ಕೃಷಿ ಮಾರುಕಟ್ಟೆ ಸುಧಾರಿಸುವುದು ಎಂದು?

20 Jul 2008


ಕರ್ನಾಟಕ ಸರ್ಕಾರದ ಅಧಿಕೃತ ಪ್ರಕಟಣೆಯಾದ ‘ಜನಪದ’ ಮಾಸಿಕದ ಸೆಪ್ಟೆಂಬರ್ ೨೦೦೬ನೇ ಸಂಚಿಕೆಯ ಪುಟ ೧೮ರಲ್ಲಿ ಒಂದು ಮಾಹಿತಿ ಇದೆ. ರಾಷ್ಟ್ರೀಯ ತೋಟಗಾರಿಕಾ ಮಿಶನ್ ಯೋಜನೆಯ ಕೆಲವು ತುಣುಕುಗಳು ಅದರಲ್ಲಿವೆ.


‘ಕಡಿಮೆ ವೆಚ್ಚದ ೫ ಮೆಟ್ರಿಕ್ ಟನ್ ಈರುಳ್ಳಿ ಶೇಖರಣಾ ಗೋದಾಮುಗಳಿಗೆ ಶೇ.೨೫ರ ಸಹಾಯಧನ ನೀಡಲಾಗುತ್ತಿದೆ. ೫ ಮೆಟ್ರಿಕ್ ಟನ್ ಗೋದಾಮುಗಳಿಗೆ ರೂ.೫,೦೦೦ ಹಾಗೂ ೫೦ ಮೆಟ್ರಿಕ್ ಟನ್ ಗೋದಾಮುಗಳಿಗೆ ರೂ.೫೦,೦೦೦ವರೆಗೆ ಸಹಾಯಧನ ನೀಡಲಾಗುತ್ತದೆ. ತರಕಾರಿ ಬೆಳೆಗಳನ್ನು ಕಚ್ಚಾ ವಸ್ತುಗಳನ್ನಾಗಿಸಿ ಸಂಸ್ಕರಣೆ ಮತ್ತು ಮೌಲ್ಯವರ್ಧೀಕರಣ ಮಾಡುವ ಕಾರ್ಯಕ್ರಮಗಳಿಗೆ ವಿಷನ್ ಹಾಗೂ ರಾಜ್ಯ ವಲಯ ಸೇರಿ ಗರಿಷ್ಠ ಮಿತಿಗೆ ಒಳಪಟ್ಟು ಶೇ.೫೦ರ ಸಹಾಯಧನ ನೀಡಲಾಗುತ್ತದೆ...


‘ರೈತರು ಬೆಳೆಯುವ ತರಕಾರಿಗಳಿಗೆ ಉತ್ತಮ ಬೆಲೆ ದೊರಕಿಸಿಕೊಡುವಲ್ಲಿ ನೆರವಾಗುವ ಸುಧಾರಿತ ಮಾರುಕಟ್ಟೆಯ ವ್ಯವಸ್ಥೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು, ಅಂದರೆ ಮಾರುಕಟ್ಟೆ ಪ್ರಾಂಗಣ ಸುಧಾರಣೆ, ಗೋದಾಮುಗಳ ನಿರ್ಮಾಣ ಹಾಗೂ ಹವಾನಿಯಂತ್ರಿತ ವಾಹನ ಸೇರಿದಂತೆ ಹಲವಾರು ಕಾರ್ಯಕ್ರಮಗಳಿಗೆ ಶೇ.೨೫ರ ಸಹಾಯಧನಕ್ಕೆ ಅವಕಾಶ ಇದೆ. ಮಾರುಕಟ್ಟೆಯಲ್ಲಿ ನಿರತವಾಗಿರುವ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಈ ಸಹಾಯಧನ ಪಡೆಯಲು ಅರ್ಹವಾಗಿರುತ್ತವೆ’-


ಅದೇ ಲೇಖನದ ಇನ್ನೊಂದು ಪ್ಯಾರಾದಲ್ಲಿ ‘ತೋಟಗಾರಿಕಾ ಮಿಶನ್ ತರಕಾರಿ ಅಭಿವೃದ್ಧಿ ಯೋಜನೆಯಡಿ ರೈತರಿಗೆ ಶೇ.೫೦ರ ರಿಯಾಯಿತಿ ದರದಲ್ಲಿ ಪ್ರತಿ ಪ್ಲಾಸ್ಟಿಕ್ ಕ್ರೇಟ್‌ಗೆ ಗರಿಷ್ಠ ರೂ.೮೦ ಸಹಾಯಧನ ನೀಡಲಾಗುತ್ತಿದೆ. ಈರುಳ್ಳಿ, ಆಲೂಗೆಡ್ಡೆ, ಟೊಮ್ಯಾಟೊ ಇತ್ಯಾದಿ ಗುಂಡಾಕೃತಿಯ ತರಕಾರಿ ಬೆಳೆಗಳನ್ನು ವರ್ಗೀಕರಿಸುವ ಯಂತ್ರಗಳಿಗೆ ಶೇ.೨೫ರ ಗರಿಷ್ಠ ರೂ.೬೫,೨೦೦ ಸಹಾಯಧನ ನೀಡಲಾಗುತ್ತಿದೆ’ ಎಂಬ ಮಾಹಿತಿ ಇದೆ.


ಈಗ ನಿಮ್ಮ ಗಮನವನ್ನು ಏಷ್ಯದ ಅತಿ ದೊಡ್ಡ ಕೃಷಿ ಉತ್ಪನ್ನ ಮಾರುಕಟ್ಟೆ ಎಂದು ಹೆಸರು ಪಡೆದಿರುವ ಹುಬ್ಬಳ್ಳಿಯ ಶ್ರೀ ಜಗಜ್ಯೋತಿ ಬಸವೇಶ್ವರ ಎ.ಪಿ.ಎಂ.ಸಿ. ಕಡೆ ತಿರುಗಿಸಿ. ಪ್ರತಿ ವರ್ಷ ಇಲ್ಲಿ ಉಳ್ಳಾಗಡ್ಡಿ (ಈರುಳ್ಳಿ) ಖರೀದಿ ಜಾತ್ರೆ ನಡೆಯುತ್ತದೆ. ಜಾತ್ರೆ ಎಂಬ ಶಬ್ದ ಬಳಕೆ ಏಕೆಂದರೆ ಅಕ್ಷರಶಃ ಅರ್ಧ ಕರ್ನಾಟಕದ ಈರುಳ್ಳಿ ಬೆಳೆಗಾರರು ಇಲ್ಲಿ ಬಂದು ತಮ್ಮ ಉತ್ಪನ್ನಗಳನ್ನು ಮಾರುತ್ತಾರೆ. ಅರ್ಧ ಭಾರತದ ವಿವಿಧ ರಾಜ್ಯಗಳ ಸಗಟು ಖರೀದಿದಾರರು ಇಲ್ಲಿಂದ ಈರುಳ್ಳಿ ಖರೀದಿಸುತ್ತಾರೆ. ಸುಮಾರು ಎಂಬತ್ತು ಕೋಟಿ ರೂಪಾಯಿಗಳ ವಹಿವಾಟು ಈರುಳ್ಳಿ ಒಂದರಲ್ಲಿಯೇ ನಡೆಯುತ್ತದೆ.


ಏಕೆ ನಿರಾಸಕ್ತಿ?


ಒಂದು ವೇಳೆ ಮೇಲಿನ ಎರಡೂ ಉದಾಹರಣೆಗಳು ನಿಜವಾಗಿದ್ದ ಪಕ್ಷದಲ್ಲಿ ಪ್ರತಿ ವರ್ಷ ಈರುಳ್ಳಿ ಬೆಳೆಗೆ ಸೂಕ್ತ ಬೆಂಬಲ ಬೆಲೆ ಘೋಷಿಸಲು ಸರ್ಕಾರ ಮೀನಮೇಷ ಏಕೆ ಎಣಿಸುತ್ತದೆ? ಒಂದು ವೇಳೆ ಸರ್ಕಾರದ ಇಷ್ಟೊಂದು ಜನಪರ ಯೋಜನೆಗಳು ಸರಿಯಾಗಿ ತಲುಪಿದ್ದೇ ಆದರೆ ನೂರಾರು ಕೋಟಿ ರೂಪಾಯಿಗಳ ಈರುಳ್ಳಿ ಬೆಳೆ ವಹಿವಾಟು ಪ್ರತಿ ವರ್ಷ ಏಕೆ ಗೊಂದಲಕ್ಕೆ ಸಿಲುಕುತ್ತದೆ? ನಮ್ಮ ಈರುಳ್ಳಿ ಬೆಳೆಗಾರರು ಏಕೆ ಶಾಶ್ವತ ಸಾಲಗಾರರಾಗಿದ್ದಾರೆ? ಪ್ರತಿ ವರ್ಷ ನಡೆಯುವ ರೈತರ ಆತ್ಮಹತ್ಯೆಗಳಲ್ಲಿ ಈರುಳ್ಳಿ ಬೆಳೆದವರ ಸಂಖ್ಯೆ ಏಕೆ ಹೆಚ್ಚಿರುತ್ತದೆ?


ಈ ಮಹತ್ವದ ಪ್ರಶ್ನೆಗಳಿಗೆ ಉತ್ತರಿಸುವ ಜವಾಬ್ದಾರಿ ಸಂಬಂಧಿಸಿದ ಎಲ್ಲ ಇಲಾಖೆಗಳ ಮೇಲಿದೆ. ನಮ್ಮ ಜನಪ್ರತಿನಿಧಿಗಳೂ ಇದಕ್ಕೆ ಬಾಧ್ಯರಾಗುತ್ತಾರೆ. ನಮ್ಮ ಮಾರುಕಟ್ಟೆ ವ್ಯವಸ್ಥೆ ಇದಕ್ಕೆ ಜವಾಬ್ದಾರವಾಗುತ್ತದೆ. ಏಕೆಂದರೆ, ಈ ಒಂದು ತರಕಾರಿ ಬೆಳೆಯೇ ನೂರಾರು ಕೋಟಿ ರೂಪಾಯಿಗಳ ವ್ಯಾಪಾರಕ್ಕೆ ಕಾರಣವಾಗುವುದರಿಂದ ಪ್ರತಿ ವರ್ಷದ ಪ್ರಹಸನಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಅವಶ್ಯಕತೆ ಇದೆ.


ವಾರ್ಷಿಕ ದುಃಸ್ಥಿತಿ


ಎರಡು ವರ್ಷಗಳ ಹಿಂದೆ ಈರುಳ್ಳಿ ಬೆಳೆಯುವ ಮಹಾರಾಷ್ಟ್ರದ ಅರ್ಧಕ್ಕರ್ಧ ಪ್ರದೇಶ ಪ್ರವಾಹಪೀಡಿತವಾಯಿತು. ಸಹಜವಾಗಿ ಕರ್ನಾಟಕದ ಈರುಳ್ಳಿಗೆ ಮಾರುಕಟ್ಟೆ ಕುದುರಿತು. ಒಂದು ಸಮಯ ಕ್ವಿಂಟಲ್‌ಗೆ ರೂ.೧,೬೦೦ಕ್ಕೂ ಹೆಚ್ಚು ಧಾರಣೆಯಿದ್ದರೂ ದಲಾಲರು ರೂ.೮೦೦ಕ್ಕಿಂತ ಹೆಚ್ಚು ನೀಡದೆ ಅಸಹಕಾರ ತೋರಿದರು. ಸಣ್ಣ ಸಣ್ಣ ವಿಷಯಗಳಿಗೂ ಭಾವೋದ್ವೇಗದಿಂದ ಸ್ಪಂದಿಸುತ್ತಿದ್ದ ಜನಪ್ರತಿನಿಧಿಗಳು ಅದೇಕೋ ಸುಮ್ಮನೇ ಕೂತರು. ಅನಿವಾರ್ಯವಾಗಿ ರೈತರು ಬೀದಿಗಿಳಿದು ಪ್ರತಿಭಟಿಸಿದಾಗ ಮಾತ್ರ ಬೆಂಬಲ ಬೆಲೆ ಘೋಷಿಸಲಾಯಿತು. ಆದರೆ ಅದು ಕೂಡ ರೂ.೮೫೦ ದಾಟಲಿಲ್ಲ.


ಇಲ್ಲಿ ಲಾಭವಾಗಿದ್ದು ಯಾರಿಗೆ?


ರೈತರಿಗಂತೂ ಖಂಡಿತ ಅಲ್ಲ. ಏಕೆಂದರೆ ಲಾಭಾಂಶದ ಬಹುಪಾಲು ಮಧ್ಯವರ್ತಿಗಳ ಪಾಲಾಯಿತು. ಎ.ಪಿ.ಎಂ.ಸಿ. ಹೊರಗೇ ಬಹುತೇಕ ಖರೀದಿ ನಡೆಸಿದ್ದರಿಂದ ತೆರಿಗೆ ರೂಪದ ಲಾಭ ಸರ್ಕಾರಕ್ಕೆ ದಕ್ಕಲಿಲ್ಲ. ಇದು ಪ್ರತಿ ವರ್ಷದ ಗೋಳು. ಯಾವತ್ತಾದರೂ ಕೊಂಚ ಲಾಭ ಕಾಣಬೇಕೆಂದರೆ ಮಾರುಕಟ್ಟೆ ತುಂಬ ಈರುಳ್ಳಿ ತುಂಬಿ ತುಳುಕುತ್ತಿರುತ್ತದೆ. ಬೆಂಬಲ ಬೆಲೆ ಇಲ್ಲದೇ ದರ ಪಾತಾಳಕ್ಕೆ ಇಳಿದಿರುತ್ತದೆ. ಇಲ್ಲವೇ, ಮಳೆ ಕೈಕೊಟ್ಟು ಬೆಳೆ ನಾಶವಾಗಿರುತ್ತದೆ. ಹೀಗಾಗಿ ರೈತರ ಜೇಬು ಪ್ರತಿ ವರ್ಷ ಖಾಲಿಖಾಲಿಯೇ.


ಪ್ರತಿ ವರ್ಷ ಈ ರೀತಿ ನಡೆಯುವ ಈ ಖರೀದಿ ನಾಟಕಕ್ಕೆ ಯಾರು ಸೂತ್ರಧಾರರು? ಇದನ್ನು ನಿಭಾಯಿಸುವುದು ಹೇಗೆ? ಯಾರು ಇದರ ಜವಾಬ್ದಾರಿ ಹೊರಬೇಕು?


ಖರೀದಿ ನೀತಿ ಬಂದೀತೆ?


ಎರಡು ವರ್ಷಗಳ ಹಿಂದೆ ಮುಂಗಾರು ಹಂಗಾಮಿನಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಈರುಳ್ಳಿ ಖರೀದಿ ಅವಘಡವನ್ನು ಕೊಂಚ ನೋಡಿದರೂ ಸಮಸ್ಯೆಯ ಮೂಲ ಏನೆಂಬುದು ಅರ್ಥವಾಗುತ್ತದೆ.


ಹುಬ್ಬಳ್ಳಿ ಎ.ಪಿ.ಎಂ.ಸಿ.ಗೆ ನವೆಂಬರ್ ಕೊನೆಯ ವಾರದ ಹೊತ್ತಿಗೆ ೯.೨೫ ಲಕ್ಷ ಕ್ವಿಂಟಲ್‌ಗೂ ಹೆಚ್ಚು ಈರುಳ್ಳಿ ಆವಕವಾಗಿತ್ತು. ಆದರೆ ಬೆಂಬಲ ಬೆಲೆಗಿಂತ ಮಾರುಕಟ್ಟೆಯ ದರ ಕಡಿಮೆಯಾಗಿದ್ದರಿಂದ ಸಗಟು ಖರೀದಿದಾರರು ಕೇವಲ ೪ ಲಕ್ಷ ಕ್ವಿಂಟಲ್ ಈರುಳ್ಳಿಯನ್ನು ಮಾತ್ರ ಖರೀದಿಸಿದ್ದರು. ಸುಮಾರು ೫ ಲಕ್ಷ ಕ್ವಿಂಟಲ್‌ಗೂ ಹೆಚ್ಚು ಮಾಲು ಎ.ಪಿ.ಎಂ.ಸಿ. ಪ್ರಾಂಗಣದಲ್ಲಿಯೇ ಉಳಿದಿತ್ತು. ಇದಲ್ಲದೇ ಪ್ರತಿ ದಿನ ೨೨,೦೦೦ ಕ್ವಿಂಟಲ್‌ಗೂ ಹೆಚ್ಚು ಈರುಳ್ಳಿ ಮಾರುಕಟ್ಟೆಗೆ ಬರುತ್ತಿತ್ತು. ಹಳೆಯ ಮಾಲು ಹೊರಹೋಗದೆ, ಹೊಸ ಮಾಲಿಗೆ ಸ್ಥಳಾವಕಾಶ ಸಿಗದೆ ಎ.ಪಿ.ಎಂ.ಸಿ. ಅಧಿಕಾರಿಗಳು ಹಾಗೂ ರೈತರು ಪೇಚಾಡಬೇಕಾದ ದುಃಸ್ಥಿತಿ ನಿರ್ಮಾಣವಾಗಿತ್ತು.


ಏಕೆ ಹೀಗಾಯಿತು?


ಪ್ರತಿ ವರ್ಷ ಯಾವ್ಯಾವ ಬೆಳೆಯನ್ನು ಎಷ್ಟೆಷ್ಟು ಕ್ಷೇತ್ರದಲ್ಲಿ ಬೆಳೆಯಲಾಗಿದೆ. ಈ ಸಲದ ಇಳುವರಿ ಎಷ್ಟಿರಬಹುದು ಎಂದು ಕೃಷಿ ಇಲಾಖೆ ಅಂದಾಜು ಮಾಡುತ್ತದೆ. ಆ ಮಟ್ಟದ ಖರೀದಿಗೆ ಸರ್ಕಾರ ಸಿದ್ಧವಿರಬೇಕಾಗುತ್ತದೆ. ಅದಕ್ಕೆ ಪೂರಕವಾಗಿ ಬೆಂಬಲ ಬೆಲೆ, ಖರೀದಿ ಪ್ರಕ್ರಿಯೆಗೆ ತಯಾರಿ ಮಾಡಿಕೊಳ್ಳಬೇಕಾಗುತ್ತದೆ.


ಆದರೆ ಯಾವೊಂದು ವರ್ಷವೂ ಸುಗಮವಾಗಿ ಖರೀದಿ ನಡೆದ ಉದಾಹರಣೆಗಳಿಲ್ಲ. ಪ್ರತಿ ವರ್ಷ ನಿರೀಕ್ಷಿಸಿದ್ದಕ್ಕಿಂತ ಅತಿ ಹೆಚ್ಚು ಅಥವಾ ಅತಿ ಕಡಿಮೆ ಮಾಲು ಮಾರುಕಟ್ಟೆಗೆ ಬರುತ್ತದೆ. ಯಥಾಪ್ರಕಾರ ಬೆಂಬಲ ಬೆಲೆ ಘೋಷಿಸಲು ಸರ್ಕಾರ ತಡ ಮಾಡುವ ಮೂಲಕ ಮಾರುಕಟ್ಟೆ ಅರಾಜಕತೆಗೆ ದಾರಿ ಮಾಡಿಕೊಡುತ್ತದೆ. ಬೇಸತ್ತ ರೈತರು ಸಿಕ್ಕ ಬೆಲೆಗೆ ಮಾರಿ ಹೋಗುತ್ತಾರೆ. ಯಾವಾಗ ಮಾರುಕಟ್ಟೆಗೆ ಮಾಲು ಬರುವುದು ಕಡಿಮೆಯಾಗುತ್ತದೋ, ಆಗ ಬೆಲೆ ತಕ್ಷಣ ಸ್ಥಿರವಾಗುತ್ತದೆ.


ಹಿಂಗಾರು ಮಳೆ ಸುರಿಯುವ ಸಮಯದಲ್ಲೇ ಎಪಿಎಂಸಿಗಳಲ್ಲಿ ಈರುಳ್ಳಿ ಖರೀದಿ ಜೋರಾಗಿರುತ್ತದೆ. ಪ್ರತಿ ವರ್ಷ ಈ ಸಮಯದಲ್ಲಿ ಇಲ್ಲೆಲ್ಲ ಈರುಳ್ಳಿಯದೇ ಜಾತ್ರೆ. ಸಿಕ್ಕ ಸಿಕ್ಕ ಕಡೆ ಈರುಳ್ಳಿ ಚೀಲಗಳನ್ನು ಪೇರಿಸಿಟ್ಟು ಸಗಟು ಖರೀದಿದಾರರ ಬರವನ್ನು ಎದುರು ನೋಡುತ್ತ ನಿಲ್ಲಲಾಗುತ್ತದೆ. ಹಳೆಯ ಮಾಲು ಹೋಗಬೇಕು, ಹೊಸ ಮಾಲು ಬರಬೇಕು. ಇದೆಲ್ಲ ಬೆಂಬಲ ಬೆಲೆ ಜಾರಿಯಲ್ಲಿರುವಾಗಲೇ ಆಗಬೇಕು. ಸರ್ಕಾರ ಕೂಡ ತನ್ನ ಪಾಲಿನ ಹಣವನ್ನು ಸಕಾಲಕ್ಕೆ ಬಿಡುಗಡೆ ಮಾಡಬೇಕು. ಅಲ್ಲಿಯವರೆಗೆ ಮಳೆ, ಸಗಟು ಖರೀದಿದಾರರು ಹಾಗೂ ಸರ್ಕಾರದ ಮರ್ಜಿಯಲ್ಲಿ ರೈತ ದಿನ ನೂಕುತ್ತ ನಿಲ್ಲಬೇಕು.


ಇದಕ್ಕೆ ಶಾಶ್ವತ ಪರಿಹಾರ ಸಾಧ್ಯವಿಲ್ಲವೆ?


- ಚಾಮರಾಜ ಸವಡಿ

No comments: