ಬದುಕಿರುವ ಯೋಧರಿಗೆ ಏನು ಮಾಡುತ್ತಿದ್ದೀರಿ?

18 Aug 2009

ಮಡಿದವರು ವೀರಸ್ವರ್ಗ ಸೇರಿದರು. ಎಲ್ಲರ ಬಾಯಲ್ಲಿಯೂ ಅವರದೇ ಗುಣಗಾನ. ಆದರೆ, ಬದುಕಿರುವವರ ಬಗ್ಗೆ ಯಾರು ಗಮನ ಹರಿಸುತ್ತಿದ್ದಾರೆ?

ನಿಮ್ಮ ಊಹೆ ಸರಿ. ನಾನು ಹುತಾತ್ಮಯೋಧರ ಬಗ್ಗೆ ಮಾತಾಡುತ್ತಿದ್ದೇನೆ.

ನಮ್ಮ ದೇಶಪ್ರೇಮ ಬಡಿದೆಬ್ಬಿಸಲು ಕ್ರಿಕೆಟ್‌ ನಂತರ ಬಂದಿದ್ದು ಕಾರ್ಗಿಲ್‌. ಹುತಾತ್ಮ ಯೋಧರ ದೇಹಗಳನ್ನು ಅವರವರ ಊರಿಗೇ ಕಳಿಸುವ ಮೂಲಕ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ದೇಶಪ್ರೇಮದ ಕಿಚ್ಚನ್ನು ಇಡೀ ದೇಶಕ್ಕೇ ಹಚ್ಚಿತು.

ಆಗಿನ ದಿನಗಳು ನನಗೆ ಚೆನ್ನಾಗಿ ನೆನಪಿವೆ.

ದೇಶದ ಹಲವಾರು ಕಡೆ ನಿತ್ಯ ಹುತಾತ್ಮ ಯೋಧರ ಶವಗಳು ಬರುತ್ತಿದ್ದವು. ಆಗ ರಾಜ್ಯ ಸರ್ಕಾರವೇ ಖುದ್ದು ನಿಂತು ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನೆರವೇರಿಸುತ್ತಿತ್ತು. ಜಿಲ್ಲಾಡಳಿತ ನೇರವಾಗಿ ಪಾಲ್ಗೊಂಡಿರುತ್ತಿತ್ತು. ಆಯಾ ಜಿಲ್ಲೆಯ ಗಣ್ಯರು ಖುದ್ದು ಹಾಜರಿದ್ದು, ಮಡಿದ ಯೋಧನಿಗೆ ಅಂತಿಮ ಗೌರವ ಸಲ್ಲಿಸುತ್ತಿದ್ದರು.

ಮುಂದೆ ಕಾರ್ಗಿಲ್‌ ಯುದ್ಧ ಮುಕ್ತಾಯವಾಯ್ತು. ಮಡಿದ ಯೋಧರಿಗೆ ಕೊಡುಗೆಗಳ ಸುರಿಮಳೆ ಪ್ರಾರಂಭವಾಯ್ತು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪೈಪೋಟಿಯ ಮೇಲೆ ಕೊಡುಗೆಗಳನ್ನು ಘೋಷಿಸಿದವು. ಸಂಘ-ಸಂಸ್ಥೆಗಳೂ ಹಿಂದೆ ಬೀಳಲಿಲ್ಲ. ನಗದು ಪುರಸ್ಕಾರ ನೀಡುವುದರಲ್ಲಿ ಸ್ಪರ್ಧೆ ಕಂಡು ಬಂತು.

ಇಡೀ ಪ್ರಕ್ರಿಯೆಯ ವ್ಯಂಗ್ಯ ಎಂದರೆ, ಎಲ್ಲರೂ ಮಡಿದ ಯೋಧನ ಪತ್ನಿ ಮತ್ತು ಆತನ ಮಕ್ಕಳಿಗೆ ಎಲ್ಲವನ್ನೂ ನೀಡಿದರು. ಆದರೆ, ಬಹುತೇಕ ಕಡೆ ಮಗನ ದುಡಿಮೆಯನ್ನೇ ಅವಲಂಬಿಸಿದ್ದ ವೃದ್ಧ ತಂದೆತಾಯಿ, ತಮ್ಮ-ತಂಗಿಯರನ್ನೇ ಜನ ಮರೆತುಬಿಟ್ಟರು. ಯುವ ವಿಧವೆಯ ಬಗ್ಗೆ ವ್ಯಕ್ತವಾದ ಅನುಕಂಪ ವೃದ್ಧ ತಂದೆತಾಯಿಗಳತ್ತ ಹರಿಯಲಿಲ್ಲ.

ಪರಿಣಾಮ, ಎಷ್ಟೋ ಯೋಧರ ಕುಟುಂಬಗಳಲ್ಲಿ ವೈಷಮ್ಯ ಪ್ರಾರಂಭವಾಯ್ತು. ಕುಟುಂಬ ಎಂದರೆ ಕೇವಲ ಹೆಂಡತಿ ಮತ್ತು ಮಕ್ಕಳು ಎಂಬ ಅಪೂರ್ಣ ಅರ್ಥ ಕೌಟುಂಬಿಕ ಕಲಹವನ್ನು ಹುಟ್ಟುಹಾಕಿತು. ಅತ್ತ ಮಗನೂ ಇಲ್ಲ, ಇತ್ತ ಆದಾಯವೂ ಇಲ್ಲ ಎಂಬ ಸಂಕಷ್ಟ ಯೋಧನ ಕುಟುಂಬವನ್ನು ಕಾಡತೊಡಗಿತು. ಎಷ್ಟೋ ಕಡೆ, ಯೋಧನ ಹೆಂಡತಿ, ತನಗೆ ಬಂದ ಆಸ್ತಿ, ಹಣ, ಪಿಂಚಣಿ ಎತ್ತಿಕೊಂಡು ತೌರಿನ ಹಾದಿ ಹಿಡಿದಳು. ಆಕೆಯ ಹೆಸರಿಗೆ ಭೂಮಿ ಮಂಜೂರಾಯ್ತು, ಪೆಟ್ರೋಲ್‌ ಬಂಕ್‌ಗಳು ಮಂಜೂರಾದವು. ಎಲ್ಲವನ್ನು ಪಡೆದುಕೊಂಡ ಆಕೆ, ಮಡಿದ ತನ್ನ ಗಂಡನ ಸಮಾಧಿಗೂ ಬಾರದಂಥ ಮದ ಬೆಳೆಸಿಕೊಂಡಳು.

ಇದಕ್ಕೆ ಉತ್ತಮ ಉದಾಹರಣೆ ನನ್ನೂರಿನಲ್ಲೇ ಇದೆ.

ಇವತ್ತು ನಾವೆಲ್ಲ ಕಾರ್ಗಿಲ್‌ ಯುದ್ಧದಲ್ಲಿ ಮಡಿದ ಯೋಧರ ಬಗ್ಗೆ ರಾಜಧಾನಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಕಣ್ಣೀರು ಹಾಕುತ್ತೇವೆ. ಯುದ್ಧದಲ್ಲಿ ಮಡಿದ ಕರ್ನಾಟಕದ ಎಷ್ಟು ಯೋಧರ ಮನೆಗೆ ನಮ್ಮ ಸರ್ಕಾರ ಅಥವಾ ಸಮಾರಂಭದಲ್ಲಿ ಮಿಡಿದ ಹೃದಯಗಳು ಹೋಗಿ ನೋಡಿವೆ? ಮಡಿದ ಯೋಧನ ಮನೆಯ (ಅಂದರೆ, ತಂದೆ-ತಾಯಿಗಳ) ಪರಿಸ್ಥಿತಿ ಹೇಗಿದೆ ಎಂಬುದನ್ನು ಪರಿಶೀಲಿಸಿವೆ? ಯೋಧ ಸತ್ತು ವೀರಸ್ವರ್ಗ ಹೊಂದಿದ. ಆತನ ಹೆಸರಿನಲ್ಲಿ ಬಂದ ಸಮಸ್ತ ಕೊಡುಗೆಯನ್ನು ಪಡೆದುಕೊಂಡ ಆತನ ಪತ್ನಿ ಭೂಲೋಕದ ಸ್ವರ್ಗ ಸೇರಿದಳು. ಹೀಗಿರುವಾಗ ಯೋಧನ ಕುಟುಂಬದ ನರಕದಂಥ ದುಃಸ್ಥಿತಿ ನಿವಾರಿಸುವವರಾದರೂ ಯಾರು?

ಇವತ್ತಿಗೂ ಬಹುತೇಕ ಯೋಧರ ಸಮಾಧಿಸ್ಥಳಗಳನ್ನು ಕ್ಯಾರೇ ಅನ್ನುವವರಿಲ್ಲ. ಹುತಾತ್ಮನ ಮಡದಿಗೆ ಗಂಡನ ಸಮಾಧಿಯನ್ನು ಚೆನ್ನಾಗಿಟ್ಟುಕೊಳ್ಳುವ ವಿವೇಕ ಉಳಿದಿಲ್ಲ. ಅನಿರೀಕ್ಷಿತವಾಗಿ ಬಂದ ದುಡ್ಡು, ಮನ್ನಣೆ ಆಕೆಯನ್ನು ಪೂರ್ತಿಯಾಗಿ ಬದಲಾಯಿಸಿವೆ. ಜನರ ದೇಶಪ್ರೇಮ ಕೂಡ ಆವಿಯಾಗಿ ಹೋಗಿದೆ. ಮಡಿದ ಯೋಧನ ಹೆಸರಿನಲ್ಲಿ ಚಂದಾ ಎತ್ತಿ ಉಂಡವರಿದ್ದಾರೆ. ಅಂಥ ಎಲ್ಲರಿಗೂ ಕಾರ್ಗಿಲ್‌ ಯುದ್ಧ ಮತ್ತು ಹುತಾತ್ಮ ಯೋಧ ಅನ್ನದ ಮಾರ್ಗ.

ನನಗೆ ಮತ್ತೆ ಮತ್ತೆ 'ಯೇ ಮೇರೆ ವತನ್‌ ಕಿ ಲೋಗೋ...' ಹಾಡು ನೆನಪಾಗುತ್ತದೆ. ಕೇಳಿಸಿಕೊಳ್ಳುವ ವ್ಯವಧಾನ ಯಾರಿಗಿದೆ?

- ಚಾಮರಾಜ ಸವಡಿ

No comments: