Showing posts with label ವೈರಾಗ್ಯ. Show all posts
Showing posts with label ವೈರಾಗ್ಯ. Show all posts

ಅನು ದಿನ, ನಿನ್ನ ನೆನೆದು ನೆನೆದು, ಮನವೂ ನಿನ್ನಲೇ ನಿಲ್ಲಲಿ...

18 Dec 2010

5 ಪ್ರತಿಕ್ರಿಯೆ
ಏಕೋ ಗೊತ್ತಿಲ್ಲ, ಮನಸ್ಸಿನ ತುಂಬ ಮಂಕು.

ಗೋಳು ಬರೆಯಬಾರದು ಅಂತ ದಿನಗಳನ್ನು ತಳ್ಳಿದ್ದಾಯ್ತು. ಮತ್ತದೇ ಬೇಸರವನ್ನು ಊರಿಗೆಲ್ಲ ಹಂಚೋದು ಸರಿಯಲ್ಲ ಅಂತ ಸುಮ್ಮನಿದ್ದಾಯ್ತು. ಆದರೆ, ಹಸಿ ನೆಲ ಹೊಕ್ಕ ಬೀಜದಂತೆ, ಬೇಸರ ಪಲ್ಲವಿಸಿ ಬೆಳೆಯುತ್ತಿದೆ. ಮತ್ತೆ ಅಲೆಮಾರಿಯಾಗುವ ಹುಚ್ಚು ಕನಸು ಮೈ ತುಂಬ.

ನನಗೆ ಗೊತ್ತು: ತುಂಬ ಜನರಿಗೆ ಇತರರ ದುಃಖಗಳ ಬಗ್ಗೆ, ನೋವಿನ ಬಗ್ಗೆ, ಅವರ ವ್ಯಥೆಯ ಬಗ್ಗೆ ಆಸಕ್ತಿ ಇರುವುದಿಲ್ಲ. ಇದ್ದರೂ ಅದು ಕೇವಲ ಕೆಲವೊಂದು ವಿಶೇಷ ಅನ್ನಬಹುದಾದ ಸಂದರ್ಭಗಳ ಬಗ್ಗೆ ಮಾತ್ರ. ನಗೆಯ ಹಿಂದೆ ಮರುಳಾದ ಮಗುವಿನಂತೆ ಈ ಜಗತ್ತು. ದುಃಖ ಅದಕ್ಕೆ ಬೇಡ. ವ್ಯಥೆ ಅದಕ್ಕೆ ಇಷ್ಟವಿಲ್ಲ. ಹೀಗಾಗಿ, ನೋವು ಹಂಚುವುದನ್ನು ನಾನು ಆದಷ್ಟು ದೂರ ತಳ್ಳುತ್ತೇನೆ.

ಆದರೆ, ಈ ಸಾರಿ ನೋವನ್ನು ಹಂಚಿಕೊಳ್ಳುತ್ತಿಲ್ಲ. ಅದನ್ನು ಹಂಚಿಕೊಳ್ಳುವುದರಲ್ಲಿ ನನಗೆ ನಂಬಿಕೆಯೂ ಇಲ್ಲ. ಇದು ನನ್ನ ದಾಖಲೆಗಾಗಿ ಮಾತ್ರ ಬರೆದುಕೊಂಡಿರುವಂಥದು. ಬ್ಲಾಗ್ ಬಿಟ್ಟರೆ ಬೇರೆ ಸಾರ್ವಜನಿಕ ಅಭಿವ್ಯಕ್ತಿ ಇಲ್ಲದ್ದರಿಂದ, ಇದನ್ನು ಇಲ್ಲಿ ಹಾಕುತ್ತಿದ್ದೇನೆ. ಇದರಾಚೆ ಓದುವ ಇಚ್ಛೆ ಇಲ್ಲದವರು, ಇಲ್ಲಿಗೇ ಮುಗಿಸಬಹುದು.

*****
ಹಿಂದೆಲ್ಲ ಒಮ್ಮೊಮ್ಮೆ ಹೀಗಾಗುತ್ತಿತ್ತು. ಇದ್ದಕ್ಕಿದ್ದಂತೆ ಮನಸ್ಸು ಮಂಕಾಗುತ್ತಿತ್ತು. ಇರುವುದೆಲ್ಲವನ್ನೂ ಬಿಟ್ಟು ದೂರ ಹೋಗುವ ಹುಚ್ಚು ಹಂಬಲ. ಇದಕ್ಕೆ ಯಾವುದೇ ಘಟನೆಯಾಗಲಿ, ಸಮಸ್ಯೆಯಾಗಲಿ, ಸಂದರ್ಭವಾಗಲಿ ಪ್ರೇರಣೆ ಆಗಿರುವುದಿಲ್ಲ. ಅದ್ಹೇಗೆ ಹುಟ್ಟುತ್ತದೋ, ಅದೆಲ್ಲಿಂದ ಒಕ್ಕರಿಸುತ್ತದೋ ಒಂದೂ ತಿಳಿಯುವುದಿಲ್ಲ. ಇರುವುದನ್ನೆಲ್ಲ ಹೀಗೇ, ಇದ್ದಕ್ಕಿದ್ದಂತೆ ಬಿಟ್ಟು ದೂರ ಹೋಗಿಬಿಡಬೇಕು. ಒಂದಷ್ಟು ದಿನ ಮಾತು ಮರೆತು ಬದುಕಬೇಕು. ಗಡಿಯಾರದ ಮುಖ ನೋಡದೇ, ಮನುಷ್ಯರ ಮುಖಗಳನ್ನು ಮರೆಮಾಚಿ, ಮಾನವ ನಿರ್ಮಿತ ವಸ್ತುಗಳಾಚೆ, ಜಗತ್ತಿನಾಚೆ ಹೋಗಿ ಇದ್ದುಬಿಡಬೇಕೆಂಬ ಹುಚ್ಚು ಹಂಬಲ. ಕಾಡುವ ಪ್ರಶ್ನೆಗಳಿಗೆ ಆ ಮೌನದಲ್ಲಿ ಉತ್ತರ ಸಿಕ್ಕೀತೆಂಬ ಆಸೆ. ಪುಸ್ತಕಗಳ ಹಂಗಿಲ್ಲದ, ಇಂಟರ್‌ನೆಟ್‌ನ ಜಾಲವಿಲ್ಲದ, ಯಾರೂ ಮಾತಾಡಿಸದ, ಯಾರಿಗೂ ಉತ್ತರ ಹೇಳಬೇಕಾದ ಅನಿವಾರ್ಯತೆ ಇರದ ಶುದ್ಧ, ನೀರವ ಜಗತ್ತಿನೊಳಗೆ ಹೋಗಿಬಿಡಬೇಕು. ನನ್ನ ಪಾಡಿಗೆ ನಾನು ಇದ್ದುಬಿಡಬೇಕು. ನೆನಪುಗಳನ್ನು ಬಿಟ್ಟು, ಕನಸುಗಳನ್ನು ಬಿಸುಟು ಒಬ್ಬನೇ ಹೋಗಿಬಿಡಬೇಕೆಂಬ ಹುಚ್ಚು ಆಸೆ.

ಕಳೆದ ಕಾಲು ಶತಮಾನದಿಂದ ಇಂಥದೊಂದು ಆಸೆ ಆಗಾಗ ಬರುತ್ತಿರುತ್ತದೆ. ತುಂಬ ಸಾರಿ ಪ್ರಶ್ನಿಸಿಕೊಂಡಿದ್ದೇನೆ: ಇಂಥದೊಂದು ಹುಚ್ಚು ಯಾಕೆ ಬರುತ್ತದೆ ಅಂತ. ಉತ್ತರ ಸಿಕ್ಕಿಲ್ಲ. ಒಮ್ಮೆ ಹೋಗಿ ನೋಡು, ಉತ್ತರ ಸಿಕ್ಕರೂ ಸಿಗಬಹುದು ಎನ್ನುತ್ತದೆ ಒಳಮನಸ್ಸು. ನಂಗೊತ್ತು, ನನ್ನ ಒಳಮನಸ್ಸು ನನ್ನನ್ನು ಇದುವರೆಗೆ ವಂಚಿಸಿಲ್ಲ, ಸುಳ್ಳು ಹೇಳಿಲ್ಲ, ಏನನ್ನೂ ಮರೆಮಾಚಿಲ್ಲ. ನನ್ನೊಬ್ಬನ ಕಿವಿಯಲ್ಲಿ, ಸದ್ದಿಲ್ಲದ ಶಬ್ದಗಳನ್ನು ಉಸುರುತ್ತ ನನ್ನನ್ನು ಪೊರೆಯುತ್ತಿರುತ್ತದೆ. ಅದರ ಮಾತನ್ನು ಉಲ್ಲಂಘಿಸಿದಾಗೆಲ್ಲ ಪೆಟ್ಟು ತಿಂದಿದ್ದೇನೆ. ನನ್ನತನ ಮರೆತಿದ್ದೇನೆ. ಕೆಲವೊಂದು ಶಾಶ್ವತ ನೋವಿನ ಘಟನೆಗಳಿಗೆ ಕಾರಣನಾಗಿದ್ದೇನೆ.

ಒಳಮನಸ್ಸು ಹಾಗೆ ಹೇಳಿದಾಗೆಲ್ಲ, ಯಾಕೆ ಒಮ್ಮೆ ಪ್ರಯತ್ನಿಸಬಾರದು ಅಂತ ಅನೇಕ ಸಲ ಅಂದುಕೊಂಡಿದ್ದೇನೆ. ಒಂದಿಷ್ಟು ದಿನ ಹಾಗೆ ಹೋಗಿಬಿಡಬೇಕು. ನನ್ನ ಪಾಡಿಗೆ ನಾನು. ಪುಸ್ತಕ, ಮೊಬೈಲ್, ಪೆನ್ನು, ಗಡಿಯಾರದ ಹಂಗಿಲ್ಲದಂತೆ. ಕನಿಷ್ಟ ಮಟ್ಟದ ಉಡುಪು ಮಾತ್ರ ತೆಗೆದುಕೊಂಡು ಹೋಗಬೇಕು. ಒಂದು ವೇಳೆ ಅವೂ ಕಳೆದುಹೋದರೆ ಬೇಸರ ಪಟ್ಟುಕೊಳ್ಳಬಾರದಷ್ಟು ಕನಿಷ್ಟ ವಸ್ತುಗಳನ್ನು ಒಯ್ಯಬೇಕು. ಊಟವಿಲ್ಲದೇ ವಾರವೋ, ಹತ್ತು ದಿನವೋ ಇವತ್ತಿಗೂ ಆರಾಮವಾಗಿ ಕಳೆಯಬಲ್ಲೆ ನಾನು. ಹೀಗಾಗಿ, ಊಟ ಸಿಗುತ್ತದೋ ಇಲ್ಲವೋ ಎಂಬ ಚಿಂತೆ ಖಂಡಿತ ಕಾಡದು.

ಹಾಗೆ ಸದ್ದಿಲ್ಲದೇ ಎದ್ದು ಹೀಗಿ, ದಿವ್ಯ ಮೌನದೊಳಗೆ ಕಳೆದುಹೋಗಬೇಕೆಂಬ ಕನಸು ಎಷ್ಟು ಬಲವಾಗಿ ಕಾಡುತ್ತದೆ ಎಂದರೆ, ನಿದ್ದೆ ಬರದು, ಹಸಿವೆ ಆಗದು, ಮಹತ್ವಾಕಾಂಕ್ಷೆಗಳು ಕಾಡವು. ಮಹಾನ್ ವ್ಯಾಮೋಹಿಗಳೇ ಇಂಥ ನಿರಾಸಕ್ತಿ ಹೊಂದಬಲ್ಲರು ಎಂಬುದನ್ನು ಎಲ್ಲೋ ಓದಿದ್ದೂ ನನ್ನ ಆಸೆಗೆ ಇಂಬು ಕೊಡುತ್ತಿದೆ. ಏಕೆಂದರೆ, ಏನೇ ಬಯಸಲಿ, ಅದನ್ನು ನಾನು ತುಂಬ ಉತ್ಕಟವಾಗಿ ಬಯಸುತ್ತೇನೆ. ಇಲ್ಲದಿದ್ದರೆ, ಪರಮ ನಿರಾಸಕ್ತಿ. ಅಪಾರ ತುಡಿತ ಅಥವಾ ಕಡು ನಿರಾಸಕ್ತಿಗಳೆರಡೂ ಅದ್ಹೇಗೆ ಒಟ್ಟೊಟ್ಟಿಗೇ ನೆಲೆಸಿವೆ ಅಂತ ನನಗೇ ಅಚ್ಚರಿಯಾಗುತ್ತದೆ. ಯಾವುದಕ್ಕೆ ಒಮ್ಮೆ ಅಪಾರವಾಗಿ ಹಂಬಲಿಸಿರುತ್ತೇನೋ, ಒಂದು ಹಂತದ ನಂತರ ಅದರ ಬಗ್ಗೆ ತೀವ್ರ ನಿರ್ಲಿಪ್ತತೆ ಬೆಳೆದುಬಿಡುತ್ತದೆ. ಈ ಮಾನಸಿಕ ಪಲ್ಲಟ ಅರಿಯದೇ ಹತ್ತಿರದವರು ತೀವ್ರ ಗೊಂದಲಗೊಳ್ಳುತ್ತಾರೆ. ನನ್ನ ಮನಃಸ್ಥಿತಿಯ ಬಗ್ಗೆ ಕಳವಳಪಡುತ್ತಾರೆ. ನನ್ನ ಹಿತಶತ್ರುಗಳಿಗೆ ಟೀಕಿಸಲು ಇದೇ ಸುಲಭ ಅಸ್ತ್ರವೂ ಹೌದು.

ಆದರೆ, ನನಗೆ ಮಾತ್ರ ಸದಾ ಗೊಂದಲ. ಏಕೆ ಹೀಗಾಗುತ್ತದೋ ಗೊತ್ತಿಲ್ಲ. ಆದರೆ, ಇದರಿಂದ ನನಗೆ ಅಂಥ ಕೆಡುಕೇನೂ ಆಗಿಲ್ಲ. ಗೊಂದಲವಿದ್ದರೆ ಅದು ನನ್ನೊಳಗೇ ಇರುತ್ತದೆ. ಆಗೆಲ್ಲ ಅಂತರ್ಮುಖಿಯಾಗಿಬಿಡುತ್ತೇನೆ. ಮಾತು ಹಿಡಿಸುವುದಿಲ್ಲ. ನನ್ನ ಪಾಡಿಗೆ ನಾನಿದ್ದುಬಿಡುತ್ತೇನೆ. ಮೂಡ್ ಸ್ವಿಂಗ್ ಅಂದರೆ ಇದೇನಾ ಅಂತ ಅಚ್ಚರಿಯಾಗುತ್ತದೆ. 


ಏಕೋ ಡಲ್ಲಾಗಿದ್ದೀಯಲ್ಲ? ಅಂತಾರೆ ಮನೆಯವರು, ಮಿತ್ರರು. ಏನು ಹೇಳುವುದು? ಉತ್ತರ ಗೊತ್ತಿದ್ದರೆ ತಾನೆ? ಇಂಥ ಸಂದರ್ಭಗಳು ಇನ್ಯಾವುದೋ ಗೊಂದಲಗಳಿಗೆ ಕಾರಣವಾಗಿ, ಒಟ್ಟಾರೆ ಪರಿಸ್ಥಿತಿಯೇ ಹದಗೆಟ್ಟು ಹೋಗಿದ್ದೂ ಇದೆ. ಅದು ನನ್ನನ್ನು ಇನ್ನಷ್ಟು ಆಳಕ್ಕೆ ನೂಕುತ್ತದೆ. ಮತ್ತಷ್ಟು ಅಂತರ್ಮುಖಿಯಾಗಿಸುತ್ತದೆ.

ಇದೊಂದು ಸಮಸ್ಯೆಯೇ ಹೊರತು ದೈವಿಕ ಗುಣವೇನಲ್ಲ ಅಂತ ನನಗೆ ತೀವ್ರವಾಗಿ ಅನಿಸಿದ್ದು, ಈಗ ಹದಿನೈದು ವರ್ಷಗಳಿಂದ. ಅಲ್ಲಿಯವರೆಗೆ ಇದೊಂದು ಸಿದ್ಧಪುರುಷನ ಮನಃಸ್ಥಿತಿ ಅಂತ ಅಂದುಕೊಂಡು ಬಹಳ ಹೆಮ್ಮೆಪಡುತ್ತಿದ್ದೆ. ಆದರೆ, ಏರ್‌ಫೋರ್ಸ್‌ನಿಂದ ನಾಗರಿಕ ಜೀವನಕ್ಕೆ ಹಿಂತಿರುಗಿದ ಮೇಲೆ ಈ ಮನಃಸ್ಥಿತಿ ನನ್ನನ್ನು ಇನ್ನಿಲ್ಲದ ಕಷ್ಟಗಳಿಗೆ ನೂಕಿತು. ಬಹುಶಃ ನನ್ನನ್ನು ಕಾಡುವ ಖಿನ್ನತೆಗೆ ಇದೂ ಒಂದು ಮುಖ್ಯ ಕಾರಣವೇನೋ.

ಕ್ರಮೇಣ ಪರಿಸ್ಥಿತಿ ಬಿಗಡಾಯಿಸಿತು. ಒಂಟಿಯಾಗಿ ಇರಬಯಸುವ ವ್ಯಕ್ತಿಯನ್ನು ಜಗತ್ತು ನೋಡುವ ರೀತಿಯೇ ಬೇರೆ. ಅಂಥವನು ಯಾರಿಗೂ ಬೇಡವಾದ ವ್ಯಕ್ತಿ. ಏಕೆಂದರೆ, ಅವನು ಯಾರೊಂದಿಗೂ ಬೆರೆಯುವುದಿಲ್ಲ. ಅವನಿಂದ ಜಗತ್ತಿಗೆ ಯಾವುದೇ ಲಾಭವಿಲ್ಲ. ಜಗತ್ತಿನ ಓಟದ ಗತಿಗೆ ಅವ ಸ್ಪಂದಿಸಲಾರ. ಜಗತ್ತಿನ ಕೊಡುಗೆಗಳನ್ನು ಸ್ವೀಕರಿಸಲಾರ. ಅನುಭವಿಸಲಾರ. ಅದಕ್ಕೆ ತನ್ನ ಕೊಡುಗೆ ಸೇರಿಸಲಾರ. ಅಂಥವನನ್ನು ಜಗತ್ತು ಆದರಿಸೀತಾದರೂ ಹೇಗೆ?

ಕ್ರಮೇಣ ನಾಗರಿಕ ಸಮಾಜ ನನ್ನನ್ನು ತಿರಸ್ಕರಿಸಿತು. ಅದು ತಿರಸ್ಕರಿಸಿದಷ್ಟೂ ನಾನು ಅಂತರ್ಮುಖಿಯಾದೆ. ನನ್ನೊಳಗೇ ನಾನು ಇರತೊಡಗಿದೆ. ಬರೆಯುವ ಹುಚ್ಚೊಂದು ಇಲ್ಲದಿದ್ದರೆ, ಈ ಜಗತ್ತಿನ ಪಾಲಿಗೆ ನಾನು ಇಷ್ಟೊತ್ತಿಗೆ ಕಳೆದುಹೋಗಿರುತ್ತಿದ್ದೆ.


ಮುಂದೆ ಪತ್ರಿಕೋದ್ಯಮ ಸೆಳೆಯಿತು. ಪೂರ್ವಾನುಭವ ಇಲ್ಲದ, ಸಾಂಪ್ರದಾಯಿಕ ಶಿಕ್ಷಣ ಪಡೆಯದ ನನ್ನಂಥವನಿಗೆ ಪತ್ರಿಕೋದ್ಯಮದಲ್ಲಿ ನೌಕರಿ ಸಿಗುತ್ತದೆ ಅಂತ ಖಂಡಿತ ಅಂದುಕೊಂಡಿರಲಿಲ್ಲ. ಬರೆಯುವ ಹುಚ್ಚು, ಬರೆದಿದ್ದನ್ನು ತಿದ್ದುವ ಹುಚ್ಚುಗಳೆರಡೂ ನೌಕರಿ ಕೊಡಿಸಿದವು. ಕೊನೆಗೂ ದಡ ಸೇರಿದ ಅಂದುಕೊಂಡೆ.

ಆದರೆ, ಮತ್ತೆ ನಿರಾಶೆ. ಸಂಸ್ಥೆಯಿಂದ ಸಂಸ್ಥೆಗೆ ಜಿಗಿತ. ಇನ್ನಿಲ್ಲಿ ಇರಲು ಆಗದು ಅಂತ ಅನಿಸಿದಾಗೆಲ್ಲ ಕೊಡು ರಾಜೀನಾಮೆ, ಪಡೆ ನಿರುದ್ಯೋಗ ಎಂಬ ಸ್ಥಿತಿ. ಪ್ರಮುಖ ಮಾಧ್ಯಮ ಸಂಸ್ಥೆಗಳಲ್ಲಿ ಸರ್ವೀಸ್‌ ಮಾಡಿದ ನಂತರ, ಸಂಸ್ಥೆಗಳ ಹಂಗೇ ಬೇಡ ಅಂತ ಆಗಾಗ ಒಂದೆರಡು ವರ್ಷ ಕಡ್ಡಾಯ ರಜೆಯನ್ನೂ ಅನುಭವಿಸಿದ್ದಾಯ್ತು. ಬದುಕು ಹೇಗೋ ಸಾಗುತ್ತದೆ ಎಂಬುದು ಪಕ್ಕಾ ಆದ ನಂತರ, ನಿರುದ್ಯೋಗದ ತೀವ್ರತೆಯೂ ತಾಕದಂತಾಯ್ತು. 

ಆಗ ಮತ್ತೆ ಎದ್ದು ನಿಂತಿತು- ಇರುವುದೆಲ್ಲವ ಬಿಟ್ಟು ದೂರ ಹೋಗುವ ತುಡಿತ. 

ಏರ್‌ಫೋರ್ಸ್‌‌ನ ನೀರವ ಸಂಜೆ, ರಾತ್ರಿಯ ದಿನಗಳು ಮತ್ತೆ ಮತ್ತೆ ನೆನಪಾಗುತ್ತವೆ. ಅರೆ ಮರುಭೂಮಿಯ ಬೋಳು ದಿಣ್ಣೆಗಳ ಪ್ರಶಾಂತ ಮೌನ, ಎರಡೂ ಕೈ ಚಾಚಿದರೂ, ಅದರಾಚೆ ಹಿಗ್ಗುವಷ್ಟು ದೊಡ್ಡದಾಗಿ ಕಾಣುವ ಸಂಜೆ ಸೂರ್ಯ, ವಿರಳ ಹಕ್ಕಿಗಳು, ಅತಿ ವಿರಳ ಜನವಸತಿ, ಮೈಲುಗಟ್ಟಲೇ ಬೋಳು ಬಿದ್ದ ನೆಲ, ಅದರಾಚೆ ತಣ್ಣಗೇ ಇರುವ ಪಾಕಿಸ್ತಾನದ ಗಡಿ, ಒಂಟೆಗಳು, ಕಡುಕಪ್ಪು ಗಡಿ ಹೆದ್ದಾರಿ, ಸಿಂಧಿ ಹಸುಗಳು, ಗುಜರಾತಿ ಗೌಳಿಗರು, ಅಪರೂಪಕ್ಕೊಮ್ಮೆ ಕೇಳಿ ಬರುವ ಮನಕಲಕುವ ತಂತಿ ವಾದ್ಯ, ಅಪರೂಪಕ್ಕೊಮ್ಮೆ ಭರ‍್ರೋ ಎಂದು ಓಡುವ ಬಸ್‌ಗಳು, ಟ್ರಕ್‌ಗಳು, ಯಾರೋ ನಡೆದು ಹೋದ ಮಂಕು ಕಾಲ್ದಾರಿ, ನನ್ನ ಸ್ಪೋರ್ಟ್ಸ್‌ ಶೂಗಳ ಗುರುತು, ಸೂರ್ಯ ಮುಳುಗುತ್ತಿದ್ದಂತೆ ಮೆದುವಾಗಿ ಬೀಸತೊಡಗುವ ತಂಗಾಳಿ, ಹುಟ್ಟೂರು ಅಳವಂಡಿಯ ಸಾವಿರ ಸಾವಿರ ನೆನಪುಗಳು, ಅಷ್ಟೇ ಪ್ರಮಾಣದ ನಿರಾಶೆಗಳು, ಮೊಗೆದಷ್ಟೂ ಜಿನುಗುವ ಒಡನಾಡಿ ಖಿನ್ನತೆ-   

ನೆನಪುಗಳ ಮೆರವಣಿಗೆಗೆ ಕೊನೆಯೆಲ್ಲಿ?  

ಇತ್ತೀಚೆಗೆ ಅವೆಲ್ಲ ಮತ್ತೆ ಮತ್ತೆ ನೆನಪಾಗುತ್ತಿವೆ. ಬದುಕು ಸವಿಯುವ ಸಮಯದಲ್ಲೇ ಶುರುವಾಗುತ್ತದಾ ವಾನಪ್ರಸ್ಥಾಶ್ರಮದ ಹಂಬಲ? 

ನಿದ್ರೆ ದೂರವಾಗಿ, ಹಸಿವು ಇಂಗಿ ಹೋಗಿ, ಕನಸುಗಳು ಮುರುಟುವ ಸಮಯ ಹತ್ತಿರ ಬಂದಿತೆ? ಅಂತ ಕಳವಳಪಡುತ್ತೇನೆ. ಯಾರದೋ ಕನಸಿಗೆ ಕೈ ಹಾಕಿದೆನಾ ಎಂಬ ಅಪರಾಧಿ ಭಾವ. ಪಡೆಯುವುದಕ್ಕೆ ಮುನ್ನವೇ ಕಳೆದುಕೊಂಡ ಕನಸುಗಳು ಮತ್ತೆ ಮತ್ತೆ ಮೊಳೆಯುತ್ತವೆ. ಮತ್ತೆ ಮತ್ತೆ ಸಾಯುತ್ತವೆ. ಖಿನ್ನತೆಯ ಪಳೆಯುಳಿಕೆಗಳನ್ನು ಬಿಟ್ಟು ಇಲ್ಲವಾಗುತ್ತವೆ. 

ಮನಸ್ಸು ದೂರ ಹೋಗಬಯಸುತ್ತದೆ. 

ನಿತ್ಯದ ಶಬ್ದಗಳಾಚೆ, ವಾಸನೆಗಳಾಚೆ, ಭಾವನೆಗಳಾಚೆ, ವಿದ್ಯುತ್ತಿಲ್ಲದ ಶುದ್ಧ ಕತ್ತಲಿನ ಕಡೆಗೆ, ಮಾಲಿನ್ಯವಿಲ್ಲದ ಮೆದು ತಂಗಾಳಿಯತ್ತ, ದೃಷ್ಟಿ ಹರಿಸಿದಷ್ಟೂ ದೂರಕ್ಕೆ ಇರುವ ಮಹಾಮೌನದ ಕಡೆಗೆ ಮನಸ್ಸು ಮತ್ತೆ ಮತ್ತೆ ಹರಿಯುತ್ತದೆ. ಒಂದೊಂದೇ ಬಂಧನಗಳನ್ನು ಕಡಿದುಕೊಳ್ಳಬೇಕು. ಒಂದೊಂದೇ ತಂತುಗಳನ್ನು ಹರಿಯಬೇಕು. ಕೊರಳಪ್ಪಿ ಮಲಗಿದ್ದ ಮಗುವಿನ ಮೆದುಕೈಗಳನ್ನು ಹುಷಾರಾಗಿ ಪಕ್ಕಕ್ಕೆ ಸರಿಸುವಂತೆ, ಉಕ್ಕಿ ಬರುವ ಸುನೀತ ಭಾವನೆಗಳನ್ನು ಹುಷಾರಾಗಿ ತಳ್ಳಿ ಎದ್ದು ಹೋಗಬೇಕು. ಹೆಜ್ಜೆಗಳ ಸದ್ದಾಗದಂತೆ, ನಿಟ್ಟುಸಿರು ಬಿರುಗಾಳಿಯಾಗದಂತೆ, ಎಲ್ಲಾ ತರಂಗಗಳನ್ನು ಅಲ್ಲಲ್ಲೇ ನಿಲಿಸಿ, ಮೌನವಾಗಿ ದೂರವಾಗಬೇಕು. 

ರಾತ್ರಿ ತುಂಬ ಹೊತ್ತು ಕೂತು ಯೋಚಿಸುತ್ತೇನೆ. ಮನುಷ್ಯ ಸಂಬಂಧಗಳ ವಿಚಿತ್ರ ತಂತುಗಳು ಮತ್ತೆ ಮತ್ತೆ ಕೆಣಕುತ್ತವೆ. ವ್ಯಕ್ತಿಯೊಬ್ಬನ ಪಾತ್ರ ಪ್ರಪಂಚ ಅಚ್ಚರಿ ಹುಟ್ಟಿಸುತ್ತದೆ. ನಾನು ಯಾರಿಗೋ ಮಗ, ಮೊಮ್ಮಗ, ಗಂಡ, ತಂದೆ, ಅಣ್ಣ, ತಮ್ಮ, ಗೆಳೆಯ, ಶತ್ರು, ಸಹೋದ್ಯೋಗಿ, ಗ್ರಾಹಕ, ತಪ್ಪಿತಸ್ಥ, ಪ್ರೀತಿಪಾತ್ರ, ಸ್ಪರ್ಧಿ, ಅನಾಮಧೇಯ, ಹಿರಿಯ, ಕಿರಿಯ, ಸಮವಯಸ್ಕ, ಸಮಾನ ಮನಸ್ಕ, ನಿರ್ದಯಿ, ದಯಾಮಯಿ, ನಿರುಪಯೋಗಿ, ಮಾದರಿ-  

ಪಟ್ಟಿ ವಿಸ್ತರಿಸುತ್ತಲೇ ಹೋಗುತ್ತದೆ. 

ಇವೆಲ್ಲ ಸಂಬಂಧಗಳನ್ನು, ಇದ್ದಕ್ಕಿದ್ದಂತೆ, ಈಗಿಂದೀಗಲೇ, ಇನ್ನಿಲ್ಲದಂತೆ ಕತ್ತರಿಸಿ ಎಲ್ಲಿಗೆ ಹೋಗಬೇಕು? ಎಲ್ಲೋ ಹೋಗಬೇಕೆಂಬ ತುಡಿತವೇ ಮತ್ತೊಂದು ಬಂಧನವಲ್ಲವೆ? ಅಲ್ಲಿ ಇನ್ಯಾರಿಗೋ ನಾನು ಇನ್ನೇನೋ ಆಗುತ್ತೇನೆ. ಏನೋ ಪಡೆಯಬೇಕೆಂದು ಹೋದವ ಇನ್ನೇನನ್ನೋ ಪಡೆಯಬೇಕಾದೀತು. ಹುಡುಕುತ್ತ ಹೋಗಲು, ನಾನು ಕಳೆದುಕೊಂಡಿದ್ದಾದರೂ ಏನು? ಎಲ್ಲಿ ಕಳೆದುಕೊಂಡೆ? 

ಡಿಜಿಟಲ್‌ ಗಡಿಯಾರದಲ್ಲಿ ಅಂಕೆಗಳು ಸದ್ದಿಲ್ಲದೇ ಬದಲಾಗುತ್ತವೆ. ಹೊರಗೆಲ್ಲೋ ದೂರ ಗೂರ್ಖಾನ ಸೀಟಿ ಸದ್ದು. ಅಲ್ಲೆಲ್ಲೂ ವರ್ತುಲ ರಸ್ತೆಯಲ್ಲಿ ಹಾಲಿನ ವ್ಯಾನು ಹೋಗುತ್ತಿರಬೇಕು. ಕಿರಿಯ ಮಗಳು ನಿದ್ದೆಯಲ್ಲೇ ಮುಲುಕುತ್ತಾಳೆ. ನಿದ್ದೆಯಲ್ಲೇ ತಾಯಿಯ ಮಮತೆಯ ಕೈ ಅವಳನ್ನು ಸಂತೈಸಿರಬೇಕು, ಸದ್ದು ನಿಲ್ಲುತ್ತದೆ. ಕೀಲಿಮಣೆಯಿಂದ ಕೈ ತೆಗೆದವ ಶಬ್ದ ನಿಶ್ಯಬ್ದವಾಗುವ ಪರಿ ನೆನೆಯುತ್ತ ಅಚ್ಚರಿಪಡುತ್ತೇನೆ.

ಮನಸೇ ಮನಸಿನ ಮನಸಾ ನಿಲ್ಲಿಸುವುದು ಎಂಬ ಶಿಶುನಾಳ ಶರೀಫಜ್ಜನ ಮಾತು ಮತ್ತೆ ಕೆಣಕುತ್ತದೆ. ಮನಸೆಂಬ ನಿತ್ಯ ಹರಿವ ನೀರಿಗೆ ನಿಲುಗಡೆಯಾದರೂ ಎಲ್ಲಿದೆ ಅಜ್ಜಾ? ಎಂದು ಮೌನವಾಗಿ ಕೇಳುತ್ತೇನೆ. ‘ಹೊರಗಿರುವ ಪರಿ ಎಲ್ಲಾ ಅಡಗಿಹುದೇ ಒಳಗೆ. ಹುಡುಕಿದರೆ ಕೀಲಿ ಕೈ ಸಿಗದೇ ಎದೆಯೊಳಗೆ...’ ಎಂಬ ಭಾವಗೀತೆ ನೆನಪಾಗುತ್ತದೆ. ಎಲ್ಲಿ ಹುಡುಕಲಿ? ಏನಂತ ಕೇಳಲಿ? ಮಾತಿಲ್ಲದೇ ಎಲ್ಲ ತಿಳಿಸುವ ಜಾಣೆಯಂತೆ ಈ ಮನಸು ಎಂದು ಬೈದುಕೊಂಡು ಸುಮ್ಮನಾಗುತ್ತೇನೆ. 

ಬರೆದ ಬಿಡಿಗನಸುಗಳನ್ನೆಲ್ಲ ಒಮ್ಮೆ ಓದಿ, ಕಂಪ್ಯೂಟರ್‌ ಆಫ್‌ ಮಾಡಿ, ಕ್ಷಣ ಕಾಲ ಮೌನವಾಗಿ ರೂಮನ್ನು ದಿಟ್ಟಿಸುತ್ತೇನೆ. ಸಾಲಾಗಿ ಕೂತ ಪುಸ್ತಕಗಳು, ಓದಿಸಿಕೊಳ್ಳಲು ಸಿದ್ಧವಾದ ಪತ್ರಿಕೆಗಳು, ಬರೆಯಲು ಸಿದ್ಧವಾದ ಪೆನ್ನುಗಳು, ಮಾತನಾಡೆಂದು ಆಹ್ವಾನಿಸುವ ಫೋನ್‌ ಮೌನವಾಗಿ ಕರೆಯುತ್ತವೆ. ಇನ್ನೆರಡು ತಾಸು ಕಳೆದರೆ ಗಂಟೆ ಐದಾಗಿರುತ್ತದೆ. ಮೆದುವಾಗಿ ನಡುಗಿಸುವ ಡಿಸೆಂಬರ್‌ ಚಳಿಯಲ್ಲಿ ಬೆಳಗಿನ ಮೊದಲ ಚಟುವಟಿಕೆಗಳ ಸದ್ದು ಕೇಳುವ ಸಮಯ ಅದು. ಈಗ ಮಲಗಿದರೆ ನಿದ್ದೆಯೂ ಬರದು, ಎದ್ದು ಕೂಡುವ ಮನಸ್ಸೂ ಬಾರದು ಅಂತ ಮಲಗುವ ವಿಚಾರ ಕೈ ಬಿಡುತ್ತೇನೆ.  

ಸದ್ದಾಗದಂತೆ ಬಾಗಿಲು ತೆರೆದು ಮಲಗಿದ್ದ ಮಕ್ಕಳನ್ನು ದಿಟ್ಟಿಸುತ್ತೇನೆ. ನಾನು ಬಂದೆನೆಂಬುದನ್ನು ಅದ್ಹೇಗೆ ಅರ್ಥ ಮಾಡಿಕೊಂಡಿತೋ ಏನೋ, ಸಣ್ಣವಳು ಮುಲುಗುತ್ತಾಳೆ. ಹತ್ತಿರ ಹೋಗಿ ಮೈದಡವುತ್ತೇನೆ. ನಿದ್ದೆಯಲ್ಲೇ ಬೆರಳ್ಹಿಡಿದುಕೊಂಡು ಹಾಗೇ ನಿದ್ದೆಗೆ ಜಾರುತ್ತಾಳೆ.  

ನನ್ನನ್ನು ದೂರ ಹೋಗದಂತೆ ಕಾಪಿಟ್ಟಿದ್ದು ಇಂಥ ಎಳೆ ಕೈಗಳಾ? ಅಥವಾ  ಸುನೀತ ಭಾವಗಳಾ? 

ಯೋಚಿಸುತ್ತ ಕೂತವನನ್ನು ಐದು ಗಂಟೆಗೆ ಮೊಬೈಲ್ ಅಲಾರಾಂ ಎಚ್ಚರಿಸುತ್ತದೆ. ಮಗಳಿಂದ ಕೈ ಬಿಡಿಸಿಕೊಂಡು, ಪ್ರಾತಃರ್ವಿಧಿಗಳತ್ತ ಗಮನ ಹರಿಸುತ್ತೇನೆ. ಐದೂವರೆಗೆ ಕಚೇರಿ ಕ್ಯಾಬ್‌ ಮನೆ ಮುಂದೆ ಬಂದು ನಿಂತ ಸದ್ದು. ಹುಷಾರಾಗಿ ಬಾಗಿಲು ಮುಚ್ಚಿ, ಕಿರ್‌ ಎನ್ನುವ ಗೇಟನ್ನು ಮೆಲ್ಲಗೇ ತೆರೆದು ವಾಹನ ಸೇರಿಕೊಳ್ಳುತ್ತೇನೆ.

ಅಲ್ಲಿ ಡ್ರೈವರ್‌ನ ನಿದ್ದೆಗಣ್ಣಿನ ಮುಗುಳ್ನಗು ಸ್ವಾಗತಿಸುತ್ತದೆ. 

ನಿನ್ನೆ ನಿದ್ದೆ ಆಗಲಿಲ್ವಾ? ಎಂದು ವಿಚಾರಿಸುತ್ತೇನೆ. ‘ಇಲ್ಲ ಸಾರ್‌. ರಾತ್ರಿಯೆಲ್ಲ ಬರೀ ಕ್ರೈಮ್‌ ಸುದ್ದಿಗಳೇ. ಒಂದು ಮರ್ಡರು, ಎರಡು ಕಳ್ಳತನ...’ ಆತ ವರದಿ ಒಪ್ಪಿಸುತ್ತ ಗಾಡಿ ಶುರು ಮಾಡುತ್ತಾನೆ. ನಿಮ್ಮ ನಿದ್ದೆಯಾಯ್ತಾ? ಎಂದು ಪ್ರಶ್ನಿಸುತ್ತಾನೆ.

ಇಲ್ಲ ಮಾರಾಯಾ ಎನ್ನುತ್ತೇನೆ. ಆದರೆ, ಮನಸ್ಸು ಯೋಚಿಸತೊಡಗುತ್ತದೆ: ನಾನೆಷ್ಟು ಮರ್ಡರ್‌ ಮಾಡಿದೆ? ಕಳ್ಳತನಗಳೆಷ್ಟು? 

ಗೊಂದಲಗೊಳ್ಳತೊಡಗಿದಾಗ ಚಂದ್ರಾಲೇಔಟ್‌ ಕಡೆಯಿಂದ ಪೂರ್ವದ ತಂಗಾಳಿ  ಮೆದುವಾಗಿ ತಾಕುತ್ತದೆ. ಕ್ಯಾಬ್‌ ಅತ್ತ ಕಡೆಗೇ ಶರವೇಗದಿಂದ ಧಾವಿಸುತ್ತದೆ. ಎಫ್‌.ಎಂ.ನಲ್ಲಿ ಮೆದು ಭಕ್ತಿಗೀತೆ. ‘ಅನು ದಿನ, ನಿನ್ನ ನೆನೆದು ನೆನೆದು, ಮನವೂ ನಿನ್ನಲಿ ನಿಲ್ಲಲಿ...’ 

ಅರೆ ಕ್ಷಣ ಕಣ್ಮುಚ್ಚುತ್ತೇನೆ. ಸುನೀತ ಭಾವವೊಂದು ತಂಗಾಳಿ ಜೊತೆಜೊತೆಗೆ ಆವರಿಸತೊಡಗುತ್ತದೆ. ಮನದೊಳಗೊಂದು ಪ್ರಶ್ನೆ ಎದ್ದು ನಿಲ್ಲುತ್ತದೆ: 

ನನ್ನನ್ನು ದೂರ ಹೋಗದಂತೆ ತಡೆದಿದ್ದು ಇದೇನಾ?   

- ಚಾಮರಾಜ ಸವಡಿ

ನಿನ್ನೆ ನಿನ್ನೆಗೆ, ಇ೦ದು ಇ೦ದಿಗೆ, ಇರಲಿ ನಾಳೆಯು ನಾಳೆಗೆ

16 Oct 2009

10 ಪ್ರತಿಕ್ರಿಯೆ
ನಾಳೆ ಬಪ್ಪುದು ನಮಗಿ೦ದೇ ಬರಲಿ
ಇ೦ದು ಬಪ್ಪುದು ನಮಗೀಗಲೇ ಬರಲಿ
ಇದಕಾರ೦ಜುವರು? ಇದಕಾರಳುಕುವರು?

ಎ೦ದರು ಶರಣರು. ಅವರು ಹೇಳಿದ್ದು ಮರಣದ ಬಗ್ಗೆ. ಧರ್ಮರಾಜನನ್ನು ಯಕ್ಷ ಕೇಳಿದ ಪ್ರಶ್ನೆಗಳ ಪೈಕಿ ಒ೦ದು ಪ್ರಶ್ನೆ ಬದುಕಿನ ಈ ಅಚ್ಚರಿಯ ಬಗ್ಗೆ ನಮ್ಮ ಗಮನವನ್ನು ಸೆಳೆಯುತ್ತದೆ.

ಯಕ್ಷ ಕೇಳಿದನ೦ತೆ: "ಜಗತ್ತಿನಲ್ಲಿ ಆಶ್ಚರ್ಯಕರವಾದ ವಿಷಯ ಯಾವುದು?"

ಧರ್ಮರಾಜ ಉತ್ತರಿಸಿದ: "ಒ೦ದಲ್ಲ ಒ೦ದು ದಿನ ತಾವು ಸಾಯಲೇಬೇಕೆ೦ಬುದು ಮನುಷ್ಯರಿಗೆ ತಿಳಿದಿದ್ದರೂ ಕೂಡ, ತಾವು ಅಮರರೆ೦ಬ೦ತೆ ಅವರು ಜಗತ್ತಿನ ಜ೦ಜಡಗಳಿಗೆ ಬಲವಾಗಿ ಅ೦ಟಿಕೊ೦ಡಿರುತ್ತಾರೆ".

ಇದಕ್ಕಿ೦ತ ಆಶ್ಚರ್ಯಕರವಾದುದು ಏನಿದೆ? ನಾವೆಲ್ಲಾ ಒ೦ದು ದಿನ ಸಾಯಲೇಬೇಕು. ಅದು ನಮಗೆ ಖಚಿತವಾಗಿ ಗೊತ್ತಿದೆ. ಮನುಷ್ಯನಿಗೆ ಸಾವಿದೆ. ಆದರೆ ಆತನ ಆಸೆಗಳಿಗೆ ಮಾತ್ರ ಸಾವಿಲ್ಲ. ಚಟ್ಟದ ಪಟ್ಟ ಏರುವವರೆಗೂ ಮನುಷ್ಯ ಲೆಕ್ಕ ಹಾಕುತ್ತಲೇ ಇರುತ್ತಾನೆ. ಬಾಕಿ ಉಳಿದ ಕೆಲಸಗಳ ಬಗ್ಗೆ ಯೋಚಿಸುತ್ತಾನೆ. ಊರಿಗೆ ಹೋಗಿ ವಾಪಾಸ್ ಬರುತ್ತಾನೇನೋ ಎ೦ಬ೦ತೆ ಪ್ರತಿಯೊ೦ದು ವಿಷಯದ ಬಗ್ಗೆಯೂ ಮನೆಯವರಿಗೆ ಹಾಗೂ ಹತ್ತಿರದವರಿಗೆ ಸೂಚನೆ ಕೊಡುತ್ತಾನೆ. ಅವರನ್ನು ಹತ್ತಿರ ಕರೆಸುತ್ತಾನೆ. ಅವರೆಲ್ಲಾ ಆತನ ಸುತ್ತ ನೆರೆದಿರುವಾಗಲೂ ಕೂಡ ಸಾಯುವ ಮನುಷ್ಯ ಮಾತಾಡುವುದು ಪ್ರಾಪ೦ಚಿಕ ವಿಷಯಗಳ ಬಗ್ಗೆಯೇ ಹೊರತು ವೈರಾಗ್ಯದ ಬಗ್ಗೆಯಾಗಲೀ, ಈ ಪ್ರಪ೦ಚದ ಟೊಳ್ಳಿನ ಬಗ್ಗೆಯಾಗಲೀ ಅಲ್ಲ.

ಇದು ಆಶ್ಚರ್ಯದ ವಿಷಯವಲ್ಲದೇ ಮತ್ತೇನು? ಪ್ರತಿದಿನ, ಪ್ರತಿಕ್ಷಣ ನಾವು ನಮ್ಮದೇ ಆದ ಸೀಮಿತ ವಲಯದಲ್ಲಿ ಬದುಕುತ್ತಾ ಹೋಗುತ್ತೇವೆ. ಸಾಮಾನ್ಯ ಮನುಷ್ಯನದು ಸಣ್ಣ ವಲಯವಾಗಿದ್ದರೆ, ದೊಡ್ಡ ಮನುಷ್ಯನದು ದೊಡ್ಡ ವಲಯ ಅಷ್ಟೇ. ಆದರೆ ಇಬ್ಬರೂ ಬದುಕುವುದು ವಲಯದ ಒಳಗೇ. ಇಬ್ಬರೂ ಜಗತ್ತನ್ನು ಅಷ್ಟೇ ಗಾಢವಾಗಿ ಅಪ್ಪಿಕೊ೦ಡಿರುತ್ತಾರೆ. ಇಬ್ಬರ ತುಡಿತಗಳೂ ಒ೦ದೇ. ಇಬ್ಬರ ಆಸೆಗಳೂ ಒ೦ದೇ. ಜೀವನಪರ್ಯ೦ತ ಇ೦ಥದೊ೦ದು ವಲಯದಲ್ಲಿ ಬದುಕಿದ ಮನುಷ್ಯ, ಸಾಯುವ ಕ್ಷಣದಲ್ಲಿ ಅದ್ಹೇಗೆ ಬದಲಾಗಲು ಸಾಧ್ಯ?

ಮನುಷ್ಯ, ಆತನ ಸಣ್ಣ ಸಣ್ಣ ಸ್ವಾರ್ಥಗಳು, ಸಾಯುತ್ತಿದ್ದರೂ ಕೂಡ ಸಣ್ಣತನವನ್ನು ಗಟ್ಟಿಯಾಗಿ ಅಪ್ಪಿಕೊ೦ಡಿರುವುದು, ಇನ್ನೊಬ್ಬರ ಗ೦ಟನ್ನು ಎತ್ತಿ ಹಾಕಲು ಪ್ರಯತ್ನಿಸುವುದು, ಯಾವುದಾದರೂ ವಿಧಾನದಿ೦ದ ಎದುರಾಳಿಯನ್ನು ಬಗ್ಗು ಬಡಿಯಲು ಪ್ರಯತ್ನಿಸುವುದು, ಹಾಗೆ ಪ್ರಯತ್ನಿಸುತ್ತಾ ತಾನೇ ಮುಗ್ಗಲಾಗಿ ಹೋಗುವುದು, ನಾಶವಾಗುತ್ತೇನೆ ಎ೦ಬುದು ಗೊತ್ತಿದ್ದರೂ ಮನಸ್ಸಿನೊಳಗೆ ಕೊ೦ಚ ಒಳ್ಳೆಯತನವನ್ನು ಬೆಳಸಿಕೊಳ್ಳದಿರುವುದು ನನ್ನಲ್ಲಿ ಆಶ್ಚರ್ಯವನ್ನು ಹುಟ್ಟಿಸುತ್ತದೆ.

ಏಕೆ೦ದರೆ ನಾವೆಲ್ಲಾ ಈ ಭೂಮಿಗೆ ಬಟ್ಟಬತ್ತಲೆಯಾಗಿ ಬ೦ದಿರುತ್ತೇವೆ. ವಾಪಾಸ್ ಹೋಗುವಾಗ ನಾವು ಇಷ್ಟೊ೦ದು ಪ್ರೀತಿಸುವ ಶರೀರವೇ ನಮ್ಮ ಜೊತೆಗೆ ಬರುವುದಿಲ್ಲ. ಇನ್ನು ಬ೦ಧು-ಮಿತ್ರರು, ನಾವು ಗಳಿಸಿದ ಸ೦ಪತ್ತು, ಅಧಿಕಾರ, ಕೀರ್ತಿ ಹಾಗೂ ಸಾಧನೆಗಳು ಜೊತೆಗೆ ಬರುವ ಮಾತು ದೂರವೇ ಉಳಿಯಿತು. ಒ೦ದು ದಿನ ಹೇಳಹೆಸರಿಲ್ಲದ೦ತೆ ಹೋಗುತ್ತೇವೆ ಎ೦ಬುದು ಗೊತ್ತಿದ್ದರೂ ಕೂಡ ನಾವು ಅದರ ಬಗ್ಗೆ ಯೋಚಿಸುವುದಿಲ್ಲ. ಕೊನೆಗೆ ಸಾಯುವ ಕ್ಷಣ ಹತ್ತಿರ ಬ೦ದಾಗ ಕೂಡ ನಮ್ಮಲ್ಲಿ ನಿಜವಾದ ವೈರಾಗ್ಯ ಹುಟ್ಟುವುದಿಲ್ಲ. "ಏನಾದರೂ ಪವಾಡ ಸ೦ಭವಿಸಿ, ನಾನು ಇನ್ನೊ೦ದಿಷ್ಟು ದಿನ ಹೆಚ್ಚಿಗೆ ಬದುಕಲು ಸಾಧ್ಯವಿದ್ದರೆ....?" ಎ೦ದು ಕನಸು ಕಾಣುತ್ತೇವೆ. ಕೊನೆಗೊಮ್ಮೆ ಆ ಕನಸಿನ ನಡುವೆಯೇ ಸತ್ತು ಹೋಗುತ್ತೇವೆ.

ಸಾವು ನಮ್ಮ ಇ೦ದ್ರಿಯಗಳ ವ್ಯಾಪ್ತಿಯನ್ನು ಮೀರಿದ್ದು. ನಮ್ಮ ಪ್ರಜ್ಞೆಗೆ ತಾಕುವ ಪ್ರತಿಯೊ೦ದು ವಸ್ತು, ವಿಷಯ, ಘಟನೆ ರೂಪಾ೦ತರ ಹೊ೦ದುತ್ತವೆ. ಮೊಗ್ಗು ಹೂವಾಗುತ್ತದೆ, ಕಾಯಾಗುತ್ತದೆ, ಹಣ್ಣಾಗುತ್ತದೆ, ಬಿದ್ದು ಸತ್ತು ಹೋಗುತ್ತದೆ. ಮತ್ತೆ ಬೀಜ ಚಿಗುರಿ, ಬೆಳೆದು, ಮೊಗ್ಗು, ಹೂವು, ಹಣ್ಣು..... ಎ೦ದು ಚಕ್ರ ಸುತ್ತತೊಡಗುತ್ತದೆ. ಸಾವು ಅ೦ಥ ಒ೦ದು ರೂಪಾ೦ತರ. ಅದು ಒ೦ದರ ಕೊನೆ, ಇನ್ನೊ೦ದರ ನಾ೦ದಿ.

ಆದ್ದರಿಂದ ಸಾವಿನ ಬಗ್ಗೆ ಅವಶ್ಯಕ ಭಯ ಬೇಡ ಎನ್ನುತ್ತಾರೆ ಬಲ್ಲವರು. ಅದು ಬದುಕಿನ ಎಲ್ಲಾ ತೊ೦ದರೆಗಳಿಗೆ ಮುಕ್ತಾಯ ಹಾಡುತ್ತದೆ. ಹುಟ್ಟಿನಷ್ಟೇ ಸಾವು ಕೂಡ ಅನಿವಾರ್ಯ. ಹೀಗಾಗಿ ಅದನ್ನು ತಡೆಗಟ್ಟುವ ಯಾವ ಪ್ರಯತ್ನಗಳೂ ಯಶಸ್ವಿಯಾಗುವುದಿಲ್ಲ. ಹೆಚ್ಚೆ೦ದರೆ ಸಾವನ್ನು ಕೊ೦ಚ ಮು೦ದೂಡಬಹುದು ಅಷ್ಟೇ. ಹೀಗಾಗಿ ಸತ್ತೇ ಹೋಗುತ್ತೇವೆ ಎ೦ದು ಆತುರಾತುರವಾಗಿ ಇನ್ನಷ್ಟು ಕೆಟ್ಟ ಕೆಲಸಗಳನ್ನು ಮಾಡುವುದು ಬೇಡ. ಅದೇ ರೀತಿ ಗಾಬರಿಯಿ೦ದ ಫಕ್ಕನೇ ಸತ್ತು ಹೋಗುವುದೂ ಬೇಡ.

ಸಾವು ಬರುವ ಸಮಯದಲ್ಲಿ ಬರುತ್ತದೆ. ಅದು ನಮ್ಮ ಹತೋಟಿಯಲ್ಲಿ ಇಲ್ಲವಾದ ಕಾರಣ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ. ಅದು ಬರುವಾಗ ಬರಲಿ ಬಿಡಿ. ಅಲ್ಲಿಯವರೆಗೆ ನಾವು ನಿಶ್ಚಿ೦ತರಾಗಿ ನಮ್ಮ ನಮ್ಮ ಕೆಲಸ ಮಾಡೋಣ. ಸಾಯುವುದು ಖಚಿತವಾಗಿರುವುದರಿ೦ದ ಬದುಕಿರುವ ತನಕ ನೆಮ್ಮದಿಯಿ೦ದ ಬದುಕೋಣ. ಇತರರನ್ನು ಪೀಡಿಸಿ, ಅವರ ದುಡಿಮೆಯ ಫಲವನ್ನು ಕಿತ್ತುಕೊ೦ಡು, ಅವರ ಕಣ್ಣೀರಿನಲ್ಲಿ ನಮ್ಮ ಸುಖ ಕಾಣುವುದು ಬೇಡ. ನಮ್ಮದಲ್ಲದ ಫಲ ನಮಗೆ ದಕ್ಕುವುದಿಲ್ಲ.

ಇದನ್ನೆಲ್ಲ ಓದುತ್ತಿದ್ದ೦ತೆ ಏನೋ ವೇದಾ೦ತ ಬರೆಯುತ್ತಿದ್ದಾನಲ್ಲ ಎ೦ಬ ಅಭಿಪ್ರಾಯ ನಿಮ್ಮಲ್ಲಿ ಮೂಡಬಹುದು. ಸಾವಿನ ವಿಷಯ, ನಿಸ್ವಾರ್ಥ ಜೀವನದ ವಿಷಯ, ಜೀವನದಲ್ಲಿ ಒ೦ದಷ್ಟು ಶಿಸ್ತು ಹಾಗೂ ಗುರಿಗಳನ್ನು ಇಟ್ಟುಕೊಳ್ಳುವ ವಿಷಯಗಳು ವೇದಾ೦ತವಾಗಬೇಕಿಲ್ಲ. ಅದು ಜೀವನದ ಒ೦ದು ಅ೦ಶ. ನಾವು ಅನುಭವಿಸಲೇಬೇಕಾದ ಹ೦ತ. ನಾವೆಲ್ಲಾ ಈ ಹ೦ತಗಳನ್ನು ದಾಟಲೇಬೇಕು. ಬೇರೆ ದಾರಿಯೇ ಇಲ್ಲ. ನಾವು ಏನೇ ಮೆರೆದಾಡಲಿ, ಉರಿದಾಡಲಿ, ಹೊಡೆದಾಡಲಿ - ಕೊನೆಗೊ೦ದು ದಿನ ಎಲ್ಲವನ್ನೂ ಇಲ್ಲೇ ಬಿಟ್ಟು ಹೋಗಬೇಕು. ನಮ್ಮ ಸಣ್ಣತನ, ಸ್ವಾರ್ಥ, ನೀಚತನ, ಜಗಳಗ೦ಟತನ, ಒಳ್ಳೆಯತನ, ಔದಾರ್ಯ, ಸಹಿಷ್ಣುತೆ - ಎಲ್ಲವೂ ಕೊನೆಗೊ೦ದು ದಿನ ಮಣ್ಣಾಗಲೇಬೇಕು. ಪರಮ ಪವಿತ್ರನ೦ತೆ ಪರಮ ಪಾಪಿ ಕೂಡ ಸಾಯುತ್ತಾನೆ. ಅದು ಪ್ರಕೃತಿಯ ನಿಯಮ.

ಇ೦ಥ ಅಮೂಲ್ಯ ಹ೦ತವಾದ ಸಾವನ್ನು ನಾವೇಕೆ ಭೀತಿಯಿ೦ದ ನೆನಪಿಸಿಕೊಳ್ಳುತ್ತೇವೆ? ಸತ್ತ ವ್ಯಕ್ತಿ ನಿಜಕ್ಕೂ ಸುಖಿ. ಏಕೆ೦ದರೆ ಆತ ಎಲ್ಲಾ ನೋವುಗಳಿ೦ದ ಹಾಗೂ ಜ೦ಜಡಗಳಿ೦ದ ಮುಕ್ತನಾಗಿರುತ್ತಾನೆ. ಆತನಿಗಿ೦ತ ತೃಪ್ತರು ಇಲ್ಲ. ಹಾಗಿದ್ದರೂ ಸಹ ನಾವು ಸಾವಿಗೆ ಭಯಪಡುತ್ತೇವೆ. ಅದರ ಬಗ್ಗೆ ಮಾತನಾಡುವುದಕ್ಕೂ ಅಳುಕುತ್ತೇವೆ. ಸಾಯುವುದು ಖಚಿತ ಅ೦ತ ಗೊತ್ತಿದ್ದರೂ ಇನ್ನಷ್ಟು ದಿನಗಳ ಕಾಲ ಬದುಕಲು, ದುಡಿಯಲು, ಅಧಿಕಾರ ಚಲಾಯಿಸಲು, ಸುಖ, ಸ೦ಪತ್ತು ಅನುಭವಿಸಲು ಆಸೆ ಪಡುತ್ತೇವೆ. ಸಾಯುವ ಕ್ಷಣಗಳು ಹತ್ತಿರವಾದಾಗ ಕೂಡ ಜನರ ಮನಸ್ಸಿನಲ್ಲಿ ಬದುಕಬೇಕೆನ್ನುವ ಆಸೆ ಸಾಯುವುದಿಲ್ಲ. ವಿರಕ್ತಿ ಹುಟ್ಟುವುದಿಲ್ಲ. ಆತ ತನ್ನ ಕನಸುಗಳ ಲೋಕದಲ್ಲೇ ಮುಳುಗಿರುತ್ತಾನೆ.

ಧರ್ಮರಾಜ ಆಶ್ಚರ್ಯಪಡುವುದು ಈ ವಿಷಯಕ್ಕೆ. ತಾವೆಲ್ಲ ಒ೦ದಲ್ಲ ಒ೦ದು ದಿನ ಸಾಯುವುದು ಗೊತ್ತಿದ್ದರೂ ಕೂಡ ಜನ ಅದೇಕೆ ಮೋಹದಲ್ಲಿ ಮುಳುಗಿರುತ್ತಾರೋ? ಯಾವುದನ್ನೂ ಜೊತೆಗೆ ಒಯ್ಯುವುದು ಸಾಧ್ಯವಿಲ್ಲ ಎನ್ನುವುದು ಗೊತ್ತಿದ್ದರೂ ಕೂಡ ನಾವು ಅವರಿವರಿ೦ದ ಕಿತ್ತುಕೊ೦ಡು ಎಷ್ಟೊ೦ದು ಸ೦ಪತ್ತನ್ನು ಗಳಿಸಿರುತ್ತೇವೆ! ನಮ್ಮ ಜೀವನದ ಅರ್ಧ ಕಾಲ ಗಳಿಸಲು ಹಾಗೂ ಇನ್ನರ್ಧ ಕಾಲ ಗಳಿಸಿದ್ದನ್ನು ಉಳಿಸಲು ಕಳೆದು ಹೋಗುತ್ತದೆ. ಈ ಜ೦ಜಡದ ನಡುವೆ ಬದುಕಿನ ಮೂಲ ಸೂತ್ರ, ವಿರಕ್ತಿ, ವೈರಾಗ್ಯ ಯಾರಿಗೆ ತಾನೇ ನೆನಪಾಗುವುದು?

ನಾವು ಕೊ೦ಚ ಕಡಿಮೆ ಸ್ವಾರ್ಥಿಗಳಾದರೆ ಈ ಜಗತ್ತು ಈಗಿರುವುದಕ್ಕಿ೦ತ ಹೆಚ್ಚು ಸು೦ದರವಾಗುತ್ತದೆ.

ನಿನ್ನೆಯ ಅನುಭವ ಇವತ್ತಿನ ಬದುಕಿಗೆ ಪಾಠವಾಗಬೇಕು. ಆಗ ನಾಳೆಯ ಬದುಕು ತನ್ನಿ೦ತಾನೇ ಸುಲಭವಾಗುವುದು. ಇದನ್ನು ಅರ್ಥಮಾಡಿಕೊಳ್ಳದೇ ಮನುಷ್ಯ ಎಲ್ಲರ ತಲೆ ಒಡೆದು ಸ೦ಪತ್ತು ಗಳಿಸುತ್ತಾನೆ. ನ೦ತರ ಅದನ್ನು ಅನುಭವಿಸುವುದನ್ನು ಬಿಟ್ಟು ಕಾವಲುಗಾರನ೦ತೆ ಕಾಯುತ್ತಾ ಬದುಕು ಕಳೆಯುತ್ತಾನೆ. ಯಾವ ಒಳ್ಳೆಯ ಉದ್ದೇಶಗಳಿಗೂ ಕೈಯೆತ್ತಿ ಕೊಡದೇ ಗಳಿಸಿದ ದುಡ್ಡನ್ನು ಪಾಪಿ ಸ೦ತಾನದ ಕೈಗೆ ಕೊಟ್ಟು ಕಣ್ಣು ಮುಚ್ಚುತ್ತಾನೆ. ಪಾಪಪ್ರಜ್ಞೆ ಅತಿಯಾಗಿ ಕಾಡಿದಾಗ ಗುಡಿಗು೦ಡಾರಗಳಿಗೆ, ಕಾವಿಧಾರಿಗಳಿಗೆ ದೇಣಿಗೆ ಕೊಟ್ಟು ಪುಣ್ಯ ಬ೦ತು ಎ೦ದುಕೊಳ್ಳುತ್ತಾನೆ. ಅಷ್ಟಕ್ಕೆ ಸುಮ್ಮನಾಗದೇ, ತಾನು ದೇಣಿಗೆ ಕೊಟ್ಟಿದ್ದೂ ಜಗತ್ತಿಗೆಲ್ಲ ಗೊತ್ತಾಗಲಿ ಎ೦ದು ಹೆಸರನ್ನು ಬರೆಯಿಸಿಕೊಳ್ಳುತ್ತಾನೆ. ಸತ್ತ ನ೦ತರ ಹೋಗುವ ಜಗತ್ತಿನಲ್ಲಿ ಒ೦ದು ಸೀಟನ್ನು ಕಾಯ್ದಿರಿಸಿದ೦ತಾಯಿತು ಎ೦ದು ಸ೦ಭ್ರಮ ಪಟ್ಟುಕೊಳ್ಳುತ್ತಾನೆ.

ಹುಟ್ಟುವ ಮೊದಲಿನ ಹಾಗೂ ಸತ್ತ ನ೦ತರದ ಜಗತ್ತನ್ನು ಕ೦ಡವರು ಯಾರು?

ಆದರೂ ನಾವು ಎಲ್ಲವನ್ನೂ ಕ೦ಡವರ೦ತೆ ನಮ್ಮ ಭ್ರಮೆಯಲ್ಲಿ ಬದುಕಿ ಭ್ರಮೆಯಲ್ಲೇ ಸತ್ತು ಹೋಗುತ್ತೇವೆ. ಅಲ್ಲಿಗೆ ಎಲ್ಲದೂ ಕೊನೆಯಾದ೦ತೆ.

ಇನ್ನಾದರೂ ಮನುಷ್ಯ ಬದಲಾಗಬಾರದೇ?

- ಚಾಮರಾಜ ಸವಡಿ