Showing posts with label ಕನವರಿಕೆ. Show all posts
Showing posts with label ಕನವರಿಕೆ. Show all posts

ಮತ್ತದೇ ಕನಸು. ಮತ್ತದೇ ಕನವರಿಕೆ

1 Nov 2015

0 ಪ್ರತಿಕ್ರಿಯೆ
ಸುದೀರ್ಘ ಮೌನದ ನಂತರದ ಮಾತು ನಿಜಕ್ಕೂ ಕಷ್ಟ.

ಹಾಗಂತ ಮಾತಿರುವುದಿಲ್ಲ ಅಂತ ಏನಿಲ್ಲ. ಹೇಳಲಿಕ್ಕೆ, ಹಂಚಿಕೊಳ್ಳಲಿಕ್ಕೆ ಸಾವಿರಾರು ಸಂಗತಿಗಳಿರುತ್ತವೆ. ಈ ಸಂದರ್ಭಕ್ಕೆಂದೇ ಅಂದುಕೊಂಡಿದ್ದ ಸೊಗಸಾದ ಸಾಲುಗಳಿರುತ್ತವೆ. ಮೆಚ್ಚಿದ ಪದ್ಯ, ನಗಿಸಿದ ಹಾಸ್ಯ, ಆರ್ದ್ರವಾಗಿಸಿದ ಭಾವನೆಗಳಿರುತ್ತವೆ. ಹೇಳಬೇಕೆಂಬ ತುಡಿತವೂ ಬಲವಾಗಿರುತ್ತದೆ.

ಆದರೆ, ಹೇಳಲಾಗುವುದಿಲ್ಲ. ಹಾಗಂತ, ಹೇಳದಿರಲೂ ಆಗುವುದಿಲ್ಲ.

ನಿಜವಾದ ಕಷ್ಟ ಅದು. ಮನಸಿನ ಮಾತುಗಳು ನಿಜದ ಮಾತಾಗದಿರುವ ಕಷ್ಟ ಬಲು ಹಿಂಸೆ ಕೊಡುತ್ತದೆ.

ಬರಹವೂ ಹಾಗೇ.

ಏನೋ ಹೇಳಬೇಕೆಂದು ಅಕ್ಷರ ಜೋಡಿಸಲು ಹೊರಡುತ್ತೇವೆ. ಭಾವನೆಗಳು ಸಾಲುಗಳಾಗುವುದಿಲ್ಲ. ಬರೆದ ಸಾಲುಗಳು ಭಾವವನ್ನು ಬಿಂಬಿಸುವುದಿಲ್ಲ. ಬರೆದಿದ್ದನ್ನು ಅಳಿಸಿ, ಹೊಸದಾಗಿ ಬರೆಯಲು ಹೋಗಿ, ಅದು ಕಲಸುಮೇಲೋಗರವಾಗಿ, ಇದಾ ನನ್ನ ಭಾವತೀವ್ರತೆಯ ಪ್ರತಿಬಿಂಬ ಎಂದು ಬೇಸರವಾಗುತ್ತದೆ.

ಬರೆಯುವುದನ್ನು ನಿಲ್ಲಿಸಿ, ಸುಮ್ಮನೇ ಕೂತರೆ, ಎದೆಯೊಳಗಿನ ಭಾವಗಳು ಮಾತಿಗಿಳಿಯುತ್ತವೆ, ಸ್ವಗತವಾಗುತ್ತದೆ. ಒಬ್ಬನೇ ಇಬ್ಬಿಬ್ಬರಾಗಿ ಮಾತಾಡಿಕೊಂಡಂತೆ, ಅಂದುಕೊಂಡ ಭಾವಗಳೆಲ್ಲ ಸಲೀಸಾಗಿ ಹೊರಬಂದಂತೆ, ಅವಕ್ಕೊಂದು ಖಚಿತ ಅರ್ಥವೂ ದಕ್ಕಿದಂತೆ, ಆಹಾ. ಆ ಸ್ವಗತದ ಸೊಗಸೇ ಸೊಗಸು.

*****

ಇತ್ತೀಚೆಗೆ ಇಂಥ ಭಾವತೀವ್ರತೆ, ಹೇಳಲಾಗದ ತೊಳಲಾಡುವಿಕೆ ತುಂಬ ಕಾಡಿದೆ. ಕಾಡುತ್ತಲೇ ಇದೆ. ಏನೋ ಬರೆಯಬೇಕೆಂದುಕೊಳ್ಳುತ್ತಲೇ, ಅದು ಮತ್ತೇನೋ ಆಗಿ, ಛೇ ಇದು ಸರಿ ಹೋಗಲಿಲ್ಲ ಎಂದು ಅಳಿಸಿ, ಊಹೂಂ, ಅಳಿಸಬಾರದಿತ್ತೆಂದು ಹಳಹಳಿಸಿ, ಮತ್ತೆ ಮತ್ತೆ ಸುಮ್ಮನೇ ಕೂತು, ಭಾವಗಳೊಂದಿಗೆ ಸ್ವಗತಕ್ಕಿಳಿಯುವುದೇ ಹೆಚ್ಚಾಗುತ್ತಿದೆ. ತುಂಬ ದಿನ ಬರೆಯುವುದನ್ನು ಬಿಟ್ಟಿದ್ದರ ಪರಿಣಾಮ ಇದು ಎಂದು ಅನಿಸಿದರೂ, ಎಲ್ಲೋ ಕೊಂಡಿ ಜೋಡಣೆಯಾಗುತ್ತಿಲ್ಲ ಎಂದು ಮತ್ತೆ ಮತ್ತೆ ಅನಿಸುತ್ತದೆ. ಈ ಮಾತಿಗೆ, ಭಾವಕ್ಕೆ, ಮಾತು-ಭಾವ ಬೆಸೆಯುತ್ತಿದ್ದ ಮನಸ್ಸೊಂದು ದೂರವಾಗಿದೆ ಎಂಬ ಹಳಹಳಿ.

*****

ಕಳೆದುಕೊಳ್ಳುವುದೆಂದರೆ, ಭಾವತಿವ್ರತೆಯನ್ನು ಹೊರಹಾಕಲು ಸೋಲುವುದು. ಪದೆ ಪದೆ ಮನಸ್ಸಿನಲ್ಲಿ ಮೆಲುಕುಹಾಕುತ್ತಿದ್ದರೂ ಅದು ಮಾತಾಗದಿರುವುದು, ಅಕ್ಷರಗಳಾಗದಿರುವುದು, ಯಾವುದೇ ಕ್ರಿಯಾತ್ಮಕ ಕೆಲಸದಲ್ಲಿ ಹೊಮ್ಮದಿರುವುದು. ಅದು ಕೊಡುವ ಕಾಟ ಸಹಿಸಲಾಗದೇ, ಮತ್ತೆ ಮತ್ತೆ ಬರೆಯಲೆತ್ನಿಸುವುದು. ಸೋಲುವುದು. ಸೋತು ಸೋತು ಸ್ವಗತಕ್ಕಿಳಿಯುವುದು. ಸುದೀರ್ಘ ಕಾಲದವರೆಗೆ ಮತ್ತೆ ಮೌನವಾಗುವುದು.
*****
ಬಹುಶಃ ತುಂಬ ದಿನ ಇಂಥ ಸ್ಥಿತಿ ಉಳಿಯಲಿಕ್ಕಿಲ್ಲ. ಕೈಗಳು ಮತ್ತೆ ಮತ್ತೆ ಕೀಬೋರ್ಡ್ ಸವರುತ್ತವೆ. ಮಾತುಗಳಿಗೆ ಅಕ್ಷರರೂಪ ಕೊಡಲು ಯತ್ನಿಸುತ್ತವೆ. ಹಾಗೆ ಪ್ರಯತ್ನಿಸುತ್ತಲೇ ಸೋಲುತ್ತವೆ. ಬರೆದಿದ್ದನ್ನು ಅಳಿಸುತ್ತ, ಮತ್ತೆ ಮತ್ತೆ ಬರೆಯಲು ಯತ್ನಿಸುತ್ತ, ಬಿಡಿಬಿಡಿ ಭಾವಗಳನ್ನು ಇಡಿಯಾಗಿಸಲು ಪ್ರಯತ್ನಿಸುತ್ತಲೇ ಮನಸ್ಸನ್ನು ಜರಡಿಯಾಗಿಸುತ್ತ ಹೋಗುತ್ತೇನೆ. ಒಂದಾದರೂ ಮುತ್ತು ಉದುರೀತಾ ಎಂದು ಮತ್ತೆ ಮತ್ತೆ ನೋಡಿಕೊಳ್ಳುತ್ತೇನೆ.

ಇದೊಂದು ಮುಗಿಯದ ಕನಸು. ತೀರದ ದಾಹ. ಮತ್ತೆ ಮತ್ತೆ ಕನಸು. ಮತ್ತೆ ಮತ್ತೆ ದಾಹ.

ಹನಿಯೊಡೆಯದ ಕಾರ್ಮುಗಿಲನ್ನು ಕುದಿವ ಭೂಮಿ ದಿಟ್ಟಿಸುವಂತೆ, ಬೀಸುವ ಗಾಳಿಯ ನೆಪಕ್ಕೆ ಕಾಯ್ದಂತೆ, ಮನಸ್ಸು ಮತ್ತದೇ ಸ್ಪೂರ್ತಿಯನ್ನು ಹುಡುಕುತ್ತದೆ. ಹುಡುಕ್ಹುಡುಕಿ ನಿರಾಶೆಗೊಳ್ಳುತ್ತದೆ.

ಬಂದೀತು ಮತ್ತೆ ಮಳೆ ಸುಗ್ಗಿ, ಎಲ್ಲೆಗಳ ಮೀರೀತು ಹಿಗ್ಗಿ.

ಮತ್ತದೇ ಕನಸು. ಮತ್ತದೇ ಕನವರಿಕೆ.

- ಚಾಮರಾಜ ಸವಡಿ

ಆ ರಾತ್ರಿ ಹಾಗೆ...

13 May 2012

1 ಪ್ರತಿಕ್ರಿಯೆ
ಮೌನವಾಗಬೇಕು
ಕಿವಿಗೊಡಬೇಕು, ಮಾತಾಗಬಾರದು
ಸುಮ್ಮನೇ ನೋಡಬೇಕು
ಹೀರಿಕೊಂಡು ಸುಮ್ಮನಿರಬೇಕು
ಬೆಳೆಯಬೇಕು ಒಳಗೊಳಗೇ

ಉಕ್ಕುವ ಕಡಲಿಂದ ಸದ್ದು ಬರಬಾರದು
ಹೃದಯ ನಿಟ್ಟುಸಿರಿಡಬಾರದು
ಮುರಿದು ಬೀಳುವ ಸದ್ದಿರಲಿ
ಕಣ್ಣೀರೂ ಶಬ್ದವಾಗಬಾರದು

ಮೌನಕ್ಕೆ ಮಾತುಂಟು
ಥೇಟ್ ಹೃದಯದಂತೆ
ಕೊರಳುಬ್ಬಿ ಸುಮ್ಮನಾದಾಗ
ಎದೆಯಾಳದ್ದೇ ಮಾತು

ಹಾಗಂತ ಸುಮ್ಮನೇ ಕೂತಿದ್ದೇನೆ

ಮಾತು ಮೌನವಾಗಿದೆ
ಮೌನ ಮಾತಾಡುತ್ತಿದೆ
ಕೇಳಿಸಿಕೊಳ್ಳುವ ಕಿವಿಗಳ ಜಾಗದಲ್ಲಿ
ಹೃದಯ ಬಂದು ಕೂತಿದೆ

ಮೌನವಾಗಿ ಉಕ್ಕುವ ಕಡಲು
ಸದ್ದಿಲ್ಲದೇ ಮುರಿದುಬೀಳುವ ಕನಸು
ಆ ಕಾರ್ಗತ್ತಲ ರಾತ್ರಿಯಲಿ
ಗಡಿಯಾರಕ್ಕೂ ಮುನಿಸು

ಇದಿರೋದೇ ಹೀಗೆ
ಇದಿರಬೇಕಾಗಿದ್ದೂ ಹೀಗೇ
ಮಾತಿನಂಥ ಮೌನ
ಮೌನದಂಥ ಮಾತು
ಕನಸುನನಸುಗಳ ಕಲಸುಮೇಲೋಗರದಲ್ಲಿ
ನೆನಪೇ ಮರೆವು
ಮರೆವೇ ನೆನಪು

ಅದೇ ಬದುಕು
ಮತ್ತದೇ ಮರಣ

- ಚಾಮರಾಜ ಸವಡಿ

ಹೀಗೆಂದರೆ ಹೀಗೇ, ಹೇಗಿದೆಯೋ ಹಾಗೆ

4 Mar 2012

0 ಪ್ರತಿಕ್ರಿಯೆ
ಅಂದುಕೊಂಡಂತೆ ಆಗದಿದ್ದರೆ
ಎಂದು ಯೋಚಿಸಿದೆ

ಭಯವಾಯಿತು:
ನಾನು ನಾನಾಗಿರಲ್ಲ

ಅಂದುಕೊಂಡಂತೆ ಆಗಿಬಿಟ್ಟರೆ

ಇನ್ನೂ ಭಯ
ಆಗಲೂ ನಾನು ನಾನಾಗಿರಲ್ಲ

ಹೀಗೇ ಇರಲಿ ಬಿಡು
ಹೀಗೆಂದರೆ ಹೀಗೇ

ಹೇಗಿದೆಯೋ ಹಾಗೆ

***

ಒಮ್ಮೊಮ್ಮೆ ಹೀಗೇ

ನೆನಪಾದಾಗೆಲ್ಲ ವಿಷಾದ
ಕೂತಲ್ಲೇ ಕಳೆದುಹೋಗೋದು
ಎದ್ದಾಗ ಕನಸು
ನಿದ್ದೆಯಲ್ಲಿ ಎಚ್ಚರ

ತುತ್ತು ನೆತ್ತಿಗೇರಿದಾಗ
ನೀರು ಹುಡುಕುವಂತೆ
ಬಿಕ್ಕಳಿಕೆ ನಿಂತಾಗ
ಏನೋ ಕಳಕೊಂಡಂತೆ

ಷೆಲ್ಫು ತುಂಬಿದ ಪುಸ್ತಕಗಳು
ಬರೀ ಲೊಳಲೊಟ್ಟೆ
ಹಸಿದ ಹೊಟ್ಟೆಯ ಮುಂದೆ
ಖಾಲಿ ತಟ್ಟೆ

ಮನಸೆಂಬುದು
ನೆಲೆ ಕಳೆದುಕೊಂಡ ನಾಯಿಮರಿ
ಅಪರಿಚಿತ ಊರಿನ ಬಸ್‌ಸ್ಟ್ಯಾಂಡು
ಒಳಗೇ ಬಚ್ಚಿಟ್ಟುಕೊಂಡು
ಊರೆಲ್ಲ ಹುಡುಕಾಟ

ಬರೀ ಬಿಡಿ ಚಿತ್ರಗಳು
ಜೋಡಿಸಿದಷ್ಟೂ ಗೊಂದಲ

ನಿನ್ನೆ ಎಂಬುದು ಇಂದಾಗಿ
ಇಂದೆಂಬುದೇ ನಾಳೆಯಾಗಿ
ಗಡಿಯಾರ ಮಂಕಾಗಿ
ಕಾಲವೆಂಬುದು ನಾಯಿಬಾಲದಂತೆ

ಸರಿಯಾಗದು
ಬಿಡಲಾಗದು

- ಚಾಮರಾಜ ಸವಡಿ

ಹುಟ್ಟೂರಿನಲ್ಲಿ ಮೂಡಿದ ’ಜೀವದನಿ’

12 Jun 2010

18 ಪ್ರತಿಕ್ರಿಯೆ



ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಕೆಲಸ ಬಿಡಿಸಿ ತವರು ಜಿಲ್ಲೆಗೆ ಅಟ್ಟಿದ ಪಾಪವೇನಾದರೂ ಇದ್ದರೆ, ಅದು ನನ್ನದು. ಪುಣ್ಯವೇನಾದರೂ ಇದ್ದರೆ, ಹುಟ್ಟು ಜಿಲ್ಲೆಯಲ್ಲಿ ಬದುಕು ಕಟ್ಟಿಕೊಂಡ ಗೆಳೆಯ ಸರ್ಜಾಶಂಕರ ಹರಳಿಮಠನದು.

ಸುಮಾರು ಇಪ್ಪತ್ತು ವರ್ಷಗಳ ಪರಿಚಯ, ಸ್ನೇಹ ನಮ್ಮಿಬ್ಬರದು. ನಾನಾಗ ಏರ್‌ಫೋರ್ಸ್‌‌ನಲ್ಲಿದ್ದೆ. ಮೊಬೈಲ್‌, ಕಂಪ್ಯೂಟರ್‌ಗಳಿಲ್ಲದ ಕಾಲವದು. ನನಗೋ ಬರೆಯುವ ಹುಚ್ಚು. ಶಂಕರನಿಗೆ (ಸರ್ಜಾಶಂಕರ) ಬರೆಯುವುದರ ಜೊತೆಗೆ ಅದನ್ನು ಪ್ರಕಟಿಸುವ ಹುಚ್ಚು. ನಮ್ಮಂಥ ಹುಚ್ಚರಿಗಾಗಿಯೇ ಕೆಲ ಹವ್ಯಾಸಿ ಪ್ರಕಾಶಕರಿದ್ದರು. ಬರೆಯುವ ಆಸೆ ಇರುವ, ಆದರೆ, ಸ್ವಂತ ಪುಸ್ತಕ ಹೊರತರಲು ಆಗದ ನಮ್ಮಂಥವರ ಬರಹಗಳನ್ನು ಅವರು ಅಚ್ಚು ಹಾಕುತ್ತಿದ್ದರು. ಆಗ ಬರುತ್ತಿದ್ದ ಬಹುತೇಕ ಪುಸ್ತಕಗಳು ಕವನ ಸಂಕಲನಗಳು. ಸಹಕಾರ ತತ್ವದಡಿ ಪ್ರಕಟವಾಗಬೇಕಿತ್ತು.

ಸಹಕಾರ ತತ್ವ ಬಹು ಸುಲಭ ವಿಧಾನ. ಯುವ ಬರಹಗಾರರು ತಮ್ಮ ಒಂದು ಕವಿತೆ/ಹನಿಗವನ ಪ್ರಕಟಣೆಗೆ ಐವತ್ತು ರೂಪಾಯಿಗಳನ್ನು ನೀಡಬೇಕಿತ್ತು. ಅಂಥ ೪೦-೫೦ ಬರಹಗಾರರನ್ನು ಸಂಪರ್ಕಿಸುತ್ತಿದ್ದ ಹವ್ಯಾಸಿ ಪ್ರಕಾಶಕರು, ಚಂದಾ ಸಂಗ್ರಹಿಸಿ, ತಮ್ಮ ಕೈಯಿಂದ ಒಂದಿಷ್ಟು ಹಾಕಿ ಪುಸ್ತಕ ಹೊರತರುತ್ತಿದ್ದರು. ಆಗ ಮೊಳೆಯಚ್ಚು ಮುದ್ರಣಾಲಯಗಳೇ ಹೆಚ್ಚು. ಅಲ್ಲಿ ಮುದ್ರಣ ಖರ್ಚು ಕಡಿಮೆ ಕೂಡಾ. ಆಫ್‌ಸೆಟ್‌ ಮುದ್ರಣ ಯಂತ್ರಗಳು ಕೇವಲ ದೊಡ್ಡ ನಗರಗಳಿಗೆ ಮಾತ್ರ ಸೀಮಿತವಾಗಿದ್ದವು.

ಸರ್ಜಾಶಂಕರನ ಬರಹವನ್ನು ನಾನು ಮೊದಲು ಓದಿದ್ದು ಇಂಥ ಚಂದಾಪುಸ್ತಕವೊಂದರಲ್ಲಿ.

ಪ್ರತಿ ಬರಹಗಾರನ ವಿಳಾಸವೂ ಅದರಲ್ಲಿ ಅಚ್ಚಾಗಿರುತ್ತಿತ್ತು. ಏರ್‌ಫೋರ್ಸ್‌‌ನಲ್ಲಿದ್ದ ನಾನು ಶಂಕರನ ಬರಹ ಓದಿ, ಅಲ್ಲಿದ್ದ ವಿಳಾಸಕ್ಕೆ ಅಂಚೆ ಕಾರ್ಡ್‌ ಬರೆದೆ. ಕ್ರಮೇಣ ಪರಿಚಯ ಬೆಳೆಯಿತು. ನಾವಿಬ್ಬರೂ ಸಾಹಿತ್ಯಕ್ಕಿಂತ ಹೆಚ್ಚಾಗಿ ಪರಸ್ಪರ ಪತ್ರಗಳನ್ನು ಬರೆದಿದ್ದೇ ಜಾಸ್ತಿ.

ಇದೆಲ್ಲ ಹದಿನೈದು ಇಪ್ಪತ್ತು ವರ್ಷಗಳ ಹಿಂದಿನ ಮಾತು.

ಮುಂದೆ ನಾನು ಏರ್‌ಫೋರ್ಸ್‌ ಬಿಟ್ಟು ಬೆಂಗಳೂರಿಗೆ ಬಂದೆ. ಶಂಕರ ಆಗಲೇ ಬೆಂಗಳೂರಿನಲ್ಲಿದ್ದ. ಸಣ್ಣಪುಟ್ಟ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ. ಒಂದೆರಡು ವರ್ಷಗಳ ನಂತರ ಬಹುರಾಷ್ಟ್ರೀಯ ಕಂಪನಿಯೊಂದಕ್ಕೆ ಸೇರಿಕೊಂಡ. ನಾನಾಗ, ‘ಹಾಯ್‌ ಬೆಂಗಳೂರ್’‌ ಸೇರಿಯಾಗಿತ್ತು.

‘ಏನಾದ್ರೂ ಮಾಡಬೇಕೆಂದಿದ್ದರೆ ನಮ್ಮೂರಲ್ಲಿ ಮಾಡಬೇಕು ಶಂಕರಾ. ಅದೇ ನಿಜವಾದ ಚಾಲೆಂಜ್‌’ ಎಂದೆ ಒಂದಿನ.

ಊರಿಗೆ ಹೋಗಿ ಏನು ಮಾಡಬೇಕೆಂಬುದು ಇಬ್ಬರಿಗೂ ಗೊತ್ತಿದ್ದಿಲ್ಲ! ಅಲ್ಲಿ ಹೋದ ನಂತರ ತಾನೇ ಗೊತ್ತಾಗುತ್ತದೆ ಎಂಬ ಉಡಾಫೆ.

ಉತ್ತಮ ಸಂಬಳ ಬರುವ ಕೆಲಸ ಬಿಡೋದು ಹೇಗೆ ಎಂಬ ಗೊಂದಲ ಶಂಕರನಿಗೆ. ವಿದೇಶಿ ಕಂಪನಿ ಚಾಕರಿಯಿಂದ ನಿನ್ಯಾವ ಕನಸುಗಳು ಈಡೇರುತ್ತವೆ ಎಂಬ ಪ್ರಶ್ನೆ ನನ್ನದು. ನನ್ನ ವರಾತ ಹೆಚ್ಚಾಯಿತೋ, ಅಥವಾ ನಿಜಕ್ಕೂ ಊರಿಗೆ ಹೋಗಬೇಕೆಂದು ಆತ ನಿರ್ಧರಿಸಿದನೋ ಗೊತ್ತಿಲ್ಲ. ಅದೊಂದಿನ, ವಾಪಸ್‌ ಶಿವಮೊಗ್ಗಕ್ಕೆ ಹೋಗ್ತೇನೆ ಎಂದು ಘೋಷಿಸಿದ ಶಂಕರ, ಬೆಂಗಳೂರು ಖಾಲಿ ಮಾಡಿದ.

ಅದಾದ ಸ್ವಲ್ಪ ದಿನಗಳಿಗೆ ‘ಹಾಯ್‌ ಬೆಂಗಳೂರ್‌’ಗೆ ಸಲಾಮ್‌ ಹೊಡೆದೂ ನಾನೂ ನನ್ನ ಜಿಲ್ಲೆ ಕೊಪ್ಪಳಕ್ಕೆ ಹೋದೆ.

ಇದ್ದ ಕೆಲಸ ಬಿಟ್ಟು, ಕೇವಲ ಕನಸುಗಳನ್ನು ಹೊತ್ತು ತಂದಿದ್ದ ನಮ್ಮನ್ನು, ನಮ್ಮ ಸ್ವಂತ ಜಿಲ್ಲೆಗಳು ಕಾಡಿಸಿದ್ದು ಅಷ್ಟಿಷ್ಟಲ್ಲ. ಬದುಕು ಕಟ್ಟಿಕೊಳ್ಳಲು ಶಂಕರ ಎಷ್ಟು ಕಷ್ಟಪಟ್ಟನೋ, ನಾನೂ ಅಷ್ಟೇ ಕಷ್ಟಪಡಬೇಕಾಯ್ತು. ಯಾಕಾದ್ರೂ ಕೆಲಸ ಬಿಟ್ಟೆವೋ ಅಂತ ಪದೆ ಪದೆ ಅನಿಸುವಷ್ಟು ಮೂಲಭೂತ ಸಮಸ್ಯೆಗಳು ಇಬ್ಬರನ್ನೂ ಕಾಡಿದವು.

ಪತ್ರಿಕೋದ್ಯಮದಲ್ಲೇ ಏನಾದ್ರೂ ಮಾಡಬೇಕು ಎಂದು ನಾನು ನಿರ್ಧರಿಸಿದ್ದೆನಾದರೂ, ಏನು ಮಾಡಬೇಕೆಂಬುದು ಸ್ಪಷ್ಟವಿದ್ದಿಲ್ಲ. ಶಂಕರನಿಗಂತೂ ಇನ್ನೂ ಗೊಂದಲ. ಬರವಣಿಗೆಯ ಹುಚ್ಚು ಸುಲಭಕ್ಕೆ ಬಿಡುವಂಥದಲ್ಲ. ಅದರಲ್ಲೂ, ಬರೆದಿದ್ದು ಅಚ್ಚಾಗಬೇಕೆಂಬ ಆಸೆ ಇದ್ದರೆ ಬಹಳ ಕಷ್ಟ.

ಈ ಹುಚ್ಚಿನ ನಡುವೆ, ಹೊಟ್ಟೆಪಾಡನ್ನು ಮರೆಯೋದಾದ್ರೂ ಹೇಗೆ? ಒಳ್ಳೆ ಸಂಬಳ ಬರುವ ಕೆಲಸ ಬಿಟ್ಟು ಬಂದಿದ್ದ ನಮ್ಮನ್ನು ಹುಚ್ಚರನ್ನು ನೋಡುವಂತೆ ನೋಡಿತು ಊರು. ಅದಕ್ಕೆ ತಕ್ಕಂತೆ ನಮ್ಮ ಹವ್ಯಾಸಗಳಿದ್ದವು. ದುಡಿದು ಬದುಕುವುದೇ ಕಷ್ಟವಾಗಿದ್ದ ದಿನಗಳಲ್ಲಿ, ಬರೆದು ಬದುಕುತ್ತೇನೆ ಎಂದು ಹೊರಟವರನ್ನು ನಮ್ಮೂರುಗಳು ಇನ್ಯಾವ ರೀತಿ ನೋಡಲು ಸಾಧ್ಯವಿತ್ತು?

ಕ್ರಮೇಣ ಬದುಕು ಚಿಗುರಿತು.

ಹಲವಾರು ಬಗೆಯ ಕೆಲಸಗಳನ್ನು ಮಾಡಿದ ನಂತರ, ನಾನು ‘ವಿಜಯ ಕರ್ನಾಟಕ’ ಸೇರಿಕೊಂಡೆ. ‘ನಿನ್ನ ಬರವಣಿಗೆ ಚೆನ್ನಾಗಿದೆ, ಸಾಪ್ತಾಹಿಕ ವಿಜಯ ನೋಡಿಕೊಳ್ಳುವಿಯಂತೆ, ಬೆಂಗಳೂರಿಗೆ ಬಾ’ ಎಂದು ಸಂಪಾದಕ ಈಶ್ವರ ದೈತೋಟ ಪರಿಪರಿಯಾಗಿ ಹೇಳಿದರೂ ಕೇಳದೇ ನಾನು ಕೊಪ್ಪಳ ಜಿಲ್ಲಾ ವರದಿಗಾರನಾಗಿಯೇ ಉಳಿದುಕೊಂಡೆ. ಶಂಕರ ನಿಧಾನವಾಗಿ ಚಳವಳಿಗಳಲ್ಲಿ ಗುರುತಿಸಿಕೊಳ್ಳತೊಡಗಿದ್ದ. ಅವನ ಬದುಕಿನ್ನೂ ಗೊಂದಲದಲ್ಲಿತ್ತು.

ಕೆಲ ವರ್ಷಗಳ ಕಾಲ ನಮ್ಮ ಸಂಪರ್ಕವೇನಿದ್ದರೂ ಪತ್ರಗಳ ಮೂಲಕ ಬದುಕಿತ್ತು.

ಮುಂದೆ ಬದುಕಿನ ಅನಿವಾರ್ಯತೆ ನನ್ನನ್ನು ಮತ್ತೆ ಬೆಂಗಳೂರಿಗೆ ಕರೆ ತಂದಿತು. ಶಂಕರ ಮಾತ್ರ ಶಿವಮೊಗ್ಗದಲ್ಲೇ ಉಳಿದ. ಚಳವಳಿಗಳ ಜೊತೆಗೆ ಪುಟ್ಟದಾಗಿ ದೇಸಿ ಸಂಸ್ಕೃತಿ ಅಂಗಡಿ ಪ್ರಾರಂಭಿಸಿದ. ಗ್ರಾಮೀಣ ಕುಶಲಕರ್ಮಿಗಳ ಉತ್ಪಾದನೆಗಳಿಗೆ ಮಾರಾಟ ವ್ಯವಸ್ಥೆ ರೂಪಿಸುವ ಪ್ರಯತ್ನದಲ್ಲಿ ತನ್ನ ಬದುಕು ರೂಪಿಸಿಕೊಂಡ. ಅವನನ್ನು ಅರ್ಥ ಮಾಡಿಕೊಳ್ಳುವ ಮಡದಿ ದಕ್ಕಿದಳು. ಆ ಹೆಣ್ಣುಮಗಳಿಗೆ ಸೂಕ್ತ ಸರ್ಕಾರಿ ಕೆಲಸವೂ ಸಿಕ್ಕಿತು. ಯಾವ ಆಮಿಷಕ್ಕೂ ಸಿಲುಕದ ಶಂಕರ ಮಾತ್ರ, ಕೊಟ್ಟ ಮಾತಿನಂತೆ ತನ್ನೂರಲ್ಲೇ ಉಳಿದ. ಬೆಳೆದ.

ಇದೆಲ್ಲ ನೆನಪಾಗಿದ್ದು, ಅವನು ಕಳಿಸಿದ ತನ್ನ ಇತ್ತೀಚಿನ ಪುಸ್ತಕ ’ಜೀವದನಿ’ಯಿಂದ. ತನ್ನ ಅಂಕಣ ಬರಹಗಳನ್ನು ಆಯ್ದು ಪ್ರಕಟಿಸಿದ ಅವನ ಮೊದಲ ಪುಸ್ತಕ ’ಬೆಚ್ಚಿ ಬೀಳಿಸಿದ ಬೆಂಗಳೂರು’ ಸಾಕಷ್ಟು ಗಮನ ಸೆಳೆದ ಕೃತಿ. ಆ ನಂತರ ಬಂದಿದ್ದು, ’ಬಾರಯ್ಯ ಬೆಳದಿಂಗಳೇ’. ಈಗ ಮೂರನೇ ಪುಸ್ತಕ ’ಜೀವದನಿ’ ಬಿಡುಗಡೆಗೆ ಸಿದ್ಧವಾಗಿದೆ. [ಜೀವದನಿ (ಅಂಕಣ ಬರಹಗಳು), ಪುಟಗಳು ೧೭೨, ಬೆಲೆ: ರೂ.೧೦೦, ಪ್ರಕಾಶನ: ಅಂತಃಕರಣ, ’ದೇಸಿ ಸಂಸ್ಕೃತಿ’, ಮೈಲಾರೇಶ್ವರ ಸಂಕೀರ್ಣ, ಬಿ.ಎಚ್‌. ರಸ್ತೆ, ಶಿವಮೊಗ್ಗ-೫೭೭ ೨೦೧, ದೂರವಾಣಿ: ೯೪೪೮೭ ೮೦೧೪೪]

ಇದೇ ಭಾನುವಾರ, ೧೩ ಜೂನ್‌ ೨೦೧೦ಕ್ಕೆ ಶಿವಮೊಗ್ಗದ ಕರ್ನಾಟಕ ಸಂಘದ ಸಭಾಂಗಣದಲ್ಲಿ ಪುಸ್ತಕದ ಬಿಡುಗಡೆಯಿದೆ. ಯಥಾಪ್ರಕಾರ, ಶಂಕರ ಫೋನ್‌ ಮಾಡಿ ಕರೆದಿದ್ದಾನೆ. ಇದು ಬರುವ ಆಸಾಮಿಯಲ್ಲ ಅಂತ ಅನ್ನಿಸಿತೋ ಏನೋ, ಬಿಡುಗಡೆಗೂ ಮುಂಚೆ ಪುಸ್ತಕದ ಪ್ರತಿಯೊಂದನ್ನು ಕಳಿಸಿದ್ದಾನೆ. ಅದರ ಬೆನ್ನುಪುಟದಲ್ಲಿರುವ ಶಂಕರನ ದೊಡ್ಡ ನಗುವಿನ ಫೋಟೊ ನೋಡುತ್ತ, ಈ ಅಪರಾತ್ರಿಯಲ್ಲಿ ನಮ್ಮ ಕಳೆದ ದಿನಗಳ ಕನಸುಗಳನ್ನು ನೆನಪಿಸಿಕೊಳ್ಳುತ್ತಾ ಕೂತಿದ್ದೇನೆ.

ಬದುಕಿನಲ್ಲಿ ಎಷ್ಟೋ ಕನಸುಗಳು ವಿಚಿತ್ರ ರೀತಿಯಲ್ಲಿ ತಿರುವು ಪಡೆಯುತ್ತ, ಮತ್ತೆ ಮತ್ತೆ ಪ್ರತ್ಯಕ್ಷವಾಗುತ್ತಿರುವ ಪರಿ ನೆನೆದು ಅಚ್ಚರಿಪಡುತ್ತಿದ್ದೇನೆ. ಬೆಂಗಳೂರಿನ ವೈಟ್‌ ಫೀಲ್ಡ್‌ನ ಅವನ ರೂಮಿನಲ್ಲಿ ಎಷ್ಟೊಂದು ಮಾತಾಡಿದ್ದೆವು. ಎಷ್ಟೊಂದು ಕನಸುಗಳನ್ನು ಹಂಚಿಕೊಂಡಿದ್ದೆವು. ಅವತ್ತಿನಿಂದ ಇವತ್ತಿನ ತನಕ, ಈ ಹದಿನೈದು ಇಪ್ಪತ್ತು ವರ್ಷಗಳಲ್ಲಿ ಶಂಕರ ಸಾಕಷ್ಟು ಮಾಗಿದ್ದಾನೆ. ಆದರೆ, ಕನಸುಗಳು ಮಾತ್ರ ತಾಜಾ ಆಗೇ ಉಳಿದಿವೆ. ಅವುಗಳ ಪೈಕಿ ಒಂದಿಷ್ಟು ನನಸಾಗಿವೆ. ಒಂದಿಷ್ಟು ಹೊಸ ಕನಸುಗಳು ಸೇರಿಕೊಂಡಿವೆ. ಶಂಕರನ ಪ್ರತಿಯೊಂದು ಸಾಹಸವೂ ನನಗೆ ಆ ದಿನಗಳನ್ನು ನೆನಪಿಸುತ್ತವೆ. ನನ್ನ ಕನಸುಗಳೂ ಮತ್ತೆ ಮತ್ತೆ ನೆನಪಾಗುತ್ತವೆ.

ಅವನನ್ನು ’ಬೆಚ್ಚಿ ಬೀಳಿಸಿದ ಬೆಂಗಳೂರು’ ನನಗೀಗ ಅನ್ನ ಹಾಕತೊಡಗಿದೆ. ಆದರೆ, ಈ ನಗರ ನನ್ನ ಕನಸುಗಳನ್ನು ಪೋಷಿಸುತ್ತದಾ? ಮತ್ತೆ ನನ್ನೂರಿಗೆ ಹಿಂತಿರುಗಿಸುತ್ತದಾ?

ಜೀವದ ಗೆಳೆಯನ ’ಜೀವನದಿ’ ಪುಸ್ತಕ ಮತ್ತೆ ಮತ್ತೆ ಆ ಪ್ರಶ್ನೆಗಳನ್ನು ಕೇಳತೊಡಗಿದೆ.

ಉತ್ತರ ಹೊಳೆಯದೇ ಮಂಕಾಗುತ್ತೇನೆ.

- ಚಾಮರಾಜ ಸವಡಿ

ಕನಸು ಕಾಣಬಾರದು ಅಂದುಕೊಳ್ಳುತ್ತ...

28 Jan 2010

4 ಪ್ರತಿಕ್ರಿಯೆ
ಮತ್ತೆ ಮತ್ತೆ ಕೀಬೋರ್ಡ್‌ ಮುಟ್ಟುತ್ತೇನೆ. ಸುಮ್ಮನಾಗುತ್ತೇನೆ.

ಕಳೆದ ಕೆಲ ದಿನಗಳಿಂದ ಇದು ಹೀಗೇ ನಡೆದುಕೊಂಡು ಬರುತ್ತಿದೆ. ಏನೋ ಬರೆಯಬೇಕೆಂದು ಅಂದುಕೊಳ್ಳುತ್ತೇನೆ. ಎಳೆಯೊಂದು ಮನದ ಮೂಲೆಯಲ್ಲಿ ಕಾಣುತ್ತದೆ. ಮೆತ್ತಗೇ ಹಿಡಿದೆಳೆದರೆ, ಸೊಗಸಾದ ನೇಯ್ಗೆ ಬಂದೀತು ಅಂದುಕೊಳ್ಳುತ್ತೇನೆ. ಅಷ್ಟೊತ್ತಿಗೆ ಮತ್ತೇನೋ ನೆನಪಾಗುತ್ತದೆ. ಎಳೆ ಅಲ್ಲೇ ಒಣಗಿ ಹೋಗುತ್ತದೆ.

ಏಕೆ ಹೀಗಾಗುತ್ತದೆ?

ಮನಸ್ಸಿನ ಯೋಚನೆಯ ಒಂದು ಎಳೆ ಎಂತೆಂಥ ಕನಸುಗಳನ್ನು ತಂದಿಡುತ್ತದೆ ಎಂಬುದನ್ನು ಖುದ್ದು ಅನುಭವಿಸಿದವ ನಾನು. ಎಳೆ ಎಂಬುದು ಮಗುವಿನಂತೆ. ಅದರ ಸಾಧ್ಯತೆಗಳು ಅಪಾರ. ಅದನ್ನು ಬೆಳೆಸಬೇಕಾದ ಜವಾಬ್ದಾರಿಯೂ ಅಷ್ಟೇ ದೊಡ್ಡದು. ಮೊಳಕೆಯೊಡೆದ ಪ್ರತಿಯೊಂದು ಬೀಜಕ್ಕೂ ಪೂರ್ತಿ ಮರವಾಗುವ ಎಲ್ಲ ಸಾಧ್ಯತೆಗಳೂ ಇರುತ್ತವೆ.

ಆದರೆ, ಎಲ್ಲ ಮೊಳಕೆಗಳೂ ಮರವಾಗುವುದಿಲ್ಲ. ಬಹಳಷ್ಟು ಮೊಳಕೆಗಳು ಮುರುಟಿಹೋಗುತ್ತವೆ. ನಮ್ಮ ಬಾಲ್ಯದ ಕನಸುಗಳಂತೆ.

ಎಲ್ಲೋ ಗಂಭೀರ ಚರ್ಚೆಯಲ್ಲಿದ್ದಾಗ, ವಾಹನದಲ್ಲಿದ್ದಾಗ, ನಿದ್ದೆ ಆವರಿಸಿಕೊಳ್ಳುವಾಗ, ನಿದ್ದೆ ತಿಳಿಯಾಗುವಾಗ ಎಷ್ಟೊಂದು ಸುನೀತ ಭಾವನೆಗಳು ಮೊಳಕೆಯೊಡೆಯುತ್ತವೆ. ಎಷ್ಟೋ ಸಾರಿ, ಅವಕಾಶ ಮಾಡಿಕೊಂಡು ಅವನ್ನೆಲ್ಲ ಒಂದು ಕಡೆ ಬರೆದಿಡುತ್ತೇನೆ. ಬಿಡುವಾದಾಗ ಈ ಭಾವನೆಗಳನ್ನು ಬೆಳೆಸಬೇಕು. ಅವಕ್ಕೊಂದು ಪೂರ್ಣರೂಪ ಕೊಡಬೇಕು ಅಂದುಕೊಳ್ಳುತ್ತೇನೆ. ಕೆಲವೊಂದು ಸಿದ್ಧಿಸುತ್ತವೆ. ಇನ್ನು ಕೆಲವು ಮುರುಟಿಹೋಗಿರುತ್ತವೆ.

ಪ್ರತಿಯೊಂದು ಅಪೂರ್ಣ ಕನಸೂ ಹೊಸ ಹೊಸ ಕನಸುಗಳ ಮರಿ ಹಾಕುತ್ತದೆ. ಪ್ರತಿಯೊಂದು ಹೊಸ ಕನಸೂ ಅಪಾರ ಸಾಧ್ಯತೆಗಳ ಕನಸನ್ನು ಸೃಷ್ಟಿಸುತ್ತದೆ. ಪರಿಪೂರ್ಣ ಅನಿಸುವಂಥ ಕಾಲ್ಪನಿಕ ಪ್ರಪಂಚವನ್ನು ಕಣ್ಣೆದುರು ತರುತ್ತವೆ. ನಿಶ್ಯಬ್ದ ತುಂಬಿದ ಈ ಕಾಳರಾತ್ರಿಯಲ್ಲಿ, ಎಲ್ಲ ಕನಸುಗಳನ್ನೂ ಪೋಷಿಸಬೇಕು. ಬೆಳೆಸಬೇಕು. ಅವನ್ನು ಪೂರ್ಣವಾಗಿಸಬೇಕು ಅಂತ ಅಂದುಕೊಳ್ಳುತ್ತೇನೆ. ಮತ್ತೆ ಮತ್ತೆ ಕೀಬೋರ್ಡ್‌ ಮುಟ್ಟುತ್ತೇನೆ. ಒಂದಿಷ್ಟು ಅಕ್ಷರಗಳನ್ನು ನೇಯುತ್ತೇನೆ. ಕನಸಿನ ಚಿತ್ರ ಅದರಲ್ಲಿ ಮೂಡುತ್ತಿದೆಯೇ ಅಂತ ಆಗಾಗ ಪರೀಕ್ಷಿಸುತ್ತೇನೆ. ಕೆಲವೊಮ್ಮೆ ಚಿತ್ರ ಸರಿಯಾಗಿರುತ್ತದೆ. ಬಹಳಷ್ಟು ಸಾರಿ, ಅಸ್ಪಷ್ಟ.

ಆಗೆಲ್ಲ ಬೇಸರ. ಇನ್ನು ಕನಸು ಕಾಣಬಾರದು ಅಂದುಕೊಳ್ಳುತ್ತೇನೆ. ಇರುವ ಕನಸುಗಳು ಈಡೇರಿದರೆ ಸಾಕು ಎಂದು ನಿರ್ಧರಿಸುತ್ತೇನೆ. ಕಂಪ್ಯೂಟರ್‌ ಮುಚ್ಚಿ, ಸ್ವಿಚ್‌ ಆಫ್‌ ಮಾಡಿ, ಕಣ್ಮುಚ್ಚಿಕೊಂಡ ಪರದೆ ದಿಟ್ಟಿಸುವಾಗ, ಅಲ್ಲಿ ಹೊಸಹೊಸ ಕನಸುಗಳು ಎದ್ದೆದ್ದು ಕುಣಿಯುತ್ತವೆ. ಆಸೆಬುರುಕ ಮಗುವಿನಂತೆ, ಮನಸ್ಸು ಹೊಸ ಹೊಸ ಕನಸುಗಳನ್ನು ಕಾಣತೊಡಗುತ್ತದೆ.

ಎಷ್ಟೊಂದು ಅಪಾರ ಸಾಧ್ಯತೆಗಳನ್ನು ಹೊಂದಿದೆ ಈ ಮನಸ್ಸು ಅಂತ ಅಚ್ಚರಿಯಾಗುತ್ತದೆ. ಹಿಂದಿದ್ದಂತೆ ಈಗಿಲ್ಲ, ಈಗಿರುವಂತೆ ಮುಂದಿರುವುದಿಲ್ಲ. ಪ್ರತಿ ಕ್ಷಣಕ್ಕೂ ಬದಲಾಗುತ್ತಲೇ ಹೋಗುತ್ತದೆ. ಮತ್ತೆ ಮತ್ತೆ ಮುದುಡುತ್ತದೆ, ಅರಳುತ್ತದೆ, ಅಚ್ಚರಿಪಡುತ್ತದೆ. ಎಲ್ಲ ಸೋಲುಗಳ ನಿರಾಶೆ ಉಂಡುಟ್ಟು ಮತ್ತೆ ನಳನಳಿಸುತ್ತದೆ. ಬೆಳೆಯುತ್ತದೆ. ಮುರುಟುತ್ತಲೇ ಹೊಸ ಚಿಗುರುಗಳನ್ನು ಅರಳಿಸುತ್ತದೆ. ಮತ್ತೆ ಕಂಪ್ಯೂಟರ್‌ ಆನ್‌ ಮಾಡುವಂತೆ ಮಾಡುತ್ತದೆ.

ಮನಸ್ಸಿನೆದುರು ಮೂಡುವ ಚಿತ್ರಗಳನ್ನು ಅಕ್ಷರಗಳನ್ನಾಗಿಸುವುದು ಸುಲಭವಲ್ಲ. ಹಾಗಂತ ಸುಮ್ಮನೆ ಕೂಡುವುದು ಸಾಧ್ಯವೂ ಇಲ್ಲ. ಒಂದಿಷ್ಟು ಬರೆಯುವುದು, ಅಳಿಸುವುದು, ಹೊಸ ಬರಹಗಳನ್ನು ಮೂಡಿಸುವುದು, ಛಕ್ಕಂತ ಹೊಳೆದ ಎಳೆಗಳನ್ನು ಹಿಡಿದೆಳೆಯುತ್ತ ಹೊಸ ನೇಯ್ಗೆಗೆ ಪ್ರಯತ್ನಿಸುವುದು, ಬರೆದುದನ್ನು ಓದುತ್ತ, ಮೆಚ್ಚುತ್ತ, ಅಳಿಸುತ್ತ, ಕೊನೆಗೊಮ್ಮೆ, ಪರವಾಗಿಲ್ಲ ಎಂಬ ಒಂದಿಷ್ಟು ಪ್ಯಾರಾಗಳನ್ನು ದಿಟ್ಟಿಸುವಾಗ-

ಛೇ, ಇದು ನಾನು ಕಂಡ ಕನಸೇ ಅಲ್ಲ ಎಂಬ ನಿರಾಶೆ.

ಶಿಶುನಾಳ ಶರೀಫರು ತಮಾಷೆ ಮಾಡಿದಂತಾಗುತ್ತದೆ: ತರವಲ್ಲ ತಗಿ ನಿನ್ನ ತಂಬೂರಿ ಸ್ವರ... ಎಷ್ಟೋ ಸಂದರ್ಭಗಳಲ್ಲಿ, ಬರೆದುದನ್ನೆಲ್ಲ ಅಳಿಸಿ, ಮತ್ತೆ ಕಂಪ್ಯೂಟರ್‌ ಮುಚ್ಚಿ, ಸುಮ್ಮನೇ ಕೂಡುತ್ತೇನೆ. ಮುಚ್ಚಿದ ಕಣ್ರೆಪ್ಪೆಗಳ ಒಳಗಿನ ಸ್ವಪ್ನಲೋಕದಲ್ಲಿ ಸಾವಿರ ಸಾವಿರ ಕನಸುಗಳ ಕಲಸುಮೇಲೋಗರ. ನಿತ್ಯನೂತನ ಚಿತ್ರಚಿತ್ತಾರ. ಅವನ್ನೇ ಧೇನಿಸುತ್ತ ಕೂತಾಗ, ಮನಸ್ಸು ಪಿಸುಗುಡುತ್ತದೆ:

ಜಗತ್ತಿನ ಸಮೃದ್ಧ ಭಾಷೆ- ಮೌನ.

ನಾನು ಮೌನವಾಗಿ ಮುಗುಳ್ನಗುತ್ತೇನೆ.

- ಚಾಮರಾಜ ಸವಡಿ