ನನ್ನೂರು ಅಳವಂಡಿಯ ಮುಖ್ಯಬೀದಿಯಲ್ಲೊಂದು ದೊಡ್ಡ ಅರಳಿ ಮರವಿತ್ತು.
ನಮ್ಮ ಬಾಲ್ಯದ ನೆನಪುಗಳ ತಾಯಿ ಬೇರಿನಂಥದು ಅದು. ನಾವು ಹಾರಿಸುತ್ತಿದ್ದ ಸಾವಿರ ಸಾವಿರ ಗಾಳಿಪಟಗಳನ್ನು ಅದು ತಡೆದು ನಿಲ್ಲಿಸಿತ್ತು. ಸಾವಿರಾರು ಹಕ್ಕಿಗಳಿಗೆ ಆಸರೆಯಾಗಿತ್ತು. ಪ್ರತಿ ಭಾನುವಾರ ನಡೆಯುತ್ತಿದ್ದ ಸಂತೆಯಲ್ಲಿ ದಣಿದವರಿಗೆ ನೆರಳಾಗಿತ್ತು. ಸಂತೆಯಿಲ್ಲದ ದಿನಗಳಲ್ಲಿ ದನಕರುಗಳಿಗೆ ಮನೆಯಾಗಿತ್ತು. ಬೇಸಿಗೆಯಲ್ಲಿ ಅದು ನಮಗೆ ಒಳಾಂಗಣ ಆಟದ ಮೈದಾನ.
ಅದರ ರೆಂಬೆಕೊಂಬೆಗಳು ನಮ್ಮ ಬಾಲ್ಯದ ಸಾವಿರಾರು ಜಗಳಗಳನ್ನು, ಅಷ್ಟೇ ಪ್ರಮಾಣದ ಮರುಹೊಂದಾಣಿಕೆಗಳನ್ನೂ ನೋಡಿವೆ. ದೂರ ಅಳೆಯಲು ಮರವೇ ಮೈಲಿಗಲ್ಲಾಗಿತ್ತು. ಬಸವಣ್ಣನ ಗುಡಿಯಿಂದ ಆ ಮರದ ತನಕ ಎಂಬುದು ದೂರವಳೆಯುವ ಮಾಪಕ. ಆಟವಾಡುವಾಗ, ಅದು ಹಿರಿಯಜ್ಜಿಯಂತೆ. ಕಣ್ಣಾಮುಚ್ಚಾಲೆ ಆಟ ಶುರುವಾಗುತ್ತಿದ್ದುದೇ ಮರದ ಬುಡದಲ್ಲಿ. ಕೈಚಪ್ಪಾಳೆಯಲ್ಲಿ ಸೋತವ ಮರದ ಬೃಹತ್ ಕಾಂಡಕ್ಕೆ ಮುಖ ಮಾಡಿ ಕಣ್ಣುಮುಚ್ಚಿಕೊಂಡು, ’ಕಣ್ಣೇ ಮುಚ್ಚೇ, ಕಾಡೇಗೂಡೇ...’ ಎಂದು ಹಾಡುತ್ತಿದ್ದಾಗ, ನಾವೆಲ್ಲ ಅದರ ಸುತ್ತಮುತ್ತಲಿನ ಮನೆ, ಅಂಗಡಿ, ಹಿತ್ತಿಲುಗಳಲ್ಲಿ ಅವಿತುಕೊಳ್ಳುತ್ತಿದ್ದೆವು. ಮರ ಎಲ್ಲರನ್ನೂ ನೋಡುತ್ತ ಸುಮ್ಮನೇ ಹುಸಿನಗು ಬೀರುತ್ತ ನಿಂತಿರುತ್ತಿತ್ತು.
ಕ್ರಮೇಣ ಬಾಲ್ಯ ಕಳಚಿಕೊಂಡು ದೊಡ್ಡವರಾದೆವು. ಆಗ ನಮಗಿಂತ ಚಿಕ್ಕವರೊಂದಿಗೆ ಮರ ಆಟವಾಡುತ್ತಿತ್ತು. ಮುಂದೆ ಓದಲೆಂದು ಬೇರೆ ಊರಿಗೆ ಹೋದವರ ಮನಸ್ಸಿನಲ್ಲಿ ಊರಿನ ನೆನಪು ಸುಳಿದಾಗ, ಮರ ಆ ನೆನಪಿನ ಅವಿಭಾಜ್ಯ ಅಂಗವಾಗಿತ್ತು.
ಮುಂದೆ ಮರದ ಸುತ್ತಮುತ್ತಲಿನ ಕಟ್ಟಡಗಳು ಹೊಸ ರೂಪ ಕಂಡವು. ಕಿರಿದಾಗಿದ್ದ ಬೀದಿ ಅಗಲವಾಯ್ತು. ಹಳೆಯ ವಿದ್ಯುತ್ ಕಂಬಗಳ ಜಾಗದಲ್ಲಿ ಹೊಸ ಕಂಬಗಳು ಬಂದವು. ಮರ ಮಾತ್ರ ಹೊಸ ಹಸಿರಿನೊಂದಿಗೆ ನಳನಳಿಸುತ್ತ ಹಾಗೇ ನಿಂತಿತ್ತು. ಎಂಥಾ ಬಿರುಗಾಳಿಗೂ ಜಗ್ಗದೇ, ಬರಕ್ಕೂ ಕುಗ್ಗದೇ, ತನ್ನ ಬೃಹತ್ ಕಾಯದಿಂದ ಯಾರಲ್ಲಿಯೂ ಭೀತಿ ಮೂಡಿಸದೇ ಮನೆಯ ಹಿರಿಯನಂತೆ ತಣ್ಣಗಿತ್ತು.
ಪ್ರತಿಯೊಬ್ಬರ ಬಾಲ್ಯದಲ್ಲಿಯೂ ಶಾಶ್ವತ ಸ್ಥಾನ ಸಂಪಾದಿಸಿದ್ದ ಮರ ಯಾರ ತಂಟೆಗೂ ಹೋಗಿರಲಿಲ್ಲ. ಯಾರ ಅಸ್ತಿತ್ವಕ್ಕೂ ಧಕ್ಕೆ ತಂದಿರಲಿಲ್ಲ. ರಸ್ತೆ ಅಗಲ ಮಾಡುವಾಗಲೂ ಯಾರೂ ಅದರ ತಂಟೆಗೆ ಹೋಗಿರಲಿಲ್ಲ. ಹಾಗೆ ನೋಡಿದರೆ, ಆ ಮರ ಯಾರಿಗೆ ಸೇರಿದ್ದೆಂಬುದೇ ಯಾರಿಗೂ ಗೊತ್ತಿರಲಿಲ್ಲ. ಊರಿನ ದೇವಸ್ಥಾನ, ಶಾಲೆ, ಕೆರೆ, ಆಟದ ಮೈದಾನದಂತೆ ಈ ಮರ ಕೂಡ ಊರಿನ ಅಂಗವಾಗಿತ್ತು.
ಕ್ರಮೇಣ ರಾಜಕಾರಣದ ವಿಷ ನಮ್ಮೂರಿಗೂ ವ್ಯಾಪಿಸಿತು. ಗ್ರಾಮ ಪಂಚಾಯತ್ ಚುನಾವಣೆಗಳು ಹಿಂದೆಂದಿಗಿಂತ ಹೆಚ್ಚು ಜಿದ್ದಿನಿಂದ ನಡೆಯತೊಡಗಿದವು. ಪಕ್ಷ ರಾಜಕಾರಣದ ನಂಜು ಏರುತ್ತ ಹೋಯಿತು. ಓದಿದವರು ನೌಕರಿಯ ಹಂಗಿಗೆ ಸಿಲುಕಿದೆವು. ನೌಕರಿ ಸಿಗದವರು ರಾಜಕೀಯಕ್ಕೆ ಇಳಿದರು. ನಮ್ಮೂರ ಹೊಲಗಳಲ್ಲಿ ರಾಸಾಯನಿಕ ಗೊಬ್ಬರ, ಕೀಟನಾಶಕದ ಬಳಕೆ ಹೆಚ್ಚಿದಂತೆ, ಆ ಎಲ್ಲಾ ವಿಷ ನಮ್ಮವರ ರಕ್ತನಾಳಗಳಲ್ಲಿಯೂ ಇಳಿಯಿತೇನೋ ಎಂಬಂತೆ ಗ್ರಾಮ ಪಂಚಾಯತ್‌ನವರ ಕಣ್ಣು ಮರದ ಮೇಲೆ ಬಿತ್ತು.
ಪಂಚಾಯತಿಗೆ ಆದಾಯದ ಕೊರತೆ ಇದೆ. ಅದಕ್ಕೆ ಈ ಮರ ಕಡಿದು ಮಾರಿ ಆದಾಯ ಹೆಚ್ಚಿಸಿಕೊಳ್ಳಬೇಕೆಂಬ ಧೂರ್ತ ವಿಚಾರ ಕೆಲವರಿಗೆ ಬಂದಿತು. ಇದಕ್ಕೆ ವಿರೋಧ ವ್ಯಕ್ತಪಡಿಸಿದವರಿಗೆ ಪ್ರತಿಪಕ್ಷದ ಜವಾಬ್ದಾರಿ ನಿರ್ವಹಿಸುವ ತುರ್ತು ಜೋರಾಗಿತ್ತೇ ವಿನಾ ಮರದ ಮೇಲೆ ಕಾಳಜಿ ಇದ್ದಿಲ್ಲ.
ಕೊನೆಗೊಂದಿನ ಮರ ಕಡಿದರು. ದಿನವೇನು ಒಂದು ವಾರದ ತನಕ ಕಡಿದರು. ತಮ್ಮ ಆಟದ ಗೆಳೆಯ ಇಲ್ಲವಾಗುತ್ತಿದ್ದುದನ್ನು ಮಕ್ಕಳು ನಿಂತು ನೋಡಿದವು. ನಾಳೆಯಿಂದ ಆಡುವುದೆಲ್ಲಿ ಎಂಬ ನೋವು ಅವಕ್ಕೆ. ಕಡಿದ ಮರದಲ್ಲಿ ತಮಗೆಷ್ಟು ಸಿಗಬಹುದು ಎಂಬ ಲೆಕ್ಕಾಚಾರ ಗ್ರಾಮ ಪಂಚಾಯತ್ ಸದಸ್ಯರಿಗೆ. ಸಂತೆ ದಿನ ಅಂಗಡಿ ಇಡುವುದೆಲ್ಲಿ ಎಂಬ ಚಿಂತೆ ತರಕಾರಿ ವ್ಯಾಪಾರಿಗಳಿಗೆ. ಹೊಸ ಮನೆ ಹುಡುಕುವ ಅನಿವಾರ್ಯತೆ ಮರದಲ್ಲಿ ಮನೆ ಮಾಡಿದ್ದ ಹಕ್ಕಿಗಳಿಗೆ. ಪ್ರಮುಖ ಮೈಲಿಗಲ್ಲೊಂದು ಇಲ್ಲವಾದ ಖಾಲಿತನ ಊರವರಿಗೆ.
ನಾನಾಗ ತುತ್ತಿನ ಚೀಲ ತುಂಬಿಸಲು ದೂರದ ಗುಜರಾತ್‌ನಲ್ಲಿದ್ದೆ. ರಜೆಯಲ್ಲಿ ಊರಿಗೆ ಬಂದಾಗ, ಮುಖ್ಯ ಬೀದಿ ಏಕೋ ಭಣಗುಟ್ಟುತ್ತಿದೆ ಎಂಬ ಭಾವನೆ. ತಕ್ಷಣ ಏಕೆ ಎಂಬುದು ಗೊತ್ತಾಗಲಿಲ್ಲ. ಮನೆಗೆ ಬಂದು ಊಟ ಮಾಡುತ್ತಿದ್ದಾಗ, ಊರು ಬದಲಾದಂತೆ ಅನಿಸುತ್ತಿದೆ ಎಂದೆ. ’ದೊಡ್ಡ ಮರ ಕಡಿದರು’ ಎಂದಳು ಅವ್ವ.
ಊಟ ಮುಗಿಸಿದವನು ಬಜಾರು ಎಂದು ಕರೆಯುತ್ತಿದ್ದ ಮುಖ್ಯ ಬೀದಿಗೆ ಹೋದೆ.
ಇಡೀ ಬೀದಿ ಬಣಗುಡುತ್ತಿತ್ತು. ಮರದ ಜಾಗದಲ್ಲಿ ದೊಡ್ಡ ಹೊಂಡದಂಥ ತೆಗ್ಗು. ನೆನಪುಗಳನ್ನು ಹೂತಿದ್ದಾರೇನೋ ಎಂಬ ಭಾವನೆ. ಬಾಲ್ಯದ ಬಲವಾದ ಬೇರೊಂದನ್ನು ಕಿತ್ತೆಸೆದಂಥ ನೋವು. ತುಂಬ ಹೊತ್ತು ಮರವಿದ್ದ ಜಾಗ ದಿಟ್ಟಿಸುತ್ತ ಸುಮ್ಮನೇ ನಿಂತಿದ್ದೆ.
ಆ ದೊಡ್ಡ ಮರ ಕಡಿದ ಹಲವಾರು ದಿನಗಳವರೆಗೆ ಪ್ರತಿ ಸಂಜೆ ಸಾವಿರಾರು ಹಕ್ಕಿಗಳು ಮರವಿದ್ದ ಜಾಗದಲ್ಲಿ ಹಾರಾಡುತ್ತಿದ್ದವಂತೆ. ದನಕರುಗಳು ಏನನ್ನೋ ಕಳೆದುಕೊಂಡಂತೆ ಓಡಾಡುತ್ತಿದ್ದವಂತೆ. ನಿತ್ಯದ ಕೆಲಸಗಳಿಗೆ ಅತ್ತ ಕಡೆ ಹೋಗುತ್ತಿದ್ದ ಜನ ಕೂಡ ಅಚಾನಕ್ಕಾಗಿ ಮರವಿದ್ದ ಕಡೆ ನೋಡುತ್ತಿದ್ದರಂತೆ. ಮರ ಇಲ್ಲವಾದ ಶೂನ್ಯ ಪ್ರಾಣಿಪಕ್ಷಿ ಮನುಷ್ಯರನ್ನು ಒಂದೇ ತೆರನಾಗಿ ಕಾಡಿತ್ತು.
ಆದರೆ, ಆ ದೊಡ್ಡ ಮರ ಇವತ್ತಿಗೂ ನನ್ನ ಬಾಲ್ಯದ ನೆನಪುಗಳ ಕೋಶದಲ್ಲಿ ಜೀವಂತವಾಗಿದೆ. ಅಲ್ಲಿ ಹಕ್ಕಿಗಳು ಗೂಡುಕಟ್ಟಿವೆ. ದನಕರುಗಳು ಆಸರೆ ಪಡೆದಿವೆ. ಮಕ್ಕಳು ಆಡುತ್ತವೆ. ನಾಗರಿಕತೆಯ ನಂಜು ಏರಿರದ ದಿನಗಳ ಸೊಗಸು ಹಾಗೇ ಉಳಿದಿದೆ. ಇವತ್ತಿನ ಬೀದಿಯನ್ನು ಅವತ್ತಿನ ಮರಸಹಿತ ಬೀದಿಯೊಂದಿಗೆ ಸಾವಿರಾರು ಸಾರಿ ಹೋಲಿಸಿ ನೋಡಿದ್ದೇನೆ. ಪ್ರತಿ ಸಾರಿಯೂ ಮರವಿದ್ದ ಬೀದಿಯೇ ಆಪ್ಯಾಯಮಾನವಾಗಿ ಕಂಡಿದೆ.
ಮರ ಕಡಿದು ಬಹುಶಃ ಇಪ್ಪತ್ತು ವರ್ಷಗಳಾಗಿರಬಹುದು. ಇವತ್ತಿಗೂ ಊರಿಗೆ ಹೋದರೆ ಅಚಾನಕ್ಕಾಗಿ ಮರವಿದ್ದ ಜಾಗವನ್ನು ದಿಟ್ಟಿಸುತ್ತೇನೆ. ಹಳೆಯ ಗೆಳೆಯನೊಬ್ಬ ಅಲ್ಲಿದ್ದಾನೇನೋ ಎಂಬಂತೆ. ಹಿಂದೆಯೇ ನಿರಾಸೆ ಉಕ್ಕುತ್ತದೆ. ಎಂದಿಗೂ ಮರಳಿ ಬಾರದ ಬಾಲ್ಯದಂತೆ, ಆ ದೊಡ್ಡ ಮರವೂ ಮತ್ತೆ ಬರುವುದಿಲ್ಲ.
ಅದೀಗ ಅಳಿಸಲಾಗದ ನೆನಪಾಗಿ ಉಳಿದಿದೆ. ಈಡೇರದ ಕನಸಿನಂತೆ ಮತ್ತೆ ಮತ್ತೆ ಕಾಡುತ್ತದೆ.
- ಚಾಮರಾಜ ಸವಡಿ
Subscribe to:
Post Comments (Atom)
10 comments:
ಹೌದು ಸರ್ ಇಂಥ ಸಾಕಷ್ಟು ನೆನಪುಗಳು ನಮ್ಮನ್ನು ಕಾಡ್ತಾ ಇರುತ್ತವೆ.ನಮ್ಮ ದೊಡ್ಡ ಸೋದರ ಮಾವ ಇರುವ ಊರಲ್ಲಿ ದಡದ ಕೆರೆ ಇತ್ತು,ಆದರೆ ಅದು ಸಪೂರ್ಣ ಕೆರೆಯಲ್ಲ ..ಅದರ ತುಂಬೆಲ್ಲ ಮರಗಳು ,ಕಣಿಗಲೆ ..ರಾಶಿರಾಶಿ ಗಿಡಗಳು.ಅಲ್ಲೂ ನೀವು ಹೇಳಿದ ಪರಿಸ್ಥಿತಿ..ಈಗ ಮರಗಳೂ ಇಲ್ಲ,ಕಣಿಗಳೇ ಗಿಡಗಳೂ! ಕಳೆದ ತಿಂಗಳು ಜಾತ್ರೆಗೆ ಹೋಗಿದ್ದೆ,ತುಂಬಾ ನೆನಪಿಗೆ ಬಂತು ಅವೆಲ್ಲ...!
ಮತ್ತೆ ಹೇಗಿದ್ದೀರಿ ಸರ್..ನನ್ ನೆನಪಿದೆಯಾ ????? :-)
Nice one. Ishtavaytu. By the way memories are always fresh, they have no age.
Nenapu sadaa hasiru. Nenapugalige vayassaguvudilla.
ಹೌದು ಸಾರ್... ಬಾಲ್ಯದಲ್ಲಿ ಒಡನಾಟಕ್ಕೆ ಬಂದ ಮರ, ಕಲ್ಲು, ಜಾಗ ಎಲ್ಲವೂ ಏನೋ ಒಂದು ರೀತಿ ಜೀವಕ್ಕೆ ಆಪ್ತವಾಗಿಬಿಟ್ಟಿರುತ್ತವೆ. ಅವು ಇಲ್ಲವಾದಾಗ, ಖಿನ್ನತೆ ತುಂಬಾ ಕಾಡತ್ತೆ... ಅಜ್ಜಿಯ ಮನೆಯಲ್ಲಿ ಮನೆ ಕಟ್ಟಲು ಸೀಬೆ ಹಣ್ಣಿನ ಮರ, ಘಂಟೆ ದಾಸವಾಳದ ಮರ, ಹಲಸಿನ ಮರ ಎಲ್ಲಾ ಕಡಿದಾಗ, ನಾವು ಮಕ್ಕಳೆಲ್ಲಾ ಹೀಗೇ ಅತ್ತಿದ್ದೆವು. ಅದು ನೆನಪಾಯ್ತು ನಿಮ್ಮ ಬರಹ ಓದಿ...
ಹೌದು ಜಯಶ್ರೀ ಅವರೇ,
ನೆನಪುಗಳು ನಮ್ಮ ಪ್ರೇರಕ ಶಕ್ತಿ ಇದ್ದಂತೆ. ಆದರೆ, ಕಾಲ ಉರುಳಿದಂತೆ ಹಳೆಯದೆಲ್ಲ ಬದಲಾಗುತ್ತ ಹೋಗುತ್ತದೆ. ನೆನಪಿನ ಭಾಗವಾಗಿ ಉಳಿಯುತ್ತವೆ.
ಥ್ಯಾಂಕ್ಸ್ ದೀಪಕ್,
ನಿಮ್ಮ ಬ್ಲಾಗ್ ನೋಡ್ತಾ ಇರ್ತೇನೆ. ಚೆನ್ನಾಗಿದೆ.
ಹೌದು ಶ್ಯಾಮಲಾ,
ಹಳೆಯದರ ಆಪ್ತತೆ ಖಿನ್ನತೆಯನ್ನು ತರುವಷ್ಟು ಆಳ ಮತ್ತು ತೀವ್ರ. ಹೀಗಾಗಿ, ಅವಕ್ಕೆ ಧಕ್ಕೆ ಒದಗಿದಾಗ ನೋವಾಗುತ್ತದೆ.
lekana tumba estavayitu sir. odida nantar nanna balyad nenapugalu manasinalli huvinante aralidavu.
jotege kadidavu.
Thanks.
ಮರ, ಪಶು, ಪಕ್ಷಿ... ಹೀಗೆ ಎಲ್ಲದರ ಬದುಕು ಕಿತಕೊಂಡ ತನ್ನ ಬದುಕು ಕಟ್ಟಾಕ ಹೋಗಿ ಹೋಗಿ ಮನಸ್ಯಾ ಕಿಸಬಾಯಿ ಆಗ್ಯಾನ... ನಿಮ್ಮ ಲೇಖನಕ್ಕ ಮರಗಳೂ ಥ್ಯಾಂಕ್ಸ್ ಹೇಳ್ತಾವು...
ನಾಗರಾಜ ಬೆಲ್ಲದ್,ಫೊಟೋಗ್ರಾಫರ್ ಕೊಪ್ಪಳ.
ನಮಸ್ಕಾರ ಸರ್ , ನಾನು ನಿಮ್ಮ ಲೇಖನ ಓದಿದ್ದು ಇದೇ ಮೊದಲು,ದ:ಖಾಂತ್ಯದ ಸಿನಿಮಾ ನೋಡಿದ ಅನುಭವ ಆಯ್ತು.
ನರಕ್ಕೆ(ಮನುಷ್ಯ) ಇದೆಯಂತೆ ಮರಕ್ಕಾದ್ರು ಇರಬಾರದಾ ಈ ಪುನರ್ ಜನ್ಮ
ಥ್ಯಾಂಕ್ಸ್ ಶರಣು, ದಿಲ್ ಹಾಗೂ ನಾಗರಾಜ್. ಎಲ್ಲರ ನೆನಪುಗಳೂ ಹೀಗೇ ತಾನೆ?
Post a Comment