Showing posts with label ಕೃಷಿ. Show all posts
Showing posts with label ಕೃಷಿ. Show all posts

ಮೈಕೇಲ್, ಮೊಬೈಲ್‌ಮತ್ತು ಗ್ರಾಮೀಣ ಅಭಿವೃದ್ಧಿ

6 Sept 2009

4 ಪ್ರತಿಕ್ರಿಯೆ
(ಮೈಕೇಲ್‌ ರಿಗ್ಸ್. ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆಯ ಜ್ಞಾನ ಮತ್ತು ಮಾಹಿತಿ ನಿರ್ವಹಣೆ ಅಧಿಕಾರಿ. ಐ.ಸಿ.ಟಿ. (ಇನ್‌ಫರ್ಮೇಶನ್ ಅಂಡ್ ಕಮ್ಯನಿಕೇಶನ್‌ ಟೆಕ್ನಾಲಜಿ) ಅಂದರೆ, ಮಾಹಿತಿ ಮತ್ತು ದೂರಸಂಪರ್ಕ ತಂತ್ರಜ್ಞಾನವನ್ನು ಗ್ರಾಮೀಣ ಅಭಿವೃದ್ಧಿಗೆ ಬಳಸಲು ಪ್ರೇರೇಪಿಸುವುದು ಅವರ ಜವಾಬ್ದಾರಿ. ಆಗಸ್ಟ್ ಕೊನೆಯ ವಾರದಲ್ಲಿ ಬೆಂಗಳೂರಿಗೆ ಬಂದಿದ್ದ ರಿಗ್ಸ್ ಕನಿಂಗ್‌ಹ್ಯಾಮ್‌ ರಸ್ತೆಯಲ್ಲಿರುವ ದಿ ಸೆಂಟರ್ ಫಾರ್ ಇಂಟರ್ನೆಟ್ ಅಂಡ್ ಸೊಸೈಟಿಯಲ್ಲಿ ಭಾಷಣ ಮಾಡಿದರು. ತಂತ್ರಜ್ಞಾನದ ನೆರವಿನಿಂದ ಗ್ರಾಮೀಣ ಅಭಿವೃದ್ಧಿ ಸುಲಭ ಎಂಬುದು ಅವರ ಮಾತಿನ ಸಾರಾಂಶ. ಆ ಸಂದರ್ಭದಲ್ಲಿ ಹಾಜರಿದ್ದ ಕೃಷಿ ಸಂಪದ ತಂಡ ಗ್ರಹಿಸಿದ ವಿವರ ಇಲ್ಲಿದೆ)

ಒಂದು ಸರಳ ಮಾಹಿತಿ ಸಾಧನವೊಂದು ನಮ್ಮ ಗ್ರಾಮೀಣ ಪ್ರದೇಶದ ಬದುಕನ್ನೇ ಪ್ರಗತಿಯತ್ತ ಕೊಂಡೊಯ್ಯಬಲ್ಲುದೆ? ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆಯ ಅಧಿಕಾರಿ ಮೈಕೇಲ್ ರಿಗ್ಸ್ ಪ್ರಕಾರ ಅದು ಖಂಡಿತ ಸಾಧ್ಯ. ಇದಕ್ಕೆ ಅವರು ನೀಡುವ ಉದಾಹರಣೆ ಮೊಬೈಲ್.

ಮೊಬೈಲ್‌ಯಂತ್ರದ ಬಳಕೆಯ ಸಾಧ್ಯತೆಗಳು ಅಪಾರ ಅಂತಾರೆ ರಿಗ್ಸ್. ಇದರಿಂದ ರೈತ ಮತ್ತು ಮಾಹಿತಿ ಭಂಡಾರದ ನಡುವಿನ ದೂರ ಇಲ್ಲವಾಗುತ್ತದೆ. ರೈತನಿಗೆ ಬೇಕಾದ ಮಾಹಿತಿಯನ್ನು ಸಂಬಂಧಿಸಿದ ಸಂಸ್ಥೆ ಅಥವಾ ಸರ್ಕಾರ ತಕ್ಷಣ ಅವರಿಗೆ ತಲುಪಿಸಬಹುದು. ಬರ, ಅತಿವೃಷ್ಟಿ, ಕೀಟಬಾಧೆ, ಬೆಲೆ ಏರಿಳಿತ, ಯಾವ ಪ್ರದೇಶಕ್ಕೆ ಯಾವ ಬೆಳೆ ಸೂಕ್ತ, ಬಿತ್ತನೆ ಹೇಗೆ, ಕಾಲಕಾಲಕ್ಕೆ ಅನುಸರಿಸಬೇಕಾದ ಬೇಸಾಯ ಕ್ರಮಗಳಾವವು, ಯಾವ ಮಣ್ಣಿಗೆ ಎಂಥ ಬೆಳೆ ಸೂಕ್ತ- ಹೀಗೆ ಕೃಷಿ ಸಂಬಂಧಿ ವಿಷಯಗಳೆಲ್ಲವನ್ನೂ ಮೊಬೈಲ್‌ ಮೂಲಕ ಅಪ್‌ಡೇಟ್ ಮಾಡುತ್ತ ಹೋಗಬಹುದು. ಒಂದೇ ಸಂದೇಶವನ್ನು ಸಂಬಂಧಿಸಿದ ಎಲ್ಲ ರೈತರಿಗೂ ಏಕಕಾಲಕ್ಕೆ ತಲುಪಿಸುವುದು ಮೊಬೈಲ್ ಮೂಲಕ ಸುಲಭ. ಅಷ್ಟೇ ಅಲ್ಲ, ರೈತರೈತರ ನಡುವೆ ಕೂಡ ಇದು ಸಂಪರ್ಕ ಸಾಧನವಾಗಿ, ಮಾಹಿತಿ ವಿನಿಮಯಕ್ಕೆ ನೆರವಾಗಬಲ್ಲುದು.

ಇಂಥದೇ ಇನ್ನೊಂದು ತಂತ್ರಜ್ಞಾನ ವಿಡಿಯೋ ಕಾನ್ಫೆರೆನ್ಸಿಂಗ್. ರೈತನ ಹೊಲದ ವಾಸ್ತವ ಪರಿಸ್ಥಿತಿ ಏನೆಂಬುದನ್ನು ಇಲ್ಲಿ ತಕ್ಷಣ ಅರಿಯಬಹುದು. ಸಂಬಂಧಿಸಿದ ರೈತರೊಂದಿಗೆ ಹಾಗೂ ಅಧಿಕಾರಿಗಳೊಂದಿಗೆ ನೇರವಾಗಿ ಮಾತನಾಡಿ, ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಬಹುದು. ಇದರಿಂದ ಹಣ ಮತ್ತು ಸಮಯದ ಅಪಾರ ಉಳಿತಾಯವಾಗುತ್ತದೆ ಮತ್ತು ಪರಿಹಾರ ಕೂಡ ಶೀಘ್ರವಾಗಿ ಲಭಿಸುತ್ತದೆ ಅಂತಾರೆ ಮೈಕೇಲ್‌ ರಿಗ್ಸ್.

ಈ ಎಲ್ಲ ಉದಾಹರಣೆಗಳು ಕೇವಲ ಆದರ್ಶಗಳಲ್ಲ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ವಿವಿಧ ದೇಶಗಳಲ್ಲಿ ಇದನ್ನು ಯಶಸ್ವಿಯಾಗಿ ಪ್ರಯೋಗಿಸಿದೆ. ರೈತರೆಂದರೆ ಏನೂ ಗೊತ್ತಿರದ ಜನ ಎಂಬ ಭ್ರಮೆಯನ್ನು ಬದಿಗಿಟ್ಟು, ತಂತ್ರಜ್ಞಾನವನ್ನು ಅವರ ಕೈಗೆ ತಲುಪಿಸಿದರೆ ಪ್ರಗತಿ ಖಂಡಿತ. ಗ್ರಾಮೀಣ ಪ್ರದೇಶದ ಜನ ಹೇಗೆ ಬದುಕುತ್ತಿದ್ದಾರೆ ಎಂಬ ಕಲ್ಪನೆಯೇ ಬಹಳಷ್ಟು ಕಡೆ ಸ್ಪಷ್ಟವಾಗಿಲ್ಲ. ಹೀಗಿರುವಾಗ, ಅವರಿಗಾಗಿ ರೂಪಿಸುವ ಯೋಜನೆಗಳು ಅವರನ್ನು ತಲುಪುವುದಾದರೂ ಹೇಗೆ ಎಂಬುದು ರಿಗ್ಸ್ ಪ್ರಶ್ನೆ.

ತಂತ್ರಜ್ಞಾನವನ್ನು ಬಳಸಿ, ಗ್ರಾಮೀಣ ಪ್ರದೇಶವನ್ನು ಕಾಡುತ್ತಿರುವ ಸಮಸ್ಯೆಗಳನ್ನು ಅರಿತುಕೊಳ್ಳಿ. ನಂತರ, ಅವನ್ನು ನಿವಾರಿಸುವ ಕುರಿತು ಯೋಜನೆಗಳನ್ನು ರೂಪಿಸಿ. ಅವುಗಳ ಮಾಹಿತಿಯನ್ನು ಸಂಬಂಧಿಸಿದವರಿಗೆ ತಲುಪಿಸಿ. ಅವರೂ ಈ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಉತ್ತೇಜಿಸಿ. ಮೊಬೈಲ್‌ಕಂಪನಿಗಳು ಕೂಡ ಈ ಕೆಲಸಕ್ಕೆ ಕೈಜೋಡಿಸಬಲ್ಲವು. ಆಗ ಯಾವೊಂದು ಸಮಸ್ಯೆಯೂ ಅಲ್ಲಿಯೇ ಉಳಿದುಬಿಡದೇ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ಬರುತ್ತದೆ. ಆಗ ಪರಿಹಾರ ಸುಲಭ. ಹಲವಾರು ಬುದ್ಧಿಜೀವಿಗಳು ಹಾಗೂ ತಂತ್ರಜ್ಞರು ಸೇರಿ ರೂಪಿಸಿದ್ದು ಮಾಹಿತಿ ಮತ್ತು ತಂತ್ರಜ್ಞಾನ ಬಳಕೆಯ ಈ ಐಡಿಯಾ. ಹಿಂದುಳಿದ ದೇಶವಾದ ಕೋಸ್ಟರಿಕ, ಭೂತಾನ್‌, ಅಭಿವೃದ್ಧಿಶೀಲ ದೇಶಗಳಾದ ಶ್ರೀಲಂಕಾ, ಮಲೇಷ್ಯದಲ್ಲಿ ಈ ಪ್ರಯೋಗ ಯಶಸ್ವಿಯಾಗಿದೆ  ಅಂತಾರೆ ರಿಗ್ಸ್.

'ಗ್ರಾಮೀಣ ಪ್ರದೇಶಕ್ಕೆ ಮಾಹಿತಿ ರವಾನಿಸುವುದು ಎಲ್ಲಾ ಕಾಲದಲ್ಲೂ ಎದುರಾಗಿರುವ ದೊಡ್ಡ ಸವಾಲು. ಇವತ್ತಿಗೂ ತುಂಬ ಜನ ಇದು ಕಷ್ಟಕರ ಎಂದೇ ಭಾವಿಸಿದ್ದಾರೆ. ಅವರ ಪ್ರಕಾರ ಮಾಹಿತಿ ಎಂದರೆ ಅಕ್ಷರರೂಪದಲ್ಲಿ ಇರುವಂಥದು. ವೆಬ್‌ಸೈಟ್, ದಿನಪತ್ರಿಕೆಗಳಲ್ಲಿ ಬರುವ ಮಾಹಿತಿಯನ್ನು ರೈತ ಓದಬಲ್ಲನೆ? ಎಂಬುದು ಅವರ ಪ್ರಶ್ನೆ. ನಿಜ, ರೈತನಿಗೆ ವೆಬ್‌ಸೈಟ್‌ನೋಡಲು ಆಗಲಿಕ್ಕಿಲ್ಲ. ಆದರೆ, ಸರ್ಕಾರ ನೋಡಬಹುದಲ್ಲ? ಸಂಬಂಧಿಸಿದ ಅಧಿಕಾರಿಗಳು ನೋಡಬಹುದು. ಅಲ್ಲಿಂದ ಹೆಕ್ಕಿದ ಮಾಹಿತಿಯನ್ನು ರೈತನಿಗೆ ತಲುಪಿಸುವುದಷ್ಟೇ ಮುಂದಿನ ಕೆಲಸ. ಮೊಬೈಲ್‌ಆ ಕೆಲಸವನ್ನು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಮಾಡಬಹುದು. ರೇಡಿಯೋದಂತೆ ಇಲ್ಲಿ ಒಮ್ಮುಖ ಸಂಪರ್ಕ ಇಲ್ಲ. ರೈತ ಮತ್ತು ಸಂಬಂಧಿಸಿದ ವ್ಯಕ್ತಿಗಳೊಂದಿಗೆ ನೇರ ಸಂವಾದ ಸಾಧ್ಯವಿರುವುದರಿಂದ, ಸಮಸ್ಯೆ ಬೇಗ ಪರಿಹಾರ ಕಾಣಬಲ್ಲುದು' ಎಂಬುದು ಮೈಕೇಲ್‌ ರಿಗ್ಸ್ ವಾದ.

ಹೀಗಾಗಿ, ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ಮಾಹಿತಿ ತಂತ್ರಜ್ಞಾನದ ನೆರವಿನಿಂದ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಮುಂದಾಗಿದೆ. ಅದರಲ್ಲೂ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಭಾರತದಂಥ ದೇಶದಲ್ಲಿ, ಪ್ರಗತಿಯ ಸಾಧ್ಯತೆಗಳು ಅಪಾರ. ಇಲ್ಲಿ ಮೊಬೈಲ್‌ದರ ಅತ್ಯಂತ ಕಡಿಮೆ. ವ್ಯಾಪ್ತಿ ಹೆಚ್ಚು. ಹಲವಾರು ಕಂಪನಿಗಳು ಕಣದಲ್ಲಿರುವುದರಿಂದ ಸ್ಪರ್ಧಾತ್ಮಕ ದರದಲ್ಲಿ ಸೇವೆ ಸಿಗುತ್ತದೆ. ರೈತರ ಯೋಜನೆಗಳಿಗೆ ಇನ್ನೂ ರಿಯಾಯಿತಿ ಪಡೆಯಬಹುದು. ಸರ್ಕಾರ ಮನಸ್ಸು ಮಾಡಿದರೆ, ಖಂಡಿತವಾಗಿ ಗ್ರಾಮೀಣ ಅಭಿವೃದ್ಧಿ ಕೆಲಸ ತೀವ್ರಗೊಳ್ಳುತ್ತದೆ ಎಂಬುದು ರಿಗ್ಸ್ ಮಾತಿನ ಸಾರಾಂಶ.

ಇಷ್ಟೊಂದು ತಂತ್ರಜ್ಞಾನ ಬಂದಿದೆ. ಆದರೂ ಹಸಿವೆಯನ್ನು ಹೋಗಲಾಡಿಸಲು ಆಗಿಲ್ಲ. ಎಲ್ಲ ಪ್ರದೇಶಗಳಿಗೂ ಒಂದೇ ರೀತಿಯ ಯೋಜನೆ ರೂಪಿಸುವ ಸಾಂಪ್ರದಾಯಿಕ ವಿಧಾನಗಳಿಂದ ಉಪಯೋಗವಿಲ್ಲ. ಮೊಬೈಲ್‌ತಂತ್ರಜ್ಞಾನವೊಂದನ್ನೇ ಬಳಸಿಕೊಂಡರೂ ಪ್ರತಿಯೊಂದು ಹಳ್ಳಿಗೆ ಅದಕ್ಕೆ ಬೇಕಾದ ರೀತಿಯ ಪರಿಹಾರ ಕ್ರಮಗಳನ್ನು ರೂಪಿಸಲು ಸಾಧ್ಯ. ಆಗ ಭೂಮಿಯ ಇನ್ನೊಂದು ಮೂಲೆಯಲ್ಲಿರುವ ರೈತನೊಂದಿಗೆ ಇಲ್ಲಿಯ ರೈತ ಸಂಪರ್ಕ ಹೊಂದಲು, ಮಾಹಿತಿ ವಿನಿಮಯ ಮಾಡಿಕೊಳ್ಳಲು ಸಾಧ್ಯ. ಹೊಸ ವಿಚಾರ, ವಿಧಾನ ಆತನಿಗೆ ದಕ್ಕುತ್ತವೆ. ರೈತನೊಳಗೊಬ್ಬ ಕ್ರಿಯಾಶೀಲ ವಿಜ್ಞಾನಿ, ಕೆಲಸಗಾರ ಕಣ್ತೆರೆಯುತ್ತಾನೆ. ಹೊಸ ವಿಚಾರಗಳು ಹರಿದಾಡುವುದರಿಂದ ಅಭಿವೃದ್ಧಿ ವೇಗವಾಗಿ ನಡೆಯುತ್ತದೆ. ನನ್ನ ಎಂಟು ವರ್ಷಗಳ ಅನುಭವ ಹೇಳುವುದಾದರೆ, ಜಗತ್ತಿನ ಎಲ್ಲ ಗ್ರಂಥಾಲಯಗಳನ್ನು ಜೋಡಿಸಿದಾಗ ಸಿಗುವ ಮಾಹಿತಿಗಿಂತ ನಮ್ಮ ಹತ್ತಿರ ಹೆಚ್ಚು ಮಾಹಿತಿ ಸಂಗ್ರಹವಾಗಬಲ್ಲುದು ಅಂತಾರೆ ರಿಗ್ಸ್.

ಸಮುದಾಯಗಳನ್ನು ಸ್ಥಾಪಿಸಿಕೊಳ್ಳಬೇಕು. ಇಪ್ಪತ್ತರಿಂದ ನೂರು ಜನರಿರುವ ಸಣ್ಣ ಸಣ್ಣ ತಂಡಗಳನ್ನು ರಚಿಸುವ ಮೂಲಕ ನಾವು ಗುರಿಯನ್ನು ಸುಲಭವಾಗಿ ತಲುಪಬಹುದು. ಪ್ರತಿಯೊಂದು ಸಮುದಾಯವೂ ದೂರ ಸಂಪರ್ಕ ಸಾಧನಗಳ ಮೂಲಕ ಪರಸ್ಪರ ಸಂಪರ್ಕ ಹೊಂದಬೇಕು. ವಿಚಾರ ವಿನಿಮಯವಾಗಬೇಕು. ರೈತರ ಇಂಥ ಸಮುದಾಯ ಜಗತ್ತಿನ ಎಲ್ಲ ಭಾಗಗಳ ಜನರನ್ನು ಒಳಗೊಳ್ಳಬೇಕು. ಏಕೆಂದರೆ, ಜಗತ್ತಿನ ಎಲ್ಲ ರೈತರ ಸಮಸ್ಯೆಗಳು ಹಾಗೂ ಪರಿಹಾರಗಳೂ ಒಂದೇ ಆಗಿವೆ. ಏಕದಿಂದ ಅನೇಕ (ಒನ್‌ಟು ಮೆನಿ) ನೀತಿಯಿಂದ ಸಾಕಷ್ಟು ರೈತರು ಪರಸ್ಪರ ಸಂಪರ್ಕಿಸಬಲ್ಲರು, ಮಾಹಿತಿ ವಿನಿಮಯ ಮಾಡಿಕೊಳ್ಳಬಲ್ಲರು. ಒಂದು ಮಾಹಿತಿ ಸಾವಿರಾರು ಜನರನ್ನು ತಲುಪಬಲ್ಲುದು. ಕಳೆದ ಎಂಟು ವರ್ಷಗಳಲ್ಲಿ ನಾನು ಕಂಡುಕೊಂಡ ಯಶಸ್ಸಿನ ಗುಟ್ಟಿದು ಎಂದರು ರಿಗ್ಸ್.

ಸಿಐಎಸ್‌(ಸೆಂಟರ್ ಫಾರ್ ಇಂಟರ್ನೆಟ್‌ಸೊಸೈಟಿ) ಈ ಕೆಲಸಕ್ಕೆ ಮುಂದಾಗಬೇಕು ಎಂದು ಆಶಿಸಿದ ರಿಗ್ಸ್, ಗ್ರಾಮೀಣ ಜನತೆಯನ್ನು ತಲುಪುವ ಕೆಲಸ ನಿಮ್ಮಿಂದ ಪ್ರಾರಂಭವಾಗಲಿ ಎಂದರು. ಜಗತ್ತಿನ ಯಾವೊಂದು ಸಮುದಾಯವೂ ತನ್ನ ಸಮಸ್ಯೆಯನ್ನು ತಾನೊಂದೇ ಪೂರ್ತಿಯಾಗಿ ಪರಿಹರಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ, ಸಮುದಾಯದ ಪಾಲ್ಗೊಳ್ಳುವಿಕೆ ಮುಖ್ಯವಾಗುತ್ತದೆ. ಹೀಗಾಗಿ, ಎಲ್ಲರೂ ಜೊತೆಯಾಗಿ ಕೆಲಸ ಮಾಡೋಣ. ಆಗ, ಸಮಸ್ಯೆಗಳು ಹಗುರವಾಗುತ್ತವೆ. ಲಾಭ ದುಪ್ಪಟ್ಟಾಗುತ್ತದೆ ಎಂದರು.

ಮೈಕೇಲ್‌ರಿಗ್ಸ್ ಹೊಸ ರೀತಿಯ ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಯ ಕನಸನ್ನು ಬಿತ್ತುತ್ತ ನಡೆದಿದ್ದಾರೆ. ಅದನ್ನು ಗ್ರಾಮೀಣ ಪ್ರದೇಶಕ್ಕೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರದು.

- ಚಾಮರಾಜ ಸವಡಿ

ಹೊಸ ರೂಪದಲ್ಲಿ ಕೃಷಿ ಸಂಪದ

30 Jul 2009

4 ಪ್ರತಿಕ್ರಿಯೆ
Krushi Sampada

ನಾಲ್ಕು ವರ್ಷಗಳ ಹಿಂದೆ ಪ್ರಯೋಗಾರ್ಥ ಪ್ರಾರಂಭವಾದ ಯೋಜನೆ, ಸಂಪದ. ಅಂತರ್ಜಾಲದಲ್ಲಿ ಕನ್ನಡವನ್ನು ಹೆಚ್ಚಾಗಿ ಬಳಸುವಂತೆ ಪ್ರೋತ್ಸಾಹಿಸಲು ಆಕಸ್ಮಿಕವಾಗಿ ಪ್ರಾರಂಭವಾದ ಯೋಜನೆಯಿದು.

ಇಂದು, ಅಂತರ್ಜಾಲದಲ್ಲಿ ತನ್ನ ಅಸ್ತಿತ್ವದ ಐದನೇ ವರ್ಷಕ್ಕೆ ಕಾಲಿಡುತ್ತಿರುವ ಸಂಪದ ಹಾಗು ಇದರಲ್ಲಿರುವ ಸಮುದಾಯ ಮತ್ತಷ್ಟು ಗುರುತರ, ಮಹತ್ವದ ಕೆಲಸಗಳನ್ನು ಡಿಜಿಟಲ್ ಜಗತ್ತಿನಲ್ಲಿ ಮಾಡುವ ಕ್ಷಮತೆಯುಳ್ಳದ್ದಾಗಿದೆ. ನಮ್ಮ ಭಾಷೆ ತಂತ್ರಜ್ಞಾನದಲ್ಲಿ ಮತ್ತಷ್ಟು ಅಳವಡಿಕೆಯಾಗುವಂತೆ ಮಾಡುವ ಕೆಲಸ ಆಗಬೇಕಿದೆ. ಇದು ನಮ್ಮ ರಾಜ್ಯಕ್ಕೆ, ನಮ್ಮ ಭಾಷೆಗೆ ಮಹತ್ತರ ಬದಲಾವಣೆ ತರಬಹುದಾದ ಕೆಲಸವಾಗಬಲ್ಲುದು.

ಸಂಪದದಲ್ಲಿ ಪದೆ ಪದೆ ಚರ್ಚೆಗೆ ಬರುವ ಸಂಗತಿಗಳಲ್ಲಿ ಕೆಲವು - ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಜನರ ಅಭ್ಯುದಯಕ್ಕೆ ಬಳಸುವುದು ಹೇಗೆ ಎಂಬುದು. ಇದರಿಂದ ಬೇರುಮಟ್ಟದ ಜನರಿಗೆ ನೆರವಾಗಬೇಕು, ಅವರಿಗೂ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಆಸಕ್ತಿ ಹುಟ್ಟಬೇಕು, ಅವರನ್ನು ಸಹಭಾಗಿಗಳನ್ನಾಗಿಸಲು ಪ್ರಯತ್ನಿಸಬೇಕು, ಗೊತ್ತಿರುವ ಜ್ಞಾನವನ್ನು ಅವರೊಂದಿಗೆ ಹಂಚಿಕೊಳ್ಳಬೇಕು ಹಾಗೂ ಚರ್ಚಿಸಬೇಕು. ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ಕೃಷಿ ಕ್ಷೇತ್ರ.ಬೌದ್ಧಿಕ ಜಗತ್ತಿನಲ್ಲಿ ಕೃಷಿ ಕ್ಷೇತ್ರ ಬಹುತೇಕ ನಿರ್ಲಕ್ಷ್ಯಿತ ಕ್ಷೇತ್ರ. ಆದರೆ, ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಈ ದಿನಗಳಲ್ಲಿ, ಭೌಗೋಳಿಕ ಮಿತಿ ದಾಟಿ ಪರಸ್ಪರ ಸಂಪರ್ಕಿಸುವುದು ಸಾಧ್ಯವಾಗಿದೆ. ಇದು ಕೃಷಿ ಕ್ಷೇತ್ರದಲ್ಲಿ ಹೊಸ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದ್ದು, ಡಿಜಿಟಲ್‌ ಡಿವೈಡ್‌ ಗೆಲ್ಲಲು ನೆರವಾಗುತ್ತಿದೆ. ಇವತ್ತಿಗೂ ಕೃಷಿ ನಮ್ಮ ಪ್ರಗತಿಯ ಬುನಾದಿ ಕ್ಷೇತ್ರವಾಗಿದ್ದರಿಂದ, ಇದನ್ನು ಬಲಪಡಿಸಲು, ಬೆಳೆಸಲು ತಂತ್ರಜ್ಞಾನದ ಬಳಕೆ ಹೆಚ್ಚಬೇಕಿದೆ.

ಈಗಾಗಲೇ ಕೃಷಿ ಸಂಪದವೂ ಸೇರಿದಂತೆ ವಿವಿಧ ಕ್ಷೇತ್ರಗಳ ಬೆಳವಣಿಗೆಗಳಿಗೆ ವೇದಿಕೆ ಇದೆ. ಆದರೆ, ಕೃಷಿ ಸಂಪದ ಪೂರ್ಣಮಟ್ಟದ ಆನ್‌ಲೈನ್‌ ಮ್ಯಾಗಝಿನ್‌ ಥರ, ಕೃಷಿ ಪತ್ರಿಕೆಯಾಗಿ ವಿಸ್ತಾರವಾಗಬೇಕು. ಕೃಷಿ ಪರಿಣಿತರ ಜೊತೆ ನಮ್ಮ ರೈತರೂ ಅದರಲ್ಲಿ ಪಾಲ್ಗೊಳ್ಳುವಂತಾಗಬೇಕು. ಇದ್ದ ಭೂಮಿಯಲ್ಲೇ, ಲಭ್ಯವಿರುವ ಸಂಪನ್ಮೂಲಗಳಲ್ಲೇ ಅತ್ಯುತ್ತಮ ಬೆಳೆ ಬೆಳೆಯುವುದು ಹೇಗೆಂಬ ಮಾಹಿತಿ ನಮ್ಮ ರೈತರಿಗೆ ದಕ್ಕುವಂತಾಗಬೇಕು. ನೇಗಿಲಯೋಗಿಗೆ ಸಂಪದದ ಕೊಡುಗೆಯೂ ತಲುಪುವಂತಾಗಬೇಕು. ಹಳ್ಳಿಹಳ್ಳಿಯಲ್ಲಿಯೂ ಸಮೃದ್ಧಿ ಉಂಟಾದಾಗ ಮಾತ್ರ ದೇಶ ಬೆಳೆದೀತು.

ಆದ್ದರಿಂದ, ಸಂಪದ ಬಳಗದ ನಾವು ಕೆಲ ಜನ, ಕೃಷಿ ಕ್ಷೇತ್ರಕ್ಕೆ ಒತ್ತು ನೀಡುವ ಪ್ರಯತ್ನ ಮಾಡಲು ಹೊರಟಿದ್ದೇವೆ. ಇದೊಂದು ಸಮೂಹ ಯೋಜನೆಯಾಗಿದ್ದು, ನಿಮ್ಮೆಲ್ಲರ ಪಾಲ್ಗೊಳ್ಳುವಿಕೆಯನ್ನು ಅಪೇಕ್ಷಿಸುತ್ತಿದ್ದೇವೆ, ಆಮಂತ್ರಿಸುತ್ತಿದ್ದೇವೆ.

ಕೃಷಿ ಕ್ಷೇತ್ರದ ಸಮಗ್ರ ಬೆಳವಣಿಗೆ ಕುರಿತಂತೆ ವಿಚಾರ ವಿನಿಮಯಕ್ಕೆ, ತಂತ್ರಜ್ಞಾನ ಮಾಹಿತಿ ಹಂಚಿಕೊಳ್ಳಲು ಆನ್‌ಲೈನ್‌ ವ್ಯವಸ್ಥೆ ಕಲ್ಪಿಸಲಾಗುವುದು. ಈ ಉದ್ದೇಶಕ್ಕಾಗಿ ಆನ್‌ಲೈನ್‌ ಮಾಸಿಕ ಪತ್ರಿಕೆಯನ್ನೂ ಹೊರತರುವ ವಿಚಾರವಿದೆ. ಕೃಷಿ ಕ್ಷೇತ್ರದಲ್ಲಾಗಿರುವ ಹಾಗೂ ಆಗುತ್ತಿರುವ ಅಷ್ಟೂ ತಾಂತ್ರಿಕ ಮಾಹಿತಿ, ಮಾರುಕಟ್ಟೆ ದರ, ಯಾವ ಭೂಮಿಗೆ ಯಾವ ಬೆಳೆ ಒಗ್ಗುತ್ತದೆ, ಕೃಷಿ ಕ್ಷೇತ್ರದ ಸಮಸ್ಯೆಗಳಿಗೆ ಏನು ಪರಿಹಾರ, ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳುವುದು ಹೇಗೆ ಎಂಬೆಲ್ಲ ಮಾಹಿತಿ ಆನ್‌ಲೈನ್‌ ಪತ್ರಿಕೆಯ ಮೂಲಕ ರೈತರಿಗೆ ಲಭ್ಯವಾಗಲಿದೆ. ನಾಡಿನಾದ್ಯಂತ ಹರಡಿರುವ ಸಂಪದಿಗರು ಈ ಮಾಹಿತಿಯನ್ನು ರೈತರಿಗೆ ತಲುಪಿಸುವಂತಾಗಬೇಕು. ಗ್ರಾಮೀಣ ಪ್ರದೇಶದಲ್ಲೂ ವಿಸ್ತರಿಸುತ್ತಿರುವ ಇಂಟರ್‌ನೆಟ್‌ನ ಸೌಲಭ್ಯ ಪಡೆಯುವ ಹುಮ್ಮಸ್ಸು ನಮ್ಮ ರೈತರಲ್ಲೂ ಮೂಡುವಂತಾಗಬೇಕು.

ಇದಕ್ಕಾಗಿ ಆಸಕ್ತರಿಂದ ಸಾಂಕೇತಿಕ ಮೊತ್ತದ ಚಂದಾ ಹಣ ಪಡೆಯುವ ಉದ್ದೇಶವಿದ್ದು, ಇದನ್ನು ಆಯ್ದ ಬರಹಗಾರರಿಗೆ ಗೌರವಧನದ ರೀತಿ ನೀಡುವ ಯೋಜನೆಯಿದೆ. ಸಂಪದದಲ್ಲಿ ಬರುವ ಲೇಖನಗಳಲ್ಲಿಯೂ ಕೆಲವನ್ನು ಹೆಕ್ಕಿಕೊಂಡು ಆನ್‌ಲೈನ್‌ ಮಾಸಿಕ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು. ಸಂಪಾದಕೀಯ ಜವಾಬ್ದಾರಿಯನ್ನು ಈ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಹೊಂದಿರುವ ಹಿರಿಯರಾದ ಅಡ್ಡೂರ್‌ ಕೃಷ್ಣರಾವ್‌ ವಹಿಸಿಕೊಳ್ಳಲಿದ್ದಾರೆ.

ಅವರ ಹೊರತಾಗಿ ಕೃಷಿ ಸಂಪದ ತಂಡದಲ್ಲಿ ನಾ. ಕಾರಂತ ಪೆರಾಜೆ, ಭೂಷಣ್‌ ಮಿಡಿಗೇಶಿ, ಮಲ್ಲಿಕಾರ್ಜುನ ಹೊಸಪಾಳ್ಯ, ಶಾಮ ಕಶ್ಯಪ ಜೊತೆ ನಾನೂ ಇರುತ್ತೇನೆ. ಎಲ್ಲಕ್ಕಿಂತ ಮಿಗಿಲಾಗಿ ನೀವಿರುತ್ತೀರಿ. ಬನ್ನಿ, ನೇಗಿಲಯೋಗಿಯ ಹೆಗಲಿಗೆ ಹೆಗಲು ಜೋಡಿಸೋಣ.

(ಸೂಚನೆ: ಈ ಯೋಜನೆ ಕುರಿತಂತೆ ಈ ಕೆಳಗಿನ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಮನವಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಕೂಡ ಕಳಿಸಿಕೊಡಬಹುದು.)

ಕೃಷಿ ಮಾರುಕಟ್ಟೆ ಸುಧಾರಿಸುವುದು ಎಂದು?

20 Jul 2008

0 ಪ್ರತಿಕ್ರಿಯೆ

ಕರ್ನಾಟಕ ಸರ್ಕಾರದ ಅಧಿಕೃತ ಪ್ರಕಟಣೆಯಾದ ‘ಜನಪದ’ ಮಾಸಿಕದ ಸೆಪ್ಟೆಂಬರ್ ೨೦೦೬ನೇ ಸಂಚಿಕೆಯ ಪುಟ ೧೮ರಲ್ಲಿ ಒಂದು ಮಾಹಿತಿ ಇದೆ. ರಾಷ್ಟ್ರೀಯ ತೋಟಗಾರಿಕಾ ಮಿಶನ್ ಯೋಜನೆಯ ಕೆಲವು ತುಣುಕುಗಳು ಅದರಲ್ಲಿವೆ.


‘ಕಡಿಮೆ ವೆಚ್ಚದ ೫ ಮೆಟ್ರಿಕ್ ಟನ್ ಈರುಳ್ಳಿ ಶೇಖರಣಾ ಗೋದಾಮುಗಳಿಗೆ ಶೇ.೨೫ರ ಸಹಾಯಧನ ನೀಡಲಾಗುತ್ತಿದೆ. ೫ ಮೆಟ್ರಿಕ್ ಟನ್ ಗೋದಾಮುಗಳಿಗೆ ರೂ.೫,೦೦೦ ಹಾಗೂ ೫೦ ಮೆಟ್ರಿಕ್ ಟನ್ ಗೋದಾಮುಗಳಿಗೆ ರೂ.೫೦,೦೦೦ವರೆಗೆ ಸಹಾಯಧನ ನೀಡಲಾಗುತ್ತದೆ. ತರಕಾರಿ ಬೆಳೆಗಳನ್ನು ಕಚ್ಚಾ ವಸ್ತುಗಳನ್ನಾಗಿಸಿ ಸಂಸ್ಕರಣೆ ಮತ್ತು ಮೌಲ್ಯವರ್ಧೀಕರಣ ಮಾಡುವ ಕಾರ್ಯಕ್ರಮಗಳಿಗೆ ವಿಷನ್ ಹಾಗೂ ರಾಜ್ಯ ವಲಯ ಸೇರಿ ಗರಿಷ್ಠ ಮಿತಿಗೆ ಒಳಪಟ್ಟು ಶೇ.೫೦ರ ಸಹಾಯಧನ ನೀಡಲಾಗುತ್ತದೆ...


‘ರೈತರು ಬೆಳೆಯುವ ತರಕಾರಿಗಳಿಗೆ ಉತ್ತಮ ಬೆಲೆ ದೊರಕಿಸಿಕೊಡುವಲ್ಲಿ ನೆರವಾಗುವ ಸುಧಾರಿತ ಮಾರುಕಟ್ಟೆಯ ವ್ಯವಸ್ಥೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು, ಅಂದರೆ ಮಾರುಕಟ್ಟೆ ಪ್ರಾಂಗಣ ಸುಧಾರಣೆ, ಗೋದಾಮುಗಳ ನಿರ್ಮಾಣ ಹಾಗೂ ಹವಾನಿಯಂತ್ರಿತ ವಾಹನ ಸೇರಿದಂತೆ ಹಲವಾರು ಕಾರ್ಯಕ್ರಮಗಳಿಗೆ ಶೇ.೨೫ರ ಸಹಾಯಧನಕ್ಕೆ ಅವಕಾಶ ಇದೆ. ಮಾರುಕಟ್ಟೆಯಲ್ಲಿ ನಿರತವಾಗಿರುವ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಈ ಸಹಾಯಧನ ಪಡೆಯಲು ಅರ್ಹವಾಗಿರುತ್ತವೆ’-


ಅದೇ ಲೇಖನದ ಇನ್ನೊಂದು ಪ್ಯಾರಾದಲ್ಲಿ ‘ತೋಟಗಾರಿಕಾ ಮಿಶನ್ ತರಕಾರಿ ಅಭಿವೃದ್ಧಿ ಯೋಜನೆಯಡಿ ರೈತರಿಗೆ ಶೇ.೫೦ರ ರಿಯಾಯಿತಿ ದರದಲ್ಲಿ ಪ್ರತಿ ಪ್ಲಾಸ್ಟಿಕ್ ಕ್ರೇಟ್‌ಗೆ ಗರಿಷ್ಠ ರೂ.೮೦ ಸಹಾಯಧನ ನೀಡಲಾಗುತ್ತಿದೆ. ಈರುಳ್ಳಿ, ಆಲೂಗೆಡ್ಡೆ, ಟೊಮ್ಯಾಟೊ ಇತ್ಯಾದಿ ಗುಂಡಾಕೃತಿಯ ತರಕಾರಿ ಬೆಳೆಗಳನ್ನು ವರ್ಗೀಕರಿಸುವ ಯಂತ್ರಗಳಿಗೆ ಶೇ.೨೫ರ ಗರಿಷ್ಠ ರೂ.೬೫,೨೦೦ ಸಹಾಯಧನ ನೀಡಲಾಗುತ್ತಿದೆ’ ಎಂಬ ಮಾಹಿತಿ ಇದೆ.


ಈಗ ನಿಮ್ಮ ಗಮನವನ್ನು ಏಷ್ಯದ ಅತಿ ದೊಡ್ಡ ಕೃಷಿ ಉತ್ಪನ್ನ ಮಾರುಕಟ್ಟೆ ಎಂದು ಹೆಸರು ಪಡೆದಿರುವ ಹುಬ್ಬಳ್ಳಿಯ ಶ್ರೀ ಜಗಜ್ಯೋತಿ ಬಸವೇಶ್ವರ ಎ.ಪಿ.ಎಂ.ಸಿ. ಕಡೆ ತಿರುಗಿಸಿ. ಪ್ರತಿ ವರ್ಷ ಇಲ್ಲಿ ಉಳ್ಳಾಗಡ್ಡಿ (ಈರುಳ್ಳಿ) ಖರೀದಿ ಜಾತ್ರೆ ನಡೆಯುತ್ತದೆ. ಜಾತ್ರೆ ಎಂಬ ಶಬ್ದ ಬಳಕೆ ಏಕೆಂದರೆ ಅಕ್ಷರಶಃ ಅರ್ಧ ಕರ್ನಾಟಕದ ಈರುಳ್ಳಿ ಬೆಳೆಗಾರರು ಇಲ್ಲಿ ಬಂದು ತಮ್ಮ ಉತ್ಪನ್ನಗಳನ್ನು ಮಾರುತ್ತಾರೆ. ಅರ್ಧ ಭಾರತದ ವಿವಿಧ ರಾಜ್ಯಗಳ ಸಗಟು ಖರೀದಿದಾರರು ಇಲ್ಲಿಂದ ಈರುಳ್ಳಿ ಖರೀದಿಸುತ್ತಾರೆ. ಸುಮಾರು ಎಂಬತ್ತು ಕೋಟಿ ರೂಪಾಯಿಗಳ ವಹಿವಾಟು ಈರುಳ್ಳಿ ಒಂದರಲ್ಲಿಯೇ ನಡೆಯುತ್ತದೆ.


ಏಕೆ ನಿರಾಸಕ್ತಿ?


ಒಂದು ವೇಳೆ ಮೇಲಿನ ಎರಡೂ ಉದಾಹರಣೆಗಳು ನಿಜವಾಗಿದ್ದ ಪಕ್ಷದಲ್ಲಿ ಪ್ರತಿ ವರ್ಷ ಈರುಳ್ಳಿ ಬೆಳೆಗೆ ಸೂಕ್ತ ಬೆಂಬಲ ಬೆಲೆ ಘೋಷಿಸಲು ಸರ್ಕಾರ ಮೀನಮೇಷ ಏಕೆ ಎಣಿಸುತ್ತದೆ? ಒಂದು ವೇಳೆ ಸರ್ಕಾರದ ಇಷ್ಟೊಂದು ಜನಪರ ಯೋಜನೆಗಳು ಸರಿಯಾಗಿ ತಲುಪಿದ್ದೇ ಆದರೆ ನೂರಾರು ಕೋಟಿ ರೂಪಾಯಿಗಳ ಈರುಳ್ಳಿ ಬೆಳೆ ವಹಿವಾಟು ಪ್ರತಿ ವರ್ಷ ಏಕೆ ಗೊಂದಲಕ್ಕೆ ಸಿಲುಕುತ್ತದೆ? ನಮ್ಮ ಈರುಳ್ಳಿ ಬೆಳೆಗಾರರು ಏಕೆ ಶಾಶ್ವತ ಸಾಲಗಾರರಾಗಿದ್ದಾರೆ? ಪ್ರತಿ ವರ್ಷ ನಡೆಯುವ ರೈತರ ಆತ್ಮಹತ್ಯೆಗಳಲ್ಲಿ ಈರುಳ್ಳಿ ಬೆಳೆದವರ ಸಂಖ್ಯೆ ಏಕೆ ಹೆಚ್ಚಿರುತ್ತದೆ?


ಈ ಮಹತ್ವದ ಪ್ರಶ್ನೆಗಳಿಗೆ ಉತ್ತರಿಸುವ ಜವಾಬ್ದಾರಿ ಸಂಬಂಧಿಸಿದ ಎಲ್ಲ ಇಲಾಖೆಗಳ ಮೇಲಿದೆ. ನಮ್ಮ ಜನಪ್ರತಿನಿಧಿಗಳೂ ಇದಕ್ಕೆ ಬಾಧ್ಯರಾಗುತ್ತಾರೆ. ನಮ್ಮ ಮಾರುಕಟ್ಟೆ ವ್ಯವಸ್ಥೆ ಇದಕ್ಕೆ ಜವಾಬ್ದಾರವಾಗುತ್ತದೆ. ಏಕೆಂದರೆ, ಈ ಒಂದು ತರಕಾರಿ ಬೆಳೆಯೇ ನೂರಾರು ಕೋಟಿ ರೂಪಾಯಿಗಳ ವ್ಯಾಪಾರಕ್ಕೆ ಕಾರಣವಾಗುವುದರಿಂದ ಪ್ರತಿ ವರ್ಷದ ಪ್ರಹಸನಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಅವಶ್ಯಕತೆ ಇದೆ.


ವಾರ್ಷಿಕ ದುಃಸ್ಥಿತಿ


ಎರಡು ವರ್ಷಗಳ ಹಿಂದೆ ಈರುಳ್ಳಿ ಬೆಳೆಯುವ ಮಹಾರಾಷ್ಟ್ರದ ಅರ್ಧಕ್ಕರ್ಧ ಪ್ರದೇಶ ಪ್ರವಾಹಪೀಡಿತವಾಯಿತು. ಸಹಜವಾಗಿ ಕರ್ನಾಟಕದ ಈರುಳ್ಳಿಗೆ ಮಾರುಕಟ್ಟೆ ಕುದುರಿತು. ಒಂದು ಸಮಯ ಕ್ವಿಂಟಲ್‌ಗೆ ರೂ.೧,೬೦೦ಕ್ಕೂ ಹೆಚ್ಚು ಧಾರಣೆಯಿದ್ದರೂ ದಲಾಲರು ರೂ.೮೦೦ಕ್ಕಿಂತ ಹೆಚ್ಚು ನೀಡದೆ ಅಸಹಕಾರ ತೋರಿದರು. ಸಣ್ಣ ಸಣ್ಣ ವಿಷಯಗಳಿಗೂ ಭಾವೋದ್ವೇಗದಿಂದ ಸ್ಪಂದಿಸುತ್ತಿದ್ದ ಜನಪ್ರತಿನಿಧಿಗಳು ಅದೇಕೋ ಸುಮ್ಮನೇ ಕೂತರು. ಅನಿವಾರ್ಯವಾಗಿ ರೈತರು ಬೀದಿಗಿಳಿದು ಪ್ರತಿಭಟಿಸಿದಾಗ ಮಾತ್ರ ಬೆಂಬಲ ಬೆಲೆ ಘೋಷಿಸಲಾಯಿತು. ಆದರೆ ಅದು ಕೂಡ ರೂ.೮೫೦ ದಾಟಲಿಲ್ಲ.


ಇಲ್ಲಿ ಲಾಭವಾಗಿದ್ದು ಯಾರಿಗೆ?


ರೈತರಿಗಂತೂ ಖಂಡಿತ ಅಲ್ಲ. ಏಕೆಂದರೆ ಲಾಭಾಂಶದ ಬಹುಪಾಲು ಮಧ್ಯವರ್ತಿಗಳ ಪಾಲಾಯಿತು. ಎ.ಪಿ.ಎಂ.ಸಿ. ಹೊರಗೇ ಬಹುತೇಕ ಖರೀದಿ ನಡೆಸಿದ್ದರಿಂದ ತೆರಿಗೆ ರೂಪದ ಲಾಭ ಸರ್ಕಾರಕ್ಕೆ ದಕ್ಕಲಿಲ್ಲ. ಇದು ಪ್ರತಿ ವರ್ಷದ ಗೋಳು. ಯಾವತ್ತಾದರೂ ಕೊಂಚ ಲಾಭ ಕಾಣಬೇಕೆಂದರೆ ಮಾರುಕಟ್ಟೆ ತುಂಬ ಈರುಳ್ಳಿ ತುಂಬಿ ತುಳುಕುತ್ತಿರುತ್ತದೆ. ಬೆಂಬಲ ಬೆಲೆ ಇಲ್ಲದೇ ದರ ಪಾತಾಳಕ್ಕೆ ಇಳಿದಿರುತ್ತದೆ. ಇಲ್ಲವೇ, ಮಳೆ ಕೈಕೊಟ್ಟು ಬೆಳೆ ನಾಶವಾಗಿರುತ್ತದೆ. ಹೀಗಾಗಿ ರೈತರ ಜೇಬು ಪ್ರತಿ ವರ್ಷ ಖಾಲಿಖಾಲಿಯೇ.


ಪ್ರತಿ ವರ್ಷ ಈ ರೀತಿ ನಡೆಯುವ ಈ ಖರೀದಿ ನಾಟಕಕ್ಕೆ ಯಾರು ಸೂತ್ರಧಾರರು? ಇದನ್ನು ನಿಭಾಯಿಸುವುದು ಹೇಗೆ? ಯಾರು ಇದರ ಜವಾಬ್ದಾರಿ ಹೊರಬೇಕು?


ಖರೀದಿ ನೀತಿ ಬಂದೀತೆ?


ಎರಡು ವರ್ಷಗಳ ಹಿಂದೆ ಮುಂಗಾರು ಹಂಗಾಮಿನಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಈರುಳ್ಳಿ ಖರೀದಿ ಅವಘಡವನ್ನು ಕೊಂಚ ನೋಡಿದರೂ ಸಮಸ್ಯೆಯ ಮೂಲ ಏನೆಂಬುದು ಅರ್ಥವಾಗುತ್ತದೆ.


ಹುಬ್ಬಳ್ಳಿ ಎ.ಪಿ.ಎಂ.ಸಿ.ಗೆ ನವೆಂಬರ್ ಕೊನೆಯ ವಾರದ ಹೊತ್ತಿಗೆ ೯.೨೫ ಲಕ್ಷ ಕ್ವಿಂಟಲ್‌ಗೂ ಹೆಚ್ಚು ಈರುಳ್ಳಿ ಆವಕವಾಗಿತ್ತು. ಆದರೆ ಬೆಂಬಲ ಬೆಲೆಗಿಂತ ಮಾರುಕಟ್ಟೆಯ ದರ ಕಡಿಮೆಯಾಗಿದ್ದರಿಂದ ಸಗಟು ಖರೀದಿದಾರರು ಕೇವಲ ೪ ಲಕ್ಷ ಕ್ವಿಂಟಲ್ ಈರುಳ್ಳಿಯನ್ನು ಮಾತ್ರ ಖರೀದಿಸಿದ್ದರು. ಸುಮಾರು ೫ ಲಕ್ಷ ಕ್ವಿಂಟಲ್‌ಗೂ ಹೆಚ್ಚು ಮಾಲು ಎ.ಪಿ.ಎಂ.ಸಿ. ಪ್ರಾಂಗಣದಲ್ಲಿಯೇ ಉಳಿದಿತ್ತು. ಇದಲ್ಲದೇ ಪ್ರತಿ ದಿನ ೨೨,೦೦೦ ಕ್ವಿಂಟಲ್‌ಗೂ ಹೆಚ್ಚು ಈರುಳ್ಳಿ ಮಾರುಕಟ್ಟೆಗೆ ಬರುತ್ತಿತ್ತು. ಹಳೆಯ ಮಾಲು ಹೊರಹೋಗದೆ, ಹೊಸ ಮಾಲಿಗೆ ಸ್ಥಳಾವಕಾಶ ಸಿಗದೆ ಎ.ಪಿ.ಎಂ.ಸಿ. ಅಧಿಕಾರಿಗಳು ಹಾಗೂ ರೈತರು ಪೇಚಾಡಬೇಕಾದ ದುಃಸ್ಥಿತಿ ನಿರ್ಮಾಣವಾಗಿತ್ತು.


ಏಕೆ ಹೀಗಾಯಿತು?


ಪ್ರತಿ ವರ್ಷ ಯಾವ್ಯಾವ ಬೆಳೆಯನ್ನು ಎಷ್ಟೆಷ್ಟು ಕ್ಷೇತ್ರದಲ್ಲಿ ಬೆಳೆಯಲಾಗಿದೆ. ಈ ಸಲದ ಇಳುವರಿ ಎಷ್ಟಿರಬಹುದು ಎಂದು ಕೃಷಿ ಇಲಾಖೆ ಅಂದಾಜು ಮಾಡುತ್ತದೆ. ಆ ಮಟ್ಟದ ಖರೀದಿಗೆ ಸರ್ಕಾರ ಸಿದ್ಧವಿರಬೇಕಾಗುತ್ತದೆ. ಅದಕ್ಕೆ ಪೂರಕವಾಗಿ ಬೆಂಬಲ ಬೆಲೆ, ಖರೀದಿ ಪ್ರಕ್ರಿಯೆಗೆ ತಯಾರಿ ಮಾಡಿಕೊಳ್ಳಬೇಕಾಗುತ್ತದೆ.


ಆದರೆ ಯಾವೊಂದು ವರ್ಷವೂ ಸುಗಮವಾಗಿ ಖರೀದಿ ನಡೆದ ಉದಾಹರಣೆಗಳಿಲ್ಲ. ಪ್ರತಿ ವರ್ಷ ನಿರೀಕ್ಷಿಸಿದ್ದಕ್ಕಿಂತ ಅತಿ ಹೆಚ್ಚು ಅಥವಾ ಅತಿ ಕಡಿಮೆ ಮಾಲು ಮಾರುಕಟ್ಟೆಗೆ ಬರುತ್ತದೆ. ಯಥಾಪ್ರಕಾರ ಬೆಂಬಲ ಬೆಲೆ ಘೋಷಿಸಲು ಸರ್ಕಾರ ತಡ ಮಾಡುವ ಮೂಲಕ ಮಾರುಕಟ್ಟೆ ಅರಾಜಕತೆಗೆ ದಾರಿ ಮಾಡಿಕೊಡುತ್ತದೆ. ಬೇಸತ್ತ ರೈತರು ಸಿಕ್ಕ ಬೆಲೆಗೆ ಮಾರಿ ಹೋಗುತ್ತಾರೆ. ಯಾವಾಗ ಮಾರುಕಟ್ಟೆಗೆ ಮಾಲು ಬರುವುದು ಕಡಿಮೆಯಾಗುತ್ತದೋ, ಆಗ ಬೆಲೆ ತಕ್ಷಣ ಸ್ಥಿರವಾಗುತ್ತದೆ.


ಹಿಂಗಾರು ಮಳೆ ಸುರಿಯುವ ಸಮಯದಲ್ಲೇ ಎಪಿಎಂಸಿಗಳಲ್ಲಿ ಈರುಳ್ಳಿ ಖರೀದಿ ಜೋರಾಗಿರುತ್ತದೆ. ಪ್ರತಿ ವರ್ಷ ಈ ಸಮಯದಲ್ಲಿ ಇಲ್ಲೆಲ್ಲ ಈರುಳ್ಳಿಯದೇ ಜಾತ್ರೆ. ಸಿಕ್ಕ ಸಿಕ್ಕ ಕಡೆ ಈರುಳ್ಳಿ ಚೀಲಗಳನ್ನು ಪೇರಿಸಿಟ್ಟು ಸಗಟು ಖರೀದಿದಾರರ ಬರವನ್ನು ಎದುರು ನೋಡುತ್ತ ನಿಲ್ಲಲಾಗುತ್ತದೆ. ಹಳೆಯ ಮಾಲು ಹೋಗಬೇಕು, ಹೊಸ ಮಾಲು ಬರಬೇಕು. ಇದೆಲ್ಲ ಬೆಂಬಲ ಬೆಲೆ ಜಾರಿಯಲ್ಲಿರುವಾಗಲೇ ಆಗಬೇಕು. ಸರ್ಕಾರ ಕೂಡ ತನ್ನ ಪಾಲಿನ ಹಣವನ್ನು ಸಕಾಲಕ್ಕೆ ಬಿಡುಗಡೆ ಮಾಡಬೇಕು. ಅಲ್ಲಿಯವರೆಗೆ ಮಳೆ, ಸಗಟು ಖರೀದಿದಾರರು ಹಾಗೂ ಸರ್ಕಾರದ ಮರ್ಜಿಯಲ್ಲಿ ರೈತ ದಿನ ನೂಕುತ್ತ ನಿಲ್ಲಬೇಕು.


ಇದಕ್ಕೆ ಶಾಶ್ವತ ಪರಿಹಾರ ಸಾಧ್ಯವಿಲ್ಲವೆ?


- ಚಾಮರಾಜ ಸವಡಿ

ರಸ್ತೆ ನೀರಿನಿಂದ ಮಸ್ತ್ ಬೆಳೆ

19 Jul 2008

0 ಪ್ರತಿಕ್ರಿಯೆ

‘ರಸ್ತೆ ಮೇಲೆ ಬೀಳುವ ಮಳೆ ನೀರು ಸಾಮಾನ್ಯವಾಗಿ ಏನಾಗುತ್ತದೆ?’
ಇಂಥದೊಂದು ಪ್ರಶ್ನೆಯನ್ನು ನಮ್ಮ ರೈತರಿಗೆ ಹಾಕಿದರೆ, ‘ಆ ನೀರು ವ್ಯರ್ಥವಾಗಿ ಹರಿದುಹೋಗಿ ಹಳ್ಳ ಸೇರುತ್ತದೆ’ ಎಂಬ ಉತ್ತರವೇ ದೊರೆತೀತು.

ಆದರೆ ಧಾರವಾಡ ತಾಲ್ಲೂಕಿನ ರೈತರು ಮಾತ್ರ ರಸ್ತೆ ಮೇಲೆ ಬೀಳುವ ಮಳೆ ನೀರಿನಿಂದ ಮಸ್ತ್ ಬೆಳೆಯನ್ನು ಬೆಳೆದುಕೊಳ್ಳುವ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದಾರೆ.

ರಸ್ತೆ ಮೇಲೆ ಬೀಳುವ ಮಳೆ ನೀರು ಸಾಮಾನ್ಯವಾಗಿ ಚರಂಡಿಯಂತಹ ತಗ್ಗಿನ ಮೂಲಕ ಹರಿದು, ಹಳ್ಳ ಸೇರಿ, ಅಲ್ಲಿಂದ ನದಿಗೆ ಹೋಗುವುದು ಸಾಮಾನ್ಯ ಪ್ರಕ್ರಿಯೆ. ಆದರೆ ಧಾರವಾಡ ತ್ಲಾಲೂಕಿನ ಮಲೆನಾಡಿನ ಸೆರಗಿನಲ್ಲಿರುವ ಕಲಕೇರಿ ಗ್ರಾಮದ ಸುತ್ತಮುತ್ತಲಿನ ರೈತರು ಇದೇ ನೀರಿನಿಂದ ಇಡೀ ಭತ್ತದ ಬೆಳೆಯನ್ನು ಸಮೃದ್ಧವಾಗಿ ಬೆಳೆದುಕೊಳ್ಳುತ್ತಿದ್ದಾರೆ.

ಇದೊಂದು ಸರಳ ತಂತ್ರಜ್ಞಾನ. ಇಳಿಜಾರಿನಲ್ಲಿ ಹರಿದುಹೋಗುವ ನೀರಿಗೆ ರೈತರು ತಮ್ಮ ಹೊಲದ ಬದಿ ಮಣ್ಣಿನ ಸಣ್ಣ ಒಡ್ಡು ನಿರ್ಮಿಸಿ ನಿಗದಿತ ಪ್ರಮಾಣದ ನೀರು ನಿರಂತರವಾಗಿ ಹೊಲ ಸೇರುವಂತೆ ಮಾಡುತ್ತಾರೆ. ಒಂದು ವೇಳೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ನೀರು ಬಂದರೆ, ಅದು ಮಣ್ಣಿನ ತಡೆ ದಾಟಿ ಹರಿದು ಮುಂದಿನ ಹೊಲಕ್ಕೆ ಹೋಗುತ್ತದೆ.

ಧಾರವಾಡದ ಮಲೆನಾಡಿನ ಪ್ರದೇಶದಲ್ಲಿ ಸಾಮಾನ್ಯವಾಗಿ ವರ್ಷದ ಮೂರು ತಿಂಗಳುಗಳ ಕಾಲ ನಿರಂತರವಾಗಿ ಮಳೆ ಬೀಳುತ್ತಲೇ ಇರುತ್ತದೆ. ಒಂದು ವೇಳೆ ಮಳೆ ಜೋರಾಗಿ, ಹೆಚ್ಚು ನೀರು ಬಂದರೆ ದಾರಿಯುದ್ದಕ್ಕೂ ಇರುವ ಮಣ್ಣಿನ ಸಣ್ಣ ಬದುಗಳು ನೀರನ್ನು ಹಿಡಿದಿಡಿದು ಮುಂದಕ್ಕೆ ಬಿಡುತ್ತವೆ. ಇದರಿಂದಾಗಿ ಸಾವಿರಾರು ಎಕರೆ ಭೂಮಿಗೆ ನೀರು ದಕ್ಕಿದಂತಾಗಿದೆ.

ಒಂದು ವೇಳೆ ನೀರು ಸಾಕೆನ್ನಿಸಿದರೆ ಮೇಲ್ಭಾಗದ ರೈತ, ನೀರು ತನ್ನ ಹೊಲ ಪ್ರವೇಶಿಸುವ ಮಾರ್ಗವನ್ನು ಮುಚ್ಚಿಬಿಡುತ್ತಾನೆ. ಆಗ ನೀರು ರಸ್ತೆಯಿಂದ ನೇರವಾಗಿ ಮುಂದಿನ ಹೊಲಕ್ಕೆ ಹೋಗುತ್ತದೆ. ಇದೊಂದು ಸರಣಿ ಕ್ರಿಯೆಯಾಗಿರುವುದರಿಂದ ರಸ್ತೆಯ ಎಡಬಲದ ಸಾವಿರಾರು ಎಕರೆ ಭೂಮಿಗೆ ಯಥೇಚ್ಛ ನೀರು ದಕ್ಕುತ್ತಿದೆ. ಒಂದು ವೇಳೆ ಹರಿವು ಅಗತ್ಯಕ್ಕಿಂತ ಹೆಚ್ಚಾದರೆ ನೀರು ರಸ್ತೆ ಬದಿಯಿಂದ ಹೊಲ ಪ್ರವೇಶಿಸುವ ಮಾರ್ಗವನ್ನೇ ಮುಚ್ಚಿಬಿಡುತ್ತಾರೆ. ಆಗ ಹೆಚ್ಚುವರಿ ನೀರು ದಾರಿಯಲ್ಲಿ ಬರುವ ಮುಂದಿನ ಹೊಲಕ್ಕೆ ಹಾಗೂ ಅಲ್ಲಿಂದದ ಸೀದಾ ಹಳ್ಳಕ್ಕೆ ಹೋಗುತ್ತದೆ.

ಈ ರೀತಿ ಹೆಚ್ಚುವರಿಯಾಗಿ ಹಳ್ಳ ಸೇರುವ ನೀರನ್ನೂ ಇಲ್ಲಿ ವ್ಯರ್ಥವಾಗಲು ಬಿಟ್ಟಿಲ್ಲ. ಹಳ್ಳದ ನೀರಿಗೆ ಮುಂದೆ ಅಳ್ನಾವರದಲ್ಲಿರುವ ಇಂದ್ರಮ್ಮನ ಕೆರೆಗೆ ಸಂಪರ್ಕ ಕೊಡಲಾಗಿದೆ. ಇದರಿಂದಾಗಿ ಅಳ್ನಾವರ ಪಟ್ಟಣದ ಇಪ್ಪತ್ತೈದು ಸಾವಿರಕ್ಕೂ ಅಧಿಕ ನಿವಾಸಿಗಳಿಗೆ ಕುಡಿಯುವ ನೀರು ಸಿಗುವಂತಾಗಿದೆ.

ಸರಳ ತಂತ್ರಜ್ಞಾನ ಉಪಯೋಗಿಸಿಕೊಂಡು, ಸಹಕಾರ ತತ್ವದಡಿ ನೀರು ಬಳಸಿಕೊಳ್ಳುತ್ತಿರುವ ಧಾರವಾಡ ತಾಲ್ಲೂಕಿನ ಗ್ರಾಮೀಣ ರೈತರು ವರ್ಷದ ಒಂದು ಬೆಳೆಯನ್ನು ಪೂರ್ತಿ ಮಳೆ ನೀರಿನಲ್ಲಿಯೇ ಬೆಳೆಯುತ್ತಿದ್ದಾರೆ. ಸಹಜ ನೀರನ್ನು ಬಳಸುತ್ತಿರುವುದರಿಂದ ಇಲಿಯ ಮಣ್ಣು ಕೆಟ್ಟಿಲ್ಲ. ಜತೆಗೆ ಅಂತರ್ಜಲ ಮಟ್ಟವೂ ಚೆನ್ನಾಗಿದೆ. ಬೇಸಿಗೆಯಲ್ಲಿ ಕೊಳವೆ ಬಾವಿಯ ನೀರು ಬಳಸಿ ಇನ್ನೊಂದು ಬೆಳೆ ಬೆಳೆದುಕೊಳ್ಳುತ್ತಾರೆ. ಆಗ ನೀರು ಕಡಿಮೆ ಬೇಡುವ ಸೂರ್ಯಕಾಂತಿ, ಹತ್ತಿ, ಈರುಳ್ಳಿ, ಎಳ್ಳು ಮುಂತಾದ ಬೆಳೆಗಳನ್ನು ಬೆಳೆಯುವುದರಿಂದ ಅಂತರ್ಜಲ ಬಳಕೆಯೂ ಮಿತ, ಬೆಳೆ ಬದಲಾವಣೆಯಿಂದ ಭೂಮಿಗೂ ಹಿತ.

ಇಂಥ ಮಾದರಿಯನ್ನು ರಾಜ್ಯದ ಎಲ್ಲೆಡೆ ಅನುಸರಿಸಲಾಗದೆ? ಜನತೆ ಜಲ ಸಾಕ್ಷರರಾಗಲು ಇದಕ್ಕಿಂತೆ ಬೇರೆ ಉದಾಹರಣೆ ಬೇಕೆ?

- ಚಾಮರಾಜ ಸವಡಿ