ಹೊತ್ತಲ್ಲದ ಹೊತ್ತಿನಲ್ಲಿ ಹೊತ್ತಿಗೆ ತೆರೆದು...

22 Jan 2009


ರಾತ್ರಿಯಾಗಿದೆ.

ಎಲೆಕ್ಟ್ರಾನಿಕ್‌ ಗಡಿಯಾರವಾದ್ದರಿಂದ ಟಿಕ್‌ ಟಿಕ್‌ ಸದ್ದಿಲ್ಲ. ಡಿಜಿಟಲ್‌ ಅಂಕೆಗಳಿರುವುದರಿಂದ ಮುಳ್ಳುಗಳು ಕಾಣುವುದಿಲ್ಲ. ಗಂಟೆಗೊಮ್ಮೆ ಸಂಗೀತ ಮೊಳಗಿಸಿ, ಗಂಟೆಯ ಸದ್ದು ಹೊರಡಿಸುವುದನ್ನು ಬಿಟ್ಟರೆ ಗಡಿಯಾರ ತನ್ನ ಗಡಿ ದಾಟಿ ತೊಂದರೆ ಕೊಡುವುದಿಲ್ಲ.

ಮಕ್ಕಳು ಮಲಗಿರುತ್ತವೆ. ಮಡದಿಗೂ ಗಾಢ ನಿದ್ರೆ. ಕಚೇರಿಯ ಉದ್ವೇಗವನ್ನು ಇಳಿಸಿಕೊಳ್ಳಲು ಮೌನವಾಗಿ ಕೂತವನಿಗೆ ಕಂಪ್ಯೂಟರ್‌ ತೆರೆಯುವುದು ಏಕೋ ಬೇಸರ.

ಸ್ವಲ್ಪ ಹೊತ್ತು ಸುಮ್ಮನೇ ಕೂಡುತ್ತೇನೆ. ಸಾವಿರ ನೆನಪುಗಳು ಮುಕುರಿಕೊಳ್ಳುತ್ತವೆ. ಬಾಲ್ಯ, ಹರೆಯ, ಓದಿನ ಗುಂಗು, ಬಡತನ, ಹಳ್ಳಿ, ಬೀಸುವ ಗಾಳಿ, ಕೆಟ್ಟ ಬಿಸಿಲು, ಹಸಿವು ನೆನಪಾಗುತ್ತವೆ. ಗದಗ ಜಿಲ್ಲೆ, ರೋಣ ತಾಲ್ಲೂಕಿನ ಕೋಡಿಕೊಪ್ಪ ಎಂಬ ಹಳ್ಳಿಯಲ್ಲಿ ಕಳೆದ ಮೂರು ವರ್ಷಗಳು ಕಣ್ಮುಂದೆ ಸುಳಿಯುತ್ತವೆ. ನನ್ನ ಬದುಕು ಯಾವತ್ತೂ ಬದಲಾಗುವುದಿಲ್ಲ ಬಿಡು ಅಂತ ಅದೆಷ್ಟು ಸಾವಿರ ಸಲ ಹೇಳಿಕೊಂಡಿದ್ದೆನೋ ಅಲ್ಲಿ. ಆದರೆ, ನೋಡನೋಡುತ್ತ ಬದುಕು ಬದಲಾಗುತ್ತಲೇ ಹೋಯಿತು. ಹೌದು: Things fall apart. ಏಕೆಂದರೆ, centre can not hold.

ಪುಸ್ತಕಗಳು ಸೆಳೆಯುತ್ತವೆ. ಇದ್ದ ಷೆಲ್ಫ್‌ ತುಂಬಿದ್ದರಿಂದ, ಡಬ್ಬದಲ್ಲಿರುವ ಪುಸ್ತಕಗಳನ್ನು ಹೊರತೆಗೆಯಲೇ ಆಗಿಲ್ಲ. ಬೇಂದ್ರೆಯವರ ಬಹುತೇಕ ಕವನ ಸಂಕಲನಗಳು ಒಂದೆಡೆ ಕೂತಿವೆ. ಬೇಂದ್ರೆ ಓದುತ್ತಿದ್ದರೆ ಮನಸ್ಸು ಹರಿಯುವ ನೀರಾಗುತ್ತದೆ. ಅಲ್ಲಮಪ್ರಭು ಹೇಳಿದ್ದಾರಲ್ಲ: ಹರಿವ ನೀರಿಗೆ ಮೈಯೆಲ್ಲಾ ಕೈಕಾಲು. ಎಂಥ ಉದಾತ್ತ ವಿಚಾರ!

ಒಂದಿಷ್ಟು ವಚನಗಳನ್ನು ಓದಬೇಕು. ದೂರದಲ್ಲಿರುವ ಮಿತ್ರ ರಾಮಪ್ರಸಾದ್‌ (ಹಂಸಾನಂದಿ) ಅವರ ದಾಸರ ಸಂಕಲನಗಳನ್ನೂ ಓದಬೇಕು. ಆ ಕುರಿತು ನಿಯಮಿತವಾಗಿ ಬರೆಯಬೇಕು. ಕನ್ನಡದ ಅಷ್ಟೂ ಸೊಗಸನ್ನು ಭಕ್ತಿ ಸಾಹಿತ್ಯವೇ ಭಟ್ಟಿ ಇಳಿಸಿಕೊಂಡಿದೆ ಎಂಬಷ್ಟು ತೀವ್ರವಾಗಿರುವ ವಚನ-ದಾಸರ ಪದಗಳನ್ನು ಆಗಾಗ ನೋಡುತ್ತಿದ್ದರೂ ಸಾಕು, ಮನಸ್ಸು ಸ್ವಸ್ಥವಾಗುತ್ತದೆ. ಬರವಣಿಗೆ ಸುಲಭವಾಗುತ್ತದೆ. ಆದರೆ, ನನ್ನ ಹತ್ತಿರ ಈ ಸರಕೇ ಇಲ್ಲ ಎಂಬುದು ಅರಿವಾದಾಗ, ಕ್ಷಣ ಕಾಲ ಪೆಚ್ಚೆನಿಸಿತು.

ಒಂದಿಷ್ಟು ಇಂಗ್ಲಿಷ್‌ ಕವಿತಾ ಸಂಕಲನಗಳನ್ನು ತರಬೇಕು. ಎಜ್ರಾ ಪೌಂಡ್‌ನ ಕವಿತೆಗಳು, ರಸ್ಕಿನ್‌ ಬಾಂಡ್‌ನ ಕತೆಗಳು, ವಿ.ಎಸ್‌. ನಾಯ್‌ಪಾಲ್‌ರ ಗದ್ಯ, ಕಮಲಾ ದಾಸ್‌ ಪದ್ಯ- ಎಲ್ಲ ಸೇರಿಸಿಕೊಂಡು ಸುಮ್ಮನೇ ಒಂದಿಷ್ಟು ಕತೆಗಳನ್ನು ಅನುವಾದ ಮಾಡಬೇಕು. ಕವಿತೆಗಳನ್ನು ಬರೆಯಬೇಕು ಎಂದು ಅಂದುಕೊಂಡು ಖುಷಿಪಟ್ಟೆ.

ರಸ್ಕಿನ್‌ ಬಾಂಡ್‌ನ ಎರಡು ಕತೆಗಳ ಅನುವಾದಗಳು ಈಗಾಗಲೇ ಪತ್ರಿಕೆಗಳಲ್ಲಿ ಅಚ್ಚಾಗಿವೆ. ಸಂಪದದಲ್ಲಿ ಅವನ್ನೇ ಮೊದಲು ಹಾಕಬೇಕು. ನಂತರ ನನಗೆ ಹಿಡಿಸಿದ ಕತೆಗಳನ್ನು ನಿಯಮಿತವಾಗಿ ಅನುವಾದ ಮಾಡಿದರೆ ಹೇಗೆ ಎಂದೂ ಯೋಚಿಸಿದೆ. ಅದೇ ರೀತಿ ಒಂದಿಷ್ಟು ಕವಿತೆಗಳನ್ನೂ ಅನುವಾದ ಮಾಡಬೇಕು. ಒಂದೆರಡು ತಿಂಗಳಲ್ಲಿ ಈ ಕೆಲಸ ಒಂದು ಹದಕ್ಕೆ ಬರಬೇಕು ಎಂದೂ ಕಟ್ಟು ಹಾಕಿಕೊಂಡೆ.

ಗಂಟೆ ಹನ್ನೆರಡಾಗಿರಬೇಕು. ಎಲೆಕ್ಟ್ರಾನಿಕ್‌ ಗಡಿಯಾರ ಮೆಲ್ಲಗೇ ಮೊಳಗಿತು. ಮೊದಲು ಒಂದಿಷ್ಟು ಸಂಗೀತ. ನಂತರ ಢಣ್‌ ಢಣ್‌ ಗಂಟಾನಾದ. ರಾತ್ರಿಯ ಕಾವಳದಲ್ಲಿ ಒಬ್ಬನೇ ಸುಮ್ಮನೇ ಕೂತಿದ್ದನ್ನು ನೋಡಿದವರು ನನ್ನ ಮನಃಸ್ಥಿತಿಯ ಬಗ್ಗೆ ಅನುಮಾನಪಟ್ಟಾರು ಎಂದೂ ಅನಿಸಿತು. ಓದದೇ ಮಲಗಲಾರೆ. ಬೇಂದ್ರೆಯವರ ಕವಿತಾ ಸಂಕಲನ ಹಿಡಿದು ಕೂತೆ.

ಮನಸ್ಸು ಪಾತರಗಿತ್ತಿ ಪಕ್ಕವಾಯಿತು. ನೆನಪುಗಳಿಂದ ನೆನಪುಗಳಿಗೆ ಹಾರುತ್ತ ಹಾರುತ್ತ ಹೊರಟಿತು. ಅದರ ಹಿಂದೆ ಹೊರಟ ಮನಸ್ಸು ಎಲ್ಲಿ ಕಳೆದುಹೋಯಿತೋ-

ನಸುಕಿನಲ್ಲಿ ಎಚ್ಚರವಾದಾಗ, ಬೇಂದ್ರೆ ಪುಸ್ತಕ ಪಕ್ಕದಲ್ಲಿ ಮಲಗಿತ್ತು. ಅದರೊಳಗಿನ ಕನಸುಗಳು ಮಾತ್ರ ಈ ಚಳಿಯಲ್ಲಿಯೂ ಬೆಚ್ಚಗಿವೆ.

- ಚಾಮರಾಜ ಸವಡಿ

No comments: