‘ಪಾಟಿ ಮೇಲೆ ಪಾಟಿ, ನಮ್ಮ ಸಾಲಿ ಸೂಟಿ'

26 Sep 2009

ಬೆಳೆಯುತ್ತ ಬೆಳೆಯುತ್ತ ನಾವು ಬಾಲ್ಯವನ್ನೇ ಮರೆಯುತ್ತೇವೆ.

ಏಕೋ ಇವತ್ತು ಈ ಭಾವನೆ ಬಲವಾಗಿ ಕಾಡತೊಡಗಿದೆ. ಚಿಕ್ಕವರಿದ್ದಾಗ ಬೇಗ ಬೇಗ ದೊಡ್ಡವರಾಗಬೇಕು ಎಂದು ಹಂಬಲಿಸುತ್ತೇವೆ. ಬೆಳೆದು, ಜವಾಬ್ದಾರಿಗಳು ಹೆಗಲಿಗೇರಿದಾಗ ಬಾಲ್ಯ ಪ್ರಿಯವಾಗತೊಡಗುತ್ತದೆ. ಕಳೆದುಕೊಂಡಿದ್ದಕ್ಕಾಗಿ, ಇಲ್ಲದಿರುವುದಕ್ಕಾಗಿ ಹಂಬಲಿಸುವುದು ಮನುಷ್ಯನ ಜೊತೆಗೇ ಬೆಳೆದುಬಂದ ಗುಣವಿರಬೇಕು.

ಅದಕ್ಕೆಂದೇ ಬಾಲ್ಯ ಒಂದು ಶಾಶ್ವತ ನೆನಪು.

ಬಾಲ್ಯದ ಎಲ್ಲ ನೆನಪುಗಳೂ ಸುಂದರ ಎಂದು ಹೇಳಲಾಗದು. ಆದರೂ, ಹಲವಾರು ಕಾರಣಗಳಿಗಾಗಿ ಅದು ಪ್ರಿಯವೇ. ತೀರ ದುಃಸ್ಥಿತಿ ಎದುರಿಸಿದವರನ್ನು ಬಿಟ್ಟರೆ, ಬಹುತೇಕ ಜನರ ಪಾಲಿಗೆ ಬಾಲ್ಯದ ನೆನಪೇ ಸುಂದರ. ಈಗಿನ ಸೌಲಭ್ಯಗಳ್ಯಾವವೂ ಇದ್ದಿರದಿದ್ದರೂ ನಮ್ಮ ಬಾಲ್ಯ ನಮಗೆ ಸೊಗಸೇ.

ಆಗಿನ ಆಟಿಕೆಗಳಾದರೂ ಎಂಥವು? ಬೀದಿಯಲ್ಲಿ ಬಿದ್ದಿರುತ್ತಿದ್ದ ಕಲ್ಲುಗಳು, ಮಣ್ಣು, ಉದುರಿಬಿದ್ದಿರುತ್ತಿದ್ದ ಹೂಗಳು, ಹಳೆ ಸಾಮಾನು, ರದ್ದಿ ಕಾಗದ, ಶಾಲೆಯಿಂದ ಕದ್ದು ತಂದಿರುತ್ತಿದ್ದ ಚಾಕ್‌ಪೀಸ್- ಇವು ನಮ್ಮ ಬಾಲ್ಯವನ್ನು ಅದೆಷ್ಟು ಸಮೃದ್ಧವಾಗಿಸಿದ್ದವು! ಒಬ್ಬರೇ ಆಡಿಕೊಳ್ಳುವ ನೂರಾರು ಆಟಗಳಿದ್ದವು. ಇಬ್ಬರು ಸೇರಿದರೆ ಅದೊಂದು ತಂಡ. ನಾಲ್ಕೈದು ಜನರಿದ್ದರಂತೂ ಇಡೀ ಊರಿಗೇ ಕೇಳುವಷ್ಟು ಜೋರಾಗಿ ಗದ್ದಲ ಮಾಡುತ್ತ, ಖುಷಿ ಅನುಭವಿಸುತ್ತ ಆಡುತ್ತಿದ್ದೆವು.

ಆಗ ಪ್ರತಿಯೊಂದೂ ನಮಗೆ ಆಟಿಕೆಯೇ, ಅಚ್ಚರಿ ಹುಟ್ಟಿಸುವ ವಿಷಯವೇ. ಬೆಳಗಿನ ಸೂರ್ಯನಿಂದ ಹಿಡಿದು ರಾತ್ರಿಯ ಚುಕ್ಕಿಗಳವರೆಗೆ, ಪ್ರಕೃತಿಯ ಪ್ರತಿಯೊಂದು ಘಟನೆಯೂ ವಿಸ್ಮಯಕಾರಿಯೇ. ಪ್ರತಿಯೊಂದು ಪ್ರಾಣಿಯೂ ಸಂಗಾತಿಯೇ. ಮನೆಯ ಪ್ರತಿಯೊಂದು ವಸ್ತುವೂ ಆಟಿಕೆಯೇ. ಅದು ಕಟ್ಟಿಕೊಟ್ಟ ಸುಂದರ ಜಗತ್ತಿನ ಸವಿ ವರ್ಣಿಸುವುದೂ ಸಾಧ್ಯವಿಲ್ಲವೆನ್ನವಷ್ಟರ ಮಟ್ಟಿಗೆ ಬಾಲ್ಯ ಸಮೃದ್ಧ.

ನಾನು ಹುಟ್ಟಿ ಬೆಳೆದಿದ್ದು ಇಂಥ ಒಂದು ಸಣ್ಣ ಊರಿನಲ್ಲಿ. ಕೊಪ್ಪಳ ಜಿಲ್ಲೆ ಅಳವಂಡಿಯಲ್ಲಿ ಅವತ್ತಿಗಾಗಲೇ ಹೈಸ್ಕೂಲಿತ್ತು. ಏಳನೇ ತರಗತಿಯವರೆಗೆ ಸರ್ಕಾರಿ ಶಾಲೆ, ನಂತರ ಖಾಸಗಿ ಹೈಸ್ಕೂಲು. ತಾಲ್ಲೂಕು ಕೇಂದ್ರ ಕೊಪ್ಪಳ ಬಿಟ್ಟರೆ, ನಮ್ಮೂರೊಂದರಲ್ಲೇ ಹೈಸ್ಕೂಲಿದ್ದುದು. ಆಗ ಕೊಪ್ಪಳದಲ್ಲೂ ಸರ್ಕಾರಿ ಹೈಸ್ಕೂಲು ಇರಲಿಲ್ಲ.

ಪ್ರಾಥಮಿಕ ಶಾಲೆ ಸರ್ಕಾರದದ್ದಾಗಿದ್ದರೂ ಅದಕ್ಕೊಂದು ಸ್ವಂತ ಕಟ್ಟಡವಿದ್ದಿಲ್ಲ. ಮಣ್ಣಿನ ಗೋಡೆಯ, ಮಣ್ಣಿನ ಛಾವಣಿಯ ದೊಡ್ಡ ಮನೆಯೇ ಶಾಲೆ. ಸೆಗಣಿ ಸಾರಿಸಿದ ನೆಲದ ಮೇಲೆಯೇ ಎಲ್ಲರೂ ಕೂಡುತ್ತಿದ್ದೆವು. ಮೂರು ಮತ್ತು ನಾಲ್ಕನೇ ತರಗತಿಯ ವಿದ್ಯಾರ್ಥಿಗಳಿಗೆ ಮಾತ್ರ ಬೆಂಚು. ಇಡೀ ಶಾಲೆಯಲ್ಲಿ ಡೆಸ್ಕುಗಳಿದ್ದಿಲ್ಲ. ಬಿನ್ ಇಯತ್ತೆ (ಬಿನ್ನತ್ತೆ) ಎಂದು ಕರೆಯುತ್ತಿದ್ದ ನರ್ಸರಿ ತರಗತಿಯೂ ಸೇರಿದಂತೆ ಒಂದು ಮತ್ತು ಎರಡನೇ ತರಗತಿಗಳು ನಡೆಯುತ್ತಿದ್ದುದು ಒಂದೇ ಅಂಕಣದಲ್ಲಿ. ಮೂರು ಮತ್ತು ನಾಲ್ಕನೇ ತರಗತಿಗಳಿಗೆ ಪ್ರತ್ಯೇಕ ಕೋಣೆಗಳಿದ್ದರೂ ಯಾವುದಕ್ಕೂ ಬಾಗಿಲೇ ಇರಲಿಲ್ಲ. ಅಲ್ಲಿ ನಡೆಯುತ್ತಿದ್ದ ಪಾಠ ಎಲ್ಲರಿಗೂ ಕೇಳುವಂಥ ವಾತಾವರಣ.

ಅಪ್ಪ ಪ್ರಾಥಮಿಕ ಶಾಲೆಯ ಹೆಡ್ಮಾಸ್ಟರಾಗಿದ್ದರಿಂದ ನಾಲ್ಕನೇ ವಯಸ್ಸಿನಿಂದಲೇ ಶಾಲೆಗೆ ಹೋಗುವುದು ಅಭ್ಯಾಸವಾಗಿತ್ತು. ಮನೆಯಲ್ಲಿದ್ದರೆ ಗಲಾಟೆ ಮಾಡುತ್ತಾರೆ ಎಂಬ ಕಾರಣಕ್ಕೆ ಶಾಲೆಗೆ ಹೋಗುವಾಗ ಅಣ್ಣ ಮತ್ತು ನನ್ನನ್ನು ತಮ್ಮ ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು. ಇನ್ನಿಬ್ಬರು ಅಣ್ಣಂದಿರು ಅದೇ ಶಾಲೆಯಲ್ಲಿ ಓದುತ್ತಿದ್ದರು. ಹೆಡ್ಮಾಸ್ಟರ ಮಗ ಎಂಬ ಯಾವ ವಿನಾಯಿತಿಯೂ ಇಲ್ಲದಂತೆ ಶಾಲೆ ತಲುಪಿದ ಕೂಡಲೇ ಬಿನ್ನತ್ತೆಯಲ್ಲಿ ಕೂಡಿಸುತ್ತಿದ್ದರು. ಅಲ್ಲಿ ನಮಗೆ ಏನು ಕಲಿಸುತ್ತಿದ್ದರು ಎಂಬುದು ನೆನಪಿಲ್ಲವಾದರೂ, ಅಕ್ಕಪಕ್ಕದಲ್ಲೇ ನಡೆಯುತ್ತಿದ್ದ ಒಂದು ಮತ್ತು ಎರಡನೇ ತರಗತಿಯ ಪಾಠಗಳು ನನಗೆ ಆಗಲೇ ಬಾಯಿಪಾಠವಾಗಿದ್ದವು. ಅಕ್ಷರ ಕಲಿತಿದ್ದು ನಂತರ.

ಬಿದ್ದರೆ ಒಡೆದುಹೋಗುವಂಥ ಪಾಟಿ (ಸ್ಲೇಟು) ಮತ್ತು ಬಳಪದ ಕಲ್ಲಿನ ಪೆನ್ಸಿಲ್ಲೇ ನಮ್ಮ ಆಗಿನ ಸಂಗಾತಿ. ಪೆನ್ಸಿಲ್‌ಗೆ ನಾವು ಪೇಣೆ ಎಂದು ಕರೆಯುತ್ತಿದ್ದೆವು. ನಾಲ್ಕನೇ ತರಗತಿ ಮುಗಿಯುವವರೆಗೆ ಎಲ್ಲರೂ ಬಳಸಲೇಬೇಕಾದ ವಸ್ತುಗಳವು. ನನ್ನ ಮೊದಲ ಅಕ್ಷರಭ್ಯಾಸ ಆಗಿದ್ದು ಪಾಟಿಯಲ್ಲೇ. ಮಗ್ಗಿ ಕಲಿತಿದ್ದು, ಸಣ್ಣ ಸಣ್ಣ ವಾಕ್ಯಗಳನ್ನು ಬರೆದಿದ್ದು ಅದರಲ್ಲಿಯೇ. ಹೋಂ ವರ್ಕ್ ಕೂಡಲ ಅದರಲ್ಲೇ ಮಾಡುತ್ತಿದ್ದೆವು. ರಾತ್ರಿ ಲಾಂದ್ರದ ಬೆಳಕಿನಲ್ಲಿ ಪಾಟಿಯ ಒಂದು ಭಾಗದಲ್ಲಿ ಶಬ್ದಗಳು ಮತ್ತು ವಾಕ್ಯ ರಚನೆ ಹಾಗೂ ಇನ್ನೊಂದು ಭಾಗದಲ್ಲಿ ಮಗ್ಗಿ ಬರೆದು, ಹುಷಾರಾಗಿ ಎತ್ತಿಡುತ್ತಿದ್ದೆವು. ಮರುದಿನ ಅದನ್ನು ಅತ್ಯಂತ ಜತನದಿಂದ ತೆಗೆದುಕೊಂಡು ಹೋಗಿ ಮಾಸ್ತರರ ಟೇಬಲ್‌ ಮೇಲಿಡುತ್ತಿದ್ದೆವು. ಒಂದರ ಮೇಲೆ ಒಂದರಂತೆ ಇಟ್ಟಿದ್ದ ಪಾಟಿಗಳ ಹಿಂದೆ ಮಾಸ್ತರರೇ ಕಾಣುತ್ತಿರಲಿಲ್ಲ.

ಸಹಪಾಠಿಗಳ ಮೇಲೆ ಸೇಡು ತೀರಿಸಿಕೊಳ್ಳುವ ಆಗಿನ ಅತ್ಯಂತ ಸಾಮಾನ್ಯ ವಿಧಾನವೆಂದರೆ, ಪಾಟಿಯಲ್ಲಿ ಬರೆದಿರುತ್ತಿದ್ದ ಹೋಮ್ ವರ್ಕ್ ಅಳಿಸಿಹಾಕುವುದು. ಹಿಂದಿನ ದಿನದ ಜಗಳವನ್ನು ಮನಸ್ಸಿನಲ್ಲಿಟ್ಟುಕೊಂಡಿರುತ್ತಿದ್ದ ಹುಡುಗರು, ಶಾಲೆಗೆ ಹೋಗುವ ದಾರಿಯಲ್ಲಿ ಕಾಯ್ದು ನಿಂತಿರುತ್ತಿದ್ದರು. ತಪ್ಪಿಸಿಕೊಂಡು ಹೋಗುವವರನ್ನು ಬಲವಂತದಿಂದ ಹಿಡಿದು ನಿಲ್ಲಿಸಿ, ಪಾಟಿಯಲ್ಲಿ ಬರೆದಿದ್ದನ್ನು ಅಳಿಸಿಬಿಟ್ಟರೆ ದೊಡ್ಡ ಜಯ ಸಂಪಾದಿಸಿದ ಸಂಭ್ರಮ. ಏಕೆಂದರೆ, ಹೋಮ್ ವರ್ಕ್ ಮಾಡಿಲ್ಲ ಎಂದು ಮಾಸ್ತರು ಏಟು ಕೊಡುವುದು ಖಾತರಿ. ಎಷ್ಟೇ ವಿವರಣೆ ನೀಡಿದರೂ ಮಾಸ್ತರು ಕೇಳುತ್ತಿರಲಿಲ್ಲ. ಅಳಿಸಿಹೋದ ಪಾಟಿ ಸತ್ಯ ನುಡಿಯುವುದಾದರೂ ಹೇಗೆ?

ಆಗ ಪ್ರತಿಯೊಂದನ್ನೂ ಬಾಯಿಪಾಠ ಮಾಡುವುದು ಕಡ್ಡಾಯವಾಗಿತ್ತು. ಮಗ್ಗಿ ಕಲಿತಿದ್ದು ಹಾಗೆ. ಒಂದು ಮತ್ತು ಎರಡನೇ ತರಗತಿಯಲ್ಲಿ ಇಡೀ ವರ್ಷಕ್ಕೆ ಒಂದೇ ಪಠ್ಯಪುಸ್ತಕ ಇರುತ್ತಿತ್ತು. ಅದರಲ್ಲಿರುತ್ತಿದ್ದ ಪದ್ಯಗಳನ್ನೆಲ್ಲ ನಾವು ಕಂಠಪಾಠ ಮಾಡಬೇಕಿತ್ತು. ಪ್ರತಿಯೊಂದು ಪದ್ಯವನ್ನು ಹೇಳಿಕೊಟ್ಟಾಗ, ಮಧ್ಯಾಹ್ನದ ತರಗತಿಯ ಕೊನೆಯ ಪಿರಿಯೆಡ್ಡಿನಲ್ಲಿ ಅದನ್ನು ಸಾಮೂಹಿಕವಾಗಿ ಬಾಯಿಪಾಠ ಮಾಡಿಸುತ್ತಿದ್ದರು. ಸರದಿಯ ಪ್ರಕಾರ, ಒಬ್ಬೊಬ್ಬನೇ ವಿದ್ಯಾರ್ಥಿ ಎದ್ದು, ಕೈಕಟ್ಟಿಕೊಂಡು, ಎರಡ ತರಗತಿಗಳ ನಡುವಿನ ಚಿಕ್ಕ ಕಾಲ್ದಾರಿಯಂಥ ಜಾಗದಲ್ಲಿ, ಆ ಕಡೆಯಿಂದ ಈ ಕಡೆ ನಡೆಯುತ್ತ, ಪದ್ಯದ ಒಂದೊಂದು ನುಡಿಯನ್ನು ರಾಗವಾಗಿ ಹಾಡುತ್ತಿದ್ದ. ಪ್ರತಿಯೊಂದು ಸಾಲಿಗೂ ತರಗತಿಯ ಇತರ ವಿದ್ಯಾರ್ಥಿಗಳು ಅದನ್ನೇ ಸಾಮೂಹಿಕವಾಗಿ ಹೇಳಬೇಕಿತ್ತು. ಶಾಲೆಯಲ್ಲಿದ್ದ ಎಲ್ಲ ನಾಲ್ಕೂ ತರಗತಿಗಳ ವಿದ್ಯಾರ್ಥಿಗಳು ತಂತಮ್ಮ ಪದ್ಯವನ್ನು ಕೋರಸ್‌ನಲ್ಲಿ ಹಾಡುತ್ತಿದ್ದರು. ಪಕ್ಕದ ಕ್ಲಾಸ್‌ನವ ಹೇಳುತ್ತಿದ್ದುದಕ್ಕಿಂತ ಜೋರಾಗಿ ಹೇಳುವ ಉಮೇದು ನಮಗೆ. ಮಾಸ್ತರು ಕೂಡ ಅದನ್ನು ಪ್ರೋತ್ಸಾಹಿಸುತ್ತಿದ್ದರು. ಕಂಠ ಹರಿಯುವಂತೆ ಏರು ಧ್ವನಿಯಲ್ಲಿ ಪದ್ಯದ ಸಾಲುಗಳನ್ನು ಕಿರಿಚುತ್ತಿದ್ದೆವು. ಎಲ್ಲ ತರಗತಿಗಳಿಂದ ಹೊರಡುತ್ತಿದ್ದ ಆ ಘನಘೋರ ಧ್ವನಿಯನ್ನು ಕೇಳಿದ ಜನರಿಗೆ, ಶಾಲೆ ಬಿಡುವ ಹೊತ್ತಾಯಿತು ಎಂಬ ಮುನ್ಸೂಚನೆ ಸಿಗುತ್ತಿತ್ತು.

ರೈಲು ಕಂಬಿಯ ಒಂದು ತುಂಡು ಶಾಲೆಯ ಗಂಟೆಯಾಗಿತ್ತು. ಅದನ್ನು ಬಾರಿಸುವುದೊಂದೇ ತಡ, ಮಾಸ್ತರು ಅಡ್ಡ ನಿಂತಿದ್ದರೂ ತಳ್ಳಿಕೊಂಡು ಹೊರಗೆ ಧಾವಿಸುತ್ತಿದ್ದೆವು. ನಾನಂತೂ ಮನೆ ತಲುಪುವವರೆಗೆ ಓಡಿಕೊಂಡೇ ಹೋಗುತ್ತಿದ್ದೆ. ನಿಧಾನವಾಗಿ ಬಂದ ನೆನಪೇ ಇಲ್ಲ.
ಆಗ ಯಾರಿಗೂ ಯುನಿಫಾರ್ಮ್ ಆಗಲಿ, ಚಪ್ಪಲಿಯಾಗಲಿ ಇರುತ್ತಿದ್ದಿಲ್ಲ. ಹರಕುಬಟ್ಟೆಗಳಂತೂ ಅತಿ ಸಾಮಾನ್ಯ. ಕೈಯಲ್ಲಿ ಹಿಡಿದ ಪಾಟಿಯ ಹೊರತಾಗಿ ಬೇರೇನೂ ಶಾಲಾವಸ್ತುಗಳಿರುತ್ತಿದ್ದಿಲ್ಲ. ಆದರೂ, ಕಲಿಯುವ ಉತ್ಸಾಹಕ್ಕೆ ಕೊರತೆ ಇರಲಿಲ್ಲ. ಮಳೆ ಬಂದರೆ ಸಾಕು, ಇಡೀ ಶಾಲೆ ಸೋರುತ್ತಿತ್ತು. ಸೋರದಿರುವ ಭಾಗದಲ್ಲಿ ಮೂರು ಮತ್ತು ನಾಲ್ಕನೇ ತರಗತಿಯ ವಿದ್ಯಾರ್ಥಿಗಳನ್ನು ಗುಂಪುಗುಂಪಾಗಿ ಕೂಡಿಸಿ ಬಿನ್ನತ್ತೆ, ಒಂದು ಮತ್ತು ಎರಡನೇ ತರಗತಿಯ ವಿದ್ಯಾರ್ಥಿಗಳನ್ನು ಮನೆಗೆ ಕಳಿಸಿಬಿಡುತ್ತಿದ್ದರು. ಮಳೆ ಇನ್ನೂ ಜೋರಾದರೆ, ಇಡೀ ಶಾಲೆಗೇ ರಜೆ. ಆಗ ಅತೀವ ಹರುಷದಿಂದ, ‘ಪಾಟಿ ಮೇಲೆ ಪಾಟಿ, ನಮ್ಮ ಸಾಲಿ ಸೂಟಿ' ಎಂದು ಜೋರಾಗಿ ಹಾಡುತ್ತ, ಮಳೆಯಿಂದ ರಕ್ಷಿಸಿಕೊಳ್ಳಲು ಪಾಟಿಯನ್ನು ತಲೆ ಮೇಲೆ ಇಟ್ಟುಕೊಂಡು ಓಡುತ್ತ ಮನೆಗೆ ಹೋಗುತ್ತಿದ್ದೆವು.

*****

ಆಕಾಶವೇ ತೂತಾಗಿದೆಯೇನೋ ಎಂಬಂತೆ ಬೀಳುತ್ತಿರುವ ಬೆಂಗಳೂರಿನ ಮಳೆ ನನಗೆ ನನ್ನೂರನ್ನು ನೆನಪಿಸುತ್ತಿದೆ. ತಮಾಷೆಯ ಸಂಗತಿ ಎಂದರೆ, ಸೋರಲು ಬೆಂಗಳೂರಿನಲ್ಲಿ ಮಣ್ಣಿನ ಶಾಲೆಗಳಿಲ್ಲ. ಸೋರುವುದೇನಿದ್ದರೂ ರಸ್ತೆಗಳು ಮತ್ತು ಚರಂಡಿಗಳು. ಹೀಗಾಗಿ, ಜೋರು ಮಳೆ ಬಂದರೆ, ನಮ್ಮೂರಲ್ಲಿ ನೀಡುತ್ತಿದ್ದಂತೆ ಇಲ್ಲಿಯೂ ಶಾಲೆಗೆ ರಜೆ.

ಆದರೆ, ‘ಪಾಟಿ ಮೇಲೆ ಪಾಟಿ, ನಮ್ಮ ಸಾಲಿ ಸೂಟಿ' ಹಾಡು ಮಾತ್ರ ಎಲ್ಲಿಯೂ ಕೇಳಿಬರುವುದಿಲ್ಲ!

- ಚಾಮರಾಜ ಸವಡಿ

9 comments:

ಲೋದ್ಯಾಶಿ said...

ಸವಡಿ ಸಾರ್,
ನಾನು ಒಂದರಿಂದ ನಾಲ್ಕರ ವರೆಗೆ ಓದುತ್ತಿದ್ದಾಗ ನಡೆದ ಘಟನೆಗಳು ಹೆಚ್ಚು ಕಮ್ಮಿ ಹೀಗೇ ಇತ್ತು.
ಆದ್ರೂ ನನ್ನ ಅನಿಸಿಕೆನ ಬರಿಲಿಕ್ಕೆ ಇದು ಪ್ರೇರೇಪಣೆ ಆಗ್ತಿದೆ.
ನಾನೂ ಕೂಡ ಈಗ ಅದ್ರ ಬಗ್ಗೆ ಬರೆದು ನನ್ನ ಬ್ಲಾಗ್ನಲ್ಲಿಯೂ ಇಷ್ಟರಲ್ಲೇ ಹಾಕ್ತೀನಿ.

@ನಾನಂತೂ ಮನೆ ತಲುಪುವವರೆಗೆ ಓಡಿಕೊಂಡೇ ಹೋಗುತ್ತಿದ್ದೆ
ಇದನ್ನ ನೆನೆಸ್ಕಂದೆ, ಅಷ್ಟೇ.... ಮುಖದಲ್ಲಿ ನಗು ತಡಿಲಿಕ್ಕೆ ಆಗ್ಲಿಲ್ಲ.
ನಾವೂ ಇದನ್ನೇ ಮಾಡ್ತಿದ್ವಿ.

ಅಭಿನಂದನೆಗಳು.

ಬಿಸಿಲ ಹನಿ said...

ಚಾಮರಾಜ್ ಸರ್,
ನಿಮ್ಮ ಲೇಖನ ಓದುತ್ತಿದ್ದಂತೆ ನನಗೂ ನಿಮ್ಮದೇ ತೆರದ ಬಾಲ್ಯ ಕಣ್ಣಮುಂದೆ ಹಾದು ಹೋಯಿತು. ನಾವೂ ಬೇರೊಬ್ಬರ ಹೋಂ ವರ್ಕ್ ನ್ನು ಅಳಿಸುತ್ತಿದ್ದುದು ‘ಪಾಟಿ ಮೇಲೆ ಪಾಟಿ ನಮ್ಮ ಸಾಲಿ ಸೂಟಿ’ ಎಂದು ಹಾಡುತ್ತಿದ್ದುದು ಎಲ್ಲವು ನೆನಪಾಯಿತು. ಶಾಲಾದಿನಗಳ ಬಾಲ್ಯವನ್ನು ಜ್ಞಾಪಿಸಿದ್ದಕ್ಕೆ ಧನ್ಯವಾದಗಳು.

ಚಕೋರ said...

ಚಾಮರಾಜ್ ಸರ್,

ಹಳೆ ನೆನಪುಗಳನ್ನು ಅದೆಷ್ಟು ಚೆನ್ನಾಗಿ ಅಕ್ಷರದಲ್ಲಿ ಪೋಣಿಸುತ್ತೀರಿ!

ನಿಮ್ಮ ನೆನಪುಗಳು ಸಮೃದ್ಧವಾಗಲಿ. ಬರಹಕ್ಕೆ ಮತ್ತಷ್ಟು ಸ್ಪೂರ್ತಿ ಒದಗಿಸಲಿ. ಹಾಗೇ ಅದರ ಬೆಳಕಿನಿಂದಲೇ ನಿಮ್ಮ ಬದುಕೂ ಅರಳುತಿರಲಿ.

shivu said...

ಸಾವಡಿ ಸರ್,

ನಿಮ್ಮ ಬಾಲ್ಯದ ಶಾಲೆ ನೆನಪು ಓದಿ ನನಗೆ ನನ್ನ ಶಾಲೆಯ ನೆನಪು ಕಾಡಿತು. ನಾನು ಹುಟ್ಟಿ ಬೆಳೆದಿದ್ದು ಬೆಂಗಳೂರೆ ಓದಿ ಬೆಳೆದಿದ್ದು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲೇ. ಆದ್ದರಿಂದ ನಿಮ್ಮ ಅನುಭವವೇ ನನಗೂ ಆಗಿತ್ತು. ಒಮ್ಮೆ ನಾನು ಬಿನ್ನೆತ್ತಿಯಲ್ಲಿ ನನ್ನ ಪಕ್ಕ ಕುಳಿತಿದ್ದ ಹುಡುಗಿಗೆ ಬಳಪ ಕೊಡಲಿಲ್ಲವೆಂದು ಬಳೇ ಗಾಜಿನಿಂದ ಮೊಣಕೈ ಗೀರಿಬಿಟ್ಟಿದ್ದೆ. ಆ ಮಾರ್ಕು ಈಗಲೂ ಇದೆ. ಆಕೆ ನನ್ನ ದೊಡ್ದಪ್ಪನ ಮಗಳು ನನಗೆ ಅಕ್ಕ. ಅವಳು ಈಗಲೂ ನಾನು ಹೋದಾಗ ಅದನ್ನು ತೋರಿಸಿ ನಗುತ್ತಾಳೆ ಹೊಟ್ಟೆ ತುಂಬ ಊಟ ಹಾಕುತ್ತಾಳೆ...
ಸಾಧ್ಯವಾದರೆ ನನ್ನ ಅನುಭವವನ್ನು ಬರೆಯಬೇಕೆನಿಸುತ್ತದೆ...

ಲೋದ್ಯಾಶಿ said...

ಸಾರ್,
ಸಮಯ ಸಿಕ್ಕಾಗ ಇಲ್ನೋಡಿ http://bennemasaladose.blogspot.com/2009/09/blog-post_27.html

Chamaraj Savadi said...

ಲೋಹಿತ್‌ ಅವರೇ, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ನಮ್ಮೆಲ್ಲರ ನೆನಪುಗಳ ಹರವು ಒಂದೇ ರೀತಿಯಾಗಿರುತ್ತದೆ ಎಂದು ನಂಬಿದವ ನಾನು. ಬದಲಾವಣೆ ಏನಿದ್ದರೂ ಅಭಿವ್ಯಕ್ತಿಯಲ್ಲಿ ಮಾತ್ರ. ಹಾಗಂತ ಹಳೆಯ ನೆನಪುಗಳೆಲ್ಲ ಸುಂದರ ಎಂದು ಹೇಳಲಾರೆ. ಆದರೆ, ಇವತ್ತಿನ ಸಂದರ್ಭದಲ್ಲಿ ಆ ನೆನಪುಗಳು ತರುವ ಬೆಚ್ಚನೆಯ ಪ್ರೀತಿ ನನಗೆ ಇಷ್ಟ.

Chamaraj Savadi said...

ಉದಯ್‌ ಹೇಗಿದ್ದೀರಿ?
ಇಲ್ಲಿ, ಅಂದರೆ, ಇಡೀ ಕರ್ನಾಟಕದಲ್ಲಿ ಸಿಕ್ಕಾಪಟ್ಟೆ ಮಳೆ. ಉತ್ತರ ಕರ್ನಾಟಕ ತತ್ತರಿಸಿದೆ. ಅಳವಂಡಿ ಹಳ್ಳ ದಶಕಗಳ ನಂತರ ದಡ ಮೀರಿ ಹರಿಯುತ್ತಿದೆ. ಮನೆಗಳು ಕುಸಿಯುತ್ತಿವೆ. ಈ ಎಲ್ಲ ಬೆಳವಣಿಗೆ ನನಗೆ ಬಾಲ್ಯದ ಶಾಲೆ ನೆನಪಿಸಿದ್ದು ವಿಚಿತ್ರ.
ನಮ್ಮೆಲ್ಲರ ಅನುಭವಗಳ ಮೂಲ ಒಂದೇ ಆಗಿರುವುದರಿಂದ, ಈ ಬರಹ ನಿಮಗೆ ಇಷ್ಟವಾಗುತ್ತದೆ ಎಂಬ ನಂಬಿಕೆ ನನಗಿತ್ತು.
ಇನ್ನೊಂದು ವಿಷಯ ಏನೆಂದರೆ, ಕೊಪ್ಪಳದ ಸೇತುವೆ ಕೊಚ್ಚಿಹೋಗಿದೆ. ಬಿದ್ದ ಸೇತುವೆ ಪಕ್ಕ ನಿರ್ಮಿಸಿದ್ದ ತಾತ್ಕಾಲಿಕ ಸೇತುವೆ ಹಿರೆಹಳ್ಳದ ಪ್ರವಾಹದಲ್ಲಿ ಲೀನವಾಗಿದ್ದರಿಂದ, ಗದಗ-ಕೊಪ್ಪಳ ಸಂಪರ್ಕ ಕಡಿದುಹೋಗಿದೆ.

Chamaraj Savadi said...

ಚಕೋರ ಅವರೇ, ನಿಮ್ಮ ಅಭಿಮಾನದ ಪ್ರತಿಕ್ರಿಯೆಗೆ ಧನ್ಯವಾದಗಳು.
ಭಾವನೆ ತೀವ್ರವಾದಷ್ಟೂ ಬರಹವೂ ತೀವ್ರವಾಗುತ್ತದೆ. ಎಷ್ಟೇ ಬುದ್ಧಿವಂತಿಕೆ ಮೆರೆದರೂ, ಉತ್ಕಟ ಭಾವನೆ ತರುವ ಶಕ್ತಿಯೇ ವಿಚಿತ್ರ. ಅದು ಬರವಣಿಗೆಗೆ ಬಲ ತರುತ್ತದೆ. ಅಲ್ಲವೆ?

Chamaraj Savadi said...

ಬಾಲ್ಯದ ನೆನಪುಗಳೇ ವಿಚಿತ್ರ ಅಲ್ಲವಾ ಶಿವು? ನಿಮ್ಮ ಅನುಭವವನ್ನೂ ಬರೆಯಿರಿ. ನಾವೆಲ್ಲ ಹಳ್ಳಿಯ ನೆಲೆಯಿಂದ ಬಂದವರು. ಈಗಿನ ನಗರ ಜೀವನದ ಜೊತೆಗೆ ಅದನ್ನು ಹೋಲಿಸಿ ನೋಡಿದರೆ ದಿಗ್ಭ್ರಮೆಯಾಗುತ್ತದೆ. ಆ ಬದುಕನ್ನು ನಾವಾ ಬದುಕಿದ್ದು ಅಂತ ಅಚ್ಚರಿಯಾಗುತ್ತದೆ.
ನಿಮ್ಮ ಹಲವಾರು ಫೊಟೊಗಳಿಗೆ ಬರೆಯುವ ಆಸೆಯಿದೆ. ಈಗಾಗಲೇ ನೀವು ಅನುಮತಿ ಕೊಟ್ಟಿರುವುದರಿಂದ, ಇನ್ನು ಬರೆಯಲು ಶುರು ಮಾಡುತ್ತೇನೆ. ನಿಮ್ಮ ಪ್ರತಿಕ್ರಿಯೆ ನನಗೆ ಅಮೂಲ್ಯ.