ಮೌನವಾಗಬೇಕು
ಕಿವಿಗೊಡಬೇಕು, ಮಾತಾಗಬಾರದು
ಸುಮ್ಮನೇ ನೋಡಬೇಕು
ಹೀರಿಕೊಂಡು ಸುಮ್ಮನಿರಬೇಕು
ಬೆಳೆಯಬೇಕು ಒಳಗೊಳಗೇ
ಉಕ್ಕುವ ಕಡಲಿಂದ ಸದ್ದು ಬರಬಾರದು
ಹೃದಯ ನಿಟ್ಟುಸಿರಿಡಬಾರದು
ಮುರಿದು ಬೀಳುವ ಸದ್ದಿರಲಿ
ಕಣ್ಣೀರೂ ಶಬ್ದವಾಗಬಾರದು
ಮೌನಕ್ಕೆ ಮಾತುಂಟು
ಥೇಟ್ ಹೃದಯದಂತೆ
ಕೊರಳುಬ್ಬಿ ಸುಮ್ಮನಾದಾಗ
ಎದೆಯಾಳದ್ದೇ ಮಾತು
ಹಾಗಂತ ಸುಮ್ಮನೇ ಕೂತಿದ್ದೇನೆ
ಮಾತು ಮೌನವಾಗಿದೆ
ಮೌನ ಮಾತಾಡುತ್ತಿದೆ
ಕೇಳಿಸಿಕೊಳ್ಳುವ ಕಿವಿಗಳ ಜಾಗದಲ್ಲಿ
ಹೃದಯ ಬಂದು ಕೂತಿದೆ
ಮೌನವಾಗಿ ಉಕ್ಕುವ ಕಡಲು
ಸದ್ದಿಲ್ಲದೇ ಮುರಿದುಬೀಳುವ ಕನಸು
ಆ ಕಾರ್ಗತ್ತಲ ರಾತ್ರಿಯಲಿ
ಗಡಿಯಾರಕ್ಕೂ ಮುನಿಸು
ಇದಿರೋದೇ ಹೀಗೆ
ಇದಿರಬೇಕಾಗಿದ್ದೂ ಹೀಗೇ
ಮಾತಿನಂಥ ಮೌನ
ಮೌನದಂಥ ಮಾತು
ಕನಸುನನಸುಗಳ ಕಲಸುಮೇಲೋಗರದಲ್ಲಿ
ನೆನಪೇ ಮರೆವು
ಮರೆವೇ ನೆನಪು
ಅದೇ ಬದುಕು
ಮತ್ತದೇ ಮರಣ
- ಚಾಮರಾಜ ಸವಡಿ
Showing posts with label ಏಕಾಂತ. Show all posts
Showing posts with label ಏಕಾಂತ. Show all posts
ಬಸ್ ಏಕ್ ಜರಾ, ಸಾಥ್ ಹೋ ತೇರಾ...
23 Jan 2009

ಮನಸ್ಸಿನ ತುಂಬ ಬೇಸರ, ನಿರಾಶೆ ತುಂಬಿದಾಗ ಏನು ಮಾಡಬೇಕು?
ಪ್ರತಿಯೊಬ್ಬ ಮನುಷ್ಯನನ್ನು ಕಾಡುವ ಪ್ರಶ್ನೆಯಿದು. ನಾವು ಎಂಥ ಉತ್ತಮ ಸ್ಥಿತಿಯಲ್ಲೇ ಇರಲಿ, ಯಶಸ್ವಿ ವ್ಯಕ್ತಿಗಳೇ ಆಗಿರಲಿ, ಬೇಸರ ಎಂಬುದನ್ನು ಶಾಶ್ವತವಾಗಿ ತೊಡೆದು ಹಾಕುವುದು ಸಾಧ್ಯವಿಲ್ಲ. ಅದು ಯಾವಾಗ ಬೇಕಾದರೂ ಬರಬಹುದು. ಯಾರಿಗೆ ಬೇಕಾದರೂ ಬರಬಹುದು. ಬಂದು ನಮ್ಮ ಮನಸ್ಸಿನ ನೆಮ್ಮದಿಯನ್ನು ಕಸಿದುಕೊಳ್ಳಬಹುದು. ಅರಸನಿರಲಿ, ಆಳಿರಲಿ, ಎಲ್ಲರೂ ಬೇಸರಕ್ಕೆ ಸಮಾನರೇ.
ಇನ್ನೂ ಒಂದು ದೊಡ್ಡ ರೋಗವಿದೆ. ಅದರ ಹೆಸರು ನಿರಾಶೆ. ಬೇಸರದ ಅಣ್ಣ ಇದು. ಏನೋ ಅಂದುಕೊಂಡಿರುತ್ತೇವೆ. ಆದರೆ, ಅದು ಈಡೇರುವುದಿಲ್ಲ. ಏನೋ ಪ್ರಯತ್ನ ಮಾಡುತ್ತೇವೆ. ಅದು ಯಶಸ್ವಿಯಾಗುವುದಿಲ್ಲ. ನಮ್ಮ ಅತ್ಯುತ್ತಮ ಪ್ರಯತ್ನದ ಹೊರತಾಗಿಯೂ ಗೆಲುವು ನಮಗೆ ದಕ್ಕುವುದಿಲ್ಲ.
ಆಗ, ಮಾಡಿದ್ದೆಲ್ಲ ವ್ಯರ್ಥವಾಯಿತು ಎನ್ನುತ್ತಾರೆ ಸುತ್ತಮುತ್ತಲಿನವರು. ಮಾಡುವುದೇ ವ್ಯರ್ಥ ಎನ್ನುತ್ತಾರೆ ನಿರಾಶವಾದಿಗಳು. ನಿನಗೆ ಸರಿಯಾಗಿ ಮಾಡಲು ಬರುವುದಿಲ್ಲ ಎನ್ನುತ್ತಾರೆ ಅಸೂಯಾಪರರು. ನಾವು ಇಂಥ ಜನರ ಜೊತೆಯೇ ಬದುಕುತ್ತ ಗುರಿ ತಲುಪಬೇಕು. ಎಷ್ಟೋ ಸಾರಿ ನಿರಾಶೆ ಎಂಬುದು ಅಲೆಗಳಂತೆ ಉಕ್ಕುಕ್ಕಿ ಬರುತ್ತದೆ. ನಿರಂತರವಾಗಿ ಅಪ್ಪಳಿಸುತ್ತದೆ. ಒಂದು ಕ್ಷಣ, ಈ ಅಲೆಗಳು ತೀರವನ್ನೇ ನುಂಗಿ ಹಾಕಿಬಿಡುತ್ತವೇನೋ ಎಂದು ತಲ್ಲಣ ಹುಟ್ಟಿಸುತ್ತವೆ.
ಆದರೆ, ಯಾವ ಅಲೆಯೂ ತೀರವನ್ನು ನುಂಗಿ ಹಾಕಿಲ್ಲ. ಅಲೆಗಳು ಸಾವಿರಾರು ಬರಬಹುದು. ನಿರಂತರವಾಗಿ ಅಪ್ಪಳಿಸಬಹುದು. ಆದರೆ, ಮಣ್ಣಿನ ತೀರ ಜಗ್ಗದೇ ನಿಂತಿರುತ್ತದೆ. ಒಂದಿಷ್ಟು ಕೊರೆಯಬಹುದು. ಒಂದಿಷ್ಟು ಕಸಿಯಬಹುದು. ಆದರೆ, ಪೂರ್ತಿಯಾಗಿ ಇಲ್ಲವಾಗಿಸದು. ಯಾವ ಅಲೆಗೂ ತೀರ ನಾಶ ಮಾಡುವ ಶಕ್ತಿಯಿಲ್ಲ.
ಬೇಸರ, ಸೋಲು, ನಿರಾಶೆ, ನೋವು- ಇಂಥ ಸಾವಿರಾರು ಅಲೆಗಳು ಬದುಕಿನ ಕಡಲಲ್ಲಿ ಇದ್ದೇ ಇರುತ್ತವೆ. ಪ್ರತಿಯೊಬ್ಬರ ಜೀವನದಲ್ಲಿಯೂ ಒಂದು ಸಮಯ ಬರುತ್ತದೆ. ಆಗ ಮುಟ್ಟಿದ್ದೆಲ್ಲ ಮಣ್ಣೇ. ಯಾವ ಪ್ರಯತ್ನವೂ ಕೈಗೂಡುವುದಿಲ್ಲ. ಹಾಗೆ ನೋಡಿದರೆ, ನಾವು ಅತ್ಯುತ್ತಮ ಪ್ರಯತ್ನವನ್ನೇ ಮಾಡಿರುತ್ತೇವೆ. ಆದರೆ, ಗೆಲುವು ಮಾತ್ರ ಮರೀಚಿಕೆಯೇ.
ಆಗ ನಿರಾಶೆಯಾಗುವುದು ಸಹಜ. ಇಷ್ಟು ಚೆನ್ನಾಗಿ ಪ್ರಯತ್ನಿಸಿದರೂ ಸಫಲನಾಗಲಿಲ್ಲವಲ್ಲ ಎಂದು ನೋವಾಗುತ್ತದೆ. ನನ್ನ ಪ್ರಯತ್ನದಲ್ಲಿ ದೋಷ ಎಲ್ಲಿತ್ತು ಎಂದು ಮನಸ್ಸು ಪ್ರಶ್ನಿಸುತ್ತದೆ. ಯಾವ ಉತ್ತರವೂ ಹೊಳೆಯುವುದಿಲ್ಲ. ಇದನ್ನು ಇಲ್ಲಿಗೇ ನಿಲ್ಲಿಸಬೇಕು. ಮತ್ತೆ ಪ್ರಯತ್ನಿಸುವುದರಲ್ಲಿ ಯಾವ ಅರ್ಥವೂ ಇಲ್ಲ ಎಂದು ಪದೆ ಪದೆ ಅನ್ನಿಸತೊಡಗುತ್ತದೆ. ಏನೂ ಮಾಡಬೇಕೆಂದರೂ ಮನಸ್ಸು ತೊಡಗುವುದಿಲ್ಲ. ಖುಷಿಯಿಂದ ಎದ್ದು ನಿಲ್ಲುವುದಿಲ್ಲ.
ಅಂಥ ಸಮಯದಲ್ಲಿ ನಾನು ಒಬ್ಬನೇ ಕೂಡುತ್ತೇನೆ. ಶಬ್ದ ಕಡಿಮೆ ಇರುವ, ಬೆಳಕು ಕಡಿಮೆ ಇರುವ ತಾಣ ಹುಡುಕಿ ಮೌನವಾಗಿ ಮಂಥನ ನಡೆಸುತ್ತೇನೆ. ನನ್ನ ವಿಫಲ ಪ್ರಯತ್ನಗಳ ಬಗ್ಗೆ ಯೋಚಿಸುತ್ತೇನೆ. ಇಡೀ ಚಿತ್ರಣ ಕಣ್ಣ ಮುಂದೆ ಬರುತ್ತದೆ. ಒಂದೊಂದೇ ಹಂತವನ್ನು ಎಳೆಎಳೆಯಾಗಿ ಬಿಡಿಸಿ ನೋಡುತ್ತೇನೆ. ಎಲ್ಲಿ ತಪ್ಪಾಯಿತು? ಎಂದು ಹುಡುಕುತ್ತೇನೆ. ಸಾಮಾನ್ಯವಾಗಿ ಉತ್ತರ ಸಿಕ್ಕೇ ಸಿಗುತ್ತದೆ.
ಕೆಲವು ಪ್ರಯತ್ನಗಳು ಇನ್ನಷ್ಟು ತೀವ್ರಗೊಳ್ಳಬೇಕಿರುತ್ತದೆ. ಇನ್ನು ಕೆಲವಕ್ಕೆ ಸಮಯ ಬೇಕಿರುತ್ತದೆ. ಕೆಲವೊಂದರಲ್ಲಿ ನಾನೇ ಎಡವಿರುತ್ತೇನೆ. ಎಲ್ಲ ಎಳೆಗಳನ್ನೂ ಮತ್ತೆ ಜೋಡಿಸಿದ ನಂತರ ಉತ್ತರ ಸಿದ್ಧವಾಗುತ್ತದೆ. ಮರಳಿ ಯತ್ನವ ಮಾಡಲು ಮನಸ್ಸು ಹುರುಪುಗೊಳ್ಳುತ್ತದೆ.
ಮನಸ್ಸೇ ದೊಡ್ಡ ಕಡಲು. ಅಲ್ಲಿ ನಿತ್ಯ ಅಲೆಗಳು ಎದ್ದೇ ಏಳುತ್ತವೆ. ಕೆಲವೊಂದು ಅಲೆಗಳು ಭೀಕರ. ಆದರೆ, ಎಂಥ ಅಲೆಯೇ ಆದರೂ ಅದು ಮತ್ತೆ ಕಡಲಿನಲ್ಲಿ ಲೀನವಾಗಲೇಬೇಕು.
ಸ್ವಸ್ಥ ಮನಸ್ಸು ಸೋತ ಮನಸ್ಸನ್ನು ಸಂತೈಸುತ್ತದೆ. ನಿರಾಶೆಯನ್ನು ಭರವಸೆ ಮೈದಡವುತ್ತದೆ. ವಿವೇಕ ಉದ್ರೇಕವನ್ನು ಶಮನ ಮಾಡುತ್ತದೆ. ಮನಸ್ಸೇ ಮಿತ್ರನಂತೆ ಸಂತೈಸಿ ಸ್ವಸ್ಥನನ್ನಾಗಿಸುತ್ತದೆ.
’ಹರ್ ತೂಫಾನ್ ಮೈ ಕರೂಂಗಿ ಸಾಮನಾ
ಬಸ್ ಏಕ್ ಜರಾ, ಸಾಥ್ ಹೋ ತೇರಾ’
ಎಂಬ ಸಿನಿಮಾ ಗೀತೆ ನೆನಪಾಗುತ್ತದೆ.
ಮನಸ್ಸು ಮತ್ತೆ ಉಲ್ಲಸಿತವಾಗುತ್ತದೆ. ಹೊಸ ಕನಸಿಗೆ, ಪ್ರಯತ್ನಕ್ಕೆ ಸಿದ್ಧವಾಗಿ ತುಡಿಯತೊಡಗುತ್ತದೆ.
- ಚಾಮರಾಜ ಸವಡಿ
ಹೊತ್ತಲ್ಲದ ಹೊತ್ತಿನಲ್ಲಿ ಹೊತ್ತಿಗೆ ತೆರೆದು...
22 Jan 2009

ರಾತ್ರಿಯಾಗಿದೆ.
ಎಲೆಕ್ಟ್ರಾನಿಕ್ ಗಡಿಯಾರವಾದ್ದರಿಂದ ಟಿಕ್ ಟಿಕ್ ಸದ್ದಿಲ್ಲ. ಡಿಜಿಟಲ್ ಅಂಕೆಗಳಿರುವುದರಿಂದ ಮುಳ್ಳುಗಳು ಕಾಣುವುದಿಲ್ಲ. ಗಂಟೆಗೊಮ್ಮೆ ಸಂಗೀತ ಮೊಳಗಿಸಿ, ಗಂಟೆಯ ಸದ್ದು ಹೊರಡಿಸುವುದನ್ನು ಬಿಟ್ಟರೆ ಗಡಿಯಾರ ತನ್ನ ಗಡಿ ದಾಟಿ ತೊಂದರೆ ಕೊಡುವುದಿಲ್ಲ.
ಮಕ್ಕಳು ಮಲಗಿರುತ್ತವೆ. ಮಡದಿಗೂ ಗಾಢ ನಿದ್ರೆ. ಕಚೇರಿಯ ಉದ್ವೇಗವನ್ನು ಇಳಿಸಿಕೊಳ್ಳಲು ಮೌನವಾಗಿ ಕೂತವನಿಗೆ ಕಂಪ್ಯೂಟರ್ ತೆರೆಯುವುದು ಏಕೋ ಬೇಸರ.
ಸ್ವಲ್ಪ ಹೊತ್ತು ಸುಮ್ಮನೇ ಕೂಡುತ್ತೇನೆ. ಸಾವಿರ ನೆನಪುಗಳು ಮುಕುರಿಕೊಳ್ಳುತ್ತವೆ. ಬಾಲ್ಯ, ಹರೆಯ, ಓದಿನ ಗುಂಗು, ಬಡತನ, ಹಳ್ಳಿ, ಬೀಸುವ ಗಾಳಿ, ಕೆಟ್ಟ ಬಿಸಿಲು, ಹಸಿವು ನೆನಪಾಗುತ್ತವೆ. ಗದಗ ಜಿಲ್ಲೆ, ರೋಣ ತಾಲ್ಲೂಕಿನ ಕೋಡಿಕೊಪ್ಪ ಎಂಬ ಹಳ್ಳಿಯಲ್ಲಿ ಕಳೆದ ಮೂರು ವರ್ಷಗಳು ಕಣ್ಮುಂದೆ ಸುಳಿಯುತ್ತವೆ. ನನ್ನ ಬದುಕು ಯಾವತ್ತೂ ಬದಲಾಗುವುದಿಲ್ಲ ಬಿಡು ಅಂತ ಅದೆಷ್ಟು ಸಾವಿರ ಸಲ ಹೇಳಿಕೊಂಡಿದ್ದೆನೋ ಅಲ್ಲಿ. ಆದರೆ, ನೋಡನೋಡುತ್ತ ಬದುಕು ಬದಲಾಗುತ್ತಲೇ ಹೋಯಿತು. ಹೌದು: Things fall apart. ಏಕೆಂದರೆ, centre can not hold.
ಪುಸ್ತಕಗಳು ಸೆಳೆಯುತ್ತವೆ. ಇದ್ದ ಷೆಲ್ಫ್ ತುಂಬಿದ್ದರಿಂದ, ಡಬ್ಬದಲ್ಲಿರುವ ಪುಸ್ತಕಗಳನ್ನು ಹೊರತೆಗೆಯಲೇ ಆಗಿಲ್ಲ. ಬೇಂದ್ರೆಯವರ ಬಹುತೇಕ ಕವನ ಸಂಕಲನಗಳು ಒಂದೆಡೆ ಕೂತಿವೆ. ಬೇಂದ್ರೆ ಓದುತ್ತಿದ್ದರೆ ಮನಸ್ಸು ಹರಿಯುವ ನೀರಾಗುತ್ತದೆ. ಅಲ್ಲಮಪ್ರಭು ಹೇಳಿದ್ದಾರಲ್ಲ: ಹರಿವ ನೀರಿಗೆ ಮೈಯೆಲ್ಲಾ ಕೈಕಾಲು. ಎಂಥ ಉದಾತ್ತ ವಿಚಾರ!
ಒಂದಿಷ್ಟು ವಚನಗಳನ್ನು ಓದಬೇಕು. ದೂರದಲ್ಲಿರುವ ಮಿತ್ರ ರಾಮಪ್ರಸಾದ್ (ಹಂಸಾನಂದಿ) ಅವರ ದಾಸರ ಸಂಕಲನಗಳನ್ನೂ ಓದಬೇಕು. ಆ ಕುರಿತು ನಿಯಮಿತವಾಗಿ ಬರೆಯಬೇಕು. ಕನ್ನಡದ ಅಷ್ಟೂ ಸೊಗಸನ್ನು ಭಕ್ತಿ ಸಾಹಿತ್ಯವೇ ಭಟ್ಟಿ ಇಳಿಸಿಕೊಂಡಿದೆ ಎಂಬಷ್ಟು ತೀವ್ರವಾಗಿರುವ ವಚನ-ದಾಸರ ಪದಗಳನ್ನು ಆಗಾಗ ನೋಡುತ್ತಿದ್ದರೂ ಸಾಕು, ಮನಸ್ಸು ಸ್ವಸ್ಥವಾಗುತ್ತದೆ. ಬರವಣಿಗೆ ಸುಲಭವಾಗುತ್ತದೆ. ಆದರೆ, ನನ್ನ ಹತ್ತಿರ ಈ ಸರಕೇ ಇಲ್ಲ ಎಂಬುದು ಅರಿವಾದಾಗ, ಕ್ಷಣ ಕಾಲ ಪೆಚ್ಚೆನಿಸಿತು.
ಒಂದಿಷ್ಟು ಇಂಗ್ಲಿಷ್ ಕವಿತಾ ಸಂಕಲನಗಳನ್ನು ತರಬೇಕು. ಎಜ್ರಾ ಪೌಂಡ್‌ನ ಕವಿತೆಗಳು, ರಸ್ಕಿನ್ ಬಾಂಡ್‌ನ ಕತೆಗಳು, ವಿ.ಎಸ್. ನಾಯ್‌ಪಾಲ್‌ರ ಗದ್ಯ, ಕಮಲಾ ದಾಸ್ ಪದ್ಯ- ಎಲ್ಲ ಸೇರಿಸಿಕೊಂಡು ಸುಮ್ಮನೇ ಒಂದಿಷ್ಟು ಕತೆಗಳನ್ನು ಅನುವಾದ ಮಾಡಬೇಕು. ಕವಿತೆಗಳನ್ನು ಬರೆಯಬೇಕು ಎಂದು ಅಂದುಕೊಂಡು ಖುಷಿಪಟ್ಟೆ.
ರಸ್ಕಿನ್ ಬಾಂಡ್‌ನ ಎರಡು ಕತೆಗಳ ಅನುವಾದಗಳು ಈಗಾಗಲೇ ಪತ್ರಿಕೆಗಳಲ್ಲಿ ಅಚ್ಚಾಗಿವೆ. ಸಂಪದದಲ್ಲಿ ಅವನ್ನೇ ಮೊದಲು ಹಾಕಬೇಕು. ನಂತರ ನನಗೆ ಹಿಡಿಸಿದ ಕತೆಗಳನ್ನು ನಿಯಮಿತವಾಗಿ ಅನುವಾದ ಮಾಡಿದರೆ ಹೇಗೆ ಎಂದೂ ಯೋಚಿಸಿದೆ. ಅದೇ ರೀತಿ ಒಂದಿಷ್ಟು ಕವಿತೆಗಳನ್ನೂ ಅನುವಾದ ಮಾಡಬೇಕು. ಒಂದೆರಡು ತಿಂಗಳಲ್ಲಿ ಈ ಕೆಲಸ ಒಂದು ಹದಕ್ಕೆ ಬರಬೇಕು ಎಂದೂ ಕಟ್ಟು ಹಾಕಿಕೊಂಡೆ.
ಗಂಟೆ ಹನ್ನೆರಡಾಗಿರಬೇಕು. ಎಲೆಕ್ಟ್ರಾನಿಕ್ ಗಡಿಯಾರ ಮೆಲ್ಲಗೇ ಮೊಳಗಿತು. ಮೊದಲು ಒಂದಿಷ್ಟು ಸಂಗೀತ. ನಂತರ ಢಣ್ ಢಣ್ ಗಂಟಾನಾದ. ರಾತ್ರಿಯ ಕಾವಳದಲ್ಲಿ ಒಬ್ಬನೇ ಸುಮ್ಮನೇ ಕೂತಿದ್ದನ್ನು ನೋಡಿದವರು ನನ್ನ ಮನಃಸ್ಥಿತಿಯ ಬಗ್ಗೆ ಅನುಮಾನಪಟ್ಟಾರು ಎಂದೂ ಅನಿಸಿತು. ಓದದೇ ಮಲಗಲಾರೆ. ಬೇಂದ್ರೆಯವರ ಕವಿತಾ ಸಂಕಲನ ಹಿಡಿದು ಕೂತೆ.
ಮನಸ್ಸು ಪಾತರಗಿತ್ತಿ ಪಕ್ಕವಾಯಿತು. ನೆನಪುಗಳಿಂದ ನೆನಪುಗಳಿಗೆ ಹಾರುತ್ತ ಹಾರುತ್ತ ಹೊರಟಿತು. ಅದರ ಹಿಂದೆ ಹೊರಟ ಮನಸ್ಸು ಎಲ್ಲಿ ಕಳೆದುಹೋಯಿತೋ-
ನಸುಕಿನಲ್ಲಿ ಎಚ್ಚರವಾದಾಗ, ಬೇಂದ್ರೆ ಪುಸ್ತಕ ಪಕ್ಕದಲ್ಲಿ ಮಲಗಿತ್ತು. ಅದರೊಳಗಿನ ಕನಸುಗಳು ಮಾತ್ರ ಈ ಚಳಿಯಲ್ಲಿಯೂ ಬೆಚ್ಚಗಿವೆ.
- ಚಾಮರಾಜ ಸವಡಿ
ಮತ್ತದೇ ಖಾಲಿತನ, ಬೇಸರ
7 Aug 2008

ಹಾಡುಗಳ ಸಿಡಿ ಇಟ್ಟಲ್ಲೇ ಇದೆ. ಒಂದೇ ಕ್ಲಿಕ್ಕಿಗೆ ಕಿಶೋರ್ ಹಾಡತೊಡಗುತ್ತಾನೆ. ಆದರೆ ಬೆರಳುಗಳು ಚಲಿಸುವುದಿಲ್ಲ.
ಕೈ ಚಾಚಿದರೆ ಕಗ್ಗ ಸಿಗುತ್ತದೆ. ಡಿವಿಜಿ ವೇದಾಂತ ಹೇಳುತ್ತಾರೆ. ಡಾಮ್ನಿಕ್ ಲ್ಯಾಪಿಯರ್ ಚೆಂದಗೆ ಕತೆ ಹೇಳುತ್ತಾನೆ. ತರುಣ್ ತೇಜ್‌ಪಾಲ್ ಇದ್ದಕ್ಕಿದ್ದಂತೆ ಖಾಲಿಯಾದ ಸ್ಥಿತಿ ವರ್ಣಿಸುತ್ತಾನೆ. ಭೈರಪ್ಪನವರು ಸಾರ್ಥ ಹೊರಡುತ್ತಾರೆ. ತಾವು ಖಾಲಿಯಾಗಿದ್ದೇವೆ ಎಂಬುದನ್ನು ಅನಂತಮೂರ್ತಿ ಋಜುವಾತು ಮಾಡುತ್ತಾರೆ. ಆದರೂ ಕೈ ಚಾಚುವುದಿಲ್ಲ.
ಜೇಬಲ್ಲೇ ಇದೆ ಕೀಲಿ. ಬೆರಳೊತ್ತಿದರೆ ಸ್ಕೂಟಿ ಶುರುವಾಗುತ್ತದೆ. ಎಂಟೂ ದಿಕ್ಕುಗಳಿಗೆ ಯಾತ್ರೆ ಹೊರಡಬಲ್ಲುದು. ಆದರೂ ಕೈ ಸುಮ್ಮನಿದೆ.
ಎರಡೇ ಬಟನ್ನಿಗೆ ಮೆಚ್ಚಿನ ಚಾನೆಲ್ ಪ್ರತ್ಯಕ್ಷವಾಗುತ್ತದೆ. ಗಂಟೆ ಒಂಬತ್ತಾಯಿತೆ? ಪ್ರೈಮ್ ನ್ಯೂಸ್ ಬರುತ್ತಿರುತ್ತವೆ. ಏಕೋ ಸುದ್ದಿಗಳು ಬೇಸರ ಹುಟ್ಟಿಸುತ್ತವೆ. ರಿಮೋಟ್ ಅಲ್ಲೇ ಕೂತಿದೆ. ಆಜ್ಞೆಗಾಗಿ ಕಾಯುವ ಸಾಕುನಾಯಿಯಂತೆ.
ಯಾವಾಗ ಬೇಕಾದರೂ ಮೊಳಗಬಲ್ಲ ಮೊಬೈಲ್ ಪಕ್ಕಕ್ಕಿದೆ, ಥೇಟ್ ಸಿಡಿಯಲು ಸಿದ್ಧವಾದ ಬಾಂಬ್‌ನಂತೆ. ಬೆರಳೊತ್ತಿದರೆ ಇಷ್ಟಪಡುವ ಹಲವಾರು ಮಿತ್ರರು ಅಂಕೆಗಳಾಗಿ ಕಾಯುತ್ತಿದ್ದಾರೆ. ಆದರೂ ಕೈ ಅತ್ತ ಸರಿಯುತ್ತಿಲ್ಲ.
ಹಳೆಯ ಫೊಟೊಗಳ ಆಲ್ಬಮ್ಮುಗಳಿವೆ. ಅಚ್ಚಾದ ರಾಶಿರಾಶಿ ಪತ್ರಿಕೆಗಳಿವೆ. ಅಚ್ಚಿಗೆ ಕೊಡದೇ ಹಾಗೇ ಇಟ್ಟುಕೊಂಡ ನೂರಾರು ಬರಹಗಳಿವೆ. ಕಣ್ಣು ಮುಚ್ಚಿದರೆ ಮನಸ್ಸು ಮೂವತ್ತು ವರ್ಷ ಹಿಂದಕ್ಕೂ ಹೋಗಬಲ್ಲುದು. ಎಳೆಎಳೆಯನ್ನೂ ಹೆಕ್ಕಿ ನೆನಪಿನ ಚಾದರ ನೇಯಬಲ್ಲುದು. ಯಾವುದೋ ಎಳೆ ಹಿಡಿದೆಳೆದರೆ ಹಾಡಾಗುತ್ತದೆ, ಪ್ರಬಂಧವಾಗುತ್ತದೆ, ಕತೆಯಾಗುತ್ತದೆ, ಕೊಂಚ ಶ್ರದ್ಧೆಯಿಂದ ಕೂತರೆ ಕವಿತೆಯೂ ಆಗುತ್ತದೆ. ಆದರೂ ಮನಸ್ಸು ಸುಮ್ಮನಿದೆ.
ಕಿಟಕಿಯಾಚೆಯ ಬಾಳೆ ಗಿಡವೂ ಸುಮ್ಮನಿದೆ. ಜೊತೆಗಿದ್ದು ನೆಮ್ಮದಿ ನೀಡುತ್ತಿದ್ದ ಪೆನ್ನೂ ಸುಮ್ಮನಿದೆ. ರಿಮೋಟ್ ಸುಮ್ಮನಿದೆ. ಗಾಡಿಯ ಇಗ್ನಿಷನ್ ಕೀ ಸುಮ್ಮನಿದೆ. ಮೊಬೈಲ್ ಅನ್ನು ನಾನೇ ಸುಮ್ಮನಾಗಿಸಿದ್ದೇನೆ. ಏಕೋ ಗದ್ದಲ ಮಾಡುವ ಮಕ್ಕಳೂ ಮಲಗಿದ್ದಾರೆ. ಮತ್ತೇನು ವಿಶೇಷ ಎನ್ನುವ ಮಡದಿಯೂ ಮಲಗಿದ್ದಾಳೆ. ಏನೂ ವಿಶೇಷ ಇಲ್ಲವೆನ್ನುವಂತೆ ಬೆಂಗಳೂರಿನ ಗದ್ದಲದ ಟ್ರಾಫಿಕ್ಕೂ ಮೌನವಾಗಿದೆ.
ಬೀಟ್ ಪೋಲೀಸನ ಸಿಳ್ಳೆಯೂ ಕೇಳುತ್ತಿಲ್ಲ. ಸಂಗಾತಿಗಾಗಿ ಬೊಗಳುವ ನಾಯಿಯೂ ಸುಮ್ಮನಿದೆ. ಇಷ್ಟೊತ್ತಿಗೆ ಹೋಗಬೇಕಿದ್ದ ಕರೆಂಟ್ ಕೂಡ ಏತಕ್ಕೋ ಕಾಯುವಂತೆ ಬೆಳಗುತ್ತಲೇ ಇದೆ. ಮೋಡ ಚೆದುರಿ ಅಚ್ಚರಿಯಿಂದ ಚಂದ್ರ ಕೂಡ ಹೊರಬಂದಿದ್ದಾನೆ.
ಮರೆಯದೇ ಗೇಟ್ ಬೀಗ ಹಾಕಿದ್ದೇನೆ. ಗಾಡಿ ಲಾಕ್ ಮಾಡಿದ್ದೇನೆ. ಚಾರ್ಜಿಂಗ್ ದೀಪಗಳನ್ನು ಪ್ಲಗ್ಗಿಗೆ ಸಿಕ್ಕಿಸಿದ್ದೇನೆ. ಬಾಗಿಲುಗಳನ್ನು ಭದ್ರವಾಗಿ ಮುಚ್ಚಿದ್ದೇನೆ. ನಿನ್ನೆಯ ಕೆಲಸಗಳು ಕರಾರುವಾಕ್ಕಾಗಿ ಮುಗಿದಿವೆ. ನಾಳೆ ಏನು ಮಾಡಬೇಕೆಂಬುದು ಇಂದೇ ಸ್ಪಷ್ಟವಾಗಿದೆ.
ಇವತ್ತು ಮಾಡುವುದು ಏನು?
ಮತ್ತದೇ ಬೇಸರ, ಖಾಲಿತನ, ಏಕಾಂತ !
- ಚಾಮರಾಜ ಸವಡಿ
Subscribe to:
Comments (Atom)

