ಮನೆ ಎಂಬ ಕನಸುಗಳ ಹುತ್ತ

29 Dec 2008

0 ಪ್ರತಿಕ್ರಿಯೆ

ಹೊರಗೆ ಲಾರಿಯವ ಹಾರ್ನ್‌ ಹಾಕಿದ.

’ಬಂದೆ ಮಾರಾಯಾ...’ ಎಂದು ಮನೆಯೊಳಗಿಂದ ಕೂಗು ಹಾಕಿ ಒಮ್ಮೆ ಮನೆಯನ್ನು ಸುಮ್ಮನೇ ನೋಡಿದೆ.

ಇಲ್ಲೇ ಅಲ್ಲವಾ ನಾವು, ಅಂದರೆ ರೇಖಾ ಮತ್ತು ನಾನು, ನೂರೆಂಟು ಕನಸುಗಳನ್ನು ಕಂಡಿದ್ದು. ಅದರಲ್ಲಿ ಕೆಲಸ ಬದಲಿಸುವ ಒಂದು ಕನಸು ನನಸಾಗಿತ್ತು. ಮಗಳು ಗೌರಿಗೆ ವಿಶೇಷ ಶಾಲೆ ಹುಡುಕುವ ಇನ್ನೊಂದು ಕನಸೂ ನೆರವೇರಿತ್ತು. ಉಳಿದವು ಕನಸಾಗಿಯೇ ಉಳಿದಿವೆ. ದಿನಾ ಹೊಸ ಭಾವನೆಗಳಿಗೆ ಕಾವು ಕೊಡುತ್ತಿವೆ.

ದಿಟ್ಟಿಸಿ ನೋಡಿದೆ. ಇಲ್ಲಿ ಹಾಕಿದ್ದ ದಿವಾನ್‌ ಮೇಲೆ ಕೂತು ಗೌರಿ ತನಗಿಷ್ಟವಾದ ಉದಯ ಟಿವಿಯವರ ಯು೨ ಟಿವಿ ನೋಡುತ್ತಿದ್ದುದು. ಇಲ್ಲೇ ಅಲ್ಲವಾ ಸಣ್ಣ ಮಗಳು ನಿಧಿ ಆಟವಾಡುತ್ತಿದ್ದುದು. ಈ ಚಿಕ್ಕ ಗೂಡಿನಲ್ಲಿ ಕೂತು ನಮ್ಮತ್ತ ನೋಡಿ ಕೇಕೆ ಹಾಕುತ್ತಿದ್ದುದು. ನಾವು ದಿನಾ ಮುಂಜಾನೆಯ ವಾಕ್‌ ಮುಗಿಸಿ ಇಲ್ಲೇ ಅಲ್ಲವಾ ಚಹ ಕುಡಿಯುತ್ತಿದ್ದುದು. ದೊಡ್ಡ ಬೆಡ್‌ ರೂಮ್‌ ತುಂಬ ಹುಡುಗಿಯರಿಬ್ಬರೂ ಹರವಿ ಹಾಕುತ್ತಿದ್ದ ಆಟಿಕೆ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತಿದ್ದವು. ಹಾಸಿಗೆ ಎಳೆದಾಡಿ ಅಸ್ತವ್ಯಸ್ತ ಮಾಡಿರುತ್ತಿದ್ದರು. ಛಕ್ಕನೇ ಯಾರಾದರೂ ಬೆಡ್‌ ರೂಮಿಗೆ ನುಗ್ಗಿದರೆ ಮುಸಿಮುಸಿ ನಗುತ್ತ ಹೊರಗೆ ಹೋಗಬೇಕು, ಹಾಗೆ ಮಾಡಿರುತ್ತಿದ್ದರು ಹಾಸಿಗೆಯನ್ನು. ಅರೆಕ್ಷಣ ಅವನ್ನೆಲ್ಲ ಮತ್ತೆ ಕಣ್ಣು ತುಂಬಿಕೊಂಡೆ.

ನನ್ನದು ಅಂತ ಮಾಡಿಕೊಂಡಿದ್ದ, ಒಂದರ್ಥದಲ್ಲಿ ಸ್ಟೋರ್‌ರೂಮ್‌ ಕೂಡಾ ಆಗಿದ್ದ ರೂಮಿನಲ್ಲಿ ಕಂಪ್ಯೂಟರ್‌ ಇಡುವ ಜಾಗವನ್ನು ತುಂಬ ಹೊತ್ತು ನೋಡಿದೆ. ಎಷ್ಟೊಂದು ಕನಸುಗಳು ಇಲ್ಲಿ ಅಕ್ಷರಗಳಾಗಿ ರೂಪುಗೊಂಡಿದ್ದವು. ಮೊದಲ ಸಲ ಹೊಸ ಕಂಪ್ಯೂಟರ್‌ ಕೊಂಡಾಗಿನ ಖುಷಿ, ಅದರ ದೂಳು ಒರೆಸುವ ಉಮೇದು, ಮೊದಲ ಸಲ ಇಂಟರ್‌ನೆಟ್‌ ಬಂದಾಗಿನ ಸಡಗರ, ರೇಖಾಳಿಗೆ ಅದರ ಸೊಗಡನ್ನು ಬಣ್ಣಿಸಿ ಹೇಳಿದ್ದು, ನನಗೆ ಖುಷಿ ಕೊಟ್ಟ ಹಲವಾರು ಬರಹಗಳನ್ನು ಇಲ್ಲಿ ಕೂತು ಬರೆದಿದ್ದು, ನನ್ನ ನಿಜವಾದ ಕ್ರಿಯಾಶೀಲತೆ ಬರವಣಿಗೆಯಲ್ಲೇ ಇರುವುದು ಎಂದು ಪದೆ ಪದೆ ಅಂದುಕೊಂಡಿದ್ದು, ಅಲ್ಲಿ ಕೂತು ಓದಿದ ಹಲವಾರು ಪುಸ್ತಕಗಳು, ಅವು ಹುಟ್ಟಿಸಿದ ಕನಸುಗಳು ಹಾಗೂ ಉದಾತ್ತ ಭಾವನೆಗಳು ಮತ್ತೆ ಕಣ್ಣ ಮುಂದೆ ಸುಳಿದವು.

ಅಡುಗೆ ಮನೆ ಖಾಲಿಖಾಲಿ. ಆಯುರ್ವೇದ ವೈದ್ಯರು ಗೌರಿಗೆ ಕಠಿಣ ಪಥ್ಯ ಹೇಳಿದಾಗ ದೀಪಾವಳಿ ಆಚರಿಸದೇ ಸುಮ್ಮನಿದ್ದುದು, ಅಪರೂಪಕ್ಕೊಮ್ಮೆ ಗೆಳೆಯರು ಬಂದಾಗ ಮಾಡಿ ಬಡಿಸಿದ ಮಿರ್ಚಿ, ಮಂಡಾಳ ಒಗ್ಗರಣೆ, ರೇಖಾ ಆಸ್ಥೆಯಿಂದ ಜೋಡಿಸಿಡುತ್ತಿದ್ದ, ಒರೆಸಿ ಸ್ವಚ್ಛವಾಗಿಡುತ್ತಿದ್ದ ಪಾತ್ರೆಗಳಿದ್ದುದು, ಮಗಳ ಭವಿಷ್ಯ ನೆನೆದು ಕಣ್ಣೀರಿಟ್ಟಿದ್ದು ಇದೇ ಅಡುಗೆ ಮನೆಯಲ್ಲಿ ಅಲ್ಲವೆ? ತನಗಿಷ್ಟವಾದ ಅಡುಗೆ ಮಾಡುತ್ತ ಮಗ್ನಳಾಗುತ್ತಿದ್ದುದು ಇಲ್ಲೇ ತಾನೆ? ಇದೇ ಕಿಟಕಿಯಿಂದ ತಾನೆ ಓನರ್‌ ಆಂಟಿ ನಿಧಿಯನ್ನು ಕರೆಯುತ್ತಿದ್ದುದು? ಆಕೆ ಓಡುತ್ತ ಹಿತ್ತಲಿಗೆ ಧಾವಿಸುತ್ತಿದ್ದುದು? ಅಡುಗೆ ಮನೆಯನ್ನು ಮತ್ತೊಮ್ಮೆ ಕಣ್ಣು ತುಂಬಿಕೊಂಡೆ.

ಈಗ ಮನೆ ಬಿಡಬೇಕು. ಇಲ್ಲೇ ಶಾಶ್ವತವಾಗಿ ಇದ್ದುಬಿಡುತ್ತೇವೇನೋ ಎಂಬಂತೆ ಮನೆ ತುಂಬ ಜೋಡಿಸಿಟ್ಟಿದ್ದ ಸಾಮಾನುಗಳನ್ನೆಲ್ಲ ಕಳೆದ ಎರಡು ದಿನಗಳಿಂದ ಪ್ಯಾಕ್‌ ಮಾಡಿದ್ದಾಗಿತ್ತು. ಒಂದೊಂದು ಸಾಮಾನನ್ನು ಪ್ಯಾಕ್‌ ಮಾಡುವಾಗಲೂ ಅದು ನಮ್ಮ ಮನೆಯೊಳಗೆ ಬಂದ ರೀತಿ, ಅವನ್ನು ನಾವು ಸ್ವಾಗತಿಸಿದ ರೀತಿ, ಬಳಸಿ ಖುಷಿಪಟ್ಟ ವಿವರಗಳೆಲ್ಲ ಮತ್ತೆ ಮತ್ತೆ ಸುಳಿದವು. ಹೊರಗೆ ನಿಂತಿರುವ ಲಾರಿಯಲ್ಲಿ ನಮ್ಮೆಲ್ಲ ಕನಸುಗಳನ್ನು ಪ್ಯಾಕ್‌ ಮಾಡಿ ಹೇರಿಯಾಗಿದೆ. ಲಾರಿಯವ ಹಾರ್ನ್‌ ಹಾಕುತ್ತಿದ್ದಾನೆ. ಕೊನೆಯ ಸಲ ಇದು ನನ್ನ ಮನೆ ಅಂತ ಅಂದುಕೊಳ್ಳುವುದು. ಲಾರಿ ಹತ್ತಿದ ಮರುಕ್ಷಣದಿಂದ ಅದು ಇನ್ಯಾರದೋ ಮನೆಯಾಗಲಿದೆ. ಮತ್ಯಾರದೋ ಕನಸುಗಳಿಗೆ ವೇದಿಕೆಯಾಗಲಿದೆ.

ಇವತ್ತು ರಾತ್ರಿಯಿಂದ ಚಂದ್ರಾ ಲೇಔಟ್‌ನ ಮನೆ ನಮ್ಮ ಪಾಲಿಗೆ ಹೊಸ ಮನೆಯಾಗಲಿದೆ. ಹಳೆಯ ಕನಸುಗಳೊಂದಿಗೆ ಹೊಸ ಕನಸುಗಳಿಗೆ ವೇದಿಕೆಯಾಗಲಿದೆ. ಗೌರಿ ವಿಶೇಷ ಶಾಲೆಗೆ ಹೋಗುತ್ತಾಳೆ. ಅದಕ್ಕೆಂದೇ ಮನೆ ಬದಲಿಸುತ್ತಿದ್ದೇವೆ. ಅದರೊಂದಿಗೆ ಬದುಕೂ ಬದಲಾಗಲಿ. ಅವಳ ಬದುಕು ಬೆಳಗಲಿ ಎಂದು ದೂಳು ತುಂಬಿದ್ದ ಖಾಲಿ ಮನೆಯೊಳಗೆ ನಿಂತು ಅರೆಕ್ಷಣ ಪ್ರಾರ್ಥಿಸಿದೆ.

ಮನೆ ನನ್ನನ್ನೇ ಮೌನವಾಗಿ ದಿಟ್ಟಿಸಿತು. ಹೊರಗೆ ಚಳಿಗಾಲದ ಇಳಿ ಸಂಜೆ. ಮನೆಯೊಳಗೆ ಮಸುಕು ಬೆಳಕು. ಲೈಟ್‌ ಹಾಕಿದೆ. ಎಲ್ಲ ರೂಮಿನ ಲೈಟ್‌ಗಳನ್ನೂ ಹಾಕಿದೆ. ಬೋಳು ಮನೆ ಆರ್ತವಾಗಿ ದಿಟ್ಟಿಸಿದಂತಾಯಿತು. ಕಳೆದ ಒಂದು ವರ್ಷದಿಂದ ಅಲ್ಲಿ ಬೆಳೆಸಿಕೊಂಡ ಭಾವನೆಗಳು, ಸಂಬಂಧಗಳು ನೆನಪಿಗೆ ಬಂದು ಗಂಟಲು ಉಬ್ಬಿತು.

'ಬರುತ್ತೇನೆ ಮಿತ್ರಾ’ ಎಂದು ಮೌನವಾಗಿ ವಿದಾಯ ಹೇಳಿ ಹಿಂತಿರುಗಿ ಕೂಡ ನೋಡದೇ ಸರ ಸರ ನಡೆದು ಲಾರಿ ಹತ್ತಿದೆ. ಡ್ರೈವರ್‌ ಗೇರ್‌ ಬದಲಿಸಿದ. ಹಿಂದೆ ಸಾಮಾನುಗಳ ಮೇಲೆ ಕೂತಿದ್ದ ಸಹಾಯಕರು ’ರೈಟ್‌’ ಹೇಳಿದರು. ಲಾರಿ ಕುಲುಕುತ್ತಾ ಹೊರಟಿತು. ನಾನು ಕಣ್ಣು ಮುಚ್ಚಿಕೊಂಡು ಸೀಟ್‌ಗೆ ಒರಗಿದೆ.

ಮನಸ್ಸಿನ ತುಂಬ ನೆನಪುಗಳದೇ ದಿಬ್ಬಣ.

- ಚಾಮರಾಜ ಸವಡಿ