ಇತ್ತೀಚೆಗೆ ಹೀಗೇ... ಹೇಗೆಂದರೆ ಹಾಗೆ...

24 Feb 2012

0 ಪ್ರತಿಕ್ರಿಯೆ


ತೂಕಡಿಕೆ, ಅರೆಎಚ್ಚರ, ಮಂಪರು ಸೇರಿಕೊಂಡರೆ ಅದನ್ನು ನಿದ್ದೆ ಎಂದು ಅಂದುಕೊಳ್ಳುವ ಹಂತ ತಲುಪಿದ ನಂತರ, ಇನ್ನು ಸಾಕಿದು ಅಂದುಕೊಂಡೆ.


ಅಂದುಕೊಂಡಿದ್ದೇ ಆಯಿತು. ಕಾಡುವ ನೆನಪುಗಳು ದೂರವಾಗಲಿಲ್ಲ. ಮನಸ್ಸಿನ ಭ್ರಾಂತಿ ಇದು ಅಂದುಕೊಂಡರೂ ಸಮಾಧಾನವಾಗಲಿಲ್ಲ.


ಬರೆಯುವುದನ್ನು ಬಿಟ್ಟೆ. ಬಿಟ್ಟ ಓದನ್ನು ಮತ್ತೆ ಶುರು ಮಾಡಿದೆ. ಆದರೂ, ಹಳಹಳಿ ದೂರವಾಗಲಿಲ್ಲ.


ಅದುವರೆಗೆ ಮರೆತೇ ಹೋದಂತಿದ್ದ ಸಂಗೀತ ಆಲಿಸಲು ಶುರು ಮಾಡಿದೆ. ಅದು ಹಳೆಯ ಗಾಯಗಳ ಜೊತೆಗೆ ಹೊಸ ಗಾಯಗಳನ್ನು ಮಾಡಿತು. ಸ್ಪೀಕರ್‌ಗಳನ್ನು ಕಿತ್ತೆಸೆದೆ.


ಮಂಪರೆಂಬ ನಿದ್ದೆ ಮುಗಿಸಿ, ಜಡಗೊಂಡಂತಿದ್ದ ಮೈಮನಸುಗಳಿಗೆ ಕಸುವು ತುಂಬಲು ಯೋಗಾಸನ ಮಾಡಿ, ತರಾತುರಿಯಿಂದ ಬೆಳಗಿನ ಎಲ್ಲ ಕೆಲಸಗಳನ್ನು ಮುಗಿಸಿದ ನಂತರ, ದಿನದ ಶೂನ್ಯಭಾವ ನಿಧಾನಕ್ಕೆ ಬಿಚ್ಚಿಕೊಳ್ಳುತ್ತದೆ. ಕಚೇರಿಗೆ ಹೋಗುವುದು ನಿತ್ಯದ ಕರ್ಮ. ಬರೆಯುವುದೇ ವೃತ್ತಿಯಾದ್ದರಿಂದ, ಬರೆಯುವುದೂ ನಿತ್ಯ ಕರ್ಮವೇ. ಬರೆದಿದ್ದನ್ನು ಒಮ್ಮೆ ಓದಿ, ತಿದ್ದಿ, ಅಚ್ಚಿಗೆ ಸಿದ್ಧಪಡಿಸಿ, ಪುಟ ವಿನ್ಯಾಸ ಮಾಡಿಸಿ, ಮುದ್ರಣಕ್ಕೆ ಕಳಿಸಿದ ನಂತರ ಎರಡನೇ ಶೂನ್ಯ ಬಿಚ್ಚಿಕೊಳ್ಳುತ್ತದೆ. ಕಚೇರಿ ನಿಧಾನವಾಗಿ ಖಾಲಿಯಾಗತೊಡಗಿದಂತೆ, ಮನೆಯೆಡೆಗೆ ದೀರ್ಘ ಪಯಣ. ಹೋಗಿ ಏನ್ಮಾಡ್ತೀರಿ? ಕ್ಲಬ್‌ಗೆ ಹೋಗೋಣ ಬನ್ನಿ ಎಂಬ ಗೆಳೆಯರ ಆಗ್ರಹಕ್ಕೆ ಇಲ್ಲವೆನ್ನಲಾಗದೇ ಅತ್ತ ಹೊರಡುತ್ತೇನೆ. ಮಂಕಾಗಿ ನಿಂತಂತಿದ್ದ ಮರಗಳ ಕೆಳಗೆ ಬಾಟಲಿಗಳು, ಭಾವನೆಗಳು ಬಿಚ್ಚಿಕೊಳ್ಳುತ್ತವೆ. ಏನೇನೋ ಮಾತುಗಳು, ಆವೇಶ, ಉದ್ವೇಗ, ನಿರಾಸೆ, ಹತಾಶೆ, ಹೊಸದೇನನ್ನೋ ಮಾಡುವ ಉಮೇದು ಉಕ್ಕುತ್ತವೆ. ಮದ್ಯ ತಲೆಗೇರಿದೆ ಅನಿಸಿದರೂ, ಅದಕ್ಕೂ ಮುಂಚೆ ತಲೆಯೊಳಗಿದ್ದ ಶೂನ್ಯ ಖಾಲಿಯಾಗುವುದಿಲ್ಲ. 


ಅಪರಾತ್ರಿ ಹೊರಬಿದ್ದು, ನಿರ್ಜನ ರಸ್ತೆಯಲ್ಲಿ ಯಾವುದೋ ಗುಂಗಿನಲ್ಲಿ ಗಾಡಿ ಓಡಿಸುವಾಗ, ಸಿಗ್ನಲ್‌ಗಳ ಹತ್ತಿರ ಪೊಲೀಸರು ಕೈ ಅಡ್ಡ ಮಾಡುತ್ತಾರೆ. ಗಾಡಿ ನಿಲ್ಲುತ್ತದೆ. ಕುಡಿದಿದ್ದೀರಾ? ಎನ್ನುವ ಪ್ರಶ್ನೆಗೆ ಹೌದೆನ್ನುತ್ತೇನೆ. ಪ್ರೆಸ್‌ ಎಂಬ ಫಲಕ ನೋಡಿ, ಏನ್ಸಾರ್‌ ಕುಡಿದು ಗಾಡಿ ಓಡಿಸ್ತಿದ್ದೀರಲ್ಲ? ಎನ್ನುತ್ತಾರೆ ಪೊಲೀಸರು. ಏನ್ಮಾಡೋದು, ಇಲ್ಲದಿದ್ದರೆ ಕ್ಲಬ್‌ನಲ್ಲೇ ಮಲ್ಕೋಬೇಕಾಗುತ್ತದೆ ಎನ್ನುತ್ತೇನೆ. ಸರಿ ಹೋಗಿ, ಹುಷಾರಾಗಿ ಎಂದು ಬೀಳ್ಕೊಡುತ್ತಾರೆ. ಮತ್ತದೇ ಗುಂಗು. ಮತ್ತದೇ ದಾರಿ.


ಬೆಂಗಳೂರಿನ ರಾತ್ರಿಗಳಿಗೆ ವಿಚಿತ್ರ ಸೆಳೆತ. ರಸ್ತೆ ಖಾಲಿ ಖಾಲಿ, ಮನಸ್ಸಿನಂತೆ. ಬೀದಿ ದೀಪಗಳು ಮಂಕು ಮಂಕು, ಥೇಟ್‌ ಮನಸ್ಸಿನಂತೆ. ಕುಳಿರ್ಗಾಳಿಗೆ ಮುಖವೊಡ್ಡಿ ಗಾಡಿ ಓಡಿಸುವಾಗ, ಎಲ್ಲಿದ್ದೇನೆ ಎಂಬ ಪ್ರಜ್ಞೆಯೂ ಇಲ್ಲದಂತಾಗಿರುತ್ತದೆ. ಆದರೂ, ಗಾಡಿ ತನ್ನ ಪಾಡಿಗೆ ತಾನು ರೂಢಿಯಾದ ರಸ್ತೆಯಲ್ಲಿ ಒಂದೇ ಹದಕ್ಕೆ ಓಡುತ್ತದೆ. ಮನೆ ಬಂದಾಗ ನಿಲ್ಲುತ್ತದೆ.


ಹೆಚ್ಚು ಸದ್ದು ಮಾಡದಂತೆ ಬೀಗ ತೆಗೆದು, ಲೈಟೇ ಹಾಕದೇ ಹುಷಾರಾಗಿ ಬಟ್ಟೆ ಬದಲಿಸಿ, ಮುಖ ತೊಳೆದು, ಅಡುಗೆ ಮನೆ ಹೊಕ್ಕಾಗ, ಮುಚ್ಚಿಟ್ಟ ಪಾತ್ರೆಗಳು ನೈಟ್‌ ಬಲ್ಬ್‌ನ ಬೆಳಕಿನಲ್ಲಿ ಮಂದಗೇ ಪ್ರತಿಫಲಿಸುತ್ತವೆ. ಅಪರಾತ್ರಿಯಲ್ಲಿ ಊಟ ಮಾಡಲು ಮನಸ್ಸಾಗುವುದಿಲ್ಲ. ಊಟ ಮಾಡದಿದ್ದರೆ ದಿನಕ್ಕೆ ಒಂದೇ ಹೊತ್ತು ಉಂಡಂತಾದೀತೆಂಬ ಅಳುಕಿಗೆ ಒಂದಿಷ್ಟು ತಿನ್ನುತ್ತೇನೆ. ನಿದ್ದೆ ಎಂಬುದು ಮುನಿದು ವರ್ಷಗಳೇ ಆದವು. ಓದುವ ಕೋಣೆಗೆ ಹೋಗಿ ಕಂಪ್ಯೂಟರ್‌ ಆನ್‌ ಮಾಡುತ್ತೇನೆ. ಜೊತೆಗೆ ಪುಸ್ತಕ. ಮೇಲ್‌ ನೋಡಿ, ನಾಳೆಯ ಬರವಣಿಗೆಗೆ ಒಂದಿಷ್ಟು ವಿಷಯ ಸಂಗ್ರಹಿಸಿ, ತೆರೆದಿಟ್ಟ ಪುಸ್ತಕದ ಕೆಲವು ಹಾಳೆಗಳ ಮೇಲೆ ಕಣ್ಣಾಡಿಸುವಾಗ, ಮೈಮನಸ್ಸು ದಣಿದಿರುತ್ತದೆ. 


ಆದರೂ ನಿದ್ದೆ ಬರುವುದಿಲ್ಲ. ಕುಡಿದ, ದಣಿದ, ಖಿನ್ನಗೊಂಡ ಮನಸ್ಸಿಗೆ ಒಂಚೂರಾದರೂ ನಿದ್ದೆ ಬೇಕು. ಆದರೆ, ಅದನ್ನು ಯಾರೋ ಕದ್ದುಬಿಟ್ಟಿದ್ದಾರೆ. 


ರಾತ್ರಿ ೨ರ ಹೊತ್ತಿಗೆ ಹಾಸಿಗೆಯಲ್ಲಿ ಒರಗಿಕೊಂಡ ನಂತರವೂ ಮನಸ್ಸಿನ ರಿಂಗಣ ನಿಲ್ಲುವುದಿಲ್ಲ. ನಿದ್ದೆಯಲ್ಲೇ ಕನವರಿಸುವ ಮಗಳ ತಲೆ ಸವರಿ, ನೈಟ್‌ ಬಲ್ಬ್‌ನಲ್ಲಿ ವಿಚಿತ್ರವಾಗಿ ಕಾಣುವ ಗೋಡೆಗಳನ್ನು ನೋಡುತ್ತ ಯಾವುದೋ ಹೊತ್ತಿನಲ್ಲಿ ಕಣ್ಮುಚ್ಚಿರುತ್ತೇನೆ. ಹೆಂಡತಿ ಇಟ್ಟ ಐದು ಗಂಟೆ ಅಲಾರಾಮ್‌ ಸದ್ದಿಗೆ ಮತ್ತೆ ಎಚ್ಚರ. ರಾತ್ರಿ ಮುಗಿಯುವುದರೊಳಗೆ ದಿನವೊಂದು ಪ್ರಾರಂಭವಾಗಿರುತ್ತದೆ.


****


ಇನ್ನು ಸಾಕು ಅಂತ ಅಂದುಕೊಂಡೆ.


ಎಷ್ಟು ದಿನ ಅಂತ ಹೀಗೇ, ನಿದ್ದೆ, ಊಟ, ಉತ್ಸಾಹಗಳಿಲ್ಲದೇ ದಿನಗಳೆಯುವುದು? ನಾನು ಮತ್ತೆ ಮುಂಚಿನಂತಾಗಬೇಕು ಎಂಬ ಹಂಬಲ ಶುರುವಾಯ್ತು. ನನ್ನ ಖಿನ್ನತೆಗಳು ನನಗಿರಲಿ. ನನ್ನ ಹವ್ಯಾಸಗಳು ನನ್ನವು. ಉಕ್ಕಿದಾಗೊಮ್ಮೆ ಬರೆದೋ, ಮೌನವಾಗಿದ್ದುಕೊಂಡೋ ಜೀರ್ಣಿಸಿಕೊಂಡು, ಮತ್ತೆ ಹೊಸ ದಿನದ ಉತ್ಸಾಹದಲ್ಲಿ ಏಳುವಂತಾಗಬೇಕು ಎಂದು ನಿರ್ಧರಿಸಿದೆ. 


ನೆನಪುಗಳನ್ನೆಲ್ಲ ಹುಡುಕಿ ಹುಡುಕಿ ದೂರ ಮಾಡಿದೆ. ಹೊಸ ಕನಸುಗಳು ಮೊಳೆಯಲು ಬಿಡಲಿಲ್ಲ. ಮೊದಮೊದಲು ತೀರ ಕಷ್ಟವಾದರೂ, ಅಂದುಕೊಂಡಿದ್ದನ್ನು ಆಚರಣೆಗೆ ತಂದೆ. 


****


ಈಗ ನಾನು ಮತ್ತೆ ಒಂಟಿ. ಮತ್ತೆ ಮೌನಿ. ಕಳೆದುಹೋದವನಂತೆ ಇರುವುದು ರೂಢಿಯಾಗಿಬಿಟ್ಟಿದೆ. ನೀನು ತೀರಾ ಮೂಡಿಯಾಗುತ್ತಿದ್ದೀ ಎನ್ನುತ್ತಾರೆ ಹತ್ತಿರದವರು. 


ಮೋಡಿಗೆ ಒಳಗಾದವ ಮೂಡಿಯಾಗದೇ ಇನ್ನೇನು ಅಂತ ಅಂದುಕೊಂಡು ಸುಮ್ಮನಾಗುತ್ತೇನೆ.


ಮತ್ತದೇ ದಿನಚರಿ, ಕಚೇರಿ, ಮನೆ ದಾರಿ, ಅಪರಾತ್ರಿಯ ಊಟ, ಮಂಪರೆಂಬ ನಿದ್ದೆ.


ನಾನು ಬದಲಾದೆನಾ? ಬದಲಾಗಬಲ್ಲೆನಾ?


- ಚಾಮರಾಜ ಸವಡಿ