ಹುಟ್ಟೂರಿನಲ್ಲಿ ಮೂಡಿದ ’ಜೀವದನಿ’

12 Jun 2010




ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಕೆಲಸ ಬಿಡಿಸಿ ತವರು ಜಿಲ್ಲೆಗೆ ಅಟ್ಟಿದ ಪಾಪವೇನಾದರೂ ಇದ್ದರೆ, ಅದು ನನ್ನದು. ಪುಣ್ಯವೇನಾದರೂ ಇದ್ದರೆ, ಹುಟ್ಟು ಜಿಲ್ಲೆಯಲ್ಲಿ ಬದುಕು ಕಟ್ಟಿಕೊಂಡ ಗೆಳೆಯ ಸರ್ಜಾಶಂಕರ ಹರಳಿಮಠನದು.

ಸುಮಾರು ಇಪ್ಪತ್ತು ವರ್ಷಗಳ ಪರಿಚಯ, ಸ್ನೇಹ ನಮ್ಮಿಬ್ಬರದು. ನಾನಾಗ ಏರ್‌ಫೋರ್ಸ್‌‌ನಲ್ಲಿದ್ದೆ. ಮೊಬೈಲ್‌, ಕಂಪ್ಯೂಟರ್‌ಗಳಿಲ್ಲದ ಕಾಲವದು. ನನಗೋ ಬರೆಯುವ ಹುಚ್ಚು. ಶಂಕರನಿಗೆ (ಸರ್ಜಾಶಂಕರ) ಬರೆಯುವುದರ ಜೊತೆಗೆ ಅದನ್ನು ಪ್ರಕಟಿಸುವ ಹುಚ್ಚು. ನಮ್ಮಂಥ ಹುಚ್ಚರಿಗಾಗಿಯೇ ಕೆಲ ಹವ್ಯಾಸಿ ಪ್ರಕಾಶಕರಿದ್ದರು. ಬರೆಯುವ ಆಸೆ ಇರುವ, ಆದರೆ, ಸ್ವಂತ ಪುಸ್ತಕ ಹೊರತರಲು ಆಗದ ನಮ್ಮಂಥವರ ಬರಹಗಳನ್ನು ಅವರು ಅಚ್ಚು ಹಾಕುತ್ತಿದ್ದರು. ಆಗ ಬರುತ್ತಿದ್ದ ಬಹುತೇಕ ಪುಸ್ತಕಗಳು ಕವನ ಸಂಕಲನಗಳು. ಸಹಕಾರ ತತ್ವದಡಿ ಪ್ರಕಟವಾಗಬೇಕಿತ್ತು.

ಸಹಕಾರ ತತ್ವ ಬಹು ಸುಲಭ ವಿಧಾನ. ಯುವ ಬರಹಗಾರರು ತಮ್ಮ ಒಂದು ಕವಿತೆ/ಹನಿಗವನ ಪ್ರಕಟಣೆಗೆ ಐವತ್ತು ರೂಪಾಯಿಗಳನ್ನು ನೀಡಬೇಕಿತ್ತು. ಅಂಥ ೪೦-೫೦ ಬರಹಗಾರರನ್ನು ಸಂಪರ್ಕಿಸುತ್ತಿದ್ದ ಹವ್ಯಾಸಿ ಪ್ರಕಾಶಕರು, ಚಂದಾ ಸಂಗ್ರಹಿಸಿ, ತಮ್ಮ ಕೈಯಿಂದ ಒಂದಿಷ್ಟು ಹಾಕಿ ಪುಸ್ತಕ ಹೊರತರುತ್ತಿದ್ದರು. ಆಗ ಮೊಳೆಯಚ್ಚು ಮುದ್ರಣಾಲಯಗಳೇ ಹೆಚ್ಚು. ಅಲ್ಲಿ ಮುದ್ರಣ ಖರ್ಚು ಕಡಿಮೆ ಕೂಡಾ. ಆಫ್‌ಸೆಟ್‌ ಮುದ್ರಣ ಯಂತ್ರಗಳು ಕೇವಲ ದೊಡ್ಡ ನಗರಗಳಿಗೆ ಮಾತ್ರ ಸೀಮಿತವಾಗಿದ್ದವು.

ಸರ್ಜಾಶಂಕರನ ಬರಹವನ್ನು ನಾನು ಮೊದಲು ಓದಿದ್ದು ಇಂಥ ಚಂದಾಪುಸ್ತಕವೊಂದರಲ್ಲಿ.

ಪ್ರತಿ ಬರಹಗಾರನ ವಿಳಾಸವೂ ಅದರಲ್ಲಿ ಅಚ್ಚಾಗಿರುತ್ತಿತ್ತು. ಏರ್‌ಫೋರ್ಸ್‌‌ನಲ್ಲಿದ್ದ ನಾನು ಶಂಕರನ ಬರಹ ಓದಿ, ಅಲ್ಲಿದ್ದ ವಿಳಾಸಕ್ಕೆ ಅಂಚೆ ಕಾರ್ಡ್‌ ಬರೆದೆ. ಕ್ರಮೇಣ ಪರಿಚಯ ಬೆಳೆಯಿತು. ನಾವಿಬ್ಬರೂ ಸಾಹಿತ್ಯಕ್ಕಿಂತ ಹೆಚ್ಚಾಗಿ ಪರಸ್ಪರ ಪತ್ರಗಳನ್ನು ಬರೆದಿದ್ದೇ ಜಾಸ್ತಿ.

ಇದೆಲ್ಲ ಹದಿನೈದು ಇಪ್ಪತ್ತು ವರ್ಷಗಳ ಹಿಂದಿನ ಮಾತು.

ಮುಂದೆ ನಾನು ಏರ್‌ಫೋರ್ಸ್‌ ಬಿಟ್ಟು ಬೆಂಗಳೂರಿಗೆ ಬಂದೆ. ಶಂಕರ ಆಗಲೇ ಬೆಂಗಳೂರಿನಲ್ಲಿದ್ದ. ಸಣ್ಣಪುಟ್ಟ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ. ಒಂದೆರಡು ವರ್ಷಗಳ ನಂತರ ಬಹುರಾಷ್ಟ್ರೀಯ ಕಂಪನಿಯೊಂದಕ್ಕೆ ಸೇರಿಕೊಂಡ. ನಾನಾಗ, ‘ಹಾಯ್‌ ಬೆಂಗಳೂರ್’‌ ಸೇರಿಯಾಗಿತ್ತು.

‘ಏನಾದ್ರೂ ಮಾಡಬೇಕೆಂದಿದ್ದರೆ ನಮ್ಮೂರಲ್ಲಿ ಮಾಡಬೇಕು ಶಂಕರಾ. ಅದೇ ನಿಜವಾದ ಚಾಲೆಂಜ್‌’ ಎಂದೆ ಒಂದಿನ.

ಊರಿಗೆ ಹೋಗಿ ಏನು ಮಾಡಬೇಕೆಂಬುದು ಇಬ್ಬರಿಗೂ ಗೊತ್ತಿದ್ದಿಲ್ಲ! ಅಲ್ಲಿ ಹೋದ ನಂತರ ತಾನೇ ಗೊತ್ತಾಗುತ್ತದೆ ಎಂಬ ಉಡಾಫೆ.

ಉತ್ತಮ ಸಂಬಳ ಬರುವ ಕೆಲಸ ಬಿಡೋದು ಹೇಗೆ ಎಂಬ ಗೊಂದಲ ಶಂಕರನಿಗೆ. ವಿದೇಶಿ ಕಂಪನಿ ಚಾಕರಿಯಿಂದ ನಿನ್ಯಾವ ಕನಸುಗಳು ಈಡೇರುತ್ತವೆ ಎಂಬ ಪ್ರಶ್ನೆ ನನ್ನದು. ನನ್ನ ವರಾತ ಹೆಚ್ಚಾಯಿತೋ, ಅಥವಾ ನಿಜಕ್ಕೂ ಊರಿಗೆ ಹೋಗಬೇಕೆಂದು ಆತ ನಿರ್ಧರಿಸಿದನೋ ಗೊತ್ತಿಲ್ಲ. ಅದೊಂದಿನ, ವಾಪಸ್‌ ಶಿವಮೊಗ್ಗಕ್ಕೆ ಹೋಗ್ತೇನೆ ಎಂದು ಘೋಷಿಸಿದ ಶಂಕರ, ಬೆಂಗಳೂರು ಖಾಲಿ ಮಾಡಿದ.

ಅದಾದ ಸ್ವಲ್ಪ ದಿನಗಳಿಗೆ ‘ಹಾಯ್‌ ಬೆಂಗಳೂರ್‌’ಗೆ ಸಲಾಮ್‌ ಹೊಡೆದೂ ನಾನೂ ನನ್ನ ಜಿಲ್ಲೆ ಕೊಪ್ಪಳಕ್ಕೆ ಹೋದೆ.

ಇದ್ದ ಕೆಲಸ ಬಿಟ್ಟು, ಕೇವಲ ಕನಸುಗಳನ್ನು ಹೊತ್ತು ತಂದಿದ್ದ ನಮ್ಮನ್ನು, ನಮ್ಮ ಸ್ವಂತ ಜಿಲ್ಲೆಗಳು ಕಾಡಿಸಿದ್ದು ಅಷ್ಟಿಷ್ಟಲ್ಲ. ಬದುಕು ಕಟ್ಟಿಕೊಳ್ಳಲು ಶಂಕರ ಎಷ್ಟು ಕಷ್ಟಪಟ್ಟನೋ, ನಾನೂ ಅಷ್ಟೇ ಕಷ್ಟಪಡಬೇಕಾಯ್ತು. ಯಾಕಾದ್ರೂ ಕೆಲಸ ಬಿಟ್ಟೆವೋ ಅಂತ ಪದೆ ಪದೆ ಅನಿಸುವಷ್ಟು ಮೂಲಭೂತ ಸಮಸ್ಯೆಗಳು ಇಬ್ಬರನ್ನೂ ಕಾಡಿದವು.

ಪತ್ರಿಕೋದ್ಯಮದಲ್ಲೇ ಏನಾದ್ರೂ ಮಾಡಬೇಕು ಎಂದು ನಾನು ನಿರ್ಧರಿಸಿದ್ದೆನಾದರೂ, ಏನು ಮಾಡಬೇಕೆಂಬುದು ಸ್ಪಷ್ಟವಿದ್ದಿಲ್ಲ. ಶಂಕರನಿಗಂತೂ ಇನ್ನೂ ಗೊಂದಲ. ಬರವಣಿಗೆಯ ಹುಚ್ಚು ಸುಲಭಕ್ಕೆ ಬಿಡುವಂಥದಲ್ಲ. ಅದರಲ್ಲೂ, ಬರೆದಿದ್ದು ಅಚ್ಚಾಗಬೇಕೆಂಬ ಆಸೆ ಇದ್ದರೆ ಬಹಳ ಕಷ್ಟ.

ಈ ಹುಚ್ಚಿನ ನಡುವೆ, ಹೊಟ್ಟೆಪಾಡನ್ನು ಮರೆಯೋದಾದ್ರೂ ಹೇಗೆ? ಒಳ್ಳೆ ಸಂಬಳ ಬರುವ ಕೆಲಸ ಬಿಟ್ಟು ಬಂದಿದ್ದ ನಮ್ಮನ್ನು ಹುಚ್ಚರನ್ನು ನೋಡುವಂತೆ ನೋಡಿತು ಊರು. ಅದಕ್ಕೆ ತಕ್ಕಂತೆ ನಮ್ಮ ಹವ್ಯಾಸಗಳಿದ್ದವು. ದುಡಿದು ಬದುಕುವುದೇ ಕಷ್ಟವಾಗಿದ್ದ ದಿನಗಳಲ್ಲಿ, ಬರೆದು ಬದುಕುತ್ತೇನೆ ಎಂದು ಹೊರಟವರನ್ನು ನಮ್ಮೂರುಗಳು ಇನ್ಯಾವ ರೀತಿ ನೋಡಲು ಸಾಧ್ಯವಿತ್ತು?

ಕ್ರಮೇಣ ಬದುಕು ಚಿಗುರಿತು.

ಹಲವಾರು ಬಗೆಯ ಕೆಲಸಗಳನ್ನು ಮಾಡಿದ ನಂತರ, ನಾನು ‘ವಿಜಯ ಕರ್ನಾಟಕ’ ಸೇರಿಕೊಂಡೆ. ‘ನಿನ್ನ ಬರವಣಿಗೆ ಚೆನ್ನಾಗಿದೆ, ಸಾಪ್ತಾಹಿಕ ವಿಜಯ ನೋಡಿಕೊಳ್ಳುವಿಯಂತೆ, ಬೆಂಗಳೂರಿಗೆ ಬಾ’ ಎಂದು ಸಂಪಾದಕ ಈಶ್ವರ ದೈತೋಟ ಪರಿಪರಿಯಾಗಿ ಹೇಳಿದರೂ ಕೇಳದೇ ನಾನು ಕೊಪ್ಪಳ ಜಿಲ್ಲಾ ವರದಿಗಾರನಾಗಿಯೇ ಉಳಿದುಕೊಂಡೆ. ಶಂಕರ ನಿಧಾನವಾಗಿ ಚಳವಳಿಗಳಲ್ಲಿ ಗುರುತಿಸಿಕೊಳ್ಳತೊಡಗಿದ್ದ. ಅವನ ಬದುಕಿನ್ನೂ ಗೊಂದಲದಲ್ಲಿತ್ತು.

ಕೆಲ ವರ್ಷಗಳ ಕಾಲ ನಮ್ಮ ಸಂಪರ್ಕವೇನಿದ್ದರೂ ಪತ್ರಗಳ ಮೂಲಕ ಬದುಕಿತ್ತು.

ಮುಂದೆ ಬದುಕಿನ ಅನಿವಾರ್ಯತೆ ನನ್ನನ್ನು ಮತ್ತೆ ಬೆಂಗಳೂರಿಗೆ ಕರೆ ತಂದಿತು. ಶಂಕರ ಮಾತ್ರ ಶಿವಮೊಗ್ಗದಲ್ಲೇ ಉಳಿದ. ಚಳವಳಿಗಳ ಜೊತೆಗೆ ಪುಟ್ಟದಾಗಿ ದೇಸಿ ಸಂಸ್ಕೃತಿ ಅಂಗಡಿ ಪ್ರಾರಂಭಿಸಿದ. ಗ್ರಾಮೀಣ ಕುಶಲಕರ್ಮಿಗಳ ಉತ್ಪಾದನೆಗಳಿಗೆ ಮಾರಾಟ ವ್ಯವಸ್ಥೆ ರೂಪಿಸುವ ಪ್ರಯತ್ನದಲ್ಲಿ ತನ್ನ ಬದುಕು ರೂಪಿಸಿಕೊಂಡ. ಅವನನ್ನು ಅರ್ಥ ಮಾಡಿಕೊಳ್ಳುವ ಮಡದಿ ದಕ್ಕಿದಳು. ಆ ಹೆಣ್ಣುಮಗಳಿಗೆ ಸೂಕ್ತ ಸರ್ಕಾರಿ ಕೆಲಸವೂ ಸಿಕ್ಕಿತು. ಯಾವ ಆಮಿಷಕ್ಕೂ ಸಿಲುಕದ ಶಂಕರ ಮಾತ್ರ, ಕೊಟ್ಟ ಮಾತಿನಂತೆ ತನ್ನೂರಲ್ಲೇ ಉಳಿದ. ಬೆಳೆದ.

ಇದೆಲ್ಲ ನೆನಪಾಗಿದ್ದು, ಅವನು ಕಳಿಸಿದ ತನ್ನ ಇತ್ತೀಚಿನ ಪುಸ್ತಕ ’ಜೀವದನಿ’ಯಿಂದ. ತನ್ನ ಅಂಕಣ ಬರಹಗಳನ್ನು ಆಯ್ದು ಪ್ರಕಟಿಸಿದ ಅವನ ಮೊದಲ ಪುಸ್ತಕ ’ಬೆಚ್ಚಿ ಬೀಳಿಸಿದ ಬೆಂಗಳೂರು’ ಸಾಕಷ್ಟು ಗಮನ ಸೆಳೆದ ಕೃತಿ. ಆ ನಂತರ ಬಂದಿದ್ದು, ’ಬಾರಯ್ಯ ಬೆಳದಿಂಗಳೇ’. ಈಗ ಮೂರನೇ ಪುಸ್ತಕ ’ಜೀವದನಿ’ ಬಿಡುಗಡೆಗೆ ಸಿದ್ಧವಾಗಿದೆ. [ಜೀವದನಿ (ಅಂಕಣ ಬರಹಗಳು), ಪುಟಗಳು ೧೭೨, ಬೆಲೆ: ರೂ.೧೦೦, ಪ್ರಕಾಶನ: ಅಂತಃಕರಣ, ’ದೇಸಿ ಸಂಸ್ಕೃತಿ’, ಮೈಲಾರೇಶ್ವರ ಸಂಕೀರ್ಣ, ಬಿ.ಎಚ್‌. ರಸ್ತೆ, ಶಿವಮೊಗ್ಗ-೫೭೭ ೨೦೧, ದೂರವಾಣಿ: ೯೪೪೮೭ ೮೦೧೪೪]

ಇದೇ ಭಾನುವಾರ, ೧೩ ಜೂನ್‌ ೨೦೧೦ಕ್ಕೆ ಶಿವಮೊಗ್ಗದ ಕರ್ನಾಟಕ ಸಂಘದ ಸಭಾಂಗಣದಲ್ಲಿ ಪುಸ್ತಕದ ಬಿಡುಗಡೆಯಿದೆ. ಯಥಾಪ್ರಕಾರ, ಶಂಕರ ಫೋನ್‌ ಮಾಡಿ ಕರೆದಿದ್ದಾನೆ. ಇದು ಬರುವ ಆಸಾಮಿಯಲ್ಲ ಅಂತ ಅನ್ನಿಸಿತೋ ಏನೋ, ಬಿಡುಗಡೆಗೂ ಮುಂಚೆ ಪುಸ್ತಕದ ಪ್ರತಿಯೊಂದನ್ನು ಕಳಿಸಿದ್ದಾನೆ. ಅದರ ಬೆನ್ನುಪುಟದಲ್ಲಿರುವ ಶಂಕರನ ದೊಡ್ಡ ನಗುವಿನ ಫೋಟೊ ನೋಡುತ್ತ, ಈ ಅಪರಾತ್ರಿಯಲ್ಲಿ ನಮ್ಮ ಕಳೆದ ದಿನಗಳ ಕನಸುಗಳನ್ನು ನೆನಪಿಸಿಕೊಳ್ಳುತ್ತಾ ಕೂತಿದ್ದೇನೆ.

ಬದುಕಿನಲ್ಲಿ ಎಷ್ಟೋ ಕನಸುಗಳು ವಿಚಿತ್ರ ರೀತಿಯಲ್ಲಿ ತಿರುವು ಪಡೆಯುತ್ತ, ಮತ್ತೆ ಮತ್ತೆ ಪ್ರತ್ಯಕ್ಷವಾಗುತ್ತಿರುವ ಪರಿ ನೆನೆದು ಅಚ್ಚರಿಪಡುತ್ತಿದ್ದೇನೆ. ಬೆಂಗಳೂರಿನ ವೈಟ್‌ ಫೀಲ್ಡ್‌ನ ಅವನ ರೂಮಿನಲ್ಲಿ ಎಷ್ಟೊಂದು ಮಾತಾಡಿದ್ದೆವು. ಎಷ್ಟೊಂದು ಕನಸುಗಳನ್ನು ಹಂಚಿಕೊಂಡಿದ್ದೆವು. ಅವತ್ತಿನಿಂದ ಇವತ್ತಿನ ತನಕ, ಈ ಹದಿನೈದು ಇಪ್ಪತ್ತು ವರ್ಷಗಳಲ್ಲಿ ಶಂಕರ ಸಾಕಷ್ಟು ಮಾಗಿದ್ದಾನೆ. ಆದರೆ, ಕನಸುಗಳು ಮಾತ್ರ ತಾಜಾ ಆಗೇ ಉಳಿದಿವೆ. ಅವುಗಳ ಪೈಕಿ ಒಂದಿಷ್ಟು ನನಸಾಗಿವೆ. ಒಂದಿಷ್ಟು ಹೊಸ ಕನಸುಗಳು ಸೇರಿಕೊಂಡಿವೆ. ಶಂಕರನ ಪ್ರತಿಯೊಂದು ಸಾಹಸವೂ ನನಗೆ ಆ ದಿನಗಳನ್ನು ನೆನಪಿಸುತ್ತವೆ. ನನ್ನ ಕನಸುಗಳೂ ಮತ್ತೆ ಮತ್ತೆ ನೆನಪಾಗುತ್ತವೆ.

ಅವನನ್ನು ’ಬೆಚ್ಚಿ ಬೀಳಿಸಿದ ಬೆಂಗಳೂರು’ ನನಗೀಗ ಅನ್ನ ಹಾಕತೊಡಗಿದೆ. ಆದರೆ, ಈ ನಗರ ನನ್ನ ಕನಸುಗಳನ್ನು ಪೋಷಿಸುತ್ತದಾ? ಮತ್ತೆ ನನ್ನೂರಿಗೆ ಹಿಂತಿರುಗಿಸುತ್ತದಾ?

ಜೀವದ ಗೆಳೆಯನ ’ಜೀವನದಿ’ ಪುಸ್ತಕ ಮತ್ತೆ ಮತ್ತೆ ಆ ಪ್ರಶ್ನೆಗಳನ್ನು ಕೇಳತೊಡಗಿದೆ.

ಉತ್ತರ ಹೊಳೆಯದೇ ಮಂಕಾಗುತ್ತೇನೆ.

- ಚಾಮರಾಜ ಸವಡಿ

18 comments:

Rakesh Shettty said...

ಈಗ ಮಾಡ್ತಾ ಇರೋ ಕೆಲಸ ಬಿಟ್ಟು ನಂಗೂ ಬೇರೆ ಕ್ಷೇತ್ರದಲ್ಲೇ ಆಸಕ್ತಿ ಜಾಸ್ತಿ.ಆದ್ರೆ ಇರೋ ಕೆಲಸ ಬಿಟ್ಟು ಟ್ರೈ ಮಾಡೋ ಅಷ್ಟು ರಿಸ್ಕ್ ತಗೊಳೋದಕ್ಕೆ ಭಯ :)

ನಿಮ್ಮೆ ಗೆಳಯನಿಗೆ ಶುಭವಾಗಲಿ, ನಿಮ್ಮಿಬ್ಬರ ಗೆಳೆತನ ಸದಾ ಹೀಗೆ ಇರಲಿ.

ರಾಕೇಶ್ ಶೆಟ್ಟಿ :)
http://janaganamanadina.wordpress.com/

arivina marevu said...

ಸಿರಿಗೆರೆಯ ನೀರಿನಲಿ..ಬಿರಿದ ತಾವರೆಯಲ್ಲಿ ಕೆಂಪಾಗಿ ನಿನ್ನ ಹೆಸರು..ಕೆ.ಎಸ್.ನ ಅವರ ಸುಂದರ ಕವಿತೆ ಕಣ್ಣಮುಂದೆ. ಗೆಳೆಯನ ಯಶಸ್ಸಿನಲ್ಲಿ, ನಮ್ಮೊರ ಉದ್ಧಾರದಲ್ಲಿ ನಮಗಿರುವಷ್ಟು ಕಾಳಜಿ-ಕಳಕಳಿ ಇನ್ನಾರಿಗಿರಲು ಸಾಧ್ಯ? ಸರ್ಜಾಶಂಕರ್ ಅವರ ಸಾಹಸ ಯಾತ್ರೆ ಹೀಗೆ ಮುಂದುವರೆಯಲಿ..ನಮ್ಮೂರಿಗೆ ನಮ್ಮನ್ನು ಮರಳಿ ಬದುಕು ಕೊಂಡೊಯ್ಯುವಂತಾಗಲಿ..
ಹರ್ಷವರ್ಧನ್ ಶೀಲವಂತ, ಧಾರವಾಡ.

umesh desai said...

ಸವಡಿ ಅವರೆ ನಿಮ್ಮಮಾತು ನಿಜ ಹುಟ್ಟಿದೂರಲ್ಲೇ ಸಾಧಿಸಿರುವ ನಿಮ್ಮ ಗೆಳೆಯನಿಗೆ ಶುಭವಾಗಲಿ

Chamaraj Savadi said...

@Rakehs Shetty
ನೀರಿಗಿಳಿಯದೇ ಆಳ ತಿಳಿಯುವುದು ಕಷ್ಟ ರಾಕೇಶ್‌. ಸ್ವತಃ ಸಾಯದೇ ಸ್ವರ್ಗ ಸಿಗಲ್ಲ ಅಂತಾರಲ್ಲ? ಇದೂ ಹಾಗೇ. ನಿಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಏನಾದರೂ ಕೆಲಸ ಮಾಡ್ತಾ ಇರಿ. ಮುಂದೆ ಅದೇ ನಿಮ್ಮನ್ನು ಪೋಷಿಸೀತು.

ಶಂಕರನಿಗೆ ನಿಮ್ಮ ಶುಭಾಶಯ ತಲುಪಿಸುತ್ತೇನೆ.

Chamaraj Savadi said...

@ Harsha Sheelavanthar
ನಿಜ ಹರ್ಷ. ಶಂಕರನ ಪ್ರಯತ್ನ ಮತ್ತು ಸಾಧನೆ ಅಭಿನಂದನೀಯ. ನಿಮ್ಮ ಹಾರೈಕೆ ನನ್ನ ಪಾಲಿಗೂ ನನಸಾಗಲಿ.

Chamaraj Savadi said...

@ Umesh Desai
ಥ್ಯಾಂಕ್ಸ್‌ ದೇಸಾಯರೇ.

ವಿ.ರಾ.ಹೆ. said...

ನನ್ನದೂ same case as ರಾಕೇಶ್.

ಇರಲಿ. ಮಾಡುವವರಾದರೂ ಮಾಡಲಿ. all the best. :)

AntharangadaMaathugalu said...

ನಿಮ್ಮ ಗೆಳೆಯ ಶಂಕರರಿಗೆ ಅಭಿನಂದನೆಗಳು.
ಜೀವನ ಯಾವಾಗಲೂ ಹಾಗೇ ಅಲ್ವಾ ಸಾರ್. ಬಯಸಿದ್ದು ಬದುಕಾಗೊಲ್ಲ, ಬದುಕಾಗೋದು ಅನಿವಾರ್ಯ ಆಗತ್ತೇ ಹೊರತು, ಬಯಸಿದ ’ತಂತು’ ಆಗೊಲ್ಲ.

ಶ್ಯಾಮಲ

Chamaraj Savadi said...

ನಮ್ದೂ ಅದೇ ಕಥೆ ವಿಕಾಸ್‌. ಒಂದಲ್ಲ ಎರಡು ಸಾರಿ ಊರಿಗೆ ಹೋಗಿ ವಾಪಸ್‌ ಬೆಂಗಳೂರು ಸೇರಿದ್ದಾಯ್ತು. ಮೂರನೇ ಸಲ ಏನಾಗುತ್ತೋ ನೋಡಬೇಕು.

Chamaraj Savadi said...

ಥ್ಯಾಂಕ್ಸ್‌ ಶಾಮಲಾ, ನಿಜ, ಜೀವನದಲ್ಲಿ ಅಂದುಕೊಂಡಿದ್ದು ಈಡೇರೋದು ಕಡಿಮೆ. ಹಾಗಂತ, ಪ್ರಯತ್ನವನ್ನೇ ಮಾಡದಿದ್ದರೆ ಹೇಗೆ? ಪ್ರಯತ್ನ ವಿಫಲವಾದರೂ, ಪ್ರಯತ್ನಿಸಿದ ತೃಪ್ತಿಯಾದರೂ ಇರುತ್ತೆ, ಅಲ್ವಾ?

ನೇರಮಾತು said...

ಡಿಯರ್ ಚಾಮರಾಜ್,
ಹೃದಯವನ್ನು ನಾಟುವಂತಿದೆ ಬರಹ. ನಾನು ಭಾವುಕನಾದೆ. ಇದನ್ನು ಓದುತ್ತಿದ್ದ ಹಾಗೆ, ನಾನು ಬೆಳೆದು ಬಂದ ಹಿನ್ನೆಲೆ ಕುರಿತು ಯೋಚಿಸತೊಡಗಿದೆ. ನನಗೂ ಈ ರೀತಿ ಬರೆಯಬೇಕು ಅನ್ನೋ ಆಸೆ. ಆದ್ರೆ, ಈವರೆಗೆ ಪತ್ರಕರ್ತನ ಕೆಲಸದಲ್ಲಿ ಮುಳುಗಿ ಹೋಗಿದ್ದೆ. ಮನೆ-ಮಠದ ಕಡೆ ಯೋಚನೆ ಮಾಡದಷ್ಟು ಜಡ್ಡುಗಟ್ಟಿ ಹೋದೆ ಅನ್ಸುತ್ತೆ. ಮತ್ತೆ ಬರೆಯೋ ಆಸೆ ಆಗ್ತಿದೆ ಚಾಮರಾಜ್. ಆದ್ರೆ ಒಂದು ಮಾತು, ಈಸಬೇಕು, ಈಸಿ ಜಯಿಸಬೇಕು. ಎದೆಗುಂದೆ ಬೆಂಗಳೂರಲ್ಲೆ ಇದ್ದು ಏನಾದ್ರೂ ಸಾಧಿಸುವ ಪ್ರಯತ್ನ ಮಾಡೋಣ.. ಜತೆಯಲ್ಲಿ ನಮ್ಮಂತಹ ಹುಚ್ಚರಿದ್ದಾರೆ ಮಾರಾಯ್ರೆ...

ಕೇಶವ ಪ್ರಸಾದ್.ಬಿ.ಕಿದೂರು said...

ಸರ್ಜಾಪುರ ಶಂಕರ ಹರಳಿಯವರ ಸಾಹಸ, ಗ್ರಾಮೀಣ ಪ್ರೀತಿ ಅನನ್ಯ. ಪ್ಯಾಟೆ ಸಹವಾಸ ಬಿಟ್ಟು ತಮ್ಮೂರಿಗೆ ಹೋಗಲು ತವಕಿಸುವವರಿಗೆ ಸ್ಪೂರ್ತಿದಾಯಕ.

Chamaraj Savadi said...

ನಿಮ್ಮಂಥವರ ಹಾರೈಕೆ ಅವನಿಗೆ ಖಂಡಿತ ಬೇಕಿದೆ ಕೇಶವಪ್ರಸಾದ್‌. ಜಿಲ್ಲಾ ಕೇಂದ್ರಗಳಲ್ಲಿ ದೇಸಿ ಅಂಗಡಿಗಳನ್ನಿಟ್ಟು ಬದುಕು ರೂಪಿಸಿಕೊಳ್ಳುವುದು ಅಷ್ಟು ಸುಲಭವಲ್ಲ.

vedasudhe said...

ಚಾಮರಾಜ್,
ನಮಸ್ತೆ,
ನಿಮ್ಮಂತ ಸಮಾನ ಮಾನಸಿಕರ ಪರಿಚಯವು ಸಂಪದದಿಂದಾಯ್ತಲ್ಲ! ಅದಕ್ಕಾಗಿ ಸಂಪದಕ್ಕೆ ಮೊದಲ ಕೃತಜ್ಞತೆ. ಇತ್ತೀಚೆಗೆ ನನಗೆ ಇಷ್ಟವಾದ ವಿಚಾರಕ್ಕಾಗಿ
http://www.vedasudhe.blogspot.com/ ಆರಂಭಿಸಿರುವೆ. ಜನರ ಒಲವೂ ಚೆನ್ನಾಗಿರುವುದರಿಂದ ಅದಕ್ಕಾಗಿ ಲಭ್ಯವಿರುವ ಸಮಯದ ವಿನಿಯೋಗ. ನಿನ್ನೆ ರಾತ್ರಿ ನೀವು ಆನ್ ಲೈನ್ ಇದ್ದಿರಿ.ಮತ್ತೊಮ್ಮೆ ಮಾತನಾಡುವ, ಭಾವನೆಗಳನ್ನು ಹಂಚಿಕೊಳ್ಳುವ ಅವಕಾಶ ಸಿಕ್ಕಿತು. ನೀವು ಏನುಬರೆದರೂ ಮನದ ಆಳವನ್ನು ಹೊಕ್ಕುವ ತಾಕತ್ತು ನಿಮಗಿದೆ. ಹಾಗಾಗಿ ಇನ್ನು ಮುಂದೆ ಇಲ್ಲಿ ಬರುತ್ತಿರುವೆ. ಇನ್ನೆರಡುವರೆ ವರ್ಷಗಳು ಸರ್ಕಾರಿ ಸೇವೆ ಬಾಕಿ ಇದೆ. ಈಗಲೂ ಬಿಟ್ಟು ಹಳ್ಳಿಗೆ ಹೋಗಬಹುದು. ಆದರೆ ಕಡಿಮೆ ಸಂಬಳಕ್ಕೆ ಬಹುಕಾಲ ಕೆಲಸ ಮಾಡಿ ಕೈ ತುಂಬ ಸಂಬಳ ಬರುತ್ತಿರುವ ಕಾಲದಲ್ಲಿ ಕೆಲಸ ಬಿಡುವ ಮನಸ್ಸು ಮಾಡುವುದಿಲ್ಲ. ಇನ್ನೆರಡುವರೆ ವರ್ಷಗಳು ಕಳೆಯುವುದು ಅಷ್ಟೇನೂ ಕಷ್ಟವಾಗಲಾರದು. ಆಹೊತ್ತಿಗೆ ನನ್ನ ಹಳ್ಳಿಯಲ್ಲಿ ಒಂದು ಪುಟ್ಟ ವ್ಯವಸ್ಥೆ ಮಾಡಿಕೊಂಡು ಅಲ್ಲಿ ಹೋಗಿ ಒಂದು ನಾಡಹಸು, ಒಂದಿಷ್ಟು ಗಿಡಮರಗಳ ಮಧ್ಯೆ ನಿವೃತ್ತ ಜೀವನ ಕಳೆಯಬೇಕೆಂಬ ಆಸೆ ಇದೆ.ಇಷ್ಟು ನನ್ನ ಪುರಾಣ.
ಭೇಟಿಯಾಗುತ್ತಿರೋಣ.
ಹರಿಹರಪುರಶ್ರೀಧರ್

Pradeep said...

ನಿಮ್ಮ ಗೆಳೆಯ ಸರ್ಜಾ ಶಂಕರ ಅವರಿಗೆ ಶುಭ ಹಾರೈಕೆಗಳು ......ನಮ್ಮ ಕನಸುಗಳನ್ನು ನಾವು ಶ್ರದ್ದೆಯಿಂದ ಬೆನ್ನು ಹತ್ತಿದರೆ, ಅವುಗಳನ್ನು ನನಸಾಗಿಸಬಹುದು ಎಂದು ತೋರಿಸಿದ್ದಾರೆ...ಅಭಿನಂದನೆಗಳು..

samayakannada said...

ಥ್ಯಾಂಕ್ಸ್‌ ಅಲೀಂ. ಬರವಣಿಗೆಗೆ ಅಂಟಿಕೊಂಡಿರುವ ತನಕ ನಾವು ಬದುಕುತ್ತೇವೆ. ಇಲ್ಲದಿದ್ದರೆ, ಒಣ ರಾಜಕೀಯ ಮಾಡಿಕೊಂಡು ಹಾಳಾಗ್ತೇವೆ. ಹಾಗಾಗಬಾರದು ಅಂತಾನೇ ಸರ್ಜಾಶಂಕರ್‌ ಬೆಂಗಳೂರು ಬಿಟ್ಟು ಶಿವಮೊಗ್ಗಕ್ಕೆ ಹೋದ.

ಒಂದಿನ ನಾವೂ ಹಾಗೆ ಹೋಗಬೇಕು. ನಮ್ಮೂರಲ್ಲೇ ಏನಾದ್ರೂ ಮಾಡಬೇಕು.

samayakannada said...

ಶ್ರೀಧರ ಸರ್‌,

ನೀವಾಗಲೇ ಅರ್ಧ ಕಾಲು ಊರಲ್ಲಿ ಇಟ್ಟಿದ್ದೀರಿ. ನಿವೃತ್ತರಾದ ನಂತರ ಪೂರ್ತಿಯಾಗಿ ನಿಮಗನಿಸಿದಂತೆ ಬದುಕಬಲ್ಲಿರಿ. ನಾವಿನ್ನೂ ಆ ಯೋಚನೆಯಲ್ಲಿ ಮಾತ್ರ ಇದ್ದೇವೆ. ನಿಮ್ಮ ನಿವೃತ್ತಿ ನಂತರವೇ ನಿಮ್ಮ ತಲೆಗೆ ಇನ್ನೊಂದು ಹುಚ್ಚು ತೂರಿಸುವ ವಿಚಾರ ಇದೆ. ಯಾವತ್ತಾದರೂ ಬಿಡುವಾಗಿದ್ದಾಗ ಅದರ ಬಗ್ಗೆ ಮಾತಾಡುವೆ.

ನಿಮ್ಮಂಥವರು ಮಾತ್ರ ಅಂಥ ಪ್ರಯೋಗಗಳನ್ನು ಮಾಡಲು ಸಾಧ್ಯ.

samayakannada said...

ಥ್ಯಾಂಕ್ಸ್‌ ಪ್ರದೀಪ್‌,

ನಿಮ್ಮ ಹಾರೈಕೆಯನ್ನು ಶಂಕರನಿಗೂ ತಿಳಿಸಿ. ಲೇಖನದಲ್ಲೇ ಅವನ ಫೋನ್‌ ನಂಬರ್‌ ಇದೆ.