ಮತ್ತೆ ಮತ್ತೆ ಬೇರಿನೆಡೆಗೆ ತುಡಿವ ಮನ

15 Jan 2016



ಇನ್ನೇನು ಚಳಿ ಬಲಿಯಬೇಕೆಂಬ ಸಮಯದಲ್ಲೇ ಶುರುವಾಗಿದ್ದು ಮಳೆ. ಆಗ ನಾನು ಬೆಂಗಳೂರಿನಲ್ಲಿದ್ದೆ. ಕನ್ನಡಪ್ರಭ ಬಿಡುವ ಕುರಿತ ನಿರ್ಧಾರ  ಬಹುತೇಕ ಅಂತಿಮವಾಗಿತ್ತು. ಬಂಗಾಳ ಕೊಲ್ಲಿಯಲ್ಲೆಲ್ಲೋ ಎಲ್‍ ನಿನೊ ಎಂಬ ಹವಾಮಾನ ಸಂಬಂಧಿ ಪರಿಣಾಮದಿಂದಾಗಿ ಚೆನ್ನೈ ಕೆರೆಯಂತಾಗಿದ್ದರೆ, ಬೆಂಗಳೂರೆಂಬ ನಗರ ಅರವತ್ತರ ಮುದುಕ ನೆಗಡಿಯಿಂದ ಬಳಲುವಂತೆ ಕಿರುಲುತ್ತಿತ್ತು.

ದಟ್ಟ ಮೋಡ ಕವಿದ, ಆಗಾಗ ಮಳೆ ಜಾಡಿಸುತ್ತಿದ್ದ ದಿನಗಳವು. ಚಳಿ ಇಲ್ಲದ, ಮಳೆ ಬೀಳುತ್ತಿದ್ದ ವಿಚಿತ್ರ ನವೆಂಬರ್ ತಿಂಗಳು. ಕನ್ನಡಪರ ಹೋರಾಟಗಾರರು ಕಟ್ಟಿದ್ದ ನಾಡಬಾವುಟಗಳು ತೊಯ್ದು ತೊಪ್ಪೆಯಾಗಿ, ಹಾರಲು ಹಿಂಜರಿಯುವಂತಿದ್ದ ದಿನಗಳಲ್ಲಿ, ಸಂಜೆ ಮಳೆಗೆ ಬೆಂಗಳೂರಿನಲ್ಲಿ ಭರ್ತಿ ಟ್ರಾಫಿಕ್. ಅಂಥ ಕೆಟ್ಟ ದಟ್ಟಣೆಯಲ್ಲಿ ಸಿಲುಕಿಕೊಂಡಾಗೆಲ್ಲ ಮನಸ್ಸು ಕೊಪ್ಪಳದ ಕಲ್ಲುಬೆಟ್ಟ ಮತ್ತು ಹತ್ತನೇ ತರಗತಿ ಪರೀಕ್ಷೆ ಮುಗಿಸಿದ ದಿನಗಳಲ್ಲಿ ಒಮ್ಮೆ ಅದನ್ನು ಏರಿ ನಿಂತು ಧನ್ಯತೆ ಅನುಭವಿಸಿದ ಕ್ಷಣಗಳ ಸೊಗಸನ್ನು ನೆನೆಯುತ್ತಿತ್ತು.

ಅಂಥ ದಟ್ಟಣೆಯ ನಡುವೆಯೇ, ಮತ್ತೆ ಊರಿಗೆ ಹೋಗುವ ನಿರ್ಧಾರ ಬಲಿತಿದ್ದು, ಮತ್ತು ಅದನ್ನು ಬಲು ಬೇಗ ಜಾರಿಗೆ ತಂದಿದ್ದು. ವೃತ್ತಿ ಜೀವನದಲ್ಲಿ ಏರಿಕೆಯಾಗಬಹುದಾಗಿದ್ದ ದಿನಗಳಲ್ಲಿ, ಇದ್ದುದನ್ನೆಲ್ಲ ಬಿಟ್ಟು ಮತ್ತೆ ಊರಿಗೆ ಹೋಗುವ ನನ್ನ ಯೋಚನೆ ಎಂದಿನಂತೆ ಮನೆಯಲ್ಲಿ ಚಿಂತೆ ಮೂಡಿಸಿತ್ತು. ಹೋಗಿ ಏನು ಮಾಡುವುದು ಎಂಬ ಶಾಶ್ವತ ಪ್ರಶ್ನೆ ಮನೆಯಾಕೆಯನ್ನಷ್ಟೇ ಅಲ್ಲ, ನನ್ನನ್ನೂ ತೀವ್ರವಾಗಿ ಬಾಧಿಸಿತ್ತು.

ಹಾಗೊಮ್ಮೆ ತಡರಾತ್ರಿ ಯೋಚಿಸುತ್ತ ಕೂತಿದ್ದಾಗ ಶುರುವಾಗಿತ್ತು ಭರ್ಜರಿ ಮಳೆ. ಮನೆ ಮಾಲೀಕರು, ತಾವು ತಂದಿದ್ದ ಹೊಸ ಕಾರಿಗೆ ನೆರಳಾಗಲೆಂದು ಹಾಕಿಸಿದ್ದ ತಗಡಿನ ಛಾವಣಿ ಮಳೆಯ ಅಬ್ಬರಕ್ಕೆ ಸ್ಪೀಕರ್ ಜೋಡಿಸಿದಂತಿತ್ತು. ಕಿಟಕಿಯಾಚೆ ಮಂದ ಬೆಳಕು. ಅದನ್ನು ಛಿದ್ರವಾಗಿಸುತ್ತಿದ್ದ ದಪ್ಪ ಮಳೆ ಹನಿಗಳು. ಸತತ ಹದಿನೈದು ದಿನಗಳಿಂದ ಸೂರ್ಯ‍ನನ್ನು ಕಾಣದೇ ಮಂಕಾಗಿದ್ದ ನನಗೆ ಆ ಅಪರಾತ್ರಿಯ ಬಿರುಮಳೆ ಕಂಡು ಎಂಥದೋ ಆಕರ್ಷಣೆ. 

ಥಟ್ ಅಂತ ಹೊಳೆಯಿತೊಂದು ನೆಮ್ಮದಿ ತರುವ ಅಂಶ.

ಹೌದು. ನನ್ನೂರಲ್ಲಿ ಮಳೆ ಕಡಿಮೆ. ಬಿಸಿಲು ಜೋರು. ಆದರೆ, ನೀರನ್ನು ಸಾವಿರಾರು ಕಿಮೀಗಳಿಂದ ತರಬಹುದು. ಬಿಸಿಲನ್ನು ಹಾಗೆ ತರಲಾದೀತೆ? ಊರಿಗೆ ಹೋಗಿ ಏನು ಮಾಡುವುದು ಎಂಬ ಪ್ರಶ್ನೆಗಿಂತ, ಏನೆಲ್ಲ ಮಾಡಬಹುದು ಎಂಬ ಹಲವಾರು ವಿಷಯಗಳು ದಿಢೀರನೇ ಗೋಚರಿಸಿದವು. ನಾನು ತುಂಬ ಇಷ್ಟಪಡುವ, ಆದರೆ, ಇದುವರೆಗೆ ಪ್ರಾಯೋಗಿಕವಾಗಿ ಮಾಡದ ಕೃಷಿ, ಸದಾ ನನ್ನ ಕೈ ಹಿಡಿದ ಇಂಗ್ಲಿಷ್ ಬೋಧನೆ, ಬರವಣಿಗೆ, ಅನುವಾದ, ಶಾಲೆ- ಹೀಗೆ ಹಲವಾರು ಸಾಧ್ಯತೆಗಳು, ಆ ಮಂದ ಬೆಳಕಿನ ಮಳೆ ಹನಿಗಳ ಪ್ರತಿಫಲನದಲ್ಲಿ ಒಂದರ ನಂತರ ಒಂದರಂತೆ ತಾಕಿದವು.

ಹೌದು. ಊರಿಗೆ ಹೋಗಬೇಕು. ನೌಕರಿ ನೆಚ್ಚಿಕೊಂಡಲ್ಲ, ನನ್ನನ್ನು ನಾನು ನೆಚ್ಚಿಕೊಂಡು. ಹೊಸ ಬದುಕು ಕಟ್ಟಿಕೊಳ್ಳಬೇಕು. ಮಗಳು ಗೌರಿಗೆ ಹೊಸ ಜಗತ್ತು. ಇನ್ನೊಬ್ಬ ಮಗಳಿಗೆ ಹೊಸ ಊರು. ಹೆಂಡತಿಗೆ ತವರು. ನನ್ನ ಬಹುತೇಕ ಗೆಳೆಯರೆಲ್ಲ ಅಲ್ಲೇ ಬದುಕು ಕಟ್ಟಿಕೊಂಡಿದ್ದಾರೆ. ಆ ಬಿಸಿಲಲ್ಲೇ ಬದುಕನ್ನು ತಂಪಾಗಿಸಿಕೊಂಡಿದ್ದಾರೆ. ಊರೆಂದರೆ ಥಟ್ ಎಂದು ನೆನಪಾಗುವ ಕೊಪ್ಪಳದಲ್ಲೇ ನನ್ನ ಮುಂದಿನ ಬದುಕು ಎಂದು ನಿರ್ಧರಿಸಿದೆ.

ಇಂಥದೊಂದು ನಿರ್ಧಾ‍ರಕ್ಕೆ ವೈಯಕ್ತಿಕ ಕಾರಣಗಳೂ ಸಾಕಷ್ಟಿದ್ದವು. ನಾವು ದೂರವಿದ್ದೇವೆ ಎಂಬ ಚಿಂತೆಯೂ ಸೇರಿ, ನನ್ನ ಅತ್ತೆ ಕಳೆದ ವರ್ಷ ದಿಢೀರನೇ ತೀರಿಕೊಂಡಿದ್ದರು. ಮನಸ್ಸಿನ ಆಳದಲ್ಲೆಲ್ಲೋ ಆ ಭಾವನೆ ಸಾಕಷ್ಟು ಘಾಸಿ ಮಾಡಿಬಿಟ್ಟಿತ್ತು. ಅರೆ, ನನ್ನ ತಂದೆತಾಯಿಗೂ ವಯಸ್ಸಾಗಿದೆಯಲ್ಲ. ಅವರಿಗೂ ಹೀಗೇ ಹಂಬಲ ಇರಬಹುದಲ್ಲ? ಉಳಿದವರು ಹೇಗೋ ಇರಲಿ, ಇರುವಷ್ಟು ದಿನ ನಾವೇ ಅವರ ಕಣ್ಮುಂದೆ ಇದ್ದುಬಿಡೋಣ ಎಂಬುದೂ ಈ ನಿರ್ಧಾರವನ್ನು ಬಲಗೊಳಿಸಿತ್ತು. 

ಮರುದಿನ ಹೆಂಡತಿಗೆ ನನ್ನ ನಿರ್ಧಾರ, ಅದಕ್ಕೆ ಕಾರಣವಾದ ಹಿನ್ನೆಲೆಯನ್ನು ವಿವರಿಸಿದೆ. ಇಲ್ಲವೆನ್ನಲು ಆಕೆಯಲ್ಲಿ ಬಲವಾದ ಕಾರಣಗಳು ಉಳಿದಿರಲಿಲ್ಲ. ಇಷ್ಟು ವರ್ಷಗಳ ಬಳಿಕವೂ, ನಾನು ಹಳೆಯ ತಪ್ಪುಗಳನ್ನು ಮಾಡಲಿಕ್ಕಿಲ್ಲ ಎಂಬ ನಂಬಿಕೆ ಆಕೆಯಲ್ಲೂ ಬಲಗೊಂಡಿರಬಹುದು. ಇವ ಏನಾದರೂ ಮಾಡ್ತಾನೆ ಎಂಬ ವಿಶ್ವಾಸ ಮೂಡಿರಬಹುದು. ಸರಿ, ಹೋಗೋಣ ಎಂದಳು.ಅವತ್ತೇ ಫೇಸ್ ಬುಕ್‍ನಲ್ಲಿ ಊರಿಗೆ ಹೋಗುವ ಕನಸು ಬಿತ್ತಿದೆ. ನನ್ನನ್ನು ಹತ್ತಿರದಿಂದ ಬಲ್ಲ, ದೂರದಿಂದ ಓದಿದ ಹಲವಾರು ಸಹೃದಯಿಗಳು ಸ್ವಾಗತಿಸಿದರು. ಇಷ್ಟು ವರ್ಷಗಳ ವೃತ್ತಿ ಬದುಕಿನ ನಂತರ, ಪತ್ರಿಕೋದ್ಯಮವನ್ನೇ ಬಿಟ್ಟು ಹೋಗಬೇಡಿ ಎಂದು ಕೆಲವರು ಕಾಳಜಿ ತೋರಿದರು. 

ಆದರೆ, ಅಪರಾತ್ರಿಯ ನಿರ್ಧಾರ ಬದಲಾಗಲಿಲ್ಲ. ಮುಂದೆ ಕೆಲವೇ ದಿನಗಳಲ್ಲಿ ಕನ್ನಡಪ್ರಭಕ್ಕೆ ರಾಜೀನಾಮೆ ನೀಡಿದೆ. ಊರಿಗೆ ಹೋಗುವ ಸಿದ್ಧತೆಗಳಲ್ಲಿ ತೊಡಗಿದೆ. ಮೊದಲು ನಾನು ಹೋಗೋದು, ಪರೀಕ್ಷೆಗಳ ನಂತರ ಮನೆ ಸ್ಥಳಾಂತರಿಸೋದು ಎಂದು ನಿರ್ಧಾರವಾಯಿತು.

ಆ ಹಂತದಲ್ಲಿ, ಪತ್ರಕರ್ತ ಮಿತ್ರರೊಬ್ಬರು ಫೋನ್ ಮಾಡಿ ಹೇಳಿದರು. ಹೇಗೋ ಹೋಗ್ತೀರಿ. ವರದಿಗಾರಿಕೆಗೆ ಅಲ್ಲೇ ಅವಕಾಶ ಸಿಗುವಂತಿದ್ದರೆ ಏಕೆ ಪ್ರಯತ್ನಿಸಬಾರದು ಎಂದರು. ಇಷ್ಟು ವರ್ಷಗಳ ನಂತರವೂ, ಮತ್ತೆ ನೌಕರಿ ಕೇಳಿಕೊಂಡು, ಸಂಸ್ಥೆಗಳ ಬಾಗಿಲು ತಟ್ಟುವ ಮನಸ್ಸಾಗಲಿಲ್ಲ. ಆದರೆ, ಗೆಳೆಯನ ಆಗ್ರಹ ಜೋರಾಗಿತ್ತು. `ವಿಶ್ವವಾಣಿ ಬರ್ತಿದೆ. ಭಟ್ಟರು ಸುಮ್ಮನೇ ಕೂತಿಲ್ಲ. ನಿಮ್ಮಂಥೋರಿಗೆ ಉತ್ತಮ ಅವಕಾಶ ಇದೆ. ಪ್ರಯತ್ನಿಸಿ ನೋಡಿ. ಹೇಗೋ ಹೋಗೋಕೆ ನಿರ್ಧಾರ ಮಾಡಿದ್ದೀರಿ. ಅವಕಾಶ ಸಿಕ್ಕರೆ ಸರಿ, ಸಿಗದಿದ್ದರೂ ಸರಿಯೇ’ ಎಂದರು.

ಮೇಲ್ ಮತ್ತು ಸಂದೇಶದ ನಂತರ ಕರೆ ಬಂದಿತು. ಕೊಪ್ಪಳವೇ ಏಕೆ ಎಂಬ ಪ್ರಶ್ನೆ ಎದುರಾಯಿತು. ವಿವರಿಸಿದೆ. ನಿಮ್ಮ ಅನುಭವಕ್ಕೆ ಸೂಕ್ತವಾದ ಹುದ್ದೆಯಾಗಲಿ, ಸಂಬಳವಾಗಲಿ ಅಲ್ಲಿರಲ್ಲ ಎಂದರು ರಾಧಾಕೃಷ್ಣ ಭಡ್ತಿ. ಅದೇನೂ ಇಲ್ಲದೇ ಹೋಗುತ್ತಿದ್ದೇನೆ. ಹೀಗಾಗಿ, ಸೂಕ್ತ ಹುದ್ದೆ, ಸಂಬಳದ ನಿರೀಕ್ಷೆ ಖಂಡಿತ ಇಲ್ಲ ಎಂದೆ. ಸರಿ, ಇಂಥ ದಿನ ಬನ್ನಿ ಎಂದರು.
ನಾನು ಎದುರಿಸಿದ ಅತಿ ಕಡಿಮೆ ಅವಧಿಯ ಸಂದರ್ಶನ ಅದು. ವಿಶ್ವವಾಣಿ ದಿನಪತ್ರಿಕೆಯ ಕೊಪ್ಪಳ ಜಿಲ್ಲಾ ವರದಿಗಾರ ಎಂಬ ನೇಮಕಾತಿ ಪತ್ರ ನೀಡಿಯೇ ಕಳಿಸಿದರು. 

ನನ್ನೂರಿನತ್ತ ನನ್ನ ಪಯಣ ಆರಂಭವಾಗಿದ್ದು ಹೀಗೆ. 

*****

ಸಂಕ್ರಾಂತಿಯ ದಿನದಂದು, ಚಳಿ ತುಂಬಿದ ಕೊಪ್ಪಳದಲ್ಲಿ ವಿಶ್ವವಾಣಿಯ ಮೊದಲ ಸಂಚಿಕೆ ಇದೆಲ್ಲವನ್ನೂ ಮತ್ತೆ ನೆನಪಿಸಿತು. ಪತ್ರಿಕೆಯೊಂದರ ಹುಟ್ಟಿನ ಹಿಂದೆ ಹಲವಾರು ಕಾರಣಗಳೂ ಹಾಗೂ ಸಾಕಷ್ಟು ವಿನಾಕಾರಣಗಳೂ ಇರುತ್ತವೆ. ಕನಸುಗಳಿರುತ್ತವೆ. ಕನವರಿಕೆಗಳಿರುತ್ತವೆ. ನೋವಿರುತ್ತದೆ. ನಲಿವಿನ ಹಂಬಲವಿರುತ್ತದೆ. ಪ್ರತಿಯೊಂದರ ಹುಟ್ಟಿನ ಹಿಂದಿರುವ ಸಿಹಿ-ಕಹಿ, ನೋವು-ನಲಿವುಗಳೇ ಪತ್ರಿಕೆಯೊಂದರ ಹುಟ್ಟಿನ ಹಿಂದೆಯೂ ಉಂಟು. ಎಲ್ಲಿಯೋ ಹುಟ್ಟಿರಬಹುದಾದ ಕನಸೊಂದು, ಸಮಾನ ಮನಸ್ಸುಗಳ ನಡುವೆ ವಿಕಸವಾಗುತ್ತ, ಅಂತಿಮ ರೂಪುಗೊಂಡು ಕಣ್ಮುಂದೆ ನಿಂತ ಘಳಿಕೆಯೊಂದು ಕೊಡುವ ಸುಖವೇ ಬೇರೆ.

ಪತ್ರಿಕೆಯ ಪುಟಗಳನ್ನು ತಿರುಗಿಸುತ್ತ ಹೋದಂತೆ, ಬದುಕಿನ ಹಲವಾರು ಪುಟಗಳನ್ನು ಮನಸ್ಸು ತಿರುವಿ ಹಾಕುತ್ತಿತ್ತು. ಕೊನೆಯ ಪುಟ ತಿರುಗಿಸಿದಾಗ, ಕೊಪ್ಪಳದ ಕಲ್ಲುಬೆಟ್ಟಗಳ ನಡುವೆ, ಪಥ ಬದಲಿಸಿದ ಸೂರ್ಯ ಇಣುಕಿನೋಡುತ್ತಿದ್ದ.
ಈ ಸಂಕ್ರಾಂತಿ ಬದುಕು ಬದಲಿಸುವುದೆ? ಒಳವಾಣಿಗೊಂದು ವಿಶ್ವವಾಣಿ ತರುವುದೆ?

ಅದಕ್ಕೆ ಕಾಲ ಉತ್ತರ ಹೇಳಲಿದೆ. 

- ಚಾಮರಾಜ ಸವಡಿ

No comments: