Showing posts with label ಬೇಂದ್ರೆ. Show all posts
Showing posts with label ಬೇಂದ್ರೆ. Show all posts

ರಾತ್ರಿಯಿಡೀ ಕಾಡಿದ ಶ್ರಾವಣ

18 Aug 2009

0 ಪ್ರತಿಕ್ರಿಯೆ
ಬೆಳಗಾಯಿತು ಎಂದು ಇತ್ತೀಚೆಗೆ ಯಾರೂ ಹೇಳುವುದೇ ಬೇಡ. ನಸುಕಿನ ಐದು ಗಂಟೆಗೆ ಹತ್ತಿರದ ಮಸೀದಿಯ ಮೈಕ್‌ ದಿನದ ಮೊದಲ ಪ್ರಾರ್ಥನೆಗೆ ಕರೆ ಕೊಡುವುದಕ್ಕೂ ಮುನ್ನವೇ ಭಕ್ತಿ ಸಂಗೀತ ಮೊಳಗುತ್ತಿರುತ್ತದೆ. ಸಕ್ಕರೆ ನಿದ್ದೆಯಲ್ಲೇ ಮನಸ್ಸಿನ ತುಂಬ ಶ್ರಾವಣದ ಸಂಭ್ರಮ.

ಹಾಗೇ ಮಗ್ಗುಲಾದರೆ, ಭಕ್ತಿ ಗೀತೆಗಳು ಒಂದಾದ ನಂತರ ಒಂದರಂತೆ ಕಿವಿಗೆ ತಾಕುತ್ತಲೇ ಇರುತ್ತವೆ. ಎರಡು-ಮೂರು ಕಡೆಯಿಂದ ಬರುವ ವಿವಿಧ ದೇವರ ನಾಮಗಳು ಮಲಗಲು ಬಿಡುವುದಿಲ್ಲ. ರಾತ್ರಿ ಎಷ್ಟೇ ನೀಟಾಗಿ ಹೊದಿಸಿದ್ದರೂ, ಅದನ್ನು ಕಿತ್ಹಾಕಿ ಚಳಿಗೆ ಮುದುಡಿ ಮಲಗಿದ್ದ ಮಕ್ಕಳ ಮೇಲೆ ಬೆಚ್ಚಗೇ ರಗ್‌ ಹೊದಿಸಿ ಹೊರಬರುತ್ತೇನೆ. ಬಾಗಿಲು ತೆರೆದರೆ, ಪ್ರಶಾಂತವಾಗಿ ಕಾಣುವ ನಸುಕಿನ ಮಬ್ಬುಗತ್ತಲಲ್ಲಿ ಸಂಗೀತದ ಅಲೆಗಳು ಅಪ್ಪಳಿಸುತ್ತವೆ.

ಆಸ್ತಿಕರಿಗೆ ಹೇಗೋ ಏನೋ, ಶ್ರಾವಣ ಮಾಸ ನನಗೆ ಸಾವಿರಾರು ನೆನಪುಗಳನ್ನು ಹೊತ್ತು ತರುವ ತಿಂಗಳು. ಅಯಾಚಿತವಾಗಿ ಬೇಂದ್ರೆ ನೆನಪಾಗುತ್ತಾರೆ. ಅವರ ಅದ್ಭುತ ಕವಿತೆಗಳು ನೆನಪಾಗುತ್ತವೆ. ನನ್ನೂರು ಅಳವಂಡಿಯಲ್ಲಿ ಬೆಳ್ಳಂಬೆಳಿಗ್ಗೆ ಹೊರಡುತ್ತಿದ್ದ ಭಜನೆ ಮೇಳದ ಸಂಗೀತದ ಇಂಪು ಕಿವಿಗೆ ತಾಕಿದಂತಾಗುತ್ತದೆ. ಸಣ್ಣಗೆ ಸುರಿವ ಸೋನೆಮಳೆಯಲ್ಲಿ ತಮ್ಮ ಪಾಡಿಗೆ ತಾವು ಭಜನೆ ಮಾಡುತ್ತ, ಹಾಡು ಹಾಡುತ್ತ, ಅಷ್ಟೊತ್ತಿಗೇ ಎದ್ದಿರುತ್ತಿದ್ದ ಹೆಂಗಳೆಯರಿಂದ ಪೂಜೆ ಸ್ವೀಕರಿಸುತ್ತ ಹೊರಡುತ್ತಿದ್ದ ತಂಡ ನೆನಪಾಗುತ್ತದೆ. ಅದೆಷ್ಟು ಸಾರಿ ಅವರ ಹಿಂದ್ಹಿಂದೇ ನಾನು ಇಡೀ ಊರು ಸುತ್ತಿಲ್ಲ? ಮನಸ್ಸಿನ ತುಂಬ ಶ್ರಾವಣ ತುಂಬಿಕೊಳ್ಳುತ್ತದೆ.

ಅದೇ ಗುಂಗಿನಲ್ಲಿ ಒಳ ಬಂದು, ಕಂಪ್ಯೂಟರ್‌ ಆನ್‌ ಮಾಡಿದರೆ, ಬೆರಳುಗಳು ಶ್ರಾವಣದ ಗೀತೆಗಳಿಗಾಗಿ ತಡಕಾಡುತ್ತವೆ. ಗಾಯಕ ಸಿ. ಅಶ್ವಥ್‌ ಸೊಗಸಾಗಿ ಹಾಡಿರುವ ಬೇಂದ್ರೆಯವರ ’ಶ್ರಾವಣ ಬಂತು ಕಾಡಿಗೆ...’ ಹಾಡನ್ನು ಕ್ಲಿಕ್‌ ಮಾಡುತ್ತೇನೆ. ಈಗ ಕಂಪ್ಯೂಟರ್‌ ಪರದೆಯಲ್ಲೂ ಶ್ರಾವಣದ ಅಮಲು.

http://www.kannadaaudio.com/Songs/Bhaavageethe/Shraavana/Shraa.ram

(ಹಾಡು ಕೇಳಿಸದಿದ್ದರೆ, http://www.kannadaaudio.com ಗೆ ಹೋಗಿ, ಭಾವಗೀತೆ ವಿಭಾಗದಲ್ಲಿ ’ಶ್ರಾವಣ’ ವಿಭಾಗದ ಮೇಲೆ ಕ್ಲಿಕ್‌ ಮಾಡಿ. ಅಲ್ಲಿ ನಿಮಗೆ ಈ ಹಾಡು ಸಿಗುತ್ತದೆ)

ಎಂಥಾ ಅದ್ಭುತ ಕವಿ ಬೇಂದ್ರೆ. ಏನೇ ಬರೆದರೂ ಅದನ್ನು ಅನುಭವಿಸಿ ಬರೆದರು. ಬರೆದಿದ್ದನ್ನು ಇತರರೂ ಅನುಭವಿಸುವಂತೆ ತೀವ್ರತೆ ತುಂಬಿದರು. ಭಾವನೆಗಳು ಹದಗೊಳ್ಳುವುದಕ್ಕೆ ಮುನ್ನವೇ ಬ್ಲಾಗುಗಳಲ್ಲಿ, ಪತ್ರಿಕೆಗಳಲ್ಲಿ ಸ್ಖಲಿಸುವ ಈಗಿನ ದಿನಗಳಲ್ಲಿ ಬೇಂದ್ರೆಯವರ ಆಳದ, ತೀವ್ರತೆಯ ಕವಿತೆಗಳು ಮತ್ತೆ ಮತ್ತೆ ಕಾಡುತ್ತವೆ. ಮನಸ್ಸು ಶ್ರಾವಣವಾಗುತ್ತದೆ.

ಎಲ್ಲೆಲ್ಲಿ ಬಂತು ಶ್ರಾವಣ? ಕಾಡಿಗೆ, ನಾಡಿಗೆ, ಬೀಡಿಗೆ ಬಂತು. ಕಡಲಿಗೆ, ಘಟ್ಟಕ್ಕೆ, ರಾಜ್ಯಪಟ್ಟಕ್ಕೆ, ಬಾನಿನ ಮಟ್ಟಕ್ಕೆ ಬಂತು. ಏರಿ ನಿಂತ ಕಾರ್ಮುಗಿಲು ಸೂರ್ಯನನ್ನೇ ನುಂಗಿತು. ಹಗಲನ್ನು ಇರುಳು ಮಾಡಿತು. ಮಳೆಯಾಗಿ ಇಳಿದು ನದಿಗಳನ್ನು ತುಂಬಿದ ಮೋಡಗಳು ಭೂಮಿ-ಆಕಾಶಕ್ಕೂ ಮದುವೆ ಮಾಡಿಸಿದವು. ಶ್ರಾವಣ ಮಾಸ ವಸುಂಧರೆಯ ಮಧುಮಾಸ ಅಂತಾರೆ ಬೇಂದ್ರೆ.

ಹೊಡೆದ ಜೋರಿಗೆ, ಜೋಕಾಲಿ ಏರಿ, ಅಡರ್ಯಾವ ಮರಕ ಹಾರಿ ಎಂದು ಉನ್ಮತ್ತತೆಯನ್ನು ಬಿಂಬಿಸುತ್ತಾರೆ. ಮನೆಮನೆಗಳಿಗೆ, ದನಿದನಿಗಳಿಗೆ, ಮನದ ನನಿ ಕೊನೆಕೊನೆಗೂ ಶ್ರಾವಣದ ಮತ್ತು ಏರುತ್ತದೆ. ತಣಿದ ತನುವಿನಲ್ಲಿ ಸುಖದ ಹಾಡೊಡೆಯುತ್ತದೆ. ’ಒಡೆದಾವ ಹಾಡು, ರಸ ಉಕ್ಕತಾವ ನೋಡು’ ಎಂಬು ಬರೆದ ಬೇಂದ್ರೆ ಹಾಡಿನಲ್ಲಿ ಉಕ್ಕಿದ ರಸಿಕತೆಯಾದರೂ ಎಂಥದು!

ಉಕ್ಕಿದ ಮಳೆಗೆ ’ಬೆಟ್ಟ ತೊಟ್ಟಾವ ಕುತನಿಯ ಅಂಗಿ, ಹಸಿರು ನೋಡ ತಂಗಿ’ ಅಂತಾರೆ. ಕಪ್ಪನೆಯ ಮೋಡಗಳು ಗುಂಪುಗಟ್ಟಿದ್ದನ್ನು ಕಂಡರೆ ಇಲ್ಲೇ ಜಾತ್ರೆ ಇರಬೇಕು ಅನ್ನುತ್ತಾರೆ. ಮಳೆಗೆ ಹರ್ಷಗೊಂಡ ಭೂಮಿಯಲ್ಲಿ ಉಕ್ಕುವ ಹಸಿರು ಕಂಡು ’ಬನಬನ ನೋಡು ಈಗ ಹ್ಯಾಂಗ, ಮದುವಿ ಮಗನ್ಹಾಂಗ, ತಲಿಗೆ ಬಾಸಿಂಗ, ಕಟ್ಟಿಕೊಂಡು ನಿಂತಾವ ಹರ್ಷಗೊಂಡು, ಹಸಿರುಟ್ಟು ಬಸುರಿಯ ಹಾಂಗ’ ಎಂದು ವರ್ಣಿಸುತ್ತಾರೆ.

ಶ್ರಾವಣದ ಮಳೆ ಬೆಟ್ಟ-ಗುಡ್ಡ ಎಂಬ ಸ್ಥಾವರಲಿಂಗಕ್ಕೆ ಅಭ್ಯಂಗ ಮಾಡಿಸುತ್ತವಂತೆ. ಅದಕ್ಕಾಗಿ ’ಕೂಡ್ಯಾವ ಮೋಡ, ಸುತ್ತೆಲ್ಲ ನೋಡ ನೋಡ’ ಎನ್ನುತ್ತಾರೆ. ನಿಧಾನವಾಗಿ ಕವಿತೆ ಕೇಳುತ್ತ ಬೇಂದ್ರೆಯವರು ಬರೆದಿದ್ದನ್ನು ಓದಿ:

http://www.kannadaaudio.com/Songs/Bhaavageethe/Shraavana/Shraa.ram

(ಹಾಡು ಕೇಳಿಸದಿದ್ದರೆ, http://www.kannadaaudio.com ಗೆ ಹೋಗಿ, ಭಾವಗೀತೆ ವಿಭಾಗದಲ್ಲಿ ’ಶ್ರಾವಣ’ ವಿಭಾಗದ ಮೇಲೆ ಕ್ಲಿಕ್‌ ಮಾಡಿ. ಅಲ್ಲಿ ನಿಮಗೆ ಈ ಹಾಡು ಸಿಗುತ್ತದೆ)

ಶ್ರಾವಣಾ ಬಂತು ಕಾಡಿಗೆ| ಬಂತು ನಾಡಿಗೆ|


ಬಂತು ಬೀಡಿಗೆ| ಶ್ರಾವಣಾ ಬಂತು || ಪಲ್ಲವಿ ||

ಕಡಲಿಗೆ ಬಂತು ಶ್ರಾವಣಾ| ಕುಣಿಧ್ಹಾಂಗ ರಾವಣಾ|
ಕುಣಿದಾವ ಗಾಳಿ| ಭೈರವನ ರೂಪತಾಳಿ || ಅನುಪಲ್ಲವಿ ||

ಶ್ರಾವಣಾ ಬಂತು ಘಟ್ಟಕ್ಕ| ರಾಜ್ಯಪಟ್ಟಕ್ಕ|
ಬಾನು ಮಟ್ಟಕ್ಕ|
ಏರ್ಯಾವ ಮುಗಿಲು| ರವಿ ಕಾಣೆ ಹಾಡೆಹಗಲು|

ಶ್ರಾವಣಾ ಬಂತು ಹೊಳಿಗಳಿಗೆ| ಅದೆ ಶುಭಗಳಿಗೆ|
ಹೊಳಿಗೆ ಮತ್ತ ಮಳಿಗೆ|
ಆಗ್ಯೇದ ಲಗ್ನ| ಅದರಾಗ ಭೂಮಿ ಮಗ್ನ||

ಶ್ರಾವಣಾ ಬಂತು ಊರಿಗೆ| ಕೆರಿ ಕೇರಿಗೆ|
ಹೊಡೆದ ಝೂರಿಗೆ|
ಜೋಕಾಲಿ ಏರಿ| ಅಡರ್ಯಾವ ಮರಕ ಹಾರಿ|

ಶ್ರಾವಣಾ ಬಂತು ಮನಿಮನಿಗೆ| ಕೂಡಿ ದನಿದನಿಗೆ|
ಮನದ ನನಿಕೊನಿಕೊನಿಗೆ|
ಒಡೆದಾವ ಹಾಡೂ| ರಸ ಉಕ್ಕತಾವ ನೋಡು||
ಶ್ರಾವಣಾ ಬಂತು.

ಬೆಟ್ಟ ತೊಟ್ಟಾವ ಕುತನಿಯ ಅಂಗಿ|
ಹಸಿರು ನೋಡ ತಂಗಿ|
ಹೊರಟಾವೆಲ್ಲೊ ಜಂಗಿ|
ಜಾತ್ರಿಗೇನೋ| ನೆರೆದsದ ಇಲ್ಲೆ ತಾನೋ||

ಬನಬನ ನೋಡು ಈಗ ಹ್ಯಾಂಗ|
ಮದುವಿ ಮಗನ್ಹಾಂಗ
ತಲಿಗೆ ಬಾಸಿಂಗ|
ಕಟ್ಟಿಕೊಂಡೂ| ನಿಂತಾವ ಹರ್ಷಗೊಂಡು||

ಹಸಿರುಟ್ಟು ಬಸುರಿಯ ಹಾಂಗ|
ನೆಲಾ ಹೊಲಾ ಹ್ಯಾಂಗ|
ಅರಿಸಿನಾ ಒಡೆಧಾಂಗ|
ಹೊಮ್ಮತಾವ| ಬಂಗಾರ ಚಿಮ್ಮತಾವ||

ಗುಡ್ಡ ದುಡ್ಡ ಸ್ಥಾವರಲಿಂಗ|
ಅವಕ ಅಭ್ಯಂಗ|
ಎರಿತಾವನ್ನೊ ಹಾಂಗ|
ಕೂಡ್ಯಾವ ಮೋಡ| ಸುತ್ತೆಲ್ಲ ನೋಡ ನೋಡ||

ನಾಡೆಲ್ಲ ಏರಿಯ ವಾರಿ||
ಹರಿತಾವ ಝರಿ|
ಹಾಲಿನ ತೊರಿ|
ಈಗ ಯಾಕ| ನೆಲಕೆಲ್ಲ ಕುಡಿಸಲಾಕ||
ಶ್ರಾವಣಾ ಬಂತು.

ಜಗದ್ಗುರು ಹುಟ್ಟಿದ ಮಾಸ|
ಕಟ್ಟಿ ನೂರು ವೇಷ|
ಕೊಟ್ಟ ಸಂತೋಷ|
ಕುಣಿತದ ತಾನsದ ದಣಿತದ|

ಶ್ರಾವಣಾ ಬಂತು ಕಾಡಿಗೆ| ಬಂತು ನಾಡಿಗೆ|
ಬಂತು ಬೀಡಿಗೆ| ಶ್ರಾವಣಾ ಬಂತು||

ಚೆನ್ನಾಗಿದೆ ಅಲ್ವ?

- ಚಾಮರಾಜ ಸವಡಿ

ಬೊಗಸೆಗಣ್ಣಿನ ಬಯಕೆಯ ಹೆಣ್ಣು... (ಬೇಂದ್ರೆ-೧)

29 Jan 2009

0 ಪ್ರತಿಕ್ರಿಯೆ
ಬೆಳ್ಳಂಬೆಳಿಗ್ಗೆ ಬೇಂದ್ರೆ ಗಂಟು ಬಿದ್ದಿದ್ದಾರೆ.

ನಸುಕಿನ ಬೆಂಗಳೂರಲ್ಲಿ ಈಗ ಚಳಿ ಕಡಿಮೆ. ನಕ್ಷತ್ರಗಳು ಸ್ವಚ್ಛವಾಗಿ ಮುಗುಳ್ನಗುತ್ತಿವೆ. ನಸುಕಿನಲ್ಲಿ ಚಳಿಯಾದೀತು ಎಂದು ಕಾಲಡಿ ಹಾಕಿಕೊಂಡಿದ್ದ ರಗ್‌ಗಳು ಹಾಗೇ ಇವೆ. ಸಣ್ಣಗೇ ತಿರುಗುವ ಫ್ಯಾನ್‌ ಕೂಡಾ ಚಳಿ ಹುಟ್ಟಿಸುತ್ತಿಲ್ಲ.

ಸದ್ದಿಲ್ಲದೇ ಬೆಳಗಾಗುತ್ತದೆ. ಮೂಡಣದಲ್ಲಿ ಚೆಂಬೆಳಕು. ಅರೆ ಕ್ಷಣ ಧಾರವಾಡದ ಚೆಂಬೆಳಕು ಹೆಸರಿನ ಮನೆ ಮತ್ತು ಕವಿ ಚೆನ್ನವೀರ ಕಣವಿ ನೆನಪಾಗುತ್ತಾರೆ. ಅವರು ಕವಿತೆ ಓದುತ್ತಿದ್ದ ಪರಿ ನೆನಪಾಗುತ್ತದೆ. ಕಿರಿಯರನ್ನು ಪ್ರೋತ್ಸಾಹಿಸುವ ಪರಿ, ಬರೆದ ಸಣ್ಣ ತುಂಡುಗಳನ್ನು ಆಸ್ವಾದಿಸುವ ದೊಡ್ಡತನ ನೆನಪಾಗುತ್ತದೆ. ಅದೇ ಧಾರವಾಡದಲ್ಲಿ ಇದ್ದವರಲ್ಲವೆ ಬೇಂದ್ರೆ. ಮೂಡಣ ರಂಗೊಡೆಯುವ ಹೊತ್ತಿನಲ್ಲಿ, ಸಂಜೆ ಕುರಿತು ಬರೆದಿದ್ದರೂ ಅವರ ಮುಗಿಲ ಮಾರಿಗೆ ರಾಗರತಿ ನೆನಪಾಗುತ್ತದೆ. ಸಾಧನಕೇರಿಯ ಪುಟ್ಟ ಕೆರೆಯ ಎದುರಿನ ಬೇಂದ್ರೆ ಅಜ್ಜನ ಮನೆ, ಅಲ್ಲಿನ ವಿಚಿತ್ರ ನೀರವ, ಕೆರೆಯ ನೀರನ್ನು ಕಲಕುವ ಮೀನುಗಳು, ಸದ್ದಿಲ್ಲದೇ ಹರಿದಾಡುವ ಹಾವುಗಳು ಕಣ್ಮುಂದೆ ಬರುತ್ತವೆ.

ಮುಗಿಲ ಮಾರಿಗೆ ರಾಗರತಿಯ ನಂಜ ಏರಿತ್ತ
-ಆಗ -ಸಂಜೆಯಾಗಿತ್ತ;
ನೆಲದ ಅಂಚಿಗೆ ಮಂಜಿನ ಮುಸುಕು ಹ್ಯಾಂಗೋ ಬಿದ್ದಿತ್ತ
ಗಾಳಿಗೆ ಮೇಲಕ್ಕೆದ್ದಿತ್ತ


ಬೆಳಗಿನ ಬೆಂಗಳೂರಿನ ನೀರವತೆಯಲ್ಲಿ ಚಂದ್ರಾಲೇಔಟ್‌ ತುಂಬ ಹೊಸದೊಂದು ರಾಗರತಿ. ಬೆಳಕಿನ ರತಿ ಏರುತ್ತಿದ್ದಂತೆ ನಕ್ಷತ್ರಗಳ ಕಣ್ಣುಗಳ ಅರ್ಧನಿಮೀಲಿತವಾಗುತ್ತವೆ. ಕತ್ತಲೆಯಲ್ಲಿ ಮರೆಯಾದಂತಿದ್ದ ಕಟ್ಟಡಗಳು ಮಸುಕುಮಸುಕಾಗಿ ಮೇಲಕ್ಕೇಳುತ್ತವೆ. ಷೆಲ್ಫ್‌ನಲ್ಲಿ ಪುಸ್ತಕವಾಗಿ ಕೂತಿರುವ ಬೇಂದ್ರೆ ಅಜ್ಜನನ್ನು ಹೊರಕ್ಕೆಳೆಯುತ್ತೇನೆ. ಎಲ್ಲಿದೆ ಕವನ?

ಹಾಂ, ಸಿಕ್ಕಿತು. ಒಲವೆ ನಮ್ಮ ಬದುಕು ಪುಸ್ತಕದ ಪುಟ ೨ರಲ್ಲಿ ಬೆಚ್ಚಗೇ ಕೂತಿದೆ ’ರಾಗರತಿ’ ಕವಿತೆ. (ಮೂಲ ಸಂಕಲನ: ಗರಿ, ಕವನ ಸಂಖ್ಯೆ ೩೧)

ಬಿದಿಗಿ ಚಂದ್ರನಾ ಚೊಗಚೀ-ನಗಿ-ಹೂ ಮೆಲ್ಲಗ ಮೂಡಿತ್ತ
ಮ್ಯಾಲಕ ಬೆಳ್ಳಿನ ಕೂಡಿತ್ತ;
ಇರುಳ ಹೆರಳಿನ ಅರಳಮಲ್ಲಿಗೀ ಜಾಳಿಗಿ ಹಾಂಗಿತ್ತ
ಸೂಸ್ಯಾದ ಚಿಕ್ಕಿ ಅತ್ತಿತ್ತ.


ವ್ಹಾ ಬೇಂದ್ರೆ ಅಜ್ಜಾ! ’ಇರುಳ ಹೆರಳಿನ ಅರಳಮಲ್ಲಿಗಿ ಜಾಳಿಗಿ’ ಎಂಥಾ ಉಪಮೆ. ಸಂಜೆ ಹೊತ್ತಿನ ನಕ್ಷತ್ರಗಳು ಕತ್ತಲೆಯ ಜಡೆಯಲ್ಲಡಗಿದ್ದ ಅರಳುಮಲ್ಲಿಗೆಯಂತೆ ಕಂಡವಲ್ಲ ನಿನಗೆ. ರಸಿಕ ನೀನು!

ಮನಸ್ಸು ರಾಗರತಿಯಲ್ಲಿ ಲೀನವಾಗುತ್ತದೆ.

ಬೊಗಸಿಗಣ್ಣಿನಾ ಬಯಕೆಯ ಹೆಣ್ಣು ನೀರಿಗೆ ಹೋಗಿತ್ತ
ತಿರುಗಿ ಮನೀಗೆ ಸಾಗಿತ್ತ
ಕಾಮಿ ಬೆಕ್ಕಿನ್ಹಾಂಗ ಭಾಂವಿ ಹಾದಿ ಕಾಲಾಗ ಸುಳಿತಿತ್ತ
ಎರಗಿ ಹಿಂದಕ್ಕುಳಿತಿತ್ತ


ರಾತ್ರಿ ನೀರು ತರುವ ಹೆಣ್ಣು ತಡರಾತ್ರಿಯ ಸಮಾಗಮದ ಬಯಕೆಯಲ್ಲಿ ಮನೆಗೆ ಹಿಂತಿರುಗುತ್ತಿದ್ದಾಳೆ. ಸಂಜೆಯ ಕೆಂಪು ಆಕೆಯಲ್ಲಿ ನವಿರು ಭಾವನೆಗಳನ್ನು ಉಕ್ಕಿಸಿದೆ. ಮನಸ್ಸಿನ ಆಸೆ ಸಾಕಿದ ಬೆಕ್ಕಿನಂತೆ ಸುತ್ತಮುತ್ತ ಸುಳಿದಾಡುತ್ತಿದೆ.

ಮಳ್ಳಗಾಳಿ-ಸುಳಿ ಕಳ್ಳ ಕೈಲೆ ಸೆರಗನು ಹಿಡಿತಿತ್ತ
ಮತಮತ ಬೆರಗಿಲೆ ಬಿಡತಿತ್ತ
ಒಂದ ಮನದ ಗಿಣಿ ಹಿಂದ ನೆಳ್ಳಿಗೆ ಬೆನ್ನಿಲೆ ಬರತಿತ್ತ
ತನ್ನ ಮೈಮರ ಮರೆತಿತ್ತ


ಕವಿತೆ ಓದುತ್ತ ಓದುತ್ತ ಬೆಳಗಿನ ಚೆಂಬೆಳಕು ಸಂಜೆಯ ರಾಗರತಿಯಾಗಿ ಬದಲಾಯಿತು. ಬೇಂದ್ರೆ ಕಟ್ಟಿಕೊಟ್ಟ ಚಿತ್ರಣ ಮಸಕುಮಸಕಾಗಿ ಮೂಡಿತು. ಧಾರವಾಡದ ನೀರವ ಓಣಿಯಲ್ಲಿ ಸಂಜೆಯಾಗಿದೆ. ಹೆಣ್ಣೊಬ್ಬಳು ನೀರು ತರಲು ಹೋದವಳು ಮುದಗೊಂಡು, ಹುರುಪಿನಿಂದ ಮನೆಯತ್ತ ಹೊರಟಿದ್ದಾಳೆ. ಆಕೆಯ ಮನದಲ್ಲಿ ರಾತ್ರಿಯ ಸುಖದ ನಿರೀಕ್ಷೆ. ಹೆಜ್ಜೆಗಳು ಅದನ್ನೇ ಹೇಳಿವೆ. ಸಂಜೆಯ ತಂಪು ಗಾಳಿಗೆ ಆಕೆಯ ಸೆರಗು ಅಲೆಯಾಗುತ್ತಿದೆ. ಅವಳ ಮನಸ್ಸಿನ ನಿರೀಕ್ಷೆಯನ್ನು ಪ್ರತಿಫಲಿಸಿದೆ. ಹಾರುವ ಸೆರಗನ್ನು ಸುಳ್ಳುಸುಳ್ಳೇ ಬಿಗಿಯಾಗಿ ಹಿಡಿಯುತ್ತ ಮನೆ ಕಡೆ ಹೊರಟಿದ್ದಾಳೆ. ಹಗಲಿಡೀ ಉರಿದು ಮಂಕಾದ ಸೂರ್ಯ ಸುಖದ ನಿರೀಕ್ಷೆಯಲ್ಲಿ ಮುಳುಗುತ್ತಿರುವ ಚಿತ್ರಣವನ್ನು ಬೊಗಸಿಗಣ್ಣಿನ ಹೆಣ್ಣಿನ ಮೂಲಕ ಬಿಂಬಿಸುತ್ತ ಹೋಗಿದ್ದಾನೆ ಬೇಂದ್ರೆ ಅಜ್ಜ.

ಅರೆಕ್ಷಣ ಬೆಂಗಳೂರಿನ ಮುಂಜಾನೆಯ ಚೆಂಬೆಳಕಿನಲ್ಲಿ ರಾಗರತಿಯ ರಂಗು ಕಂಡಂತಾಯಿತು. ಟೆರೇಸ್‌ ಮೇಲೆ ನಿಂತು ನೋಡಿದರೆ, ಕೆಳಗೆ ವಾಕಿಂಗ್‌ ಹೊರಟ ಜನ ಅಲ್ಲೊಬ್ಬರು ಇಲ್ಲೊಬ್ಬರು. ಯಾವ ನೀರೆಯ ಸೊಂಟದಲ್ಲೂ ನೀರಿನ ಬಿಂದಿಗೆಯಿಲ್ಲ. ಬಾವಿಗಳಂತೂ ಮೊದಲೇ ಇಲ್ಲ. ಸೀರೆಯುಟ್ಟ ಆಂಟಿಯರ ಸೊಂಟದಲ್ಲಿ ಕೈಯಿಡಲಿಕ್ಕೇ ಜಾಗವಿಲ್ಲ, ಇನ್ನು ಬಿಂದಿಗೆ ಎಲ್ಲಿ ಕೂತೀತು? ಬಳುಕುವ ನೀರೆಯರ ಸೊಂಟ ಅದ್ಯಾವ ಪರಿ ತುಳುಕುತ್ತಿದೆ ಎಂದರೆ, ಬಿಂದಿಗೆ ಅಲ್ಲಿ ನಿಂತೀತೆ?

ಆದರೆ, ಕವಿತೆ ಕಟ್ಟಿಕೊಡುವ ಸುಖದ ಚಿತ್ರಕ್ಕೆ ಕಾಲ-ದೇಶದ ಹಂಗೇಕೆ? ಕವಿತೆ ಓದುತ್ತ ಓದುತ್ತ ಬೆಳಗಿನ ಆಗಸ ಬೇಂದ್ರೆ ಕಂಡ ಸಂಜೆಯ ರಾಗರತಿಯಾಗುತ್ತದೆ. ವಾಕಿಂಗ್‌ ಹೊರಟ ನೀರೆಯರು ಬಿಂದಿಗೆ ಹೊತ್ತ ಬೊಗಸೆಕಣ್ಣಿನ ಹೆಣ್ಣುಗಳಾಗುತ್ತಾರೆ. ರಸ್ತೆಯಾಚೆ ಎಲ್ಲೋ ಬಾವಿ ಇದ್ದೀತು. ಇವರು ಅತ್ತ ಕಡೆಯೇ ಹೊರಟಿದ್ದಾರು. ಇನ್ನೇನು, ಬಿಂದಿಗೆ ತುಂಬಿಕೊಂಡು ವಾಪಸ್‌ ಬರುತ್ತಾರೆ. ತಿಳಿಗಾಳಿಗೆ ಸೀರೆಯ ಸೆರಗು ಹಾರದಿದ್ದರೂ ಮುಂಗುರುಳಾದರೂ ಹಾರಿಯಾವು. ಕಾಮಿ ಬೆಕ್ಕಿನ್ಹಾಂಗ ಮುಖದ ತುಂಬ ಸುಳಿದಾಡಿಯಾವು. ಏನೋ ನೆನಪಲ್ಲಿ, ಬಿದಿಗಿ ಚಂದ್ರನ ಚೊಗಚಿ ನಗಿ ಹೂ ಅವರ ಮುಖದಲ್ಲಿ ಮೆಲ್ಲಗೆ ಮೂಡಿದರೂ ಮೂಡಬಹುದು.

ಟೆರೇಸ್‌ನಲ್ಲಿ ನಿಂತು ಕಾಯುತ್ತಿದ್ದೇನೆ: ರಾಗರತಿಯ ಸೊಗಸಿಗೆ, ಮಳ್ಳ ಗಾಳಿಗೆ, ಬೊಗಸೆ ಕಣ್ಣಿನ ಹೆಣ್ಣಿಗೆ, ಆ ಬಿದಿಗಿ ಚಂದ್ರನ ಚೊಗಚಿ ನಗೆಗೆ.

- ಚಾಮರಾಜ ಸವಡಿ

ಬಾರೋ ಸಾಧನಕೇರಿಗೆ...

23 Jul 2008

0 ಪ್ರತಿಕ್ರಿಯೆ

ಅದೊಂದು ಸುಂದರ ಕೆರೆ.


ಮುಂಗಾರಿಗೆ ಭರ್ತಿಯಾಗಿದೆ. ನಟ್ಟನಡುವೆ ಪುಟ್ಟ ನಡುಗಡ್ಡೆ. ಒಂದಿಷ್ಟು ಮರಗಿಡಗಳು. ಹೂ ಚಿಗುರು. ಶುಭ್ರ ಹಿಮಕ್ಕೆ ಜೀವ ಮೂಡಿದಂತಿರುವ ಕೊಕ್ಕರೆಗಳು. ಬಟ್ಟಲಂತಿರುವ ಕೆರೆಯನ್ನು ಕದಡಿ ಧಿಗ್ಗೆಂದು ಜಿಗಿದು ಬೀಳುವ ಮೀನುಗಳು. ತಿಳಿಗಾಳಿ. ಮೆಲು ಅಲೆಗಳು.

ಅದು ಧಾರವಾಡದ ಸಾಧನಕೇರಿಯ ಕೆರೆ.

ಅದರ ಎದುರೇ ಭವ್ಯ ಬೇಂದ್ರೆ ಭವನ. ಪಕ್ಕದಲ್ಲಿ ಅವರು ಬಾಳಿ ಬದುಕಿ ಸಾಧನೆಗೈದ ಮನೆ. ಸುತ್ತಲೂ ಇವತ್ತಿಗೂ ನಿಶ್ಯಬ್ದವನ್ನೇ ಹ್ದೊದಿರುವಂತಹ ವಸತಿ ಪ್ರದೇಶ. ಕೆಟ್ಟು ಹೋಗಿರುವ ರಸ್ತೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ತೇಕುತ್ತ ಹೋಗುವ ಸದ್ದು ಬಿಟ್ಟರೆ, ಕೇಳಿ ಬರುವ ಕಲರವ ಕೆರೆ ದಂಡೆಯಲ್ಲಿರುವ ಪ್ರಾಥಮಿಕ ಶಾಲೆಯ ಮಕ್ಕಳದ್ದು ಮಾತ್ರ.

ಧಾರವಾಡದ ಪೂರ್ವ ಬಯಲೊ ಬಯಲು

ಅಪೂರ್ವ‘ಕಲ್ಯಾಣ’ದಾಚೆಗಿದೆ ಭಾಗ್ಯನಗರಿ,

ಕರೆನಾಡು ಎರೆನಾಡು, ನಡುವೆ ಅಂದದ ಕಾಡು

ಗಂಡೆರಳೆ ಸುತ್ತಿರುವ ಹಿಂಡು ಚಿಗರಿ


ಪಡುವಣಕೆ ಇದೆ ಘಟ್ಟ, ಅಲಿ ಕಾನಿಗೆ ಪಟ್ಟ,

ಬೆಟ್ಟ ಇಳಿದರೆ ಉಳಿವೆ ಆಚೆ ಕಡಲು,

ಅಂಚು ಮಿರಿಮಿರಿ ಮಿಂಚು ಮೀನ ಮುತ್ತಿನ ಸಂಚು

ಘಟ್ಟ ತಪ್ಪಲು ಭೂಮಿತಾಯಿ-ಒಡಲು


ತಲೆಯಲ್ಲಿ ಬೆಳುಗಾವಿ, ಬಲಕೆ ಬೀಜಾಪೂರು,

ಎಡಕೆ ಕನ್ನಡ ಕರಾವಳಿಯ ತೋಳು,

ಮೈ ಎಲ್ಲ ಮೈಸೂರು ಇನ್ನೂರು ಮುನ್ನೂರು

ನೀಲಗಿರಿ ಪೀಠದಲಿ ನಮ್ಮ ಬಾಳು


(‘ನೆನವು’ ಇದೊಂದು ಅಪೂರ್ಣ ಕವಿತೆ)


ಹಾಗಂತ ಒಂದು ಕಡೆ ಬರೆದಿರುವ ಬೇಂದ್ರೆ ಅವರ ಕಾವ್ಯಕ್ಕೆ ಜೀವ ತುಂಬಿರುವುದು ಧಾರವಾಡ ಹಾಗೂ ಸಾಧನಕೇರಿ ಪ್ರದೇಶ. ಬೆಳ್ಳಂಬೆಳಿಗ್ಗೆ, ಸುರಿಯುತ್ತಿರುವ ಜಿನುಗು ಮಳೆಯಲ್ಲಿ, ಸುಮ್ಮನೇ ನಡೆಯುತ್ತ ಹೋದರೆ ಸಾಧನಕೇರಿ ದೊಡ್ಡ ಹಳ್ಳಿಯಂತೆ, ರಸ್ತೆಯ ಪಕ್ಕ ಕಟ್ಟಿ ಮರೆತು ಹೋದ ಕಟ್ಟಡಗಳ ಪ್ರದೇಶದಂತೆ ಕಾಣುತ್ತದೆ. ಕೆಟ್ಟ ರಸ್ತೆಯನ್ನು ತುಂಬಿರುವ ಹೊಂಡಗಳಲ್ಲಿ ಚಹದಂತಹ ಮಳೆ ನೀರು. ಸಾಲು ಮರಗಳಿಂದ ತೊಟ್ಟಿಕ್ಕುತ್ತಿರುವ ಹನಿಗಳು. ಮಂಜಿನ ಮಳೆಯಲ್ಲಿ ಮಸಕಾಗಿ ಕಾಣುವ ಬೆಳ್ಳಗಿನ ಬೇಂದ್ರೆಭವನ.


ಆ ಊರು ಈ ಊರು ಯಾ ಊರು ಆದರೂ

ತವರೂರು ತಮತಮಗೆ ತಾನೆ ಚಂದ,

ಕಟ್ಟಿ ಕೂಡುವುದಲ್ಲ ಬಿಚ್ಚಿ ಬಿಡುವುದು ಅಲ್ಲ

ಹೊಕ್ಕಳಿನ ಹುರಿಯಂಥ ಭಾವಬಂಧ


ಧಾರವಾಡದ ಶಿಲೆಯು ನಮ್ಮ ಶಾಲಿಗ್ರಾಮ

ಮಾವುಮಲ್ಲಿಗೆ ಚಿಗುರು ನಮ್ಮ ತುಳಸಿ

ಮುತ್ತುರುಳಬಹುದೆಂದು ದಿಕ್‌ನಾಗ ಜಡೆಯುವರೆ?

ಇಲ್ಲಿ ನಾಗರ ಖಂಡ ಸುತ್ತ ಬಳಸಿ


ಗುಪ್ತಗಾಮಿನಿ ನಮ್ಮ ಶಾಲ್ಮಲೆಯು ಸೆಲೆ

ಆಳಸಂಜೆ-ನಂಜನು ತೊಳೆಯೆ ಧುಮುಕುತಿಹಳು

ಏಕಾಂಗಿ, ನಿಃಸಂಗಿ, ಗಂಗಾವಳಿಯ ಭಂಗಿ

ಕನ್ನಡವ ಒಪ್ಪಿಡಿಯಲಮುಕುತಿಹಳು


ಹೊತ್ತೇರುತ್ತಿದ್ದಂತೆ, ಸೂರ್ಯ ಕಾಣದಿದ್ದರೂ ಮಕ್ಕಳನ್ನು ಹೊತ್ತ ಆಟೊಗಳು ಸಾಧನಕೇರಿಯ ಬೇಂದ್ರೆ ಮನೆ ಎದುರಿನ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬಂದು ನಿಲ್ಲುತ್ತವೆ. ಜೀವಂತಿಕೆ ತುಂಬಿ ತುಳುಕುವ ಮಕ್ಕಳು ಕೂಗುತ್ತ ಕೆಳಗಿಳಿಯುತ್ತವೆ. ಎದುರು ಬೇಂದ್ರೆ ಮನೆ, ಹಿಂದೆ ಕೆರೆ, ನಡುವೆ ಇರುವ ಈ ಶಾಲೆ ಸಾವಿರಾರು ನೆನಪುಗಳನ್ನು ತುಂಬಿಕೊಂಡಿದೆ. ಇಲ್ಲಿಯೇ ಒಂದು ಕಾಲದಲ್ಲಿ ಬೇಂದ್ರೆ ಓಡಾಡಿದ್ದರು. ಕಟ್ಟೆಯ ಮೇಲೆ ಕೂತು ಕವಿತೆ ಓದಿದ್ದರು. ಅರ್ಧಮರ್ಧ ಮಟ್ಟದ ಕವಿಗಳನ್ನು ಟೀಕಿಸಿದ್ದರು. ಜಗಳ ಕಾಯ್ದಿದ್ದರು. ಪ್ರೀತಿ ತೋರಿದ್ದರು. ಬೇರೆಯವರ ಉತ್ತಮ ರಚನೆಗಳಿಗೆ ತಲೆದೂಗಿ ಮೈಮರೆತಿದ್ದರು.


ಇಲ್ಲೀಗ ಮಕ್ಕಳು ಆಡುತ್ತಿವೆ. ‘ಜೈಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ’ ಪ್ರಾರ್ಥನೆ ಕೇಳುತ್ತಿದೆ. ಕೆರೆಯ ಆಚೆ ದಡದಲ್ಲಿರುವ ಪೊಲೀಸ್ ತರಬೇತಿ ಕೇಂದ್ರ ಹಾಗೂ ಪೊಲೀಸ್ ಕೇಂದ್ರ ಕಚೇರಿಗಳಿಂದ ಉಕ್ಕಿಬರುವ ಕೊಚ್ಚೆ ನೀರು ಸದ್ದಿಲ್ಲದೇ ಕೆರೆಯ ಒಡಲನ್ನು ವಿಷಗೊಳಿಸುತ್ತಿರುವುದು ದಡದಲ್ಲಿ ಆಡುತ್ತಿರುವ ಪೋರ-ಪೋರಿಯರಿಗೆ ಗೊತ್ತಿಲ್ಲ. ಜೋರು ಮಳೆಗೆ ತುಂಬಿರುವ ಕೆರೆಗೆ ಇನ್ನು ನಾಲ್ಕು ತಿಂಗಳಲ್ಲಿ ತನ್ನೊಡಲಿನ ತುಂಬ ಕೊಳಚೆ ತುಂಬುತ್ತದೆ ಎಂಬ ಸತ್ಯ ತಿಳಿದಿದ್ದರೂ ಅದು ಮಕ್ಕಳಿಗೆ ಹೇಳುವುದಿಲ್ಲ.


ಒಬ್ಬ ಡಾ. ಎಂ.ಎಂ. ಕಲಬುರ್ಗಿ ಸರ್ ಮಾತ್ರ ಮಿಡುಕುತ್ತಾರೆ. ‘ಬಾರೋ ಸಾಧನಕೇರಿಗೆ ಪ್ರಾಧಿಕಾರ ರಚಿಸಿ ಇಡೀ ಇನ್ನೂರು ಎಕರೆ ಪ್ರದೇಶವನ್ನು ವಶಕ್ಕೆ ತೆಗೆದುಕೊಂಡು ಅಭಿವೃದ್ಧಿಪಡಿಸಬೇಕು. ಕನ್ನಡದ ಅಷ್ಟೇ ಏಕೆ, ಜಗತ್ತಿನ ಅತಿ ಶ್ರೇಷ್ಠ ಕವಿಯೊಬ್ಬನಿಗೆ ಸ್ಫೂರ್ತಿ ನೀಡಿದ ನೆಲವನ್ನು ಸಾಧ್ಯವಾದಷ್ಟೂ ಮಟ್ಟಿಗೆ ಅದಿರುವಂತೆ ಉಳಿಸುವ ಆಸೆ ಇದೆ. ಕೆರೆ ಮತ್ತು ಬೇಂದ್ರೆ ಭವನಗಳೆರಡೂ ಸರ್ಕಾರದ ಆಸ್ತಿಗಳೇ. ಉಳಿದಿದ್ದು ಸುತ್ತಲಿನ ರಸ್ತೆಗಳನ್ನು ಅಭಿವೃದ್ಧಿಪಡಿಸುವುದು. ಕೆರೆಯ ಹೂಳೆತ್ತಿಸಿ, ಕೊಚ್ಚೆ ಅಲ್ಲಿ ಬಾರದಂತೆ ತಡೆ ಒಡ್ಡಿ, ದಂಡೆಯುದ್ದಕ್ಕೂ ಕೂಡಲು ಆಸನಗಳು ಹಾಗೂ ಒಂದು ಭಾಗದಲ್ಲಿ ಸಂಗೀತ ಕಚೇರಿಗೆ ವೇದಿಕೆ ಏರ್ಪಡಿಸಬೇಕು. ಕೆರೆಯಲ್ಲಿ ದೋಣಿಗಳ್ದಿದರೆ ಜನ ಬರುತ್ತಾರೆ. ಬೇಂದ್ರೆ ಜೀವನ ಸಂದೇಶ ಸಾರುವ ವಾತಾವರಣವನ್ನು ಸೃಷ್ಟಿಸಿದರೆ, ಧಾರವಾಡ ಅಕ್ಷರ ಯಾತ್ರಾಸ್ಥಳವಾಗುತ್ತದೆ’ ಎಂದು ಹಂಬಲಿಸುತ್ತಾರೆ.


ದ.ರಾ. ಬೇಂದ್ರೆ ರಾಷ್ಟ್ರೀಯ ಟ್ರಸ್ಟ್‌ನ ಅಧ್ಯಕ್ಷರಾಗಿರುವ ಡಾ. ಎಂ.ಎಂ. ಕಲಬುರ್ಗಿ ಇಂಥದೊಂದು ಯೋಜನೆ ತಯಾರಿಸಿಕೊಂಡು ಬೆಂಗಳೂರಿಗೆ ಹಲವಾರು ಬಾರಿ ರೈಲೇರಿದ್ದಾರೆ. ಆದರೆ ಬೆಂಗಳೂರಿನ ಆಯಕಟ್ಟಿನ ಜಾಗಗಳಲ್ಲಿ ಕೂತಿರುವ ಅಧಿಕಾರಿಗಳಿಗೆ ಸೊನಾಲಿ ಬೇಂದ್ರೆ ಗೊತ್ತೇ ಹೊರತು ದ.ರಾ. ಬೇಂದ್ರೆ ಅಲ್ಲ. ಕನ್ನಡವೇ ಸರಿಯಾಗಿ ಗೊತ್ತಿರದವರಿಗೆ ಮುಗಿಲ ಮಾರಿ, ರಾಗ ರತಿ, ನೀ ಹಿಂಗ ನೋಡಬ್ಯಾಡ, ಪಾತರಗಿತ್ತಿ ಪಕ್ಕ, ಯಾರಿಗೂ ಹೇಳೋಣು ಬ್ಯಾಡ ಎಂಬ ಪದ ಸಂಜೀವಿನಿ ಗೊತ್ತಾಗುವುದಾದರೂ ಹೇಗೆ?


ಹೀಗಾಗಿ ಯೋಜನೆಗೆ ಸರ್ಕಾರದ ತರಹೇವಾರಿ ನೆವಗಳು. ಇನ್ನು ಧಾರವಾಡಿಗರಿಗೆ ಬೇಂದ್ರೆ ಬಗ್ಗೆ ಇರುವಷ್ಟೇ ಅಭಿಮಾನ ನಿಷ್ಕ್ರಿಯತೆ ಬಗ್ಗೆಯೂ ಇರುವುದರಿಂದ ಅವರೂ ಇತ್ತ ನೋಡುತ್ತಿಲ್ಲ. ‘ಇದೇ ಬೇಂದ್ರೆ ಬೇರೆಡೆ ಹುಟ್ಟಿದ್ದರೆ ರಾಷ್ಟ್ರೀಯ ಹೀರೋ ಆಗಿರುತ್ತಿದ್ದರು’ ಎಂದು ಕತೆ ಹೇಳುತ್ತ ಅವರು ಆರಾಮವಾಗಿದ್ದಾರೆ. ಇನ್ನು ಬೇಂದ್ರೆ ಅವರ ಮಗ ವಾಮನ ಬೇಂದ್ರೆ ಕಾಪಿರೈಟ್ ನೆವದಲ್ಲಿ ದ.ರಾ. ಬೇಂದ್ರೆಯವರನ್ನು ಕಟ್ಟಿಟ್ಟಿದ್ದಾರೆ. ಹೀಗಾಗಿ ಬೇಂದ್ರೆ ಗೀತೆಗಳನ್ನು ಹಾಡಿ ಕ್ಯಾಸೆಟ್-ಸಿಡಿ ಮಾಡಲು ಗಾಯಕರು ಅಳುಕುತ್ತಾರೆ.


ಆದರೂ ಸಾಧನಕೇರಿಗೆ ತನ್ನದೇ ಆದ ಕಳೆ ಇದೆ. ಕೊಳೆ ಇದೆ. ಇಲ್ಲಿಗೆ ಬರುವ ಬಹುತೇಕ ಜನರು ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರನ್ನು ಹುಡುಕಿಕೊಂಡು ಬರುತ್ತಾರೆ. ಆದರೆ ಅವರಿಗೆ ಎದುರಾಗುವುದು ವಾಮನ ಬೇಂದ್ರೆ. ನಿರಾಶರಾದವರಿಗೆ ಪಕ್ಕದಲ್ಲಿಯೇ ಇರುವ ಬೇಂದ್ರೆ ಭವನ ಸ್ವಲ್ಪ ಮಟ್ಟಿಗೆ ಸಂತೈಸುತ್ತದೆ. ಎದುರಿಗೆ ಇರುವ ಶಾಲೆ, ಅದರಾಚೆಗೆ ಇರುವ ಕೆರೆಗಳು ಇನ್ನಷ್ಟು ಸಂತೈಸುತ್ತವೆ. ಕೆಟ್ಟ ರಸ್ತೆ ದಾಟಿ ಕೆರೆಯ ಅಂಚಿಗೆ ನಿಂತರೆ, ಆಗ ಸಂಜೆಯಾಗಿದ್ದರೆ, ‘ಮುಗಿಲ ಮಾರಿಗೆ ರಾಗ ರತಿಯ ನಂಜು’ ಏರಿರುವುದು ಕಂಡರೂ ಕಾಣಬಹುದು.
ಈ ವಾತಾವರಣದಲ್ಲಿಯೇ ಬೇಂದ್ರೆ ಅವರ ಅದ್ಭುತ ಕೃತಿಗಳು ಸೃಷ್ಟಿಯಾಗಿವೆ. ನಾಡಿನ ಖ್ಯಾತನಾಮರನ್ನು ತನ್ನೆಡೆ ಸೆಳೆದಿವೆ. ಜಾತಿ, ಧರ್ಮ, ಪ್ರಾದೇಶಿಕ ಭಿನ್ನತೆ ಮೀರಿ ಅವರ ಗೀತೆಗಳು ನಾಡಿನುದ್ದಗಲಕ್ಕೂ ಸಂಚರಿಸಿವೆ. ಅಕ್ಷರ ಬಲ್ಲವರು, ಪಾಮರರು, ಸಾಮಾನ್ಯರು, ಸಾಧಕರು- ಹೀಗೆ ಎಲ್ಲರನ್ನೂ ಪ್ರಭಾವಿತರನ್ನಾಗಿಸಿವೆ.


ವಾಮನ ಬೇಂದ್ರೆ ಅವರ ಲಕ್ಷ್ಮಣರೇಖೆಯ ಮಿತಿಯಲ್ಲಿದ್ದರೂ ಬೇಂದ್ರೆ ಬಗ್ಗೆ ಜನರ ಕುತೂಹಲ, ಪ್ರೀತಿ ಇನ್ನೂ ತಣಿದಿಲ್ಲ. ಧಾರವಾಡದ ಎಸ್.ಡಿ.ಎಂ. ಎಂಜನಿಯರಿಂಗ್ ಕಾಲೇಜಿನ ಉತ್ಸಾಹಿಗಳು ಮುಂದಾಗಿ ಉಚಿತವಾಗಿ ಅಂತರ್ಜಾಲ ತಾಣವನ್ನು ತಯಾರಿಸಿಕೊಟ್ಟಿದ್ದಾರೆ. ಯಥಾಪ್ರಕಾರ ಅಲ್ಲಿಯೂ ಕಾಪಿರೈಟ್‌ನದೇ ಸಮಸ್ಯೆ. ಹೀಗಾಗಿ ಬೇಂದ್ರೆ ಅವರ ಸಾಹಿತ್ಯದ ಬದಲಾಗಿ ಇತರ ಒಣ ವಿವರಗಳನ್ನು ತುಂಬಬೇಕಾಗಿದ್ದರಿಂದ ವೆಬ್‌ಸೈಟ್‌ನಲ್ಲಿ ಜೀವಂತಿಕೆ ಮಾಯವಾಗಿದೆ. ಇನ್ನು ಬಹುತೇಕ ಹಳೆಯ ಕವಿ, ಲೇಖಕರ ಗ್ರಂಥಗಳು ಪಳಪಳ ಹೊಳೆಯುವ ಮರು ಮುದ್ರಣ ಕಂಡು ನಳನಳಿಸುತ್ತಿರುವಾಗ ಬೇಂದ್ರೆಯವರ ಪುಸ್ತಕಗಳು ಮಾತ್ರ ಇಪ್ಪತ್ತು ವರ್ಷಗಳ ಹಿಂದಿನ ಕೆಟ್ಟ ಮುದ್ರಣದ ಗೈಡ್‌ಗಳಂತೆ ಕಳಪೆಯಾಗಿದ್ದು, ನಾಡಿನ ಬಹುತೇಕ ಪುಸ್ತಕಾಲಯಗಳಲ್ಲಿ ಕಾಣಸಿಗದ ಪರಿಸ್ಥಿತಿಗೆ ಒಳಗಾಗಿವೆ.


ಇಷ್ಟೆಲ್ಲ ಲೋಪಗಳಿದ್ದರೂ ಬೇಂದ್ರೆ ಮತ್ತೆ ಮತ್ತೆ ಸೆಳೆಯುತ್ತಾರೆ.

ಒಲವೆಂಬ ಹೊತ್ತಿಗೆಯನೋದ ಬಯಸುತ ನೀನು

ಬೆಲೆಯೆಷ್ಟು ಎಂದು ಕೇಳುತಿಹೆ? ಹುಚ್ಚ!

ಹಗಲಿರುಳು ದುಡಿದರೂ ಹಲ ಜನುಮ ಕಳೆದರೂ

ನೀ ತೆತ್ತಲಾರೆ ಬರಿ ಅಂಚೆ ವೆಚ್ಚ

ಎಂದು ಗದರಿದಂತಾಗುತ್ತದೆ.


ಮಳೆ ಬರುವ ಕಾಲಕ್ಕಒಳಗ್ಯಾಕ ಕೂತೇವೊ

ಇಳೆಯೊಡನೆ ಜಳಕ ಮಾಡೋಣ

ನಾವೂನು, ಮೋಡಗಳ ಆಟ ನೋಡೋಣ


ಎಂದು ಕರೆದಂತಾಗುತ್ತದೆ.


ಸಾಧನಕೇರಿಯಲ್ಲಿ ಇಂತಹ ಸಾವಿರ ಕರೆಗಳಿವೆ. ಕೊರೆಗಳಿವೆ. ಹುಡುಕುವವರಿಗೆ ಅಲ್ಲಿಯ ಕಲ್ಲಕಲ್ಲಿನಲ್ಲಿಯೂ, ನೀರಿನ ಪ್ರತಿ ತೆರೆಯಲ್ಲಿಯೂ ಬೇಂದ್ರೆ ಸಿಗುತ್ತಾರೆ. ಬೆಳ್ಳಂಬೆಳಿಗ್ಗೆ ವಾಕಿಂಗ್ ಹೋಗಿ, ಕೆರೆ ದಡದಲ್ಲಿ ಅಡ್ಡಾಡಿ, ಶಾಲೆಯ ನಿಶ್ಯಬ್ದದಲ್ಲಿ ಮೌನವಾಗಿ ನಿಂತವರಿಗೆ ಬೇಂದ್ರೆ ಖಂಡಿತ ಸಿಗುತ್ತಾರೆ. ಮೌನವಾಗಿಯೇ ಮಾತಿಗಿಳಿಯುತ್ತಾರೆ. ಕನಸು ಕೆದಕುತ್ತಾರೆ. ಎದೆಯೊಳಗಿನ ಸಾವಿರ ಭಾವಗಳಿಗೆ ಹಾಡಾಗುತ್ತಾರೆ.


ತೋಟ ಮೂಡಿದೆ ನೋಡು ಕಾಡಿದ್ದ ಎಡೆಯಲ್ಲಿ

ಅಲ್ಲಿ ಮೌನದ ತಂತಿ ಮೀಟುತಿಹುದು

ಶ್ರುತಿಗು ನಿಲುಕದ ನುಡಿಯು ದನಿಗುಡುವದಾಗೀಗ

ಯಾರು ಬಲ್ಲರು? ನಾಳೆ ಮೂಡಬಹುದು


ಎಂದು ಸಂತೈಸಿದಂತಾಗುತ್ತದೆ.


ಮೂಡೀತೆ ಅಂಥದೊಂದು ಬೆಳಗು ನಮ್ಮೀ ಸಾಧನಕೇರಿಯಲ್ಲಿ? ಕನಸು ಮೊರೆವ ಸಂಗಮದಲ್ಲಿ?

- ಚಾಮರಾಜ ಸವಡಿ