ಎಲೆ ಕವಿತೆ, ಎಲ್ಲಿ ಅವಿತೆ?

24 Aug 2009

ಒಂದು ಕವಿತೆ ಬರೆಯಲು ಕೂತೆ

ಗಡಿಯಾರ ಸುಮ್ಮನಾಯಿತು
ಅರಳಬೇಕಿದ್ದ ಹೂಗಳು, ರಾತ್ರಿಯ
ಸದ್ದುಗಳು ಸುಮ್ಮನಾದವು
ಹುಳು ಹಿಡಿಯಲು ಹೊಂಚು ಹಾಕಿದ್ದ
ಗೋಡೆಯ ಮೇಲಿನ ಹಲ್ಲಿಯೂ ಸುಮ್ಮನಾಯಿತು

ಅಲೆಯಾಗುತ್ತಿದ್ದ ಸಂಗೀತ ಮೌನವಾಯಿತು
ಷೆಲ್ಫ್‌ನಲ್ಲಿ ಕೂತ ಕವಿಗಳು ಕಿವಿಯಾದರು
ಎದೆಯಲ್ಲಿದ್ದ ಸಾವಿರಾರು ಭಾವನೆಗಳು
ಭೋರ್ಗರೆಯಲು ಪಾಳಿ ಹಚ್ಚಿದವು

ಕಂಬನಿಯಾದ ಕನಸುಗಳು
ಮಾತೇ ಆಗದ ಪಿಸುಮಾತುಗಳು
ನಾಳೆ ಖಂಡಿತ ಅಂದುಕೊಂಡ
ನಿನ್ನೆಯ ಹಳವಂಡಗಳು
ನಾ ಮುಂದು, ತಾ ಮುಂದು
ಎಂದು ಒಂದೇ ಸಮ ನುಗ್ಗಿದವು

ಕಕ್ಕಾವಿಕ್ಕಿಯಾಯಿತು ಕೀಲಿಮಣೆ
ತಡವರಿಸಿದವು ಬೆರಳುಗಳು
ಮಾನಿಟರೂ ಬೆಚ್ಚಿಬಿದ್ದಂತಿತ್ತು
ಸಮಸ್ತ ಕವಿಗಳಾಣೆ, ದಾರ್ಶನಿಕರಾಣೆ
ಅನುಭಾವಿಗಳಾಣೆ, ಚೇತನಗಳಾಣೆ
ಇವು ಸತ್ಯ, ಇವು ನಿತ್ಯ
ಹೊರಬರಲು ಹಂಬಲಿಸಿದ್ದವು
ಕುದಿಯಾಗಿದ್ದವು, ತಿದಿಯೊತ್ತಿದ್ದವು
ಬೆರಳುಗಳ ಭವ ಹರಿದು
ಹಾಳೆ, ಪರದೆಗಳ ಬಂಧನ ತೊರೆದು
ಹಾಡಾಗಲು ಹಾತೊರೆದಿದ್ದವು-

ಏನೇ ಅಂದುಕೊಂಡರೂ,
ಎಷ್ಟೇ ಅಂಗಲಾಚಿದರೂ
ಕವಿತೆ ಏಕೋ ಕನಸ ಕನ್ನಡಿಯಾಗಲಿಲ್ಲ
ಮೂಡಲಿಲ್ಲ, ಅರಳಲಿಲ್ಲ, ಭೋರ್ಗರೆಯಲಿಲ್ಲ
ಮೊದಲ ಸಂಗಮದ ಕನ್ಯೆಯಂತೆ
ಮುದುಡಿತ್ತು, ನಲುಗಿತ್ತು, ಹಸಿದಿತ್ತು
ಚಿಮ್ಮಿ ಬರುವ ಮೊದಲೇ ಕುಸಿದಿತ್ತು

***

‘ಆಯ್ತಾ ಕವಿತೆ ಬರೆದಿದ್ದು?’
ಎಂದು ಕೇಳುತ್ತ ನನ್ನವಳು ಒಳಬರುತ್ತಲೇ
ನಾಚಿ ಕಿಟಕಿಯಿಂದಾಚೆ ಹಾರಿಹೋಯಿತ್ತು.

- ಚಾಮರಾಜ ಸವಡಿ

4 comments:

ತೇಜಸ್ವಿನಿ ಹೆಗಡೆ- said...

ಕವಿತೆಯನ್ನು ಹುಡುಕುತ್ತಾ ಒಂದು ಸುಂದರ ಕವಿತೆಯನ್ನೇ ಬರೆದಿರುವಿರಿ. ಚೆನ್ನಾಗಿದೆ.

Chamaraj Savadi said...

ಥ್ಯಾಂಕ್ಸ್ ತೇಜಸ್ವಿನಿ.

ಆಲಾಪಿನಿ said...

ಬ್ಯಾಲೆನ್ಸ್‌ ಆಗಿ ಬಂದ ಕವನ...ಚೆನ್ನಾಗಿದೆ

Chamaraj Savadi said...

ಒಮ್ಮೊಮ್ಮೆ ಬ್ಯಾಲೆನ್ಸ್ ತಪ್ಪಿದಾಗ ಇಂಥ ಕವಿತೆಗಳು ಬರುವುದುಂಟು :)