ಬಾರೋ ಸಾಧನಕೇರಿಗೆ...

23 Jul 2008

0 ಪ್ರತಿಕ್ರಿಯೆ

ಅದೊಂದು ಸುಂದರ ಕೆರೆ.


ಮುಂಗಾರಿಗೆ ಭರ್ತಿಯಾಗಿದೆ. ನಟ್ಟನಡುವೆ ಪುಟ್ಟ ನಡುಗಡ್ಡೆ. ಒಂದಿಷ್ಟು ಮರಗಿಡಗಳು. ಹೂ ಚಿಗುರು. ಶುಭ್ರ ಹಿಮಕ್ಕೆ ಜೀವ ಮೂಡಿದಂತಿರುವ ಕೊಕ್ಕರೆಗಳು. ಬಟ್ಟಲಂತಿರುವ ಕೆರೆಯನ್ನು ಕದಡಿ ಧಿಗ್ಗೆಂದು ಜಿಗಿದು ಬೀಳುವ ಮೀನುಗಳು. ತಿಳಿಗಾಳಿ. ಮೆಲು ಅಲೆಗಳು.

ಅದು ಧಾರವಾಡದ ಸಾಧನಕೇರಿಯ ಕೆರೆ.

ಅದರ ಎದುರೇ ಭವ್ಯ ಬೇಂದ್ರೆ ಭವನ. ಪಕ್ಕದಲ್ಲಿ ಅವರು ಬಾಳಿ ಬದುಕಿ ಸಾಧನೆಗೈದ ಮನೆ. ಸುತ್ತಲೂ ಇವತ್ತಿಗೂ ನಿಶ್ಯಬ್ದವನ್ನೇ ಹ್ದೊದಿರುವಂತಹ ವಸತಿ ಪ್ರದೇಶ. ಕೆಟ್ಟು ಹೋಗಿರುವ ರಸ್ತೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ತೇಕುತ್ತ ಹೋಗುವ ಸದ್ದು ಬಿಟ್ಟರೆ, ಕೇಳಿ ಬರುವ ಕಲರವ ಕೆರೆ ದಂಡೆಯಲ್ಲಿರುವ ಪ್ರಾಥಮಿಕ ಶಾಲೆಯ ಮಕ್ಕಳದ್ದು ಮಾತ್ರ.

ಧಾರವಾಡದ ಪೂರ್ವ ಬಯಲೊ ಬಯಲು

ಅಪೂರ್ವ‘ಕಲ್ಯಾಣ’ದಾಚೆಗಿದೆ ಭಾಗ್ಯನಗರಿ,

ಕರೆನಾಡು ಎರೆನಾಡು, ನಡುವೆ ಅಂದದ ಕಾಡು

ಗಂಡೆರಳೆ ಸುತ್ತಿರುವ ಹಿಂಡು ಚಿಗರಿ


ಪಡುವಣಕೆ ಇದೆ ಘಟ್ಟ, ಅಲಿ ಕಾನಿಗೆ ಪಟ್ಟ,

ಬೆಟ್ಟ ಇಳಿದರೆ ಉಳಿವೆ ಆಚೆ ಕಡಲು,

ಅಂಚು ಮಿರಿಮಿರಿ ಮಿಂಚು ಮೀನ ಮುತ್ತಿನ ಸಂಚು

ಘಟ್ಟ ತಪ್ಪಲು ಭೂಮಿತಾಯಿ-ಒಡಲು


ತಲೆಯಲ್ಲಿ ಬೆಳುಗಾವಿ, ಬಲಕೆ ಬೀಜಾಪೂರು,

ಎಡಕೆ ಕನ್ನಡ ಕರಾವಳಿಯ ತೋಳು,

ಮೈ ಎಲ್ಲ ಮೈಸೂರು ಇನ್ನೂರು ಮುನ್ನೂರು

ನೀಲಗಿರಿ ಪೀಠದಲಿ ನಮ್ಮ ಬಾಳು


(‘ನೆನವು’ ಇದೊಂದು ಅಪೂರ್ಣ ಕವಿತೆ)


ಹಾಗಂತ ಒಂದು ಕಡೆ ಬರೆದಿರುವ ಬೇಂದ್ರೆ ಅವರ ಕಾವ್ಯಕ್ಕೆ ಜೀವ ತುಂಬಿರುವುದು ಧಾರವಾಡ ಹಾಗೂ ಸಾಧನಕೇರಿ ಪ್ರದೇಶ. ಬೆಳ್ಳಂಬೆಳಿಗ್ಗೆ, ಸುರಿಯುತ್ತಿರುವ ಜಿನುಗು ಮಳೆಯಲ್ಲಿ, ಸುಮ್ಮನೇ ನಡೆಯುತ್ತ ಹೋದರೆ ಸಾಧನಕೇರಿ ದೊಡ್ಡ ಹಳ್ಳಿಯಂತೆ, ರಸ್ತೆಯ ಪಕ್ಕ ಕಟ್ಟಿ ಮರೆತು ಹೋದ ಕಟ್ಟಡಗಳ ಪ್ರದೇಶದಂತೆ ಕಾಣುತ್ತದೆ. ಕೆಟ್ಟ ರಸ್ತೆಯನ್ನು ತುಂಬಿರುವ ಹೊಂಡಗಳಲ್ಲಿ ಚಹದಂತಹ ಮಳೆ ನೀರು. ಸಾಲು ಮರಗಳಿಂದ ತೊಟ್ಟಿಕ್ಕುತ್ತಿರುವ ಹನಿಗಳು. ಮಂಜಿನ ಮಳೆಯಲ್ಲಿ ಮಸಕಾಗಿ ಕಾಣುವ ಬೆಳ್ಳಗಿನ ಬೇಂದ್ರೆಭವನ.


ಆ ಊರು ಈ ಊರು ಯಾ ಊರು ಆದರೂ

ತವರೂರು ತಮತಮಗೆ ತಾನೆ ಚಂದ,

ಕಟ್ಟಿ ಕೂಡುವುದಲ್ಲ ಬಿಚ್ಚಿ ಬಿಡುವುದು ಅಲ್ಲ

ಹೊಕ್ಕಳಿನ ಹುರಿಯಂಥ ಭಾವಬಂಧ


ಧಾರವಾಡದ ಶಿಲೆಯು ನಮ್ಮ ಶಾಲಿಗ್ರಾಮ

ಮಾವುಮಲ್ಲಿಗೆ ಚಿಗುರು ನಮ್ಮ ತುಳಸಿ

ಮುತ್ತುರುಳಬಹುದೆಂದು ದಿಕ್‌ನಾಗ ಜಡೆಯುವರೆ?

ಇಲ್ಲಿ ನಾಗರ ಖಂಡ ಸುತ್ತ ಬಳಸಿ


ಗುಪ್ತಗಾಮಿನಿ ನಮ್ಮ ಶಾಲ್ಮಲೆಯು ಸೆಲೆ

ಆಳಸಂಜೆ-ನಂಜನು ತೊಳೆಯೆ ಧುಮುಕುತಿಹಳು

ಏಕಾಂಗಿ, ನಿಃಸಂಗಿ, ಗಂಗಾವಳಿಯ ಭಂಗಿ

ಕನ್ನಡವ ಒಪ್ಪಿಡಿಯಲಮುಕುತಿಹಳು


ಹೊತ್ತೇರುತ್ತಿದ್ದಂತೆ, ಸೂರ್ಯ ಕಾಣದಿದ್ದರೂ ಮಕ್ಕಳನ್ನು ಹೊತ್ತ ಆಟೊಗಳು ಸಾಧನಕೇರಿಯ ಬೇಂದ್ರೆ ಮನೆ ಎದುರಿನ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬಂದು ನಿಲ್ಲುತ್ತವೆ. ಜೀವಂತಿಕೆ ತುಂಬಿ ತುಳುಕುವ ಮಕ್ಕಳು ಕೂಗುತ್ತ ಕೆಳಗಿಳಿಯುತ್ತವೆ. ಎದುರು ಬೇಂದ್ರೆ ಮನೆ, ಹಿಂದೆ ಕೆರೆ, ನಡುವೆ ಇರುವ ಈ ಶಾಲೆ ಸಾವಿರಾರು ನೆನಪುಗಳನ್ನು ತುಂಬಿಕೊಂಡಿದೆ. ಇಲ್ಲಿಯೇ ಒಂದು ಕಾಲದಲ್ಲಿ ಬೇಂದ್ರೆ ಓಡಾಡಿದ್ದರು. ಕಟ್ಟೆಯ ಮೇಲೆ ಕೂತು ಕವಿತೆ ಓದಿದ್ದರು. ಅರ್ಧಮರ್ಧ ಮಟ್ಟದ ಕವಿಗಳನ್ನು ಟೀಕಿಸಿದ್ದರು. ಜಗಳ ಕಾಯ್ದಿದ್ದರು. ಪ್ರೀತಿ ತೋರಿದ್ದರು. ಬೇರೆಯವರ ಉತ್ತಮ ರಚನೆಗಳಿಗೆ ತಲೆದೂಗಿ ಮೈಮರೆತಿದ್ದರು.


ಇಲ್ಲೀಗ ಮಕ್ಕಳು ಆಡುತ್ತಿವೆ. ‘ಜೈಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ’ ಪ್ರಾರ್ಥನೆ ಕೇಳುತ್ತಿದೆ. ಕೆರೆಯ ಆಚೆ ದಡದಲ್ಲಿರುವ ಪೊಲೀಸ್ ತರಬೇತಿ ಕೇಂದ್ರ ಹಾಗೂ ಪೊಲೀಸ್ ಕೇಂದ್ರ ಕಚೇರಿಗಳಿಂದ ಉಕ್ಕಿಬರುವ ಕೊಚ್ಚೆ ನೀರು ಸದ್ದಿಲ್ಲದೇ ಕೆರೆಯ ಒಡಲನ್ನು ವಿಷಗೊಳಿಸುತ್ತಿರುವುದು ದಡದಲ್ಲಿ ಆಡುತ್ತಿರುವ ಪೋರ-ಪೋರಿಯರಿಗೆ ಗೊತ್ತಿಲ್ಲ. ಜೋರು ಮಳೆಗೆ ತುಂಬಿರುವ ಕೆರೆಗೆ ಇನ್ನು ನಾಲ್ಕು ತಿಂಗಳಲ್ಲಿ ತನ್ನೊಡಲಿನ ತುಂಬ ಕೊಳಚೆ ತುಂಬುತ್ತದೆ ಎಂಬ ಸತ್ಯ ತಿಳಿದಿದ್ದರೂ ಅದು ಮಕ್ಕಳಿಗೆ ಹೇಳುವುದಿಲ್ಲ.


ಒಬ್ಬ ಡಾ. ಎಂ.ಎಂ. ಕಲಬುರ್ಗಿ ಸರ್ ಮಾತ್ರ ಮಿಡುಕುತ್ತಾರೆ. ‘ಬಾರೋ ಸಾಧನಕೇರಿಗೆ ಪ್ರಾಧಿಕಾರ ರಚಿಸಿ ಇಡೀ ಇನ್ನೂರು ಎಕರೆ ಪ್ರದೇಶವನ್ನು ವಶಕ್ಕೆ ತೆಗೆದುಕೊಂಡು ಅಭಿವೃದ್ಧಿಪಡಿಸಬೇಕು. ಕನ್ನಡದ ಅಷ್ಟೇ ಏಕೆ, ಜಗತ್ತಿನ ಅತಿ ಶ್ರೇಷ್ಠ ಕವಿಯೊಬ್ಬನಿಗೆ ಸ್ಫೂರ್ತಿ ನೀಡಿದ ನೆಲವನ್ನು ಸಾಧ್ಯವಾದಷ್ಟೂ ಮಟ್ಟಿಗೆ ಅದಿರುವಂತೆ ಉಳಿಸುವ ಆಸೆ ಇದೆ. ಕೆರೆ ಮತ್ತು ಬೇಂದ್ರೆ ಭವನಗಳೆರಡೂ ಸರ್ಕಾರದ ಆಸ್ತಿಗಳೇ. ಉಳಿದಿದ್ದು ಸುತ್ತಲಿನ ರಸ್ತೆಗಳನ್ನು ಅಭಿವೃದ್ಧಿಪಡಿಸುವುದು. ಕೆರೆಯ ಹೂಳೆತ್ತಿಸಿ, ಕೊಚ್ಚೆ ಅಲ್ಲಿ ಬಾರದಂತೆ ತಡೆ ಒಡ್ಡಿ, ದಂಡೆಯುದ್ದಕ್ಕೂ ಕೂಡಲು ಆಸನಗಳು ಹಾಗೂ ಒಂದು ಭಾಗದಲ್ಲಿ ಸಂಗೀತ ಕಚೇರಿಗೆ ವೇದಿಕೆ ಏರ್ಪಡಿಸಬೇಕು. ಕೆರೆಯಲ್ಲಿ ದೋಣಿಗಳ್ದಿದರೆ ಜನ ಬರುತ್ತಾರೆ. ಬೇಂದ್ರೆ ಜೀವನ ಸಂದೇಶ ಸಾರುವ ವಾತಾವರಣವನ್ನು ಸೃಷ್ಟಿಸಿದರೆ, ಧಾರವಾಡ ಅಕ್ಷರ ಯಾತ್ರಾಸ್ಥಳವಾಗುತ್ತದೆ’ ಎಂದು ಹಂಬಲಿಸುತ್ತಾರೆ.


ದ.ರಾ. ಬೇಂದ್ರೆ ರಾಷ್ಟ್ರೀಯ ಟ್ರಸ್ಟ್‌ನ ಅಧ್ಯಕ್ಷರಾಗಿರುವ ಡಾ. ಎಂ.ಎಂ. ಕಲಬುರ್ಗಿ ಇಂಥದೊಂದು ಯೋಜನೆ ತಯಾರಿಸಿಕೊಂಡು ಬೆಂಗಳೂರಿಗೆ ಹಲವಾರು ಬಾರಿ ರೈಲೇರಿದ್ದಾರೆ. ಆದರೆ ಬೆಂಗಳೂರಿನ ಆಯಕಟ್ಟಿನ ಜಾಗಗಳಲ್ಲಿ ಕೂತಿರುವ ಅಧಿಕಾರಿಗಳಿಗೆ ಸೊನಾಲಿ ಬೇಂದ್ರೆ ಗೊತ್ತೇ ಹೊರತು ದ.ರಾ. ಬೇಂದ್ರೆ ಅಲ್ಲ. ಕನ್ನಡವೇ ಸರಿಯಾಗಿ ಗೊತ್ತಿರದವರಿಗೆ ಮುಗಿಲ ಮಾರಿ, ರಾಗ ರತಿ, ನೀ ಹಿಂಗ ನೋಡಬ್ಯಾಡ, ಪಾತರಗಿತ್ತಿ ಪಕ್ಕ, ಯಾರಿಗೂ ಹೇಳೋಣು ಬ್ಯಾಡ ಎಂಬ ಪದ ಸಂಜೀವಿನಿ ಗೊತ್ತಾಗುವುದಾದರೂ ಹೇಗೆ?


ಹೀಗಾಗಿ ಯೋಜನೆಗೆ ಸರ್ಕಾರದ ತರಹೇವಾರಿ ನೆವಗಳು. ಇನ್ನು ಧಾರವಾಡಿಗರಿಗೆ ಬೇಂದ್ರೆ ಬಗ್ಗೆ ಇರುವಷ್ಟೇ ಅಭಿಮಾನ ನಿಷ್ಕ್ರಿಯತೆ ಬಗ್ಗೆಯೂ ಇರುವುದರಿಂದ ಅವರೂ ಇತ್ತ ನೋಡುತ್ತಿಲ್ಲ. ‘ಇದೇ ಬೇಂದ್ರೆ ಬೇರೆಡೆ ಹುಟ್ಟಿದ್ದರೆ ರಾಷ್ಟ್ರೀಯ ಹೀರೋ ಆಗಿರುತ್ತಿದ್ದರು’ ಎಂದು ಕತೆ ಹೇಳುತ್ತ ಅವರು ಆರಾಮವಾಗಿದ್ದಾರೆ. ಇನ್ನು ಬೇಂದ್ರೆ ಅವರ ಮಗ ವಾಮನ ಬೇಂದ್ರೆ ಕಾಪಿರೈಟ್ ನೆವದಲ್ಲಿ ದ.ರಾ. ಬೇಂದ್ರೆಯವರನ್ನು ಕಟ್ಟಿಟ್ಟಿದ್ದಾರೆ. ಹೀಗಾಗಿ ಬೇಂದ್ರೆ ಗೀತೆಗಳನ್ನು ಹಾಡಿ ಕ್ಯಾಸೆಟ್-ಸಿಡಿ ಮಾಡಲು ಗಾಯಕರು ಅಳುಕುತ್ತಾರೆ.


ಆದರೂ ಸಾಧನಕೇರಿಗೆ ತನ್ನದೇ ಆದ ಕಳೆ ಇದೆ. ಕೊಳೆ ಇದೆ. ಇಲ್ಲಿಗೆ ಬರುವ ಬಹುತೇಕ ಜನರು ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರನ್ನು ಹುಡುಕಿಕೊಂಡು ಬರುತ್ತಾರೆ. ಆದರೆ ಅವರಿಗೆ ಎದುರಾಗುವುದು ವಾಮನ ಬೇಂದ್ರೆ. ನಿರಾಶರಾದವರಿಗೆ ಪಕ್ಕದಲ್ಲಿಯೇ ಇರುವ ಬೇಂದ್ರೆ ಭವನ ಸ್ವಲ್ಪ ಮಟ್ಟಿಗೆ ಸಂತೈಸುತ್ತದೆ. ಎದುರಿಗೆ ಇರುವ ಶಾಲೆ, ಅದರಾಚೆಗೆ ಇರುವ ಕೆರೆಗಳು ಇನ್ನಷ್ಟು ಸಂತೈಸುತ್ತವೆ. ಕೆಟ್ಟ ರಸ್ತೆ ದಾಟಿ ಕೆರೆಯ ಅಂಚಿಗೆ ನಿಂತರೆ, ಆಗ ಸಂಜೆಯಾಗಿದ್ದರೆ, ‘ಮುಗಿಲ ಮಾರಿಗೆ ರಾಗ ರತಿಯ ನಂಜು’ ಏರಿರುವುದು ಕಂಡರೂ ಕಾಣಬಹುದು.
ಈ ವಾತಾವರಣದಲ್ಲಿಯೇ ಬೇಂದ್ರೆ ಅವರ ಅದ್ಭುತ ಕೃತಿಗಳು ಸೃಷ್ಟಿಯಾಗಿವೆ. ನಾಡಿನ ಖ್ಯಾತನಾಮರನ್ನು ತನ್ನೆಡೆ ಸೆಳೆದಿವೆ. ಜಾತಿ, ಧರ್ಮ, ಪ್ರಾದೇಶಿಕ ಭಿನ್ನತೆ ಮೀರಿ ಅವರ ಗೀತೆಗಳು ನಾಡಿನುದ್ದಗಲಕ್ಕೂ ಸಂಚರಿಸಿವೆ. ಅಕ್ಷರ ಬಲ್ಲವರು, ಪಾಮರರು, ಸಾಮಾನ್ಯರು, ಸಾಧಕರು- ಹೀಗೆ ಎಲ್ಲರನ್ನೂ ಪ್ರಭಾವಿತರನ್ನಾಗಿಸಿವೆ.


ವಾಮನ ಬೇಂದ್ರೆ ಅವರ ಲಕ್ಷ್ಮಣರೇಖೆಯ ಮಿತಿಯಲ್ಲಿದ್ದರೂ ಬೇಂದ್ರೆ ಬಗ್ಗೆ ಜನರ ಕುತೂಹಲ, ಪ್ರೀತಿ ಇನ್ನೂ ತಣಿದಿಲ್ಲ. ಧಾರವಾಡದ ಎಸ್.ಡಿ.ಎಂ. ಎಂಜನಿಯರಿಂಗ್ ಕಾಲೇಜಿನ ಉತ್ಸಾಹಿಗಳು ಮುಂದಾಗಿ ಉಚಿತವಾಗಿ ಅಂತರ್ಜಾಲ ತಾಣವನ್ನು ತಯಾರಿಸಿಕೊಟ್ಟಿದ್ದಾರೆ. ಯಥಾಪ್ರಕಾರ ಅಲ್ಲಿಯೂ ಕಾಪಿರೈಟ್‌ನದೇ ಸಮಸ್ಯೆ. ಹೀಗಾಗಿ ಬೇಂದ್ರೆ ಅವರ ಸಾಹಿತ್ಯದ ಬದಲಾಗಿ ಇತರ ಒಣ ವಿವರಗಳನ್ನು ತುಂಬಬೇಕಾಗಿದ್ದರಿಂದ ವೆಬ್‌ಸೈಟ್‌ನಲ್ಲಿ ಜೀವಂತಿಕೆ ಮಾಯವಾಗಿದೆ. ಇನ್ನು ಬಹುತೇಕ ಹಳೆಯ ಕವಿ, ಲೇಖಕರ ಗ್ರಂಥಗಳು ಪಳಪಳ ಹೊಳೆಯುವ ಮರು ಮುದ್ರಣ ಕಂಡು ನಳನಳಿಸುತ್ತಿರುವಾಗ ಬೇಂದ್ರೆಯವರ ಪುಸ್ತಕಗಳು ಮಾತ್ರ ಇಪ್ಪತ್ತು ವರ್ಷಗಳ ಹಿಂದಿನ ಕೆಟ್ಟ ಮುದ್ರಣದ ಗೈಡ್‌ಗಳಂತೆ ಕಳಪೆಯಾಗಿದ್ದು, ನಾಡಿನ ಬಹುತೇಕ ಪುಸ್ತಕಾಲಯಗಳಲ್ಲಿ ಕಾಣಸಿಗದ ಪರಿಸ್ಥಿತಿಗೆ ಒಳಗಾಗಿವೆ.


ಇಷ್ಟೆಲ್ಲ ಲೋಪಗಳಿದ್ದರೂ ಬೇಂದ್ರೆ ಮತ್ತೆ ಮತ್ತೆ ಸೆಳೆಯುತ್ತಾರೆ.

ಒಲವೆಂಬ ಹೊತ್ತಿಗೆಯನೋದ ಬಯಸುತ ನೀನು

ಬೆಲೆಯೆಷ್ಟು ಎಂದು ಕೇಳುತಿಹೆ? ಹುಚ್ಚ!

ಹಗಲಿರುಳು ದುಡಿದರೂ ಹಲ ಜನುಮ ಕಳೆದರೂ

ನೀ ತೆತ್ತಲಾರೆ ಬರಿ ಅಂಚೆ ವೆಚ್ಚ

ಎಂದು ಗದರಿದಂತಾಗುತ್ತದೆ.


ಮಳೆ ಬರುವ ಕಾಲಕ್ಕಒಳಗ್ಯಾಕ ಕೂತೇವೊ

ಇಳೆಯೊಡನೆ ಜಳಕ ಮಾಡೋಣ

ನಾವೂನು, ಮೋಡಗಳ ಆಟ ನೋಡೋಣ


ಎಂದು ಕರೆದಂತಾಗುತ್ತದೆ.


ಸಾಧನಕೇರಿಯಲ್ಲಿ ಇಂತಹ ಸಾವಿರ ಕರೆಗಳಿವೆ. ಕೊರೆಗಳಿವೆ. ಹುಡುಕುವವರಿಗೆ ಅಲ್ಲಿಯ ಕಲ್ಲಕಲ್ಲಿನಲ್ಲಿಯೂ, ನೀರಿನ ಪ್ರತಿ ತೆರೆಯಲ್ಲಿಯೂ ಬೇಂದ್ರೆ ಸಿಗುತ್ತಾರೆ. ಬೆಳ್ಳಂಬೆಳಿಗ್ಗೆ ವಾಕಿಂಗ್ ಹೋಗಿ, ಕೆರೆ ದಡದಲ್ಲಿ ಅಡ್ಡಾಡಿ, ಶಾಲೆಯ ನಿಶ್ಯಬ್ದದಲ್ಲಿ ಮೌನವಾಗಿ ನಿಂತವರಿಗೆ ಬೇಂದ್ರೆ ಖಂಡಿತ ಸಿಗುತ್ತಾರೆ. ಮೌನವಾಗಿಯೇ ಮಾತಿಗಿಳಿಯುತ್ತಾರೆ. ಕನಸು ಕೆದಕುತ್ತಾರೆ. ಎದೆಯೊಳಗಿನ ಸಾವಿರ ಭಾವಗಳಿಗೆ ಹಾಡಾಗುತ್ತಾರೆ.


ತೋಟ ಮೂಡಿದೆ ನೋಡು ಕಾಡಿದ್ದ ಎಡೆಯಲ್ಲಿ

ಅಲ್ಲಿ ಮೌನದ ತಂತಿ ಮೀಟುತಿಹುದು

ಶ್ರುತಿಗು ನಿಲುಕದ ನುಡಿಯು ದನಿಗುಡುವದಾಗೀಗ

ಯಾರು ಬಲ್ಲರು? ನಾಳೆ ಮೂಡಬಹುದು


ಎಂದು ಸಂತೈಸಿದಂತಾಗುತ್ತದೆ.


ಮೂಡೀತೆ ಅಂಥದೊಂದು ಬೆಳಗು ನಮ್ಮೀ ಸಾಧನಕೇರಿಯಲ್ಲಿ? ಕನಸು ಮೊರೆವ ಸಂಗಮದಲ್ಲಿ?

- ಚಾಮರಾಜ ಸವಡಿ

ಕೃಷಿ ಮಾರುಕಟ್ಟೆ ಸುಧಾರಿಸುವುದು ಎಂದು?

20 Jul 2008

0 ಪ್ರತಿಕ್ರಿಯೆ

ಕರ್ನಾಟಕ ಸರ್ಕಾರದ ಅಧಿಕೃತ ಪ್ರಕಟಣೆಯಾದ ‘ಜನಪದ’ ಮಾಸಿಕದ ಸೆಪ್ಟೆಂಬರ್ ೨೦೦೬ನೇ ಸಂಚಿಕೆಯ ಪುಟ ೧೮ರಲ್ಲಿ ಒಂದು ಮಾಹಿತಿ ಇದೆ. ರಾಷ್ಟ್ರೀಯ ತೋಟಗಾರಿಕಾ ಮಿಶನ್ ಯೋಜನೆಯ ಕೆಲವು ತುಣುಕುಗಳು ಅದರಲ್ಲಿವೆ.


‘ಕಡಿಮೆ ವೆಚ್ಚದ ೫ ಮೆಟ್ರಿಕ್ ಟನ್ ಈರುಳ್ಳಿ ಶೇಖರಣಾ ಗೋದಾಮುಗಳಿಗೆ ಶೇ.೨೫ರ ಸಹಾಯಧನ ನೀಡಲಾಗುತ್ತಿದೆ. ೫ ಮೆಟ್ರಿಕ್ ಟನ್ ಗೋದಾಮುಗಳಿಗೆ ರೂ.೫,೦೦೦ ಹಾಗೂ ೫೦ ಮೆಟ್ರಿಕ್ ಟನ್ ಗೋದಾಮುಗಳಿಗೆ ರೂ.೫೦,೦೦೦ವರೆಗೆ ಸಹಾಯಧನ ನೀಡಲಾಗುತ್ತದೆ. ತರಕಾರಿ ಬೆಳೆಗಳನ್ನು ಕಚ್ಚಾ ವಸ್ತುಗಳನ್ನಾಗಿಸಿ ಸಂಸ್ಕರಣೆ ಮತ್ತು ಮೌಲ್ಯವರ್ಧೀಕರಣ ಮಾಡುವ ಕಾರ್ಯಕ್ರಮಗಳಿಗೆ ವಿಷನ್ ಹಾಗೂ ರಾಜ್ಯ ವಲಯ ಸೇರಿ ಗರಿಷ್ಠ ಮಿತಿಗೆ ಒಳಪಟ್ಟು ಶೇ.೫೦ರ ಸಹಾಯಧನ ನೀಡಲಾಗುತ್ತದೆ...


‘ರೈತರು ಬೆಳೆಯುವ ತರಕಾರಿಗಳಿಗೆ ಉತ್ತಮ ಬೆಲೆ ದೊರಕಿಸಿಕೊಡುವಲ್ಲಿ ನೆರವಾಗುವ ಸುಧಾರಿತ ಮಾರುಕಟ್ಟೆಯ ವ್ಯವಸ್ಥೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು, ಅಂದರೆ ಮಾರುಕಟ್ಟೆ ಪ್ರಾಂಗಣ ಸುಧಾರಣೆ, ಗೋದಾಮುಗಳ ನಿರ್ಮಾಣ ಹಾಗೂ ಹವಾನಿಯಂತ್ರಿತ ವಾಹನ ಸೇರಿದಂತೆ ಹಲವಾರು ಕಾರ್ಯಕ್ರಮಗಳಿಗೆ ಶೇ.೨೫ರ ಸಹಾಯಧನಕ್ಕೆ ಅವಕಾಶ ಇದೆ. ಮಾರುಕಟ್ಟೆಯಲ್ಲಿ ನಿರತವಾಗಿರುವ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಈ ಸಹಾಯಧನ ಪಡೆಯಲು ಅರ್ಹವಾಗಿರುತ್ತವೆ’-


ಅದೇ ಲೇಖನದ ಇನ್ನೊಂದು ಪ್ಯಾರಾದಲ್ಲಿ ‘ತೋಟಗಾರಿಕಾ ಮಿಶನ್ ತರಕಾರಿ ಅಭಿವೃದ್ಧಿ ಯೋಜನೆಯಡಿ ರೈತರಿಗೆ ಶೇ.೫೦ರ ರಿಯಾಯಿತಿ ದರದಲ್ಲಿ ಪ್ರತಿ ಪ್ಲಾಸ್ಟಿಕ್ ಕ್ರೇಟ್‌ಗೆ ಗರಿಷ್ಠ ರೂ.೮೦ ಸಹಾಯಧನ ನೀಡಲಾಗುತ್ತಿದೆ. ಈರುಳ್ಳಿ, ಆಲೂಗೆಡ್ಡೆ, ಟೊಮ್ಯಾಟೊ ಇತ್ಯಾದಿ ಗುಂಡಾಕೃತಿಯ ತರಕಾರಿ ಬೆಳೆಗಳನ್ನು ವರ್ಗೀಕರಿಸುವ ಯಂತ್ರಗಳಿಗೆ ಶೇ.೨೫ರ ಗರಿಷ್ಠ ರೂ.೬೫,೨೦೦ ಸಹಾಯಧನ ನೀಡಲಾಗುತ್ತಿದೆ’ ಎಂಬ ಮಾಹಿತಿ ಇದೆ.


ಈಗ ನಿಮ್ಮ ಗಮನವನ್ನು ಏಷ್ಯದ ಅತಿ ದೊಡ್ಡ ಕೃಷಿ ಉತ್ಪನ್ನ ಮಾರುಕಟ್ಟೆ ಎಂದು ಹೆಸರು ಪಡೆದಿರುವ ಹುಬ್ಬಳ್ಳಿಯ ಶ್ರೀ ಜಗಜ್ಯೋತಿ ಬಸವೇಶ್ವರ ಎ.ಪಿ.ಎಂ.ಸಿ. ಕಡೆ ತಿರುಗಿಸಿ. ಪ್ರತಿ ವರ್ಷ ಇಲ್ಲಿ ಉಳ್ಳಾಗಡ್ಡಿ (ಈರುಳ್ಳಿ) ಖರೀದಿ ಜಾತ್ರೆ ನಡೆಯುತ್ತದೆ. ಜಾತ್ರೆ ಎಂಬ ಶಬ್ದ ಬಳಕೆ ಏಕೆಂದರೆ ಅಕ್ಷರಶಃ ಅರ್ಧ ಕರ್ನಾಟಕದ ಈರುಳ್ಳಿ ಬೆಳೆಗಾರರು ಇಲ್ಲಿ ಬಂದು ತಮ್ಮ ಉತ್ಪನ್ನಗಳನ್ನು ಮಾರುತ್ತಾರೆ. ಅರ್ಧ ಭಾರತದ ವಿವಿಧ ರಾಜ್ಯಗಳ ಸಗಟು ಖರೀದಿದಾರರು ಇಲ್ಲಿಂದ ಈರುಳ್ಳಿ ಖರೀದಿಸುತ್ತಾರೆ. ಸುಮಾರು ಎಂಬತ್ತು ಕೋಟಿ ರೂಪಾಯಿಗಳ ವಹಿವಾಟು ಈರುಳ್ಳಿ ಒಂದರಲ್ಲಿಯೇ ನಡೆಯುತ್ತದೆ.


ಏಕೆ ನಿರಾಸಕ್ತಿ?


ಒಂದು ವೇಳೆ ಮೇಲಿನ ಎರಡೂ ಉದಾಹರಣೆಗಳು ನಿಜವಾಗಿದ್ದ ಪಕ್ಷದಲ್ಲಿ ಪ್ರತಿ ವರ್ಷ ಈರುಳ್ಳಿ ಬೆಳೆಗೆ ಸೂಕ್ತ ಬೆಂಬಲ ಬೆಲೆ ಘೋಷಿಸಲು ಸರ್ಕಾರ ಮೀನಮೇಷ ಏಕೆ ಎಣಿಸುತ್ತದೆ? ಒಂದು ವೇಳೆ ಸರ್ಕಾರದ ಇಷ್ಟೊಂದು ಜನಪರ ಯೋಜನೆಗಳು ಸರಿಯಾಗಿ ತಲುಪಿದ್ದೇ ಆದರೆ ನೂರಾರು ಕೋಟಿ ರೂಪಾಯಿಗಳ ಈರುಳ್ಳಿ ಬೆಳೆ ವಹಿವಾಟು ಪ್ರತಿ ವರ್ಷ ಏಕೆ ಗೊಂದಲಕ್ಕೆ ಸಿಲುಕುತ್ತದೆ? ನಮ್ಮ ಈರುಳ್ಳಿ ಬೆಳೆಗಾರರು ಏಕೆ ಶಾಶ್ವತ ಸಾಲಗಾರರಾಗಿದ್ದಾರೆ? ಪ್ರತಿ ವರ್ಷ ನಡೆಯುವ ರೈತರ ಆತ್ಮಹತ್ಯೆಗಳಲ್ಲಿ ಈರುಳ್ಳಿ ಬೆಳೆದವರ ಸಂಖ್ಯೆ ಏಕೆ ಹೆಚ್ಚಿರುತ್ತದೆ?


ಈ ಮಹತ್ವದ ಪ್ರಶ್ನೆಗಳಿಗೆ ಉತ್ತರಿಸುವ ಜವಾಬ್ದಾರಿ ಸಂಬಂಧಿಸಿದ ಎಲ್ಲ ಇಲಾಖೆಗಳ ಮೇಲಿದೆ. ನಮ್ಮ ಜನಪ್ರತಿನಿಧಿಗಳೂ ಇದಕ್ಕೆ ಬಾಧ್ಯರಾಗುತ್ತಾರೆ. ನಮ್ಮ ಮಾರುಕಟ್ಟೆ ವ್ಯವಸ್ಥೆ ಇದಕ್ಕೆ ಜವಾಬ್ದಾರವಾಗುತ್ತದೆ. ಏಕೆಂದರೆ, ಈ ಒಂದು ತರಕಾರಿ ಬೆಳೆಯೇ ನೂರಾರು ಕೋಟಿ ರೂಪಾಯಿಗಳ ವ್ಯಾಪಾರಕ್ಕೆ ಕಾರಣವಾಗುವುದರಿಂದ ಪ್ರತಿ ವರ್ಷದ ಪ್ರಹಸನಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಅವಶ್ಯಕತೆ ಇದೆ.


ವಾರ್ಷಿಕ ದುಃಸ್ಥಿತಿ


ಎರಡು ವರ್ಷಗಳ ಹಿಂದೆ ಈರುಳ್ಳಿ ಬೆಳೆಯುವ ಮಹಾರಾಷ್ಟ್ರದ ಅರ್ಧಕ್ಕರ್ಧ ಪ್ರದೇಶ ಪ್ರವಾಹಪೀಡಿತವಾಯಿತು. ಸಹಜವಾಗಿ ಕರ್ನಾಟಕದ ಈರುಳ್ಳಿಗೆ ಮಾರುಕಟ್ಟೆ ಕುದುರಿತು. ಒಂದು ಸಮಯ ಕ್ವಿಂಟಲ್‌ಗೆ ರೂ.೧,೬೦೦ಕ್ಕೂ ಹೆಚ್ಚು ಧಾರಣೆಯಿದ್ದರೂ ದಲಾಲರು ರೂ.೮೦೦ಕ್ಕಿಂತ ಹೆಚ್ಚು ನೀಡದೆ ಅಸಹಕಾರ ತೋರಿದರು. ಸಣ್ಣ ಸಣ್ಣ ವಿಷಯಗಳಿಗೂ ಭಾವೋದ್ವೇಗದಿಂದ ಸ್ಪಂದಿಸುತ್ತಿದ್ದ ಜನಪ್ರತಿನಿಧಿಗಳು ಅದೇಕೋ ಸುಮ್ಮನೇ ಕೂತರು. ಅನಿವಾರ್ಯವಾಗಿ ರೈತರು ಬೀದಿಗಿಳಿದು ಪ್ರತಿಭಟಿಸಿದಾಗ ಮಾತ್ರ ಬೆಂಬಲ ಬೆಲೆ ಘೋಷಿಸಲಾಯಿತು. ಆದರೆ ಅದು ಕೂಡ ರೂ.೮೫೦ ದಾಟಲಿಲ್ಲ.


ಇಲ್ಲಿ ಲಾಭವಾಗಿದ್ದು ಯಾರಿಗೆ?


ರೈತರಿಗಂತೂ ಖಂಡಿತ ಅಲ್ಲ. ಏಕೆಂದರೆ ಲಾಭಾಂಶದ ಬಹುಪಾಲು ಮಧ್ಯವರ್ತಿಗಳ ಪಾಲಾಯಿತು. ಎ.ಪಿ.ಎಂ.ಸಿ. ಹೊರಗೇ ಬಹುತೇಕ ಖರೀದಿ ನಡೆಸಿದ್ದರಿಂದ ತೆರಿಗೆ ರೂಪದ ಲಾಭ ಸರ್ಕಾರಕ್ಕೆ ದಕ್ಕಲಿಲ್ಲ. ಇದು ಪ್ರತಿ ವರ್ಷದ ಗೋಳು. ಯಾವತ್ತಾದರೂ ಕೊಂಚ ಲಾಭ ಕಾಣಬೇಕೆಂದರೆ ಮಾರುಕಟ್ಟೆ ತುಂಬ ಈರುಳ್ಳಿ ತುಂಬಿ ತುಳುಕುತ್ತಿರುತ್ತದೆ. ಬೆಂಬಲ ಬೆಲೆ ಇಲ್ಲದೇ ದರ ಪಾತಾಳಕ್ಕೆ ಇಳಿದಿರುತ್ತದೆ. ಇಲ್ಲವೇ, ಮಳೆ ಕೈಕೊಟ್ಟು ಬೆಳೆ ನಾಶವಾಗಿರುತ್ತದೆ. ಹೀಗಾಗಿ ರೈತರ ಜೇಬು ಪ್ರತಿ ವರ್ಷ ಖಾಲಿಖಾಲಿಯೇ.


ಪ್ರತಿ ವರ್ಷ ಈ ರೀತಿ ನಡೆಯುವ ಈ ಖರೀದಿ ನಾಟಕಕ್ಕೆ ಯಾರು ಸೂತ್ರಧಾರರು? ಇದನ್ನು ನಿಭಾಯಿಸುವುದು ಹೇಗೆ? ಯಾರು ಇದರ ಜವಾಬ್ದಾರಿ ಹೊರಬೇಕು?


ಖರೀದಿ ನೀತಿ ಬಂದೀತೆ?


ಎರಡು ವರ್ಷಗಳ ಹಿಂದೆ ಮುಂಗಾರು ಹಂಗಾಮಿನಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಈರುಳ್ಳಿ ಖರೀದಿ ಅವಘಡವನ್ನು ಕೊಂಚ ನೋಡಿದರೂ ಸಮಸ್ಯೆಯ ಮೂಲ ಏನೆಂಬುದು ಅರ್ಥವಾಗುತ್ತದೆ.


ಹುಬ್ಬಳ್ಳಿ ಎ.ಪಿ.ಎಂ.ಸಿ.ಗೆ ನವೆಂಬರ್ ಕೊನೆಯ ವಾರದ ಹೊತ್ತಿಗೆ ೯.೨೫ ಲಕ್ಷ ಕ್ವಿಂಟಲ್‌ಗೂ ಹೆಚ್ಚು ಈರುಳ್ಳಿ ಆವಕವಾಗಿತ್ತು. ಆದರೆ ಬೆಂಬಲ ಬೆಲೆಗಿಂತ ಮಾರುಕಟ್ಟೆಯ ದರ ಕಡಿಮೆಯಾಗಿದ್ದರಿಂದ ಸಗಟು ಖರೀದಿದಾರರು ಕೇವಲ ೪ ಲಕ್ಷ ಕ್ವಿಂಟಲ್ ಈರುಳ್ಳಿಯನ್ನು ಮಾತ್ರ ಖರೀದಿಸಿದ್ದರು. ಸುಮಾರು ೫ ಲಕ್ಷ ಕ್ವಿಂಟಲ್‌ಗೂ ಹೆಚ್ಚು ಮಾಲು ಎ.ಪಿ.ಎಂ.ಸಿ. ಪ್ರಾಂಗಣದಲ್ಲಿಯೇ ಉಳಿದಿತ್ತು. ಇದಲ್ಲದೇ ಪ್ರತಿ ದಿನ ೨೨,೦೦೦ ಕ್ವಿಂಟಲ್‌ಗೂ ಹೆಚ್ಚು ಈರುಳ್ಳಿ ಮಾರುಕಟ್ಟೆಗೆ ಬರುತ್ತಿತ್ತು. ಹಳೆಯ ಮಾಲು ಹೊರಹೋಗದೆ, ಹೊಸ ಮಾಲಿಗೆ ಸ್ಥಳಾವಕಾಶ ಸಿಗದೆ ಎ.ಪಿ.ಎಂ.ಸಿ. ಅಧಿಕಾರಿಗಳು ಹಾಗೂ ರೈತರು ಪೇಚಾಡಬೇಕಾದ ದುಃಸ್ಥಿತಿ ನಿರ್ಮಾಣವಾಗಿತ್ತು.


ಏಕೆ ಹೀಗಾಯಿತು?


ಪ್ರತಿ ವರ್ಷ ಯಾವ್ಯಾವ ಬೆಳೆಯನ್ನು ಎಷ್ಟೆಷ್ಟು ಕ್ಷೇತ್ರದಲ್ಲಿ ಬೆಳೆಯಲಾಗಿದೆ. ಈ ಸಲದ ಇಳುವರಿ ಎಷ್ಟಿರಬಹುದು ಎಂದು ಕೃಷಿ ಇಲಾಖೆ ಅಂದಾಜು ಮಾಡುತ್ತದೆ. ಆ ಮಟ್ಟದ ಖರೀದಿಗೆ ಸರ್ಕಾರ ಸಿದ್ಧವಿರಬೇಕಾಗುತ್ತದೆ. ಅದಕ್ಕೆ ಪೂರಕವಾಗಿ ಬೆಂಬಲ ಬೆಲೆ, ಖರೀದಿ ಪ್ರಕ್ರಿಯೆಗೆ ತಯಾರಿ ಮಾಡಿಕೊಳ್ಳಬೇಕಾಗುತ್ತದೆ.


ಆದರೆ ಯಾವೊಂದು ವರ್ಷವೂ ಸುಗಮವಾಗಿ ಖರೀದಿ ನಡೆದ ಉದಾಹರಣೆಗಳಿಲ್ಲ. ಪ್ರತಿ ವರ್ಷ ನಿರೀಕ್ಷಿಸಿದ್ದಕ್ಕಿಂತ ಅತಿ ಹೆಚ್ಚು ಅಥವಾ ಅತಿ ಕಡಿಮೆ ಮಾಲು ಮಾರುಕಟ್ಟೆಗೆ ಬರುತ್ತದೆ. ಯಥಾಪ್ರಕಾರ ಬೆಂಬಲ ಬೆಲೆ ಘೋಷಿಸಲು ಸರ್ಕಾರ ತಡ ಮಾಡುವ ಮೂಲಕ ಮಾರುಕಟ್ಟೆ ಅರಾಜಕತೆಗೆ ದಾರಿ ಮಾಡಿಕೊಡುತ್ತದೆ. ಬೇಸತ್ತ ರೈತರು ಸಿಕ್ಕ ಬೆಲೆಗೆ ಮಾರಿ ಹೋಗುತ್ತಾರೆ. ಯಾವಾಗ ಮಾರುಕಟ್ಟೆಗೆ ಮಾಲು ಬರುವುದು ಕಡಿಮೆಯಾಗುತ್ತದೋ, ಆಗ ಬೆಲೆ ತಕ್ಷಣ ಸ್ಥಿರವಾಗುತ್ತದೆ.


ಹಿಂಗಾರು ಮಳೆ ಸುರಿಯುವ ಸಮಯದಲ್ಲೇ ಎಪಿಎಂಸಿಗಳಲ್ಲಿ ಈರುಳ್ಳಿ ಖರೀದಿ ಜೋರಾಗಿರುತ್ತದೆ. ಪ್ರತಿ ವರ್ಷ ಈ ಸಮಯದಲ್ಲಿ ಇಲ್ಲೆಲ್ಲ ಈರುಳ್ಳಿಯದೇ ಜಾತ್ರೆ. ಸಿಕ್ಕ ಸಿಕ್ಕ ಕಡೆ ಈರುಳ್ಳಿ ಚೀಲಗಳನ್ನು ಪೇರಿಸಿಟ್ಟು ಸಗಟು ಖರೀದಿದಾರರ ಬರವನ್ನು ಎದುರು ನೋಡುತ್ತ ನಿಲ್ಲಲಾಗುತ್ತದೆ. ಹಳೆಯ ಮಾಲು ಹೋಗಬೇಕು, ಹೊಸ ಮಾಲು ಬರಬೇಕು. ಇದೆಲ್ಲ ಬೆಂಬಲ ಬೆಲೆ ಜಾರಿಯಲ್ಲಿರುವಾಗಲೇ ಆಗಬೇಕು. ಸರ್ಕಾರ ಕೂಡ ತನ್ನ ಪಾಲಿನ ಹಣವನ್ನು ಸಕಾಲಕ್ಕೆ ಬಿಡುಗಡೆ ಮಾಡಬೇಕು. ಅಲ್ಲಿಯವರೆಗೆ ಮಳೆ, ಸಗಟು ಖರೀದಿದಾರರು ಹಾಗೂ ಸರ್ಕಾರದ ಮರ್ಜಿಯಲ್ಲಿ ರೈತ ದಿನ ನೂಕುತ್ತ ನಿಲ್ಲಬೇಕು.


ಇದಕ್ಕೆ ಶಾಶ್ವತ ಪರಿಹಾರ ಸಾಧ್ಯವಿಲ್ಲವೆ?


- ಚಾಮರಾಜ ಸವಡಿ

ರಸ್ತೆ ನೀರಿನಿಂದ ಮಸ್ತ್ ಬೆಳೆ

19 Jul 2008

0 ಪ್ರತಿಕ್ರಿಯೆ

‘ರಸ್ತೆ ಮೇಲೆ ಬೀಳುವ ಮಳೆ ನೀರು ಸಾಮಾನ್ಯವಾಗಿ ಏನಾಗುತ್ತದೆ?’
ಇಂಥದೊಂದು ಪ್ರಶ್ನೆಯನ್ನು ನಮ್ಮ ರೈತರಿಗೆ ಹಾಕಿದರೆ, ‘ಆ ನೀರು ವ್ಯರ್ಥವಾಗಿ ಹರಿದುಹೋಗಿ ಹಳ್ಳ ಸೇರುತ್ತದೆ’ ಎಂಬ ಉತ್ತರವೇ ದೊರೆತೀತು.

ಆದರೆ ಧಾರವಾಡ ತಾಲ್ಲೂಕಿನ ರೈತರು ಮಾತ್ರ ರಸ್ತೆ ಮೇಲೆ ಬೀಳುವ ಮಳೆ ನೀರಿನಿಂದ ಮಸ್ತ್ ಬೆಳೆಯನ್ನು ಬೆಳೆದುಕೊಳ್ಳುವ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದಾರೆ.

ರಸ್ತೆ ಮೇಲೆ ಬೀಳುವ ಮಳೆ ನೀರು ಸಾಮಾನ್ಯವಾಗಿ ಚರಂಡಿಯಂತಹ ತಗ್ಗಿನ ಮೂಲಕ ಹರಿದು, ಹಳ್ಳ ಸೇರಿ, ಅಲ್ಲಿಂದ ನದಿಗೆ ಹೋಗುವುದು ಸಾಮಾನ್ಯ ಪ್ರಕ್ರಿಯೆ. ಆದರೆ ಧಾರವಾಡ ತ್ಲಾಲೂಕಿನ ಮಲೆನಾಡಿನ ಸೆರಗಿನಲ್ಲಿರುವ ಕಲಕೇರಿ ಗ್ರಾಮದ ಸುತ್ತಮುತ್ತಲಿನ ರೈತರು ಇದೇ ನೀರಿನಿಂದ ಇಡೀ ಭತ್ತದ ಬೆಳೆಯನ್ನು ಸಮೃದ್ಧವಾಗಿ ಬೆಳೆದುಕೊಳ್ಳುತ್ತಿದ್ದಾರೆ.

ಇದೊಂದು ಸರಳ ತಂತ್ರಜ್ಞಾನ. ಇಳಿಜಾರಿನಲ್ಲಿ ಹರಿದುಹೋಗುವ ನೀರಿಗೆ ರೈತರು ತಮ್ಮ ಹೊಲದ ಬದಿ ಮಣ್ಣಿನ ಸಣ್ಣ ಒಡ್ಡು ನಿರ್ಮಿಸಿ ನಿಗದಿತ ಪ್ರಮಾಣದ ನೀರು ನಿರಂತರವಾಗಿ ಹೊಲ ಸೇರುವಂತೆ ಮಾಡುತ್ತಾರೆ. ಒಂದು ವೇಳೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ನೀರು ಬಂದರೆ, ಅದು ಮಣ್ಣಿನ ತಡೆ ದಾಟಿ ಹರಿದು ಮುಂದಿನ ಹೊಲಕ್ಕೆ ಹೋಗುತ್ತದೆ.

ಧಾರವಾಡದ ಮಲೆನಾಡಿನ ಪ್ರದೇಶದಲ್ಲಿ ಸಾಮಾನ್ಯವಾಗಿ ವರ್ಷದ ಮೂರು ತಿಂಗಳುಗಳ ಕಾಲ ನಿರಂತರವಾಗಿ ಮಳೆ ಬೀಳುತ್ತಲೇ ಇರುತ್ತದೆ. ಒಂದು ವೇಳೆ ಮಳೆ ಜೋರಾಗಿ, ಹೆಚ್ಚು ನೀರು ಬಂದರೆ ದಾರಿಯುದ್ದಕ್ಕೂ ಇರುವ ಮಣ್ಣಿನ ಸಣ್ಣ ಬದುಗಳು ನೀರನ್ನು ಹಿಡಿದಿಡಿದು ಮುಂದಕ್ಕೆ ಬಿಡುತ್ತವೆ. ಇದರಿಂದಾಗಿ ಸಾವಿರಾರು ಎಕರೆ ಭೂಮಿಗೆ ನೀರು ದಕ್ಕಿದಂತಾಗಿದೆ.

ಒಂದು ವೇಳೆ ನೀರು ಸಾಕೆನ್ನಿಸಿದರೆ ಮೇಲ್ಭಾಗದ ರೈತ, ನೀರು ತನ್ನ ಹೊಲ ಪ್ರವೇಶಿಸುವ ಮಾರ್ಗವನ್ನು ಮುಚ್ಚಿಬಿಡುತ್ತಾನೆ. ಆಗ ನೀರು ರಸ್ತೆಯಿಂದ ನೇರವಾಗಿ ಮುಂದಿನ ಹೊಲಕ್ಕೆ ಹೋಗುತ್ತದೆ. ಇದೊಂದು ಸರಣಿ ಕ್ರಿಯೆಯಾಗಿರುವುದರಿಂದ ರಸ್ತೆಯ ಎಡಬಲದ ಸಾವಿರಾರು ಎಕರೆ ಭೂಮಿಗೆ ಯಥೇಚ್ಛ ನೀರು ದಕ್ಕುತ್ತಿದೆ. ಒಂದು ವೇಳೆ ಹರಿವು ಅಗತ್ಯಕ್ಕಿಂತ ಹೆಚ್ಚಾದರೆ ನೀರು ರಸ್ತೆ ಬದಿಯಿಂದ ಹೊಲ ಪ್ರವೇಶಿಸುವ ಮಾರ್ಗವನ್ನೇ ಮುಚ್ಚಿಬಿಡುತ್ತಾರೆ. ಆಗ ಹೆಚ್ಚುವರಿ ನೀರು ದಾರಿಯಲ್ಲಿ ಬರುವ ಮುಂದಿನ ಹೊಲಕ್ಕೆ ಹಾಗೂ ಅಲ್ಲಿಂದದ ಸೀದಾ ಹಳ್ಳಕ್ಕೆ ಹೋಗುತ್ತದೆ.

ಈ ರೀತಿ ಹೆಚ್ಚುವರಿಯಾಗಿ ಹಳ್ಳ ಸೇರುವ ನೀರನ್ನೂ ಇಲ್ಲಿ ವ್ಯರ್ಥವಾಗಲು ಬಿಟ್ಟಿಲ್ಲ. ಹಳ್ಳದ ನೀರಿಗೆ ಮುಂದೆ ಅಳ್ನಾವರದಲ್ಲಿರುವ ಇಂದ್ರಮ್ಮನ ಕೆರೆಗೆ ಸಂಪರ್ಕ ಕೊಡಲಾಗಿದೆ. ಇದರಿಂದಾಗಿ ಅಳ್ನಾವರ ಪಟ್ಟಣದ ಇಪ್ಪತ್ತೈದು ಸಾವಿರಕ್ಕೂ ಅಧಿಕ ನಿವಾಸಿಗಳಿಗೆ ಕುಡಿಯುವ ನೀರು ಸಿಗುವಂತಾಗಿದೆ.

ಸರಳ ತಂತ್ರಜ್ಞಾನ ಉಪಯೋಗಿಸಿಕೊಂಡು, ಸಹಕಾರ ತತ್ವದಡಿ ನೀರು ಬಳಸಿಕೊಳ್ಳುತ್ತಿರುವ ಧಾರವಾಡ ತಾಲ್ಲೂಕಿನ ಗ್ರಾಮೀಣ ರೈತರು ವರ್ಷದ ಒಂದು ಬೆಳೆಯನ್ನು ಪೂರ್ತಿ ಮಳೆ ನೀರಿನಲ್ಲಿಯೇ ಬೆಳೆಯುತ್ತಿದ್ದಾರೆ. ಸಹಜ ನೀರನ್ನು ಬಳಸುತ್ತಿರುವುದರಿಂದ ಇಲಿಯ ಮಣ್ಣು ಕೆಟ್ಟಿಲ್ಲ. ಜತೆಗೆ ಅಂತರ್ಜಲ ಮಟ್ಟವೂ ಚೆನ್ನಾಗಿದೆ. ಬೇಸಿಗೆಯಲ್ಲಿ ಕೊಳವೆ ಬಾವಿಯ ನೀರು ಬಳಸಿ ಇನ್ನೊಂದು ಬೆಳೆ ಬೆಳೆದುಕೊಳ್ಳುತ್ತಾರೆ. ಆಗ ನೀರು ಕಡಿಮೆ ಬೇಡುವ ಸೂರ್ಯಕಾಂತಿ, ಹತ್ತಿ, ಈರುಳ್ಳಿ, ಎಳ್ಳು ಮುಂತಾದ ಬೆಳೆಗಳನ್ನು ಬೆಳೆಯುವುದರಿಂದ ಅಂತರ್ಜಲ ಬಳಕೆಯೂ ಮಿತ, ಬೆಳೆ ಬದಲಾವಣೆಯಿಂದ ಭೂಮಿಗೂ ಹಿತ.

ಇಂಥ ಮಾದರಿಯನ್ನು ರಾಜ್ಯದ ಎಲ್ಲೆಡೆ ಅನುಸರಿಸಲಾಗದೆ? ಜನತೆ ಜಲ ಸಾಕ್ಷರರಾಗಲು ಇದಕ್ಕಿಂತೆ ಬೇರೆ ಉದಾಹರಣೆ ಬೇಕೆ?

- ಚಾಮರಾಜ ಸವಡಿ

ಚತುರ್ಥಿಗೆ ಪರಿಸರಸ್ನೇಹಿ ಗಣಪ

18 Jul 2008

0 ಪ್ರತಿಕ್ರಿಯೆ

ಮತ್ತೊಂದು ಮಾಲಿನ್ಯ ಪರ್ವ ಕಣ್ಣೆದುರು ನಿಂತಿದೆ.

ಗಣೇಶ ಚತುರ್ಥಿಗೆಂದು ಈಗಾಗಲೇ ಲಕ್ಷಾಂತರ ಟನ್ ಅಮೂಲ್ಯ ಜೇಡಿಮಣ್ಣನ್ನು ಬಗೆಯಲಾಗಿದೆ. ಸಾವಿರಾರು ಟನ್ ಅರಳೆಯೊಂದಿಗೆ ಕಲೆತು, ಲಕ್ಷಾಂತರ ಲೀಟರ್‌ಗಳ ವಿಷಕಾರಿ ಬಣ್ಣವನ್ನು ಬಳೆದುಕೊಂಡು ಗಣೇಶ ನಮ್ಮೆಲ್ಲರಿಂದ ಪೂಜಿತನಾಗಿ ಅಮೂಲ್ಯ ಜಲಮೂಲಗಳಾದ ಬಾವಿ, ಕೆರೆ, ಸರೋವರ, ನದಿ ಹಾಗೂ ಸಮುದ್ರ ಸೇರಲು ಸನ್ನದ್ಧನಾಗ್ದಿದಾನೆ.

ಅಲ್ಲಿಂದ ಶುರುವಾಗುತ್ತದೆ ವಿಷ ಚಕ್ರ.

ಸದ್ದಿಲ್ಲದೇ ಜಲಮೂಲದಲ್ಲಿ ಬೆರೆತು, ಅಂತರ್ಜಲ ಸೇರಿಕೊಳ್ಳುವ ವಿಷಕಾರಿ ರಾಸಾಯನಿಕಗಳು ನೂರಾರು ವರ್ಷಗಳ ಕಾಲ ಅಂತರ್ಜಲ ಹಾಗೂ ಮೇಲ್ಮೈ ನೀರನ್ನು ಕಲುಷಿತಗೊಳಿಸುತ್ತ ಸಾಗುತ್ತವೆ. ಗಣೇಶನ ಮೈ ಅಲಂಕರಿಸುವ ಹಲವಾರು ಬಣ್ಣ ಹಾಗೂ ಪದಾರ್ಥಗಳಲ್ಲಿ ಬೆರೆತಿರುವ ವಿಷಕಾರಿ ವಸ್ತುಗಳಾದ ಸೀಸ ಹಾಗೂ ಅಪಾಯಕಾರಿ ಪೆಟ್ರೋಲಿಯಮ್ ಉಪ ಉತ್ಪನ್ನಗಳು ವರ್ಷಗಟ್ಟಲೇ ನೀರಿನ ಮೂಲಕ ನಮ್ಮ ಮೈ ಸೇರುತ್ತವೆ. ವಂಶವಾಹಿಗಳ ಮೇಲೆ ಅಪಾಯಕಾರಿ ಪರಿಣಾಮ ಬೀರುವ ಮೂಲಕ ಭಾವಿ ಪೀಳಿಗೆಯನ್ನು ಮನೋದೈಹಿಕ ಅಂಗವೈಕಲ್ಯಕ್ಕೆ ಈಡು ಮಾಡುತ್ತವೆ.

ಪ್ರತಿ ವರ್ಷ ಈ ಕುರಿತು ಮಾಧ್ಯಮಗಳು ಎಚ್ಚರಿಸುತ್ತವೆ. ನಮ್ಮ ಧಾರ್ಮಿಕ ಶ್ರದ್ಧೆ ಪರಿಸರಸ್ನೇಹಿಯಾಗಲಿ ಎಂಬ ಕೂಗು ಕೇಳುತ್ತದೆ. ಆದರೆ ‘ಗಣಪತಿ ಬಪ್ಪ ಮೋರಯಾ’ ಕೇಕೆಯಡಿ ಅದರ ದನಿ ಕ್ಷೀಣ. ವರ್ಷದಿಂದ ವರ್ಷಕ್ಕೆ ವಿಸ್ತರಿಸುತ್ತಲೇ ಸಾಗಿರುವ ವಿಷಕಾರಿ ಚಕ್ರ ಸದ್ದಿಲ್ಲದೇ ನಮ್ಮ ವಾತಾವರಣವನ್ನು ಕಲುಷಿತಗೊಳಿಸುತ್ತಲೇ ಇದೆ. ಗಣೇಶನ ಅಲಂಕಾರಕ್ಕೆ ಬಳಸುವ ಥರ್ಮೋಕೋಲ್ ಹಾಗೂ ಇತರ ವಸ್ತುಗಳು ನೀರನ್ನು ಬಳಕೆಗೆ ಅಯೋಗ್ಯವಾಗಿ ಮಾಡುತ್ತಲೇ ಇವೆ. ಲಕ್ಷಾಂತರ ಟನ್ ಜೇಡಿಮಣ್ಣು ಜಲಮೂಲಗಳಲ್ಲಿ ಸೇರುವ ಮೂಲಕ ಹೂಳಿನ ಪ್ರಮಾಣ ಹೆಚ್ಚುತ್ತಲೇ ಇದೆ.

ಹೂಳನ್ನು ಹೇಗಾದರೂ ತೆಗೆಯಬಹುದು. ಆದರೆ ವಿಷಕಾರಿ ವಸ್ತುಗಳನ್ನು ಅಷ್ಟು ಸುಲಭವಾಗಿ ತೆಗೆಯಲಾಗದು. ಅವು ನೀರೊಳಗೆ ಬೆರೆಯುವುದರಿಂದ ಜಲಚರಿಗಳು ಸಾಯುತ್ತವೆ. ಅವನ್ನು ತಿಂದು ಪಕ್ಷಿಗಳು ಸಾಯುತ್ತವೆ. ಸತ್ತ ಪಕ್ಷಿಗಳ ದೇಹದಲ್ಲಿಯೂ ಈ ವಿಷವಸ್ತುಗಳು ನಾಶವಾಗದೇ ಮತ್ತೆ ಧರೆಗೆ ಮರಳುತ್ತವೆ. ಇದಕ್ಕೆ ಪರಿಹಾರವ್ಲಿಲವೆ?

ಪರಿಸರಸ್ನೇಹಿ ಗಣಪ

ಇಂಥದೊಂದು ಪ್ರಶ್ನೆಯಿಟ್ಟುಕೊಂಡು ಹೊರಟ ಒರಿಸ್ಸಾದ ಶಿಲ್ಪಿಗಳು ಕಳೆದ ಕೆಲ ವರ್ಷಗಳಿಂದ ಕಲ್ಲಿನ ಗಣಪನನ್ನು ತಯಾರಿಸಲು ಪ್ರಾರಂಭಿಸಿದ್ದಾರೆ. ಕೆಂಪು ಅಮೃತ ಶಿಲೆ, ಮರಳುಗಲ್ಲು ಮತ್ತು ಹಸಿರು ಕಲ್ಲುಗಳಲ್ಲಿ ಕೆತ್ತಿದ ಒಂದು ಅಡಿಯಿಂದ ಹಿಡಿದು ನಾಲ್ಕು ಅಡಿಗಳ ಎತ್ತರದ ಗಣೇಶ ವಿಗ್ರಹಗಳು ಈಗ ಜನಾಕರ್ಷಣೆ ಪಡೆದುಕೊಳ್ಳುತ್ತಿವೆ. ಮನೆಯ ಅಲಂಕಾರಕ್ಕೂ ಆಯಿತು, ಪೂಜೆಗೂ ಸಂದಿತು ಎಂದು ಅಲ್ಲಿನ ಜನ ಕಲ್ಲಿನಲ್ಲಿ ಕೆತ್ತಿದ ವಿಗ್ರಹಗಳನ್ನು ಗಣೇಶ ಚತುರ್ಥಿ ಪೂಜೆಗೂ ಬಳಸುತ್ತಿರುವುದು ಈಗ ಹೊಸ ಬೆಳವಣಿಗೆ.

ಇದರಿಂದ ಪ್ರೇರಣೆ ಪಡೆದ ಶಿವಮೊಗ್ಗದ ಬಿ.ಎಚ್. ರಸ್ತೆಯಲ್ಲಿರುವ ‘ದೇಸಿ ಸಂಸ್ಕೃತಿ’ ಅಂಗಡಿಯ ಮಾಲೀಕ ಸರ್ಜಾಶಂಕರ ಹರಳಿಮಠ ಗಣೇಶ ಚತುರ್ಥಿಗೆಂದು ಒರಿಸ್ಸಾದ ಕಲ್ಲಿನ ಗಣೇಶಮೂರ್ತಿಗಳನ್ನು ತರಿಸಿದ್ದಾರೆ. ‘ಮಣ್ಣಿನ ಗಣೇಶನಿಂದ ಪರಿಸರ ಮಾಲಿನ್ಯ ಹೆಚ್ಚುತ್ತಿದೆ. ಬಳಸಿ ಎಸೆಯುವ ಆಧುನಿಕ ಪದ್ಧತಿ ಧಾರ್ಮಿಕ ಆಚರಣೆಗೂ ಹಬ್ಬಿದ್ದು ವಿಷಾದನೀಯ. ಇದನ್ನು ನಿವಾರಿಸುವ ವಿಚಾರ ಮಾಡಿ ಕಲ್ಲಿನ ವಿಗ್ರಹಗಳನ್ನು ಜನಪ್ರಿಯಗೊಳಿಸಲು ಯತ್ನಿಸುತ್ತಿದ್ದೇವೆ’ ಎನ್ನುವ ಸರ್ಜಾಶಂಕರ, ಗಣೇಶ ಅಲ್ಲದೇ ಶಿಲಾಬಾಲಿಕೆಯರು, ಬುದ್ಧ, ಮಹಾವೀರ ಮುಂತಾದವರ ವಿಗ್ರಹಗಳನ್ನು ತರಿಸಿದ್ದಾರೆ.

ಇಂತಹ ವಿಗ್ರಹಗಳ ಪ್ರಯೋಜನಗಳು ಹಲವು. ಇವಕ್ಕೆ ನಿತ್ಯ ಪೂಜೆ ಸಲ್ಲಿಸಬಹುದು. ಬಣ್ಣದ ಹಂಗಿಲ್ಲದಿರುವುದರಿಂದ ಪರಿಸರ ಮಾಲಿನ್ಯವಿಲ್ಲ. ನೀರಿನಲ್ಲಿ ವಿಸರ್ಜಿಸುವ ಅವಶ್ಯಕತೆಯಿಲ್ಲ. ಅಲಂಕಾರಕ್ಕೂ ಬಳಸಬಹುದು. ನಿತ್ಯ ಪೂಜೆಗೂ ಸೂಕ್ತ. ಮರ ಅಥವಾ ಇತರ ವಸ್ತುಗಳಿಂದ ಮಾಡಿರುವ ವಿಗ್ರಹಕ್ಕಿಂತ ಕಡಿಮೆ ಬೆಲೆಯಲ್ಲಿ ದೊರಕುತ್ತವೆ.

ಕುಶಲ ಕಲೆಗಳ ಅಭಿವೃದ್ಧಿ

‘ಪರಿಸರ ಕಾಪಾಡುವ ಜತೆಗೆ ಇವು ನಮ್ಮ ಸಾಂಸ್ಕೃತಿಕ ಕ್ಷೇತ್ರವನ್ನೂ ರಕ್ಷಿಸುತ್ತವೆ. ಬಹುತೇಕ ಕರಕುಶಲಿಗರು ಈಗ ತೀವ್ರ ಬಡತನದಲ್ಲಿದ್ದಾರೆ. ಅವರ ಉತ್ಪನ್ನಗಳಿಗೆ ಬೇಡಿಕೆ ಕಡಿಮೆ ಇರುವುದರಿಂದ ಉತ್ಪಾದನಾ ವೆಚ್ಚ ಅಧಿಕ. ಶ್ರೀಮಂತರು ಮಾತ್ರ ಇಂತಹ ವಸ್ತುಗಳನ್ನು ಕೊಳ್ಳಬಹುದಾದ ವಾತಾವರಣ ಇದೆ. ಒಂದು ವೇಳೆ ಧಾರ್ಮಿಕ ಆಚರಣೆಗೂ ಕರಕುಶಲ ಹಾಗೂ ಪರಿಸರಸ್ನೇಹಿ ಉತ್ಪಾದನೆಗಳು ಬಳಕೆಯಾಗತೊಡಗಿದರೆ ಉತ್ಪಾದನಾ ವೆಚ್ಚ ತಗ್ಗುತ್ತದೆ. ಬಡ ಶಿಲ್ಪಿಗಳು ಹಾಗೂ ಕರಕುಶಲಕರ್ಮಿಗಳ ಉತ್ಪಾದನೆಗಳಿಗೆ ಬೇಡಿಕೆ ಹೆಚ್ಚಿ, ಅವರ ಆರ್ಥಿಕ ಪರಿಸ್ಥಿತಿ ಉತ್ತಮವಾಗುತ್ತದೆ’ ಎನ್ನುತ್ತಾರೆ ಸರ್ಜಾಶಂಕರ.

ಒಂದಡಿಯಿಂದ ಮೂರಡಿ ಎತ್ತರದವರೆಗಿನ ಕಲ್ಲು ವಿಗ್ರಹಗಳ ಬೆಲೆ ರೂ.೫,೦೦೦ದಿಂದ ರೂ.೮,೦೦೦ವರೆಗೆ ಇದೆ. ಒಂದು ವೇಳೆ ಬೇಡಿಕೆ ಏರಿದರೆ ಬೆಲೆ ಸಹಜವಾಗಿ ಇಳಿಯುತ್ತದೆ. ಕರ್ನಾಟಕದ ಉದ್ದಗಲ ಸಾವಿರಾರು ಉತ್ತಮ ಶಿಲ್ಪಿಗಳ್ದಿದಾರೆ, ಲೋಹಕರ್ಮಿಗಳ್ದಿದಾರೆ. ಬೇಡಿಕೆ ಬಂದರೆ ಅವರೂ ಗಣಪನನ್ನು ನಿರ್ಮಿಸಲು ಸಿದ್ಧ. ಅವರವರ ಆರ್ಥಿಕ ಸಾಮರ್ಥ್ಯಕ್ಕೆ ತಕ್ಕಂತೆ, ಆಸಕ್ತಿಗೆ ಅನುಗುಣವಾಗಿ ವಿಗ್ರಹಗಳ ನಿರ್ಮಾಣ ಸಾಧ್ಯ. ಬಳಸಿ ಬೀಸಾಡಿ ಪರಿಸರ ಮಾಲಿನ್ಯ ಉಂಟು ಮಾಡುವುದಕ್ಕಿಂತ ಮರುಬಳಕೆಯಾಗುವ ಸೊಗಸಾದ ವಿಗ್ರಹಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಉತ್ತಮ ಎನ್ನುತ್ತಾರೆ ಹರಳಿಮಠ. ಅಂಥದೊಂದು ಪ್ರಯತ್ನ ಈಗ ಚಿಕ್ಕದಾಗಿ ಪ್ರಾರಂಭವಾಗಿದೆ. ಆದರೆ ಈ ಭಾವನೆ ಎಲ್ಲೆಡೆ ವಿಸ್ತರಿಸಲು ಜನತೆ ಮನಸ್ಸು ಮಾಡಬೇಕಿದೆ.

ಆಸಕ್ತರು ಸರ್ಜಾಶಂಕರ ಹರಳಿಮಠ ಅವರನ್ನು ‘ದೇಸಿ ಸಂಸ್ಕೃತಿ’, ಮೈಲಾರೇಶ್ವರ ದೇವಸ್ಥಾನ ಸಂಕೀರ್ಣ, ಬಿ.ಎಚ್. ರಸ್ತೆ, ಶಿವಮೊಗ್ಗ, ದೂರವಾಣಿ 94487 80144ಗೆ ಸಂಪರ್ಕಿಸಬಹುದು.

- ಚಾಮರಾಜ ಸವಡಿ

ಇಬ್ಬನಿ ಬಿದ್ದ ಭೂಮಿಯಲ್ಲಿ ಜಗ್ಗಲಗಿ ಕಲರವ

16 Jul 2008

0 ಪ್ರತಿಕ್ರಿಯೆ

ಕೊಂಚ ಸಮಯ ಜತೆಗಿದ್ದು ದೂರ ಹೋದ ಸಂಗಾತಿಯೆ,

ಎಲ್ಲೋ ಇರುವ, ಹೇಗೋ ಬದುಕುತ್ತಿರುವ ನಿನಗೆ ಕಾಲೇಜಿನ ಕ್ರೀಡಾಂಗಣಕ್ಕೆ ಉತ್ಸವದ ಪುಳಕ ಬಂದಿದ್ದು ನೆನಪಿದೆಯೆ?

ಬೆಳ್ಳಂಬೆಳಿಗ್ಗೆ ಬಿದ್ದ ಇಬ್ಬನಿ ಆರುವ ಮೊದಲೇ ನಾವೆಲ್ಲ ಅಲ್ಲಿರುತ್ತಿದ್ದೆವು. ಅಲ್ಲೊಂದು ಸೊಗಸಾದ ಶಾಶ್ವತವಾದ ವೇದಿಕೆ ಇರುತ್ತಿತ್ತು. ಹಿನ್ನೆಲೆಯ್ಲಲಿ ತಿಳಿ ಬಿಸಿಲಿನಲ್ಲಿ ಮಿರುಗುತ್ತ, ನಾಚುತ್ತ, ಬೆಳಗುತ್ತ ನಿಂತಿದ್ದ ಧಾರವಾಡದ ಕೆಸಿಡಿಯ (ಕರ್ನಾಟಕ ಕಾಲೇಜ್) ಭವ್ಯ ಕಟ್ಟಡ. ದಿಟ್ಟಿಸಿ ನೋಡಿದರೆ ಮುಖ್ಯ ದ್ವಾರದ ನೆತ್ತಿಯ ಮೇಲೆ ಒಂದಿಷ್ಟು ಅಕ್ಷರಗಳ ಕೆತ್ತನೆ ನಡುವೆ ’೧೯೨೦’ ಕಾಣುತ್ತದೆ. ಎಂಬತ್ತಾರು ವರ್ಷದ ಹಿಂದೆ ಯಾವ ಪುಣ್ಯಾತ್ಮ ಕಂಡ ಕನಸೋ ಈ ಕಟ್ಟಡ. ಇವತ್ತು ಸಾವಿರಾರು ಹರೆಯದ ಹೃದಯಗಳ ಕಣ್ಣಿನ ಹಬ್ಬವಾಗಿ ನಿಂತಿದೆ.

ಉತ್ಸವದ ಮುನ್ನ ಅದೆಷ್ಟು ಸಂಭ್ರಮವಿತ್ತು ಇಲ್ಲಿ ಎನ್.ಎಸ್.ಎಸ್. ಹುಡುಗರು ಸೊಗಸಾಗಿ ಕವಾಯತು ನಡೆಸುತ್ತಿದ್ದರು. ಬಿರುಸಾದ ಯುನಿಫಾರ್ಮ್. ತೆಳ್ಳನೆಯ ದೇಹಕ್ಕೆ ಬಿಗಿದು ಕಟ್ಟಿದ ಬೆಲ್ಟ್. ಕೈಯಲ್ಲಿ ಡ್ರಿಲ್ ರೈಫಲ್. ತಲೆಗಿಟ್ಟ ಟೋಪಿಯಲ್ಲಿ ಕೆಂಪು ಪುಚ್ಚದ ಗರಿ. ವಯಸ್ಸಿಗೆ ಬಂದ ಹುಂಜದ ಹೆಮ್ಮೆ. ದೂರದಲ್ಲಿದ್ದ ಮರಗಳ ನೆರಳಲ್ಲಿ ನಿಂತು ತಮ್ಮನ್ನು ನೋಡಿಯೂ ನೋಡದವರಂತಿದ್ದ ಹುಡುಗಿಯರು ಗುಂಪಿನತ್ತ ಇವರೂ ನೋಡಿಯೂ ನೋಡದವರಂತೆ ದೃಷ್ಟಿ ಬೀರಿದ್ದೇ ಬೀರಿದ್ದು. ‘ಲೆಫ್ಟ್ ರೈಟ್, ಲೆಫ್ಟ್ ರೈಟ್...’ ಲಯಬದ್ಧ ಆದೇಶ. ಅದರಷ್ಟೇ ಲಯಬದ್ಧ ಹೆಜ್ಜೆ.

ಮನಸ್ಸು ಅರಳಲು ಇಷ್ಟು ಸಾಕು. ಉತ್ಸವಕ್ಕೆ ನಾಲ್ಕೈದು ದಿನಗಳ ಮುನ್ನ ಕೆಸಿಡಿ ಕ್ರೀಡಾಂಗಣದ ತುಂಬ ಬಣ್ಣ ಬಣ್ಣದ ಕಲಾ ತಂಡಗಳು ತುಂಬಿಕೊಳ್ಳುತ್ತಿದ್ದವು. ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸಿದ್ಧವಾಗುತ್ತಿದ್ದವು. ಅದನ್ನು ನೋಡಲು ಜಿಲ್ಲೆಯ ಎಲ್ಲೆಡೆಯಿಂದ ಜನ ಬರುತ್ತಿದ್ದರು. ‘ಜನರನ್ನು ನಿಭಾಯಿಸುವವರು ಮೊದಲು ಶಿಸ್ತು ಕಲಿಯಬೇಕು’ ಎನ್ನುತ್ತಿದ್ದರು ಎನ್.ಸಿ.ಸಿ. ಕಮಾಂಡರ್. ‘ಎಸ್ಸಾರ್’ ಎನ್ನುತ್ತಿದ್ದರು ಕೆಡೆಟ್‌ಗಳು. ಮತ್ತೆ ಕವಾಯತು ಶುರು. ‘ಲೆಫ್ಟ್ ರೈಟ್, ಲೆಫ್ಟ್ ರೈಟ್...’.

ಬಂದೇ ಬಿಟ್ಟಿತಲ್ಲ ಉತ್ಸವ. ಅವತ್ತಿಡೀ ಕೆಸಿಡಿ ಕಾಲೇಜಿನಲ್ಲಿ ಸಾವಿರಾರು ಬಣ್ಣದ ಹಕ್ಕಿಗಳ ಕಲರವ. ಅಂದಿನಿಂದ ಮೂರು ದಿನಗಳ ಕಾಲ ಅಲ್ಲಿ ವಸಂತ ಮಾಸವಿರುತ್ತಿತ್ತು. ಯಾವ್ಯಾವುದೋ ಊರುಗಳ ಜನರೂ ನೆನಪುಗಳನ್ನು ಹುಡುಕಿಕೊಂಡು ಅಲ್ಲಿಗೆ ಬರುತ್ತಿದ್ದರು. ಇಲ್ಲಿಯೇ ಓದಿ ಎಲ್ಲೆಲ್ಲೋ ಹೋಗಿರುವ ಎಲ್ಲ ಮನಸ್ಸುಗಳೂ ಹಿಂತಿರುಗುತ್ತಿದ್ದವು. ‘ನಾವು ಕ್ಲಾಸ್ ಬಿಟ್ಟ ಕೂಡಲೇ ಇಲ್ಲೇ ನಿಲ್ಲುತ್ತಿದ್ದೆವಲ್ವಾ?... ಮಿಸ್ ಪಾಟೀಲ್ ಇಲ್ಲೇ ಓಡಾಡುತ್ತಿದ್ದಳು, ಈಗ ಎಲ್ಲಿ ಇರುವಳೋ ಏನೋ... ನಿನಗೆಷ್ಟು ಮಕ್ಕಳೋ ಕುಲಕರ್ಣಿ... ನೀನ್ ಬಿಡಪ್ಪಾ ದೊಡ್ಡ ಕಂಪನಿಗೇ ಸೇರಿಕೊಂಡುಬಿಟ್ಟಿದ್ದೀ... ಅಂದ್ಹಾಗೆ ಎಷ್ಟು ದಿನ ರಜಾ...’ ಇಂಥ ಸಾವಿರಾರು ಪ್ರಶ್ನೆಗಳು. ಹಳೆಯದನ್ನು ಕೆದಕುತ್ತ, ಹೊಸದರೊಂದಿಗೆ ಹೋಲಿಸುತ್ತ ಭೂತಕಾಲ ವರ್ತಮಾನ ಕಾಲದ ನಡುವೆ ಸವಾರಿ ಹೋಗುವ ಸಾವಿರಾರು ಜನ.

ಹೌದು. ಕೆಸಿಡಿ ಕ್ರೀಡಾಂಗಣದಲ್ಲಿ ಇಂತಹ ಎಲ್ಲ ಕನಸುಗಳು ಅವತ್ತು ಹಾರಿ ಬಂದಿದ್ದವು. ಈಮೇಲ್ ತೆಗೆದು ನೋಡಿದರೆ ಅಮೆರಿಕದಿಂದ ನಾಗೇಶ್ ತಾವರಗೇರಿ ಕಳಿಸಿದ ರಾಶಿ ಮೇಲ್‌ಗಳು. ಎಲ್ಲದರ ತುಂಬ ಇಲ್ಲಿಯ ನೆನಪುಗಳದೇ ಕಲರವ. ‘ಹುಬ್ಳಿ ಸಿಟಿ’ ಎಂಬ ಯಾಹೂ ಗ್ರುಪ್‌ನ ಅಷ್ಟೂ ಅನಿವಾಸಿ ಅಪರಿಚಿತ ಗೆಳೆಯರ ಮೇಲ್‌ಗಳಲ್ಲಿ ಉತ್ಸವದ್ದೇ ಮಾತು. ‘ಹುಬ್ಬಳ್ಳಿ-ಧಾರವಾಡ ಸುಧಾರಿಸುತ್ತಿವೆಯಂತೆ ಹೌದೇನ್ರಿ?’ ಎಂಬ ಸಂಭ್ರಮ ಬೆರೆತ ಅನುಮಾನದ ಪ್ರಶ್ನೆ. ‘ಹೌದ್ರೀ’ ಎಂಬ ಉತ್ತರ ಹೋಗಿದ್ದೇ ತಡ, ಅಂಥವೇ ಮತ್ತಿಷ್ಟು ಪ್ರಶ್ನೆಗಳನ್ನು ಹೊತ್ತ ಮೇಲ್‌ಗಳು ಇನ್‌ಬಾಕ್ಸ್‌ನಲ್ಲಿ. ’ಇವತ್ತು ನಾವಲ್ಲಿರಬೇಕಿತ್ತು, ಅದರ ಮಜಾನೇ ಬೇರೆ ಇರ್ತಿತ್ತು’ ಎಂಬ ಕನವರಿಕೆ.

ಉತ್ಸವ ಬಂದೇ ಬಿಟ್ಟಿತು. ಅಂದು ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಸಾಂಸ್ಕೃತಿಕ ಲೋಕವೊಂದು ಧರೆಗಿಳಿದಿತ್ತು. ಚಿತ್ರದುರ್ಗದ ಕೋಟೆ, ಭುವನೇಶ್ವರಿಯಾಗಿ ರೂಪಾಂತರ ಹೊಂದಿದ್ದ ಬಾಲೆಯರು, ಇಳಕಲ್ ಸೀರೆಯುಟ್ಟು, ತಲೆ ಮೇಲೆ ಬುತ್ತಿ ಗಂಟು-ಕಳಸ ಹೊತ್ತ ನಾರಿಯರ ರೂಪದ ಹುಡುಗಿಯರು, ನಾನಾ ರೀತಿಯ ವೇಷ ಧರಿಸಿ ಗುರುತೇ ಸಿಗದಂತೆ ಜಿಗಿದಾಡುತ್ತಿದ್ದ ಹುಡುಗರು, ಮಹಾರಾಜನ ವೇಷದಲ್ಲಿ ನಿಂತವನನ್ನು ನೋಡಿ ‘ಅಲೆಲೆ ಪಾಟೀಲ, ಗೊತ್ತ ಹತ್ತವಲ್ದಲ್ಲೋ ಮಾರಾಯ’ ಎಂಬ ಉದ್ಗಾರ. ಅಲ್ಲೆಲ್ಲೋ ಮಿಸ್ ದೇಶಪಾಂಡೆ ನಾಚುತ್ತ ನಿಂತಿದ್ದಾಳೆ. ಹತ್ತಿರ ಹೋಗಿ ನೋಡಿದರೆ ಬುತ್ತಿ ಗಂಟು ಹೊತ್ತ ನಾರಿಯಾಗಿದ್ದಾಳೆ. ಇಂತಹ ಹಲವಾರು ಸಂಭ್ರಮಗಳಿಗೆ ಪಾರವೆಲ್ಲಿ?

ಕ್ಯಾಂಪಸ್ ತುಂಬ ಉತ್ಸವದ್ದೇ ಮಾತು. ಮೂರು ದಿನಗಳ ಹಬ್ಬಕ್ಕೆ ಎಲ್ಲೆಲ್ಲಿಂದಲೋ ಜನ ಬಂದಿದ್ದರು. ಹೆಸರಿಗೆ ಮಾತ್ರ ಧಾರವಾಡ ಜಿಲ್ಲಾ ಉತ್ಸವ. ಆದರೆ ನೆನಪುಗಳು ಗಡಿ ದಾಟಿ ಹೋಗಿದ್ದವು. ಜನರೂ ಗಡಿ ದಾಟಿ ಬಂದಿದ್ದರು. ಎಲ್ಲರಲ್ಲಿಯೂ ಎಂಥದೋ ಹೇಳತೀರದ ಸಂಭ್ರಮ. ವಾಹನಗಳನ್ನು ಜಾಗ ಸಿಕ್ಕಲ್ಲಿ ಅಮರಿಸಿ ಕುಣಿಯುತ್ತ ಕ್ರೀಡಾಂಗಣಕ್ಕೆ ಬಂದಿದ್ದರು. ಹೃದಯಾಕೃತಿಯ ಬಲೂನು ಹಿಡಿದು, ಪಾನಿ ಪೂರಿ ತಿನ್ನುತ್ತ, ಐಸ್‌ಕ್ರೀಂ ಮೆಲ್ಲುತ್ತ ಜಗ್ಗಲಿಗೆ ಸದ್ದಿಗೆ ಪುಳಕಗೊಳ್ಳುತ್ತ, ನೆನಪುಗಳೇ ಮೈದಳೆದವರಂತೆ ಹೊರಟಿದ್ದರು.

ಎಲ್ಲಿ ನೋಡಿದರೂ ಜನ ಜನ ಜನ. ಮೊಬೈಲ್ ಹೊಡೆದುಕೊಂಡರೂ ಕೇಳಿಸದಷ್ಟು ವಾದ್ಯವೃಂದದ ಸದ್ದು. ಅಲ್ಲೆಲ್ಲೋ ಸುಗಮ ಸಂಗೀತ. ಇಲ್ಲೆಲ್ಲೋ ನಾಟಕ. ಮತ್ತೆಲ್ಲೋ ವಿಚಾರ ಸಂಕಿರಣ. ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ, ನಡುವೆ ಎಲ್ಲೋ ಯಾತ್ರೆ ಹೊರಟ ಮನಸುಗಳು. ಎಲ್ಲೆಡೆ ಸಾವಿರಾರು ಕನಸುಗಳು. ಉತ್ಸವ ಎಲ್ಲರನ್ನೂ ಎಳೆ ತಂದಿತ್ತು. ಒಂದೆಡೆ ಕೂರಿಸಿತ್ತು. ಮಧುರ ನೆನಪುಗಳ ಬುತ್ತಿ ಬಿಚ್ಚಿತ್ತು. ಅತಿ ಮಧುರ ನೆನಪುಗಳ ಬುತ್ತಿ ಕಟ್ಟಿ ಕೊಟ್ಟಿತ್ತು. ಫೊಟೊ ತೆಗೆಯುವುದು, ತೆಗೆಸಿಕೊಳ್ಳುವುದು, ಗಿಫ್ಟ್ ವಿನಿಮಯ ಮಾಡಿಕೊಳ್ಳುವುದು, ಸುಮ್ಮಸುಮ್ಮನೇ ಅಡ್ಡಾಡುವುದು- ಒಂದೇ ಎರಡೇ!

ಹಗಲು-ರಾತ್ರಿಯನ್ನು ಒಂದು ಮಾಡಿದ್ದ ಜಿಲ್ಲಾ ಉತ್ಸವ ಮನಸ್ಸುಗಳನ್ನು ಬೆಸೆದಿತ್ತು. ಹೃದಯಗಳನ್ನು ಜೋಡಿಸಿತ್ತು. ಕಳೆದುಕೊಂಡ ದಿನಗಳನ್ನು ಹುಡುಕಿಕೊಂಡು ಅಲೆದವರೆಷ್ಟೋ ಜನ. ಇದನ್ನು ಕಳೆದುಕೊಳ್ಳಬಾರದು ಎಂದು ಹಂಬಲಿಸಿದವರೆಷ್ಟೋ ಜನ. ಎಲ್ಲರಿಗೂ ಎಂಥದೋ ಸಂಭ್ರಮ. ಇದಿನ್ನೆಂದೂ ಮತ್ತೆ ಸಿಗದು ಎಂಬಂಥ ಧಾವಂತ. ಉತ್ಸವ ಎಂದರೆ ಸುಮ್ನೇನಾ?

ಬಾ ಮನಸೇ, ಒಮ್ಮೆ ಬಾ. ಕೆಸಿಡಿ ಕ್ರೀಡಾಂಗಣದಲ್ಲಿ ಸುಮ್ಮನೇ ಇಣುಕಿ ನೋಡು. ಸಾವಿರಾರು ಘಟನೆಗಳು ನೆನಪಾಗದಿದ್ದರೆ ಕೇಳು. ಸಾವಿರಾರು ನೆನಪುಗಳ ಬುತ್ತಿ ಗಂಟು ಬಿಚ್ಚಿಕೊಳ್ಳದ್ದಿದರೆ ನೋಡು. ಕ್ಯಾಂಪಸ್‌ನ ಮೋಡಿ ಎಲ್ಲರನ್ನೂ ಆವರಿಸುತ್ತದೆ. ನೀನು ಎಲ್ಲೇ ಹೋಗು, ಎಲ್ಲೇ ಇರು, ನೀರಿನಾಳದಿಂದ ಚಿಮ್ಮಿ ಬರುವ ಗುಳ್ಳೆಯಂತೆ ನೆನಪುಗಳು ಮನದಾಳದಿಂದ ಉಕ್ಕುತ್ತವೆ. ಇದ್ದಕ್ಕಿದ್ದ ಹಾಗೆ ಮನಸ್ಸು ಹಲಗೆಯಾಗುತ್ತದೆ. ಕಾಣದ ದೂರದಿಂದ ಜಗ್ಗಲಿಗೆಯ ಧ್ವನಿ ಕೇಳತೊಡಗುತ್ತದೆ.

ಮನಸ್ಸು ಹಬ್ಬವಾಗುತ್ತ ಹೋಗುತ್ತದೆ.

- ಚಾಮರಾಜ ಸವಡಿ
(೧. ಏಳು ವರ್ಷಗಳ ನಂತರ, ಎರಡು ವರ್ಷಗಳ ಹಿಂದೆ, ಧಾರವಾಡದಲ್ಲಿ ನಡೆದ ಜಿಲ್ಲಾ ಉತ್ಸವದ ಮೆಲುಕು ಇದು.
೨. ಜಗ್ಗಲಿಗೆ: ಇದು ಚಕ್ಕಡಿಯ ಗಾಲಿಯಷ್ಟು ಅಗಲದ ಚರ್ಮವಾದ್ಯ. ಅದರ ರಣನವೇ ಅದ್ಭುತ. ಧಾರವಾಡದ ಜಗ್ಗಲಿಗೆ ತಂಡ ಜಗತ್ಪ್ರಸಿದ್ಧ)

ಕತ್ತಲೆಯಿಂದ ಹೊರ ಬಂದ ಖಾದಿ

0 ಪ್ರತಿಕ್ರಿಯೆ

ಇತ್ತೀಚಿನ ವರ್ಷಗಳ ಹೊಸ ಭರವಸೆ ಖಾದಿ ಗ್ರಾಮೋದ್ಯೋಗ. ಎಲ್ಲ ಬಗೆಯ ತಾಂತ್ರಿಕ ಸವಾಲುಗಳ ನಡುವೆಯೂ ತನ್ನ ಅಸ್ತಿತ್ವ ಉಳಿಸಿಕೊಂಡಿದ್ದಲ್ಲದೇ ಹೊಸ ರೀತಿಯಿಂದ ಅದನ್ನು ಸಮರ್ಥವಾಗಿ ಎದುರಿಸುತ್ತಿರುವ ಈ ಉದ್ಯಮ ಈಗ ಯುವಪೀಳಿಗೆಯನ್ನೂ ಆಕರ್ಷಿಸಿದೆ. ಬೆಂಗಳೂರಿನಲ್ಲಿ ಖಾದಿ ಹಾಗೂ ಕರಕುಶಲ ವಸ್ತುಗಳು ಭರ್ಜರಿಯಾಗಿ ಮಾರಾಟವಾಗುತ್ತಿವೆ. ಕತ್ತಲ ಮೂಲೆಯಲ್ಲಿ ಕೂತು ಬದುಕು ನೇಯ್ದುಕೊಳ್ಳುತ್ತಿರುವ ಸಾವಿರಾರು ಬಡಕಾರ್ಮಿಕರು ಜಾಗತೀಕರಣದ ಸವಾಲನ್ನು ಎದುರಿಸಿ ಗೆದ್ದುದು ಖಂಡಿತ ಭರವಸೆಯ ಸಂಕೇತ. ಆದರೆ ರಾಜ್ಯದ ಮೂಲೆಮೂಲೆಯಲ್ಲಿ ಸದ್ದಿಲ್ಲದೇ ಹಬ್ಬುತ್ತಿರುವ ಖಾದಿ ಉದ್ಯಮಕ್ಕೆ ಸರ್ಕಾರದಷ್ಟೇ ಅಲ್ಲ, ನಮ್ಮ-ನಿಮ್ಮ ಆಸರೆಯೂ ಬೇಕಿದೆ...

'ಈ ಶರಟು ತೊಟ್ಟಾಗಿನ ಆನಂದವೇ ಬೇರೆ' ಎಂದ ಗೆಳೆಯ.

ಆತ ಬೆಂಗಳೂರಿನ ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗಿ. ಬಡ ಮನೆತನದಿಂದ ಬಂದಿದ್ದರೂ ಮಾಹಿತಿ ತಂತ್ರಜ್ಞಾನ ಈಗ ಕಂಡು-ಕೇಳರಿಯದ ಸಮೃದ್ಧಿ ತಂದುಕೊಟ್ಟಿದೆ. ರೊಟ್ಟಿ ಜಗಿಯುತ್ತಿದ್ದವನ ಬಾಯಿಗೆ ಪಿಜ್ಜಾ ಬಂದಿದೆ. ಸೌತೆಕಾಯಿ ಜಾಗದಲ್ಲೀಗ ಸೇಬು. ಅಡಿಕೆ ಹೋಳಿನ ಜಾಗದಲ್ಲಿ ಮಿಂಟ್ ಬಂದು ಕೂತಿದೆ. ಮೈತುಂಬ ಸೆಂಟಿನ ಘಂ.

ಆದರೆ ಆರೇ ತಿಂಗಳಲ್ಲಿ ಎಲ್ಲವೂ ಬೇಸರ ಹುಟ್ಟಿಸಿದವು. ಏನಾಗಿ ಹೋಯಿತು? ಎಂಬ ಗೊಂದಲದಲ್ಲಿದ್ದವನನ್ನು ಬೆಂಗಳೂರಿನಲ್ಲಿ ನಡೆದ ಖಾದಿ ಮೇಳ ಸೆಳೆಯಿತು. ಫ್ಯಾಶನ್‌ಗೆಂದು ಖರೀದಿಸಿದ್ದ ಎರಡು ಖಾದಿ ಅಂಗಿಗಳು ಅವನ ಮನಸ್ಸನ್ನು ಬದಲಾಯಿಸಿವೆ ಎಂದರೆ ನಂಬಲು ನಿಮಗೆ ಕಷ್ಟವಾಗಬಹುದು.

’ಹೌದು ಮಾರಾಯ. ಈ ಶರಟು ತೊಟ್ಟಾಗಿನ ಆನಂದವೇ ಬೇರೆ’ ಅನ್ನುತ್ತಾನೆ ಈಗ. ರಜೆಗೆಂದು ಊರಿಗೆ ಬಂದರೆ ಖಾದಿ ಭಂಡಾರಗಳನ್ನು ಸುತ್ತುತ್ತಾನೆ. ನೋಡಲು ಸಾದಾ, ಮುಟ್ಟಲು ಒರಟು ಅನ್ನಿಸಿದರೂ ಖಾದಿ ಅಮ್ಮನಂತೆ ಸಂತೈಸುತ್ತದೆ ಅನ್ನುತ್ತಾನೆ. ಖಾದಿ ಭಂಡಾರಗಳಲ್ಲಿ ಸಿಗುವ ಕಷಾಯದ ಪುಡಿ, ಗಂಧದ ಕಡ್ಡಿಗಳು, ಅಪ್ಪಟ ಜೇನುತುಪ್ಪ, ಮೆತ್ತನೆಯ ವಿವಿಧ ಬಣ್ಣದ ಅಂಗಿಗಳು, ಪ್ಯಾಂಟ್‌ಗಳು, ಖಾದಿ ಜೀನ್ಸ್‌ಗಳು, ಲುಂಗಿ, ಟವೆಲ್, ಕರವಸ್ತ್ರ, ಬೆಡ್ ಶೀಟ್, ಚಪ್ಪಲಿ- ಹೀಗೆ ತರಹೇವಾರಿ ಉತ್ಪನ್ನಗಳನ್ನು ಖರೀದಿಸುತ್ತ ’ಎಲ್ಲವೂ ಎಷ್ಟೊಂದು ಸೋವಿ, ಎಷ್ಟು ಆರಾಮ’ ಎಂದು ಉದ್ಗರಿಸುತ್ತಾನೆ.

ಮನಸ್ಸುಗಳನ್ನು ಖಾದಿ ಗೆದ್ದಿದ್ದು ಹೀಗೆ.

ಇವತ್ತು ಬೆಂಗಳೂರೊಂದೇ ಅಲ್ಲ, ದೊಡ್ಡ ನಗರಗಳಲ್ಲಿ ಏರ್ಪಡಿಸಲಾಗುವ ಖಾದಿ ಮೇಳಗಳು ಅಪಾರ ಜನಪ್ರಿಯತೆ ಗಳಿಸಿವೆ ಎಂಬುದು ಅತಿಶಯೋಕ್ತಿಯಲ್ಲ. ಜನ ನಿಧಾನವಾಗಿ ಖಾದಿ ಹಾಗೂ ಗೃಹೋತ್ಪನ್ನಗಳತ್ತ ಹೊರಳುತ್ತಿದ್ದಾರೆ. ಮಿಲ್ ಉತ್ಪನ್ನಗಳು ಎಷ್ಟೇ ಮಿರಮಿರ ಮಿಂಚಲಿ, ಎಷ್ಟೇ ನುಣುಪಾಗಿರಲಿ, ಅವುಗಳ ಜಾಹಿರಾತು ಎಷ್ಟೇ ಚಿತ್ತಾಕರ್ಷಕವಾಗಿರಲಿ, ಅವೇನೂ ಇಲ್ಲದ ಒರಟು ಖಾದಿ ಮತ್ತೆ ಸಂಚಲನೆ ಉಂಟು ಮಾಡುತ್ತಿದೆ.

ಇದಕ್ಕೆ ಕಾರಣ ಹುಡುಕುವುದು ಕೊಂಚ ಕಷ್ಟ. ಖಾದಿಯಲ್ಲಿ ತಂತ್ರಜ್ಞಾನ ಹಾಗೂ ರಾಸಾಯನಿಕಗಳ ಬಳಕೆ ಕಡಿಮೆ ಎಂಬ ಕಾರಣಕ್ಕೆ ಇರಬಹುದು. ಅದು ಹೆಚ್ಚು ನೈಸರ್ಗಿಕ ಎಂಬ ಕಾರಣವಾಗಿರಬಹುದು. ಒಂದು ಬೃಹತ್ ಸಾಮ್ರಾಜ್ಯವನ್ನು ಓಡಿಸಲು ಪ್ರೇರಕವಾಗಿತ್ತು ಎಂಬುದಕ್ಕೆ ಇರಬಹುದು. ಒಟ್ಟಿನಲ್ಲಿ ಖಾದಿ ಹಾಗೂ ಇತರ ಗೃಹ ಉತ್ಪನ್ನಗಳಿಗೆ ಮತ್ತೆ ಬೇಡಿಕೆ ಹೆಚ್ಚತೊಡಗಿವೆ. ನಮ್ಮ ಹೊಸ ಪೀಳಿಗೆ ಖಾದಿಯಲ್ಲಿ ದೇಶದ ಸಂಸ್ಕೃತಿ ಕಂಡಿದೆ. ಅಮ್ಮನ ಮಡಿಲಿನಂಥ ನೆಮ್ಮದಿ ಕಂಡುಕೊಂಡಿದೆ. ಇದು ನಮಗೆ ಹಿತಕರ ಎಂಬ ಭಾವನೆ ಹುಟ್ಟಿಸಿದೆ.

ಇವಕ್ಕೆ ಪೂರಕವಾಗಿ ಎಂಬಂತೆ ಎರಡು ಹೊಸ ಬೆಳವಣಿಗೆಗಳು ಧಾರವಾಡದಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸಂಭವಿಸಿವೆ.

ಮೊದಲನೆಯದು, ಧಾರವಾಡದ ಸುಭಾಷ್ ರಸ್ತೆಯಲ್ಲಿರುವ ಖಾದಿ ಭಂಡಾರ ಅಂಗಡಿಗೆ ೭೫ ವರ್ಷಗಳು ತುಂಬಿದ್ದು. ಆಗಸ್ಟ್ ೧, ೧೯೩೦ರ್‍ಲಲಿ ಪ್ರಾರಂಭವಾಗಿರುವ ಈ ಅಂಗಡಿ ಅಂದಿನಿಂದ ಇಂದಿನವರೆಗೆ ಕೇವಲ ಮಾನವ ಶ್ರಮದಿಂದ ತಯಾರಿಸಿದ ಉತ್ಪನ್ನಗಳನ್ನೇ ಮಾರುತ್ತ ಬಂದಿದೆ. ಕಳೆದ ೭೫ ವರ್ಷಗಳಲ್ಲಿ, ಗೃಹ ಕೈಗಾರಿಕೆಗಳಿಗೆ ಎದುರಾದ ಎಲ್ಲ ಸವಾಲುಗಳನ್ನು ಸಮರ್ಥವಾಗಿ ಎದುರಿಸುತ್ತ ತನ್ನ ಅಸ್ತಿತ್ವವನ್ನು ಕಾಯ್ದುಕೊಂಡು ಬಂದಿದೆ. ’ಇನ್ನು ಗಾಂಧಿ ಕಾಲ ಮುಗೀತು ಬಿಡ್ರಿ’ ಎಂಬ ಉದಾಸೀನತೆಗೆ ತಕ್ಕ ಉತ್ತರ ಕೊಟ್ಟಿದೆ.

ಎಲ್ಲೆಡೆ ಖಾದಿ ಕೇಂದ್ರಗಳು ಮುಗ್ಗರಿಸುತ್ತಿದ್ದಾಗ ಧಾರವಾಡದ ಈ ಕೇಂದ್ರ ವಾರ್ಷಿಕ ರೂ.೮೫ ಲಕ್ಷ ಉತ್ಪಾದನೆ ಹಾಗೂ ರೂ.೮೦ ಲಕ್ಷ ಮಾರಾಟ ದಾಖಲಿಸಿ ಮುನ್ನುಗ್ಗುತ್ತಿದೆ. ಇಲ್ಲಿ ಇವತ್ತಿಗೂ ತಿಂಗಳಿಗೆ ಸರಾಸರಿ ರೂ.೩ ಲಕ್ಷ ವಹಿವಾಟು ನಡೆಯುತ್ತದೆ. ಅತ್ಯುತ್ತಮ ಗುಣಮಟ್ಟದ ಡಿ.ಟಿ. ಬಟ್ಟೆ, ಟವೆಲ್, ರಾಷ್ಟ್ರಧ್ವಜ, ಲುಂಗಿ, ಅಂಗಿ ಮತ್ತು ಪ್ಯಾಂಟ್ ಬಟ್ಟೆ, ಜುಬ್ಬಾ, ರೆಡಿಮೇಡ್ ಅಂಗಿ, ಟಾಪ್‌ಗಳು, ಬಿಜಲಿ ಶರ್ಟಿಂಗ್, ಕಾಲ್ಹಾಸುಗಳು, ಗುಣಮಟ್ಟದ ರಗ್‌ಗಳು, ನೆಲ ಒರೆಸುವ ಬಟ್ಟೆಗಳು, ಮಹಿಳೆಯರ ಜೀನ್ಸ್, ಗಾಂಧಿ ಟೊಪ್ಪಿಗೆ, ಊದುಬತ್ತಿ, ಸುಗಂಧ ದ್ರವ್ಯಗಳು, ಜೇನುತುಪ್ಪ, ಶ್ಯಾಂಪೂ, ಆರೋಗ್ಯಕಾರಿ ಸಾವಯವ ಪೇಯಗಳು, ಗಂಧದ ಹಾರಗಳು, ಚರ್ಮದ ಚಪ್ಪಲಿಗಳು- ಹೀಗೆ ಹಲವಾರು ನಿತ್ಯೋಪಯೋಗಿ ವಸ್ತುಗಳನ್ನು ಈ ಕೇಂದ್ರ ತಯಾರಿಸಿ ಮಾರುತ್ತದೆ.

ಇಂಥದೇ ಇನ್ನೊಂದು ಪ್ರಮುಖ ಬೆಳವಣಿಗೆ ಸಂಭವಿಸಿರುವುದು ಧಾರವಾಡದ ಶ್ರೀ ಧರ್ಮಸ್ಥಳ ಮಂಜುನಾಥ ಎಂಜನಿಯರಿಂಗ್ ಕಾಲೇಜಿನಲ್ಲಿ ಹೇಳಿ ಕೇಳಿ ಶ್ರೀಮಂತರ ಮಕ್ಕಳಿರುವ ಕಾಲೇಜದು. ಆದರೂ ಅಲ್ಲಿಯ ವಿದ್ಯಾರ್ಥಿಗಳಲ್ಲಿ ಹಾಗೂ ಅಧ್ಯಾಪಕ ವರ್ಗದಲ್ಲಿ ಖಾದಿ ಪ್ರೇಮ ಮೊಳೆತಿದೆ. ಪ್ರತಿ ಶುಕ್ರವಾರ ಈ ಕಾಲೇಜಿನ ಬಹುತೇಕ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಗೂ ಅಧ್ಯಾಪಕರು ಶುದ್ಧ ಖಾದಿ ಬಟ್ಟೆಗಳನ್ನೇ ಧರಿಸುತ್ತಾರೆ. ಆ ಮೂಲಕ ಬಡ ನೇಕಾರರು ಹಾಗೂ ರೈತರ ಶ್ರಮಕ್ಕೆ ತಮ್ಮ ಬೆಂಬಲ ನೀಡುತ್ತಿದ್ದಾರೆ.

ಸರ್ಜಾಶಂಕರ ಹರಳಿಮಠ ಎಂಬ ಉತ್ಸಾಹಿ ಯುವಕ ಬಹುರಾಷ್ಟ್ರೀಯ ಕಂಪನಿಯ ಕೆಲಸ ಬಿಟ್ಟು ಶಿವಮೊಗ್ಗ ನಗರದಲ್ಲಿ ಪ್ರಾರಂಭಿಸಿರುವ ’ಸಂಸ್ಕೃತಿ’ ಹೆಸರಿನ ದೇಸಿ ಅಂಗಡಿಯ ಜನಪ್ರಿಯತೆ ಇನ್ನೊಂದು ಜ್ವಲಂತ ಉದಾಹರಣೆ.

ಹಾಗೆ ನೋಡಿದರೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಖಾದಿ ವಸ್ತುಗಳನ್ನು ಮಾರುವ ಅಂಗಡಿಗಳಿವೆ ಹಾಗೂ ಬಹಳಷ್ಟು ಅಂಗಡಿಗಳು ಲಾಭದಲ್ಲಿವೆ. ಎಲ್ಲಕ್ಕಿಂತ ಮುಖ್ಯ ಎಂದರೆ, ಇವೆಲ್ಲ ಉತ್ಪನ್ನಗಳು ಸಿದ್ಧವಾಗುವುದು ಗೃಹ ಕೈಗಾರಿಕೆಯಡಿ. ಬಹುತೇಕ ಉತ್ಪನ್ನಗಳು ಗ್ರಾಮೀಣ ಮಹಿಳೆಯರ ಕೈಯಿಂದ ತಯಾರಾದವುಗಳು. ದೂರದ ಹಳ್ಳಿಯ ಕತ್ತಲ ಮೂಲೆಯಲ್ಲಿ ಕೂತು ಸಿದ್ಧಪಡಿಸಿರುವ ಈ ವಸ್ತುಗಳು ಜಾಗತೀಕರಣದ ಸವಾಲನ್ನು ಸಮರ್ಥವಾಗಿ ಎದುರಿಸಿ ಗೆದ್ದಿದ್ದಲ್ಲದೇ ಸಾವಿರಾರು ಬಡಜನರನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸಿವೆ ಎಂಬುದು ಅಚ್ಚರಿಯ ಸಂಗತಿ.

ಆದರೆ ಲಾಭದ ದೃಷ್ಟಿ ಮಾತ್ರ ಇದರೆ ಈಗ ಬೆಳಗಾವಿ ನೇಕಾರರು ಎದುರಿಸುತ್ತಿರುವಂಥ ಸಮಸ್ಯೆಗಳು ಉದ್ಭವಿಸುತ್ತವೆ. ಗೃಹ ಕೈಗಾರಿಕೆಗಳು ಬಂಡವಾಳಶಾಹಿಗಳ ಕೈಗೆ ಸಿಕ್ಕರೆ ಏನಾಗುತ್ತದೆ ಎಂಬುದಕ್ಕೆ ಬೆಳಗಾವಿ ನೇಕಾರರ ದುಃಸ್ಥಿತಿ ಅತ್ಯುತ್ತಮ ಉದಾಹರಣೆ. ಆದ್ದರಿಂದ ಸಹಕಾರ ತತ್ವದಡಿ ಖಾದಿ ಉತ್ಪನ್ನಗಳ ಉತ್ಪಾದನೆ ಮತ್ತು ಮಾರಾಟ ನಡೆಯುವಂಥ ವ್ಯವಸ್ಥೆ ಜಾರಿಗೆ ಬರಬೇಕಿದೆ. ಆಗ ಮಾತ್ರ ಹಳ್ಳಿಹಳ್ಳಿಗಳಲ್ಲಿ ಹರಡಿಹೋಗಿರುವ ಬಡಜನರಿಗೆ ಲಾಭವಾಗುತ್ತದೆ.

ಏಕೆಂದರೆ ಎಂಥ ತಂತ್ರಜ್ಞಾನವೇ ಬರಲಿ, ಕೈಯಿಂದ ಮಾಡಿರುವ ಉತ್ಪನ್ನಗಳಿಗೆ, ಮಾನವ ಶ್ರಮದಿಂದ ಸಿದ್ಧವಾದ ವಸ್ತುಗಳಿಗೆ ಬೇಡಿಕೆ ಇದ್ದೇ ಇರುತ್ತದೆ. ರಾಜ್ಯಾದ್ಯಂತ ಹರಡಿರುವ ಖಾದಿ ಕೇಂದ್ರಗಳ ಉತ್ಪನ್ನಗಳನ್ನು ಖರೀದಿಸುವ ಮೂಲಕ ಜಾಗತೀಕರಣದ ಸವಾಲಿಗೆ ನಾವು ಉತ್ತರ ಕೊಡಲು ಸಾಧ್ಯ. ಹಾಸ್ಟೆಲ್‌ಗಳು, ಆಸ್ಪತ್ರೆಗಳು, ಶಾಲೆಗಳು, ಕಚೇರಿಗಳು ತಮ್ಮಲ್ಲಿ ಕೆಲಸ ಮಾಡುವ ಪ್ರತಿ ವ್ಯಕ್ತಿಗೆ ಒಂದು ಜತೆ ಹಾಗೂ ನಮ್ಮನಮ್ಮ ಮನೆಗಳಲ್ಲಿ ವರ್ಷಕ್ಕೆ ಒಂದು ಜತೆ ಖಾದಿ ಬಟ್ಟೆ ಖರೀದಿಸಿದರೂ ಸಾಕು, ಲಕ್ಷಾಂತರ ಜನ ನೇಕಾರರು, ರೈತರು ಬದುಕುತ್ತಾರೆ. ಹೊಸದೊಂದು ನೆಮ್ಮದಿಯ ಜೀವನಕ್ಕೆ ಅದು ನಾಂದಿಯಾಗುತ್ತದೆ.

ಹೋಟೆಲ್ ತಿಂಡಿಗಿಂತ ಅಮ್ಮನ ಕೈಯಡುಗೆ ಇಷ್ಟವಾಗುವುದು ಇಂಥ ಕಾರಣಕ್ಕೆ!

- ಚಾಮರಾಜ ಸವಡಿ

ಆರುಷಿ ಪ್ರಕರಣ: ಮಾಧ್ಯಮದ ಹೊಣೆಗೇಡಿತನ

14 Jul 2008

0 ಪ್ರತಿಕ್ರಿಯೆ
ಕೊಲೆಯಾದ ಆರುಷಿ

ಇದೊಂದು ನಾಚಿಕೆಗೇಡಿತನದ ಘಟನೆ.

ದೆಹಲಿಯ ಒಂಬತ್ತನೇ ತರಗತಿ ವಿದ್ಯಾರ್ಥಿನಿ ಆರುಷಿ ತಲ್ವಾರ್‌ ಕೊಲೆ ಪ್ರಕರಣವನ್ನು ಮಾಧ್ಯಮಗಳು ಬಿಂಬಿಸಿದ ರೀತಿ, ತಾವೇ ತನಿಖೆದಾರರಂತೆ ವರ್ತಿಸಿದ್ದು, ತಂದೆಯನ್ನೇ ಕೊಲೆಗಾರ ಹಾಗೂ ವ್ಯಭೀಚಾರಿ ಸ್ಥಾನದಲ್ಲಿ ನಿಲ್ಲಿಸಿದ್ದು, ದಿನ ನಿತ್ಯ ಘಟನೆಯನ್ನು ಚ್ಯೂಯಿಂಗ್‌ಗಮ್‌ನಂತೆ ಅಗೆದಿದ್ದು ಎಲ್ಲವೂ ರಾಜೇಶ್‌ ತಲ್ವಾರ್‌ ಜಾಮೀನಿನೊಂದಿಗೆ ಅಂತ್ಯ ಕಂಡಿವೆ. ಮಾಧ್ಯಮವನ್ನು ತಪ್ಪಿತಸ್ಥನ ಸ್ಥಾನದಲ್ಲಿ ನಿಲ್ಲಿಸಿವೆ.

ಸಂಪದದಲ್ಲಿ ಮಾಧ್ಯಮದ ದುಂಡಾವರ್ತನೆ ಬಗ್ಗೆ ಚರ್ಚೆಯಾಗಿದ್ದನ್ನು ಸ್ಮರಿಸಬಹುದು. ಅದಕ್ಕೆ ಜ್ವಲಂತ ಉದಾಹರಣೆ ಈಗ ರಾಜೇಶ್‌ ತಲ್ವಾರ್‌ ಜಾಮೀನಿನ ಮೂಲಕ ದೊರಕಿದೆ.

ಆರುಷಿ ಕೊಲೆ ಪ್ರಕರಣದ ಮುಖ್ಯ ಘಟನಾವಳಿಯನ್ನು ಬಿಂಬಿಸುವ ಮೂಲಕ ಮಾಧ್ಯಮದ ಹೊಣೆಗೇಡಿತನವನ್ನು ನಿಮ್ಮ ಮುಂದಿಡಲು ಇಚ್ಛಿಸುತ್ತೇನೆ.

೧. ದೆಹಲಿ ಪಕ್ಕದ ನೊಯ್ಡಾದ ತಮ್ಮ ನಿವಾಸದಲ್ಲಿ ಮೇ ೧೬ರಂದು ಅರುಶಿ ಸತ್ತುಬಿದ್ದಿರುವುದು ಪತ್ತೆಯಾಗಿತ್ತು. ಆಕೆಯ ಹಣೆ, ಭುಜ ಮತ್ತು ಎದೆಗೆ ತಿವಿತದ ಗಾಯಗಳಾಗಿದ್ದವು. ಅರುಶಿ ಕೊಲೆಯ ಬಗ್ಗೆ ಪೊಲೀಸರು ಆಕೆಯ ಮನೆಯ ಕೆಲಸಗಾರ ಹೇಮರಾಜ್‌ನನ್ನು ತಕ್ಷಣಕ್ಕೆ ಶಂಕಿಸಿದರೂ, ತಲ್ವಾರ್ ಮನೆಯ ಮೇಲ್ಛಾವಣಿಯಲ್ಲಿ ಹೇಮರಾಜ್ ಶವ ಕೂಡ ಪತ್ತೆಯಾಗಿದ್ದು, ಪೊಲೀಸರಿಗೆ ಒಗಟಾಗಿತ್ತು.

೨. ಎರಡು ದಿನಗಳ ನಂತರ ಅರುಶಿ ಮತ್ತು ಮನೆಸೇವಕ ಹೇಮರಾಜ್ ಹತ್ಯೆ ಪ್ರಕರಣದಲ್ಲಿ ಅರುಶಿಯ ತಂದೆ ಡಾ.ರಾಜೇಶ್ ತಲ್ವಾರ್ ಅವರನ್ನು ನೊಯ್ಡಾ ಪೊಲೀಸರು ಬಂಧಿಸಿದರು. ವಿಚಾರಣೆ ವೇಳೆ ತಲ್ವಾರ್ ಅನೇಕ ವೈರುದ್ಧ್ಯದ ಹೇಳಿಕೆಗಳನ್ನು ನೀಡಿದ್ದರೆಂದು ಹೇಳಲಾಯಿತು. ಡಾ. ತಲ್ವಾರ್ ಜತೆ ಕೆಲಸ ಮಾಡುತ್ತಿದ್ದು ಅವರ ಜತೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದರೆಂದು ಶಂಕಿಸಲಾಗಿರುವ ಡಾ.ಅನಿತಾ ದುರಾನಿ ಅವರನ್ನು ಕೂಡ ಬಂಧಿಸಿ, ಸಹಆರೋಪಿಯೆಂದು ಹೆಸರಿಸಲಾಯಿತು.

ಅರುಶಿ ಕೊಲೆಗೆ ಗೌರವ ಹತ್ಯೆ ಅಥವಾ ಅತಿಯಾದ ವಾಂಛೆ ಪ್ರೇರೇಪಣೆಯೆಂದು ಪೊಲೀಸರು ಅಧಿಕೃತವಾಗಿ ಖಚಿತಪಡಿಸಿದರು. ತಮ್ಮ ಅಕ್ರಮ ಸಂಬಂಧದ ಬಗ್ಗೆ ಅರುಶಿ ತಿಳಿದಿದ್ದ ಸಂಗತಿಯು ತಲ್ವಾರ್‌ಗೆ ಸಹ್ಯವಾಗದೇ ಹತ್ಯೆ ಮಾಡಿರಬಹುದೆಂದು ಶಂಕೆ ವ್ಯಕ್ತಪಡಿಸಲಾಯಿತು.

೩. ಒಂದು ವಾರದ ನಂತರ ರಾಕೇಶ್ ತಲ್ವಾರ್ ಮೊದಲ ಬಾರಿಗೆ ಮಾಧ್ಯಮದೆದುರು ಮಾತಾಡಿ, ಮಗಳ ಕೊಲೆಗೆ ಸಂಬಂಧಿಸಿದಂತೆ ತನಗೇನು ತಿಳಿದಿಲ್ಲ ಎಂದು ಹೇಳಿದರು. ಆದರೆ, ಇದಕ್ಕೂ ಮುಂಚೆ ರಾಕೇಶ್ ದಂಪತಿಗಳು ನೋಯ್ಡಾ ಪೊಲೀಸರಿಗೆ ನೀಡುತ್ತಿದ್ದ ವಿಭಿನ್ನ ಹೇಳಿಕೆಗಳು ಅವರ ಮೇಲೆಯೇ ಸಂಶಯ ಹುಟ್ಟಿಸಿವೆ ಎಂದು ಮಾಧ್ಯಮಗಳು ವರದಿ ಮಾಡಿದವು.

೪. ತನ್ನ ಪುತ್ರಿ ಅರುಷಿ ಕೊಲೆಯ ಅರೋಪ ಹೊತ್ತಿರುವ ರಾಕೇಶ್ ತಲ್ವಾರ್‌ ತಮ್ಮೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆಂಬ ಆರೋಪವನ್ನು ಅವರ ಸಹವೈದ್ಯೆ ಅನಿತಾ ದುರ್ರಾನಿ ತಳ್ಳಿಹಾಕಿದರು. "ಪೊಲೀಸರು ಹೇಳಿರುವ ವಿಚಾರ ಅತ್ಯಂತ ಆಘಾತಕಾರಿಯಾದುದು. ಎಲ್ಲವೂ ಸುಳ್ಳು. ಯಾವುದೂ ಸರಿಯಿಲ್ಲ. ಎಲ್ಲವಿಚಾರಗಳು ಆಧಾರರಹಿತವಾದದ್ದು" ಎಂದು ದುರಾನಿ ಹೇಳಿದರು.

೫. ಮಗಳು ಅರುಷಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಡಾ|ರಾಜೇಶ್ ತಲ್ವಾರ್ ಬೆಂಬಲಕ್ಕೆ ಅವರ ಪತ್ನಿ ಹಾಗೂ ಅವರು ಸಂಬಂಧವಿರಿಸಿಕೊಂಡಿದ್ದಾರೆ ಎನ್ನಲಾದ ಡಾ|ಅನಿತಾ ದುರಾನಿ ನಿಂತಿದ್ದಾರೆ ಎಂದು ವರದಿಯಾಯಿತು.

ರಾಜ್ಯ ಪೊಲೀಸ್ ಇಲಾಖೆ ಅರುಶಿ ಹತ್ಯೆ ಪ್ರಕರಣವನ್ನು ಸಮರ್ಥವಾಗಿ ಕಂಡುಹಿಡಿಯಲು ಅಸಮರ್ಥವಾಗಿರುವ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಸರಕಾರ ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಸುವಂತೆ ಆಗ್ರಹಿಸಿದ ಹಿನ್ನೆಲೆಯಲ್ಲಿ ಅರುಶಿ ತಲ್ವಾರ್ ಹತ್ಯೆ ಪ್ರಕರಣವನ್ನು ಸಿಬಿಐ ವಹಿಸಿಕೊಂಡಿತು.

ಕೊಲೆಯಲ್ಲಿ ಪ್ರಮುಖ ಆರೋಪಿಗಳಾಗಿರುವ ಆರುಶಿಯ ತಂದೆತಾಯಿಯರ ಹೇಳಿಕೆಗಳಲ್ಲಿ ಧ್ವಂಧ್ವಗಳಿರುವುದನ್ನು ಸಿಬಿ‌ಐ ಗುರುತಿಸಿತು. ಆರುಶಿಯ ಕೊಲೆಯಾದ ದಿನ ಬಾಗಿಲು ಮುಚ್ಚಿತ್ತು. ಹಾಗೂ ಏರ್‌ಕಂಡೀಷನರ್‌ನ ಸದ್ದು ಇತ್ತು. ಇದರಿಂದಾಗಿ ಆರುಶಿಯ ಕಿರಿಚಾಟ ತಮಗೆ ಕೇಳಿಸಿರಲಿಲ್ಲ ಎಂದು ಆರುಶಿಯ ತಂದೆ ರಾಜೇಶ್ ತಲ್ವಾರ್ ಮತ್ತು ತಾಯಿ ನೂಪುರ್ ತಲ್ವಾರ್ ಸಿಬಿ‌ಐ ಎದುರು ಹೇಳಿಕೆ ನೀಡಿದ್ದರು. ಆದರೆ, ಕೊಲೆ ಸಂಭವಿಸಿದ ಸ್ಥಳವಾದ ರೂಮಿನ ಬಾಗಿಲು ಆ ದಿನ ತೆರೆದಂತೇ ಇತ್ತು ಎಂಬ ವಿಷಯ ತನಿಖೆಯಿಂದ ಸಾಬೀತಾಗಿದೆ ಎಂದು ಸಿಬಿ‌ಐ ಸ್ಪಷ್ಟಪಡಿಸಿತು.

ರಾಜೇಶ್ ತಲ್ವಾರ್ ಅವರನ್ನು ಸುಳ್ಳುಪತ್ತೆ ಪರೀಕ್ಷೆಗೂ ಗುರಿಮಾಡಿದರೂ ನಿರೀಕ್ಷಿಸಿದ ವಿಷಯಗಳು ಹೊರಬರಲಿಲ್ಲ. ಕೊಲೆಗೆ ಬಳಸಲಾಗಿದ್ದ ಆಯುಧವನ್ನು ಹುಡುಕುವ ಪ್ರಯತ್ನವೂ ವಿಫಲವಾಯಿತು.

೬. ಅರುಷಿ ತಂದೆ ಡಾ| ರಾಜೇಶ್ ತಲ್ವಾರ್ ಕಂಪೌಂಡರ್ ಆಗಿದ್ದ ಕೃಷ್ಣನನ್ನು ಬುಧವಾರ ಬ್ರೈನ್ ಮ್ಯಾಪಿಂಗ್ ಪರೀಕ್ಷೆಗೆ ಒಳಪಡಿಸಲಾಯಿತು. ಆತನ ಹೇಳಿಕೆಯ ಮೇಲೆ ಸಿಬಿಐ ಅಧಿಕಾರಿಗಳು ರಾಜೇಶ್ ತಲ್ವಾರ್ ನಿವಾಸಕ್ಕೆ ತೆರಳಿದ್ದು ಮರು ಶೋಧ ನಡೆಸಿದರು. ಈ ಹಿನ್ನೆಲೆಯಲ್ಲಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳುವ ನಿಟ್ಟಿನಲ್ಲಿ ಕೃಷ್ಣನನ್ನು ಸುಳ್ಳು ಪತ್ತೆ ಪರೀಕ್ಷೆ ಹಾಗೂ ಮಂಪರು ಪರೀಕ್ಷೆಗೆ ಒಳಪಡಿಸಿದರು.

೭. ನೂತನ ಬೆಳವಣಿಗೆ ಎಂಬಂತೆ ಡಾ.ರಾಜೇಶ್ ತಲ್ವಾರ್ ಅವರ ಮನೆಯ ಮಾಜಿ ಕೆಲಸಗಾರ 24 ವರ್ಷ ಪ್ರಾಯದ ವಿಜಯ್ ಮಂಡಲ್ ಎಂಬಾತನನ್ನು ಸಿಬಿಐ ಬಂಧಿಸಿತು. ತಲ್ವಾರ್ ಅವರ ಪತ್ನಿಯನ್ನು ಮೂರನೇ ಬಾರಿಗೆ ಸುಳ್ಳು ಪತ್ತೆ ಪರೀಕ್ಷೆ ನಡೆಸಿ, ಬಂಧಿಸುವ ಸಾಧ್ಯತೆ ಇರುವುದಾಗಿ ಸಿಬಿಐ ಹೇಳಿತ್ತು.

೮. ಜೂನ್‌ ಕೊನೆಯ ವಾರದಲ್ಲಿ ಡಾ|ರಾಜೇಶ್ ತಲ್ವಾರ್ ಅವರ ಗೆಳತಿ ಡಾ|ಅನಿತಾ ದುರಾನಿ ಬಳಿ ಕೆಲಸ ಮಾಡುತ್ತಿದ್ದ ರಾಜಕುಮಾರ್ ಎಂಬುವನನ್ನು ಸಿಪಿ‌ಐ ಪೊಲೀಸರು ಬಂಧಿಸಿದರು. ಕೃಷ್ಣ ತಾನೇ ಕೊಲೆ ಮಾಡಿದ್ದಾಗಿಯೂ, ಅದಕ್ಕೆ ರಾಜಕುಮಾರ್ ಹಾಗೂ ಮತ್ತೊಬ್ಬನ ಸಹಾಯ ಪಡೆದಿದ್ದಾಗಿಯೂ ಹೇಳಲಾಯಿತು.

ಕೊನೆಗೆ, ರಾಜ್‌ಕುಮಾರ್ ತಪ್ಪಿಪ್ಪಿಕೊಂಡಿರುವುದಾಗಿ ಸಿಬಿಐ ಗಾಜಿಯಾಬಾದ್ ನ್ಯಾಯಾಲಯಕ್ಕೆ ತಿಳಿಸಿತು. ಅರುಶಿ ಹತ್ಯೆ ಪ್ರಕರಣದಲ್ಲಿ ಭಾಗಿ ಎಂಬುದಾಗಿ ಒಪ್ಪಿಕೊಂಡಿರುವ ರಾಜ್‌ಕುಮಾರ್, ಅರುಶಿಯ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿ , ಅದನ್ನು ನಾಶ ಪಡಿಸಿರುವುದಾಗಿ ಒಪ್ಪಿಕೊಂಡ.

ಅರುಷಿ ಕೊಲೆ ಪ್ರಕರಣಕ್ಕೆ ದ್ವೇಷ ಸಾಧನೆ ಕಾರಣ ಎಂಬ ಅಂಶ ರಾಜ್‌ಕುಮಾರ್ ಮೇಲೆ ನಡೆಸಲಾದ ಮಂಪರು ಪರೀಕ್ಷೆಯಲ್ಲಿ ದೃಢಪಟ್ಟಿತು. ಡಾ.ತಲ್ವಾರ್ ಅವರ ಕ್ಲಿನಿಕ್‌ನಲ್ಲಿ ಕಂಪೌಡರ್ ಆಗಿದ್ದ ಕೃಷ್ಣ, ತನ್ನ ಯಜಮಾನನ ಬಗ್ಗೆ ಅಸಮಧಾನಗೊಂಡಿದ್ದ ಮತ್ತು ಅದಕ್ಕಾಗಿ ಅರುಷಿಯನ್ನು ಕೊಲೆ ಮಾಡಲು ಬಯಸಿದ್ದ ಎಂಬ ವಿಚಾರ ಬಹಿರಂಗ ಪಡಿಸಿದ.

೯. ಕೊಲೆಗೆ ಕಾರಣ

ಕೊಲೆ ನಡೆದ ರಾತ್ರಿ ಹೇಮ್‌ರಾಜ್, ತನ್ನನ್ನು, ಕೃಷ್ಣ ಮತ್ತು ಶಂಭು ಎಂಬ ವ್ಯಕ್ತಿಯನ್ನು ಡಾ.ತಲ್ವಾರ್ ಅವರ ಮನೆಯಲ್ಲಿರುವ ತನ್ನ ಕೊಠಡಿಗೆ ಆಹ್ವಾನಿಸಿದ್ದ. ಜೊತೆಯಾಗಿ ಬಿಯರ್ ಕುಡಿಯುತ್ತಿರುವಾಗ ಕೃಷ್ಣ, ಡಾ.ತಲ್ವಾರ್ ಅವರು ತಾನು ಸರಿಯಾಗಿ ಕೆಲಸ ಮಾಡದಿರುವ ಬಗ್ಗೆ ಪೇಶಂಟ್‌ಗಳ ಎದುರಿನಲ್ಲೆ ತನ್ನನ್ನು ಅವಮಾನಿಸಿದರು ಎಂದು ತಿಳಿಸಿದ. ತನ್ನನ್ನು ಕೆಲಸದಿಂದ ತೆಗೆದು ಹಾಕುವುದಾಗಿ ಬೆದರಿಕೆ ಹಾಕಿದ್ದರು. ಇಷ್ಟು ವರ್ಷಗಳಿಂದ ದುಡಿಯುತ್ತಿದ್ದೇನೆ, ಅವರು ನನಗೆ ಹೀಗೆ ಮಾಡಬಹುದೇ? ನಾನು ಈ ಅವಮಾನಕ್ಕೆ ಸೇಡು ತೀರೀಸಿಕೊಳ್ಳಬೇಕು ಎಂದು ಕೃಷ್ಣ ಹೇಳಿದ್ದಾಗಿ ವರದಿಯಾಯಿತು.

ಅವರ ಈ ಮಾತುಕತೆಯನ್ನು ಬಯಲಿಗೆಳೆಯುವುದಾಗಿ ಆರುಷಿ ಬೆದರಿಸಿದ್ದರಿಂದ ಕೃಷ್ಣ ಅವಳ ಗಂಟಲನ್ನು ಕುಕ್ರಿಯಿಂದ ಸೀಳಿದ. ಆದರೆ ಭಯಭೀತ ಹೇಮ್‌ರಾಜ್ ವಿಷಯವನ್ನು ತಲ್ವಾರ್ ಅವರಿಗೆ ತಿಳಿಸುವುದಾಗಿ ಹೆದರಿಸಿದ. ಅಪಾಯದ ಜಾಡು ಹಿಡಿದು, ಕೃಷ್ಣ ಮತ್ತು ರಾಜ್‌ಕುಮಾರ್ ಅವರಿಬ್ಬರು ಅವನನ್ನು ಟೆರೇಸ್ ಮೇಲೆ ಎಳೆದೊಯ್ದು ಕೊಲೆ ಮಾಡಿದರು. ಈ ಕೊಲೆಗಳಲ್ಲಿ ಡಾ.ತಲ್ವಾರ್ ಯಾವುದೇ ಪಾತ್ರ ವಹಿಸಿಲ್ಲ ಎಂಬುದು ಬಯಲಿಗೆ ಬಂದಿತು.

೧೦. ಕೊನೆಗೆ ಜುಲೈ ೧೧ರಂದು ಅರುಷಿ ತಂದೆ ರಾಜೇಶ್ ತಲ್ವಾರ್ ಅವರನ್ನು 10 ಲಕ್ಷ ರೂಪಾಯಿ ಮುಚ್ಚಳಿಕೆಯೊಂದಿಗೆ ಜಾಮೀನು ಮೇಲೆ ಬಿಡುಗಡೆಗೊಳಿಸಲಾಯಿತು. ಇವರ ವಿರುದ್ಧ ಯಾವುದೇ ಪುರಾವೆಗಳನ್ನು ಕಂಡು ಹಿಡಿಯಲು ಸಿಬಿಐ ವಿಫಲವಾಗಿರುವ ಹಿನ್ನೆಲೆಯಲ್ಲಿ ಜಾಮೀನು ನೀಡಲಾಯಿತು.

ಘಟನೆಯ ಮುಖ್ಯ ಅಂಶಗಳಿವು.

ಆದರೆ, ಮಾಧ್ಯಮ ಎಷ್ಟೊಂದು ಹೊಣೆಗೇಡಿತನದಿಂದ ವರ್ತಿಸಿತೆಂದರೆ, ತನ್ನ ಅಕ್ರಮ ಸಂಬಂಧ ಬಯಲಾಗುತ್ತದೆ ಎಂಬ ಭೀತಿಯಿಂದಾಗಿ ಡಾ. ತಲ್ವಾರ್‌ ಮಗಳ ಕೊಲೆ ಮಾಡಿದರು. ಆಕೆಯ ಕುತ್ತಿಗೆ ಸೀಳಿದ್ದು ಅತ್ಯಂತ ಸೂಕ್ಷ್ಮ ಆಯುಧದಿಂದ. ಅದನ್ನು ಪರಿಣಿತ ವೈದ್ಯ ಮಾತ್ರ ಬಳಸಬಲ್ಲ ಎಂದು ವರದಿಯಾಯಿತು. ಇಡೀ ಪ್ರಕ್ರಿಯೆಯಲ್ಲಿ ಡಾ. ತಲ್ವಾರ್‌ ದಂತ ವೈದ್ಯರು, ಅಂತಹ ಶಸ್ತ್ರ ಬಳಸುವ ಪರಿಣಿತಿ ಅವರಿಗೆ ಇರುವುದಿಲ್ಲ ಎಂಬುದನ್ನೇ ಮರೆಮಾಚಲಾಯಿತು.

ಅಷ್ಟೇ ಅಲ್ಲ, ಅಕ್ರಮ ಸಂಬಂಧದ ಜಾಡು ಹಿಡಿದು ಸಹ ವೈದ್ಯೆಯಾದ ಡಾ. ದುರಾನಿ ಅವರ ನಡತೆಯನ್ನು ಶಂಕಿಸಲಾಯಿತು. ತಲ್ವಾರ್‌ ಪತ್ನಿ ಕೂಡ ಎರಡು ತಿಂಗಳುಗಳ ಕಾಲ ತೀವ್ರ ಆಘಾತ ಅನುಭವಿಸಬೇಕಾಯಿತು. ಇಡೀ ಘಟನೆಗೆ ತಾವು ಕಾರಣರಲ್ಲ ಎಂಬುದನ್ನು ಇವರೆಲ್ಲ ಪದೆ ಪದೆ ಹೇಳಿದರೂ, ಅದಕ್ಕೆ ಆದ್ಯತೆ ನೀಡದೇ ಅವರನ್ನು ವಿಲನ್‌ಗಳಂತೆ ಚಿತ್ರಿಸಲಾಯಿತು.

ಎಲ್ಲಕ್ಕಿಂತ ಮುಖ್ಯ, ಕೊಲೆಯೊಂದನ್ನು ರಾಷ್ಟ್ರೀಯ ಘಟನೆಯಂತೆ ಬಿಂಬಿಸಿದ್ದು ಮೊದಲ ಅಕ್ಷರ ಅಪರಾಧ. ಆರುಷಿ ಕೊಲೆಯಾಗಿದ್ದು ನಿಜಕ್ಕೂ ಅತ್ಯಂತ ಹೇಯ ಘಟನೆ. ಅದರಲ್ಲಿ ಅನುಮಾನವೇ ಇಲ್ಲ. ಆದರೆ, ಅದಕ್ಕಿಂತ ಮಹತ್ವದ ಅಪರಾಧಗಳು, ಘಟನೆಗಳು ಇದರಿಂದಾಗಿ ಮಹತ್ವ ಕಳೆದುಕೊಂಡವು. ದೆಹಲಿಯ ಪಕ್ಕದ ಪ್ರದೇಶದಲ್ಲಿ ನಡೆದ ಘಟನೆಯನ್ನು ರಾಷ್ಟ್ರೀಯ ದುರಂತವೆಂಬಂತೆ ಗಂಟೆಗಟ್ಟಲೇ ಪ್ರಸಾರ ಮಾಡಲಾಯಿತು. ಈ ನಡುವೆ ಆತ್ಮಹತ್ಯೆ ಮಾಡಿಕೊಂಡ ರೈತರು, ಏರಿದ ಹಣದುಬ್ಬರ, ಹೆಚ್ಚಿದ ಬೆಲೆ, ಅಧಃಪತನಕ್ಕಿಳಿದ ರಾಜಕೀಯ, ಬಾರದ ಮುಂಗಾರು- ಮುಂತಾದವೆಲ್ಲ ಮರೆಯಾಗಿ ಹೋದವು.

ಈಗ ಡಾ. ತಲ್ವಾರ್‌ಗೆ ಜಾಮೀನು ದೊರೆತಿದೆ. ಮಾಧ್ಯಮವೀರರು ಕನಿಷ್ಠಪಕ್ಷ ನಾಚಿಕೆ ಕೂಡ ಪಟ್ಟುಕೊಳ್ಳದೆ ಬೇರೆ ಸುದ್ದಿಗಳನ್ನು ಹುಡುಕಿಕೊಂಡು ಹೊರಟಿದ್ದಾರೆ. ಯಾರಲ್ಲಿಯೂ ಒಂದು ಪ್ರಾಮಾಣಿಕ ಪಶ್ಚಾತ್ತಾಪ, ತಾವು ಎಡವಿದ್ದನ್ನು ಒಪ್ಪಿಕೊಳ್ಳುವ, ಕ್ಷಮೆ ಯಾಚಿಸುವ ಸೌಜನ್ಯ ಕಾಣಬರುತ್ತಿಲ್ಲ.

ನಿಜವಾದ ದುರಂತವೆಂದರೆ ಇದು.

- ಚಾಮರಾಜ ಸವಡಿ

(೧೩ ಜುಲೈ ೨೦೦೮)

ಅಂಕಲ್‌ ಆಫೀಸ್‌ನಲ್ಲಿ, ಆಂಟಿ ಟಾಕೀಸ್‌ನಲ್ಲಿ

4 ಪ್ರತಿಕ್ರಿಯೆ
ಹಸಿರು ದೀಪ ಕಾಣಿಸಿತು.

ಇದ್ದಕ್ಕಿದ್ದಂತೆ ವಾಹನಗಳು ರಭಸದಿಂದ ನುಗ್ಗಿದವು. ಪ್ರತಿಯೊಬ್ಬರಿಗೂ ಮುಂದಿರುವ ವಾಹನ ಹಿಂದೆ ಹಾಕುವ ಉಮೇದು. ನಾ ಮುಂದು, ತಾ ಮುಂದು ಎಂಬ ಮೇಲಾಟ. ಎಲ್ಲರೂ ಒಮ್ಮೆಲೇ ಮುಂದೆ ಹೋಗಬೇಕೆಂದಾಗ ಯಾರಿಗೂ ಮುಂದೆ ಹೋಗಲು ಆಗುವುದಿಲ್ಲ. ಪ್ರತಿಯೊಬ್ಬರೂ ಇನ್ನೊಬ್ಬರಿಗೆ ಅಡ್ಡವಾಗುತ್ತಾರೆ. ಪ್ರತಿಯೊಬ್ಬರಿಗೂ ಇನ್ನೊಬ್ಬರ ಮೇಲೆ ಅನಗತ್ಯ ದ್ವೇಷ. ಇವನನ್ನು ಹಿಂದೆ ಹಾಕಿ ಮುಂದೆ ಹೋಗಬೇಕೆಂಬ ಆತುರ. ಬಂಪರ್‌ಗೆ ಬಾನೆಟ್‌ ಹತ್ತಿರ ಬರುತ್ತದೆ. ದ್ವಿಚಕ್ರ ವಾಹನದ ಹಿಂದಿನ ನಂಬರ್‌ ಪ್ಲೇಟ್‌ಗೆ ಹಿಂದಿನ ದ್ವಿಚಕ್ರ ವಾಹನದ ಮುಂದಿನ ಗಾಲಿಯ ಮಡ್‌ಗಾರ್ಡ್‌ ತಗುಲುವಂತಿರುತ್ತದೆ.

ಆಗ ಕಾಣಿಸುತ್ತದೆ ನಂಬರ್‌ ಪ್ರೇಟ್‌ನಲ್ಲಿ ಚಿಕ್ಕ ಅಕ್ಷರಗಳಲ್ಲಿ ಬರೆದ ಸಂದೇಶ: ’ಛೀ ಪೋಲಿ!’

ಹಿಂದೆ ಹಾಕಬೇಕೆನ್ನುವ ಒತ್ತಡ ಮಾಯವಾಗಿ ಕಿರು ಮುಗುಳ್ನಗೆ ಅರಳುತ್ತದೆ. ಎಲಾ ಕಳ್ಳ, ಭಾರಿ ಸಂದೇಶ ಹಾಕಿಕೊಂಡಿದ್ದಾನೆ ಎಂದು ಮನಸ್ಸು ಮುದಗೊಂಡು, ಆಕ್ಸಿಲೇಟರ್‌ನ ತಿರುವು ಸಡಿಲವಾಗುತ್ತದೆ.

ನೀವೂ ಗಮನಿಸಿರಬಹುದು, ಪುಟ್ಟ ಪುಟ್ಟ ಅಕ್ಷರಗಳಲ್ಲಿ ನಂಬರ್‌ ಪ್ಲೇಟ್‌ ಮೇಲೆ ಅಥವಾ ಆಟೊದ ಹಿಂಭಾಗದಲ್ಲಿ ಬರೆದ ಇಂತಹ ಸಂದೇಶಗಳನ್ನು. ಒಮ್ಮೊಮ್ಮೆ ಆ ಸಂದೇಶ ಓದಲಿಕ್ಕೇ ನನ್ನ ಸ್ಕೂಟಿಯನ್ನು ತೀರಾ ಹತ್ತಿರಕ್ಕೆ ಓಡಿಸುತ್ತೇನೆ. ಕಣ್ಣುಗಳು ಸಿಗ್ನಲ್‌ ದೀಪಗಳಿಗಿಂತ ಈ ಬರಹಗಳನ್ನೇ ಹೆಚ್ಚು ಆಸ್ಥೆಯಿಂದ ನೋಡುತ್ತಿರುತ್ತವೆ. ಒಂದಕ್ಕಿಂತ ಒಂದು ಭಿನ್ನ, ಆಕರ್ಷಕ ಹಾಗೂ ಪೋಲಿ. ಟ್ರಾಫಿಕ್‌ ಜಂಜಡವನ್ನು ಕ್ಷಣಾರ್ಧದಲ್ಲಿ ಪರಿಹರಿಸುವ ಈ ಚೇತೋಹಾರಿ ಅಥವಾ ವಿಕಾರ ಬರವಣಿಗೆಗಳು ಕ್ರಿಯಾಶೀಲತೆಯ ಇನ್ನೊಂದು ಮುಖ ಎಂದೇ ಭಾವಿಸಿದ್ದೇನೆ.

’ಮುತ್ತು ಕೊಡುವವಳು ಬಂದಾಗ ತುತ್ತು ಕೊಟ್ಟವಳನ್ನು ಮರೆಯಬೇಡ’ ಎಂಬ ಬರಹ ಹಳೆಯದಾಯಿತು. ’ಅಂಕಲ್‌ ಆಫೀಸ್‌ನಲ್ಲಿ, ಆಂಟಿ ಟಾಕೀಸ್ನಲ್ಲಿ’ ಕೂಡ ಕೊಂಚ ಹಳೆಯದೇ. ’ಮುತ್ತಿಟ್ಟೀಯಾ ಜೋಕೆ, ಪೊಲೀಸ್‌ ಮಾಮಾ ಬರ್ತಾನೆ’ ಎಂಬುದು ಲೇಟೆಸ್ಟ್‌ ಸ್ಟೈಲ್‌. ’ಹುಡುಗೀರನ್ನ ನಂಬಬೇಡ ಗುರು’ ಎಂಬುದು ಭಗ್ನ ಹೃದಯಿಯ ವ್ಯಥೆ ಬಿಂಬಿಸಿದರೆ, ’ಮೆಚ್ಚಿ ಹೃದಯ ಕೊಟ್ಟೆ, ನಂಬಿ ಕೆಟ್ಟುಬಿಟ್ಟೆ’ ಎಂದು ಇನ್ನೊಬ್ಬ ಹಲುಬಿರುತ್ತಾನೆ. ನಿಮಗೆ ಅರ್ಜೆಂಟ್‌ ಇಲ್ಲದಿದ್ದರೆ, ’ಕಥೆ ಹೇಳುವೆ ನನ್ನ ವ್ಯಥೆ ಹೇಳುವೆ’ ಎಂದು ಬರೆದುಕೊಂಡವನನ್ನು ಮಾತಾಡಿಸಿ ಅವನ ಕಥೆ-ವ್ಯಥೆ ಕೇಳಬಹುದು.

ಬರಹ ದೀರ್ಘವಾದೀತು ಎಂಬ ಭೀತಿಯಿಂದಾಗಿ, ವಿವರಣೆಗೆ ಹೋಗದೇ ಕೆಲ ಮಾದರಿ ಬರಹಗಳನ್ನು ಕೊಡುತ್ತಿದ್ದೇನೆ:

೧. ಛೀ ಕಳ್ಳಾ
೨. ತುಂಟಿ ನೀನು
೩. ಸಾರಿ, ನನ್ನ ಹೃದಯ ಖಾಲಿ ಇಲ್ಲ
೪. ದಯವಿಟ್ಟು ಹಿಂಬಾಲಿಸಬೇಡ
೫. ತೀರ ಹತ್ತಿರ ಬಂದಿದ್ದೀ, ಹುಷಾರ್‌!
೬. ಎಲ್ಲೋ ಜೋಗಪ್ಪ ನಿನ್ನರಮನೆ
೭. ಮನೇಲಿ ಹೇಳಿ ಬಂದಿದ್ದೀಯಾ?
೮. ಏನ್‌ ಈವಾಗ?
೯. ಅರ್ಜೆಂಟಿಲ್ಲ ತಾನೆ?
೧೦. ಬಿಡುವಾಗಿದ್ದರೆ ನನ್ನ ಹಿಂಬಾಲಿಸು
೧೧. ಸುಮ್ನೆ ಹೋಗ್‌ ಗುರು
೧೨. ಕನ್ನಡೀಲಿ ಮುಖ ನೊಡ್ಕಂಡಿದ್ದೀಯಾ? (ಹುಡುಗೀರ ಗಾಡಿಯ ಹಿಂದೆ ಕಂಡಿದ್ದು)
೧೩. ಲೈನ್‌ ಹೊಡೆಯೋಕೆ ಪುರುಸೊತ್ತಿಲ್ಲ
೧೪. ಬಾರೆ ಬಾರೆ ಕಲ್ಯಾಣ ಮಂಟಪಕೆ ಬಾ
೧೫. ಮುಟ್ಬೇಡ ನನ್ನ
೧೬. ಐತಲಕಡಿ...!!
೧೭. ಏಕೋ ಬೇಜಾರು
೧೮. ಗುಬ್ಬಚ್ಚಿ ಗೂಡಿನಲ್ಲಿ ಕದ್ದುಮುಚ್ಚಿ
೧೯. ಹತ್ರ ಬಂದ್ರೆ ಕಚ್ಬಿಡ್ತೀನಿ
೨೦. ಈ ಟಚ್ಚಲಿ ಏನೋ ಇದೆ
೨೧. ಚುಮ್ಮ ಬೇಕಾ?
೨೨. ಥೂ...ವಾಸ್ನೆ!
೨೩. ಹೇಳಿ ಹೋಗು ಕಾರಣ
೨೪. ನಾಳೆ ಸಿಕ್ತೀನಿ
೨೫. ಇನ್ನೂ ಹತ್ತಿರ ಹತ್ತಿರ ಬರುವೆಯಾ?
೨೬. ಮಕ್ಕಳಿರಲವ್ವ ಮನೆ ತುಂಬ, ಹೆಲ್ಪ್‌ ಬೇಕಾದ್ರೆ ಕೇಳವ್ವ
೨೭. ನಾನಿವತ್ತು ಫ್ರೀಯಾಗಿದ್ದೀನಿ
೨೮. ಚಿನ್ನಾ ನಿನ್ನ ಮುದ್ದಾಡುವೆ
೨೯. ಮುತ್ತಿಟ್ಟರೆ ನನ್ನಾಣೆ
೩೦. ಬರುವಾಗ ಬೆತ್ತಲೆ, ಆಗಿನ್ನೂ ಕತ್ತಲೆ

ಬರೆದಷ್ಟೂ ಬೆಳೆಯುತ್ತಲೇ ಇದೆ ಬಾಲದ ಬರಹ. ನನ್ನ ಮನಸಲ್ಲಿ ಉಳಿದ ಇನ್ನೊಂದು ಸಾಲು ಹೇಳಿ ಈ ಬರಹ ಮುಗಿಸುತ್ತೇನೆ.

ಅವತ್ತು ಆಫೀಸಿಗೆ ತಡವಾಗಿತ್ತು. ಸಾಮಾನ್ಯವಾಗಿ ಧಾವಂತ ಮಾಡಿಕೊಳ್ಳದ ನಾನು ಅಂದು ಸ್ವಲ್ಪ ಜಾಗ ಸಿಕ್ಕರೂ ಸಾಕು, ಸ್ಕೂಟಿ ನುಗ್ಗಿಸುತ್ತ ಹೋಗುತ್ತಿದ್ದೆ. ಎದುರಿಗದ್ದ ಬೈಕ್‌ ಏಕೋ ಜಾಗ ಕೊಡುತ್ತಿಲ್ಲ ಎಂದು ಅನ್ನಿಸತೊಡಗಿತು. ಅವನೂ ನನ್ನಷ್ಟೇ ಅರ್ಜೆಂಟಿನಲ್ಲಿದ್ದನೇನೋ. ಹಾಗೆ ಹೋಗುತ್ತಿರುವಾಗ, ರಸ್ತೆ ಉಬ್ಬು ಬಂತು. ಬೈಕ್‌ ದಾಟಿ ಹೋಗಲೆಂದು ಕೊಂಚ ವೇಗವಾಗಿಯೇ ಸ್ಕೂಟಿ ನುಗ್ಗಿಸಿದೆ. ಅವನ ಬೈಕಿನ್ನೂ ಹಂಪ್‌ ಹತ್ತುತ್ತಿತ್ತು. ಆಗ ಗಮನಿಸಿದೆ ಹಿಂಬದಿ ಬರಹ:
’ನಾನಿಷ್ಟ ಆದ್ರೆ ಹಾರ್ನ್‌ ಹಾಕು!’

ನನ್ನ ಟೆನ್ಷನ್‌ ಕ್ಷಣಾರ್ಧದಲ್ಲಿ ಮಾಯವಾಗಿ ಹೋಯಿತು!

- ಚಾಮರಾಜ ಸವಡಿ

(೧೨ ಜುಲೈ ೨೦೦೮)

ಹೊರಟಿದೆ ಎತ್ತ, ನಮ್ಮ ಸಾಹಿತ್ಯ?

0 ಪ್ರತಿಕ್ರಿಯೆ

ಕನ್ನಡದಲ್ಲಿ ಕಾವ್ಯ ಸತ್ತಿದೆ.

ಇದರರ್ಥ ಕವಿತೆಗಳನ್ನು ಬರೆಯುವವರು ಇಲ್ಲವೆ೦ದಲ್ಲ. ಅವರ ಸ೦ಖ್ಯೆ ಮೊದಲಿಗಿ೦ತ ಹೆಚ್ಚಾಗಿದೆ. ಆದರೆ ಅವರು ಬರೆದಿದ್ದನ್ನೆಲ್ಲಾ ಕವಿತೆ ಎ೦ದು ಒಪ್ಪಿಕೊಳ್ಳುವುದು ಕಷ್ಟ. ಅದಕ್ಕೆ ಹೇಳಿದ್ದು ಕನ್ನಡದಲ್ಲಿ ಕಾವ್ಯ ಸತ್ತಿದೆ ಎ೦ದು.

ಇವತ್ತು ಸಾಹಿತ್ಯ ಪರ೦ಪರೆ ಎ೦ತಹ ದು:ಸ್ಥಿತಿ ತಲುಪಿದೆ ಎ೦ದರೆ ಯಾವುದಾದರೂ ಒ೦ದು ಸಾಹಿತ್ಯಕ ಪ೦ಗಡದೊ೦ದಿಗೆ ಗುರುತಿಸಿಕೊಳ್ಳದಿದ್ದರೆ, ಅ೦ತಹ ವ್ಯಕ್ತಿಯ ಬರಹಗಳಿಗೆ ಮಾನ್ಯತೆ ಸಿಗುವ ಸ೦ಭವ ಕಡಿಮೆ. ತಾವಿನ್ನೂ ಬ೦ಡಾಯ ಸಾಹಿತಿಗಳು ಎ೦ಬ ಭ್ರಮೆಯಲ್ಲಿರುವ ಜನರ ಬರಹಗಳಲ್ಲಿನ ಬ೦ಡಾಯ ಯಾವತ್ತೋ ಸತ್ತು ಹೋಗಿದೆ. ದಲಿತ ಬರಹಗಾರರು ಸರಕಾರಿ ಕೆಲಸಗಳೆ೦ಬ ಸು೦ದರ ಸಮಾಧಿಯಲ್ಲಿದ್ದಾರೆ. ಮುಸ್ಲಿಮ್ ಬರಹಗಾರರು ಧಾರ್ಮಿಕ ಕನ್ನಡಕ ಹಾಕಿಕೊ೦ಡೇ ಬರೆಯುತ್ತಿದ್ದಾರೆ.

ಇ೦ಥ ಸ್ಥಗಿತ ಸಾಹಿತ್ಯಕ ವಾತಾವರಣಕ್ಕೆ ಮೊದಲು ಬಲಿಯಾಗುವುದೇ ಕಾವ್ಯ. ಉಳಿದ ಸಾಹಿತ್ಯಕ ಪ್ರಕಾರಗಳಾದ ನಾಟಕ, ಕಥೆ, ಕಾದ೦ಬರಿ, ಪ್ರಬಂಧ, ಲೇಖನ ಇತ್ಯಾದಿ ಹೇಗೋ ಬದುಕಬಹುದು. ಆದರೆ ಕಾವ್ಯ ಸ್ಥಗಿತ ಸ್ಥಿತಿಯನ್ನು ಜೀರ್ಣಿಸಿಕೊಳ್ಳಲಾರದು!!!

ಇವತ್ತು ನೀವು ಯಾವ ಪತ್ರಿಕೆಯನ್ನೇ ತಿರುವಿ ಹಾಕಿ. ಅಲ್ಲಿ ಪ್ರಕಟವಾಗುವ ಅಸ೦ಖ್ಯಾತ ಕವಿತೆಗಳನ್ನು ಓದಿ ನೋಡಿ. ಒ೦ದರಲ್ಲಿಯೂ ಜೀವವಿಲ್ಲ. ಒ೦ದರಲ್ಲಿಯೂ ರೋಮಾ೦ಚನವಿಲ್ಲ. ನಿರ್ಜೀವ ಶಬ್ದಗಳ ಜೋಡಣೆಯ೦ತೆ ಕಾಣುವ ಈ ರಚನೆಗಳನ್ನು ಕಾವ್ಯ ಎ೦ದು ಒಪ್ಪಿಕೊಳ್ಳುವುದಾದರೂ ಹೇಗೆ?

ಸಾಹಿತ್ಯದ ಬಗ್ಗೆ ಹೆಚ್ಚು ಮಾತನಾಡಿದಷ್ಟೂ ಅದರ ಜೀವ೦ತಿಕೆ ಕಡಿಮೆಯಾಗುತ್ತಾ ಹೋಗುತ್ತದೆ. ಒ೦ದು ನಿರ೦ತರ ಚಲನಶೀಲತೆ ಮಾತ್ರ ಸಾಹಿತ್ಯವನ್ನು ಜೀವ೦ತವಾಗಿಡಬಲ್ಲದು. ಆದರೆ ಇವತ್ತಿನ ಸ್ಥಿತಿಯಲ್ಲಿ ಸಿದ್ಧ ಬರಹಗಳೇ ಎಲ್ಲೆಡೆ ವಿಜೃ೦ಭಿಸುವಾಗ, ಸಾಹಿತ್ಯದ ಗ೦ಧಗಾಳಿಯೂ ಗೊತ್ತಿಲ್ಲದ ಸಬ್ ಎಡಿಟರ್‌ಗಳು ಪತ್ರಿಕೆಗಳ ಸಾಹಿತ್ಯಕ ಪುರವಣಿ ವಿಭಾಗಗಳಲ್ಲಿ ಸೇರಿಕೊ೦ಡಿರುವಾಗ, ಜೀವ೦ತ ಕಾವ್ಯ ದೊರಕುವುದಾದರೂ ಹೇಗೆ?

ಅದಕ್ಕೇ ಹೇಳಿದ್ದು ಕಾವ್ಯ ಸತ್ತಿದೆ ಎ೦ದು. ಈ ಸಮಯದಲ್ಲಿ ನನ್ನ ಮುಂದಿರುವುದು ಜಾತ್ರೆಗಳಂತೆ ನಡೆಯುವ ಸಾಹಿತ್ಯ ಸಮ್ಮೇಳನಗಳ ಚಿತ್ರಣ.

ಒಬ್ಬ ಬರಹಗಾರನನ್ನು ಯಾವುದಾದರೂ ಒ೦ದು ಪ೦ಥಕ್ಕೆ, ಪ೦ಗಡಕ್ಕೆ ಸೇರಿಸುವ ಔಚಿತ್ಯವೇ ನನಗೆ ಅರ್ಥವಾಗುತ್ತಿಲ್ಲ. ಅಥವಾ ನನ್ನ೦ಥ ನೂರಾರು ಜನರ ಅಭಿಪ್ರಾಯವನ್ನೇ ಹೇಳುವುದಾದರೆ, ಈ ರೀತಿಯ ವರ್ಗೀಕರಣವೇ ವ್ಯರ್ಥ. ಏಕೆ೦ದರೆ ಒಬ್ಬ ಲೇಖಕ ತನಗನ್ನಿಸಿದ್ದರ ಬಗ್ಗೆ ವಸ್ತುನಿಷ್ಠವಾಗಿ ಬರೆಯುತ್ತಾ ಹೋಗಬೇಕು. ಅವನ ಬರಹ ಸಾಹಿತ್ಯದ ಯಾವ ಪ್ರಕಾರಕ್ಕಾದರೂ ಸೇರಲಿ. ಪ೦ಥಕ್ಕಾದರೂ ಸೇರಲಿ. ಅದರ ಬಗ್ಗೆ ಅವನು ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಬರಹಗಾರ ಅ೦ಥದೊ೦ದು ಸ್ವಾತ೦ತ್ರ್ಯವನ್ನು ಹೊ೦ದಿದಾಗ ಮಾತ್ರ ಗಟ್ಟಿ ಸಾಹಿತ್ಯ, ಸಹಜವಾದ ಸಾಹಿತ್ಯ ಸೃಷ್ಟಿಯಾಗುವುದು.

ಆದರೆ ಕಳೆದ ೫೦ ವರ್ಷಗಳಿ೦ದ ಸಾಹಿತ್ಯದಲ್ಲಿ ಪ೦ಗಡಗಳು ಹುಟ್ಟಿಕೊ೦ಡು ಬರಹಗಾರನ ನಿರಾಳತೆ ಸತ್ತು ಹೋಗಿದೆ. ಪ್ರಕೃತಿಯ ಸೌ೦ದರ್ಯದ ಬಗ್ಗೆ ಕವಿತೆ ಬರೆಯಬೇಕು ಎ೦ದು ಕವಿಯೊಬ್ಬನಿಗೆ ಅನ್ನಿಸಿದರೆ ಬರೆಯಲಿ ಬಿಡಿ. ಅವನು ಕವಿತೆಯನ್ನು ಜನರನ್ನು ಎಚ್ಚರಿಸಲಿಕ್ಕೇ ಬರೆಯಬೇಕು ಎನ್ನುವ ಹಠ ಯಾಕೆ? ಅದರಲ್ಲಿ ಬ೦ಡಾಯ, ದಲಿತ ಪರ, ಮುಸ್ಲಿಮ್ ಸ೦ವೇದನೆಯ ಅಥವಾ ನವೋದಯ ನವ್ಯದ ಪರವಾದ ಅ೦ಶಗಳಿರಬೇಕು ಎ೦ದೇಕೆ ನಿರೀಕ್ಷಿಸಬೇಕು? ಬರೆದಾದ ನ೦ತರ ಅದು ಯಾವ ಪ೦ಥಕ್ಕಾದರೂ ಸೇರಲಿ, ಅದಕ್ಕೆ ಅಭ್ಯ೦ತರವೇನಿಲ್ಲ. ಆದರೆ ಬರೆಯುವ ಮುನ್ನವೇ ಸಾಹಿತ್ಯದ ವರ್ಗೀಕರಣ, ಸಾಹಿತ್ಯಕ ಬಣಗಳು, ಪ೦ಥಗಳು ಏಕೆ ನಿರ್ಮಾಣವಾಗಬೇಕು?

ಇದೆಲ್ಲಾ ತು೦ಬಾ ಸರಳ - ಹಕ್ಕಿಯ ಹಾಡಿನ೦ತೆ. ಇದೇ ರೀತಿ ಹಾಡಬೇಕು, ಇದೇ ಸಮಯದಲ್ಲಿ ಹಾಡಬೇಕು, ಇಷ್ಟೊತ್ತೇ ಹಾಡಬೇಕು, ಹಾಡಿನಲ್ಲಿ ಇ೦ತಿ೦ಥ ನಿಯಮಗಳನ್ನು ಅನುಸರಿಸಬೇಕು ಎ೦ಬ ಕಟ್ಟುಪಾಡುಗಳು ಇಲ್ಲವೆ೦ದೇ ಹಕ್ಕಿಯ ಹಾಡು, ಅದು ಹೇಗೇ ಇದ್ದರೂ ಸರಿ, ನಮಗೆ ಅಪ್ಯಾಯಮಾನವಾಗುತ್ತದೆ. ಯಾವುದೇ ಪ೦ಥಕ್ಕೆ ಸೇರದ ಅದರ ಸ್ವಾತ೦ತ್ರ್ಯವೇ ಆ ಹಾಡಿಗೊ೦ದು ಸಹಜ ಪ್ರೀತಿಯನ್ನು ಕಲ್ಪಿಸಿಕೊಡುತ್ತದೆ.

ಸಾಹಿತ್ಯವೂ ಅಷ್ಟೇ. ಎಲ್ಲ ಕ್ರಿಯಾತ್ಮಕ ಅಭಿವ್ಯಕ್ತಿಯ ಮೂಲವೂ ಇದೇ.

- ಚಾಮರಾಜ ಸವಡಿ

(೯ ಜುಲೈ ೨೦೦೮)

ನುಡಿ ಚಿತ್ರ ಬರೆಯಲು ಕಲಿತಿದ್ದು

0 ಪ್ರತಿಕ್ರಿಯೆ
ಒಂದೆರಡು ಘಟನೆಗಳನ್ನು ಹೇಳುವ ಮೂಲಕ ವಿಷಯಕ್ಕೆ ಬರುವುದು ಸುಲಭ ಅನ್ನಿಸುತ್ತಿದೆ.

ಪತ್ರಿಕೋದ್ಯಮಕ್ಕೆ ಬಂದ ಪ್ರಾರಂಭಿಕ ದಿನಗಳವು. ಅಪರಾಧ ಸುದ್ದಿಯನ್ನು ಬರೆದು ಅನುಭವವಿದ್ದ ನನ್ನನ್ನು, ನುಡಿ ಚಿತ್ರದತ್ತ ಹೊರಳಿಸಲು ಮಿತ್ರ ಆನಂದತೀರ್ಥ ಪ್ಯಾಟಿ ಯತ್ನಿಸುತ್ತಿದ್ದರು.

ಆಗ ಕೊಪ್ಪಳ ಹೊಸ ಜಿಲ್ಲೆಯಾಗಿ ಉದಯಿಸಿತ್ತು. ಆದರೆ ಅಲ್ಲಿಯ ಹಳೆಯ ಸಮಸ್ಯೆಗಳು ಮಾತ್ರ ಹಾಗೇ ಉಳಿದಿದ್ದವು. ಓಡಾಡಲು ಸೈಕಲ್ ಕೂಡ ಇಲ್ಲದ ನಾನು ಮತ್ತು ಪ್ಯಾಟಿ ಸೇರಿಕೊಂಡು ಈ ಸಮಸ್ಯಾತ್ಮಕ ಊರಿನ ಕಲ್ಲು ಬೆಟ್ಟ, ಬೆಂಗಾಡಿನಂಥ ಪ್ರದೇಶಗಳಲ್ಲಿ ಅಲೆಯುತ್ತ, ಬರೆಯಲು ವಿಷಯಗಳನ್ನು ಹುಡುಕುತ್ತಿದ್ದೆವು.

’ಕ್ರೈಮ್ ಬರೀಬೇಕ್ರೀ ಆನಂದ್’ ಎಂದು ನಾನು ಒತ್ತಾಯಿಸುತ್ತಿದ್ದರೆ, ’ನಿಮ್ಮ ಬರವಣಿಗೆಗೆ ಫೀಚರ್ ರೈಟಿಂಗ್‌ಗೆ ಕೂಡ ಒಗ್ಗುತ್ತದೆ. ಪ್ರಯತ್ನಿಸಿ ನೋಡ್ರಿ’ ಎಂಬುದು ಅವರ ಆಗ್ರಹ. ಫೋಟೊ ಇಲ್ಲದೆ ಫೀಚರ್ ಬರೆಯುವುದು ಹೇಗೆ ಎಂಬ ಪ್ರಶ್ನೆ ಇಬ್ಬರನ್ನೂ ಕಾಡಿದಾಗ ದೊರೆತ ಇನ್ನೋರ್ವ ಮಿತ್ರ ಪ್ರಕಾಶ ಕಂದಕೂರ.

ಆಗ ಮಾರ್ಚ್ ಸಮಯ. ಕೊಪ್ಪಳದ ಕಲ್ಲುಬೆಟ್ಟಗಳು ಬಿಸಿಯಾಗಿ, ಸುತ್ತಲಿನ ಖಾಲಿ ಹೊಲಗಳು ಬಿಸಿಯುಸಿರು ಬಿಡುತ್ತ, ಊರಿನ ಸಣ್ಣ ಕಿಟಕಿಗಳ ಮನೆಗಳನ್ನು ಇಡ್ಲಿ ಪಾತ್ರೆಯಂತೆ ಕಾಯಿಸುತ್ತಿದ್ದವು. ಅಂಥ ಕೆಟ್ಟ, ರಣ ರಣ ಬಿಸಿಲಿನಲ್ಲಿ, ಗಾಳಿ ಕೂಡ ಸರಿಯಾಗಿ ಹಾಕಿರದ ಎರಡು ಸೈಕಲ್‌ಗಳ ಮೇಲೆ ಯಾತ್ರೆ ಹೋಗುತ್ತಿದ್ದ ನಮ್ಮನ್ನು ನೋಡಿ ಮರುಗುತ್ತಿದ್ದ ಸಮಕಾಲೀನ ಪತ್ರಕರ್ತರು, ನಮಗೆ ಹುಚ್ಚು ಹಿಡಿದಿದೆ ಎಂದು ಒಮ್ಮತದ ತೀರ್ಮಾನಕ್ಕೆ ಬಂದಿದ್ದರು.

ಹಾಗೆ ಪ್ರಾರಂಭವಾದ ನಮ್ಮ ಮೊದಲ ಯಾತ್ರೆ ಸಾಗಿದ್ದು ಊರಿನ ಪಕ್ಕದಲ್ಲಿಯೇ ಇದ್ದ ಮಳೆಮಲ್ಲಪ್ಪನ ಬೆಟ್ಟದತ್ತ. ಇಲ್ಲಿಯ ಭೂಗರ್ಭದ ಕಿಂಡಿಯೊಂದರಿಂದ ವರ್ಷ ಪೂರ್ತಿ ನೀರು ಬರುತ್ತಿರುತ್ತದೆ. ಅಲ್ಲೇನಾದರೂ ಬರೆಯಲು ಸಿಗಬಹುದೆ ಎಂದು ಹುಡುಕಲು ಮಟಮಟ ಮಧ್ಯಾಹ್ನದಲ್ಲಿ ನಮ್ಮ ಯಾತ್ರೆ ಅತ್ತ ಸಾಗಿತು.

ಸೈಕಲ್ ತುಳಿದು ಏದುಸಿರು ಬಿಡುತ್ತಿದ್ದ ನಾವು, ಕಿಂಡಿಯಿಂದ ಬರುತ್ತಿದ್ದ ನೀರು ಕುಡಿದು ದಣಿವಾರಿಸಿಕೊಳ್ಳಲು ಕಾಲುವೆ ಪಕ್ಕ ಕೂತೆವು. ಆಗ ’ಅದು’ ಕಣ್ಣಿಗೆ ಬಿತ್ತು.

ಕಾಲುವೆ ಒಳಗೆ ಹರಿಯುತ್ತಿದ್ದ ನೀರೊಳಗಿಂದ ಜೀವಿಯೊಂದು ಇಣುಕಿ ನೋಡುತ್ತಿತ್ತು. ನೆರಳಿನಲ್ಲಿ ಇತ್ತಾದ್ದರಿಂದ ಅದರ ವಿವರ ತಕ್ಷಣಕ್ಕೆ ಗೋಚರವಾಗಲಿಲ್ಲ. ಸೂಕ್ಷ್ಮವಾಗಿ ಗಮನಿಸಿದಾಗ, ಸೀಳು ನಾಲಗೆ ಕಾಣಿಸಿತು.

ಸೈಕಲ್ ಬಾರ್ ಗಾತ್ರದ ನಾಗರ ಹಾವು ಅದು. ನಮಗೆ ಅದರ ಮುಖ ಹಾಗೂ ಕುತ್ತಿಗೆಯ ಭಾಗವಷ್ಟೇ ಕಾಣುತ್ತಿತ್ತು. ಇಡೀ ದೇಹ, ಕಾಲುವೆಯ ಕಿಂಡಿಯಲ್ಲಿ ಮರೆಯಾಗಿತ್ತು. ಪ್ರಾರಂಭದಲ್ಲಿ ರೋಮಾಂಚನಗೊಂಡ ನಾವು ’ಹುಶ್, ಹುಶ್’ ಎಂದು ಅದರ ಗಮನ ಸೆಳೆಯಲು ಯತ್ನಿಸಿದೆವು.
ಆದರೆ ನಮ್ಮ ಇಷಾರೆಗಳನ್ನು ಅಲಕ್ಷಿಸಿ, ಹಾವು ತನ್ನ ನಾಲಗೆ ಚಲನೆಯನ್ನು ಮುಂದುವರೆಸಿತು. ಅಷ್ಟೊತ್ತಿಗೆ ಕ್ಯಾಮರಾಕ್ಕೆ ಫ್ಲ್ಯಾಷ್ ಜೋಡಿಸಿಕೊಂಡು ಸಿದ್ಧವಾಗಿದ್ದ ಛಾಯಾಗ್ರಾಹಕ ಮಿತ್ರ ಪ್ರಕಾಶ ಕಂದಕೂರ, ಫೋಟೊ ತೆಗೆಯಲು ಹವಣಿಸುತ್ತಿದ್ದರು.

ಹರಿಯುತ್ತಿರುವ ನೀರಿನ ಕೆಳಗಿದ್ದ ಮುಂಗೈ ಉದ್ದದ ನಾಗರಹಾವಿನ ಮುಖದ ಚಿತ್ರವನ್ನು ನಾಲಗೆ ಸಮೇತ ತೆಗೆಯಬೇಕೆಂದು ಪ್ರಕಾಶ್‌ಗೆ ಸೂಚಿಸಿದೆವು. ಆಗಿನ್ನೂ ಡಿಜಿಟಲ್ ಕ್ಯಾಮೆರಾಗಳು ಬಂದಿದ್ದಿಲ್ಲ. ಹೀಗಾಗಿ, ಫಿಲ್ಮ್ ಕ್ಯಾಮೆರಾದಲ್ಲಿಯೇ ಮೂರ್‍ನಾಲ್ಕು ಚಿತ್ರಗಳನ್ನು ತೆಗೆದರು ಪ್ರಕಾಶ. ಎರಡು ಚೆನ್ನಾಗಿ ಬಂದಿವೆ ಎಂಬ ತೃಪ್ತಿಯನ್ನೂ ವ್ಯಕ್ತಪಡಿಸಿದರು.

’ಕೆಲಸವಾಯಿತು, ಇನ್ನು ಕೋಲೊಂದನ್ನು ತೆಗೆದುಕೊಂಡು ನಾಗರಹಾವನ್ನು ಕೆಣಕೋಣ’ ಎಂಬ ಧೂರ್ತ ವಿಚಾರ ನಮಗೆ ಬಂದಿತು. ನಾವು ಫೋಟೊ ತೆಗೆಯುತ್ತಿದ್ದುದನ್ನು ನೋಡಿದ ಕೆಲವರು ಹತ್ತಿರ ಬಂದು, ನಮ್ಮ ವಿಚಾರವನ್ನು ಪ್ರಚೋದಿಸಿದರು. ಕೋಲೊಂದನ್ನು ಹುಡುಕಿಕೊಂಡು ಬಂದ ಉತ್ಸಾಹಿಯೊಬ್ಬ ಹಾವೆಲ್ಲಿದೆ ಎಂದು ಕೇಳಿದ. ಅಷ್ಟರೊಳಗೆ, ಅಪಾಯ ಗ್ರಹಿಸಿದ್ದ ಹಾವು ಪರಾರಿಯಾಗಿತ್ತು. ’ಮಗಂದು, ಫೊಟೊ ತೆಗೆಸಿಕೊಳ್ಳಲು ಬಂದಿತ್ತು ಅಂತ ಕಾಣುತ್ತದೆ’ ಎಂದು ತಮಾಷೆ ಮಾಡಿಕೊಂಡು ನಾವು ಲಟಕಾ ಸೈಕಲ್‌ಗಳಲ್ಲಿ ಹಿಂತಿರುಗಿದೆವು.

ಅವತ್ತೇ ರೀಲ್ ಕತ್ತರಿಸಿ, ಪ್ರಿಂಟ್‌ಗೆ ಹುಬ್ಬಳ್ಳಿಗೆ ಕಳಿಸಲಾಯಿತು. ಅದು ಬರಲು ಮೂರು ದಿನಗಳೇ ಹಿಡಿದವು. ಆದರೆ, ಫೋಟೊಗಳು ಪ್ರಿಂಟಾಗಿ ಬಂದಾಗ ನಾವು ಕುಣಿದಾಡುವುದೊಂದೇ ಬಾಕಿ. ಲಟಕಾ ಸೈಕಲ್‌ನಲ್ಲಿ ನಮ್ಮನ್ನು ಹೇರಿಕೊಂಡು ಹೋಗಿದ್ದಲ್ಲದೇ, ಮೂರು ಉತ್ತಮ ಫೋಟೊಗಳನ್ನು ಉದ್ರಿಯಾಗಿ ತೆಗೆದುಕೊಟ್ಟಿದ್ದರು ಪ್ರಕಾಶ ಕಂದಕೂರ. ’ಪ್ರಜಾವಾಣಿ’ಯ ’ನಾಡು-ನುಡಿ’ ಅಂಕಣಕ್ಕೆ ಬರೆಯಲು ಜಂಟಿಯಾಗಿ ನಿರ್ಧರಿಸಲಾಯಿತು. ಆದರೆ, ಅದನ್ನು ನಾನೇ ಬರೆಯಬೇಕೆಂದು ಬಲವಾಗಿ ಆಗ್ರಹಿಸಿದವರು ಆನಂದ.

’ಅಪರಾಧ ಸುದ್ದಿ’ಗಳ ಹೊರತಾಗಿ ನಾನು ಬರೆದ ಮೊದಲ ಲೇಖನ ಈ ಹಾವಿನದು. ’ನಿರ್ಲಿಪ್ತ ನಾಗರ’ ಶೀರ್ಷಿಕೆಯಲ್ಲಿ ಮರುವಾರವೇ ಅದು ಅಚ್ಚಾಗಿ ಬಂದಾಗ ನಮ್ಮ ಖುಷಿಗೆ ಪಾರವೇ ಇದ್ದಿಲ್ಲ. ನಮ್ಮ ಲಟಕಾ ಸೈಕಲ್‌ಗಳು ರಭಸದಿಂದ ಊರು ಸುತ್ತತೊಡಗಿದವು. ಕಂಡಿದ್ದನ್ನೆಲ್ಲ ಬರವಣಿಗೆಗೆ ಇಳಿಸುವ ಹುಚ್ಚು ಏರಿತು. ಪ್ರಕಾಶ್ ಕೂಡ ಕ್ಯಾಮೆರಾ ಹಿಡಿದು ನಮ್ಮೊಂದಿಗೆ ಹೊರಟಿದ್ದನ್ನು ನೋಡಿದವರು, ’ದುಡಿದು ತಿಂದುಕೊಂಡಿದ್ದ ಹುಡುಗನನ್ನು ಇವರಿಬ್ಬರೂ ಹಾಳು ಮಾಡುತ್ತಿದ್ದಾರಲ್ಲಾ...’ ಎಂದು ಬಹಿರಂಗವಾಗಿ ವಿಷಾದಿಸಿದ್ದರು.

ಹಾಗೆ ಶುರುವಾದ ನಮ್ಮ ನುಡಿ-ಚಿತ್ರದ ಹುಚ್ಚು ಕಳೆದ ಹತ್ತು ವರ್ಷಗಳಿಂದ ಅಬಾಧಿತವಾಗಿ ಮುಂದುವರೆಯುತ್ತಿದೆ. ನೂರಾರು ವಿಷಯಗಳ ಮೇಲೆ, ನೂರಾರು ಲೇಖನಗಳನ್ನು ಆನಂದ ಮತ್ತು ನಾನು ಬರೆದಿದ್ದೇವೆ. ಸಾವಿರಾರು ಫೊಟೊಗಳನ್ನು ಪ್ರಕಾಶ ತೆಗೆದುಕೊಟ್ಟಿದ್ದಾರೆ. ಈ ಅವಧಿಯಲ್ಲಿ ನಮ್ಮ ಹುಚ್ಚಿಗೆ ಹೊಸ ಆಯಾಮಗಳು ಸೇರಿಕೊಂಡಿವೆ. ವ್ಯಾಪ್ತಿ ವಿಸ್ತಾರವಾಗಿದೆ. ಡಿಜಿಟಲ್ ತಂತ್ರಜ್ಞಾನ ಆಸರೆಗೆ ನಿಂತಿದೆ. ನಮ್ಮ ಕ್ಯಾನ್ವಾಸ್ ವಿಶಾಲವಾಗಿದೆ. ಅಷ್ಟೇ ಅಲ್ಲ, ದಿನದಿಂದ ದಿನಕ್ಕೆ ಅದು ವಿಸ್ತರಿಸುತ್ತಲೇ ಇದೆ.

ಈಗ ಸಂಪದ ಅದಕ್ಕೊಂದು ಜಾಗತಿಕ ವಿಸ್ತರಣೆಯಾಗಿ ದೊರೆತಿದೆ. ಮತ್ತಿಷ್ಟು ನುಡಿಚಿತ್ರಗಳನ್ನು ಬರೆಯಲು ಮನಸ್ಸು ಹಾತೊರೆಯುತ್ತಿದೆ.

- ಚಾಮರಾಜ ಸವಡಿ

(೯ ಜುಲೈ, ೨೦೦೮)

ಶಾಸಕರ ರಾಜೀನಾಮೆ ರಾಜಕೀಯ

0 ಪ್ರತಿಕ್ರಿಯೆ
(ರಾಜ್ಯ ರಾಜಕೀಯ ನಿರ್ಲಜ್ಜ ಘಟ್ಟದಲ್ಲಿದೆ. ಹಣ ಇದ್ದವರು ಏನು ಬೇಕಾದರೂ ಮಾಡಬಹುದು ಎಂಬ ವಾತಾವರಣ ಉಂಟಾಗಿದೆ. ಅಧಿಕಾರ ಹಿಡಿಯುವುದೇ ಪರಮ ಉದ್ದೇಶವಾದರೆ ಏನಾಗುತ್ತದೆ ಎಂಬುದಕ್ಕೆ ಕರ್ನಾಟಕದಲ್ಲಿ ಶನಿವಾರದಿಂದ ನಡೆದಿರುವ ಘಟನೆಗಳೇ ಸಾಕ್ಷಿ. ಶಾಸಕರ ರಾಜೀನಾಮೆ ಹಾಗೂ ಬಿಜೆಪಿ ಸೇರ್ಪಡೆ ಹಿಂದಿರುವ ಹುನ್ನಾರ ಕುರಿತು ಈ ಬರಹ)

ಬಹುಶಃ ೨೦೦೮ನೇ ವರ್ಷ ರಾಜ್ಯ ರಾಜಕೀಯದಲ್ಲಿ ಹಲವಾರು ಕಾರಣಗಳಿಂದಾಗಿ ನೆನಪಿನಲ್ಲಿರುತ್ತದೆ.

ಇತ್ತೀಚನ ವರ್ಷಗಳಲ್ಲಿ ಕಂಡ ಅತ್ಯಂತ ನಿರ್ಲಜ್ಜ ರಾಜಕಾರಣವನ್ನು ಜೆಡಿಎಸ್‌ನ ಎಚ್‌.ಡಿ. ದೇವೇಗೌಡ ಪ್ರದರ್ಶಿಸಿದ ಪರಿಣಾಮ ಬಹುಮತ ಸಾಬೀತು ಮಾಡಲು ಹೋಗಿದ್ದ ಮುಖ್ಯಮಂತ್ರಿಯೊಬ್ಬರು ರಾಜೀನಾಮೆ ಸಲ್ಲಿಸಿ ಹಿಂತಿರುಗಿದರು. ರಾಷ್ಟ್ರಪತಿ ಆಡಳಿತ ಬಂದಿತು. ಅಧಿಕಾರಿಗಳದೇ ಸಾಮ್ರಾಜ್ಯ. ಪರಿಣಾಮ, ರಸಗೊಬ್ಬರದಂಥ ಬೇಡಿಕೆಯನ್ನು ಸರಿಯಾಗಿ ಸಲ್ಲಿಸದೇ ಮುಂಗಾರು ಗೊಂದಲಕ್ಕೆ ಕಾರಣವಾಯಿತು.

ಇನ್ನೊಂದೆಡೆ ಚುನಾವಣಾ ಆಯೋಗ ಅತ್ಯಂತ ಜವಾಬ್ದಾರಿಯುತವಾಗಿ, ಸಮರ್ಥವಾಗಿ ಕೆಲಸ ಮಾಡಿ, ಕ್ಷೇತ್ರ ಪುನರ್‌ವಿಂಗಡಣೆ ನಂತರವೂ ದಾಖಲೆ ಸಮಯದಲ್ಲಿ ಚುನಾವಣೆ ನಡೆಸಲು ಮುಂದಾಯಿತು. ವಿರೋಧದ ನಡುವೆಯೂ ಗದ್ದಲ ಗೊಂದಲಗಳಿಲ್ಲದೇ ಚುನಾವಣೆ ಮುಗಿಸಿತು. ಜೆಡಿಎಸ್‌ನ ಪಾಪದ ಫಲವೆಂಬಂತೆ ಬಿಜೆಪಿ ಸರಳ ಬಹುಮತಕ್ಕೆ ಹತ್ತಿರ ಬಂದು, ಜೆಡಿಎಸ್‌ ಹೀನಾಯವಾಗಿ ಮೂರನೇ ಸ್ಥಾನಕ್ಕೆ ಇಳಿಯಿತು.

ಇದು ಒಂದು ಪ್ರಮುಖ ಘಟ್ಟ.

ಅಧಿಕಾರಕ್ಕೆ ಬರಬೇಕೆಂದರೆ ಪಕ್ಷೇತರರ ಮರ್ಜಿಯಲ್ಲೇ ಇರಬೇಕೆನ್ನುವ ಕಹಿ ವಾಸ್ತವ ಒಪ್ಪಿಕೊಳ್ಳಲು ಹುಮ್ಮಸ್ಸಿನಲ್ಲಿರುವ ಬಿಜೆಪಿ ನಾಯಕರು ಸಿದ್ಧರಿದ್ದಿಲ್ಲ. ಹೀಗಾಗಿ, ಶಾಸಕರ ಖರೀದಿಗೆ ಮುಂದಾದರು. ಸಚಿವ ಸ್ಥಾನದ ಆಮಿಷ ಒಡ್ಡಿ ಪಕ್ಷೇತರರ ಬೆಂಬಲ ಪಡೆದುಕೊಂಡು ಸರ್ಕಾರ ರಚಿಸಲಾಯಿತು. ಆದರೆ, ಇದು ಶಾಶ್ವತ ಪರಿಹಾರವಲ್ಲ ಎಂಬ ಅರಿವು ಬಿಜೆಪಿ ನಾಯಕರಲ್ಲಿ ಇದ್ದೇ ಇತ್ತು.
ಯಥಾಪ್ರಕಾರ, ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾದ ಬಳ್ಳಾರಿ ಗಣಿ ದೊರೆಗಳಾದ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಈ ಸಮಸ್ಯೆ ಪರಿಹರಿಸಲು ಮುಂದಾದರು. ಮೊದಲು ಜೆಡಿಎಸ್‌ ಒಡೆಯುವ ತಂತ್ರ ಹೆಣೆಯಲಾಯಿತು. ಆದರೆ, ಅದು ಸುಲಭ ಸಾಧ್ಯವಲ್ಲ ಎಂಬುದು ಗೊತ್ತಾಯಿತು. ಆಗ ರೂಪಿಸಿದ್ದೇ ರಾಜೀನಾಮೆ ಕೊಟ್ಟು ಹೊರಬರುವ ತಂತ್ರ.

ಈ ಕಾರ್ಯಾಚರಣೆಯ ಕೆಲ ವಿಶೇಷತೆಗಳು ಹೀಗಿವೆ:

- ಶಾಸಕನೊಬ್ಬ ತನ್ನ ಸದಸ್ಯತ್ವ ಅವಧಿಯಲ್ಲಿ ಇನ್ನೊಂದು ಪಕ್ಷಕ್ಕೆ ಬೆಂಬಲ ಕೊಡುವುದಾಗಲಿ, ಸೇರಿಕೊಳ್ಳಲಾಗಲಿ ಬರುವುದಿಲ್ಲ. ಹಾಗೆ ಮಾಡಿದರೆ, ಪಕ್ಷಾಂತರ ನಿಷೇಧ ಕಾಯ್ದೆಯಡಿ ಅವನ ಸದಸ್ಯತ್ವ ರದ್ದಾಗುತ್ತದೆ.

- ಆದರೆ, ರಾಜೀನಾಮೆ ನೀಡಿ ಹೊರ ಬಂದರೆ ಆತ ಸ್ವತಂತ್ರ. ಸಾಮಾನ್ಯವಾಗಿ ಈ ಕ್ರಮ ಕೈಗೊಳ್ಳಲು ಶಾಸಕರು ಸಿದ್ಧರಿರುವುದಿಲ್ಲ. ಏಕೆಂದರೆ, ಆಗ ಉಪಚುನಾವಣೆ ನಡೆಯಬೇಕಾಗುತ್ತದೆ. ಒಂದು ಸಾರಿ ಗೆಲ್ಲಲಿಕ್ಕೇ ಸಾಕಷ್ಟು ಕಷ್ಟಪಟ್ಟಿರುತ್ತಾರೆ. ಹೀಗಾಗಿ ಈ ಸವಾಲು ತೆಗೆದುಕೊಳ್ಳಲು ಹೆದರುತ್ತಾರೆ.

- ಗಣಿ ದೊರೆಗಳು ಗಮನ ಕೊಟ್ಟಿದ್ದೇ ಈ ಅಂಶದತ್ತ. ಒಂದು ಮೂಲದ ಪ್ರಕಾರ, ಚುನಾವಣೆಯಲ್ಲಿ ಖರ್ಚಾದ ಹಣವನ್ನು ಹೊಂದಿಸುವ, ಹೆಚ್ಚುವರಿಯಾಗಿ ಹಣ ಕೊಡುವ, ಮತ್ತೆ ಚುನಾವಣೆ ಎದುರಿಸುವ ಎಲ್ಲ ಖರ್ಚನ್ನೂ ನೋಡಿಕೊಳ್ಳುವ ಹಾಗೂ ಗೆದ್ದ ನಂತರ ’ಸೂಕ್ತ’ ಸ್ಥಾನ ಕಲ್ಪಿಸುವ ಭರವಸೆಯನ್ನು ಕೆಲ ಶಾಸಕರಿಗೆ ನೀಡಲಾಯಿತು.

- ಶಾಸಕರು ಈ ಆಮಿಷಕ್ಕೆ ಮಣಿದರು. ಏಕೆಂದರೆ, ಪ್ರತಿ ಪಕ್ಷದಲ್ಲಿ ಇನ್ನೈದು ವರ್ಷ ಕೂತರೂ ಅವರಿಗೆ ಚುನಾವಣೆಯಲ್ಲಿ ಮಾಡಿರುವ ಖರ್ಚು ಹಿಂತಿರುಗುವ ಭರವಸೆ ಇಲ್ಲ. ಅದರ ಬದಲು ರಾಜೀನಾಮೆ ನೀಡಿದರೆ, ಖರ್ಚು ಮಾಡಿದ ಹತ್ತು ಪಟ್ಟು ಹಣ ಬರುತ್ತದೆ. ಇನ್ನೊಮ್ಮೆ ಉಚಿತವಾಗಿ ಗೆದ್ದು ಬರುವ ಅವಕಾಶವೂ ಸಿಗುತ್ತದೆ.

- ಗಣಿ ದೊರೆಗಳು ಇನ್ನೊಂದು ತಂತ್ರ ಹೆಣೆದರು. ರಾಜ್ಯದ ದೊಡ್ಡ ಕೋಮಿನಲ್ಲಿ ಒಂದಾಗಿರುವ ವಾಲ್ಮೀಕಿ ಸಮಾಜದ ಶಾಸಕರನ್ನು ಬಿಜೆಪಿಗೆ ಸೆಳೆಯುವ ಜವಾಬ್ದಾರಿಯನ್ನು ಸಚಿವ ಶ್ರೀರಾಮುಲು ಹೊತ್ತುಕೊಂಡರು. ಈ ತಂತ್ರ ಫಲ ನೀಡಿತು. ವಾಲ್ಮೀಕಿ ಜನಾಂಗದ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಹಾಗೂ ಶಿವಾನಂದ ನಾಯಕ್‌ ಜೆಡಿಎಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿಕೊಂಡರು. ಗಣಿ ದೊರೆಗಳ ವ್ಯಾಪಾರದಲ್ಲಿ ಮುಖ್ಯ ಪಾತ್ರಧಾರನಾಗಿರುವ ಕಾರವಾರದ ಕಾಂಗ್ರೆಸ್‌ ಶಾಸಕ ಆನಂದ ಆಸ್ನೋಟಿಕರ್‌ ಕೂಡ ಬಿಜೆಪಿಗೆ ಬಂದರು. ಕಾಂಗ್ರೆಸ್‌ನ ಸಂಸದ ಆರ್‌.ಎಲ್‌. ಜಾಲಪ್ಪ, ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಿದ್ದರ ಬಗ್ಗೆ ಹೊಂದಿದ್ದ ಅಸಮಾಧಾನದ ಅಂಗವಾಗಿ ಅವರ ಮಗ ಶಾಸಕ ನರಸಿಂಹಸ್ವಾಮಿ ರಾಜೀನಾಮೆ ನೀಡಿ ಬಿಜೆಪಿ ಸೇರಿದರು.

- ಬರಲಿರುವ ದಿನಗಳಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಇನ್ನೂ ಐದಾರು ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಸೇರಲಿದ್ದಾರೆ. ಸುಮಾರು ಎಂಟ್ಹತ್ತು ಶಾಸಕರಿಂದ ರಾಜೀನಾಮೆ ಕೊಡಿಸಿ ಉಪಚುನಾವಣೆ ನಡೆಸುವುದಕ್ಕೆ ವೇದಿಕೆ ಸಿದ್ಧಪಡಿಸಲಾಗುತ್ತದೆ. ತಮ್ಮದೇ ಸರ್ಕಾರ ಅಸ್ತಿತ್ವದಲ್ಲಿರುವುದರಿಂದ, ಗಣಿ ದೊರೆಗಳ ಕಾರ್ಯಾಚರಣೆ ನಡೆಯುವುದರಿಂದ ಹತ್ತರಲ್ಲಿ ನಾಲ್ಕೈದು ಸ್ಥಾನಗಳನ್ನು ಬಿಜೆಪಿ ಗೆದ್ದರೂ ಸಾಕು, ಮುಂದಿನ ಐದು ವರ್ಷಗಳವರೆಗೆ ಸರ್ಕಾರ ಅಬಾಧಿತ.
ಇದು ಬಿಜೆಪಿ ಲೆಕ್ಕಾಚಾರ.

ಆ ಪ್ರಕಾರ, ರಾಜೀನಾಮೆ ಪ್ರಹಸನ ಪ್ರಾರಂಭವಾಗಿದೆ. ನಾವು-ನೀವು ಮೂಕ ಪ್ರೇಕ್ಷಕರಂತೆ ನೋಡುತ್ತ ಕೂತಿದ್ದೇವೆ.


ನಮ್ಮೊಳಗಿನ ಮತದಾರ ಜಾಗೃತನಾಗುವುದು ಯಾವಾಗ?

- ಚಾಮರಾಜ ಸವಡಿ

(೬, ಜುಲೈ ೨೦೦೮)

ಚಿಕುನ್‌ಗುನ್ಯಾಕ್ಕೆ ಪರಿಹಾರವಿದೆ

0 ಪ್ರತಿಕ್ರಿಯೆ
ಮೊದಲೇ ಹೇಳಿಬಿಡುತ್ತೇನೆ: ಚಿಕುನ್‌ಗುನ್ಯಾ ರೋಗಕ್ಕೆ ನಿಶ್ಚಿತ ಮದ್ದಿಲ್ಲ.

ಇದಕ್ಕೆ ಇದುವರೆಗೆ ಪರಿಣಾಮಕಾರಿ ಮದ್ದು ಕಂಡು ಹಿಡಿದಿಲ್ಲ. ಈ ನಿಟ್ಟಿನಲ್ಲಿ ಪ್ರಯೋಗಗಳು ನಡೆಯುತ್ತಿವೆಯಾದರೂ, ಸ್ಪಷ್ಟ ಫಲಿತಾಂಶ ದಕ್ಕಿಲ್ಲ. ಆದರೆ, ನೋವಿನ ತೀವ್ರತೆ ಕಡಿಮೆ ಮಾಡಬಲ್ಲ ಹಲವಾರು ಮದ್ದುಗಳಿವೆ. ಅವುಗಳಲ್ಲಿ, ಅಡ್ಡ ಪರಿಣಾಮಗಳಿಲ್ಲದ ಆಯುರ್ವೇದ ಪದ್ಧತಿಯನ್ನು ಹಾಸನದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮೆಡಿಕಲ್‌ ಕಾಲೇಜ್‌ (ಎಸ್‌ಡಿಎಮ್‌) ಅಭಿವೃದ್ಧಿಪಡಿಸಿದೆ.

ರೋಗದಿಂದ ಉಂಟಾಗುವ ತೀವ್ರ ಜ್ವರ ಹಾಗೂ ಕೀಲು ನೋವು ಕಡಿಮೆ ಮಾಡುವುದರ ಜೊತೆಗೆ ಸೊಳ್ಳೆ ನಿವಾರಣೆ ಕ್ರಮಗಳಿಗೂ ಎಸ್‌.ಡಿ.ಎಂ. ಟ್ರಸ್ಟ್‌ ಒತ್ತು ಕೊಡುತ್ತಿದೆ. ಆಯುರ್ವೇದ ಶಾಸ್ತ್ರದಲ್ಲಿ ಹೇಳಲಾದ ’ಸಂಧಿಗ ಜ್ವರ’ ಹಾಗೂ ’ಆಮವಾತ’ ರೋಗಗಳ ಲಕ್ಷಣಗಳನ್ನು ಚಿಕುನ್‌ಗುನ್ಯಾ ಒಳಗೊಂಡಿದ್ದರಿಂದ, ಈ ರೋಗಗಳಿಗೆ ಬಳಸುವ ಔಷಧಗಳನ್ನು ’ಉಚಿತವಾಗಿ’ ನೀಡುವ ಮೂಲಕ ಟ್ರಸ್ಟ್‌ ಜನಪರ ಕೆಲಸವನ್ನು ಪ್ರಾರಂಭಿಸಿದೆ.

ಇತ್ತೀಚೆಗೆ ದಕ್ಷಿಣ ಕನ್ನಡದ ವಿವಿಧೆಡೆ ಟ್ರಸ್ಟ್‌ ಹಮ್ಮಿಕೊಂಡಿದ್ದ ಉಚಿತ ರೋಗ ತಪಾಸಣೆ ಹಾಗೂ ಔಷಧ ವಿತರಣೆ ಶಿಬಿರಗಳಲ್ಲಿ ಈ ಔಷಧಗಳು ಪರಿಣಾಮಕಾರಿ ಎಂಬುದು ಗೊತ್ತಾಗಿದೆ. ಸುಮಾರು 20,000 ರೋಗಿಗಳು ಗುಣಮುಖರಾಗಿದ್ದು ಎಸ್‌.ಡಿ.ಎಂ. ವೈದ್ಯರ ಆತ್ಮವಿಶ್ವಾಸ ವೃದ್ಧಿಸಿದೆ.

ಆಸಕ್ತರು e-mail: sdm_ayu_hsn@yahoo.co.in ಗೆ ಅಥವಾ ದೂರವಾಣಿ: 08172-256 460/256 461/256 463/256 465ಗೆ ಸಂಪರ್ಕಿಸಬಹುದು.

- ಚಾಮರಾಜ ಸವಡಿ

(ಜೂನ್‌ ೩೦, ೨೦೦೮)

ಜನರಿಗೆ ಬೇಡವಾದ ಬಡಾಯಿದಾಸ

0 ಪ್ರತಿಕ್ರಿಯೆ
ವಾಟಾಳ್‌ ನಾಗರಾಜ್‌ ಮತ್ತೊಮ್ಮೆ ಹೀನಾಯ ಸೋಲು ಕಂಡಿದ್ದಾರೆ.

ಈ ವ್ಯಕ್ತಿಯ ಬಗ್ಗೆ ಒಂದಾನೊಂದು ಸಮಯದಲ್ಲಿ ಗೌರವವಿತ್ತು. ಅವರ ಚಳುವಳಿಗಳು, ಘೋಷಣೆಗಳು ರೋಮಾಂಚನ ಹುಟ್ಟಿಸುತ್ತಿದ್ದವು. ಆಗ ನಾನಿನ್ನೂ ಹೈಸ್ಕೂಲಲ್ಲಿ ಓದುತ್ತಿದ್ದೆ. ಪತ್ರಿಕೆಯಲ್ಲಿ ತಗ್ಗು ಬಿದ್ದಿರುವ ಕೆನ್ನೆಯ, ಉಬ್ಬುಹಲ್ಲುಗಳ ವ್ಯಕ್ತಿಯ ಘೋಷಣೆಗಳನ್ನು ಓದಿ ಮೈ ನವಿರೇಳುತ್ತಿತ್ತು. ಮುಂದೆ ಕಾಲೇಜಿಗೆ ಬಂದಾಗ ಆ ಅಭಿಮಾನ ಇನ್ನಷ್ಟು ಜಾಗೃತವಾಯಿತು. ವಾಟಾಳ್‌ ನಾಗರಾಜ್‌ ಹುಟ್ಟಿದ್ದೇ ಕನ್ನಡ ಮತ್ತು ಕರ್ನಾಟಕದ ಹಿತರಕ್ಷಣೆಗೆ ಅಂತ ಮಾತಾಡಿಕೊಳ್ಳುತ್ತಿದ್ದೆವು.

ಮುಂದೆ ಆ ಭಾವನೆ ಕುಸಿಯತೊಡಗಿತು. ಬೇರೆ ಬೇರೆ ವೃತ್ತಿಗಳಲ್ಲಿ ಏಳೆಂಟು ವರ್ಷ ಸರ್ವೀಸ್‌ ಮಾಡಿ, ಕೊನೆಗೆ ಪತ್ರಿಕೋದ್ಯಮಕ್ಕೆ ಬಂದಾಗ, ವಾಟಾಳ್‌ ಅಸಲಿಯತ್ತು ಸ್ಪಷ್ಟವಾಗಿ ಕಾಣಿಸತೊಡಗಿತು. ಪತ್ರಿಕೋದ್ಯಮದಲ್ಲಿ ಎರಡು ರೀತಿಯ ದುರಂತಗಳಿರುತ್ತವೆ. ಕೆಲವೊಂದು ವಿಷಯಗಳ ಬಗ್ಗೆ ತುಂಬ ಸ್ಪಷ್ಟವಾದ ಮಾಹಿತಿ ಇರುತ್ತದೆ. ಆದರೆ, ಅದನ್ನು ಬರೆಯಲು ಅಥವಾ ಪ್ರಸಾರ ಮಾಡಲು ಆಗುವುದಿಲ್ಲ. ಏಕೆಂದರೆ, ಬೇಕಾದ ಸಾಕ್ಷ್ಯಾಧಾರ ಸಿಗುವುದಿಲ್ಲ. ಅಂತಹ ಮಾಹಿತಿಗಳು, ನಮ್ಮ ನಮ್ಮ ಖಾಸಗಿ ಮಾತುಕತೆಯಲ್ಲಿಯೇ ಉಳಿದುಬಿಡುತ್ತವೆ. ಇನ್ನೊಂದಿಷ್ಟು ವಿಷಯಗಳಿರುತ್ತವೆ. ಅದರ ಬಗ್ಗೆ ಅನಗತ್ಯವಾಗಿ ಬರೆಯುವ, ವಿಸ್ತರಿಸುವ, ವೈಭವೀಕರಿಸುವ ಮನಸ್ಸಿರುವುದಿಲ್ಲ. ಉದಾಹರಣೆಗೆ ಹೇಳುವುದಾದರೆ, ಉಡುಪಿ ಶಾಸಕ ಪದ್ಮಪ್ರಿಯ ಅವರ ಸಾವು.

ಆದರೆ, ಮಾಧ್ಯಮದ ಸ್ಪರ್ಧೆಯಲ್ಲಿ ವೈಯಕ್ತಿಕ ಅನಿಸಿಕೆಗಳು ವೈಯಕ್ತಿಕವಾಗಿಯೇ ಉಳಿದುಬಿಡುತ್ತವೆ. ಇನ್ನೊಂದು ಚಾನೆಲ್‌ನವರು ಕೊಡುತ್ತಾರೆ ಎಂದು ನಾವು, ಅವರೆಲ್ಲಿ ಕೊಟ್ಟುಬಿಡುತ್ತಾರೋ ಎಂದು ಅವರು ಆತುರಾತುರವಾಗಿ ಸುದ್ದಿ ಪ್ರಸಾರವಾಗುತ್ತದೆ. ಅದೊಂಥರಾ ಸುಳಿಯಲ್ಲಿ ಸಿಕ್ಕ ಬಡ ದೋಣಿಯ ರೀತಿ.

ಆದರೆ, ನಿರ್ಧಾರ ತೆಗೆದುಕೊಳ್ಳುವ ಸ್ಥಾನದಲ್ಲಿರುವ ವ್ಯಕ್ತಿ ಸಂಯಮ ವಹಿಸಿದರೆ, ಕೆರಳಿಸುವ ಹಾಗೂ ವೈಭವೀಕರಿಸುವ ಸುದ್ದಿಗಳಿಗೆ ಖಂಡಿತ ಕತ್ತರಿ ಹಾಕಬಹುದು. ಪೂರ್ತಿ ನಿವಾರಿಸಲಾಗದಿದ್ದರೂ, ಅದರ ತೀವ್ರತೆಯನ್ನು ಖಂಡಿತ ಕಡಿಮೆ ಮಾಡಬಹುದು. ಆದರೆ, ಅಂತಹ ವಿವೇಕ ಇರುವವರ ಸಂಖ್ಯೆ ತುಂಬ ಕಡಿಮೆ. ವೈಭವೀಕರಿಸುವುದೇ ಮಾಧ್ಯಮದ ಮೂಲ ಉದ್ದೇಶ ಎಂಬಂತೆ ಬಹುತೇಕ ಜನ ವರ್ತಿಸುತ್ತಿರುವಾಗ, ಇಂತಹ ವಿವೇಕವಂತರು ಕಣ್ಣಿಗೆ ಬೀಳುವುದೂ ಕಡಿಮೆ.

ಇಂತಹ ಪರಿಸ್ಥಿತಿಯಲ್ಲಿ, ಕತ್ತೆ, ಎಮ್ಮೆ ಹತ್ತಿ ಪೋಸು ಕೊಡುವ, ಖಾಲಿ ಬಿಂದಿಗೆ ಪ್ರದರ್ಶಿಸಿ ಫೋಟೊಕ್ಕೆ ಹಲ್ಲು ತೋರಿಸುವ ವಾಟಾಳ್‌ ನಾಗರಾಜ್ ಅವರ ಬಾಲಿಶ ಪ್ರದರ್ಶನಗಳಿಗೆ ಮಾಧ್ಯಮ ಏಕೆ ಅಷ್ಟೊಂದು ಆದ್ಯತೆ ನೀಡುತ್ತದೆ? ನಾನು ಕೆಲಸ ಮಾಡಿದ ಬಹುತೇಕ ಸುದ್ದಿ ಸಂಸ್ಥೆಗಳಲ್ಲಿ ಸಂಬಂಧಿಸಿದ ಹಿರಿಯರಿಗೆ ಈ ವ್ಯಕ್ತಿಗೆ ಏಕೆ ಅನಗತ್ಯ ಆದ್ಯತೆ ಎಂದು ಕೇಳಿದ್ದೇನೆ. ನನ್ನ ಮಟ್ಟದಲ್ಲಿ ವಿರೋಧಿಸಿದ್ದೇನೆ. ಆ ವ್ಯಕ್ತಿಯದು ಬೂಟಾಟಿಕೆ ಮಾತ್ರ. ಏಕೆ ಪ್ರಚಾರ ಕೊಟ್ಟು ಓದುಗರ ದಾರಿ ತಪ್ಪಿಸುತ್ತೀರಿ ಎಂದು ವಾದಿಸಿದ್ದೇನೆ. ಆದರೆ, ಹಿರಿಯ ಪತ್ರಕರ್ತರಿಗೆ ವಾಟಾಳ್ ಬಗ್ಗೆ ಎಂಥದೋ ಭಯ. ಪ್ರಚಾರ ಸಿಗದಿದ್ದರೆ, ಆ ವ್ಯಕ್ತಿ ಕಚೇರಿಗೇ ಬಂದು ಗದ್ದಲ ಮಾಡಿಯಾನು ಎಂಬ ಆತಂಕ. ಹೋಗಲಿ ಬಿಡಿ, ಒಂದು ಫೊಟೊ, ಕ್ಯಾಪ್ಷನ್‌ ಹಾಕಿ ಕೈತೊಳೆದುಕೊಳ್ಳೋಣ ಎಂದು ಹೇಳುವುದು ಸಾಮಾನ್ಯ.

ಕನ್ನಡಕ್ಕಾಗಿ ಮಾಡಿದ ಕೆಲಸಕ್ಕಿಂತ, ಹೀಗೆ ಫೊಟೊ ಮೇಲೆ ಫೊಟೊಗಳು ಬಂದು ವಾಟಾಳ್‌ ಕನ್ನಡ ಹೋರಾಟಗಾರ ಎಂಬ ಹೆಸರನ್ನು ಸಂಪಾದಿಸಿದರು. ಪ್ರಾರಂಭದಲ್ಲಿ ಅವರು ಕನ್ನಡಕ್ಕಾಗಿ ಮಾಡಿದ ಹೋರಾಟ ಕುರಿತು ನನಗೆ ಅಪಾರ ಗೌರವವಿದೆ. ಆದರೆ, ಅದು ತುಂಬ ದಿನ ಉಳಿಯದೇ, ನಕಲಿ ಶ್ಯಾಮನಂತೆ ವರ್ತಿಸತೊಡಗಿದ್ದರ ಬಗ್ಗೆ ಅಷ್ಟೇ ತಿರಸ್ಕಾರವಿದೆ.

ಈಗ ಜನ ಕೂಡ ಅವರ ಅಸಲಿಯತ್ತು ಅರ್ಥ ಮಾಡಿಕೊಂಡಂತೆ ಕಾಣುತ್ತಿದೆ. ಅದಕ್ಕೆಂದೇ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಚುನಾವಣೆಗಳಲ್ಲಿ ಠೇವಣಿ ಕಳೆದುಕೊಳ್ಳುವಂತೆ ಮರ್ಯಾದೆ ಮಾಡಿದ್ದಾರೆ. ಇನ್ನಾದರೂ ಬಡಾಯಿದಾಸ ಮಾತಿಗಿಂತ ಹೆಚ್ಚಾಗಿ ಕೃತಿಯ ಮೂಲಕ ಕನ್ನಡ ಸೇವೆ ಮಾಡುವಂತಾಗಲಿ. ಚಿಲ್ಲರೆ ತಂತ್ರಗಳ ಮೂಲಕ ಪ್ರಚಾರ ಗಿಟ್ಟಿಸುವ ಕೀಳು ಹವ್ಯಾಸ ಬಿಟ್ಟು, ಗಂಭೀರವಾಗಿ ಕನ್ನಡ ಬೆಳೆಸುವ ಕೆಲಸ ಮಾಡಲಿ.

- ಚಾಮರಾಜ ಸವಡಿ