ಡ್ರೈವರ್‌ ಎಂಬ ಆಪತ್ಬಾಂಧವ

9 May 2008


ಆಗಿನ್ನೂ ಚುಮು ಚುಮು ಬೆಳಕು.

ಬೆಂಗಳೂರಿನಿಂದ ರಾತ್ರಿ ಹೊರಟ ಬಸ್ಸಿಗೆ ಆದಷ್ಟು ಬೇಗ ಕೊಪ್ಪಳ ಸೇರುವ ತವಕ. ಅದು ಬೆಂಗಳೂರು-ಯಲಬುರ್ಗಾ ಬಸ್‌. ಚಾಲಕ ಮೂವತ್ತೈದರ ಹರೆಯದ ಯುವಕ. ಬಸ್‌ ಕೂಡ ಹರೆಯದ್ದೇ.

ರಾತ್ರಿ ಹತ್ತು ಗಂಟೆಯ ಸುಮಾರು ಬೆಂಗಳೂರಿನ ಬಸ್‌ ನಿಲ್ದಾಣದಲ್ಲಿ ಬಸ್‌ ಏರಿದಾಗ ಡ್ರೈವರ್‌ ಇನ್ನೂ ಬಂದಿರಲಿಲ್ಲ. ಕೊಂಚ ಹೊತ್ತು ಕಾದಂಬರಿಯೊಂದನ್ನು ಓದುತ್ತಾ ಕುಳಿತೆ. ಡ್ರೈವರ್‌ ಬಂದ. ಕಂಡಕ್ಟರ್‌ ರೈಟ್‌ ಎಂದು ಕೂಗಿದ ಕೂಡಲೇ ಗುರುಗುಡುತ್ತಿದ್ದ ಬಸ್‌ನ ಗೇರ್‌ ಮೇಲಿನ ಕಾಲನ್ನು ತೆಗೆದವನೇ ಆಕ್ಸಿಲೇಟರ್‌ ಒತ್ತಿದ. ಏಟು ತಿಂದ ಬೆಕ್ಕಿನಂತೆ ಚೆಂಗನೇ ಮುಲುಗಿದ ಬಸ್ಸು ಸ್ಟ್ಯಾಂಡ್‌ನ ಆ ಮಹಾ ಸಂದಣಿಯಲ್ಲಿ ದಾರಿ ಸಿಕ್ಕ ಕಡೆ ನುಗ್ಗತೊಡಗಿತು.

ನನಗೆ ಗಾಬರಿಯಾಯಿತು. ಇನ್ನೂ ಎಂಟು ಗಂಟೆಗಳ ಕಾಲ ಬಸ್ಸಿನಲ್ಲಿ ಕೂತಿರಬೇಕು. ಈ ಮನುಷ್ಯ ನೋಡಿದರೆ ಲೋಡ್‌ ಆಗಿ ಬಂದವನಂತೆ ಕಾಣುತ್ತಾನೆ. ಇನ್ನು ೪೨೫ ಕಿಮೀ ಹೇಗೆ ಓಡಿಸುತ್ತಾನೋ ಎಂದು ಚಿಂತಿತನಾದೆ. ಬಸ್‌ ಅಷ್ಟೊತ್ತಿಗಾಗಲೇ ಬಸ್‌ಸ್ಟ್ಯಾಂಡ್‌ನಿಂದ ಹೊರಗೆ ರಾಕೆಟ್‌ನಂತೆ ನುಗ್ಗಿ, ಒಂದು ಬಲವಾದ ತಿರುವು ತೆಗೆದುಕೊಂಡು ಮುಖ್ಯ ರಸ್ತೆ ಪ್ರವೇಶಿಸಿತ್ತು. ಬಸ್‌ ಅಲ್ಲಾಡಿದ ರಭಸಕ್ಕೆ ಪ್ರಯಾಣಿಕರೆಲ್ಲ ಶಬರಿಮಲೆಗೆ ಹೊರಟ ಭಕ್ತರಂತೆ ’ಹೋ’ ಎಂದು ಕಿರುಚಿಕೊಂಡರು. ಚಿಕ್ಕಮಕ್ಕಳು ಬೆಚ್ಚಿ ಬಿದ್ದು ಕಿರುಲತೊಡಗಿದವು.

ಸುದೀರ್ಘ ಪ್ರಯಾಣವೊಂದು ಪ್ರಾರಂಭವಾಗಿತ್ತು.

ಸಾಮಾನ್ಯವಾಗಿ ಬಸ್‌ ನಗರದ ಹೊರವಲಯಕ್ಕೆ ಬರುತ್ತಿದ್ದಂತೆ ನಿದ್ರೆ ಹೋಗುವ ನನಗೆ ಅವತ್ತು ರಾತ್ರಿಯಿಡೀ ಕಣ್ಣು ಮುಚ್ಚಲಾಗಲಿಲ್ಲ. ಮೆಜೆಸ್ಟಿಕ್‌ ದಾಟಿದ ಬಸ್‌ ಮುಂದೆ ಹೋಗುತ್ತಿದ್ದ ವಾಹನಗಳನ್ನೆಲ್ಲ ತನ್ನ ಪ್ರತಿಸ್ಪರ್ಧಿಗಳೆಂದೇ ಭಾವಿಸಿತ್ತು. ಅವರನ್ನೆಲ್ಲ ಹಿಂದೆ ಹಾಕಿ ಮುಂದೆ ಹೋಗುವುದೇ ತನ್ನ ತಕ್ಷಣದ ಕರ್ತವ್ಯ ಎಂದು ಡ್ರೈವರ್‌ ಭಾವಿಸಿಕೊಂಡಂತಿತ್ತು. ತನ್ನೆದುರು ಓಡುತ್ತಿದ್ದ ವಾಹನಗಳನ್ನು ಮುಲಾಜಿಲ್ಲದೇ ಹಿಂದೆ ಹಾಕುತ್ತಾ, ಯಾವನಾದರೂ ಸೈಡ್‌ ಕೊಡದಿದ್ದರೆ ಅವನನ್ನು ತನ್ನ ಉತ್ತರ ಕರ್ನಾಟಕದ ಅಚ್ಚ ಕನ್ನಡದ ಬೈಗುಳಗಳಿಂದ ಪಾವನಗೊಳಿಸುತ್ತ, ಓವರ್‌ಟೇಕ್‌ ಮಾಡಿದ ಕೂಡಲೇ ’ಹೋ’ ಎಂದು ತನಗೆ ತಾನೇ ವಿಜಯೋತ್ಸವ ಆಚರಿಸಿಕೊಳ್ಳುತ್ತಾ ನಮ್ಮ ಡ್ರೈವರ್‌ ರೇಸ್‌ನಲ್ಲಿ ಭಾಗವಹಿಸಿದವನಂತೆ ಹೊರಟ.

ನನ್ನ ಅಳಿದುಳಿದ ನಿದ್ದೆಯೂ ಹಾರಿಹೋಯಿತು.

ಅಷ್ಟೊತ್ತಿಗಾಗಲೇ ಅಕ್ಕಪಕ್ಕದ ಸಣ್ಣಪುಟ್ಟ ವಾಹನಗಳು ಈ ಬಸ್‌ ನುಗ್ಗಿ ಬರುತ್ತಿದ್ದ ವೇಗ ಕಂಡು ನಿಬ್ಬೆರಗಾಗಿ ಹೋಗಿದ್ದವು. ಆದರೆ, ನಮ್ಮ ಬಸ್‌ನ ಮುಂದೆ ಹೋಗುತ್ತಿದ್ದ ಖಾಸಗಿ ಬಸ್ಸೊಂದು ಮಾತ್ರ ಏನು ಮಾಡಿದರೂ ಸೈಡ್‌ ಕೊಡಲಿಲ್ಲ. ನಮ್ಮ ಡ್ರೈವರ್‌ ತನಗೆ ಗೊತ್ತಿರುವ ಉತ್ತರ ಕರ್ನಾಟಕದ ಅಷ್ಟೂ ಬೈಗುಳಗಳನ್ನು ಮನ ಬಂದಂತೆ ಪ್ರಯೋಗಿಸಿದರೂ ಕೆಲಸವಾಗಲಿಲ್ಲ. ಕೊನೆಗೆ, ’ಭಾಂಚೋತ್‌’ ಎಂದು ಹಿಂದಿ ಬೈಗುಳ ಭಂಡಾರ ಉದ್ಘಾಟಿಸಿದ. ಬಸ್ಸು ಅಷ್ಟೊತ್ತಿಗೆ ಜಿಂದಾಲ್‌ ಹತ್ತಿರ ಬಂದಿತ್ತು.

ಎಂದಿನಂತೆ ಅಲ್ಲೊಂದು ಚಿಕ್ಕ ಟ್ರಾಫಿಕ್‌ ಜಾಮ್‌. ಲಾರಿ ಮಹಾತ್ಮರು ಪೂರ್ತಿ ಲೋಡಾಗಿದ್ದ ತಮ್ಮ ಗಾಡಿ ಮತ್ತು ಬಾಡಿಗಳ ಸಹಿತ, ಮೆರವಣಿಗೆ ಹೊರಟಿದ್ದಾರೋ ಎಂಬಂತೆ ಲಾರಿಗಳನ್ನು ಒಂದರ ಹಿಂದೆ ಒಂದು ನಿಲ್ಲಿಸಿಕೊಂಡು ಶ್ರದ್ಧೆಯಿಂದ ನಿರಂತರವಾಗಿ ಹಾರ್ನ್‌ ಬಾರಿಸುತ್ತಿದ್ದರು. ಆ ಮೇಳಕ್ಕೆ ನಮ್ಮ ಮುಂದಿದ್ದ ಖಾಸಗಿ ಬಸ್‌ ಹಾಗೂ ನಾನು ಕೂತಿದ್ದ ಸರ್ಕಾರಿ ಬಸ್‌ಗಳು ಸೇರಿಕೊಂಡವು. ನಮ್ಮ ಡ್ರೈವರ್‌ ಏನೇನೋ ಕಸರತ್ತು ಮಾಡಿ, ಆ ಖಾಸಗಿ ಬಸ್‌ನ ಪಕ್ಕವೇ ತನ್ನ ಬಸ್‌ ನಿಲ್ಲಿಸಿ, ಸ್ಟೀರಿಂಗ್‌ ಮೇಲೆಯೇ ಕೊಂಚ ಬಾಗಿ, ತನ್ನ ಏರ್‌ ಹಾರ್ನ್‌ ಇನ್ನಷ್ಟು ತೀಕ್ಷ್ಣವಾಗಿ ಬಾರಿಸುತ್ತ, ಅದಕ್ಕಿಂತ ಜೋರಾಗಿ ಆ ಖಾಸಗಿ ಬಸ್‌ನ ಡ್ರೈವರ್‌ನಿಗೆ, ’ಯಾಕಲೇ ಬೋಸುಡಿಕೆ, ಮುಕಳಿ ಸಣ್ಣಗ ಕಡಿತತೇನು?’ ಎಂದು ಬೈದ.

ಅಲ್ಲಿಗೆ ಇತರ ಪ್ರಯಾಣಿಕರ ನಿದ್ರೆಯೂ ಹಾರಿ ಹೋಯಿತು.

ಮುಂದಿನ ಐದು ನಿಮಿಷಗಳಲ್ಲಿ ಎರಡೂ ಬಸ್‌ನ ಡ್ರೈವರ್‌ಗಳು ತಂತಮ್ಮ ಹಾರ್ನ್‌‌ಗಳನ್ನು ಮೊಳಗಿಸುತ್ತ, ತಮ್ಮ ಮುಂದೆ ಹಾಗೂ ಹಿಂದೆ ಇದ್ದ ವಾಹನಗಳು ಹೊರಡಿಸುತ್ತಿದ್ದ ಹಾರ್ನ್‌ ಹಿಮ್ಮೇಳದಲ್ಲಿ ಪರಸ್ಪರ ವಾಚಾಮಗೋಚರವಾಗಿ ಬೈದುಕೊಂಡರು. ಆ ಐದು ನಿಮಿಷಗಳಲ್ಲಿ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ವಿಶಿಷ್ಟ, ಅತಿ ವಿಶಿಷ್ಟ ಹಾಗೂ ಪರಮ ವಿಶಿಷ್ಟ ಬೈಗುಳಗಳಷ್ಟೂ ನನ್ನ ಕಿವಿಗೆ ಬಿದ್ದು ನಾನು ಪಾವನನಾಗಿ ಹೋದೆ.

ನಿಧಾನವಾಗಿ ಟ್ರಾಫಿಕ್‌ ಸರಾಗವಾಗತೊಡಗಿತು. ಯಾವಾಗ ತಮ್ಮ ಮುಂದಿನ ವಾಹನಗಳು ಕಟು ಹೊಗೆ ಕಕ್ಕುತ್ತ, ಗುರುಗುಡುತ್ತ ನಿಧಾನವಾಗಿ ಚಲಿಸತೊಡಗಿದವೋ, ಈ ಇಬ್ಬರೂ ಬೈಗುಳ ಭೀಷ್ಮರು ಜಾಗೃತರಾದರು. ಬೈಯುವುದನ್ನು ನಿಲ್ಲಿಸಿ, ತಮ್ಮ ವಾಹನಗಳನ್ನು ಮುಂದೆ ಒಯ್ಯಲು ಪ್ರಯತ್ನಿಸತೊಡಗಿದರು. ಮತ್ತೊಂದು ರೇಸ್‌ ಪ್ರಾರಂಭವಾಯಿತು.

ನಾನು ಮುಂದಿನ ಸೀಟ್‌ನ ಹ್ಯಾಂಡಲ್‌ ಹಿಡಿದುಕೊಂಡು, ಒಂದು ಕಾಲನ್ನು ಓಡುವ ಸ್ಪರ್ಧೆಯಲ್ಲಿ ಕ್ರೀಡಾಪಟು ಇಟ್ಟುಕೊಂಡಿರುತ್ತಾನಲ್ಲ, ಹಾಗೆ ಮುಂಚಾಚಿ, ಬರಬಹುದಾದ ಯಾವುದೇ ರೀತಿಯ ಅವಘಡ ಎದುರಿಸಲು ಸನ್ನದ್ಧನಾಗಿ ಕೂತುಕೊಂಡೆ. ಬಹುಶಃ ತಮ್ಮದೇ ಆದ ವಿಧಾನಗಳಲ್ಲಿ ಇತರ ಪ್ರಯಾಣಿಕರೂ ತಯಾರಾಗಿದ್ದಿರಬಹುದು. ಏಕೆಂದರೆ, ಬಸ್‌ ಓಡುವ ರೀತಿಯೇ ಹಾಗಿತ್ತು. ಒಬ್ಬ ಪ್ರಯಾಣಿಕನೂ ಕಣ್ಣು ಮುಚ್ಚಿದ್ದಿಲ್ಲ. ಮುಚ್ಚಿದ್ದರೂ ಅದು ಪ್ರಾರ್ಥನೆಗಾಗಿ. ಮಹತ್ವದ್ದಾದ ಏನೋ ಘಟಿಸಲಿದೆಯೋ ಎಂಬಂತೆ ಚಿಕ್ಕ ಮಕ್ಕಳು ಸಹ ಎದ್ದಿದ್ದವು.

ಇದ್ದಕ್ಕಿದ್ದಂತೆ ನಮ್ಮ ಬಸ್‌ ವೇಗ ಪಡೆದುಕೊಂಡಿತು. ಏನಾಗುತ್ತಿದೆ ಎಂದು ನೋಡುವಷ್ಟರಲ್ಲಿ, ನಮ್ಮ ಡ್ರೈವರ್‌ ವಿಜಯೋತ್ಸಾಹದಿಂದ ಪರಮ ಅಶ್ಲೀಲ ಬೈಗುಳವೊಂದನ್ನು ಹಿಂದೆ ಬಿದ್ದಿದ್ದ ಆ ಖಾಸಗಿ ಬಸ್‌ನ ಡ್ರೈವರ್‌ಗೆ ರವಾನಿಸಿ, ಯಮವೇಗದಲ್ಲಿ ಮುಂದೆ ಹೊರಟ. ನಂತರ, ಆ ಖಾಸಗಿ ಬಸ್‌ ಡ್ರೈವರ್‌ ಏನೇ ತಿಪ್ಪರಲಾಗ ಹಾಕಿದರೂ ಇವ ಸೈಡ್‌ ಕೊಡಲಿಲ್ಲ. ’ಸೈಡ್‌ ಬೇಕನ್ಲೇ ಕಳ್ಳಿ? ಬಾ ಒಂದು ಕೈ ನೋಡ್ತೀನಿ’ ಎಂದು ಉತ್ಸಾಹದಿಂದ ಕೂಗುತ್ತ, ಆಕ್ಸಿಲೇಟರ್‌ ಒತ್ತತೊಡಗಿದ.

ಆ ಭರದಲ್ಲಿ ತುಮಕೂರು ಸಮೀಪಿಸಿದ್ದು ಯಾರ ಗಮನದಲ್ಲೂ ಇರಲಿಲ್ಲ. ಅಷ್ಟೊತ್ತಿಗೆ ಟ್ರಾಫಿಕ್‌ ಸರಾಗವಾಗಿತ್ತು. ಆ ಖಾಸಗಿ ಬಸ್‌ ಸಹ ಕಣ್ಣಿಗೆ ಬೀಳಲಿಲ್ಲ. ನಮ್ಮ ಡ್ರೈವರ್‌ನ ಬೈಗುಳಗಳಿಗೆ ಬಲಿಯಾಗಬಲ್ಲ ಯಾವ ಪಾಪಾತ್ಮನೂ ಮುಂದೆ ಸಿಗಲಿಲ್ಲ. ಹೀಗಾಗಿ ನಮ್ಮ ಬಸ್‌ ಒಂದು ಹದವಾದ ವೇಗದಲ್ಲಿ ಓಡತೊಡಗಿತು. ಅದರ ಇಂಜಿನ್‌ನ ’ಗುಂಯ್‌’ ಎಂಬ ಶಬ್ದ ಜೋಗುಳದಂತಾಗಿ, ಬಹುಪಾಲು ಪ್ರಯಾಣಿಕರು ಒಬ್ಬೊಬ್ಬರಾಗಿ ನಿದ್ದೆಗೆ ಜಾರಿದರು. ನಾನೂ ಸಹ, ಹ್ಯಾಂಡಲ್‌ ಮೇಲಿನ ಹಿಡಿತ ಸಡಿಲಿಸಿ, ಸೀಟನ್ನು ಹಿಂದಕ್ಕೆ ವಾಲಿಸಿಕೊಂಡು, ಕೈಗಳನ್ನು ಎದೆಯ ಮೇಲೆ ಮಡಿಚಿಕೊಂಡು ಗತಕಾಲದ ನೆನಪುಗಳಿಗೆ ಜಾರತೊಡಗಿದೆ.

ಚಿತ್ರದುರ್ಗ ಬಂತು. ಕೆಲ ಪ್ರಯಾಣಿಕರು ಇಳಿದರು. ನಾನೂ ಸಹ ಇಳಿದು ಕೊಂಚ ಹೊತ್ತು ಅಲ್ಲೇ ಅಡ್ಡಾಡಿದೆ. ಬಸ್‌ ಮತ್ತೆ ಹೊರಟಾಗ, ನನ್ನ ನಿದ್ರೆ ಹಾರಿಹೋಗಿತ್ತು. ’ಮುಂದೆ ಹೆದ್ದಾರಿ ಮುಗಿದು, ರಾಜ್ಯ ಹೆದ್ದಾರಿ ಎಂಬ ಕೆಟ್ಟ ರಸ್ತೆ ಶುರುವಾಗಿ ಧಕ್ಕಡಿಯಾಗುತ್ತದೆ’ ಎಂದು ಮಹಿಳೆಯೊಬ್ಬರು ವಿನಂತಿಸಿಕೊಂಡಿದ್ದರಿಂದ, ನನ್ನ ಸೀಟ್‌ ಬಿಟ್ಟುಕೊಟ್ಟು ಡ್ರೈವರ್‌ ಕ್ಯಾಬಿನ್‌ಗೇ ಹೋದೆ.

ಆಗಲೇ ನಾನು ಅವನ ಮುಖವನ್ನು ಸರಿಯಾಗಿ ನೋಡಿದ್ದು.

ರಾಜ್ಯ ಹೆದ್ದಾರಿಯೆಂಬ ಕೆಮ್ಮಣ್ಣುಗುಂಡಿ ಪ್ರವೇಶಿಸಿದಾಗ ಬಸ್‌ನ ವೇಗ ತಂತಾನೇ ಕಡಿಮೆಯಾಯಿತು. ಡ್ರೈವರ್‌ ಮಾತ್ರ ತನ್ನ ಎಂದಿನ ಧಾಟಿಯಲ್ಲೇ ಬಸ್‌ ಓಡಿಸುತ್ತಿದ್ದನಾದರೂ ಅವನಲ್ಲಿ ಈಗ ಮೊದಲಿನ ಉದ್ವೇಗ ಇರಲಿಲ್ಲ. ಅಲ್ಲದೇ ಬೈಸಿಕೊಳ್ಳಲು ಅವನ ಮುಂದೆ ಯಾವ ವಾಹನವೂ ಹೋಗುತ್ತಿರಲಿಲ್ಲ.

ಗತಕಾಲದ ನೆನಪುಗಳಲ್ಲಿ ಮುಳುಗಿದ್ದ ನನಗೆ ಧಡಕ್ಕನೇ ಎಚ್ಚರವಾದಾಗ ಹೊರಗೆ ತಿಳಿ ಬೆಳಕು. ಬಹುಶಃ ನಸುಕಿನ ಐದೂವರೆಯಾಗಿತ್ತು ಅನಿಸುತ್ತದೆ. ಬಸ್‌ ಯಾವ ಊರಿನ ಹತ್ತಿರವಿದೆ ಎಂಬುದು ತಕ್ಷಣಕ್ಕೆ ಗೊತ್ತಾಗುವಂತಿರಲಿಲ್ಲ. ಬಳ್ಳಾರಿ ಜಿಲ್ಲೆಯ ಮರಿಯಮ್ಮನಹಳ್ಳಿ ಇನ್ನೂ ದೂರವಿತ್ತೇನೋ. ಇದ್ದಕ್ಕಿದ್ದಂತೆ ಬಸ್‌ ನಿಂತಿತ್ತು. ಕಣ್ತೆರೆದ ನನಗೆ ಕಾಣಿಸಿದ್ದು ಡ್ರೈವರ್‌ನ ಭೀತಿ ತುಂಬಿದ ಮುಖ. ಆತ ತನ್ನ ಬಲಕ್ಕೆ ನೋಡುತ್ತಿದ್ದ. ಒಂದು ಕ್ಷಣ ಸುಮ್ಮನೇ ಕೂತಿದ್ದ ಆತ ಧಡಕ್ಕನೇ ಪಕ್ಕದ ಬಾಗಿಲು ತೆಗೆದುಕೊಂಡು ನಿಧಾನವಾಗಿ ಕೆಳಗೆ ಇಳಿದ.

ತೆರೆದ ಬಾಗಿಲಿನಿಂದ ಆಗ ಆ ದೃಶ್ಯ ಕಾಣಿಸಿತು.

ಬಿಳಿ ಮಾರುತಿ ಕಾರೊಂದು ರಸ್ತೆ ಪಕ್ಕದ ತಗ್ಗಿನಲ್ಲಿದ್ದ ಸಾಮಾನ್ಯ ಗಾತ್ರದ ಮರಕ್ಕೆ ಮೂತಿ ಹಚ್ಚಿಕೊಂಡು ನಿಂತಿತ್ತು. ಕಾರಿಗೆ ಹೆಚ್ಚು ಹಾನಿಯಾದ ಹಾಗೆ ಕಾಣಲಿಲ್ಲ. ಕಾರಿನ ಡ್ರೈವರ್‌ ಸ್ಟೀರಿಂಗ್‌ ಮೇಲೆ ಮುಖ ಇಟ್ಟುಕೊಂಡು ಮಲಗಿದಂತಿದ್ದ. ಅವನ ಪಕ್ಕದಲ್ಲಿದ್ದ ಯುವಕ ಕೂಡ ಅದೇ ಭಂಗಿಯಲ್ಲಿ, ಡ್ಯಾಷ್‌ ಬೋರ್ಡ್‌‌ಗೆ ಮುಖ ಆನಿಸಿಕೊಂಡಿದ್ದ. ತಲೆ ಬಗ್ಗಿಸಿದ್ದರಿಂದ ಇಬ್ಬರ ಮುಖಗಳೂ ಕಾಣುತ್ತಿರಲಿಲ್ಲ. ಆದರೆ, ಹಿಂದಿನ ಸೀಟ್‌ನಲ್ಲಿದ್ದ ಒಬ್ಬ ಮಧ್ಯವಯಸ್ಕ ಮತ್ತು ಇಬ್ಬರು ಯುವತಿಯರ ಮುಖಗಳು ಸ್ಪಷ್ಟವಾಗಿದ್ದವು. ಮೂವರ ತುಟಿಯಂಚಿನಿಂದ ಕಂಡೂ ಕಾಣದಂತೆ ರಕ್ತ ಒಸರುತ್ತಿತ್ತು.

ಗಾಬರಿಗೊಂಡಿದ್ದ ನಮ್ಮ ಡ್ರೈವರ್‌ನ ಹಿಂದೆಯೇ ನಾವೊಂದಿಷ್ಟು ಪ್ರಯಾಣಿಕರು ಅತ್ತ ಧಾವಿಸಿದೆವು. ಬಹುಶಃ ಅಪಘಾತ ಕೆಲವೇ ನಿಮಿಷಗಳ ಹಿಂದೆ ಸಂಭವಿಸಿರಬೇಕು. ಹೀಗಾಗಿ ಸ್ಥಳದಲ್ಲಿ ಯಾರೂ ಇದ್ದಿಲ್ಲ. ಹತ್ತಿರ ಹೋದಂತೆ ಕಾರ್‌ನ ಸ್ಟಿರಿಯೋದಿಂದ ಸುಪ್ರಭಾತವೊಂದು ಕೇಳಿ ಬರತೊಡಗಿತು.

ಆದರೆ, ಕಾರ್‌ನಲ್ಲಿ ಕೂತವರಿಗೆ ಅದರ ಬಗ್ಗೆ ಗಮನವಿದ್ದಂತೆ ಕಾಣಲಿಲ್ಲ. ನಾವು ಕೂಗಿದಾಗಲೂ ಯಾರೂ ಓಗೊಡಲಿಲ್ಲ. ಅವರ ಭುಜಗಳನ್ನು ನಿಧಾನವಾಗಿ ಅಲ್ಲಾಡಿಸಿದೆವು. ಅವರು ಸ್ಪಂದಿಸಲಿಲ್ಲ. ಮೂಗಿನ ಹತ್ತಿರ ಬೆರಳಿಟ್ಟು ನೋಡಿದರೆ ಉಸಿರು ತಾಕಲಿಲ್ಲ.

ಕಾರಿನಲ್ಲಿದ್ದವರೆಲ್ಲ ಸತ್ತಿದ್ದರು. ಅದೂ ಅಪಘಾತ ಸಂಭವಿಸಿದ ಕೆಲವೇ ಕ್ಷಣಗಳಲ್ಲಿ.

ನನ್ನನ್ನು ದಿಗ್ಭ್ರಮೆಗೊಳಿಸಿದ್ದೇ ಅದು. ಕಾರನ್ನು ರಸ್ತೆ ತಿರುವಿನಲ್ಲಿ ನಿಯಂತ್ರಿಸಲು ವಿಫಲನಾಗಿದ್ದ ಡ್ರೈವರ್‌, ಅದನ್ನು ಪಕ್ಕದಲ್ಲಿದ್ದ ಮರಕ್ಕೆ ಅಪ್ಪಳಿಸಿದ್ದ. ನಿದ್ದೆಯಲ್ಲಿದ್ದ ಇತರ ನಾಲ್ವರು ಪ್ರಯಾಣಿಕರ ಯಾವ ಅಂಗಕ್ಕೆ ಪೆಟ್ಟು ಬಿದ್ದಿತ್ತೋ, ಎಲ್ಲ ಒಟ್ಟಿಗೇ ಜೀವ ಬಿಟ್ಟಿದ್ದರು. ಡ್ರೈವರ್‌ನ ಎದೆಗೆ ಸ್ಟೀರಿಂಗ್‌ ವ್ಹೀಲ್‌ ಗುದ್ದಿರಬೇಕು. ಅವನ ಮುಖ ಎತ್ತಿ ನೋಡಲು ಯಾರಿಗೂ ಮನಸ್ಸಾಗಲಿಲ್ಲ. ಒಂದು ಸಮಾನ ಆಘಾತ ನೆರೆದಿದ್ದ ಬಸ್‌ನ ಪ್ರಯಾಣಿಕರನ್ನು ಆವರಿಸಿಕೊಂಡು ದಿಗ್ಭ್ರಮೆಗೊಳಿಸಿತ್ತು.

ಅಷ್ಟೊತ್ತಿಗೆ ಬರುವ-ಹೋಗುವ ವಾಹನಗಳು ಅಲ್ಲಲ್ಲಿ ನಿಂತಿದ್ದವು. ಅಪಘಾತ ನೋಡಲು ನೂಕುನುಗ್ಗಲು ಶುರುವಾಗಿತ್ತು. ಜನರ ಗುಜು ಗುಜು, ವಾಹನಗಳ ದಟ್ಟಣೆಯಿಂದ ಎಚ್ಚೆತ್ತ ನಮ್ಮ ಬಸ್‌ನ ಡ್ರೈವರ್‌ ವಾಪಸ್‌ ಬಸ್ಸೇರಿ ಹಾರ್ನ್‌ ಬಾರಿಸಿದ. ನಾನು ಮತ್ತೆ ಕ್ಯಾಬಿನ್‌ ಹೊಕ್ಕಾಗ, ಅವನ ಮ್ಲಾನವಾದ ಮುಖ ನನ್ನನ್ನು ಸೆಳೆಯಿತು.

ಅಪಘಾತ ಸ್ಥಳದ ದಟ್ಟಣೆ ದಾಟಿಕೊಂಡು ಹೊರಟಾಗ ಬಸ್‌ನ ವೇಗ ತಂತಾನೆ ಕಡಿಮೆಯಾಗಿತ್ತು. ’ನಿಧಾನವಾಗಿ ಓಡಿಸು’ ಎಂದು ಯಾರೋ ನಿರ್ದೇಶಿಸಿದರೇನೋ ಎಂಬಂತೆ ಚಾಲಕ ಬಸ್‌ ಓಡಿಸುತ್ತಿದ್ದ. ಅವನಲ್ಲೀಗ ಬೈಗುಳಗಳಿರಲಿಲ್ಲ. ಅವಸರವಿರಲಿಲ್ಲ. ಸಾವಿನ ಸಮೀಪ ದರ್ಶನ ಅವನಲ್ಲಿದ್ದ ಮನುಷ್ಯತ್ವ ಎಚ್ಚರಿಸಿದೆಯೇನೋ ಎಂದು ನನಗೆ ಅನ್ನಿಸಿತು.

ಇದ್ದಕ್ಕಿದ್ದಂತೆ ನನ್ನ ಮುಖ ನೋಡಿದ ಆತ, ’ಸಾಹೇಬ್ರ ಇವತ್ತು ನನ್ನ ಮಗಳ ಹುಟ್ಟಿದ ಹಬ್ಬಾರೀ’ ಎಂದುಬಿಟ್ಟ.

ದೂರದ ಯಾವುದೋ ಊರಿನಲ್ಲಿದ್ದ ಮಗಳು ತನ್ನ ದಾರಿ ಕಾಯುತ್ತಿರುವ ಚಿತ್ರ ಅಲ್ಲಿ ಕಾಣುತ್ತಿದೆಯೇನೋ ಎಂಬಂತೆ ರಸ್ತೆಯನ್ನು ದಿಟ್ಟಿಸಿ ನೋಡುತ್ತಿದ್ದ ಅವನಲ್ಲಿ ಈಗ ಉದ್ವೇಗ ಇರಲಿಲ್ಲ. ಮನಸ್ಸು ಒಳಮುಖವಾಗಿತ್ತು.

ಅಷ್ಟೊತ್ತಿಗೆ ಹೊರಗೆ ಬೆಳ್ಳಂಬೆಳಕು.

ಪಾಪ, ಈ ಡ್ರೈವರ್‌ ಯಾವ ಊರಿನವನೋ. ಸಾವಿನ ದೃಶ್ಯ ಇವನ ಬದುಕಿನ ಬಳ್ಳಿಯನ್ನು ಕದಲಿಸಿದೆ ಎಂದು ಅನ್ನಿಸಿತು. ನಾವೆಲ್ಲ ಇವತ್ತು ಜೀವಂತವಾಗಿ ಓಡಾಡಲು ಸಾಧ್ಯವಾಗಿರುವುದು ಇಂತಹ ಸಾವಿರಾರು ಚಾಲಕರ ಕರ್ತವ್ಯಪ್ರಜ್ಞೆಯಿಂದ ಮಾತ್ರ ಎಂದು ಕೃತಜ್ಞತೆ ಉಕ್ಕಿತು. ಅದುವರೆಗಿನ ಅವನ ಬೈಗುಳಗಳು, ಕೆಟ್ಟ ಚಾಲನೆ, ಹುಂಬತನ ಮರೆತುಹೋದವು. ಅವನ ಮನುಷ್ಯ ಸಹಜ ಸ್ಪಂದನೆ ಮನಸ್ಸು ತಟ್ಟಿತು. ಮತ್ತೊಮ್ಮೆ ಅವನ ಮುಖ ದಿಟ್ಟಿಸುತ್ತಿದ್ದಂತೆ, ಇಡೀ ಚಾಲಕ ವರ್ಗದ ಬಗ್ಗೆ ನನ್ನಲ್ಲೊಂದು ಅಪಾರ ಗೌರವ ಅರಳತೊಡಗಿತು.

ಇವರು ಸರಿಯಾಗಿ ಚಾಲನೆ ಮಾಡಿದ್ದರಿಂದಲೇ ಅಲ್ಲವೇ ನಾವೆಲ್ಲ ಇವತ್ತು ಬದುಕಿದ್ದು? ಇಲ್ಲವಾಗಿದ್ದರೆ ನಾವೆಲ್ಲ ಯಾವತ್ತೋ ಸತ್ತಿರುತ್ತಿದ್ದೆವು- ಆ ಕಾರಿನ ಪ್ರಯಾಣಿಕರ ಹಾಗೆ.

ಬಸ್‌ಗೆ ಈಗ ಹದವಾದ ವೇಗ. ದಾರಿಯಲ್ಲಿ ಸಿಕ್ಕ ಚಿಕ್ಕ ಊರೊಂದರಲ್ಲಿ ಸಮವಸ್ತ್ರ ಧರಿಸಿದ್ದ ಬರಿಗಾಲ ಶಾಲಾ ಮಕ್ಕಳು ಕಣ್ಣಿಗೆ ಬಿದ್ದವು. ಅವರನ್ನು ನೋಡುತ್ತಿದ್ದಂತೆ ಡ್ರೈವರ್‌ ಜಾಗರೂಕನಾದ. ಬಸ್‌ ಹತ್ತಿರ ಬಂದಾಗ, ಆ ಮಕ್ಕಳು ಕುಣಿಯುತ್ತ ಡ್ರೈವರ್‌ ಮಾಮಾನಿಗೆ ಟಾಟಾ ಮಾಡಿ ಕೇಕೆ ಹಾಕಿದವು.

ನನಗೆ ಅಚ್ಚರಿಯಾಗುವಂತೆ, ನಮ್ಮ ಡ್ರೈವರ್‌ ಮುಗುಳ್ನಗುತ್ತ ವಾಪಸ್‌ ಟಾಟಾ ಮಾಡಿ ಮೆಲುವಾಗಿ ಹಾರ್ನ್‌ ಹೊಡೆದ. ಮಕ್ಕಳು ರಸ್ತೆ ದಾಟಿದಾಗ ಮತ್ತೆ ಬಸ್‌ನ ವೇಗ ಹೆಚ್ಚಿತು. ಆದರೆ, ಅದರಲ್ಲಿ ಉದ್ವೇಗವಿರಲಿಲ್ಲ, ಹಿಡಿತವಿತ್ತು. ಯಾವುದೋ ನಿರಾಳ ಭಾವ ಆವರಿಸಿದಂತಾಗಿ ನಾನು ಸೀಟ್‌ಗೆ ತಲೆಯಾನಿಸಿಕೊಂಡು ಕಣ್ಮುಚ್ಚಿದೆ. ಅದುವರೆಗೆ ಎಲ್ಲೋ ಮಾಯವಾಗಿದ್ದ ನಿದ್ದೆ ನಿಧಾನವಾಗಿ ಆವರಿಸಿಕೊಳ್ಳತೊಡಗಿತು.

ಬಸ್‌ ಒಂದೇ ಹದದಲ್ಲಿ ಓಡುತ್ತಲೇ ಇತ್ತು.

- ಚಾಮರಾಜ ಸವಡಿ

(೨೦೦೨ ಜನವರಿಯಲ್ಲಿ ಬರೆದಿದ್ದು)



2 comments:

ಮನಸಿನ ಮಾತುಗಳು said...

ಚಾಮರಾಜ ಸವಡಿ ಸರ್,
ನವಿರಾಗಿ ನಿರೂಪಣೆ ಮಾಡಿದ್ದಿರಿ.....ನಿಮ್ಮ ಅನುಭವ ಹಂಚಿಕೊಂಡಿದಕ್ಕೆ ಧನ್ಯವಾದಗಳು....
ವಾಹನ ಚಾಲನೆ ಮೇಲ್ನೋಟಕ್ಕೆ ಬಹಳ ಸುಲಭ ಅನಿಸಿದರೂ ಕೂಡ ಅಷ್ಟು ಸುಲಭವಲ್ಲ. ಡ್ರೈವರ್ ಗಳ ಕೈಯಲ್ಲೇ ನಮ್ಮ ಜೀವ ಒಪ್ಪಿಸಿ ವಾಹನ ಹತ್ತಿಯಾಗಿರುತ್ತದೆ, ಯಾವುದಕ್ಕೂ ನಮ್ಮ ಆಯುಷ್ಯ ಗಟ್ಟಿ ಇರಬೇಕಷ್ಟೇ ಅಂತ ಹೇಳಬಹುದೇನೋ ಅಲ್ಲವ?... :)

samayakannada said...

ಥ್ಯಾಂಕ್ಸ್‌ ದಿವ್ಯಾ,

ಇವತ್ತು ನಾವೆಲ್ಲ ಇನ್ನೂ ಬದುಕಿರೋದಕ್ಕೆ ಚಾಲಕರೇ ಪ್ರಮುಖ ಕಾರಣಕರ್ತರು ಅಂತ ಸಾಕಷ್ಟು ಬಾರಿ ಅನ್ನಿಸಿದೆ. ಅದಕ್ಕೆಂದೇ ಅವರಿಗೊಂದು ಅಕ್ಷರ ಸಲಾಂ !