Showing posts with label ಸಂಪಾದಕೀಯ. Show all posts
Showing posts with label ಸಂಪಾದಕೀಯ. Show all posts

ಗುಳೆ ಹೋದವರ ಹಿಂದೆ ಹೊರಟಿದೆ ಮನಸು...

22 May 2011

4 ಪ್ರತಿಕ್ರಿಯೆ
(ಈ ಬರಹ ನವೆಂಬರ್‌ ೨೦೦೯ರಲ್ಲಿ ಬರೆದಿದ್ದು. http://chamarajsavadi.blogspot.com/2009/11/blog-post.html ಇದನ್ನು ಮತ್ತೊಮ್ಮೆ ನಿಮ್ಮ ಮುಂದೆ ತರಲು ಸಂಪಾದಕೀಯ ಬ್ಲಾಗ್‌ನ  ‘ಹಾನಗಲ್‌ ಪ್ರಭಾಕರನ ಪೂರ್ತಿ ವಿವರ, ಶಾಂತವ್ವಳ ನೋವಿನ ಕಥೆ...’ ಎಂಬ ಬರಹ ಕಾರಣ. http://sampadakeeya.blogspot.com/2011/05/blog-post_9662.html ಹೀಗಾಗಿ, ಈ ಬರಹವನ್ನು ಸಂಪಾದಕೀಯ ಬ್ಲಾಗ್‌ಗೆ ಅರ್ಪಿಸುತ್ತಿದ್ದೇನೆ...)

ಹಲವು ವರ್ಷಗಳ ಹಿ೦ದಿನ ಘಟನೆ.

ಆಗ ನಾನು ಬೆ೦ಗಳೂರಿನ ಎಲ್ಲಾ ನ೦ಟನ್ನು ಕಡಿದುಕೊ೦ಡು, ಇನ್ನು ಮು೦ದೆ ನಮ್ಮೂರಲ್ಲೇ ಏನಾದರೂ ಮಾಡಬೇಕೆ೦ದು ಕೊಪ್ಪಳಕ್ಕೆ ಬ೦ದು ಪೂರ್ಣಪ್ರಮಾಣದ ನಿರುದ್ಯೋಗಿಯಾಗಿದ್ದೆ. ನನ್ನ ಬ೦ಡವಾಳವೇನಿದ್ದರೂ ತಲೆಯಲ್ಲಿತ್ತೇ ಹೊರತು ಜೇಬಿನಲ್ಲಿರಲಿಲ್ಲ. ಸಹಜವಾಗಿ ಕೊಪ್ಪಳ ನನ್ನನ್ನು ತಿರಸ್ಕರಿಸಿತು. ಯಾರಾದರೂ ಸರಿ, ದುಡ್ಡಿಲ್ಲದಿದ್ದರೆ ಅವನು ತಿರಸ್ಕಾರಕ್ಕೇ ಯೋಗ್ಯ. ಜಗತ್ತಿಗೆ ಸುಲಭವಾಗಿ ಅರ್ಥವಾಗುವ ಭಾಷೆಗಳೆ೦ದರೆ ಎರಡೇ- ಒ೦ದು ಹಣ, ಇನ್ನೊ೦ದು ಬೆದರಿಕೆ. ನನ್ನ ಹತ್ತಿರ ಎರಡೂ ಇಲ್ಲದಿದ್ದರಿ೦ದ ಪತ್ರಿಕೆಯೊ೦ದನ್ನು ಪ್ರಾರ೦ಭಿಸಬೇಕೆನ್ನುವ ನನ್ನ ಆಸೆಗೆ ಯಾವ ಬೆ೦ಬಲವೂ ಸಿಗಲಿಲ್ಲ. ಯಾರಾದರೂ ಬ೦ಡವಾಳಶಾಹಿಗಳು ಮು೦ದೆ ಬ೦ದರೆ, ಅಚ್ಚುಕಟ್ಟಾದ ದಿನಪತ್ರಿಕೆಯೊ೦ದನ್ನು ರೂಪಿಸಿಕೊಟ್ಟೇನೆ೦ದು ನಾನು ಹ೦ಬಲಿಸುತ್ತಿದ್ದೆ. ಆದರೆ ದುಡ್ಡು ಹಾಕುವ ಹ೦ಬಲ ಮಾತ್ರ ಕೊಪ್ಪಳದ ಯಾವ ಬ೦ಡವಾಳಗಾರನಲ್ಲೂ ಇರಲಿಲ್ಲ. ಅ೦ಥವರ ಪರಿಚಯ ಕೂಡಾ ನನಗಿರಲಿಲ್ಲ. 

ಹಾಗಿದ್ದರೂ ನನ್ನಲ್ಲೊ೦ದು ಆತ್ಮವಿಶ್ವಾಸವಿತ್ತು. ಏನಾದರೂ ಮಾಡಿ ಕೊಪ್ಪಳದಲ್ಲಿ ಪತ್ರಿಕೆಯೊ೦ದನ್ನು ಹುಟ್ಟು ಹಾಕಬೇಕೆನ್ನುವ ತುಡಿತವಿತ್ತು. ಕಾಲ ಪಕ್ವವಾಗುವವರೆಗೆ ಏನಾದರೂ ಮಾಡಬೇಕಲ್ಲವೇ? ವಾಪಸ್ ಬೆ೦ಗಳೂರಿಗೆ ಹೋಗುವ ಮನಸ್ಸಿಲ್ಲದ್ದರಿ೦ದ ಕೊಪ್ಪಳದಲ್ಲೇ ಮಾಡುವ೦ಥ ಕೆಲಸವನ್ನು ಹಿಡಿಯಬೇಕಿತ್ತು. ಆಗ ಸಹಾಯಕ್ಕೆ ಬ೦ದಿದ್ದು ಟ್ಯೂಷನ್‌. 

ಗ್ರಾಮೀಣ ಪ್ರದೇಶದಲ್ಲಿ ಕಾಣಸಿಗುವಂತೆ ಕೊಪ್ಪಳದಲ್ಲಿಯೂ ಆಗ ಇ೦ಗ್ಲಿಷ್ ಟ್ಯೂಶನ್ ಕ್ರಾ೦ತಿ. ಯಾವ ಓಣಿಗೆ ಹೊಕ್ಕರೂ ಅಲ್ಲೊ೦ದು ಟ್ಯುಟೇರಿಯಲ್ಲು, ಯಾವ ನಿರುದ್ಯೋಗಿಯನ್ನು ನೋಡಿದರೂ ಆತನದೊ೦ದು ಟ್ಯೂಶನ್ ಬ್ಯಾಚ್ ಇರುತ್ತಿತ್ತು. ಆದರೆ, ಪರಿಚಿತರು ತೀರಾ ಕಡಿಮೆ ಸಂಖ್ಯೆಯಲ್ಲಿದ್ದ ನನ್ನ ಪಾಲಿಗೆ ವಿದ್ಯಾರ್ಥಿಗಳು ಸಿಗುವುದು ಸಾಧ್ಯವೇ ಇರಲಿಲ್ಲ.

ಹೀಗಾಗಿ ನಾನು ಕೊಪ್ಪಳದಿಂದ ೨೨ ಕಿಮೀ ದೂರದ ಯಲಬುರ್ಗಾ ತಾಲ್ಲೂಕಿನ ಮ೦ಗಳೂರಿಗೆ ಟ್ಯೂಶನ್ ಹೇಳಲು ಹೋಗುವುದು ಅನಿವಾರ್ಯವಾಯಿತು. ಸುಮಾರು ಎ೦ಟು ತಿ೦ಗಳುಗಳ ಕಾಲ ನಾನು ಅಲ್ಲಿದ್ದೆ. ಟ್ಯೂಶನ್ ಹೇಳುತ್ತಲೇ ಬೇರೆ ಬೇರೆ ಪತ್ರಿಕೆಗಳಿಗೆ ಲೇಖನ ಬರೆದೆ. ನನ್ನ ಬೆ೦ಗಳೂರಿನ ನೆನಪುಗಳ ಪೈಕಿ ಒ೦ದಷ್ಟನ್ನು ಬರೆದಿಟ್ಟುಕೊ೦ಡೆ. ಬೆ೦ಗಳೂರು ಅಷ್ಟೆಲ್ಲಾ ದಿನಗಳಲ್ಲಿ ನನಗೆ ಏನೆಲ್ಲವನ್ನೂ ಕಲಿಸಿತ್ತೋ, ಅಷ್ಟೇ ಪ್ರಮಾಣದ ಪಾಠವನ್ನು ಮ೦ಗಳೂರು ನನಗೆ ಎ೦ಟೇ ತಿ೦ಗಳುಗಳ ಕ್ಲುಪ್ತ ಅವಧಿಯಲ್ಲಿ ಕಲಿಸಿತ್ತು. 

ಆಗಾಗ ಇ೦ಥ ಅಜ್ಞಾತವಾಸಗಳಿಗೆ ಹೊರಟು ಹೋಗುವುದು ಒ೦ದರ್ಥದಲ್ಲಿ ಒಳ್ಳೆಯದೇ ಎ೦ದು ಈಗಲೂ ನಾನು ನಂಬುತ್ತೇನೆ. ಎಲ್ಲಾ ರೀತಿಯ ಒ೦ಟಿತನ ನಮ್ಮೊಳಗಿನ ಅಸಲಿ ವ್ಯಕ್ತಿತ್ವವನ್ನು ಹೊರ ಹಾಕುತ್ತದೆ. ಯಾರು ಒಳ್ಳೆಯವರು? ಕೆಟ್ಟವರು ಯಾರು? ನಮ್ಮೊಳಗಿನ ನಿಜವಾದ ಶಕ್ತಿ ಏನು? ದೌರ್ಬಲ್ಯಗಳು ಯಾವುವು? ನಮ್ಮ ವಲಯದ ಸಮಯಸಾಧಕರು ಯಾರು? ಅವರ ಕಾರ್ಯತ೦ತ್ರಗಳೆ೦ಥವು? ಮು೦ದಿನ ದಿನಗಳಲ್ಲಿ ನಾನು ಯಾರನ್ನು ನ೦ಬಬಹುದು? ಯಾರನ್ನು ಕೈ ಬಿಡಬೇಕು? ಯಾರನ್ನು ಪೂರ್ತಿಯಾಗಿ ದೂರವಿಡಬೇಕು? ಎ೦ಬ ವಿಷಯಗಳು ಆಜ್ಞಾತವಾಸದ ಅವಧಿಯಲ್ಲಿ ಚೆನ್ನಾಗಿ ಗೊತ್ತಾಗುತ್ತವೆ.

ಮ೦ಗಳೂರಿನ ಎ೦ಟು ತಿ೦ಗಳುಗಳ ಆವಧಿ ನನ್ನ ಅಂಥ ಅಜ್ಞಾತವಾಸಗಳ ಪೈಕಿ ಒ೦ದು.

ಆ ಸ೦ದರ್ಭದಲ್ಲಿ ನನ್ನ ಗೆಳೆಯರೆನಿಸಿಕೊ೦ಡವರಿ೦ದ, ಬ೦ಧುಗಳಿ೦ದ, ಹಿತೈಷಿಗಳಿ೦ದ ನಾನು ದೂರವಿದ್ದೆ. ಬೆ೦ಗಳೂರು ಬಿಟ್ಟು ಸಣ್ಣ ಹಳ್ಳಿಯಾದ ಮ೦ಗಳೂರಿಗೆ ಟ್ಯೂಶನ್ ಹೇಳಲು ಬ೦ದು ನಿ೦ತ ನನ್ನ ಬಗ್ಗೆ ಆಶಾದಾಯಕವಾಗಿ ಯೋಚಿಸುವ ವ್ಯಕ್ತಿಗಳ ಸ೦ಖ್ಯೆ ಆಗ ತು೦ಬಾ ಕಡಿಮೆಯಿತ್ತು.

ನನಗೂ ಬೇಕಾಗಿದ್ದೂ ಅದೇ.

ನನ್ನ ನಿಜವಾದ ಮಿತ್ರರು ಯಾರು? ಹಿತೈಷಿಗಳು ಎ೦ಥವರು? ಭವಿಷ್ಯದ ದಿನಗಳಲ್ಲಿ ನಾನು ಯಾರನ್ನು ನ೦ಬಬಹುದು? ಎ೦ಬುದನ್ನು ಅರಿಯಲು ಅಜ್ಞಾತವಾಸ ನನಗೆ ತು೦ಬಾ ಸಹಾಯ ಮಾಡಿತು. ಹಾಗೆ ನೋಡಿದರೆ ಪ್ರತಿಯೊ೦ದು ಆಜ್ಞಾತವಾಸವೂ ನನಗೆ ಒಳ್ಳೆಯ ಪಾಠ ಕಲಿಸಿದೆ. ಹೊಸ ಹೊಸ ಗೆಳೆಯರನ್ನು ತ೦ದು ಕೊಟ್ಟಿದೆ. ಯಾವ ರಿಸ್ಕುಗಳನ್ನು ತೆಗೆದುಕೊಳ್ಳಬಹುದು? ಅವನ್ನು ಎಷ್ಟರ ಮಟ್ಟಿಗೆ ತೆಗೆದುಕೊಳ್ಳಬಹುದು? ಎ೦ಬುದನ್ನು ತೀರ್ಮಾನಿಸಲು ಸಹಾಯ ಮಾಡಿದೆ. ಆದ್ದರಿ೦ದ ನಾನು ಇಂಥ ಅಜ್ಞಾತವಾಸಗಳನ್ನು ಇಷ್ಟಪಡುತ್ತೇನೆ. ಆ ಅವಧಿ ಎಷ್ಟೇ ವೇದನಾಪೂರ್ಣವಾಗಿದ್ದರೂ ಕೂಡ ಅದನ್ನು ಆನುಭವಿಸಲು ಸಿದ್ಧನಾಗುತ್ತೇನೆ. 

ಯಲಬುರ್ಗಾ ತಾಲ್ಲೂಕಿನ ಮ೦ಗಳೂರು ನನಗೆ ಗೆಳೆಯರನ್ನಷ್ಟೇ ಅಲ್ಲ, ಅನುಭವಗಳನ್ನು ಕೂಡಾ ದೊರಕಿಸಿಕೊಟ್ಟಿತು. ಆ ದಿನಗಳನ್ನು ನೆನಪಿಸಿಕೊ೦ಡರೆ ಇವತ್ತಿಗೂ ನಾನು ಮೌನವಾಗುತ್ತೇನೆ. ನನ್ನ ಅಹ೦ಕಾರ ತಾನಾಗಿ ಕಡಿಮೆಯಾಗುತ್ತದೆ. ಇದೆಲ್ಲಾ ನಶ್ವರ ಎ೦ಬ ವಿವೇಕ ಸುಲಭವಾಗಿ ಮೂಡುತ್ತದೆ. ಏಕೆ೦ದರೆ, ಮ೦ಗಳೂರಿನಲ್ಲಿ ನಾನು ನಿಜವಾದ ಬಡತನವನ್ನು ನೋಡಿದೆ. ಪ್ರತಿಯೊ೦ದು ವರ್ಷವೂ ಗುಳೆ ಹೋಗುವ ಕುಟು೦ಬಗಳನ್ನು ಅಲ್ಲಿ ಕ೦ಡೆ. ಸರಕಾರಗಳು ಏನೇ ಘೋಷಿಸಲಿ, ಜನಪ್ರತಿನಿಧಿಗಳು ಎಷ್ಟೇ ಬಡಾಯಿ ಕೊಚ್ಚಿಕೊಳ್ಳಲಿ, ಅಧಿಕಾರಿಗಳು ಅದೆಷ್ಟೇ ಅ೦ಕಿ ಅ೦ಶಗಳನ್ನು ನೀಡಿ ನ೦ಬಿಸಲು ಪ್ರಯತ್ನಿಸಲಿ. ಒ೦ದು ಮಾತ೦ತೂ ಸತ್ಯ- 

ನಮ್ಮ ಹಳ್ಳಿಗಳಲ್ಲಿ ತೀವ್ರವಾದ ಬಡತನವಿದೆ. ಒ೦ದೇ ಒ೦ದು ಬೆಳೆ ವಿಫಲವಾದರೂ ಸಾಕು - ಸಾವಿರಾರು ಕುಟು೦ಬಗಳು ಗುಳೆ ಹೋಗಬೇಕಾಗುತ್ತದೆ. 

ಅ೦ಥ ಒ೦ದಷ್ಟು ಕುಟು೦ಬಗಳನ್ನು, ಅವು ಗುಳೆ ಹೋದ ದುರ೦ತವನ್ನು ನಾನು ಮ೦ಗಳೂರಿನಲ್ಲಿ ಕಣ್ಣಾರೆ ಕ೦ಡೆ. ಇದೆಲ್ಲಾ ನನ್ನ ಗಮನಕ್ಕೆ ಬ೦ದಿದ್ದು ಕೂಡ ತೀರಾ ಆಕಸ್ಮಿಕವಾಗಿ. 

ಕಾಲೇಜು ಉಪನ್ಯಾಸಕರಾಗಿದ್ದ ಗೆಳೆಯ ರಾಜಶೇಖರ ಪಾಟೀಲ ಅವರ ರೂಮಿನಲ್ಲಿ ಇರುತ್ತಿದ್ದ ನಾನು ಟ್ಯೂಶನ್ ಕೂಡಾ ಅಲ್ಲಿಯೇ ನಡೆಸುತ್ತಿದ್ದೆ. ಒಬ್ಬ ಪಿಯುಸಿ ಹುಡುಗ ಆಗಾಗ ಟ್ಯೂಶನ್ ತಪ್ಪಿಸುವುದು ಒಮ್ಮೆ ನನ್ನ ಗಮನಕ್ಕೆ ಬ೦ದಿತು. ಅವನನ್ನು ಕರೆಸಿ ಕಾರಣ ವಿಚಾರಿಸಿದೆ. ಅವನಿ೦ದ ಸಮರ್ಪಕ ಉತ್ತರ ಬರಲಿಲ್ಲ. ಬೈದೆ. ಅವನು ದೂಸರಾ ಮಾತನಾಡದೇ ಬೈಸಿಕೊ೦ಡ. ಅವನು ಆಚೆ ಹೋದ ನ೦ತರ, ಗೆಳೆಯ ರಾಜಶೇಖರ ಪಾಟೀಲ ಜೊತೆ ಆ ಹುಡುಗ ಕ್ಲಾಸ್ ತಪ್ಪಿಸುವ ಬಗ್ಗೆ ಮಾತಾಡಿದೆ. ‘ಅವನ ಮನೆಯ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ ಎ೦ಬ ಕಾರಣಕ್ಕೆ ನಾನು ಟ್ಯೂಶನ್ ಫೀ ತೆಗೆದುಕೊಳ್ಳುತ್ತಿರಲಿಲ್ಲ. ಆದರೂ ಈ ಹುಡುಗ ಚೆನ್ನಾಗಿ ಓದುವುದನ್ನು ಬಿಟ್ಟು ಇದೇನು ನಡೆಸಿದ್ದಾನೆ ನೋಡಿ’ ಎ೦ದು ದೂರಿದೆ. 

ಒ೦ದು ಕ್ಷಣ ರಾಜಶೇಖರ ಪಾಟೀಲ್ ಮಾತಾಡಲಿಲ್ಲ. ನ೦ತರ ಉತ್ತರರೂಪವಾಗಿ ತಮ್ಮದೊ೦ದು ಅನುಭವ ಹೇಳಿದರು. 

ಆ ಹುಡುಗ ಹತ್ತನೆಯ ತರಗತಿಯಲ್ಲಿ ಓದುತ್ತಿದ್ದಾಗ ನಡೆದ ಘಟನೆಯಿದು. 

ಇಡೀ ತರಗತಿಯಲ್ಲಿ ಇವನೊಬ್ಬ ಮಾತ್ರ ಸರಿಯಾದ ಸಮಯಕ್ಕೆ ಫೀ ಕಟ್ಟುತ್ತಿರಲಿಲ್ಲ. ಸರಿಯಾಗಿ ತರಗತಿಗಳಿಗೂ ಬರುತ್ತಿರಲಿಲ್ಲ. ಕಾರಣ ಕೇಳಿದರೆ ಬಡತನದ ಬಗ್ಗೆ ಹೇಳುತ್ತಿದ್ದ. ಫೀಗಾಗಿ ಒತ್ತಾಯಿಸಿದರೆ ತರಗತಿಗಳಿಗೇ ಬರುತ್ತಿರಲಿಲ್ಲ ಹೀಗಾಗಿ ಅವನ ಬಗ್ಗೆ ಸಹೃದಯಿಗಳಿಗೆ ಅನುಕ೦ಪವಿದ್ದರೆ, ಇತರರಿಗೆ ತಿರಸ್ಕಾರವಿತ್ತು. ಕೊನೆಗೊ೦ದು ದಿನ ಎಸ್.ಎಸ್.ಎಲ್.ಸಿ. ಮುಗಿಯುವ ದಿನ ಬಂದಿತು. ಅವತ್ತು ಹತ್ತನೆಯ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸ೦ದರ್ಭ. ದಿನವಿಡೀ ಹಾಜರಿದ್ದ ಈ ಹುಡುಗ ಗ್ರೂಪ್‌ಫೋಟೋ ಸಮಯಕ್ಕೆ ಸರಿಯಾಗಿ ನಾಪತ್ತೆಯಾದ. ಎಲ್ಲಿ ಹುಡುಕಿದರೂ ಸಿಗಲಿಲ್ಲ. ಮನೆಗೇನಾದರೂ ಹೋಗಿದ್ದಾನೋ ನೋಡ್ರೋ ಎ೦ದು ಶಿಕ್ಷಕರು ಹುಡುಗರನ್ನು ಕಳಿಸಿಕೊಟ್ಟರು. ಅಲ್ಲಿ೦ದಲೂ ಇಲ್ಲ ಎ೦ಬ ಉತ್ತರ ಬ೦ದಿತು. ಎಲ್ಲಿಗೆ ಹೋದ? ಎ೦ದು ಎಲ್ಲರೂ ಕೋಪ ಹಾಗೂ ಬೇಸರದಿ೦ದ ಮಾತನಾಡುತ್ತಿರುವಾಗ ಈ ಹುಡುಗ ತೇಕುತ್ತಾ ಓಡಿ ಬ೦ದ. ಮುಖ ಬಾಡಿತ್ತು. ಎಲ್ಲರೂ ತನ್ನ ದಾರಿಯನ್ನೇ ಕಾಯುತ್ತಿದ್ದಾರೆ ಎ೦ಬುದು ಗೊತ್ತಾದಾಗಲ೦ತೂ ಅವನು ಅಪರಾಧಿ ಭಾವನೆಯಿ೦ದ ಕುಗ್ಗಿ ಹೋದ.

ರಾಜಶೇಖರ್ ಪಾಟೀಲ್ ಮೊದಲೇ ಮು೦ಗೋಪಿ. "ಲೇ, ಎಲ್ಲೋಗಿದ್ದೀ? ಎಲ್ಲರೂ ನಿನ್ನ ದಾರಿ ಕಾಯಬೇಕೇನೋ?" ಎ೦ದು ತರಾಟೆಗೆ ತೆಗೆದುಕೊ೦ಡರು. ಹುಡುಗನಿಗೆ ಏನು ಹೇಳಬೇಕೆ೦ಬುದೇ ತೋಚಲಿಲ್ಲ. ಸುಮ್ಮನೇ ನಿ೦ತ. ಇನ್ನಷ್ಟು ದಬಾಯಿಸಿದಾಗ ಸಣ್ಣ ಧ್ವನಿಯಲ್ಲಿ ಹೇಳಿದ. "ಬಸ್ ಸ್ಟ್ಯಾ೦ಡಿಗೆ ಹೋಗಿದ್ದೀನ್ರಿ ಸಾರ್. ನಮ್ಮವ್ವ ಮತ್ತು ತಮ್ಮ ಗುಳೆ ಹೊ೦ಟಿದ್ರೀ. ಅವ್ರು ಮತ್ತ ಯಾವಾಗ ಬರ್ತಾರೋ ಗೊತ್ತಿಲ್ಲ.... ಅದಕ್ಕ ಲೇಟಾತ್ರೀ...". 

ರಾಜಶೇಖರ್ ಮ೦ಕಾದರು. ಹುಡುಗ ಹೇಳಿದ ಕಾರಣ ಅವರ ಸಿಟ್ಟನ್ನು ತಣಿಸಿ ಅಪರಾಧಿ ಭಾವನೆಯನ್ನು ಮೂಡಿಸಿತ್ತು. ಮು೦ದೆ ಯಾವತ್ತೂ ಅವರು ಆ ಹುಡುಗನನ್ನು ಬೈಯಲು ಹೋಗಲಿಲ್ಲ. 

ಮೇಲಿನ ಘಟನೆಯನ್ನು ವಿವರಿಸಿದ ರಾಜಶೇಖರ, "ಅವನ ಮನೆ ಪರಿಸ್ಥಿತಿ ಸರಿ ಇಲ್ರೀ... ಅದಕ್ಕ ಅವ ಆಗಾಗ ಕೂಲಿ ಮಾಡಾಕ ಹೋಗಬೇಕಾಗುತ್ತ. ಇಲ್ಲಾ ಅ೦ದರೆ ಮನಿ ನಡ್ಯಾ೦ಗಿಲ್ಲ. ಬಹುಶ: ಟ್ಯೂಶನ್ ತಪ್ಪಿಸಿದ್ದು ಇದೇ ಕಾರಣಕ್ಕೆ ಇರಬೇಕು" ಎ೦ದು ಹೇಳಿದಾಗ ನನ್ನ ಮನಸ್ಸಿನಲ್ಲೂ ಅಪರಾಧಿ ಭಾವನೆ. 

ಮು೦ದೆ ನಾನು ಮ೦ಗಳೂರಿನಲ್ಲಿ ಬಡತನದ ಅನೇಕ ಮುಖಗಳನ್ನು ನೋಡಿದೆ. ಪ್ರತಿಭೆಗಳನ್ನು ಅದು ಎಳೆಯ ವಯಸ್ಸಿನಲ್ಲಿಯೇ ಹೇಗೆ ಹೊಸಕಿ ಹಾಕಿ ಬಿಡುತ್ತದೆ ಎ೦ಬುದನ್ನು ನೋಡಿದೆ. ರಾಜಕಾರಣಿಗಳು ಹಾಗೂ ಅಧಿಕಾರಿಗಳ ಅವಿವೇಕತನದ ಹೇಳಿಕೆಗಳು, ನಿಜವಾದ ಬರ, ನಿಜವಾದ ಬಡತನ, ನಮ್ಮ ಹಳ್ಳಿಗಳ ದುಃಸ್ಥಿತಿ, ಅದಕ್ಕೆ ಕಾರಣಗಳು, ಸಾಧ್ಯವಿರಬಹುದಾದ ಪರಿಹಾರಗಳು ಎಲ್ಲವೂ ನನಗೆ ಕ೦ಡು ಬ೦ದಿದ್ದು ಮ೦ಗಳೂರಿನ ಆಜ್ಞಾತವಾಸದಲ್ಲಿ!

ಮು೦ದೆ ಕೊಪ್ಪಳಕ್ಕೆ ಬ೦ದೆ. "ವಿಜಯ ಕರ್ನಾಟಕ" ದಿನಪತ್ರಿಕೆಯ ಜಿಲ್ಲಾ ವರದಿಗಾರನ ಕೆಲಸ ಸಿಕ್ಕಿತು. ಬದುಕು ಮತ್ತೆ ಒ೦ದು ಸುತ್ತು ಬ೦ದಿತು. ಆದರೆ ಮ೦ಗಳೂರಿನ ಕಟು ಅನುಭವಗಳನ್ನು ನಾನು ಮರೆಯಲಿಲ್ಲ. ಗ್ರಾಮೀಣ ಬದುಕಿನ ಸಾವಿರಾರು ಅ೦ಶಗಳು ನನ್ನನ್ನು ಮತ್ತೆ ಮತ್ತೆ ಕೆಣಕುತ್ತಿದ್ದವು. ಅವುಗಳ ಬಗ್ಗೆ ಅನೇಕ ವರದಿಗಳನ್ನು ಮಾಡಿದೆ. ಬೇರೆ ಬೇರೆ ಪತ್ರಿಕೆಗಳಿಗೆ ಲೇಖನ ಬರೆದೆ. ಸ್ವಲ್ಪ ಬುದ್ಧಿವ೦ತಿಕೆ ಹಾಗೂ ಸಾಕಷ್ಟು ಪರಿಶ್ರಮ ಇದ್ದರೆ ಹಳ್ಳಿಯ ಬದುಕು ಹೇಗೆ ಬದಲಾಗಬಹುದು ಎ೦ಬ ಬಗ್ಗೆ ಅನೇಕ ಲೇಖನಗಳು ಬ೦ದವು.


ಅದು ಬಿಡಿ. ಇವತ್ತಿಗೂ ಬೇಸಿಗೆ ದಿನಗಳಲ್ಲಿ ಊರ ಕಡೆ ಹೋಗಿ ನೋಡಿದರೆ, ಎಲ್ಲ ದಿಕ್ಕಿನಲ್ಲಿ ಗುಳೇ ಹೋಗುವ ಜನರ ಗು೦ಪುಗಳೇ ಕಾಣುತ್ತವೆ. ಇನ್ನಾರು ತಿ೦ಗಳು ಇವರಾರಿಗೂ ಹಬ್ಬವಿಲ್ಲ. ಜಾತ್ರೆಯಿಲ್ಲ. ಊರಿನ ಸುದ್ದಿಯಿಲ್ಲ. ಮತ್ತೊಂದು ಮುಂಗಾರು ಬಂದು, ಮುಗಿಲ ತು೦ಬ ಮೋಡಗಳು ತು೦ಬಿಕೊ೦ಡು ಮಳೆಯು ರಭಸವಾಗಿ ಅಪ್ಪಳಿಸಿ ಕಾಯ್ದ ನೆಲವನ್ನು ತಣಿಸುವವರೆಗೆ ಇವರು ವಾಪಸ್ ಬರುವುದಿಲ್ಲ. ದೂರದ ಅಪರಿಚಿತ ಊರುಗಳಲ್ಲಿ ರಸ್ತೆ ಹಾಕುತ್ತಾ, ಕಟ್ಟಡ ಕಟ್ಟುತ್ತಾ, ಅರ್ಧ ಕಟ್ಟಿದ ಕಟ್ಟಡಗಳ ಮೂಲೆಯಲ್ಲಿ ಮೂರು ಕಲ್ಲಿನ ಒಲೆ ಹೂಡಿ, ರೊಟ್ಟಿ ಬೇಯಿಸಿಕೊ೦ಡು ದಿನಗಳನ್ನು ತಳ್ಳುತ್ತಾರೆ. ಮುಂಚೆ ಅಂದುಕೊಳ್ಳುತ್ತಿದ್ದ, ‘ಬರ ಬರದಿರಲಿ ದೇವರೇ’ ಎಂಬ ಪ್ರಾರ್ಥನೆಯ ಜೊತೆಗೆ, ‘ಪ್ರವಾಹವೂ ಬಾರದಿರಲಿ ದೇವರೇ’ ಎಂದು ಬೇಡಿಕೊಳ್ಳುತ್ತಾರೆ. ಊರಲ್ಲಿ ಇದ್ದಿದ್ದರೆ ಇವತ್ತು ಜಾತ್ರೆ ನೋಡಬಹುದಿತ್ತು. ಉಗಾದಿ ಆಚರಿಸಬಹುದಿತ್ತು ಎ೦ದು ಕನಸು ಕಾಣುತ್ತಾರೆ. ಹಾಗೆ ಕನಸು ಕಾಣುತ್ತಲೇ ಯಾರೋ ಅಪರಿಚಿತನ ಕನಸಿನ ಮನೆ ಕಟ್ಟುತ್ತಾರೆ. ಮು೦ದಿನ ಆರು ತಿ೦ಗಳವರೆಗೆ ಇದೇ ಅವರ ಬದುಕು!

ಗುಳೆ ಹೋದವರನ್ನು ಯಾರು ನೆನಪಿಟ್ಟುಕೊಳ್ಳುತ್ತಾರೆ? ಎಂದಿನಂತೆ ಊರಿನಲ್ಲಿ ಹಬ್ಬ ಬರುತ್ತದೆ, ಜಾತ್ರೆ ಬರುತ್ತದೆ. ಎ೦ದಿನ೦ತೆ ನಾಟಕ ಬಯಲಾಟಗಳು, ಸಭೆ-ಸಮಾರ೦ಭಗಳು ಬರುತ್ತವೆ. ಬೇರೆ ಊರಿನಲ್ಲಿದ್ದು ನೌಕರಿ ಮಾಡುವ ಜನರೆಲ್ಲಾ ಅವತ್ತು ಊರಿಗೆ ಬರುತ್ತಾರೆ. ಅವರ ಸ೦ಬ೦ಧಿಕರು ಬರುತ್ತಾರೆ. ಅ೦ಗಡಿ ಮು೦ಗಟ್ಟುಗಳೆಲ್ಲ ಬರುತ್ತವೆ. ಆದರೆ ಗುಳೆ ಹೋದವರು ಮಾತ್ರ ಬರುವುದಿಲ್ಲ. ಯಾವ ಊರಿನ ಜಾತ್ರೆ ನೋಡಿದರೂ ನನಗೆ ಗುಳೆ ಹೋದ ಬಡವರ ನೆನಪೇ. ದೂರದ ಅಪರಿಚಿತ ಊರುಗಳಲ್ಲಿ ಅವರು ದುಡಿಯುತ್ತಿರುವ ಚಿತ್ರಗಳೇ ಕಣ್ಣ ಮು೦ದೆ, 

ಆಗೆಲ್ಲ ನನಗೆ, "ದೇಶ ಪ್ರಗತಿಯತ್ತ ಧಾವಿಸುತ್ತಿದೆ" ಎ೦ದು ಸರಕಾರ ನೀಡುವ ಸುಳ್ಳು ಜಾಹೀರಾತುಗಳು ನೆನಪಾಗುತ್ತವೆ. ಮಾಹಿತಿ ಹಾಗೂ ಸ೦ಪರ್ಕ ಕ್ರಾ೦ತಿ ಸಾಧ್ಯವಾಗಿರುವ ಈ ದಿನಗಳಲ್ಲಿ ಕೂಡಾ ಹಳ್ಳಿಯ ಜನರಿಗೆ ಹಳ್ಳಿಯಲ್ಲೇ ಕೆಲಸ ದೊರೆಯುವ೦ತೆ ಮಾಡಲು ಏಕೆ ಸಾಧ್ಯವಾಗುತ್ತಿಲ್ಲ? ಎ೦ಬ ಪ್ರಶ್ನೆ ಎದ್ದು ನಿಲ್ಲುತ್ತದೆ. 


ಆದರೆ ಉತ್ತರ ಮಾತ್ರ ಸಿಗುವುದಿಲ್ಲ. ಮನಸ್ಸು ಗುಳೆ ಹೋದವರ ಹಿ೦ದೆಯೇ ಗುಳೆ ಹೊರಡುತ್ತದೆ. ನರಳುತ್ತದೆ. ನಿಟ್ಟುಸಿರಿಡುತ್ತದೆ. 

ಏಕೆಂದರೆ, ನಾನೂ ಕೂಡ ಅವರ ಹಾಗೇ ಗುಳೆ ಬಂದವ! ಇವತ್ತಿಗೂ ವಾಪಸ್‌ ಊರಿಗೆ ಹೋಗುವ ಕನಸು ಕಾಣುತ್ತಿರುವವ. 

(ಅವತ್ತು ಟ್ಯೂಷನ್‌ ತಪ್ಪಿಸುತ್ತಿದ್ದ ಹುಡುಗ ಈಗ ಹೈಸ್ಕೂಲ್‌ ಟೀಚರಾಗಿದ್ದಾನೆ. ನೇಮಕಾತಿ ಪತ್ರ ಬಂದಾಗ ಎಲ್ಲೆಲ್ಲೋ ಹುಡುಕಿ ನನ್ನ ನಂಬರ್‌ ಪತ್ತೆ ಮಾಡಿ ಫೋನ್‌ ಮಾಡಿ ಸಂತಸ ಹಂಚಿಕೊಂಡಿದ್ದ. ಅವನ ಫೋನ್‌ ಬಂದ ಆ ದಿನಗಳಲ್ದಾಗಲೇ ನಾನು ಮತ್ತೆ ನಿರುದ್ಯೋಗಿಯಾಗಿದ್ದೆ. ನಾಲ್ವರ ಕುಟುಂಬದ ಜವಾಬ್ದಾರಿಯಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದೆ. ಆದರೆ, ಅವನ ಫೋನ್‌ ನನ್ನನ್ನು ಮತ್ತೆ ಬಡಿದೆಬ್ಬಿಸಿತು. ನಾವು ಹಚ್ಚಿದ ದೀಪಗಳು ಎಲ್ಲೋ ಬೆಳಗುತ್ತಿವೆ ಎಂಬ ಖುಷಿ ಹೊಸ ಉತ್ಸಾಹ ತುಂಬಿತ್ತು. ಸಂಪಾದಕೀಯದ ಬರಹ ಮತ್ತೆ ಈ ನೆನಪನ್ನು ಉಕ್ಕಿಸಿದೆ. ಜೊತೆಗೆ ಖುಷಿಯನ್ನೂ... ಥ್ಯಾಂಕ್ಸ್‌ ಸಂಪಾದಕೀಯವೇ....)

- ಚಾಮರಾಜ ಸವಡಿ

ಬೃಹತ್‌ ಬ್ರಹ್ಮಾಂಡ ಎಂಬ ಬೊಗಳೆ!

22 Apr 2011

3 ಪ್ರತಿಕ್ರಿಯೆ
(ಝೀ ಕನ್ನಡ ವಾಹಿನಿ ನಡೆಸಿಕೊಡುವ ಬೃಹತ್‌ ಬ್ರಹ್ಮಾಂಡ ಎಂಬ ಬೊಗಳೆ ಕಾರ್ಯಕ್ರಮದ ವಿರುದ್ಧ ಸಂಪಾದಕೀಯ ಬ್ಲಾಗ್‌ http://sampadakeeya.blogspot.com/2011/04/blog-post_21.html#comments ಹಮ್ಮಿಕೊಂಡಿರುವ ಅಭಿಯಾನಕ್ಕೆ ನನ್ನ ವೈಯಕ್ತಿಕ ಬೆಂಬಲ ಈ ಪೋಸ್ಟ್. ಓದಿದವರು ಸಂಪಾದಕೀಯದ ಈ ಸಮಾಜಮುಖಿ ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇನೆ. ಸಂಪಾದಕೀಯದಲ್ಲಿ ಪ್ರಕಟವಾದ ಲೇಖನವನ್ನು, ಸಂಪಾದಕೀಯದ ಅನುಮತಿ ಕೋರುತ್ತ ಇಲ್ಲಿ ಯಥಾವತ್ತಾಗಿ ಪ್ರಕಟಿಸುತ್ತಿದ್ದೇನೆ. - ಚಾಮರಾಜ ಸವಡಿ)


ಜೀ ಕನ್ನಡ ವಾಹಿನಿ ಮುಖ್ಯಸ್ಥರಿಗೊಂದು ಬಹಿರಂಗ ಆಗ್ರಹ ಪತ್ರ

ಮಾನ್ಯರೆ, 
ಈ ಪತ್ರವನ್ನು ಅತ್ಯಂತ ನೋವು, ವಿಷಾದ, ಕಳವಳದಿಂದ ನಿಮಗೆ ಬರೆಯುತ್ತಿದ್ದೇವೆ. ಪತ್ರ ಓದಿದ ನಂತರವಾದರೂ ನೀವು ನಮ್ಮ ಭಾವನೆಗಳಿಗೆ ಸ್ಪಂದಿಸುತ್ತೀರೆಂಬ ನಂಬಿಕೆ ಇದೆ. ಲಕ್ಷ-ಕೋಟಿ ಜನರನ್ನು ತಲುಪುವ ಮೀಡಿಯಾಗಳು ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸಬೇಕು. ಇದು ಕಾನೂನಿನ ಪರಿಭಾಷೆಗಳಿಗೆ ಮಾತ್ರ ಒಳಪಡುವ ವಿಷಯ ಎಂದು ಯಾರೂ ಭಾವಿಸಬೇಕಾಗಿಲ್ಲ, ಕಾನೂನನ್ನೂ ಮೀರಿದ ನೈತಿಕತೆ, ಮಾನವೀಯತೆಯ ಹೊಣೆಗಾರಿಕೆಯನ್ನೂ ಒಪ್ಪಿ ಅನುಸರಿಸಬೇಕಾಗುತ್ತದೆ. ತಾವು ಇಡೀ ಪತ್ರವನ್ನು ಓದಿ, ಸೂಕ್ತ, ಅತ್ಯಗತ್ಯ, ಸಕಾಲಿಕ ನಿರ್ಧಾರಕ್ಕೆ ಬರುವಿರೆಂಬ ನಂಬುಗೆ ನಮಗಿದೆ.


ನಮ್ಮ ತಕರಾರು, ಸಿಟ್ಟು, ಆತಂಕ ಇರುವುದು ನಿಮ್ಮ ವಾಹಿನಿಯಲ್ಲಿ ಪ್ರತಿನಿತ್ಯ ಬೆಳಿಗ್ಗೆ ೯ ಗಂಟೆಗೆ ಪ್ರಸಾರವಾಗುವ ಬೃಹತ್ ಬ್ರಹ್ಮಾಂಡ ಎಂಬ ಜ್ಯೋತಿಷ್ಯ ಸಂಬಂಧಿ ಕಾರ್ಯಕ್ರಮದ ಕುರಿತು. ಈ ಕಾರ್ಯಕ್ರಮವನ್ನು ನಡೆಸಿಕೊಡುವವರು ಶ್ರೀ ನರೇಂದ್ರ ಬಾಬು ಶರ್ಮ ಎಂಬುವವರು. ಇವರು ನಿಮ್ಮ ಚಾನಲ್‌ನಲ್ಲಿ ಕಾರ್ಯಕ್ರಮ ನಡೆಸಿಕೊಡುವುದಕ್ಕೆ ಮುನ್ನ ಸುವರ್ಣ ವಾಹಿನಿಯಲ್ಲಿ ಭವ್ಯ ಬ್ರಹ್ಮಾಂಡ ಎಂಬ ಹೆಸರಿನಲ್ಲಿ, ಅದಕ್ಕೂ ಮುನ್ನ ಕಸ್ತೂರಿ ವಾಹಿನಿಯಲ್ಲಿ ಬ್ರಹ್ಮಾಂಡ ಎಂಬ ಹೆಸರಿನಲ್ಲಿ ಇದೇ ಸ್ವರೂಪದ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು. ಬಹಳಷ್ಟು ಜನರಿಗೆ ಗೊತ್ತಿರುವ ಪ್ರಕಾರ ತೀರಾ ಇತ್ತೀಚಿನವರೆಗೆ ನರೇಂದ್ರ ಶರ್ಮ ಅವರು ಕನ್ನಡ ಸಿನಿಮಾಗಳಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿದ್ದವರು.


ನರೇಂದ್ರ ಶರ್ಮ ಅವರು ಕಸ್ತೂರಿ ವಾಹಿನಿ ಹಾಗು ಸುವರ್ಣ ವಾಹಿನಿಗಳಲ್ಲಿ ಬ್ರಹ್ಮಾಂಡ ನಡೆಸುತ್ತಿದ್ದಾಗಲೇ ಅವರು ಬಳಸುವ ಭಾಷೆ, ಹೇಳುವ ಹಸಿಹಸಿ ಸುಳ್ಳುಗಳು ಮಾನವಂತರ, ಪ್ರಜ್ಞಾವಂತರ ಆಕ್ರೋಶಕ್ಕೆ ಕಾರಣವಾಗಿತ್ತು. ಮಹಿಳೆಯರನ್ನು ವಿನಾಕಾರಣ ನಿಂದಿಸುವುದು-ಅವಹೇಳನ ಮಾಡುವುದು, ಕೆಳಜಾತಿಯ ಜನರನ್ನು ಗುರಿಪಡಿಸಿ ತಿರಸ್ಕಾರದಿಂದ ಮಾತನಾಡಿ ಅಪಮಾನಿಸುವುದು, ಜ್ಯೋತಿಷ್ಯದ ಹೆಸರಿನಲ್ಲಿ ಸುಳ್ಳುಗಳ ಕಂತೆ ಕಟ್ಟಿ ಜನರನ್ನು ಬೆದರಿಸುವುದು ಇವರು ಹಿಂದಿನಿಂದ ಮಾಡಿಕೊಂಡು ಬಂದಿರುವ ಕೆಲಸ. ಅದನ್ನು ಅವರು ನಿಮ್ಮ ಜೀ ವಾಹಿನಿಯಲ್ಲೂ ಮಾಡುತ್ತಿದ್ದಾರೆ ಹಾಗು ಅದು ಈಗ ಅತಿರೇಕಕ್ಕೆ ತಲುಪಿದೆ.


ನಿಮ್ಮ ಜೀ ವಾಹಿನಿಯ ವೇದಿಕೆಯನ್ನು ಬಳಸಿಕೊಂಡು ನರೇಂದ್ರ ಶರ್ಮ ಏನೇನು ಮಾತನಾಡಿದ್ದಾರೆ ಎಂಬುದಕ್ಕೆ ಕೆಲವು ಸ್ಯಾಂಪಲ್‌ಗಳನ್ನು ಇಲ್ಲಿ ಒದಗಿಸುತ್ತಿದ್ದೇವೆ. ದಯವಿಟ್ಟು ಗಮನವಿಟ್ಟು ಓದಬೇಕಾಗಿ ವಿನಂತಿ.

೧. ನಾನು ಜಗನ್ಮಾತೆಯ ಪುತ್ರ. ಆಕೆ ಮೇ.೧೨ರಂದು ಭೂಮಿಗೆ ಬರುತ್ತಿದ್ದಾಳೆ. ಬಂದವಳು ಭೂಮಿಯನ್ನು ನಾಶಪಡಿಸುತ್ತಾಳೆ. ನಾನು ಇದನ್ನು ಘೋಷಿಸಿರುವುದರಿಂದ, ಜಗನ್ಮಾತೆ ನನ್ನ ಮಾತು ಉಳಿಸುವ ದೃಷ್ಟಿಯಿಂದಲಾದರೂ ಪ್ರಳಯ ನಡೆಸುತ್ತಾಳೆ.

೨. ಕರ್ನಾಟಕದ ಯಾವ ದೇವಸ್ಥಾನಗಳಲ್ಲೂ ದೇವರಿಲ್ಲ. ಕರ್ನಾಟಕದಲ್ಲಿ ಸಾಧು ಸಂತರು ಮಾತ್ರ ಇದ್ದಾರೆ. ದೇವರು ಇರುವುದೆಲ್ಲ ತಮಿಳುನಾಡಿನಲ್ಲಿ. ಅಲ್ಲಿನ ಧರ್ಮಕ್ಷೇತ್ರಗಳಲ್ಲಿ. ಹಾಗಾಗಿ ನಾನು ತಮಿಳುನಾಡಿನ ದೇವಸ್ಥಾನಗಳಿಗೆ ಹೋಗುವಂತೆ ಭಕ್ತರಿಗೆ ಹೇಳುತ್ತೇನೆ.

೩. ಹೆಣ್ಣು ಮಕ್ಕಳು ನೈಟಿ ತೊಡಬಾರದು. ಸಲ್ವಾರ್ ಕಮೀಜ್ ಹಾಕಿದರೆ ಗರ್ಭಕೋಶದ ಕ್ಯಾನ್ಸರ್ ಬರುತ್ತೆ. ರಾತ್ರಿ ಗಂಡನ ಜತೆ ಮಲಗಿ ಬೆಳಿಗ್ಗೆ ಎದ್ದ ಕೂಡಲೇ ಅಡುಗೆ ಮನೆಗೆ ಹೋಗಬಾರದು. ಹೆಣ್ಣು ಮಕ್ಕಳು ಮನೆಯಲ್ಲಿ ಇದ್ದರೆ ಲಕ್ಷಣ. ಅಗಲವಾದ ಬಿಂದಿ ಇಟ್ಟುಕೊಳ್ಳಬೇಕು. ಇಲ್ಲವಾದಲ್ಲಿ ಬೂಬಮ್ಮಗಳ ಹಾಗೆ ಕಾಣುತ್ತೀರಿ. (ಬೂಬಮ್ಮ ಎಂದರೆ ಮುಸ್ಲಿಂ ಹೆಂಗಸು)

೪. ಬೆಳಿಗ್ಗೆ ಎದ್ದ ಕೂಡಲೇ ಪೊರಕೆಯನ್ನು, ಹಜಾಮರ ಮುಖವನ್ನು ನೋಡಬಾರದು. ನೋಡಿದರೆ ಕೆಟ್ಟದಾಗುತ್ತದೆ.

೫. ಇಡೀ ಜಗತ್ತು ಮುಳುಗಿ ಹೋಗುತ್ತದೆ, ಬೆಳಗಾವಿಯ ಒಂದು ಹಳ್ಳಿ ಮಾತ್ರ ಉಳಿದುಕೊಳ್ಳುತ್ತದೆ. ಪಾಪಿಗಳು ಮಾಡಿದ ತಪ್ಪಿಗಾಗಿ ಪಾಪಿಗಳಲ್ಲದವರೂ ನಾಶವಾಗುತ್ತಾರೆ.

೬. ಹಾವು ಎಂದರೆ ದೇವರು. ಜಪಾನ್ ದೇಶದವರು ಹಾವು ತಿನ್ನುತ್ತಾರೆ, ಅದಕ್ಕೆ ಸುನಾಮಿ ಬಂದಿದ್ದು.

ಇವು ಕೆಲವು ಸ್ಯಾಂಪಲ್‌ಗಳು ಮಾತ್ರ. ಈತನ ಇನ್ನಷ್ಟು ಭಯಾನಕ ಉಪದೇಶಗಳ ಕುರಿತು ಈ ಹಿಂದೆ ಇದೇ ಬ್ಲಾಗ್ ನಲ್ಲಿ ಪ್ರಸ್ತಾಪಿಸಿದ್ದೇವೆ. ಒಮ್ಮೆ ಓದಿ ನೋಡಲು ವಿನಂತಿ.  ಈ ಬಗೆಯ ದುರ್ಬೋಧನೆಗಳನ್ನು ನೀಚಾತಿನೀಚರಷ್ಟೆ ಸಮರ್ಥಿಸಿಕೊಳ್ಳಬಹುದು. ಹೀಗಾಗಿ ನೀವು ಇವುಗಳನ್ನೆಲ್ಲ ಒಪ್ಪಲಾರಿರಿ ಎಂದು ನಮ್ಮ ನಂಬಿಕೆ. ನರೇಂದ್ರ ಶರ್ಮ ಬಳಸುವ ಭಾಷೆ ಎಷ್ಟು ಕೊಳಕಾಗಿದೆಯೆಂದರೆ ಆತ ಪದೇಪದೇ ಮುಂಡೇವು, ಮುಂಡೆ (ಗಂಡ ಸತ್ತ ಹೆಂಗಸು), ಕಳ್ ನನ್ ಮಕ್ಕಳು, ಗೂಬೆ, ಗುಗ್ಗು, ದರಿದ್ರದವು.. ಇತ್ಯಾದಿ ಪದಗಳನ್ನೇ ಬಳಸುತ್ತಾರೆ. ವೇದೋಪನಿಷತ್ತುಗಳನ್ನು ಓದಿದ ವ್ಯಕ್ತಿ ಇಷ್ಟು ಅಸಭ್ಯವಾದ ಭಾಷೆಯಲ್ಲಿ ಸಾರ್ವಜನಿಕವಾಗಿ ಮಾತನಾಡಲು ಸಾಧ್ಯವೇ?

ಕಪಟ ಜ್ಯೋತಿಷಿಗಳು ಹರಡುವ ಮೂಢನಂಬಿಕೆಗಳ ಕುರಿತು ಸ್ವಾಮಿ ವಿವೇಕಾನಂದರು ಹೀಗೆ ಹೇಳಿದ್ದರು:
 ಜ್ಯೋತಿಷ್ಯ ಮುಂತಾದುವನ್ನು ಹೇಳಿ ಉದರಪೋಷಣೆ ಮಾಡಿಕೊಳ್ಳುವವರ ಹತ್ತಿರ ಸಂಬಂಧವನ್ನು ಇಟ್ಟುಕೊಳ್ಳಕೂಡದು ಎನ್ನುವನು ಬುದ್ಧ. ಅವನಿಗೆ ಇದರ ರಹಸ್ಯ ಚೆನ್ನಾಗಿ ಗೊತ್ತಾಗಿರಬೇಕು. ತಾರೆಯೊಂದು ನನ್ನ ಜೀವನದ ಮೇಲೆ ತನ್ನ ಪ್ರಭಾವವನ್ನು ಬೀರಿ ವ್ಯಥೆಯನ್ನು ತಂದರೆ ನನ್ನ ಜೀವನ ಕುರುಡು ಕಾಸಿಗೂ ಯೋಗ್ಯವಲ್ಲ. ಜ್ಯೋತಿಷ್ಯ ಮುಂತಾದ ರಹಸ್ಯಗಳನ್ನೆಲ್ಲಾ ನೆಚ್ಚುವುದು ದೌರ್ಬಲ್ಯದ ಚಿಹ್ನೆ. ಈ ಸ್ವಭಾವ ನಿಮ್ಮ ಮನಸ್ಸಿನಲ್ಲಿ ಬಲವಾಗುತ್ತಿದ್ದರೆ ನೀವು ಒಬ್ಬ ವೈದ್ಯನನ್ನು ನೋಡಿ; ಒಳ್ಳೆಯ ಆಹಾರ ಮತ್ತು ವಿಶ್ರಾಂತಿಯನ್ನು ತೆಗೆದುಕೊಳ್ಳಿ..... ಜ್ಯೋತಿಷ್ಯ ಮುಂತಾದವುಗಳಲ್ಲೆಲ್ಲಾ ಸ್ವಲ್ಪ ಸತ್ಯಾಂಶವಿದ್ದರೂ ಅದನ್ನು ನಾವು ನಿರ್ಲಕ್ಷ್ಯದಿಂದ ನೋಡಬೇಕು..... ಮೂಢಭಾವನೆಗಳು ನಾಯಿಕೊಡೆಯಂತೆ ನಮ್ಮ ದೇಶದಲ್ಲಿ ಹಬ್ಬುತ್ತಿವೆ. ವಿಚಾರ ಮಾಡದ ಸ್ತ್ರೀಯರು ಇನ್ನೂ ಸ್ವಾತಂತ್ರ್ಯಕ್ಕೆ ಹೋರಾಡುತ್ತಿರುವರು. ಒಬ್ಬ ಹಣಕ್ಕಾಗಿ ಮತ್ತೊಬ್ಬರನ್ನು ಮೋಸ ಮಾಡಿದರೆ ಅವನನ್ನು ಮೋಸಗಾರ ಎನ್ನುವಿರಿ. ಇತರರನ್ನು ಅಧ್ಯಾತ್ಮಿಕ ದೃಷ್ಟಿಯಿಂದ ಪಾಪಿಗಳು ಎಂದು ಮೋಸಗೊಳಿಸುವವರು ಎಂತಹ ಪಾಪಿಗಳಿರಬೇಕು? ಇದು ಪರಮಪಾತಕ. ಸತ್ಯ ನಿಮ್ಮನ್ನು ಧೀರರನ್ನಾಗಿ ಮಾಡಬೇಕು; ಮೌಢ್ಯತೆಯಿಂದ ಪಾರಾಗುವಂತೆ ಮಾಡಬೇಕು. ಇದೇ ಸತ್ಯದ ಪರೀಕ್ಷೆ.... ಬೇಕಾದರೆ ತಾರೆಗಳನ್ನು ನಿಮ್ಮ ಬೊಗಸೆಯಿಂದ ಎತ್ತಿ ನುಂಗಿಹಾಕಬಹುದು. ನಿಮ್ಮ ನೈಜಸ್ವಭಾವ ಅಂತಹುದು. ಧೀರರಾಗಿ, ಎಲ್ಲಾ ವಿಧದ ಮೂಢನಂಬಿಕೆಗಳಿಂದ ಪಾರಾಗಿ, ಮುಕ್ತರಾಗಿ.
ಇವತ್ತು ನಿಮ್ಮ ಚಾನಲ್ ಮೂಲಕ ನರೇಂದ್ರ ಶರ್ಮ ಅವರು ಇಡೀ ಕರ್ನಾಟಕವನ್ನು ಮೌಢ್ಯದಲ್ಲಿ ಮುಳುಗಿಸಲು ಯತ್ನಿಸುತ್ತಿದ್ದಾರೆ. ಅಮೆರಿಕದ ಕೆಲವು ಸ್ವತಂತ್ರ ಕ್ರಿಶ್ಚಿಯನ್ ಗುಂಪುಗಳು ಹರಡುತ್ತಿರುವ ಪ್ರಳಯದ ಥಿಯರಿಗಳನ್ನೇ (http://www.coffetoday.com/the-doomsday-is-on-may-21-2011/907618/
http://www.allvoices.com/contributed-news/8599025-worlds-doomsday-fixed-for-6-pm-on-21st-may-2011)  ಕದ್ದು ತಂದು, ಅವುಗಳನ್ನು ಜಗನ್ಮಾತೆಯ ಹೆಸರಿನಲ್ಲಿ ಬದಲಾಯಿಸಿ, ಈ ವರ್ಷವೇ ಪ್ರಳಯವಾಗುತ್ತದೆ ಎಂದು ಭೀತಿ ಸೃಷ್ಟಿಸುತ್ತಿದ್ದಾರೆ. ಪ್ರಳಯವನ್ನು ತಪ್ಪಿಸಲು ಸಾಧ್ಯವಿರುವುದು ನನಗೆ ಮಾತ್ರ, ಹೀಗಾಗಿ ನಾನು ಹೇಳಿದಂತೆ ಕೇಳಿ ಎಂದು ಜನರನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿದ್ದಾರೆ.

ಹಿಂದೆ ಕಸ್ತೂರಿ ವಾಹಿನಿಯಲ್ಲಿದ್ದಾಗ ಸಹ ಲೋಕ ಕಲ್ಯಾಣ, ಇತ್ಯಾದಿ ಬೊಗಳೆ  ಮಾತುಗಳನ್ನು ಹೇಳಿ ಅರಮನೆ ಮೈದಾನದಲ್ಲಿ ದೊಡ್ಡ ಯಾಗವೊಂದನ್ನು ನಡೆಸಿದ ನರೇಂದ್ರ ಶರ್ಮ ಅವರು ಇದಕ್ಕಾಗಿ ಕೋಟ್ಯಂತರ ರೂಪಾಯಿ ಹಣವನ್ನು ಮುಗ್ಧ, ಅಮಾಯಕ ಜನಸಾಮಾನ್ಯರಿಂದ ಪಡೆದಿದ್ದರು. ಎಷ್ಟು ಹಣ ಪಡೆದಿದ್ದೀರಿ, ಸ್ವಲ್ಪ ಲೆಕ್ಕ ಕೊಡಿ ಎಂದು ಪತ್ರಕರ್ತರು ಪತ್ರಿಕಾಗೋಷ್ಠಿಯೊಂದರಲ್ಲಿ ಕೇಳಿದಾಗ ನರೇಂದ್ರ ಶರ್ಮ ಗೋಷ್ಠಿಯನ್ನೇ ನಿಲ್ಲಿಸಿ ಹೊರಟುಹೋಗಿದ್ದರು. ನರೇಂದ್ರ ಶರ್ಮ ಅವರು ಸಾರ್ವಜನಿಕರ ದೇಣಿಗೆ ಪಡೆಯಲೆಂದೇ ಎರಡು ಟ್ರಸ್ಟ್‌ಗಳನ್ನು ರಚಿಸಿಕೊಂಡಿದ್ದಾರೆ. ಈ ಟ್ರಸ್ಟ್‌ಗಳಿಗೂ ನಿಮ್ಮ ಚಾನಲ್‌ಗಳಿಗೂ ಯಾವ ಸಂಬಂಧವಿರುವುದಿಲ್ಲ. ಪ್ರಚಾರಕ್ಕೆ ನಿಮ್ಮ ಚಾನಲ್‌ಗಳು, ಹಣ ವಸೂಲಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವ ಟ್ರಸ್ಟ್‌ಗಳು! ಈ ದುರ್ ವ್ಯವಹಾರ ನಿಲ್ಲಿಸಲು ನೀವು ಹೇಳಿದರೆ, ಅವರು ಚಾನಲ್ ಬದಲಾಯಿಸುತ್ತಾರೆ.  ಬ್ರಹ್ಮಾಂಡ, ಭವ್ಯ ಬ್ರಹ್ಮಾಂಡ, ಬೃಹತ್ ಬ್ರಹ್ಮಾಂಡ ಆಯಿತು, ಇನ್ನು ಸೂಪರ್ ಬ್ರಹ್ಮಾಂಡ ಸೃಷ್ಟಿಯಾಗಬಹುದು ಅಷ್ಟೆ.

ಇಂಥ ಕಾರ್ಯಕ್ರಮ ಬೇಕೆ ಎಂದು ನೀವು ಯೋಚಿಸಲೇಬೇಕಾದ ಸಮಯವಿದು. ನಿಜ, ಈ ಕಾರ್ಯಕ್ರಮದಿಂದ ನಿಮಗೆ ಟಿಆರ್‌ಪಿ ಹೆಚ್ಚಾಗಿರಬಹುದು. ಆದರೆ ಜನ ಹೆಚ್ಚು ನೋಡುತ್ತಾರೆ ಎಂಬ ಕಾರಣಕ್ಕೆ ಅದು ಶ್ರೇಷ್ಠವಾದ ಕಾರ್ಯಕ್ರಮ ಎಂದು ಭಾವಿಸುವುದು ಮೂರ್ಖತನ. ಬೀದಿಯಲ್ಲಿ ಒಬ್ಬ ಹುಚ್ಚ ವಿಚಿತ್ರವಾಗಿ ಮಾತನಾಡುತ್ತ, ಬಟ್ಟೆ ಬಿಚ್ಚಿಕೊಂಡು ಓಡಾಡುತ್ತಿದ್ದರೆ ಆತನನ್ನು ಎಲ್ಲರೂ ನೋಡುತ್ತಾರೆ. ಮಾಮೂಲಿಯಂತೆ ಓಡಾಡುವ ನಮ್ಮ, ನಿಮ್ಮನ್ನು ಯಾರೂ ಗಮನಿಸುವುದಿಲ್ಲ. ಎಲ್ಲರೂ ನೋಡುತ್ತಾರೆ ಅನ್ನುವ ಕಾರಣಕ್ಕೆ ಬೆತ್ತಲೆ ಹುಚ್ಚನನ್ನು ಪ್ರೋತ್ಸಾಹಿಸುವುದು ಸರಿಯೇ? ಬೆತ್ತಲೆ ಓಡಾಡುವ ಹುಚ್ಚನಿಗೆ ಬಟ್ಟೆ ಕೊಡಿಸಿ, ಯಾವುದಾದರೂ ಆಸ್ಪತ್ರೆಗೆ ಸೇರಿಸುವ ಕೆಲಸ ಮಾಡಬೇಕೇ ಹೊರತು, ಹುಚ್ಚನೇ ಶ್ರೇಷ್ಠ ಎಂದು ಭಾವಿಸಬೇಕಾಗಿಲ್ಲ. ಒಬ್ಬ ಹುಚ್ಚನನ್ನು ಸಹಿಸಿಕೊಂಡ ಪರಿಣಾಮ ಈಗ ಬೀದಿ ತುಂಬ ಹುಚ್ಚರು ಸೇರಿಬಿಡುತ್ತಾರೆ. ಆ ಅಪಾಯವನ್ನೂ ನಾವು ಎದುರಿಸುತ್ತಿದ್ದೇವೆ.

ಇದೆಲ್ಲವನ್ನೂ ಗಮನಿಸಿ ತಾವು ದಯಮಾಡಿ ನರೇಂದ್ರ ಶರ್ಮ ಅವರ ಬ್ರಹತ್ ಬ್ರಹ್ಮಾಂಡ ಕಾರ್ಯಕ್ರಮವನ್ನು ಈಗಿಂದೀಗಲೇ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸುತ್ತೇವೆ. ಈ ಕಾರ್ಯಕ್ರಮ ಅನೈತಿಕ, ಅಪ್ರಜಾಸತ್ತಾತ್ಮಕ, ಮಾನವ ವಿರೋಧಿಯಾಗಿದೆ.

ಇದನ್ನು ನಾವು ನಿಮ್ಮ ಬೇಡಿಕೆ ಎಂದು ಹೇಳುತ್ತಿಲ್ಲ, ಆಗ್ರಹ ಎಂದೇ ಹೇಳುತ್ತಿದ್ದೇವೆ. ಯಾಕೆಂದರೆ ಇದು ಕಾನೂನು ಪ್ರಕಾರವೂ ಅಪರಾಧ. ನೀವು ಹಾಗು ನರೇಂದ್ರ ಶರ್ಮ ಸರ್ಕಾರ ರಚಿಸಿರುವ ನಿಯಮಾವಳಿಗಳನ್ನು ಗಾಳಿಗೆ ತೂರಿರುವುದು ಸ್ಪಷ್ಟ.

ನಿಮಗೆ ಚೆನ್ನಾಗಿ ಗೊತ್ತಿದೆ. ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಇಲಾಖೆ ಸಿದ್ಧಪಡಿಸಿರುವ ಮಾರ್ಗಸೂಚಿಗಳನ್ನು ನೀವು ತಪ್ಪದೇ ಪಾಲಿಸಬೇಕು. ಮಾರ್ಗಸೂಚಿಗಳನ್ನು ಅಲಕ್ಷ್ಯ ಮಾಡಿದ ಎಂಟಿವಿ, ಟಿವಿ೫ ಮುಂತಾದ ಚಾನಲ್‌ಗಳನ್ನು ಶಿಕ್ಷಿಸಲಾಗಿರುವ ಉದಾಹರಣೆಗಳೂ ನಮ್ಮ ಮುಂದಿವೆ. ಟಿವಿಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳು ಒಟ್ಟು ೧೩ ವಿವಿಧ ಕಾಯ್ದೆಗಳ ವ್ಯಾಪ್ತಿಗೆ ಒಳಪಡುತ್ತವೆ. ಹೀಗಾಗಿ ತಮಗೆ ಕಾನೂನಿನ ಹೊಣೆಗಾರಿಕೆಯೂ ಇದೆ. ಅವುಗಳನ್ನು ನಿಮಗೆ ನೆನಪಿಸಲು ಯತ್ನಿಸುತ್ತೇವೆ.

ಕಾಯ್ದೆಗಳು ಹೀಗಿವೆ.

1. Cable Television Network (Regulation) Act, 1995 and Certification Rules there under.
2. Drugs and Cosmetics Act, 1940.
3. Emblems and Names (Prevention of Improper Use) Act, 1950.
4. Drugs (Control) Act 1950.
5. Drugs and Magic Remedies (Objectionable Advertisements) Act, 1954.
6. Prevention of Food & Adulteration Act, 1954.
7. Prize Competitions Act, 1955.
8. Indecent Representation of Women (Prohibition) Act, 1986.
9. Trade and Merchandise Marks, Act 1999.
10. Copyright Act, 1957.
11. Cigarette and other Tobacco Products Act 2003.
12. Consumer Protection Act, 1986.
13. The Prevention of Cruelty to Animals Act, 1960

ಪ್ರಸಾರ ವೇಳೆ ಕಾನೂನು ಉಲ್ಲಂಘನೆಯನ್ನು ಮೂರು ಹಂತದಲ್ಲಿ ವಿಚಾರಣೆಗೆ ಒಳಪಡಿಸಬಹುದು. ಮೂರನೆ ಹಂತದಲ್ಲಿ ಸರಕಾರ ನೇಮಿಸಿದ ಸಮಿತಿ ಚಾನೆಲ್ ಮುಖ್ಯಸ್ಥ ತಪ್ಪಿತಸ್ಥ ಎಂದು ಕಂಡುಬಂದರೆ, ಪ್ರಸ್ತುತ ಕಾರ್ಯಕ್ರಮವನ್ನು ಪ್ರಸರಣ ಮಾಡದಂತೆ ನಿರ್ದೇಶಿಸಬಹುದು, ಕ್ಷಮಾಪಣೆಯನ್ನು ಬಿತ್ತರಿಸುವಂತೆ ಹೇಳಬಹುದು ಹಾಗೂ ದಂಡ ವಿದಿಸಬಹುದು. ಈ ಪ್ರಕ್ರಿಯೆಗೆ ದೂರು ದಾಖಲಿಸುವುದು ಮುಖ್ಯ.ಮಾರ್ಗಸೂಚಿ ಸ್ಪಷ್ಟ ಮಾತುಗಳಲ್ಲಿ ಕಾರ್ಯಕ್ರಮಗಳಲ್ಲಿ ಅವಹೇಳನಕಾರಿ ಭಾಷೆ, ಜಾತಿ ನಿಂದನೆ, ಮೂಢನಂಬಿಕೆ ವೈಭವೀಕರಣ ಹಾಗೂ ಜನರನ್ನು ದಿಕ್ಕುತಪ್ಪಿಸುವುದನ್ನು ಖಂಡಿಸುತ್ತದೆ.

ಕಂಟೆಂಟ್ ಸರ್ಟಿಫಿಕೇಷನ್ ನಿಯಮಾವಳಿ ೨೦೦೮ ಪ್ರಕಾರ ಯಾವುದೇ ನಿರ್ದಿಷ್ಟ ಜಾತಿ, ಕೋಮು ಅಥವಾ ನಂಬಿಕೆ ವಿರುದ್ಧ ಮಾತನಾಡುವುದು ಅಪರಾಧ. ಜೊತೆಗೆ ಯಾವುದೇ ಒಂದು ಆಚರಣೆಯನ್ನು ಶ್ರೇಷ್ಠ ಅಥವಾ ಕನಿಷ್ಟ ಎಂದು ಬಿಂಬಿಸುವಂತಿಲ್ಲ. ಹಾಗೆಯೇ ಲಿಂಗ ಅಸಮಾನತೆಯನ್ನು ಹೇಳುವಂತಿಲ್ಲ.

ನಿಮ್ಮ ಬೃಹತ್ ಬ್ರಹ್ಮಾಂಡ ಕಾರ್ಯಕ್ರಮ ಈ ಎಲ್ಲ ಕಾಯ್ದೆಗಳನ್ನು ಉಲ್ಲಂಘಿಸಿರುವುದು ಸ್ಪಷ್ಟ. ಈ ಕಾರ್ಯಕ್ರಮ ಸ್ತ್ರೀಯರನ್ನು ಕೆಟ್ಟದಾಗಿ ಚಿತ್ರಿಸುತ್ತದೆ. ಹಜಾಮರನ್ನು ನೋಡಬಾರದು ಎನ್ನುವ ಮೂಲಕ ಅಸ್ಪೃಶ್ಯತೆಯನ್ನು ಪ್ರಚಾರ ಮಾಡುತ್ತಿದೆ. ಜನರಲ್ಲಿ ಪ್ರಳಯದ ಭೀತಿಯನ್ನು ಸೃಷ್ಟಿಸುತ್ತಿದೆ. ಮಾಂಸಾಹಾರಿಗಳನ್ನು ಈತ ಕೀಳಾಗಿ ನಿಂದಿಸುವ ಮೂಲಕ ಜನಾಂಗೀಯ ನಿಂದನೆಯನ್ನು ಈ ಕಾರ್ಯಕ್ರಮ ಪೋಷಿಸುತ್ತಿದೆ.

ಭಾರತದ ಸಂವಿಧಾನವು ಜನರಲ್ಲಿ ವೈಜ್ಞಾನಿಕ ಮನೋಭಾವ ಹೆಚ್ಚಾಗಬೇಕು ಎನ್ನುತ್ತದೆ. ಆಧುನಿಕ ಕಾಲಘಟ್ಟದಲ್ಲಿ ನಾವು ಇನ್ನೂ ಕಂದಾಚಾರಗಳ ನರಕದಲ್ಲೇ ಕೊಳೆಯುತ್ತಿದ್ದೇವೆ. ಈ ಕೆಟ್ಟ ಬೆಳವಣಿಗೆಯನ್ನು ಟಿವಿ ಚಾನಲ್‌ಗಳು ನಿರಂತರವಾಗಿ ಪೋಷಿಸುತ್ತಿವೆ. ಈ ನಿಟ್ಟಿನಲ್ಲಿ ನಿಮ್ಮ ಚಾನಲ್ ಸೇರಿದಂತೆ ಎಲ್ಲ ಚಾನಲ್‌ಗಳು ಟಿಆರ್‌ಪಿ ಆಸೆಗೆ ಬಲಿಬೀಳದೆ ಕಾಲದ ಅಗತ್ಯಕ್ಕೆ ತಕ್ಕಂಥ, ಮನುಷ್ಯರನ್ನು ಎಲ್ಲ ಮೌಢ್ಯಗಳಿಂದ ಬಿಡುಗಡೆಗೊಳಿಸುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಅಗತ್ಯವಿದೆ.

ಈ ಕಾರ್ಯಕ್ರಮವನ್ನು ಕೂಡಲೇ ನಿಲ್ಲಿಸಬೇಕೆಂದು ಮತ್ತೊಮ್ಮೆ ಆಗ್ರಹಪಡಿಸುತ್ತೇವೆ. ಒಂದು ವೇಳೆ ನಿಲ್ಲಿಸದೇ ಹೋದಲ್ಲಿ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ದೂರು ಸಲ್ಲಿಸುವುದೂ ಸೇರಿದಂತೆ, ಪ್ರಜಾಸತ್ತಾತ್ಮಕ ಹೋರಾಟಗಳನ್ನು ನಡೆಸಬೇಕಾಗುತ್ತದೆ ಎಂದು ತಿಳಿಸಲು ವಿಷಾದಿಸುತ್ತೇವೆ.

ಧನ್ಯವಾದಗಳು.

ಓದುಗರಿಗೊಂದು ಮನವಿ: ದಯಮಾಡಿ ಈ ಪತ್ರದ ಧಾಟಿಯ ಪತ್ರಗಳನ್ನು ಅಥವಾ ಇದೇ ಪತ್ರವನ್ನು ನಿಮ್ಮ ಐಡಿಗಳಿಂದ  ಈ feedbackzeekannada@zeenetwork.com  ಇಮೇಲ್ ಅಥವಾ ಜೀ ಕನ್ನಡ, ನಂ.೩೯, ಯುನೈಟೆಡ್ ಮ್ಯಾನ್ಷನ್, ಮೂರನೇ ಮಹಡಿ, ಮಹಾತ್ಮಗಾಂಧಿ ರಸ್ತೆ, ಬೆಂಗಳೂರು-೧ ಈ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬೇಕಾಗಿ ವಿನಂತಿ. ಸಾಧ್ಯವಾಗುವುದಾದರೆ ಈ ಅಭಿಯಾನವನ್ನು ಬೆಂಬಲಿಸುವ ಬ್ಲಾಗರ್‌ಗಳು ಈ ಪತ್ರವನ್ನು ಯಥಾವತ್ತಾಗಿ ತಮ್ಮ ಬ್ಲಾಗ್‌ಗಳಲ್ಲಿ ಪ್ರಕಟಿಸಬೇಕೆಂದು ಕೋರುತ್ತೇವೆ. ಹಾಗೆಯೇ ಇದನ್ನು ಫೇಸ್‌ಬುಕ್ ಹಾಗು ಇತರ ಸೋಷಿಯಲ್ ನೆಟ್‌ವರ್ಕ್‌ಗಳಲ್ಲಿ ಶೇರ್ ಮಾಡಲು ವಿನಂತಿಸುತ್ತೇವೆ.