ಶಾಸಕರ ರಾಜೀನಾಮೆ ರಾಜಕೀಯ

14 Jul 2008

(ರಾಜ್ಯ ರಾಜಕೀಯ ನಿರ್ಲಜ್ಜ ಘಟ್ಟದಲ್ಲಿದೆ. ಹಣ ಇದ್ದವರು ಏನು ಬೇಕಾದರೂ ಮಾಡಬಹುದು ಎಂಬ ವಾತಾವರಣ ಉಂಟಾಗಿದೆ. ಅಧಿಕಾರ ಹಿಡಿಯುವುದೇ ಪರಮ ಉದ್ದೇಶವಾದರೆ ಏನಾಗುತ್ತದೆ ಎಂಬುದಕ್ಕೆ ಕರ್ನಾಟಕದಲ್ಲಿ ಶನಿವಾರದಿಂದ ನಡೆದಿರುವ ಘಟನೆಗಳೇ ಸಾಕ್ಷಿ. ಶಾಸಕರ ರಾಜೀನಾಮೆ ಹಾಗೂ ಬಿಜೆಪಿ ಸೇರ್ಪಡೆ ಹಿಂದಿರುವ ಹುನ್ನಾರ ಕುರಿತು ಈ ಬರಹ)

ಬಹುಶಃ ೨೦೦೮ನೇ ವರ್ಷ ರಾಜ್ಯ ರಾಜಕೀಯದಲ್ಲಿ ಹಲವಾರು ಕಾರಣಗಳಿಂದಾಗಿ ನೆನಪಿನಲ್ಲಿರುತ್ತದೆ.

ಇತ್ತೀಚನ ವರ್ಷಗಳಲ್ಲಿ ಕಂಡ ಅತ್ಯಂತ ನಿರ್ಲಜ್ಜ ರಾಜಕಾರಣವನ್ನು ಜೆಡಿಎಸ್‌ನ ಎಚ್‌.ಡಿ. ದೇವೇಗೌಡ ಪ್ರದರ್ಶಿಸಿದ ಪರಿಣಾಮ ಬಹುಮತ ಸಾಬೀತು ಮಾಡಲು ಹೋಗಿದ್ದ ಮುಖ್ಯಮಂತ್ರಿಯೊಬ್ಬರು ರಾಜೀನಾಮೆ ಸಲ್ಲಿಸಿ ಹಿಂತಿರುಗಿದರು. ರಾಷ್ಟ್ರಪತಿ ಆಡಳಿತ ಬಂದಿತು. ಅಧಿಕಾರಿಗಳದೇ ಸಾಮ್ರಾಜ್ಯ. ಪರಿಣಾಮ, ರಸಗೊಬ್ಬರದಂಥ ಬೇಡಿಕೆಯನ್ನು ಸರಿಯಾಗಿ ಸಲ್ಲಿಸದೇ ಮುಂಗಾರು ಗೊಂದಲಕ್ಕೆ ಕಾರಣವಾಯಿತು.

ಇನ್ನೊಂದೆಡೆ ಚುನಾವಣಾ ಆಯೋಗ ಅತ್ಯಂತ ಜವಾಬ್ದಾರಿಯುತವಾಗಿ, ಸಮರ್ಥವಾಗಿ ಕೆಲಸ ಮಾಡಿ, ಕ್ಷೇತ್ರ ಪುನರ್‌ವಿಂಗಡಣೆ ನಂತರವೂ ದಾಖಲೆ ಸಮಯದಲ್ಲಿ ಚುನಾವಣೆ ನಡೆಸಲು ಮುಂದಾಯಿತು. ವಿರೋಧದ ನಡುವೆಯೂ ಗದ್ದಲ ಗೊಂದಲಗಳಿಲ್ಲದೇ ಚುನಾವಣೆ ಮುಗಿಸಿತು. ಜೆಡಿಎಸ್‌ನ ಪಾಪದ ಫಲವೆಂಬಂತೆ ಬಿಜೆಪಿ ಸರಳ ಬಹುಮತಕ್ಕೆ ಹತ್ತಿರ ಬಂದು, ಜೆಡಿಎಸ್‌ ಹೀನಾಯವಾಗಿ ಮೂರನೇ ಸ್ಥಾನಕ್ಕೆ ಇಳಿಯಿತು.

ಇದು ಒಂದು ಪ್ರಮುಖ ಘಟ್ಟ.

ಅಧಿಕಾರಕ್ಕೆ ಬರಬೇಕೆಂದರೆ ಪಕ್ಷೇತರರ ಮರ್ಜಿಯಲ್ಲೇ ಇರಬೇಕೆನ್ನುವ ಕಹಿ ವಾಸ್ತವ ಒಪ್ಪಿಕೊಳ್ಳಲು ಹುಮ್ಮಸ್ಸಿನಲ್ಲಿರುವ ಬಿಜೆಪಿ ನಾಯಕರು ಸಿದ್ಧರಿದ್ದಿಲ್ಲ. ಹೀಗಾಗಿ, ಶಾಸಕರ ಖರೀದಿಗೆ ಮುಂದಾದರು. ಸಚಿವ ಸ್ಥಾನದ ಆಮಿಷ ಒಡ್ಡಿ ಪಕ್ಷೇತರರ ಬೆಂಬಲ ಪಡೆದುಕೊಂಡು ಸರ್ಕಾರ ರಚಿಸಲಾಯಿತು. ಆದರೆ, ಇದು ಶಾಶ್ವತ ಪರಿಹಾರವಲ್ಲ ಎಂಬ ಅರಿವು ಬಿಜೆಪಿ ನಾಯಕರಲ್ಲಿ ಇದ್ದೇ ಇತ್ತು.
ಯಥಾಪ್ರಕಾರ, ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾದ ಬಳ್ಳಾರಿ ಗಣಿ ದೊರೆಗಳಾದ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಈ ಸಮಸ್ಯೆ ಪರಿಹರಿಸಲು ಮುಂದಾದರು. ಮೊದಲು ಜೆಡಿಎಸ್‌ ಒಡೆಯುವ ತಂತ್ರ ಹೆಣೆಯಲಾಯಿತು. ಆದರೆ, ಅದು ಸುಲಭ ಸಾಧ್ಯವಲ್ಲ ಎಂಬುದು ಗೊತ್ತಾಯಿತು. ಆಗ ರೂಪಿಸಿದ್ದೇ ರಾಜೀನಾಮೆ ಕೊಟ್ಟು ಹೊರಬರುವ ತಂತ್ರ.

ಈ ಕಾರ್ಯಾಚರಣೆಯ ಕೆಲ ವಿಶೇಷತೆಗಳು ಹೀಗಿವೆ:

- ಶಾಸಕನೊಬ್ಬ ತನ್ನ ಸದಸ್ಯತ್ವ ಅವಧಿಯಲ್ಲಿ ಇನ್ನೊಂದು ಪಕ್ಷಕ್ಕೆ ಬೆಂಬಲ ಕೊಡುವುದಾಗಲಿ, ಸೇರಿಕೊಳ್ಳಲಾಗಲಿ ಬರುವುದಿಲ್ಲ. ಹಾಗೆ ಮಾಡಿದರೆ, ಪಕ್ಷಾಂತರ ನಿಷೇಧ ಕಾಯ್ದೆಯಡಿ ಅವನ ಸದಸ್ಯತ್ವ ರದ್ದಾಗುತ್ತದೆ.

- ಆದರೆ, ರಾಜೀನಾಮೆ ನೀಡಿ ಹೊರ ಬಂದರೆ ಆತ ಸ್ವತಂತ್ರ. ಸಾಮಾನ್ಯವಾಗಿ ಈ ಕ್ರಮ ಕೈಗೊಳ್ಳಲು ಶಾಸಕರು ಸಿದ್ಧರಿರುವುದಿಲ್ಲ. ಏಕೆಂದರೆ, ಆಗ ಉಪಚುನಾವಣೆ ನಡೆಯಬೇಕಾಗುತ್ತದೆ. ಒಂದು ಸಾರಿ ಗೆಲ್ಲಲಿಕ್ಕೇ ಸಾಕಷ್ಟು ಕಷ್ಟಪಟ್ಟಿರುತ್ತಾರೆ. ಹೀಗಾಗಿ ಈ ಸವಾಲು ತೆಗೆದುಕೊಳ್ಳಲು ಹೆದರುತ್ತಾರೆ.

- ಗಣಿ ದೊರೆಗಳು ಗಮನ ಕೊಟ್ಟಿದ್ದೇ ಈ ಅಂಶದತ್ತ. ಒಂದು ಮೂಲದ ಪ್ರಕಾರ, ಚುನಾವಣೆಯಲ್ಲಿ ಖರ್ಚಾದ ಹಣವನ್ನು ಹೊಂದಿಸುವ, ಹೆಚ್ಚುವರಿಯಾಗಿ ಹಣ ಕೊಡುವ, ಮತ್ತೆ ಚುನಾವಣೆ ಎದುರಿಸುವ ಎಲ್ಲ ಖರ್ಚನ್ನೂ ನೋಡಿಕೊಳ್ಳುವ ಹಾಗೂ ಗೆದ್ದ ನಂತರ ’ಸೂಕ್ತ’ ಸ್ಥಾನ ಕಲ್ಪಿಸುವ ಭರವಸೆಯನ್ನು ಕೆಲ ಶಾಸಕರಿಗೆ ನೀಡಲಾಯಿತು.

- ಶಾಸಕರು ಈ ಆಮಿಷಕ್ಕೆ ಮಣಿದರು. ಏಕೆಂದರೆ, ಪ್ರತಿ ಪಕ್ಷದಲ್ಲಿ ಇನ್ನೈದು ವರ್ಷ ಕೂತರೂ ಅವರಿಗೆ ಚುನಾವಣೆಯಲ್ಲಿ ಮಾಡಿರುವ ಖರ್ಚು ಹಿಂತಿರುಗುವ ಭರವಸೆ ಇಲ್ಲ. ಅದರ ಬದಲು ರಾಜೀನಾಮೆ ನೀಡಿದರೆ, ಖರ್ಚು ಮಾಡಿದ ಹತ್ತು ಪಟ್ಟು ಹಣ ಬರುತ್ತದೆ. ಇನ್ನೊಮ್ಮೆ ಉಚಿತವಾಗಿ ಗೆದ್ದು ಬರುವ ಅವಕಾಶವೂ ಸಿಗುತ್ತದೆ.

- ಗಣಿ ದೊರೆಗಳು ಇನ್ನೊಂದು ತಂತ್ರ ಹೆಣೆದರು. ರಾಜ್ಯದ ದೊಡ್ಡ ಕೋಮಿನಲ್ಲಿ ಒಂದಾಗಿರುವ ವಾಲ್ಮೀಕಿ ಸಮಾಜದ ಶಾಸಕರನ್ನು ಬಿಜೆಪಿಗೆ ಸೆಳೆಯುವ ಜವಾಬ್ದಾರಿಯನ್ನು ಸಚಿವ ಶ್ರೀರಾಮುಲು ಹೊತ್ತುಕೊಂಡರು. ಈ ತಂತ್ರ ಫಲ ನೀಡಿತು. ವಾಲ್ಮೀಕಿ ಜನಾಂಗದ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಹಾಗೂ ಶಿವಾನಂದ ನಾಯಕ್‌ ಜೆಡಿಎಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿಕೊಂಡರು. ಗಣಿ ದೊರೆಗಳ ವ್ಯಾಪಾರದಲ್ಲಿ ಮುಖ್ಯ ಪಾತ್ರಧಾರನಾಗಿರುವ ಕಾರವಾರದ ಕಾಂಗ್ರೆಸ್‌ ಶಾಸಕ ಆನಂದ ಆಸ್ನೋಟಿಕರ್‌ ಕೂಡ ಬಿಜೆಪಿಗೆ ಬಂದರು. ಕಾಂಗ್ರೆಸ್‌ನ ಸಂಸದ ಆರ್‌.ಎಲ್‌. ಜಾಲಪ್ಪ, ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಿದ್ದರ ಬಗ್ಗೆ ಹೊಂದಿದ್ದ ಅಸಮಾಧಾನದ ಅಂಗವಾಗಿ ಅವರ ಮಗ ಶಾಸಕ ನರಸಿಂಹಸ್ವಾಮಿ ರಾಜೀನಾಮೆ ನೀಡಿ ಬಿಜೆಪಿ ಸೇರಿದರು.

- ಬರಲಿರುವ ದಿನಗಳಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಇನ್ನೂ ಐದಾರು ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಸೇರಲಿದ್ದಾರೆ. ಸುಮಾರು ಎಂಟ್ಹತ್ತು ಶಾಸಕರಿಂದ ರಾಜೀನಾಮೆ ಕೊಡಿಸಿ ಉಪಚುನಾವಣೆ ನಡೆಸುವುದಕ್ಕೆ ವೇದಿಕೆ ಸಿದ್ಧಪಡಿಸಲಾಗುತ್ತದೆ. ತಮ್ಮದೇ ಸರ್ಕಾರ ಅಸ್ತಿತ್ವದಲ್ಲಿರುವುದರಿಂದ, ಗಣಿ ದೊರೆಗಳ ಕಾರ್ಯಾಚರಣೆ ನಡೆಯುವುದರಿಂದ ಹತ್ತರಲ್ಲಿ ನಾಲ್ಕೈದು ಸ್ಥಾನಗಳನ್ನು ಬಿಜೆಪಿ ಗೆದ್ದರೂ ಸಾಕು, ಮುಂದಿನ ಐದು ವರ್ಷಗಳವರೆಗೆ ಸರ್ಕಾರ ಅಬಾಧಿತ.
ಇದು ಬಿಜೆಪಿ ಲೆಕ್ಕಾಚಾರ.

ಆ ಪ್ರಕಾರ, ರಾಜೀನಾಮೆ ಪ್ರಹಸನ ಪ್ರಾರಂಭವಾಗಿದೆ. ನಾವು-ನೀವು ಮೂಕ ಪ್ರೇಕ್ಷಕರಂತೆ ನೋಡುತ್ತ ಕೂತಿದ್ದೇವೆ.


ನಮ್ಮೊಳಗಿನ ಮತದಾರ ಜಾಗೃತನಾಗುವುದು ಯಾವಾಗ?

- ಚಾಮರಾಜ ಸವಡಿ

(೬, ಜುಲೈ ೨೦೦೮)

No comments: