ಸಿದ್ಧರ ಬೆಟ್ಟಕ್ಕೆ ಲಗ್ಗೆ !

18 Aug 2009

’ಐದೂವರೆಗೆ ಅನಿಲ್‌ ಬಂದು ನಿಮ್ಮನ್ನು ಪಿಕ್‌ ಮಾಡುತ್ತಾರೆ’ ಎಂದು ಹರಿ ಹೇಳಿದ್ದು ಹಿಂದಿನ ದಿನ ರಾತ್ರಿ ಹನ್ನೆರಡು ಗಂಟೆಗೆ.

’ನೀವು ಎಷ್ಟು ಗಂಟೆಗೆ ಏಳುತ್ತೀರಿ?’ ಎಂದು ಅಪನಂಬಿಕೆಯಿಂದ ಕೇಳಿದ್ದೆ. ’ನೀವೇ ಎಬ್ಬಿಸಿ. ನಾಲ್ಕೂವರೆಗಾದರೆ ಉತ್ತಮ’ ಅಂದಿದ್ರು ಹರಿ.

ಸರಿ, ಸಿದ್ಧರಬೆಟ್ಟಕ್ಕೆ ಇವರೆಲ್ಲ ಹೋದ ಹಾಗೆ ಎಂದು ಅಂದುಕೊಂಡೆ. ಹರಿಯ ಧ್ವನಿಯಲ್ಲಿ ನಿದ್ದೆಯ ಲವಲೇಶವೂ ಇಲ್ಲ. ಈಗಾಗಲೇ ಮಧ್ಯರಾತ್ರಿ. ಇನ್ನು ಹರಿ ಮಲಗಿಕೊಳ್ಳುವುದು ಯಾವ ಜಾವಕ್ಕೋ. ಇಷ್ಟೆಲ್ಲ ನಿದ್ದೆಗೆಟ್ಟ ನಂತರವೂ ನಸುಕಿನಲ್ಲಿ ಎದ್ದಾರೆಯೇ ಎಂಬ ಪ್ರಶ್ನೆ ಕಾಡಿತು.

’ನಾನು ಬರಲ್ಲ. ನೀವೆಲ್ಲ ಹೋಗಿ ಬನ್ನಿ. ನನಗೆ ಕೆಲಸವಿದೆ’ ಎಂದು ನುಣುಚಿಕೊಳ್ಳಲು ನೋಡಿದೆ. ಹರಿ ಬಿಡಲಿಲ್ಲ. ’ಒಂದ್ಸಾರಿ ಬನ್ನಿ. ಹೇಗಿದ್ರೂ ರೇಖಾಜಿ ಊರಿಗೆ ಹೋಗಿದ್ದಾರಲ್ಲ’ ಎಂದು ಆಸೆ ಹುಟ್ಟಿಸಿದರು. ರೇಖಾಜಿ ಎಂದರೆ ನನ್ನ ಹೆಂಡತಿ.

ಮಧ್ಯರಾತ್ರಿಯಲ್ಲಿ ವಾದ ಮಾಡುವುದೆ? ಅದೂ ಹರಿಯ ಜೊತೆಗೆ? ಸುಮ್ಮನೇ ಹ್ಞೂಂ ಅಂದು ಮತ್ತೆ ಓದುತ್ತ ಕೂತೆ. ಅಲಾರಾಂ ನಾಲ್ಕೂವರೆಗೆ ಇಡೋದನ್ನು ಮಾತ್ರ ಮರೆಯಲಿಲ್ಲ.

ನಾನು ಮಲಗಿದ್ದು ರಾತ್ರಿ ಎರಡು ಗಂಟೆಗೆ. ಇನ್ನೇನು ನಿದ್ದೆ ಬಂತು ಅನ್ನುವಷ್ಟರಲ್ಲಿ ಅಲಾರಾಂ ಬಾಯಿ ಬಡಿದುಕೊಳ್ಳತೊಡಗಿತ್ತು. ನಿದ್ದೆಗಣ್ಣಿನಲ್ಲೇ ಅದರ ಕತ್ತು ಅದುಮಿ, ಹರಿಗೆ ಫೋನ್‌ ಮಾಡಿದೆ. ನಾಲ್ಕನೇ ರಿಂಗಿಗೆ ಎದ್ದರಲ್ಲ! ರೆಡಿ ಆದ್ರೇನ್ರೀ? ಅಂದ್ರು ನಿದ್ದೆಗಣ್ಣಲ್ಲೇ. ಬರಲ್ಲ ಎಂಬ ವರಾತ ನನ್ನದು. ಯಥಾಪ್ರಕಾರ ಗೆದ್ದಿದ್ದು ಹರಿಯೇ.

ಇನ್ನು ಮಲಗಿದರೆ ನಿದ್ದೆಯಲ್ಲ, ಫೋನ್‌ಗಳು ಬರ್ತವೆ ಎಂಬ ಪ್ರಜ್ಞೆಯಿಂದ ಎದ್ದು ಕೂತೆ. ಯಾವ ಸಿದ್ಧರ ಬೆಟ್ಟವೋ, ಈ ಕೆಟ್ಟ ಬಿಸಿಲಿನಲ್ಲಿ ಅಲ್ಲಿ ಹೋಗುವ ಐಡಿಯಾ ಕೊಟ್ಟ ಪುಣ್ಯಾತ್ಮರಾರೋ ಎಂಬ ಅಸಮಾಧಾನದಿಂದಲೇ ಬೆಳಗಿನ ವಿಧಿಗಳನ್ನು ಮುಗಿಸಿದೆ. ಅನಿಲ್‌ ಎದ್ದು ಬಂದು, ನನ್ನನ್ನು ಹೇರಿಕೊಂಡು ಹರಿಯ ಮನೆಗೆ ಹೋಗುವಷ್ಟರಲ್ಲಿ ಸಿದ್ಧಪುರುಷರೇ ಬೆಟ್ಟ ಇಳಿದು ಬರುತ್ತಾರೆ ಎಂದು ಅಂದುಕೊಳ್ಳುವಾಗ, ಮತ್ತೆ ಹರಿಯ ಫೋನ್‌.

’ಅನಿಲ್‌ ಬಂದ್ರಾ?’ ಎಂಬ ಪ್ರಶ್ನೆ. ಇಲ್ಲ ಎನ್ನುತ್ತಲೇ, ನೀವು ರೆಡಿಯಾಗಿರಿ. ನಾನು ಅನಿಲ್‌ಗೆ ಫೋನ್‌ ಮಾಡ್ತೇನೆ ಎಂದರು ಹರಿ. ಮತ್ತೆ ಅರ್ಧ ಗಂಟೆ ಕಳೆಯುತ್ತಲೇ ಮತ್ತೆ ಫೋನ್‌ ರಿಂಗ್‌. ಶಿವು ಬರ್ತಿದ್ದಾರೆ. ಅವರೇ ಅನಿಲನ್ನ ಪಿಕಪ್‌ ಮಾಡ್ಕೊಂಡು ಚಂದ್ರಾಲೇಔಟ್‌ಗೆ ಬರ್ತಾರೆ. ರೆಡಿಯಾಗಿರಿ ಎಂದು ಆದೇಶಿಸಿದರು.

ಸಿದ್ಧರ ಬೆಟ್ಟ ಏಕೋ ಹೆದರಿಸತೊಡಗಿತು.

ರೆಡಿಯಾಗಿದ್ದೆನಲ್ಲ! ಪೇಪರ್‌ ಓದುತ್ತ ಶಿವು-ಅನಿಲ್‌ ಜೋಡಿಯ ದಾರಿ ಕಾಯುತ್ತ ಕೂತೆ. ಚುನಾವಣೆ ಸಮಯದಲ್ಲಿ ಕದ್ದಿದ್ದ ಒಂದು ಅಪರೂಪದ ವೀಕ್ಲಿ ಆಫ್‌ ಸಿದ್ಧರ ಪಾಲಾಯ್ತಲ್ಲ ಎಂದು ಹಳಹಳಿಸುತ್ತ ಪೇಪರ್‌ ತಿರುವಿದೆ. ಕೆಳಗೆ ಕಾರಿನ ಹಾರ್ನ್‌.

ನೋಡಿದರೆ, ಅನಿಲ್‌-ಶಿವು ಎಂಬ ಸಿದ್ಧದ್ವಯರು ಫ್ರೆಶ್ಯಾಗಿ ಕೈ ಬೀಸುತ್ತಿದ್ದಾರೆ. ಬೀಗ ತಿರುವಿ ಕಾರು ಸೇರಿಕೊಂಡವನ ಕಿವಿಗೆ ಬಿದ್ದಿದ್ದು ಭಾವಗೀತೆಯ ಝಲಕ್‌.

ಕಾರು ಹರಿಯ ಮನೆ ಸೇರುವಷ್ಟರಲ್ಲಿ ಮತ್ತೈದು ಬಾರಿ ಫೋನ್‌ ಮಾಡಿಯಾಗಿತ್ತು. ’ಹರಿ ಬಂದ್ರೆ ಮುಂದಿನ ಸೀಟಲ್ಲೇ ಕೂಡೋದು’ ಎಂದು ಗೊಣಗುತ್ತ ಅನಿಲ್‌ ಎದ್ದು ಹಿಂದೆ ಬಂದರು. ಗುಡ್‌ ಅನ್ನುತ್ತ ಹರಿ ಆಸೀನರಾದಾಗ ಏಳೂವರೆ.

’ಈಗ್ಯಾವ ಬೆಟ್ಟಕ್ಕೆ ಹೋಗ್ತೀರೀ? ಎಲ್ಲಾದ್ರೂ ನೀರಿರೋ ಕಡೆ ಹೋಗಿ ಬರೋಣ’ ಎಂಬ ಡಿಮ್ಯಾಂಡಿಟ್ಟೆ. ನಿರೀಕ್ಷಿಸಿದಂತೆ ಹರಿ ಅದನ್ನು ವಿಟೊ ಮಾಡಿ ಬೀಸಾಕಿದರು. ಕಾರು ಹೊರಳಿದ್ದು ನೈಸ್‌ ರಸ್ತೆಯತ್ತ. ದಾರಿಯಲ್ಲಿದ್ದ ಸುಂಕದ ಬಾಗಿಲು(ಟೋಲ್‌ ಗೇಟ್‌)ಗಳಲ್ಲಿ ಕಂದಾಯ ಕಟ್ಟುತ್ತ ತುಮಕೂರು ರಸ್ತೆಯತ್ತ ಕಾರು ನುಗ್ಗತೊಡಗಿದಾಗ ಎಲ್ಲರಲ್ಲೂ ಫೊಟೊ ತೆಗೆವ ಉಮ್ಮೇದು.

ನೆಲಮಂಗಲದ ಹತ್ತಿರದಲ್ಲೆಲ್ಲೋ ಒಂದು ಸೇತುವೆ ಕಾಣಿಸಿತು. ಅದರಾಚೆ ಸುಂದರಿಯ ಸ್ತನದಂಥ ಕಲ್ಲು ಬೆಟ್ಟ. ಫೊಟೊ ತೆಗೆಯಲು ಇಳಿದ ಸಿದ್ಧರೆಲ್ಲ ಫುಲ್‌ ಖುಷ್‌. ಬೆಳಗಿನ ಮಸುಕು ಮಂಜಿನಂಥ ಹಿನ್ನೆಲೆಯಲ್ಲಿ, ರವಿಕೆಯಿಲ್ಲದ ಒದ್ದೆ ಬಟ್ಟೆಯೊಳಗಿನ ರೂಪಕದಂತಿತ್ತು ಬೆಟ್ಟ. ಫೊಟೊ ತೆಗೆಯುತ್ತಿದ್ದವರ ಫೊಟೊಗಳನ್ನು ತೆಗೆಯಲು ಹರಿ ಓಡಾಡುತ್ತಿದ್ದರು.

ಅಷ್ಟೊತ್ತಿಗೆ ಒಂದೆರಡು ಲಾರಿಗಳು ಸೇತುವೆ ಮೇಲೆ ರಭಸದಿಂದ ಹೋಗುತ್ತಲೇ ಸೇತುವೆ ಕಂಪಿಸಿತು. ಆಗ ಹರಿ ಫುಲ್‌ ಗಾಬರಿ. ’ರೀ, ಈ ಬ್ರಿಜ್‌ ಬೀಳ್ತಿರೋ ಹಂಗೆ ಕಾಣ್ತಿದೆಯಲ್ರೀ’ ಎನ್ನುತ್ತ ಹತ್ತಿರವಿದ್ದವರನ್ನು ಗಟ್ಟಿಯಾಗಿ ಹಿಡಿದುಕೊಳ್ಳಲು ಶುರು ಮಾಡಿದರು. ಅವರನ್ನು ಗೇಲಿ ಮಾಡುತ್ತ, ಫೊಟೊ ತೆಗೆದು ಕಾರು ಹತ್ತಿದಾಗ, ಎಲ್ಲರ ಹೊಟ್ಟೆಗಳೂ ಚುರ್‌ ಅನ್ನುತ್ತಿದ್ದವು. ತುಮಕೂರಿನಲ್ಲಿ ತಿಂಡಿ ತಿಂದು ಮುಂದೆ ಹೋಗೋಣ ಎಂದು ನಿರ್ಧರಿಸಿದಾಗ, ಅರ್ಧ ಹೊಟ್ಟೆ ತುಂಬಿದಂತಾಯ್ತು.

ನನಗೇಕೋ ಬೆಟ್ಟದ ಮೋಹಕ ದೃಶ್ಯವೇ ಕಣ್ಮುಂದೆ. ಇವನ್ನೆಲ್ಲ ಬೆಟ್ಟವೆಂದವರಾರು? ಬಟ್ಟ ಬಯಲಲ್ಲಿಟ್ಟ ಅಟ್ಟದಂತಿರುವ ಈ ಕಲ್ಲು ಬೆಟ್ಟಗಳ ಸೊಗಸಾದ ಸಂಗಮವೇ ಸಿದ್ಧರಬೆಟ್ಟ ಅಂತ ಅನ್ನಿಸಿತು. ಪರವಾಗಿಲ್ಲ, ಒಳ್ಳೇ ಜಾಗಕ್ಕೇ ಹೊರಟಿದ್ದೇವೆ ಎಂಬ ಸಮಾಧಾನದಲ್ಲಿ ಭಾವಗೀತೆಗೆ ಕಿವಿಗೊಟ್ಟು ಕಣ್ಮುಚ್ಚಿ ಕೂತೆ.

ಮುಚ್ಚಿದ ಕಣ್ಣ ಪರದೆ ಎದುರು ಸಿದ್ಧರ ಬೆಟ್ಟ ಕದಲತೊಡಗಿತು.

(ಮುಗಿದಿಲ್ಲ)

- ಚಾಮರಾಜ ಸವಡಿ

No comments: