ಹೋಗಿ ಬನ್ನಿ ಕಲಾಂ ಸಾರ್

27 Jul 2015

0 ಪ್ರತಿಕ್ರಿಯೆ
ಕೆಲವೊಂದು ಸಾವುಗಳೇ ಹಾಗೆ. ತೀರಾ ಅನಿರೀಕ್ಷಿತವಾಗಿರುತ್ತವೆ. ಹೀಗಾಗಿ, ಹೆಚ್ಚು ದುಃಖ ತರುತ್ತವೆ. ಸಾವು ನಿರೀಕ್ಷಿತ ಎಂಬ ಭಾವನೆಯೊಂದಿಗೆ ನಿತ್ಯ ಬದುಕುವವರಿಗೂ, ಕೆಲವರ ಸಾವು ತಕ್ಷಣ ಜೀರ್ಣಿಸಿಕೊಳ್ಳಲು ಆಗುವುದಿಲ್ಲ.
ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಅನಿರೀಕ್ಷಿತ ನಿರ್ಗಮನ ಅಂಥದು.

ಕಲಾಂ ಎಂದರೆ ನೆನಪಾಗುವುದು ಸರಳತೆ. ಮೇಲೇರಿದವ ಚಿಕ್ಕವನಿರಬೇಕೆಂಬ ಕವಿಮಾತಿಗೆ ನಿದರ್ಶನ. ಶಾಲೆ-ಕಾಲೇಜುಗಳ ಕಾರ್ಯಕ್ರಮಕ್ಕೆ ಆದ್ಯತೆ ಮೇಲೆ ಹೋಗುತ್ತಿದ್ದ ಈ ವಿಜ್ಞಾನಿ ಮಕ್ಕಳೊಂದಿಗೆ ಬೆರೆಯುತ್ತಿದ್ದ ಬಗೆ ನಿಜಕ್ಕೂ ಅಚ್ಚರಿ ಹುಟ್ಟಿಸುವಂಥದು. ಒಂದೇ ಒಂದು ಪುಟ್ಟ ಬಡ್ತಿಗೂ ಹುಚ್ಚರಂತೆ ಆಡುವವರ ಮಧ್ಯೆ, ಅಷ್ಟೆಲ್ಲ ಎತ್ತರ ಏರಿಯೂ ಮಕ್ಕಳ ಮಟ್ಟಕ್ಕೆ ಇಳಿದು ಬೆರೆಯುತ್ತಿದ್ದ ಕಲಾಂ ನಿಜಕ್ಕೂ ಅಪರೂಪದ ವ್ಯಕ್ತಿ.

ಅವರಲ್ಲಿ ವಿಜ್ಞಾನದ ಬಗ್ಗೆ ಅಚ್ಚರಿ, ಕುತೂಹಲ, ಪ್ರೀತಿ ಹಾಗೂ ವಿಪರೀತ ಆಕರ್ಷಣೆ ಇತ್ತು. ರಾಷ್ಟ್ರಪತಿಯಾಗಿದ್ದು ಅನಿರೀಕ್ಷಿತವಾಗಿ. ಐದು ವರ್ಷ ಆ ಹುದ್ದೆಯಲ್ಲಿದ್ದ ಅವರಿಗೂ ಒಂಚೂರು ಮೋಹ ಬೆಳೆದಿತ್ತು. ಹೀಗಾಗಿ, ಎರಡನೇ ಅವಧಿಗೂ ಮುಂದುವರಿಯುವ ಇಚ್ಛೆ ವ್ಯಕ್ತಪಡಿಸಿದರು. ಆದರೆ, ಯುಪಿಎ ಸರ್ಕಾರಕ್ಕೆ ಅವರು ಬೇಡವಾಗಿದ್ದರು. ಕೊಂಚ ಬೇಸರದಿಂದಲೇ ರಾಷ್ಟ್ರಪತಿ ಭವನದಿಂದ ನಿರ್ಗಮನಿಸಿದ ಕಲಾಂ ಹೋಗಿ ನಿಂತಿದ್ದು ಮಕ್ಕಳ ಬಳಿ.

ನಿಜವಾದ ಕಲಾಂ ಹೊಮ್ಮಿದ್ದು ಅಲ್ಲಿಯೇ. ರಾಷ್ಟ್ರಪತಿ ಭವನದ ಎತ್ತರದಲ್ಲಿ ಎದ್ದು ಕಾಣುತ್ತಿದ್ದ ಅವರ ಸರಳತೆಗಿಂತ, ಮಕ್ಕಳ ಜೊತೆ ಬೆಳೆದ ಅವರ ಸರಳತೆ ಹೆಚ್ಚು ಸೆಳೆಯುತ್ತಿತ್ತು. ವಿಜ್ಞಾನವನ್ನು ಮಕ್ಕಳ ಮನಸ್ಸಿನಲ್ಲಿ ತುಂಬಿದರು. ಹೊಸದನ್ನು ಶೋಧಿಸುವ ಹುಚ್ಚನ್ನು ಬೆಳೆಸಿದರು. ರಾಷ್ಟ್ರಪತಿಯಾಗಿ ಮಾಡದ, ಮಾಡಲು ಆಗದ ಕೆಲಸಗಳನ್ನು ಮಾಜಿಯಾದ ನಂತರ ಖುಷಿಯಿಂದ ಮಾಡಿಕೊಂಡು ಬಂದರು ಕಲಾಂ.

ಕಲಾಂ ಸಾವಿನ ಸುದ್ದಿ ಓದುತ್ತ ನನಗೆ ಬಾಲ್ಯದ ಕೆಲವು ಕನಸುಗಳು ನೆನಪಾಗುತ್ತವೆ. ಕಲಿಸಿದ ಶಿಕ್ಷಕರು, ಗೆಳೆಯರು ನೆನಪಾಗುತ್ತಾರೆ. ಒಬ್ಬನೇ ವ್ಯಕ್ತಿಯ ಸಣ್ಣ ತಾಳ್ಮೆ, ತ್ಯಾಗ, ನೆರವು ಜೀವನಪರ್ಯಂತೆ ಅದ್ಹೇಗೆ ಪೊರೆಯುತ್ತ ಹೋಗುತ್ತದೆ ಎಂಬುದನ್ನು ನೆನೆದರೆ ಅಚ್ಚರಿಯಾಗುತ್ತದೆ. ಇಂಥ ಸುಂದರ, ಸ್ನಿಗ್ಧ ಬಾಲ್ಯಕ್ಕೆ ಕಲಾಂರಂಥ ದೈತ್ಯ ವ್ಯಕ್ತಿ ಬಂದಾಗ, ಅದನ್ನು ಅನುಭವಿಸಿದ ಮಕ್ಕಳ ಮನಸ್ಸು ಅದೆಂಥ ಸ್ಪೂರ್ತಿ ಪಡೆಯಲಿಕ್ಕಿಲ್ಲ?

ಚಾಚಾ ನೆಹರು ಎಂದು ನಮಗೆಲ್ಲ ಹೇಳಿಕೊಟ್ಟ ಭಾರತದ ಮಾಜಿ ಪ್ರಧಾನಿ ಮಕ್ಕಳಿಗೆ ನಿಜಕ್ಕೂ ಏನೂ ಮಾಡಲಿಲ್ಲ. ಆದರೆ, ಅಂಥ ಬೂಟಾಟಿಕೆಯೇನೂ ಮಾಡದ ಕಲಾಂ, ಮಕ್ಕಳ ಮನಸ್ಸಿನಲ್ಲಿ ಮೂಡಿಸಿದ ಪ್ರಭಾವ ನಿಜಕ್ಕೂ ಅಗಾಧ. ಬಹುಶಃ 2020 (ಪುರ) ಯೋಜನೆಯನ್ನು ರೂಪಿಸುವ ಸಮಯದಲ್ಲಿ ಕಲಾಂ ಅವರ ಮನಸ್ಸಿನಲ್ಲಿ ಮಕ್ಕಳೇ ಇದ್ದಿರಬೇಕು. ಏಕೆಂದರೆ, ಮಕ್ಕಳಂಥ ಹುಲುಸಾದ ಭೂಮಿಯಲ್ಲಿ ಮಾತ್ರ ಕನಸುಗಳನ್ನು ಬಿತ್ತಲು ಸಾಧ್ಯ. ಬೆಳೆಸಲು ಸಾಧ್ಯ.

ಆ ಕೆಲಸವನ್ನು ಕಲಾಂ ಅದ್ಭುತವಾಗಿ ಮಾಡಿಹೋಗಿದ್ದಾರೆ. ಅವರು ರೂಪಿಸಿದ ಕ್ಷಿಪಣಿಗಳಿಗಿಂತ ಎತ್ತರಕ್ಕೆ ಈ ಕನಸುಗಳು ಹೋಗಲಿವೆ. ಒಬ್ಬ ವ್ಯಕ್ತಿಯ ನಿಜವಾದ ಕೊಡುಗೆ ಇದು.

ಈ ಕಾರಣಕ್ಕಾಗಿ ಬಹುಕಾಲ ನೆನಪಿನಲ್ಲಿರುತ್ತಾರೆ ಕಲಾಂ.

ಅಷ್ಟೇ ಅಲ್ಲ, ಅವರ ಮುಗ್ಧತೆ, ತಿಳಿವಳಿಕೆ, ವಿನಯವಂತಿಕೆ, ಸರಳತೆ, ಏನನ್ನೂ ಇಟ್ಟುಕೊಳ್ಳದೇ ಎಲ್ಲವನ್ನೂ ಹೊಂದುವಂಥ ವ್ಯಕ್ತಿತ್ವ ತುಂಬ ಕಾಲ ಮನಸ್ಸಿನಲ್ಲಿರುತ್ತದೆ.

ಹೋಗಿ ಬನ್ನಿ ಕಲಾಂ ಸಾರ್.

- ಚಾಮರಾಜ ಸವಡಿ