ರಸ್ತೆ ನೆರಳಲ್ಲಿ ಮಲಗಿದ ಮಕ್ಕಳು ಮತ್ತು ನೆನಪುಗಳು...
9 May 2011
ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು
17 Dec 2009
ಬಾಲ್ಯದಲ್ಲಿ ಚಿತ್ರವಿಚಿತ್ರ ಆಸೆಗಳಿರುತ್ತವೆ. ಅವತ್ತಿನ ಮಟ್ಟಿಗೆ ಅವೇ ದೊಡ್ಡವು. ಬಲು ಪಸಂದಾಗಿರುವಂಥವು. ಚಿಕ್ಕವನಿದ್ದಾಗ, ನಮ್ಮೂರಿನ ಹಿಟ್ಟಿನ ಗಿರಣಿಗೆ ನಿಯಮಿತವಾಗಿ ಹೋಗುತ್ತಿದ್ದೆ, ಜೋಳ ಬೀಸಿಕೊಂಡು ಬರಲು. ಅದೇ ಮುಖ್ಯ ಆಹಾರ ನಮಗೆ. ತೀರಾ ಕುಳ್ಳನಾಗಿದ್ದ ನನಗೆ, ಎತ್ತರದಲ್ಲಿದ್ದ ಹಿಟ್ಟು ಬೀಸುವ ಯಂತ್ರದ ಬಾಯಿಗೆ ಜೋಳದ ಬುಟ್ಟಿ ಎತ್ತಿ ಸುರುವಲು ಆಗುತ್ತಿರಲಿಲ್ಲ. ಗಿರಣಿಯ ಕೆಲಸಗಾರ, ನನ್ನ ತಲೆ ಮೇಲಿನ ಬುಟ್ಟಿ ಎತ್ತಿ, ಜೋಳ ಸುರುವಿ ಬುಟ್ಟಿಯನ್ನು ವಾಪಸ್ ಕೊಡುತ್ತಿದ್ದ. ಆಗ ಕೆಲ ಗಾಲಿಗಳನ್ನು ತಿರುವಿದ ಕೂಡಲೇ ಯಂತ್ರದ ಸದ್ದು ಬದಲಾಗಿ, ಇದ್ದಕ್ಕಿದ್ದಂತೆ ಹಿಟ್ಟು ಬುಟ್ಟಿಯಲ್ಲಿ ಬೀಳಲು ಶುರುವಾಗುತ್ತಿತ್ತು.
ನನಗೆ ಅದು ಬಹಳ ಕೌತುಕದ ಸಂಗತಿಯಾಗಿತ್ತು. ಯಂತ್ರದ ಬಾಯಿಂದ ಜೋಳ ಅದರ ಹೊಟ್ಟೆಗೆ ಹೇಗೆ ಹೋಗುತ್ತದೆ ಎಂಬುದನ್ನು ನೋಡುವ ಆಸೆ ನನ್ನದು. ಆದರೆ, ಗಿರಣಿಯವ ನನ್ನನ್ನು ಬಿಡುತ್ತಿರಲಿಲ್ಲ. ಅಲ್ಲದೇ, ಜೋಳ ಮುಗಿಯುತ್ತ ಬಂತು ಎಂಬುದು ಅವನಿಗೆ ಹೇಗೆ ಗೊತ್ತಾಗುತ್ತದೆ ಎಂಬುದನ್ನು ತಿಳಿಯುವ ಕುತೂಹಲವೂ ಸಾಕಷ್ಟಿತ್ತು. ಎಷ್ಟೇ ಪ್ರಯತ್ನಿಸಿದರೂ, ಆತ ಹೇಳುತ್ತಿರಲಿಲ್ಲ. ’ಅದಕ್ಕೆಲ್ಲ ತಲೆ ಬೇಕಾಗುತ್ತದೆ’ ಎಂದು ತನ್ನ ತಲೆ ಮುಟ್ಟಿ ನಗುತ್ತಿದ್ದ.
ಆಗ ನನ್ನ ದೊಡ್ಡ ಕನಸೆಂದರೆ, ಗಿರಣಿಯಲ್ಲಿ ಹಿಟ್ಟು ಬೀಸುವ ಕೆಲಸ ಮಾಡಬೇಕೆಂಬುದು. ದೊಡ್ಡವನಾದಾಗ, ಹಿಟ್ಟು ಬೀಸುವ ಕೆಲಸ ಮಾಡಬೇಕು. ಆಗ, ನನ್ನಂಥ ಚಿಕ್ಕಮಕ್ಕಳಿಗೆ ಗಿರಣಿ ಕೆಲಸ ಮಾಡುವುದನ್ನು ತೋರಿಸಿ ಅವರ ಅಚ್ಚರಿ ಗಮನಿಸಬೇಕೆಂಬ ವಿಚಿತ್ರ ಆಸೆ ಹುಟ್ಟಿತ್ತು. ನಾನು ಹೈಸ್ಕೂಲು ಮುಗಿಸುವವರೆಗೂ ಈ ಆಸೆ ಇತ್ತೆಂಬುದನ್ನು ಇವತ್ತು ನೆನೆದರೆ ನಗು ಬರುತ್ತದೆ.
ಮುಂದೆ ಇಂಥ ಹಲವಾರು ಆಸೆಗಳು ಹುಟ್ಟಿಕೊಂಡವು. ನಮ್ಮೂರಿನಲ್ಲಿದ್ದ ಟೆಂಟ್ ಸಿನಿಮಾ ಥೇಟರ್‌ನ ಗೇಟ್‌ಕೀಪರ್ ಆಗಬೇಕೆಂಬುದು ಅಂಥ ಕನಸುಗಳಲ್ಲಿ ಒಂದು. ಆಗ ದಿನಾ ಸಿನಿಮಾ ನೋಡಬಹುದು. ಅದಕ್ಕಾಗಿ ಕಾಸು ಕೊಡಬೇಕಿಲ್ಲ. ಅಷ್ಟೇ ಅಲ್ಲ, ಸಿನಿಮಾ ಯಾವಾಗ ಬದಲಾಗುತ್ತದೆ, ಹೊಸ ಸಿನಿಮಾ ಯಾವುದೆಂಬುದು ತಕ್ಷಣ ಗೊತ್ತಾಗುತ್ತದೆ ಎಂಬ ರೋಮಾಂಚನ. ಗೇಟ್‌ಕೀಪರ್‌ಗಳು ನನಗೆ ಗಂಧರ್ವ ಲೋಕದ ದ್ವಾರಪಾಲಕರಂತೆ ಕಾಣುತ್ತಿದ್ದರು. ಅವರೊಂದಿಗೆ ಗೆಳೆತನ ಬೆಳೆಸಿಕೊಳ್ಳಬೇಕೆಂದು ಎಷ್ಟೋ ಸಾರಿ ಆಸೆ ಪಟ್ಟಿದ್ದೆ. ಆದರೆ, ನನ್ನಂಥ ಚಿಕ್ಕಹುಡುಗರೊಂದಿಗೆ ಅವರು ಯಾವತ್ತೂ ಸಲಿಗೆಯಿಂದ ಇರುತ್ತಿರಲಿಲ್ಲ ಎಂಬುದೇ ಆಗ ನನಗೆ ವಿಷಾದದ ಹಾಗೂ ದಿನಗಟ್ಟಲೇ ಕಾಡಿದ ಚಿಂತೆಯ ವಿಷಯವಾಗಿತ್ತು.
ಒಂದೊಂದು ಕಾಲಘಟ್ಟದಲ್ಲೂ ನನ್ನ ಆಸೆಯ ರೀತಿಗಳು ಬದಲಾಗುತ್ತ ಹೋಗಿವೆ. ಕಾಲೇಜು ಪ್ರವೇಶಿಸಿದಾಗ, ಇಡೀ ತರಗತಿಯಲ್ಲಷ್ಟೇ ಏಕೆ, ಇಡೀ ಕಾಲೇಜಿನಲ್ಲಿ ನಾನೊಬ್ಬನೇ ಕುಳ್ಳ ವಿದ್ಯಾರ್ಥಿಯಾಗಿದ್ದೆ. ನನ್ನ ಸಹಪಾಠಿ ಹುಡುಗಿಯರೆಲ್ಲ ನನಗಿಂತ ಸಾಕಷ್ಟು ಎತ್ತರವಿದ್ದವರೇ. ಅವರು ಯಾವತ್ತೂ ನನ್ನನ್ನು ಸಹಪಾಠಿಯಂತೆ ಕಾಣಲಿಲ್ಲ. ತಮ್ಮ ಓಣಿಯ ಯಾರದೋ ಮನೆಯ ಪುಟ್ಟ ಹುಡುಗನಂತೆ ನನ್ನೊಂದಿಗೆ ವರ್ತಿಸುತ್ತಿದ್ದರು. ಆಗೆಲ್ಲ ಸಾಕಷ್ಟು ಸಿಟ್ಟು ಬರುತ್ತಿತ್ತು. ನಾನೂ ಎತ್ತರ ಬೆಳೆಯಬೇಕು ಎಂದು ಪದೆ ಪದೆ ಕನಸು ಕಾಣುತ್ತಿದ್ದೆ. ಬೆಳ್ಳಂಬೆಳಿಗ್ಗೆ ಎದ್ದು, ಕಾಲೇಜು ಮೈದಾನ ಹಾಗೂ ಸುತ್ತಮುತ್ತಲಿನ ಮರಗಿಡಗಳ ಕೈಗೆಟಕುವ ಕೊಂಬೆಗಳಿಗೆ ಜೋತು ಬೀಳುತ್ತಿದ್ದೆ. ಹಾಗೆ ಜೋತುಬೀಳುತ್ತಿದ್ದರೆ ಎತ್ತರವಾಗುತ್ತಾರೆ ಎಂದು ನನ್ನ ಗೆಳೆಯರು ಹೇಳಿದ್ದನ್ನು ನಂಬಿದ್ದೆ. ಅದರಿಂದ ಎತ್ತರವೇನೂ ಹೆಚ್ಚಾಗಲಿಲ್ಲ. ಆದರೆ, ಆರೋಗ್ಯಪ್ರಜ್ಞೆ ಚೆನ್ನಾಗಿ ಬೆಳೆಯಿತು. ಮುಂದೆ ನಾನು ಯೋಗಾಸನ ಕಲಿಯಲು ಈ ಪ್ರಯತ್ನ ತುಂಬ ನೆರವಾಯ್ತು.
ಯೋಗಾಸನ ಕಲಿತಿದ್ದು, ಹಿಪ್ನಾಟಿಸಂ ಕಲಿತಿದ್ದು, ಮುಂದೆ ಏರ್‌ಫೋರ್ಸ್ ಸೇರಲು ಬಾಲ್ಯ ಮತ್ತು ಕಾಲೇಜಿನ ದಿನಗಳ ಕನಸುಗಳ ಇಂಥ ಪ್ರೇರಣೆಗಳು ಅಪಾರ. ನಿತ್ಯದ ಊಟಕ್ಕೆ ಪರದಾಡಬೇಕಿದ್ದ ಕಾಲೇಜಿನ ದಿನಗಳು ನನ್ನಲ್ಲಿ ಅದೆಷ್ಟು ಅಸಹನೆ ಮೂಡಿಸಿದ್ದವೆಂದರೆ, ಮೊದಲ ಅವಕಾಶಕ್ಕೆ ಏರ್‌ಮನ್ ಕೆಲಸ ಸಿಕ್ಕಾಗ, ಎರಡನೇ ವಿಚಾರ ಕೂಡ ಮಾಡದೇ ಮಿಲಿಟರಿ ಸೇರಿಕೊಂಡಿದ್ದೆ. ಆದರೆ, ದುರದೃಷ್ಟ ಅಲ್ಲಿಯೂ ಒಕ್ಕರಿಸಿತ್ತು. ಇಡೀ ತಂಡದಲ್ಲಿ ನಾನೊಬ್ಬನೇ ಕುಳ್ಳ. ದೈಹಿಕ ಪರೀಕ್ಷೆಯಲ್ಲಿ ನನ್ನ ಎತ್ತರವನ್ನು ಮೂರು ಸಲ ಪರೀಕ್ಷಿಸಿದ್ದಾಯ್ತು. ಕೊನೆಗೂ ಕನಿಷ್ಟ ಮಟ್ಟಕ್ಕಿಂತ ಕೇವಲ ಎರಡು ಸೆಂ.ಮೀ. ಎತ್ತರವಿದ್ದುದನ್ನು ದೃಢಪಡಿಸಿಕೊಂಡ ನಂತರವೇ ನನ್ನ ನೇಮಕಾತಿ ಖಚಿತವಾಯ್ತು.
ಸಾಕಷ್ಟು ಎತ್ತರ ಬೆಳೆಯಲಿಲ್ಲ ಎಂಬ ಕೀಳರಿಮೆ ನನ್ನನ್ನು ಕಾಲು ಶತಮಾನ ಕಾಡಿದೆ. ಅದೇ ರೀತಿ ಒಂಚೂರು ದಪ್ಪವಾಗಬೇಕೆಂಬ ಬಯಕೆ ದಶಕಗಳ ಕಾಲ ಜೊತೆಗಿತ್ತು. ತಂತ್ರಜ್ಞಾನ ಕಲಿಯಬೇಕೆಂಬ ಹಂಬಲ, ಇಂಗ್ಲಿಷ್ ಓದಿ ಅರ್ಥ ಮಾಡಿಕೊಳ್ಳಬೇಕೆಂಬ ಆಸೆ ಹುಟ್ಟಿದ್ದೇ ಹೀಗೆ. ನಾನು ಪತ್ರಿಕೋದ್ಯಮ ಪ್ರವೇಶಿಸಿದ್ದೂ ಇಂಥದೇ ಒಂದು ಬೆಂಬಿಡದ ಬಯಕೆಯಿಂದಾಗಿ.
ಬರೆಯುತ್ತ ಹೋದರೆ, ಒಂದೊಂದು ಪ್ರಯೋಗದ ಬಗ್ಗೆಯೇ ಪುಟಗಟ್ಟಲೇ ಬರೆಯಬಹುದು. ಮುಂದೆಂದಾದರೂ ಅದನ್ನು ಬರೆದೇನು. ಮುಂದೆಂದೋ ನಕ್ಕುಬಿಡಬಹುದಾದಂಥ ಆಸೆಗಳು ಪ್ರತಿಯೊಬ್ಬ ವ್ಯಕ್ತಿಯನ್ನು ಹೀಗೇ ಕಾಡಿರಬಹುದು ಅಂತ ಅನಿಸುತ್ತದೆ. ಅವತ್ತಿನ ನನ್ನನ್ನು ಇವತ್ತಿನ ದಿನಕ್ಕೆ ಹೋಲಿಸಿದಾಗ, ಇತರರಿಗಿರಲಿ, ನನಗೇ ಸಾಕಷ್ಟು ಅಚ್ಚರಿ ಉಂಟಾಗುತ್ತದೆ. ಎಷ್ಟೊಂದು ದೂರವನ್ನು ಕ್ರಮಿಸಿ ಬಂದೆನೆಲ್ಲ ಎಂದು ಒಮ್ಮೊಮ್ಮೆ ದಿಗಿಲೂ ಆಗುತ್ತದೆ.
ಒಂದೇ ಎರಡೇ, ಇಂಥ ನೂರಾರು ಪ್ರಯೋಗಗಳನ್ನು ಮಾಡಿದ್ದೇನೆ. ಸಾಕಷ್ಟು ಸಾರಿ ದುಬಾರಿ ಬೆಲೆಯನ್ನೂ ಕೊಟ್ಟಿದ್ದೇನೆ. ವರ್ಷಕ್ಕೊಂದರಂತೆ ನೌಕರಿಗಳನ್ನು ಬದಲಿಸಿದ್ದೇನೆ. ಮನೆಗಳನ್ನು ಬದಲಿಸಿದ್ದೇನೆ. ಎಲ್ಲವೂ ಬದಲಾಯ್ತು ಎಂದು ಅನಿಸಿ, ಒಬ್ಬನೇ ಕೂತು ಯೋಚಿಸಿ ನೋಡಿದಾಗ, ನಾನು ಏನೇನೂ ಬದಲಾಗಿಲ್ಲ ಎಂದು ಮತ್ತೆ ಮತ್ತೆ ಅನ್ನಿಸಿದೆ.
ಏಕೆಂದರೆ, ಮಾಡಿದ ತಪ್ಪುಗಳು ಪ್ರಯೋಗನಿರತನಾದಾಗ ಆಗಿದ್ದೇ ಹೊರತು ಉದ್ದೇಶಪೂರ್ವಕವಲ್ಲ. ಮಾಡಿದ ಪ್ರತಿಯೊಂದು ತಪ್ಪಿನಿಂದಲೂ ಪಾಠ ಕಲಿತಿದ್ದೇನೆ. ಕಲಿಯಲು ಯತ್ನಿಸುತ್ತಿದ್ದೇನೆ. ಇವತ್ತು ಏನಾದರೂ ಒಂಚೂರು ವಿವೇಚನೆ, ಅನುಭವ, ಜೀವನಪ್ರೀತಿ ನನ್ನಲ್ಲಿ ಕಂಡು ಬಂದರೆ, ಅವತ್ತಿನ ’ಸಿಲ್ಲಿ’ ಕನಸುಗಳೇ ಅದಕ್ಕೆ ಕಾರಣ ಅಂತ ಮಾತ್ರ ಹೇಳಬಲ್ಲೆ.
ಹೀಗಾಗಿ, ಹೊಸ ತಪ್ಪುಗಳನ್ನು ಮಾಡಲು ಇಷ್ಟಪಡುತ್ತೇನೆ ಮತ್ತು ಅವನ್ನು ಎಂದಿನ ಉತ್ಸಾಹದಿಂದ ಮಾಡುತ್ತಲೇ ಇದ್ದೇನೆ.
- ಚಾಮರಾಜ ಸವಡಿ
‘ಪಾಟಿ ಮೇಲೆ ಪಾಟಿ, ನಮ್ಮ ಸಾಲಿ ಸೂಟಿ'
26 Sept 2009
ಏಕೋ ಇವತ್ತು ಈ ಭಾವನೆ ಬಲವಾಗಿ ಕಾಡತೊಡಗಿದೆ. ಚಿಕ್ಕವರಿದ್ದಾಗ ಬೇಗ ಬೇಗ ದೊಡ್ಡವರಾಗಬೇಕು ಎಂದು ಹಂಬಲಿಸುತ್ತೇವೆ. ಬೆಳೆದು, ಜವಾಬ್ದಾರಿಗಳು ಹೆಗಲಿಗೇರಿದಾಗ ಬಾಲ್ಯ ಪ್ರಿಯವಾಗತೊಡಗುತ್ತದೆ. ಕಳೆದುಕೊಂಡಿದ್ದಕ್ಕಾಗಿ, ಇಲ್ಲದಿರುವುದಕ್ಕಾಗಿ ಹಂಬಲಿಸುವುದು ಮನುಷ್ಯನ ಜೊತೆಗೇ ಬೆಳೆದುಬಂದ ಗುಣವಿರಬೇಕು.
ಅದಕ್ಕೆಂದೇ ಬಾಲ್ಯ ಒಂದು ಶಾಶ್ವತ ನೆನಪು.
ಬಾಲ್ಯದ ಎಲ್ಲ ನೆನಪುಗಳೂ ಸುಂದರ ಎಂದು ಹೇಳಲಾಗದು. ಆದರೂ, ಹಲವಾರು ಕಾರಣಗಳಿಗಾಗಿ ಅದು ಪ್ರಿಯವೇ. ತೀರ ದುಃಸ್ಥಿತಿ ಎದುರಿಸಿದವರನ್ನು ಬಿಟ್ಟರೆ, ಬಹುತೇಕ ಜನರ ಪಾಲಿಗೆ ಬಾಲ್ಯದ ನೆನಪೇ ಸುಂದರ. ಈಗಿನ ಸೌಲಭ್ಯಗಳ್ಯಾವವೂ ಇದ್ದಿರದಿದ್ದರೂ ನಮ್ಮ ಬಾಲ್ಯ ನಮಗೆ ಸೊಗಸೇ.
ಆಗಿನ ಆಟಿಕೆಗಳಾದರೂ ಎಂಥವು? ಬೀದಿಯಲ್ಲಿ ಬಿದ್ದಿರುತ್ತಿದ್ದ ಕಲ್ಲುಗಳು, ಮಣ್ಣು, ಉದುರಿಬಿದ್ದಿರುತ್ತಿದ್ದ ಹೂಗಳು, ಹಳೆ ಸಾಮಾನು, ರದ್ದಿ ಕಾಗದ, ಶಾಲೆಯಿಂದ ಕದ್ದು ತಂದಿರುತ್ತಿದ್ದ ಚಾಕ್‌ಪೀಸ್- ಇವು ನಮ್ಮ ಬಾಲ್ಯವನ್ನು ಅದೆಷ್ಟು ಸಮೃದ್ಧವಾಗಿಸಿದ್ದವು! ಒಬ್ಬರೇ ಆಡಿಕೊಳ್ಳುವ ನೂರಾರು ಆಟಗಳಿದ್ದವು. ಇಬ್ಬರು ಸೇರಿದರೆ ಅದೊಂದು ತಂಡ. ನಾಲ್ಕೈದು ಜನರಿದ್ದರಂತೂ ಇಡೀ ಊರಿಗೇ ಕೇಳುವಷ್ಟು ಜೋರಾಗಿ ಗದ್ದಲ ಮಾಡುತ್ತ, ಖುಷಿ ಅನುಭವಿಸುತ್ತ ಆಡುತ್ತಿದ್ದೆವು.
ಆಗ ಪ್ರತಿಯೊಂದೂ ನಮಗೆ ಆಟಿಕೆಯೇ, ಅಚ್ಚರಿ ಹುಟ್ಟಿಸುವ ವಿಷಯವೇ. ಬೆಳಗಿನ ಸೂರ್ಯನಿಂದ ಹಿಡಿದು ರಾತ್ರಿಯ ಚುಕ್ಕಿಗಳವರೆಗೆ, ಪ್ರಕೃತಿಯ ಪ್ರತಿಯೊಂದು ಘಟನೆಯೂ ವಿಸ್ಮಯಕಾರಿಯೇ. ಪ್ರತಿಯೊಂದು ಪ್ರಾಣಿಯೂ ಸಂಗಾತಿಯೇ. ಮನೆಯ ಪ್ರತಿಯೊಂದು ವಸ್ತುವೂ ಆಟಿಕೆಯೇ. ಅದು ಕಟ್ಟಿಕೊಟ್ಟ ಸುಂದರ ಜಗತ್ತಿನ ಸವಿ ವರ್ಣಿಸುವುದೂ ಸಾಧ್ಯವಿಲ್ಲವೆನ್ನವಷ್ಟರ ಮಟ್ಟಿಗೆ ಬಾಲ್ಯ ಸಮೃದ್ಧ.
ನಾನು ಹುಟ್ಟಿ ಬೆಳೆದಿದ್ದು ಇಂಥ ಒಂದು ಸಣ್ಣ ಊರಿನಲ್ಲಿ. ಕೊಪ್ಪಳ ಜಿಲ್ಲೆ ಅಳವಂಡಿಯಲ್ಲಿ ಅವತ್ತಿಗಾಗಲೇ ಹೈಸ್ಕೂಲಿತ್ತು. ಏಳನೇ ತರಗತಿಯವರೆಗೆ ಸರ್ಕಾರಿ ಶಾಲೆ, ನಂತರ ಖಾಸಗಿ ಹೈಸ್ಕೂಲು. ತಾಲ್ಲೂಕು ಕೇಂದ್ರ ಕೊಪ್ಪಳ ಬಿಟ್ಟರೆ, ನಮ್ಮೂರೊಂದರಲ್ಲೇ ಹೈಸ್ಕೂಲಿದ್ದುದು. ಆಗ ಕೊಪ್ಪಳದಲ್ಲೂ ಸರ್ಕಾರಿ ಹೈಸ್ಕೂಲು ಇರಲಿಲ್ಲ.
ಪ್ರಾಥಮಿಕ ಶಾಲೆ ಸರ್ಕಾರದದ್ದಾಗಿದ್ದರೂ ಅದಕ್ಕೊಂದು ಸ್ವಂತ ಕಟ್ಟಡವಿದ್ದಿಲ್ಲ. ಮಣ್ಣಿನ ಗೋಡೆಯ, ಮಣ್ಣಿನ ಛಾವಣಿಯ ದೊಡ್ಡ ಮನೆಯೇ ಶಾಲೆ. ಸೆಗಣಿ ಸಾರಿಸಿದ ನೆಲದ ಮೇಲೆಯೇ ಎಲ್ಲರೂ ಕೂಡುತ್ತಿದ್ದೆವು. ಮೂರು ಮತ್ತು ನಾಲ್ಕನೇ ತರಗತಿಯ ವಿದ್ಯಾರ್ಥಿಗಳಿಗೆ ಮಾತ್ರ ಬೆಂಚು. ಇಡೀ ಶಾಲೆಯಲ್ಲಿ ಡೆಸ್ಕುಗಳಿದ್ದಿಲ್ಲ. ಬಿನ್ ಇಯತ್ತೆ (ಬಿನ್ನತ್ತೆ) ಎಂದು ಕರೆಯುತ್ತಿದ್ದ ನರ್ಸರಿ ತರಗತಿಯೂ ಸೇರಿದಂತೆ ಒಂದು ಮತ್ತು ಎರಡನೇ ತರಗತಿಗಳು ನಡೆಯುತ್ತಿದ್ದುದು ಒಂದೇ ಅಂಕಣದಲ್ಲಿ. ಮೂರು ಮತ್ತು ನಾಲ್ಕನೇ ತರಗತಿಗಳಿಗೆ ಪ್ರತ್ಯೇಕ ಕೋಣೆಗಳಿದ್ದರೂ ಯಾವುದಕ್ಕೂ ಬಾಗಿಲೇ ಇರಲಿಲ್ಲ. ಅಲ್ಲಿ ನಡೆಯುತ್ತಿದ್ದ ಪಾಠ ಎಲ್ಲರಿಗೂ ಕೇಳುವಂಥ ವಾತಾವರಣ.
ಅಪ್ಪ ಪ್ರಾಥಮಿಕ ಶಾಲೆಯ ಹೆಡ್ಮಾಸ್ಟರಾಗಿದ್ದರಿಂದ ನಾಲ್ಕನೇ ವಯಸ್ಸಿನಿಂದಲೇ ಶಾಲೆಗೆ ಹೋಗುವುದು ಅಭ್ಯಾಸವಾಗಿತ್ತು. ಮನೆಯಲ್ಲಿದ್ದರೆ ಗಲಾಟೆ ಮಾಡುತ್ತಾರೆ ಎಂಬ ಕಾರಣಕ್ಕೆ ಶಾಲೆಗೆ ಹೋಗುವಾಗ ಅಣ್ಣ ಮತ್ತು ನನ್ನನ್ನು ತಮ್ಮ ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು. ಇನ್ನಿಬ್ಬರು ಅಣ್ಣಂದಿರು ಅದೇ ಶಾಲೆಯಲ್ಲಿ ಓದುತ್ತಿದ್ದರು. ಹೆಡ್ಮಾಸ್ಟರ ಮಗ ಎಂಬ ಯಾವ ವಿನಾಯಿತಿಯೂ ಇಲ್ಲದಂತೆ ಶಾಲೆ ತಲುಪಿದ ಕೂಡಲೇ ಬಿನ್ನತ್ತೆಯಲ್ಲಿ ಕೂಡಿಸುತ್ತಿದ್ದರು. ಅಲ್ಲಿ ನಮಗೆ ಏನು ಕಲಿಸುತ್ತಿದ್ದರು ಎಂಬುದು ನೆನಪಿಲ್ಲವಾದರೂ, ಅಕ್ಕಪಕ್ಕದಲ್ಲೇ ನಡೆಯುತ್ತಿದ್ದ ಒಂದು ಮತ್ತು ಎರಡನೇ ತರಗತಿಯ ಪಾಠಗಳು ನನಗೆ ಆಗಲೇ ಬಾಯಿಪಾಠವಾಗಿದ್ದವು. ಅಕ್ಷರ ಕಲಿತಿದ್ದು ನಂತರ.
ಬಿದ್ದರೆ ಒಡೆದುಹೋಗುವಂಥ ಪಾಟಿ (ಸ್ಲೇಟು) ಮತ್ತು ಬಳಪದ ಕಲ್ಲಿನ ಪೆನ್ಸಿಲ್ಲೇ ನಮ್ಮ ಆಗಿನ ಸಂಗಾತಿ. ಪೆನ್ಸಿಲ್‌ಗೆ ನಾವು ಪೇಣೆ ಎಂದು ಕರೆಯುತ್ತಿದ್ದೆವು. ನಾಲ್ಕನೇ ತರಗತಿ ಮುಗಿಯುವವರೆಗೆ ಎಲ್ಲರೂ ಬಳಸಲೇಬೇಕಾದ ವಸ್ತುಗಳವು. ನನ್ನ ಮೊದಲ ಅಕ್ಷರಭ್ಯಾಸ ಆಗಿದ್ದು ಪಾಟಿಯಲ್ಲೇ. ಮಗ್ಗಿ ಕಲಿತಿದ್ದು, ಸಣ್ಣ ಸಣ್ಣ ವಾಕ್ಯಗಳನ್ನು ಬರೆದಿದ್ದು ಅದರಲ್ಲಿಯೇ. ಹೋಂ ವರ್ಕ್ ಕೂಡಲ ಅದರಲ್ಲೇ ಮಾಡುತ್ತಿದ್ದೆವು. ರಾತ್ರಿ ಲಾಂದ್ರದ ಬೆಳಕಿನಲ್ಲಿ ಪಾಟಿಯ ಒಂದು ಭಾಗದಲ್ಲಿ ಶಬ್ದಗಳು ಮತ್ತು ವಾಕ್ಯ ರಚನೆ ಹಾಗೂ ಇನ್ನೊಂದು ಭಾಗದಲ್ಲಿ ಮಗ್ಗಿ ಬರೆದು, ಹುಷಾರಾಗಿ ಎತ್ತಿಡುತ್ತಿದ್ದೆವು. ಮರುದಿನ ಅದನ್ನು ಅತ್ಯಂತ ಜತನದಿಂದ ತೆಗೆದುಕೊಂಡು ಹೋಗಿ ಮಾಸ್ತರರ ಟೇಬಲ್ ಮೇಲಿಡುತ್ತಿದ್ದೆವು. ಒಂದರ ಮೇಲೆ ಒಂದರಂತೆ ಇಟ್ಟಿದ್ದ ಪಾಟಿಗಳ ಹಿಂದೆ ಮಾಸ್ತರರೇ ಕಾಣುತ್ತಿರಲಿಲ್ಲ.
ಸಹಪಾಠಿಗಳ ಮೇಲೆ ಸೇಡು ತೀರಿಸಿಕೊಳ್ಳುವ ಆಗಿನ ಅತ್ಯಂತ ಸಾಮಾನ್ಯ ವಿಧಾನವೆಂದರೆ, ಪಾಟಿಯಲ್ಲಿ ಬರೆದಿರುತ್ತಿದ್ದ ಹೋಮ್ ವರ್ಕ್ ಅಳಿಸಿಹಾಕುವುದು. ಹಿಂದಿನ ದಿನದ ಜಗಳವನ್ನು ಮನಸ್ಸಿನಲ್ಲಿಟ್ಟುಕೊಂಡಿರುತ್ತಿದ್ದ ಹುಡುಗರು, ಶಾಲೆಗೆ ಹೋಗುವ ದಾರಿಯಲ್ಲಿ ಕಾಯ್ದು ನಿಂತಿರುತ್ತಿದ್ದರು. ತಪ್ಪಿಸಿಕೊಂಡು ಹೋಗುವವರನ್ನು ಬಲವಂತದಿಂದ ಹಿಡಿದು ನಿಲ್ಲಿಸಿ, ಪಾಟಿಯಲ್ಲಿ ಬರೆದಿದ್ದನ್ನು ಅಳಿಸಿಬಿಟ್ಟರೆ ದೊಡ್ಡ ಜಯ ಸಂಪಾದಿಸಿದ ಸಂಭ್ರಮ. ಏಕೆಂದರೆ, ಹೋಮ್ ವರ್ಕ್ ಮಾಡಿಲ್ಲ ಎಂದು ಮಾಸ್ತರು ಏಟು ಕೊಡುವುದು ಖಾತರಿ. ಎಷ್ಟೇ ವಿವರಣೆ ನೀಡಿದರೂ ಮಾಸ್ತರು ಕೇಳುತ್ತಿರಲಿಲ್ಲ. ಅಳಿಸಿಹೋದ ಪಾಟಿ ಸತ್ಯ ನುಡಿಯುವುದಾದರೂ ಹೇಗೆ?
ಆಗ ಪ್ರತಿಯೊಂದನ್ನೂ ಬಾಯಿಪಾಠ ಮಾಡುವುದು ಕಡ್ಡಾಯವಾಗಿತ್ತು. ಮಗ್ಗಿ ಕಲಿತಿದ್ದು ಹಾಗೆ. ಒಂದು ಮತ್ತು ಎರಡನೇ ತರಗತಿಯಲ್ಲಿ ಇಡೀ ವರ್ಷಕ್ಕೆ ಒಂದೇ ಪಠ್ಯಪುಸ್ತಕ ಇರುತ್ತಿತ್ತು. ಅದರಲ್ಲಿರುತ್ತಿದ್ದ ಪದ್ಯಗಳನ್ನೆಲ್ಲ ನಾವು ಕಂಠಪಾಠ ಮಾಡಬೇಕಿತ್ತು. ಪ್ರತಿಯೊಂದು ಪದ್ಯವನ್ನು ಹೇಳಿಕೊಟ್ಟಾಗ, ಮಧ್ಯಾಹ್ನದ ತರಗತಿಯ ಕೊನೆಯ ಪಿರಿಯೆಡ್ಡಿನಲ್ಲಿ ಅದನ್ನು ಸಾಮೂಹಿಕವಾಗಿ ಬಾಯಿಪಾಠ ಮಾಡಿಸುತ್ತಿದ್ದರು. ಸರದಿಯ ಪ್ರಕಾರ, ಒಬ್ಬೊಬ್ಬನೇ ವಿದ್ಯಾರ್ಥಿ ಎದ್ದು, ಕೈಕಟ್ಟಿಕೊಂಡು, ಎರಡ ತರಗತಿಗಳ ನಡುವಿನ ಚಿಕ್ಕ ಕಾಲ್ದಾರಿಯಂಥ ಜಾಗದಲ್ಲಿ, ಆ ಕಡೆಯಿಂದ ಈ ಕಡೆ ನಡೆಯುತ್ತ, ಪದ್ಯದ ಒಂದೊಂದು ನುಡಿಯನ್ನು ರಾಗವಾಗಿ ಹಾಡುತ್ತಿದ್ದ. ಪ್ರತಿಯೊಂದು ಸಾಲಿಗೂ ತರಗತಿಯ ಇತರ ವಿದ್ಯಾರ್ಥಿಗಳು ಅದನ್ನೇ ಸಾಮೂಹಿಕವಾಗಿ ಹೇಳಬೇಕಿತ್ತು. ಶಾಲೆಯಲ್ಲಿದ್ದ ಎಲ್ಲ ನಾಲ್ಕೂ ತರಗತಿಗಳ ವಿದ್ಯಾರ್ಥಿಗಳು ತಂತಮ್ಮ ಪದ್ಯವನ್ನು ಕೋರಸ್‌ನಲ್ಲಿ ಹಾಡುತ್ತಿದ್ದರು. ಪಕ್ಕದ ಕ್ಲಾಸ್‌ನವ ಹೇಳುತ್ತಿದ್ದುದಕ್ಕಿಂತ ಜೋರಾಗಿ ಹೇಳುವ ಉಮೇದು ನಮಗೆ. ಮಾಸ್ತರು ಕೂಡ ಅದನ್ನು ಪ್ರೋತ್ಸಾಹಿಸುತ್ತಿದ್ದರು. ಕಂಠ ಹರಿಯುವಂತೆ ಏರು ಧ್ವನಿಯಲ್ಲಿ ಪದ್ಯದ ಸಾಲುಗಳನ್ನು ಕಿರಿಚುತ್ತಿದ್ದೆವು. ಎಲ್ಲ ತರಗತಿಗಳಿಂದ ಹೊರಡುತ್ತಿದ್ದ ಆ ಘನಘೋರ ಧ್ವನಿಯನ್ನು ಕೇಳಿದ ಜನರಿಗೆ, ಶಾಲೆ ಬಿಡುವ ಹೊತ್ತಾಯಿತು ಎಂಬ ಮುನ್ಸೂಚನೆ ಸಿಗುತ್ತಿತ್ತು.
ರೈಲು ಕಂಬಿಯ ಒಂದು ತುಂಡು ಶಾಲೆಯ ಗಂಟೆಯಾಗಿತ್ತು. ಅದನ್ನು ಬಾರಿಸುವುದೊಂದೇ ತಡ, ಮಾಸ್ತರು ಅಡ್ಡ ನಿಂತಿದ್ದರೂ ತಳ್ಳಿಕೊಂಡು ಹೊರಗೆ ಧಾವಿಸುತ್ತಿದ್ದೆವು. ನಾನಂತೂ ಮನೆ ತಲುಪುವವರೆಗೆ ಓಡಿಕೊಂಡೇ ಹೋಗುತ್ತಿದ್ದೆ. ನಿಧಾನವಾಗಿ ಬಂದ ನೆನಪೇ ಇಲ್ಲ.
ಆಗ ಯಾರಿಗೂ ಯುನಿಫಾರ್ಮ್ ಆಗಲಿ, ಚಪ್ಪಲಿಯಾಗಲಿ ಇರುತ್ತಿದ್ದಿಲ್ಲ. ಹರಕುಬಟ್ಟೆಗಳಂತೂ ಅತಿ ಸಾಮಾನ್ಯ. ಕೈಯಲ್ಲಿ ಹಿಡಿದ ಪಾಟಿಯ ಹೊರತಾಗಿ ಬೇರೇನೂ ಶಾಲಾವಸ್ತುಗಳಿರುತ್ತಿದ್ದಿಲ್ಲ. ಆದರೂ, ಕಲಿಯುವ ಉತ್ಸಾಹಕ್ಕೆ ಕೊರತೆ ಇರಲಿಲ್ಲ. ಮಳೆ ಬಂದರೆ ಸಾಕು, ಇಡೀ ಶಾಲೆ ಸೋರುತ್ತಿತ್ತು. ಸೋರದಿರುವ ಭಾಗದಲ್ಲಿ ಮೂರು ಮತ್ತು ನಾಲ್ಕನೇ ತರಗತಿಯ ವಿದ್ಯಾರ್ಥಿಗಳನ್ನು ಗುಂಪುಗುಂಪಾಗಿ ಕೂಡಿಸಿ ಬಿನ್ನತ್ತೆ, ಒಂದು ಮತ್ತು ಎರಡನೇ ತರಗತಿಯ ವಿದ್ಯಾರ್ಥಿಗಳನ್ನು ಮನೆಗೆ ಕಳಿಸಿಬಿಡುತ್ತಿದ್ದರು. ಮಳೆ ಇನ್ನೂ ಜೋರಾದರೆ, ಇಡೀ ಶಾಲೆಗೇ ರಜೆ. ಆಗ ಅತೀವ ಹರುಷದಿಂದ, ‘ಪಾಟಿ ಮೇಲೆ ಪಾಟಿ, ನಮ್ಮ ಸಾಲಿ ಸೂಟಿ' ಎಂದು ಜೋರಾಗಿ ಹಾಡುತ್ತ, ಮಳೆಯಿಂದ ರಕ್ಷಿಸಿಕೊಳ್ಳಲು ಪಾಟಿಯನ್ನು ತಲೆ ಮೇಲೆ ಇಟ್ಟುಕೊಂಡು ಓಡುತ್ತ ಮನೆಗೆ ಹೋಗುತ್ತಿದ್ದೆವು.
*****
ಆಕಾಶವೇ ತೂತಾಗಿದೆಯೇನೋ ಎಂಬಂತೆ ಬೀಳುತ್ತಿರುವ ಬೆಂಗಳೂರಿನ ಮಳೆ ನನಗೆ ನನ್ನೂರನ್ನು ನೆನಪಿಸುತ್ತಿದೆ. ತಮಾಷೆಯ ಸಂಗತಿ ಎಂದರೆ, ಸೋರಲು ಬೆಂಗಳೂರಿನಲ್ಲಿ ಮಣ್ಣಿನ ಶಾಲೆಗಳಿಲ್ಲ. ಸೋರುವುದೇನಿದ್ದರೂ ರಸ್ತೆಗಳು ಮತ್ತು ಚರಂಡಿಗಳು. ಹೀಗಾಗಿ, ಜೋರು ಮಳೆ ಬಂದರೆ, ನಮ್ಮೂರಲ್ಲಿ ನೀಡುತ್ತಿದ್ದಂತೆ ಇಲ್ಲಿಯೂ ಶಾಲೆಗೆ ರಜೆ.
ಆದರೆ, ‘ಪಾಟಿ ಮೇಲೆ ಪಾಟಿ, ನಮ್ಮ ಸಾಲಿ ಸೂಟಿ' ಹಾಡು ಮಾತ್ರ ಎಲ್ಲಿಯೂ ಕೇಳಿಬರುವುದಿಲ್ಲ!
- ಚಾಮರಾಜ ಸವಡಿ
ಮಳೆ ಎಂದರೆ ಬಾಲ್ಯದ ನೆನಪು ಕಣಾ...
18 Aug 2009
ಮುಂಗಾರು ಶುರುವಾಗಿದೆ. ಜೊತೆಗೆ, ನೆನಪುಗಳ ಮಳೆಯೂ. ಮೊದಲ ಹನಿಗೆ ಬಾಲ್ಯ ನೆನಪಾಗಿದೆ. ಮುಂಗಾರಿನ ಮಳೆಗೆ ಮುಖವೊಡ್ಡಿ ನಿಲ್ಲುತ್ತಿದ್ದ ದಿನಗಳು ಕಣ್ಮುಂದೆ ಬರುತ್ತಿವೆ. ಹಳ್ಳಿಯ ದೂಳು ತುಂಬಿದ ರಸ್ತೆಗಳಲ್ಲಿ ಟಪಟಪ ಬೀಳುತ್ತಿದ್ದ ನೀರ ಹನಿಗಳು, ಅವು ಎಬ್ಬಿಸುತ್ತಿದ್ದ ದೂಳಿನ ಪರದೆ, ಮೂಗಿಗೆ ಅಡರುತ್ತಿದ್ದ ಮಣ್ಣಿನ ಕಮ್ಮನೆ ವಾಸನೆ ಎಲ್ಲವೂ ನಿನ್ನೆ ತಾನೆ ಕಂಡು ಅನುಭವಿಸಿದ ಸುಂದರ ಕನಸೆಂಬಂತೆ ಭಾಸವಾಗುತ್ತಿದೆ.
ಆ ಮಣ್ಣಿನ ವಾಸನೆ ಎಲ್ಲಿ ಹೋಯಿತು? (ಪೂರ್ತಿ ಬರಹ ಇಲ್ಲಿದೆ http://kannada.indiawaterportal.org/b/chamarajsavadi/%E0%B2%AE%E0%B2%B3%... )
ನಿಮಗೂ ಹೀಗೆ ಅನಿಸಿರಬಹುದಲ್ಲವೆ?
- ಚಾಮರಾಜ ಸವಡಿ
ಬೆರಳ್ಹಿಡಿದು ಜಗವ ತೋರಿಸಿದಾತ...ಅಪ್ಪ!
ಆತ ಎಲ್ಲ ಕಡೆ ಸಿಗುತ್ತಾನೆ. ಪಾರ್ಕ್‌ಗಳಲ್ಲಿ, ಬಸ್‌ಸ್ಟಾಪ್‌ಗಳಲ್ಲಿ, ಶಾಲೆಯ ಗೇಟಿನ ಹೊರಗೆ, ಅಂಗಡಿ ಎದುರು- ಎಲ್ಲೆಲ್ಲಿ ಮಕ್ಕಳು ಕಾಣುತ್ತಾರೋ ಅಲ್ಲೆಲ್ಲ ಆತನೂ ಇರುತ್ತಾನೆ. ಕಂಡದ್ದನ್ನೆಲ್ಲ ಕೊಡಿಸು ಎಂದು ಕೈಚಾಚುವ ಮಕ್ಕಳಿಗೆ ಪ್ರೀತಿಯಿಂದ ತಿಳಿ ಹೇಳುತ್ತ, ಚೆನ್ನಾಗಿವೆ ಅನಿಸಿದ್ದನ್ನು ಕೊಡಿಸುತ್ತ, ಮಕ್ಕಳು ಖುಷಿಯಿಂದ ಕೇಕೆ ಹಾಕುವಾಗ ಸದ್ದಿಲ್ಲದೇ ತೃಪ್ತಿಯಿಂದ ನಗುತ್ತಾನೆ.
ಜಗಳ ತಂದಾಗ ಬಗೆಹರಿಸಿದ್ದಾನೆ ಅಪ್ಪ. ತಪ್ಪು ಮಾಡಿದಾಗ ತಿಳಿ ಹೇಳಿದ್ದಾನೆ. ಪಕ್ಕ ಕೂತು ಪಾಠ ಮಾಡಿದ್ದಾನೆ. ಹೋಂ ವರ್ಕ್ ಮಾಡಿಸಿದ್ದಾನೆ. ನಮ್ಮ ಹ್ಯಾಪಿ ಬರ್ತ್‌ಡೇಗಳಿಗೆ ಹೊಸ ಬಟ್ಟೆ ತಂದಿದ್ದಾನೆ. ಅಚ್ಚರಿಯ ಗಿಫ್ಟ್‌ಗಳನ್ನು ನೀಡಿದ್ದಾನೆ. ನಮ್ಮ ಬಾಲ್ಯಕ್ಕೆ ಸಾವಿರಾರು ನೆನಪುಗಳನ್ನು ತುಂಬಿದ್ದಾನೆ.
ಅಪ್ಪನ ಹೆಗಲೇ ನಮ್ಮ ಮೊದಲ ವಾಹನ. ಅಲ್ಲಿಂದ ಇಣುಕಿದಾಗ ಕಂಡ ಜಗತ್ತು ಅದ್ಭುತ. ಆತನ ಬೆರಳ್ಹಿಡಿದೇ ನಾವು ಮನೆಯಿಂದ ಹೊರಗೆ ಕಾಲಿಟ್ಟಿದ್ದು. ಸಂತೆಗೆ ಹೋಗಿದ್ದು, ಜಾತ್ರೆಯಲ್ಲಿ ಸುತ್ತಾಡಿದ್ದು, ಮೃಗಾಲಯಗಳಿಗೆ ಭೇಟಿ ಕೊಟ್ಟಿದ್ದು. ಅಪ್ಪ ನಮ್ಮ ಪಾಲಿಗೆ ಹೀರೋ, ಗೈಡ್, ಫ್ರೆಂಡ್ ಎಲ್ಲಾ.
ದೊಡ್ಡವರಾದಂತೆ ಅಪ್ಪ ನಮಗೆ ಪಾಕೆಟ್ ಮನಿ ಕೊಡುವ ಕ್ಯಾಷಿಯರ್. ಪ್ರೊಗ್ರೆಸ್ ಕಾರ್ಡ್‌ಗೆ ಸಹಿ ಹಾಕುವ ಮ್ಯಾನೇಜರ್. ತಪ್ಪು ಮಾಡಿದಾಗ ಶಿಕ್ಷಿಸುವ ಪೊಲೀಸ್. ಏನು ಮಾಡಬೇಕೆಂದು ಆಜ್ಞೆ ಮಾಡುವ ಜಡ್ಜ್. ನಮ್ಮ ಆಟಗಳಿಗೆ ಆತನೇ ಕೋಚ್, ಅಂಪೈರ್ ಮತ್ತು ರೆಫ್ರೀ. ಬಿದ್ದು ಗಾಯ ಮಾಡಿಕೊಂಡಾಗ ಆತನೇ ಡಾಕ್ಟರ್.
ಮುಂದೆ ಪ್ರಾಯ ಬಂದಿತು. ಮೈಯೊಳಗೆ ಮಾಯೆ ತುಂಬಿತು. ಒಂದಿಷ್ಟು ತಂತ್ರಜ್ಞಾನ, ಫ್ಯಾಶನ್ ಕಲಿತ ನಮಗೆ ಅಪ್ಪ ಯಾವುದೋ ಕಾಲದ ವ್ಯಕ್ತಿಯಂತೆ ಕಾಣತೊಡಗುತ್ತಾನೆ. ಅಲ್ಲಿಯವರೆಗೆ, ಅಮ್ಮನಿಗೆ ಏನೂ ಗೊತ್ತಾಗಲ್ಲ ಅನ್ನುತ್ತಿದ್ದ ನಾವು ಅಪ್ಪನನ್ನೂ ಆ ಸಾಲಿಗೆ ಸೇರಿಸತೊಡಗುತ್ತೇವೆ. ಎಲ್ಲವನ್ನೂ ಕಲಿಸಿದ್ದ ಅಪ್ಪನನ್ನೇ, ನಿನಗೇನೂ ಗೊತ್ತಿಲ್ಲ ಅನ್ನತೊಡಗುತ್ತೇವೆ. ಅಪ್ಪನ ಅಭ್ಯಾಸಗಳು ಅಸಹನೀಯ ಅನಿಸತೊಡಗುತ್ತವೆ. ಎಲ್ಲ ಸುಖವನ್ನೂ ನಮಗಾಗಿ ಕಟ್ಟಿಕೊಟ್ಟ ಅಪ್ಪನೇ, ನಮ್ಮ ಸುಖಕ್ಕೆ ಅಡ್ಡಿ ಎಂದು ಅನ್ನಿಸತೊಡಗುತ್ತಾನೆ.
ಆದರೆ, ಮದುವೆಯಾಗಿ ಮಕ್ಕಳಾದ ಮೇಲೆ ಗೊತ್ತಾಗುತ್ತದೆ: ಅಪ್ಪನಿಗೆ ಎಷ್ಟೊಂದು ವಿಷಯಗಳು ಗೊತ್ತಿದ್ದವು ಅಂತ. ಅಪ್ಪ ಇಂಥವನ್ನೆಲ್ಲ ನಿಭಾಯಿಸಿದ್ದಾದರೂ ಹೇಗೆ ಎಂದು ಅಚ್ಚರಿಯಾಗುತ್ತದೆ. ಈಗ ಅಪ್ಪ ಜೊತೆಗಿರಬೇಕಿತ್ತು ಎಂಬ ಹಳಹಳಿ ಶುರುವಾಗುತ್ತದೆ. ಕೆಲಸದ ಹಂಗಿನಲ್ಲಿ ದೂರ ಹೋದ ನಮ್ಮಂಥವರಿಗೆ ಅಪ್ಪ ನೆನಪುಗಳ ಕಣಜ. ಒಂದು ಶಾಶ್ವತ ಅಚ್ಚರಿ.
- ಚಾಮರಾಜ ಸವಡಿ
ಮರೆತೇನೆಂದರೆ ಮರೆಯಲಿ ಹ್ಯಾಂಗ...?
22 Feb 2009
’ಬಿಸಿಲು ಬಲಿಯುತ್ತಿದೆ’ ಹಾಗಂದುಕೊಂಡೇ ಪ್ರತಿ ದಿನ ಮಧ್ಯಾಹ್ನದ ಹೊತ್ತು ಸ್ಕೂಟಿ ಏರುತ್ತೇನೆ. ಮಗಳನ್ನು ಶಾಲೆಯಿಂದ ಕರೆ ತಂದಾಗಿರುತ್ತದೆ. ಲಘು ಊಟವೂ ಮುಗಿದಿರುತ್ತದೆ. ಸುದ್ದಿ ವಿಷಯಕ್ಕೆ ಸಂಬಂಧಿಸಿದಂತೆ ಇವತ್ತು ಅಂತಹ ಬೆಳವಣಿಗೆಗಳೇನೂ ಆಗಿಲ್ಲ ಅಂತ ಅಂದುಕೊಳ್ಳುತ್ತ ಸ್ಕೂಟಿ ಚಲಿಸುವಾಗ, ಬಿಸಿ ಗಾಳಿ ಮುಖಕ್ಕೆ ರಾಚುತ್ತದೆ.
ಹೌದು, ಬಿಸಿಲು ಬಲಿಯುತ್ತಿದೆ.
ಚಂದ್ರಾ ಲೇಔಟ್‌ನ ಎಲ್ಲೆಡೆ ಸಿಮೆಂಟ್, ಡಾಂಬರಿನದೇ ಕಾರುಬಾರು. ಬಿದ್ದ ಬಿಸಿಲನ್ನು ಹೀರಿಕೊಳ್ಳುವ ಮಣ್ಣಾಗಲಿ, ಹಸಿರಾಗಲಿ ಕಡಿಮೆ. ಬೆಳಿಗ್ಗೆ ಎಂಟು ಗಂಟೆಗೆಲ್ಲಾ ತಾರಸಿ ಏರಿ ನೋಡಿದರೆ, ಬಿಸಿಲಲ್ಲಿ ಫಡಫಡಿಸುವ ಕಟ್ಟಡಗಳೇ ಎಲ್ಲೆಡೆ ಕಣ್ಣಿಗೆ ಬೀಳುತ್ತವೆ. ಮಧ್ಯಾಹ್ನದ ಹೊತ್ತು ಹದವಾದ ಬಿಸಿ ಗಾಳಿ ತುಂಬಿಕೊಂಡು ರಸ್ತೆಗಳು ಮಂಕು ಮಂಕು. ಜೋರು ಊಟವಾದರೆ, ಸೀದಾ ಮಂಪರು ಪರೀಕ್ಷೆಗೆ ಸಿದ್ಧವಾದ ಆರೋಪಿಯಂತಾಗಿಬಿಡುವ ಭಯ. ಹೀಗಾಗಿ, ಲಘು ಭೋಜನ. ಆದರೂ, ಬಿಸಿ ಗಾಳಿಗೆ ಮನಸ್ಸು ಅಂಗಾತ ಮಲಗಿ ನಿದ್ರಿಸಲು ಚಡಪಡಿಸುತ್ತಿರುತ್ತದೆ.
ಮುಖ್ಯ ರಸ್ತೆ ಬರುವವರೆಗೆ ಸ್ಕೂಟಿಗೂ ಒಂಥರಾ ಮಂಕು. ಆದರೆ, ಜೋರು ಟ್ರಾಫಿಕ್ ನೋಡುತ್ತಲೇ ನಿದ್ದೆ ಹಾರಿಹೋಗಿ ಮನಸ್ಸು ಸ್ವಸ್ಥವಾಗುತ್ತದೆ. ರಸ್ತೆಯ ಏರಿಳಿತಗಳೊಂದಿಗೆ ಏರಿಳಿಯುತ್ತ, ಟ್ರಾಫಿಕ್ಕನ್ನು ಹುಷಾರಾಗಿ ನಿಭಾಯಿಸುತ್ತ ರೈಲ್ವೇ ಸಮಾನಾಂತರ ರಸ್ತೆಗೆ ಬರುವ ಹೊತ್ತಿಗೆ, ಅವತ್ತು ಮಾಡಬೇಕಾದ ಕೆಲಸಗಳ ಪಟ್ಟಿ ಮನಸ್ಸಿನ ತುಂಬ. ದಾರಿಯಲ್ಲಿ ಸಿಗುವ ಒಂದೆರಡು ಶಾಲೆಗಳ ಚಿಣ್ಣರನ್ನು ನೋಡುತ್ತ, ಮುದಗೊಳ್ಳುತ್ತ, ದಾರಿ ಸಾಗುವಾಗ, ಅರೆರೆ, ಆ ಮುದುಕ ನಮ್ಮೂರಿನವಂತೆ ಕಾಣುತ್ತಾನಲ್ಲ ಎಂದು ಫಕ್ಕನೇ ಅನಿಸಿಬಿಡುತ್ತದೆ.
ಆತ ನಮ್ಮೂರಿನವನಲ್ಲ ಎಂಬುದು ನನಗೆ ಚೆನ್ನಾಗಿ ಗೊತ್ತು. ಆದರೆ, ಊರ ನೆನಪಾಗಲು ಆ ಮುದುಕ ಒಂದು ನೆವ.
ಏಕೆ ಹೀಗನಿಸುತ್ತದೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ ಹೈಸ್ಕೂಲಿನ ತರಗತಿ ನೆನಪಾಗುತ್ತದೆ. ಶಾಲೆ ಮುಗಿಸಿ ಮನೆಗೆ ಬರುವಾಗಿನ ಓಣಿಯ ವಿವರಗಳು ಕಣ್ಮುಂದೆ ನಿಲ್ಲುತ್ತವೆ. ಯಾವುದೋ ದುಃಖಿ ನೆನಪುಗಳು, ಒಂಟಿತನ ಕಾಡಿದ ಕ್ಷಣಗಳು ಕಾಡತೊಡಗುತ್ತವೆ. ತಲೆ ಕೊಡವಿ ಮತ್ತೆ ರಸ್ತೆಯ ಕಡೆ ಗಮನ ಹರಿಸಿದರೂ, ಕಾಲಡಿ ಸುತ್ತುವ ಸಾಕಿದ ಬೆಕ್ಕಿನಂತೆ ನೆನಪುಗಳು ಅಲ್ಲೇ ಓಡಾಡುತ್ತಿರುತ್ತವೆ. ಅಂದಿನ ದಿನಗಳ ನಾನು, ಇಂದಿನ ಬದುಕಿನೊಂದಿಗೆ ಅವನ್ನು ಅನುಭವಿಸಬೇಕಾದ ರೀತಿಯೇ ವಿಚಿತ್ರ.
ದಾರಿಯುದ್ದಕ್ಕೂ ಇಂಥವೇ ನೆನಪುಗಳು. ರಸ್ತೆಯ ಕಡೆ ಎಷ್ಟೇ ಗಮನ ಕೊಟ್ಟರೂ, ಮನಸ್ಸಿನಲ್ಲಿ ನೆನಪುಗಳ ಕಲರವ ನಿಲ್ಲುವುದಿಲ್ಲ.
ಹಳೆ ಗುಡ್ಡದಹಳ್ಳಿಯ ಅಡ್ಡಮಾರ್ಗ ದಾಟಿಕೊಂಡು ಬಾಲಗಂಗಾಧರನಾಥ ಸ್ವಾಮೀಜಿ ಹೆಸರಿನ ಮೇಲ್ಸೇತುವೆ ಏರುವಾಗಲೂ ನಾನು ಹಳೆಯ ದಿನಗಳ ಗುಂಗಿನಲ್ಲೇ ಇರುತ್ತೇನೆ. ಮಾಡಬೇಕಾದ ಕೆಲಸಗಳ ಪಟ್ಟಿಯನ್ನು ಪದೆ ಪದೆ ನೆನಪಿಸಿಕೊಂಡರೂ, ಅದರ ಸಂದಿಯಲ್ಲಿ ತೂರಿ ನೆನಪುಗಳು ನುಗ್ಗುತ್ತವೆ. ಗಾಡಿ ಓಡಿಸುವಾಗ, ತೀರ ಗಂಭೀರವಾದ ಏನನ್ನೂ ಯೋಚಿಸುವುದಿಲ್ಲ. ಹಾಗಿದ್ದರೂ, ಆ ನಿಯಮ ದಾಟಿಕೊಂಡು ನೆನಪುಗಳು ನುಗ್ಗುತ್ತವೆ. ಹಿಂದಿನ ದಿನಗಳಿಗೆ ಕರೆದೊಯ್ಯುತ್ತವೆ.
ಮೇಲ್ಸೇತುವೆ ಇಳಿದು, ಮಾರುಕಟ್ಟೆಯ ಪಕ್ಕದ ಎಸ್‌ಪಿ ರಸ್ತೆಯ ಜಂಗುಳಿಯಲ್ಲಿ ತೂರಿಕೊಂಡು, ಹುಷಾರಾಗಿ ಹೊರಟು ಕಬ್ಬನ್ ಪಾರ್ಕ್ ಒಳಗಿನ ರಸ್ತೆ ಸೇರುವ ಹೊತ್ತಿಗೆ ಮನಸ್ಸು ಒಂಥರಾ ದಣಿದಿರುತ್ತದೆ. ಪಾರ್ಕ್‌ನ ತಾಜಾ ಗಾಳಿಗೆ ಮುಖವೊಡ್ಡಿ, ಎದೆಯ ತುಂಬ ಅದನ್ನು ಹೀರಿಕೊಳ್ಳುವ ಹೊತ್ತಿಗೆ ವಿಧಾನಸೌಧದ ಮುಂದಿನ ರಸ್ತೆಯಲ್ಲಿರುತ್ತೇನೆ. ಮತ್ತೆ ವಾಹನಗಳ ಭರಾಟೆ. ಇನ್‌ಫ್ಯಾಂಟ್ರಿ ರಸ್ತೆಯ ಜಂಗುಳಿ ದಾಟಿ ಕಚೇರಿಯ ಪಾರ್ಕಿಂಗ್‌ನಲ್ಲಿ ವಾಹನ ನಿಲ್ಲಿಸುವ ಹೊತ್ತಿಗೆ ಹೈಸ್ಕೂಲ್‌ನಿಂದ ವೃತ್ತಿಯ ಈ ಹಂತದವರೆಗಿನ ಪಯಣವನ್ನು ಅರ್ಧ ಗಂಟೆಯೊಳಗೆ ಮುಗಿಸಿದ ದಣಿವು.
ಅದೇ ಮೊದಲ ಬಾರಿ ಎಂಬಂತೆ ಕಚೇರಿ ಪ್ರವೇಶಿಸುತ್ತೇನೆ. ಸಹೋದ್ಯೋಗಿಗಳಿಗೆ ವಿಶ್ ಮಾಡುತ್ತ ನನ್ನ ಸ್ಥಾನಕ್ಕೆ ಬಂದು ಕೂಡುತ್ತೇನೆ. ಎದುರಿಗೆ ಕೂತಿರುವ ಕಂಪ್ಯೂಟರ್ ಪರದೆ ಬಾಲ್ಯದ ಚಿತ್ರ ಸಂಪುಟದಂತೆ ಕಾಣುತ್ತದೆ. ಸುದ್ದಿ ವಿಭಾಗದ ತಾಣಗಳನ್ನು ಒಂದೊಂದಾಗಿ ತೆರೆಯುತ್ತ, ನೆನಪುಗಳನ್ನು ಒಂದೊಂದಾಗಿ ಕಳಚುತ್ತ ನನ್ನ ಕೆಲಸದಲ್ಲಿ ಮುಳುಗುತ್ತೇನೆ. ಬ್ರೆಕಿಂಗ್ ನ್ಯೂಸ್‌ಗಳು, ಅಪ್‌ಡೇಟ್‌ಗಳು, ಪ್ಯಾಕೇಜ್‌ಗಳು ಒಂದಾದ ನಂತರ ಒಂದರಂತೆ ರಾಚತೊಡಗಿದಾಗ, ನಿರ್ಲಕ್ಷ್ಯಿಸಲ್ಪಟ್ಟ ಮಗುವಿನಂತೆ ನೆನಪುಗಳು ಮುರುಟಿಕೊಳ್ಳುತ್ತ ಹೋಗುತ್ತವೆ.
ಭೂತಕಾಲದಲ್ಲಿ ಬದುಕಬಾರದು ಎಂದು ಎಲ್ಲಿಯೋ ಓದಿದ್ದು ನೆನಪಾಗಿ ನಗು ಬರುತ್ತದೆ. ಬೇರುಗಳಿಲ್ಲದೇ ಮರವುಂಟೆ? ಭೂತಕಾಲವಿಲ್ಲದೇ ವರ್ತಮಾನವೂ ಇಲ್ಲ, ಭವಿಷತ್ತೂ ಇಲ್ಲ. ಬೇರುಗಳಂತೆ ಹಳೆಯ ದಿನಗಳ ನೆನಪುಗಳು, ಕನಸುಗಳು, ಕನವರಿಕೆಗಳು, ನೋವು-ನಲಿವುಗಳು ವರ್ತಮಾನಕ್ಕೆ ತಲುಪುತ್ತಲೇ ಇರುತ್ತವೆ. ಅವುಗಳನ್ನು ಜೀರ್ಣಿಸಿಕೊಂಡೇ ಬದುಕಬೇಕು. ಅವುಗಳನ್ನು ಹಳೆ ಫೊಟೊಗಳಿರುವ ಆಲ್ಬಮ್ಮಿನಂತೆ ಇಟ್ಟುಕೊಂಡು ಹೊಸ ಫೊಟೊಕ್ಕೆ ಮುಗುಳ್ನಗಬೇಕು.
ಹಾಗಂದುಕೊಂಡು, ಕೆಲಸದಲ್ಲಿ ಮಗ್ನನಾಗುತ್ತೇನೆ.
- ಚಾಮರಾಜ ಸವಡಿ


