ಒಳಗಡಲು ಉಕ್ಕಿದಾಗೆಲ್ಲ ಆ ದಿವ್ಯ ನೆನಪು

29 Apr 2012

2 ಪ್ರತಿಕ್ರಿಯೆ
ಇನ್ನು ಆಡಲು ಮಾತುಗಳಿಲ್ಲ ಅಂತಾದಾಗ, ಅಷ್ಟು ದೂರ ನಂಜೊತೆ ಬರ್ತೀಯಾ? ಅಂತ ಕೇಳಿದೆ.

ಧ್ವನಿಯಲ್ಲಿ ದೈನ್ಯತೆಯಿತ್ತು. ಇನ್ನಿದು ಮುಗಿಯಿತು ಎಂದಾಗ, ಇನ್ನೆಂದೂ ಇದು ಕೊನರುವುದಿಲ್ಲ ಎಂಬುದು ಗಟ್ಟಿಯಾದಾಗ, ಉಳಿಯುವ ಕೊನೆಯ ಭಾವವದು.

ಆಕೆಗೆ ಏನನ್ನಿಸಿತೋ, ಸುಮ್ಮನೇ ಎದ್ದಳು.

ನಾವು ಮೌನವಾಗಿ ಹೊರಟೆವು. ನಂಗೆ ಗೊತ್ತಿತ್ತು, ಇದು ನಾವು ಜೊತೆಯಾಗಿ ಇಡುತ್ತಿರುವ ಕೊನೆಯ ಹೆಜ್ಜೆ ಎಂದು.

ಆಕೆ ತಲೆ ತಗ್ಗಿಸಿಕೊಂಡು, ಕೈಗಳನ್ನು ಕಟ್ಟಿಕೊಂಡು, ಮೌನವಾಗಿ ಹೆಜ್ಜೆ ಹಾಕುತ್ತಿದ್ದಳು.

ಅಷ್ಟು ದೂರದಲ್ಲಿ ರಸ್ತೆ ಹೊರಳಿಕೊಂಡಿತ್ತು. ಜೋರು ಹೆಜ್ಜೆಯಿಟ್ಟರೆ ಎರಡು ನಿಮಿಷದ ದಾರಿ.

ಅಲ್ಲಿಗೆ ತಲುಪಿದರೆ, ಹಿಂದಿರುಗಬೇಕಾಗುತ್ತೆ.

ಆಗ, ಆಕೆ ಹೋಗಿಬಿಡುತ್ತಾಳೆ, ಒಂದೂ ಮಾತಾಡದೇ.

ನಾನೂ ಮೌನವಾಗಿ ಹೆಜ್ಜೆ ಹಾಕುತ್ತಿದ್ದೆ. ಸಾಗರವೊಂದು ಎದೆಯೊಳಗೆ ಭೋರ್ಗರೆದು ಅಪ್ಪಳಿಸುವ ಶಬ್ದ ಇಷ್ಟು ಹತ್ತಿರದಲ್ಲಿದ್ದೂ ದೂರವಿರುವ ಆಕೆಗೆ ಕೇಳಿಸಿತಾದರೂ ಹೇಗೆ?

ನಾನು ಹೆಜ್ಜೆಗಳನ್ನು ಎಣಿಸುತ್ತಿದ್ದೆನಾ? ಇನ್ನೇನು ಆ ತಿರುವು ಬಂದೇಬಿಟ್ಟಿತು ಎಂದು ಅಳುಕುತ್ತಿದ್ದೆನಾ?

ಒಂದೂ ತಿಳಿಯಲಿಲ್ಲ. ಸಾವಿನೆಡೆಗೆ ಹೊರಟವನಂತೆ, ಬದುಕಿನ ಕೊನೆಯ ಹೆಜ್ಜೆಗಳಿವು ಎಂಬಂತೆ ನಡೆಯುತ್ತಿದ್ದೆ.

ಮಾತಾಡಬಾರದೆಂಬಂತೆ ಆಕೆ ಗಂಭೀರಳಾಗಿದ್ದಳು. ಏನು ಮಾತಾಡುವುದಿನ್ನು ಎಂದು ನಾನು ಮೌನವಾಗಿದ್ದೆ.

ಒಳಗೆ ಮೇರೆಯುಕ್ಕುವ ಅಳಲ ಕಡಲು.

ತಿರುವು ಹತ್ತಿರವಾಗುತ್ತಿತ್ತು.

ಏಕೋ ನನ್ನ ಹೆಜ್ಜೆಗಳು ಸೋಲುತ್ತಿದ್ದವು. ಇನ್ನು ಕೆಲ ಹೆಜ್ಜೆಗಳನ್ನಿಟ್ಟರೆ, ತಿರುವು ಬಂದುಬಿಡುತ್ತಿತ್ತು.

ಥಟ್ಟನೇ ನಿಂತೆ. ಆಕೆಯೂ ನಿಂತಳು. ಅವಳ ಮುಖದಲ್ಲಿ ಪ್ರಶ್ನೆ.

‘ಥ್ಯಾಂಕ್ಸ್‌ ಜೊತೆಗೆ ಬಂದಿದ್ದಕ್ಕೆ’ ಎಂದೆ.

ಆಕೆಯ ಮುಖದಲ್ಲಿ ಅದೇ ಪ್ರಶ್ನೆ.

’ಆ ತಿರುವು ಮುಟ್ಟಲು ಕೆಲ ಹೆಜ್ಜೆಗಳೇ ಸಾಕು. ಅವನ್ನೂ ಕ್ರಮಿಸಿಬಿಟ್ಟರೆ ಜೀವನದುದ್ದಕ್ಕೂ ನನಗೆ ಮತ್ತೆ ನಿನ್ನ ಜೊತೆ ಸಿಗಲ್ಲ. ಈ ಸವಿ ನೆನಪಲ್ಲಿ, ನಾನು ಹೀಗೇ, ಆ ತಿರುವನ್ನೇ ಧೇನಿಸುತ್ತ ಇದ್ದುಬಿಡುತ್ತೇನೆ. ಇನ್ನು ಕೆಲ ಹೆಜ್ಜೆಗಳನ್ನಿಟ್ಟಿದ್ದರೆ... ಎಂಬ ದಿವ್ಯ ಊಹೆಯಲ್ಲಿ ಬದುಕನ್ನು ಸಾಗಿಸುತ್ತೇನೆ. ಕೊನೆಯಾಗುವ ಈ ಹಂತದಲ್ಲಿ, ಈ ಸವಿ ನೆನಪಾದರೂ ಜೊತೆಗಿರಲಿ ಬಿಡು...’

ಎಷ್ಟೋ ಹೊತ್ತು ಆಕೆ ಸುಮ್ಮನೇ ನಿಂತಿದ್ದಳು. ನಂತರ ನಿಧಾನವಾಗಿ, ಬಲು ನಿಧಾನವಾಗಿ, ಕಾಲೆಳೆಯುತ್ತ, ಬಂದ ದಾರಿಯತ್ತ ತಿರುಗಿ ಹೊರಟಳು.

ನಾನು ಮಾತ್ರ ಅಲ್ಲಿಯೇ ನಿಂತಿದ್ದೆ, ಅದೇ ಕೊನೆಯ ಗಮ್ಯ ಎಂಬಂತೆ.

*****

ಒಡಲೊಳಗಿನ ಅಳಲ ಕಡಲು ಭೋರ್ಗರೆದಾಗೆಲ್ಲ, ಮತ್ತೆ ಆ ತಿರುವಿನತ್ತ ಹೋಗುತ್ತೇನೆ.

ಜೊತೆಯಾಗಿ ನಡೆದ ನೆನಪು ಅಲ್ಲೆಲ್ಲ.

ಕೆಲ ಹೊತ್ತು ಅಲ್ಲಿ ಕೂಡುತ್ತೇನೆ, ಒಬ್ಬನೇ, ಸುಮ್ಮನೇ. ಅದು ದಿವ್ಯ ಮೌನಾನುಸಂಧಾನ.

ಒಳಗಡಲು ಶಾಂತವಾದಾಗ ಮೌನವಾಗಿ ಎದ್ದು ಬರುತ್ತೇನೆ.

ಅವಳಿಲ್ಲದ ಬದುಕೀಗ, ಅವಳ ನೆನಪಿನಲ್ಲಿ ಸಾಗುತ್ತಿದೆ ಹೀಗೇ.

*****

ಥ್ಯಾಂಕ್ಸ್‌ ಕಣೇ, ನೆಮ್ಮದಿಯ ಗಮ್ಯವೊಂದನ್ನು ಕೊಟ್ಟುಹೋಗಿದ್ದಕ್ಕೆ!

- ಚಾಮರಾಜ ಸವಡಿ

ಗುರುವಾದ ಮಗಳಿಗೆ ಈಗ ಹತ್ತು ವರ್ಷ

20 Apr 2012

14 ಪ್ರತಿಕ್ರಿಯೆ
ಮನೆ ಎದುರಿನ ರಸ್ತೆಯಲ್ಲಿ ಮಕ್ಕಳ ಗುಂಪು, ಗದ್ದಲ. ಈಗ ತಾನೇ ನಡೆಯಲು ಕಲಿತ ಮಗುವಿನಿಂದ ಹಿಡಿದು ಹೈಸ್ಕೂಲು ಮೆಟ್ಟಿಲು ಹತ್ತಲಿರುವ ವಯಸ್ಸಿನವರೆಗಿನ ಮಕ್ಕಳು ಅಲ್ಲಿದ್ದಾರೆ. ಅವರು ಆಡಿದ್ದೇ ಆಟ. ಹಾಕಿದ್ದೇ ನಿಯಮ. ಪರೀಕ್ಷೆ ಮುಗಿದ ಸಂತಸದಲ್ಲಿ ಕೂಗಾಡುತ್ತ ಆಡುತ್ತಿದ್ದಾರೆ.
 

ಅವರ ಗುಂಪಿನಿಂದ ದೂರ, ಮನೆ ಎದುರಿಗೆ ಹಾಸಿದ ಪುಟ್ಟ ಕಟ್ಟೆಯಂತಿರುವ ಜಾಗದಲ್ಲಿ ಆಯಾ ಮನೆಗಳ ತಾಯಂದಿರು, ಅಜ್ಜಿಯರು ಕೂತಿದ್ದಾರೆ. ಅವರ ಮಧ್ಯೆ ಮಗುವೊಂದು ಕೂತಿದೆ. ಅದಕ್ಕೆ ಆಡುವ ಮಕ್ಕಳ ಕೇಕೆಯ ಕಡೆ ಗಮನವಿಲ್ಲ. ಅದರ ಲೋಕವೇ ಬೇರೆ.
 

ಆಕೆ ಗೌರಿ.
 

ಹತ್ತು ವರ್ಷಗಳ ಹಿಂದೆ, ಇದೇ ದಿನ (ಏಪ್ರಿಲ್ ೧೯) ಗೌರಿ ಜನಿಸಿದಾಗ ನಾನು ಕೊಪ್ಪಳದಲ್ಲಿದ್ದೆ. ಬದುಕು ಕಟ್ಟಿಕೊಳ್ಳುವ ಹೆಣಗಾಟದ ದಿನಗಳವು. ಅನಿವಾರ್ಯವಾಗಿ ಶುರು ಮಾಡಿದ್ದ ವಾರಪತ್ರಿಕೆಯೊಂದಕ್ಕೆ ಬರೆಯುತ್ತ ಕೂತವನನ್ನು ಫೋನ್ ಮಾಡಿ ಕರೆಸಿದ್ದರು ಮಾವ. ನೀವು ಬಿಜಿ ಇರ್ತೀರಂತ ಹೇಳಿರಲಿಲ್ಲ. ರೇಖಾಳನ್ನು ನಿನ್ನೆ ರಾತ್ರಿಯೇ ಆಸ್ಪತ್ರೆಗೆ ಸೇರಿಸಿದ್ವಿ. ಬೇಗ ಬನ್ನಿ ಎಂದಿದ್ದರು.
 

ರಾತ್ರಿಯಿಡೀ ನಿದ್ದೆಗೆಟ್ಟವನು ಹಾಗೇ ಪೆನ್ನು ಮುಚ್ಚಿಟ್ಟು ಅವಸರದಲ್ಲಿ ಆಸ್ಪತ್ರೆಗೆ ಬಂದಿದ್ದೆ. ನನ್ನನ್ನೇ ಕಾಯುತ್ತಿದ್ದ ಡಾಕ್ಟರ್, ಸಿಸೇರಿಯನ್ ಆಗ್ಬೇಕು, ನೀವಿಲ್ಲಿ ಸೈನ್ ಮಾಡಿ ಎಂದು ಮುಂದೆ ಹಿಡಿದ ಹಾಳೆಯಲ್ಲಿ ಸಹಿ ಮಾಡಿ ಅರ್ಧ ಗಂಟೆ ಸುಮ್ಮನೇ ಕೂತಿದ್ದೆ. ವರ್ಷದ ಹಿಂದೆ ಡಿಗ್ರಿ ಕೊನೆಯ ವರ್ಷದ ಪರೀಕ್ಷೆ ಬರೆದು, ರಜೆಯಲ್ಲಿ ಮದುವೆಯಾಗಿದ್ದ ರೇಖಾ ಒಳಗೆ ಲೇಬರ್ ರೂಮಿನಲ್ಲಿ ತಾಯಾಗಲಿದ್ದಳು.
 

ಏನಿದ್ದವು ನನ್ನ ಭಾವನೆಗಳಾಗ?
 

ಇದ್ದ ಇಬ್ಬರೇ ಬಲು ಸಾಧಾರಣ ಜೀವನ ಸಾಗಿಸಲೂ ಕಷ್ಟಪಡಬೇಕಿತ್ತು. ಈಗ ನಮ್ಮ ಮಧ್ಯೆ ಇನ್ನೊಂದು ಜೀವ ಬರಲಿದೆ. ಅದಕ್ಕಾಗಿ ಹರ್ಷ ಪಡಬೇಕೋ, ಚಿಂತೆ ಮಾಡಬೇಕೋ ಎಂಬ ಗೊಂದಲ.
 

ಸುಮ್ಮನೇ ಕೂತವನೆದುರು ಬಂದು ನರ್ಸ್ ಹೇಳಿದ್ದಳು: ಹೆಣ್ಣುಮಗು!
 

ಗೌರಿ ಹುಟ್ಟಿದ್ದು ಹಾಗೆ.
 

*****
 

ಬಲು ಕೆಂಪಗಿತ್ತು ಮಗು. ಆಕೆಯನ್ನು ಮೊದಲ ಬಾರಿ ನೋಡಿದಾಗಿನ ಕ್ಷಣಗಳು ಇವತ್ತಿಗೂ ನೆನಪಿನಲ್ಲಿ ಹಚ್ಚಹಸಿರು. ಹೆರಿಗೆ ನೋವು, ಸಿಸೇರಿಯನ್ ರಗಳೆಯಲ್ಲಿ ಬಾಡಿದಂತಿದ್ದ ರೇಖಾಳ ಮೊಗದಲ್ಲಿ ಬೆಳದಿಂಗಳು. ಪಕ್ಕದಲ್ಲೇ ಮಲಗಿತ್ತು ಪುಟ್ಟ ಗೌರಿ- ಕೆಂಪಗೆ, ದಪ್ಪಗೆ, ಮುಷ್ಠಿ ಬಿಗಿದುಕೊಂಡು.
 

ಆ ಕ್ಷಣದಲ್ಲಿ, ಈಕೆ ಮುಂದೆ ನನಗೆ ಗುರುವಾಗುತ್ತಾಳೆಂದು ಖಂಡಿತ ಅಂದುಕೊಂಡಿರಲಿಲ್ಲ.
 

*****
 

ಮೂರು ತಿಂಗಳಾದರೂ ಗೌರಿಯ ಕತ್ತು ಸ್ಥಿರವಾಗಲಿಲ್ಲ. ದೃಷ್ಟಿ ಎತ್ತಲೋ. ಮಗು ಗೆಲುವಾಗಿತ್ತು. ಊಟ, ನಿದ್ದೆ, ತನ್ನ ಪಾಡಿಗೆ ತಾನು ಆಟವಾಡುವುದು ಎಲ್ಲಾ ಇದ್ದರೂ, ಸುತ್ತಲಿನ ಜಗತ್ತಿನೊಂದಿಗೆ ಸಂಬಂಧ ಇಲ್ಲದಂತಿತ್ತು. ತೊಟ್ಟಿಲ ಮೇಲೆ ಬಾಗಿ, ಲಟಿಕೆ ಹೊಡೆದು, ಗಿಲಿಗಿಲಿ ಆಡಿಸಿದರೂ ನಮ್ಮತ್ತ ದೃಷ್ಟಿ ಕೊಟ್ಟು ನೋಡುತ್ತಿರಲಿಲ್ಲ. ಶಬ್ದಕ್ಕೆ ಮುಖವರಳಿಸುತ್ತಿದ್ದುದನ್ನು ಬಿಟ್ಟರೆ, ಬಾಹ್ಯ ಜಗತ್ತಿಗೆ ಪ್ರತಿಕ್ರಿಯಿಸುತ್ತಿರಲಿಲ್ಲ.
 

‘ಕೆಲ ಮಕ್ಕಳು ಹಾಗೇ. ಅದರಲ್ಲೂ ಮೊದಲ ಮಗು ಕೊಂಚ ನಿಧಾನ’ ಅಂದರು ಹಿರಿಯರು.
 

ಆರು ತಿಂಗಳುಗಳಾದವು. ಕತ್ತು ಕೊಂಚ ಸ್ಥಿರವಾಗಿದ್ದರೂ, ಉಳಿದೆಲ್ಲ ವಿಷಯಗಳಲ್ಲಿ ಅದಿನ್ನೂ ಹಸುಗೂಸೇ.
 

‘ಕೆಲ ಮಕ್ಕಳು ಹಾಗೇ. ನಿಧಾನವಾಗಿ ಪ್ರತಿಕ್ರಿಯಿಸುತ್ತವೆ’ ಅಂದರು ಕೊಪ್ಪಳದ ಮಕ್ಕಳ ಡಾಕ್ಟರು.
 

ಎಂಟು ತಿಂಗಳಾದರೂ ಗೌರಿ ಅದೇ ಸ್ಥಿತಿಯಲ್ಲಿ ಉಳಿದಾಗ ಪಕ್ಕದ ಹೊಸಪೇಟೆಗೆ ಹೋಗಿ ಬೇರೊಬ್ಬ ಮಕ್ಕಳ ತಜ್ಞರಿಗೆ ತೋರಿಸಿದೆವು. ಕೆಲ ಪರೀಕ್ಷೆಗಳನ್ನು ಮಾಡಿ, ಗೌರಿಯ ತಲೆಯ ಗಾತ್ರವನ್ನು ಟೇಪ್‌ನಲ್ಲಿ ಅಳೆದ ಆ ವೈದ್ಯರು ಹೇಳಿದರು:
 

ಈಕೆಯ ಮೆದುಳಿನ ಬೆಳವಣಿಗೆ ಸಹಜವಾಗಿಲ್ಲ. ಬುದ್ಧಿಮಾಂದ್ಯತೆಯ ಲಕ್ಷಣಗಳು ಕಾಣಿಸ್ತಿವೆ. ನೀವೊಮ್ಮೆ ಸ್ಕ್ಯಾನ್ ಮಾಡಿಸೋದು ಉತ್ತಮ. ಹುಬ್ಬಳ್ಳಿ ಅಥವಾ ಬೆಂಗಳೂರಿಗೆ ಹೋಗಿ ಎಂದರು.
 

ಮಗುವನ್ನು ಕರೆದುಕೊಂಡು ಹತ್ತಿರದ ಒಣಗಿದ ಪಾರ್ಕ್‌ನಲ್ಲಿ ಮೌನವಾಗಿ ಕೂತೆವು. ರೇಖಾ ನಿರಂತರವಾಗಿ ಅಳುತ್ತಿದ್ದರೆ, ನಾನು ಒಳಗೊಳಗೇ ಅಳುತ್ತ ಮಂಕಾಗಿ ಕೂತಿದ್ದೆ. ಗೌರಿಯೊಬ್ಬಳೇ ತನ್ನ ಪಾಡಿಗೆ ತಾನು ನಗುತ್ತಿದ್ದಿದ್ದು.
 

*****
 

ಧಾರವಾಡದ ಮಕ್ಕಳ ವೈದ್ಯರು ಆಕೆಯ ಮೆದುಳಿನ ಬೆಳವಣಿಗೆ ಅಸಮರ್ಪಕವಾಗಿದ್ದನ್ನು ಸ್ಕ್ಯಾನಿಂಗ್ ಮಾಡಿ ತೋರಿಸಿದರು. ಅಲ್ಲಿಗೆ ಚಿತ್ರಣ ಸ್ಪಷ್ಟವಾಗಿತ್ತು.
 

ನಡೆಸುತ್ತಿದ್ದ ಪತ್ರಿಕೆ ಮುಚ್ಚಿ ರೇಖಾ ಮತ್ತು ಗೌರಿಯನ್ನು ಕರೆದುಕೊಂಡು ಬೆಂಗಳೂರಿಗೆ ಬಂದೆ. ಓ ಮನಸೇ ಪತ್ರಿಕೆಯಲ್ಲಿ ಕೆಲಸ ಮಾಡುತ್ತ ನಿಮ್ಹಾನ್ಸ್‌ನಲ್ಲಿ ಗೌರಿಯನ್ನು ತೋರಿಸಿದೆವು. ಅವರ ಚಿತ್ರಣ ಇನ್ನೂ ನಿಖರವಾಗಿತ್ತು. ಗೌರಿಯ ಮೆದುಳಿನ ಶೇ.೪೦ರಿಂದ ೪೫ ಭಾಗದಲ್ಲಿ ಚಟುವಟಿಕೆಯೇ ಇರಲಿಲ್ಲ.
 

‘ಸಾಮಾನ್ಯ ಮಗುವಿನೊಂದಿಗೆ ಮಾತಾಡುವಂತೆ ಆಕೆಯ ಜೊತೆ ಮಾತಾಡಿ. ಆಟ ಆಡಿಸಿ. ಫಿಸಿಯೋಥೆರಪಿ ಮಾಡಿಸಿ. ಆಕೆ ಸಾಮಾನ್ಯ ಸ್ಥಿತಿಗೆ ಬರುತ್ತಾಳೆಂದು ಹೇಳಲಾರೆವು. ಆದರೆ, ಆ ಸ್ಥಿತಿಗೆ ಹತ್ತಿರವಾಗಿಸಲು ಪ್ರಯತ್ನಿಸಿ. ಒಳ್ಳೆಯದಾಗಲಿ’ ಎಂದರು ನಿಮ್ಹಾನ್ಸ್‌ನ ಕರುಣಾಮಯಿ ವೈದ್ಯರು.
 

ಅವತ್ತು ಮತ್ತೆ ಅತ್ತಿದ್ದೆವು ಇಬ್ಬರೂ.
 

*****
 

ಈಕೆ ದೇವರಿಗೆ ಹರಕೆ ಹೊತ್ತಳು. ನಾನು ತಜ್ಞರ ಶೋಧದಲ್ಲಿ ತೊಡಗಿದೆ. ಭರವಸೆ ಹುಟ್ಟಿಸಿದ ಪ್ರತಿಯೊಬ್ಬ ವೈದ್ಯರಲ್ಲೂ ತೋರಿಸಿದೆವು. ಅವರ ಚಿಕಿತ್ಸಾ ವಿಧಾನಗಳನ್ನು ಅನುಸರಿಸಿದೆವು. ನಿಮ್ಹಾನ್ಸ್‌ನಲ್ಲೇ ಇದ್ದ ಆಯುರ್ವೇದ ವಿಭಾಗದಲ್ಲಿ ವಾರಪೂರ್ತಿ ಚಿಕಿತ್ಸೆ ಆಯಿತು. ಅವನ್ನೇ ಮನೆಯಲ್ಲೂ ಮಾಡುತ್ತ ಹೋದೆವು.
 

ಊಹೂಂ. ಅವ್ಯಾವೂ ತಕ್ಷಣದ ಭರವಸೆ ಮೂಡಿಸಲಿಲ್ಲ.
 

ಹೋಮಿಯೋಪತಿ ಚಿಕಿತ್ಸೆಯ ಬೆನ್ನು ಹಿಡಿದು ಹುಬ್ಬಳ್ಳಿ, ಪುಣೆ ಎಂದೆಲ್ಲಾ ಓಡಾಡಿದೆವು. ಯಾವುದೂ ಕೈ ಹಿಡಿಯಲಿಲ್ಲ.
 

ಅಷ್ಟೊತ್ತಿಗೆ ಪ್ರಜಾವಾಣಿ ಸೇರಿಕೊಂಡಿದ್ದ ನಾನು ಧಾರವಾಡಕ್ಕೆ ವರ್ಗ ಕೇಳಿ ಪಡೆದೆ. ಹೋದಲ್ಲೆಲ್ಲ ದೇವರು, ಶಾಸ್ತ್ರದವರು, ತಜ್ಞರು ಎಂದೆಲ್ಲಾ ಅಲೆದೆವು.
 

ಇವೆಲ್ಲ ಪ್ರಯೋಗಗಳು ಫಲ ನೀಡದೇ ಹೋದಾಗ ನಿಮ್ಹಾನ್ಸ್‌ನ ವೈದ್ಯರ ಮಾತು ನೆನಪಾದವು.
 

ಸಾಮಾನ್ಯ ಮಗುವಿನೊಂದಿಗೆ ಮಾತಾಡುವಂತೆ ಗೌರಿಯೊಂದಿಗೆ ಮಾತಾಡುವುದು ಶುರುವಾಯ್ತು. ಫಿಜಿಯೋಥೆರಪಿ ಪ್ರಾರಂಭಿಸಿದೆವು. ವಿಶೇಷ ಶಾಲೆಗೂ ಗೌರಿಯನ್ನು ಸೇರಿಸಿದೆವು. ಬದುಕು ನಿಧಾನವಾಗಿ ತಿರುಗಲು ಶುರುವಾಯ್ತು.
 

*****
 

ಗೌರಿ ಕೂಡಲು ಕಲಿತಿದ್ದು ಎರಡು ವರ್ಷಗಳ ನಂತರ. ಅಂಬೆಗಾಲಿಟ್ಟಿದ್ದು ನಾಲ್ಕು ವರ್ಷಗಳಿಗೆ. ತಡವರಿಸುತ್ತ ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟಿದ್ದು ಆರು ವರ್ಷಗಳ ನಂತರ.
 

ಇವತ್ತಿಗೂ ಆಕೆ ನಮ್ಮ ಕಣ್ಣನ್ನು ೨-೩ ಸೆಕೆಂಡ್‌ಗಳಿಗಿಂತ ಹೆಚ್ಚು ನೋಡುವುದಿಲ್ಲ. ಕೆಲವು ಶಬ್ದಗಳನ್ನು ಬಿಟ್ಟರೆ ಬೇರೆ ಶಬ್ದಗಳನ್ನು ಆಡಿಲ್ಲ. ಇವತ್ತಿಗೂ ನಡಿಗೆ ಅಸಹಜ. ತಂಗಿಯೊಂದಿಗೆ ಬೆರೆಯುವುದು ತೀರಾ ಕಡಿಮೆ.
 

ಆಟಿಸಂ ಮತ್ತು ಬುದ್ಧಿ ಮಾಂದ್ಯತೆಗಳೆರಡರ ಲಕ್ಷಣಗಳನ್ನೂ ಆಕೆಯಲ್ಲಿ ಗುರುತಿಸಿದ್ದಾರೆ ತಜ್ಞರು. ಈಗ ವಿಶೇಷ ಶಾಲೆಗೆ ಹೋಗುತ್ತಿದ್ದಾಳೆ. ಫಿಜಿಯೋಥೆರಪಿ, ಸ್ಪೀಚ್ ಥೆರಪಿ ಮುಂತಾದವೆಲ್ಲ ನಡೆದಿವೆ. ಈಗ ಆಕೆಗೆ ತಿಳಿವಳಿಕೆ ನಿಧಾನವಾಗಿ, ಬಲು ನಿಧಾನವಾಗಿ ಬೆಳೆಯುತ್ತಿದೆ. ಕೆಲವೊಂದು ಸರಳ ಮಾತುಗಳು ಅರ್ಥವಾಗುತ್ತವೆ. ಕೆಲವು ಸರಳ ಕೆಲಸಗಳನ್ನು ಮಾಡುತ್ತಾಳೆ. ಇವತ್ತಿಗೆ ಹತ್ತು ತುಂಬಿದ್ದರೂ ಗೌರಿ ನಮ್ಮ ಪಾಲಿಗೆ ಒಂದು ವರ್ಷದ ಮಗು.
 

*****
 

ಎಷ್ಟೋ ಸಾರಿ ಯೋಚಿಸುತ್ತೇನೆ: ಮಾತೇ ಆಡದ ಈಕೆ ನಮಗೆ ಎಷ್ಟೊಂದು ಕಲಿಸಿದಳಲ್ಲ ಎಂದು. ಆಕೆ ಬದುಕಿನ ರೀತಿ ನೀತಿಗಳ ಬಗ್ಗೆ ನನಗಿದ್ದ ಎಷ್ಟೊಂದು ಭ್ರಮೆಗಳನ್ನು ಹೋಗಲಾಡಿಸಿದಳು! ವಾಸ್ತವ ಪ್ರಪಂಚದ ಮಗ್ಗುಲಗಳನ್ನು ಪರಿಚಯಿಸಿದಳು. ನನಗೇ ಗೊತ್ತಿರದ ನನ್ನ ಮಿತಿ ಮತ್ತು ಸಾಮರ್ಥ್ಯವನ್ನು ತಿಳಿಸಿದಳು. ಕಿರಾಣಿ ಅಂಗಡಿಗೆ ಹೋಗಿ ರೇಶನ್ ತರಲು ಹಿಂಜರಿಯುತ್ತಿದ್ದ ರೇಖಾಳಿಗೆ ಇಡೀ ಬೆಂಗಳೂರನ್ನು ಕಾರಲ್ಲಿ ಸುತ್ತಿಬರುವಂತೆ ಮಾಡಿದಳು. ನಾನು ಕೆಲಸದ ಮೇಲೆ ಕೆಲಸಕ್ಕೆ ರಾಜೀನಾಮೆ ಬೀಸಾಡಿ ಬಂದು ಕೂತಾಗ, ಹೊಸ ಭರವಸೆ ಇನ್ನೂ ಇದೆ ಎಂಬುದನ್ನು ತೋರಿಸಿದಳು. ಮಂಕಾಗಿ ಕೂತವನಲ್ಲಿ ಹೊಸ ಕನಸು, ಸೋತ ಭಾವದ ಜಾಗದಲ್ಲಿ ಗೆಲುವಿನ ದಾರಿ ಮೂಡಿಸಿದಳು.
 

ಅವಳು ಮೂಡಿಸಿದ ಸ್ಫೂರ್ತಿಯಿಂದ ರೇಖಾ ಮತ್ತೆ ಸಂಗೀತ ಕಲಿಯಲು, ದಿನಾ ಜಿಮ್‌ಗೆ ಹೋಗಲು, ನಾನು ವೃತ್ತಿಯ ಹೊಸ ಸಾಧ್ಯತೆಗಳತ್ತ ಮುಖ ಮಾಡಲು ಸಾಧ್ಯವಾಯಿತು. ಗೌರಿಯಂಥ ಮಗುವನ್ನು ನಾವೇ ನೋಡಿಕೊಳ್ಳಬೇಕೆಂಬ ಅನಿವಾರ್ಯತೆ ನಮ್ಮನ್ನು ನಿತ್ಯ ಚುರುಕಾಗಿರಿಸಿದೆ. ನಿತ್ಯ ಗೆಲುವಾಗಿರಿಸಿದೆ. ಅಪರಿಚಿತರಲ್ಲಿ ಆತ್ಮೀಯರನ್ನು ಹುಟ್ಟುಹಾಕಿದೆ. ಸವಾಲಿನ ಜಾಗದಲ್ಲಿ ಅವಕಾಶ, ಸೋಲಿನ ಜಾಗದಲ್ಲಿ ಹೊಸ ಯತ್ನವನ್ನು ಮೂಡಿಸಿದೆ.
 

ಮಾತೇ ಆಡದ ಗೌರಿ ನಮಗೆ ಬದುಕಲು ಕಲಿಸಿದ್ದಾಳೆ. ಭರವಸೆ ಮೂಡಿಸಿದ್ದಾಳೆ. ನಿತ್ಯ ಹೊಸದೊಂದನ್ನು ಕಲಿಸುತ್ತ, ಹೊಸ ಭರವಸೆ ಮೂಡಿಸುತ್ತ, ತನ್ನ ಪಾಡಿಗೆ ತಾನು ನಗುತ್ತಲೇ ಇದ್ದಾಳೆ.
 

*****
 

ಥ್ಯಾಂಕ್ಸ್ ಗೌರಿ, ನೀನು ನಮ್ಮ ಮಗಳಾಗಿದ್ದಕ್ಕೆ. ನಮ್ಮ ಗುರುವಾಗಿದ್ದಕ್ಕೆ.
 

ಹ್ಯಾಪಿ ಬರ್ತ್‌ಡೇ ನಿನಗೆ.
 

- ಚಾಮರಾಜ ಸವಡಿ