ಅರ್ಧ ಬದುಕಿಗೆ ಪೂರ್ಣ ನಮಸ್ಕಾರ

12 Jan 2011

2 ಪ್ರತಿಕ್ರಿಯೆ
ಇತ್ತೀಚೆಗೆ ಮೌನ ಹೆಚ್ಚು ಪ್ರಿಯವಾಗುತ್ತಿದೆ.

ಕಷ್ಟ ಏನೆಂದರೆ, ಮಾತೂ ಅನಿವಾರ್ಯವಾಗಿ ಹೆಚ್ಚಾಗುತ್ತಿದೆ.

ಒಂದು ಹಂತದ ವಯಸ್ಸು ದಾಟಿದ ನಂತರ ಇದ್ದಕ್ಕಿದ್ದಂತೆ ಮೌನ ಇಷ್ಟವಾಗತೊಡಗುತ್ತದೆ. ಬಾಲ್ಯ ಆಪ್ತವೆನಿಸತೊಡಗುತ್ತದೆ. ಬದುಕನ್ನು ಬೇರೆ ರೀತಿ ಬದುಕುವಂತಿದ್ದರೆ ಎಷ್ಟೊಂದು ಚೆನ್ನಾಗಿರುತ್ತದಲ್ಲವೆ ಅಂತ ಅನಿಸತೊಡಗುತ್ತದೆ.

ಅಂದರೆ, ನಾವೊಂದು ಮಹತ್ವದ ಘಟ್ಟದಲ್ಲಿ ಬಂದು ನಿಂತಿದ್ದೇವೆ ಅಂತ.

ಅಲ್ಲಿ ದಾರಿ ಕವಲೊಡೆದಿರುತ್ತದೆ.
ಒಂದು, ನಮಗೆ ಗೊತ್ತಿರುವ ದಾರಿ. ಅದು ಎಲ್ಲಿಗೆ ಹೋಗುತ್ತದೆ ಎಂಬುದು ಅಸ್ಪಷ್ಟವಾಗಿ ಗೊತ್ತಿರುತ್ತದೆ. ಇನ್ನೊಂದು ದಾರಿಯ ಬಗ್ಗೆ ನಮಗೆ ಏನೇನೂ ಗೊತ್ತಿರುವುದಿಲ್ಲ.

ಸಮಸ್ಯೆ ಎಂದರೆ, ಏನೇನೂ ಗೊತ್ತಿರದ ದಾರಿಯ ಆಕರ್ಷಣೆ.

ಗೊತ್ತಿರುವ ದಾರಿಗಿಂತ ಗೊತ್ತಿರದ ದಾರಿಯ ಆಕರ್ಷಣೆ, ಅಪಾಯ ಹೆಚ್ಚು. ಇಷ್ಟು ವರ್ಷಗಳವರೆಗೆ ಗೊತ್ತಿರುವ ದಾರಿಯಲ್ಲಿ ನಡೆದೂ, ನಡೆದೂ ಬಸವಳಿದಿರುತ್ತೇವೆ. ಪರವಾಗಿಲ್ಲ, ಜೀವನ ಇನ್ನು ಒಂದು ಹಂತಕ್ಕೆ ಬಂತು ಅಂತ ಅನಿಸಿದಾಗ, ಹೊಸ ದಾರಿ ಸೆಳೆಯತೊಡಗುತ್ತದೆ. ಅದರಲ್ಲಿ ನಡೆಯಬೇಕೆಂಬ ಆಸೆ. ಆ ಕಡೆ ಹೋದರೆ, ಇಷ್ಟು ದಿನಗಳವರೆಗೆ ಕಾಪಾಡಿಕೊಂಡು ಬಂದಿರುವ ಹಿತವಲಯ ಎಲ್ಲಿ ದೂರವಾಗುತ್ತದೋ ಎಂಬ ಭಯ.

ಅಂಥದೊಂದು ಗೊಂದಲದಲ್ಲಿ ನಿಂತಿದ್ದೇನೆ ಎಂದು ಇತ್ತೀಚೆಗೆ ಬಲವಾಗಿ ಅನಿಸತೊಡಗಿದೆ.

ಕೆಲವೊಂದು ವೃತ್ತಿ ಆಧರಿತ ಅವಕಾಶಗಳು ಕರೆಯುತ್ತಿವೆ. ಆದರೆ, ಮೂಲ ವೃತ್ತಿಯ ಆಕರ್ಷಣೆ ಹಾಗೇ ಇದೆ. ಹಾಗೆ ನೋಡಿದರೆ, ಅದು ಇನ್ನಷ್ಟು ಹೆಚ್ಚಾಗಿದೆ. ಇದು ಸುಗ್ಗಿಯ ಸಮಯ. ಅಡ್ಡ ಮಳೆ ಬಾರದಿದ್ದರೆ, ಸೊಗಸಾದ ಫಸಲು ಕೈಗೆ ದಕ್ಕೀತು ಎಂಬ ಆಸೆ. ಅದಕ್ಕಿಂತ ಸೊಗಸಾದ ಬದುಕು ಹತ್ತಿರದಲ್ಲೇ ಇದೆ ಎಂಬ ಸೆಳೆತ. ಇವೆರಡೂ ಸೆಳೆತಗಳ ನಡುವೆ ನಿಂತಿರುವಾಗಲೇ ಹೊಸ ವರ್ಷ ಕಣ್ಣೆದುರು ನಿಂತಿದೆ.

ನನಗೆ ಮತ್ತೆ ಮತ್ತೆ ಏರ್‌ಫೋರ್ಸ್‌ನ ದಿನಗಳು ನೆನಪಾಗುತ್ತಿವೆ.

ಒಬ್ಬನೇ ಇದ್ದೆ ಆಗ. ನಿಜಕ್ಕೂ ಒಬ್ಬನೇ. ಮಾನಸಿಕ ಸಾಂಗತ್ಯ ಇಲ್ಲದಿರುವ ಎಲ್ಲಾ ದಿನಗಳೂ ಒಂಟಿ ದಿನಗಳೇ. ನನ್ನ ಪಾಡಿಗೆ ನಾನಿರುತ್ತಿದ್ದೆ. ಕೆಲವೊಂದು ಗೆಳೆಯರು ತೀರಾ ಹತ್ತಿರದಲ್ಲಿದ್ದರೂ, ಒಳಮನೆಯಲ್ಲಿ ನಾನು ಒಂಟಿಯೇ. ನನ್ನ ಪಾಡಿಗೆ ನಾನು ಒಬ್ಬನೇ ರನ್ನಿಂಗ್‌ ಹೋಗುತ್ತಿದ್ದೆ. ಗುಜರಾತ್‌ನ ಭುಜ್‌ನ ಹೊರವಲಯದ ಏರ್‌ಫೋರ್ಸ್‌ ತಾಣದ ನಮ್ಮ ವಸತಿ ನಿಲಯದಿಂದ ಆರು ಕಿಮೀ ದೂರದಲ್ಲಿತ್ತು ರುದ್ರಮಾತಾ ನದಿಯ ಕಣಿವೆ.

ಅಲ್ಲಿಗೆ ದಿನಾ ಸಂಜೆ ಒಬ್ಬನೇ ಓಡುತ್ತ ಹೋಗುತ್ತಿದ್ದೆ. ಚಳಿ ಇರಲಿ, ಕಡು ಬಿಸಿಲು ಇರಲಿ, ವಾರಕ್ಕೆ ಸರಾಸರಿ ಐದಾರು ದಿನಗಳಂತೆ ನಾಲ್ಕು ವರ್ಷಗಳ ಕಾಲ ಅಲ್ಲಿಗೆ ನಿರಂತರವಾಗಿ ಹೋಗಿದ್ದೇನೆ. ರಜಾ ಸಮಯದಲ್ಲಿ ಬಿಟ್ಟರೆ, ಬೇರೆಲ್ಲ ಸಮಯದಲ್ಲಿ ಅಲ್ಲಿ ನನ್ನದು ತಪ್ಪದ ಹಾಜರಿ. ಬಹುಶಃ ರುದ್ರಮಾತಾ ನದಿ ಕಣಿವೆ ಕೂಡ ನನ್ನ ಬರವನ್ನು ಅಷ್ಟೇ ಕರಾರುವಾಕ್ಕಾಗಿ ನಿರೀಕ್ಷಿಸುತ್ತಿತ್ತೇನೋ.

ತುಂಬ ಮುಗ್ಧ ಕನಸಿನ ದಿನಗಳವು. ಶುದ್ಧ ಭಾವನೆಗಳ ಗಟ್ಟಿ ಪರ್ವ ಅದು. ಮನಸ್ಸಿನ ಭಾವನೆಗಳನ್ನು ಅಕ್ಷರಶಃ ಪೆನ್ನು ಹಿಡಿದು ಹೊರ ಹಾಕುವುದನ್ನು ಬಿಟ್ಟರೆ, ಬೇರೆ ಯಾವ ರೀತಿಯ ಅಭಿವ್ಯಕ್ತಿಗೂ ಅವಕಾಶ ಇಲ್ಲದಂಥ ದಿನಗಳವು. ಆಗ ದೂರವಾಣಿ ನಿಜಕ್ಕೂ ದೂರವಾಣಿ ಆಗಿತ್ತು. ಕಂಪ್ಯೂಟರ್‌ಗಳು ಮಿಲಿಟರಿಯಲ್ಲೇ ಇರಲಿಲ್ಲ. ಮೊಬೈಲ್‌ ಎಂಬ ಹೆಸರೇ ತುಂಬ ಜನಕ್ಕೆ ಗೊತ್ತಿರಲಿಲ್ಲ. ನಾನು ಕೆಲಸ ಮಾಡುತ್ತಿದ್ದ ಕ್ಷಿಪಣಿ ಪಡೆ ಮೊಬೈಲ್‌ ಯುನಿಟ್‌ ಎಂಬ ಹೆಸರು ಹೊತ್ತಿದ್ದು ಬಿಟ್ಟರೆ, ಇವತ್ತಿನಂತೆ, ಮೊಬೈಲ್‌ ಎಂಬುದು ದೂರಸಂಪರ್ಕಕ್ಕೆ ಇನ್ನೊಂದು ಹೆಸರೆಂಬುದು ಅಂದು ಊಹೆಗೂ ನಿಲುಕದ ವಿಷಯವಾಗಿತ್ತು.

ರುದ್ರಮಾತಾ ನಿತ್ಯ ನನ್ನ ಬರವನ್ನು ಕಾಯುತ್ತಿತ್ತು.

ಅದೊಂದು ಆಳ ಕಣಿವೆ. ನೀರೇ ಹರಿಯದ ಬರಡು ಕಣಿವೆ. ಹಿಂದೆಂದೋ ಸಾವಿರಾರು ವರ್ಷಗಳ ಹಿಂದೆ ಇಲ್ಲಿ ನದಿಯೊಂದು ಉತ್ಕಟ ರಭಸದಿಂದ ಭೋರ್ಗರೆದಿರಬಹುದು. ಅದರ ಕುರುಹೆಂಬಂತೆ ಈ ಕಣಿವೆ ಪ್ರದೇಶ ಉಳಿದುಕೊಂಡಿತ್ತು. ಅದರ ಪಾರ್ಶ್ವಗಳು ಕಪ್ಪರಿಸಿಕೊಂಡು ಬಿದ್ದಿದ್ದವು. ಎಷ್ಟೋ ಕಡೆ ಬೀಳಲು ಸಿದ್ಧವಾಗಿದ್ದವು. ಚಂಬಲ್‌ ಕಣಿವೆ ಹೀಗೇ ಇರಬಹುದಾ ಅಂತ ನಾನು ಎಷ್ಟೋ ಸಾರಿ ಪ್ರಶ್ನಿಸಿಕೊಂಡು ಅಚ್ಚರಿಪಡುತ್ತಿದ್ದೆ.

ನನ್ನ ಜೀವನದ ಅತ್ಯಂತ ಸೊಗಸಾದ ಸೂರ್ಯಾಸ್ತಗಳನ್ನು ಭುಜ್‌ನ ಆ ನೀರವ ಕಣಿವೆ ಪ್ರದೇಶದಲ್ಲಿ ನೋಡಿದ್ದೇನೆ. ಹರ್ಷಪಟ್ಟಿದ್ದೇನೆ. ಗೊತ್ತಿರದ ವ್ಯಾಕುಲತೆಗೆ ಪಕ್ಕಾಗಿ ಅತ್ತಿದ್ದೇನೆ. ಆಗಷ್ಟೇ ಅಲ್ಲ, ಈಗ ಕೂಡ ನನ್ನದು ಮೆದು ಕಪ್ಪುಮಣ್ಣಿನಂಥ ಮನಸ್ಸು. ಸಣ್ಣ ಸಣ್ಣ ಭಾವನೆಗಳೂ ನನ್ನನ್ನು ಆರ್ದ್ರವಾಗಿಸುತ್ತಿದ್ದವು. ಗೊತ್ತಿರದ ಭಾವಾತಿರೇಕಗಳು ಕಣ್ಣಿರಾಗಿಸುತ್ತಿದ್ದವು. ದಾರಿ ಗೊತ್ತಿರದ, ಪ್ರೀತಿಗಾಗಿ ಹಂಬಲಿಸುವ ಶುದ್ಧ ಹರೆಯದ ಮನಸ್ಸದು. ಅಲ್ಲಿ ಆದರ್ಶಗಳಿದ್ದವು, ಅಪಾರ ಕನಸುಗಳಿದ್ದವು. ಯಾವ ಪ್ರಲೋಭನೆಗೂ ಪಕ್ಕಾಗದ ಗಟ್ಟಿತನ ಹೊಂದಿದ್ದವು ಅವು.

ಅಂಥ ರುದ್ರಮಾತಾ ಕಣಿವೆಯ ಆಕರ್ಷಣೆ ಎಷ್ಟಿತ್ತೆಂದರೆ, ಭುಜ್‌ನ ಕೊರೆಯುವ ಚಳಿ, ಆವಿಯಾಗಿಸುವ ಬಿಸಿಲನ್ನೂ ಲೆಕ್ಕಿಸದೇ ಆರು ಕಿಮೀ ಓಡುತ್ತಾ ಒಬ್ಬನೇ ಅಲ್ಲಿಗೆ ಹೋಗಿ ಕೂಡುತ್ತಿದ್ದೆ. ಕುಸಿಯಲು ಸಿದ್ಧವಾದಂತಿದ್ದ ಕಣಿವೆ ಅಂಚಿಗೆ ಹೋಗಿ ಮೌನವಾಗಿ ಸೂರ್ಯಾಸ್ತ ದಿಟ್ಟಿಸುತ್ತಿದ್ದೆ. ನನ್ನ ವ್ಯಾಕುಲತೆ ನೋಡಿ, ಹೋಗಲು ಮನಸ್ಸಿಲ್ಲದವನಂತೆ ಸೂರ್ಯ ನಿಧಾನವಾಗಿ ಮುಳುಗುತ್ತಿದ್ದ. ಮುಳುಗುವ ಸೂರ್ಯ ಅಷ್ಟು ದೊಡ್ಡ ಗಾತ್ರದಲ್ಲಿರುತ್ತಾನೆ ಎಂಬುದನ್ನು ಅಲ್ಲಿ ಬಿಟ್ಟು ಬೇರೆಲ್ಲೂ ನಾನು ಇದುವರೆಗೆ ಕಂಡಿಲ್ಲ. ಒಂದು ದೊಡ್ಡ ಹಳೆಯ ಛತ್ರಿಯಗಲದ ಸೂರ್ಯ ಅರೆಮನಸ್ಸಿನಿಂದ ಮುಳುಗುವ ಚಂದವೇ ಚಂದ. ಸೂರ್ಯನನ್ನು ಹಾಯ್ದು ಹಾರುವ ಹಕ್ಕಿಗಳನ್ನು ನೋಡುತ್ತ, ಮಸುಕು ಕತ್ತಲಾಗುವವರೆಗೆ ಸುಮ್ಮನೇ ಕೂತಿರುತ್ತಿದ್ದೆ. 


ನಂತರ ನಿಧಾನವಾಗಿ ಎದ್ದು ಮೈಲುಗಟ್ಟಲೇ ಬೋಳಾಗಿ ಮಲಗಿದ್ದ ಭುಜ್‌ನ ಕುರುಚಲು ಕಾಡನ್ನು ಹಾಯ್ದು ಅಚ್ಚುಕಟ್ಟಾದ ಹೆದ್ದಾರಿಯವರೆಗೆ ನಡೆದುಕೊಂಡು ಬರುತ್ತಿದ್ದೆ. ಅಲ್ಲಿಂದ ನಮ್ಮ ಬ್ಯಾರಕ್‌ನವರೆಗೆ ನಿಧಾನಗತಿಯ ಓಟ. ಬ್ಯಾರಕ್‌ ತಲುಪುವ ಹೊತ್ತಿಗೆ ಕತ್ತಲಾಗಿರುತ್ತಿತ್ತು.

ಏಕೋ ಇತ್ತೀಚೆಗೆ ಭುಜ್‌ನ ಸೂರ್ಯಾಸ್ತ ಪದೆ ಪದೆ ನೆನಪಾಗತೊಡಗಿದೆ. ಅಲ್ಲಿ ಕಂಡ ತಾಜಾ ಕನಸುಗಳು ಮತ್ತೆ ಮತ್ತೆ ಕಾಡತೊಡಗಿವೆ. ಮೊಬೈಲ್‌ ಇರದ, ಕಂಪ್ಯೂಟರ್‌ ಹೆಸರು ಚಾಲ್ತಿಗೆ ಬಾರದ ಆ ದಿನಗಳ ಅಪ್ಪಟ ತಾಜಾತನ ಮತ್ತೆ ಮತ್ತೆ ನೆನಪಾಗುತ್ತದೆ. ಹೊಸ ಕನಸುಗಳನ್ನು ಕಾಣಬೇಕು. ನನ್ನೆಲ್ಲ ನಿನ್ನೆಗಳನ್ನು ಮರೆತು, ಕಾಣದ ನಾಳೆಗಳ ತಾಜಾತನ ಅನುಭವಿಸಬೇಕೆಂಬ ಉತ್ಕಟ ಹಂಬಲ ಕೊರೆಯತೊಡಗಿದೆ.

ಅಂಥ ತಾಜಾ ನಾಳೆಗಳನ್ನು ನಾನು ಕಾಣುತ್ತೇನಾ? ಅಥವಾ ಗೊತ್ತಿರುವ ಹಳೆಯ ದಾರಿಯ ಮೆದು ಆಕರ್ಷಣೆಗಳಿಗೇ ಈಡಾಗುತ್ತೇನಾ ಎಂಬ ಗೊಂದಲದ ಕವಲು ದಾರಿಯಲ್ಲಿ ಬಂದು ನಿಂತಿದ್ದೇನೆ ಈಗ.

ಎತ್ತ ಹೋಗಲಿ ನಾನು? ಬರೀ ಗೊಂದಲ.

- ಚಾಮರಾಜ ಸವಡಿ