Showing posts with label ಕನ್ನಡ. Show all posts
Showing posts with label ಕನ್ನಡ. Show all posts

ಮತ್ತೆ ಮತ್ತೆ ಬೇರಿನೆಡೆಗೆ ತುಡಿವ ಮನ

15 Jan 2016

0 ಪ್ರತಿಕ್ರಿಯೆ


ಇನ್ನೇನು ಚಳಿ ಬಲಿಯಬೇಕೆಂಬ ಸಮಯದಲ್ಲೇ ಶುರುವಾಗಿದ್ದು ಮಳೆ. ಆಗ ನಾನು ಬೆಂಗಳೂರಿನಲ್ಲಿದ್ದೆ. ಕನ್ನಡಪ್ರಭ ಬಿಡುವ ಕುರಿತ ನಿರ್ಧಾರ  ಬಹುತೇಕ ಅಂತಿಮವಾಗಿತ್ತು. ಬಂಗಾಳ ಕೊಲ್ಲಿಯಲ್ಲೆಲ್ಲೋ ಎಲ್‍ ನಿನೊ ಎಂಬ ಹವಾಮಾನ ಸಂಬಂಧಿ ಪರಿಣಾಮದಿಂದಾಗಿ ಚೆನ್ನೈ ಕೆರೆಯಂತಾಗಿದ್ದರೆ, ಬೆಂಗಳೂರೆಂಬ ನಗರ ಅರವತ್ತರ ಮುದುಕ ನೆಗಡಿಯಿಂದ ಬಳಲುವಂತೆ ಕಿರುಲುತ್ತಿತ್ತು.

ದಟ್ಟ ಮೋಡ ಕವಿದ, ಆಗಾಗ ಮಳೆ ಜಾಡಿಸುತ್ತಿದ್ದ ದಿನಗಳವು. ಚಳಿ ಇಲ್ಲದ, ಮಳೆ ಬೀಳುತ್ತಿದ್ದ ವಿಚಿತ್ರ ನವೆಂಬರ್ ತಿಂಗಳು. ಕನ್ನಡಪರ ಹೋರಾಟಗಾರರು ಕಟ್ಟಿದ್ದ ನಾಡಬಾವುಟಗಳು ತೊಯ್ದು ತೊಪ್ಪೆಯಾಗಿ, ಹಾರಲು ಹಿಂಜರಿಯುವಂತಿದ್ದ ದಿನಗಳಲ್ಲಿ, ಸಂಜೆ ಮಳೆಗೆ ಬೆಂಗಳೂರಿನಲ್ಲಿ ಭರ್ತಿ ಟ್ರಾಫಿಕ್. ಅಂಥ ಕೆಟ್ಟ ದಟ್ಟಣೆಯಲ್ಲಿ ಸಿಲುಕಿಕೊಂಡಾಗೆಲ್ಲ ಮನಸ್ಸು ಕೊಪ್ಪಳದ ಕಲ್ಲುಬೆಟ್ಟ ಮತ್ತು ಹತ್ತನೇ ತರಗತಿ ಪರೀಕ್ಷೆ ಮುಗಿಸಿದ ದಿನಗಳಲ್ಲಿ ಒಮ್ಮೆ ಅದನ್ನು ಏರಿ ನಿಂತು ಧನ್ಯತೆ ಅನುಭವಿಸಿದ ಕ್ಷಣಗಳ ಸೊಗಸನ್ನು ನೆನೆಯುತ್ತಿತ್ತು.

ಅಂಥ ದಟ್ಟಣೆಯ ನಡುವೆಯೇ, ಮತ್ತೆ ಊರಿಗೆ ಹೋಗುವ ನಿರ್ಧಾರ ಬಲಿತಿದ್ದು, ಮತ್ತು ಅದನ್ನು ಬಲು ಬೇಗ ಜಾರಿಗೆ ತಂದಿದ್ದು. ವೃತ್ತಿ ಜೀವನದಲ್ಲಿ ಏರಿಕೆಯಾಗಬಹುದಾಗಿದ್ದ ದಿನಗಳಲ್ಲಿ, ಇದ್ದುದನ್ನೆಲ್ಲ ಬಿಟ್ಟು ಮತ್ತೆ ಊರಿಗೆ ಹೋಗುವ ನನ್ನ ಯೋಚನೆ ಎಂದಿನಂತೆ ಮನೆಯಲ್ಲಿ ಚಿಂತೆ ಮೂಡಿಸಿತ್ತು. ಹೋಗಿ ಏನು ಮಾಡುವುದು ಎಂಬ ಶಾಶ್ವತ ಪ್ರಶ್ನೆ ಮನೆಯಾಕೆಯನ್ನಷ್ಟೇ ಅಲ್ಲ, ನನ್ನನ್ನೂ ತೀವ್ರವಾಗಿ ಬಾಧಿಸಿತ್ತು.

ಹಾಗೊಮ್ಮೆ ತಡರಾತ್ರಿ ಯೋಚಿಸುತ್ತ ಕೂತಿದ್ದಾಗ ಶುರುವಾಗಿತ್ತು ಭರ್ಜರಿ ಮಳೆ. ಮನೆ ಮಾಲೀಕರು, ತಾವು ತಂದಿದ್ದ ಹೊಸ ಕಾರಿಗೆ ನೆರಳಾಗಲೆಂದು ಹಾಕಿಸಿದ್ದ ತಗಡಿನ ಛಾವಣಿ ಮಳೆಯ ಅಬ್ಬರಕ್ಕೆ ಸ್ಪೀಕರ್ ಜೋಡಿಸಿದಂತಿತ್ತು. ಕಿಟಕಿಯಾಚೆ ಮಂದ ಬೆಳಕು. ಅದನ್ನು ಛಿದ್ರವಾಗಿಸುತ್ತಿದ್ದ ದಪ್ಪ ಮಳೆ ಹನಿಗಳು. ಸತತ ಹದಿನೈದು ದಿನಗಳಿಂದ ಸೂರ್ಯ‍ನನ್ನು ಕಾಣದೇ ಮಂಕಾಗಿದ್ದ ನನಗೆ ಆ ಅಪರಾತ್ರಿಯ ಬಿರುಮಳೆ ಕಂಡು ಎಂಥದೋ ಆಕರ್ಷಣೆ. 

ಥಟ್ ಅಂತ ಹೊಳೆಯಿತೊಂದು ನೆಮ್ಮದಿ ತರುವ ಅಂಶ.

ಹೌದು. ನನ್ನೂರಲ್ಲಿ ಮಳೆ ಕಡಿಮೆ. ಬಿಸಿಲು ಜೋರು. ಆದರೆ, ನೀರನ್ನು ಸಾವಿರಾರು ಕಿಮೀಗಳಿಂದ ತರಬಹುದು. ಬಿಸಿಲನ್ನು ಹಾಗೆ ತರಲಾದೀತೆ? ಊರಿಗೆ ಹೋಗಿ ಏನು ಮಾಡುವುದು ಎಂಬ ಪ್ರಶ್ನೆಗಿಂತ, ಏನೆಲ್ಲ ಮಾಡಬಹುದು ಎಂಬ ಹಲವಾರು ವಿಷಯಗಳು ದಿಢೀರನೇ ಗೋಚರಿಸಿದವು. ನಾನು ತುಂಬ ಇಷ್ಟಪಡುವ, ಆದರೆ, ಇದುವರೆಗೆ ಪ್ರಾಯೋಗಿಕವಾಗಿ ಮಾಡದ ಕೃಷಿ, ಸದಾ ನನ್ನ ಕೈ ಹಿಡಿದ ಇಂಗ್ಲಿಷ್ ಬೋಧನೆ, ಬರವಣಿಗೆ, ಅನುವಾದ, ಶಾಲೆ- ಹೀಗೆ ಹಲವಾರು ಸಾಧ್ಯತೆಗಳು, ಆ ಮಂದ ಬೆಳಕಿನ ಮಳೆ ಹನಿಗಳ ಪ್ರತಿಫಲನದಲ್ಲಿ ಒಂದರ ನಂತರ ಒಂದರಂತೆ ತಾಕಿದವು.

ಹೌದು. ಊರಿಗೆ ಹೋಗಬೇಕು. ನೌಕರಿ ನೆಚ್ಚಿಕೊಂಡಲ್ಲ, ನನ್ನನ್ನು ನಾನು ನೆಚ್ಚಿಕೊಂಡು. ಹೊಸ ಬದುಕು ಕಟ್ಟಿಕೊಳ್ಳಬೇಕು. ಮಗಳು ಗೌರಿಗೆ ಹೊಸ ಜಗತ್ತು. ಇನ್ನೊಬ್ಬ ಮಗಳಿಗೆ ಹೊಸ ಊರು. ಹೆಂಡತಿಗೆ ತವರು. ನನ್ನ ಬಹುತೇಕ ಗೆಳೆಯರೆಲ್ಲ ಅಲ್ಲೇ ಬದುಕು ಕಟ್ಟಿಕೊಂಡಿದ್ದಾರೆ. ಆ ಬಿಸಿಲಲ್ಲೇ ಬದುಕನ್ನು ತಂಪಾಗಿಸಿಕೊಂಡಿದ್ದಾರೆ. ಊರೆಂದರೆ ಥಟ್ ಎಂದು ನೆನಪಾಗುವ ಕೊಪ್ಪಳದಲ್ಲೇ ನನ್ನ ಮುಂದಿನ ಬದುಕು ಎಂದು ನಿರ್ಧರಿಸಿದೆ.

ಇಂಥದೊಂದು ನಿರ್ಧಾ‍ರಕ್ಕೆ ವೈಯಕ್ತಿಕ ಕಾರಣಗಳೂ ಸಾಕಷ್ಟಿದ್ದವು. ನಾವು ದೂರವಿದ್ದೇವೆ ಎಂಬ ಚಿಂತೆಯೂ ಸೇರಿ, ನನ್ನ ಅತ್ತೆ ಕಳೆದ ವರ್ಷ ದಿಢೀರನೇ ತೀರಿಕೊಂಡಿದ್ದರು. ಮನಸ್ಸಿನ ಆಳದಲ್ಲೆಲ್ಲೋ ಆ ಭಾವನೆ ಸಾಕಷ್ಟು ಘಾಸಿ ಮಾಡಿಬಿಟ್ಟಿತ್ತು. ಅರೆ, ನನ್ನ ತಂದೆತಾಯಿಗೂ ವಯಸ್ಸಾಗಿದೆಯಲ್ಲ. ಅವರಿಗೂ ಹೀಗೇ ಹಂಬಲ ಇರಬಹುದಲ್ಲ? ಉಳಿದವರು ಹೇಗೋ ಇರಲಿ, ಇರುವಷ್ಟು ದಿನ ನಾವೇ ಅವರ ಕಣ್ಮುಂದೆ ಇದ್ದುಬಿಡೋಣ ಎಂಬುದೂ ಈ ನಿರ್ಧಾರವನ್ನು ಬಲಗೊಳಿಸಿತ್ತು. 

ಮರುದಿನ ಹೆಂಡತಿಗೆ ನನ್ನ ನಿರ್ಧಾರ, ಅದಕ್ಕೆ ಕಾರಣವಾದ ಹಿನ್ನೆಲೆಯನ್ನು ವಿವರಿಸಿದೆ. ಇಲ್ಲವೆನ್ನಲು ಆಕೆಯಲ್ಲಿ ಬಲವಾದ ಕಾರಣಗಳು ಉಳಿದಿರಲಿಲ್ಲ. ಇಷ್ಟು ವರ್ಷಗಳ ಬಳಿಕವೂ, ನಾನು ಹಳೆಯ ತಪ್ಪುಗಳನ್ನು ಮಾಡಲಿಕ್ಕಿಲ್ಲ ಎಂಬ ನಂಬಿಕೆ ಆಕೆಯಲ್ಲೂ ಬಲಗೊಂಡಿರಬಹುದು. ಇವ ಏನಾದರೂ ಮಾಡ್ತಾನೆ ಎಂಬ ವಿಶ್ವಾಸ ಮೂಡಿರಬಹುದು. ಸರಿ, ಹೋಗೋಣ ಎಂದಳು.ಅವತ್ತೇ ಫೇಸ್ ಬುಕ್‍ನಲ್ಲಿ ಊರಿಗೆ ಹೋಗುವ ಕನಸು ಬಿತ್ತಿದೆ. ನನ್ನನ್ನು ಹತ್ತಿರದಿಂದ ಬಲ್ಲ, ದೂರದಿಂದ ಓದಿದ ಹಲವಾರು ಸಹೃದಯಿಗಳು ಸ್ವಾಗತಿಸಿದರು. ಇಷ್ಟು ವರ್ಷಗಳ ವೃತ್ತಿ ಬದುಕಿನ ನಂತರ, ಪತ್ರಿಕೋದ್ಯಮವನ್ನೇ ಬಿಟ್ಟು ಹೋಗಬೇಡಿ ಎಂದು ಕೆಲವರು ಕಾಳಜಿ ತೋರಿದರು. 

ಆದರೆ, ಅಪರಾತ್ರಿಯ ನಿರ್ಧಾರ ಬದಲಾಗಲಿಲ್ಲ. ಮುಂದೆ ಕೆಲವೇ ದಿನಗಳಲ್ಲಿ ಕನ್ನಡಪ್ರಭಕ್ಕೆ ರಾಜೀನಾಮೆ ನೀಡಿದೆ. ಊರಿಗೆ ಹೋಗುವ ಸಿದ್ಧತೆಗಳಲ್ಲಿ ತೊಡಗಿದೆ. ಮೊದಲು ನಾನು ಹೋಗೋದು, ಪರೀಕ್ಷೆಗಳ ನಂತರ ಮನೆ ಸ್ಥಳಾಂತರಿಸೋದು ಎಂದು ನಿರ್ಧಾರವಾಯಿತು.

ಆ ಹಂತದಲ್ಲಿ, ಪತ್ರಕರ್ತ ಮಿತ್ರರೊಬ್ಬರು ಫೋನ್ ಮಾಡಿ ಹೇಳಿದರು. ಹೇಗೋ ಹೋಗ್ತೀರಿ. ವರದಿಗಾರಿಕೆಗೆ ಅಲ್ಲೇ ಅವಕಾಶ ಸಿಗುವಂತಿದ್ದರೆ ಏಕೆ ಪ್ರಯತ್ನಿಸಬಾರದು ಎಂದರು. ಇಷ್ಟು ವರ್ಷಗಳ ನಂತರವೂ, ಮತ್ತೆ ನೌಕರಿ ಕೇಳಿಕೊಂಡು, ಸಂಸ್ಥೆಗಳ ಬಾಗಿಲು ತಟ್ಟುವ ಮನಸ್ಸಾಗಲಿಲ್ಲ. ಆದರೆ, ಗೆಳೆಯನ ಆಗ್ರಹ ಜೋರಾಗಿತ್ತು. `ವಿಶ್ವವಾಣಿ ಬರ್ತಿದೆ. ಭಟ್ಟರು ಸುಮ್ಮನೇ ಕೂತಿಲ್ಲ. ನಿಮ್ಮಂಥೋರಿಗೆ ಉತ್ತಮ ಅವಕಾಶ ಇದೆ. ಪ್ರಯತ್ನಿಸಿ ನೋಡಿ. ಹೇಗೋ ಹೋಗೋಕೆ ನಿರ್ಧಾರ ಮಾಡಿದ್ದೀರಿ. ಅವಕಾಶ ಸಿಕ್ಕರೆ ಸರಿ, ಸಿಗದಿದ್ದರೂ ಸರಿಯೇ’ ಎಂದರು.

ಮೇಲ್ ಮತ್ತು ಸಂದೇಶದ ನಂತರ ಕರೆ ಬಂದಿತು. ಕೊಪ್ಪಳವೇ ಏಕೆ ಎಂಬ ಪ್ರಶ್ನೆ ಎದುರಾಯಿತು. ವಿವರಿಸಿದೆ. ನಿಮ್ಮ ಅನುಭವಕ್ಕೆ ಸೂಕ್ತವಾದ ಹುದ್ದೆಯಾಗಲಿ, ಸಂಬಳವಾಗಲಿ ಅಲ್ಲಿರಲ್ಲ ಎಂದರು ರಾಧಾಕೃಷ್ಣ ಭಡ್ತಿ. ಅದೇನೂ ಇಲ್ಲದೇ ಹೋಗುತ್ತಿದ್ದೇನೆ. ಹೀಗಾಗಿ, ಸೂಕ್ತ ಹುದ್ದೆ, ಸಂಬಳದ ನಿರೀಕ್ಷೆ ಖಂಡಿತ ಇಲ್ಲ ಎಂದೆ. ಸರಿ, ಇಂಥ ದಿನ ಬನ್ನಿ ಎಂದರು.
ನಾನು ಎದುರಿಸಿದ ಅತಿ ಕಡಿಮೆ ಅವಧಿಯ ಸಂದರ್ಶನ ಅದು. ವಿಶ್ವವಾಣಿ ದಿನಪತ್ರಿಕೆಯ ಕೊಪ್ಪಳ ಜಿಲ್ಲಾ ವರದಿಗಾರ ಎಂಬ ನೇಮಕಾತಿ ಪತ್ರ ನೀಡಿಯೇ ಕಳಿಸಿದರು. 

ನನ್ನೂರಿನತ್ತ ನನ್ನ ಪಯಣ ಆರಂಭವಾಗಿದ್ದು ಹೀಗೆ. 

*****

ಸಂಕ್ರಾಂತಿಯ ದಿನದಂದು, ಚಳಿ ತುಂಬಿದ ಕೊಪ್ಪಳದಲ್ಲಿ ವಿಶ್ವವಾಣಿಯ ಮೊದಲ ಸಂಚಿಕೆ ಇದೆಲ್ಲವನ್ನೂ ಮತ್ತೆ ನೆನಪಿಸಿತು. ಪತ್ರಿಕೆಯೊಂದರ ಹುಟ್ಟಿನ ಹಿಂದೆ ಹಲವಾರು ಕಾರಣಗಳೂ ಹಾಗೂ ಸಾಕಷ್ಟು ವಿನಾಕಾರಣಗಳೂ ಇರುತ್ತವೆ. ಕನಸುಗಳಿರುತ್ತವೆ. ಕನವರಿಕೆಗಳಿರುತ್ತವೆ. ನೋವಿರುತ್ತದೆ. ನಲಿವಿನ ಹಂಬಲವಿರುತ್ತದೆ. ಪ್ರತಿಯೊಂದರ ಹುಟ್ಟಿನ ಹಿಂದಿರುವ ಸಿಹಿ-ಕಹಿ, ನೋವು-ನಲಿವುಗಳೇ ಪತ್ರಿಕೆಯೊಂದರ ಹುಟ್ಟಿನ ಹಿಂದೆಯೂ ಉಂಟು. ಎಲ್ಲಿಯೋ ಹುಟ್ಟಿರಬಹುದಾದ ಕನಸೊಂದು, ಸಮಾನ ಮನಸ್ಸುಗಳ ನಡುವೆ ವಿಕಸವಾಗುತ್ತ, ಅಂತಿಮ ರೂಪುಗೊಂಡು ಕಣ್ಮುಂದೆ ನಿಂತ ಘಳಿಕೆಯೊಂದು ಕೊಡುವ ಸುಖವೇ ಬೇರೆ.

ಪತ್ರಿಕೆಯ ಪುಟಗಳನ್ನು ತಿರುಗಿಸುತ್ತ ಹೋದಂತೆ, ಬದುಕಿನ ಹಲವಾರು ಪುಟಗಳನ್ನು ಮನಸ್ಸು ತಿರುವಿ ಹಾಕುತ್ತಿತ್ತು. ಕೊನೆಯ ಪುಟ ತಿರುಗಿಸಿದಾಗ, ಕೊಪ್ಪಳದ ಕಲ್ಲುಬೆಟ್ಟಗಳ ನಡುವೆ, ಪಥ ಬದಲಿಸಿದ ಸೂರ್ಯ ಇಣುಕಿನೋಡುತ್ತಿದ್ದ.
ಈ ಸಂಕ್ರಾಂತಿ ಬದುಕು ಬದಲಿಸುವುದೆ? ಒಳವಾಣಿಗೊಂದು ವಿಶ್ವವಾಣಿ ತರುವುದೆ?

ಅದಕ್ಕೆ ಕಾಲ ಉತ್ತರ ಹೇಳಲಿದೆ. 

- ಚಾಮರಾಜ ಸವಡಿ

ಹೋಗಿ ಬನ್ನಿ ಕಲಾಂ ಸಾರ್

27 Jul 2015

0 ಪ್ರತಿಕ್ರಿಯೆ
ಕೆಲವೊಂದು ಸಾವುಗಳೇ ಹಾಗೆ. ತೀರಾ ಅನಿರೀಕ್ಷಿತವಾಗಿರುತ್ತವೆ. ಹೀಗಾಗಿ, ಹೆಚ್ಚು ದುಃಖ ತರುತ್ತವೆ. ಸಾವು ನಿರೀಕ್ಷಿತ ಎಂಬ ಭಾವನೆಯೊಂದಿಗೆ ನಿತ್ಯ ಬದುಕುವವರಿಗೂ, ಕೆಲವರ ಸಾವು ತಕ್ಷಣ ಜೀರ್ಣಿಸಿಕೊಳ್ಳಲು ಆಗುವುದಿಲ್ಲ.
ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಅನಿರೀಕ್ಷಿತ ನಿರ್ಗಮನ ಅಂಥದು.

ಕಲಾಂ ಎಂದರೆ ನೆನಪಾಗುವುದು ಸರಳತೆ. ಮೇಲೇರಿದವ ಚಿಕ್ಕವನಿರಬೇಕೆಂಬ ಕವಿಮಾತಿಗೆ ನಿದರ್ಶನ. ಶಾಲೆ-ಕಾಲೇಜುಗಳ ಕಾರ್ಯಕ್ರಮಕ್ಕೆ ಆದ್ಯತೆ ಮೇಲೆ ಹೋಗುತ್ತಿದ್ದ ಈ ವಿಜ್ಞಾನಿ ಮಕ್ಕಳೊಂದಿಗೆ ಬೆರೆಯುತ್ತಿದ್ದ ಬಗೆ ನಿಜಕ್ಕೂ ಅಚ್ಚರಿ ಹುಟ್ಟಿಸುವಂಥದು. ಒಂದೇ ಒಂದು ಪುಟ್ಟ ಬಡ್ತಿಗೂ ಹುಚ್ಚರಂತೆ ಆಡುವವರ ಮಧ್ಯೆ, ಅಷ್ಟೆಲ್ಲ ಎತ್ತರ ಏರಿಯೂ ಮಕ್ಕಳ ಮಟ್ಟಕ್ಕೆ ಇಳಿದು ಬೆರೆಯುತ್ತಿದ್ದ ಕಲಾಂ ನಿಜಕ್ಕೂ ಅಪರೂಪದ ವ್ಯಕ್ತಿ.

ಅವರಲ್ಲಿ ವಿಜ್ಞಾನದ ಬಗ್ಗೆ ಅಚ್ಚರಿ, ಕುತೂಹಲ, ಪ್ರೀತಿ ಹಾಗೂ ವಿಪರೀತ ಆಕರ್ಷಣೆ ಇತ್ತು. ರಾಷ್ಟ್ರಪತಿಯಾಗಿದ್ದು ಅನಿರೀಕ್ಷಿತವಾಗಿ. ಐದು ವರ್ಷ ಆ ಹುದ್ದೆಯಲ್ಲಿದ್ದ ಅವರಿಗೂ ಒಂಚೂರು ಮೋಹ ಬೆಳೆದಿತ್ತು. ಹೀಗಾಗಿ, ಎರಡನೇ ಅವಧಿಗೂ ಮುಂದುವರಿಯುವ ಇಚ್ಛೆ ವ್ಯಕ್ತಪಡಿಸಿದರು. ಆದರೆ, ಯುಪಿಎ ಸರ್ಕಾರಕ್ಕೆ ಅವರು ಬೇಡವಾಗಿದ್ದರು. ಕೊಂಚ ಬೇಸರದಿಂದಲೇ ರಾಷ್ಟ್ರಪತಿ ಭವನದಿಂದ ನಿರ್ಗಮನಿಸಿದ ಕಲಾಂ ಹೋಗಿ ನಿಂತಿದ್ದು ಮಕ್ಕಳ ಬಳಿ.

ನಿಜವಾದ ಕಲಾಂ ಹೊಮ್ಮಿದ್ದು ಅಲ್ಲಿಯೇ. ರಾಷ್ಟ್ರಪತಿ ಭವನದ ಎತ್ತರದಲ್ಲಿ ಎದ್ದು ಕಾಣುತ್ತಿದ್ದ ಅವರ ಸರಳತೆಗಿಂತ, ಮಕ್ಕಳ ಜೊತೆ ಬೆಳೆದ ಅವರ ಸರಳತೆ ಹೆಚ್ಚು ಸೆಳೆಯುತ್ತಿತ್ತು. ವಿಜ್ಞಾನವನ್ನು ಮಕ್ಕಳ ಮನಸ್ಸಿನಲ್ಲಿ ತುಂಬಿದರು. ಹೊಸದನ್ನು ಶೋಧಿಸುವ ಹುಚ್ಚನ್ನು ಬೆಳೆಸಿದರು. ರಾಷ್ಟ್ರಪತಿಯಾಗಿ ಮಾಡದ, ಮಾಡಲು ಆಗದ ಕೆಲಸಗಳನ್ನು ಮಾಜಿಯಾದ ನಂತರ ಖುಷಿಯಿಂದ ಮಾಡಿಕೊಂಡು ಬಂದರು ಕಲಾಂ.

ಕಲಾಂ ಸಾವಿನ ಸುದ್ದಿ ಓದುತ್ತ ನನಗೆ ಬಾಲ್ಯದ ಕೆಲವು ಕನಸುಗಳು ನೆನಪಾಗುತ್ತವೆ. ಕಲಿಸಿದ ಶಿಕ್ಷಕರು, ಗೆಳೆಯರು ನೆನಪಾಗುತ್ತಾರೆ. ಒಬ್ಬನೇ ವ್ಯಕ್ತಿಯ ಸಣ್ಣ ತಾಳ್ಮೆ, ತ್ಯಾಗ, ನೆರವು ಜೀವನಪರ್ಯಂತೆ ಅದ್ಹೇಗೆ ಪೊರೆಯುತ್ತ ಹೋಗುತ್ತದೆ ಎಂಬುದನ್ನು ನೆನೆದರೆ ಅಚ್ಚರಿಯಾಗುತ್ತದೆ. ಇಂಥ ಸುಂದರ, ಸ್ನಿಗ್ಧ ಬಾಲ್ಯಕ್ಕೆ ಕಲಾಂರಂಥ ದೈತ್ಯ ವ್ಯಕ್ತಿ ಬಂದಾಗ, ಅದನ್ನು ಅನುಭವಿಸಿದ ಮಕ್ಕಳ ಮನಸ್ಸು ಅದೆಂಥ ಸ್ಪೂರ್ತಿ ಪಡೆಯಲಿಕ್ಕಿಲ್ಲ?

ಚಾಚಾ ನೆಹರು ಎಂದು ನಮಗೆಲ್ಲ ಹೇಳಿಕೊಟ್ಟ ಭಾರತದ ಮಾಜಿ ಪ್ರಧಾನಿ ಮಕ್ಕಳಿಗೆ ನಿಜಕ್ಕೂ ಏನೂ ಮಾಡಲಿಲ್ಲ. ಆದರೆ, ಅಂಥ ಬೂಟಾಟಿಕೆಯೇನೂ ಮಾಡದ ಕಲಾಂ, ಮಕ್ಕಳ ಮನಸ್ಸಿನಲ್ಲಿ ಮೂಡಿಸಿದ ಪ್ರಭಾವ ನಿಜಕ್ಕೂ ಅಗಾಧ. ಬಹುಶಃ 2020 (ಪುರ) ಯೋಜನೆಯನ್ನು ರೂಪಿಸುವ ಸಮಯದಲ್ಲಿ ಕಲಾಂ ಅವರ ಮನಸ್ಸಿನಲ್ಲಿ ಮಕ್ಕಳೇ ಇದ್ದಿರಬೇಕು. ಏಕೆಂದರೆ, ಮಕ್ಕಳಂಥ ಹುಲುಸಾದ ಭೂಮಿಯಲ್ಲಿ ಮಾತ್ರ ಕನಸುಗಳನ್ನು ಬಿತ್ತಲು ಸಾಧ್ಯ. ಬೆಳೆಸಲು ಸಾಧ್ಯ.

ಆ ಕೆಲಸವನ್ನು ಕಲಾಂ ಅದ್ಭುತವಾಗಿ ಮಾಡಿಹೋಗಿದ್ದಾರೆ. ಅವರು ರೂಪಿಸಿದ ಕ್ಷಿಪಣಿಗಳಿಗಿಂತ ಎತ್ತರಕ್ಕೆ ಈ ಕನಸುಗಳು ಹೋಗಲಿವೆ. ಒಬ್ಬ ವ್ಯಕ್ತಿಯ ನಿಜವಾದ ಕೊಡುಗೆ ಇದು.

ಈ ಕಾರಣಕ್ಕಾಗಿ ಬಹುಕಾಲ ನೆನಪಿನಲ್ಲಿರುತ್ತಾರೆ ಕಲಾಂ.

ಅಷ್ಟೇ ಅಲ್ಲ, ಅವರ ಮುಗ್ಧತೆ, ತಿಳಿವಳಿಕೆ, ವಿನಯವಂತಿಕೆ, ಸರಳತೆ, ಏನನ್ನೂ ಇಟ್ಟುಕೊಳ್ಳದೇ ಎಲ್ಲವನ್ನೂ ಹೊಂದುವಂಥ ವ್ಯಕ್ತಿತ್ವ ತುಂಬ ಕಾಲ ಮನಸ್ಸಿನಲ್ಲಿರುತ್ತದೆ.

ಹೋಗಿ ಬನ್ನಿ ಕಲಾಂ ಸಾರ್.

- ಚಾಮರಾಜ ಸವಡಿ

ಅರ್ಧ ಬದುಕಿಗೆ ಪೂರ್ಣ ನಮಸ್ಕಾರ

12 Jan 2011

2 ಪ್ರತಿಕ್ರಿಯೆ
ಇತ್ತೀಚೆಗೆ ಮೌನ ಹೆಚ್ಚು ಪ್ರಿಯವಾಗುತ್ತಿದೆ.

ಕಷ್ಟ ಏನೆಂದರೆ, ಮಾತೂ ಅನಿವಾರ್ಯವಾಗಿ ಹೆಚ್ಚಾಗುತ್ತಿದೆ.

ಒಂದು ಹಂತದ ವಯಸ್ಸು ದಾಟಿದ ನಂತರ ಇದ್ದಕ್ಕಿದ್ದಂತೆ ಮೌನ ಇಷ್ಟವಾಗತೊಡಗುತ್ತದೆ. ಬಾಲ್ಯ ಆಪ್ತವೆನಿಸತೊಡಗುತ್ತದೆ. ಬದುಕನ್ನು ಬೇರೆ ರೀತಿ ಬದುಕುವಂತಿದ್ದರೆ ಎಷ್ಟೊಂದು ಚೆನ್ನಾಗಿರುತ್ತದಲ್ಲವೆ ಅಂತ ಅನಿಸತೊಡಗುತ್ತದೆ.

ಅಂದರೆ, ನಾವೊಂದು ಮಹತ್ವದ ಘಟ್ಟದಲ್ಲಿ ಬಂದು ನಿಂತಿದ್ದೇವೆ ಅಂತ.

ಅಲ್ಲಿ ದಾರಿ ಕವಲೊಡೆದಿರುತ್ತದೆ.
ಒಂದು, ನಮಗೆ ಗೊತ್ತಿರುವ ದಾರಿ. ಅದು ಎಲ್ಲಿಗೆ ಹೋಗುತ್ತದೆ ಎಂಬುದು ಅಸ್ಪಷ್ಟವಾಗಿ ಗೊತ್ತಿರುತ್ತದೆ. ಇನ್ನೊಂದು ದಾರಿಯ ಬಗ್ಗೆ ನಮಗೆ ಏನೇನೂ ಗೊತ್ತಿರುವುದಿಲ್ಲ.

ಸಮಸ್ಯೆ ಎಂದರೆ, ಏನೇನೂ ಗೊತ್ತಿರದ ದಾರಿಯ ಆಕರ್ಷಣೆ.

ಗೊತ್ತಿರುವ ದಾರಿಗಿಂತ ಗೊತ್ತಿರದ ದಾರಿಯ ಆಕರ್ಷಣೆ, ಅಪಾಯ ಹೆಚ್ಚು. ಇಷ್ಟು ವರ್ಷಗಳವರೆಗೆ ಗೊತ್ತಿರುವ ದಾರಿಯಲ್ಲಿ ನಡೆದೂ, ನಡೆದೂ ಬಸವಳಿದಿರುತ್ತೇವೆ. ಪರವಾಗಿಲ್ಲ, ಜೀವನ ಇನ್ನು ಒಂದು ಹಂತಕ್ಕೆ ಬಂತು ಅಂತ ಅನಿಸಿದಾಗ, ಹೊಸ ದಾರಿ ಸೆಳೆಯತೊಡಗುತ್ತದೆ. ಅದರಲ್ಲಿ ನಡೆಯಬೇಕೆಂಬ ಆಸೆ. ಆ ಕಡೆ ಹೋದರೆ, ಇಷ್ಟು ದಿನಗಳವರೆಗೆ ಕಾಪಾಡಿಕೊಂಡು ಬಂದಿರುವ ಹಿತವಲಯ ಎಲ್ಲಿ ದೂರವಾಗುತ್ತದೋ ಎಂಬ ಭಯ.

ಅಂಥದೊಂದು ಗೊಂದಲದಲ್ಲಿ ನಿಂತಿದ್ದೇನೆ ಎಂದು ಇತ್ತೀಚೆಗೆ ಬಲವಾಗಿ ಅನಿಸತೊಡಗಿದೆ.

ಕೆಲವೊಂದು ವೃತ್ತಿ ಆಧರಿತ ಅವಕಾಶಗಳು ಕರೆಯುತ್ತಿವೆ. ಆದರೆ, ಮೂಲ ವೃತ್ತಿಯ ಆಕರ್ಷಣೆ ಹಾಗೇ ಇದೆ. ಹಾಗೆ ನೋಡಿದರೆ, ಅದು ಇನ್ನಷ್ಟು ಹೆಚ್ಚಾಗಿದೆ. ಇದು ಸುಗ್ಗಿಯ ಸಮಯ. ಅಡ್ಡ ಮಳೆ ಬಾರದಿದ್ದರೆ, ಸೊಗಸಾದ ಫಸಲು ಕೈಗೆ ದಕ್ಕೀತು ಎಂಬ ಆಸೆ. ಅದಕ್ಕಿಂತ ಸೊಗಸಾದ ಬದುಕು ಹತ್ತಿರದಲ್ಲೇ ಇದೆ ಎಂಬ ಸೆಳೆತ. ಇವೆರಡೂ ಸೆಳೆತಗಳ ನಡುವೆ ನಿಂತಿರುವಾಗಲೇ ಹೊಸ ವರ್ಷ ಕಣ್ಣೆದುರು ನಿಂತಿದೆ.

ನನಗೆ ಮತ್ತೆ ಮತ್ತೆ ಏರ್‌ಫೋರ್ಸ್‌ನ ದಿನಗಳು ನೆನಪಾಗುತ್ತಿವೆ.

ಒಬ್ಬನೇ ಇದ್ದೆ ಆಗ. ನಿಜಕ್ಕೂ ಒಬ್ಬನೇ. ಮಾನಸಿಕ ಸಾಂಗತ್ಯ ಇಲ್ಲದಿರುವ ಎಲ್ಲಾ ದಿನಗಳೂ ಒಂಟಿ ದಿನಗಳೇ. ನನ್ನ ಪಾಡಿಗೆ ನಾನಿರುತ್ತಿದ್ದೆ. ಕೆಲವೊಂದು ಗೆಳೆಯರು ತೀರಾ ಹತ್ತಿರದಲ್ಲಿದ್ದರೂ, ಒಳಮನೆಯಲ್ಲಿ ನಾನು ಒಂಟಿಯೇ. ನನ್ನ ಪಾಡಿಗೆ ನಾನು ಒಬ್ಬನೇ ರನ್ನಿಂಗ್‌ ಹೋಗುತ್ತಿದ್ದೆ. ಗುಜರಾತ್‌ನ ಭುಜ್‌ನ ಹೊರವಲಯದ ಏರ್‌ಫೋರ್ಸ್‌ ತಾಣದ ನಮ್ಮ ವಸತಿ ನಿಲಯದಿಂದ ಆರು ಕಿಮೀ ದೂರದಲ್ಲಿತ್ತು ರುದ್ರಮಾತಾ ನದಿಯ ಕಣಿವೆ.

ಅಲ್ಲಿಗೆ ದಿನಾ ಸಂಜೆ ಒಬ್ಬನೇ ಓಡುತ್ತ ಹೋಗುತ್ತಿದ್ದೆ. ಚಳಿ ಇರಲಿ, ಕಡು ಬಿಸಿಲು ಇರಲಿ, ವಾರಕ್ಕೆ ಸರಾಸರಿ ಐದಾರು ದಿನಗಳಂತೆ ನಾಲ್ಕು ವರ್ಷಗಳ ಕಾಲ ಅಲ್ಲಿಗೆ ನಿರಂತರವಾಗಿ ಹೋಗಿದ್ದೇನೆ. ರಜಾ ಸಮಯದಲ್ಲಿ ಬಿಟ್ಟರೆ, ಬೇರೆಲ್ಲ ಸಮಯದಲ್ಲಿ ಅಲ್ಲಿ ನನ್ನದು ತಪ್ಪದ ಹಾಜರಿ. ಬಹುಶಃ ರುದ್ರಮಾತಾ ನದಿ ಕಣಿವೆ ಕೂಡ ನನ್ನ ಬರವನ್ನು ಅಷ್ಟೇ ಕರಾರುವಾಕ್ಕಾಗಿ ನಿರೀಕ್ಷಿಸುತ್ತಿತ್ತೇನೋ.

ತುಂಬ ಮುಗ್ಧ ಕನಸಿನ ದಿನಗಳವು. ಶುದ್ಧ ಭಾವನೆಗಳ ಗಟ್ಟಿ ಪರ್ವ ಅದು. ಮನಸ್ಸಿನ ಭಾವನೆಗಳನ್ನು ಅಕ್ಷರಶಃ ಪೆನ್ನು ಹಿಡಿದು ಹೊರ ಹಾಕುವುದನ್ನು ಬಿಟ್ಟರೆ, ಬೇರೆ ಯಾವ ರೀತಿಯ ಅಭಿವ್ಯಕ್ತಿಗೂ ಅವಕಾಶ ಇಲ್ಲದಂಥ ದಿನಗಳವು. ಆಗ ದೂರವಾಣಿ ನಿಜಕ್ಕೂ ದೂರವಾಣಿ ಆಗಿತ್ತು. ಕಂಪ್ಯೂಟರ್‌ಗಳು ಮಿಲಿಟರಿಯಲ್ಲೇ ಇರಲಿಲ್ಲ. ಮೊಬೈಲ್‌ ಎಂಬ ಹೆಸರೇ ತುಂಬ ಜನಕ್ಕೆ ಗೊತ್ತಿರಲಿಲ್ಲ. ನಾನು ಕೆಲಸ ಮಾಡುತ್ತಿದ್ದ ಕ್ಷಿಪಣಿ ಪಡೆ ಮೊಬೈಲ್‌ ಯುನಿಟ್‌ ಎಂಬ ಹೆಸರು ಹೊತ್ತಿದ್ದು ಬಿಟ್ಟರೆ, ಇವತ್ತಿನಂತೆ, ಮೊಬೈಲ್‌ ಎಂಬುದು ದೂರಸಂಪರ್ಕಕ್ಕೆ ಇನ್ನೊಂದು ಹೆಸರೆಂಬುದು ಅಂದು ಊಹೆಗೂ ನಿಲುಕದ ವಿಷಯವಾಗಿತ್ತು.

ರುದ್ರಮಾತಾ ನಿತ್ಯ ನನ್ನ ಬರವನ್ನು ಕಾಯುತ್ತಿತ್ತು.

ಅದೊಂದು ಆಳ ಕಣಿವೆ. ನೀರೇ ಹರಿಯದ ಬರಡು ಕಣಿವೆ. ಹಿಂದೆಂದೋ ಸಾವಿರಾರು ವರ್ಷಗಳ ಹಿಂದೆ ಇಲ್ಲಿ ನದಿಯೊಂದು ಉತ್ಕಟ ರಭಸದಿಂದ ಭೋರ್ಗರೆದಿರಬಹುದು. ಅದರ ಕುರುಹೆಂಬಂತೆ ಈ ಕಣಿವೆ ಪ್ರದೇಶ ಉಳಿದುಕೊಂಡಿತ್ತು. ಅದರ ಪಾರ್ಶ್ವಗಳು ಕಪ್ಪರಿಸಿಕೊಂಡು ಬಿದ್ದಿದ್ದವು. ಎಷ್ಟೋ ಕಡೆ ಬೀಳಲು ಸಿದ್ಧವಾಗಿದ್ದವು. ಚಂಬಲ್‌ ಕಣಿವೆ ಹೀಗೇ ಇರಬಹುದಾ ಅಂತ ನಾನು ಎಷ್ಟೋ ಸಾರಿ ಪ್ರಶ್ನಿಸಿಕೊಂಡು ಅಚ್ಚರಿಪಡುತ್ತಿದ್ದೆ.

ನನ್ನ ಜೀವನದ ಅತ್ಯಂತ ಸೊಗಸಾದ ಸೂರ್ಯಾಸ್ತಗಳನ್ನು ಭುಜ್‌ನ ಆ ನೀರವ ಕಣಿವೆ ಪ್ರದೇಶದಲ್ಲಿ ನೋಡಿದ್ದೇನೆ. ಹರ್ಷಪಟ್ಟಿದ್ದೇನೆ. ಗೊತ್ತಿರದ ವ್ಯಾಕುಲತೆಗೆ ಪಕ್ಕಾಗಿ ಅತ್ತಿದ್ದೇನೆ. ಆಗಷ್ಟೇ ಅಲ್ಲ, ಈಗ ಕೂಡ ನನ್ನದು ಮೆದು ಕಪ್ಪುಮಣ್ಣಿನಂಥ ಮನಸ್ಸು. ಸಣ್ಣ ಸಣ್ಣ ಭಾವನೆಗಳೂ ನನ್ನನ್ನು ಆರ್ದ್ರವಾಗಿಸುತ್ತಿದ್ದವು. ಗೊತ್ತಿರದ ಭಾವಾತಿರೇಕಗಳು ಕಣ್ಣಿರಾಗಿಸುತ್ತಿದ್ದವು. ದಾರಿ ಗೊತ್ತಿರದ, ಪ್ರೀತಿಗಾಗಿ ಹಂಬಲಿಸುವ ಶುದ್ಧ ಹರೆಯದ ಮನಸ್ಸದು. ಅಲ್ಲಿ ಆದರ್ಶಗಳಿದ್ದವು, ಅಪಾರ ಕನಸುಗಳಿದ್ದವು. ಯಾವ ಪ್ರಲೋಭನೆಗೂ ಪಕ್ಕಾಗದ ಗಟ್ಟಿತನ ಹೊಂದಿದ್ದವು ಅವು.

ಅಂಥ ರುದ್ರಮಾತಾ ಕಣಿವೆಯ ಆಕರ್ಷಣೆ ಎಷ್ಟಿತ್ತೆಂದರೆ, ಭುಜ್‌ನ ಕೊರೆಯುವ ಚಳಿ, ಆವಿಯಾಗಿಸುವ ಬಿಸಿಲನ್ನೂ ಲೆಕ್ಕಿಸದೇ ಆರು ಕಿಮೀ ಓಡುತ್ತಾ ಒಬ್ಬನೇ ಅಲ್ಲಿಗೆ ಹೋಗಿ ಕೂಡುತ್ತಿದ್ದೆ. ಕುಸಿಯಲು ಸಿದ್ಧವಾದಂತಿದ್ದ ಕಣಿವೆ ಅಂಚಿಗೆ ಹೋಗಿ ಮೌನವಾಗಿ ಸೂರ್ಯಾಸ್ತ ದಿಟ್ಟಿಸುತ್ತಿದ್ದೆ. ನನ್ನ ವ್ಯಾಕುಲತೆ ನೋಡಿ, ಹೋಗಲು ಮನಸ್ಸಿಲ್ಲದವನಂತೆ ಸೂರ್ಯ ನಿಧಾನವಾಗಿ ಮುಳುಗುತ್ತಿದ್ದ. ಮುಳುಗುವ ಸೂರ್ಯ ಅಷ್ಟು ದೊಡ್ಡ ಗಾತ್ರದಲ್ಲಿರುತ್ತಾನೆ ಎಂಬುದನ್ನು ಅಲ್ಲಿ ಬಿಟ್ಟು ಬೇರೆಲ್ಲೂ ನಾನು ಇದುವರೆಗೆ ಕಂಡಿಲ್ಲ. ಒಂದು ದೊಡ್ಡ ಹಳೆಯ ಛತ್ರಿಯಗಲದ ಸೂರ್ಯ ಅರೆಮನಸ್ಸಿನಿಂದ ಮುಳುಗುವ ಚಂದವೇ ಚಂದ. ಸೂರ್ಯನನ್ನು ಹಾಯ್ದು ಹಾರುವ ಹಕ್ಕಿಗಳನ್ನು ನೋಡುತ್ತ, ಮಸುಕು ಕತ್ತಲಾಗುವವರೆಗೆ ಸುಮ್ಮನೇ ಕೂತಿರುತ್ತಿದ್ದೆ. 


ನಂತರ ನಿಧಾನವಾಗಿ ಎದ್ದು ಮೈಲುಗಟ್ಟಲೇ ಬೋಳಾಗಿ ಮಲಗಿದ್ದ ಭುಜ್‌ನ ಕುರುಚಲು ಕಾಡನ್ನು ಹಾಯ್ದು ಅಚ್ಚುಕಟ್ಟಾದ ಹೆದ್ದಾರಿಯವರೆಗೆ ನಡೆದುಕೊಂಡು ಬರುತ್ತಿದ್ದೆ. ಅಲ್ಲಿಂದ ನಮ್ಮ ಬ್ಯಾರಕ್‌ನವರೆಗೆ ನಿಧಾನಗತಿಯ ಓಟ. ಬ್ಯಾರಕ್‌ ತಲುಪುವ ಹೊತ್ತಿಗೆ ಕತ್ತಲಾಗಿರುತ್ತಿತ್ತು.

ಏಕೋ ಇತ್ತೀಚೆಗೆ ಭುಜ್‌ನ ಸೂರ್ಯಾಸ್ತ ಪದೆ ಪದೆ ನೆನಪಾಗತೊಡಗಿದೆ. ಅಲ್ಲಿ ಕಂಡ ತಾಜಾ ಕನಸುಗಳು ಮತ್ತೆ ಮತ್ತೆ ಕಾಡತೊಡಗಿವೆ. ಮೊಬೈಲ್‌ ಇರದ, ಕಂಪ್ಯೂಟರ್‌ ಹೆಸರು ಚಾಲ್ತಿಗೆ ಬಾರದ ಆ ದಿನಗಳ ಅಪ್ಪಟ ತಾಜಾತನ ಮತ್ತೆ ಮತ್ತೆ ನೆನಪಾಗುತ್ತದೆ. ಹೊಸ ಕನಸುಗಳನ್ನು ಕಾಣಬೇಕು. ನನ್ನೆಲ್ಲ ನಿನ್ನೆಗಳನ್ನು ಮರೆತು, ಕಾಣದ ನಾಳೆಗಳ ತಾಜಾತನ ಅನುಭವಿಸಬೇಕೆಂಬ ಉತ್ಕಟ ಹಂಬಲ ಕೊರೆಯತೊಡಗಿದೆ.

ಅಂಥ ತಾಜಾ ನಾಳೆಗಳನ್ನು ನಾನು ಕಾಣುತ್ತೇನಾ? ಅಥವಾ ಗೊತ್ತಿರುವ ಹಳೆಯ ದಾರಿಯ ಮೆದು ಆಕರ್ಷಣೆಗಳಿಗೇ ಈಡಾಗುತ್ತೇನಾ ಎಂಬ ಗೊಂದಲದ ಕವಲು ದಾರಿಯಲ್ಲಿ ಬಂದು ನಿಂತಿದ್ದೇನೆ ಈಗ.

ಎತ್ತ ಹೋಗಲಿ ನಾನು? ಬರೀ ಗೊಂದಲ.

- ಚಾಮರಾಜ ಸವಡಿ

ಕರ್ನಾಟಕ ಏಕೀಕರಣ

1 Nov 2010

2 ಪ್ರತಿಕ್ರಿಯೆ

ಮೂವತ್ತು ಜಿಲ್ಲೆಗಳು, ೧೭೫ ತಾಲ್ಲೂಕುಗಳು, ೨೭,೦೨೮ ಕಂದಾಯ ಗ್ರಾಮಗಳು, ಆರು ಕೋಟಿ ಜನ, ೧,೯೧,೧೯೧ ಚದರ ಕಿಮೀ ವಿಸ್ತೀರ್ಣ, ಒಂದು ರಾಜ್ಯ-

ಅದು ಕರ್ನಾಟಕ.

ಇವತ್ತು ಯಾವುದನ್ನು ನಾವು ವಿಶಾಲ ಕರ್ನಾಟಕ, ಅಖಂಡ ಕರ್ನಾಟಕ ಎಂದು ಕರೆಯುತ್ತೇವೆಯೋ ಅದು ಐದೂವರೆ ದಶಕಗಳ ಹಿಂದೆ ಸುಮಾರು ೨೦ ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿತ್ತು. ಕರ್ನಾಟಕ ಎಂಬುದು ಅಸ್ತಿತ್ವದಲ್ಲೇ ಇರಲಿಲ್ಲ ಎಂದರೆ ಅಚ್ಚರಿಯಾಗುತ್ತಿದೆಯೆ?

ಕನ್ನಡ ಮಾತನಾಡುವ ಜನರೆಲ್ಲ ಒಂದೇ ಪ್ರದೇಶಕ್ಕೆ ಸೇರಬೇಕೆಂಬ ಕನಸು ಮೊಳೆತಾಗ ಪರಿಸ್ಥಿತಿ ಹೇಗಿತ್ತೆಂದರೆ, ನಮ್ಮಲ್ಲಿ ಸ್ವಂತಿಕೆ ಎಂಬುದೇ ಇರಲಿಲ್ಲ. ಇದು ನಮ್ಮ ನೆಲ ಎಂದು ಹೇಳಿಕೊಳ್ಳಲು ಮೈಸೂರು ಸಂಸ್ಥಾನ ಹೊರತುಪಡಿಸಿ ಬೇರೆ ನಿರ್ದಿಷ್ಟ ಪ್ರದೇಶವೇ ಇದ್ದಿಲ್ಲ. ಉಳಿದ ಪ್ರಾಂತ್ಯಗಳ ಆಡಳಿತದಲ್ಲಿ ಕನ್ನಡ, ಕನ್ನಡಿಗರಿಗೆ ಪ್ರಾಧಾನ್ಯತೆ ಇದ್ದಿಲ್ಲ. ಭಾಷೆ ಅಷ್ಟೇ ಅಲ್ಲ, ಪ್ರಾದೇಶಿಕ ಪ್ರಗತಿಯಲ್ಲಿ ಕೂಡ ಅಸಮಾನತೆ ಇತ್ತು. ಕನ್ನಡಿಗರು ಪರಕೀಯರಂತೆ ಜೀವನ ನಡೆಸುವ ಅಸಹನೀಯ ಪರಿಸ್ಥಿತಿ ಇತ್ತು.

ಪ್ರಾತಃಸ್ಮರಣೀಯರು

ಈ ಸಂದರ್ಭದಲ್ಲಿ ಕನ್ನಡದ ಪರವಾಗಿ ಕೆಲಸ ಮಾಡಿದ ಕೆಲ ಮಹನೀಯರನ್ನು ನೆನೆಯಲೇಬೇಕು. ಸರ್ ವಾಲ್ಟರ್ ಎಲಿಯಟ್, ಸರ್ ಥಾಮಸ್ ಮನ್ರೋ, ಜಾನ್ ಎ. ಡನ್‌ಲಪ್, ಗ್ರೀನ್ ಹಿಲ್, ಆರ್. ಗ್ರಾಂಟ್, ಡಬ್ಲ್ಯು.ಎ. ರಸೆಲ್, ಜೆ.ಎಫ್. ಫ್ಲೀಟ್‌ರಂತಹ ಬ್ರಿಟಿಷ್ ಅಧಿಕಾರಿಗಳು ಕನ್ನಡ ಕಟ್ಟುವ ಕೆಲಸ ಮಾಡಿದರು. ಅವರಿಗೆ ಕೈ ಜೋಡಿಸಿದ್ದು ಡೆಪ್ಯುಟಿ ಚೆನ್ನಬಸಪ್ಪನವರಂತಹ ಕನ್ನಡಿಗ ಅಧಿಕಾರಿ. ಜೊತೆಗೆ, ರಾ.ಹ. ದೇಶಪಾಂಡೆ, ರೊದ್ದ ಶ್ರೀನಿವಾಸರಾವ್, ಆಲೂರು ವೆಂಕಟರಾವ್ ಮುಂತಾದ ಹಿರಿಯರು ಕನ್ನಡ ಮಾತನಾಡುವ ಜನರೆಲ್ಲರನ್ನೂ ಹೊಂದಿರುವ ಒಂದು ಪ್ರಾಂತ್ಯ ರಚನೆಯಾಗಬೇಕೆಂದು ಕನಸು ಕಂಡರು.

ಕರ್ನಾಟಕ ಏಕೀಕರಣದ ಕನಸು ಮೊಳೆತಿದ್ದು ಹೀಗೆ. ಜೊತೆಗೆ, ಇಂಥದೊಂದು ಕನಸು ಮೊಳೆಯಲು ಕೆಲ ಐತಿಹಾಸಿಕ ಘಟನೆಗಳೂ ಕಾರಣವಾಗಿವೆ.

೧೯೦೫ರ ಆಗಸ್ಟ್ ೧೬ರಂದು ಆಗಿನ ಬ್ರಿಟಿಷ್ ಸರ್ಕಾರ ಬಂಗಾಳ ರಾಜ್ಯದ ವಿಭಜನೆಗೆ ಮುಂದಾಯಿತು. ಇದನ್ನು ಪ್ರತಿಭಟಿಸಿದ ಬಂಗಾಳಿಗಳು ‘ವಂಗಭಂಗ’ ಎಂದು ದೊಡ್ಡ ಚಳವಳಿಯನ್ನೇ ರೂಪಿಸಿದರು. ಹೋರಾಟ ತೀವ್ರಗೊಂಡಾಗ, ಮಣಿದ ಬ್ರಿಟಿಷ್ ಸರ್ಕಾರ ೧೯೧೨ರಲ್ಲಿ ಬಂಗಾಳವನ್ನು ಪುನಃ ಒಂದು ಮಾಡಿತು. ಕನ್ನಡಿಗರನ್ನು ಒಂದೆಡೆ ಸೇರಿಸುವ ಕೆಲ ಪ್ರಾತಃಸ್ಮರಣೀಯರಿಗೆ ಈ ಘಟನೆ ದೊಡ್ಡ ಪ್ರೇರಣೆಯಾಯಿತು.

ಕರ್ನಾಟಕ ವಿದ್ಯಾವರ್ಧಕ ಸಂಘ

ಮುಂದೆ ಕ್ರಮೇಣ, ಕರ್ನಾಟಕ ಏಕೀಕರಣಕ್ಕೆ ಈ ನಾಯಕರು ಆಗ್ರಹಿಸತೊಡಗಿದರು. ಕರ್ನಾಟಕ ರೂಪುಗೊಳ್ಳಲು ಕಾರಣರಾದವರ ಪೈಕಿ ಒಬ್ಬರಾದ ರಾ.ಹ. ದೇಶಪಾಂಡೆ ಹಾಗೂ ಕೆಲವು ಸಮಾನ ಮನಸ್ಕರು ಒಂದೆಡೆ ಸೇರಿದರು. ಕನ್ನಡ ಭಾಷೆಯ ದುಃಸ್ಥಿತಿ ದೂರ ಮಾಡಲೆಂದು ೨೦-೭-೧೮೯೦ರಲ್ಲೇ ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಧಾರವಾಡದಲ್ಲಿ ಸ್ಥಾಪಿಸಿದ್ದರು.

ಕನ್ನಡದಲ್ಲಿ ಶಿಕ್ಷಣ ಪ್ರಸಾರಕ್ಕೆ ಪ್ರೋತ್ಸಾಹ, ಪ್ರಾಚೀನ ಕನ್ನಡ ಕೃತಿಗಳ ಸಂಪಾದನೆ ಮತ್ತು ಪ್ರಕಟಣೆ, ಕನ್ನಡದಲ್ಲಿ ಸ್ವತಂತ್ರ ಕೃತಿಗಳ ರಚನೆ, ಉತ್ತಮ ಮತ್ತು ಉಪಯುಕ್ತ ಕೃತಿಗಳ ಅನುವಾದ ಮತ್ತು ಪ್ರಕಟಣೆಗೆ ಪ್ರೋತ್ಸಾಹ, ಗ್ರಂಥ ಭಂಡಾರಗಳ ಸ್ಥಾಪನೆ ಮತ್ತು ನಿರ್ವಹಣೆಗೆ ನೆರವು ನೀಡುವುದು ಸಂಸ್ಥೆಯ ಮೂಲ ಉದ್ದೇಶವಾಗಿತ್ತು.

ಈ ಉದ್ದೇಶಗಳನ್ನು ಸಾಧಿಸುವುದರ ಜೊತೆಗೆ ಸಂಘ ೧೮೯೬ರಲ್ಲಿ ’ವಾಗ್ಭೂಷಣ’ ಎಂಬ ಮಾಸಪತ್ರಿಕೆ ಆರಂಭಿಸಿತು. ಆ ಮೂಲಕ ವಿವಿಧ ಲೇಖಕರ ಪ್ರಬುದ್ಧ ಲೇಖನಗಳನ್ನು ಪ್ರಕಟಿಸಿ, ಚಿಂತನೆಗಳ ವಿನಿಮಯಕ್ಕೆ ನೆರವಾಯಿತು. ಲೇಖಕರನ್ನು ಬೆಳೆಸಿದ ಸಂಘ, ಕನ್ನಡ ಗ್ರಂಥಗಳ ಭಾಷೆಯಲ್ಲಿ ಏಕರೂಪತೆ ಇರಬೇಕೆಂಬ ಕಾರಣದಿಂದ ೧೯೦೭ರ ಜೂನ್ ತಿಂಗಳ ಮೊದಲ ವಾರದಲ್ಲಿ ಧಾರವಾಡದಲ್ಲಿ ಅಖಿಲ ಕರ್ನಾಟಕ ಗ್ರಂಥಕರ್ತರ ಮೊದಲ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿತು.

ಕನ್ನಡ ಸಾಹಿತ್ಯ ಪರಿಷತ್ತು

ಎರಡನೆಯ ಸಮ್ಮೇಳನವನ್ನು ಮೈಸೂರು ಸರ್ಕಾರದ ಶಿಕ್ಷಣ ಇಲಾಖೆ ಬೆಂಗಳೂರಿನಲ್ಲಿ ನಡೆಸಬೇಕಾಗಿತ್ತು. ಅದು ಸಾಧ್ಯವಾಗಲಿಲ್ಲ. ಮೂರನೆಯ ಸಮ್ಮೇಳನವನ್ನಾದರೂ ಬೆಂಗಳೂರಿನಲ್ಲಿ ನಡೆಸಬೇಕು ಎಂಬ ಪ್ರಯತ್ನದ ಫಲವಾಗಿ ೧೯೧೫ರಲ್ಲಿ ಸ್ಥಾಪನೆಯಾದದ್ದು ಕರ್ನಾಟಕ ಸಾಹಿತ್ಯ ಪರಿಷತ್ತು. ನಂತರ ಇದು ಕನ್ನಡ ಸಾಹಿತ್ಯ ಪರಿಷತ್ತು ಎಂದು ಹೆಸರು ಬದಲಾಯಿಸಿಕೊಂಡಿತು. ಸಾಹಿತ್ಯ ಸಮ್ಮೇಳನಗಳ ಸಂದರ್ಭದಲ್ಲಿ ಕರ್ನಾಟಕ ಏಕೀಕರಣದ ಪರವಾಗಿ ದನಿ ಎತ್ತುವ ಮೂಲಕ ಏಕೀಕರಣದ ಬೇಡಿಕೆಗೆ ಪರಿಷತ್ತು ವೇದಿಕೆ ಕಲ್ಪಿಸಿತು.

ಕರ್ನಾಟಕ ಕುಲ ಪುರೋಹಿತ

ಎಲ್ಲರಿಗಿಂತ ಪ್ರಮುಖ ಸ್ಥಾನದಲ್ಲಿ ನಿಲ್ಲುವ ವ್ಯಕ್ತಿ ಎಂದರೆ ಆಲೂರು ವೆಂಕಟರಾಯರು. ಕರ್ನಾಟಕ ಏಕೀಕರಣದ ಬಗ್ಗೆ ಕನಸು ಕಂಡಿದ್ದಲ್ಲದೇ ಅದರ ಸಾಕಾರಕ್ಕೆ ದುಡಿದ ಹಿರಿಯ ಜೀವ ಇದು. ಆದ್ದರಿಂದಲೇ ಅವರು ಕರ್ನಾಟಕ ’ಕುಲ ಪುರೋಹಿತ’ ಎನಿಸಿಕೊಂಡರು. ‘ಕರ್ನಾಟಕದ ಗತವೈಭವ’ ಗ್ರಂಥ ರಚಿಸಿದ ಆಲೂರು ವೆಂಕಟರಾಯರು, ’ಕರ್ನಾಟಕ ಹೊರಗಟ್ಟದ ಹೊರತು ನಾನು ಕರ್ನಾಟಕವನ್ನು ಬಿಡುವುದಿಲ್ಲ’ ಎಂಬ ಪ್ರತಿಜ್ಞೆ ಮಾಡಿದ್ದರು. ಕರ್ನಾಟಕ ಏಕೀಕರಣದ ಪರವಾಗಿ ನಿರಂತರ ಹೋರಾಟ ನಡೆಸಿದ ಮಹಾನ್ ವ್ಯಕ್ತಿ ಇವರು.

ಆಲೂರು ವೆಂಕಟರಾಯರು, ಗದಿಗೆಯ್ಯ ಹೊನ್ನಾಪುರಮಠ ಮತ್ತು ಕಡಪಾ ರಾಘವೇಂದ್ರರಾಯರು ಸೇರಿ ೧೯೧೬ರಲ್ಲಿ ಸ್ಥಾಪಿಸಿದ ’ಕರ್ನಾಟಕ ಸಭೆ’ ಕರ್ನಾಟಕ ಏಕೀಕರಣದ ಬೇಡಿಕೆಗೆ ಇಂಬು ಕೊಟ್ಟಿತು. ರಾಜಕೀಯ ಬೆಂಬಲವನ್ನೂ ಪಡೆದಿದ್ದ ಕರ್ನಾಟಕ ಸಭೆಯ ಏಕೀಕರಣದ ವಿಷಯದಲ್ಲಿ ಹಲವಾರು ಹೋರಾಟಗಳನ್ನು ನಡೆಸಿತು. ಇದರ ಪ್ರೇರಣೆಯಿಂದ ನಾಡಹಬ್ಬಗಳು ನಡೆದವು. ಸಕ್ಕರಿ ಬಾಳಾಚಾರ್ಯ, ಡಾ. ಯು. ರಾಮರಾವ್, ಮುದವೀಡು ಕೃಷ್ಣರಾವ್, ಕಡಪಾ ರಾಘವೇಂದ್ರ ರಾವ್, ಮಂಗಳವೇಡೆ ಶ್ರೀನಿವಾಸರಾವ್ ಮುಂತಾದ ಹಿರಿಯರು ಸಭೆಯ ಜೊತೆ ಗುರುತಿಸಿಕೊಂಡಿದ್ದರು.

೧೯೧೮ರಲ್ಲೇ ಭಾರತದಲ್ಲಿ ಭಾಷಾವಾರು ಪ್ರಾಂತ ರಚನೆಯ ಸಂಬಂಧ ಮಾಂಟೆಗ್ಯೂ-ಚೆಲ್ಮ್ಸ್‌ಫರ್ಡ್ ಸಮಿತಿ ನೇಮಕಗೊಂಡಿತ್ತು. ಆ ಸಮಿತಿಯು ದೇಶವನ್ನು ಭಾಷಾವಾರು ಪ್ರಾಂತ್ಯಗಳನ್ನಾಗಿ ವಿಭಾಗಿಸುವುದು ಅಗತ್ಯ ಎಂದು ಶಿಫಾರಸು ಮಾಡಿತು. ಇದನ್ನು ಆಗಿನ ಬ್ರಿಟಿಷ್ ಸರ್ಕಾರ ಕೂಡ ಒಪ್ಪಿಕೊಂಡಿತ್ತು.
 
೧೯೨೦ರಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದ ಕಾಂಗ್ರೆಸ್ ಮಹಾಧಿವೇಶನ ಏಕೀಕರಣದ ನಿಟ್ಟಿನಲ್ಲಿ ಒಂದು ಮಹತ್ವದ ವೇದಿಕೆ. ಕರ್ನಾಟಕ ಪ್ರತಿನಿಧಿಗಳ ಒತ್ತಡಕ್ಕೆ ಮಣಿದು, ಬ್ರಿಟಿಷ್ ಆಳ್ವಿಕೆಗೆ ಸೇರಿದ್ದ ಕನ್ನಡ ಭಾಷಿಕ ಪ್ರದೇಶಗಳನ್ನು ಕರ್ನಾಟಕ ಕಾಂಗ್ರೆಸ್ ಸಮಿತಿಯ ವ್ಯಾಪ್ತಿಗೆ ಸೇರಿಸಲಾಯಿತು. ಆಗ ತಲೆ ಎತ್ತಿದ್ದು ಬಳ್ಳಾರಿ ಜಿಲ್ಲೆಯನ್ನು ಯಾವ ಪ್ರದೇಶಕ್ಕೆ ಸೇರಿಸಬೇಕೆಂಬುದು. ಈ ಸಮಸ್ಯೆ ನಿವಾರಿಸಲು ನೇಮಿಸಲ್ಪಟ್ಟ ಕೇಳ್ಕರ್ ಅವರ ವರದಿಯ ಪ್ರಕಾರ, ಆಲೂರು, ಆದವಾನಿ ಮತ್ತು ರಾಯದುರ್ಗ ತಾಲ್ಲೂಕುಗಳನ್ನು ಹೊರತುಪಡಿಸಿ, ಉಳಿದ ಬಳ್ಳಾರಿ ಜಿಲ್ಲೆಯು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವ್ಯಾಪ್ತಿಗೆ ಸೇರಿತು.

ಏಕೀಕರಣಕ್ಕೆ ವೇದಿಕೆಯಾದ ಬೆಳಗಾವಿ ಅಧಿವೇಶನ

೧೯೨೪ರಲ್ಲಿ ಬೆಳಗಾವಿಯಲ್ಲಿ ಮಹಾತ್ಮಾ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್‌ನ ಮಹಾಧಿವೇಶನದ ಸಂದರ್ಭದಲ್ಲಿ ಕರ್ನಾಟಕ ಏಕೀಕರಣಕ್ಕೆ ವಿಶೇಷ ಚಾಲನೆ ದೊರೆಯಿತು. ಕರ್ನಾಟಕ ಸಭೆಯ ಮೊದಲ ಪರಿಷತ್ತು ಬೆಳಗಾವಿಯಲ್ಲಿ ೨೫-೧೨-೧೯೨೪ರಂದು, ಸರ್ ಸಿದ್ದಪ್ಪ ಕಂಬಳಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಆ ಸಂದರ್ಭದಲ್ಲಿ ಹುಯಿಲಗೋಳ ನಾರಾಯಣರಾಯರು ರಚಿಸಿದ ’ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಗೀತೆಯನ್ನು ಮೊದಲ ಬಾರಿಗೆ ಹಾಡಲಾಯಿತು.

ಮದ್ರಾಸ್ ಮತ್ತು ಮುಂಬಯಿ ಆಧಿಪತ್ಯದ ವಿಧಾನ ಸಭೆಗಳಲ್ಲೂ ಕರ್ನಾಟಕ ಏಕೀಕರಣದ ವಿಷಯ ಪ್ರಸ್ತಾಪಿತಗೊಂಡಿತು. ಮದ್ರಾಸ್ ವಿಧಾನ ಸಭೆಯಲ್ಲಿ ಎ. ರಂಗನಾಥ ಮೊದಲಿಯಾರ್, ಜೆ.ಎ. ಸಲ್ಡಾನ, ಎ.ಬಿ. ಶೆಟ್ಟಿ, ಡಾ. ನಾಗನಗೌಡ ಮುಂತಾದ ಸದಸ್ಯರು ಕರ್ನಾಟಕ ಏಕೀಕರಣವನ್ನು ಬೆಂಬಲಿಸಿದರೂ ಸರ್ಕಾರ ಅದನ್ನು ತಿರಸ್ಕರಿಸಿತು. ಮುಂಬಯಿ ವಿಧಾನ ಸಭೆಯಲ್ಲಿ ೧೯೧೯ರಲ್ಲಿ ವಿ.ಎನ್. ಜೋಗ್ ಕರ್ನಾಟಕ ಪ್ರಾಂತ ರಚನೆಗೆ ಕೋರಿ ಠರಾವು ಮಂಡಿಸಿದ್ದರು. ಆದರೆ, ಅದು ತಿರಸ್ಕೃತವಾಯಿತು. ೧೯೨೬ರಲ್ಲಿ ಸರ್ ಸಿದ್ದಪ್ಪ ಕಂಬಳಿ ಪುನಃ ಕರ್ನಾಟಕ ಪ್ರಾಂತ ರಚನೆಗೆ ಠರಾವು ಮಂಡಿಸಿದರಾದರೂ, ಏಕೀಕರಣಕ್ಕೆ ಕನ್ನಡಿಗರ ಬೆಂಬಲವಿಲ್ಲ ಎಂಬ ಕಾರಣ ನೀಡಿ ಸರ್ಕಾರ ಠರಾವನ್ನು ತಿರಸ್ಕರಿಸಿತು.

ಕೊನೆಗೆ ಮುಹೂರ್ತ ಕೂಡಿ ಬಂದಿದ್ದು ೧೯೩೮ರ ಮೇ ತಿಂಗಳ ಮೊದಲ ವಾರ. ಆಗ ನಡೆದ ಮುಂಬಯಿ ಶಾಸನ ಸಭೆ ಕರ್ನಾಟಕ ಏಕೀಕರಣ ಗೊತ್ತುವಳಿಯನ್ನು ಸ್ವೀಕರಿಸಿತು. ಚರ್ಚೆಯಲ್ಲಿ ಪಾಲ್ಗೊಂಡಿದ್ದ ಬಿ.ಜಿ. ಖೇರ್, ಸರ್ ಸಿದ್ದಪ್ಪ ಕಂಬಳಿ, ವಿ.ಎನ್. ಜೋಗ್ ಗೊತ್ತುವಳಿಯನ್ನು ಅನುಮೋದಿಸಿದರು. ಆದರೆ, ಎರಡನೇ ಜಾಗತಿಕ ಯುದ್ಧ ಪ್ರಾರಂಭವಾಗಿದ್ದರಿಂದ ಭಾಷಾವಾರು ಪ್ರಾಂತ ರಚನೆ ಆಗಲಿಲ್ಲ.

ಸಮಗ್ರ ಕರ್ನಾಟಕದ ಕನಸು

೨೫-೧೨-೧೯೪೪ರಂದು ಧಾರವಾಡದಲ್ಲಿ ೯ನೆಯ ಕರ್ನಾಟಕ ಏಕೀಕರಣ ಪರಿಷತ್ತು ಸಮಾವೇಶದಲ್ಲಿ ಸ್ವಾಗತಾಧ್ಯಕ್ಷರಾಗಿದ್ದ ಎಸ್.ಎಸ್. ಮಳೀಮಠ್, ಕರ್ನಾಟಕ ಏಕೀಕರಣವೆಂದರೆ, ಬ್ರಿಟಿಷ್ ಕರ್ನಾಟಕ ಪ್ರಾಂತಗಳಷ್ಟೇ ಅಲ್ಲ, ಸಂಸ್ಥಾನಗಳೂ ಸೇರಿದಂತೆ ಸಮಗ್ರ ಕರ್ನಾಟಕದ ಏಕೀಕರಣ ಎಂದು ಸಾರಿದರು.

೩೧-೮-೧೯೪೬ರಂದು ದಾವಣಗೆರೆಯಲ್ಲಿ ನಡೆದ ಕರ್ನಾಟಕಸ್ಥರ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಮುಂಬಯಿ ಆಧಿಪತ್ಯದ ಕೃಷಿ ಮಂತ್ರಿ ಎಂ.ಪಿ. ಪಾಟೀಲರು ’ಭಾರತಕ್ಕೆ ಸ್ವಾತಂತ್ರ್ಯವು ಹೇಗೋ ಹಾಗೆ ಕರ್ನಾಟಕಕ್ಕೆ ಸ್ವಾಯತ್ತತೆ’ ಎಂದು ಘೋಷಿಸಿದರು. ಕರ್ನಾಟಕ ಏಕೀಕರಣಕ್ಕೆ ಕೆಲವು ಸಂಸ್ಥಾನಿಕರು ಅಡ್ಡಿಯಾಗಿದ್ದಾರೆ ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಬಳ್ಳಾರಿಯ ಕೋ. ಚೆನ್ನಬಸಪ್ಪ ’ಸಾಧ್ಯವಾದರೆ ಮೈಸೂರನ್ನು ಒಳಗೊಂಡು, ಅಗತ್ಯವಾದರೆ ಅದನ್ನು ಬಿಟ್ಟು ಕರ್ನಾಟಕ ಏಕೀಕರಣವಾಗಬೇಕು’ ಎಂಬ ಗೊತ್ತುವಳಿ ಮಂಡಿಸಿದರು.

ಆದರೆ, ಕೆಂಗಲ್ ಹನುಮಂತಯ್ಯನವರು ’ಮೈಸೂರನ್ನು ಒಳಗೊಂಡು ಕರ್ನಾಟಕ ರಾಜ್ಯ ನಿರ್ಮಾಣವಾಗಬೇಕು’ ಎಂದು ಗೊತ್ತುವಳಿಗೆ ತಿದ್ದುಪಡಿ ತಂದರು. ಗೊತ್ತುವಳಿಯನ್ನು ಜಾರಿಗೆ ತರಲು ಎಂ.ಪಿ. ಪಾಟೀಲ, ಎಸ್. ನಿಜಲಿಂಗಪ್ಪ ಮತ್ತು ಕೆ.ಬಿ. ಜಿನರಾಜ ಹೆಗ್ಗಡೆ ಅವರಿದ್ದ ಸಮಿತಿ ರಚನೆಯಾಯಿತು.

ಸ್ವತಂತ್ರ ರಾಜ್ಯದತ್ತ...

ಮುಂಬಯಿ ಶಾಸನ ಸಭೆಯಲ್ಲಿ ೧-೪-೧೯೪೭ರಂದು ರೋಣದ ಅಂದಾನಪ್ಪ ದೊಡ್ಡಮೇಟಿ ಅವರು ಪ್ರತ್ಯೇಕ ಕರ್ನಾಟಕ ಪ್ರಾಂತ್ಯ ರಚನೆಗೆ ಒತ್ತಾಯಿಸಿ ಖಾಸಗಿ ಗೊತ್ತುವಳಿ ಮಂಡಿಸಿದರು. ಕೆಲವು ತಿದ್ದುಪಡಿಗಳೊಂದಿಗೆ ಗೊತ್ತುವಳಿಯು ೬೦ ಮತಗಳನ್ನು ಪಡೆದು ಸ್ವೀಕೃತವಾಯಿತು. ವಿರುದ್ಧ ಬಂದದ್ದು ಕೇವಲ ಆರು ಮತಗಳು. ಮದ್ರಾಸ್ ಶಾಸನ ಸಭೆಯಲ್ಲಿಯೂ ಡಾ. ಪಿ. ಸುಬ್ಬರಾಯನ್ ಭಾಷಾವಾರು ಪ್ರಾಂತ್ಯ ರಚನೆಯ ಸಂಬಂಧ ಮಂಡಿಸಿದ ಗೊತ್ತುವಳಿ ಸ್ವೀಕೃತವಾಯಿತು.

ಸ್ವತಂತ್ರ ಭಾರತದ ಸಂವಿಧಾನದ ರಚನೆಗೆ ಸೇರಿದ್ದ ಘಟನಾ ಸಮಿತಿಯ ಮೇಲೂ ಭಾಷಾವಾರು ಪ್ರಾಂತ್ಯ ರಚನೆಗೆ ಒತ್ತಡ ಹೆಚ್ಚಿತು. ಅಂದಿನ ಘಟನಾ ಸಮಿತಿಯ ಸಭೆಯಲ್ಲೇ ಭಾಷಾವಾರು ಪ್ರಾಂತ್ಯ ರಚನೆ ಕುರಿತು ವರದಿ ಸಿದ್ಧಪಡಿಸಲು ಉಪ ಸಮಿತಿಯೊಂದರ ರಚನೆಯಾಯಿತು.

೧೯೪೭ರ ಆಗಸ್ಟ್ ೧೫ರಂದು ಭಾರತ ಸ್ವತಂತ್ರವಾಯಿತು. ಆದರೆ, ಭಾರತ ಒಕ್ಕೂಟದ ಜೊತೆ ಮೈಸೂರು ಸಂಸ್ಥಾನ ಸೇರ್ಪಡೆಯಾಗಿದ್ದು ೧೯೪೭ರ ಅಕ್ಟೋಬರ್ ೨೪ರಂದು. ಹೈದರಾಬಾದ್ ಕರ್ನಾಟಕದ ಸೇರ್ಪಡೆ ೧೯೪೮ರ ಸೆಪ್ಟೆಂಬರ್ ೧೭ರಂದು.

ಜೂನ್ ೧೭ರಂದೇ ೧೯೪೮ರಂದೇ ಭಾಷಾವಾರು ಪ್ರಾಂತ್ಯ ರಚನೆಗೆ ಸಂಬಂಧಿಸಿದಂತೆ ವರದಿ ನೀಡಲು, ಅಲಹಾಬಾದ್ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎಸ್.ಕೆ. ಧರ್ ಅಧ್ಯಕ್ಷತೆಯಲ್ಲಿ ಆಯೋಗ ನೇಮಿಸಿತ್ತು. ಆದರೆ, ವರದಿ ಭಾಷಾವಾರು ಪ್ರಾಂತ್ಯ ರಚನೆ ವಿರುದ್ಧವಾಗಿ ಬಂತು.

ಕರ್ನಾಟಕ ಏಕೀಕರಣ ಪರಿಷತ್ತು

ನ್ಯಾಯಮೂರ್ತಿ ಧರ್ ಆಯೋಗದ ವರದಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಾದ ಸಮಿತಿಯಲ್ಲಿದ್ದ ಜವಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಪಟ್ಟಾಭಿರಾಮಯ್ಯ ಕೂಡಾ ಆಯೋಗದ ಶಿಫಾರಸುಗಳನ್ನೇ ಎತ್ತಿ ಹಿಡಿಯಿತು. ಇದನ್ನು ಖಂಡಿಸಿ ರಾಜ್ಯದ ಎಲ್ಲೆಡೆ ಸಭೆ, ಸಮಾರಂಭ ಮತ್ತು ಸಮ್ಮೇಳನಗಳು ನಡೆದವು. ಕಾಂಗ್ರೆಸ್ ನಾಯಕರಿಂದ ಕರ್ನಾಟಕ ಏಕೀಕರಣ ಸಾಧ್ಯವಾಗದು ಎಂಬ ಅಭಿಪ್ರಾಯದಿಂದ ಪಕ್ಷೇತರ ಕರ್ನಾಟಕ ಏಕೀಕರಣ ಪರಿಷತ್ತು ಸ್ಥಾಪಿತವಾಗಿ, ಏಕೀಕರಣಕ್ಕೆ ಹೊಸ ತಿರುವು ಬಂದಿತು.

ಈ ಮಧ್ಯೆ ಆಂಧ್ರ ಪ್ರಾಂತ ರಚನೆಗೆ ಒತ್ತಾಯಿಸಿ, ೧೯೫೧ರ ಆಗಸ್ಟ್‌ನಲ್ಲಿ ಪೊಟ್ಟಿ ಶ್ರೀರಾಮುಲು ತಿರುಪತಿಯಲ್ಲಿ ೩೭ ದಿನಗಳ ಉಪವಾಸ ಮಾಡಿದರು. ನಂತರ ಎರಡನೆಯ ಬಾರಿಗೆ ಆಮರಣಾಂತ ಉಪವಾಸಕ್ಕೆ ಕೈಹಾಕಿದ ಪೊಟ್ಟಿ ಶ್ರೀರಾಮುಲು, ೫೮ ದಿನಗಳ ಉಪವಾಸ ಮಾಡಿ ನಿಧನರಾದರು. ಇದರಿಂದ ಎಚ್ಚೆತ್ತ ಲೋಕಸಭೆ, ಮದರಾಸ್ ನಗರವನ್ನು ಬಿಟ್ಟು ಆಂಧ್ರ ಪ್ರಾಂತ ರಚನೆಗೆ ನಿರ್ಧರಿಸಿತು. ಬಳ್ಳಾರಿ ತಾಲ್ಲೂಕಿನ ಬಗ್ಗೆ ಸ್ಪಷ್ಟ ಅಭಿಪ್ರಾಯ ಸಲ್ಲಿಸುವಂತೆ ರಾಷ್ಟ್ರಪತಿಗಳು ಹೈದರಾಬಾದ್‌ನ ಮುಖ್ಯ ನ್ಯಾಯಾಧೀಶ ಎಲ್.ಎಸ್. ಮಿಶ್ರಾ ಅವರಿಗೆ ಜವಾಬ್ದಾರಿ ಕೊಟ್ಟಿತು.

ಆಂಧ್ರಕ್ಕಿಂತ ಕರ್ನಾಟಕದ ಪರ ೯೦ ಮನವಿಗಳು ಹೆಚ್ಚಾಗಿ ಬಂದವು. ಜೊತೆಗೆ, ಕೊನೆಯ ಘಳಿಗೆಯಲ್ಲಿ ಕರ್ನಾಟಕದ ಖ್ಯಾತ ಇತಿಹಾಸ ತಜ್ಞ ಆರ್.ಎಸ್. ಪಂಚಮುಖಿ ಅವರ ಅಭಿಪ್ರಾಯವೂ ರಾಜ್ಯದ ಪರವಾಗಿಯೇ ಬಂದಿದ್ದರಿಂದ, ಬಳ್ಳಾರಿ ತಾಲ್ಲೂಕನ್ನು ಕರ್ನಾಟಕಕ್ಕೇ ಸೇರಿಸಲು ಮಿಶ್ರಾ ಶಿಫಾರಸು ಮಾಡಿದರು.

ಹುಬ್ಬಳ್ಳಿ ಗೋಲಿಬಾರ್

ಈ ಸಂದರ್ಭದಲ್ಲೇ, ಹುಬ್ಬಳ್ಳಿಯ ಸಮೀಪದ ಅದರಗುಂಚಿಯಲ್ಲಿ, ಶಂಕರಗೌಡ ಪಾಟೀಲರು ೨೮-೩-೧೯೫೩ರಂದು ಕರ್ನಾಟಕ ಏಕೀಕರಣಕ್ಕೆ ಆಗ್ರಹಿಸಿ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದರು. ೧೯-೪-೧೯೫೩ರಂದು ಹುಬ್ಬಳ್ಳಿಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿ ಸಮಿತಿಯ ಸಭೆ ನಡೆಯಲಿದ್ದ ವಿಷಯ ತಿಳಿದ ಕರ್ನಾಟಕ ಏಕೀಕರಣ ಕಾರ್ಯಕರ್ತರು ಬೆಳಗಿನಿಂದಲೇ ಗುಳಕವ್ವನ ಕಟ್ಟೆ ಮೈದಾನದಲ್ಲಿ ಗುಂಪುಗೂಡಿದರು. ಕಾಂಗ್ರೆಸ್ ನಾಯಕರಿಂದ ರಾಜೀನಾಮೆ ಪಡೆಯುವುದೇ ಅವರ ಉದ್ದೇಶವಾಗಿತ್ತು. ಪುರಸಭಾ ಭವನಕ್ಕೆ ಕಾಂಗ್ರೆಸ್ ನಾಯಕರು ಬರುತ್ತಿದ್ದಂತೆಯೇ ಅವರಿಗೆ ಅರಿಶಿನ ಹಚ್ಚಿ, ಕುಂಕುಮವಿಟ್ಟು, ಬಳೆ ತೊಡಿಸಿ ರಾಜೀನಾಮೆಗೆ ಒತ್ತಾಯಿಸುತ್ತಿದ್ದರು.

ಮೊದಮೊದಲು ಶಾಂತಿಯುತವಾಗಿದ್ದ ಪ್ರತಿಭಟನೆ ಕ್ರಮೇಣ ಉಗ್ರವಾಯಿತು. ಗುದ್ಲೆಪ್ಪ ಹಳ್ಳಿಕೇರಿ ಅವರ ಜೀಪಿಗೆ ಬೆಂಕಿ ಹಚ್ಚಿದರು. ಪೊಲೀಸರ ನಿಯಂತ್ರಣ ತಪ್ಪಿದಾಗ ಲಾಠೀ ಚಾರ್ಜ್ ಅಲ್ಲದೆ, ಗೋಲೀಬಾರ್ ಕೂಡಾ ಮಾಡಲಾಯಿತು. ಗಲಭೆಗೆ ಕಾರಣಕರ್ತರೆಂದು ಬಂಧಿತರಾದವರ ವಿಚಾರಣೆ ನಡೆಯಿತು. ಆಗ ಸ್ಥಾನಬದ್ಧತಾ ಕಾನೂನಿನ ಅಡಿಯಲ್ಲಿ ಬಂಧಿತರಾಗಿದ್ದವರ ಪರ ವಾದಿಸಿದವರು ಮಾಜಿ ಮುಖ್ಯಮಂತ್ರಿ ದಿ. ಎಸ್.ಆರ್. ಬೊಮ್ಮಾಯಿ.

ಏಕೀಕರಣಕ್ಕೆ ಹೆಚ್ಚಿದ ಒತ್ತಡ

ಹುಬ್ಬಳ್ಳಿ ಗಲಭೆಯ ನಂತರ, ಮಿಶ್ರಾ ವರದಿ ಸ್ವೀಕೃತವಾಗಿ ಆಂಧ್ರ ಪ್ರದೇಶದ ರಚನೆ ಖಚಿತವಾಯಿತು. ಕಾಂಗ್ರೆಸ್ ನಾಯಕರನ್ನೇ ನಂಬಿ ಕೂತರೆ ಕರ್ನಾಟಕ ಏಕೀಕರಣ ಸಾಧ್ಯವಿಲ್ಲ ಎಂಬ ಅಭಿಪ್ರಾಯವಿದ್ದ ಕಾಂಗ್ರೆಸ್ಸೇತರ ಪಕ್ಷದ ಕೆಲವು ಮುಖಂಡರು ೨೮-೫-೧೯೫೩ರಂದು ದಾವಣಗೆರೆಯಲ್ಲಿ ಸಭೆ ಸೇರಿ, ’ಕರ್ನಾಟಕ ರಾಜ್ಯ ನಿರ್ಮಾಣ ಮಾಡುವುದು ಕನ್ನಡಿಗರ ಜನ್ಮಸಿದ್ಧ ಹಕ್ಕು’ ಎಂಬ ಘೋಷಣೆಯೊಂದಿಗೆ, ಮಾಜಿ ಸಂಸದ ದಿ. ಅಳವಂಡಿ ಶಿವಮೂರ್ತಿ ಸ್ವಾಮಿ ಮತ್ತು ಕೆ.ಆರ್. ಕಾರಂತರ ನೇತೃತ್ವದಲ್ಲಿ ’ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತು’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು. ಏಕೀಕರಣ ಹೋರಾಟಕ್ಕೆ ಜನಾಂದೋಲನದ ಸ್ವರೂಪ ನೀಡುವಲ್ಲಿ ಪರಿಷತ್ತು ಯಶ್ವಸಿಯಾಯಿತು. ೧೯೫೩ರ ಅಕ್ಟೋಬರ್ ಒಂದರಂದು ಆಂಧ್ರ ಪ್ರದೇಶ ರಚನೆಯಾದ ಸಂದರ್ಭದಲ್ಲೇ ಬಳ್ಳಾರಿ ಜಿಲ್ಲೆ ಮೈಸೂರು ಸಂಸ್ಥಾನದಲ್ಲಿ ವಿಲೀನಗೊಂಡಿತು.

ಕರ್ನಾಟಕ ಏಕೀಕರಣಕ್ಕಾಗಿ ಜನಾಂದೋಲನ ಹೆಚ್ಚಿದಾಗ, ಕೇಂದ್ರ ಸರ್ಕಾರ ೨೯-೧೨-೧೯೫೩ರಂದು ರಚಿಸಿದ್ದ ಫಜಲ್ ಆಲಿ ನೇತೃತ್ವದ ರಾಜ್ಯ ಪುನರ್ವಿಂಗಡಣಾ ಆಯೋಗ ಕರ್ನಾಟಕ ರಾಜ್ಯ ರಚನೆಯ ಅಗತ್ಯತೆಯನ್ನು ಎತ್ತಿ ಹಿಡಿಯಿತು. ಅದರ ಕರಡು ವರದಿಯಲ್ಲಿ ಇಡಿಯಾಗಿ ಬಳ್ಳಾರಿ ಜಿಲ್ಲೆಯನ್ನು ಆಂಧ್ರಕ್ಕೆ ಸೇರಿಸಲು ಶಿಫಾರಸು ಮಾಡಿತ್ತು. ಅದನ್ನು ವಿರೋಧಿಸಿ, ಬಳ್ಳಾರಿ ಜಿಲ್ಲೆಯಾದ್ಯಂತ ತುಂಗಭದ್ರಾ ನದಿ ನೀರು ಹೋರಾಟ ನಡೆಯಿತು. ರಾಜ್ಯ ಪುನರ್ವಿಂಗಡಣಾ ಆಯೋಗವು ಹಿಂದಿನ ವರದಿಗಳನ್ನು ಪರಿಶೀಲಿಸಿ, ಬಂದ ಸಾವಿರಗಟ್ಟಲೆ ಮನವಿಗಳ ಅಧ್ಯಯನ ಮಾಡಿ, ಕೇಂದ್ರ ಸರ್ಕಾರಕ್ಕೆ ೧೯೫೫ರ ಅಕ್ಟೋಬರ್ ೧೦ರಂದು ತನ್ನ ವರದಿಯನ್ನು ಸಲ್ಲಿಸಿತು.

ರಾಜ್ಯ ಪುನರ್ವಿಂಗಡಣಾ ಆಯೋಗದ ವರದಿಯ ಬಗ್ಗೆ ಸಂಸತ್ತು ೧೯೫೬ರ ಜನವರಿ ೧೯ರಂದು ಚರ್ಚಿಸಿ, ೧೯೫೬ರ ಮಾರ್ಚ್ ೧೯ರಂದು ವಿಧೇಯಕ ಪ್ರಕಟಿಸಿತು. ಅದರ ಪ್ರಕಾರ ೧೯೫೬ರ ನವೆಂಬರ್ ೧ರಂದು ಕರ್ನಾಟಕ (ಆಗ ಮೈಸೂರು) ರಾಜ್ಯ ಅಸ್ತಿತ್ವಕ್ಕೆ ಬರಲಿತ್ತು. ಆಗ ಈ ಪ್ರದೇಶಗಳು ಹೊಸ ರಾಜ್ಯದಲ್ಲಿ ಸೇರ್ಪಡೆಯಾಗಬೇಕಿತ್ತು:

೧. ಇಡಿಯಾಗಿ ಮೈಸೂರು ರಾಜ್ಯ.
೨. ಮುಂಬಯಿ ರಾಜ್ಯದ ಬಿಜಾಪುರ, ಧಾರವಾಡ, ಉತ್ತರ ಕನ್ನಡ ಮತ್ತು ಬೆಳಗಾವಿ (ಚಾಂದಘಡ ತಾಲ್ಲೂಕನ್ನು ಬಿಟ್ಟು) ಜಿಲ್ಲೆಗಳು.
೩. ಹೈದರಾಬಾದ್ ರಾಜ್ಯದ ಗುಲಬರ್ಗಾ ಜಿಲ್ಲೆ (ಕೊಡಂಗಲ್ ಮತ್ತು ತಾಂಡೂರು ತಾಲ್ಲೂಕುಗಳನ್ನು ಬಿಟ್ಟು), ರಾಯಚೂರು ಜಿಲ್ಲೆ (ಆಲಂಪುರ ಮತ್ತು ಗದ್ವಾಲ್ ತಾಲ್ಲೂಕುಗಳನ್ನು ಬಿಟ್ಟು) ಮತ್ತು ಬೀದರ್ ಜಿಲ್ಲೆಯ ಬೀದರ್, ಭಾಲ್ಕಿ, ಔರಾದ್ (ಸಂತಪುರ) ಮತ್ತು ಹುಮನಾಬಾದ್ ತಾಲ್ಲೂಕುಗಳು.
೪. ಮದ್ರಾಸ್ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆ (ಕಾಸರಗೋಡು ತಾಲ್ಲೂಕು ಮತ್ತು ಅಮೀನ್ ದ್ವೀಪಗಳನ್ನು ಬಿಟ್ಟು) ಮತ್ತು ಕೊಯಮತ್ತೂರು ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕು.
೫. ಕೊಡಗು ರಾಜ್ಯ.

ಈಡೇರಿದ ಕನಸು

ವಿಜಯನಗರ ಕಾಲದವರೆಗೂ ದೊಡ್ಡ ಸಾಮ್ರಾಜ್ಯವಾಗಿದ್ದ ಕರುನಾಡು ಟಿಪ್ಪು ಸುಲ್ತಾನ್‌ನ ಮರಣದ ನಂತರ ಬ್ರಿಟಿಷರ ಒಡೆದು ಆಳುವ ನೀತಿಯಿಂದ ಹಲವಾರು ಪ್ರಾಂತ್ಯಗಳಾಗಿ ವಿಭಜನೆಯಾಗಿ ವಿವಿಧ ಭಾಷೆಗಳ ಪ್ರಾಂತ್ಯಗಳಲ್ಲಿ ಇಲ್ಲವಾಗಿತ್ತು. ಈಗ ಕನ್ನಡಿಗರನ್ನೊಳಗೊಂಡ ಪ್ರತ್ಯೇಕ ರಾಜ್ಯ ಅಸ್ತಿತ್ವಕ್ಕೆ ಬರುತ್ತದೆಂಬ ಸಂತಸದ ಜೊತೆಗೆ, ಇದಕ್ಕಾಗಿ ಹೋರಾಡಿದ ಹಿರಿಯ ಜೀವಗಳು ಹಂಬಲಿಸಿದಂತೆ, ಪೂರ್ತಿ ಏಕೀಕರಣ ಸಾಧ್ಯವಾಗಲಿಲ್ಲ.

ಏಕೆಂದರೆ, ಕಾಸರಗೋಡು ಕೈಬಿಟ್ಟಿತ್ತು. ಅಕ್ಕಲಕೋಟೆ, ಸೊಲ್ಲಾಪುರಗಳು ಹೊರಗೇ ಉಳಿದಿದ್ದವು. ನೀಲಗಿರಿ ಕೂಡಾ ದಕ್ಕಲಿಲ್ಲ. ಏಕೀಕರಣದ ನಂತರವೂ ಪ್ರಾಚೀನ ಕಾಲದಿಂದ ಇದ್ದ ಕರ್ನಾಟಕ ಎಂಬ ಹೆಸರಿನ ಬದಲಾಗಿ ಮೈಸೂರು ರಾಜ್ಯವೆಂದು ಕರೆಯಲ್ಪಟ್ಟಿತು. ಕೊನೆಗೂ, ಸಾಕಷ್ಟು ಒತ್ತಡದ ನಂತರ, ೧೯೭೩ ನವೆಂಬರ್ ೧ರಂದು ರಾಜ್ಯಕ್ಕೆ ಕರ್ನಾಟಕ ಎಂದು ಪುನರ್ ನಾಮಕರಣ ಮಾಡಲಾಯಿತು.

ಏನೇ ಆದರೂ, ಬೇರೆ ಬೇರೆ ಪ್ರಾಂತಗಳಲ್ಲಿ ಹಂಚಿಹೋಗಿದ್ದ ಕನ್ನಡಿಗರು ೧೯೫೬ರ ನವೆಂಬರ್ ೧ರಂದು ಒಂದೇ ರಾಜ್ಯದ ಆಡಳಿತ ವ್ಯಾಪ್ತಿಗೆ ಬಂದಿದ್ದು ಒಂದು ಐತಿಹಾಸಿಕ ಹೋರಾಟದ ಫಲ. ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕರ್ನಾಟಕ ಶತಮಾನಗಳ ಸಂಕೋಲೆ ಕಳೆದುಕೊಂಡು ಎಲ್ಲ ರೀತಿಯಿಂದ ಒಂದಾಯಿತು. ಏಕೀಕರಣದ ಕನಸು ಈಡೇರುವ ಮೂಲಕ, ಕನ್ನಡಿಗರ ಭಾವನಾತ್ಮಕವಾಗಿಯೂ ಒಂದಾದರು. ಸಾಂಸ್ಕೃತಿಕ ಐಕ್ಯತೆಗೂ ಇಂಬು ದೊರೆಯಿತು.

ಇಂಥದೊಂದು ಕನಸನ್ನು ನನಸು ಮಾಡಲು ಹೋರಾಡಿದ ಎಲ್ಲರ ತ್ಯಾಗ ಮತ್ತು ಬಲಿದಾನದ ಫಲ ಈ ನಮ್ಮ ಹೆಮ್ಮೆಯ ಕರ್ನಾಟಕ. ಆ ಸ್ಫೂರ್ತಿ ಅಳಿಯದಿರಲಿ. ಸಮೃದ್ಧ ಹಾಗೂ ಸ್ವಾವಲಂಬಿ ಕರ್ನಾಟಕ ಬೇಗ ಮೈದಾಳಲಿ.

ಸಿರಿಗನ್ನಡಂಗೆಲ್ಗೆ !

- ಚಾಮರಾಜ ಸವಡಿ