ಇನ್ನು ಆಡಲು ಮಾತುಗಳಿಲ್ಲ ಅಂತಾದಾಗ, ಅಷ್ಟು ದೂರ ನಂಜೊತೆ ಬರ್ತೀಯಾ? ಅಂತ ಕೇಳಿದೆ.
ಧ್ವನಿಯಲ್ಲಿ ದೈನ್ಯತೆಯಿತ್ತು. ಇನ್ನಿದು ಮುಗಿಯಿತು ಎಂದಾಗ, ಇನ್ನೆಂದೂ ಇದು ಕೊನರುವುದಿಲ್ಲ ಎಂಬುದು ಗಟ್ಟಿಯಾದಾಗ, ಉಳಿಯುವ ಕೊನೆಯ ಭಾವವದು.
ಆಕೆಗೆ ಏನನ್ನಿಸಿತೋ, ಸುಮ್ಮನೇ ಎದ್ದಳು.
ನಾವು ಮೌನವಾಗಿ ಹೊರಟೆವು. ನಂಗೆ ಗೊತ್ತಿತ್ತು, ಇದು ನಾವು ಜೊತೆಯಾಗಿ ಇಡುತ್ತಿರುವ ಕೊನೆಯ ಹೆಜ್ಜೆ ಎಂದು.
ಆಕೆ ತಲೆ ತಗ್ಗಿಸಿಕೊಂಡು, ಕೈಗಳನ್ನು ಕಟ್ಟಿಕೊಂಡು, ಮೌನವಾಗಿ ಹೆಜ್ಜೆ ಹಾಕುತ್ತಿದ್ದಳು.
ಅಷ್ಟು ದೂರದಲ್ಲಿ ರಸ್ತೆ ಹೊರಳಿಕೊಂಡಿತ್ತು. ಜೋರು ಹೆಜ್ಜೆಯಿಟ್ಟರೆ ಎರಡು ನಿಮಿಷದ ದಾರಿ.
ಅಲ್ಲಿಗೆ ತಲುಪಿದರೆ, ಹಿಂದಿರುಗಬೇಕಾಗುತ್ತೆ.
ಆಗ, ಆಕೆ ಹೋಗಿಬಿಡುತ್ತಾಳೆ, ಒಂದೂ ಮಾತಾಡದೇ.
ನಾನೂ ಮೌನವಾಗಿ ಹೆಜ್ಜೆ ಹಾಕುತ್ತಿದ್ದೆ. ಸಾಗರವೊಂದು ಎದೆಯೊಳಗೆ ಭೋರ್ಗರೆದು ಅಪ್ಪಳಿಸುವ ಶಬ್ದ ಇಷ್ಟು ಹತ್ತಿರದಲ್ಲಿದ್ದೂ ದೂರವಿರುವ ಆಕೆಗೆ ಕೇಳಿಸಿತಾದರೂ ಹೇಗೆ?
ನಾನು ಹೆಜ್ಜೆಗಳನ್ನು ಎಣಿಸುತ್ತಿದ್ದೆನಾ? ಇನ್ನೇನು ಆ ತಿರುವು ಬಂದೇಬಿಟ್ಟಿತು ಎಂದು ಅಳುಕುತ್ತಿದ್ದೆನಾ?
ಒಂದೂ ತಿಳಿಯಲಿಲ್ಲ. ಸಾವಿನೆಡೆಗೆ ಹೊರಟವನಂತೆ, ಬದುಕಿನ ಕೊನೆಯ ಹೆಜ್ಜೆಗಳಿವು ಎಂಬಂತೆ ನಡೆಯುತ್ತಿದ್ದೆ.
ಮಾತಾಡಬಾರದೆಂಬಂತೆ ಆಕೆ ಗಂಭೀರಳಾಗಿದ್ದಳು. ಏನು ಮಾತಾಡುವುದಿನ್ನು ಎಂದು ನಾನು ಮೌನವಾಗಿದ್ದೆ.
ಒಳಗೆ ಮೇರೆಯುಕ್ಕುವ ಅಳಲ ಕಡಲು.
ತಿರುವು ಹತ್ತಿರವಾಗುತ್ತಿತ್ತು.
ಏಕೋ ನನ್ನ ಹೆಜ್ಜೆಗಳು ಸೋಲುತ್ತಿದ್ದವು. ಇನ್ನು ಕೆಲ ಹೆಜ್ಜೆಗಳನ್ನಿಟ್ಟರೆ, ತಿರುವು ಬಂದುಬಿಡುತ್ತಿತ್ತು.
ಥಟ್ಟನೇ ನಿಂತೆ. ಆಕೆಯೂ ನಿಂತಳು. ಅವಳ ಮುಖದಲ್ಲಿ ಪ್ರಶ್ನೆ.
‘ಥ್ಯಾಂಕ್ಸ್ ಜೊತೆಗೆ ಬಂದಿದ್ದಕ್ಕೆ’ ಎಂದೆ.
ಆಕೆಯ ಮುಖದಲ್ಲಿ ಅದೇ ಪ್ರಶ್ನೆ.
’ಆ ತಿರುವು ಮುಟ್ಟಲು ಕೆಲ ಹೆಜ್ಜೆಗಳೇ ಸಾಕು. ಅವನ್ನೂ ಕ್ರಮಿಸಿಬಿಟ್ಟರೆ ಜೀವನದುದ್ದಕ್ಕೂ ನನಗೆ ಮತ್ತೆ ನಿನ್ನ ಜೊತೆ ಸಿಗಲ್ಲ. ಈ ಸವಿ ನೆನಪಲ್ಲಿ, ನಾನು ಹೀಗೇ, ಆ ತಿರುವನ್ನೇ ಧೇನಿಸುತ್ತ ಇದ್ದುಬಿಡುತ್ತೇನೆ. ಇನ್ನು ಕೆಲ ಹೆಜ್ಜೆಗಳನ್ನಿಟ್ಟಿದ್ದರೆ... ಎಂಬ ದಿವ್ಯ ಊಹೆಯಲ್ಲಿ ಬದುಕನ್ನು ಸಾಗಿಸುತ್ತೇನೆ. ಕೊನೆಯಾಗುವ ಈ ಹಂತದಲ್ಲಿ, ಈ ಸವಿ ನೆನಪಾದರೂ ಜೊತೆಗಿರಲಿ ಬಿಡು...’
ಎಷ್ಟೋ ಹೊತ್ತು ಆಕೆ ಸುಮ್ಮನೇ ನಿಂತಿದ್ದಳು. ನಂತರ ನಿಧಾನವಾಗಿ, ಬಲು ನಿಧಾನವಾಗಿ, ಕಾಲೆಳೆಯುತ್ತ, ಬಂದ ದಾರಿಯತ್ತ ತಿರುಗಿ ಹೊರಟಳು.
ನಾನು ಮಾತ್ರ ಅಲ್ಲಿಯೇ ನಿಂತಿದ್ದೆ, ಅದೇ ಕೊನೆಯ ಗಮ್ಯ ಎಂಬಂತೆ.
*****
ಒಡಲೊಳಗಿನ ಅಳಲ ಕಡಲು ಭೋರ್ಗರೆದಾಗೆಲ್ಲ, ಮತ್ತೆ ಆ ತಿರುವಿನತ್ತ ಹೋಗುತ್ತೇನೆ.
ಜೊತೆಯಾಗಿ ನಡೆದ ನೆನಪು ಅಲ್ಲೆಲ್ಲ.
ಕೆಲ ಹೊತ್ತು ಅಲ್ಲಿ ಕೂಡುತ್ತೇನೆ, ಒಬ್ಬನೇ, ಸುಮ್ಮನೇ. ಅದು ದಿವ್ಯ ಮೌನಾನುಸಂಧಾನ.
ಒಳಗಡಲು ಶಾಂತವಾದಾಗ ಮೌನವಾಗಿ ಎದ್ದು ಬರುತ್ತೇನೆ.
ಅವಳಿಲ್ಲದ ಬದುಕೀಗ, ಅವಳ ನೆನಪಿನಲ್ಲಿ ಸಾಗುತ್ತಿದೆ ಹೀಗೇ.
*****
ಥ್ಯಾಂಕ್ಸ್ ಕಣೇ, ನೆಮ್ಮದಿಯ ಗಮ್ಯವೊಂದನ್ನು ಕೊಟ್ಟುಹೋಗಿದ್ದಕ್ಕೆ!
- ಚಾಮರಾಜ ಸವಡಿ
Subscribe to:
Post Comments (Atom)
2 comments:
ಸರ್ ನಮ್ಮ ಅಕ್ಕನ ಮಗಳೂ ಹೀಗೆಯೇ....12 ವರ್ಷ ತುಂಬಿದರೂ ಇನ್ನೂ ಕೂರಲೂ ಅವಳ ಕೈಲಿ ಆಗುತ್ತಿಲ್ಲ. ತವೆಯುವುದೂ ಸಾಧ್ಯವಿಲ್ಲ...ಇತ್ತೀಚೆಗೆ ಎರಡೂ ಕಾಲುಗಳು ಮಂಡಿಯ ಜಾಗದಲ್ಲಿ bend ಆಗುತ್ತಿವೆ...ಬುದ್ದಿ ಕೆಲವೊಂದರಲ್ಲಿ ತುಂಬಾ ಇದೆ. ಮತ್ತೆ ಕೆಲವು ಅರ್ಥವಾಗುವುದೇ ಇಲ್ಲ... ಮಲಗಿ ಮಲಗಿ ತಲೆಯಲ್ಲಿ ಬೆನ್ನಲ್ಲಿ ಹುಣ್ಣುಗಳು ಆಗುತ್ತಲೇ ಇವೆ...ಅಕ್ಕನಿಗಾಗಲಿ ಭಾವನಿಗಾಗಲಿ ಇವಳ ಮೇಲೆ ಅಷ್ಟು ಅಕ್ಕರೆ ಇಲ್ಲ. ಕಾರಣ ಇವಳ ಹಿಂದೆ ಹುಟ್ಟುರುವ ಬುದ್ದಿವಂತ ಗಂಡುಮಗು ! ಸದ್ಯ ನಮ್ಮ ಅಪ್ಪ, ಅಮ್ಮ, ನನ್ನ ಹೆಂಡತಿ ಈ ಮಗುವನ್ನ (ಪಿಂಕಿ) ನೋಡಿಕೊಳ್ತಾ ಇದ್ದಾರೆ...ದೂರದ ಊರಿನಲ್ಲಿ...! ಸದ್ಯ ನಾನೊಬ್ಬನೇ ಇಲ್ಲಿ ಬೆಂಗಳೂರಿನಲ್ಲಿದ್ದೇನೆ ಅಸಾಧ್ಯವಾದ ಬಡತನ... ಏನು ಮಾಡೋದು ಅಂತ ಗೊತ್ತಾಗುತ್ತಿಲ್ಲ...ನಿಮ್ಮಿಂದ ಕನಿಷ್ಟ ಏನಾದರೂ ಸಲಹೆಗಳು ದೊರೆತರೆ ನಾನು ಋಣಿ...please ಬೇಡಿಕೊಳ್ತಾ ಇದ್ದೀನಿ ಈ ವಿಷಯದಲ್ಲಿ ಸಹಾಯ ಮಾಡಿ...
ಗಿರೀಶ ಕೆ.ಎಸ್.
ಅಂದಹಾಗೆ ನನ್ನ ಮೇಲ್ ಐಡಿ girikavya@gmail.com
ದಯವಿಟ್ಟು ಪ್ರತಿಕ್ರಿಯಿಸಿರಿ....
Post a Comment