ಈ ವ್ಯಕ್ತಿಯ ಬಗ್ಗೆ ಒಂದಾನೊಂದು ಸಮಯದಲ್ಲಿ ಗೌರವವಿತ್ತು. ಅವರ ಚಳುವಳಿಗಳು, ಘೋಷಣೆಗಳು ರೋಮಾಂಚನ ಹುಟ್ಟಿಸುತ್ತಿದ್ದವು. ಆಗ ನಾನಿನ್ನೂ ಹೈಸ್ಕೂಲಲ್ಲಿ ಓದುತ್ತಿದ್ದೆ. ಪತ್ರಿಕೆಯಲ್ಲಿ ತಗ್ಗು ಬಿದ್ದಿರುವ ಕೆನ್ನೆಯ, ಉಬ್ಬುಹಲ್ಲುಗಳ ವ್ಯಕ್ತಿಯ ಘೋಷಣೆಗಳನ್ನು ಓದಿ ಮೈ ನವಿರೇಳುತ್ತಿತ್ತು. ಮುಂದೆ ಕಾಲೇಜಿಗೆ ಬಂದಾಗ ಆ ಅಭಿಮಾನ ಇನ್ನಷ್ಟು ಜಾಗೃತವಾಯಿತು. ವಾಟಾಳ್ ನಾಗರಾಜ್ ಹುಟ್ಟಿದ್ದೇ ಕನ್ನಡ ಮತ್ತು ಕರ್ನಾಟಕದ ಹಿತರಕ್ಷಣೆಗೆ ಅಂತ ಮಾತಾಡಿಕೊಳ್ಳುತ್ತಿದ್ದೆವು.
ಮುಂದೆ ಆ ಭಾವನೆ ಕುಸಿಯತೊಡಗಿತು. ಬೇರೆ ಬೇರೆ ವೃತ್ತಿಗಳಲ್ಲಿ ಏಳೆಂಟು ವರ್ಷ ಸರ್ವೀಸ್ ಮಾಡಿ, ಕೊನೆಗೆ ಪತ್ರಿಕೋದ್ಯಮಕ್ಕೆ ಬಂದಾಗ, ವಾಟಾಳ್ ಅಸಲಿಯತ್ತು ಸ್ಪಷ್ಟವಾಗಿ ಕಾಣಿಸತೊಡಗಿತು. ಪತ್ರಿಕೋದ್ಯಮದಲ್ಲಿ ಎರಡು ರೀತಿಯ ದುರಂತಗಳಿರುತ್ತವೆ. ಕೆಲವೊಂದು ವಿಷಯಗಳ ಬಗ್ಗೆ ತುಂಬ ಸ್ಪಷ್ಟವಾದ ಮಾಹಿತಿ ಇರುತ್ತದೆ. ಆದರೆ, ಅದನ್ನು ಬರೆಯಲು ಅಥವಾ ಪ್ರಸಾರ ಮಾಡಲು ಆಗುವುದಿಲ್ಲ. ಏಕೆಂದರೆ, ಬೇಕಾದ ಸಾಕ್ಷ್ಯಾಧಾರ ಸಿಗುವುದಿಲ್ಲ. ಅಂತಹ ಮಾಹಿತಿಗಳು, ನಮ್ಮ ನಮ್ಮ ಖಾಸಗಿ ಮಾತುಕತೆಯಲ್ಲಿಯೇ ಉಳಿದುಬಿಡುತ್ತವೆ. ಇನ್ನೊಂದಿಷ್ಟು ವಿಷಯಗಳಿರುತ್ತವೆ. ಅದರ ಬಗ್ಗೆ ಅನಗತ್ಯವಾಗಿ ಬರೆಯುವ, ವಿಸ್ತರಿಸುವ, ವೈಭವೀಕರಿಸುವ ಮನಸ್ಸಿರುವುದಿಲ್ಲ. ಉದಾಹರಣೆಗೆ ಹೇಳುವುದಾದರೆ, ಉಡುಪಿ ಶಾಸಕ ಪದ್ಮಪ್ರಿಯ ಅವರ ಸಾವು.
ಆದರೆ, ಮಾಧ್ಯಮದ ಸ್ಪರ್ಧೆಯಲ್ಲಿ ವೈಯಕ್ತಿಕ ಅನಿಸಿಕೆಗಳು ವೈಯಕ್ತಿಕವಾಗಿಯೇ ಉಳಿದುಬಿಡುತ್ತವೆ. ಇನ್ನೊಂದು ಚಾನೆಲ್‌ನವರು ಕೊಡುತ್ತಾರೆ ಎಂದು ನಾವು, ಅವರೆಲ್ಲಿ ಕೊಟ್ಟುಬಿಡುತ್ತಾರೋ ಎಂದು ಅವರು ಆತುರಾತುರವಾಗಿ ಸುದ್ದಿ ಪ್ರಸಾರವಾಗುತ್ತದೆ. ಅದೊಂಥರಾ ಸುಳಿಯಲ್ಲಿ ಸಿಕ್ಕ ಬಡ ದೋಣಿಯ ರೀತಿ.
ಆದರೆ, ನಿರ್ಧಾರ ತೆಗೆದುಕೊಳ್ಳುವ ಸ್ಥಾನದಲ್ಲಿರುವ ವ್ಯಕ್ತಿ ಸಂಯಮ ವಹಿಸಿದರೆ, ಕೆರಳಿಸುವ ಹಾಗೂ ವೈಭವೀಕರಿಸುವ ಸುದ್ದಿಗಳಿಗೆ ಖಂಡಿತ ಕತ್ತರಿ ಹಾಕಬಹುದು. ಪೂರ್ತಿ ನಿವಾರಿಸಲಾಗದಿದ್ದರೂ, ಅದರ ತೀವ್ರತೆಯನ್ನು ಖಂಡಿತ ಕಡಿಮೆ ಮಾಡಬಹುದು. ಆದರೆ, ಅಂತಹ ವಿವೇಕ ಇರುವವರ ಸಂಖ್ಯೆ ತುಂಬ ಕಡಿಮೆ. ವೈಭವೀಕರಿಸುವುದೇ ಮಾಧ್ಯಮದ ಮೂಲ ಉದ್ದೇಶ ಎಂಬಂತೆ ಬಹುತೇಕ ಜನ ವರ್ತಿಸುತ್ತಿರುವಾಗ, ಇಂತಹ ವಿವೇಕವಂತರು ಕಣ್ಣಿಗೆ ಬೀಳುವುದೂ ಕಡಿಮೆ.
ಇಂತಹ ಪರಿಸ್ಥಿತಿಯಲ್ಲಿ, ಕತ್ತೆ, ಎಮ್ಮೆ ಹತ್ತಿ ಪೋಸು ಕೊಡುವ, ಖಾಲಿ ಬಿಂದಿಗೆ ಪ್ರದರ್ಶಿಸಿ ಫೋಟೊಕ್ಕೆ ಹಲ್ಲು ತೋರಿಸುವ ವಾಟಾಳ್ ನಾಗರಾಜ್ ಅವರ ಬಾಲಿಶ ಪ್ರದರ್ಶನಗಳಿಗೆ ಮಾಧ್ಯಮ ಏಕೆ ಅಷ್ಟೊಂದು ಆದ್ಯತೆ ನೀಡುತ್ತದೆ? ನಾನು ಕೆಲಸ ಮಾಡಿದ ಬಹುತೇಕ ಸುದ್ದಿ ಸಂಸ್ಥೆಗಳಲ್ಲಿ ಸಂಬಂಧಿಸಿದ ಹಿರಿಯರಿಗೆ ಈ ವ್ಯಕ್ತಿಗೆ ಏಕೆ ಅನಗತ್ಯ ಆದ್ಯತೆ ಎಂದು ಕೇಳಿದ್ದೇನೆ. ನನ್ನ ಮಟ್ಟದಲ್ಲಿ ವಿರೋಧಿಸಿದ್ದೇನೆ. ಆ ವ್ಯಕ್ತಿಯದು ಬೂಟಾಟಿಕೆ ಮಾತ್ರ. ಏಕೆ ಪ್ರಚಾರ ಕೊಟ್ಟು ಓದುಗರ ದಾರಿ ತಪ್ಪಿಸುತ್ತೀರಿ ಎಂದು ವಾದಿಸಿದ್ದೇನೆ. ಆದರೆ, ಹಿರಿಯ ಪತ್ರಕರ್ತರಿಗೆ ವಾಟಾಳ್ ಬಗ್ಗೆ ಎಂಥದೋ ಭಯ. ಪ್ರಚಾರ ಸಿಗದಿದ್ದರೆ, ಆ ವ್ಯಕ್ತಿ ಕಚೇರಿಗೇ ಬಂದು ಗದ್ದಲ ಮಾಡಿಯಾನು ಎಂಬ ಆತಂಕ. ಹೋಗಲಿ ಬಿಡಿ, ಒಂದು ಫೊಟೊ, ಕ್ಯಾಪ್ಷನ್ ಹಾಕಿ ಕೈತೊಳೆದುಕೊಳ್ಳೋಣ ಎಂದು ಹೇಳುವುದು ಸಾಮಾನ್ಯ.
ಕನ್ನಡಕ್ಕಾಗಿ ಮಾಡಿದ ಕೆಲಸಕ್ಕಿಂತ, ಹೀಗೆ ಫೊಟೊ ಮೇಲೆ ಫೊಟೊಗಳು ಬಂದು ವಾಟಾಳ್ ಕನ್ನಡ ಹೋರಾಟಗಾರ ಎಂಬ ಹೆಸರನ್ನು ಸಂಪಾದಿಸಿದರು. ಪ್ರಾರಂಭದಲ್ಲಿ ಅವರು ಕನ್ನಡಕ್ಕಾಗಿ ಮಾಡಿದ ಹೋರಾಟ ಕುರಿತು ನನಗೆ ಅಪಾರ ಗೌರವವಿದೆ. ಆದರೆ, ಅದು ತುಂಬ ದಿನ ಉಳಿಯದೇ, ನಕಲಿ ಶ್ಯಾಮನಂತೆ ವರ್ತಿಸತೊಡಗಿದ್ದರ ಬಗ್ಗೆ ಅಷ್ಟೇ ತಿರಸ್ಕಾರವಿದೆ.
ಈಗ ಜನ ಕೂಡ ಅವರ ಅಸಲಿಯತ್ತು ಅರ್ಥ ಮಾಡಿಕೊಂಡಂತೆ ಕಾಣುತ್ತಿದೆ. ಅದಕ್ಕೆಂದೇ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಚುನಾವಣೆಗಳಲ್ಲಿ ಠೇವಣಿ ಕಳೆದುಕೊಳ್ಳುವಂತೆ ಮರ್ಯಾದೆ ಮಾಡಿದ್ದಾರೆ. ಇನ್ನಾದರೂ ಬಡಾಯಿದಾಸ ಮಾತಿಗಿಂತ ಹೆಚ್ಚಾಗಿ ಕೃತಿಯ ಮೂಲಕ ಕನ್ನಡ ಸೇವೆ ಮಾಡುವಂತಾಗಲಿ. ಚಿಲ್ಲರೆ ತಂತ್ರಗಳ ಮೂಲಕ ಪ್ರಚಾರ ಗಿಟ್ಟಿಸುವ ಕೀಳು ಹವ್ಯಾಸ ಬಿಟ್ಟು, ಗಂಭೀರವಾಗಿ ಕನ್ನಡ ಬೆಳೆಸುವ ಕೆಲಸ ಮಾಡಲಿ.
- ಚಾಮರಾಜ ಸವಡಿ(ಜೂನ್ ೨೯, ೨೦೦೮)
No comments:
Post a Comment