Showing posts with label ಕರ್ನಾಟಕ. Show all posts
Showing posts with label ಕರ್ನಾಟಕ. Show all posts

ಕರ್ನಾಟಕ ಏಕೀಕರಣ

1 Nov 2010

2 ಪ್ರತಿಕ್ರಿಯೆ

ಮೂವತ್ತು ಜಿಲ್ಲೆಗಳು, ೧೭೫ ತಾಲ್ಲೂಕುಗಳು, ೨೭,೦೨೮ ಕಂದಾಯ ಗ್ರಾಮಗಳು, ಆರು ಕೋಟಿ ಜನ, ,೯೧,೧೯೧ ಚದರ ಕಿಮೀ ವಿಸ್ತೀರ್ಣ, ಒಂದು ರಾಜ್ಯ-

ಅದು ಕರ್ನಾಟಕ.

ಇವತ್ತು ಯಾವುದನ್ನು ನಾವು ವಿಶಾಲ ಕರ್ನಾಟಕ, ಅಖಂಡ ಕರ್ನಾಟಕ ಎಂದು ಕರೆಯುತ್ತೇವೆಯೋ ಅದು ಐದೂವರೆ ದಶಕಗಳ ಹಿಂದೆ ಸುಮಾರು ೨೦ ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿತ್ತು. ಕರ್ನಾಟಕ ಎಂಬುದು ಅಸ್ತಿತ್ವದಲ್ಲೇ ಇರಲಿಲ್ಲ ಎಂದರೆ ಅಚ್ಚರಿಯಾಗುತ್ತಿದೆಯೆ?

ಕನ್ನಡ ಮಾತನಾಡುವ ಜನರೆಲ್ಲ ಒಂದೇ ಪ್ರದೇಶಕ್ಕೆ ಸೇರಬೇಕೆಂಬ ಕನಸು ಮೊಳೆತಾಗ ಪರಿಸ್ಥಿತಿ ಹೇಗಿತ್ತೆಂದರೆ, ನಮ್ಮಲ್ಲಿ ಸ್ವಂತಿಕೆ ಎಂಬುದೇ ಇರಲಿಲ್ಲ. ಇದು ನಮ್ಮ ನೆಲ ಎಂದು ಹೇಳಿಕೊಳ್ಳಲು ಮೈಸೂರು ಸಂಸ್ಥಾನ ಹೊರತುಪಡಿಸಿ ಬೇರೆ ನಿರ್ದಿಷ್ಟ ಪ್ರದೇಶವೇ ಇದ್ದಿಲ್ಲ. ಉಳಿದ ಪ್ರಾಂತ್ಯಗಳ ಆಡಳಿತದಲ್ಲಿ ಕನ್ನಡ, ಕನ್ನಡಿಗರಿಗೆ ಪ್ರಾಧಾನ್ಯತೆ ಇದ್ದಿಲ್ಲ. ಭಾಷೆ ಅಷ್ಟೇ ಅಲ್ಲ, ಪ್ರಾದೇಶಿಕ ಪ್ರಗತಿಯಲ್ಲಿ ಕೂಡ ಅಸಮಾನತೆ ಇತ್ತು. ಕನ್ನಡಿಗರು ಪರಕೀಯರಂತೆ ಜೀವನ ನಡೆಸುವ ಅಸಹನೀಯ ಪರಿಸ್ಥಿತಿ ಇತ್ತು.

ಪ್ರಾತಃಸ್ಮರಣೀಯರು

ಈ ಸಂದರ್ಭದಲ್ಲಿ ಕನ್ನಡದ ಪರವಾಗಿ ಕೆಲಸ ಮಾಡಿದ ಕೆಲ ಮಹನೀಯರನ್ನು ನೆನೆಯಲೇಬೇಕು. ಸರ್ ವಾಲ್ಟರ್ ಎಲಿಯಟ್, ಸರ್ ಥಾಮಸ್ ಮನ್ರೋ, ಜಾನ್ ಎ. ಡನ್‌ಲಪ್, ಗ್ರೀನ್ ಹಿಲ್, ಆರ್. ಗ್ರಾಂಟ್, ಡಬ್ಲ್ಯು.ಎ. ರಸೆಲ್, ಜೆ.ಎಫ್. ಫ್ಲೀಟ್‌ರಂತಹ ಬ್ರಿಟಿಷ್ ಅಧಿಕಾರಿಗಳು ಕನ್ನಡ ಕಟ್ಟುವ ಕೆಲಸ ಮಾಡಿದರು. ಅವರಿಗೆ ಕೈ ಜೋಡಿಸಿದ್ದು ಡೆಪ್ಯುಟಿ ಚೆನ್ನಬಸಪ್ಪನವರಂತಹ ಕನ್ನಡಿಗ ಅಧಿಕಾರಿ. ಜೊತೆಗೆ, ರಾ.ಹ. ದೇಶಪಾಂಡೆ, ರೊದ್ದ ಶ್ರೀನಿವಾಸರಾವ್, ಆಲೂರು ವೆಂಕಟರಾವ್ ಮುಂತಾದ ಹಿರಿಯರು ಕನ್ನಡ ಮಾತನಾಡುವ ಜನರೆಲ್ಲರನ್ನೂ ಹೊಂದಿರುವ ಒಂದು ಪ್ರಾಂತ್ಯ ರಚನೆಯಾಗಬೇಕೆಂದು ಕನಸು ಕಂಡರು.

ಕರ್ನಾಟಕ ಏಕೀಕರಣದ ಕನಸು ಮೊಳೆತಿದ್ದು ಹೀಗೆ. ಜೊತೆಗೆ, ಇಂಥದೊಂದು ಕನಸು ಮೊಳೆಯಲು ಕೆಲ ಐತಿಹಾಸಿಕ ಘಟನೆಗಳೂ ಕಾರಣವಾಗಿವೆ.

೧೯೦೫ರ ಆಗಸ್ಟ್ ೧೬ರಂದು ಆಗಿನ ಬ್ರಿಟಿಷ್ ಸರ್ಕಾರ ಬಂಗಾಳ ರಾಜ್ಯದ ವಿಭಜನೆಗೆ ಮುಂದಾಯಿತು. ಇದನ್ನು ಪ್ರತಿಭಟಿಸಿದ ಬಂಗಾಳಿಗಳು ವಂಗಭಂಗಎಂದು ದೊಡ್ಡ ಚಳವಳಿಯನ್ನೇ ರೂಪಿಸಿದರು. ಹೋರಾಟ ತೀವ್ರಗೊಂಡಾಗ, ಮಣಿದ ಬ್ರಿಟಿಷ್ ಸರ್ಕಾರ ೧೯೧೨ರಲ್ಲಿ ಬಂಗಾಳವನ್ನು ಪುನಃ ಒಂದು ಮಾಡಿತು. ಕನ್ನಡಿಗರನ್ನು ಒಂದೆಡೆ ಸೇರಿಸುವ ಕೆಲ ಪ್ರಾತಃಸ್ಮರಣೀಯರಿಗೆ ಈ ಘಟನೆ ದೊಡ್ಡ ಪ್ರೇರಣೆಯಾಯಿತು.

ಕರ್ನಾಟಕ ವಿದ್ಯಾವರ್ಧಕ ಸಂಘ

ಮುಂದೆ ಕ್ರಮೇಣ, ಕರ್ನಾಟಕ ಏಕೀಕರಣಕ್ಕೆ ಈ ನಾಯಕರು ಆಗ್ರಹಿಸತೊಡಗಿದರು. ಕರ್ನಾಟಕ ರೂಪುಗೊಳ್ಳಲು ಕಾರಣರಾದವರ ಪೈಕಿ ಒಬ್ಬರಾದ ರಾ.ಹ. ದೇಶಪಾಂಡೆ ಹಾಗೂ ಕೆಲವು ಸಮಾನ ಮನಸ್ಕರು ಒಂದೆಡೆ ಸೇರಿದರು. ಕನ್ನಡ ಭಾಷೆಯ ದುಃಸ್ಥಿತಿ ದೂರ ಮಾಡಲೆಂದು ೨೦-೭-೧೮೯೦ರಲ್ಲೇ ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಧಾರವಾಡದಲ್ಲಿ ಸ್ಥಾಪಿಸಿದ್ದರು.

ಕನ್ನಡದಲ್ಲಿ ಶಿಕ್ಷಣ ಪ್ರಸಾರಕ್ಕೆ ಪ್ರೋತ್ಸಾಹ, ಪ್ರಾಚೀನ ಕನ್ನಡ ಕೃತಿಗಳ ಸಂಪಾದನೆ ಮತ್ತು ಪ್ರಕಟಣೆ, ಕನ್ನಡದಲ್ಲಿ ಸ್ವತಂತ್ರ ಕೃತಿಗಳ ರಚನೆ, ಉತ್ತಮ ಮತ್ತು ಉಪಯುಕ್ತ ಕೃತಿಗಳ ಅನುವಾದ ಮತ್ತು ಪ್ರಕಟಣೆಗೆ ಪ್ರೋತ್ಸಾಹ, ಗ್ರಂಥ ಭಂಡಾರಗಳ ಸ್ಥಾಪನೆ ಮತ್ತು ನಿರ್ವಹಣೆಗೆ ನೆರವು ನೀಡುವುದು ಸಂಸ್ಥೆಯ ಮೂಲ ಉದ್ದೇಶವಾಗಿತ್ತು.

ಈ ಉದ್ದೇಶಗಳನ್ನು ಸಾಧಿಸುವುದರ ಜೊತೆಗೆ ಸಂಘ ೧೮೯೬ರಲ್ಲಿ ವಾಗ್ಭೂಷಣಎಂಬ ಮಾಸಪತ್ರಿಕೆ ಆರಂಭಿಸಿತು. ಆ ಮೂಲಕ ವಿವಿಧ ಲೇಖಕರ ಪ್ರಬುದ್ಧ ಲೇಖನಗಳನ್ನು ಪ್ರಕಟಿಸಿ, ಚಿಂತನೆಗಳ ವಿನಿಮಯಕ್ಕೆ ನೆರವಾಯಿತು. ಲೇಖಕರನ್ನು ಬೆಳೆಸಿದ ಸಂಘ, ಕನ್ನಡ ಗ್ರಂಥಗಳ ಭಾಷೆಯಲ್ಲಿ ಏಕರೂಪತೆ ಇರಬೇಕೆಂಬ ಕಾರಣದಿಂದ ೧೯೦೭ರ ಜೂನ್ ತಿಂಗಳ ಮೊದಲ ವಾರದಲ್ಲಿ ಧಾರವಾಡದಲ್ಲಿ ಅಖಿಲ ಕರ್ನಾಟಕ ಗ್ರಂಥಕರ್ತರ ಮೊದಲ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿತು.

ಕನ್ನಡ ಸಾಹಿತ್ಯ ಪರಿಷತ್ತು

ಎರಡನೆಯ ಸಮ್ಮೇಳನವನ್ನು ಮೈಸೂರು ಸರ್ಕಾರದ ಶಿಕ್ಷಣ ಇಲಾಖೆ ಬೆಂಗಳೂರಿನಲ್ಲಿ ನಡೆಸಬೇಕಾಗಿತ್ತು. ಅದು ಸಾಧ್ಯವಾಗಲಿಲ್ಲ. ಮೂರನೆಯ ಸಮ್ಮೇಳನವನ್ನಾದರೂ ಬೆಂಗಳೂರಿನಲ್ಲಿ ನಡೆಸಬೇಕು ಎಂಬ ಪ್ರಯತ್ನದ ಫಲವಾಗಿ ೧೯೧೫ರಲ್ಲಿ ಸ್ಥಾಪನೆಯಾದದ್ದು ಕರ್ನಾಟಕ ಸಾಹಿತ್ಯ ಪರಿಷತ್ತು. ನಂತರ ಇದು ಕನ್ನಡ ಸಾಹಿತ್ಯ ಪರಿಷತ್ತು ಎಂದು ಹೆಸರು ಬದಲಾಯಿಸಿಕೊಂಡಿತು. ಸಾಹಿತ್ಯ ಸಮ್ಮೇಳನಗಳ ಸಂದರ್ಭದಲ್ಲಿ ಕರ್ನಾಟಕ ಏಕೀಕರಣದ ಪರವಾಗಿ ದನಿ ಎತ್ತುವ ಮೂಲಕ ಏಕೀಕರಣದ ಬೇಡಿಕೆಗೆ ಪರಿಷತ್ತು ವೇದಿಕೆ ಕಲ್ಪಿಸಿತು.

ಕರ್ನಾಟಕ ಕುಲ ಪುರೋಹಿತ

ಎಲ್ಲರಿಗಿಂತ ಪ್ರಮುಖ ಸ್ಥಾನದಲ್ಲಿ ನಿಲ್ಲುವ ವ್ಯಕ್ತಿ ಎಂದರೆ ಆಲೂರು ವೆಂಕಟರಾಯರು. ಕರ್ನಾಟಕ ಏಕೀಕರಣದ ಬಗ್ಗೆ ಕನಸು ಕಂಡಿದ್ದಲ್ಲದೇ ಅದರ ಸಾಕಾರಕ್ಕೆ ದುಡಿದ ಹಿರಿಯ ಜೀವ ಇದು. ಆದ್ದರಿಂದಲೇ ಅವರು ಕರ್ನಾಟಕ ಕುಲ ಪುರೋಹಿತಎನಿಸಿಕೊಂಡರು. ಕರ್ನಾಟಕದ ಗತವೈಭವಗ್ರಂಥ ರಚಿಸಿದ ಆಲೂರು ವೆಂಕಟರಾಯರು, ’ಕರ್ನಾಟಕ ಹೊರಗಟ್ಟದ ಹೊರತು ನಾನು ಕರ್ನಾಟಕವನ್ನು ಬಿಡುವುದಿಲ್ಲಎಂಬ ಪ್ರತಿಜ್ಞೆ ಮಾಡಿದ್ದರು. ಕರ್ನಾಟಕ ಏಕೀಕರಣದ ಪರವಾಗಿ ನಿರಂತರ ಹೋರಾಟ ನಡೆಸಿದ ಮಹಾನ್ ವ್ಯಕ್ತಿ ಇವರು.

ಆಲೂರು ವೆಂಕಟರಾಯರು, ಗದಿಗೆಯ್ಯ ಹೊನ್ನಾಪುರಮಠ ಮತ್ತು ಕಡಪಾ ರಾಘವೇಂದ್ರರಾಯರು ಸೇರಿ ೧೯೧೬ರಲ್ಲಿ ಸ್ಥಾಪಿಸಿದ ಕರ್ನಾಟಕ ಸಭೆಕರ್ನಾಟಕ ಏಕೀಕರಣದ ಬೇಡಿಕೆಗೆ ಇಂಬು ಕೊಟ್ಟಿತು. ರಾಜಕೀಯ ಬೆಂಬಲವನ್ನೂ ಪಡೆದಿದ್ದ ಕರ್ನಾಟಕ ಸಭೆಯ ಏಕೀಕರಣದ ವಿಷಯದಲ್ಲಿ ಹಲವಾರು ಹೋರಾಟಗಳನ್ನು ನಡೆಸಿತು. ಇದರ ಪ್ರೇರಣೆಯಿಂದ ನಾಡಹಬ್ಬಗಳು ನಡೆದವು. ಸಕ್ಕರಿ ಬಾಳಾಚಾರ್ಯ, ಡಾ. ಯು. ರಾಮರಾವ್, ಮುದವೀಡು ಕೃಷ್ಣರಾವ್, ಕಡಪಾ ರಾಘವೇಂದ್ರ ರಾವ್, ಮಂಗಳವೇಡೆ ಶ್ರೀನಿವಾಸರಾವ್ ಮುಂತಾದ ಹಿರಿಯರು ಸಭೆಯ ಜೊತೆ ಗುರುತಿಸಿಕೊಂಡಿದ್ದರು.

೧೯೧೮ರಲ್ಲೇ ಭಾರತದಲ್ಲಿ ಭಾಷಾವಾರು ಪ್ರಾಂತ ರಚನೆಯ ಸಂಬಂಧ ಮಾಂಟೆಗ್ಯೂ-ಚೆಲ್ಮ್ಸ್‌ಫರ್ಡ್ ಸಮಿತಿ ನೇಮಕಗೊಂಡಿತ್ತು. ಆ ಸಮಿತಿಯು ದೇಶವನ್ನು ಭಾಷಾವಾರು ಪ್ರಾಂತ್ಯಗಳನ್ನಾಗಿ ವಿಭಾಗಿಸುವುದು ಅಗತ್ಯ ಎಂದು ಶಿಫಾರಸು ಮಾಡಿತು. ಇದನ್ನು ಆಗಿನ ಬ್ರಿಟಿಷ್ ಸರ್ಕಾರ ಕೂಡ ಒಪ್ಪಿಕೊಂಡಿತ್ತು.
 
೧೯೨೦ರಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದ ಕಾಂಗ್ರೆಸ್ ಮಹಾಧಿವೇಶನ ಏಕೀಕರಣದ ನಿಟ್ಟಿನಲ್ಲಿ ಒಂದು ಮಹತ್ವದ ವೇದಿಕೆ. ಕರ್ನಾಟಕ ಪ್ರತಿನಿಧಿಗಳ ಒತ್ತಡಕ್ಕೆ ಮಣಿದು, ಬ್ರಿಟಿಷ್ ಆಳ್ವಿಕೆಗೆ ಸೇರಿದ್ದ ಕನ್ನಡ ಭಾಷಿಕ ಪ್ರದೇಶಗಳನ್ನು ಕರ್ನಾಟಕ ಕಾಂಗ್ರೆಸ್ ಸಮಿತಿಯ ವ್ಯಾಪ್ತಿಗೆ ಸೇರಿಸಲಾಯಿತು. ಆಗ ತಲೆ ಎತ್ತಿದ್ದು ಬಳ್ಳಾರಿ ಜಿಲ್ಲೆಯನ್ನು ಯಾವ ಪ್ರದೇಶಕ್ಕೆ ಸೇರಿಸಬೇಕೆಂಬುದು. ಈ ಸಮಸ್ಯೆ ನಿವಾರಿಸಲು ನೇಮಿಸಲ್ಪಟ್ಟ ಕೇಳ್ಕರ್ ಅವರ ವರದಿಯ ಪ್ರಕಾರ, ಆಲೂರು, ಆದವಾನಿ ಮತ್ತು ರಾಯದುರ್ಗ ತಾಲ್ಲೂಕುಗಳನ್ನು ಹೊರತುಪಡಿಸಿ, ಉಳಿದ ಬಳ್ಳಾರಿ ಜಿಲ್ಲೆಯು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವ್ಯಾಪ್ತಿಗೆ ಸೇರಿತು.

ಏಕೀಕರಣಕ್ಕೆ ವೇದಿಕೆಯಾದ ಬೆಳಗಾವಿ ಅಧಿವೇಶನ

೧೯೨೪ರಲ್ಲಿ ಬೆಳಗಾವಿಯಲ್ಲಿ ಮಹಾತ್ಮಾ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್‌ನ ಮಹಾಧಿವೇಶನದ ಸಂದರ್ಭದಲ್ಲಿ ಕರ್ನಾಟಕ ಏಕೀಕರಣಕ್ಕೆ ವಿಶೇಷ ಚಾಲನೆ ದೊರೆಯಿತು. ಕರ್ನಾಟಕ ಸಭೆಯ ಮೊದಲ ಪರಿಷತ್ತು ಬೆಳಗಾವಿಯಲ್ಲಿ ೨೫-೧೨-೧೯೨೪ರಂದು, ಸರ್ ಸಿದ್ದಪ್ಪ ಕಂಬಳಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಆ ಸಂದರ್ಭದಲ್ಲಿ ಹುಯಿಲಗೋಳ ನಾರಾಯಣರಾಯರು ರಚಿಸಿದಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡುಗೀತೆಯನ್ನು ಮೊದಲ ಬಾರಿಗೆ ಹಾಡಲಾಯಿತು.

ಮದ್ರಾಸ್ ಮತ್ತು ಮುಂಬಯಿ ಆಧಿಪತ್ಯದ ವಿಧಾನ ಸಭೆಗಳಲ್ಲೂ ಕರ್ನಾಟಕ ಏಕೀಕರಣದ ವಿಷಯ ಪ್ರಸ್ತಾಪಿತಗೊಂಡಿತು. ಮದ್ರಾಸ್ ವಿಧಾನ ಸಭೆಯಲ್ಲಿ ಎ. ರಂಗನಾಥ ಮೊದಲಿಯಾರ್, ಜೆ.ಎ. ಸಲ್ಡಾನ, ಎ.ಬಿ. ಶೆಟ್ಟಿ, ಡಾ. ನಾಗನಗೌಡ ಮುಂತಾದ ಸದಸ್ಯರು ಕರ್ನಾಟಕ ಏಕೀಕರಣವನ್ನು ಬೆಂಬಲಿಸಿದರೂ ಸರ್ಕಾರ ಅದನ್ನು ತಿರಸ್ಕರಿಸಿತು. ಮುಂಬಯಿ ವಿಧಾನ ಸಭೆಯಲ್ಲಿ ೧೯೧೯ರಲ್ಲಿ ವಿ.ಎನ್. ಜೋಗ್ ಕರ್ನಾಟಕ ಪ್ರಾಂತ ರಚನೆಗೆ ಕೋರಿ ಠರಾವು ಮಂಡಿಸಿದ್ದರು. ಆದರೆ, ಅದು ತಿರಸ್ಕೃತವಾಯಿತು. ೧೯೨೬ರಲ್ಲಿ ಸರ್ ಸಿದ್ದಪ್ಪ ಕಂಬಳಿ ಪುನಃ ಕರ್ನಾಟಕ ಪ್ರಾಂತ ರಚನೆಗೆ ಠರಾವು ಮಂಡಿಸಿದರಾದರೂ, ಏಕೀಕರಣಕ್ಕೆ ಕನ್ನಡಿಗರ ಬೆಂಬಲವಿಲ್ಲ ಎಂಬ ಕಾರಣ ನೀಡಿ ಸರ್ಕಾರ ಠರಾವನ್ನು ತಿರಸ್ಕರಿಸಿತು.

ಕೊನೆಗೆ ಮುಹೂರ್ತ ಕೂಡಿ ಬಂದಿದ್ದು ೧೯೩೮ರ ಮೇ ತಿಂಗಳ ಮೊದಲ ವಾರ. ಆಗ ನಡೆದ ಮುಂಬಯಿ ಶಾಸನ ಸಭೆ ಕರ್ನಾಟಕ ಏಕೀಕರಣ ಗೊತ್ತುವಳಿಯನ್ನು ಸ್ವೀಕರಿಸಿತು. ಚರ್ಚೆಯಲ್ಲಿ ಪಾಲ್ಗೊಂಡಿದ್ದ ಬಿ.ಜಿ. ಖೇರ್, ಸರ್ ಸಿದ್ದಪ್ಪ ಕಂಬಳಿ, ವಿ.ಎನ್. ಜೋಗ್ ಗೊತ್ತುವಳಿಯನ್ನು ಅನುಮೋದಿಸಿದರು. ಆದರೆ, ಎರಡನೇ ಜಾಗತಿಕ ಯುದ್ಧ ಪ್ರಾರಂಭವಾಗಿದ್ದರಿಂದ ಭಾಷಾವಾರು ಪ್ರಾಂತ ರಚನೆ ಆಗಲಿಲ್ಲ.

ಸಮಗ್ರ ಕರ್ನಾಟಕದ ಕನಸು

೨೫-೧೨-೧೯೪೪ರಂದು ಧಾರವಾಡದಲ್ಲಿ ೯ನೆಯ ಕರ್ನಾಟಕ ಏಕೀಕರಣ ಪರಿಷತ್ತು ಸಮಾವೇಶದಲ್ಲಿ ಸ್ವಾಗತಾಧ್ಯಕ್ಷರಾಗಿದ್ದ ಎಸ್.ಎಸ್. ಮಳೀಮಠ್, ಕರ್ನಾಟಕ ಏಕೀಕರಣವೆಂದರೆ, ಬ್ರಿಟಿಷ್ ಕರ್ನಾಟಕ ಪ್ರಾಂತಗಳಷ್ಟೇ ಅಲ್ಲ, ಸಂಸ್ಥಾನಗಳೂ ಸೇರಿದಂತೆ ಸಮಗ್ರ ಕರ್ನಾಟಕದ ಏಕೀಕರಣ ಎಂದು ಸಾರಿದರು.

೩೧-೮-೧೯೪೬ರಂದು ದಾವಣಗೆರೆಯಲ್ಲಿ ನಡೆದ ಕರ್ನಾಟಕಸ್ಥರ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಮುಂಬಯಿ ಆಧಿಪತ್ಯದ ಕೃಷಿ ಮಂತ್ರಿ ಎಂ.ಪಿ. ಪಾಟೀಲರು ಭಾರತಕ್ಕೆ ಸ್ವಾತಂತ್ರ್ಯವು ಹೇಗೋ ಹಾಗೆ ಕರ್ನಾಟಕಕ್ಕೆ ಸ್ವಾಯತ್ತತೆಎಂದು ಘೋಷಿಸಿದರು. ಕರ್ನಾಟಕ ಏಕೀಕರಣಕ್ಕೆ ಕೆಲವು ಸಂಸ್ಥಾನಿಕರು ಅಡ್ಡಿಯಾಗಿದ್ದಾರೆ ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಬಳ್ಳಾರಿಯ ಕೋ. ಚೆನ್ನಬಸಪ್ಪ ಸಾಧ್ಯವಾದರೆ ಮೈಸೂರನ್ನು ಒಳಗೊಂಡು, ಅಗತ್ಯವಾದರೆ ಅದನ್ನು ಬಿಟ್ಟು ಕರ್ನಾಟಕ ಏಕೀಕರಣವಾಗಬೇಕುಎಂಬ ಗೊತ್ತುವಳಿ ಮಂಡಿಸಿದರು.

ಆದರೆ, ಕೆಂಗಲ್ ಹನುಮಂತಯ್ಯನವರು ಮೈಸೂರನ್ನು ಒಳಗೊಂಡು ಕರ್ನಾಟಕ ರಾಜ್ಯ ನಿರ್ಮಾಣವಾಗಬೇಕುಎಂದು ಗೊತ್ತುವಳಿಗೆ ತಿದ್ದುಪಡಿ ತಂದರು. ಗೊತ್ತುವಳಿಯನ್ನು ಜಾರಿಗೆ ತರಲು ಎಂ.ಪಿ. ಪಾಟೀಲ, ಎಸ್. ನಿಜಲಿಂಗಪ್ಪ ಮತ್ತು ಕೆ.ಬಿ. ಜಿನರಾಜ ಹೆಗ್ಗಡೆ ಅವರಿದ್ದ ಸಮಿತಿ ರಚನೆಯಾಯಿತು.

ಸ್ವತಂತ್ರ ರಾಜ್ಯದತ್ತ...

ಮುಂಬಯಿ ಶಾಸನ ಸಭೆಯಲ್ಲಿ ೧-೪-೧೯೪೭ರಂದು ರೋಣದ ಅಂದಾನಪ್ಪ ದೊಡ್ಡಮೇಟಿ ಅವರು ಪ್ರತ್ಯೇಕ ಕರ್ನಾಟಕ ಪ್ರಾಂತ್ಯ ರಚನೆಗೆ ಒತ್ತಾಯಿಸಿ ಖಾಸಗಿ ಗೊತ್ತುವಳಿ ಮಂಡಿಸಿದರು. ಕೆಲವು ತಿದ್ದುಪಡಿಗಳೊಂದಿಗೆ ಗೊತ್ತುವಳಿಯು ೬೦ ಮತಗಳನ್ನು ಪಡೆದು ಸ್ವೀಕೃತವಾಯಿತು. ವಿರುದ್ಧ ಬಂದದ್ದು ಕೇವಲ ಆರು ಮತಗಳು. ಮದ್ರಾಸ್ ಶಾಸನ ಸಭೆಯಲ್ಲಿಯೂ ಡಾ. ಪಿ. ಸುಬ್ಬರಾಯನ್ ಭಾಷಾವಾರು ಪ್ರಾಂತ್ಯ ರಚನೆಯ ಸಂಬಂಧ ಮಂಡಿಸಿದ ಗೊತ್ತುವಳಿ ಸ್ವೀಕೃತವಾಯಿತು.

ಸ್ವತಂತ್ರ ಭಾರತದ ಸಂವಿಧಾನದ ರಚನೆಗೆ ಸೇರಿದ್ದ ಘಟನಾ ಸಮಿತಿಯ ಮೇಲೂ ಭಾಷಾವಾರು ಪ್ರಾಂತ್ಯ ರಚನೆಗೆ ಒತ್ತಡ ಹೆಚ್ಚಿತು. ಅಂದಿನ ಘಟನಾ ಸಮಿತಿಯ ಸಭೆಯಲ್ಲೇ ಭಾಷಾವಾರು ಪ್ರಾಂತ್ಯ ರಚನೆ ಕುರಿತು ವರದಿ ಸಿದ್ಧಪಡಿಸಲು ಉಪ ಸಮಿತಿಯೊಂದರ ರಚನೆಯಾಯಿತು.

೧೯೪೭ರ ಆಗಸ್ಟ್ ೧೫ರಂದು ಭಾರತ ಸ್ವತಂತ್ರವಾಯಿತು. ಆದರೆ, ಭಾರತ ಒಕ್ಕೂಟದ ಜೊತೆ ಮೈಸೂರು ಸಂಸ್ಥಾನ ಸೇರ್ಪಡೆಯಾಗಿದ್ದು ೧೯೪೭ರ ಅಕ್ಟೋಬರ್ ೨೪ರಂದು. ಹೈದರಾಬಾದ್ ಕರ್ನಾಟಕದ ಸೇರ್ಪಡೆ ೧೯೪೮ರ ಸೆಪ್ಟೆಂಬರ್ ೧೭ರಂದು.

ಜೂನ್ ೧೭ರಂದೇ ೧೯೪೮ರಂದೇ ಭಾಷಾವಾರು ಪ್ರಾಂತ್ಯ ರಚನೆಗೆ ಸಂಬಂಧಿಸಿದಂತೆ ವರದಿ ನೀಡಲು, ಅಲಹಾಬಾದ್ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎಸ್.ಕೆ. ಧರ್ ಅಧ್ಯಕ್ಷತೆಯಲ್ಲಿ ಆಯೋಗ ನೇಮಿಸಿತ್ತು. ಆದರೆ, ವರದಿ ಭಾಷಾವಾರು ಪ್ರಾಂತ್ಯ ರಚನೆ ವಿರುದ್ಧವಾಗಿ ಬಂತು.

ಕರ್ನಾಟಕ ಏಕೀಕರಣ ಪರಿಷತ್ತು

ನ್ಯಾಯಮೂರ್ತಿ ಧರ್ ಆಯೋಗದ ವರದಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಾದ ಸಮಿತಿಯಲ್ಲಿದ್ದ ಜವಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಪಟ್ಟಾಭಿರಾಮಯ್ಯ ಕೂಡಾ ಆಯೋಗದ ಶಿಫಾರಸುಗಳನ್ನೇ ಎತ್ತಿ ಹಿಡಿಯಿತು. ಇದನ್ನು ಖಂಡಿಸಿ ರಾಜ್ಯದ ಎಲ್ಲೆಡೆ ಸಭೆ, ಸಮಾರಂಭ ಮತ್ತು ಸಮ್ಮೇಳನಗಳು ನಡೆದವು. ಕಾಂಗ್ರೆಸ್ ನಾಯಕರಿಂದ ಕರ್ನಾಟಕ ಏಕೀಕರಣ ಸಾಧ್ಯವಾಗದು ಎಂಬ ಅಭಿಪ್ರಾಯದಿಂದ ಪಕ್ಷೇತರ ಕರ್ನಾಟಕ ಏಕೀಕರಣ ಪರಿಷತ್ತು ಸ್ಥಾಪಿತವಾಗಿ, ಏಕೀಕರಣಕ್ಕೆ ಹೊಸ ತಿರುವು ಬಂದಿತು.

ಈ ಮಧ್ಯೆ ಆಂಧ್ರ ಪ್ರಾಂತ ರಚನೆಗೆ ಒತ್ತಾಯಿಸಿ, ೧೯೫೧ರ ಆಗಸ್ಟ್‌ನಲ್ಲಿ ಪೊಟ್ಟಿ ಶ್ರೀರಾಮುಲು ತಿರುಪತಿಯಲ್ಲಿ ೩೭ ದಿನಗಳ ಉಪವಾಸ ಮಾಡಿದರು. ನಂತರ ಎರಡನೆಯ ಬಾರಿಗೆ ಆಮರಣಾಂತ ಉಪವಾಸಕ್ಕೆ ಕೈಹಾಕಿದ ಪೊಟ್ಟಿ ಶ್ರೀರಾಮುಲು, ೫೮ ದಿನಗಳ ಉಪವಾಸ ಮಾಡಿ ನಿಧನರಾದರು. ಇದರಿಂದ ಎಚ್ಚೆತ್ತ ಲೋಕಸಭೆ, ಮದರಾಸ್ ನಗರವನ್ನು ಬಿಟ್ಟು ಆಂಧ್ರ ಪ್ರಾಂತ ರಚನೆಗೆ ನಿರ್ಧರಿಸಿತು. ಬಳ್ಳಾರಿ ತಾಲ್ಲೂಕಿನ ಬಗ್ಗೆ ಸ್ಪಷ್ಟ ಅಭಿಪ್ರಾಯ ಸಲ್ಲಿಸುವಂತೆ ರಾಷ್ಟ್ರಪತಿಗಳು ಹೈದರಾಬಾದ್‌ನ ಮುಖ್ಯ ನ್ಯಾಯಾಧೀಶ ಎಲ್.ಎಸ್. ಮಿಶ್ರಾ ಅವರಿಗೆ ಜವಾಬ್ದಾರಿ ಕೊಟ್ಟಿತು.

ಆಂಧ್ರಕ್ಕಿಂತ ಕರ್ನಾಟಕದ ಪರ ೯೦ ಮನವಿಗಳು ಹೆಚ್ಚಾಗಿ ಬಂದವು. ಜೊತೆಗೆ, ಕೊನೆಯ ಘಳಿಗೆಯಲ್ಲಿ ಕರ್ನಾಟಕದ ಖ್ಯಾತ ಇತಿಹಾಸ ತಜ್ಞ ಆರ್.ಎಸ್. ಪಂಚಮುಖಿ ಅವರ ಅಭಿಪ್ರಾಯವೂ ರಾಜ್ಯದ ಪರವಾಗಿಯೇ ಬಂದಿದ್ದರಿಂದ, ಬಳ್ಳಾರಿ ತಾಲ್ಲೂಕನ್ನು ಕರ್ನಾಟಕಕ್ಕೇ ಸೇರಿಸಲು ಮಿಶ್ರಾ ಶಿಫಾರಸು ಮಾಡಿದರು.

ಹುಬ್ಬಳ್ಳಿ ಗೋಲಿಬಾರ್

ಈ ಸಂದರ್ಭದಲ್ಲೇ, ಹುಬ್ಬಳ್ಳಿಯ ಸಮೀಪದ ಅದರಗುಂಚಿಯಲ್ಲಿ, ಶಂಕರಗೌಡ ಪಾಟೀಲರು ೨೮-೩-೧೯೫೩ರಂದು ಕರ್ನಾಟಕ ಏಕೀಕರಣಕ್ಕೆ ಆಗ್ರಹಿಸಿ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದರು. ೧೯-೪-೧೯೫೩ರಂದು ಹುಬ್ಬಳ್ಳಿಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿ ಸಮಿತಿಯ ಸಭೆ ನಡೆಯಲಿದ್ದ ವಿಷಯ ತಿಳಿದ ಕರ್ನಾಟಕ ಏಕೀಕರಣ ಕಾರ್ಯಕರ್ತರು ಬೆಳಗಿನಿಂದಲೇ ಗುಳಕವ್ವನ ಕಟ್ಟೆ ಮೈದಾನದಲ್ಲಿ ಗುಂಪುಗೂಡಿದರು. ಕಾಂಗ್ರೆಸ್ ನಾಯಕರಿಂದ ರಾಜೀನಾಮೆ ಪಡೆಯುವುದೇ ಅವರ ಉದ್ದೇಶವಾಗಿತ್ತು. ಪುರಸಭಾ ಭವನಕ್ಕೆ ಕಾಂಗ್ರೆಸ್ ನಾಯಕರು ಬರುತ್ತಿದ್ದಂತೆಯೇ ಅವರಿಗೆ ಅರಿಶಿನ ಹಚ್ಚಿ, ಕುಂಕುಮವಿಟ್ಟು, ಬಳೆ ತೊಡಿಸಿ ರಾಜೀನಾಮೆಗೆ ಒತ್ತಾಯಿಸುತ್ತಿದ್ದರು.

ಮೊದಮೊದಲು ಶಾಂತಿಯುತವಾಗಿದ್ದ ಪ್ರತಿಭಟನೆ ಕ್ರಮೇಣ ಉಗ್ರವಾಯಿತು. ಗುದ್ಲೆಪ್ಪ ಹಳ್ಳಿಕೇರಿ ಅವರ ಜೀಪಿಗೆ ಬೆಂಕಿ ಹಚ್ಚಿದರು. ಪೊಲೀಸರ ನಿಯಂತ್ರಣ ತಪ್ಪಿದಾಗ ಲಾಠೀ ಚಾರ್ಜ್ ಅಲ್ಲದೆ, ಗೋಲೀಬಾರ್ ಕೂಡಾ ಮಾಡಲಾಯಿತು. ಗಲಭೆಗೆ ಕಾರಣಕರ್ತರೆಂದು ಬಂಧಿತರಾದವರ ವಿಚಾರಣೆ ನಡೆಯಿತು. ಆಗ ಸ್ಥಾನಬದ್ಧತಾ ಕಾನೂನಿನ ಅಡಿಯಲ್ಲಿ ಬಂಧಿತರಾಗಿದ್ದವರ ಪರ ವಾದಿಸಿದವರು ಮಾಜಿ ಮುಖ್ಯಮಂತ್ರಿ ದಿ. ಎಸ್.ಆರ್. ಬೊಮ್ಮಾಯಿ.

ಏಕೀಕರಣಕ್ಕೆ ಹೆಚ್ಚಿದ ಒತ್ತಡ

ಹುಬ್ಬಳ್ಳಿ ಗಲಭೆಯ ನಂತರ, ಮಿಶ್ರಾ ವರದಿ ಸ್ವೀಕೃತವಾಗಿ ಆಂಧ್ರ ಪ್ರದೇಶದ ರಚನೆ ಖಚಿತವಾಯಿತು. ಕಾಂಗ್ರೆಸ್ ನಾಯಕರನ್ನೇ ನಂಬಿ ಕೂತರೆ ಕರ್ನಾಟಕ ಏಕೀಕರಣ ಸಾಧ್ಯವಿಲ್ಲ ಎಂಬ ಅಭಿಪ್ರಾಯವಿದ್ದ ಕಾಂಗ್ರೆಸ್ಸೇತರ ಪಕ್ಷದ ಕೆಲವು ಮುಖಂಡರು ೨೮-೫-೧೯೫೩ರಂದು ದಾವಣಗೆರೆಯಲ್ಲಿ ಸಭೆ ಸೇರಿ, ’ಕರ್ನಾಟಕ ರಾಜ್ಯ ನಿರ್ಮಾಣ ಮಾಡುವುದು ಕನ್ನಡಿಗರ ಜನ್ಮಸಿದ್ಧ ಹಕ್ಕುಎಂಬ ಘೋಷಣೆಯೊಂದಿಗೆ, ಮಾಜಿ ಸಂಸದ ದಿ. ಅಳವಂಡಿ ಶಿವಮೂರ್ತಿ ಸ್ವಾಮಿ ಮತ್ತು ಕೆ.ಆರ್. ಕಾರಂತರ ನೇತೃತ್ವದಲ್ಲಿ ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತುಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು. ಏಕೀಕರಣ ಹೋರಾಟಕ್ಕೆ ಜನಾಂದೋಲನದ ಸ್ವರೂಪ ನೀಡುವಲ್ಲಿ ಪರಿಷತ್ತು ಯಶ್ವಸಿಯಾಯಿತು. ೧೯೫೩ರ ಅಕ್ಟೋಬರ್ ಒಂದರಂದು ಆಂಧ್ರ ಪ್ರದೇಶ ರಚನೆಯಾದ ಸಂದರ್ಭದಲ್ಲೇ ಬಳ್ಳಾರಿ ಜಿಲ್ಲೆ ಮೈಸೂರು ಸಂಸ್ಥಾನದಲ್ಲಿ ವಿಲೀನಗೊಂಡಿತು.

ಕರ್ನಾಟಕ ಏಕೀಕರಣಕ್ಕಾಗಿ ಜನಾಂದೋಲನ ಹೆಚ್ಚಿದಾಗ, ಕೇಂದ್ರ ಸರ್ಕಾರ ೨೯-೧೨-೧೯೫೩ರಂದು ರಚಿಸಿದ್ದ ಫಜಲ್ ಆಲಿ ನೇತೃತ್ವದ ರಾಜ್ಯ ಪುನರ್ವಿಂಗಡಣಾ ಆಯೋಗ ಕರ್ನಾಟಕ ರಾಜ್ಯ ರಚನೆಯ ಅಗತ್ಯತೆಯನ್ನು ಎತ್ತಿ ಹಿಡಿಯಿತು. ಅದರ ಕರಡು ವರದಿಯಲ್ಲಿ ಇಡಿಯಾಗಿ ಬಳ್ಳಾರಿ ಜಿಲ್ಲೆಯನ್ನು ಆಂಧ್ರಕ್ಕೆ ಸೇರಿಸಲು ಶಿಫಾರಸು ಮಾಡಿತ್ತು. ಅದನ್ನು ವಿರೋಧಿಸಿ, ಬಳ್ಳಾರಿ ಜಿಲ್ಲೆಯಾದ್ಯಂತ ತುಂಗಭದ್ರಾ ನದಿ ನೀರು ಹೋರಾಟ ನಡೆಯಿತು. ರಾಜ್ಯ ಪುನರ್ವಿಂಗಡಣಾ ಆಯೋಗವು ಹಿಂದಿನ ವರದಿಗಳನ್ನು ಪರಿಶೀಲಿಸಿ, ಬಂದ ಸಾವಿರಗಟ್ಟಲೆ ಮನವಿಗಳ ಅಧ್ಯಯನ ಮಾಡಿ, ಕೇಂದ್ರ ಸರ್ಕಾರಕ್ಕೆ ೧೯೫೫ರ ಅಕ್ಟೋಬರ್ ೧೦ರಂದು ತನ್ನ ವರದಿಯನ್ನು ಸಲ್ಲಿಸಿತು.

ರಾಜ್ಯ ಪುನರ್ವಿಂಗಡಣಾ ಆಯೋಗದ ವರದಿಯ ಬಗ್ಗೆ ಸಂಸತ್ತು ೧೯೫೬ರ ಜನವರಿ ೧೯ರಂದು ಚರ್ಚಿಸಿ, ೧೯೫೬ರ ಮಾರ್ಚ್ ೧೯ರಂದು ವಿಧೇಯಕ ಪ್ರಕಟಿಸಿತು. ಅದರ ಪ್ರಕಾರ ೧೯೫೬ರ ನವೆಂಬರ್ ೧ರಂದು ಕರ್ನಾಟಕ (ಆಗ ಮೈಸೂರು) ರಾಜ್ಯ ಅಸ್ತಿತ್ವಕ್ಕೆ ಬರಲಿತ್ತು. ಆಗ ಈ ಪ್ರದೇಶಗಳು ಹೊಸ ರಾಜ್ಯದಲ್ಲಿ ಸೇರ್ಪಡೆಯಾಗಬೇಕಿತ್ತು:

೧. ಇಡಿಯಾಗಿ ಮೈಸೂರು ರಾಜ್ಯ.
೨. ಮುಂಬಯಿ ರಾಜ್ಯದ ಬಿಜಾಪುರ, ಧಾರವಾಡ, ಉತ್ತರ ಕನ್ನಡ ಮತ್ತು ಬೆಳಗಾವಿ (ಚಾಂದಘಡ ತಾಲ್ಲೂಕನ್ನು ಬಿಟ್ಟು) ಜಿಲ್ಲೆಗಳು.
೩. ಹೈದರಾಬಾದ್ ರಾಜ್ಯದ ಗುಲಬರ್ಗಾ ಜಿಲ್ಲೆ (ಕೊಡಂಗಲ್ ಮತ್ತು ತಾಂಡೂರು ತಾಲ್ಲೂಕುಗಳನ್ನು ಬಿಟ್ಟು), ರಾಯಚೂರು ಜಿಲ್ಲೆ (ಆಲಂಪುರ ಮತ್ತು ಗದ್ವಾಲ್ ತಾಲ್ಲೂಕುಗಳನ್ನು ಬಿಟ್ಟು) ಮತ್ತು ಬೀದರ್ ಜಿಲ್ಲೆಯ ಬೀದರ್, ಭಾಲ್ಕಿ, ಔರಾದ್ (ಸಂತಪುರ) ಮತ್ತು ಹುಮನಾಬಾದ್ ತಾಲ್ಲೂಕುಗಳು.
೪. ಮದ್ರಾಸ್ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆ (ಕಾಸರಗೋಡು ತಾಲ್ಲೂಕು ಮತ್ತು ಅಮೀನ್ ದ್ವೀಪಗಳನ್ನು ಬಿಟ್ಟು) ಮತ್ತು ಕೊಯಮತ್ತೂರು ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕು.
೫. ಕೊಡಗು ರಾಜ್ಯ.

ಈಡೇರಿದ ಕನಸು

ವಿಜಯನಗರ ಕಾಲದವರೆಗೂ ದೊಡ್ಡ ಸಾಮ್ರಾಜ್ಯವಾಗಿದ್ದ ಕರುನಾಡು ಟಿಪ್ಪು ಸುಲ್ತಾನ್‌ನ ಮರಣದ ನಂತರ ಬ್ರಿಟಿಷರ ಒಡೆದು ಆಳುವ ನೀತಿಯಿಂದ ಹಲವಾರು ಪ್ರಾಂತ್ಯಗಳಾಗಿ ವಿಭಜನೆಯಾಗಿ ವಿವಿಧ ಭಾಷೆಗಳ ಪ್ರಾಂತ್ಯಗಳಲ್ಲಿ ಇಲ್ಲವಾಗಿತ್ತು. ಈಗ ಕನ್ನಡಿಗರನ್ನೊಳಗೊಂಡ ಪ್ರತ್ಯೇಕ ರಾಜ್ಯ ಅಸ್ತಿತ್ವಕ್ಕೆ ಬರುತ್ತದೆಂಬ ಸಂತಸದ ಜೊತೆಗೆ, ಇದಕ್ಕಾಗಿ ಹೋರಾಡಿದ ಹಿರಿಯ ಜೀವಗಳು ಹಂಬಲಿಸಿದಂತೆ, ಪೂರ್ತಿ ಏಕೀಕರಣ ಸಾಧ್ಯವಾಗಲಿಲ್ಲ.

ಏಕೆಂದರೆ, ಕಾಸರಗೋಡು ಕೈಬಿಟ್ಟಿತ್ತು. ಅಕ್ಕಲಕೋಟೆ, ಸೊಲ್ಲಾಪುರಗಳು ಹೊರಗೇ ಉಳಿದಿದ್ದವು. ನೀಲಗಿರಿ ಕೂಡಾ ದಕ್ಕಲಿಲ್ಲ. ಏಕೀಕರಣದ ನಂತರವೂ ಪ್ರಾಚೀನ ಕಾಲದಿಂದ ಇದ್ದ ಕರ್ನಾಟಕ ಎಂಬ ಹೆಸರಿನ ಬದಲಾಗಿ ಮೈಸೂರು ರಾಜ್ಯವೆಂದು ಕರೆಯಲ್ಪಟ್ಟಿತು. ಕೊನೆಗೂ, ಸಾಕಷ್ಟು ಒತ್ತಡದ ನಂತರ, ೧೯೭೩ ನವೆಂಬರ್ ೧ರಂದು ರಾಜ್ಯಕ್ಕೆ ಕರ್ನಾಟಕ ಎಂದು ಪುನರ್ ನಾಮಕರಣ ಮಾಡಲಾಯಿತು.

ಏನೇ ಆದರೂ, ಬೇರೆ ಬೇರೆ ಪ್ರಾಂತಗಳಲ್ಲಿ ಹಂಚಿಹೋಗಿದ್ದ ಕನ್ನಡಿಗರು ೧೯೫೬ರ ನವೆಂಬರ್ ೧ರಂದು ಒಂದೇ ರಾಜ್ಯದ ಆಡಳಿತ ವ್ಯಾಪ್ತಿಗೆ ಬಂದಿದ್ದು ಒಂದು ಐತಿಹಾಸಿಕ ಹೋರಾಟದ ಫಲ. ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕರ್ನಾಟಕ ಶತಮಾನಗಳ ಸಂಕೋಲೆ ಕಳೆದುಕೊಂಡು ಎಲ್ಲ ರೀತಿಯಿಂದ ಒಂದಾಯಿತು. ಏಕೀಕರಣದ ಕನಸು ಈಡೇರುವ ಮೂಲಕ, ಕನ್ನಡಿಗರ ಭಾವನಾತ್ಮಕವಾಗಿಯೂ ಒಂದಾದರು. ಸಾಂಸ್ಕೃತಿಕ ಐಕ್ಯತೆಗೂ ಇಂಬು ದೊರೆಯಿತು.

ಇಂಥದೊಂದು ಕನಸನ್ನು ನನಸು ಮಾಡಲು ಹೋರಾಡಿದ ಎಲ್ಲರ ತ್ಯಾಗ ಮತ್ತು ಬಲಿದಾನದ ಫಲ ಈ ನಮ್ಮ ಹೆಮ್ಮೆಯ ಕರ್ನಾಟಕ. ಆ ಸ್ಫೂರ್ತಿ ಅಳಿಯದಿರಲಿ. ಸಮೃದ್ಧ ಹಾಗೂ ಸ್ವಾವಲಂಬಿ ಕರ್ನಾಟಕ ಬೇಗ ಮೈದಾಳಲಿ.

ಸಿರಿಗನ್ನಡಂಗೆಲ್ಗೆ !

- ಚಾಮರಾಜ ಸವಡಿ

ಕರ್ನಾಟಕ ಚುನಾವಣೆ-ಎರಡು ಹಂತಗಳು

18 May 2008

0 ಪ್ರತಿಕ್ರಿಯೆ

ಕರ್ನಾಟಕ ಚುನಾವಣೆ ಹೊಸದೊಂದು ಹೊಸ್ತಿಲು ತಲುಪಿದೆ.

ಎಲ್ಲ ಲೆಕ್ಕಾಚಾರಗಳು ಬಹುತೇಕ ಸರಿಯಾದರೆ, ಬಿಜೆಪಿ ಸರಳ ಬಹುಮತದ ಹತ್ತಿರ ಬರಲಿದೆ. ಎಲ್ಲ ವಾದ-ವಿವಾದಗಳನ್ನು ಮೀರಿ ಪ್ರಥಮ ಬಿಜೆಪಿ ಸರ್ಕಾರ (ಈ ಹಿಂದೆ ಆಗಿದ್ದು ಸಮ್ಮಿಶ್ರ ಸರ್ಕಾರ) ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರುವ ಲಕ್ಷಣಗಳು ಸ್ಪಷ್ಟ.

ಮೊದಲ ಹಂತದ ಚುನಾವಣೆಯಲ್ಲಿ ೮೯ ಸ್ಥಾನಗಳಿಗೆ ಚುನಾವಣೆ ನಡೆಯಿತು. ಸಮೀಕ್ಷೆಗಳ ಪ್ರಕಾರ ಬಿಜೆಪಿ ಸುಮಾರು ೩೯ ಸ್ಥಾನಗಳನ್ನು ಗಳಿಸಲಿದೆ. ಅಂದರೆ, ಜೆಡಿಎಸ್‌ ಪ್ರಬಲವಾಗಿರುವ ಹಳೆಯ ಮೈಸೂರು ವಿಭಾಗದಲ್ಲಿ ಅದು ಮುಂದಿದೆ ಎಂದಾಯಿತು. ಎರಡನೇ ಹಂತದಲ್ಲಿ ನಡೆದ ಹತ್ತು ಜಿಲ್ಲೆಗಳ ೬೬ ಕ್ಷೇತ್ರಗಳ ಚುನಾವಣೆಯಲ್ಲಿ ಅದು ಕನಿಷ್ಠ ೩೫ ಸ್ಥಾನಗಳನ್ನು ಗಳಿಸಲಿದೆ. ಅಂದರೆ, ಚುನಾವಣೆ ಮುಗಿದಿರುವ ೧೫೫ ಕ್ಷೇತ್ರಗಳಲ್ಲಿ ಬಿಜೆಪಿ ಗಳಿಸಬಹುದಾದ ಸ್ಥಾನಗಳು ೭೦ಕ್ಕೂ ಅಧಿಕ. ಮೂರನೇ ಹಂತದ ಚುನಾವಣೆಯಲ್ಲಿ ೬೯ ಸ್ಥಾನಗಳಿಗೆ ನಡೆಯಲಿರುವ ಸ್ಪರ್ಧೆಯಲ್ಲಿಯೂ ಇದೇ ಪ್ರಮಾಣದ ಮೇಲುಗೈ ಸಾಧಿಸುವ ಲಕ್ಷಣಗಳು ಸ್ಪಷ್ಟವಾಗಿವೆ.

ಅಂದರೆ, ಕರ್ನಾಟಕ ವಿಧಾನಸಭೆಯ ಒಟ್ಟು ೨೨೪ ಸ್ಥಾನಗಳ ಪೈಕಿ ಬಿಜೆಪಿ ೧೦೦ರಿಂದ ೧೧೦ ಸ್ಥಾನಗಳನ್ನು ಪಡೆಯುವ ಸಾಧ್ಯತೆಗಳಿವೆ. ಸರಳ ಬಹುಮತಕ್ಕೆ ೧೧೩ ಸ್ಥಾನಗಳು ಸಾಕು. ತನ್ನ ಹಾಗೂ ಇತರ ಪಕ್ಷದ ಬಂಡಾಯ ಅಭ್ಯರ್ಥಿಗಳು ಹಾಗೂ ಪಕ್ಷೇತರರನ್ನು ತನ್ನೆಡೆಗೆ ಸೆಳೆಯುವುದು ಬಿಜೆಪಿಗೆ ಕಷ್ಟವಾಗದು. ಆಗ ಸರಳ ಬಹುಮತಕ್ಕೆ ಇರುವ ಕೊರತೆ ಸರಳವಾಗಿಯೇ ನಿವಾರಣೆಯಾಗುತ್ತದೆ.

ಇವೆಲ್ಲ ಲಕ್ಷಣಗಳನ್ನು ನೋಡಿದರೆ, ರಾಜ್ಯಕ್ಕೆ ಈ ಬಾರಿ ಅತಂತ್ರ ವಿಧಾನಸಭೆ ಬೆದರಿಕೆ ಕಾಡುವುದಿಲ್ಲ. ಸ್ಪಷ್ಟ ಬಹುಮತ ಇಲ್ಲದಿದ್ದರೂ ಸರಳ ಬಹುಮತಕ್ಕೆ ಮೋಸವಿಲ್ಲ. ಬಿ.ಎಸ್‌. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಎಂದು ಬಿಂಬಿಸಿರುವುದರಿಂದ, ಆ ಗೊಂದಲವೂ ನಿವಾರಣೆಯಾಗಿದೆ. ರಾಜಕೀಯ ಪಂಡಿತರ ಲೆಕ್ಕಾಚಾರ, ಭವಿಷ್ಯ, ಊಹಾಪೋಹಗಳನ್ನು ಮೀರಿ ಮತದಾರ ಬಿಜೆಪಿ ಪರ ನಿಂತಿದ್ದಾನೆ.

ಇದು ಇವತ್ತಿನ ಪರಿಸ್ಥಿತಿ.

ಮಾಧ್ಯಮದ ಮೇಲೆ ಆರೋಪ

ಹಲವಾರು ಪ್ರಶ್ನೆಗಳಿಗೆ ಇಲ್ಲಿ ಉತ್ತರ ಅಗತ್ಯ. ಮೊದಲನೆಯದು, ಮಾಧ್ಯಮಗಳು ಬಿಜೆಪಿ ಪರ ನಿಂತವು ಎಂಬ ಆರೋಪದ ಬಗ್ಗೆ:

ಪತ್ರಿಕೆಗಳು ಹಾಗೂ ಪತ್ರಕರ್ತರು ಒಂದು ಪಕ್ಷ ಅಥವಾ ನಾಯಕನ ಪರ ನಿಲ್ಲುವುದು ಮೊದಲಿನಿಂದಲೂ ನಡೆದೇ ಇದೆ. ಆದರೆ, ಬಿಜೆಪಿಗೆ ’ಇದು ನಮ್ಮ ಪತ್ರಿಕೆ’ ಎಂಬ ಭಾವನೆ ಹುಟ್ಟಿಸಿದ ಪತ್ರಿಕೆಗಳು ಸದ್ಯಕ್ಕೆ ಯಾವೂ ಇಲ್ಲ. ಸಂಯುಕ್ತ ಕರ್ನಾಟಕ ಕಾಂಗ್ರೆಸ್‌ ಪರ. ಅದು ಬಹಿರಂಗವಾಗಿಯೇ ಕಂಡು ಬರುವಂಥದ್ದು. ಸ್ವಲ್ಪ ಮಟ್ಟಿಗೆ ವಿಜಯ ಕರ್ನಾಟಕ ಬಿಜೆಪಿ ಪರ ನಿಂತಿರುವುದೂ ಹೌದು. ಪ್ರಜಾವಾಣಿ ಇದ್ದುದರಲ್ಲಿಯೇ ನಿರ್ಲಿಪ್ತ. ಕುಮಾರಸ್ವಾಮಿ ಮುಖ್ಯಮಂತ್ರಿಯಾದ ನಂತರ, ಕನ್ನಡಪ್ರಭ ಕೊಂಚ ಮಟ್ಟಿಗೆ ಜೆಡಿಎಸ್‌ ಪರ ವಾಲಿದ್ದು ಸ್ವಯಂಗೋಚರ.

ಆದರೆ, ಯಾವ ಪತ್ರಿಕೆಯೂ ಬಿಜೆಪಿ ಪರ ಬಹಿರಂಗ ಪ್ರಚಾರ ನಡೆಸಿಲ್ಲ. ಅದೇ ರೀತಿ ದೃಶ್ಯ ಮಾಧ್ಯಮಗಳೂ ಪಕ್ಷ ನಿಷ್ಠೆ ವ್ಯಕ್ತಪಡಿಸಿಲ್ಲ. ಅಂಥದೊಂದು ಒಳ ಒಪ್ಪಂದ ಆದ ಹಾಗೂ ಕಂಡಿಲ್ಲ. ಚುನಾವಣೆ ಹತ್ತಿರ ಬಂದಾಗ, ಎಲ್ಲ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳು ಸಾರ್ವತ್ರಿಕ ಗೊಂದಲವನ್ನೇ ಬಿಂಬಿಸಿದವು. ಈ ಸಾರಿಯೂ ಅತಂತ್ರ ವಿಧಾನಸಭೆಯೇ ಬರಬಹುದು ಎಂದು ಅನುಮಾನ ವ್ಯಕ್ತಪಡಿಸಿದವು. ಬಿಜೆಪಿಗೆ ಸಹಾನುಭೂತಿ ವ್ಯಕ್ತವಾಗುತ್ತದಾದರೂ, ಅದು ಸರಳ ಬಹುಮತ ಗಳಿಸಿ ಕೊಡಲಾರದು ಎಂದೇ ಹೇಳಿದ್ದವು.

ಈ ನಿಟ್ಟಿನಲ್ಲಿ ಪತ್ರಿಕೆ ಹಾಗೂ ಟಿವಿ ಮಾಧ್ಯಮಗಳು ವಾಸ್ತವವನ್ನೇ ಬಿಂಬಿಸುತ್ತ ಬಂದಿವೆ. ಅಲ್ಲಲ್ಲಿ ಪಕ್ಷ ನಿಷ್ಠೆ ಹಾಗೂ ನಾಯಕ ನಿಷ್ಠೆ ಕಂಡಿದೆಯಾದರೂ ಅದು ಮತದಾರರನ್ನು ಪ್ರಭಾವಗೊಳಿಸುವ ಮಟ್ಟಿಗಂತೂ ಇದ್ದಿಲ್ಲ. ಇವತ್ತಿನ ಪರಿಸ್ಥಿತಿಯಲ್ಲಿ ಅಂಥದ್ದೊಂದು ಪ್ರಭಾವ ಬೀರಬಲ್ಲ ಮಾಧ್ಯಮವೂ ಇಲ್ಲ. ಪತ್ರಿಕೆಗಳ ಸಂಖ್ಯೆ, ಚಾನೆಲ್‌ಗಳ ಸಂಖ್ಯೆ ಹೆಚ್ಚಾದಂತೆ, ಪಕ್ಷ ನಿಷ್ಠೆ ಹರಿದು ಹಂಚಿಹೋಗಿದೆ. ಒಂದು ವೇಳೆ ಯಾವುದೇ ಪತ್ರಿಕೆ ಅಥವಾ ಚಾನೆಲ್‌ ಬಯಸಿದರೂ, ಅಂಥದೊಂದು ಪ್ರಭಾವ ವಲಯವನ್ನು ಸೃಷ್ಟಿಸಲಾರದು. ಇದು ಮಾಧ್ಯಮದ ಮಿತಿ.

ಒಬ್ಬ ಪತ್ರಕರ್ತನಾಗಿ ನಾನು ಮಾಧ್ಯಮಗಳ ಪರ ಮಾತನಾಡುತ್ತಿಲ್ಲ. ವಾಸ್ತವ ಏನಿದೆ ಎಂಬುದನ್ನು ಹೇಳುತ್ತಿದ್ದೇನೆ. ರಂಜನೀಯ ವರದಿಗಳು, ವಿಶೇಷ ವರದಿಗಳು ಹಾಗೂ ಸಂವಾದ ಕಾರ್ಯಕ್ರಮಗಳ ಹೊರತಾಗಿಯೂ ಮತದಾರ ತನಗನಿಸಿದ್ದನ್ನು ಮಾಡಬಲ್ಲ ಎಂಬುದಕ್ಕೆ ಚುನಾವಣೆ ಸಾಕ್ಷಿ. ಅಂತಿಮವಾಗಿ, ಒಂದು ಚುನಾವಣೆಯನ್ನು ಗೆಲ್ಲಿಸುವುದು ಆಯಾ ಪಕ್ಷದ ನಿಷ್ಠಾವಂತ ಕಾರ್ಯಕರ್ತನೇ ಹೊರತು, ವರದಿಗಾರರೂ ಅಲ್ಲ, ಮಾಧ್ಯಮವೂ ಅಲ್ಲ, ಪಕ್ಷದ ನಾಯಕನೂ ಅಲ್ಲ. ಕಾರ್ಯಕರ್ತ ಪ್ರೇರಿತನಾಗಿದ್ದರೆ, ಆತ ಮಾಡಬಹುದಾದ ಅಪೂರ್ವ ಕೆಲಸವನ್ನು ಮಾಧ್ಯಮಗಳು ಮಾಡಲಾರವು. ಅದು ಸತ್ಯ.

ಈ ಚುನಾವಣೆ ಇಂತಹ ಹಲವಾರು ವಾಸ್ತವ ಸಂಗತಿಗಳನ್ನು ಬಯಲಿಗೆ ತಂದಿದೆ.

ಜೆಡಿಎಸ್‌ನ ಅಧೋಗತಿ

ಎರಡನೆಯದು ಜೆಡಿಎಸ್‌ನ ಸ್ಥಿತಿ.

ಆ ಪಕ್ಷ ತಾನು ಆಡಿದ್ದೇ ಆಟ ಎಂದು ಭಾವಿಸಿಕೊಂಡಿತ್ತು. ಜೆಡಿಎಸ್‌ನವರು ಅದಕ್ಕೆ ತಕ್ಕಂತೆ ನಡೆದೂಕೊಂಡಿದ್ದೂ ಆಯಿತು. ಪಕ್ಷವನ್ನು ಸ್ವಂತ ಆಸ್ತಿ ಎಂಬಂತೆ ನಡೆದುಕೊಂಡ ಎಚ್‌.ಡಿ. ದೇವೇಗೌಡರ ಮಾತೇ ಅಲ್ಲಿ ಅಂತಿಮ. ಉಳಿದವರು ಅದನ್ನು ಒಪ್ಪಬೇಕು ಇಲ್ಲವೆ ಹೊರನಡೆಯಬೇಕು ಎಂಬಂಥ ವಾತಾವರಣ ನಿರ್ಮಾಣವಾಗಿದೆ. ಅನಿವಾರ್ಯ ಸಂದರ್ಭಗಳಲ್ಲಿ ಅದೆಲ್ಲ ನಡೆಯಬಹುದು. ಆದರೆ, ಚುನಾವಣೆ ಎಂಬುದು ಎಲ್ಲ ಅನಿವಾರ್ಯತೆಗಳನ್ನು ಹೋಗಲಾಡಿಸುವಂಥ ಸಮಯ.

ಹೀಗಾಗಿ, ಚುನಾವಣೆ ಘೋಷಣೆಯಾದಂತೆ, ಜೆಡಿಎಸ್‌ನ ಭ್ರಮೆಗಳು ಒಂದೊಂದಾಗಿ ಕರಗತೊಡಗಿದವು. ಅದರ ಹಿರಿಯ ನಾಯಕರು ಪಕ್ಷ ತೊರೆದು ಹೋದರು. ಅದೇ ರೀತಿ, ಟಿಕೆಟ್‌ ಸಿಕ್ಕಿಲ್ಲ ಎಂಬ ಕಾರಣಕ್ಕೆ ಇತರ ಪಕ್ಷಗಳ ನಾಯಕರು ಜೆಡಿಎಸ್‌ ಕಡೆ ಬಂದರು. ತಮ್ಮ ಜೊತೆಗೆ ಚುನಾವಣೆ ಗೆಲ್ಲಬಲ್ಲ ಪ್ರಭಾವವೂ ಬರುತ್ತದೆ ಎಂದು ವಲಸೆ ನಾಯಕರು ಭ್ರಮೆ ಇಟ್ಟುಕೊಂಡಿದ್ದರು. ಅದು ನಡೆಯುವುದಿಲ್ಲ ಎಂಬುದನ್ನು ಪ್ರಾಥಮಿಕ ಸಮೀಕ್ಷೆ ಈಗ ಸ್ಪಷ್ಟಪಡಿಸಿದೆ.

ಅದಕ್ಕೇ ಇರಬೇಕು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಧ್ಯಮಗಳ ವಿರುದ್ಧ ಹೇಳಿಕೆ ನೀಡಿದ್ದು. ಬಿಜೆಪಿ ಜೊತೆ ಯಾವ್ಯಾವ ಪತ್ರಕರ್ತರು ಒಪ್ಪಂದ ಮಾಡಿಕೊಂಡಿದ್ದಾರೆ, ಎಷ್ಟು ಹಣ ಪಡೆದಿದ್ದಾರೆ ಎಂಬುದನ್ನು ಪಾರ್ಟಿ ಏರ್ಪಡಿಸಿ ವಿವರಿಸುತ್ತೇನೆ ಎಂದಿದ್ದಾರೆ. ಒಂದು ವೇಳೆ ಸಮೀಕ್ಷಾ ವರದಿ ಜೆಡಿಎಸ್‌ ಮುನ್ನಡೆ ಸೂಚಿಸಿದ್ದರೆ, ಕುಮಾರಸ್ವಾಮಿ ಇಂಥ ಮಾತನ್ನು ಹೇಳುತ್ತಿರಲಿಲ್ಲ. ಇದು ಸೋಲುವವನ ಹತಾಶ ಕೂಗಾಗುತ್ತದೆಯೇ ಹೊರತು ಸತ್ಯವಾಗದು.

ಮಾಧ್ಯಮಗಳು ವರದಿ ಮಾಡಿದ್ದು ಜೆಡಿಎಸ್‌ನ ಅನಾಚಾರವನ್ನು. ವಚನಭ್ರಷ್ಟತೆಯನ್ನು. ಎಡಬಿಡಂಗಿತನವನ್ನು. ಏಕವ್ಯಕ್ತಿ ಸಿದ್ಧಾಂತವನ್ನು. ಕುಟುಂಬ ರಾಜಕಾರಣವನ್ನು. ಅದೇ ರೀತಿ, ಮಾಧ್ಯಮಗಳು ಬಿಜೆಪಿಯ ಬಂಡವಾಳವನ್ನೂ ಬಯಲಿಗಿಟ್ಟಿವೆ. ಮುಖ್ಯಮಂತ್ರಿಯಾಗಬೇಕು ಎಂಬ ಒಂದೇ ತಪನೆಯಿಂದ ಇಡೀ ಪಕ್ಷವನ್ನೇ ಅಡ ಇಡಲು ಮುಂದಾಗಿದ್ದ ಯಡಿಯೂರಪ್ಪನವರ ಕ್ರಮವನ್ನು ಕಟುವಾಗಿ ಟೀಕಿಸಿವೆ. ಒಬ್ಬ ಶೋಭಾ ಕರಂದ್ಲಾಜೆಗಾಗಿ ಅವರು ಬಡಿದಾಡಿದ ಬಡಿವಾರವನ್ನು ಬಯಲು ಮಾಡಿವೆ. ಅದೇ ರೀತಿ, ಕಾಂಗ್ರೆಸ್‌ನ ಸೋಮಾರಿತನವನ್ನು, ಯಾವತ್ತೂ ಜನರೊಂದಿಗೆ ಬೆರೆಯದ ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರ ಡಂಬಾಚಾರವನ್ನು, ದೂರದೃಷ್ಟಿಯೇ ಇಲ್ಲದ ಧರಂ ಸಿಂಗ್‌ ಹಾಗೂ ಮಲ್ಲಿಕಾರ್ಜುನ ಖರ್ಗೆಯವರನ್ನೂ ಟೀಕಿಸಿವೆ.

ಅಷ್ಟೇ ಏಕೆ? ಸಜ್ಜನ, ಸಂಸ್ಕಾರವಂತ ಎಂದೆಲ್ಲ ’ಅಪವಾದ’ ಹೊತ್ತಿರುವ ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ್‌ ಅವರ ಸೈದ್ಧಾಂತಿಕ ದಿವಾಳಿತನವನ್ನೂ ಮಾಧ್ಯಮಗಳು ಬಯಲಿಗಟ್ಟಿವೆ. ಬಿಜೆಪಿ ಅಥವಾ ಕಾಂಗ್ರೆಸ್‌ನಲ್ಲಿ, ಯಾರೊಬ್ಬರು ಕರೆದರೂ ಹೋಗುತ್ತೇನೆ ಎಂಬ ಹೇಳಿಕೆ ನೀಡಿದ್ದ ಪ್ರಕಾಶ್‌ ಅವರಲ್ಲಿ ಯಾವ ಆದರ್ಶಗಳಿವೆ? ಸ್ವಂತ ಜಿಲ್ಲೆ ಬಳ್ಳಾರಿಯಲ್ಲಿ ಅವರು ಏಕೆ ವಿಫಲರಾಗುತ್ತ ಬಂದಿದ್ದಾರೆ? ತಾವು ಸಚಿವರಾಗಿದ್ದ ಅವಧಿಯಲ್ಲಿ ಪ್ರಕಾಶ್‌ ಮಾಡಿರುವ ಸಾಧನೆಗಳಾದರೂ ಏನು? ಅವಕಾಶವಾದಿತನವನ್ನು ದೇವೇಗೌಡರು ಬಹಿರಂಗವಾಗಿ ಮಾಡುತ್ತ ಬಂದಿದ್ದರೆ, ಎಂ.ಪಿ. ಪ್ರಕಾಶ್‌ ಅದನ್ನೇ ಸಂಸ್ಕಾರದ ಸೋಗಿನಲ್ಲಿ ಮಾಡುತ್ತ ಬಂದಿದ್ದಾರೆ. ಇಬ್ಬರಿಗೂ ಅಂತಹ ವ್ಯತ್ಯಾಸವೇನಿಲ್ಲ.

ಈ ಸಲದ ಚುನಾವಣೆ ಇಂತಹ ಎಲ್ಲರ ಢೋಂಗಿತನವನ್ನು ಬಯಲಿಗೆ ಎಳೆದಿದೆ. ಎಲ್ಲ ಪಕ್ಷಗಳೂ ಅಷ್ಟೇ ಕೆಟ್ಟಿವೆ ಎಂಬುದನ್ನು ಸ್ಪಷ್ಟಪಡಿಸಿವೆ.

ಜನಾದೇಶ ಬಿಜೆಪಿ ಪರ ಅಲ್ಲ

ಮೂರನೆಯದಾಗಿ, ಬಿಜೆಪಿಗೆ ಬಹುಮತ ಬರುತ್ತದಾದರೆ, ಆ ಪಕ್ಷ ಚೆನ್ನಾಗಿದೆ ಎಂಬ ಕಾರಣಕ್ಕಂತೂ ಖಂಡಿತ ಅಲ್ಲ. ಅದಕ್ಕೂ ಒಂದು ಅವಕಾಶ ಕೊಟ್ಟು ನೋಡೋಣ ಎಂಬ ಪ್ರಯೋಗಶೀಲತೆಯಿಂದ. ಅಧಿಕಾರ ಎಂದರೆ ಯಡಿಯೂರಪ್ಪನವರಿಗೆ ಎಷ್ಟು ಪ್ರೀತಿ ಎಂಬುದನ್ನು ಮತದಾರ ಬಲ್ಲ. ಅದಕ್ಕಾಗಿ, ಅವರು ಎಷ್ಟು ಬಾಗಬೇಕೋ ಅಷ್ಟೂ ಬಾಗಿದ್ದಾರೆ, ಜಾಡಿಸಿ ಒದ್ದ ಮೇಲೂ ಮತ್ತೆ ಮತ್ತೆ ಬಾಗಿದ್ದಾರೆ. ಇನ್ನು ಕೆಲಸವಾಗದು ಎಂದು ಸ್ಪಷ್ಟವಾದ ಮೇಲಷ್ಟೇ ಅವರು ಎದ್ದು ಚುನಾವಣೆಗೆ ಸಜ್ಜಾಗಿದ್ದು. ಅವರಿಂದಲೂ ಜನರಿಗೆ ಹೆಚ್ಚಿನ ನಿರೀಕ್ಷೆಗಳೇನಿಲ್ಲ. ಆದರೆ, ಅತಂತ್ರ ವಿಧಾನಸಭೆ ಬಂದರೆ, ಹೆಚ್ಚಿನ ಕಷ್ಟ ನಮಗೇ ಎಂಬ ಅರಿವಿನಿಂದಾಗಿ, ಇದುವರೆಗೆ ಅಧಿಕಾರಕ್ಕೆ ಬಂದಿರದ ಪಕ್ಷಕ್ಕೊಂದು ಅವಕಾಶ ಕೊಟ್ಟು ನೋಡೋಣ ಎಂದು ಬಿಜೆಪಿ ಬೆಂಬಲಿಸಿದ್ದಾರೆ. ಅಷ್ಟೇ.

ಹೀಗಾಗಿ, ಇದು ಯಾವ ಪಕ್ಷದ ವಿಜಯವೂ ಅಲ್ಲ. ಈ ಜನಾದೇಶ ಶಾಶ್ವತವೂ ಅಲ್ಲ. ಒಂದು ವೇಳೆ ಹಿಂದೆಯೇ ಲೋಕಸಭಾ ಚುನಾವಣೆಗಳು ಬಂದರೆ, ಆಗ ಲೆಕ್ಕಾಚಾರ ಖಂಡಿತ ಬದಲಾಗುತ್ತದೆ. ಗೆದ್ದ ಪಕ್ಷ, ಇದು ತನ್ನ ಸ್ವಂತ ವಿಜಯ ಎಂದು ಬೀಗುವಂತಿಲ್ಲ. ಸೋತ ಪಕ್ಷಗಳು, ಇದು ನಮ್ಮ ಸೋಲು ಎಂದು ನಿರಾಶರಾಗಬೇಕಿಲ್ಲ. ಇದು ಇವತ್ತಿನ ಸಂದರ್ಭಕ್ಕೆ ಮಾತ್ರ ನೀಡಲಾದ ಜನಾದೇಶ.

ಮತದಾರನ ಎಚ್ಚರಿಕೆ

ಇದರ ಜೊತೆಗೆ, ಈ ಸಲದ ಚುನಾವಣೆ ಹಲವಾರು ಸಂದೇಶಗಳನ್ನೂ ರವಾನಿಸಿದೆ.

  • ಅಧಿಕಾರದ ಹಪಾಹಪಿಯ ಬಹಿರಂಗ ಪ್ರದರ್ಶನ ಮತದಾರನಿಗೆ ಇಷ್ಟವಾಗುವುದಿಲ್ಲ. ರಾಜಕೀಯ ಪಕ್ಷಗಳಿಗೆ ಅಧಿಕಾರವೇ ಪರಮಧ್ಯೇಯ ಎಂದಾದರೆ, ನಮ್ಮಗಳ ಬಗ್ಗೆ ತಲೆ ಕೆಡಿಸಿಕೊಳ್ಳುವವರು ಯಾರು? ಎಂಬ ಪ್ರಶ್ನೆ ಅವರಲ್ಲಿ ಏಳುತ್ತದೆ. ಆಗ, ಪಕ್ಷ ಪ್ರೀತಿ ಹೊರಟುಹೋಗಿ, ಮತದಾರ ಕೂಡ ರಾಜಕೀಯ ನೇತಾರರಂತೆ ವ್ಯವಹಾರ ಬುದ್ಧಿ ಬೆಳೆಸಿಕೊಳ್ಳುತ್ತಾನೆ. ಆಗ ರಾಜಕೀಯ ಪಕ್ಷಗಳಿಗೆ ಆತನನ್ನು ವಂಚಿಸುವುದು, ಸುಳ್ಳು ಭರವಸೆ ಕೊಟ್ಟು ನಂಬಿಸುವುದು ಕಷ್ಟವಾಗುತ್ತದೆ. ಈ ಸಲ ಆಗಿರುವುದೇ ಅದು.
  • ಚುನಾವಣಾ ಆಯೋಗದ ಬಿಗಿ ಕ್ರಮದಿಂದಾಗಿ, ಮತದಾರನ ಮೇಲೆ ’ವಾತ್ಸಲ್ಯ’ ತೋರಿಸುವುದು ರಾಜಕೀಯ ಪಕ್ಷಗಳಿಗೆ ಸಾಧ್ಯವಾಗಿಲ್ಲ. ಆದರೆ, ತುಂಬ ಜನ ಮತದಾರರು ಇದನ್ನು ಅರ್ಥ ಮಾಡಿಕೊಂಡಿಲ್ಲ. ಬೇಕಂತಲೇ ರಾಜಕೀಯ ಪಕ್ಷಗಳು ನಮ್ಮನ್ನು ನಿರ್ಲಕ್ಷ್ಯಸಿವೆ. ಅಧಿಕಾರದಲ್ಲಿ ಇದ್ದಾಗಂತೂ ಸರಿಯಾಗಿ ಕೆಲಸ ಮಾಡಿಲ್ಲ. ಚುನಾವಣೆ ಸಮಯದಲ್ಲಾದರೂ ಕೈಬಿಚ್ಚಿ ಕೊಡಲು ಏನು ರೋಗ ಎಂದು ಭಾವಿಸಿದ್ದಾರೆ. ಹೀಗಾಗಿ, ಮತದಾನ ಮಾಡುವ ಉತ್ಸಾಹ ಕಡಿಮೆಯಾಗಿದೆ. ಚುನಾವಣೆಯಿಂದ ಚುನಾವಣೆಗೆ ಆಯೋಗದ ಹಿಡಿತ ಬಿಗಿಯಾಗುತ್ತ ಹೋಗುತ್ತಿದ್ದು, ಆಮಿಷ ಒಡ್ಡಿ ಮತದಾರರನ್ನು ಸೆಳೆಯುವುದು ರಾಜಕೀಯ ಪಕ್ಷಗಳಿಗೆ ಸಾಧ್ಯವಾಗದು. ಹೀಗಾಗಿ, ಕೆಲಸಗಳ ಮೂಲಕವೇ ಆತನನ್ನು ಹಿಡಿದಿಟ್ಟುಕೊಳ್ಳುವ ಅನಿವಾರ್ಯತೆ ಉಂಟಾಗಿದೆ.
  • ಯಾವ ಪಕ್ಷಕ್ಕೂ ಮತದಾರ ನಿಷ್ಠೆ ವ್ಯಕ್ತಪಡಿಸಿಲ್ಲ. ಎಲ್ಲ ಪಕ್ಷಗಳ ಬಗ್ಗೆಯೂ ಆತನಿಗೆ ಒಂದೇ ತೆರನಾದ ನಿರ್ಲಕ್ಷ್ಯ ಅಥವಾ ತಿರಸ್ಕಾರ. ಎಲ್ಲರೂ ತಂತಮ್ಮ ಹಿತವನ್ನಷ್ಟೇ ನೋಡಿಕೊಳ್ಳುವವರು ಎಂಬ ತಾತ್ಸಾರ. ಹೀಗಾಗಿ, ಜನಪರ ಕೆಲಸಗಳ ಮೂಲಕ ಮಾತ್ರ, ಜನರ ವಿಶ್ವಾಸ ಉಳಿಸಿಕೊಳ್ಳಬಹುದೇ ಹೊರತು ಭಾಷಣ ಅಥವಾ ಪತ್ರಿಕಾ ಹೇಳಿಕೆಗಳಿಂದ ಸಾಧ್ಯವಿಲ್ಲ.
  • ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ಮತದಾರ ಜಾಗೃತನಾಗಿದ್ದಾನೆ. ಅದರಲ್ಲೂ ಮೊದಲ ಬಾರಿ ಮತದಾನ ಮಾಡುತ್ತಿರುವವರು ನಿಜಕ್ಕೂ ಜಾಗೃತ ಮತದಾರರು. ತಮ್ಮ ಕ್ಷೇತ್ರದ ಅಭಿವೃದ್ಧಿ ಏಕೆ ಆಗಿಲ್ಲ? ಎಂಬ ಪ್ರಶ್ನೆಗಳು ಈಗ ಹುಟ್ಟಿಕೊಂಡಿವೆ. ಅಧಿಕಾರದಲ್ಲಿದ್ದಾಗ ನೀವೇನು ಮಾಡಿದಿರಿ? ಎಂಬ ಪ್ರಶ್ನೆಗಳು ಕೇಳಿ ಬರತೊಡಗಿವೆ. ಆರಿಸಿ ತಂದರೆ ಏನು ಮಾಡಬಲ್ಲಿರಿ? ಎಂಬ ವಿಚಾರಣೆ ಶುರುವಾಗಿದೆ. ಇದು ಹೊಸ ಬೆಳವಣಿಗೆ. ಬಹುಶಃ ಮಾಧ್ಯಮಗಳ ವಿಸ್ತರಣೆಯಿಂದ ಮೂಡಿರುವ ಅರಿವಿದು.
  • ಎಲ್ಲಕ್ಕಿಂತ ಮುಖ್ಯ: ಮಾಧ್ಯಮಗಳನ್ನು ಮತದಾರ ಪೂರ್ತಿಯಾಗಿ ನಂಬದಿರುವುದು. ಪತ್ರಿಕೆಗಳು ಹಾಗೂ ಟಿವಿಗಳಿಂದ ಆತ ತನಗೆ ಬೇಕಾದ ಮಾಹಿತಿಯನ್ನು ಪಡೆಯುತ್ತಾನೆಯೇ ಹೊರತು, ಅವು ಹೇರುವ ಅಭಿಪ್ರಾಯಗಳನ್ನಲ್ಲ. ’ಮಾಧ್ಯಮಗಳಲ್ಲಿ ಕೆಲಸ ಮಾಡುವವರೂ ಮನುಷ್ಯರು ತಾನೆ? ಅವರು ಆಮಿಷಕ್ಕೆ ಒಳಗಾಗಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ?’ ಎಂಬ ಅಭಿಪ್ರಾಯಗಳೂ ಬಹಳಷ್ಟು ಕಡೆ ಕೇಳಿ ಬಂದಿವೆ. ನೀವು ಪತ್ರಕರ್ತರು ದುಡ್ಡು ಕೊಟ್ಟವರ ಪರ ಬರೆಯುತ್ತೀರಿ ಎಂದು ಜನ ಆರೋಪಿಸುತ್ತಿದ್ದುದನ್ನು ಬಹಳ ಸಾರಿ ನಾನೇ ಕೇಳಿದ್ದೇನೆ. ಅದು ಸತ್ಯವೂ ಹೌದು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಪತ್ರಿಕಾಗೋಷ್ಠಿಗಳು ರಂಗಾದಷ್ಟು ಬೇರೆ ಯಾವ ಅವಧಿಯಲ್ಲೂ ಆಗಲಿಲ್ಲ. ಪತ್ರಕರ್ತನ ನಿಷ್ಠೆ ಈ ಪರಿ ಖರೀದಿಯಾದ ಉದಾಹರಣೆಗಳು ಹಿಂದೆ ಯಾವತ್ತೂ ಸಿಗಲಿಕ್ಕಿಲ್ಲ.

ಆದರೆ, ಮತದಾರ ರಾಜಕೀಯ ಪಕ್ಷಗಳು, ಮಾಧ್ಯಮಗಳು ಹಾಗೂ ಭವಿಷ್ಯವಾದಿಗಳ ಲೆಕ್ಕಾಚಾರವನ್ನು ಒಂದೇ ಹೊಡೆತಕ್ಕೆ ತಲೆ ಕೆಳಗಾಗಿಸಿದ್ದಾನೆ. ಹೀಗಾಗಿ, ಈ ಸಲದ ಚುನಾವಣೆಯ ಗೆಲುವು ಆತನದೇ.

- ಚಾಮರಾಜ ಸವಡಿ

http://chamarajsavadi.blogspot.com