ಮೊನ್ನೆ ಮೊನ್ನೆಯಷ್ಟೇ ಕರಗಿ ಹೋದಂತಿದ್ದ ಚಂದ್ರ ಮತ್ತೆ ಬಂದಿದ್ದಾನೆ.
ಇಷ್ಟೇ ಇಷ್ಟು ಚೂರು. ಈಕೆ ಮಗ್ಗಲು ಹೊರಳಿ, ತಲೆಯನ್ನು ದಿಂಬಿನಂತೆ ಅಡ್ಡ ಇಟ್ಟಾಗ ಮುರಿದ ಬಳೆ ಚೂರಿನಂತೆ. ಆದರೆ, ಬೆಳ್ಳಗೆ ತಂಪಾಗಿ ನಳನಳಿಸುತ್ತಿದ್ದಾನೆ.
ಇದಕ್ಕೂ ಮೊದಲು, ಯಾವ ದುಃಖದಲ್ಲಿದ್ದನೋ ಏನೋ, ಬೆಳ್ಳಗೆ ಲಕಲಕಿಸುತ್ತ ದುಂಡಗಿದ್ದವ ಇದ್ದಕ್ಕಿದ್ದಂತೆ ಸೊರಗತೊಡಗಿದ್ದ ರಾತ್ರಿ ತಡವಾಗಿ, ತೂಕಡಿಕೆಯಲ್ಲಿದ್ದವನಂತೆ, ಕುಡಿದು ಕೂತವನು ಎದ್ದು ಹೋಗಲು ಮರೆತಂತೆ ತಾರಾಡುತ್ತ ಬರುತ್ತಿದ್ದ. ಮುಖದಲ್ಲಿ ಮೊದಲಿನ ಕಳೆಯಿದ್ದಿಲ್ಲ. ಹೀಗೆ ಸೊರಗುತ್ತ, ಕರಗುತ್ತ ಹೋದವ ಒಂದಿನ ಬರಲೇ ಇಲ್ಲ.
ಅವತ್ತೇಕೋ ಮನಸ್ಸಿನ ತುಂಬ ಕತ್ತಲು.
ಇನ್ನು ಅವ ಬರಲಾರ ಅಂದುಕೊಂಡಿದ್ದೆ. ಪಾಪದವ. ಯಾಕೆ ನವೆಯುತ್ತಿದ್ದನೋ. ಏನು ಕಾರಣವೋ. ಯಾರೊಂದಿಗೂ ಹೇಳಿಕೊಂಡವನಲ್ಲ. ಹೇಳಿಕೊಳ್ಳಲಾದರೂ ಅವನಿಗೆ ಯಾರಿದ್ದರು? ದೂರದಲ್ಲಿ ನಿಂತು ತಣ್ಣಗೆ ಮುಸಿನಗುವ ಚಿಕ್ಕಿಯರು. ಸೆರಗಿನ ಮರೆಯಲ್ಲಿ ಬಚ್ಚಿಟ್ಟುಕೊಂಡಂತೆ ಮಾಡುತ್ತಲೇ ಬಿಚ್ಚಿ ಓಡುವ ಮೋಡಗಳು. ಕೆಟ್ಟ ಮುಖದ ಸೂರ್ಯ ಉರಿಯುತ್ತ ಬಂದರೆ ಇವನ ಮುಖ ಮಂಕು.
ಉರಿವ ಸೂರ್ಯನಿರುವಾಗ ಮಂಕು ಚಂದ್ರಮ ಯಾರಿಗೆ ಬೇಕು?
ಆದರೂ, ರಾತ್ರಿ ಆಗೀಗ ಅವನ ನೆನಪಾಗುತ್ತಿತ್ತು. ಆದರೆ, ಅವನು ಬರುವುದು ಯಾವಾಗೋ ಏನೋ. ಊರ ದೀಪಗಳು ನೈಟ್ ಡ್ಯೂಟಿ ಪ್ರಾರಂಭಿಸಿದಾಗ, ರಾತ್ರಿ ಪಾಳಿ ಮುಗಿಸಿ ಎಲ್ಲರೂ ತಂತಮ್ಮ ನೆಲೆಗಳಲ್ಲಿ ನಿದ್ರೆಗೆ ಜಾರುವ ಹೊತ್ತು, ಒಲ್ಲದ ಅತಿಥಿಯಂತೆ, ಅಪರಾಧಿಯಂತೆ, ದೂಷಣೆಗೆ ಒಳಗಾದವನಂತೆ, ಪಾಪಪ್ರಜ್ಞೆಯಿಂದ ಬಳಲುವವನಂತೆ ಕಳ್ಳ ಹೆಜ್ಜೆ ಇಟ್ಟು ಬರುತ್ತಿದ್ದ. ಅವನಿಗೆ ಕಾಯುತ್ತ ಕೂರಲಾದರೂ ಯಾರಿದ್ದರು?
ಆದರೂ ನನಗೆ ಅವನ ನೆನಪು ತುಂಬಾ ತುಂಬಾ ಆಗುತ್ತಿತ್ತು. ಏಕೋ ಏನೋ, ಅವನ ಬದುಕು ನನಗಿಷ್ಟ. ಎಷ್ಟೋ ಸಾರಿ ನಾನೂ ಚಂದ್ರನಂತೆ ಬದುಕಿದ್ದೇನೆ. ಸೊರಗುತ್ತ, ಕರಗುತ್ತ, ಇಲ್ಲವಾಗುತ್ತ, ಮತ್ತೆ ಬೆಳೆಯುತ್ತ, ಬೆಳಗುತ್ತ, ತುಂಬಿಕೊಂಡು ದುಂಡಗಾಗಿದ್ದೇನೆ. ಅವನಂತೆ ನನಗೂ ನೋವುಗಳಿದ್ದವು. ಅವಮಾನಗಳಿದ್ದವು. ಸಲ್ಲದ ದೂಷಣೆಗಳು, ಗೆಲ್ಲದ ದೌರ್ಬಲ್ಯಗಳಿದ್ದವು. ಇವೆಲ್ಲ ಅತಿರೇಕಕ್ಕೆ ಹೋಗಿ, ಅವನಂತೆ ನಾನೂ ಆಗಾಗ ಇಲ್ಲವಾಗುತ್ತಿದ್ದೆ. ಮತ್ತೆ ಬೀಜದಷ್ಟು ಶ್ರದ್ಧೆ ಬೆಳೆಯುತ್ತಿತ್ತು. ಹೊಸ ಕನಸು ತುಂಬಿಕೊಳ್ಳುತ್ತಿತ್ತು. ಚಿಕ್ಕಿಗಳ ಗೇಲಿ ಲೆಕ್ಕಿಸದೇ ಹುಡುಗಿಯರು ಮೋಹದ ಸೆರಗಿನ ತಡೆಯನ್ನು ದಾಟಿ ಬೆಳೆದು ನಳನಳಿಸುತ್ತಿದ್ದೆ.
ಚಂದ್ರ ನನಗೆ ಇಷ್ಟವಾಗುವುದಕ್ಕೆ ಹಲವಾರು ಕಾರಣಗಳಿವೆ.
ಅವ ಕಿಟಕಿಯಾಚೆಗೇ ಸಿಗುತ್ತಾನೆ. ಕೈ ಚಾಚಿದರೆ ಸಿಕ್ಕೇಬಿಡುತ್ತಾನೇನೋ ಎನ್ನುವಷ್ಟು ಹತ್ತಿರ. ಏನನ್ನಾದರೂ ಹೇಳಿಕೊಂಡರೆ ತುಂಬ ಶ್ರದ್ಧೆಯಿಂದ ಕೇಳಿಸಿಕೊಳ್ಳುತ್ತಾನೆ. ತಂಪಗೇ ಸಮಾಧಾನ ಮಾಡುತ್ತಾನೆ. ತನ್ನ ಮಿತಿಯಲ್ಲೇ ಸಾಧ್ಯವಾದಷ್ಟೂ ದಾರಿ ತೋರುತ್ತಾನೆ. ಸರಳುಗಳಾಚೆ ಇದ್ದರೂ ಬಂಧನ ದಾಟಿ ಒಳಬಂದು ಸಂತೈಸುತ್ತಾನೆ. ನಾನು ಹೇಳಿದ ಕತೆಗಳ ಗುಟ್ಟನ್ನು, ನೋವುಗಳ ಕಾರಣಗಳನ್ನು ಯಾರೆದುರೂ ಬಯಲು ಮಾಡುವುದಿಲ್ಲ. ನನ್ನ ಕತೆಗಳನ್ನು ಗೇಲಿ ಮಾಡುವುದಿಲ್ಲ. ಮೌನವಾಗೇ ಕೇಳಿಸಿಕೊಳ್ಳುತ್ತಾನೆ. ತನ್ನ ಬಗ್ಗೆ ಮೌನವಾಗೇ ಹೇಳಿಕೊಳ್ಳುತ್ತಾನೆ. ಹೇಳುತ್ತ, ಕೇಳುತ್ತ ರಾತ್ರಿ ಯಾವ ಮಾಯದಲ್ಲೋ ಇಬ್ಬರೂ ನಿದ್ರೆಗೆ ಜಾರಿಬಿಟ್ಟಿರುತ್ತೇವೆ.
ಸರಳಿನಾಚೆಯ ಚಂದ್ರನ ಮೌನ ಸಂದೇಶ, ಸಾಂತ್ವನ, ಸಹೃದಯತೆ ನನ್ನನ್ನು ಸಾವಿರ ಸಾವಿರ ಸಲ ಜೀವನ್ಮುಖಿ ಮಾಡಿವೆ. ಬದುಕು ಎದುರಿಸುವಂಥ ಭರವಸೆ ಕೊಟ್ಟಿವೆ. ಎಲ್ಲ ಮೋಡಗಳ ಸೆರಗಿನಾಚೆಗೂ, ತಡೆಗಳಾಚೆಗೂ, ಮೂದಲಿಕೆ, ಹೀಯಾಳಿಕೆ, ಆರೋಪ, ನಿರ್ಲಕ್ಷ್ಯದಾಚೆಗೂ ಬೆಳಗಬಲ್ಲ ವಿಶ್ವಾಸ ತುಂಬಿವೆ. ಏರಿಳಿತಗಳಿವೆ ನಿಜ. ಆದರೆ, ಸಾವಿಲ್ಲ. ಮತ್ತೆ ಮತ್ತೆ ತಲೆ ಎತ್ತಿ ನೋಡುವಂತೆ, ನೋಡಿ ಮೆಚ್ಚುವಂತೆ, ಮೆಚ್ಚಿ ಆದರಿಸುವಂತೆ ಮಾಡಿವೆ.
ಆದ್ದರಿಂದಲೇ ಮನಸ್ಸಿಗೆ ಕಾವಳ ಕವಿದಾಗೆಲ್ಲ ಸರಳಿನಾಚೆ ದಿಟ್ಟಿಸಿ ನೋಡುತ್ತೇನೆ.
ಅಲ್ಲಿ ಚಂದ್ರ ಕಾಣುತ್ತಾನೆ- ಭರವಸೆಯಂತೆ, ಬದುಕಿನಂತೆ, ಅವುತಂದು ಕೊಡುವ ನೆಮ್ಮದಿಯಂತೆ. ತಂಪಾಗಿ, ಚೆಂದಗೆ, ಬೆಳ್ಳಗೇ ಕಳೆಯಾಗಿ ಕಾಣುತ್ತಾನೆ.
ಮನಸ್ಸಿಗೆ ಹಾಯ್ ಅನ್ನಿಸುತ್ತದೆ!
- ಚಾಮರಾಜ ಸವಡಿ
Subscribe to:
Post Comments (Atom)
5 comments:
ಸರ್. ಚಂದ್ರನಷ್ಟೇ ತಂಪು, ಅವನಷ್ಟೇ ಆಪ್ತತೆ ಲೇಖನದುದ್ದಕ್ಕೂ ಅನುಭವಕ್ಕೆ ನಿಲುಕುತ್ತಾ ಹೋಯಿತು. ಚಂದ್ರನ ಬಗ್ಗೆ ಅದೆಷ್ಟೋ ಜನ ಬರೆದಿದ್ದಾರೆ. ಆದರೆ ಈ ವಿಚಾರಧಾರೆ ಮಾತ್ರ ವಿಶಿಷ್ಟ.
ನಮಸ್ಕಾರ.
ಚಂದ್ರನ ಕುರಿತು ಚೆಂದದ ಬರಹ. ಓದಿಸಿಕೊಂಡು ಹೋಯಿತು.
ಧನ್ಯವಾದಗಳು.
ಜೋಮನ್ ವರ್ಗೀಸ್.
ಚೆಂದದ ಬರಹವನ್ನು ಓದಿ ಖುಷಿಯಾಯಿತು. ನಾನು ನಿಮ್ಮ ಚಾನೆಲ್ ಮಿತ್ರ. ಈಗ ನಿಮ್ಮ ಬ್ಲಾಗಿನ ಮಿತ್ರನೂ ಹೌದು.
ಥ್ಯಾಂಕ್ಸ್ ಜೋಮನ್ ಮತ್ತು ಪುಚ್ಚಪ್ಪಾಡಿ ಅವರೇ,
ನಾವೆಲ್ಲ ಒಂದಲ್ಲ ಒಂದು ಹಂತದಲ್ಲಿ ಭಾವಿಸುವುದೇ ಹೀಗೆ. ನೆನಪಿಸಿಕೊಂಡರೆ ಇಂಥ ನೂರಾರು ನೆನಪುಗಳು ಬರುತ್ತವೆ. ಸಾಧ್ಯವಾದಷ್ಟು ಬರೆಯುವುದು. ನೆನಪುಗಳ ಮೂಲಕ ಆ ದಿನಗಳನ್ನು ಮತ್ತೆ ಮತ್ತೆ ಬದುಕುವುದು.
ನಮ್ಮ ಅತ್ಯಂತ ಮಧುರ ಗೀತೆಗಳು ನಮ್ಮ ಅತ್ಯಂತ ದುಃಖದ ದಿನಗಳ ಕುರಿತಾಗಿರುತ್ತವಂತೆ. ದಿನಗಳೆದಂತೆಲ್ಲ ಈ ಮಾತು ಹೆಚ್ಚು ಹೆಚ್ಚು ಸ್ಪಷ್ಟವಾಗುತ್ತಿದೆ.
- ಚಾಮರಾಜ
ಚಂದಮಾಮ ಅರಮನೆ ಮೇಲೆ ನೀನಿರುವಾಗ ದೀಪ ಏತಕೆ..?
ನಿಜ .. ಚಂದಿರ ಕೇವಲ ಭುವಿಯ ಮನೆ ಬೆಳಗಲಲ್ಲ..
ಅವ, ನೆನಪುಗಳ ಹಾಸಿಗೆ ಹೊತ್ತು ಮಲಗೋ ಕೋಟ್ಯಾನು ಕೋಟಿ ಮನಗಳ ಬೆಳಗುವವ..
ಅವನನ್ನ ಈ ಹಗಲ ಹೊತ್ತಿನಲೂ ಕರೆತಂದದ್ದಕ್ಕೆ Thanks..!
nd
also thanks 4 u r comment on
www.sihikanasu.wordpress.com
nag4pl@gmail.com
Post a Comment