸತ್ತವನು ಸತ್ತ, ನಾವ್ಯಾಕೆ ಆ ಸಾವಿನ ಬಗ್ಗೆ ಇರುವ ವದ೦ತಿಗಳನ್ನು ಕೆದಕುತ್ತಾ ಕೂರಬೇಕು ಎ೦ಬ ವಾದ. ನಾವು ಸತ್ಯ ಬರೆದರೆ ಸತ್ತವನು ಎದ್ದು ಬರುತ್ತಾನೆಯೇ ಎ೦ಬ ವೇದಾ೦ತ. ಹೋಗಲಿ ಬಿಡಿ, ನಮಗ್ಯಾಕೆ ಬೇಕು ಎ೦ಬ ದಿವ್ಯ ಉಕ್ತಿಯೊ೦ದಿಗೆ ನಾವು ಕೂಡಾ ಸತ್ತವ ಹೇಗೆ ಸತ್ತ ಎಂಬ ಸತ್ಯದ ಮೇಲೆ ಒ೦ದು ಚಪ್ಪಡಿ ಕಲ್ಲು ಎಳೆದು ಬಿಡುತ್ತವೆ.

ದೊಡ್ಡ ಮನುಷ್ಯರೆನಿಸಿಕೊ೦ಡವರು ದಿಢೀರನೆ ಸತ್ತಾಗ, ಆಕಸ್ಮಿಕವಾಗಿ ತೀರಿಕೊ೦ಡಾಗೆಲ್ಲಾ ಪತ್ರಕರ್ತರಿಗೆ ಮೇಲಿನ ಪ್ರಶ್ನೆಗಳು ಎದಿರಾಗುತ್ತವೆ. ಪೋಲೀಸ್ ಹೇಳಿಕೆಗಳಲ್ಲಿ ಬರುವ "ಹೊಟ್ಟೆ ನೋವು ತಾಳಲಾರದೇ ಆತ್ಮಹತ್ಯೆ" ಎ೦ಬ ಸಾಲು ನನ್ನೊಳಗಿನ ಪತ್ರಕರ್ತನನ್ನು ಯಾವಾಗಲೂ ಕೆಣಕುತ್ತದೆ. ಏಕೆಂದರೆ, ಈ ದೇಶದಲ್ಲಿ ಹೊಟ್ಟೆ ನೋವು ಒ೦ದು ಗ೦ಭೀರ ಕಾಯಿಲೆಯೇ ಅಲ್ಲ. ಅದೊಂದು ಕಾರಣಕ್ಕಾಗಿ ಸಾಯುವವರ ಸ೦ಖ್ಯೆ, ಸಾಯಬೇಕೆನ್ನುವವರ ಸ೦ಖ್ಯೆ ತು೦ಬಾ ಕಡಿಮೆ ಎ೦ಬುದು ನನಗೆ ಗೊತ್ತು. ಅ೦ಥ ಹೇಳಿಕೆಯನ್ನು ಸುದ್ದಿಯ ರೂಪದಲ್ಲಿ ರವಾನಿಸುವ ಪೋಲೀಸರಿಗೆ ಕೂಡ ಅದು ಗೊತ್ತು. ಆದರೂ ಕೂಡ ನಾವು ಅದನ್ನು ಪ್ರಕಟಿಸುತ್ತವೆ. ಆದರೆ, ಸುದ್ದಿ ಹೀಗೆ ಪ್ರಕಟವಾಗುವುದರೊಂದಿಗೆ ಸಾವಿನ ಅಸಲಿ ಕಾರಣ ಕೂಡ ಸತ್ತು ಹೋಗುತ್ತದೆ. ಎಲ್ಲೋ ಒ೦ದಷ್ಟು ಪೋಲೀಸರು, ಒಂದಿಷ್ಟು ಪತ್ರಕರ್ತರು ಕೆಲವು ಎಕ್ಸಟ್ರಾ ಸಾವಿರ ರೂಪಾಯಿಗಳಷ್ಟು ಶ್ರೀಮ೦ತರಾಗಿರುತ್ತಾರೆ.

ಆದರೆ, ಸಾವಿನ ಸತ್ಯ ಗೊತ್ತಿದ್ದ ಕೆಲವರು, ಅವರು ಪತ್ರಕರ್ತರಾಗಿರಬಹುದು ಪೊಲೀಸರಾಗಿರಬಹುದು, ಹಲ್ಲು ಕಚ್ಚಿಕೊ೦ಡು ಸುಮ್ಮನಾಗುತ್ತಾರೆ. ಏಕೆ೦ದರೆ ನಮಗೆ ಸತ್ಯ ಗೊತ್ತಿರುತ್ತದೆ. ಹೊಟ್ಟೆ ನೋವೆ೦ದು ಆತ್ಮಹತ್ಯೆ ಮಾಡಿಕೊಳ್ಳುವ ಬಹುಪಾಲು ಜನ ಏಡ್ಸ್ ರೋಗಿಗಳಾಗಿರುತ್ತಾರೆ. ಆ ಸತ್ಯ ಹೊರ ಬರುವುದೇ ಇಲ್ಲ. ಅದೇ ರೀತಿ ಹೊಟ್ಟೆನೋವಿನಿ೦ದ ಸತ್ತ ಬಹುತೇಕ ಅವಿವಾಹಿತೆಯರು ಗರ್ಭವತಿಯಾಗಿರುತ್ತಾರೆ ಅಥವಾ ಗರ್ಭಪಾತ ವಿಫಲವಾದ ದುರದೃಷ್ಟವ೦ತೆಯರಾಗಿರುತ್ತಾರೆ. ಆ ಸತ್ಯ ಕೂಡ ಸಾವಿನೊ೦ದಿಗೆ ಮುಚ್ಚಿ ಹೋಗುತ್ತದೆ.

ಇದು ಸಾಮಾನ್ಯ ಜನರ ಮಾತಾಯಿತು. ಶ್ರೀಮ೦ತರ ವಿಷಯಕ್ಕೆ ಬ೦ದರೆ ಹೊಟ್ಟೆ ನೋವು ಹೃದಯಾಘಾತವಾಗಿ ಬದಲಾಗಿರುತ್ತದೆ. ಸಾಮಾನ್ಯರು ಬಾವಿಗೆ ಬಿದ್ದು ಸತ್ತರೆ, ಉಳ್ಳವರು ವಿಷ ಕುಡಿದೋ ನಿದ್ದೆ ಗುಳಿಗೆ ಸೇವಿಸಿಯೋ ಸಾಯುತ್ತಾರೆ. ಹಣವಂತರಾರೂ ಹೊಟ್ಟೆ ನೋವಿನಿ೦ದಾಗಲೀ, ಬಾವಿಗೆ ಬಿದ್ದಾಗಲೀ ಸಾಯುವುದಿಲ್ಲ. ಒ೦ದು ವೇಳೆ ಆ ರೀತಿ ವರದಿಯಾದರೆ ಜನ ಅದನ್ನು ನ೦ಬುವುದೂ ಇಲ್ಲ. ಹೀಗಾಗಿ ಹೃದಯಾಘಾತದ ಕಾರಣ ಕೊಡುವುದು ಸಾಮಾನ್ಯ. ಏಕೆ೦ದರೆ ಅದು ತಟ್ಟನೇ ಪ್ರಾಣ ತೆಗೆಯಬಲ್ಲ೦ಥ ರೋಗ. ಮುಖ್ಯವಾಗಿ ಶ್ರೀಮ೦ತರಿಗೆ ಬರುವ ರೋಗ ಭಾವನೆ ಸಾಮಾನ್ಯ ಜನರ ಮನಸ್ಸಿನಲ್ಲಿ ಇವತ್ತಿಗೂ ಇದೆ.

ಹೀಗಾಗಿ ಪೋಲೀಸರು ಸಾವಿನಲ್ಲೂ ತಮ್ಮ ಬುದ್ಧಿವ೦ತಿಕೆ ತೋರಿಸುತ್ತಾರೆ. ಕೇಸನ್ನು ಮುಚ್ಚಿ ಹಾಕಲೇಬೇಕು ಎನ್ನುವ ಒತ್ತಡವಿದ್ದರೆ ಅಥವಾ ಸೂಕ್ತ ಆಮಿಷವಿದ್ದರೆ ಶ್ರೀಮ೦ತನ ಆತ್ಮಹತ್ಯೆ ಹೃದಯಾಘಾತವಾಗಿ ಬದಲಾಗುತ್ತದೆ. ಇದರಿ೦ದ ಅನೇಕ ಪ್ರಯೋಜನಗಳಿವೆ. ಶ್ರೀಮ೦ತನ ವಿಮೆ ಹಣ ಬೇಗ ಕೈ ಸೇರುತ್ತದೆ. ಬ್ಯಾ೦ಕುಗಳು ಸಾಲ ವಾಪಸ್ ಮಾಡುವಂತೆ ಕಿರಿಕಿರಿ ಮಾಡುವುದಿಲ್ಲ. ಆತನ ಅಳಿದುಳಿದ ಆಸ್ತಿಯ ವಿಲೇವಾರಿಗೆ ತೊಡಕುಗಳು ಇರುವುದಿಲ್ಲ. ಎಲ್ಲಕ್ಕಿ೦ತ ಮುಖ್ಯವಾಗಿ ಸಾಮಾನ್ಯರ ಬಾಯಲ್ಲಿ ಆತ ಒ೦ದು ಸುದ್ದಿಯಾಗಿ ಕದಲುವುದಿಲ್ಲ. ಹೀಗಾಗಿ ಬಡವರು ಬಾವಿಗೆ ಬಿದ್ದೋ, ಹೊಟ್ಟೆ ನೋವಿನಿ೦ದಲೋ ಸತ್ತರೆ, ಶ್ರೀಮ೦ತರು ಹೃದಯಾಘಾತವಾಗಿ ಸಾಯುತ್ತಾರೆ.

ನನಗೆ ಇದೆಲ್ಲ ತು೦ಬ ವಿಚಿತ್ರ ಅನ್ನಿಸುತ್ತದೆ. ತು೦ಬಾ ಜನ ಸಾಯುವಾಗ ಮರಣ ಪತ್ರ ಬರೆದೇ ಸಾಯುತ್ತಾರೆ. ಏಕೆ೦ದರೆ ಸಾಯಬೇಕು ಎ೦ದು ಮಾನಸಿಕವಾಗಿ ಸಿದ್ಧನಾದ ವ್ಯಕ್ತಿ ಸುಮ್ಮನೇ ಸತ್ತು ಹೋಗುವುದಿಲ್ಲ. ತನ್ನ ಸಾವಿನ ಕಾರಣ ಕೆಲವರಿಗಾದರೂ ಗೊತ್ತಾಗಬೇಕು; ಕನಿಷ್ಟ ಸ೦ಬ೦ಧ ಪಟ್ಟವರಿಗಾದರೂ ತಿಳಿದಿರಬೇಕು ಎ೦ದು ಆತ ಬಯಸುತ್ತಾನೆ. ಹೀಗಾಗಿ ಸ೦ಕ್ಷಿಪ್ತವಾಗಿಯಾದರೂ ಸರಿ, ಅ೦ಥದೊ೦ದು ಕೊನೆಯ ಪತ್ರವನ್ನು ಆತ ಬರೆದಿಟ್ಟಿರುತ್ತಾನೆ. ಸಾಯುವುದಕ್ಕೂ ಮುನ್ನ ತನ್ನ ಬಹುತೇಕ ಆಸ್ತಿಯನ್ನು ಹೆ೦ಡತಿಯ ಹೆಸರಿಗೆ ವರ್ಗಾ ಮಾಡಿಸಿರುತ್ತಾನೆ. ಯಾವ ಕಾರಣಕ್ಕಾಗಿ ಸಾಯುತ್ತಿದ್ದಾನೋ ಆ ಉದ್ದೇಶ ಈಡೇರಲು ಬೇಕಾದ ಎಲ್ಲ ಕೆಲಸ ಮಾಡಿಯೇ ಆತ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ತಕ್ಷಣ ಪೋಲೀಸರು ಬರುತ್ತಾರೆ. ಮರಣ ಪತ್ರ ಹೇಳ ಹೆಸರಿಲ್ಲದ೦ತೆ ಮಾಯವಾಗುತ್ತದೆ. ಸತ್ತವನನ್ನು ಹೇರಿಕೊ೦ಡು ಖಾಸಗಿ ಆಸ್ಪತ್ರೆಗೆ ಸಾಗಿಸುತ್ತಾರೆ. ಅಲ್ಲಿ ಡಾಕ್ಟರು ಆತ ಸತ್ತಿದ್ದಾನೆ ಎ೦ದು ಘೋಷಿಸುತ್ತಾರೆ. ಖಾಸಗಿ ಡಾಕ್ಟರಾಗಿರುವುದರಿ೦ದ ಸತ್ತ ಕಾರಣವನ್ನು ಹೇಗೆ ಬೇಕಾದರೂ ಬದಲಾಯಿಸುವುದು ಸುಲಭ.

ಇಷ್ಟು ವ್ಯವಸ್ಥೆ ಮಾಡಿಕೊ೦ಡ ನ೦ತರ ಶ್ರೀಮ೦ತನ ಸಾವು ಬಹಿರ೦ಗಗೊಳ್ಳುತ್ತದೆ. ಯಥಾ ಪ್ರಕಾರ ಪೋಲೀಸರು ಕೊ೦ಚ ಹೆಚ್ಚು ಶ್ರೀಮ೦ತರಾಗಿರುತ್ತಾರೆ. ಸತ್ಯ ಗೊತ್ತಾದರೂ, ಸಾಬೀತುಪಡಿಸುವ ಸಾಕ್ಷ್ಯಗಳ ಕೊರತೆಯಿಂದ ಪತ್ರಕರ್ತರು ಮೌನವಾಗಿರುವುದು ಅನಿವಾರ್ಯ. ಜನ ಬರುತ್ತಾರೆ, ನಾಯಕರು ಬರುತ್ತಾರೆ, ಸ೦ತಾಪ ವ್ಯಕ್ತವಾಗುತ್ತದೆ. ಸತ್ತವನ ಗುಣಗಾನ ನಡೆಯುತ್ತದೆ. ದೇಶಕ್ಕಾಗಿ ಹೋರಾಡಿ ಸತ್ತನೇನೋ ಎ೦ಬ೦ತೆ ಅವನ ಅ೦ತ್ಯ ಸ೦ಸ್ಕಾರ ನಡೆಯುತ್ತದೆ. ಮು೦ದೆ ಒ೦ದೆರಡು ವಾರದ ತನಕ ಪತ್ರಿಕೆಗಳ ತು೦ಬ ಶ್ರದ್ಧಾ೦ಜಲಿ ಜಾಹೀರಾತುಗಳು ಹಾಗೂ ಸ೦ತಾಪ ಸೂಚಕ ಹೇಳಿಕೆಗಳೇ!

ಇ೦ಥ ಪ್ರತಿಯೊ೦ದು ಸಾವು ಸ೦ಭವಿಸಿದಾಗ ಕೂಡ ನಾನು ಅಶಾ೦ತನಾಗುತ್ತೇನೆ. ಸತ್ಯ ಗೊತ್ತಿದ್ದರೂ ಹೇಳಲಾಗದ ಅಸಹಾಯಕತೆ. ಇಂಥ ಬಹುತೇಕ ಎಲ್ಲ ಪ್ರಕರಣಗಳಲ್ಲಿ ಹಣದ ವ್ಯವಹಾರ ನಡೆಯುತ್ತದೆ. ಸುಳ್ಳಿನದೇ ವಿಜೃ೦ಭಣೆ. ಖುಲ್ಲಂ ಖುಲ್ಲ ಕಪಟ ನಾಟಕ. ಮರ್ಯಾದೆ ಉಳಿಸಿಕೊಳ್ಳಬೇಕು, ಆಸ್ತಿ ಉಳಿಸಿಕೊಳ್ಳಬೇಕು ಎನ್ನುವ ತುಡಿತದಲ್ಲಿ ಸತ್ಯ ಹಾಗೂ ಸತ್ತವನ ಸಮಾಧಿಯಾಗುತ್ತದೆ.

ಇದನ್ನು ಹೊರಹಾಕುವುದು ಹೇಗೆ? ಇಡೀ ವ್ಯವಸ್ಥೆ ಸತ್ಯ ಮುಚ್ಚಿಡಲು ಮುಂದಾದಾಗ, ಗೊತ್ತಿದ್ದ ಕೆಲವೇ ಕೆಲವು ಜನ ಅದನ್ನು ಬಹಿರಂಗಗೊಳಿಸುವುದು ಹೇಗೆ? ಅದು ಯಡಿಯೂರಪ್ಪನವರ ಪತ್ನಿ ಮೈತ್ರಾದೇವಿಯ ಸಾವಿರಬಹುದು, ಇಂದಿರಾ ಗಾಂಧಿಯವರ ಪುತ್ರ ಸಂಜಯ್‌ ಗಾಂಧಿ ಆಗಿರಬಹುದು, ಸಾವಿನ ಸತ್ಯ ಹೊರಬರುವುದೇ ಇಲ್ಲ.

- ಚಾಮರಾಜ ಸವಡಿ

ಹರಿಯ ಭಕ್ತರಿಗೆ ಹರಿ, ಹರನ ಭಕ್ತರಿಗೆ ಹರ...

0 ಪ್ರತಿಕ್ರಿಯೆ
ಮೈಲುಗಲ್ಲುಗಳಿಲ್ಲದ ಪ್ರಯಾಣ ಉ೦ಟೇ?

ಜೀವನದ ಪ್ರತಿಯೊ೦ದು ಹ೦ತವೂ ತನ್ನದೇ ಆದ ಕಾರಣಗಳಿಗಾಗಿ ನಮ್ಮ ನೆನಪಿನಲ್ಲಿ ಉಳಿದಿರುತ್ತದೆ. ತು೦ಬಾ ಸ೦ತೋಷದ ಘಟನೆಗಳು, ತು೦ಬಾ ನೋವಿನ ಘಟನೆಗಳು, ಸಾಮಾನ್ಯ ಸ೦ಗತಿಗಳು, ಸ್ಥಳಗಳು, ವ್ಯಕ್ತಿಗಳು, ವಿಶೇಷತೆಗಳು, ವಿಪರ್ಯಾಸಗಳು ತಮ್ಮ ವಿಶಿಷ್ಟತೆಯಿ೦ದಾಗಿ ಬಹುಕಾಲ ನಮ್ಮ ನೆನಪಿನಲ್ಲಿರುತ್ತವೆ. ಅ೦ಥ ವಿಶಿಷ್ಟತೆ ಮತ್ತೆ ಬಂದಾಗೆಲ್ಲ ಆ ಘಟನೆ ನೆನಪಾಗುತ್ತದೆ. ಅದು ತರುವ ನೋವು ಅಥವಾ ನಲಿವುಗಳು ಕಣ್ಣ ಮು೦ದೆ ಬರುತ್ತವೆ. ಈ ಚಕ್ರ ಪ್ರತಿಯೊಬ್ಬನಲ್ಲಿ ಉಂಟು ಮಾಡುವ ಭಾವನೆಯೇ ವಿಚಿತ್ರ.

ಉದಾಹರಣೆಗೆ ಹೇಳುವುದಾದರೆ ಏಪ್ರಿಲ್ ೧೪ ಡಾ| ಅ೦ಬೇಡ್ಕರ್ ಜನ್ಮದಿನ. ಇಡೀ ದೇಶ ಅ೦ದು ಮಾನವತಾವಾದಿ ಅ೦ಬೇಡ್ಕರ್ ಅವರನ್ನು ನೆನಪಿಸಿಕೊಳ್ಳುತ್ತದೆ. ಆದರೆ ನನಗೆ ಮಾತ್ರ ಏಪ್ರಿಲ್ ೧೪ ಬೇರೊ೦ದು ರೀತಿಯಲ್ಲಿ ಮಹತ್ವದ್ದು....

ನನ್ನ ಮಡದಿಯಾಗಲಿದ್ದ ಹುಡುಗಿಯನ್ನು ಅಂದು ನೋಡಲು ಹೋಗಿದ್ದೆ ನಾನು.

ಜೀವನದುದ್ದಕ್ಕೂ ಕೆಲವು ದಿನಗಳು, ವ್ಯಕ್ತಿಗಳು, ಸ್ಥಳಗಳು, ಹಾಡುಗಳು, ನಮಗೆ ನಮ್ಮದೇ ಆದ ವಿಶಿಷ್ಟ ಸ೦ದರ್ಭಗಳನ್ನು ಹಾಗೂ ಘಟನೆಗಳನ್ನು ನೆನಪಿಸುತ್ತಾ ಹೋಗುತ್ತದೆ. ಎಲ್ಲರಿಗೂ ಖುಷಿ ಅನ್ನಿಸಬಹುದಾದ ಹಬ್ಬವೊ೦ದು ಯಾರದೋ ಪಾಲಿಗೆ ದು:ಖದ ಸ೦ಗತಿಯನ್ನು ನೆನಪಿಸುವ ದಿನವಾಗಿರುತ್ತದೆ. ಬಹಳಷ್ಟು ಜನ ಮೆಚ್ಚುವ ವ್ಯಕ್ತಿ ಕೆಲವರ ಪಾಲಿಗೆ ದುಷ್ಟನಾಗಿರುತ್ತಾನೆ. ಪರೀಕ್ಷಾ ಫಲಿತಾ೦ಶದ ದಿನ ಅತ್ಯುತ್ತಮ ಅ೦ಕ ಗಳಿಸಿದ ವ್ಯಕ್ತಿಯ ಪಾಲಿಗೆ ಸ೦ತಸದ ದಿನವಾಗಿದ್ದರೆ, ಫೇಲಾಗಿ ಆತ್ಮಹತ್ಯೆ ಮಾಡಿಕೊ೦ಡ ವ್ಯಕ್ತಿಯ ಕುಟು೦ಬದ ಪಾಲಿಗೆ ದು:ಖದ ದಿನ. ಅದೇ ರೀತಿ ಚುನಾವಣಾ ಫಲಿತಾ೦ಶದ ದಿನ ಗೆದ್ದ ಒಬ್ಬ ವ್ಯಕ್ತಿಯ ಹೊರತಾಗಿ ಉಳಿದೆಲ್ಲರ ಪಾಲಿಗೆ ಕಹಿ ದಿನವಾಗಿರುವುದು ಸಹಜ.

ಗೋಧ್ರಾ ದುರ೦ತ ಅನೇಕ ಜನ ಅಮಯಾಕರ ಪಾಲಿಗೆ ಒ೦ದು ಕರಾಳ ನೆನಪಾಗಿದ್ದರೆ, ಮರಳಿ ಅಧಿಕಾರಕ್ಕೆ ಬ೦ದ ಬಿ. ಜೆ. ಪಿ. ಪಾಲಿಗೆ ಅದೊ೦ದು ಸ್ಮರಣೀಯ ಘಟನೆ. ಬಾಬರಿ ಮಸೀದಿ ಕೆಡವಿದ ದಿನ, ಡಿಸೆ೦ಬರ್ ೬, ಮುಸ್ಲಿಮರ ಪಾಲಿಗೆ ಕರಾಳ ದಿನವಾಗಿದ್ದರೆ, ಬಲ ಪ೦ಥೀಯರ ಪಾಲಿಗೆ ಅದು ವಿಜಯದ ದಿನ.

ಬದುಕೇ ಹೀಗೆ. ನಮಗೆ ಕ೦ಡದ್ದು ಇತರರಿಗೆ ಬೇರೆಯೇ ಆಗಿ ಕಾಣುತ್ತಿರುತ್ತದೆ. ಅವರಿಗೆ ಸರಿ ಅನ್ನಿಸಿದ್ದು ನನಗೆ ತಪ್ಪಾಗಿ ಕಾಣಬಹುದು. ನನಗೆ ಸರಿ ಎನ್ನಿಸಿದ ವಿಷಯಗಳು ಉಳಿದವರ ಪಾಲಿಗೆ ಪ್ರಮಾದಗಳಾಗಿರಬಹುದು. ಇವೆಲ್ಲಾ ಬದುಕನ್ನು ನೋಡುವ ದೃಷ್ಟಿಯನ್ನು ಅವಲ೦ಬಿಸಿರುತ್ತದೆ.

ಒಂದು ಕವಿತೆಯ ಸಾಲುಗಳು ನೆನಪಾಗುತ್ತವೆ. ಬಹುಶಃ ಮುಪ್ಪಿನ ಷಡಕ್ಷರಿ ಬರೆದಿದ್ದಿರಬೇಕು:

ಅವರವರ ಭಾವಕ್ಕೆ ಅವರವರ ಭಕುತಿಗೆ
ಅವರವರ ತೆರನಾಗಿ ಇರುತಿಹನು ಶಿವಯೋಗಿ
ಹರಿಯ ಭಕ್ತರಿಗೆ ಹರಿ, ಹರನ ಭಕ್ತರಿಗೆ ಹರ
ನರರೇನು ಭಾವಿಪರೋ, ಅದರಂತೆ ತೋರುಹನು
ಜೀವನದೃಷ್ಟಿ ಎಂದರೆ ಇದೇ ಇರಬೇಕು.

- ಚಾಮರಾಜ ಸವಡಿ

ನಾವೆಲ್ಲ ಪುಸ್ತಕ ಪ್ರಕಟಿಸುವುದು ಏತಕ್ಕೆ?

3 ಪ್ರತಿಕ್ರಿಯೆ
ಬಹಳಷ್ಟು ಜನ ನನ್ನನ್ನು ಕೇಳುವ ಸಾಮಾನ್ಯ ಪ್ರಶ್ನೆಯೊ೦ದಿದೆ: ನೀವು ಇದುವರೆಗೆ ಎಷ್ಟು ಪುಸ್ತಕಗಳನ್ನು ಪ್ರಕಟಿಸಿದ್ದೀರಿ?

ನನ್ನ ಉತ್ತರ ಕೇಳಿ ಅವರಿಗೆ ನಿರಾಶೆಯಾಗುತ್ತದೆ. ಕೆಲವರು ಅಪನ೦ಬಿಕೆಯನ್ನು ಸಹ ತೋರಿಸುತ್ತಾರೆ. ‘ನಾನು ಇದುವರೆಗೆ ತಂದಿದ್ದು ಒ೦ದೇ ಪುಸ್ತಕವನ್ನು’ ಎ೦ಬ ನನ್ನ ಉತ್ತರ ಅವರ ಮನಸ್ಸಿಗೆ ಸಮಾಧಾನವನ್ನು ತರುವುದಿಲ್ಲ.

‘ಇಷ್ಟೊ೦ದು ನಿಯಮಿತವಾಗಿ ವಿಷಯಗಳನ್ನು ಬರೆಯುತ್ತೀ. ನಿನ್ನ ಬರಹಗಳು ಕೂಡಾ ಆಕರ್ಷಕವಾಗಿತ್ತವೆ. ಅವನ್ನೇ ಆಯ್ದುಕೊ೦ಡು ಒ೦ದು ಪುಸ್ತಕ ಮಾಡಬಹುದಲ್ಲವೇ? ಜನ ಅ೦ತಹ ಪುಸ್ತಕಗಳನ್ನು ಖ೦ಡಿತ ಕೊ೦ಡು ಓದುತ್ತಾರೆ’ ಎ೦ಬ ಇನ್ನೊ೦ದು ಸಲಹೆ ಅವರಿ೦ದ ಬರುತ್ತದೆ.

ನಾನು ಉತ್ತರಿಸುವುದಿಲ್ಲ. ಏಕೆ೦ದರೆ ಪುಸ್ತಕಗಳ ಪ್ರಕಟಣೆಗೆ ಸ೦ಬ೦ಧಿಸಿದ೦ತೆ ನಾನು ಕೊ೦ಚ ನಿಧಾನಿ. ಹೆಚ್ಚು ಓದಬೇಕು, ಕಡಿಮೆ ಬರೆಯಬೇಕು, ಅತೀ ಕಡಿಮೆ ಬರಹಗಳನ್ನು ಪ್ರಕಟಿಸಬೇಕು ಎನ್ನುವ ನ೦ಬಿಕೆಯುಳ್ಳವನು ನಾನು. ಪತ್ರಿಕೋದ್ಯಮಕ್ಕೆ ಬ೦ದಿರದಿದ್ದರೆ ಖ೦ಡಿತವಾಗಿಯೂ ಒ೦ದೆರಡು ಪುಸ್ತಕಗಳನ್ನು ನಾನು ಪ್ರಕಟಿಸಿರುತ್ತಿದ್ದೇನೇನೋ? ಆದರೆ ನಿಯಮಿತವಾದ ಬರವಣಿಗೆಯನ್ನು ಬೇಡುವ ಈ ಉದ್ಯಮ ಪುಸ್ತಕ ಪ್ರಕಟಿಸುವ ಆಸಕ್ತಿಯನ್ನೇ ಇಲ್ಲವಾಗಿಸಿದೆ.

ಹೀಗಿದ್ದರೂ ಒಂದು ಪ್ರಶ್ನೆ ಹಾಗೇ ಉಳಿಯುತ್ತದೆ: ಒಬ್ಬ ವ್ಯಕ್ತಿ ತನ್ನ ಪುಸ್ತಕಗಳನ್ನು ಏಕೆ ಪ್ರಕಟಿಸಲು ಹೋಗುತ್ತಾನೆ?

ತಾನು ಬರೆದಿದ್ದನ್ನು ಬೇರೆಯವರೂ ಓದಲಿ ಎ೦ದು ತಾನೇ? ಹಿಂದೆ ನಾನು ಬರೆದಿದ್ದು ನನ್ನ ಸ್ವಂತ ಪತ್ರಿಕೆಯಲ್ಲಿ ಪ್ರತಿ ವಾರ ಅಚ್ಚಾಗುತ್ತಿತ್ತು. ಮುಂದೆ ವಿವಿಧ ದಿನಪತ್ರಿಕೆಗಳ ವರದಿಗಾರನಾದಾಗ, ಆಯಾ ಪತ್ರಿಕೆಗಳಲ್ಲಿ ಬರುತ್ತಿದ್ದವು. ಈಗ ಅಂತರ್ಜಾಲ ಪ್ರಕಟಣೆಯ ಮಾಧ್ಯಮವಾಗಿದೆ. ಓದಿದ ಕೆಲವರು ಇಷ್ಟಪಡುತ್ತಾರೆ. ಕೆಲವರು ಸಲಹೆ ಕೊಟ್ಟರೆ, ಇನ್ನು ಕೆಲವರು ಟೀಕಿಸುತ್ತಾರೆ. ಸ್ವಂತ ಪತ್ರಿಕೆ ಇದ್ದಾಗ, ಓದಿ ಧಮಕಿ ಹಾಕುವವರೂ ಇದ್ದರು.

ಜನರ ಈ ವಿವಿಧ ಪ್ರತಿಕ್ರಿಯೆಗಳು ನನಗೆ ಅಭ್ಯಾಸವಾಗಿ ಬಿಟ್ಟಿವೆ. ಹೀಗಾಗಿ, ಬರೆದಿದ್ದನ್ನು ಮತ್ತೆ ಪುಸ್ತಕ ರೂಪದಲ್ಲಿ ತರುವ ಆಸಕ್ತಿ ಅಷ್ಟಾಗಿ ಇಲ್ಲ.

ಏಕೆ೦ದರೆ, ಪತ್ರಿಕೆಗಳನ್ನು ಮಾರಿದ೦ತೆ ಪುಸ್ತಕಗಳನ್ನು ಮಾರಲಾಗುವುದಿಲ್ಲ. ಅಲ್ಲದೇ, ಪತ್ರಿಕೆಗಳನ್ನು ಅಚ್ಚು ಹಾಕಿಸುವುದು ಸರಳ, ಅವುಗಳು ಪುಸ್ತಕಗಳಿಗಿ೦ತ ವೇಗವಾಗಿ ಖರ್ಚಾಗುತ್ತವೆ. ಒಂದೇ ಸಮಸ್ಯೆ ಎಂದರೆ, ಅವನ್ನು ಬಹಳ ದಿನಗಳವರೆಗೆ ಕಾಯ್ದಿಡಲಾಗುವುದಿಲ್ಲ. ಈ ಕಾರಣಕ್ಕಾಗಿಯೂ ಪುಸ್ತಕ ಪ್ರಕಟಣೆಯತ್ತ ನನಗೆ ಕಡಿಮೆ ಆಸಕ್ತಿ.

ಆದರೆ, ಎಲ್ಲರೂ ಹೀಗೇ ಯೋಚಿಸಬೇಕೆಂದೇನೂ ಇಲ್ಲ. ಹಾಗೆ ನೋಡಿದರೆ ಪುಸ್ತಕಗಳನ್ನು ಓದುವವರ ಸ೦ಖ್ಯೆ ಕಡಿಮೆಯಾಗುತ್ತಿದೆಯಾದರೂ ಪ್ರಕಟಣೆ ಮಾತ್ರ ಹೆಚ್ಚುತ್ತಲೇ ಇವೆ. ಬೇರೆ ಕ್ಷೇತ್ರಗಳಲ್ಲಿ ಕಾಣದ ಸ್ಪರ್ಧೆ ಇಲ್ಲಿ ಹೆಚ್ಚುತ್ತಲೇ ಇದೆ. ನಮ್ಮ ವಲಯದಲ್ಲಿ ಯಾರಾದರೂ ಒ೦ದು ಪುಸ್ತಕವನ್ನು ಪ್ರಕಟಿಸಿದರೆ ಮುಗಿಯಿತು, ತಾವೂ ಒ೦ದು ಪುಸ್ತಕ ಹೊರ ತರುವ ತನಕ ತುಂಬ ಜನರಿಗೆ ಸಮಾಧಾನವೇ ಆಗುವುದಿಲ್ಲ. ಜನ ನನ್ನ ಪುಸ್ತಕವನ್ನು ಓದುತ್ತಾರೋ ಇಲ್ಲವೋ ಎ೦ಬ ಯೋಚನೆ ಕೂಡಾ ಮಾಡದೇ ಒ೦ದಷ್ಟು ಬರಹಗಳನ್ನು ಸ೦ಗ್ರಹ ಮಾಡಿಕೊ೦ಡು ಪುಸ್ತಕ ಪ್ರಕಟಣೆಯ ಕೆಲಸವನ್ನು ಶುರು ಮಾಡಿಕೊ೦ಡು ಬಿಡುತ್ತಾರೆ. ಪುಸ್ತಕ ಬಿಡುಗಡೆಯಾಗುವರೆಗೆ ಅವರಿಗೆ ನೆಮ್ಮದಿ ಇರುವುದಿಲ್ಲ.

ಆದರೆ, ಅಷ್ಟೊ೦ದು ಕಷ್ಟ ಪಟ್ಟು ಪುಸ್ತಕ ಪ್ರಕಟಿಸಿ, ಆಮೇಲೆ ಅದನ್ನು ಓದದ ಕಗ್ಗ ಮನಸುಗಳಿಗೆ ಉಚಿತವಾಗಿ ಹ೦ಚುವುದರಲ್ಲಿ ಅದ್ಯಾವ ಸ೦ತೋಷ ಇದೆ ಎ೦ಬುದೇ ನನಗೆ ಇದುವರೆಗೆ ಅರ್ಥವಾಗಿಲ್ಲ. ಎಷ್ಟೋ ಜನರಿಗೆ ತಮ್ಮ ಪ್ರತಿಭೆ ಸಾಹಿತ್ಯದ ಯಾವ ಪ್ರಕಾರದಲ್ಲಿ ಇದೆ ಎ೦ಬುದೇ ಗೊತ್ತಿರುವುದಿಲ್ಲ. ಅರ್ಜೆ೦ಟಿದ್ದರೆ ಪದ್ಯ, ಸಮಯವಿದ್ದರೆ ಗದ್ಯ ಬರೆಯುವ ದಿಢೀರ್ ಲೇಖಕರು ಪುಸ್ತಕ ಪ್ರಕಟಣೆ ಬಿಡುಗಡೆ ಹಾಗೂ ಸಡಗರಗಳನ್ನೇ ದೊಡ್ಡ ಸಾಧನೆ ಎ೦ದು ಭಾವಿಸಿ ಬಿಡುತ್ತಾರೆ. ತಿ೦ಗಳುಗಟ್ಟಲೇ ಬಸುರಿ ಹೆ೦ಗಸಿನ೦ತೆ ಸ೦ಭ್ರಮದಿ೦ದ ಓಡಾಡುವ ಲೇಖಕರು ಕೊನೆಗೊಮ್ಮೆ ಹೆತ್ತ ಮಗುವನ್ನು ತ೦ದು ಕೈಗಿಡುತ್ತಾರೆ.

ಅದನ್ನು ಹೇಗೆ ವರ್ಣಿಸುವುದು? ಹೆತ್ತ ಮಗು ಇನ್ನೂ ಭ್ರೂಣಾವಸ್ಥೆಯಲ್ಲೇ ಹಸಿ ಹಸಿಯಾಗಿಯೇ ಇರುತ್ತದೆ. ಅರ್ಜೆ೦ಟಿಗೆ ಹುಟ್ಟಿದ ಪುಸ್ತಕ ಬೆಳೆಯದ ಭ್ರೂಣದ೦ತೆಯೇ. ಅದರ ಯಾವ ಭಾಗವೂ ಪೂರ್ಣವಾಗಿ ಬೆಳೆದಿರುವುದಿಲ್ಲ. ಅದಕ್ಕೊ೦ದು ರೂಪವಿರುವುದಿಲ್ಲ. ಖಚಿತ ಆಕಾರವಿರುವದಿಲ್ಲ. ಕೆಲವ೦ತೂ ಗ೦ಡೋ - ಹೆಣ್ಣೋ ಎ೦ದು ಕೂಡ ಗುರುತಿಸಲಾರದ ಸ್ಥಿತಿಯಲ್ಲಿರುತ್ತವೆ. ಇ೦ತ ಹಸಿ ಹಸಿ ಬರವಣಿಗೆಯ ಮುದ್ದೆಗೆ ಪುಸ್ತಕ ಎ೦ದು ಹೆಸರಿಟ್ಟರೆ ಯಾವ ಓದುಗ ತಾನೆ ಆಸ್ಥೆಯಿ೦ದ ಅದನ್ನು ದುಡ್ಡು ಕೊಟ್ಟು ಖರೀದಿಸುತ್ತಾನೆ? ಇದು ಪುಸ್ತಕ ಪ್ರಕಟಣೆಯ ಕರ್ಮ.

ನಮ್ಮ ಬರಹಗಳು ಮೊದಲು ನಮಗೆ ಮೆಚ್ಚುಗೆಯಾಗಬೇಕು. ಅವುಗಳನ್ನು ಓದಿದ ಇತರರು ಕೂಡಾ ಅವುಗಳನ್ನು ಮೆಚ್ಚುವ೦ತಿರಬೇಕು. ಅದಕ್ಕೊ೦ದು ರೂಪ, ಸ್ಪಷ್ಟತೆ, ತಕ್ಕಮಟ್ಟಿಗಿನ ಬೆಳವಣಿಗೆ, ಮಿಡಿಯುವ ಹೃದಯ, ಕದಲುವ ಶರೀರ, ಪ್ರೀತಿ ಉಕ್ಕಿಸುವ ಚರ್ಯೆ ಇರಬೇಕು. ಮು೦ದೆ ಈ ಶಿಶು ಬೆಳೆದು ಮನುಷ್ಯನಾಗುತ್ತದೆ ಎ೦ಬ ನ೦ಬಿಕೆ ಹುಟ್ಟಿಸುವ೦ತಿರಬೇಕು. ಅದರ ಯಾವುದಾದರೂ ಒ೦ದು ಅ೦ಶ, ಮುಖ್ಯವಾಗಿ ಬರವಣಿಗೆ, ನಿರೂಪಣೆ, ನಮ್ಮನ್ನು ಸೆಳೆಯುವ೦ತಿರಬೇಕು. ದುಡ್ಡು ಕೊಟ್ಟು ಖರೀದಿಸಲು ಹಿ೦ಜರಿಯದ೦ತೆ ಆಕರ್ಷಕವಾಗಿರಬೇಕು. ಹಾಗಿದ್ದರೆ ಮಾತ್ರ ಅದನ್ನೊ೦ದು ಯೋಗ್ಯ ಪುಸ್ತಕ ಎ೦ದು ಒಪ್ಪಿಕೊಳ್ಳಬಹುದು. ಅಷ್ಟೇ ಅಲ್ಲ, ಅದನ್ನು ದುಡ್ಡು ಕೊಟ್ಟು ಖರೀದಿಸಲೂಬಹುದು.

ಪುಸ್ತಕಕ್ಕಷ್ಟೇ ಅಲ್ಲ, ಪತ್ರಿಕೆಗಳಿಗೆ ಕೂಡಾ ಈ ಮಾನದ೦ಡ ಅನ್ವಯವಾಗುತ್ತದೆ. ಸ೦ತೆಗೆ ಮುನ್ನ ಮೂರು ಮೊಳ ನೇಯುವ ಧೋರಣೆಯ ಪತ್ರಕರ್ತನಿಗೆ ಕೊನೆಗೆ ಲ೦ಗೋಟಿ ಮಾತ್ರವೇ ಉಳಿಯುವುದು. ಪತ್ರಿಕೆಯ ಪ್ರತಿಯೊ೦ದು ಪುಟದಲ್ಲಿ ಬಿಸಿ ಬಿಸಿ ಸುದ್ದಿ, ನವಿರಾದ ಬರಹ, ಚಿ೦ತೆಗೆ ಹಚ್ಚುವ ಗದ್ಯ, ಖುಷಿ ತರುವ ಪದ್ಯ, ಕಚಗುಳಿ ಇಡುವ ಹಾಸ್ಯ ಇರದಿದ್ದರೆ ಯಾವ ಓದುವ ಅ೦ಥ ನಿರಾಸಕ್ತ ಪತ್ರಿಕೆಯನ್ನು ದುಡ್ಡು ಕೊಟ್ಟು ಕೊ೦ಡಾನು?
ಹೋಗಲಿ, ಅ೦ತಹ ಅರ್ಜೆ೦ಟು ಮಾಡಿಕೊ೦ಡು ಪುಸ್ತಕವನ್ನೋ, ಪತ್ರಿಕೆಯನ್ನೋ ಅಚ್ಚು ಮಾಡಿಸಿಕೊ೦ಡು ತರುವ ಅನಿವಾರ್ಯತೆ ಏನಿರುತ್ತದೆ?

ಮನುಷ್ಯನ ಮೂಲಭೂತ ದೌರ್ಬಲ್ಯವಿರುವುದೇ ಇಲ್ಲಿ.

ನಮಗೆಲ್ಲರಿಗೂ ಪ್ರಚಾರದ ಹುಚ್ಚು. ಸುತ್ತಮುತ್ತ ಇರುವವರ ಗಮನವನ್ನು ಸೆಳೆಯುವ ಚಪಲ. ಹಾಗೆ ಗಮನ ಸೆಳೆಯಬೇಕೆ೦ದರೆ ಏನಾದರೂ ಬ೦ಡವಾಳ ಬೇಕಲ್ಲವೇ? ಆಗ ನಾನು ಒಬ್ಬ ಬರಹಗಾರ, ನನ್ನಿ೦ದಲೂ ಸಾಹಿತ್ಯ ಸೃಷ್ಟಿ ಸಾಧ್ಯವಿದೆ ಎ೦ಬುದನ್ನು ತೋರಿಸಲು ನಾವು ಪ್ರಯತ್ನಿಸುತ್ತೇವೆ. ಮನಸ್ಸಿಗೆ ತೋಚಿದ್ದನ್ನೆಲ್ಲಾ ಬರೆದು ಅದು ಅಚ್ಚಾಗಲಿ ಎ೦ದು ಹ೦ಬಲಿಸುತ್ತೇವೆ. ನಮ್ಮ ಭ್ರಮೆ ಹೇಗಿದೆಯೆ೦ದರೆ, ನಾವು ಬರೆದಿದ್ದು ಅಚ್ಚಾಗಿದೆಯೆ೦ದರೆ ಅದು ಶ್ರೇಷ್ಠ ಬರಹವೇ ಸರಿ ಎ೦ದು ಭಾವಿಸಿ ಬಿಡುತ್ತೇವೆ. ಅಂಥ ಹಲವಾರು ಬರಹಗಳನ್ನು ಸೇರಿಸಿಕೊ೦ಡರೆ ಸ೦ಕಲನ ರೆಡಿ. ಒ೦ದು ವೇಳೆ ಯಾವ ಪತ್ರಿಕೆಗಳೂ ನಮ್ಮ ಬರಹಗಳನ್ನು ಪ್ರಕಟಿಸದಿದ್ದರೆ ದುಡ್ಡು ಕೊಟ್ಟು ನಾವೇ ಪ್ರಕಟಿಸಿಕೊಳ್ಳುತ್ತೇವೆ. ಭರ್ಜರಿಯಾಗಿ ಪುಸ್ತಕ ಬಿಡುಗಡೆ ಮಾಡಿ ನಾವೂ ಸಾಹಿತಿಗಳಾದೆವು ಎ೦ದು ಬೀಗುತ್ತೇವೆ.

ನನಗೆ ಮತ್ತೆ ಮತ್ತೆ ಅಪಕ್ವ ಭ್ರೂಣದ ಚಿತ್ರ ಕಣ್ಮು೦ದೆ ಬರುತ್ತದೆ. ಅರಳದ ಹೂವಿನ೦ತೆ ಮುರುಟಿರುವ ಮೊಗ್ಗಿನ ನೆನಪಾಗುತ್ತದೆ. ಮನಸ್ಸನ್ನು ಅರಳಿಸದ, ಬೆಚ್ಚಿ ಬೀಳಿಸದ, ಖುಷಿಗೊಳಿಸದ ಬರವಣಿಗೆ ಸಾಹಿತ್ಯವೇ ಅಲ್ಲ. ಅದು ಕೇವಲ ಅಕ್ಷರ ಸೃಷ್ಟಿ. ಅದನ್ನು ಹೊರ ತರುವುದೇ ಒ೦ದು ಸಾಧನೆಯಾಗಬಾರದು.

ಆದ್ದರಿ೦ದ ನಾನು ಪುಸ್ತಕ ಪ್ರಕಟಣೆ ಎ೦ದರೆ ಕೊ೦ಚ ಅಳುಕುತ್ತೇನೆ. ನನ್ನ ಬರಹಗಳು ಪುಸ್ತಕ ರೂಪದಲ್ಲಿ ಬ೦ದರೆ ಜನ ನಿಜವಾಗಿಯೂ ಅವುಗಳನ್ನು ಕೊ೦ಡು ಓದುತ್ತಾರೆಯೇ? ಎಂಬ ಅನುಮಾನ ಈಗಲೂ ಇದೆ. ಇದುವರೆಗೆ ನಾನು ಬರೆದಿದ್ದು ಏಳೆಂಟು ಪುಸ್ತಕಗಳಿಗೆ ಆಗುವಷ್ಟಿದೆ. ಪ್ರಕಟಿಸಿದರೆ ಜೇಬಿಗೆ ಮೋಸವಂತೂ ಆಗುವುದಿಲ್ಲ. ಆದರೂ, ಅಚ್ಚು ಹಾಕಿಸಲು ಅಳುಕು. ಇದುವರೆಗೆ ಪ್ರಕಟಿಸಿದ ಒಂದು ಪುಸ್ತಕ ನನಗೆ ಚೆನ್ನಾಗಿ ದುಡ್ಡು ತಂದುಕೊಟ್ಟಿದ್ದರೂ, ಅಳುಕು ಮಾತ್ರ ಪೂರ್ತಿ ಹೋಗಿಲ್ಲ.

ಮನಸ್ಸು ಇನ್ನು ಒ೦ದಷ್ಟು ಕಾಲ ಕಾಯಲು ಬಯಸುತ್ತದೆ. ಮನಸ್ಸು ಮಾಗಿದ೦ತೆ ಅಕ್ಷರಗಳೂ ಮಾಗುತ್ತವೆ, ಪುಸ್ತಕವೂ ಮಾಗುತ್ತದೆ. ಅ೦ಥ ಮಾಗಿದ ಬರಹ ಮಾತ್ರ ಮನಸ್ಸನ್ನು ಅರಳಿಸಬಲ್ಲದು, ಕೆರಳಿಸಬಲ್ಲದು, ಬೆಚ್ಚಿ ಬೀಳಿಸಬಲ್ಲದು. ಅಲ್ಲಿಯವರೆಗೆ ಪುಸ್ತಕ ಪ್ರಕಟಿಸಬಾರದು ಎ೦ದುಕೊ೦ಡು ಸುಮ್ಮನಾಗುತ್ತೇನೆ.

- ಚಾಮರಾಜ ಸವಡಿ

ಮನಸ್ಸೆಂಬ ಗೆಳೆಯ, ಮನಸ್ಸೆಂಬ ಶತ್ರು

0 ಪ್ರತಿಕ್ರಿಯೆ
ನಮ್ಮ ಮನಸ್ಸೆಂಬುದು ಆಗ ತಾನೆ ಮಾತು ಕಲಿತ ಮಗುವಿನಂತೆ. ಸದಾ ಏನನ್ನೋ ಹೇಳಬೇಕೆ೦ದು ಪ್ರಯತ್ನಿಸುತ್ತದೆ. ಅದರ ಸ್ವಭಾವವೇ ಹಾಗೆ. ಆದರೆ ಬಹಳಷ್ಟು ಸಾರಿ ಅ೦ದುಕೊ೦ಡಿದ್ದನ್ನು ಹೇಳಲು ಅದಕ್ಕೆ ಆಗುವುದೇ ಇಲ್ಲ.

ಅದಕ್ಕೆ ಕಾರಣಗಳು ಸಾವಿರ ಇರಬಹುದು. ಆದರೆ, ಮನಸ್ಸಿಗೆ ನಮ್ಮೊಳಗಿನ ಭಾವನೆಯನ್ನು ಅದಿರುವ೦ತೆ, ಯಥಾವತ್ತಾಗಿ, ನೇರವಾಗಿ ಆ ಕ್ಷಣಕ್ಕೆ, ಅಲ್ಲಿಯೇ ಇದ್ದಕ್ಕಿದ್ದ ಹಾಗೆ ಹೇಳಿ ಬಿಡಲು ಸಾಧ್ಯವಾಗುವುದಿಲ್ಲ. ಅದಕ್ಕೆ ನಾಚಿಕೆ ಕಾರಣವಾಗಿರಬಹುದು. ಸ೦ಕೋಚ ಕಾಡಬಹುದು. ದೌರ್ಬಲ್ಯ, ಕೀಳರಿಮೆ ಇರಬಹುದು. ಹೆದರಿಕೆ, ಒತ್ತಡಗಳು ಕಾಡಿರಬಹುದು. ಆಮಿಷ, ಲೋಭ, ಬೆದರಿಕೆ, ಸಣ್ಣತನ ಅಥವಾ ದೊಡ್ಡತನಗಳೂ ಕೂಡ ಕಾರಣವಾಗಿರಬಹುದು. ಇದೆಲ್ಲಾ ನಾವು ಅ೦ದುದ್ದನ್ನು ಅ೦ದುಕೊ೦ಡ ಹಾಗೆ ಹೇಳಲು ಅಡ್ಡಿ ಮಾಡುತ್ತವೆ. ಆಗೆಲ್ಲಾ ಮನಸ್ಸು ಮಿಡುಕುತ್ತದೆ. ಬೇಸರಪಟ್ಟುಕೊಳ್ಳುತ್ತದೆ. ಸಿಟ್ಟಾಗುತ್ತದೆ. ಅಸಹ್ಯಪಟ್ಟುಕೊಳ್ಳುತ್ತದೆ. ಹೇಳಬೇಕಾದ ಮಾತನ್ನು ಹೇಳದೇ ಹೋದಾಗ ಬೇಸರಗೊಳ್ಳದಿದ್ದರೆ ಅದು ಮನಸ್ಸು ಆದೀತಾದರೂ ಹೇಗೆ?

ನಾವು ಯಾವುದೇ ಕೆಲಸದಲ್ಲಿರಲಿ, ನಾವು ಇಷ್ಟಪಡದ ಅನೇಕ ಕೆಲಸಗಳನ್ನು ಮಾಡಬೇಕಾಗಿ ಬರುತ್ತದೆ. ಸ೦ದರ್ಭದ ಅನಿವಾರ್ಯತೆಗೋ ಅಥವಾ ನಮ್ಮ ದೌರ್ಬಲ್ಯಕ್ಕೋ ಮಣಿದು ನಾವು ಆ ಅಪ್ರಿಯ ಕೆಲಸವನ್ನು ಮಾಡಲು ತೊಡಗುತ್ತೇವೆ. ಆಗೆಲ್ಲಾ ಮನಸ್ಸು ಬ೦ಡಾಯ ಹೂಡುತ್ತದೆ. ಮೊ೦ಡತನ ಮಾಡುತ್ತದೆ. "ಈ ಕೆಲಸ ಮಾಡಲು ನನಗೆ ಇಷ್ಟವಿಲ್ಲ" ಎ೦ದು ಹೇಳುವ೦ತೆ ಒತ್ತಾಯಿಸುತ್ತದೆ. ಇದ್ದ ಕಾರಣ ಹೇಳಿ ನೆಮ್ಮದಿಯಿ೦ದಿರು ಎ೦ದು ಪೀಡಿಸುತ್ತದೆ.

ಮನಸ್ಸು ಮುನಿದಾಗ ಅದಕ್ಕೆ ಸಮಾಧಾನ ಹೇಳುವುದು ಬಹಳ ಕಷ್ಟ. ಆದರೆ ಮುನಿದ ಮನಸ್ಸಿಗೆ ನಾವೇ ಸಮಾಧಾನ ಹೇಳಿಕೊಳ್ಳಬೇಕು. ಬೇರೆ ದಾರಿಯೇ ಇಲ್ಲ. ಬೇರೆಯವರ ಮಾತುಗಳಿಗೆ ಕಿವಿಯನ್ನು ಬಿಟ್ಟು ಕೊಟ್ಟು ಮನಸ್ಸಿನೊ೦ದಿಗೆ ನಾವೇ ಮಾತಿಗೆ ನಿಲ್ಲಬೇಕು. ನಾವೇ ಅದಕ್ಕೆ ಸಮಾಧಾನ ಹೇಳಬೇಕು. ಅದರ ಸಿಟ್ಟಿಗೆ ನಾವೇ ತುತ್ತಾಗಬೇಕು. ಹಾಗೆ ಮನಸ್ಸಿನ ಮುನಿಸಿಡೆಗೆ ಒಗ್ಗಿಕೊಳ್ಳುತ್ತಲೇ ನಾವದನ್ನು ಸ೦ತೈಸಬೇಕು. ಏಕೆ೦ದರೆ, ಮನಸೇ ಮನಸಿನ ಮನಸ ನಿಲ್ಲಿಸುವುದು. ಮನಸ್ಸಿಗಿ೦ತ ದೊಡ್ಡ ಗೆಳೆಯನಿಲ್ಲ. ಅದೇ ರೀತಿ ಅದಕ್ಕಿ೦ತ ಕಟುವಾದ ವಿಮರ್ಶಕ ಕೂಡ ಇನ್ನೊಬ್ಬನಿಲ್ಲ. ಮನಸ್ಸಿನ ವಿಮರ್ಶೆಯನ್ನು ಸಹಿಸಿಕೊಳ್ಳುವುದು, ಅದರ ಟೀಕೆಯನ್ನು ಒಪ್ಪಿಕೊಳ್ಳುವುದು ಯಾವಾಗಲೂ ಕಷ್ಟಕರ. ತಪ್ಪು ಮಾಡಿದಾಗ ಮನಸ್ಸು ಚುಚ್ಚುತ್ತದೆ. ಹೀಯಾಳಿಸುತ್ತದೆ. ಒಪ್ಪಿಕೊಳ್ಳದಿದ್ದರೆ ಮುನಿಸಿಕೊಳ್ಳುತ್ತದೆ. ಅದನ್ನು ಸ೦ಭಾಳಿಸುವುದು ಬಹಳ ಕಷ್ಟ.

ಬಹಳಷ್ಟು ಜನ ಹೇಳುತ್ತಾರೆ; ‘ನಮಗೂ ಮನಸ್ಸು ಬಿಚ್ಚಿ ಮಾತನಾಡಲು, ಬರೆಯಲು, ಪ್ರತಿಭಟಿಸಲು ಇಷ್ಟ. ಆದರೆ ನಮ್ಮ ನೌಕರಿಯೇ ಅ೦ಥದ್ದು. ಏನೇ ಆದರೂ ಕೂಡಾ ನಾವು ಬಾಯಿ ಮುಚ್ಚಿಕೊ೦ಡೇ ಇರಬೇಕು ನೋಡಿ!!! ಮನಸ್ಸಿನಲ್ಲಿ ಇರುವುದು ಯಾವತ್ತೂ ಹೊರಗೆ ಬರಬಾರದು. ಏನೋ ನಿಮ್ಮ೦ಥವರು, ಆತ್ಮೀಯರು ಸಿಕ್ಕಾಗ ಮಾತ್ರ ನಾವು ಮನಸ್ಸು ಬಿಚ್ಚಿ ಮಾತನಾಡುವುದು. ಇಲ್ಲದಿದ್ದರೆ ಸುಮ್ಮನೇ ಇದ್ದು ಬಿಡುತ್ತೇವೆ’ ಎನ್ನುತ್ತಾರೆ.

ಹಾಗೆ ಮನಸ್ಸು ತೀವ್ರವಾಗಿ ಯೋಚಿಸತೊಡಗಿದಾಗೆಲ್ಲಾ ನಾವು ಅ೦ತರ್ಮುಖಿಯಾಗುತ್ತೇವೆ. ಅದು ಹೇಳುತ್ತಿರುವುದರ ಬಗ್ಗೆ ಗ೦ಭೀರವಾಗಿ ಯೋಚಿಸುತ್ತೇವೆ. ಮನಸ್ಸಿನ ಉತ್ಸಾಹಕ್ಕೆ ಅಡ್ಡ ಬರದಿದ್ದರೆ ಅದು ನಮ್ಮೊಂದಿಗೆ ಮುನಿಸಿಕೊಳ್ಳುವ ಸ೦ದರ್ಭಗಳು ತು೦ಬಾ ಕಡಿಮೆ. ಏನು ಮಾಡಬೇಕು? ಏನು ಮಾಡುತ್ತಿದ್ದೇವೆ? ಎ೦ಬ ವಿಷಯಗಳ ಬಗ್ಗೆ ಗಮನವಿದ್ದರೆ ನಮ್ಮ ಮನಸ್ಸು ನಮ್ಮ ಉತ್ತಮ ಗೆಳೆಯನಾಗುವುದರಲ್ಲಿ ಯಾವ ಸ೦ದೇಹವೂ ಇಲ್ಲ. ಹೀಗಾಗಿ ಮನಸ್ಸು ಏನು ಹೇಳುತ್ತಿದೆ? ಎ೦ಬುದರ ಕಡೆಗೆ ಗಮನ ಹರಿಸುವುದು ಯಾವಾಗಲೂ ಒಳ್ಳೆಯದು.

ಅದೇ ರೀತಿ ಅದು ಹೇಳುತ್ತಿರುವುದರಲ್ಲಿ ರಿಸ್ಕಿನ ಅ೦ಶವೆಷ್ಟಿದೆ? ಎನ್ನುವುದರತ್ತ ಗಮನ ಹರಿಸುವುದು ಕೂಡಾ ಅಷ್ಟೇ ಮುಖ್ಯ. ಏಕೆ೦ದರೆ ಮನಸ್ಸು ಯಾವಾಗಲೂ ಸತ್ಯವಾದಿ. ಆ ಕ್ಷಣಕ್ಕೆ ಏನು ಅನ್ನಿಸುತ್ತದೆಯೋ, ಆ ಭಾವನೆ ತಕ್ಷಣ ಹೊರ ಬ೦ದು ಬಿಡುತ್ತದೆ. ಸಮಯ ಸ೦ದರ್ಭದ ಬಗೆಗೆ, ಯುಕ್ತಾಯುಕ್ತತೆಯ ಬಗ್ಗೆ ಅದು ಯೋಚಿಸುವುದಿಲ್ಲ. ಮನಸ್ಸು ಹೇಳುತ್ತಿರುವುದು ಸತ್ಯವೇ ಇರಬೇಕು, ಆದರೆ ಅದನ್ನು ಹೇಳುವ ಸ೦ದರ್ಭ ಬ೦ದಿದೆಯೋ ಇಲ್ಲವೋ ಎ೦ಬುದರ ಬಗೆಗೆ ನಾವು ಯೋಚಿಸಲೇ ಬೇಕು. ಯೋಚಿಸಿ, ಮನಸ್ಸಿನ ಮಾತನ್ನು ಕೇಳಬೇಕು.

ಯಾವತ್ತೂ ಮನಸ್ಸಿಗೆ ತೀರಾ ವಿರುದ್ಧವಾಗಿ ನಡೆದುಕೊಳ್ಳಬೇಡಿ. ಅದರಿ೦ದಾಗಿ ನಿಮ್ಮ ಮಾನಸಿಕ ಆರೋಗ್ಯ ಏರುಪೇರಾಗುತ್ತದೆ. ನಮ್ಮ ಅ೦ತರ೦ಗದ ಮಿತ್ರನಾದ ಅದದು ಸುಳ್ಳು ಹೇಳುವ ಸ೦ದರ್ಭಗಳು ತು೦ಬಾ ಕಡಿಮೆ ಎ೦ಬುದು ಗಮನದಲ್ಲಿರಲಿ. ಪದೇಪದೇ ನಾವು ನಮ್ಮ ಮನಸ್ಸಿಗೆ ವಿರುದ್ಧವಾಗಿ ನಡೆದುಕೊಳ್ಳತೊಡಗಿದರೆ ಮನಸ್ಸು ಮೊ೦ಡಾಗುತ್ತದೆ. ಹಠಕ್ಕೆ ಬೀಳುತ್ತದೆ. ಪ್ರತಿಭಟನೆಗೆ ಇಳಿಯುತ್ತದೆ. ಸಿಟ್ಟಿಗೇಳುತ್ತದೆ. ಕೊಡಬಾರದ ಸಮಯದಲ್ಲಿ ಕೈ ಕೊಡುತ್ತದೆ. ಮನಸ್ಸನ್ನು ಕೆಡಿಸಿಕೊ೦ಡರೆ ನಾವು ಯಾವ ಕೆಲಸವನ್ನೂ ಸರಿಯಾಗಿ ಮಾಡಲಾರೆವು. ಹೀಗಾಗಿ ಮನಸ್ಸನ್ನು ಸ್ವಸ್ಥವಾಗಿ ಇಟ್ಟುಕೊಳ್ಳುವುದು ಜಾಣತನದ ಲಕ್ಷಣ.

ನಿಮ್ಮ ಮನಸ್ಸಿಗೊ೦ದು ಅಭಿವ್ಯಕ್ತಿಯನ್ನು ಕಲ್ಪಿಸಿ ಕೊಡಿ. ಅದು ಹೇಳುವ ವಿಚಾರಗಳ ಕಡೆಗೆ ಗಮನ ಕೊಡಿ. ಅದನ್ನು ಯಾವಾಗ ಹೇಳಬೇಕು? ಎಲ್ಲಿ ಹೇಳಬೇಕು? ಹೇಳುವುದು ಸರಿಯಾಗುತ್ತದೋ ಇಲ್ಲವೋ ಎ೦ಬುದರ ಬಗ್ಗೆ ಯೋಚಿಸಿ ನಿರ್ಧಾರ ಕೈಗೊಳ್ಳಿ. ತೀರಾ ಮನಸ್ಸಿಗೆ ವಿರುದ್ಧವಾದ ಕೆಲಸಗಳನ್ನು ಮಾಡಲು ಹೋಗಬೇಡಿ. ಅದೇ ರೀತಿ ಮನಸ್ಸಿಲ್ಲದ ಕೆಲಸಗಳನ್ನು ಸಹ ಮಾಡಬೇಡಿ. ನಮ್ಮ ಆತ್ಮೀಯ ಮಿತ್ರನಾದ ಮನಸ್ಸು ತು೦ಬ ಸೂಕ್ಷ್ಮವಾದದ್ದು. ನಿರ೦ತರ ಹೀಯಾಳಿಕೆಯನ್ನು ಹಾಗೂ ತಿರಸ್ಕಾರವನ್ನು ಸಹ ಅದು ಸಹಿಸಿಕೊಳ್ಳುವುದಿಲ್ಲ.

ಯಾವ ವೃತ್ತಿಯಾದರೂ ಸರಿ, ಮನಸ್ಸಿನ ಇಷ್ಟಕ್ಕೆ ವಿರುದ್ಧವಾದ ಅನೇಕ ಕೆಲಸಗಳನ್ನು ನಾವು ಮಾಡಬೇಕಾಗುತ್ತದೆ. ಆಗೆಲ್ಲಾ ಸಮಸ್ಯೆಯ ವಿವರಗಳು, ನೀವು ಮಾಡಬೇಕಾಗಿದ್ದು ಏನು? ಏಕೆ? ಹೇಗೆ? ಇತ್ಯಾದಿ ಮಾಹಿತಿಯನ್ನು ಯೋಚಿಸಿ. ಏಕೆ ನೀವು ಮನಸ್ಸಿನ ಇಷ್ಟಕ್ಕೆ ವಿರುದ್ಧವಾಗಿ ನಡೆದುಕೊಳ್ಳಬೇಕಾಯಿತು? ಎ೦ಬುದರ ಬಗ್ಗೆ ಅವಲೋಕನ ಮಾಡಿಕೊಳ್ಳಿ. ನಿಮ್ಮ ದುಗುಡಗೊ೦ಡ ಮನಸ್ಸಿಗೆ ಮೊದಲು ಸಮಾಧಾನ ಹೇಳಬೇಕಾದವರು ನೀವೇ ಎ೦ಬುದು ಗಮನದಲ್ಲಿರಲಿ. ಮನಸ್ಸನ್ನು ಒಪ್ಪಿಸಿ ತೃಪ್ತಗೊಳಿಸಿ. ಅದು ನಿಮ್ಮ ಪರವಾಗಿರುವ೦ತೆ ನೋಡಿಕೊಳ್ಳಿ. ನಮ್ಮ ಮನಸ್ಸು ಎಲ್ಲೋ ಯಾತ್ರೆಗೆ ಹೋಗದೇ ನಮ್ಮ ಜೊತೆಯೇ ಇರುವ೦ತಾದರೆ ಅದಕ್ಕಿ೦ತ ದೊಡ್ಡ ಶಕ್ತಿ ಬೇರೇನಿದೆ?

ಪ್ರತಿದಿನ, ಪ್ರತಿಕ್ಷಣ, ನಮ್ಮ ಮನಸ್ಸು ಸಾವಿರಾರು ಸ೦ಗತಿಗಳನ್ನು ಹೇಳಲು ತವಕಿಸುತ್ತಿರುತ್ತದೆ. ಅದು ಕೂತಲ್ಲೇ ಕೂಡುವುದಿಲ್ಲ. ನಿ೦ತಲ್ಲಿ ನಿಲ್ಲುವುದಿಲ್ಲ. ಹಚ್ಚಿಟ್ಟ ಊದುಬತ್ತಿಯ ಹೊಗೆಯ೦ತೆ ಮನಸ್ಸು ಪ್ರತಿಕ್ಷಣ ಬೇರೊ೦ದು ರೂಪವನ್ನು ತಾಳುತ್ತಿರುತ್ತದೆ. ಹೀಗಾಗಿ ಅದರ ನಿಗ್ರಹ ಬಹಳ ಕಷ್ಟಕರ. ಆದ್ದರಿ೦ದ ಮನಸ್ಸನ್ನು ನಿಮ್ಮ ಅತ್ಯುತ್ತಮ ಗೆಳೆಯರನ್ನಾಗಿಸಿಕೊಳ್ಳಿ. ಅದರೊ೦ದಿಗೆ ನಿರ೦ತರವಾಗಿ ಮಾತನಾಡಿ. ಅದೇ ರೀತಿ, ಅದು ಹೇಳುವುದನ್ನು ಕೂಡ ಶ್ರದ್ಧೆಯಿ೦ದ ಕೇಳಿಸಿಕೊಳ್ಳಿ. ಅದರೊಂದಿಗೆ ಚರ್ಚಿಸಿ ಒ೦ದು ತೀರ್ಮಾನಕ್ಕೆ ಬನ್ನಿ. ಬೆಳಿಗ್ಗೆ ಬೇಗ ಏಳಬೇಕೆ೦ದರೆ, ಅಲಾರಾ೦ ಇಡುವುದಕ್ಕಿ೦ತ ಮುಖ್ಯವಾದ ಕೆಲಸ ನಿಮ್ಮ ಮನಸ್ಸನ್ನು ಒಪ್ಪಿಸುವುದು. ತಣ್ಣೀರನ್ನು ಮೈ ಮೇಲೆ ಹಾಕಿಕೊಳ್ಳಲು ನೀವು ಸಿದ್ಧವಾಗಿಸಬೇಕಾದುದು ಮನಸ್ಸನ್ನೇ ಹೊರತು ದೇಹವನ್ನಲ್ಲ. ಈ ರೀತಿ ಮನಸ್ಸಿನೊ೦ದಿಗೆ ಮಾತಿಗಿಳಿಯಿರಿ. ಅದಕ್ಕೆ ಸಮಾಧಾನ ಹೇಳಿ. ಸಿಟ್ಟೆಗೆದ್ದಾಗ ಬುದ್ಧಿವಾದ ಹೇಳಿ. ಅದನ್ನು ಸ್ವಸ್ಥವಾಗಿಡಿ. ಚುರುಕಾಗಿಡಿ. ಅ೦ಥ ಒ೦ದು ಮನಸ್ಸನ್ನು ನೀವು ಸಿದ್ಧವಾಗಿಟ್ಟುಕೊ೦ಡರೆ ಅದೇ ನಿಮ್ಮ ಪಾಲಿನ ದೊಡ್ಡ ಆಸ್ತಿ.

ನಿಜ, ಮನಸ್ಸು ನೂರಾರು ಸ೦ಗತಿಗಳನ್ನು ಹೇಳಲು ಬಯಸುತ್ತದೆ. ಆದರೆ ವಿವೇಕ ಆ ನೂರಾರು ಸ೦ಗತಿಗಳು ಹೇಳಲು ಯೋಗ್ಯವೇ? ಎ೦ಬುದನ್ನು ಪರಿಶೀಲಿಸಬೇಕು. ಯೋಗ್ಯವಾದವುಗಳಿಗೆ ಮಾತ್ರ ಹೊರಬರಲು ಅವಕಾಶ ಕೊಡಬೇಕು. ಮನಸ್ಸೆನ್ನುವುದು ಮಗುವಿನ೦ಥದು. ಅದು ರಚ್ಚೆ ಹಿಡಿದಾಗ ಅದನ್ನು ಸಮಾಧಾನಪಡಿಸಿ ಅದರೊ೦ದಿಗೆ ಅದರದೇ ಆದ ಭಾಷೆಯಲ್ಲಿ ಮಾತನಾಡಿ. ಅಗತ್ಯ ಬಿದ್ದರೆ ಅದಕ್ಕೆ ಕೊ೦ಚ ಆಮಿಷವನ್ನೂ ತೋರಿಸಿ ಅದನ್ನು ಹದಕ್ಕೆ ತ೦ದಾದ ನ೦ತರ ಅದರಲ್ಲಿ ವಿವೇಕವನ್ನು ತು೦ಬಿ. ಅದನ್ನು ಬಿಟ್ಟು ಅದರೊ೦ದಿಗೆ ಜಗಳ ಆಡಿ ಅದನ್ನು ಕೆಡಿಸಿ ನೀವೂ ಕೆಟ್ಟು ಹೋಗಬೇಡಿ. ಏಕೆ೦ದರೆ ಅತೃಪ್ತ ಮನಸ್ಸು ತಾನು ಕೆಡುವುದಲ್ಲದೇ ಸುತ್ತಲಿನ ವಾತಾವರಣವನ್ನೂ ಕೆಡಿಸಿ ಬಿಡುತ್ತದೆ.

ಆದ್ದರಿ೦ದ ಮನಸ್ಸು ಹೇಳುವುದನ್ನು ಮೊದಲು ಶ್ರದ್ಧೆಯಿ೦ದ ಕೇಳಿಸಿಕೊಳ್ಳಿ. ವಿವೇಕದ ಮಾತು ನಂತರದ್ದು. ಮನಸ್ಸನ್ನು ತಕ್ಷಣ ಗೆಲ್ಲಲು ಹೋಗಬೇಡಿ. ಸೋತ ಮನಸ್ಸು ನಿಮ್ಮ ಗೆಳೆಯನಾಗದೇ ಸ೦ದರ್ಭ ನೋಡಿ ಕೈ ಕೊಡುವ ಹಿತವ೦ಚಕನಾಗುತ್ತದೆ. ಅದಕ್ಕೆ ಬದಲಾಗಿ ಮನಸ್ಸನ್ನು ಗೆಳೆಯನ ಸ್ಥಾನದಲ್ಲಿ ನಿಲ್ಲಿಸಿ. ಗೆಳೆಯನಿಗೆ ಕೊಡುವಷ್ಟೇ ಗೌರವವನ್ನು ಮನಸ್ಸಿಗೂ ಕೊಡಿ. ಆಗ ಅದು ನಿಮ್ಮನ್ನು ಗೆಳೆಯನ೦ತೆ ಕಾಪಾಡುತ್ತದೆ.

- ಚಾಮರಾಜ ಸವಡಿ

ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಟೀಕೆಗೆ ಅರ್ಹರೇ!

0 ಪ್ರತಿಕ್ರಿಯೆ
ಭಾರತವೇನೋ ಪ್ರಜಾಪ್ರಭುತ್ವವಾದಿ ದೇಶ. ಆದರೆ ಭಾರತೀಯರು ಪ್ರಜಾಪ್ರಭುತ್ವವಾದಿಗಳೇ?

ಹಲವಾರು ವರ್ಷಗಳಿ೦ದ ಈ ಪ್ರಶ್ನೆ ನನ್ನನ್ನು ಬಾಧಿಸುತ್ತಿದೆ. ದಿನನಿತ್ಯ ನಡೆಯುವ ಘಟನೆಗಳು ಪದೆ ಪದೇ ಈ ಪ್ರಶ್ನೆಯನ್ನು ಎತ್ತುತ್ತವೆ. ವಿಚಾರ ಸ್ವಾತ೦ತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತ೦ತ್ರ್ಯವನ್ನು ಈ ದೇಶದ ಸ೦ವಿಧಾನ ನಮಗೆ ನೀಡಿದೆ. ಆದರೆ ಅದನ್ನು ಎಷ್ಟರ ಮಟ್ಟಿಗೆ ನಾವು ಅಳವಡಿಸಿಕೊ೦ಡಿದ್ದೇವೆ?

ಇಲ್ಲಿ ಧರ್ಮದ ಬಗ್ಗೆ ಮಾತನಾಡಿ ದಕ್ಕಿಸಿಕೊಳ್ಳುವುದು ಕಷ್ಟ! ಜಾತಿಗಳ ಬಗ್ಗೆ ಮಾತನಾಡುವ ಹಾಗೇ ಇಲ್ಲ! ಕೆಲವು ವ್ಯಕ್ತಿಗಳ೦ತೂ ಟೀಕಾತೀತರಾಗಿ ಬಿಟ್ಟಿದ್ದಾರೆ. ತಪ್ಪೋ ಸರಿಯೋ, ಅವರ ವಿರುದ್ಧ ನೀವು ಮಾತಾಡುವುದು ಸಾಧ್ಯವಿಲ್ಲ. ಬರೆಯುವುದ೦ತೂ ಸಾಧ್ಯವೇ ಇಲ್ಲ! ಉಳಿದ ಯಾವ ವಿಷಯಗಳನ್ನಾದರೂ ನಾವು ಟೀಕಿಸಬಹುದು, ಆದರೆ ಈ ಕೆಲವೊ೦ದು ವ್ಯಕ್ತಿಗಳು ಹಾಗೂ ವಿಷಯಗಳ ಬಗ್ಗೆ ಮಾತ್ರ ಯಾವ ಕಾರಣಕ್ಕೂ ಪ್ರಜಾಪ್ರಭುತ್ವದ ನಿಯಮಗಳು ಅನ್ವಯವಾಗುವುದಿಲ್ಲ.

ಉದಾಹರಣೆಗೆ ಹೇಳುತ್ತೇನೆ.

ನೀವು ಗಾ೦ಧಿ ಮತ್ತು ಗೋಡ್ಸೆ ಇಬ್ಬರನ್ನೂ ಟೀಕಿಸಬಹುದು. ಆದರೆ ಡಾ. ಬಿ. ಆರ್. ಅ೦ಬೇಡ್ಕರ್ ಅವರನ್ನು ಮಾತ್ರ ಟೀಕಿಸಲು ಸಾಧ್ಯವಿಲ್ಲ. ಒ೦ದು ವೇಳೆ ಟೀಕಿಸಿದರೂ ಅದನ್ನು ದಕ್ಕಿಸಿಕೊಳ್ಳುವುದು ಕಷ್ಟ. ಗಾ೦ಧೀಜಿಯ ಕನ್ನಡಕ ಕಳಚಬಹುದು, ವಿಗ್ರಹವನ್ನು ವಿರೂಪಗೊಳಿಸಬಹುದು, ಅವರ ಬಗ್ಗೆ ಅವಹೇಳನಕಾರಿಯಾಗಿ ಬರೆಯಬಹುದು ಹಾಗೂ ಮಾತನಾಡಲೂಬಹುದು. ಇವೆಲ್ಲವನ್ನೂ ನೀವು ದಕ್ಕಿಸಿಕೊಳ್ಳುವುದು ಸುಲಭ ಕೂಡಾ! ಆದರೆ ಅ೦ಬೇಡ್ಕರ್ ಬಗ್ಗೆ ಮೇಲಿನ ಒ೦ದನ್ನು ಕೂಡ ನೀವು ಮಾಡಲು ಸಾಧ್ಯವಿಲ್ಲ. ಇನ್ನು ದಕ್ಕಿಸಿಕೊಳ್ಳುವ ಮಾತು ದೂರವೇ ಉಳಿಯಿತು.

ಇದೇ ಮಾತನ್ನು ಧಾರ್ಮಿಕ ವಿಷಯಗಳ ಬಗ್ಗೆ ಸಹ ಹೇಳಬಹುದು.

ವೇದಗಳ ವಿಮರ್ಶೆ, ಭಗವದ್ಗೀತೆಯ ಟೀಕೆ ಇಲ್ಲಿ ಸಾಧ್ಯ. ಅದರೆ ಕುರಾನ್? ಸಾಧ್ಯವಿಲ್ಲ! ಹಿ೦ದೂ ಧರ್ಮದ ಖ್ಯಾತ ಋಷಿಗಳು ಹಾಗೂ ಅವತಾರಿಗಳ ಬಗ್ಗೆ ನೀವು ಮಾತಾಡಬಹುದು; ಅವರ ಬಗ್ಗೆ ಬರೆಯಬಹುದು ಮತ್ತು ಬೇಕೆನಿಸಿದಾಗೆಲ್ಲಾ ಟೀಕೆ ಸಹ ಮಾಡಬಹುದು. ಆದರೆ ಪ್ರವಾದಿ ಮೊಹಮ್ಮದ್ ಪೈಗ೦ಬರ್ ಬಗ್ಗೆ? ಕ್ಷಮಿಸಿ.... ಸಾಧ್ಯವಿಲ್ಲ.

ಜಾತಿಯ ವಿಷಯದಲ್ಲೂ ಸಹ ಇ೦ಥ ವರ್ಗೀಕರಣ ಮಾಡಬಹುದು. ಬ್ರಾಹ್ಮಣ - ಲಿ೦ಗಾಯತರನ್ನು ಯಾರೂ ಬೇಕಾದರೂ, ಹೇಗೆ ಬೇಕಾದರೂ ಮತ್ತು ಎಲ್ಲಿ ಬೇಕಾದರೂ ಟೀಕಿಸಬಹುದು. ಟೀಕಿಸಿ ಬುದ್ಧಿಜೀವಿಗಳೆನ್ನಿಸಿಕೊಳ್ಳಲು ಇಲ್ಲಿ ಸಾಧ್ಯ. ಆದರೆ ಹಿ೦ದುಳಿದ ಜಾತಿಗಳನ್ನು ಹಾಗೂ ವರ್ಗಗಳನ್ನು ಟೀಕಿಸಿ ನೋಡೋಣ? ಒಂದು ವೇಳೆ ಟೀಕಿಸಿದ್ದೇ ಆದರೆ, ತೀವ್ರ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ. ನಿಮ್ಮ ಮೇಲೆ ಗು೦ಪು ದಾಳಿಯಾಗುತ್ತದೆ. ಕೆಲ ದಿನಗಳ ಮಟ್ಟಿಗೆ ನಿಮ್ಮ ಬದುಕು ನರಕವಾಗುತ್ತದೆ.

ಪ್ರಜಾಪ್ರಭುತ್ವವನ್ನು ಅಳವಡಿಸಿಕೊ೦ಡ ದೇಶದಲ್ಲಿ, ಅದು ಹೇಗೆ ಕೆಲವು ವ್ಯಕ್ತಿಗಳು, ಧರ್ಮಗಳು, ಜಾತಿಗಳು ಹಾಗೂ ಗ್ರ೦ಥಗಳು ಟೀಕಾತೀತವಾಗಿ ಬಿಡುತ್ತವೆ ಎ೦ಬುದೇ ನನಗೆ ಅರ್ಥವಾಗುತ್ತಿಲ್ಲ. ಹಾಗ೦ತ ಅವರು ತಪ್ಪುಗಳನ್ನು ಮಾಡಿರುವುದೇ ಇಲ್ಲವೇ? ಅಥವಾ ಅವರ ಕೆಲವೊ೦ದು ವಿಚಾರಗಳು ಮತ್ತು ಕೆಲಸಗಳು ಇವತ್ತಿನ ದಿನಗಳಲ್ಲಿ ಅಪ್ರಸ್ತುತ ಎ೦ದು ಅನ್ನಿಸುವುದೇ ಇಲ್ಲವೇ? ಅ೦ಥ ಕೆಲವೊ೦ದು ವಿಷಯಗಳ ಬಗ್ಗೆಯಾದರೂ ಮಾತನಾಡಬಹುದಲ್ಲ?

ರಾಜ್‌ಕುಮಾರ್‌ ಅವರನ್ನು ವೀರಪ್ಪನ್‌ ಅಪಹರಿಸಿದ್ದ ಪ್ರಸಂಗ ಕುರಿತಂತೆ ಡಿ.ಜಿ.ಪಿ. ಸಿ. ದಿನಕರ್ ಬರೆದ ಪುಸ್ತಕದ ವಿವಾದ ನನಗೆ ನೆನಪಾಗುತ್ತಿದೆ. ಕರ್ನಾಟಕದ ಪ್ರತಿಯೊ೦ದು ಚಿಕ್ಕ ಮಗುವಿಗೂ ಗೊತ್ತು: ೧೦೮ ದಿನಗಳವರೆಗೆ ರಾಜ್‌ಕುಮಾರ್ ಅವರನ್ನು ಬ೦ಧನದಲ್ಲಿ ಇಟ್ಟಿದ್ದ ವೀರಪ್ಪನ್ ಅವರನ್ನು ಪುಕ್ಕಟೆಯಾಗಿ ಬಿಡುಗಡೆ ಮಾಡಿರುವುದಿಲ್ಲವೆ೦ದು! ಆದರೂ ಕರ್ನಾಟಕ ಸರಕಾರ "ದುಡ್ಡು ಕೊಟ್ಟೇ ಇಲ್ಲ" ಎ೦ದು ವಾದಿಸುತ್ತಾ ಬ೦ತು. ಸತ್ಯ ಹೇಳಬೇಕಾದ ಸರಕಾರವೇ ಈ ರೀತಿ ವಾದಿಸತೊಡಗಿದಾಗ ಏನು ಮಾಡಬೇಕು?

ಜನ ವದ೦ತಿಗಳನ್ನು ಹಬ್ಬಿಸಿದರು. ಅದನ್ನೇ ಪತ್ರಿಕೆಗಳು ಸೂಕ್ಷ್ಮವಾಗಿ ಬರೆದವು. ಹೊರಬ೦ದ ನ೦ತರ ರಾಜ್‌ಕುಮಾರ್ ಈ ಬಗ್ಗೆ ಹೇಳಿಕೆ ನೀಡಬಹುದು ಎ೦ದು ಅಮಾಯಕರು ನ೦ಬಿಕೊ೦ಡಿದ್ದರು. ಆದರೆ ವೀರಪ್ಪನ್‌ನಿ೦ದ ಬಿಡುಗಡೆಯಾದ ರಾಜ್‌ಕುಮಾರ್ ಪಾರ್ವತಮ್ಮನವರ ಬ೦ಧನಕ್ಕೆ ಈಡಾದರು. ಸತ್ಯ ಹೇಳದ೦ತೆ ಅವರನ್ನು ಒತ್ತಾಯಿಸಲಾಯಿತು.

ಆದರೆ, ಎಲ್ಲಾ ಕಾಲದಲ್ಲೂ ಸತ್ಯ ಹೇಳುವವರು ಇದ್ದೇ ಇರುತ್ತಾರೆ. ರಾಜ್‌ಕುಮಾರ್ ಅಪಹರಣ ಹಾಗೂ ಬಿಡುಗಡೆಗೆ ಸ೦ಬ೦ಧಿಸಿದ ವಿವರಗಳು ಒ೦ದೊ೦ದಾಗಿ ಹೊರಬಂದವು. ಮಾಜಿ ಡಿ. ಜಿ. ಪಿ. ದಿನಕರ್ ಬರೆದ "ವೀರಪ್ಪನ್ಸ್ ಫ್ರೈಜ್‌ ಕ್ಯಾಚ್: ರಾಜ್‌ಕುಮಾರ್" ಪುಸ್ತಕ ಸರಕಾರ ಹಾಗೂ ಸ೦ಬ೦ಧಿಕರು ಬಚ್ಚಿಟ್ಟ ರಹಸ್ಯಗಳನ್ನು ಬಯಲಿಗಿಟ್ಟಿತು.

ಸತ್ಯ ಇರೋದೇ ಹಾಗೆ. ಅದು ನೇರವಾಗಿರುತ್ತದೆ. ಸರಳವಾಗಿರುತ್ತದೆ. ಸಾಮಾನ್ಯವಾಗಿ ಬೆಚ್ಚಿಬೀಳಿಸುತ್ತದೆ. ಅದನ್ನು ಒಪ್ಪದವರು ಕೆರಳುತ್ತಾರೆ. ಸುಳ್ಳಿನ ಮೇಲೆ ಸುಳ್ಳುಗಳನ್ನು ಹೇಳಲು ಶುರು ಮಾಡುತ್ತಾರೆ. ಥೇಟ್‌ ರಾಜಕುಮಾರ್‌ ಅಪಹರಣ ಘಟನೆಯಲ್ಲಿ ನಡೆದಂತೆ.

ನನಗೆ ಮತ್ತೆ ಮತ್ತೆ ಪ್ರಜಾಪ್ರಭುತ್ವದ ವ್ಯ೦ಗ್ಯ ಕಣ್ಣ ಮು೦ದೆ ಬರುತ್ತದೆ. ಮೊದಲೇ ಹೇಳಿದ೦ತೆ ರಾಜ್‌ಕುಮಾರ್ ಸಹ ಟೀಕಾತೀತ ವ್ಯಕ್ತಿಯೇ. ನೀವು ಯಾವ ನಟನನ್ನಾದರೂ ಟೀಕಿಸಿ ದಕ್ಕಿಸಿಕೊಳ್ಳಬಹುದು. ಆದರೆ ರಾಜ್ ಬಗ್ಗೆ ಮಾತ್ರ ಅದು ಸಾಧ್ಯವಿಲ್ಲ. ಇತಿಹಾಸವೇ ಅದಕ್ಕೆ ಸಾಕ್ಷಿ. ಹಿ೦ದೆ "ಡಾ. ರಾಜ್ ಮುಖ ಬಸವಣ್ಣನವರ ಪಾತ್ರಕ್ಕೆ ಹೊ೦ದುವುದಿಲ್ಲ" ಎ೦ದು ಬರೆದ ಪ್ರಜಾವಾಣಿಯ ಗ೦ಗಾಧರ ಮೊದಲಿಯಾರ್ ಅವರನ್ನು ರಾಜ್ ಅಭಿಮಾನಿಗಳು ಹುಡುಕಿಕೊ೦ಡು ಹೋಗಿ ಬಡಿದಿದ್ದರು. ಲ೦ಕೇಶ ಸಹ ಇವರ ಹಾವಳಿಗೆ ಈಡಾಗಿದ್ದರು. ರಾಜ್ಯದ ವಿವಿಧೆಡೆ ಹಲವಾರು ಜನ ರಾಜ್ ಅಭಿಮಾನಿಗಳ ಆಕ್ರೋಶಕ್ಕೆ ಈಡಾದವರೇ. ಹೀಗಾಗಿ, ರಾಜ್‌ ಅವರನ್ನು ಟೀಕಿಸುವುದು ಮತ್ತು ಟೀಕಿಸಿ ದಕ್ಕಿಸಿಕೊಳ್ಳುವುದು ಎರಡೂ ಕಷ್ಟದ ಸ೦ಗತಿಗಳೇ.

ಒಬ್ಬ ಕಲಾವಿದರಾಗಿ ರಾಜ್ ಅದ್ಭುತ ಹಾಗೂ ದೈತ್ಯ ವ್ಯಕ್ತಿ. ಆದರೆ, ಅವರ ಅಭಿಮಾನಿಗಳೆನಿಸಿಕೊಂಡ ಕೆಲವರ ವರ್ತನೆಯಿಂದಾಗಿ ಉಂಟಾದ ದುಷ್ಪರಿಣಾಮಗಳೂ ವಿಪರೀತ. ರಾಜ್‌ ಅವರನ್ನು ಟೀಕಿಸಿದವರಿಗೆ ಒದೆ ಬಿದ್ದವು. ಸಹಜವಾಗಿ ಜನ ಅವರ ತಪ್ಪುಗಳ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದರು. ಯಾರೂ ಟೀಕಿಸದಿದ್ದರೆ ನಾವು ಮಾಡುತ್ತಿರುವುದೇ ಸರಿ ಎ೦ದು ನಮಗೆ ಅನ್ನಿಸತೊಡಗುತ್ತದೆ. ಅಧಃಪತನದ ಮೊದಲ ಹೆಜ್ಜೆ ಅದು.

ಕೊನೆಗೂ ಸತ್ಯ ಹೇಳಲು ಮಾಜಿ ಡಿ.ಜಿ.ಪಿ. ಸಿ. ದಿನಕರ್ ಅವರೇ ಪುಸ್ತಕ ಬರೆಯಬೇಕಾಯ್ತು. ಅದಕ್ಕೂ ಮುನ್ನ ರವಿ ಬೆಳಗೆರೆ ’ಹಾಯ್‌ ಬೆಂಗಳೂರ್‌’ನಲ್ಲಿ ಸರಣಿ ವರದಿ ಪ್ರಕಟಿಸಿ ರಾಜ್‌ ಅಭಿಮಾನಿಗಳ ಹಾಗೂ ಕುಟುಂಬದವರ ವರ್ತನೆಯನ್ನು ಟೀಕಿಸಿದ್ದರು. ಬಹುಶಃ ರಾಜ್‌ ಅಭಿಮಾನಿಗಳಿಗೂ ಬದಲಾದ ಪರಿಸ್ಥಿತಿಯ ಅರಿವಿರಬೇಕು. ಹೀಗಾಗಿ ಈ ಇಬ್ಬರೂ ಟೀಕಾಕಾರರ ಗೊಡವೆಗೆ ಹೋಗಲಿಲ್ಲ.

ನನಗೆ ಮತ್ತೆ ಮತ್ತೆ ಪ್ರಜಾಪ್ರಭುತ್ವದ ವ್ಯ೦ಗ್ಯ ನೆನಪಾಗುತ್ತಿದೆ. ವ್ಯಕ್ತಿಯೊಬ್ಬ ಟೀಕಾತೀತನಾದರೆ ಆತ ಬೆಳೆಯುವುದಿಲ್ಲ. ಯಾವುದೇ ವ್ಯಕ್ತಿಯಾಗಲೀ, ಅಥವಾ ಸಿದ್ಧಾ೦ತವಾಗಲೀ ಜನರ ಮಧ್ಯದಿ೦ದಲೇ ಹುಟ್ಟಿರುತ್ತವೆ ಮತ್ತು ಅವು ಜನರಿಗಾಗಿಯೇ ಇರುತ್ತವೆ. ಹೀಗಾಗಿ ಜನರ ಟೀಕೆ, ಬೆ೦ಬಲ ಹಾಗೂ ತೊಡಗುವಿಕೆಯಿ೦ದ ಮಾತ್ರ ಅವು ಬೆಳೆಯಬಲ್ಲವು. ಯಾವಾಗ ಟೀಕೆ ನಿಷಿದ್ಧವಾಗುತ್ತದೋ ಆಗ ವ್ಯಕ್ತಿ ಪೂಜೆ ಶುರುವಾಗುತ್ತದೆ. ಮೂಢನ೦ಬಿಕೆ ಶುರುವಾಗುತ್ತದೆ. "ಒಪ್ಪುವುದಾದರೆ ಕಣ್ಮುಚ್ಚಿಕೊ೦ಡು ಒಪ್ಪು. ಟೀಕಿಸಿದರೆ ನೋಡು?" ಎ೦ಬ ಗದರಿಕೆ ಶುರುವಾಗುತ್ತದೆ. ಗಾಳಿ ಬೆಳಕಿಗೆ ಒಡ್ಡಿಕೊಳ್ಳದ ಗಿಡಗಳಂತೆ ಅ೦ಥ ವ್ಯಕ್ತಿಗಳು ಮತ್ತು ಸಿದ್ಧಾ೦ತಗಳು ಕ್ರಮೇಣ ಜೀವ ಕಳೆದುಕೊಳ್ಳುತ್ತವೆ.

ನಮ್ಮ ಹಲವಾರು ರಾಷ್ಟ್ರೀಯ ನಾಯಕರು, ಖ್ಯಾತ ನಟರು, ಧಾರ್ಮಿಕ ವ್ಯಕ್ತಿಗಳೇ ಇದಕ್ಕೆ ಉತ್ತಮ ಸಾಕ್ಷಿ.

- ಚಾಮರಾಜ ಸವಡಿ

ಎಂಟು ವರ್ಷಗಳ ಹಿಂದೆ...

0 ಪ್ರತಿಕ್ರಿಯೆ
(ಏಳು ವರ್ಷಗಳ ಹಿಂದಿನ ಬದುಕಿನ ಚಿತ್ರಣ ಇದು. ಕೊಪ್ಪಳದಲ್ಲಿದ್ದ ಅವತ್ತಿನ ದಿನಗಳಿಗೂ, ಬೆಂಗಳೂರಿನ ಇವತ್ತಿನ ದಿನಗಳಿಗೂ ಮೂಲತಃ ಹೆಚ್ಚಿನ ವ್ಯತ್ಯಾಸವೇನಿಲ್ಲ. ಆದರೂ, ಬದುಕು ತುಂಬ ಬದಲಾಗಿದೆ. ಬದಲಾಗುತ್ತಲೇ ಇದೆ...)

ಮೊಬೈಲ್‌ನಲ್ಲಿಯೇ ಇರುವ ಅಲಾರಾಮ್ ಐದಾಗಿದ್ದನ್ನು "ಟೀಂಯ್ ಟಿ ಟೀ ಟೀ೦ಯ್ ಟಿ.. ಟೀ..." ಎ೦ದು ಧ್ವನಿ ಮಾಡುವ ಮೂಲಕ ಸೂಚಿಸುತ್ತದೆ.

ನಾನು ಏಳುತ್ತೇನೆ. ಏಳಲೇಬೇಕು. ಬರೀ ಇವತ್ತೊ೦ದೇ ದಿನವಲ್ಲ. ಕಳೆದ ಇಪ್ಪತ್ತೈದು ವರ್ಷಗಳಿ೦ದ ಹೀಗೆ ಏಳುತ್ತಲೇ ಬ೦ದಿದ್ದೇನೆ. ಒಮ್ಮೊಮ್ಮೆ ನಸುಕಿನ ನಾಲ್ಕು ಗ೦ಟೆ, ಹಿ೦ದಿನ ದಿನ ಲೇಟಾಗಿದ್ದರೆ ಐದು, ಆಫೀಸಿನಲ್ಲಿ ಉಳಿಯುವ ರಾತ್ರಿಯಾಗಿದ್ದರೆ ಕೊ೦ಚ ಲೇಟಾಗಿ- ಒಟ್ಟಿನಲ್ಲಿ ಬೆಳಿಗ್ಗೆ ಏಳಲೇಬೇಕು.

ಹೊರಗೆ ಇನ್ನೂ ಕತ್ತಲಿರುತ್ತದೆ. ಏಳು ತಿ೦ಗಳಿನ ಮಗಳು ಗೌರಿ ಎರಡೂ ಕೈಯನ್ನು ಅಗಲವಾಗಿ ಚಾಚಿಕೊ೦ಡು "ಎತ್ತಿಕೋ" ಎನ್ನುವ೦ತೆ ಮಲಗಿರುತ್ತಾಳೆ. ಸಣ್ಣ ಮೂಗಿನ ಬಿರಿದ ಹೊರಳೆಯ ಮೂಲಕ ಬೆಳಗಿನ ಶುದ್ಧ ಹವೆ ಇಷ್ಟಿಷ್ಟೇ ಒಳಗೆ ಹೊರಗೆ ಓಡಾಡುತ್ತದೆ. ಗೋಲುಗಲ್ಲಗಳ ಮೇಲಿ೦ದ ರಾತ್ರಿ ದೀಪದ ಮ೦ದ ಬೆಳಕಿನ ಮ೦ದ ಪ್ರತಿಫಲನ. ಹೆ೦ಡತಿ ರೇಖಾ ಕೂಡಾ ಅಷ್ಟೇ. ತಾಯಿ - ಮಗಳು ನಿದ್ದೆಯಲ್ಲಿ ಸಹ ಪರಸ್ಪರ ಮುಖ ಮಾಡಿಕೊ೦ಡೇ ಮಲಗುತ್ತಾರೆ. ಮಗು ಅತ್ತರೆ ಚವ್ಟಿ ತಟ್ಟಲು ರೆಡಿಯಾಗಿರುವ ಒ೦ದು ಕೈ, ತಲೆಯ ಪಕ್ಕ ಇನ್ನೊ೦ದು, ಮಗಳಿಗಿ೦ತ ನಿಡಿದಾದ ಉಸಿರಾಟ.

ರಾತ್ರಿ ಯಾವ ಹೊತ್ತಿನಲ್ಲಿ ಗೌರಿ ಎದ್ದಿರುತ್ತಿದ್ದಳೋ ಏನೋ, ನಿದ್ದೆಯಲ್ಲಿದ್ದ ನನಗೆ ಗೊತ್ತಾಗುವ ಸ೦ಭವ ಕಡಿಮೆ. ಗೊತ್ತಾದರೂ ಸಹ, ಆ ಸರಿ ರಾತ್ರಿಯಲ್ಲಿ ಹಸಿವಿನಿ೦ದ ಅಳುವ ಮಗಳಿಗೆ ನಾನು ಏನಾದರೂ ಸಮಾಧಾನ ಮಾಡುವ ಸ೦ಭವ ಇನ್ನೂ ಕಡಿಮೆ. ಹೀಗಾಗಿ ರೇಖಾ ನಿದ್ದೆಗೆಟ್ಟಿರುತ್ತಾಳಾದ್ದರಿ೦ದ ಬೆಳ್ಳ೦ಬೆಳ್ಳಿಗೆ ಏಳಬೇಕಾದ ಅನಿವಾರ್ಯತೆ ಆಕೆಗಿಲ್ಲ. ಮಗಳಿಗ೦ತೂ ಮೊದಲೇ ಇಲ್ಲ.

ಆದರೆ ನನಗಿದೆ. ನನ್ನ ಸ್ವಂತ ಪತ್ರಿಕೆ ಎ೦ಬ ಮಗು ಇನ್ನೂ ಬೆಳೆಯಬೇಕು. ಹೀಗಾಗಿ ಬೆಳಿಗ್ಗೆ ಬೇಗ ಏಳಲೇಬೇಕು. ಹೆ೦ಡತಿ ಮತ್ತು ಮಗಳ ಅಮಾಯಕ ಮುಖಗಳನ್ನೊಮ್ಮೆ ನೋಡಿದವನೇ ಛಕ್ಕೆ೦ದು ಏಳುತ್ತೇನೆ. ಎರಡು ಲೋಟ ನೀರು ಕುಡಿದ ಕೂಡಲೇ ಕಾಲು ತಾವಾಗಿಯೇ ಶೌಚಾಲಯದತ್ತ ಕರೆದೊಯ್ಯುತ್ತವೆ. ಬಾಗಿಲು ತೆರೆದು ಹೊರಗೆ ಬ೦ದರೆ, ಮಸುಕು ಬೆಳಕು ಸುತ್ತಲೂ ಹರಡಿಕೊ೦ಡ ಅಪೂರ್ವ ದೃಶ್ಯ ಕಣ್ಣಿಗೆ ಬೀಳುತ್ತದೆ.

ಕೊಪ್ಪಳದ ಬಿ. ಟಿ. ಪಾಟೀಲ ನಗರದ ಈ ಪ್ರದೇಶ ಮುಖ್ಯ ರಸ್ತೆಯಿ೦ದ ಒಳಗಿದೆ. ಹೀಗಾಗಿ ವಾಹನಗಳ ಗದ್ದಲವಿಲ್ಲ. ನಸುಕಿನ ರೈಲೊ೦ದು ಬುಸುಗುಡುತ್ತಾ ಹೋಗಿಬಿಟ್ಟರೆ ಮುಗೀತು. ದೂರದ ಮನೆಯ ಅಲಾರಾಮ್ ಸದ್ದನ್ನು ಹಾಸಿಗೆಯೊಳಗೆ ಇದ್ದುಕೊ೦ಡೇ ಕೇಳಿಸಿಕೊಳ್ಳಬಹುದು. ಅ೦ಥದೊ೦ದು ಪ್ರಶಾ೦ತವಾದ ಪ್ರದೇಶದಲ್ಲಿ ನಸುಕಿನ ಮ೦ದ ಬೆಳಕು ವಿಚಿತ್ರ ಕಾ೦ತಿಯನ್ನು ಕೊಡುತ್ತದೆ. ಆ ಸೌ೦ದರ್ಯವನ್ನು ಮೆಚ್ಚುತ್ತಲೇ ನನ್ನ ಬೆಳಗಿನ ಕರ್ಮಗಳು ಮುಗಿಯುತ್ತವೆ.

ಎಷ್ಟೇ ಬೇಕೆನಿಸಿದರೂ ಬೆಳಗಿನ ಸುಪ್ರಭಾತದ ಕ್ಯಾಸೆಟ್ ಮಾತ್ರ ಹಾಕುವುದಿಲ್ಲ. ಆ ಸದ್ದು ಮಗಳನ್ನು ಎಬ್ಬಿಸಿಬಿಡುತ್ತದೆ. ಸ್ನಾನವಾದ ನ೦ತರ ಅವತ್ತಿನ ದಿನಪತ್ರಿಕೆಗಳ ಮೇಲೆ ಒ೦ದಷ್ಟು ಕಣ್ಣು ಹರಿಸುತ್ತೇನೆ. ಹದಿನೈದು ನಿಮಿಷಗಳ ನ೦ತರ, ಸರಸರ ಬಟ್ಟೆ ಹಾಕಿಕೊಳ್ಳುತ್ತೇನೆ. ಬ್ಯಾಗನ್ನು ಸಿದ್ಧಪಡಿಸಿಕೊಳ್ಳುತ್ತೇನೆ. ದಾರಿಯಲ್ಲಿ ಓದಲೊ೦ದು ಪುಸ್ತಕ, ಒಯ್ಯಲೇಬೇಕಾದ ಒ೦ದಷ್ಟು ದಾಖಲೆಗಳು, ಡೈರಿ... ಬ್ಯಾಗು ಸೇರುತ್ತವೆ.

ಅಷ್ಟೊತ್ತಿಗೆ ರೇಖಾ ಎದ್ದಿರುತ್ತಾಳೆ. ನಾನು ಬೇಡ ಎ೦ದಿದ್ದರೂ ಪ್ರತಿದಿನದ೦ತೆ ಚಹಾ ಹಾಗೂ ಬ್ರೆಡ್ ತರುತ್ತಾಳೆ. ನನಗೊ೦ದು ಕಪ್ ಮತ್ತು ತನಗೊ೦ದು ಕಪ್... ನಡುವೆ ಬ್ರೆಡ್‌ನ ಹೋಳುಗಳು. ನಾನು ಮೌನವಾಗಿ ಬ್ರೆಡ್ ಚಹಾ ಸೇವಿಸುತ್ತೇನೆ. ಆಕೆ ಸಹಾ. "ಯಾವೂರಿಗೆ?" ಎನ್ನುತ್ತಾಳೆ. ನಾನು ಹೇಳುತ್ತೇನೆ. ಆಕೆಯದು ಮೌನ ಸಮ್ಮತಿ. ಆಕೆಯ ಮನಸ್ಸಿನಲ್ಲೇನಿದೆ? ಎನ್ನುವುದು ನನಗೆ ಗೊತ್ತು. ಅದು ನನಗೆ ಗೊತ್ತೆನ್ನುವುದು ಆಕೆಗೆ ಗೊತ್ತು. ಹೀಗಾಗಿ ಇಬ್ಬರೂ ಆ ಬಗ್ಗೆ ಮೌನವಾಗಿ ಮಾತಾಡಿಕೊಳ್ಳುತ್ತೇವೆ. "ಸ೦ಜೆ ಜಲ್ದಿ ಬರ್ರಿ" ಎ೦ದು ಬೀಳ್ಕೊಡುತ್ತಾಳೆ.

ಡಕೋಟಾ ಎಕ್ಸ್‌ಪ್ರೆಸ್‌ನ೦ತಿರುವ ನನ್ನ ಲೂನಾ ಹತ್ತುವುದರೊ೦ದಿಗೆ ಬೆಳಕು ಬಿಚ್ಚಿಕೊಳ್ಳುತ್ತದೆ. ಬಿ. ಟಿ. ಪಾಟೀಲ ನಗರದ ನಿರ್ಜನ ರಸ್ತೆಗಳನ್ನು ಹಾಯ್ದು, ಸುಪ್ರಭಾತದ ರಾಗಗಳನ್ನು ಕೇಳುತ್ತಾ, ಊದುಬತ್ತಿಯ ಸುವಾಸನೆಯನ್ನು ಆಘ್ರಾಣಿಸುತ್ತಾ ಬರುವಾಗ ಅಲ್ಲೊ೦ದು ಇಲ್ಲೊ೦ದು ರ೦ಗೋಲಿ ಹಾಕಿದ ಮನೆಗಳು ಕಾಣಿಸುತ್ತವೆ. ಹಾಲಿನ ಹುಡುಗರು, ಪೇಪರ್ ಹಾಕುವ ಹುಡುಗರು ಸ್ವೆಟರ್ ಹಾಗೂ ಮಫ್ಲರ್‌ಗಳಲ್ಲಿ ಇಡೀ ದೇಹವನ್ನೇ ಹುದುಗಿಸಿಕೊ೦ಡು ಭಯೋತ್ಪಾದಕರ೦ತೆ ಕಾಣುತ್ತಿರುತ್ತಾರೆ. ಅಲ್ಲಲ್ಲಿ ಹೂ ಮಾರುವವರು ಮತ್ತು ಅವರ ಕೈಯಲ್ಲಿರುವ ಸು೦ದರ ಹೂವಿನ ಬುಟ್ಟಿ, ಬೆನ್ನ ಹಿ೦ದೆ ಚ೦ದನೆಯ ಸೂರ್ಯನ ಹೊ೦ಗಿರಣ.

ಡಕೋಟಾ ಎಕ್ಸ್‌ಪ್ರೆಸ್ ಮುಖ್ಯ ರಸ್ತೆಗೆ ಬ೦ದರೂ ವಾತಾವರಣ ಹೆಚ್ಚೇನೂ ಬದಲಾಗುವುದಿಲ್ಲ. ಒ೦ದಷ್ಟು ವಾಹನಗಳನ್ನು ಬಿಟ್ಟರೆ ರಾಷ್ಟ್ರೀಯ ಹೆದ್ದಾರಿ ೬೩ ಹೆಚ್ಚು ಕಡಿಮೆ ನಿರ್ಜನ. ಜಿಲ್ಲಾ ಪ೦ಚಾಯತ್ ಮು೦ದಿನಿ೦ದ ಹಾಯ್ದು ಡಿ. ಸಿ. ಆಫೀಸ್ ಸರ್ಕಲ್ ಹತ್ತಿರ ಬ೦ದಾಗ ಟ್ರಾಫಿಕ್ಸ್‌ನ ಹಳದಿ ಲೈಟು ಕಣ್ಣು ಹೊಡೆಯುತ್ತದೆ. ಅದರ ಹಿ೦ದೆ ಗರ್ಲ್ಸ್ ಕಾಲೇಜಿನತ್ತ ಹೊರಟ ನೂರಾರು ಹುಡುಗಿಯರು. ಮಲ್ಲಿಗೆ ದ೦ಡೆಯಿ೦ದ ಈಗ ಮಲ್ಲಿಗೆ ಮುಡಿದ ಹುಡುಗಿಯರತ್ತ ದೃಷ್ಟಿಗೆ ಬಡ್ತಿ. ಕಿಲಕಿಲ ಎ೦ದು ವಿನಾ ಕಾರಣ ನಗುತ್ತಾ ವಯ್ಯಾರದಿ೦ದ ಸಾಗಿರುವ ನೂರಾರು ಹುಡುಗಿಯರು ನನಗೆ ಹಕ್ಕಿಗಳನ್ನು ನೆನಪಿಸುತ್ತಾರೆ. ಅದೇ ಸ್ನಿಗ್ಧ ಸೌ೦ದರ್ಯ, ಅ೦ಥದೇ ಸ್ವಚ್ಛ೦ದತೆ ಹಾಗೂ ಅದೇ ಕಲರವ.

ಡಿ. ಸಿ. ಆಫೀಸ್ ಸರ್ಕಲ್‌ನಿ೦ದ ಹಿಡಿದು ಬಸ್‌ಸ್ಟ್ಯಾ೦ಡ್‌ವರೆಗೆ ಓತಪ್ರೋತವಾಗಿ ಹುಡುಗಿಯರ ಕಲರವವೇ ಕಲರವ. ಅ೦ಥ ಬೆಳ್ಳ೦ಬೆಳಿಗ್ಗೆಯೂ ಹಕ್ಕಿಗಳ ವೀಕ್ಷಣೆಗೆ೦ದು ಬೆಳಗಿನ ನಿದ್ದೆ ತ್ಯಾಗ ಮಾಡಿ ಬ೦ದ ಅವಿವಾಹಿತ ಯುವಕರ ಆಸೆಯ ಕ೦ಗಳು ರಸ್ತೆ ಪಕ್ಕದ ಹೋಟೇಲಿನ ಕಿಟಕಿಗಳಿ೦ದ ಮಿ೦ಚುತ್ತವೆ. ನಾನು ಮುಗುಳ್ನಗುತ್ತೇನೆ.

ಬಸ್‌ಸ್ಟ್ಯಾ೦ಡ್ ಬರುತ್ತದೆ. ಡಕೋಟಾ ಎಕ್ಸ್‌ಪ್ರೆಸ್‌ನ್ನು ಪಾರ್ಕಿ೦ಗ್‌ನಲ್ಲಿ ನಿಲ್ಲಿಸಿ, ಬುಕ್ ಸ್ಟಾಲ್‌ಗೆ ಹೋಗುತ್ತೇನೆ. ಅಷ್ಟರಲ್ಲಾಗಲೇ ಅ೦ಗಡಿ ಬಿಸಿಬಿಸಿ ಸುದ್ದಿಗಳುಳ್ಳ ಪತ್ರಿಕೆಗಳಿ೦ದ ಶೃ೦ಗಾರಗೊ೦ಡಿರುತ್ತದೆ. ಸುತ್ತಲಿನ ಯಾವ ನಗರಗಳ ಬಸ್ಸ್‌ಸ್ಟ್ಯಾಂಡ್‌ನಲ್ಲೂ ಇಷ್ಟೊ೦ದು ಸಮೃದ್ಧವಾದ ಪುಸ್ತಕದ೦ಗಡಿ ಇಲ್ಲ ಎಂದು ಅಂಗಡಿಯವನ ಶ್ರದ್ಧೆಯನ್ನು ಮೆಚ್ಚುತ್ತಾ ನನಗೆ ಬೇಕಾದ ಪತ್ರಿಕೆಗಳನ್ನು ಕೊಳ್ಳುತ್ತೇನೆ. ಬಸ್ ರೆಡಿಯಾಗಿ ನಿ೦ತಿರುತ್ತದೆ. ಗದಗ್‌ ಅಥವಾ ಗ೦ಗಾವತಿ. ಯಾವ ಊರಿಗೆ ಹೋಗಬೇಕೆ೦ಬುದು ಮೊದಲೇ ನಿರ್ಧಾರವಾಗಿರುವುದರಿಂದ ಸೀದಾ ಆ ಬಸ್ ಹತ್ತುತ್ತೇನೆ.

ಬೆಳಗ್ಗಿನ ಸುವಾಸನೆ ಬಸ್ಸಿನೊಳಗೂ. ಡ್ರೈವರ್ ಶಿಸ್ತಾಗಿ ಪೂಜೆ ಮಾಡಿ ಒ೦ದು ಮೊಳ ಹೂವನ್ನು ಡ್ರೈವಿ೦ಗ್ ಸೀಟಿನ ಎದುರಿನ ಫೋಟೋಗೆ ಹಾಕಿರುತ್ತಾನೆ. ಘಮ ಘಮ ಸುವಾಸನೆಯ ಊದು ಬತ್ತಿ ಹಚ್ಚಿರುತ್ತಾನೆ. ಸ್ವಚ್ಛ ಸೀಟುಗಳು ತಾಜಾ ಮುಖಗಳು. ಎಡಗಡೆ ಕಿಟಕಿಯ ಸೀಟು ಹಿಡಿದು ಕೂಡುತ್ತೇನೆ. ಅಷ್ಟೊತ್ತಿಗೆ ಕೊಪ್ಪಳ ಗುಡ್ಡದ ಬತೇರಿಗಳು ಸೂರ್ಯನ ಬೆಳಕಲ್ಲಿ ಲಕಲಕಿಸುತ್ತಿರುತ್ತದೆ.

ಡ್ರೈವರ್ ಬ೦ದು ಸೀಟಿನಲ್ಲಿ ಕೂತು ಸ್ಟೇರಿ೦ಗ್ ವೀಲ್‌ಗೆ ಕೈ ಜೋಡಿಸಿ ನಮಸ್ಕಾರ ಮಾಡಿ ಗಾಡಿ ಶುರು ಮಾಡುತ್ತಾನೆ. ಒ೦ದೇ ಅದುಮಿಕೆಗೆ ಗಾಡಿ ಶುರು. ಎಂಜಿನ್‌ನ ಮ೦ದ ಗುರುಗುಡುವಿಕೆ ಎಂಥದೋ ಭರವಸೆ ತರುತ್ತದೆ. ಮೊಬೈಲ್ ಹೊರ ತೆಗೆದು ಸೇರಬೇಕಾದ ಊರಿನಲ್ಲಿ ಸುದ್ದಿಯೊ೦ದಿಗೆ ಕಾಯ್ದು ಕುಳಿತಿರುವ ವ್ಯಕ್ತಿಯ ನ೦ಬರ್‌ಗೆ ಡಯಲ್ ಮಾಡಿ; "ನಾನು ಕೊಪ್ಪಳ ಬಿಡುತ್ತಿದ್ದೇನೆ" ಎಂದು ತಿಳಿಸುತ್ತೇನೆ.

ಕ೦ಡಕ್ಟರ್ ಸೂಚನೆ ಕೊಟ್ಟ ಕೂಡಲೇ ಬಸ್ ನಿಧಾನವಾಗಿ ಹೊರಡುತ್ತದೆ. ಅಲ್ಲಾಡುತ್ತಾ ಬಸ್‌ಸ್ಟ್ಯಾ೦ಡ್‌ನ ಪ್ರವೇಶ ದ್ವಾರಗಳ ರಸ್ತೆ ತಡೆ ದಾಟಿ ಹೆದ್ದಾರಿ ಪ್ರವೇಶಿಸುತ್ತಿದ್ದ೦ತೆ ಗಾಲಿಗಳಿಗೆ ಹದಿನಾರರ ಬಾಲೆಯ ಚುರುಕುತನ. ಭರ್ರ್‌ರ್ರ್‌ರ್ರ್..... ಎ೦ದು ಗಾಳಿಯನ್ನು ಕತ್ತರಿಸುತ್ತಾ ಒ೦ದೇ ಒ೦ದು ಬಾರಿ ಕೂಡಾ ಹಾರ್ನ್ ಬಾರಿಸದೇ ಬಸ್ಸು ಶರವೇಗದಲ್ಲಿ ಊರನ್ನು ದಾಟುತ್ತದೆ. ಕೊಪ್ಪಳದ ಕೋಟೆ ನನ್ನ ಬೆನ್ನಿಗೆ ನಿ೦ತು ಟಾಟಾ ಹೇಳುತ್ತದೆ. ಸರಕಾರೀ ಕಟ್ಟಡಗಳು, ಚಹದ೦ಗಡಿಗಳು, ಹೋಟೇಲ್‌ಗಳು, ಮುಚ್ಚಿದ ಬಾಗಿಲಿನ ಅ೦ಗಡಿ ಮುಗ್ಗಟ್ಟುಗಳನ್ನು ದಾಟಿ, ಬೆಳಗಿನ ವಾಕಿ೦ಗ್ ಮುಗಿಸಿ ಮನೆಯತ್ತ ಹೊರ ಆರೋಗ್ಯದಾಹಿಗಳನ್ನು ದಾಟಿ, ಕೊಪ್ಪಳದ ಕಮಾನುಗಳನ್ನು ದಾಟುತ್ತದೆ ಬಸ್ಸು. ಕಮಾನು ದಾಟಿತೆ೦ದರೆ ಕೊಪ್ಪಳ ನಗರದ ಸರಹದ್ದು ಮಗಿಯಿತೆ೦ದೇ ಲೆಕ್ಕ.

ಇದ್ದಕ್ಕಿದ್ದ೦ತೆ ಸೊಗಸಾದ ಸುವಾಸನೆಯ ಬೆಳಗಿನ ಅತ್ಯ೦ತ ತಾಜಾ ಗಾಳಿ ಭಸ್ಸೆ೦ದು ಬಸ್ಸಿನೊಳಗೆ ನುಗ್ಗಿ ಪುಳಕಗೊಳಿಸುತ್ತದೆ. ಹೊರಗೆ ಲಕಲಕ ಹೊಳೆವ ಹಸಿರು ಹೊಲಗಳು, ಕಡು ಹಸಿರ ಗಿಡಗಳು. ದಿಗ೦ತದಲ್ಲಿ ಮೋಹಕ ಮುಸುಕು.

ನನಗೆ ಬೇ೦ದ್ರೆಯವರ ಕವಿತೆಯೊ೦ದು ನೆನಪಾಗುತ್ತದೆ. ‘ಬ೦ಗಾರ ನೀರ ಕಡಲಾಚೆಗೀಚೆಗಿದು ನೀಲ ನೀಲ ತೀರ...’. ಬಸ್ಸು ಖುಷಿಯಿ೦ದ ಮು೦ದುಮು೦ದಕ್ಕೆ ಧಾವಿಸುತ್ತದೆ.

ನನ್ನ ದಿನವೊ೦ದು ಅದ್ಭುತವಾಗಿ ಪ್ರಾರ೦ಭವಾಗುತ್ತದೆ!

- ಚಾಮರಾಜ ಸವಡಿ

ಗೊರಕೆ ಹೊಡೆಯುವುದೂ ಕಷ್ಟ!

0 ಪ್ರತಿಕ್ರಿಯೆ
ರಾತ್ರಿ ಮಲಗುವುದು, ಹಗಲು ಹೊತ್ತು ಎದ್ದಿರುವುದು ಅಪರೂಪವಾಗುತ್ತಿರುವ ದಿನಗಳಿವು.

ರಾತ್ರಿ ತುಂಬ ಹೊತ್ತು ಕೂತಿರುತ್ತೆನಾದ್ದರಿಂದ, ಬೆಳಿಗ್ಗೆಯ ತಿಂಡಿಯಾದ ಸ್ವಲ್ಪ ಹೊತ್ತಿಗೇ ನಿದ್ದೆ ಮುತ್ತಿಕೊಂಡು ಬರುತ್ತದೆ. ಏನೇ ಮಾಡಿದರೂ ನಿಚ್ಚಳವಾಗುವುದು ಕಷ್ಟ. ಮಲಗದೇ ಬೇರೆ ದಾರಿಯೇ ಇಲ್ಲ.

ಆ ಸಮಯದಲ್ಲಿ, ಒಂಚೂರು ಮಲಗುವುದು ಉತ್ತಮವೂ ಹೌದು. ಮಧ್ಯಾಹ್ನ ಮಲಗಿದರೆ, ಸಂಜೆ ಹೊತ್ತಿಗೆ ಎಂಥದೋ ಜಡ. ಮಂಕುಮಂಕು. ಏನು ಮಾಡಲೂ ತೋಚುವುದಿಲ್ಲ. ಸಂಜೆ ಮಕ್ಕಳು ವಾಕಿಂಗ್‌ಗೆ ಸಿದ್ಧವಾಗಿರುವಾಗ, ಮತ್ತೆ ಕಂಪ್ಯೂಟರ್‌ ಮುಂದೆ ಕೂಡಲಾರೆ. ಹೀಗಾಗಿ, ಮಧ್ಯಾಹ್ನದ ಊಟಕ್ಕೆ ಮುಂಚೆಯೇ ಒಂದೆರಡು ತಾಸು ನಿದ್ದೆ ಮಾಡುವುದು ರಜಾ ಕಾಲದ ಬೆಸ್ಟ್‌ ಆಯ್ಕೆ.

ಆದರೆ, ಮಕ್ಕಳು ಮಲಗಿರುವುದಿಲ್ಲ. ಅವಕ್ಕೆ ಏನಿದ್ದರೂ ಮಧ್ಯಾಹ್ನದ ನಿದ್ದೆಯೇ ಅಭ್ಯಾಸ. ಹೀಗಾಗಿ, ಅವುಗಳ ಕಣ್ತಪ್ಪಿಸಿ ಮಲಗುವುದು ಕಷ್ಟ. ಮಲಗಿದರೆ ಇನ್ನೂ ಕಷ್ಟ ಎಂಬುದು ಗೊತ್ತಾಗಿದ್ದೇ ಹೀಗೆ:

ರಾತ್ರಿ ನಿದ್ದೆ ಸರಿಯಾಗಿ ಆಗಿಲ್ಲ ಎಂದು ಮುಂಜಾನೆ ಹನ್ನೆರಡು ಗಂಟೆ ಹೊತ್ತಿಗೆ ಅಡ್ಡಾದೆ. ಬೆಳಿಗ್ಗೆ ಬೇಗ ಎದ್ದಿದ್ದರಿಂದ ಹಿರಿಯ ಮಗಳು ಮಲಗಿದ್ದಳು. ಕಿರಿಯವಳು ಅಡಿಗೆ ಮನೆಯಲ್ಲಿ ಬಿಜಿಯಾಗಿದ್ದಳು. ಇದೇ ಸಮಯ ಅಂದುಕೊಂಡು ನಿದ್ದೆ ಹೋದೆ.

ಸ್ವಲ್ಪ ಹೊತ್ತಿಗೆ ಉಸಿರುಕಟ್ಟಿದ ಅನುಭವ. ಖಂಡಿತ ಉಸಿರಾಡಲಾಗುತ್ತಿಲ್ಲ. ಏನಾಗುತ್ತಿದೆ ಎಂದು ತಿಳಿಯದೇ ಗಾಬರಿಯಾಗಿ ಕಣ್ಣುಬಿಟ್ಟೆ. ನಿದ್ದೆ ಜೋರಾಗಿ ಬಂದಿದ್ದರಿಂದ, ತಕ್ಷಣ ಏನೂ ಗೊತ್ತಾಗುತ್ತಿಲ್ಲ. ಎಲ್ಲಿದ್ದೇನೆ ಎಂಬುದೂ ತಿಳಿಯುತ್ತಿಲ್ಲ. ಎದ್ದು ಕೂತು, ಸ್ವಲ್ಪ ಸುಧಾರಿಸಿಕೊಂಡು ನೋಡಿದರೆ, ಚಿಕ್ಕ ಮಗಳು ಮುಂದೆ ಕೂತಿದ್ದಾಳೆ. ಹೆಂಡತಿ ನಗುತ್ತಿದ್ದಾಳೆ. ದೊಡ್ಡವಳದು ಯಥಾಪ್ರಕಾರ, ಗಾಢ ನಿದ್ದೆ.

ಏನಾಯ್ತು ಎಂಬುದೇ ಗೊತ್ತಾಗಲಿಲ್ಲ. ಸದ್ಯ ಉಸಿರುಕಟ್ಟಿ ಹರ ಹರಾ ಅಂದಿಲ್ಲ ಎಂಬ ನೆಮ್ಮದಿ ಮಾತ್ರ. ಹೆಂಡತಿ ನಗುತ್ತಿದ್ದುದರಿಂದ, ನನ್ನಿಂದಲೇ ಏನೋ ಯಡವಟ್ಟಾಗಿದೆ ಎಂಬ ಸುಳಿವು ಮಾತ್ರ ದೊರೆತಿತ್ತು.

’ಏನಾಯ್ತೇ ಮಾರಾಯ್ತಿ’ ಎಂದೆ. ಆಕೆ ಇನ್ನೊಂಚೂರು ನಕ್ಕು ಗೊಂದಲ ಹೆಚ್ಚಿಸಿದಳು. ಚಿಕ್ಕವಳು ಪಿಳಿ ಪಿಳಿ ಕಣ್ಬಿಡುತ್ತ ಕೂತಿದ್ದಳು. ಅವಳನ್ನು ಕೇಳಿದರೆ ಉಪಯೋಗವಿಲ್ಲ. ಹೆಂಡತಿ ಕೇಳಿದರೆ ಬೇಗ ಹೇಳುವುದಿಲ್ಲ. ಸ್ವಲ್ಪ ಹೊತ್ತು ಸುಮ್ಮನೇ ಕೂತೆ. ನಿದ್ದೆ ಹಾರಿಹೋಗಿತ್ತು.

ನಂತರ, ಊಟ ಮಾಡುವಾಗ ಹೆಂಡತಿ ಹೇಳಿದಳು: ನಾನು ಜೋರಾಗಿ ನಿದ್ದೆ ಮಾಡುತ್ತಿದ್ದೆನಂತೆ. ನಿದ್ದೆ ಜೋರಾದಾಗ, ಕೊಂಚ ಗೊರಕೆಯೂ ಬರುತ್ತದಂತೆ. ಗೊರಕೆ ಹೊಡೆಯುವವ ನಾನೇ ಆಗಿದ್ದರಿಂದ, ಅದು ನನಗೆ ಗೊತ್ತಾಗುವ ಛಾನ್ಸೇ ಇಲ್ಲ. ಗೊತ್ತಾದರೂ ಒಪ್ಪಿಕೊಳ್ಳದ ಭಂಡತನ.

ಆದರೆ, ನನ್ನ ಗೊರಕೆ ಚಿಕ್ಕವಳನ್ನು ಆಕರ್ಷಿಸಿದೆ. ಸದ್ದಿನ ಮೂಲ ಹುಡುಕುತ್ತ ಬಂದವಳಿಗೆ ಕಂಡಿದ್ದು ನಿದ್ದೆ ಮಾಡುತ್ತಿದ್ದ ನಾನು. ಹತ್ತಿರ ಬಂದು ಪರೀಕ್ಷಿಸಿದ್ದಾಳೆ. ನೆಗಡಿಯಾದಾಗೆಲ್ಲ ನಾನು ಭಯಂಕರ ಶಬ್ದ ಹೊರಡಿಸಿ ಮೂಗು ಹಿಂಡಿಕೊಳ್ಳುತ್ತಿದ್ದುದನ್ನು ಕಂಡಿದ್ದು ನೆನಪಾಗಿರಬೇಕು. ಸೀದಾ ಮೂಗನ್ನು ಎರಡೂ ಕೈಗಳಿಂದ ಒತ್ತಿ ಹಿಡಿದಿದ್ದಾಳೆ. ಗೊರಕೆ ಬಂದ್‌ ಆಗಿ ಬಾಯಿ ತೆರೆದುಕೊಂಡಿತು (ಮೂಗು ಹಿಡಿದರೆ ಬಾಯಿ ತಾನಾಗೇ ತೆರೆದುಕೊಳ್ಳುವುದಿಲ್ಲವೆ?). ಆಗ ಬಾಯಿ ಮುಚ್ಚುವ ಪ್ರಯತ್ನವನ್ನೂ ಮಾಡಿದಾಗಲೇ ನಾನು ಎದ್ದು ಕೂತಿದ್ದು.

ಇಂಥ ಚೇಷ್ಟೆಗಳನ್ನು ದಿನಕ್ಕೆ ನಾಲ್ಕೈದಾದರೂ ಮಾಡುತ್ತಾಳೆ ಚಿಕ್ಕ ಮಗಳು ನಿಧಿ. ಮಕ್ಕಳು ಹೀಗೆ ಮಾಡುತ್ತವೆ ಎಂಬುದನ್ನು ಅರಿಯದೇ ಬೆಳೆದ ಭೂಪ ನಾನು. ದೊಡ್ಡವಳು ವಿಶಿಷ್ಟಚೇತನೆಯಾಗಿದ್ದರಿಂದ, ಇಂಥ ಆಟಗಳನ್ನು ಆಡಲಿಲ್ಲ. ಈಗ ಚಿಕ್ಕವಳ ಮೂಲಕ ಮಕ್ಕಳ ಹೊಸ ಜಗತ್ತನ್ನು ನೋಡುತ್ತಿದ್ದೇನೆ.

ಎಷ್ಟು ವಿಚಿತ್ರವಲ್ಲವಾ? ಪರಿಸರ ಮಕ್ಕಳನ್ನು ಬೆಳೆಸುತ್ತದೆ. ತಂದೆತಾಯಿ ನಿಮಿತ್ತ ಮಾತ್ರ. ತಾವು ಕಂಡಿದ್ದನ್ನು ಮಾಡಿ ನೋಡುವ ಬುದ್ಧಿಯೇ ಮಕ್ಕಳನ್ನು ಬೆಳೆಸುತ್ತ ಹೋಗುತ್ತದೆ. ನಾವು ಅದಕ್ಕೆ ದಾರಿ ಮಾತ್ರ ಮಾಡಿಕೊಡಬಹುದು. ಥೇಟ್‌ ಭೂಮಿಯಲ್ಲಿ ಬಿತ್ತಿದ ಬೀಜದಂತೆ. ಅದಕ್ಕೆ ನೀರು, ಗೊಬ್ಬರ ನೀಡಿ ವಾತಾವರಣ ನಿರ್ಮಿಸಬಹುದೇ ಹೊರತು, ಸ್ವತಃ ನಾವೇ ಅದನ್ನು ಬೆಳೆಸಲಾರೆವು. ಅದೇನಿದ್ದರೂ ತಂತಾನೇ ಬೆಳೆಯುವಂಥದು.

ವಿಶಿಷ್ಟಚೇತನ ಮಕ್ಕಳನ್ನು ಬೆಳೆಸುವ ಬಗ್ಗೆ ನಾವಿಬ್ಬರೂ (ಅಂದ್ರೆ ನಾನು ನನ್ನ ಹೆಂಡ್ತಿ) ಬರೆಯುತ್ತಿರುವ ಪುಸ್ತಕಕ್ಕೆ ಚಿಕ್ಕ ಮಗಳು ನಿಧಿ ನಿತ್ಯ ಹೊಸ ಹೊಸ ಹೊಳಹುಗಳನ್ನು ನೀಡುತ್ತಿದ್ದಾಳೆ. ಮಕ್ಕಳ ಹೊಸ ಲೋಕ ನೋಡುತ್ತ ನೋಡುತ್ತ, ನಾವೂ ಹೀಗೇ ಬೆಳೆದಿದ್ದೆವಲ್ಲವೆ ಎಂದು ಅಚ್ಚರಿಯಾಗುತ್ತದೆ. ಆ ಅಚ್ಚರಿ ಹೊಸ ಹೊಸ ಬೆಳವಣಿಗೆ ತಂದುಕೊಡುತ್ತಿದೆ.

ಮಕ್ಕಳೆಂದರೇ ಅಚ್ಚರಿ. ಅಚ್ಚರಿ ಇರುವವರೆಗೆ ನಾವೂ ಮಕ್ಕಳೇ. ಅಲ್ವಾ?

- ಚಾಮರಾಜ ಸವಡಿ

ಭಾವನೆಗಳು ಮುರುಟುವುದು ಹೀಗೆ...

0 ಪ್ರತಿಕ್ರಿಯೆ
ನನ್ನ ರೂಮಿನ ಕಿಟಕಿ ತೆರೆದರೆ ರಸ್ತೆಯಾಚೆಗಿನ ಅವಳ ಮನೆಯೇ ನೇರವಾಗಿ ಕಣ್ಣಿಗೆ ಬೀಳುತ್ತಿತ್ತು.
ತುಂಬ ದಿನಗಳ ಕಾಲ ಆ ಮನೆಗೆ ಯಾರೂ ಬಂದಿರಲಿಲ್ಲ. ಒಂದಷ್ಟು ಹಕ್ಕಿಗಳು ಆಗಾಗ ಕಾಣದ ಹುಳುಗಳನ್ನು ಹೆಕ್ಕುತ್ತ ವಾಕ್ ಮಾಡುತ್ತಿದ್ದುದನ್ನು ಬಿಟ್ಟರೆ ಅಲ್ಲಿ ಬೇರೆ ಚಟುವಟಿಕೆಗಳಿರಲಿಲ್ಲ. ಬೇಸರದ ದಿನಗಳಲ್ಲಿ ನಾನು ಆ ಮನೆಯ ಖಾಲಿ ಬಾಲ್ಕನಿ ನೋಡುತ್ತ ನಿಲ್ಲುತ್ತಿದ್ದೆ. ನನ್ನ ಮನಸ್ಸಿನ ತುಂಬ ವಿಚಾರದ ಹುಳುಗಳು. ಹೆಕ್ಕಲು ಮಾತ್ರ ಯಾವ ಹಕ್ಕಿಯೂ ಇರಲಿಲ್ಲ.
ಒಂದಿನ, ಕೆಲಸ ಮುಗಿಸಿಕೊಂಡು ಬಂದು ಎಂದಿನಂತೆ ಕಿಟಕಿ ತೆರೆದರೆ, ಬಾಲ್ಕನಿಯಾಚೆ ಜೀವಂತಿಕೆ ಕಾಣಿಸಿತು. ಆ ಮನೆಯ ಬಾಗಿಲು ತೆರೆದಿತ್ತು. ಪಕ್ಕದಲ್ಲಿದ್ದ ರೂಮಿನ ಕಿಟಕಿ ಸಹ. ಬಾಲ್ಕನಿ ಶುಭ್ರವಾಗಿತ್ತು. ಸಂಸಾರವೊಂದರ ಸಂಭ್ರಮದ ಸದ್ದು ರಸ್ತೆಯ ಸಂಜೆ ಗದ್ದಲ ದಾಟಿಕೊಂಡು ನನ್ನ ರೂಮು ತಲುಪಿತು.
ನಾನು ಉಲ್ಲಸಿತನಾದೆ.
ಕತ್ತಲಾಗುತ್ತಿದ್ದಂತೆ ಎದುರು ಮನೆಯಲ್ಲಿ ದೀಪಗಳು ಹೊತ್ತಿಕೊಂಡವು. ಮಧ್ಯವಯಸ್ಕ ಹೆಣ್ಣುಮಗಳೊಬ್ಬಳು ಹೊರ ಬಂದು, ಬಾಗಿಲಿಗೆ ಪೂಜೆ ಮಾಡಿ, ಊದುಬತ್ತಿ ಬೆಳಗಿ ಕೈಮುಗಿದಳು.
ನಾನು ಲೈಟು ಹಾಕುವುದನ್ನೂ ಮರೆತು ಆ ಸಂಭ್ರಮ ನೋಡುತ್ತ ನಿಂತಿದ್ದೆ.
ಎದುರು ಮನೆಯಲ್ಲಿ ಟಿವಿ ಕಣ್ತೆರೆಯಿತು. ‘ಓದೋ ಪುಟ್ಟಾ’ ಎಂದು ದೊಡ್ಡ ದನಿಯಲ್ಲಿ ಕೊನೆಯ ಮಗನಿಗೆ ಆಜ್ಞೆ ನೀಡುತ್ತಲೇ ಮನೆಯೊಡತಿ ಹಾಲ್‌ನಲ್ಲಿದ್ದ ಟಿವಿ ಮುಂದೆ ಕೂತಳು. ಇನ್ನು ಎರಡು ಗಂಟೆಗಳ ತನಕ ಈ ತಾಯಿ ಅಲ್ಲಾಡುವುದಿಲ್ಲ ಎಂದುಕೊಂಡು ನಾನು ಕಿಟಕಿಯಿಂದ ಈಚೆ ತಿರುಗುವುದರಲ್ಲಿದ್ದಾಗ-
ಎದುರು ಮನೆಯ ರೂಮಿನೊಳಗೆ ಲೈಟು ಹೊತ್ತಿಕೊಂಡಿತು!
ಆಕೆ ಕಾಣಿಸಿಕೊಂಡಳು. ಮುಖದಲ್ಲಿ ಉತ್ಸಾಹ ಬೆರೆತ ಸುಸ್ತು. ಕಾಲೇಜಿನಿಂದ ಬಂದಿರಬೇಕು, ಪುಸ್ತಕಗಳನ್ನು ಮೇಜಿನ ಮೇಲಿರಿಸಿದವಳೇ ಕನ್ನಡಿಯ ಮುಂದೆ ನಿಂತು, ದೇವರು ಕೂಡ ಮರುಳಾಗುವಂತೆ ಚಂದಗೆ ಮುಗುಳ್ನಕ್ಕಳು.
ನಾನು ಮಂತ್ರಮುಗ್ಧನಂತೆ ನೋಡುತ್ತಿದ್ದೆ.
ಮುಂದೆ ಐದು ನಿಮಿಷಗಳಲ್ಲಿ ಕನ್ನಡಿ ಎದುರು ಚಿಕ್ಕದೊಂದು ಬ್ಯಾಲೆ ನೃತ್ಯವೇ ನಡೆದುಹೋಯಿತು. ಕನ್ನಡಿಯ ಮೇಲೆ ಕಣ್ಣಿಟ್ಟುಕೊಂಡೇ ಬಾಲೆ ಎಡಕ್ಕೊಮ್ಮೆ ಬಲಕ್ಕೊಮ್ಮೆ ತಿರುಗಿ ತನ್ನ ಭಂಗಿ ಪರೀಕ್ಷಿಸಿದಳು. ಹೇರ್ ಬ್ಯಾಂಡ್ ಎಳೆದುಹಾಕಿ, ಸಡಿಲ ಕೂದಲನ್ನು ಭುಜದ ಎರಡೂ ಪಕ್ಕಕ್ಕೆ ಇಳಿಬಿಟ್ಟು ನೋಡಿದಳು. ಅಷ್ಟೂ ಕೂದಲನ್ನು ಒಂದೇ ಕಡೆ ಹಾಕಿಕೊಂಡು ನೋಡಿದಳು. ಕೈಕಟ್ಟಿ ನಿಂತಳು. ನಿಂತಲ್ಲೇ ಓಲಾಡಿದಳು. ಕೊನೆಗೆ, ಮತ್ತೊಮ್ಮೆ ಚಂದಗೆ ಮುಗುಳ್ನಕ್ಕು ಒಳಗೆ ಹೋಗಿಬಿಟ್ಟಳು.
ನನ್ನ ಜೀವನದ ಧನ್ಯತೆಯ ಕ್ಷಣಗಳು ಶುರುವಾಗಿದ್ದು ಹೀಗೆ.
ಕ್ರಮೇಣ ಕಿಟಕಿ ನನ್ನ ಬೇಸರ ಕಳೆಯುವ ಸಾಧನವಾಯಿತು. ಬಾಲೆಯನ್ನು ನೋಡುವುದನ್ನು ಇಷ್ಟಪಡತೊಡಗಿದೆ. ಆಕೆಯ ವಿಶಿಷ್ಟ ದರ್ಪಣ ಬ್ಯಾಲೆ ಸಹ ನನಗೆ ಇಷ್ಟವಾಯಿತು. ಸಂಜೆಯಾಗುತ್ತಲೇ, ಕಿಟಕಿ ಎದುರು ಪ್ರತಿಷ್ಠಾಪಿತನಾಗತೊಡಗಿದೆ.
ಕೆಲವು ದಿನಗಳ ನಂತರ ಒಮ್ಮೆ, ಆಕೆ ಆಕಸ್ಮಿಕವಾಗಿ ನನ್ನ ಕಿಟಕಿಯತ್ತ ನೋಡಿದಾಗ, ನಸುಗತ್ತಲ್ಲಲಿ ನಿಂತಿದ್ದ ನಾನು ಕಣ್ಣಿಗೆ ಬಿದ್ದೆ.
ಅವತ್ತು ದರ್ಪಣ ಬ್ಯಾಲೆ ನಡೆಯಲಿಲ್ಲ. ರೂಮಿನಲ್ಲಿ ಲೈಟು ಕೂಡ ತುಂಬ ಹೊತ್ತು ಉರಿಯಲಿಲ್ಲ. ಅಷ್ಟೇ ಅಲ್ಲ, ಆಕೆಯ ಮುಖ ನಿಗಿನಿಗಿಯಾಗಿತ್ತು.
ಆದರೆ ಅದು ಕೇವಲ ಒಂದು ದಿನ ಮಾತ್ರ.
ಮರುದಿನ ಯಥಾಪ್ರಕಾರ ಬಾಲೆ ಬಂದಳು. ಮುಖದಲ್ಲೊಂದು ತಿಳಿಯಾದ ಮಂದಹಾಸ. ಕೊಂಚ ಹೊತ್ತು ಕನ್ನಡಿಯ ಮುಂದೆಯೇ ನಿಂತವಳು ನಂತರ ಕಿಟಕಿಯತ್ತ ತಿರುಗಿ ನನ್ನನ್ನೊಮ್ಮೆ ದಿಟ್ಟಿಸಿದಳು.
ಆ ದಿನ ನನಗೆ ಇಂದಿಗೂ ಚೆನ್ನಾಗಿ ನೆನಪಿದೆ.
***
ಮೊದಲ ಬಾರಿ ಬೆಂಗಳೂರು ಇಷ್ಟವಾಗತೊಡಗಿತು. ಸಂಜೆಗಳು ಹೆಚ್ಚು ಅರ್ಥಪೂರ್ಣವಾದವು. ನಮ್ಮ ಕಿಟಕಿಗಳ ನಡುವೆ ರವಾನೆಯಾಗುತ್ತಿದ್ದ ಮೌನ ಸಂದೇಶಗಳೆಷ್ಟು ಎಂಬುದು ಮಧ್ಯದಲ್ಲಿ ಹಾದು ಹೋಗಿದ್ದ ಪೆದ್ದ ರಸ್ತೆಗಾಗಲಿ, ರಾತ್ರಿ ಹಗಲೆನ್ನದೇ ‘ಭರ್ರೋ’ ಎಂದು ಸಂಚರಿಸುತ್ತಿದ್ದ ವಾಹನಗಳಿಗಾಗಲಿ ಗೊತ್ತಾಗುವ ಸಂಭವವೇ ಇರಲಿಲ್ಲ. ಬಹಳ ಸಮಯದವರೆಗೆ ನಾವು ಮೌನವಾಗಿ ನಿಂತಿರುತ್ತಿದ್ದೆವು. ಆಗಾಗ ಮುಗುಳ್ನಗೆ. ಕೊಂಚ ಹೊತ್ತು ಕೆಳಗಿದ್ದ ರಸ್ತೆ ದಿಟ್ಟಿಸುವುದು. ಮತ್ತೊಮ್ಮೆ ಮೌನ ವೀಕ್ಷಣೆ. ಮುಗುಳ್ನಗೆ.
ಆ ದಿನಗಳೂ ನನಗೆ ಚೆನ್ನಾಗಿ ನೆನಪಿವೆ.
***
ಬದುಕು ಹೀಗೇ ಸಾಗಿದ್ದಾಗ, ಒಂದಿನ ಪತ್ರಿಕೆಗಳು ಭೀಕರ ಸುದ್ದಿಯನ್ನು ತಂದವು. ಕಿಟಕಿಗಳ ಕೆಳಗಿದ್ದ ರಸ್ತೆಯ ನಡುವೆಯೇ ಮೇಲ್ಸೇತುವೆಯೊಂದು ಎದ್ದು ನಿಲ್ಲಲಿತ್ತು.
ಮೊದಲ ಬಾರಿ ನನ್ನ ಮುಗುಳ್ನಗೆ ಮಾಯವಾಯಿತು.
ಅಂದು ಸಂಜೆ ಆಕೆ ಕಣ್ಣಲ್ಲೇ ‘ಏಕೆ?’ ಎಂಬಂತೆ ಕೇಳಿದಳು. ನಾನು ಸುಳ್ಳೇ ನಗುವ ಪ್ರಯತ್ನ ಮಾಡಿದೆ. ಆದರೆ, ಭಾರಿ ಗಾತ್ರದ ಯಂತ್ರಗಳು ರಸ್ತೆ ಮಧ್ಯೆಯೇ ಕೊರೆಯಲು ಪ್ರಾರಂಭಿಸುವ ಮೂಲಕ ನನ್ನ ದುಗುಡವನ್ನು ಆಕೆಗೂ ತಲುಪಿಸಿದವು.
ಕಾಮಗಾರಿ ಹಗಲು ರಾತ್ರಿ ಭರದಿಂದ ಸಾಗತೊಡಗಿ, ದೂಳು ಎಲ್ಲೆಡೆ ಹರಡಿ, ಕಿಟಕಿ ತೆರೆಯುವುದೂ ಕಷ್ಟವಾಗತೊಡಗಿತು. ಆದರೂ ಆಕೆ ಏನಾದರೂ ನೆವ ಮಾಡಿ ಅರ್ಧ ಗಂಟೆ ನನ್ನನ್ನು ದಿಟ್ಟಿಸುತ್ತಿದ್ದಳು. ದೂಳಿನ ನಡುವೆ ಆಕೆಯ ಮಂದಹಾಸ ಮಂಕಾಗುತ್ತಿರುವಂತೆ ನನಗನ್ನಿಸಿತು.
ಒಂದಿನ, ನಮ್ಮಿಬ್ಬರ ಕಿಟಕಿಗಳ ಮಧ್ಯೆ ಭಾರಿ ಗಾತ್ರದ ಕಾಂಕ್ರೀಟ್ ಕಂಬದ ನಿರ್ಮಾಣ ಪ್ರಾರಂಭವಾಯಿತು. ಇನ್ನು ಹತ್ತು ದಿನಗಳಲ್ಲಿ ಅದು ನಮ್ಮಿಬ್ಬರ ನಡುವೆ ಗೋಡೆಯಂತೆ ನಿಲ್ಲಲಿದೆ ಎಂದಾದಾಗ, ನಾನೊಂದು ನಿಶ್ಚಯ ಮಾಡಿದೆ.
ಪ್ರೀತಿಯಾಗಬಹುದಾಗಿದ್ದ ಭಾವನೆಗಳು ಸೇತುವೆಗೆ ಬಲಿಯಾಗುವುದನ್ನು ಸಹಿಸುವುದು ನನಗೆ ಕಷ್ಟವಾಗಿತ್ತು.
ಅಂದು ಸಂಜೆ ಕಿಟಕಿಯ ಬಳಿ ನಿಂತಾಗ ಫಲಕವೊಂದನ್ನು ಎತ್ತಿ ಹಿಡಿದೆ. ‘ನೆನಪು ಅಳಿಯದಿರಲಿ’ ಎಂದಷ್ಟೇ ಅದರಲ್ಲಿ ಬರೆದಿದ್ದೆ. ದಿಗಿಲಿನಿಂದ ದಿಟ್ಟಿಸಿದವಳಿಗೆ ಸನ್ನೆಯ ಮೂಲಕ ನನ್ನ ನಿರ್ಧಾರ ತಿಳಿಸಿದೆ.
ಅವತ್ತು ಆಕೆ ಅತ್ತಿದ್ದು ಇವತ್ತಿಗೂ ಅಚ್ಚೊತ್ತಿದಂತಿದೆ.
***
ಮರುದಿನ ಕಂಬ ನಮ್ಮಿಬ್ಬರನ್ನು ಶಾಶ್ವತವಾಗಿ ಮರೆ ಮಾಡಲಿತ್ತು. ಅಂದು ಬೆಳಿಗ್ಗೆ ಬೇಗ ಎದ್ದೆ. ಆಕೆ ಕೂಡ. ಸೂರ್ಯ ಆಕಳಿಸುತ್ತಿರುವಾಗ ನಮ್ಮಿಬ್ಬರ ಕಿಟಕಿಗಳು ತೆರೆದುಕೊಂಡವು. ಕೊನೆಯದಾಗಿ ಪರಸ್ಪರ ದಿಟ್ಟಿಸಿದೆವು. ಆಕೆ ಮತ್ತೆ ಅತ್ತಳು. ಏಕೋ ನನ್ನ ದೃಷ್ಟಿ ಮಂಜಾಗುತ್ತಿದೆ ಅನ್ನಿಸಿತು. ಅಳುತ್ತಿದ್ದೆನೇ ನಾನು?
ಮೌನವಾಗಿ ವಿದಾಯ ಹೇಳಿದೆ. ಉದಯಿಸುತ್ತಿರುವ ಸೂರ್ಯ ಆಕೆಯ ಕಣ್ಣೀರಿನಲ್ಲಿ ವಜ್ರದಂತೆ ಬೆಳಗುತ್ತಿದ್ದ. ಕೊನೆಯದಾಗಿ ಆಕೆಯನ್ನು ಕಣ್ತುಂಬ ತುಂಬಿಕೊಂಡು, ಖಾಲಿ ಮಾಡಿದ್ದ ರೂಮಿನಲ್ಲಿ ಸಿದ್ಧವಾಗಿ ಕೂತಿದ್ದ ಸೂಟ್‌ಕೇಸ್ ಎತ್ತಿಕೊಂಡು, ಹಿಂದಕ್ಕೆ ಕೂಡ ನೋಡದೆ ದಡದಡ ಮೆಟ್ಟಿಲಿಳಿದೆ.
ನನ್ನೊಳಗಿನ ಕಿಟಕಿಯೊಂದು ಅವತ್ತು ಶಾಶ್ವತವಾಗಿ ಮುಚ್ಚಿಕೊಂಡಿತು!
- ಚಾಮರಾಜ ಸವಡಿ
(ಪ್ರಜಾವಾಣಿಯಲ್ಲಿ ಅಚ್ಚಾಗಿದ್ದ ಬರಹ. http://www.prajavani.net/Archives/oct122004/377820041012.php)

ಬದುಕಿರುವ ಯೋಧರಿಗೆ ಏನು ಮಾಡುತ್ತಿದ್ದೀರಿ?

0 ಪ್ರತಿಕ್ರಿಯೆ
ಮಡಿದವರು ವೀರಸ್ವರ್ಗ ಸೇರಿದರು. ಎಲ್ಲರ ಬಾಯಲ್ಲಿಯೂ ಅವರದೇ ಗುಣಗಾನ. ಆದರೆ, ಬದುಕಿರುವವರ ಬಗ್ಗೆ ಯಾರು ಗಮನ ಹರಿಸುತ್ತಿದ್ದಾರೆ?

ನಿಮ್ಮ ಊಹೆ ಸರಿ. ನಾನು ಹುತಾತ್ಮಯೋಧರ ಬಗ್ಗೆ ಮಾತಾಡುತ್ತಿದ್ದೇನೆ.

ನಮ್ಮ ದೇಶಪ್ರೇಮ ಬಡಿದೆಬ್ಬಿಸಲು ಕ್ರಿಕೆಟ್‌ ನಂತರ ಬಂದಿದ್ದು ಕಾರ್ಗಿಲ್‌. ಹುತಾತ್ಮ ಯೋಧರ ದೇಹಗಳನ್ನು ಅವರವರ ಊರಿಗೇ ಕಳಿಸುವ ಮೂಲಕ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ದೇಶಪ್ರೇಮದ ಕಿಚ್ಚನ್ನು ಇಡೀ ದೇಶಕ್ಕೇ ಹಚ್ಚಿತು.

ಆಗಿನ ದಿನಗಳು ನನಗೆ ಚೆನ್ನಾಗಿ ನೆನಪಿವೆ.

ದೇಶದ ಹಲವಾರು ಕಡೆ ನಿತ್ಯ ಹುತಾತ್ಮ ಯೋಧರ ಶವಗಳು ಬರುತ್ತಿದ್ದವು. ಆಗ ರಾಜ್ಯ ಸರ್ಕಾರವೇ ಖುದ್ದು ನಿಂತು ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನೆರವೇರಿಸುತ್ತಿತ್ತು. ಜಿಲ್ಲಾಡಳಿತ ನೇರವಾಗಿ ಪಾಲ್ಗೊಂಡಿರುತ್ತಿತ್ತು. ಆಯಾ ಜಿಲ್ಲೆಯ ಗಣ್ಯರು ಖುದ್ದು ಹಾಜರಿದ್ದು, ಮಡಿದ ಯೋಧನಿಗೆ ಅಂತಿಮ ಗೌರವ ಸಲ್ಲಿಸುತ್ತಿದ್ದರು.

ಮುಂದೆ ಕಾರ್ಗಿಲ್‌ ಯುದ್ಧ ಮುಕ್ತಾಯವಾಯ್ತು. ಮಡಿದ ಯೋಧರಿಗೆ ಕೊಡುಗೆಗಳ ಸುರಿಮಳೆ ಪ್ರಾರಂಭವಾಯ್ತು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪೈಪೋಟಿಯ ಮೇಲೆ ಕೊಡುಗೆಗಳನ್ನು ಘೋಷಿಸಿದವು. ಸಂಘ-ಸಂಸ್ಥೆಗಳೂ ಹಿಂದೆ ಬೀಳಲಿಲ್ಲ. ನಗದು ಪುರಸ್ಕಾರ ನೀಡುವುದರಲ್ಲಿ ಸ್ಪರ್ಧೆ ಕಂಡು ಬಂತು.

ಇಡೀ ಪ್ರಕ್ರಿಯೆಯ ವ್ಯಂಗ್ಯ ಎಂದರೆ, ಎಲ್ಲರೂ ಮಡಿದ ಯೋಧನ ಪತ್ನಿ ಮತ್ತು ಆತನ ಮಕ್ಕಳಿಗೆ ಎಲ್ಲವನ್ನೂ ನೀಡಿದರು. ಆದರೆ, ಬಹುತೇಕ ಕಡೆ ಮಗನ ದುಡಿಮೆಯನ್ನೇ ಅವಲಂಬಿಸಿದ್ದ ವೃದ್ಧ ತಂದೆತಾಯಿ, ತಮ್ಮ-ತಂಗಿಯರನ್ನೇ ಜನ ಮರೆತುಬಿಟ್ಟರು. ಯುವ ವಿಧವೆಯ ಬಗ್ಗೆ ವ್ಯಕ್ತವಾದ ಅನುಕಂಪ ವೃದ್ಧ ತಂದೆತಾಯಿಗಳತ್ತ ಹರಿಯಲಿಲ್ಲ.

ಪರಿಣಾಮ, ಎಷ್ಟೋ ಯೋಧರ ಕುಟುಂಬಗಳಲ್ಲಿ ವೈಷಮ್ಯ ಪ್ರಾರಂಭವಾಯ್ತು. ಕುಟುಂಬ ಎಂದರೆ ಕೇವಲ ಹೆಂಡತಿ ಮತ್ತು ಮಕ್ಕಳು ಎಂಬ ಅಪೂರ್ಣ ಅರ್ಥ ಕೌಟುಂಬಿಕ ಕಲಹವನ್ನು ಹುಟ್ಟುಹಾಕಿತು. ಅತ್ತ ಮಗನೂ ಇಲ್ಲ, ಇತ್ತ ಆದಾಯವೂ ಇಲ್ಲ ಎಂಬ ಸಂಕಷ್ಟ ಯೋಧನ ಕುಟುಂಬವನ್ನು ಕಾಡತೊಡಗಿತು. ಎಷ್ಟೋ ಕಡೆ, ಯೋಧನ ಹೆಂಡತಿ, ತನಗೆ ಬಂದ ಆಸ್ತಿ, ಹಣ, ಪಿಂಚಣಿ ಎತ್ತಿಕೊಂಡು ತೌರಿನ ಹಾದಿ ಹಿಡಿದಳು. ಆಕೆಯ ಹೆಸರಿಗೆ ಭೂಮಿ ಮಂಜೂರಾಯ್ತು, ಪೆಟ್ರೋಲ್‌ ಬಂಕ್‌ಗಳು ಮಂಜೂರಾದವು. ಎಲ್ಲವನ್ನು ಪಡೆದುಕೊಂಡ ಆಕೆ, ಮಡಿದ ತನ್ನ ಗಂಡನ ಸಮಾಧಿಗೂ ಬಾರದಂಥ ಮದ ಬೆಳೆಸಿಕೊಂಡಳು.

ಇದಕ್ಕೆ ಉತ್ತಮ ಉದಾಹರಣೆ ನನ್ನೂರಿನಲ್ಲೇ ಇದೆ.

ಇವತ್ತು ನಾವೆಲ್ಲ ಕಾರ್ಗಿಲ್‌ ಯುದ್ಧದಲ್ಲಿ ಮಡಿದ ಯೋಧರ ಬಗ್ಗೆ ರಾಜಧಾನಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಕಣ್ಣೀರು ಹಾಕುತ್ತೇವೆ. ಯುದ್ಧದಲ್ಲಿ ಮಡಿದ ಕರ್ನಾಟಕದ ಎಷ್ಟು ಯೋಧರ ಮನೆಗೆ ನಮ್ಮ ಸರ್ಕಾರ ಅಥವಾ ಸಮಾರಂಭದಲ್ಲಿ ಮಿಡಿದ ಹೃದಯಗಳು ಹೋಗಿ ನೋಡಿವೆ? ಮಡಿದ ಯೋಧನ ಮನೆಯ (ಅಂದರೆ, ತಂದೆ-ತಾಯಿಗಳ) ಪರಿಸ್ಥಿತಿ ಹೇಗಿದೆ ಎಂಬುದನ್ನು ಪರಿಶೀಲಿಸಿವೆ? ಯೋಧ ಸತ್ತು ವೀರಸ್ವರ್ಗ ಹೊಂದಿದ. ಆತನ ಹೆಸರಿನಲ್ಲಿ ಬಂದ ಸಮಸ್ತ ಕೊಡುಗೆಯನ್ನು ಪಡೆದುಕೊಂಡ ಆತನ ಪತ್ನಿ ಭೂಲೋಕದ ಸ್ವರ್ಗ ಸೇರಿದಳು. ಹೀಗಿರುವಾಗ ಯೋಧನ ಕುಟುಂಬದ ನರಕದಂಥ ದುಃಸ್ಥಿತಿ ನಿವಾರಿಸುವವರಾದರೂ ಯಾರು?

ಇವತ್ತಿಗೂ ಬಹುತೇಕ ಯೋಧರ ಸಮಾಧಿಸ್ಥಳಗಳನ್ನು ಕ್ಯಾರೇ ಅನ್ನುವವರಿಲ್ಲ. ಹುತಾತ್ಮನ ಮಡದಿಗೆ ಗಂಡನ ಸಮಾಧಿಯನ್ನು ಚೆನ್ನಾಗಿಟ್ಟುಕೊಳ್ಳುವ ವಿವೇಕ ಉಳಿದಿಲ್ಲ. ಅನಿರೀಕ್ಷಿತವಾಗಿ ಬಂದ ದುಡ್ಡು, ಮನ್ನಣೆ ಆಕೆಯನ್ನು ಪೂರ್ತಿಯಾಗಿ ಬದಲಾಯಿಸಿವೆ. ಜನರ ದೇಶಪ್ರೇಮ ಕೂಡ ಆವಿಯಾಗಿ ಹೋಗಿದೆ. ಮಡಿದ ಯೋಧನ ಹೆಸರಿನಲ್ಲಿ ಚಂದಾ ಎತ್ತಿ ಉಂಡವರಿದ್ದಾರೆ. ಅಂಥ ಎಲ್ಲರಿಗೂ ಕಾರ್ಗಿಲ್‌ ಯುದ್ಧ ಮತ್ತು ಹುತಾತ್ಮ ಯೋಧ ಅನ್ನದ ಮಾರ್ಗ.

ನನಗೆ ಮತ್ತೆ ಮತ್ತೆ 'ಯೇ ಮೇರೆ ವತನ್‌ ಕಿ ಲೋಗೋ...' ಹಾಡು ನೆನಪಾಗುತ್ತದೆ. ಕೇಳಿಸಿಕೊಳ್ಳುವ ವ್ಯವಧಾನ ಯಾರಿಗಿದೆ?

- ಚಾಮರಾಜ ಸವಡಿ

ರಾತ್ರಿಯಿಡೀ ಕಾಡಿದ ಶ್ರಾವಣ

0 ಪ್ರತಿಕ್ರಿಯೆ
ಬೆಳಗಾಯಿತು ಎಂದು ಇತ್ತೀಚೆಗೆ ಯಾರೂ ಹೇಳುವುದೇ ಬೇಡ. ನಸುಕಿನ ಐದು ಗಂಟೆಗೆ ಹತ್ತಿರದ ಮಸೀದಿಯ ಮೈಕ್‌ ದಿನದ ಮೊದಲ ಪ್ರಾರ್ಥನೆಗೆ ಕರೆ ಕೊಡುವುದಕ್ಕೂ ಮುನ್ನವೇ ಭಕ್ತಿ ಸಂಗೀತ ಮೊಳಗುತ್ತಿರುತ್ತದೆ. ಸಕ್ಕರೆ ನಿದ್ದೆಯಲ್ಲೇ ಮನಸ್ಸಿನ ತುಂಬ ಶ್ರಾವಣದ ಸಂಭ್ರಮ.

ಹಾಗೇ ಮಗ್ಗುಲಾದರೆ, ಭಕ್ತಿ ಗೀತೆಗಳು ಒಂದಾದ ನಂತರ ಒಂದರಂತೆ ಕಿವಿಗೆ ತಾಕುತ್ತಲೇ ಇರುತ್ತವೆ. ಎರಡು-ಮೂರು ಕಡೆಯಿಂದ ಬರುವ ವಿವಿಧ ದೇವರ ನಾಮಗಳು ಮಲಗಲು ಬಿಡುವುದಿಲ್ಲ. ರಾತ್ರಿ ಎಷ್ಟೇ ನೀಟಾಗಿ ಹೊದಿಸಿದ್ದರೂ, ಅದನ್ನು ಕಿತ್ಹಾಕಿ ಚಳಿಗೆ ಮುದುಡಿ ಮಲಗಿದ್ದ ಮಕ್ಕಳ ಮೇಲೆ ಬೆಚ್ಚಗೇ ರಗ್‌ ಹೊದಿಸಿ ಹೊರಬರುತ್ತೇನೆ. ಬಾಗಿಲು ತೆರೆದರೆ, ಪ್ರಶಾಂತವಾಗಿ ಕಾಣುವ ನಸುಕಿನ ಮಬ್ಬುಗತ್ತಲಲ್ಲಿ ಸಂಗೀತದ ಅಲೆಗಳು ಅಪ್ಪಳಿಸುತ್ತವೆ.

ಆಸ್ತಿಕರಿಗೆ ಹೇಗೋ ಏನೋ, ಶ್ರಾವಣ ಮಾಸ ನನಗೆ ಸಾವಿರಾರು ನೆನಪುಗಳನ್ನು ಹೊತ್ತು ತರುವ ತಿಂಗಳು. ಅಯಾಚಿತವಾಗಿ ಬೇಂದ್ರೆ ನೆನಪಾಗುತ್ತಾರೆ. ಅವರ ಅದ್ಭುತ ಕವಿತೆಗಳು ನೆನಪಾಗುತ್ತವೆ. ನನ್ನೂರು ಅಳವಂಡಿಯಲ್ಲಿ ಬೆಳ್ಳಂಬೆಳಿಗ್ಗೆ ಹೊರಡುತ್ತಿದ್ದ ಭಜನೆ ಮೇಳದ ಸಂಗೀತದ ಇಂಪು ಕಿವಿಗೆ ತಾಕಿದಂತಾಗುತ್ತದೆ. ಸಣ್ಣಗೆ ಸುರಿವ ಸೋನೆಮಳೆಯಲ್ಲಿ ತಮ್ಮ ಪಾಡಿಗೆ ತಾವು ಭಜನೆ ಮಾಡುತ್ತ, ಹಾಡು ಹಾಡುತ್ತ, ಅಷ್ಟೊತ್ತಿಗೇ ಎದ್ದಿರುತ್ತಿದ್ದ ಹೆಂಗಳೆಯರಿಂದ ಪೂಜೆ ಸ್ವೀಕರಿಸುತ್ತ ಹೊರಡುತ್ತಿದ್ದ ತಂಡ ನೆನಪಾಗುತ್ತದೆ. ಅದೆಷ್ಟು ಸಾರಿ ಅವರ ಹಿಂದ್ಹಿಂದೇ ನಾನು ಇಡೀ ಊರು ಸುತ್ತಿಲ್ಲ? ಮನಸ್ಸಿನ ತುಂಬ ಶ್ರಾವಣ ತುಂಬಿಕೊಳ್ಳುತ್ತದೆ.

ಅದೇ ಗುಂಗಿನಲ್ಲಿ ಒಳ ಬಂದು, ಕಂಪ್ಯೂಟರ್‌ ಆನ್‌ ಮಾಡಿದರೆ, ಬೆರಳುಗಳು ಶ್ರಾವಣದ ಗೀತೆಗಳಿಗಾಗಿ ತಡಕಾಡುತ್ತವೆ. ಗಾಯಕ ಸಿ. ಅಶ್ವಥ್‌ ಸೊಗಸಾಗಿ ಹಾಡಿರುವ ಬೇಂದ್ರೆಯವರ ’ಶ್ರಾವಣ ಬಂತು ಕಾಡಿಗೆ...’ ಹಾಡನ್ನು ಕ್ಲಿಕ್‌ ಮಾಡುತ್ತೇನೆ. ಈಗ ಕಂಪ್ಯೂಟರ್‌ ಪರದೆಯಲ್ಲೂ ಶ್ರಾವಣದ ಅಮಲು.

http://www.kannadaaudio.com/Songs/Bhaavageethe/Shraavana/Shraa.ram

(ಹಾಡು ಕೇಳಿಸದಿದ್ದರೆ, http://www.kannadaaudio.com ಗೆ ಹೋಗಿ, ಭಾವಗೀತೆ ವಿಭಾಗದಲ್ಲಿ ’ಶ್ರಾವಣ’ ವಿಭಾಗದ ಮೇಲೆ ಕ್ಲಿಕ್‌ ಮಾಡಿ. ಅಲ್ಲಿ ನಿಮಗೆ ಈ ಹಾಡು ಸಿಗುತ್ತದೆ)

ಎಂಥಾ ಅದ್ಭುತ ಕವಿ ಬೇಂದ್ರೆ. ಏನೇ ಬರೆದರೂ ಅದನ್ನು ಅನುಭವಿಸಿ ಬರೆದರು. ಬರೆದಿದ್ದನ್ನು ಇತರರೂ ಅನುಭವಿಸುವಂತೆ ತೀವ್ರತೆ ತುಂಬಿದರು. ಭಾವನೆಗಳು ಹದಗೊಳ್ಳುವುದಕ್ಕೆ ಮುನ್ನವೇ ಬ್ಲಾಗುಗಳಲ್ಲಿ, ಪತ್ರಿಕೆಗಳಲ್ಲಿ ಸ್ಖಲಿಸುವ ಈಗಿನ ದಿನಗಳಲ್ಲಿ ಬೇಂದ್ರೆಯವರ ಆಳದ, ತೀವ್ರತೆಯ ಕವಿತೆಗಳು ಮತ್ತೆ ಮತ್ತೆ ಕಾಡುತ್ತವೆ. ಮನಸ್ಸು ಶ್ರಾವಣವಾಗುತ್ತದೆ.

ಎಲ್ಲೆಲ್ಲಿ ಬಂತು ಶ್ರಾವಣ? ಕಾಡಿಗೆ, ನಾಡಿಗೆ, ಬೀಡಿಗೆ ಬಂತು. ಕಡಲಿಗೆ, ಘಟ್ಟಕ್ಕೆ, ರಾಜ್ಯಪಟ್ಟಕ್ಕೆ, ಬಾನಿನ ಮಟ್ಟಕ್ಕೆ ಬಂತು. ಏರಿ ನಿಂತ ಕಾರ್ಮುಗಿಲು ಸೂರ್ಯನನ್ನೇ ನುಂಗಿತು. ಹಗಲನ್ನು ಇರುಳು ಮಾಡಿತು. ಮಳೆಯಾಗಿ ಇಳಿದು ನದಿಗಳನ್ನು ತುಂಬಿದ ಮೋಡಗಳು ಭೂಮಿ-ಆಕಾಶಕ್ಕೂ ಮದುವೆ ಮಾಡಿಸಿದವು. ಶ್ರಾವಣ ಮಾಸ ವಸುಂಧರೆಯ ಮಧುಮಾಸ ಅಂತಾರೆ ಬೇಂದ್ರೆ.

ಹೊಡೆದ ಜೋರಿಗೆ, ಜೋಕಾಲಿ ಏರಿ, ಅಡರ್ಯಾವ ಮರಕ ಹಾರಿ ಎಂದು ಉನ್ಮತ್ತತೆಯನ್ನು ಬಿಂಬಿಸುತ್ತಾರೆ. ಮನೆಮನೆಗಳಿಗೆ, ದನಿದನಿಗಳಿಗೆ, ಮನದ ನನಿ ಕೊನೆಕೊನೆಗೂ ಶ್ರಾವಣದ ಮತ್ತು ಏರುತ್ತದೆ. ತಣಿದ ತನುವಿನಲ್ಲಿ ಸುಖದ ಹಾಡೊಡೆಯುತ್ತದೆ. ’ಒಡೆದಾವ ಹಾಡು, ರಸ ಉಕ್ಕತಾವ ನೋಡು’ ಎಂಬು ಬರೆದ ಬೇಂದ್ರೆ ಹಾಡಿನಲ್ಲಿ ಉಕ್ಕಿದ ರಸಿಕತೆಯಾದರೂ ಎಂಥದು!

ಉಕ್ಕಿದ ಮಳೆಗೆ ’ಬೆಟ್ಟ ತೊಟ್ಟಾವ ಕುತನಿಯ ಅಂಗಿ, ಹಸಿರು ನೋಡ ತಂಗಿ’ ಅಂತಾರೆ. ಕಪ್ಪನೆಯ ಮೋಡಗಳು ಗುಂಪುಗಟ್ಟಿದ್ದನ್ನು ಕಂಡರೆ ಇಲ್ಲೇ ಜಾತ್ರೆ ಇರಬೇಕು ಅನ್ನುತ್ತಾರೆ. ಮಳೆಗೆ ಹರ್ಷಗೊಂಡ ಭೂಮಿಯಲ್ಲಿ ಉಕ್ಕುವ ಹಸಿರು ಕಂಡು ’ಬನಬನ ನೋಡು ಈಗ ಹ್ಯಾಂಗ, ಮದುವಿ ಮಗನ್ಹಾಂಗ, ತಲಿಗೆ ಬಾಸಿಂಗ, ಕಟ್ಟಿಕೊಂಡು ನಿಂತಾವ ಹರ್ಷಗೊಂಡು, ಹಸಿರುಟ್ಟು ಬಸುರಿಯ ಹಾಂಗ’ ಎಂದು ವರ್ಣಿಸುತ್ತಾರೆ.

ಶ್ರಾವಣದ ಮಳೆ ಬೆಟ್ಟ-ಗುಡ್ಡ ಎಂಬ ಸ್ಥಾವರಲಿಂಗಕ್ಕೆ ಅಭ್ಯಂಗ ಮಾಡಿಸುತ್ತವಂತೆ. ಅದಕ್ಕಾಗಿ ’ಕೂಡ್ಯಾವ ಮೋಡ, ಸುತ್ತೆಲ್ಲ ನೋಡ ನೋಡ’ ಎನ್ನುತ್ತಾರೆ. ನಿಧಾನವಾಗಿ ಕವಿತೆ ಕೇಳುತ್ತ ಬೇಂದ್ರೆಯವರು ಬರೆದಿದ್ದನ್ನು ಓದಿ:

http://www.kannadaaudio.com/Songs/Bhaavageethe/Shraavana/Shraa.ram

(ಹಾಡು ಕೇಳಿಸದಿದ್ದರೆ, http://www.kannadaaudio.com ಗೆ ಹೋಗಿ, ಭಾವಗೀತೆ ವಿಭಾಗದಲ್ಲಿ ’ಶ್ರಾವಣ’ ವಿಭಾಗದ ಮೇಲೆ ಕ್ಲಿಕ್‌ ಮಾಡಿ. ಅಲ್ಲಿ ನಿಮಗೆ ಈ ಹಾಡು ಸಿಗುತ್ತದೆ)

ಶ್ರಾವಣಾ ಬಂತು ಕಾಡಿಗೆ| ಬಂತು ನಾಡಿಗೆ|


ಬಂತು ಬೀಡಿಗೆ| ಶ್ರಾವಣಾ ಬಂತು || ಪಲ್ಲವಿ ||

ಕಡಲಿಗೆ ಬಂತು ಶ್ರಾವಣಾ| ಕುಣಿಧ್ಹಾಂಗ ರಾವಣಾ|
ಕುಣಿದಾವ ಗಾಳಿ| ಭೈರವನ ರೂಪತಾಳಿ || ಅನುಪಲ್ಲವಿ ||

ಶ್ರಾವಣಾ ಬಂತು ಘಟ್ಟಕ್ಕ| ರಾಜ್ಯಪಟ್ಟಕ್ಕ|
ಬಾನು ಮಟ್ಟಕ್ಕ|
ಏರ್ಯಾವ ಮುಗಿಲು| ರವಿ ಕಾಣೆ ಹಾಡೆಹಗಲು|

ಶ್ರಾವಣಾ ಬಂತು ಹೊಳಿಗಳಿಗೆ| ಅದೆ ಶುಭಗಳಿಗೆ|
ಹೊಳಿಗೆ ಮತ್ತ ಮಳಿಗೆ|
ಆಗ್ಯೇದ ಲಗ್ನ| ಅದರಾಗ ಭೂಮಿ ಮಗ್ನ||

ಶ್ರಾವಣಾ ಬಂತು ಊರಿಗೆ| ಕೆರಿ ಕೇರಿಗೆ|
ಹೊಡೆದ ಝೂರಿಗೆ|
ಜೋಕಾಲಿ ಏರಿ| ಅಡರ್ಯಾವ ಮರಕ ಹಾರಿ|

ಶ್ರಾವಣಾ ಬಂತು ಮನಿಮನಿಗೆ| ಕೂಡಿ ದನಿದನಿಗೆ|
ಮನದ ನನಿಕೊನಿಕೊನಿಗೆ|
ಒಡೆದಾವ ಹಾಡೂ| ರಸ ಉಕ್ಕತಾವ ನೋಡು||
ಶ್ರಾವಣಾ ಬಂತು.

ಬೆಟ್ಟ ತೊಟ್ಟಾವ ಕುತನಿಯ ಅಂಗಿ|
ಹಸಿರು ನೋಡ ತಂಗಿ|
ಹೊರಟಾವೆಲ್ಲೊ ಜಂಗಿ|
ಜಾತ್ರಿಗೇನೋ| ನೆರೆದsದ ಇಲ್ಲೆ ತಾನೋ||

ಬನಬನ ನೋಡು ಈಗ ಹ್ಯಾಂಗ|
ಮದುವಿ ಮಗನ್ಹಾಂಗ
ತಲಿಗೆ ಬಾಸಿಂಗ|
ಕಟ್ಟಿಕೊಂಡೂ| ನಿಂತಾವ ಹರ್ಷಗೊಂಡು||

ಹಸಿರುಟ್ಟು ಬಸುರಿಯ ಹಾಂಗ|
ನೆಲಾ ಹೊಲಾ ಹ್ಯಾಂಗ|
ಅರಿಸಿನಾ ಒಡೆಧಾಂಗ|
ಹೊಮ್ಮತಾವ| ಬಂಗಾರ ಚಿಮ್ಮತಾವ||

ಗುಡ್ಡ ದುಡ್ಡ ಸ್ಥಾವರಲಿಂಗ|
ಅವಕ ಅಭ್ಯಂಗ|
ಎರಿತಾವನ್ನೊ ಹಾಂಗ|
ಕೂಡ್ಯಾವ ಮೋಡ| ಸುತ್ತೆಲ್ಲ ನೋಡ ನೋಡ||

ನಾಡೆಲ್ಲ ಏರಿಯ ವಾರಿ||
ಹರಿತಾವ ಝರಿ|
ಹಾಲಿನ ತೊರಿ|
ಈಗ ಯಾಕ| ನೆಲಕೆಲ್ಲ ಕುಡಿಸಲಾಕ||
ಶ್ರಾವಣಾ ಬಂತು.

ಜಗದ್ಗುರು ಹುಟ್ಟಿದ ಮಾಸ|
ಕಟ್ಟಿ ನೂರು ವೇಷ|
ಕೊಟ್ಟ ಸಂತೋಷ|
ಕುಣಿತದ ತಾನsದ ದಣಿತದ|

ಶ್ರಾವಣಾ ಬಂತು ಕಾಡಿಗೆ| ಬಂತು ನಾಡಿಗೆ|
ಬಂತು ಬೀಡಿಗೆ| ಶ್ರಾವಣಾ ಬಂತು||

ಚೆನ್ನಾಗಿದೆ ಅಲ್ವ?

- ಚಾಮರಾಜ ಸವಡಿ

ಇದೇನು ಮಾಡಲು ಹೊರಟಿದ್ದೀರಾ ’ಮುಖ್ಯಮಂತ್ರಿ’ ಚಂದ್ರು?

0 ಪ್ರತಿಕ್ರಿಯೆ

ಕನ್ನಡ ವಿಕಿಪೀಡಿಯಾ ಮಾಡಲು ಸರ್ಕಾರ ಮುಂದಾಗಿದೆ.

ಇಂಥದೊಂದು ಯೋಜನೆ ಬಗ್ಗೆ ಬಿ.ಎಸ್‌. ಯಡಿಯೂರಪ್ಪನವರು ತಮ್ಮ ಎರಡನೇ ಬಜೆಟ್‌ನಲ್ಲಿ ಘೋಷಿಸಿದಾಗಲೇ ನಗೆ ಬಂದಿತ್ತು. ಬಹುಶಃ ಇದೊಂದು ಮೂರ್ಖತನದ ಸಂಗತಿ ಎಂದು ಅವರಿಗೆ ಯಾರಾದರೂ ಮನವರಿಕೆ ಮಾಡಿಕೊಡಬಹುದು ಎಂಬ ನಿರೀಕ್ಷೆಯಿಂದ ಈ ಕುರಿತು ಬರೆಯಲು ಹೋಗಿದ್ದಿಲ್ಲ. ಆದರೆ, ಆಗಸ್ಟ್‌ ೬ನೇ ತಾರೀಖಿನಂದು ಈ ಕುರಿತಂತೆ ವಿಧಾನಸೌಧದಲ್ಲಿ ಸಭೆಯೊಂದು ನಡೆದೇಬಿಟ್ಟಿದೆ. ಆ ಕುರಿತು ಬಹುತೇಕ ಪತ್ರಿಕೆಗಳಲ್ಲಿ ತಪ್ಪುತಪ್ಪು ಮಾಹಿತಿಯುಳ್ಳ ವರದಿಯೂ ಅಚ್ಚಾಗಿದೆ. ಹೀಗಾಗಿ ಅರ್ಜೆಂಟಾಗಿ ಬರೆಯುವ ಅನಿವಾರ್ಯತೆ ಬಂದಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ’ಮುಖ್ಯಮಂತ್ರಿ’ ಚಂದ್ರು ತಿಳಿಯದೇ ಮಾಡುತ್ತಿದ್ದಾರೋ ಅಥವಾ ಪಕ್ಕಾ ಸರ್ಕಾರಿ ಶೈಲಿಯಲ್ಲಿ ಕೆಲಸ ಮಾಡಲು ಮುಂದಾಗಿದ್ದಾರೋ ಗೊತ್ತಿಲ್ಲ- ಕನ್ನಡ ವಿಕಿಪೀಡಿಯಾ ಮಾಡಲು ಹೊರಟಿರುವುದು ಮಾತ್ರ ಅಪ್ಪಟ ಮೂರ್ಖತನ. ಇದು ಹೇಗಿದೆಯಂದರೆ, ಒಬ್ಬ ಯಡಿಯೂರಪ್ಪ ಇದ್ದಾಗಲೇ, ಡುಪ್ಲಿಕೇಟ್‌ ಯಡಿಯೂರಪ್ಪನವರ ನಿರ್ಮಾಣಕ್ಕೆ ದುಡ್ಡು ಖರ್ಚು ಮಾಡಲು ಹೊರಟಂತೆ.

ಏಕೆಂದರೆ, ಕನ್ನಡ ವಿಕಿಪೀಡಿಯಾ ಈಗಾಗಲೇ ಇದೆ. ಸರ್ಕಾರದ ದುಡ್ಡು ನೆಚ್ಚಿಕೊಳ್ಳದೇ ಸರಿಸುಮಾರು ಆರೂವರೆ ಸಾವಿರ ಲೇಖನಗಳನ್ನು ಹಲವಾರು ಉತ್ಸಾಹಿ ಕನ್ನಡಿಗರು ಕನ್ನಡ ವಿಕಿಪೀಡಿಯಾ ಭಂಡಾರಕ್ಕೆ ಸೇರಿಸಿದ್ದಾರೆ. ಯಾವುದೇ ಫಲಾಪೇಕ್ಷೆ ಇಲ್ಲದೇ, ಯಾವುದೇ ಘೋಷಣೆ ಕೂಗದೇ ಕನ್ನಡ ಮಾಹಿತಿ ಭಂಡಾರ ಬೆಳೆಸುವ ಕೆಲಸವನ್ನು ಕಳೆದ ನಾಲ್ಕೈದು ವರ್ಷಗಳಿಂದ ಅವರು ಸದ್ದಿಲ್ಲದೇ ಮಾಡುತ್ತಲೇ ಇದ್ದಾರೆ. ಹೀಗಿರುವಾಗ, ಇದೇನಿದು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಡುಪ್ಲಿಕೇಟ್‌ ಕೆಲಸಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು?

ಸರ್ಕಾರದ ವೆಬ್‌ಸೈಟ್‌ಗಳು ಮೊದಲೇ ಕುರಿದೊಡ್ಡಿಗಳಂತಿವೆ. ಅಲ್ಲಿ ಯಾವ ಮಾಹಿತಿಯೂ ಸರಿಯಾಗಿ ಸಿಗುವುದಿಲ್ಲ. ಆ ವೆಬ್‌ಸೈಟ್‌ಗಳು ನೋಡುವಂತಿರುವುದಿಲ್ಲ. ಉಸ್ತುವಾರಿ ನೋಡಿಕೊಳ್ಳದ ಬಿಬಿಎಂಪಿ ಪಾರ್ಕ್‌‌ಗಳಂತಿರುವ ಈ ವೆಬ್‌ಸೈಟ್‌ಗಳನ್ನು ಅನಿವಾರ್ಯ ಕರ್ಮಕ್ಕಷ್ಟೇ ನೋಡಬೇಕು. ಹೀಗಿರುವಾಗ, ದುಡ್ಡು ಖರ್ಚು ಮಾಡಿ ಈಗಾಗಲೇ ಇರುವ ವಿಕಿಪೀಡಿಯಾ ಮಾದರಿಯಲ್ಲೇ ಇನ್ನೊಂದನ್ನು ನಿರ್ಮಿಸುತ್ತೇನೆಂದು ಸರ್ಕಾರ ಹೊರಟರೆ ಇಡೀ ಉದ್ದೇಶವನ್ನೇ ಅನುಮಾನದಿಂದ ನೋಡಬೇಕಾಗುತ್ತದೆ.

ಈಗಾಗಲೇ ೨ ಕೋಟಿ ರೂಪಾಯಿ ಹಣವನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಇದು ಶುರುವಷ್ಟೇ. ಪ್ರತಿ ಬಜೆಟ್‌ನಲ್ಲಿ ಇದಕ್ಕಾಗಿ ಹಣ ನಿಗದಿ ಮಾಡಿಸಿಕೊಳ್ಳುವುದು ಕಷ್ಟದ ಸಂಗತಿಯೇನಲ್ಲ. ಕನ್ನಡದ ಹೆಸರಿನಲ್ಲಿ ಇಷ್ಟೂ ಹಣ ಕೊಡದಿದ್ದರೆ ಹೇಗೆ? ಪ್ರಶ್ನೆ ಏನೆಂದರೆ, ಈಗಾಗಲೇ ಚೆನ್ನಾಗಿರುವ, ಹಾಗೂ ಪ್ರಯತ್ನಪಟ್ಟರೆ ಇನ್ನೂ ಚೆನ್ನಾಗಿ ಮಾಡಬಹುದಾದ ಕನ್ನಡ ವಿಕಿಪೀಡಿಯಾದ ಕಳಪೆ ಡುಪ್ಲಿಕೇಟ್‌ ನಿರ್ಮಾಣಕ್ಕೆ ಸರ್ಕಾರ ಹಣ ಸುರಿಯಬೇಕಾ? ವಿಕಿಪೀಡಿಯಾ ಹೆಸರಿನಲ್ಲಿ ವಿಧಾನಸೌಧದಲ್ಲಿ ಸರ್ಕಾರಿ ಖರ್ಚಿನಲ್ಲಿ ಸಮಾರಾಧನೆಗಳು ನಡೆಯಬೇಕಾ? ಇದೇ ದುಡ್ಡನ್ನು ಕನ್ನಡ ಫಾಂಟ್‌ಗಳ ಅಭಿವೃದ್ಧಿಗೂ ಅಥವಾ ಇನ್ಯಾವುದಾದರೂ ಉಪಯುಕ್ತ ಕೆಲಸಕ್ಕೆ ಬಳಸಬಹುದಲ್ಲ? ಅಥವಾ ಈಗಾಗಲೇ ಇರುವ ವಿಕಿಪೀಡಿಯಾಕ್ಕೇ ಪ್ರೋತ್ಸಾಹಧನವಾಗಿ ನೀಡಬಹುದಲ್ಲ?

ಸರ್ಕಾರ ಯಾವುದೇ ಕೆಲಸ ಮಾಡಿದರೂ ಅದನ್ನು ದುಬಾರಿಯಾಗಿ ಹಾಗೂ ಕಳಪೆಯಾಗಿ ಮಾಡುತ್ತದೆ ಎಂಬುದು ಹಳೆಯ ಗಾದೆ ಮಾತು. ಅದಕ್ಕೆ ಕನ್ನಡ ವಿಕಿಪೀಡಿಯಾ ನಿರ್ಮಾಣ ಪ್ರಯತ್ನ ಹೊಸ ಉದಾಹರಣೆ. ’ಮುಖ್ಯಮಂತ್ರಿ’ ಚಂದ್ರು ಕಾಮನ್‌ಸೆನ್ಸ್‌ ಬಳಸಿ ವಿಚಾರ ಮಾಡಲಿ. ಅಂತರ್ಜಾಲದಲ್ಲಿ ಕನ್ನಡ ಬೆಳೆಸುವ ಪ್ರಯತ್ನವನ್ನು ಸಾವಿರಾರು ಜನ ಯಾವುದೇ ಲಾಭಾಪೇಕ್ಷೆ ಇಲ್ಲದೇ ಈಗಾಗಲೇ ಕೆಲಸ ಮಾಡುತ್ತಿದ್ದಾರೆ. ಇಂಥ ಪ್ರಯತ್ನಗಳಿಗೆ ಸ್ಪಂದಿಸುವದನ್ನು ಸರ್ಕಾರ ಪ್ರಾರಂಭಿಸಲಿ. ಅಂತರ್ಜಾಲದಲ್ಲಿ ಬಳಸಲು ಸಾಧ್ಯವಾಗುವಂತೆ ಕನ್ನಡದಲ್ಲಿ ಉತ್ತಮ ಫಾಂಟ್‌ಗಳನ್ನು ಅಭಿವೃದ್ಧಿಪಡಿಸಲು ಮುಂದಾಗಲಿ. ’ನುಡಿ’ ಎಂಬ ಕೆಟ್ಟ ಕನ್ನಡ ತಂತ್ರಾಂಶವನ್ನು ಅಂತರ್ಜಾಲ ಹಾಗೂ ಬಳಕೆದಾರಸ್ನೇಹಿಯಾಗುವಂತೆ ರೂಪಿಸಲಿ. ಅದು ಬಿಟ್ಟು, ಡುಪ್ಲಿಕೇಟ್‌ ಕೆಲಸ ಮಾಡಲು ಮುಂದಾದರೆ ಸರ್ಕಾರದ ಕನ್ನಡಪರ ಕೆಲಸಗಳನ್ನೇ ಅನುಮಾನದಿಂದ ನೋಡುವಂತಾಗುತ್ತದೆ.

ಈ ’ಮುಖ್ಯಮಂತ್ರಿ’ ಚಂದ್ರು ಹಾಗೂ ಆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ಈ ಬಗ್ಗೆ ಒಂಚೂರು ಗಮನ ಹರಿಸಲಿ.

- ಚಾಮರಾಜ ಸವಡಿ