ಕೊಪ್ಪಳದಲ್ಲೊಂದು ಕರಡೀಪುರ

20 Oct 2009

(ಕೊಪ್ಪಳದ ಬೆಟ್ಟಗಳ ತಡಿಯ ಊರು ಮಂಗಳಾಪುರದ ಮನೆಮನೆಗಳಲ್ಲಿ ಕರಡಿಗಳನ್ನು ಸಾಕುತ್ತಾರೆ. ಅವನ್ನು ಊರೂರಿಗೆ ಕರೆದುಕೊಂಡು ಹೋಗಿ ಮಕ್ಕಳ ಮುಂದೆ ಪ್ರದರ್ಶಿಸಿ ಒಂದಷ್ಟು ಚಿಲ್ಲರೆ ಹಣ ಸಂಪಾದಿಸುತ್ತಾರೆ. ತಲೆಮಾರುಗಳಿಂದ ನಡೆದಿರುವ ಈ ವೃತ್ತಿಯ ಮೇಲೆ ಈಗ ಅರಣ್ಯ ಇಲಾಖೆಯ ಕೆಂಗಣ್ಣು, ಪ್ರಾಣಿದಯಾವಾದಿಗಳ ಮುನಿಸು. ಕಾಡನ್ನು ನಾಶ ಮಾಡಿದ ನಿಯಮಗಳೇ ಈಗ ನಾಡಿನಲ್ಲಿರುವ ಬಡಪ್ರಾಣಿಗಳ ಬೆನ್ನು ಬ್ದಿದಿವೆ. ವಿದೇಶಗಳಲ್ಲಿ ಮನೆಯೊಳಗೆ ಹುಲಿ ಸಾಕುವುದನ್ನು ಕಣ್ಣರಳಿಸಿ ನೋಡುವ ನಾವು ಇಂಥ ಪರಂಪರೆಯನ್ನು ಬೆಂಬಲಿಸಿದರೆ ಕಾಡು ಮತ್ತು ಕಾಡುಪ್ರಾಣಿಗಳೆರಡೂ ಉಳಿದಾವು...)

‘ನಾನು ಹೇಳುವವರೆಗೆ ಯಾವ ಕಾರಣಕ್ಕೂ ಕ್ಯಾಮೆರಾ ಹೊರತೆಗೆಯಬಾರದು’ ಎಂದು ತಾಕೀತು ಮಾಡಿಯೇ ಛಾಯಾಗ್ರಾಹಕ ಮಿತ್ರ ಪ್ರಕಾಶ ಕಂದಕೂರರನ್ನು ಜತೆಗೆ ಕರೆದುಕೊಂಡು ಹೋಗಿದ್ದೆ.


ನಾವು ಅಲ್ಲಿಗೆ ಹೋದಾಗ ಭಾರಿ ಗಾತ್ರದ ಹೆಣ್ಣು ಕರಡಿಯೊಂದು ಆಸ್ಥೆಯಿಂದ ಬೆರಳುಗಳನ್ನು ಚೀಪುತ್ತ ಅಲ್ಲೇ ಬಾಗಿಲ ಎದುರೇ ಕೂತಿತ್ತು. ಪಕ್ಕದಲ್ಲೇ ನೇತಾಡುತ್ತಿದ್ದ ಸೀರೆಯ ತೊಟ್ಟಿಲಲ್ಲಿ ಮಗುವೊಂದು ತನ್ನ ಬೆರಳು ಚೀಪುತ್ತ ಆಟವಾಡುತ್ತಿತ್ತು. ಈ ವಿಚಿತ್ರ ದೃಶ್ಯವನ್ನು ನಾವು ಅವಾಕ್ಕಾಗಿ ನೋಡುತ್ತಿದ್ದರೆ, ‘ಯಾರಿವರು ಹೊಸಬರು?’ ಎಂಬಂತೆ ಕರಡಿ ಮಾಲೀಕ ನಮ್ಮನ್ನು ಅನುಮಾನದಿಂದ ದಿಟ್ಟಿಸುತ್ತಿದ್ದ. 

ನಮ್ಮ ರೋಮಾಂಚಕ ಯಾತ್ರೆ ಶುರುವಾಗಿದ್ದು ಹೀಗೆ.
 

ಅದು ಮಂಗಳಾಪುರ ಎಂಬ ಸಣ್ಣ ಹಳ್ಳಿ. ಕೊಪ್ಪಳದಿಂದ ಬರೀ ಮೂರು ಕಿಲೊಮೀಟರ್ ದೂರ. ಕೊಪ್ಪಳ-ಗದಗ್‌ ರಸ್ತೆಯಲ್ಲಿ ಹಿರೆಹಳ್ಳ ಸೇತುವೆ ಬರುವುದಕ್ಕೂ ಮುನ್ನ ಎಡಕ್ಕೆ ತಿರುಗಿಕೊಂಡು ಕೊಂಚ ಮುಂದೆ ಹೋದರೆ ಹಚ್ಚಹಸಿರು ಹೊಲಗಳು ಗಮನ ಸೆಳೆಯುತ್ತವೆ. ‘ಕಲ್ಲು ಬೆಟ್ಟಗಳ ಪಕ್ಕದಲ್ಲಿ ಇದೆಂಥ ಹಸಿರು ಮಾರಾಯ’ ಎಂದು ಅಚ್ಚರಿಪಡುತ್ತಿರುವಾಗಲೇ ಬೆಟ್ಟಗಳ ಅಡಿಯಲ್ಲಿ  ಧುತ್ತೆಂದು ಪ್ರತ್ಯಕ್ಷವಾಗುತ್ತದೆ ಈ ಊರು.

‘ಯಾರ್ರೀ ನೀವು?’ ಎಂದಿತು ಒರಟು ಧ್ವನಿಯೊಂದು. ಕರಡಿಗಳ ಮೇಲಿನ ದೃಷ್ಟಿಯನ್ನು ಪ್ರಯತ್ನಪೂರ್ವಕವಾಗಿ ಕಿತ್ತು ಅತ್ತ ತಿರುಗುವಷ್ಟರಲ್ಲಿ ಐವತ್ತಕ್ಕೂ ಹೆಚ್ಚು ಜನ ಸುತ್ತುವರೆದ್ದಿದರು. ಅವರ ಮುಖಗಳಲ್ಲಿ ಅನುಮಾನ. ಬಂದವರು, ಬಡವರಿಗಷ್ಟೇ ರೂಲ್ಸು ಹೇಳುವ ಅರಣ್ಯ ಇಲಾಖೆಯವರೇ ಅಥವಾ ಸಮಾಜಸೇವಕರ ಸೋಗಿನಲ್ಲಿ ದುಡ್ಡು ಕೀಳಲು ಬಂದಿರುವವರೆ? ಎಂಬ ಕೆಟ್ಟ ಗುಮಾನಿ. 


‘ಕರಡಿ ನೋಡಾಕ ಬಂದಿದ್ವಿ’ ಎನ್ನುತ್ತ ಪ್ರಕಾಶ ಕಂದಕೂರ ನಿಯಮ ಮರೆತು ಮೆಲ್ಲಗೇ ಕ್ಯಾಮೆರಾ ಕವರ್ ಕಳಚಿದರು. 


‘ನೀವು ಪೇಪರ್‍ನವ್ರಾ?’ ತೆಳ್ಳಗೆ, ಆದರೆ ತಂತಿಯಂತೆ ಗಟ್ಟಿಯಾಗಿದ್ದ ಯುವಕನೊಬ್ಬ ಇನ್ನಷ್ಟು ಅನುಮಾನದಿಂದ ಪ್ರಶ್ನಿಸಿದ. 


ಏನಂತ ಉತ್ತರಿಸಿದರೆ ಸೂಕ್ತ ಎಂದು ಯೋಚಿಸುತ್ತಿರುವಾಗಲೇ ಆ ಯುವಕ, ರಾಜೇಸಾಬ್, ಪ್ರಕಾಶ್ ಕೈಲಿರುವ ಕ್ಯಾಮೆರಾ ಕಸಿದುಕೊಂಡ. ಸುತ್ತ ನಿಂತಿರುವ ಜನರ ಮುಖದಲ್ಲೀಗ ಕೆಟ್ಟ ಕೋಪ. ಅವರೊಳಗೇ ಗುಜುಗುಜು. ನಮ್ಮ ಧೈರ್ಯ ಬೆವರಾಗಿ ಸಣ್ಣಗೆ ಕರಗತೊಡಗಿತು.
 

ಕರಡಿ ಮಾತ್ರ ಆರಾಮವಾಗಿ ಬೆರಳು ನೆಕ್ಕುತ್ತ ಕೂತಿದೆ!
 

‘ನೋಡಪ್ಪಾ, ನಾವು ಕರಡಿ ಬಗ್ಗೆ ಬರಿಯಾಕ ಬಂದೀವಿ. ನೀನು ಹ್ಞೂಂ ಅಂದ್ರ ಒಂದಿಷ್ಟು ಫೋಟೊ ತಕ್ಕೊಂತೀವಿ. ಅಷ್ಟ...’ ನನ್ನ ಮಾತಿನ್ನೂ ಮುಗಿದಿದ್ದಿಲ್ಲ, ರಾಜೇಸಾಬ್ ಮುಖದಲ್ಲಿ ತಿರಸ್ಕಾರ ಮಿಶ್ರಿತ ಕೋಪ ಕಾಣಿಸಿಕೊಂಡಿತು.

‘ಮೊದ್ಲು ಇಲಿಂದ ಸುಮ್ನ ಹೋಗ್ರಿ. ಫೋಟೊನೂ ಬ್ಯಾಡ ಏನೂ ಬ್ಯಾಡ. ನಮ್ಮ ಪಾಡಿಗೆ ನಮ್ಮನ್ನ ಇರಾಕ ಬಿಡ್ರಿ, ಅಷ್ಟ್ ಸಾಕು’ ಎಂದು ಅಬ್ಬರಿಸಿದ. ನಾವು ಸುಮ್ಮನೇ ನಿಂತಿದ್ದು ನೋಡಿ, ‘ಹೊಕ್ಕೀರೋ ಇಲ್ಲಾ ಕಲ್ಲಿಂದ ಈ ಕ್ಯಾಮರಾ ಕುಟ್ಟಿ ಹಾಕ್ಲೊ’ ಎಂದು ಬೆದರಿಸಿದ.
 

ಅಷ್ಟೊತ್ತಿಗೆ ಗುಂಪು ಇನ್ನಷ್ಟು ದೊಡ್ಡದಾಗಿತ್ತು.

***
 

ಅಂದಾಜು ನೂರು ಮನೆಗಳಿರುವ ಸಣ್ಣ ಊರು ಮಂಗಳಾಪುರ. ಅರ್ಧದಷ್ಟು ಜನ ಮುಸ್ಲಿಮರು. ಊರಿನ ಇತರ ಜನರು ಕೃಷಿ ಕೆಲಸಗಳಿಗೆಂದು ಹಸು, ಎಮ್ಮೆಗಳನ್ನು ಕಟ್ಟಿಕೊಂಡಿದ್ದರೆ, ಇವರು ತಮ್ಮ ಮನೆಗಳಲ್ಲಿ ಕರಡಿಗಳನ್ನು ಸಾಕಿಕೊಂಡಿದ್ದಾರೆ. ಹೆಣ್ಣು ಕರಡಿ, ಗಂಡು ಕರಡಿ, ಮುದ್ದಾದ ಮರಿ ಕರಡಿಗಳು- ಹೀಗೆ ಬಹಳಷ್ಟು ಮನೆಗಳಲ್ಲಿ ಒಂದಿಡೀ ಕರಡಿ ಸಂಸಾರವನ್ನೇ ಕಾಣಬಹುದು. ತಾಯಿ ಕರಡಿ ಸಣ್ಣ ಮರಿಗಳಿಗೆ ಹಾಲೂಡಿಸುವುದು, ತಂದೆ ಕರಡಿ ಕೂತು ಕಾವಲು ಕಾಯುವುದು, ಮನೆ ಮಾಲೀಕನ ಮಕ್ಕಳು ಕೊಂಚ ಬೆಳೆದ ಕರಡಿಗಳೊಂದಿಗೆ ಅಲ್ಲೇ ಆಟವಾಡುವಂಥ ದೃಶ್ಯಗಳು ಇಲ್ಲಿ ಸಾಮಾನ್ಯ. 

ಕರಡಿಗಳು ಈ ಊರಿನ ಬಹಳಷ್ಟು ಮುಸ್ಲಿಮರ ಜೀವನದ ಅವಿಭಾಜ್ಯ ಅಂಗ. ಹಸುಗಳಂತೆ, ಎಮ್ಮೆಗಳಂತೆ ಈ ಕರಡಿಗಳು ಅವರ ಪಾಲಿಗೆ ಸಾಕು ಪ್ರಾಣಿಗಳು. ಅವರ ಮಕ್ಕಳು ಕರಡಿಗಳೊಂದಿಗೆ ಬೆಳೆಯುತ್ತವೆ. ದೊಡ್ಡವಾಗುತ್ತವೆ. ಶಾಲೆಗೆ ಹೋಗುವ ಮಕ್ಕಳು ಕೂಡ ಮನೆಯಲ್ಲಿ ಕರಡಿಗಳೊಂದಿಗೆ ಆಟವಾಡುತ್ತವೆ. ಮನೆಯ ಹಿರಿಯ ವ್ಯಕ್ತಿ ಪ್ರೌಢ ಕರಡಿಯೊಂದಿಗೆ ದೇಶಾಂತರ ಹೋದರೆ, ತಾಯಿ ಹಾಗೂ ಮರಿಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಮನೆಯ ಹೆಣ್ಣುಮಕ್ಕಳದು.


ದೇಶಾಂತರ ಹೋದವರು ವರ್ಷಕ್ಕೆರಡು ಬಾರಿ, ಮೊಹರಂ ಮತ್ತು ಬಕ್ರೀದ್ ಸಮಯದಲ್ಲಿ ಕರಡಿಗಳೊಂದಿಗೆ ಹಿಂದಿರುಗುವ ಹೊತ್ತಿಗೆ ಮರಿಗಳು ದೊಡ್ಡವಾಗಿರುತ್ತವೆ. ಅಷ್ಟೊತ್ತಿಗೆ, ಮನುಷ್ಯನೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬ ಕನಿಷ್ಠ ಪಾಠವನ್ನು ಅವು ಕಲಿತಿರುತ್ತವೆ. ಹೆಚ್ಚಿನ ಪಾಠ ಅವಕ್ಕೆ ದೊರೆಯುವುದು ಮುಂದೆ ದೇಶಾಂತರದ ಸಮಯದಲ್ಲಿ. 

ಮಂಗಳಾಪುರದಲ್ಲಿ ಇಂಥದೊಂದು ಪರಂಪರೆ ತಲೆಮಾರುಗಳಿಂದ ನಡೆದುಕೊಂಡು ಬಂದಿದೆ. ಎಷ್ಟು ತಲೆಮಾರುಗಳಿಂದ ಎಂಬ ಪ್ರಶ್ನೆಗೆ ಸೂಕ್ತ ಉತ್ತರ ದೊರೆಯದು. ತುಂಬ ವಯಸ್ಸಾದ ಅಜ್ಜ ಕೂಡ, ‘ನನಗೆ ನೆನಪಿರುವ ಮಟ್ಟಿಗೆ ನನ್ನ ಅಜ್ಜನೂ ಇದೇ ಕೆಲಸ ಮಾಡುತ್ತಿದ್ದ’ ಎಂದೇ ಉತ್ತರಿಸುತ್ತಾನೆ.

ಕರಡಿಗಳ ಜತೆಗೆ ಊರೂರು ಸುತ್ತುವುದು ಅವರ ವೃತ್ತಿ. ಕರ್ನಾಟಕವಲ್ಲದೆ ಆಂಧ್ರಪ್ರದೇಶ, ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಗಳಿಗೂ ಇವರು ಸಂಚಾರ ಹೊರಡುತ್ತಾರೆ. ಮಕ್ಕಳನ್ನು ಕರಡಿ ಮೇಲೆ ಸವಾರಿ ಮಾಡಿಸಿದರೆ ಅವು ಬಲಶಾಲಿಯಾಗುತ್ತವೆ, ರೋಗರುಜಿನ ಬರುವುದಿಲ್ಲ ಎಂಬ ನಂಬಿಕೆ ಇಲ್ಲೆಲ್ಲ ಸಾಮಾನ್ಯವಾಗಿರುವುದರಿಂದ, ಅಂಥ ಸೇವೆಗೆ ಪ್ರತಿಫಲವಾಗಿ ಒಂದಿಷ್ಟು ದುಡ್ಡು ಪಡೆದುಕೊಳ್ಳುತ್ತಾರೆ. ಅಷ್ಟೇ ಇವರ ಗಳಿಕೆ.


ಇವರು ಕರಡಿಗಳನ್ನು ಹಿಂಸಿಸುತ್ತಾರೆ ಎಂಬುದು ಬುಡವಿಲ್ಲದ ಮಾತು. ‘ನಮಗೆ ಅನ್ನ ಕೊಡುವ ಪ್ರಾಣಿ ಇದು. ನಿಮಗೆ ಹಸು ಎತ್ತು ಹೇಗೋ, ನಮಗೆ ಕರಡಿ ಹಾಗೆ. ಅದನ್ನು ಹಿಂಸಿಸಿ ಪಳಗಿಸಲು ನಾವೇನು ದೊಂಬರೆ ಅಥವಾ ಸರ್ಕಸ್‌ನವರೆ?’ ಎಂದು ಸಿಟ್ಟಿನಿಂದ ಪ್ರಶ್ನಿಸುತ್ತಾರೆ.
 

ಆದರೆ ಅರಣ್ಯ ಇಲಾಖೆಯ ಧೋರಣೆ ನಮಗೆ ಗೊತ್ತೇ ಇದೆ, ದುರ್ಬಲರಿಗಷ್ಟೇ ಅದರ ಕಾನೂನುಗಳು ಅನ್ವಯ. ಅದಕ್ಕೆಂದೇ ಮಂಗಳಾಪುರದ ಕರಡಿಯವರೆಂದರೆ ಇಲಾಖೆಯವರಿಗೆ ಎಲ್ಲಿಲದ ಕೋಪ. ಅವಕಾಶ ದೊರೆತಾಗೆಲ್ಲ ‘ನೀವು ಅರಣ್ಯ ನಿಯಮಗಳನ್ನು ಉಲ್ಲಂಘಿಸಿದ್ದೀರಿ’ ಎಂದು ಕೇಸು ಜಡಿಯುವುದಾಗಿ ಬೆದರಿಸಿ ದುಡ್ಡು ಕೀಳಲಾಗುತ್ತದೆ. ಪ್ರಾಣಿದಯಾವಾದಿಗಳ ಪಾಲಿಗಂತೂ ಕರಡಿಯವರು ದೊಡ್ಡ ಕ್ರಿಮಿನಲ್‌ಗಳು. 

ಹೀಗಾಗಿ ತಮ್ಮ ಬಗ್ಗೆ ಬರೆದು ರಗಳೆ ತರುತ್ತಾರೆಂದು ಪತ್ರಕರ್ತರನ್ನು ಕಂಡರೆ ಮಂಗಳಾಪುರದ ಜನರಿಗೆ ಸಿಟ್ಟು. ಕ್ಯಾಮೆರಾ ಕಂಡರೆ ಕೆರಳುತ್ತಾರೆ. ‘ನಿಮ್ಮ ಬಗ್ಗೆ ಬರೆಯುತ್ತೀವಿ’ ಎಂದು ಹೇಳಿಕೊಂಡು ಬಂದವರ ಮೇಲೆ ಉರಿದುಬೀಳುತ್ತಾರೆ.
 

ಅರಣ್ಯ ಇಲಾಖೆಯ ನಿಯಮಗಳು ಕಾಡನ್ನು ನಾಶ ಮಾಡಿದ ರೀತಿಯಲ್ಲೇ ಕಾಡುಪ್ರಾಣಿಗಳನ್ನೂ ವ್ಯವಸ್ಥಿತವಾಗಿ ನಾಶ ಮಾಡುತ್ತ ಬಂದಿವೆ. ಈಗ ಹುಸಿ ಪ್ರಾಣಿದಯಾವಾದಿಗಳೂ ಸೇರಿಕೊಂಡು ಕಾಡು ಮತ್ತು ಅದರಲ್ಲಿರುವ ಪ್ರಾಣಿಗಳು ದಿನದಿಂದ ದಿನಕ್ಕೆ ಕಡಿಮೆಯಾಗುತ್ತ ಸಾಗಿವೆ. ಇಂಥವರ ನಡುವೆ ಮಂಗಳಾಪುರದ ಕರಡಿಯವರೂ ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಿದ್ದಾರೆ. ಕಾಡು ಮತ್ತು ನಾಡುಗಳೆರಡರಿಂದಲೂ ದೂರವಾಗಿ ಕರಡಿಗಳ ಸಂಖ್ಯೆ ಕುಸಿಯುತ್ತಿದೆ. 

ನಮ್ಮ ಮೃಗಾಲಯಗಳನ್ನು ನೋಡಿದರೆ ಸಾಕು. ಕಾಡಲ್ಲಿ ನೆಮ್ಮದಿಯಾಗಿರುವ ಪ್ರಾಣಿಪಕ್ಷಿಗಳನ್ನು ಸಾಯಿಸಲಿಕ್ಕೆಂದೇ ಸರ್ಕಾರ ದುಡ್ಡು ಖರ್ಚು ಮಾಡಿ ಇವನ್ನು ಸೃಷ್ಟಿಸಿದೆಯೇನೋ ಅನ್ನಿಸುತ್ತದೆ. ಆದರೆ ಮಂಗಳಾಪುರದ ಕರಡಿಯವರು ಸರ್ಕಾರ ಮಾಡಬೇಕಾದ ಕೆಲಸವನ್ನು ತಲತಲಾಂತರದಿಂದ ಮಾಡುತ್ತ ಬಂದ್ದಿದಾರೆ. ಇವರು ಕರಡಿಗಳನ್ನು ಅರಣ್ಯದಿಂದ ಹಿಡಿತರುವುದಿಲ್ಲ. ಬದಲಾಗಿ, ಈಗಾಗಲೇ ತಮ್ಮಲ್ಲಿರುವ ಕಡಿಗಳಿಂದಲೇ ಮರಿ ಮಾಡಿಸಿ ಸಾಕುತ್ತಾ ಬಂದಿದ್ದಾರೆ. ಅವುಗಳ ಆರೈಕೆಯನ್ನು ಜತನದಿಂದ ನಿಭಾಯಿಸುತ್ತಿದ್ದಾರೆ. ಊರೂರು ಸುತ್ತಿ ಕರಡಿಗಳನ್ನು ಪ್ರದರ್ಶಿಸುವ ಮೂಲಕ ಮೃಗಾಲಯ ಕಾಣದ ಲಕ್ಷಾಂತರ ಬಡ ಮಕ್ಕಳ ಪಾಲಿಗೆ ಜೀವಂತ ಮೃಗಾಲಯ ಆಗಿದ್ದಾರೆ. ಇದಕ್ಕಾಗಿ ಅವರು ಯಾವುದೇ ವೇತನ, ಭತ್ಯೆ, ಪ್ರಮೋಶನನ್ನನ್ನೂ ಕೇಳುವುದಿಲ್ಲ. ಜನರು ಎಸೆಯುವ ಚಿಲ್ಲರೆಯ ಕೆಲ ಪೈಸೆಗಳೇ ಸಾಕು.
 

ಇಲ್ಲಿರುವ ಫೋಟೊಗಳು ಅಳಿಯುತ್ತಿರುವ ಪರಂಪರೆಗೆ ಒಂದು ಸಣ್ಣ ಸಾಕ್ಷಿ ಮಾತ್ರ.

***
 

ಅಷ್ಟೊತ್ತಿಗೆ ರಾಜೇಸಾಬ್‌ ಕೋಪ ಇಳಿದಿತ್ತು. ನಮ್ಮದು ಪ್ರಾಮಾಣಿಕ ಉದ್ದೇಶ ಎಂಬುದು ಮನದಟ್ಟಾಗಿತ್ತು. ಮಾಹಿತಿ ಹಂಚಿಕೊಂಡ ನಂತರ, ‘ಮರಿಗಳ ಫೋಟೊ ಮಾತ್ರ ತೆಗಿಬ್ಯಾಡ್ರಿ ಸಾಹೇಬ್ರ. ಅವು ಸೊರಗ್ತಾವು...’ ಎಂದ. ‘ಆಗಲಿ’ ಎಂದೆವು. ಹೊರಡುವ ಮುನ್ನ, ಜೀವಂತ ಟೆಡ್ಡಿಬೇರ್‌ಗಳಂತೆ ತಾಯಿಯ ಮೈಮೇಲೆ ಓಡಾಡುತ್ತ ಆ ಮರಿಗಳು ಆಡುತ್ತಿದ್ದುದನ್ನು ಕಣ್ಣ ತುಂಬ ತುಂಬಿಕೊಂಡು ವಾಹನ ಏರಿದೆವು.

ಊರು ದಾಟಿ ಬಂದಾಗ, ರಾಜೇಸಾಬ್ ಕೇಳಿದ್ದ ಪ್ರಶ್ನೆಯೊಂದು ಮತ್ತೆ ಪ್ರತಿಧ್ವನಿಸಿದಂತಾಯಿತು: ‘ಸಾಹೇಬ್ರ, ಕರಡಿ ಸತ್ರ ನಮ್ಮ ಮಕ್ಕಳು ಸತ್ತಾಂಗ. ಮಕ್ಳನ್ನ ಮಣ್ಣ ಮಾಡಿದಂಗ ಅವುನ್ನ ಮಣ್ಣ ಮಾಡ್ತೀವಿ. ಅವುಕ ನಾವ್ಯಾಕ ಹಿಂಸೆ ಕೊಡಾನ ಹೇಳ್ರಿ...?’ನನ್ನಲ್ಲಿ ಉತ್ತರವಿದ್ದಿಲ್ಲ. ಬಹುಶಃ ಅರಣ್ಯ ಇಲಾಖೆಯವರಲ್ಲಿಯೂ ಉತ್ತರ ಇದ್ದಿರಲಿಕ್ಕಿಲ್ಲ!


- ಚಾಮರಾಜ ಸವಡಿ
(ಪ್ರಜಾವಾಣಿಯ ಕರ್ನಾಟಕ ದರ್ಶನ ಪುರವಣಿಯಲ್ಲಿ ಪ್ರಕಟಿತ)

6 comments:

ಲೋದ್ಯಾಶಿ said...

ಸಾರ್,

"ದುರ್ಬಲರಿಗಷ್ಟೇ ಅದರ ಕಾನೂನುಗಳು ಅನ್ವಯ" -
ಇದು ಮೇಲ್ನೋಟಕ್ಕೆ ಖಂಡಿತ ಸತ್ಯ. ಆದ್ರೆ ಇಂತಹ ಕಾನೂನು ಹೇರೋ ಅಧಿಕಾರಿಗಳು ಸಹ ಒಂದು ರೀತಿ ದುರ್ಬಲರೇ ಅನ್ನೋದು ಇನ್ನೊಂದು ಸತ್ಯ. ಅಲ್ವೇ? ಒಟ್ಟಲ್ಲಿ ಸಮಸ್ಯೆನ ಬೇರಿಂದ ಕಿತ್ತು ಎಸಿ ಬೇಕು ಅಂದ್ರೆ, ಅದು ಅಸಾದ್ಯ ಅನ್ಸುತ್ತೆ.

"ಅವುಕ ನಾವ್ಯಾಕ ಹಿಂಸೆ ಕೊಡಾನ ಹೇಳ್ರಿ...?" -
ಈ ಪ್ರಶ್ನೇಲಿ ಈ ಜನರಲ್ಲಿರೋ ಪ್ರಾಮಾಣಿಕತೆ ಎದ್ದು ಕಾಣುತ್ತೆ. ಈ ಪ್ರಾಮಾಣಿಕತೆಯಿಂದ ಸಿಗೋ ನೆಮ್ಮದಿ ಆ ಆಧಿಕಾರಿಗಳ ಮನೇಲಿ ಇರೋಲ್ಲ ಅನ್ಸುತ್ತೆ.

ಆದ್ರೆ ಅವ್ರನ್ನ ಅವ್ರ ಪಾಡಿಗೆ ಬದ್ಕೊಕೆ ಬಿಡದೇ ಹೋದ್ರೆ ಪಾಪ ಅವ್ರ ಮುಂದಿನ ಜೀವ್ನ ಹೇಗೆ ಅಲ್ವ? ಹೋಗ್ಲಿ ಬಿಡಿ ಯಾವ್ದೂ ಶಾಶ್ವತ ಅಲ್ಲ. ಈಗ ನಮ್ಮ ಉತ್ತರ ಕರ್ನಾಟಕದ ಜನ, ತಮ್ಮ ಜೀವ ಮಾನದಲ್ಲಿ ಶ್ರಮ ಪಟ್ಟದ್ದ ಒಂದೇ ರಾತ್ರಿಲಿ ಮಳೆ ಬಂದು ನಗೊಂಡೋಯ್ತಲ್ವಾ? ಇದೂ ಕೂಡ ಒಂದ್ ರೀತಿಲಿ "ದುರ್ಬಲರಿಗಷ್ಟೇ ಅದರ ಕಾನೂನುಗಳು ಅನ್ವಯ".

ಚಕೋರ said...

ಎಂದಿನಂತೆ ಚಂದದ ಬರಹ. ಪ್ರಜಾವಾಣಿಯಲ್ಲಿ ಓದಿದ್ದಿಲ್ಲ. ಬ್ಲಾಗಿಗೆ ಹಾಕಿದ್ದು ಒಳ್ಳೆಯದಾಯಿತು.

Chamaraj Savadi said...

ಕಾನೂನು ಬೇರೆ, ನ್ಯಾಯ ಬೇರೆ ಲೋಹಿತ್‌. ಕಾಡುಪ್ರಾಣಿಗಳನ್ನು ಸಾಕುವುದನ್ನು ಕಾನೂನು ವಿರೋಧಿಸುತ್ತದೆ. ಆದರೆ, ಅನ್ನ ಗಳಿಸುವ ಉದ್ಯಮವಾಗಿ ಅದು ನ್ಯಾಯಬದ್ಧ. ಕೋಳಿ, ಕುರಿಗಳನ್ನು ಕೊಂದು ತಿಂದರೆ ತಪ್ಪಿಲ್ಲ; ಮಠಮಾನ್ಯಗಳಲ್ಲಿ ಆನೆ, ಕುದುರೆ, ಜಿಂಕೆಗಳನ್ನು ಹಿಂಸಿಸಿದರೆ ತಪ್ಪಿಲ್ಲ; ಆದರೆ, ತಲತಲಾಂತರದಿಂದ ಇದನ್ನೇ ವೃತ್ತಿಯನ್ನಾಗಿ ಮಾಡಿಕೊಂಡು ಬಂದಿರುವ ಕರಡಿ ಸಾಕುವವರ ತಪ್ಪೇನಿದೆ? ಅವರಿಗೆ ಅನ್ವಯವಾಗುವ ಕಾನೂನು ಮಠಮಾನ್ಯಗಳಲ್ಲಿರುವ ಪ್ರಾಣಿಗಳಿಗೆ ಏಕೆ ಅನ್ವಯವಾಗುವುದಿಲ್ಲ? ನನ್ನ ಬರಹದಲ್ಲಿ ನಾನು ವಿರೋಧಿಸಿರುವುದು ಇಂಥ ಭೇದಭಾವವನ್ನು.

Chamaraj Savadi said...

ಥ್ಯಾಂಕ್ಸ್‌ ಚಕೋರ. ಪ್ರಜಾವಾಣಿಯ ಕರ್ನಾಟಕ ದರ್ಶನದ ಮುಖಪುಟ ಬರಹವಾಗಿ ಇದು ಅಚ್ಚಾಗಿದ್ದು ೨೦೦೪ರಲ್ಲಿ. ಫೊಟೊಗಳು ಮತ್ತು ಪ್ರಕಟಿತ ಪತ್ರಿಕೆ ಎಲ್ಲೋ ಡಬ್ಬದಲ್ಲಿ ವಿಶ್ರಮಿಸುತ್ತಿವೆ. ಸಿಕ್ಕರೆ, ಫೊಟೊಗಳನ್ನು ಸೇರಿಸುತ್ತೇನೆ.

ಲೋದ್ಯಾಶಿ said...

ಸಾರ್,
ನಿಮ್ಮ ಕಾಳಜಿಗೆ ನನ್ನ ಸಹಮತ ಇದೆ. ಆದ್ರೆ ಈ ಪ್ರಕಟಣೆಯನ್ನ ಅಲ್ಲಿನ ಸಂಬಂದಿಸಿದ ಅಧಿಕಾರಿಗಳು ಒಮ್ಮೆ ಓದಿ ಎಚ್ಚೆತ್ತು ಕೊಂಡ್ರೆ, ಬರಹಗಾರರಿಗೆ ಅದೇ ನಿಜ್ವಾದ ಪ್ರಶಸ್ತಿ .

shivu said...

ಸಾವಡಿ ಸರ್,

ಈ ಲೇಖನವನ್ನು ನಾನಾಗ ಓದಿದ ನೆನಪು. ತುಂಬಾ ಚೆನ್ನಾದ ಲೇಖನ. ಅಲ್ಲಿನ ಕರಡಿಯನ್ನು ತಮ್ಮ ಮಗುವಿನಂತೆ ಪಳಗಿಸುವ ವಿಧಾನ ನಿಜಕ್ಕೂ ಅಚ್ಚರಿಯೇ ಸರಿ..
ಅಲ್ಲಿನ ಜನರ ವಾತಾವರಣ, ಸಂಷ್ಕೃತಿ, ಇತ್ಯಾದಿಗಳನ್ನು ಚೆನ್ನಾಗಿ ಪ್ರತಿಬಿಂಬಿಸಿದ್ದೀರಿ..ಒಂದಾದರೂ ಫೋಟೊ ಇದ್ದರೆ ಚೆನ್ನಾಗಿತ್ತು.