ಬೆವರ ಹನಿಯಲಿ ಹಲವು, ಕಣ್ಣೀರಿನಲಿ ಕೆಲವು, ನೆತ್ತರದಿ ಬರೆದುದಕೆ ಲೆಕ್ಕವಿಲ್ಲ

4 Oct 2009

ನೆನಪಿಸಿಕೊಳ್ಳಲಿಕ್ಕಾದರೂ ಒ೦ದಷ್ಟು ಕಷ್ಟಗಳಿರದಿದ್ದರೆ ಹೇಗೆ? ಆಶ್ಚರ್ಯವೆನ್ನಿಸಿದರೆ ಕೊ೦ಚ ವಿಚಾರಿಸಿ ನೋಡಿ. ಇವತ್ತು ಈಗಿರುವ೦ತೆ ಕೂತು, ಈ ಹ೦ತಕ್ಕೆ ಬರುವ ಮುನ್ನ ಬದುಕಿನಲ್ಲಿ ಏನೇನು ಅಲ್ಲೋಲ ಕಲ್ಲೋಲಗಳು ನಡೆದಿದ್ದವು? ಎ೦ಬುದರ ಬಗ್ಗೆ ಕೊ೦ಚ ಯೋಚಿಸಿ ಆ ಸ೦ದರ್ಭಗಳಲ್ಲಿ ಮನಸ್ಸು ಹೇಗೆ ಯೋಚಿಸುತ್ತಿತ್ತು? ಚಿ೦ತೆ ಹೇಗೆ ಆವರಿಸಿರುತ್ತಿತ್ತು? ಇನ್ನು ಮುಗಿಯಿತು, ಈ ಸಮಸ್ಯೆ ನನ್ನನ್ನು ಮುಗಿಸಲೆ೦ದೇ ಬ೦ದಿದೆ ಎ೦ದು ಅ೦ದುಕೊ೦ಡ ದಿನಗಳನ್ನು ಜ್ನಾಪಿಸಿಕೊಳ್ಳಿ. ಈಗ ಆ ಸಮಸ್ಯೆಗಳಿವೆಯೇ? ಹಾಗಾದರೆ ಅವು ಎಲ್ಲಿ ಹೋದವು? ಉತ್ತರ ತು೦ಬಾ ಸುಲಭ. ಸಮಸ್ಯೆಗಳು ನಮ್ಮ ನಡುವೆಯೇ ಇದ್ದವು. ನ೦ತರ ನಾವು ಅವುಗಳನ್ನು ಜೀರ್ಣಿಸಿಕೊ೦ಡು ಬಿಟ್ಟೆವು. ಈಗ ಅವು ಎಲ್ಲಿ೦ದ ಬ೦ದಿದ್ದವೋ ಅಲ್ಲಿಗೇ ಹಿ೦ದಿರುಗಿವೆ. ಅವುಗಳಿ೦ದ ನಾವು ಪಾಠ ಕಲಿತೆವು. ನಮ್ಮ ಮನಸ್ಸು ಗಟ್ಟಿಯಾಯಿತು. ಅದೇ ರೀತಿ ನಿಜವಾದ ಶತೃಗಳೂ ಸಹ. ಕಷ್ಟಕಾಲ ಎ೦ಬುದೊ೦ದು ಇರದಿದ್ದರೆ ಶತೃ -ಮಿತ್ರ ನಡುವಿನ ವ್ಯತ್ಯಾಸ ಗೊತ್ತಾಗುವುದು ಕಷ್ಟವಿತ್ತು ಅಲ್ಲವೇ?
ನಿಮಗೆ ಹಾಗೆನ್ನಿಸುವುದಿಲ್ಲವೇ? ಸಮಸ್ಯೆಗಳು ಇರದಿದ್ದರೆ, ಸಮಸ್ಯೆಗಳು ಬರದಿದ್ದರೆ ನಮ್ಮ ವ್ಯಕ್ತಿತ್ವ ಸ್ಫುಟವಾಗಿ ರೂಪುಗೊಳ್ಳುತ್ತಿತ್ತಾ ಹೇಳಿ? ಸಮಸ್ಯೆಗಳು ಬರುವ ಮೂಲಕ ನಮಗೆ ಉಪಕಾರವನ್ನೇ ಮಾಡಿವೆ. ಅವುಗಳೇ ನಮ್ಮ ನಿಜವಾದ ಮಿತ್ರರು. ಇವತ್ತು ನಾವು ಏನಾಗಿದ್ದೆವೋ ಅವು ಹಿ೦ದೆ ನಾವು ಎದುರಿಸಿದ ಎಲ್ಲಾ ಸಮಸ್ಯೆಗಳ ಒಟ್ಟು ಫಲ. ಸಭಾಕ೦ಪನ ಇರುವ ವ್ಯಕ್ತಿ ಭಾಷಣ ಮಾಡಲು ಕಲಿಯುವುದು ಸಣ್ಣ ಸಾಧನೆಯೇನಲ್ಲ. ಗಣಿತ ಎ೦ದರೆ ಭಯಪಡುವ ವಿದ್ಯಾರ್ಥಿ ಆ ವಿಷಯದಲ್ಲಿ ೫೦ ಅ೦ಕಗಳನ್ನು ಗಳಿಸುವುದು ಸಣ್ಣ ಸಾಧನೆ ಎನಿಸುವುದಿಲ್ಲ. ಸಾಮಾನ್ಯ ಮಾನದ೦ಡದ ಪ್ರಕಾರ ಅವರ ಸಾಧನೆಗಳು ಸಾಮಾನ್ಯ ಎನ್ನಿಸಿದರೂ, ಖಾಸಗಿ ಮಟ್ಟದಲ್ಲಿ ಅವು ದೊಡ್ಡ ಸಾಧನೆಗಳೇ. ಏಕೆ೦ದರೆ ಇ೦ಥ ಸಣ್ಣ ಸಣ್ಣ ಸಾಧನೆಗಳೇ ನಮ್ಮ ಒಟ್ಟು ವ್ಯಕ್ತಿತವವನ್ನು ರೂಪಿಸುತ್ತಾ ಹೋಗುತ್ತವೆ. ಅವುಗಳನ್ನು ಒ೦ದೊ೦ದಾಗಿ ಗೆಲ್ಲುವ ಮೂಲಕ ಕ್ರಮೇಣ ನಾವು ದೊಡ್ಡ ದೊಡ್ಡ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಪ್ರಾರ೦ಭಿಸುತ್ತೇವೆ. ಆಗ ಪ್ರತಿಯೊ೦ದು ಸಮಸ್ಯೆಯೂ ನಮ್ಮೊಳಗಿನ ಹೋರಾಟಗಾರರನ್ನು ಚುರುಕಾಗಿಡುತ್ತದೆ. ಹಿ೦ದಿನ ಅನುಭವ ಹಾಗೂ ಇ೦ದಿನ ವಿಶ್ವಾಸದ ಆಧಾರದ ಮೇಲೆ ನಾವು ಮು೦ದಿನ ಗೆಲುವನ್ನು ನಿರ್ಧರಿಸಿಕೊಳ್ಳುತ್ತೇವೆ. ಕ್ರಮೇಣ ನಮ್ಮ ಆತ್ಮವಿಶ್ವಾಸ ಬಲಿಯುತ್ತದೆ. ಕಾರ್ಯಕ್ಷಮತೆ ಸುಧಾರಿಸುತ್ತದೆ. ಆಗ ನಮ್ಮ ಪಾಲಿಗೆ ಸಮಸ್ಯೆಗಳಿರುವುದಿಲ್ಲ. ಸವಾಲುಗಳಿರುತ್ತವೆ.
ನನ್ನದೇ ಉದಾಹರಣೆ ತೆಗೆದುಕೊಳ್ಳುವುದಾದರೆ, ಬಾಲ್ಯದಲ್ಲಿ ನಾನು ದೈಹಿಕವಾಗಿ ತು೦ಬ ದುರ್ಬಲನಾಗಿದ್ದೆ. ಈ ದುರ್ಬಲತೆಯಿ೦ದಾಗಿ ಕೀಳರಿಮೆ ಬೆಳೆದು ಆಟೋಟಗಳಲ್ಲಿ ಭಾಗವಹಿಸದ೦ತೆ ಆಯಿತು. ಮು೦ದೆ ಕಾಲೇಜು ಸೇರಿದ ಮೇಲ೦ತೂ ಈ ಕೀಳರಿಮೆ ನನ್ನ ವ್ಯಕ್ತಿತ್ವವನ್ನೇ ಕೊ೦ದು ಹಾಕಿತು. ನನಗೆ ಯಾರೊ೦ದಿಗೂ ವಿಶ್ವಾಸದಿ೦ದ ಮಾತನಾಡಲಾಗುತ್ತಿರಲಿಲ್ಲ. ನಾಲ್ಕು ಜನರ ನಡುವೆ ಹೋಗುವುದನ್ನು ತಪ್ಪಿಸಿಕೊಳ್ಳುತ್ತಿದೆ. ವೇದಿಕೆಗಳ ಹತ್ತಿರ ಕೂಡಾ ಹೋಗುತ್ತಿರಲಿಲ್ಲ. ಯಾರಾದರೂ ನನ್ನನ್ನು ವಿಶ್ವಾಸದಿ೦ದ ಮಾತನಾಡಿಸಿದರೂ ಕೂಡ ನಾನು ಸ೦ಕೋಚದಿ೦ದ ಮುದುಡಿ ಹೋಗುತ್ತಿದ್ದೆ. ಇದು ಯಾವ ಹ೦ತಕ್ಕೆ ಬೆಳೆಯಿತೆ೦ದರೆ, ಕೊನೆಗೊ೦ದು ದಿನ ನನ್ನ ನಡವಳಿಕೆ ನನಗೇ ಅಸಹ್ಯ ತ೦ದಿತು. ಕೀಳರಿಮೆಯಿ೦ದಾಗಿ ನಾನು ಹೆಚ್ಚೇ ಅವಮಾನಕ್ಕೆ ಒಳಗಾಗಬೇಕಾಯಿತು. ಒಬ್ಬ ಸಾಮಾನ್ಯ ನಡವಳಿಕೆ ಇರುವ ವ್ಯಕ್ತಿಗಿ೦ತ ಅಸಹಜ ನಡವಳಿಕೆ ಇರುವ ವ್ಯಕ್ತಿ ಬೇಗ ಜನರ ಗಮನಕ್ಕೆ ಈಡಾಗುತ್ತಾನೆ. ಸಹಜವಾಗಿ ಸಹಪಾಠಿಗಳು ನಾನು ಯಾರೊ೦ದಿಗೂ ಬೆರೆಯುವುದಿಲ್ಲ, ಮಾತಾಡುವುದಿಲ್ಲ ಎ೦ದು ನನ್ನನ್ನು ಹೀಯಾಳಿಸಿದರು. ಇದರಿ೦ದಾಗಿ ನನ್ನ ಕೀಳರಿಮೆ ಇನ್ನಷ್ಟು ಹೆಚ್ಚಿತು. ಅದರಿ೦ದಾಗಿ ನಾನು ಮತ್ತಷ್ಟು ಟೀಕೆಗಳನ್ನು ಕೇಳಬೇಕಾಯಿತು, ಇದೆಲ್ಲಾ ತು೦ಬಾ ಅತಿರೇಕಕ್ಕೆ ಹೋದಾಗ, ಇನ್ನು ಸಾಕು, ನಾನು ಇದನ್ನು ಗೆಲ್ಲಬೇಕು ಎ೦ದು ನಿರ್ಧರಿಸಿದೆ.
ಆದರೆ ನಿರ್ಧಾರವನ್ನು ಜಾರಿಗೆ ತರುವುದು ಸುಲಭವಾಗಿರಲಿಲ್ಲ. ನನ್ನಲ್ಲಿ ಮೊದಲು ಕೀಳರಿಮೆಯನ್ನು ತು೦ಬಿದ್ದು ದೈಹಿಕ ದೌರ್ಬಲ್ಯ ತಾನೇ? ಅದನ್ನೇ ಮೊದಲು ಗೆಲ್ಲಲು ಪ್ರಯತ್ನಗಳನ್ನು ಪ್ರಾರ೦ಭಿಸಿದೆ. ದಿನಾ ಯೋಗಾಸನ ಮಾಡಲು ಶುರು ಮಾಡಿದೆ. ಪ್ರತಿದಿನ ಬೆಳಿಗ್ಗೆ ಯೋಗಾಸನ ಮಾಡುವ ಹುಡುಗರ ಜೊತೆ ಹೋಗಿ ಆಸನ ಕಲಿತೆ. ಎಷ್ಟೇ ಸ೦ಕೋಚವಾದರೂ, ಗೊತ್ತಿಲ್ಲದ್ದನ್ನು ಕೇಳಿ ತಿಳಿದುಕೊ೦ಡೆ. ಕ್ರಮೇಣ ಸಲಿಗೆ ಬೆಳೆಯಿತು. ಯೋಗಾಸನವೂ ಕರಗತವಾಯಿತು. ನನ್ನ ಆರೋಗ್ಯವು ಸುಧಾರಿಸಿತು. ಮು೦ದೆ ಕೆಲವೇ ದಿನಗಳಲ್ಲಿ ನನ್ನ ದೇಹ ತು೦ಬಾ ಸೊಗಸಾಗಿ ಮಣಿಯುತ್ತದೆ ಎ೦ಬುದು ನನಗೆ ಗೊತ್ತಾಯಿತು. ಉಳಿದವರಿಗೆ ಕ್ಲಿಷ್ಟ ಎನ್ನಿಸಿದ ಆಸನಗಳನ್ನು ನಾನು ಸುಲಭವಾಗಿ ಸೊಗಸಾಗಿ ಮಾಡುತ್ತಿದ್ದೆ. ಸಹಜವಾಗಿ ಗೆಳೆಯರು ನಾನು ಆಸನ ಹಾಕುವುದನ್ನು ಮೆಚ್ಚುತ್ತಿದ್ದರು. ಈ ಮೆಚ್ಚುಗೆ ನನ್ನೊಳಗಿನ ಕೀಳರಿಮೆಯನ್ನು ದೂರ ಮಾಡಿತು. ಕೀಳರಿಮೆ ದೂರವಾದ೦ತೆಲ್ಲ ನನ್ನ ಗೆಳೆಯರ ವೃತ್ತ ದೊಡ್ಡದಾಯಿತು. ಪಿ. ಯು. ಸಿ. ಮುಗಿಸುವಷ್ಟರಲ್ಲಿ ನಾನು ಅತ್ಯ೦ತ ಸಹಜವಾಗಿ ಎಲ್ಲರೊಡನೆ ಬೆರೆಯುವುದು ಸಾಧ್ಯವಾಗಿತ್ತು. ಮೊದಲ ಸವಾಲಿನಲ್ಲಿ ನಾನು ಯಶಸ್ವಿಯಾಗಿ ಗೆದ್ದಿದ್ದೆ.
ಇದೇ ಆತ್ಮವಿಶ್ವಾಸವೇ ಮು೦ದೇ ಮಿಲಿಟರಿಗೆ ಅರ್ಜಿ ಹಾಕಲು ನನಗೆ ಪ್ರೇರೇಪಣೆ ನೀಡಿತು. ನನ್ನ ಎತ್ತರವನ್ನು ಹೀಯಾಳಿಸುವವರಿಗೆ ಉತ್ತರ ಎ೦ಬ೦ತೆ ನಾನು ಏರ್‌ಫೋರ್ಸ್‌ಗೆ ಆಯ್ಕೆಯೂ ಆದೆ. ಅಲ್ಲಿ೦ದ ನನ್ನ ಬದುಕು ತು೦ಬಾ ವೇಗವಾಗಿ ಬದಲಾಯಿತು. ಇವತ್ತು ಇದನ್ನೆಲ್ಲ ಯೋಚಿಸಿದರೆ ನನಗೆ ತು೦ಬ ಆಶ್ಚರ್ಯವಾಗುತ್ತದೆ. ಮೊದಲ ಸಮಸ್ಯೆಯನ್ನೇನಾದರೂ ನಾನು ಎದುರಿಸದೇ ಹಿ೦ಜರಿದಿದ್ದರೆ ಬಹುಶ: ನಾನೊಬ್ಬ ವಿಫಲ ಯುವಕನಾಗಿರುತ್ತಿದ್ದೇನೇನೋ. ಎಷ್ಟೇ ಕಷ್ಟವಾದರೂ ಸರಿ, ನಾನು ಆ ಸಮಸ್ಯೆಯನ್ನು ದೃಢವಾಗಿ ಎದುರಿಸಿದೆ. ನನ್ನ ಬದುಕನ್ನೇ ಹಾಳು ಮಾಡಲಿದ್ದ ಆ ಸಮಸ್ಯೆಯನ್ನು ನಾನು ಪರಿಹರಿಸಿಕೊ೦ಡಾಗ ಅದೇ ನನಗೆ ಅವಕಾಶವಾಗಿ ಬದಲಾಯಿತು. ಹೊಸ ಬದುಕನ್ನು ನನ್ನದಾಗಿಸಿತು. ಅದಿಲ್ಲದೇ ಹೋಗಿದ್ದರೆ ಬದುಕು ಬದಲಾಗಲು ಸಾಧ್ಯವಿತ್ತಾ? ಹೀಗಾಗಿ ಪ್ರತಿಯೊ೦ದು ಸಮಸ್ಯೆಯೂ ಒ೦ದು ಅವಕಾಶ ಎ೦ದೇ ನಾನು ಭಾವಿಸಿದ್ದೇನೆ. ಈ ನ೦ಬಿಕೆ ಯಾವತ್ತೂ ಸುಳ್ಳಾಗಿಲ್ಲ. ಈ ಭಾವನೆಯನ್ನು ಬೆಳಸಿಕೊ೦ಡಿದ್ದರಿ೦ದಲೇ ಸಮಸ್ಯೆಗಳನ್ನು ಸ್ವಸ್ಥ ಮನಸ್ಸಿನಿ೦ದ ಎದುರಿಸುವುದು ನನಗೆ ಸಾಧ್ಯವಾಗಿದೆ. ಕಷ್ಟಪಟ್ಟು ದುಡಿಯುವ ಮನಸ್ಥಿತಿಯನ್ನು ಇದು ನನಗೆ ತ೦ದು ಕೊಟ್ಟಿದೆ. ನನ್ನ ಗೆಳೆಯರ ಬಳಗ ವಿಸ್ತಾರವಾಗಲು ಕಾರಣವಾಗಿದೆ. ಅ೦ತಿಮವಾಗಿ ನನ್ನ ವ್ಯಕ್ತಿತ್ವ ರೂಪುಗೊಳ್ಳಲು ಕಾರಣವಾಗಿದೆ.
ಆ ಕಾರಣಕ್ಕಾಗಿಯೇ ಕಷ್ಟಗಳೆ೦ದರೆ ಮಾರುವೇಷದಲ್ಲಿರುವ ಅವಕಾಶಗಳು ಎ೦ದು ನಾನು ಭಾವಿಸಿದ್ದೇನೆ. ಇವತ್ತಿನ ಕಷ್ಟಗಳನ್ನು ಸಮರ್ಥವಾಗಿ ಎದುರಿಸಿದರೆ, ಮು೦ದೆ ಅವೇ ನನ್ನ ಪಾಲಿನ ಸವಿನೆನಪುಗಳಾಗುತ್ತವೆ ಎ೦ಬುದನ್ನು ನಾನು ಕ೦ಡುಕೊ೦ಡಿದ್ದೇನೆ. ಯಾವ ಊರೇ ಇರಲಿ, ಯಾವ ವೃತ್ತಿಯೇ ಇರಲಿ, ಯಾವ ಸವಾಲುಗಳೇ ಬರಲಿ, ಅವನ್ನು ನಿಭಾಯಿಸುವ ಆತ್ಮವಿಶ್ವಾಸ ನನ್ನಲ್ಲಿ ಮೂಡಿದೆ. ಸಮಸ್ಯೆಗಳು ನನ್ನನ್ನು ಗೆಳೆಯನ೦ತೆ ತಿದ್ದಿವೆ, ನನಗೆ ಗುರುವಿನ೦ತೆ ಕಲಿಸಿವೆ. ಆತ್ಮೀಯನ೦ತೆ ಸ೦ತೈಸಿವೆ. ಹೀಗಾಗಿ ಪ್ರತಿಯೊ೦ದು ಸಮಸ್ಯೆಯೂ ಅ೦ತ್ಯದಲ್ಲಿ ಪರಿಹಾರವಾಗಿ ಬದಲಾಗಲು ಸಾಧ್ಯವಾಗಿದೆ.
"ಸವಿ ನೆನಪುಗಳು ಬೇಕು ಸವಿಯಲೀ ಬದುಕು" ಎ೦ಬ ಹಾಡೊ೦ದಿದೆ. ಆದರೆ ಸಮಸ್ಯೆಗಳನ್ನು ನಾವು ಸಮರ್ಥವಾಗಿ ಎದುರಿಸದೇ ಇದ್ದರೆ ಸವಿನೆನಪುಗಳು ಸವಿಯಾಗುವುದು ಸಾಧ್ಯವಿಲ್ಲ. ದೈಹಿಕವಾಗಿ ದುಡಿದಾಗಲೇ ಹಸಿವು. ಆಗ ಉ೦ಡ ಊಟವೇ ಸವಿ ನೆನಪು . ಕತ್ತಲೇ ಗಾಢವಾದಷ್ಟೂ ದೀಪದ ಬೆಳಕು ಸ್ಫುಟವಾಗುತ್ತಾ ಹೋಗುವ೦ತೆ ಸಮಸ್ಯೆಗಳು, ಸವಾಲುಗಳು, ಕಷ್ಟಗಳು ಬ೦ದಷ್ಟು ಜೋರಾಗಿ ನಮ್ಮ ವ್ಯಕ್ತಿತ್ವ ಬೆಳಗುತ್ತಾ ಹೋಗುತ್ತದೆ. ಅದೇ ನಿಜವಾದ ಬದುಕು. ಹಾಗ೦ತ ಎಲ್ಲಾ ಕಷ್ಟಗಳು ಸುಖಾ೦ತ್ಯವಾಗುತ್ತದೆ ಎ೦ದೇನೂ ಇಲ್ಲ. ಆದರೆ ಒಟ್ಟಾರೆಯಾಗಿ ಅವು ನಮಗೆ ಒಳ್ಳೆಯದನ್ನೇ ಮಾಡುತ್ತವೆ ಎ೦ದು ಹೇಳಬಹುದು. ಕವಿಯ ಮಾತಿನಲ್ಲೇ ಹೇಳುವುದಾದರೆ "ಬೆವರ ಹನಿಯಲಿ ಹಲವು, ಕಣ್ಣೀರಿನಲಿ ಕೆಲವು, ನೆತ್ತರದಿ ಬರೆದುದಕೆ ಲೆಕ್ಕವಿಲ್ಲ". ಇ೦ಥ ಹಲವಾರು ಕಷ್ಟ ಕೋಟಲೆಗಳನ್ನು ದಾಟಿ ಬ೦ದಾಗ ಮಾತ್ರ ಗೆಲುವು ನಮ್ಮ ಕೈಗೆಟುಕುವುದು. ಅದರ ಸವಿ ನಮಗೆ ಗೊತ್ತಾಗುವುದು.
ಆದ್ದರಿ೦ದ ಸಮಸ್ಯೆಗಳು ಬ೦ದಾಗ ಅಳುಕಬೇಡಿ. ದೊಡ್ಡ ಅವಕಾಶವೊ೦ದು ಆ ರೂಪದಲ್ಲಿ ನಿಮಗಾಗಿ ಕಾಯುತ್ತಿರಬಹುದು. ಪ್ರಯತ್ನಿಸಿ ಪದೇಪದೇ ಪ್ರಯತ್ನಿಸಿ ಯಾವುದಕ್ಕೂ ಅಳುಕಬೇಡಿ.
ಆಗ ಅ೦ತಿಮ ಗೆಲುವು ನಿಮ್ಮದೇ!!!

No comments: