ರಸ್ತೆ ನೀರಿನಿಂದ ಮಸ್ತ್ ಬೆಳೆ

19 Jul 2008


‘ರಸ್ತೆ ಮೇಲೆ ಬೀಳುವ ಮಳೆ ನೀರು ಸಾಮಾನ್ಯವಾಗಿ ಏನಾಗುತ್ತದೆ?’
ಇಂಥದೊಂದು ಪ್ರಶ್ನೆಯನ್ನು ನಮ್ಮ ರೈತರಿಗೆ ಹಾಕಿದರೆ, ‘ಆ ನೀರು ವ್ಯರ್ಥವಾಗಿ ಹರಿದುಹೋಗಿ ಹಳ್ಳ ಸೇರುತ್ತದೆ’ ಎಂಬ ಉತ್ತರವೇ ದೊರೆತೀತು.

ಆದರೆ ಧಾರವಾಡ ತಾಲ್ಲೂಕಿನ ರೈತರು ಮಾತ್ರ ರಸ್ತೆ ಮೇಲೆ ಬೀಳುವ ಮಳೆ ನೀರಿನಿಂದ ಮಸ್ತ್ ಬೆಳೆಯನ್ನು ಬೆಳೆದುಕೊಳ್ಳುವ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದಾರೆ.

ರಸ್ತೆ ಮೇಲೆ ಬೀಳುವ ಮಳೆ ನೀರು ಸಾಮಾನ್ಯವಾಗಿ ಚರಂಡಿಯಂತಹ ತಗ್ಗಿನ ಮೂಲಕ ಹರಿದು, ಹಳ್ಳ ಸೇರಿ, ಅಲ್ಲಿಂದ ನದಿಗೆ ಹೋಗುವುದು ಸಾಮಾನ್ಯ ಪ್ರಕ್ರಿಯೆ. ಆದರೆ ಧಾರವಾಡ ತ್ಲಾಲೂಕಿನ ಮಲೆನಾಡಿನ ಸೆರಗಿನಲ್ಲಿರುವ ಕಲಕೇರಿ ಗ್ರಾಮದ ಸುತ್ತಮುತ್ತಲಿನ ರೈತರು ಇದೇ ನೀರಿನಿಂದ ಇಡೀ ಭತ್ತದ ಬೆಳೆಯನ್ನು ಸಮೃದ್ಧವಾಗಿ ಬೆಳೆದುಕೊಳ್ಳುತ್ತಿದ್ದಾರೆ.

ಇದೊಂದು ಸರಳ ತಂತ್ರಜ್ಞಾನ. ಇಳಿಜಾರಿನಲ್ಲಿ ಹರಿದುಹೋಗುವ ನೀರಿಗೆ ರೈತರು ತಮ್ಮ ಹೊಲದ ಬದಿ ಮಣ್ಣಿನ ಸಣ್ಣ ಒಡ್ಡು ನಿರ್ಮಿಸಿ ನಿಗದಿತ ಪ್ರಮಾಣದ ನೀರು ನಿರಂತರವಾಗಿ ಹೊಲ ಸೇರುವಂತೆ ಮಾಡುತ್ತಾರೆ. ಒಂದು ವೇಳೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ನೀರು ಬಂದರೆ, ಅದು ಮಣ್ಣಿನ ತಡೆ ದಾಟಿ ಹರಿದು ಮುಂದಿನ ಹೊಲಕ್ಕೆ ಹೋಗುತ್ತದೆ.

ಧಾರವಾಡದ ಮಲೆನಾಡಿನ ಪ್ರದೇಶದಲ್ಲಿ ಸಾಮಾನ್ಯವಾಗಿ ವರ್ಷದ ಮೂರು ತಿಂಗಳುಗಳ ಕಾಲ ನಿರಂತರವಾಗಿ ಮಳೆ ಬೀಳುತ್ತಲೇ ಇರುತ್ತದೆ. ಒಂದು ವೇಳೆ ಮಳೆ ಜೋರಾಗಿ, ಹೆಚ್ಚು ನೀರು ಬಂದರೆ ದಾರಿಯುದ್ದಕ್ಕೂ ಇರುವ ಮಣ್ಣಿನ ಸಣ್ಣ ಬದುಗಳು ನೀರನ್ನು ಹಿಡಿದಿಡಿದು ಮುಂದಕ್ಕೆ ಬಿಡುತ್ತವೆ. ಇದರಿಂದಾಗಿ ಸಾವಿರಾರು ಎಕರೆ ಭೂಮಿಗೆ ನೀರು ದಕ್ಕಿದಂತಾಗಿದೆ.

ಒಂದು ವೇಳೆ ನೀರು ಸಾಕೆನ್ನಿಸಿದರೆ ಮೇಲ್ಭಾಗದ ರೈತ, ನೀರು ತನ್ನ ಹೊಲ ಪ್ರವೇಶಿಸುವ ಮಾರ್ಗವನ್ನು ಮುಚ್ಚಿಬಿಡುತ್ತಾನೆ. ಆಗ ನೀರು ರಸ್ತೆಯಿಂದ ನೇರವಾಗಿ ಮುಂದಿನ ಹೊಲಕ್ಕೆ ಹೋಗುತ್ತದೆ. ಇದೊಂದು ಸರಣಿ ಕ್ರಿಯೆಯಾಗಿರುವುದರಿಂದ ರಸ್ತೆಯ ಎಡಬಲದ ಸಾವಿರಾರು ಎಕರೆ ಭೂಮಿಗೆ ಯಥೇಚ್ಛ ನೀರು ದಕ್ಕುತ್ತಿದೆ. ಒಂದು ವೇಳೆ ಹರಿವು ಅಗತ್ಯಕ್ಕಿಂತ ಹೆಚ್ಚಾದರೆ ನೀರು ರಸ್ತೆ ಬದಿಯಿಂದ ಹೊಲ ಪ್ರವೇಶಿಸುವ ಮಾರ್ಗವನ್ನೇ ಮುಚ್ಚಿಬಿಡುತ್ತಾರೆ. ಆಗ ಹೆಚ್ಚುವರಿ ನೀರು ದಾರಿಯಲ್ಲಿ ಬರುವ ಮುಂದಿನ ಹೊಲಕ್ಕೆ ಹಾಗೂ ಅಲ್ಲಿಂದದ ಸೀದಾ ಹಳ್ಳಕ್ಕೆ ಹೋಗುತ್ತದೆ.

ಈ ರೀತಿ ಹೆಚ್ಚುವರಿಯಾಗಿ ಹಳ್ಳ ಸೇರುವ ನೀರನ್ನೂ ಇಲ್ಲಿ ವ್ಯರ್ಥವಾಗಲು ಬಿಟ್ಟಿಲ್ಲ. ಹಳ್ಳದ ನೀರಿಗೆ ಮುಂದೆ ಅಳ್ನಾವರದಲ್ಲಿರುವ ಇಂದ್ರಮ್ಮನ ಕೆರೆಗೆ ಸಂಪರ್ಕ ಕೊಡಲಾಗಿದೆ. ಇದರಿಂದಾಗಿ ಅಳ್ನಾವರ ಪಟ್ಟಣದ ಇಪ್ಪತ್ತೈದು ಸಾವಿರಕ್ಕೂ ಅಧಿಕ ನಿವಾಸಿಗಳಿಗೆ ಕುಡಿಯುವ ನೀರು ಸಿಗುವಂತಾಗಿದೆ.

ಸರಳ ತಂತ್ರಜ್ಞಾನ ಉಪಯೋಗಿಸಿಕೊಂಡು, ಸಹಕಾರ ತತ್ವದಡಿ ನೀರು ಬಳಸಿಕೊಳ್ಳುತ್ತಿರುವ ಧಾರವಾಡ ತಾಲ್ಲೂಕಿನ ಗ್ರಾಮೀಣ ರೈತರು ವರ್ಷದ ಒಂದು ಬೆಳೆಯನ್ನು ಪೂರ್ತಿ ಮಳೆ ನೀರಿನಲ್ಲಿಯೇ ಬೆಳೆಯುತ್ತಿದ್ದಾರೆ. ಸಹಜ ನೀರನ್ನು ಬಳಸುತ್ತಿರುವುದರಿಂದ ಇಲಿಯ ಮಣ್ಣು ಕೆಟ್ಟಿಲ್ಲ. ಜತೆಗೆ ಅಂತರ್ಜಲ ಮಟ್ಟವೂ ಚೆನ್ನಾಗಿದೆ. ಬೇಸಿಗೆಯಲ್ಲಿ ಕೊಳವೆ ಬಾವಿಯ ನೀರು ಬಳಸಿ ಇನ್ನೊಂದು ಬೆಳೆ ಬೆಳೆದುಕೊಳ್ಳುತ್ತಾರೆ. ಆಗ ನೀರು ಕಡಿಮೆ ಬೇಡುವ ಸೂರ್ಯಕಾಂತಿ, ಹತ್ತಿ, ಈರುಳ್ಳಿ, ಎಳ್ಳು ಮುಂತಾದ ಬೆಳೆಗಳನ್ನು ಬೆಳೆಯುವುದರಿಂದ ಅಂತರ್ಜಲ ಬಳಕೆಯೂ ಮಿತ, ಬೆಳೆ ಬದಲಾವಣೆಯಿಂದ ಭೂಮಿಗೂ ಹಿತ.

ಇಂಥ ಮಾದರಿಯನ್ನು ರಾಜ್ಯದ ಎಲ್ಲೆಡೆ ಅನುಸರಿಸಲಾಗದೆ? ಜನತೆ ಜಲ ಸಾಕ್ಷರರಾಗಲು ಇದಕ್ಕಿಂತೆ ಬೇರೆ ಉದಾಹರಣೆ ಬೇಕೆ?

- ಚಾಮರಾಜ ಸವಡಿ

No comments: