ಹಾಗೇ ಮಗ್ಗುಲಾದರೆ, ಭಕ್ತಿ ಗೀತೆಗಳು ಒಂದಾದ ನಂತರ ಒಂದರಂತೆ ಕಿವಿಗೆ ತಾಕುತ್ತಲೇ ಇರುತ್ತವೆ. ಎರಡು-ಮೂರು ಕಡೆಯಿಂದ ಬರುವ ವಿವಿಧ ದೇವರ ನಾಮಗಳು ಮಲಗಲು ಬಿಡುವುದಿಲ್ಲ. ರಾತ್ರಿ ಎಷ್ಟೇ ನೀಟಾಗಿ ಹೊದಿಸಿದ್ದರೂ, ಅದನ್ನು ಕಿತ್ಹಾಕಿ ಚಳಿಗೆ ಮುದುಡಿ ಮಲಗಿದ್ದ ಮಕ್ಕಳ ಮೇಲೆ ಬೆಚ್ಚಗೇ ರಗ್ ಹೊದಿಸಿ ಹೊರಬರುತ್ತೇನೆ. ಬಾಗಿಲು ತೆರೆದರೆ, ಪ್ರಶಾಂತವಾಗಿ ಕಾಣುವ ನಸುಕಿನ ಮಬ್ಬುಗತ್ತಲಲ್ಲಿ ಸಂಗೀತದ ಅಲೆಗಳು ಅಪ್ಪಳಿಸುತ್ತವೆ.
ಆಸ್ತಿಕರಿಗೆ ಹೇಗೋ ಏನೋ, ಶ್ರಾವಣ ಮಾಸ ನನಗೆ ಸಾವಿರಾರು ನೆನಪುಗಳನ್ನು ಹೊತ್ತು ತರುವ ತಿಂಗಳು. ಅಯಾಚಿತವಾಗಿ ಬೇಂದ್ರೆ ನೆನಪಾಗುತ್ತಾರೆ. ಅವರ ಅದ್ಭುತ ಕವಿತೆಗಳು ನೆನಪಾಗುತ್ತವೆ. ನನ್ನೂರು ಅಳವಂಡಿಯಲ್ಲಿ ಬೆಳ್ಳಂಬೆಳಿಗ್ಗೆ ಹೊರಡುತ್ತಿದ್ದ ಭಜನೆ ಮೇಳದ ಸಂಗೀತದ ಇಂಪು ಕಿವಿಗೆ ತಾಕಿದಂತಾಗುತ್ತದೆ. ಸಣ್ಣಗೆ ಸುರಿವ ಸೋನೆಮಳೆಯಲ್ಲಿ ತಮ್ಮ ಪಾಡಿಗೆ ತಾವು ಭಜನೆ ಮಾಡುತ್ತ, ಹಾಡು ಹಾಡುತ್ತ, ಅಷ್ಟೊತ್ತಿಗೇ ಎದ್ದಿರುತ್ತಿದ್ದ ಹೆಂಗಳೆಯರಿಂದ ಪೂಜೆ ಸ್ವೀಕರಿಸುತ್ತ ಹೊರಡುತ್ತಿದ್ದ ತಂಡ ನೆನಪಾಗುತ್ತದೆ. ಅದೆಷ್ಟು ಸಾರಿ ಅವರ ಹಿಂದ್ಹಿಂದೇ ನಾನು ಇಡೀ ಊರು ಸುತ್ತಿಲ್ಲ? ಮನಸ್ಸಿನ ತುಂಬ ಶ್ರಾವಣ ತುಂಬಿಕೊಳ್ಳುತ್ತದೆ.
ಅದೇ ಗುಂಗಿನಲ್ಲಿ ಒಳ ಬಂದು, ಕಂಪ್ಯೂಟರ್ ಆನ್ ಮಾಡಿದರೆ, ಬೆರಳುಗಳು ಶ್ರಾವಣದ ಗೀತೆಗಳಿಗಾಗಿ ತಡಕಾಡುತ್ತವೆ. ಗಾಯಕ ಸಿ. ಅಶ್ವಥ್ ಸೊಗಸಾಗಿ ಹಾಡಿರುವ ಬೇಂದ್ರೆಯವರ ’ಶ್ರಾವಣ ಬಂತು ಕಾಡಿಗೆ...’ ಹಾಡನ್ನು ಕ್ಲಿಕ್ ಮಾಡುತ್ತೇನೆ. ಈಗ ಕಂಪ್ಯೂಟರ್ ಪರದೆಯಲ್ಲೂ ಶ್ರಾವಣದ ಅಮಲು.
http://www.kannadaaudio.com/Songs/Bhaavageethe/Shraavana/Shraa.ram
(ಹಾಡು ಕೇಳಿಸದಿದ್ದರೆ, http://www.kannadaaudio.com ಗೆ ಹೋಗಿ, ಭಾವಗೀತೆ ವಿಭಾಗದಲ್ಲಿ ’ಶ್ರಾವಣ’ ವಿಭಾಗದ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನಿಮಗೆ ಈ ಹಾಡು ಸಿಗುತ್ತದೆ)
ಎಂಥಾ ಅದ್ಭುತ ಕವಿ ಬೇಂದ್ರೆ. ಏನೇ ಬರೆದರೂ ಅದನ್ನು ಅನುಭವಿಸಿ ಬರೆದರು. ಬರೆದಿದ್ದನ್ನು ಇತರರೂ ಅನುಭವಿಸುವಂತೆ ತೀವ್ರತೆ ತುಂಬಿದರು. ಭಾವನೆಗಳು ಹದಗೊಳ್ಳುವುದಕ್ಕೆ ಮುನ್ನವೇ ಬ್ಲಾಗುಗಳಲ್ಲಿ, ಪತ್ರಿಕೆಗಳಲ್ಲಿ ಸ್ಖಲಿಸುವ ಈಗಿನ ದಿನಗಳಲ್ಲಿ ಬೇಂದ್ರೆಯವರ ಆಳದ, ತೀವ್ರತೆಯ ಕವಿತೆಗಳು ಮತ್ತೆ ಮತ್ತೆ ಕಾಡುತ್ತವೆ. ಮನಸ್ಸು ಶ್ರಾವಣವಾಗುತ್ತದೆ.
ಎಲ್ಲೆಲ್ಲಿ ಬಂತು ಶ್ರಾವಣ? ಕಾಡಿಗೆ, ನಾಡಿಗೆ, ಬೀಡಿಗೆ ಬಂತು. ಕಡಲಿಗೆ, ಘಟ್ಟಕ್ಕೆ, ರಾಜ್ಯಪಟ್ಟಕ್ಕೆ, ಬಾನಿನ ಮಟ್ಟಕ್ಕೆ ಬಂತು. ಏರಿ ನಿಂತ ಕಾರ್ಮುಗಿಲು ಸೂರ್ಯನನ್ನೇ ನುಂಗಿತು. ಹಗಲನ್ನು ಇರುಳು ಮಾಡಿತು. ಮಳೆಯಾಗಿ ಇಳಿದು ನದಿಗಳನ್ನು ತುಂಬಿದ ಮೋಡಗಳು ಭೂಮಿ-ಆಕಾಶಕ್ಕೂ ಮದುವೆ ಮಾಡಿಸಿದವು. ಶ್ರಾವಣ ಮಾಸ ವಸುಂಧರೆಯ ಮಧುಮಾಸ ಅಂತಾರೆ ಬೇಂದ್ರೆ.
ಹೊಡೆದ ಜೋರಿಗೆ, ಜೋಕಾಲಿ ಏರಿ, ಅಡರ್ಯಾವ ಮರಕ ಹಾರಿ ಎಂದು ಉನ್ಮತ್ತತೆಯನ್ನು ಬಿಂಬಿಸುತ್ತಾರೆ. ಮನೆಮನೆಗಳಿಗೆ, ದನಿದನಿಗಳಿಗೆ, ಮನದ ನನಿ ಕೊನೆಕೊನೆಗೂ ಶ್ರಾವಣದ ಮತ್ತು ಏರುತ್ತದೆ. ತಣಿದ ತನುವಿನಲ್ಲಿ ಸುಖದ ಹಾಡೊಡೆಯುತ್ತದೆ. ’ಒಡೆದಾವ ಹಾಡು, ರಸ ಉಕ್ಕತಾವ ನೋಡು’ ಎಂಬು ಬರೆದ ಬೇಂದ್ರೆ ಹಾಡಿನಲ್ಲಿ ಉಕ್ಕಿದ ರಸಿಕತೆಯಾದರೂ ಎಂಥದು!
ಉಕ್ಕಿದ ಮಳೆಗೆ ’ಬೆಟ್ಟ ತೊಟ್ಟಾವ ಕುತನಿಯ ಅಂಗಿ, ಹಸಿರು ನೋಡ ತಂಗಿ’ ಅಂತಾರೆ. ಕಪ್ಪನೆಯ ಮೋಡಗಳು ಗುಂಪುಗಟ್ಟಿದ್ದನ್ನು ಕಂಡರೆ ಇಲ್ಲೇ ಜಾತ್ರೆ ಇರಬೇಕು ಅನ್ನುತ್ತಾರೆ. ಮಳೆಗೆ ಹರ್ಷಗೊಂಡ ಭೂಮಿಯಲ್ಲಿ ಉಕ್ಕುವ ಹಸಿರು ಕಂಡು ’ಬನಬನ ನೋಡು ಈಗ ಹ್ಯಾಂಗ, ಮದುವಿ ಮಗನ್ಹಾಂಗ, ತಲಿಗೆ ಬಾಸಿಂಗ, ಕಟ್ಟಿಕೊಂಡು ನಿಂತಾವ ಹರ್ಷಗೊಂಡು, ಹಸಿರುಟ್ಟು ಬಸುರಿಯ ಹಾಂಗ’ ಎಂದು ವರ್ಣಿಸುತ್ತಾರೆ.
ಶ್ರಾವಣದ ಮಳೆ ಬೆಟ್ಟ-ಗುಡ್ಡ ಎಂಬ ಸ್ಥಾವರಲಿಂಗಕ್ಕೆ ಅಭ್ಯಂಗ ಮಾಡಿಸುತ್ತವಂತೆ. ಅದಕ್ಕಾಗಿ ’ಕೂಡ್ಯಾವ ಮೋಡ, ಸುತ್ತೆಲ್ಲ ನೋಡ ನೋಡ’ ಎನ್ನುತ್ತಾರೆ. ನಿಧಾನವಾಗಿ ಕವಿತೆ ಕೇಳುತ್ತ ಬೇಂದ್ರೆಯವರು ಬರೆದಿದ್ದನ್ನು ಓದಿ:
http://www.kannadaaudio.com/Songs/Bhaavageethe/Shraavana/Shraa.ram
(ಹಾಡು ಕೇಳಿಸದಿದ್ದರೆ, http://www.kannadaaudio.com ಗೆ ಹೋಗಿ, ಭಾವಗೀತೆ ವಿಭಾಗದಲ್ಲಿ ’ಶ್ರಾವಣ’ ವಿಭಾಗದ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನಿಮಗೆ ಈ ಹಾಡು ಸಿಗುತ್ತದೆ)
ಶ್ರಾವಣಾ ಬಂತು ಕಾಡಿಗೆ| ಬಂತು ನಾಡಿಗೆ|
ಬಂತು ಬೀಡಿಗೆ| ಶ್ರಾವಣಾ ಬಂತು || ಪಲ್ಲವಿ ||
ಕಡಲಿಗೆ ಬಂತು ಶ್ರಾವಣಾ| ಕುಣಿಧ್ಹಾಂಗ ರಾವಣಾ|
ಕುಣಿದಾವ ಗಾಳಿ| ಭೈರವನ ರೂಪತಾಳಿ || ಅನುಪಲ್ಲವಿ ||
ಶ್ರಾವಣಾ ಬಂತು ಘಟ್ಟಕ್ಕ| ರಾಜ್ಯಪಟ್ಟಕ್ಕ|
ಬಾನು ಮಟ್ಟಕ್ಕ|
ಏರ್ಯಾವ ಮುಗಿಲು| ರವಿ ಕಾಣೆ ಹಾಡೆಹಗಲು|
ಶ್ರಾವಣಾ ಬಂತು ಹೊಳಿಗಳಿಗೆ| ಅದೆ ಶುಭಗಳಿಗೆ|
ಹೊಳಿಗೆ ಮತ್ತ ಮಳಿಗೆ|
ಆಗ್ಯೇದ ಲಗ್ನ| ಅದರಾಗ ಭೂಮಿ ಮಗ್ನ||
ಶ್ರಾವಣಾ ಬಂತು ಊರಿಗೆ| ಕೆರಿ ಕೇರಿಗೆ|
ಹೊಡೆದ ಝೂರಿಗೆ|
ಜೋಕಾಲಿ ಏರಿ| ಅಡರ್ಯಾವ ಮರಕ ಹಾರಿ|
ಶ್ರಾವಣಾ ಬಂತು ಮನಿಮನಿಗೆ| ಕೂಡಿ ದನಿದನಿಗೆ|
ಮನದ ನನಿಕೊನಿಕೊನಿಗೆ|
ಒಡೆದಾವ ಹಾಡೂ| ರಸ ಉಕ್ಕತಾವ ನೋಡು||
ಶ್ರಾವಣಾ ಬಂತು.
ಬೆಟ್ಟ ತೊಟ್ಟಾವ ಕುತನಿಯ ಅಂಗಿ|
ಹಸಿರು ನೋಡ ತಂಗಿ|
ಹೊರಟಾವೆಲ್ಲೊ ಜಂಗಿ|
ಜಾತ್ರಿಗೇನೋ| ನೆರೆದsದ ಇಲ್ಲೆ ತಾನೋ||
ಬನಬನ ನೋಡು ಈಗ ಹ್ಯಾಂಗ|
ಮದುವಿ ಮಗನ್ಹಾಂಗ
ತಲಿಗೆ ಬಾಸಿಂಗ|
ಕಟ್ಟಿಕೊಂಡೂ| ನಿಂತಾವ ಹರ್ಷಗೊಂಡು||
ಹಸಿರುಟ್ಟು ಬಸುರಿಯ ಹಾಂಗ|
ನೆಲಾ ಹೊಲಾ ಹ್ಯಾಂಗ|
ಅರಿಸಿನಾ ಒಡೆಧಾಂಗ|
ಹೊಮ್ಮತಾವ| ಬಂಗಾರ ಚಿಮ್ಮತಾವ||
ಗುಡ್ಡ ದುಡ್ಡ ಸ್ಥಾವರಲಿಂಗ|
ಅವಕ ಅಭ್ಯಂಗ|
ಎರಿತಾವನ್ನೊ ಹಾಂಗ|
ಕೂಡ್ಯಾವ ಮೋಡ| ಸುತ್ತೆಲ್ಲ ನೋಡ ನೋಡ||
ನಾಡೆಲ್ಲ ಏರಿಯ ವಾರಿ||
ಹರಿತಾವ ಝರಿ|
ಹಾಲಿನ ತೊರಿ|
ಈಗ ಯಾಕ| ನೆಲಕೆಲ್ಲ ಕುಡಿಸಲಾಕ||
ಶ್ರಾವಣಾ ಬಂತು.
ಜಗದ್ಗುರು ಹುಟ್ಟಿದ ಮಾಸ|
ಕಟ್ಟಿ ನೂರು ವೇಷ|
ಕೊಟ್ಟ ಸಂತೋಷ|
ಕುಣಿತದ ತಾನsದ ದಣಿತದ|
ಶ್ರಾವಣಾ ಬಂತು ಕಾಡಿಗೆ| ಬಂತು ನಾಡಿಗೆ|
ಬಂತು ಬೀಡಿಗೆ| ಶ್ರಾವಣಾ ಬಂತು||
ಚೆನ್ನಾಗಿದೆ ಅಲ್ವ?
- ಚಾಮರಾಜ ಸವಡಿ
No comments:
Post a Comment