ಕರ್ನಾಟಕ ಚುನಾವಣೆ-ಎರಡು ಹಂತಗಳು

18 May 2008

ಕರ್ನಾಟಕ ಚುನಾವಣೆ ಹೊಸದೊಂದು ಹೊಸ್ತಿಲು ತಲುಪಿದೆ.

ಎಲ್ಲ ಲೆಕ್ಕಾಚಾರಗಳು ಬಹುತೇಕ ಸರಿಯಾದರೆ, ಬಿಜೆಪಿ ಸರಳ ಬಹುಮತದ ಹತ್ತಿರ ಬರಲಿದೆ. ಎಲ್ಲ ವಾದ-ವಿವಾದಗಳನ್ನು ಮೀರಿ ಪ್ರಥಮ ಬಿಜೆಪಿ ಸರ್ಕಾರ (ಈ ಹಿಂದೆ ಆಗಿದ್ದು ಸಮ್ಮಿಶ್ರ ಸರ್ಕಾರ) ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರುವ ಲಕ್ಷಣಗಳು ಸ್ಪಷ್ಟ.

ಮೊದಲ ಹಂತದ ಚುನಾವಣೆಯಲ್ಲಿ ೮೯ ಸ್ಥಾನಗಳಿಗೆ ಚುನಾವಣೆ ನಡೆಯಿತು. ಸಮೀಕ್ಷೆಗಳ ಪ್ರಕಾರ ಬಿಜೆಪಿ ಸುಮಾರು ೩೯ ಸ್ಥಾನಗಳನ್ನು ಗಳಿಸಲಿದೆ. ಅಂದರೆ, ಜೆಡಿಎಸ್‌ ಪ್ರಬಲವಾಗಿರುವ ಹಳೆಯ ಮೈಸೂರು ವಿಭಾಗದಲ್ಲಿ ಅದು ಮುಂದಿದೆ ಎಂದಾಯಿತು. ಎರಡನೇ ಹಂತದಲ್ಲಿ ನಡೆದ ಹತ್ತು ಜಿಲ್ಲೆಗಳ ೬೬ ಕ್ಷೇತ್ರಗಳ ಚುನಾವಣೆಯಲ್ಲಿ ಅದು ಕನಿಷ್ಠ ೩೫ ಸ್ಥಾನಗಳನ್ನು ಗಳಿಸಲಿದೆ. ಅಂದರೆ, ಚುನಾವಣೆ ಮುಗಿದಿರುವ ೧೫೫ ಕ್ಷೇತ್ರಗಳಲ್ಲಿ ಬಿಜೆಪಿ ಗಳಿಸಬಹುದಾದ ಸ್ಥಾನಗಳು ೭೦ಕ್ಕೂ ಅಧಿಕ. ಮೂರನೇ ಹಂತದ ಚುನಾವಣೆಯಲ್ಲಿ ೬೯ ಸ್ಥಾನಗಳಿಗೆ ನಡೆಯಲಿರುವ ಸ್ಪರ್ಧೆಯಲ್ಲಿಯೂ ಇದೇ ಪ್ರಮಾಣದ ಮೇಲುಗೈ ಸಾಧಿಸುವ ಲಕ್ಷಣಗಳು ಸ್ಪಷ್ಟವಾಗಿವೆ.

ಅಂದರೆ, ಕರ್ನಾಟಕ ವಿಧಾನಸಭೆಯ ಒಟ್ಟು ೨೨೪ ಸ್ಥಾನಗಳ ಪೈಕಿ ಬಿಜೆಪಿ ೧೦೦ರಿಂದ ೧೧೦ ಸ್ಥಾನಗಳನ್ನು ಪಡೆಯುವ ಸಾಧ್ಯತೆಗಳಿವೆ. ಸರಳ ಬಹುಮತಕ್ಕೆ ೧೧೩ ಸ್ಥಾನಗಳು ಸಾಕು. ತನ್ನ ಹಾಗೂ ಇತರ ಪಕ್ಷದ ಬಂಡಾಯ ಅಭ್ಯರ್ಥಿಗಳು ಹಾಗೂ ಪಕ್ಷೇತರರನ್ನು ತನ್ನೆಡೆಗೆ ಸೆಳೆಯುವುದು ಬಿಜೆಪಿಗೆ ಕಷ್ಟವಾಗದು. ಆಗ ಸರಳ ಬಹುಮತಕ್ಕೆ ಇರುವ ಕೊರತೆ ಸರಳವಾಗಿಯೇ ನಿವಾರಣೆಯಾಗುತ್ತದೆ.

ಇವೆಲ್ಲ ಲಕ್ಷಣಗಳನ್ನು ನೋಡಿದರೆ, ರಾಜ್ಯಕ್ಕೆ ಈ ಬಾರಿ ಅತಂತ್ರ ವಿಧಾನಸಭೆ ಬೆದರಿಕೆ ಕಾಡುವುದಿಲ್ಲ. ಸ್ಪಷ್ಟ ಬಹುಮತ ಇಲ್ಲದಿದ್ದರೂ ಸರಳ ಬಹುಮತಕ್ಕೆ ಮೋಸವಿಲ್ಲ. ಬಿ.ಎಸ್‌. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಎಂದು ಬಿಂಬಿಸಿರುವುದರಿಂದ, ಆ ಗೊಂದಲವೂ ನಿವಾರಣೆಯಾಗಿದೆ. ರಾಜಕೀಯ ಪಂಡಿತರ ಲೆಕ್ಕಾಚಾರ, ಭವಿಷ್ಯ, ಊಹಾಪೋಹಗಳನ್ನು ಮೀರಿ ಮತದಾರ ಬಿಜೆಪಿ ಪರ ನಿಂತಿದ್ದಾನೆ.

ಇದು ಇವತ್ತಿನ ಪರಿಸ್ಥಿತಿ.

ಮಾಧ್ಯಮದ ಮೇಲೆ ಆರೋಪ

ಹಲವಾರು ಪ್ರಶ್ನೆಗಳಿಗೆ ಇಲ್ಲಿ ಉತ್ತರ ಅಗತ್ಯ. ಮೊದಲನೆಯದು, ಮಾಧ್ಯಮಗಳು ಬಿಜೆಪಿ ಪರ ನಿಂತವು ಎಂಬ ಆರೋಪದ ಬಗ್ಗೆ:

ಪತ್ರಿಕೆಗಳು ಹಾಗೂ ಪತ್ರಕರ್ತರು ಒಂದು ಪಕ್ಷ ಅಥವಾ ನಾಯಕನ ಪರ ನಿಲ್ಲುವುದು ಮೊದಲಿನಿಂದಲೂ ನಡೆದೇ ಇದೆ. ಆದರೆ, ಬಿಜೆಪಿಗೆ ’ಇದು ನಮ್ಮ ಪತ್ರಿಕೆ’ ಎಂಬ ಭಾವನೆ ಹುಟ್ಟಿಸಿದ ಪತ್ರಿಕೆಗಳು ಸದ್ಯಕ್ಕೆ ಯಾವೂ ಇಲ್ಲ. ಸಂಯುಕ್ತ ಕರ್ನಾಟಕ ಕಾಂಗ್ರೆಸ್‌ ಪರ. ಅದು ಬಹಿರಂಗವಾಗಿಯೇ ಕಂಡು ಬರುವಂಥದ್ದು. ಸ್ವಲ್ಪ ಮಟ್ಟಿಗೆ ವಿಜಯ ಕರ್ನಾಟಕ ಬಿಜೆಪಿ ಪರ ನಿಂತಿರುವುದೂ ಹೌದು. ಪ್ರಜಾವಾಣಿ ಇದ್ದುದರಲ್ಲಿಯೇ ನಿರ್ಲಿಪ್ತ. ಕುಮಾರಸ್ವಾಮಿ ಮುಖ್ಯಮಂತ್ರಿಯಾದ ನಂತರ, ಕನ್ನಡಪ್ರಭ ಕೊಂಚ ಮಟ್ಟಿಗೆ ಜೆಡಿಎಸ್‌ ಪರ ವಾಲಿದ್ದು ಸ್ವಯಂಗೋಚರ.

ಆದರೆ, ಯಾವ ಪತ್ರಿಕೆಯೂ ಬಿಜೆಪಿ ಪರ ಬಹಿರಂಗ ಪ್ರಚಾರ ನಡೆಸಿಲ್ಲ. ಅದೇ ರೀತಿ ದೃಶ್ಯ ಮಾಧ್ಯಮಗಳೂ ಪಕ್ಷ ನಿಷ್ಠೆ ವ್ಯಕ್ತಪಡಿಸಿಲ್ಲ. ಅಂಥದೊಂದು ಒಳ ಒಪ್ಪಂದ ಆದ ಹಾಗೂ ಕಂಡಿಲ್ಲ. ಚುನಾವಣೆ ಹತ್ತಿರ ಬಂದಾಗ, ಎಲ್ಲ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳು ಸಾರ್ವತ್ರಿಕ ಗೊಂದಲವನ್ನೇ ಬಿಂಬಿಸಿದವು. ಈ ಸಾರಿಯೂ ಅತಂತ್ರ ವಿಧಾನಸಭೆಯೇ ಬರಬಹುದು ಎಂದು ಅನುಮಾನ ವ್ಯಕ್ತಪಡಿಸಿದವು. ಬಿಜೆಪಿಗೆ ಸಹಾನುಭೂತಿ ವ್ಯಕ್ತವಾಗುತ್ತದಾದರೂ, ಅದು ಸರಳ ಬಹುಮತ ಗಳಿಸಿ ಕೊಡಲಾರದು ಎಂದೇ ಹೇಳಿದ್ದವು.

ಈ ನಿಟ್ಟಿನಲ್ಲಿ ಪತ್ರಿಕೆ ಹಾಗೂ ಟಿವಿ ಮಾಧ್ಯಮಗಳು ವಾಸ್ತವವನ್ನೇ ಬಿಂಬಿಸುತ್ತ ಬಂದಿವೆ. ಅಲ್ಲಲ್ಲಿ ಪಕ್ಷ ನಿಷ್ಠೆ ಹಾಗೂ ನಾಯಕ ನಿಷ್ಠೆ ಕಂಡಿದೆಯಾದರೂ ಅದು ಮತದಾರರನ್ನು ಪ್ರಭಾವಗೊಳಿಸುವ ಮಟ್ಟಿಗಂತೂ ಇದ್ದಿಲ್ಲ. ಇವತ್ತಿನ ಪರಿಸ್ಥಿತಿಯಲ್ಲಿ ಅಂಥದ್ದೊಂದು ಪ್ರಭಾವ ಬೀರಬಲ್ಲ ಮಾಧ್ಯಮವೂ ಇಲ್ಲ. ಪತ್ರಿಕೆಗಳ ಸಂಖ್ಯೆ, ಚಾನೆಲ್‌ಗಳ ಸಂಖ್ಯೆ ಹೆಚ್ಚಾದಂತೆ, ಪಕ್ಷ ನಿಷ್ಠೆ ಹರಿದು ಹಂಚಿಹೋಗಿದೆ. ಒಂದು ವೇಳೆ ಯಾವುದೇ ಪತ್ರಿಕೆ ಅಥವಾ ಚಾನೆಲ್‌ ಬಯಸಿದರೂ, ಅಂಥದೊಂದು ಪ್ರಭಾವ ವಲಯವನ್ನು ಸೃಷ್ಟಿಸಲಾರದು. ಇದು ಮಾಧ್ಯಮದ ಮಿತಿ.

ಒಬ್ಬ ಪತ್ರಕರ್ತನಾಗಿ ನಾನು ಮಾಧ್ಯಮಗಳ ಪರ ಮಾತನಾಡುತ್ತಿಲ್ಲ. ವಾಸ್ತವ ಏನಿದೆ ಎಂಬುದನ್ನು ಹೇಳುತ್ತಿದ್ದೇನೆ. ರಂಜನೀಯ ವರದಿಗಳು, ವಿಶೇಷ ವರದಿಗಳು ಹಾಗೂ ಸಂವಾದ ಕಾರ್ಯಕ್ರಮಗಳ ಹೊರತಾಗಿಯೂ ಮತದಾರ ತನಗನಿಸಿದ್ದನ್ನು ಮಾಡಬಲ್ಲ ಎಂಬುದಕ್ಕೆ ಚುನಾವಣೆ ಸಾಕ್ಷಿ. ಅಂತಿಮವಾಗಿ, ಒಂದು ಚುನಾವಣೆಯನ್ನು ಗೆಲ್ಲಿಸುವುದು ಆಯಾ ಪಕ್ಷದ ನಿಷ್ಠಾವಂತ ಕಾರ್ಯಕರ್ತನೇ ಹೊರತು, ವರದಿಗಾರರೂ ಅಲ್ಲ, ಮಾಧ್ಯಮವೂ ಅಲ್ಲ, ಪಕ್ಷದ ನಾಯಕನೂ ಅಲ್ಲ. ಕಾರ್ಯಕರ್ತ ಪ್ರೇರಿತನಾಗಿದ್ದರೆ, ಆತ ಮಾಡಬಹುದಾದ ಅಪೂರ್ವ ಕೆಲಸವನ್ನು ಮಾಧ್ಯಮಗಳು ಮಾಡಲಾರವು. ಅದು ಸತ್ಯ.

ಈ ಚುನಾವಣೆ ಇಂತಹ ಹಲವಾರು ವಾಸ್ತವ ಸಂಗತಿಗಳನ್ನು ಬಯಲಿಗೆ ತಂದಿದೆ.

ಜೆಡಿಎಸ್‌ನ ಅಧೋಗತಿ

ಎರಡನೆಯದು ಜೆಡಿಎಸ್‌ನ ಸ್ಥಿತಿ.

ಆ ಪಕ್ಷ ತಾನು ಆಡಿದ್ದೇ ಆಟ ಎಂದು ಭಾವಿಸಿಕೊಂಡಿತ್ತು. ಜೆಡಿಎಸ್‌ನವರು ಅದಕ್ಕೆ ತಕ್ಕಂತೆ ನಡೆದೂಕೊಂಡಿದ್ದೂ ಆಯಿತು. ಪಕ್ಷವನ್ನು ಸ್ವಂತ ಆಸ್ತಿ ಎಂಬಂತೆ ನಡೆದುಕೊಂಡ ಎಚ್‌.ಡಿ. ದೇವೇಗೌಡರ ಮಾತೇ ಅಲ್ಲಿ ಅಂತಿಮ. ಉಳಿದವರು ಅದನ್ನು ಒಪ್ಪಬೇಕು ಇಲ್ಲವೆ ಹೊರನಡೆಯಬೇಕು ಎಂಬಂಥ ವಾತಾವರಣ ನಿರ್ಮಾಣವಾಗಿದೆ. ಅನಿವಾರ್ಯ ಸಂದರ್ಭಗಳಲ್ಲಿ ಅದೆಲ್ಲ ನಡೆಯಬಹುದು. ಆದರೆ, ಚುನಾವಣೆ ಎಂಬುದು ಎಲ್ಲ ಅನಿವಾರ್ಯತೆಗಳನ್ನು ಹೋಗಲಾಡಿಸುವಂಥ ಸಮಯ.

ಹೀಗಾಗಿ, ಚುನಾವಣೆ ಘೋಷಣೆಯಾದಂತೆ, ಜೆಡಿಎಸ್‌ನ ಭ್ರಮೆಗಳು ಒಂದೊಂದಾಗಿ ಕರಗತೊಡಗಿದವು. ಅದರ ಹಿರಿಯ ನಾಯಕರು ಪಕ್ಷ ತೊರೆದು ಹೋದರು. ಅದೇ ರೀತಿ, ಟಿಕೆಟ್‌ ಸಿಕ್ಕಿಲ್ಲ ಎಂಬ ಕಾರಣಕ್ಕೆ ಇತರ ಪಕ್ಷಗಳ ನಾಯಕರು ಜೆಡಿಎಸ್‌ ಕಡೆ ಬಂದರು. ತಮ್ಮ ಜೊತೆಗೆ ಚುನಾವಣೆ ಗೆಲ್ಲಬಲ್ಲ ಪ್ರಭಾವವೂ ಬರುತ್ತದೆ ಎಂದು ವಲಸೆ ನಾಯಕರು ಭ್ರಮೆ ಇಟ್ಟುಕೊಂಡಿದ್ದರು. ಅದು ನಡೆಯುವುದಿಲ್ಲ ಎಂಬುದನ್ನು ಪ್ರಾಥಮಿಕ ಸಮೀಕ್ಷೆ ಈಗ ಸ್ಪಷ್ಟಪಡಿಸಿದೆ.

ಅದಕ್ಕೇ ಇರಬೇಕು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಧ್ಯಮಗಳ ವಿರುದ್ಧ ಹೇಳಿಕೆ ನೀಡಿದ್ದು. ಬಿಜೆಪಿ ಜೊತೆ ಯಾವ್ಯಾವ ಪತ್ರಕರ್ತರು ಒಪ್ಪಂದ ಮಾಡಿಕೊಂಡಿದ್ದಾರೆ, ಎಷ್ಟು ಹಣ ಪಡೆದಿದ್ದಾರೆ ಎಂಬುದನ್ನು ಪಾರ್ಟಿ ಏರ್ಪಡಿಸಿ ವಿವರಿಸುತ್ತೇನೆ ಎಂದಿದ್ದಾರೆ. ಒಂದು ವೇಳೆ ಸಮೀಕ್ಷಾ ವರದಿ ಜೆಡಿಎಸ್‌ ಮುನ್ನಡೆ ಸೂಚಿಸಿದ್ದರೆ, ಕುಮಾರಸ್ವಾಮಿ ಇಂಥ ಮಾತನ್ನು ಹೇಳುತ್ತಿರಲಿಲ್ಲ. ಇದು ಸೋಲುವವನ ಹತಾಶ ಕೂಗಾಗುತ್ತದೆಯೇ ಹೊರತು ಸತ್ಯವಾಗದು.

ಮಾಧ್ಯಮಗಳು ವರದಿ ಮಾಡಿದ್ದು ಜೆಡಿಎಸ್‌ನ ಅನಾಚಾರವನ್ನು. ವಚನಭ್ರಷ್ಟತೆಯನ್ನು. ಎಡಬಿಡಂಗಿತನವನ್ನು. ಏಕವ್ಯಕ್ತಿ ಸಿದ್ಧಾಂತವನ್ನು. ಕುಟುಂಬ ರಾಜಕಾರಣವನ್ನು. ಅದೇ ರೀತಿ, ಮಾಧ್ಯಮಗಳು ಬಿಜೆಪಿಯ ಬಂಡವಾಳವನ್ನೂ ಬಯಲಿಗಿಟ್ಟಿವೆ. ಮುಖ್ಯಮಂತ್ರಿಯಾಗಬೇಕು ಎಂಬ ಒಂದೇ ತಪನೆಯಿಂದ ಇಡೀ ಪಕ್ಷವನ್ನೇ ಅಡ ಇಡಲು ಮುಂದಾಗಿದ್ದ ಯಡಿಯೂರಪ್ಪನವರ ಕ್ರಮವನ್ನು ಕಟುವಾಗಿ ಟೀಕಿಸಿವೆ. ಒಬ್ಬ ಶೋಭಾ ಕರಂದ್ಲಾಜೆಗಾಗಿ ಅವರು ಬಡಿದಾಡಿದ ಬಡಿವಾರವನ್ನು ಬಯಲು ಮಾಡಿವೆ. ಅದೇ ರೀತಿ, ಕಾಂಗ್ರೆಸ್‌ನ ಸೋಮಾರಿತನವನ್ನು, ಯಾವತ್ತೂ ಜನರೊಂದಿಗೆ ಬೆರೆಯದ ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರ ಡಂಬಾಚಾರವನ್ನು, ದೂರದೃಷ್ಟಿಯೇ ಇಲ್ಲದ ಧರಂ ಸಿಂಗ್‌ ಹಾಗೂ ಮಲ್ಲಿಕಾರ್ಜುನ ಖರ್ಗೆಯವರನ್ನೂ ಟೀಕಿಸಿವೆ.

ಅಷ್ಟೇ ಏಕೆ? ಸಜ್ಜನ, ಸಂಸ್ಕಾರವಂತ ಎಂದೆಲ್ಲ ’ಅಪವಾದ’ ಹೊತ್ತಿರುವ ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ್‌ ಅವರ ಸೈದ್ಧಾಂತಿಕ ದಿವಾಳಿತನವನ್ನೂ ಮಾಧ್ಯಮಗಳು ಬಯಲಿಗಟ್ಟಿವೆ. ಬಿಜೆಪಿ ಅಥವಾ ಕಾಂಗ್ರೆಸ್‌ನಲ್ಲಿ, ಯಾರೊಬ್ಬರು ಕರೆದರೂ ಹೋಗುತ್ತೇನೆ ಎಂಬ ಹೇಳಿಕೆ ನೀಡಿದ್ದ ಪ್ರಕಾಶ್‌ ಅವರಲ್ಲಿ ಯಾವ ಆದರ್ಶಗಳಿವೆ? ಸ್ವಂತ ಜಿಲ್ಲೆ ಬಳ್ಳಾರಿಯಲ್ಲಿ ಅವರು ಏಕೆ ವಿಫಲರಾಗುತ್ತ ಬಂದಿದ್ದಾರೆ? ತಾವು ಸಚಿವರಾಗಿದ್ದ ಅವಧಿಯಲ್ಲಿ ಪ್ರಕಾಶ್‌ ಮಾಡಿರುವ ಸಾಧನೆಗಳಾದರೂ ಏನು? ಅವಕಾಶವಾದಿತನವನ್ನು ದೇವೇಗೌಡರು ಬಹಿರಂಗವಾಗಿ ಮಾಡುತ್ತ ಬಂದಿದ್ದರೆ, ಎಂ.ಪಿ. ಪ್ರಕಾಶ್‌ ಅದನ್ನೇ ಸಂಸ್ಕಾರದ ಸೋಗಿನಲ್ಲಿ ಮಾಡುತ್ತ ಬಂದಿದ್ದಾರೆ. ಇಬ್ಬರಿಗೂ ಅಂತಹ ವ್ಯತ್ಯಾಸವೇನಿಲ್ಲ.

ಈ ಸಲದ ಚುನಾವಣೆ ಇಂತಹ ಎಲ್ಲರ ಢೋಂಗಿತನವನ್ನು ಬಯಲಿಗೆ ಎಳೆದಿದೆ. ಎಲ್ಲ ಪಕ್ಷಗಳೂ ಅಷ್ಟೇ ಕೆಟ್ಟಿವೆ ಎಂಬುದನ್ನು ಸ್ಪಷ್ಟಪಡಿಸಿವೆ.

ಜನಾದೇಶ ಬಿಜೆಪಿ ಪರ ಅಲ್ಲ

ಮೂರನೆಯದಾಗಿ, ಬಿಜೆಪಿಗೆ ಬಹುಮತ ಬರುತ್ತದಾದರೆ, ಆ ಪಕ್ಷ ಚೆನ್ನಾಗಿದೆ ಎಂಬ ಕಾರಣಕ್ಕಂತೂ ಖಂಡಿತ ಅಲ್ಲ. ಅದಕ್ಕೂ ಒಂದು ಅವಕಾಶ ಕೊಟ್ಟು ನೋಡೋಣ ಎಂಬ ಪ್ರಯೋಗಶೀಲತೆಯಿಂದ. ಅಧಿಕಾರ ಎಂದರೆ ಯಡಿಯೂರಪ್ಪನವರಿಗೆ ಎಷ್ಟು ಪ್ರೀತಿ ಎಂಬುದನ್ನು ಮತದಾರ ಬಲ್ಲ. ಅದಕ್ಕಾಗಿ, ಅವರು ಎಷ್ಟು ಬಾಗಬೇಕೋ ಅಷ್ಟೂ ಬಾಗಿದ್ದಾರೆ, ಜಾಡಿಸಿ ಒದ್ದ ಮೇಲೂ ಮತ್ತೆ ಮತ್ತೆ ಬಾಗಿದ್ದಾರೆ. ಇನ್ನು ಕೆಲಸವಾಗದು ಎಂದು ಸ್ಪಷ್ಟವಾದ ಮೇಲಷ್ಟೇ ಅವರು ಎದ್ದು ಚುನಾವಣೆಗೆ ಸಜ್ಜಾಗಿದ್ದು. ಅವರಿಂದಲೂ ಜನರಿಗೆ ಹೆಚ್ಚಿನ ನಿರೀಕ್ಷೆಗಳೇನಿಲ್ಲ. ಆದರೆ, ಅತಂತ್ರ ವಿಧಾನಸಭೆ ಬಂದರೆ, ಹೆಚ್ಚಿನ ಕಷ್ಟ ನಮಗೇ ಎಂಬ ಅರಿವಿನಿಂದಾಗಿ, ಇದುವರೆಗೆ ಅಧಿಕಾರಕ್ಕೆ ಬಂದಿರದ ಪಕ್ಷಕ್ಕೊಂದು ಅವಕಾಶ ಕೊಟ್ಟು ನೋಡೋಣ ಎಂದು ಬಿಜೆಪಿ ಬೆಂಬಲಿಸಿದ್ದಾರೆ. ಅಷ್ಟೇ.

ಹೀಗಾಗಿ, ಇದು ಯಾವ ಪಕ್ಷದ ವಿಜಯವೂ ಅಲ್ಲ. ಈ ಜನಾದೇಶ ಶಾಶ್ವತವೂ ಅಲ್ಲ. ಒಂದು ವೇಳೆ ಹಿಂದೆಯೇ ಲೋಕಸಭಾ ಚುನಾವಣೆಗಳು ಬಂದರೆ, ಆಗ ಲೆಕ್ಕಾಚಾರ ಖಂಡಿತ ಬದಲಾಗುತ್ತದೆ. ಗೆದ್ದ ಪಕ್ಷ, ಇದು ತನ್ನ ಸ್ವಂತ ವಿಜಯ ಎಂದು ಬೀಗುವಂತಿಲ್ಲ. ಸೋತ ಪಕ್ಷಗಳು, ಇದು ನಮ್ಮ ಸೋಲು ಎಂದು ನಿರಾಶರಾಗಬೇಕಿಲ್ಲ. ಇದು ಇವತ್ತಿನ ಸಂದರ್ಭಕ್ಕೆ ಮಾತ್ರ ನೀಡಲಾದ ಜನಾದೇಶ.

ಮತದಾರನ ಎಚ್ಚರಿಕೆ

ಇದರ ಜೊತೆಗೆ, ಈ ಸಲದ ಚುನಾವಣೆ ಹಲವಾರು ಸಂದೇಶಗಳನ್ನೂ ರವಾನಿಸಿದೆ.

  • ಅಧಿಕಾರದ ಹಪಾಹಪಿಯ ಬಹಿರಂಗ ಪ್ರದರ್ಶನ ಮತದಾರನಿಗೆ ಇಷ್ಟವಾಗುವುದಿಲ್ಲ. ರಾಜಕೀಯ ಪಕ್ಷಗಳಿಗೆ ಅಧಿಕಾರವೇ ಪರಮಧ್ಯೇಯ ಎಂದಾದರೆ, ನಮ್ಮಗಳ ಬಗ್ಗೆ ತಲೆ ಕೆಡಿಸಿಕೊಳ್ಳುವವರು ಯಾರು? ಎಂಬ ಪ್ರಶ್ನೆ ಅವರಲ್ಲಿ ಏಳುತ್ತದೆ. ಆಗ, ಪಕ್ಷ ಪ್ರೀತಿ ಹೊರಟುಹೋಗಿ, ಮತದಾರ ಕೂಡ ರಾಜಕೀಯ ನೇತಾರರಂತೆ ವ್ಯವಹಾರ ಬುದ್ಧಿ ಬೆಳೆಸಿಕೊಳ್ಳುತ್ತಾನೆ. ಆಗ ರಾಜಕೀಯ ಪಕ್ಷಗಳಿಗೆ ಆತನನ್ನು ವಂಚಿಸುವುದು, ಸುಳ್ಳು ಭರವಸೆ ಕೊಟ್ಟು ನಂಬಿಸುವುದು ಕಷ್ಟವಾಗುತ್ತದೆ. ಈ ಸಲ ಆಗಿರುವುದೇ ಅದು.
  • ಚುನಾವಣಾ ಆಯೋಗದ ಬಿಗಿ ಕ್ರಮದಿಂದಾಗಿ, ಮತದಾರನ ಮೇಲೆ ’ವಾತ್ಸಲ್ಯ’ ತೋರಿಸುವುದು ರಾಜಕೀಯ ಪಕ್ಷಗಳಿಗೆ ಸಾಧ್ಯವಾಗಿಲ್ಲ. ಆದರೆ, ತುಂಬ ಜನ ಮತದಾರರು ಇದನ್ನು ಅರ್ಥ ಮಾಡಿಕೊಂಡಿಲ್ಲ. ಬೇಕಂತಲೇ ರಾಜಕೀಯ ಪಕ್ಷಗಳು ನಮ್ಮನ್ನು ನಿರ್ಲಕ್ಷ್ಯಸಿವೆ. ಅಧಿಕಾರದಲ್ಲಿ ಇದ್ದಾಗಂತೂ ಸರಿಯಾಗಿ ಕೆಲಸ ಮಾಡಿಲ್ಲ. ಚುನಾವಣೆ ಸಮಯದಲ್ಲಾದರೂ ಕೈಬಿಚ್ಚಿ ಕೊಡಲು ಏನು ರೋಗ ಎಂದು ಭಾವಿಸಿದ್ದಾರೆ. ಹೀಗಾಗಿ, ಮತದಾನ ಮಾಡುವ ಉತ್ಸಾಹ ಕಡಿಮೆಯಾಗಿದೆ. ಚುನಾವಣೆಯಿಂದ ಚುನಾವಣೆಗೆ ಆಯೋಗದ ಹಿಡಿತ ಬಿಗಿಯಾಗುತ್ತ ಹೋಗುತ್ತಿದ್ದು, ಆಮಿಷ ಒಡ್ಡಿ ಮತದಾರರನ್ನು ಸೆಳೆಯುವುದು ರಾಜಕೀಯ ಪಕ್ಷಗಳಿಗೆ ಸಾಧ್ಯವಾಗದು. ಹೀಗಾಗಿ, ಕೆಲಸಗಳ ಮೂಲಕವೇ ಆತನನ್ನು ಹಿಡಿದಿಟ್ಟುಕೊಳ್ಳುವ ಅನಿವಾರ್ಯತೆ ಉಂಟಾಗಿದೆ.
  • ಯಾವ ಪಕ್ಷಕ್ಕೂ ಮತದಾರ ನಿಷ್ಠೆ ವ್ಯಕ್ತಪಡಿಸಿಲ್ಲ. ಎಲ್ಲ ಪಕ್ಷಗಳ ಬಗ್ಗೆಯೂ ಆತನಿಗೆ ಒಂದೇ ತೆರನಾದ ನಿರ್ಲಕ್ಷ್ಯ ಅಥವಾ ತಿರಸ್ಕಾರ. ಎಲ್ಲರೂ ತಂತಮ್ಮ ಹಿತವನ್ನಷ್ಟೇ ನೋಡಿಕೊಳ್ಳುವವರು ಎಂಬ ತಾತ್ಸಾರ. ಹೀಗಾಗಿ, ಜನಪರ ಕೆಲಸಗಳ ಮೂಲಕ ಮಾತ್ರ, ಜನರ ವಿಶ್ವಾಸ ಉಳಿಸಿಕೊಳ್ಳಬಹುದೇ ಹೊರತು ಭಾಷಣ ಅಥವಾ ಪತ್ರಿಕಾ ಹೇಳಿಕೆಗಳಿಂದ ಸಾಧ್ಯವಿಲ್ಲ.
  • ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ಮತದಾರ ಜಾಗೃತನಾಗಿದ್ದಾನೆ. ಅದರಲ್ಲೂ ಮೊದಲ ಬಾರಿ ಮತದಾನ ಮಾಡುತ್ತಿರುವವರು ನಿಜಕ್ಕೂ ಜಾಗೃತ ಮತದಾರರು. ತಮ್ಮ ಕ್ಷೇತ್ರದ ಅಭಿವೃದ್ಧಿ ಏಕೆ ಆಗಿಲ್ಲ? ಎಂಬ ಪ್ರಶ್ನೆಗಳು ಈಗ ಹುಟ್ಟಿಕೊಂಡಿವೆ. ಅಧಿಕಾರದಲ್ಲಿದ್ದಾಗ ನೀವೇನು ಮಾಡಿದಿರಿ? ಎಂಬ ಪ್ರಶ್ನೆಗಳು ಕೇಳಿ ಬರತೊಡಗಿವೆ. ಆರಿಸಿ ತಂದರೆ ಏನು ಮಾಡಬಲ್ಲಿರಿ? ಎಂಬ ವಿಚಾರಣೆ ಶುರುವಾಗಿದೆ. ಇದು ಹೊಸ ಬೆಳವಣಿಗೆ. ಬಹುಶಃ ಮಾಧ್ಯಮಗಳ ವಿಸ್ತರಣೆಯಿಂದ ಮೂಡಿರುವ ಅರಿವಿದು.
  • ಎಲ್ಲಕ್ಕಿಂತ ಮುಖ್ಯ: ಮಾಧ್ಯಮಗಳನ್ನು ಮತದಾರ ಪೂರ್ತಿಯಾಗಿ ನಂಬದಿರುವುದು. ಪತ್ರಿಕೆಗಳು ಹಾಗೂ ಟಿವಿಗಳಿಂದ ಆತ ತನಗೆ ಬೇಕಾದ ಮಾಹಿತಿಯನ್ನು ಪಡೆಯುತ್ತಾನೆಯೇ ಹೊರತು, ಅವು ಹೇರುವ ಅಭಿಪ್ರಾಯಗಳನ್ನಲ್ಲ. ’ಮಾಧ್ಯಮಗಳಲ್ಲಿ ಕೆಲಸ ಮಾಡುವವರೂ ಮನುಷ್ಯರು ತಾನೆ? ಅವರು ಆಮಿಷಕ್ಕೆ ಒಳಗಾಗಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ?’ ಎಂಬ ಅಭಿಪ್ರಾಯಗಳೂ ಬಹಳಷ್ಟು ಕಡೆ ಕೇಳಿ ಬಂದಿವೆ. ನೀವು ಪತ್ರಕರ್ತರು ದುಡ್ಡು ಕೊಟ್ಟವರ ಪರ ಬರೆಯುತ್ತೀರಿ ಎಂದು ಜನ ಆರೋಪಿಸುತ್ತಿದ್ದುದನ್ನು ಬಹಳ ಸಾರಿ ನಾನೇ ಕೇಳಿದ್ದೇನೆ. ಅದು ಸತ್ಯವೂ ಹೌದು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಪತ್ರಿಕಾಗೋಷ್ಠಿಗಳು ರಂಗಾದಷ್ಟು ಬೇರೆ ಯಾವ ಅವಧಿಯಲ್ಲೂ ಆಗಲಿಲ್ಲ. ಪತ್ರಕರ್ತನ ನಿಷ್ಠೆ ಈ ಪರಿ ಖರೀದಿಯಾದ ಉದಾಹರಣೆಗಳು ಹಿಂದೆ ಯಾವತ್ತೂ ಸಿಗಲಿಕ್ಕಿಲ್ಲ.

ಆದರೆ, ಮತದಾರ ರಾಜಕೀಯ ಪಕ್ಷಗಳು, ಮಾಧ್ಯಮಗಳು ಹಾಗೂ ಭವಿಷ್ಯವಾದಿಗಳ ಲೆಕ್ಕಾಚಾರವನ್ನು ಒಂದೇ ಹೊಡೆತಕ್ಕೆ ತಲೆ ಕೆಳಗಾಗಿಸಿದ್ದಾನೆ. ಹೀಗಾಗಿ, ಈ ಸಲದ ಚುನಾವಣೆಯ ಗೆಲುವು ಆತನದೇ.

- ಚಾಮರಾಜ ಸವಡಿ

http://chamarajsavadi.blogspot.com

No comments: