ಅಪರಾತ್ರಿಯಲ್ಲೊಬ್ಬ ಬುದ್ಧ

2 May 2012

ಸಣ್ಣ ಕಂಬದಂಥ ಸಿಡಿಲು ಕಣ್ಣೆದುರು ಅಪ್ಪಳಿಸಿದಾಗ, ಕುಬ್ಜ ನಾನು ಎಂಬ ಭಾವನೆ.

ಪ್ರೆಸ್‌ ಕ್ಲಬ್‌ನಿಂದ ಹೊರಟಾಗಲೇ ಹನ್ನೊಂದು ಗಂಟೆ. ಮಳೆ ಬರಬಹುದು ಎಂದು ಡಿಕ್ಕಿಯಲ್ಲಿಟ್ಟಿದ್ದ ಜರ್ಕಿನ್‌ ಧರಿಸಿ, ಲೋಡ್‌ ಆಗಿದ್ದ ಮಿತ್ರನನ್ನು ಹಿಂದೆ ಕೂರಿಸಿಕೊಂಡು, ಎಂದೂ ಹೋಗದಷ್ಟು ಕಡಿಮೆ ವೇಗದಲ್ಲಿ ಗಾಡಿ ಓಡಿಸುತ್ತ ಹೊರಟೆ. ಶಿವಾನಂದ ಸರ್ಕಲ್‌ ಹತ್ತಿರ ಸಿಗ್ನಲ್‌ ಕೆಂಪಡರಿದಾಗ ಗಾಡಿ ನಿಲ್ಲಿಸಿ ನೋಡುತ್ತಿರುವಾಗ ಹೊಡೆಯಿತು ಬರಸಿಡಿಲು.

ಕಣ್ಣೆದುರೇ ದೊಡ್ಡ ಕಂಬದಂಥ ಸಿಡಿಲು.

ಕಣ್ಣು ಕೋರೈಸಿದಂತಾಯ್ತು. ತುಂಬ ದಿನ ಆಗಿತ್ತು ಅಂಥ ಸಿಡಿಲನ್ನು ಹತ್ತಿರದಿಂದ ನೋಡಿ. ಬಾಲ್ಯದಲ್ಲಿ ಸಾಕಷ್ಟು ಬಾರಿ ಕಂಡಿದ್ದೇನೆ. ಅಲೆದಾಟದ ದಿನಗಳಲ್ಲೂ ಅವು ಆಗಾಗ ದರ್ಶನ ಕೊಟ್ಟಿದ್ದುಂಟು. ಆದರೆ, ಹತ್ತಾರು ವರ್ಷಗಳ ನಂತರ ಇದೇ ಮೊದಲ ಬಾರಿ ಕಂಡು ಅರೆಕ್ಷಣ ಮೂಕನಾಗಿದ್ದೆ.

ಆ ಕ್ಷಣಕ್ಕೆ, ಬದುಕು ನಶ್ವರ ಅನಿಸಿದ್ದು ಸುಳ್ಳಲ್ಲ.

ಸಿಗ್ನಲ್‌ ಹಸಿರಾದಾಗ ಗಾಡಿಗೆ ಓಡುವ ಆತುರವಿರಲಿಲ್ಲ. ಮಲ್ಲೇಶ್ವರಂ ತಲುಪಿ, ಮಿತ್ರನನ್ನು ಮನೆಯೊಳಗೆ ಕಳಿಸಿ, ಹುಷಾರಾಗಿ ಬಾಗಿಲು ಹಾಕಿಕೊಳ್ಳಲು ಹೇಳಿ ಮನೆಯತ್ತ ಹೊರಟೆ. ರೈಲ್ವೇ ಸೇತುವೆ ದಾಟಿ, ಮೆಟ್ರೊ ಕೆಲಸ ನಡೆಯುವ ಜಾಗದ ಹತ್ತಿರ ಗಾಡಿ ನಿಧಾನವಾಗಿಸಿದಾಗ ಮತ್ತೊಂದು ಸಿಡಿಲು ಹೊಡೀತು.

ಮತ್ತದೇ ಕೋರೈಸುವ ಕಂಬ.

ಗಾಡಿ ಪೂರ್ತಿ ನಿಧಾನವಾಯ್ತು. ರಸ್ತೆಗೆ ರಸ್ತೆಯೇ ಬಹುತೇಕ ನಿರ್ಜನ. ಮಧ್ಯರಾತ್ರಿ ಸಮೀಪಿಸುವ ಈ ಹೊತ್ತು ಕಾಣುತ್ತಿದ್ದ ಟ್ರಾಫಿಕ್‌ನ ಶೇ.೧೦ರಷ್ಟೂ ಕಾಣಲಿಲ್ಲ.

ಮನಸು ಯೋಚಿಸುತ್ತಿತ್ತು: ಕಂಡ, ಕಾಣದ, ಈಡೇರಿದ, ಈಡೇರದ ಎಲ್ಲವೂ ಛಕಛಕ ಕಣ್ಣೆದುರು ಹಾಯ್ದುಹೋದವು.

ಒಡಲಾಳದೊಳಗಿಂದ ಹಸಿವೆಯ ಜೊತೆಗೆ ಸಣ್ಣಗೇ ಖಿನ್ನತೆ.

ಮಳೆ ಕೊಂಚ ಜೋರಾಯಿತು. ಹೆಲ್ಮೆಟ್‌ನ ಗಾಜಿನ ತುಂಬ ಮಳೆಮಣಿಗಳು. ಗಾಜು ಹಿಂದಕ್ಕೆ ಸರಿಸಿ, ಅಪ್ಪಳಿಸುತ್ತಿದ್ದ ಹನಿಗಳಿಗೆ ಮುಖವೊಡ್ಡಿದಾಗ, ಎಂಥದೋ ಹಿತಕರ ಭಾವನೆ.

ಅದು ನನ್ನ ಬಾಲ್ಯ.

ಬೀಳುವ ಮಳೆಗೆ ಆಕಾಶಕ್ಕೆ ಮುಖವೊಡ್ಡಿ ಗಿರಗಿಟ್ಲೆ ತಿರುಗುತ್ತಿದ್ದ ಚಿಂತೆಯರಿಯದ ಬಾಲ್ಯದ ನೆನಪು.

ನವರಂಗ್‌ ದಾಟಿ, ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆಯತ್ತ ತಿರುಗಿದಾಗ ರಸ್ತೆಗೆ ರಸ್ತೆಯೇ ನಿರ್ಜನ. ಖಾಲಿ ರಸ್ತೆಯಲ್ಲಿ ಸಣ್ಣ ಮಳೆ ಹನಿಗಳ ಸ್ವಚ್ಛಂದ ಆಟ.

ಒಳಗೂ ಹೊರಗೂ ಒಬ್ಬನೇ ಇರುವ ಇಂಥ ಘಳಿಗೆಗಳೇ ಈ ಅಸಹನೀಯ ರಾತ್ರಿಯನ್ನು ಆಹ್ಲಾದಕರವಾಗಿಸೋದು.

ಅಷ್ಟೊತ್ತಿಗೆ ಖಿನ್ನತೆ ನಿಧಾನವಾಗಿ ಏರುತ್ತಿತ್ತು. ಜೀವನ ನಶ್ವರ ಎಂಬ ಭಾವ ಬಲವಾಗತೊಡಗಿದಂತೆ ವಿಜಯನಗರದ ಖಾಲಿ ರಸ್ತೆಯಲ್ಲಿದ್ದೆ. ಅಲ್ಲಿಂದ ಹತ್ತು ನಿಮಿಷಕ್ಕೆ ಮನೆ ತಲುಪಿ, ಹುಷಾರಾಗಿ ಬಾಗಿಲು ತೆರೆದು, ಕತ್ತಲೆಯಲ್ಲಿ ಸದ್ದಾಗದಂತೆ ಒಂದಿಷ್ಟು ತಿಂದು, ಒಡಲ ಹಸಿವು ತೀರಿಸಿಕೊಂಡೆ.

ಮನದ ಖಾಲಿತನ ವಿಜೃಂಭಿಸತೊಡಗಿತ್ತು.

ರೂಮು ಹೊಕ್ಕು ಕಂಪ್ಯೂಟರ್‌ ಆನ್‌ ಮಾಡುವ ಹೊತ್ತಿಗೆ ಹೊರಗೆ ಮಳೆ ಬಲಿಯುತ್ತಿತ್ತು. ಗುಡುಗು-ಸಿಡಿಲುಗಳ ಅಬ್ಬರವೂ.

ಮನಸ್ಸು ಖಾಲಿ ಖಾಲಿ.

ಅರ್ನೆಸ್ಟ್‌ ಹೆಮಿಂಗ್ವೆನ ಓಲ್ಡ್‌ ಮ್ಯಾನ್‌ ಅಂಡ್‌ ದಿ ಸೀ (Old Man And The Sea) ಕಾದಂಬರಿಯ ಮುದುಕ ಮೀನುಗಾರನ ಭಾವನೆಗಳು ನೆನಪಾಗುತ್ತವೆ. ಬಲೆಗೆ ಬಿದ್ದ ದೊಡ್ಡ ಮೀನಿನೊಂದಿಗೆ, ಅದನ್ನು ನಿಯಂತ್ರಿಸಲು ಹೆಣಗಾಡುತ್ತ, ಸ್ವಗತದಂತೆ ಮೀನಿನೊಂದಿಗೆ ಮಾತಿಗಿಳಿಯುವ ಆ ಭಾವನೆಗಳು ನನ್ನನ್ನು ಸದಾ ಕಾಡುವ ನೆನಪುಗಳು. ಮನಸ್ಸು ಖಿನ್ನವಾದಾಗೆಲ್ಲ, how are you fish? ಎಂದು ಪ್ರಶ್ನಿಸಿಕೊಳ್ಳುತ್ತೇನೆ. ಮನಸ್ಸು ಕೂಡ ಆ ಮುದುಕನ ಬಲೆಗೆ ಬಿದ್ದ ಮೀನಿನಂತೆ. ವಾಪಸ್‌ ಉತ್ತರಿಸಲ್ಲ.

ನನ್ನ ಮನಸ್ಸೂ ಎಲ್ಲೋ ಕಳೆದುಹೋಗಿದೆ.

*****

ಸುಮ್ಮನೇ ಕವಿತೆ ಗೀಚುತ್ತೇನೆ. ಪದಗಳನ್ನು ಬದಲಿಸುತ್ತೇನೆ. ಪ್ಯಾರಾ ಹಿಂದೆಮುಂದೆ ಮಾಡುತ್ತೇನೆ.

ಊಹೂಂ, ಭಾವನೆಗಳು ಸಾಲುಗಳಾಗುವುದಿಲ್ಲ. ನೋವು ಶಬ್ದಗಳಾಗುವುದಿಲ್ಲ.

ಅರ್ಧ ಓದಿಟ್ಟ ಪುಸ್ತಕ ಎತ್ತಿಕೊಳ್ಳುತ್ತೇನೆ. ಮನಸ್ಸು ನಿಲ್ಲುವುದಿಲ್ಲ.

ಲೈಟಾರಿಸಿಕೊಂಡು, ಮಾನಿಟರ್‌ ಆಫ್‌ ಮಾಡಿ, ಗಂವೆನ್ನುವ ಕತ್ತಲೆಯಲ್ಲಿ ಫ್ಯಾನ್‌ ಶಬ್ದ ಕೇಳುತ್ತ ಸುಮ್ಮನೇ ಕೂಡುತ್ತೇನೆ.

ಊಹೂಂ, ಮನಸ್ಸು ಸುಮ್ಮನಾಗುವುದಿಲ್ಲ.

ವಿನಂತಿಸುತ್ತೇನೆ, ಆರ್ತನಾಗಿ ಬೇಡಿಕೊಳ್ಳುತ್ತೇನೆ. ಸಿಟ್ಟು ಮಾಡಿಕೊಳ್ಳುತ್ತೇನೆ.

ರಚ್ಚೆ ಹಿಡಿದ ಮಗುವಿನಂಥದು ಅದು.

ಕಾಡುವ ಆ ದಿವ್ಯ ಭಾವವನ್ನೇ ಧೇನಿಸುತ್ತ ಕೂತಾಗ ಮಾತ್ರ ಕೊಂಚ ಶಾಂತವಾಗುತ್ತದೆ.

ನಿದ್ದೆ ದೂರವಾದರೂ ಪರವಾಗಿಲ್ಲ, ನೆಮ್ಮದಿ ಹತ್ತಿರವಿರಲಿ ಎಂದು ಸುಮ್ಮನಾಗುತ್ತೇನೆ.

ಮಳೆ ಯಾವಾಗ ನಿಂತಿತ್ತೋ. ದೂರದಲ್ಲಿ ಗೂರ್ಖಾ ಸೀಟಿ ಊದುವ, ಕೋಲನ್ನು ಫುಟ್‌ಪಾತ್‌ನ ಕಲ್ಲಿಗೆ ಕುಟ್ಟುವ ಸದ್ದು.

ಅರೆ, ಈ ಗೂರ್ಖಾನ ಹೆಂಡತಿಯ ಭಾವನೆಗಳೇನಿರಬಹುದು ಎಂದು ಯೋಚಿಸತೊಡಗುತ್ತದೆ ಮನಸ್ಸು.

ಇದ್ದಕ್ಕಿದ್ದಂತೆ ಕಸಿವಿಸಿ. ಯಾರದೋ ತಟ್ಟೆಯ ಅನ್ನ ಕಸಿದ ಭಾವ.

ನಮ್ಮ ನೆಮ್ಮದಿಗಳ ಹಿಂದೆ ಯಾರದೋ ನಿದ್ದೆಗೆಟ್ಟ ರಾತ್ರಿ ಇರುತ್ತದೆ, ಶ್ರಮವಿರುತ್ತದೆ. ಇಲ್ಲಿ ಕತ್ತಲೆಯಲ್ಲಿ ಹಾಯಾಗಿ ಕೂತವನ ನೆಮ್ಮದಿಗೆ ಆ ಗೂರ್ಖಾನ ನಿದ್ದೆಗೇಡಿ ರಾತ್ರಿಯ ದುಡಿಮೆ ಕಾರಣ ಎಂಬ ಭಾವ ಹುಟ್ಟಿ ಮನಸ್ಸು ದ್ರವಿಸಿದಂತಾಯ್ತು. ಕಾಣದ ಗೂರ್ಖಾನ ಕುಟುಂಬದ ಚಿತ್ರಣ ಮನಸ್ಸನ್ನು ಆರ್ದ್ರ ಮಾಡಿಬಿಟ್ಟಿತು.

ಸದ್ದಿಲ್ಲದೇ ಕಂಪ್ಯೂಟರ್‌ ಆಫ್‌ ಮಾಡಿ, ರೂಮಿನ ಕದವಿಕ್ಕಿ, ಮಲಗಿದ್ದ ಮನೆಯ ಜೀವಿಗಳನ್ನು ಅಕ್ಕರೆಯಿಂದ ದಿಟ್ಟಿಸಿದೆ.

ನಾನೂ ಒಂಥರಾ ಗೂರ್ಖಾನೇ. ಮತ್ತಿದು ನನ್ನ ಕುಟುಂಬ ಎಂಬ ಭಾವ ಉಕ್ಕಿತು.

ಮನಸ್ಸನ್ನು ಕುಟ್ಟುತ್ತಿದ್ದ ಮೆದು ಭಾವವನ್ನೇ ಧೇನಿಸುತ್ತ ಹಾಸಿಗೆ ಮೇಲೆ ಉರುಳಿಕೊಂಡೆ. ಇವತ್ತು ನಿದ್ದೆ ಬರಬಹುದು.

ಬರದೇ ಇರಲೂಬಹುದು!

- ಚಾಮರಾಜ ಸವಡಿ

2 comments:

Uma Bhat said...

ಚಂದದ ಬರಹ. ಇಷ್ಟವಾಯ್ತು.

ದಶರಥ್.ಬಿ.ಎಲ್ said...

ಅದ್ಯಾಕೋ ಅಂತದ್ದೊಂದು ಭಾವ ಹೊಕ್ಕು ಬಿಟ್ಟರೆ,ಪ್ರತಿಯೊಂದು ಗುಡುಗಿನ ಆರ್ಭಟವೂ ನೆನಪಿನ ಕಿರಣವಾಗಿ ಪರಿವರ್ತಿತವಾಗುತ್ತದೆ. ಮಳೆಹನಿಗಳೂ ಮನಸನ್ನ ನೆನಪಿನಲ್ಲೇ ಒದ್ದೆಯಾಗುವಂತೆ ಮಾಡಿಬಿಡುತ್ತವೆ.
"ನಮ್ಮ ನೆಮ್ಮದಿಯ ಹಿಂದೆ, ಯಾರದ್ದೋ ಪರಿಶ್ರಮವಿರುತ್ತದೆ" ಎಂಬ ಸಾಲು ತುಂಬಾ ಇಷ್ಟವಾಯ್ತು. ನೀವು ಬರೆದದ್ದನ್ನ ಓದಿಕೊಂಡರೆ, ಅದ್ಯಾಕೋ ನನ್ನನ್ನೇ ಓದಿಕೊಂಡಂತಾಗುತ್ತದೆ.