ಚತುರ್ಥಿಗೆ ಪರಿಸರಸ್ನೇಹಿ ಗಣಪ

18 Jul 2008


ಮತ್ತೊಂದು ಮಾಲಿನ್ಯ ಪರ್ವ ಕಣ್ಣೆದುರು ನಿಂತಿದೆ.

ಗಣೇಶ ಚತುರ್ಥಿಗೆಂದು ಈಗಾಗಲೇ ಲಕ್ಷಾಂತರ ಟನ್ ಅಮೂಲ್ಯ ಜೇಡಿಮಣ್ಣನ್ನು ಬಗೆಯಲಾಗಿದೆ. ಸಾವಿರಾರು ಟನ್ ಅರಳೆಯೊಂದಿಗೆ ಕಲೆತು, ಲಕ್ಷಾಂತರ ಲೀಟರ್‌ಗಳ ವಿಷಕಾರಿ ಬಣ್ಣವನ್ನು ಬಳೆದುಕೊಂಡು ಗಣೇಶ ನಮ್ಮೆಲ್ಲರಿಂದ ಪೂಜಿತನಾಗಿ ಅಮೂಲ್ಯ ಜಲಮೂಲಗಳಾದ ಬಾವಿ, ಕೆರೆ, ಸರೋವರ, ನದಿ ಹಾಗೂ ಸಮುದ್ರ ಸೇರಲು ಸನ್ನದ್ಧನಾಗ್ದಿದಾನೆ.

ಅಲ್ಲಿಂದ ಶುರುವಾಗುತ್ತದೆ ವಿಷ ಚಕ್ರ.

ಸದ್ದಿಲ್ಲದೇ ಜಲಮೂಲದಲ್ಲಿ ಬೆರೆತು, ಅಂತರ್ಜಲ ಸೇರಿಕೊಳ್ಳುವ ವಿಷಕಾರಿ ರಾಸಾಯನಿಕಗಳು ನೂರಾರು ವರ್ಷಗಳ ಕಾಲ ಅಂತರ್ಜಲ ಹಾಗೂ ಮೇಲ್ಮೈ ನೀರನ್ನು ಕಲುಷಿತಗೊಳಿಸುತ್ತ ಸಾಗುತ್ತವೆ. ಗಣೇಶನ ಮೈ ಅಲಂಕರಿಸುವ ಹಲವಾರು ಬಣ್ಣ ಹಾಗೂ ಪದಾರ್ಥಗಳಲ್ಲಿ ಬೆರೆತಿರುವ ವಿಷಕಾರಿ ವಸ್ತುಗಳಾದ ಸೀಸ ಹಾಗೂ ಅಪಾಯಕಾರಿ ಪೆಟ್ರೋಲಿಯಮ್ ಉಪ ಉತ್ಪನ್ನಗಳು ವರ್ಷಗಟ್ಟಲೇ ನೀರಿನ ಮೂಲಕ ನಮ್ಮ ಮೈ ಸೇರುತ್ತವೆ. ವಂಶವಾಹಿಗಳ ಮೇಲೆ ಅಪಾಯಕಾರಿ ಪರಿಣಾಮ ಬೀರುವ ಮೂಲಕ ಭಾವಿ ಪೀಳಿಗೆಯನ್ನು ಮನೋದೈಹಿಕ ಅಂಗವೈಕಲ್ಯಕ್ಕೆ ಈಡು ಮಾಡುತ್ತವೆ.

ಪ್ರತಿ ವರ್ಷ ಈ ಕುರಿತು ಮಾಧ್ಯಮಗಳು ಎಚ್ಚರಿಸುತ್ತವೆ. ನಮ್ಮ ಧಾರ್ಮಿಕ ಶ್ರದ್ಧೆ ಪರಿಸರಸ್ನೇಹಿಯಾಗಲಿ ಎಂಬ ಕೂಗು ಕೇಳುತ್ತದೆ. ಆದರೆ ‘ಗಣಪತಿ ಬಪ್ಪ ಮೋರಯಾ’ ಕೇಕೆಯಡಿ ಅದರ ದನಿ ಕ್ಷೀಣ. ವರ್ಷದಿಂದ ವರ್ಷಕ್ಕೆ ವಿಸ್ತರಿಸುತ್ತಲೇ ಸಾಗಿರುವ ವಿಷಕಾರಿ ಚಕ್ರ ಸದ್ದಿಲ್ಲದೇ ನಮ್ಮ ವಾತಾವರಣವನ್ನು ಕಲುಷಿತಗೊಳಿಸುತ್ತಲೇ ಇದೆ. ಗಣೇಶನ ಅಲಂಕಾರಕ್ಕೆ ಬಳಸುವ ಥರ್ಮೋಕೋಲ್ ಹಾಗೂ ಇತರ ವಸ್ತುಗಳು ನೀರನ್ನು ಬಳಕೆಗೆ ಅಯೋಗ್ಯವಾಗಿ ಮಾಡುತ್ತಲೇ ಇವೆ. ಲಕ್ಷಾಂತರ ಟನ್ ಜೇಡಿಮಣ್ಣು ಜಲಮೂಲಗಳಲ್ಲಿ ಸೇರುವ ಮೂಲಕ ಹೂಳಿನ ಪ್ರಮಾಣ ಹೆಚ್ಚುತ್ತಲೇ ಇದೆ.

ಹೂಳನ್ನು ಹೇಗಾದರೂ ತೆಗೆಯಬಹುದು. ಆದರೆ ವಿಷಕಾರಿ ವಸ್ತುಗಳನ್ನು ಅಷ್ಟು ಸುಲಭವಾಗಿ ತೆಗೆಯಲಾಗದು. ಅವು ನೀರೊಳಗೆ ಬೆರೆಯುವುದರಿಂದ ಜಲಚರಿಗಳು ಸಾಯುತ್ತವೆ. ಅವನ್ನು ತಿಂದು ಪಕ್ಷಿಗಳು ಸಾಯುತ್ತವೆ. ಸತ್ತ ಪಕ್ಷಿಗಳ ದೇಹದಲ್ಲಿಯೂ ಈ ವಿಷವಸ್ತುಗಳು ನಾಶವಾಗದೇ ಮತ್ತೆ ಧರೆಗೆ ಮರಳುತ್ತವೆ. ಇದಕ್ಕೆ ಪರಿಹಾರವ್ಲಿಲವೆ?

ಪರಿಸರಸ್ನೇಹಿ ಗಣಪ

ಇಂಥದೊಂದು ಪ್ರಶ್ನೆಯಿಟ್ಟುಕೊಂಡು ಹೊರಟ ಒರಿಸ್ಸಾದ ಶಿಲ್ಪಿಗಳು ಕಳೆದ ಕೆಲ ವರ್ಷಗಳಿಂದ ಕಲ್ಲಿನ ಗಣಪನನ್ನು ತಯಾರಿಸಲು ಪ್ರಾರಂಭಿಸಿದ್ದಾರೆ. ಕೆಂಪು ಅಮೃತ ಶಿಲೆ, ಮರಳುಗಲ್ಲು ಮತ್ತು ಹಸಿರು ಕಲ್ಲುಗಳಲ್ಲಿ ಕೆತ್ತಿದ ಒಂದು ಅಡಿಯಿಂದ ಹಿಡಿದು ನಾಲ್ಕು ಅಡಿಗಳ ಎತ್ತರದ ಗಣೇಶ ವಿಗ್ರಹಗಳು ಈಗ ಜನಾಕರ್ಷಣೆ ಪಡೆದುಕೊಳ್ಳುತ್ತಿವೆ. ಮನೆಯ ಅಲಂಕಾರಕ್ಕೂ ಆಯಿತು, ಪೂಜೆಗೂ ಸಂದಿತು ಎಂದು ಅಲ್ಲಿನ ಜನ ಕಲ್ಲಿನಲ್ಲಿ ಕೆತ್ತಿದ ವಿಗ್ರಹಗಳನ್ನು ಗಣೇಶ ಚತುರ್ಥಿ ಪೂಜೆಗೂ ಬಳಸುತ್ತಿರುವುದು ಈಗ ಹೊಸ ಬೆಳವಣಿಗೆ.

ಇದರಿಂದ ಪ್ರೇರಣೆ ಪಡೆದ ಶಿವಮೊಗ್ಗದ ಬಿ.ಎಚ್. ರಸ್ತೆಯಲ್ಲಿರುವ ‘ದೇಸಿ ಸಂಸ್ಕೃತಿ’ ಅಂಗಡಿಯ ಮಾಲೀಕ ಸರ್ಜಾಶಂಕರ ಹರಳಿಮಠ ಗಣೇಶ ಚತುರ್ಥಿಗೆಂದು ಒರಿಸ್ಸಾದ ಕಲ್ಲಿನ ಗಣೇಶಮೂರ್ತಿಗಳನ್ನು ತರಿಸಿದ್ದಾರೆ. ‘ಮಣ್ಣಿನ ಗಣೇಶನಿಂದ ಪರಿಸರ ಮಾಲಿನ್ಯ ಹೆಚ್ಚುತ್ತಿದೆ. ಬಳಸಿ ಎಸೆಯುವ ಆಧುನಿಕ ಪದ್ಧತಿ ಧಾರ್ಮಿಕ ಆಚರಣೆಗೂ ಹಬ್ಬಿದ್ದು ವಿಷಾದನೀಯ. ಇದನ್ನು ನಿವಾರಿಸುವ ವಿಚಾರ ಮಾಡಿ ಕಲ್ಲಿನ ವಿಗ್ರಹಗಳನ್ನು ಜನಪ್ರಿಯಗೊಳಿಸಲು ಯತ್ನಿಸುತ್ತಿದ್ದೇವೆ’ ಎನ್ನುವ ಸರ್ಜಾಶಂಕರ, ಗಣೇಶ ಅಲ್ಲದೇ ಶಿಲಾಬಾಲಿಕೆಯರು, ಬುದ್ಧ, ಮಹಾವೀರ ಮುಂತಾದವರ ವಿಗ್ರಹಗಳನ್ನು ತರಿಸಿದ್ದಾರೆ.

ಇಂತಹ ವಿಗ್ರಹಗಳ ಪ್ರಯೋಜನಗಳು ಹಲವು. ಇವಕ್ಕೆ ನಿತ್ಯ ಪೂಜೆ ಸಲ್ಲಿಸಬಹುದು. ಬಣ್ಣದ ಹಂಗಿಲ್ಲದಿರುವುದರಿಂದ ಪರಿಸರ ಮಾಲಿನ್ಯವಿಲ್ಲ. ನೀರಿನಲ್ಲಿ ವಿಸರ್ಜಿಸುವ ಅವಶ್ಯಕತೆಯಿಲ್ಲ. ಅಲಂಕಾರಕ್ಕೂ ಬಳಸಬಹುದು. ನಿತ್ಯ ಪೂಜೆಗೂ ಸೂಕ್ತ. ಮರ ಅಥವಾ ಇತರ ವಸ್ತುಗಳಿಂದ ಮಾಡಿರುವ ವಿಗ್ರಹಕ್ಕಿಂತ ಕಡಿಮೆ ಬೆಲೆಯಲ್ಲಿ ದೊರಕುತ್ತವೆ.

ಕುಶಲ ಕಲೆಗಳ ಅಭಿವೃದ್ಧಿ

‘ಪರಿಸರ ಕಾಪಾಡುವ ಜತೆಗೆ ಇವು ನಮ್ಮ ಸಾಂಸ್ಕೃತಿಕ ಕ್ಷೇತ್ರವನ್ನೂ ರಕ್ಷಿಸುತ್ತವೆ. ಬಹುತೇಕ ಕರಕುಶಲಿಗರು ಈಗ ತೀವ್ರ ಬಡತನದಲ್ಲಿದ್ದಾರೆ. ಅವರ ಉತ್ಪನ್ನಗಳಿಗೆ ಬೇಡಿಕೆ ಕಡಿಮೆ ಇರುವುದರಿಂದ ಉತ್ಪಾದನಾ ವೆಚ್ಚ ಅಧಿಕ. ಶ್ರೀಮಂತರು ಮಾತ್ರ ಇಂತಹ ವಸ್ತುಗಳನ್ನು ಕೊಳ್ಳಬಹುದಾದ ವಾತಾವರಣ ಇದೆ. ಒಂದು ವೇಳೆ ಧಾರ್ಮಿಕ ಆಚರಣೆಗೂ ಕರಕುಶಲ ಹಾಗೂ ಪರಿಸರಸ್ನೇಹಿ ಉತ್ಪಾದನೆಗಳು ಬಳಕೆಯಾಗತೊಡಗಿದರೆ ಉತ್ಪಾದನಾ ವೆಚ್ಚ ತಗ್ಗುತ್ತದೆ. ಬಡ ಶಿಲ್ಪಿಗಳು ಹಾಗೂ ಕರಕುಶಲಕರ್ಮಿಗಳ ಉತ್ಪಾದನೆಗಳಿಗೆ ಬೇಡಿಕೆ ಹೆಚ್ಚಿ, ಅವರ ಆರ್ಥಿಕ ಪರಿಸ್ಥಿತಿ ಉತ್ತಮವಾಗುತ್ತದೆ’ ಎನ್ನುತ್ತಾರೆ ಸರ್ಜಾಶಂಕರ.

ಒಂದಡಿಯಿಂದ ಮೂರಡಿ ಎತ್ತರದವರೆಗಿನ ಕಲ್ಲು ವಿಗ್ರಹಗಳ ಬೆಲೆ ರೂ.೫,೦೦೦ದಿಂದ ರೂ.೮,೦೦೦ವರೆಗೆ ಇದೆ. ಒಂದು ವೇಳೆ ಬೇಡಿಕೆ ಏರಿದರೆ ಬೆಲೆ ಸಹಜವಾಗಿ ಇಳಿಯುತ್ತದೆ. ಕರ್ನಾಟಕದ ಉದ್ದಗಲ ಸಾವಿರಾರು ಉತ್ತಮ ಶಿಲ್ಪಿಗಳ್ದಿದಾರೆ, ಲೋಹಕರ್ಮಿಗಳ್ದಿದಾರೆ. ಬೇಡಿಕೆ ಬಂದರೆ ಅವರೂ ಗಣಪನನ್ನು ನಿರ್ಮಿಸಲು ಸಿದ್ಧ. ಅವರವರ ಆರ್ಥಿಕ ಸಾಮರ್ಥ್ಯಕ್ಕೆ ತಕ್ಕಂತೆ, ಆಸಕ್ತಿಗೆ ಅನುಗುಣವಾಗಿ ವಿಗ್ರಹಗಳ ನಿರ್ಮಾಣ ಸಾಧ್ಯ. ಬಳಸಿ ಬೀಸಾಡಿ ಪರಿಸರ ಮಾಲಿನ್ಯ ಉಂಟು ಮಾಡುವುದಕ್ಕಿಂತ ಮರುಬಳಕೆಯಾಗುವ ಸೊಗಸಾದ ವಿಗ್ರಹಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಉತ್ತಮ ಎನ್ನುತ್ತಾರೆ ಹರಳಿಮಠ. ಅಂಥದೊಂದು ಪ್ರಯತ್ನ ಈಗ ಚಿಕ್ಕದಾಗಿ ಪ್ರಾರಂಭವಾಗಿದೆ. ಆದರೆ ಈ ಭಾವನೆ ಎಲ್ಲೆಡೆ ವಿಸ್ತರಿಸಲು ಜನತೆ ಮನಸ್ಸು ಮಾಡಬೇಕಿದೆ.

ಆಸಕ್ತರು ಸರ್ಜಾಶಂಕರ ಹರಳಿಮಠ ಅವರನ್ನು ‘ದೇಸಿ ಸಂಸ್ಕೃತಿ’, ಮೈಲಾರೇಶ್ವರ ದೇವಸ್ಥಾನ ಸಂಕೀರ್ಣ, ಬಿ.ಎಚ್. ರಸ್ತೆ, ಶಿವಮೊಗ್ಗ, ದೂರವಾಣಿ 94487 80144ಗೆ ಸಂಪರ್ಕಿಸಬಹುದು.

- ಚಾಮರಾಜ ಸವಡಿ

No comments: