ಅದೊಂದು ಸುಂದರ ಕೆರೆ.
ಮುಂಗಾರಿಗೆ ಭರ್ತಿಯಾಗಿದೆ. ನಟ್ಟನಡುವೆ ಪುಟ್ಟ ನಡುಗಡ್ಡೆ. ಒಂದಿಷ್ಟು ಮರಗಿಡಗಳು. ಹೂ ಚಿಗುರು. ಶುಭ್ರ ಹಿಮಕ್ಕೆ ಜೀವ ಮೂಡಿದಂತಿರುವ ಕೊಕ್ಕರೆಗಳು. ಬಟ್ಟಲಂತಿರುವ ಕೆರೆಯನ್ನು ಕದಡಿ ಧಿಗ್ಗೆಂದು ಜಿಗಿದು ಬೀಳುವ ಮೀನುಗಳು. ತಿಳಿಗಾಳಿ. ಮೆಲು ಅಲೆಗಳು.
ಅದು ಧಾರವಾಡದ ಸಾಧನಕೇರಿಯ ಕೆರೆ.
ಅದರ ಎದುರೇ ಭವ್ಯ ಬೇಂದ್ರೆ ಭವನ. ಪಕ್ಕದಲ್ಲಿ ಅವರು ಬಾಳಿ ಬದುಕಿ ಸಾಧನೆಗೈದ ಮನೆ. ಸುತ್ತಲೂ ಇವತ್ತಿಗೂ ನಿಶ್ಯಬ್ದವನ್ನೇ ಹ್ದೊದಿರುವಂತಹ ವಸತಿ ಪ್ರದೇಶ. ಕೆಟ್ಟು ಹೋಗಿರುವ ರಸ್ತೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ತೇಕುತ್ತ ಹೋಗುವ ಸದ್ದು ಬಿಟ್ಟರೆ, ಕೇಳಿ ಬರುವ ಕಲರವ ಕೆರೆ ದಂಡೆಯಲ್ಲಿರುವ ಪ್ರಾಥಮಿಕ ಶಾಲೆಯ ಮಕ್ಕಳದ್ದು ಮಾತ್ರ.
ಧಾರವಾಡದ ಪೂರ್ವ ಬಯಲೊ ಬಯಲು
ಅಪೂರ್ವ‘ಕಲ್ಯಾಣ’ದಾಚೆಗಿದೆ ಭಾಗ್ಯನಗರಿ,
ಕರೆನಾಡು ಎರೆನಾಡು, ನಡುವೆ ಅಂದದ ಕಾಡು
ಗಂಡೆರಳೆ ಸುತ್ತಿರುವ ಹಿಂಡು ಚಿಗರಿ
ಪಡುವಣಕೆ ಇದೆ ಘಟ್ಟ, ಅಲಿ ಕಾನಿಗೆ ಪಟ್ಟ,
ಬೆಟ್ಟ ಇಳಿದರೆ ಉಳಿವೆ ಆಚೆ ಕಡಲು,
ಅಂಚು ಮಿರಿಮಿರಿ ಮಿಂಚು ಮೀನ ಮುತ್ತಿನ ಸಂಚು
ಘಟ್ಟ ತಪ್ಪಲು ಭೂಮಿತಾಯಿ-ಒಡಲು
ತಲೆಯಲ್ಲಿ ಬೆಳುಗಾವಿ, ಬಲಕೆ ಬೀಜಾಪೂರು,
ಎಡಕೆ ಕನ್ನಡ ಕರಾವಳಿಯ ತೋಳು,
ಮೈ ಎಲ್ಲ ಮೈಸೂರು ಇನ್ನೂರು ಮುನ್ನೂರು
ನೀಲಗಿರಿ ಪೀಠದಲಿ ನಮ್ಮ ಬಾಳು
(‘ನೆನವು’ ಇದೊಂದು ಅಪೂರ್ಣ ಕವಿತೆ)
ಹಾಗಂತ ಒಂದು ಕಡೆ ಬರೆದಿರುವ ಬೇಂದ್ರೆ ಅವರ ಕಾವ್ಯಕ್ಕೆ ಜೀವ ತುಂಬಿರುವುದು ಧಾರವಾಡ ಹಾಗೂ ಸಾಧನಕೇರಿ ಪ್ರದೇಶ. ಬೆಳ್ಳಂಬೆಳಿಗ್ಗೆ, ಸುರಿಯುತ್ತಿರುವ ಜಿನುಗು ಮಳೆಯಲ್ಲಿ, ಸುಮ್ಮನೇ ನಡೆಯುತ್ತ ಹೋದರೆ ಸಾಧನಕೇರಿ ದೊಡ್ಡ ಹಳ್ಳಿಯಂತೆ, ರಸ್ತೆಯ ಪಕ್ಕ ಕಟ್ಟಿ ಮರೆತು ಹೋದ ಕಟ್ಟಡಗಳ ಪ್ರದೇಶದಂತೆ ಕಾಣುತ್ತದೆ. ಕೆಟ್ಟ ರಸ್ತೆಯನ್ನು ತುಂಬಿರುವ ಹೊಂಡಗಳಲ್ಲಿ ಚಹದಂತಹ ಮಳೆ ನೀರು. ಸಾಲು ಮರಗಳಿಂದ ತೊಟ್ಟಿಕ್ಕುತ್ತಿರುವ ಹನಿಗಳು. ಮಂಜಿನ ಮಳೆಯಲ್ಲಿ ಮಸಕಾಗಿ ಕಾಣುವ ಬೆಳ್ಳಗಿನ ಬೇಂದ್ರೆಭವನ.
ಆ ಊರು ಈ ಊರು ಯಾ ಊರು ಆದರೂ
ತವರೂರು ತಮತಮಗೆ ತಾನೆ ಚಂದ,
ಕಟ್ಟಿ ಕೂಡುವುದಲ್ಲ ಬಿಚ್ಚಿ ಬಿಡುವುದು ಅಲ್ಲ
ಹೊಕ್ಕಳಿನ ಹುರಿಯಂಥ ಭಾವಬಂಧ
ಧಾರವಾಡದ ಶಿಲೆಯು ನಮ್ಮ ಶಾಲಿಗ್ರಾಮ
ಮಾವುಮಲ್ಲಿಗೆ ಚಿಗುರು ನಮ್ಮ ತುಳಸಿ
ಮುತ್ತುರುಳಬಹುದೆಂದು ದಿಕ್‌ನಾಗ ಜಡೆಯುವರೆ?
ಇಲ್ಲಿ ನಾಗರ ಖಂಡ ಸುತ್ತ ಬಳಸಿ
ಗುಪ್ತಗಾಮಿನಿ ನಮ್ಮ ಶಾಲ್ಮಲೆಯು ಸೆಲೆ
ಆಳಸಂಜೆ-ನಂಜನು ತೊಳೆಯೆ ಧುಮುಕುತಿಹಳು
ಏಕಾಂಗಿ, ನಿಃಸಂಗಿ, ಗಂಗಾವಳಿಯ ಭಂಗಿ
ಕನ್ನಡವ ಒಪ್ಪಿಡಿಯಲಮುಕುತಿಹಳು
ಹೊತ್ತೇರುತ್ತಿದ್ದಂತೆ, ಸೂರ್ಯ ಕಾಣದಿದ್ದರೂ ಮಕ್ಕಳನ್ನು ಹೊತ್ತ ಆಟೊಗಳು ಸಾಧನಕೇರಿಯ ಬೇಂದ್ರೆ ಮನೆ ಎದುರಿನ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬಂದು ನಿಲ್ಲುತ್ತವೆ. ಜೀವಂತಿಕೆ ತುಂಬಿ ತುಳುಕುವ ಮಕ್ಕಳು ಕೂಗುತ್ತ ಕೆಳಗಿಳಿಯುತ್ತವೆ. ಎದುರು ಬೇಂದ್ರೆ ಮನೆ, ಹಿಂದೆ ಕೆರೆ, ನಡುವೆ ಇರುವ ಈ ಶಾಲೆ ಸಾವಿರಾರು ನೆನಪುಗಳನ್ನು ತುಂಬಿಕೊಂಡಿದೆ. ಇಲ್ಲಿಯೇ ಒಂದು ಕಾಲದಲ್ಲಿ ಬೇಂದ್ರೆ ಓಡಾಡಿದ್ದರು. ಕಟ್ಟೆಯ ಮೇಲೆ ಕೂತು ಕವಿತೆ ಓದಿದ್ದರು. ಅರ್ಧಮರ್ಧ ಮಟ್ಟದ ಕವಿಗಳನ್ನು ಟೀಕಿಸಿದ್ದರು. ಜಗಳ ಕಾಯ್ದಿದ್ದರು. ಪ್ರೀತಿ ತೋರಿದ್ದರು. ಬೇರೆಯವರ ಉತ್ತಮ ರಚನೆಗಳಿಗೆ ತಲೆದೂಗಿ ಮೈಮರೆತಿದ್ದರು.
ಇಲ್ಲೀಗ ಮಕ್ಕಳು ಆಡುತ್ತಿವೆ. ‘ಜೈಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ’ ಪ್ರಾರ್ಥನೆ ಕೇಳುತ್ತಿದೆ. ಕೆರೆಯ ಆಚೆ ದಡದಲ್ಲಿರುವ ಪೊಲೀಸ್ ತರಬೇತಿ ಕೇಂದ್ರ ಹಾಗೂ ಪೊಲೀಸ್ ಕೇಂದ್ರ ಕಚೇರಿಗಳಿಂದ ಉಕ್ಕಿಬರುವ ಕೊಚ್ಚೆ ನೀರು ಸದ್ದಿಲ್ಲದೇ ಕೆರೆಯ ಒಡಲನ್ನು ವಿಷಗೊಳಿಸುತ್ತಿರುವುದು ದಡದಲ್ಲಿ ಆಡುತ್ತಿರುವ ಪೋರ-ಪೋರಿಯರಿಗೆ ಗೊತ್ತಿಲ್ಲ. ಜೋರು ಮಳೆಗೆ ತುಂಬಿರುವ ಕೆರೆಗೆ ಇನ್ನು ನಾಲ್ಕು ತಿಂಗಳಲ್ಲಿ ತನ್ನೊಡಲಿನ ತುಂಬ ಕೊಳಚೆ ತುಂಬುತ್ತದೆ ಎಂಬ ಸತ್ಯ ತಿಳಿದಿದ್ದರೂ ಅದು ಮಕ್ಕಳಿಗೆ ಹೇಳುವುದಿಲ್ಲ.
ಒಬ್ಬ ಡಾ. ಎಂ.ಎಂ. ಕಲಬುರ್ಗಿ ಸರ್ ಮಾತ್ರ ಮಿಡುಕುತ್ತಾರೆ. ‘ಬಾರೋ ಸಾಧನಕೇರಿಗೆ ಪ್ರಾಧಿಕಾರ ರಚಿಸಿ ಇಡೀ ಇನ್ನೂರು ಎಕರೆ ಪ್ರದೇಶವನ್ನು ವಶಕ್ಕೆ ತೆಗೆದುಕೊಂಡು ಅಭಿವೃದ್ಧಿಪಡಿಸಬೇಕು. ಕನ್ನಡದ ಅಷ್ಟೇ ಏಕೆ, ಜಗತ್ತಿನ ಅತಿ ಶ್ರೇಷ್ಠ ಕವಿಯೊಬ್ಬನಿಗೆ ಸ್ಫೂರ್ತಿ ನೀಡಿದ ನೆಲವನ್ನು ಸಾಧ್ಯವಾದಷ್ಟೂ ಮಟ್ಟಿಗೆ ಅದಿರುವಂತೆ ಉಳಿಸುವ ಆಸೆ ಇದೆ. ಕೆರೆ ಮತ್ತು ಬೇಂದ್ರೆ ಭವನಗಳೆರಡೂ ಸರ್ಕಾರದ ಆಸ್ತಿಗಳೇ. ಉಳಿದಿದ್ದು ಸುತ್ತಲಿನ ರಸ್ತೆಗಳನ್ನು ಅಭಿವೃದ್ಧಿಪಡಿಸುವುದು. ಕೆರೆಯ ಹೂಳೆತ್ತಿಸಿ, ಕೊಚ್ಚೆ ಅಲ್ಲಿ ಬಾರದಂತೆ ತಡೆ ಒಡ್ಡಿ, ದಂಡೆಯುದ್ದಕ್ಕೂ ಕೂಡಲು ಆಸನಗಳು ಹಾಗೂ ಒಂದು ಭಾಗದಲ್ಲಿ ಸಂಗೀತ ಕಚೇರಿಗೆ ವೇದಿಕೆ ಏರ್ಪಡಿಸಬೇಕು. ಕೆರೆಯಲ್ಲಿ ದೋಣಿಗಳ್ದಿದರೆ ಜನ ಬರುತ್ತಾರೆ. ಬೇಂದ್ರೆ ಜೀವನ ಸಂದೇಶ ಸಾರುವ ವಾತಾವರಣವನ್ನು ಸೃಷ್ಟಿಸಿದರೆ, ಧಾರವಾಡ ಅಕ್ಷರ ಯಾತ್ರಾಸ್ಥಳವಾಗುತ್ತದೆ’ ಎಂದು ಹಂಬಲಿಸುತ್ತಾರೆ.
ದ.ರಾ. ಬೇಂದ್ರೆ ರಾಷ್ಟ್ರೀಯ ಟ್ರಸ್ಟ್‌ನ ಅಧ್ಯಕ್ಷರಾಗಿರುವ ಡಾ. ಎಂ.ಎಂ. ಕಲಬುರ್ಗಿ ಇಂಥದೊಂದು ಯೋಜನೆ ತಯಾರಿಸಿಕೊಂಡು ಬೆಂಗಳೂರಿಗೆ ಹಲವಾರು ಬಾರಿ ರೈಲೇರಿದ್ದಾರೆ. ಆದರೆ ಬೆಂಗಳೂರಿನ ಆಯಕಟ್ಟಿನ ಜಾಗಗಳಲ್ಲಿ ಕೂತಿರುವ ಅಧಿಕಾರಿಗಳಿಗೆ ಸೊನಾಲಿ ಬೇಂದ್ರೆ ಗೊತ್ತೇ ಹೊರತು ದ.ರಾ. ಬೇಂದ್ರೆ ಅಲ್ಲ. ಕನ್ನಡವೇ ಸರಿಯಾಗಿ ಗೊತ್ತಿರದವರಿಗೆ ಮುಗಿಲ ಮಾರಿ, ರಾಗ ರತಿ, ನೀ ಹಿಂಗ ನೋಡಬ್ಯಾಡ, ಪಾತರಗಿತ್ತಿ ಪಕ್ಕ, ಯಾರಿಗೂ ಹೇಳೋಣು ಬ್ಯಾಡ ಎಂಬ ಪದ ಸಂಜೀವಿನಿ ಗೊತ್ತಾಗುವುದಾದರೂ ಹೇಗೆ?
ಹೀಗಾಗಿ ಯೋಜನೆಗೆ ಸರ್ಕಾರದ ತರಹೇವಾರಿ ನೆವಗಳು. ಇನ್ನು ಧಾರವಾಡಿಗರಿಗೆ ಬೇಂದ್ರೆ ಬಗ್ಗೆ ಇರುವಷ್ಟೇ ಅಭಿಮಾನ ನಿಷ್ಕ್ರಿಯತೆ ಬಗ್ಗೆಯೂ ಇರುವುದರಿಂದ ಅವರೂ ಇತ್ತ ನೋಡುತ್ತಿಲ್ಲ. ‘ಇದೇ ಬೇಂದ್ರೆ ಬೇರೆಡೆ ಹುಟ್ಟಿದ್ದರೆ ರಾಷ್ಟ್ರೀಯ ಹೀರೋ ಆಗಿರುತ್ತಿದ್ದರು’ ಎಂದು ಕತೆ ಹೇಳುತ್ತ ಅವರು ಆರಾಮವಾಗಿದ್ದಾರೆ. ಇನ್ನು ಬೇಂದ್ರೆ ಅವರ ಮಗ ವಾಮನ ಬೇಂದ್ರೆ ಕಾಪಿರೈಟ್ ನೆವದಲ್ಲಿ ದ.ರಾ. ಬೇಂದ್ರೆಯವರನ್ನು ಕಟ್ಟಿಟ್ಟಿದ್ದಾರೆ. ಹೀಗಾಗಿ ಬೇಂದ್ರೆ ಗೀತೆಗಳನ್ನು ಹಾಡಿ ಕ್ಯಾಸೆಟ್-ಸಿಡಿ ಮಾಡಲು ಗಾಯಕರು ಅಳುಕುತ್ತಾರೆ.
ಆದರೂ ಸಾಧನಕೇರಿಗೆ ತನ್ನದೇ ಆದ ಕಳೆ ಇದೆ. ಕೊಳೆ ಇದೆ. ಇಲ್ಲಿಗೆ ಬರುವ ಬಹುತೇಕ ಜನರು ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರನ್ನು ಹುಡುಕಿಕೊಂಡು ಬರುತ್ತಾರೆ. ಆದರೆ ಅವರಿಗೆ ಎದುರಾಗುವುದು ವಾಮನ ಬೇಂದ್ರೆ. ನಿರಾಶರಾದವರಿಗೆ ಪಕ್ಕದಲ್ಲಿಯೇ ಇರುವ ಬೇಂದ್ರೆ ಭವನ ಸ್ವಲ್ಪ ಮಟ್ಟಿಗೆ ಸಂತೈಸುತ್ತದೆ. ಎದುರಿಗೆ ಇರುವ ಶಾಲೆ, ಅದರಾಚೆಗೆ ಇರುವ ಕೆರೆಗಳು ಇನ್ನಷ್ಟು ಸಂತೈಸುತ್ತವೆ. ಕೆಟ್ಟ ರಸ್ತೆ ದಾಟಿ ಕೆರೆಯ ಅಂಚಿಗೆ ನಿಂತರೆ, ಆಗ ಸಂಜೆಯಾಗಿದ್ದರೆ, ‘ಮುಗಿಲ ಮಾರಿಗೆ ರಾಗ ರತಿಯ ನಂಜು’ ಏರಿರುವುದು ಕಂಡರೂ ಕಾಣಬಹುದು.
ಈ ವಾತಾವರಣದಲ್ಲಿಯೇ ಬೇಂದ್ರೆ ಅವರ ಅದ್ಭುತ ಕೃತಿಗಳು ಸೃಷ್ಟಿಯಾಗಿವೆ. ನಾಡಿನ ಖ್ಯಾತನಾಮರನ್ನು ತನ್ನೆಡೆ ಸೆಳೆದಿವೆ. ಜಾತಿ, ಧರ್ಮ, ಪ್ರಾದೇಶಿಕ ಭಿನ್ನತೆ ಮೀರಿ ಅವರ ಗೀತೆಗಳು ನಾಡಿನುದ್ದಗಲಕ್ಕೂ ಸಂಚರಿಸಿವೆ. ಅಕ್ಷರ ಬಲ್ಲವರು, ಪಾಮರರು, ಸಾಮಾನ್ಯರು, ಸಾಧಕರು- ಹೀಗೆ ಎಲ್ಲರನ್ನೂ ಪ್ರಭಾವಿತರನ್ನಾಗಿಸಿವೆ.
ವಾಮನ ಬೇಂದ್ರೆ ಅವರ ಲಕ್ಷ್ಮಣರೇಖೆಯ ಮಿತಿಯಲ್ಲಿದ್ದರೂ ಬೇಂದ್ರೆ ಬಗ್ಗೆ ಜನರ ಕುತೂಹಲ, ಪ್ರೀತಿ ಇನ್ನೂ ತಣಿದಿಲ್ಲ. ಧಾರವಾಡದ ಎಸ್.ಡಿ.ಎಂ. ಎಂಜನಿಯರಿಂಗ್ ಕಾಲೇಜಿನ ಉತ್ಸಾಹಿಗಳು ಮುಂದಾಗಿ ಉಚಿತವಾಗಿ ಅಂತರ್ಜಾಲ ತಾಣವನ್ನು ತಯಾರಿಸಿಕೊಟ್ಟಿದ್ದಾರೆ. ಯಥಾಪ್ರಕಾರ ಅಲ್ಲಿಯೂ ಕಾಪಿರೈಟ್‌ನದೇ ಸಮಸ್ಯೆ. ಹೀಗಾಗಿ ಬೇಂದ್ರೆ ಅವರ ಸಾಹಿತ್ಯದ ಬದಲಾಗಿ ಇತರ ಒಣ ವಿವರಗಳನ್ನು ತುಂಬಬೇಕಾಗಿದ್ದರಿಂದ ವೆಬ್‌ಸೈಟ್‌ನಲ್ಲಿ ಜೀವಂತಿಕೆ ಮಾಯವಾಗಿದೆ. ಇನ್ನು ಬಹುತೇಕ ಹಳೆಯ ಕವಿ, ಲೇಖಕರ ಗ್ರಂಥಗಳು ಪಳಪಳ ಹೊಳೆಯುವ ಮರು ಮುದ್ರಣ ಕಂಡು ನಳನಳಿಸುತ್ತಿರುವಾಗ ಬೇಂದ್ರೆಯವರ ಪುಸ್ತಕಗಳು ಮಾತ್ರ ಇಪ್ಪತ್ತು ವರ್ಷಗಳ ಹಿಂದಿನ ಕೆಟ್ಟ ಮುದ್ರಣದ ಗೈಡ್‌ಗಳಂತೆ ಕಳಪೆಯಾಗಿದ್ದು, ನಾಡಿನ ಬಹುತೇಕ ಪುಸ್ತಕಾಲಯಗಳಲ್ಲಿ ಕಾಣಸಿಗದ ಪರಿಸ್ಥಿತಿಗೆ ಒಳಗಾಗಿವೆ.
ಇಷ್ಟೆಲ್ಲ ಲೋಪಗಳಿದ್ದರೂ ಬೇಂದ್ರೆ ಮತ್ತೆ ಮತ್ತೆ ಸೆಳೆಯುತ್ತಾರೆ.
ಒಲವೆಂಬ ಹೊತ್ತಿಗೆಯನೋದ ಬಯಸುತ ನೀನು
ಬೆಲೆಯೆಷ್ಟು ಎಂದು ಕೇಳುತಿಹೆ? ಹುಚ್ಚ!
ಹಗಲಿರುಳು ದುಡಿದರೂ ಹಲ ಜನುಮ ಕಳೆದರೂ
ನೀ ತೆತ್ತಲಾರೆ ಬರಿ ಅಂಚೆ ವೆಚ್ಚ
ಎಂದು ಗದರಿದಂತಾಗುತ್ತದೆ.
ಮಳೆ ಬರುವ ಕಾಲಕ್ಕಒಳಗ್ಯಾಕ ಕೂತೇವೊ
ಇಳೆಯೊಡನೆ ಜಳಕ ಮಾಡೋಣ
ನಾವೂನು, ಮೋಡಗಳ ಆಟ ನೋಡೋಣ
ಎಂದು ಕರೆದಂತಾಗುತ್ತದೆ.
ಸಾಧನಕೇರಿಯಲ್ಲಿ ಇಂತಹ ಸಾವಿರ ಕರೆಗಳಿವೆ. ಕೊರೆಗಳಿವೆ. ಹುಡುಕುವವರಿಗೆ ಅಲ್ಲಿಯ ಕಲ್ಲಕಲ್ಲಿನಲ್ಲಿಯೂ, ನೀರಿನ ಪ್ರತಿ ತೆರೆಯಲ್ಲಿಯೂ ಬೇಂದ್ರೆ ಸಿಗುತ್ತಾರೆ. ಬೆಳ್ಳಂಬೆಳಿಗ್ಗೆ ವಾಕಿಂಗ್ ಹೋಗಿ, ಕೆರೆ ದಡದಲ್ಲಿ ಅಡ್ಡಾಡಿ, ಶಾಲೆಯ ನಿಶ್ಯಬ್ದದಲ್ಲಿ ಮೌನವಾಗಿ ನಿಂತವರಿಗೆ ಬೇಂದ್ರೆ ಖಂಡಿತ ಸಿಗುತ್ತಾರೆ. ಮೌನವಾಗಿಯೇ ಮಾತಿಗಿಳಿಯುತ್ತಾರೆ. ಕನಸು ಕೆದಕುತ್ತಾರೆ. ಎದೆಯೊಳಗಿನ ಸಾವಿರ ಭಾವಗಳಿಗೆ ಹಾಡಾಗುತ್ತಾರೆ.
ತೋಟ ಮೂಡಿದೆ ನೋಡು ಕಾಡಿದ್ದ ಎಡೆಯಲ್ಲಿ
ಅಲ್ಲಿ ಮೌನದ ತಂತಿ ಮೀಟುತಿಹುದು
ಶ್ರುತಿಗು ನಿಲುಕದ ನುಡಿಯು ದನಿಗುಡುವದಾಗೀಗ
ಯಾರು ಬಲ್ಲರು? ನಾಳೆ ಮೂಡಬಹುದು
ಎಂದು ಸಂತೈಸಿದಂತಾಗುತ್ತದೆ.
ಮೂಡೀತೆ ಅಂಥದೊಂದು ಬೆಳಗು ನಮ್ಮೀ ಸಾಧನಕೇರಿಯಲ್ಲಿ? ಕನಸು ಮೊರೆವ ಸಂಗಮದಲ್ಲಿ?
- ಚಾಮರಾಜ ಸವಡಿ
No comments:
Post a Comment