Showing posts with label ಬರವಣಿಗೆ. Show all posts
Showing posts with label ಬರವಣಿಗೆ. Show all posts

ಜೊಳ್ಳಿನ ನಡುವೆ ಗಟ್ಟಿಕಾಳಿಗೆ ತವಕ

21 Aug 2009

7 ಪ್ರತಿಕ್ರಿಯೆ

'ಎಷ್ಟೊಂದು ಕೆಟ್ಟ ಬರಹಗಳು ಬರ್ತಿವೆಯಲ್ಲ ಮಾರಾಯಾ!' ಎಂದು ಬೇಸರಪಟ್ಟುಕೊಂಡ ಗೆಳೆಯ.

ಅವನು ಮಾತಾಡುತ್ತಿದ್ದುದು ಬ್ಲಾಗ್‌ ಮತ್ತು ಸಮೂಹತಾಣಗಳ ಬರವಣಿಗೆ ಬಗ್ಗೆ. ಚಿಲ್ಲರೆ ವಿಷಯಗಳ ಬಗ್ಗೆ ಬರೆಯುವುದು, ಚರ್ಚಿಸುವುದು ಮತ್ತು ಅದನ್ನೇ ಚ್ಯೂಯಿಂಗ್‌ಗಮ್‌ ಥರ ರಸ ಮುಗಿದ ನಂತರವೂ ಜಗಿಯುತ್ತಿರುವುದು ಅವನಿಗೆ ಬೇಸರ ತರಿಸಿತ್ತು. ನನಗೆ ಗೊತ್ತಿರುವಂತೆ ಅವನು ಪತ್ರಿಕೆಗಳ ನಿಯಮಿತ ಓದುಗ. ಉತ್ತಮ ಬರವಣಿಗೆಯನ್ನು ತಕ್ಷಣ ಗುರುತಿಸಬಲ್ಲ ಪ್ರಬುದ್ಧ.

ನಾನು ಪತ್ರಿಕೋದ್ಯಮಕ್ಕೆ ಕೊಂಚ ಬ್ರೇಕ್‌ ಕೊಟ್ಟು ಇಂಟರ್‌ನೆಟ್‌ನ ಕನ್ನಡ ಚಟುವಟಿಕೆಗಳಲ್ಲಿ ತೀವ್ರವಾಗಿ ತೊಡಗಿಕೊಳ್ಳುತ್ತಿರುವ ದಿನಗಳಿವು. ಬಹಳ ದಿನಗಳ ನಂತರ ಸಿಕ್ಕಿದ್ದ ಅವನ ಪ್ರತಿಕ್ರಿಯೆ ಕೇಳಿ ನಗು ಬಂತು. 'ಸದ್ಯ ನಾನು ಆ ಕೆಟ್ಟ ಬರಹದ ಲೋಕವನ್ನೇ ಸೀರಿಯೆಸ್‌ ಆಗಿ ತೆಗೆದುಕೊಂಡಿದ್ದೇನೆ. ಅಂದರೆ, ಅದರಲ್ಲೇ ಕೆಲಸ ಮಾಡಲು ಮುಂದಾಗಿದ್ದೇನೆ. ನೀನು ಹೀಗೆ ಪ್ರತಿಕ್ರಿಯೆ ಕೊಟ್ಟರೆ, ನಾನು ಅದರಲ್ಲಿ ಬದುಕು ಕಟ್ಟಿಕೊಳ್ಳುವುದು ಹೇಗೆ ಮಾರಾಯಾ?' ಎಂದು ಸುಳ್ಳೇ ಗಾಬರಿ ತೋರಿದೆ.

ಅವನು ಮತ್ತೆ ಬ್ಲಾಗ್‌ ಮತ್ತು ಸಮೂಹತಾಣಗಳಲ್ಲಿ ಕಾಣಿಸಿಕೊಳ್ಳುವ ಕಳಪೆ ಬರಹಗಳ ಬಗ್ಗೆ ಮಾತನಾಡಿದ. ಪತ್ರಿಕೆಗಳಲ್ಲಿಯೂ ಗುಣಮಟ್ಟ ಕುಸಿಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ. ಅವನೊಂದಿಗೆ ಮಾತನಾಡಿದ ಕೆಲ ವಿಷಯಗಳನ್ನಷ್ಟೇ ಇಲ್ಲಿ ಬರೆಯುವ ಮೂಲಕ, ಸಾರ್ವತ್ರಿಕೆ ಅಭಿಪ್ರಾಯಕ್ಕೆ ನನ್ನ ಅನಿಸಿಕೆಯನ್ನು ವ್ಯಕ್ತಪಡಿಸುತ್ತಿದ್ದೇನೆ.

ಬರಹದ ಗುಣಮಟ್ಟ ಕುಸಿಯುತ್ತಿದೆ ಎಂಬ ಆರೋಪ ನನಗೆ ಯಾವತ್ತೂ ಸರಿ ಅನಿಸಿಲ್ಲ. ಏಕೆಂದರೆ, ಹಿಂದೆ, ಅಂದರೆ ಪತ್ರಿಕೆಗಳ ಸಂಖ್ಯೆ ಹೆಚ್ಚುವ ಮುನ್ನ, ಇಂಟರ್‌ನೆಟ್‌ ಜನಪ್ರಿಯವಾಗುವ ಮುನ್ನ, ಕೆಲವೇ ಕೆಲವು ಜನ ನಿಯಮಿತವಾಗಿ ಬರೆಯುತ್ತಿದ್ದರು. ಪತ್ರಿಕೆಗಳ ಸಂಖ್ಯೆಯ ಜೊತೆಗೆ ಬರಹಗಾರರ ಸಂಖ್ಯೆಯೂ ಸೀಮಿತವಾಗಿತ್ತು. ಪತ್ರಿಕೆಗೆ ಬರೆಯಲು ಒಂದು ಮಟ್ಟದ ಪಾಂಡಿತ್ಯ ಮತ್ತು ಬರವಣಿಗೆ ಶೈಲಿ ಅವಶ್ಯ ಎಂದು ನಂಬಿದ್ದ ಹಾಗೂ ಅದನ್ನೇ ನಿರೀಕ್ಷಿಸುತ್ತಿದ್ದ ಕಾಲವದು. ಹೀಗಾಗಿ, ಬರೆದಿದ್ದೆಲ್ಲ ಚೆನ್ನಾಗಿಯೇ ಕಾಣುತ್ತಿತ್ತು.

ಕ್ರಮೇಣ ಪತ್ರಿಕೆಗಳ ಸಂಖ್ಯೆ ಹೆಚ್ಚಿತು. ಆದರೆ, ಆ ಪ್ರಮಾಣಕ್ಕೆ ತಕ್ಕಂತೆ ಬರಹಗಾರರ ಸಂಖ್ಯೆ ಹೆಚ್ಚಲಿಲ್ಲ. ಸಹಜವಾಗಿ, ಗುಣಮಟ್ಟ ಕಡಿಮೆ ಇರುವ ಜನ ಉದ್ಯಮ ಪ್ರವೇಶಿಸಿದರು. ಅಂಥ ಬಹುತೇಕರಿಗೆ ಪತ್ರಿಕೆಯಲ್ಲಿ ಕೆಲಸ ಮಾಡುವುದು ಒಂದು ವೃತ್ತಿಯಾಗಿತ್ತೇ ವಿನಾ ಅವರ ಪ್ರವೃತ್ತಿಗೆ ವೇದಿಕೆಯಾಗಿರಲಿಲ್ಲ. ಸಹಜವಾಗಿ ಬರವಣಿಗೆಯ ಗುಣಮಟ್ಟದಲ್ಲಿ ಮುಂಚೆ ಕಾಣುತ್ತಿದ್ದ ಗಟ್ಟಿತನ ಕಾಣಲಿಲ್ಲ. ಹೊಸಬರಲ್ಲಿ ತುಂಬ ಜನ ಚೆನ್ನಾಗಿ ಬರೆದರೂ, ಜೊಳ್ಳಿನ ಎದುರು ಅವರು ಅಷ್ಟಾಗಿ ಗಮನ ಸೆಳೆಯಲಿಲ್ಲ.

ಈ ಹಂತದಲ್ಲಿ ಇಂಟರ್‌ನೆಟ್‌ ಜನಪ್ರಿಯವಾಗಿ ಸಮೂಹತಾಣ, ಬ್ಲಾಗ್‌ಗಳು ಕಾಣಿಸಿಕೊಂಡವು. ಅದುವರೆಗೂ ಪತ್ರಿಕೆಗಳಲ್ಲಿ ಪ್ರಟಕವಾಗಬೇಕೆಂದರೆ, ಬರಹಗಳಿಗೆ ಒಂದು ಹಂತದ ಗುಣಮಟ್ಟ ಇರಲೇಬೇಕಿತ್ತು. ಆದರೆ, ಬ್ಲಾಗ್‌ಗಳಲ್ಲಿ ಬರೆಯಲು ಇಂಥ ಯಾವ ಅಡೆತಡೆಯೂ ಇರಲಿಲ್ಲ. ಯಾರು, ಯಾರ ಬಗ್ಗೆ ಏನು ಬೇಕಾದರೂ ಬರೆಯಬಹುದು ಎಂದಾದಾಗ, ಎಲ್ಲರೂ ಬರೆಯತೊಡಗಿದರು. ಜೊಳ್ಳು, ಪೊಳ್ಳು, ಕೊಳೆ, ಕೊಚ್ಚೆ, ವಿಷ, ನಂಜು- ಹೀಗೆ ಅದುಮಿಟ್ಟಿದ್ದ, ಮುಚ್ಚಿಟ್ಟಿದ್ದ ವಿಕೃತಿಯೆಲ್ಲವೂ ಧಾರಾಳವಾಗಿ ಹೊರಬರತೊಡಗಿತು. ಇವರ ನಡುವೆ ಅಸಲಿ ಪ್ರತಿಭಾವಂತರ ಬರವಣಿಗೆ ಗಮನ ಸೆಳೆದಿದ್ದು ಕಡಿಮೆ.

ನನ್ನ ಮಿತ್ರನಿಗೆ ಇದನ್ನೆಲ್ಲ ವಿವರಿಸಿ ಹೇಳಿದೆ. ಎಲ್ಲಾ ಕಾಲದಲ್ಲೂ ಅತ್ಯುತ್ತಮವಾದದ್ದು ಇದ್ದೇ ಇರುತ್ತದೆ. ಅದಕ್ಕಾಗಿ ಕೊಂಚ ಹುಡುಕಬೇಕು. ಜೊಳ್ಳನ್ನು ಸರಿಸಿ ನೋಡಿದರೆ, ಗಟ್ಟಿ ಕಾಳು ಸಿಕ್ಕೀತು. ಆದರೆ, ಜೊಳ್ಳಿನ ಪ್ರಮಾಣ ಜಾಸ್ತಿ ಇದೆ ಎಂಬ ಕಾರಣಕ್ಕೆ ಇಡೀ ವ್ಯವಸ್ಥೆಯನ್ನೇ ದೂರಬೇಡ. ಆ ಮೂಲಕ ಇರಬಹುದಾದ ಅಲ್ಪಸ್ವಲ್ಪ ಗಟ್ಟಿಕಾಳನ್ನೂ ನೀನು ಕಳೆದುಕೊಂಡು ಬಿಡುತ್ತೀ. ಪೇಲವ, ಟೊಳ್ಳು, ಕಡಿಮೆ ಗುಣಮಟ್ಟದ ಬರವಣಿಗೆ ಮಾಡುವವರು ಮಾಡುತ್ತ ಹೋಗಲಿಬಿಡು. ನಿನಗೆ ಬೇಕೆನಿಸಿದ್ದನ್ನು ಓದು, ಉಳಿದಿದ್ದನ್ನು ನಿರ್ಲಕ್ಷ್ಯಿಸು. 'ಅಯ್ಯೋ ಕಾಲ ಕೆಟ್ಟುಹೋಯಿತು' ಎಂಬ ವೃದ್ಧ ಗೊಣಗುವಿಕೆಗಿಂತ, ಸೂಕ್ತ ಆಯ್ಕೆ ಮತ್ತು ಜಾಣ ನಿರ್ಲಕ್ಷ್ಯ ಉತ್ತಮ ಎಂದು ಸಲಹೆ ನೀಡಿದೆ.

'ಅಲ್ಲ ಮಾರಾಯ, ಇಷ್ಟೊಂದು ಬ್ಲಾಗ್‌ಗಳು, ಬರವಣಿಗೆಗಳು ಬರುತ್ತಿರುವಾಗ, ಉತ್ತಮವಾದದ್ದನ್ನು ಹುಡುಕುವುದು ಹೇಗೆ? ಎಷ್ಟೊಂದು ಸಮಯ ವ್ಯರ್ಥವಾಗುತ್ತದಲ್ಲ' ಎಂದು ಆತ ಚಿಂತಿತನಾದ.

'ಅದಕ್ಕೆಂದೇ ಮಿತ್ರ ಸಿರಿ ಸಂಪದ ಎಂಬ ಹೊಸ ತಾಣ ಬರುತ್ತಿದೆ. ಈ ಕೆಲಸವನ್ನು ಅದು ಮಾಡುತ್ತದೆ. ಅಲ್ಲಿಯವರೆಗೆ ಕಾಯಿ, ಇಲ್ಲಾಂದ್ರೆ ಎಲ್ಲಾದ್ರೂ ಹೋಗಿ ಸಾಯಿ' ಎಂದೆ ನಗುತ್ತ.

ಅವನೂ ನಕ್ಕ.

- ಚಾಮರಾಜ ಸವಡಿ

ಎಲ್ಲ ಬಲ್ಲವರಿಲ್ಲ, ಬಲ್ಲವರು ಬಹಳಿಲ್ಲ

13 Jan 2009

8 ಪ್ರತಿಕ್ರಿಯೆ

’ಬ್ಲಾಗ್‌ನಲ್ಲಿ ಬರೆಯುವವರು ಬರಹಗಾರರೇನಲ್ಲ’ ಅಂದ ನನ್ನ ಪತ್ರಕರ್ತ ಮಿತ್ರನೊಬ್ಬ.

ಹಾಗಾದರೆ, ಬರಹಗಾರರೆಂದರೆ ಯಾರು? ಅಂದೆ.

ಅವನ ಉತ್ತರ ಕೇಳಿ ನನಗೆ ದಿಗ್ಭ್ರಮೆಯಾಯಿತು. ನಂತರ ಮರುಕ ಹುಟ್ಟಿತು. ಆತನ ಪ್ರಕಾರ, ಪತ್ರಿಕೆಗಳಲ್ಲಿ ಬರೆಯುವವರು ಮಾತ್ರ ಬರಹಗಾರರು. ಉಳಿದವರೆಲ್ಲ ತಮ್ಮ ತೆವಲಿಗೆ ಬರೆಯುತ್ತಾರೆ. ಅದನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ. ಅವಕ್ಕೆ ಮೌಲ್ಯವಿಲ್ಲ.

ಆತನ ಜೊತೆ ವಾದಿಸುವುದು ವ್ಯರ್ಥ ಅನಿಸಿ ಸುಮ್ಮನಾದೆ. ಆದರೆ, ಈ ವಿಷಯ ಪ್ರಸ್ತಾಪಿಸುವುದು ಉತ್ತಮ ಅನಿಸಿ ಇಲ್ಲಿ ಬರೆಯುತ್ತಿದ್ದೇನೆ.

ಹಿಂದೊಮ್ಮೆ ಇಂಥದೇ ವಿಷಯದ ಬಗ್ಗೆ ಓದಿದ್ದು ನೆನಪಾಯಿತು. ಟಿವಿ ದಾಂಗುಡಿಯಿಡುತ್ತಿದ್ದ ದಿನಗಳವು. ಟಿವಿ ತಾರೆಯರು ಸಿನಿಮಾ ತಾರೆಯರಂತೆ ಜನಪ್ರಿಯತೆ ಗಳಿಸುತ್ತಿದ್ದರು. ಆಗ ಕೆಲ ನಟ, ನಟಿಯರು ಮೇಲಿನ ಅಭಿಪ್ರಾಯವನ್ನೇ ಬಿಂಬಿಸುವಂಥ ಮಾತು ಹೇಳಿದ್ದರು: ಸಿನಿಮಾ ನಟನೆಯೇ ನಿಜವಾದ ನಟನೆ. ಟಿವಿ ನಟನೆಗೆ ಮೌಲ್ಯವಿಲ್ಲ.

ಗಡಿಯಾರವನ್ನು ಇನ್ನೊಂಚೂರು ಹಿಂದಕ್ಕೆ ತಿರುಗಿಸೋಣ. ಸಿನಿಮಾ ಜನಪ್ರಿಯವಾಗುವುದಕ್ಕೂ ಮುನ್ನ ನಾಟಕ ರಂಗ ಕ್ರಿಯಾಶೀಲವಾಗಿತ್ತು. ಆಗ, ಸಿನಿಮಾ ನಟ-ನಟಿಯರ ಕುರಿತು ರಂಗಕರ್ಮಿಗಳು ಇಂಥದೇ ಮಾತು ಹೇಳಿದ್ದರು.

ಇದು ಏನನ್ನು ಸೂಚಿಸುತ್ತದೆ?

ಮಾಧ್ಯಮ ಬದಲಾದರೂ, ಅಭಿವ್ಯಕ್ತಿ ಎಂಬುದು ಹಾಗೇ ಉಳಿದಿದೆ ಅಂತ ಅಲ್ಲವೆ? ಬರಹಗಾರ ಪತ್ರಿಕೆಗಳಿಗೆ ಬರೆದಂತೆ ಅಂತರ್ಜಾಲ ವಾಹಿನಿಯಲ್ಲೂ ಬರೆಯಬಲ್ಲ. ನಟನೆ ಬಲ್ಲವ ಸಿನಿಮಾ, ಟಿವಿ, ರಂಗಭೂಮಿ ಎಂಬ ಭೇದವಿಲ್ಲದೇ ನಟಿಸಬಲ್ಲ. ಆ ಮಾಧ್ಯಮ ಅವನಿಗೆ ಒಗ್ಗದಿದ್ದರೆ ಬೇರೆ ಮಾತು. ಆದರೆ, ನಟಿಸಲು ಯಾವ ವೇದಿಕೆಯಾದರೇನು?

ಇದೇ ಮಾತನ್ನು ಬರವಣಿಗೆಗೂ ಹೇಳಬಹುದು. ವೈಯಕ್ತಿಕವಾಗಿ ನನಗೆ ಎಲ್ಲ ರೀತಿಯ ಬರವಣಿಗೆ ಒಗ್ಗಿದೆ. ಅಭ್ಯಾಸವಾಗಿದೆ. ಇಷ್ಟಪಟ್ಟಿದ್ದೇನೆ ಕೂಡಾ. ಟ್ಯಾಬ್ಲಾಯ್ಡ್‌, ದಿನಪತ್ರಿಕೆ, ವಾರಪತ್ರಿಕೆ, ಸಾಹಿತ್ಯಿಕ, ಟಿವಿ, ಈಗ ಅಂತರ್ಜಾಲ- ಹೀಗೆ ಎಲ್ಲ ಪ್ರಕಾರಗಳಲ್ಲೂ ಬರೆದಿದ್ದೇನೆ. ಯಾವೊಂದು ಮಾಧ್ಯಮವೂ ನನಗೆ ಕಡಿಮೆ ಎಂದು ಅನಿಸಿಲ್ಲ. ಪ್ರತಿಯೊಂದಕ್ಕೂ ಅದರದೇ ಮಹತ್ವವಿದೆ. ವ್ಯಾಪ್ತಿಯಿದೆ. ಓದುಗರಿದ್ದಾರೆ. ವಿಷಯಗಳಿವೆ. ಬರೆಯುವ ಆಸಕ್ತಿ ಮತ್ತು ವ್ಯಕ್ತಪಡಿಸುವ ರೀತಿ ಗೊತ್ತಿದ್ದವ ಸುಲಭವಾಗಿ ವ್ಯಕ್ತವಾಗುತ್ತ ಹೋಗುತ್ತಾನೆ.

ದುರಂತವೆಂದರೆ, ಬಹಳಷ್ಟು ಜನರಿಗೆ ಈ ಸೂಕ್ಷ್ಮ ಅರ್ಥವಾದಂತಿಲ್ಲ. ಅಥವಾ ಅರ್ಥವಾಗಿದ್ದರೂ ಅಸೂಯೆಗೆ ಹಾಗೆ ಹೇಳುತ್ತಾರೇನೋ. ನನಗೆ ಗೊತ್ತಿರುವಂತೆ ಮುದ್ರಣ ಅಥವಾ ವಿದ್ಯುನ್ಮಾನ ಮಾಧ್ಯಮದಲ್ಲಿರುವ ಬಹಳಷ್ಟು ಜನ ಅಕ್ಷರಶತ್ರುಗಳು. ಅವರಿಗೆ ಅದೊಂದು ವೃತ್ತಿ. ಅವರ ಬರವಣಿಗೆ ದೇವರಿಗೇ ಪ್ರೀತಿ. ಏಜೆನ್ಸಿಗಳಿಂದ ಬರುವ ಸುದ್ದಿಗಳನ್ನು ರೆಡಿಮೇಡ್‌ ಚೌಕಟ್ಟಿಗೆ ಬದಲಾಯಿಸದ ಮಾತ್ರಕ್ಕೆ ಪತ್ರಕರ್ತರಾದಂತೆ ಎಂಬುದು ಅವರ ಅಭಿಪ್ರಾಯ. ಸದ್ಯದ ಪರಿಸ್ಥಿತಿಯಲ್ಲಿ ಅಷ್ಟು ಮಾತ್ರದ ಕೆಲಸ ಮಾಡಿದರೆ ಸಾಕು ಎನ್ನುವ ವಾತಾವರಣವೂ ಇದೆ. ಸುದ್ದಿ ಬರೆಯುವ ಬಹಳಷ್ಟು ಜನರಿಗೆ ಲೇಖನ ಬರೆಯಲು ಬರುವುದಿಲ್ಲ. ಸಾಹಿತ್ಯವಂತೂ ದೂರವೇ ಉಳಿಯಿತು. ಅದೆಲ್ಲ ಗೊತ್ತಿದ್ದರೆ ಮಾತ್ರ ಪತ್ರಕರ್ತನಾಗಬಹುದು ಎಂದಲ್ಲ. ಗೊತ್ತಿದ್ದರೆ ಉತ್ತಮ. ಅಷ್ಟೇ.

ಹೋಗಲಿ, ಸುದ್ದಿಯನ್ನಾದರೂ ಸರಿಯಾಗಿ ಬರೆಯುತ್ತಾರಾ? ವಿಷಯವನ್ನು ತುರುಕಿದ ಮಾತ್ರಕ್ಕೆ ಅದು ವರದಿಯಾದೀತೆ? ಅಂಕಿಅಂಶಗಳನ್ನು ಸೇರಿಸಿ, ಒಂದೆರಡು ಮಹನೀಯರ ಅಭಿಪ್ರಾಯ ದಾಖಲಿಸಿದ ಮಾತ್ರಕ್ಕೆ ಅದು ವರದಿಯಾ? ಉಪ್ಪು, ಹುಳಿ, ಖಾರ, ಒಗ್ಗರಣೆ, ಬೆಂದ ಬೇಳೆಯನ್ನು ಸುರಿದು ನೀರು ಹಾಕಿ ಕುದಿಸಿದರೆ ಹೇಗೆ ಅದು ಸಾರೋ ಸಾಂಬಾರೋ ಆಗುವುದಿಲ್ಲವೋ, ಹಾಗೆ ಮಾಹಿತಿ ತುರುಕಿದ ಮಾತ್ರಕ್ಕೆ ಅದು ವರದಿಯಾಗುವುದಿಲ್ಲ. ಈ ಸೂಕ್ಷ್ಮ ತುಂಬ ಜನರಿಗೆ ಅರ್ಥವಾಗುವುದಿಲ್ಲ. ಅರ್ಥ ಮಾಡಿಕೊಳ್ಳುವ ಮನಃಸ್ಥಿತಿಯೂ ಇರುವುದಿಲ್ಲ.

ಇಂಥ ಸಂದರ್ಭದಲ್ಲಿ ಮೇಲೆ ಹೇಳಿದಂಥ ಅಭಿಪ್ರಾಯಗಳು ರೂಪುಗೊಳ್ಳುತ್ತವೆ. ನಾನು ಬರೆದಿದ್ದೇ ಸತ್ಯ ಎಂಬ ಧಾರ್ಷ್ಟ್ಯ ಹುಟ್ಟಿಕೊಳ್ಳುತ್ತದೆ. ಪತ್ರಕರ್ತರಿಗೆ ಕೋಡುಗಳು ಮೂಡುವುದೇ ಆವಾಗ. ಇಷ್ಟಾದರೆ ಮುಗೀತು, ಸಿಕ್ಕಸಿಕ್ಕವರನ್ನು ಇರಿಯಲು ಹೋಗುವುದೇ ವೃತ್ತಿಯಾಗುತ್ತದೆ. ಕ್ರಮೇಣ ಅದೇ ಪ್ರವೃತ್ತಿಯಾಗುತ್ತದೆ. ಇಂಥ ಕಡೆ ಅಧ್ಯಯನ, ಅಭಿವ್ಯಕ್ತಿ, ಕುಶಲತೆ, ವೃತ್ತಿಪರತೆ ಎಂಬ ಸೂಕ್ಷ್ಮಗಳು ಅರ್ಥ ಕಳೆದುಕೊಳ್ಳುತ್ತ ಹೋಗುತ್ತವೆ.

ಈ ಸಮಸ್ಯೆ ಕೇವಲ ಪತ್ರಿಕೋದ್ಯಮದಲ್ಲಷ್ಟೇ ಅಲ್ಲ, ಬಹುತೇಕ ರಂಗಗಳಲ್ಲೂ ಇದೆ. ಸೂಕ್ಷ್ಮತೆ, ಸಂವೇದನೆ ಇಲ್ಲದ ಬಹಳಷ್ಟು ಜನ ತಮ್ಮವೇ ಆದ ರೀತಿ ವಿಶ್ಲೇಷಣೆ ನಡೆಸುತ್ತ, ತಮ್ಮ ಬೌದ್ಧಿಕಮಟ್ಟ ತೋರಿಸುತ್ತ ಹೋಗುತ್ತಾರೆ.

ಮೂಲ ವಿಷಯಕ್ಕೆ ಬರೋಣ. ಅಂತರ್ಜಾಲದಲ್ಲಿ ಬರುತ್ತಿರುವುದು ಬರವಣಿಗೆ ಅಲ್ಲವೆ? ಇಲ್ಲಿಯೂ ಸೊಗಸಾದ ಅಭಿವ್ಯಕ್ತಿ ಇಲ್ಲವೆ? ಸಾಹಿತ್ಯದ ಬಹುತೇಕ ಪ್ರಕಾರಗಳು ಇಲ್ಲಿ ತುಂಬ ಚೆನ್ನಾಗಿ ವ್ಯಕ್ತವಾಗುತ್ತಿಲ್ಲವೆ? ಇದ್ದಕ್ಕಿದ್ದಂತೆ ತಮ್ಮ ಸ್ಥಾನಕ್ಕೇ ಕೈ ಹಾಕಿದ ಅಂತರ್ಜಾಲ ಬರಹಗಾರರು ಅರಮರ್ಧ ಪತ್ರಕರ್ತರಲ್ಲಿ ಹುಟ್ಟಿಸಿದ ದಿಗಿಲಿನಿಂದಾಗಿ ಇಂಥ ಅಭಿಪ್ರಾಯಗಳು ಹೊಮ್ಮುತ್ತಿವೆ ಎಂದು ನಾನು ಭಾವಿಸಿದ್ದೇನೆ.

ಯಾವುದೇ ರಂಗವಿರಲಿ, ಅಲ್ಲಿ ಎಲ್ಲ ಬಲ್ಲವರಿಲ್ಲ. ಬಲ್ಲವರ ಸಂಖ್ಯೆ ಬಹಳಿಲ್ಲ. ಹಾಗಂದುಕೊಂಡು, ನಕ್ಕು ಸುಮ್ಮನಾಗುತ್ತೇನೆ.

- ಚಾಮರಾಜ ಸವಡಿ

ನುಡಿ ಚಿತ್ರ ಬರೆಯಲು ಕಲಿತಿದ್ದು

14 Jul 2008

0 ಪ್ರತಿಕ್ರಿಯೆ
ಒಂದೆರಡು ಘಟನೆಗಳನ್ನು ಹೇಳುವ ಮೂಲಕ ವಿಷಯಕ್ಕೆ ಬರುವುದು ಸುಲಭ ಅನ್ನಿಸುತ್ತಿದೆ.

ಪತ್ರಿಕೋದ್ಯಮಕ್ಕೆ ಬಂದ ಪ್ರಾರಂಭಿಕ ದಿನಗಳವು. ಅಪರಾಧ ಸುದ್ದಿಯನ್ನು ಬರೆದು ಅನುಭವವಿದ್ದ ನನ್ನನ್ನು, ನುಡಿ ಚಿತ್ರದತ್ತ ಹೊರಳಿಸಲು ಮಿತ್ರ ಆನಂದತೀರ್ಥ ಪ್ಯಾಟಿ ಯತ್ನಿಸುತ್ತಿದ್ದರು.

ಆಗ ಕೊಪ್ಪಳ ಹೊಸ ಜಿಲ್ಲೆಯಾಗಿ ಉದಯಿಸಿತ್ತು. ಆದರೆ ಅಲ್ಲಿಯ ಹಳೆಯ ಸಮಸ್ಯೆಗಳು ಮಾತ್ರ ಹಾಗೇ ಉಳಿದಿದ್ದವು. ಓಡಾಡಲು ಸೈಕಲ್ ಕೂಡ ಇಲ್ಲದ ನಾನು ಮತ್ತು ಪ್ಯಾಟಿ ಸೇರಿಕೊಂಡು ಈ ಸಮಸ್ಯಾತ್ಮಕ ಊರಿನ ಕಲ್ಲು ಬೆಟ್ಟ, ಬೆಂಗಾಡಿನಂಥ ಪ್ರದೇಶಗಳಲ್ಲಿ ಅಲೆಯುತ್ತ, ಬರೆಯಲು ವಿಷಯಗಳನ್ನು ಹುಡುಕುತ್ತಿದ್ದೆವು.

’ಕ್ರೈಮ್ ಬರೀಬೇಕ್ರೀ ಆನಂದ್’ ಎಂದು ನಾನು ಒತ್ತಾಯಿಸುತ್ತಿದ್ದರೆ, ’ನಿಮ್ಮ ಬರವಣಿಗೆಗೆ ಫೀಚರ್ ರೈಟಿಂಗ್‌ಗೆ ಕೂಡ ಒಗ್ಗುತ್ತದೆ. ಪ್ರಯತ್ನಿಸಿ ನೋಡ್ರಿ’ ಎಂಬುದು ಅವರ ಆಗ್ರಹ. ಫೋಟೊ ಇಲ್ಲದೆ ಫೀಚರ್ ಬರೆಯುವುದು ಹೇಗೆ ಎಂಬ ಪ್ರಶ್ನೆ ಇಬ್ಬರನ್ನೂ ಕಾಡಿದಾಗ ದೊರೆತ ಇನ್ನೋರ್ವ ಮಿತ್ರ ಪ್ರಕಾಶ ಕಂದಕೂರ.

ಆಗ ಮಾರ್ಚ್ ಸಮಯ. ಕೊಪ್ಪಳದ ಕಲ್ಲುಬೆಟ್ಟಗಳು ಬಿಸಿಯಾಗಿ, ಸುತ್ತಲಿನ ಖಾಲಿ ಹೊಲಗಳು ಬಿಸಿಯುಸಿರು ಬಿಡುತ್ತ, ಊರಿನ ಸಣ್ಣ ಕಿಟಕಿಗಳ ಮನೆಗಳನ್ನು ಇಡ್ಲಿ ಪಾತ್ರೆಯಂತೆ ಕಾಯಿಸುತ್ತಿದ್ದವು. ಅಂಥ ಕೆಟ್ಟ, ರಣ ರಣ ಬಿಸಿಲಿನಲ್ಲಿ, ಗಾಳಿ ಕೂಡ ಸರಿಯಾಗಿ ಹಾಕಿರದ ಎರಡು ಸೈಕಲ್‌ಗಳ ಮೇಲೆ ಯಾತ್ರೆ ಹೋಗುತ್ತಿದ್ದ ನಮ್ಮನ್ನು ನೋಡಿ ಮರುಗುತ್ತಿದ್ದ ಸಮಕಾಲೀನ ಪತ್ರಕರ್ತರು, ನಮಗೆ ಹುಚ್ಚು ಹಿಡಿದಿದೆ ಎಂದು ಒಮ್ಮತದ ತೀರ್ಮಾನಕ್ಕೆ ಬಂದಿದ್ದರು.

ಹಾಗೆ ಪ್ರಾರಂಭವಾದ ನಮ್ಮ ಮೊದಲ ಯಾತ್ರೆ ಸಾಗಿದ್ದು ಊರಿನ ಪಕ್ಕದಲ್ಲಿಯೇ ಇದ್ದ ಮಳೆಮಲ್ಲಪ್ಪನ ಬೆಟ್ಟದತ್ತ. ಇಲ್ಲಿಯ ಭೂಗರ್ಭದ ಕಿಂಡಿಯೊಂದರಿಂದ ವರ್ಷ ಪೂರ್ತಿ ನೀರು ಬರುತ್ತಿರುತ್ತದೆ. ಅಲ್ಲೇನಾದರೂ ಬರೆಯಲು ಸಿಗಬಹುದೆ ಎಂದು ಹುಡುಕಲು ಮಟಮಟ ಮಧ್ಯಾಹ್ನದಲ್ಲಿ ನಮ್ಮ ಯಾತ್ರೆ ಅತ್ತ ಸಾಗಿತು.

ಸೈಕಲ್ ತುಳಿದು ಏದುಸಿರು ಬಿಡುತ್ತಿದ್ದ ನಾವು, ಕಿಂಡಿಯಿಂದ ಬರುತ್ತಿದ್ದ ನೀರು ಕುಡಿದು ದಣಿವಾರಿಸಿಕೊಳ್ಳಲು ಕಾಲುವೆ ಪಕ್ಕ ಕೂತೆವು. ಆಗ ’ಅದು’ ಕಣ್ಣಿಗೆ ಬಿತ್ತು.

ಕಾಲುವೆ ಒಳಗೆ ಹರಿಯುತ್ತಿದ್ದ ನೀರೊಳಗಿಂದ ಜೀವಿಯೊಂದು ಇಣುಕಿ ನೋಡುತ್ತಿತ್ತು. ನೆರಳಿನಲ್ಲಿ ಇತ್ತಾದ್ದರಿಂದ ಅದರ ವಿವರ ತಕ್ಷಣಕ್ಕೆ ಗೋಚರವಾಗಲಿಲ್ಲ. ಸೂಕ್ಷ್ಮವಾಗಿ ಗಮನಿಸಿದಾಗ, ಸೀಳು ನಾಲಗೆ ಕಾಣಿಸಿತು.

ಸೈಕಲ್ ಬಾರ್ ಗಾತ್ರದ ನಾಗರ ಹಾವು ಅದು. ನಮಗೆ ಅದರ ಮುಖ ಹಾಗೂ ಕುತ್ತಿಗೆಯ ಭಾಗವಷ್ಟೇ ಕಾಣುತ್ತಿತ್ತು. ಇಡೀ ದೇಹ, ಕಾಲುವೆಯ ಕಿಂಡಿಯಲ್ಲಿ ಮರೆಯಾಗಿತ್ತು. ಪ್ರಾರಂಭದಲ್ಲಿ ರೋಮಾಂಚನಗೊಂಡ ನಾವು ’ಹುಶ್, ಹುಶ್’ ಎಂದು ಅದರ ಗಮನ ಸೆಳೆಯಲು ಯತ್ನಿಸಿದೆವು.
ಆದರೆ ನಮ್ಮ ಇಷಾರೆಗಳನ್ನು ಅಲಕ್ಷಿಸಿ, ಹಾವು ತನ್ನ ನಾಲಗೆ ಚಲನೆಯನ್ನು ಮುಂದುವರೆಸಿತು. ಅಷ್ಟೊತ್ತಿಗೆ ಕ್ಯಾಮರಾಕ್ಕೆ ಫ್ಲ್ಯಾಷ್ ಜೋಡಿಸಿಕೊಂಡು ಸಿದ್ಧವಾಗಿದ್ದ ಛಾಯಾಗ್ರಾಹಕ ಮಿತ್ರ ಪ್ರಕಾಶ ಕಂದಕೂರ, ಫೋಟೊ ತೆಗೆಯಲು ಹವಣಿಸುತ್ತಿದ್ದರು.

ಹರಿಯುತ್ತಿರುವ ನೀರಿನ ಕೆಳಗಿದ್ದ ಮುಂಗೈ ಉದ್ದದ ನಾಗರಹಾವಿನ ಮುಖದ ಚಿತ್ರವನ್ನು ನಾಲಗೆ ಸಮೇತ ತೆಗೆಯಬೇಕೆಂದು ಪ್ರಕಾಶ್‌ಗೆ ಸೂಚಿಸಿದೆವು. ಆಗಿನ್ನೂ ಡಿಜಿಟಲ್ ಕ್ಯಾಮೆರಾಗಳು ಬಂದಿದ್ದಿಲ್ಲ. ಹೀಗಾಗಿ, ಫಿಲ್ಮ್ ಕ್ಯಾಮೆರಾದಲ್ಲಿಯೇ ಮೂರ್‍ನಾಲ್ಕು ಚಿತ್ರಗಳನ್ನು ತೆಗೆದರು ಪ್ರಕಾಶ. ಎರಡು ಚೆನ್ನಾಗಿ ಬಂದಿವೆ ಎಂಬ ತೃಪ್ತಿಯನ್ನೂ ವ್ಯಕ್ತಪಡಿಸಿದರು.

’ಕೆಲಸವಾಯಿತು, ಇನ್ನು ಕೋಲೊಂದನ್ನು ತೆಗೆದುಕೊಂಡು ನಾಗರಹಾವನ್ನು ಕೆಣಕೋಣ’ ಎಂಬ ಧೂರ್ತ ವಿಚಾರ ನಮಗೆ ಬಂದಿತು. ನಾವು ಫೋಟೊ ತೆಗೆಯುತ್ತಿದ್ದುದನ್ನು ನೋಡಿದ ಕೆಲವರು ಹತ್ತಿರ ಬಂದು, ನಮ್ಮ ವಿಚಾರವನ್ನು ಪ್ರಚೋದಿಸಿದರು. ಕೋಲೊಂದನ್ನು ಹುಡುಕಿಕೊಂಡು ಬಂದ ಉತ್ಸಾಹಿಯೊಬ್ಬ ಹಾವೆಲ್ಲಿದೆ ಎಂದು ಕೇಳಿದ. ಅಷ್ಟರೊಳಗೆ, ಅಪಾಯ ಗ್ರಹಿಸಿದ್ದ ಹಾವು ಪರಾರಿಯಾಗಿತ್ತು. ’ಮಗಂದು, ಫೊಟೊ ತೆಗೆಸಿಕೊಳ್ಳಲು ಬಂದಿತ್ತು ಅಂತ ಕಾಣುತ್ತದೆ’ ಎಂದು ತಮಾಷೆ ಮಾಡಿಕೊಂಡು ನಾವು ಲಟಕಾ ಸೈಕಲ್‌ಗಳಲ್ಲಿ ಹಿಂತಿರುಗಿದೆವು.

ಅವತ್ತೇ ರೀಲ್ ಕತ್ತರಿಸಿ, ಪ್ರಿಂಟ್‌ಗೆ ಹುಬ್ಬಳ್ಳಿಗೆ ಕಳಿಸಲಾಯಿತು. ಅದು ಬರಲು ಮೂರು ದಿನಗಳೇ ಹಿಡಿದವು. ಆದರೆ, ಫೋಟೊಗಳು ಪ್ರಿಂಟಾಗಿ ಬಂದಾಗ ನಾವು ಕುಣಿದಾಡುವುದೊಂದೇ ಬಾಕಿ. ಲಟಕಾ ಸೈಕಲ್‌ನಲ್ಲಿ ನಮ್ಮನ್ನು ಹೇರಿಕೊಂಡು ಹೋಗಿದ್ದಲ್ಲದೇ, ಮೂರು ಉತ್ತಮ ಫೋಟೊಗಳನ್ನು ಉದ್ರಿಯಾಗಿ ತೆಗೆದುಕೊಟ್ಟಿದ್ದರು ಪ್ರಕಾಶ ಕಂದಕೂರ. ’ಪ್ರಜಾವಾಣಿ’ಯ ’ನಾಡು-ನುಡಿ’ ಅಂಕಣಕ್ಕೆ ಬರೆಯಲು ಜಂಟಿಯಾಗಿ ನಿರ್ಧರಿಸಲಾಯಿತು. ಆದರೆ, ಅದನ್ನು ನಾನೇ ಬರೆಯಬೇಕೆಂದು ಬಲವಾಗಿ ಆಗ್ರಹಿಸಿದವರು ಆನಂದ.

’ಅಪರಾಧ ಸುದ್ದಿ’ಗಳ ಹೊರತಾಗಿ ನಾನು ಬರೆದ ಮೊದಲ ಲೇಖನ ಈ ಹಾವಿನದು. ’ನಿರ್ಲಿಪ್ತ ನಾಗರ’ ಶೀರ್ಷಿಕೆಯಲ್ಲಿ ಮರುವಾರವೇ ಅದು ಅಚ್ಚಾಗಿ ಬಂದಾಗ ನಮ್ಮ ಖುಷಿಗೆ ಪಾರವೇ ಇದ್ದಿಲ್ಲ. ನಮ್ಮ ಲಟಕಾ ಸೈಕಲ್‌ಗಳು ರಭಸದಿಂದ ಊರು ಸುತ್ತತೊಡಗಿದವು. ಕಂಡಿದ್ದನ್ನೆಲ್ಲ ಬರವಣಿಗೆಗೆ ಇಳಿಸುವ ಹುಚ್ಚು ಏರಿತು. ಪ್ರಕಾಶ್ ಕೂಡ ಕ್ಯಾಮೆರಾ ಹಿಡಿದು ನಮ್ಮೊಂದಿಗೆ ಹೊರಟಿದ್ದನ್ನು ನೋಡಿದವರು, ’ದುಡಿದು ತಿಂದುಕೊಂಡಿದ್ದ ಹುಡುಗನನ್ನು ಇವರಿಬ್ಬರೂ ಹಾಳು ಮಾಡುತ್ತಿದ್ದಾರಲ್ಲಾ...’ ಎಂದು ಬಹಿರಂಗವಾಗಿ ವಿಷಾದಿಸಿದ್ದರು.

ಹಾಗೆ ಶುರುವಾದ ನಮ್ಮ ನುಡಿ-ಚಿತ್ರದ ಹುಚ್ಚು ಕಳೆದ ಹತ್ತು ವರ್ಷಗಳಿಂದ ಅಬಾಧಿತವಾಗಿ ಮುಂದುವರೆಯುತ್ತಿದೆ. ನೂರಾರು ವಿಷಯಗಳ ಮೇಲೆ, ನೂರಾರು ಲೇಖನಗಳನ್ನು ಆನಂದ ಮತ್ತು ನಾನು ಬರೆದಿದ್ದೇವೆ. ಸಾವಿರಾರು ಫೊಟೊಗಳನ್ನು ಪ್ರಕಾಶ ತೆಗೆದುಕೊಟ್ಟಿದ್ದಾರೆ. ಈ ಅವಧಿಯಲ್ಲಿ ನಮ್ಮ ಹುಚ್ಚಿಗೆ ಹೊಸ ಆಯಾಮಗಳು ಸೇರಿಕೊಂಡಿವೆ. ವ್ಯಾಪ್ತಿ ವಿಸ್ತಾರವಾಗಿದೆ. ಡಿಜಿಟಲ್ ತಂತ್ರಜ್ಞಾನ ಆಸರೆಗೆ ನಿಂತಿದೆ. ನಮ್ಮ ಕ್ಯಾನ್ವಾಸ್ ವಿಶಾಲವಾಗಿದೆ. ಅಷ್ಟೇ ಅಲ್ಲ, ದಿನದಿಂದ ದಿನಕ್ಕೆ ಅದು ವಿಸ್ತರಿಸುತ್ತಲೇ ಇದೆ.

ಈಗ ಸಂಪದ ಅದಕ್ಕೊಂದು ಜಾಗತಿಕ ವಿಸ್ತರಣೆಯಾಗಿ ದೊರೆತಿದೆ. ಮತ್ತಿಷ್ಟು ನುಡಿಚಿತ್ರಗಳನ್ನು ಬರೆಯಲು ಮನಸ್ಸು ಹಾತೊರೆಯುತ್ತಿದೆ.

- ಚಾಮರಾಜ ಸವಡಿ

(೯ ಜುಲೈ, ೨೦೦೮)