ಮತ್ತೆ ಮತ್ತೆ ಬೇರಿನೆಡೆಗೆ ತುಡಿವ ಮನ
15 Jan 2016
ಬಿಸಿಲೆಂಬ ನೆನಪ ಸಂಜೀವಿನಿ
10 Apr 2010
ಬಿಸಿಲಿನಲ್ಲಿ ಅಷ್ಟೊಂದು ಓಡಾಡಿದರೂ ಆರಾಮವಾಗಿದ್ದೀಯಲ್ಲ ಮಾರಾಯ ಎಂದು ಗೆಳೆಯರು ಅಚ್ಚರಿಪಡುತ್ತಾರೆ. ಅದೇ ಬಿಸಿಲೂರಿನಿಂದ ಬಂದವಳಾಗಿದ್ದರೂ, ನನ್ನ ಹೆಂಡತಿಗೆ ಬಿಸಿಲು ಎಂದರೆ ಅಲರ್ಜಿ. ಆದರೆ, ನನಗೆ ಮಾತ್ರ ಬಿಸಿಲು ಎಂದರೆ ನನ್ನೂರು. ನಾನು ಹುಟ್ಟಿ ಬೆಳೆದ ಪರಿಸರ. ನನ್ನ ಬಾಲ್ಯ. ನನ್ನ ಪ್ರಾಥಮಿಕ ಕನಸುಗಳು. ನನ್ನ ಶಾಶ್ವತ ಕನವರಿಕೆ.
ಸಾವಿರ ಸಾವಿರ ನೆನಪುಗಳು ಬಿಸಿಲಿನೊಂದಿಗೆ ಹೆಣೆದುಕೊಂಡಿವೆ. ಬರ, ಬಡತನ, ಬವಣೆ, ಭಯವಷ್ಟೇ ಅಲ್ಲ, ನನ್ನ ಬದುಕು ಕೂಡ ಬಿಸಿಲ ಪ್ರದೇಶದಲ್ಲಿಯೇ ಅರಳಿದೆ. ಉರಿಯುವ ಸೂರ್ಯನೊಂದಿಗೆ, ಕಡು ಸೆಕೆಯೊಂದಿಗೆ ಶುರುವಾಗುವ ಬೇಸಿಗೆಯ ದಿನ, ಅದೇ ಕಡು ಸೆಕೆಯೊಂದಿಗೆ ಸಂಜೆಯಾಗಿ ಬದಲಾಗುತ್ತಿತ್ತು. ಕರೆಂಟಿಲ್ಲದ ರಾತ್ರಿಯ ಕಗ್ಗತ್ತಲೆಯಲ್ಲಿ, ಬೆಳಕಿನುಂಡೆಯಂಥ ನಕ್ಷತ್ರಗಳ ಆಗಸ. ಮಣ್ಣಿನ ಮನೆಯ ಮಾಳಿಗೆಯ ಮೇಲೆ ಹಳೆಯ ಜಮಖಾನಾ ಹಾಸಿಕೊಂಡು ಆಕಾಶಕ್ಕೆ ಮುಖವೊಡ್ಡಿ ಕಂಡ ಸಾವಿರ ಸಾವಿರ ಕನಸುಗಳು ಇವತ್ತಿಗೂ ನನ್ನ ಜೀವನದುಸಿರು. ಆ ಬಿಸಿಲ ಹೇಗೆ ಮರೆಯಲಿ?
ನನ್ನ ಮೊದಲ ತೀವ್ರ ನಿರಾಶೆ, ನೋವುಗಳು ಬಿಸಿಲಿನೊಂದಿಗೆ ಹೆಣೆದುಕೊಂಡಿವೆ. ಹತ್ತನೆಯ ತರಗತಿಯ ಪರೀಕ್ಷೆ ಬರೆಯಲು ಮೊದಲ ಬಾರಿ ಹದಿನೈದು ದಿನಕ್ಕಿಂತ ಹೆಚ್ಚು ಕಾಲ ತಂಗಿದ್ದ ಪಟ್ಟಣ ಕೊಪ್ಪಳ ನನ್ನಲ್ಲಿ ಉಕ್ಕಿಸಿದ್ದ ದಿಗ್ಭ್ರಮೆ, ಕನಸು, ಕನವರಿಕೆಯನ್ನು ನಾನು ಪದೆ ಪದೆ ಅನುಭವಿಸಿದ್ದು ನನ್ನೂರಿನ ಬಿಸಿಲ ದಿನದ ರಾತ್ರಿಗಳಲ್ಲಿ. ಪಿಯುಸಿ ಓದಲು ದೂರದ ನರೇಗಲ್ಲಿಗೆ ಹೋಗಬೇಕೆಂಬ ಕಳವಳವನ್ನೂ ಅಲ್ಲಿಯೇ ಅನುಭವಿಸಿದ್ದು. ಹುಟ್ಟಿದಾಗಿನಿಂದ ಊರು ಬಿಟ್ಟು ಹೋಗಿರದ ನನಗೆ, ನರೇಗಲ್ಲಿಗೆ ಹೋಗುವಾಗ, ಹೋದ ನಂತರ ಆದ ತಳಮಳ ಅಷ್ಟಿಷ್ಟಲ್ಲ.
ಇಂಥ ಹಲವಾರು ನೆನಪುಗಳು ಬಿಸಿಲಿನೊಂದಿಗೆ ಹೆಣೆದುಕೊಂಡಿವೆ. ನಮ್ಮ ಹೊಲದಲ್ಲಿದ್ದ ಎರಡು ಜಾತಿಯ ಮಾವಿನ ಮರಗಳು, ಅವುಗಳ ಪರಿಮಳ, ಹಲ್ಲು ಚುಳಿಯುವಂತೆ ಮಾಡುತ್ತಿದ್ದ ಹುಳಿ ರುಚಿ, ಮಾವಿನ ಕಾಯಿಗಳನ್ನು ಹಣ್ಣಾಗಿಸಲು ಹಾಕಿದ್ದ ಬತ್ತದ ಹುಲ್ಲಿನ ವಿಚಿತ್ರ ಘಮ, ಕುಡಿಯುವ ನೀರು ತರಲು ಊರಾಚೆಯ ಕೆರೆಗೆ ಹೋಗುತ್ತಿದ್ದುದು, ಬತ್ತಿದ ದೊಡ್ಡ ಹಳ್ಳದ ಉಸುಕಿನ ಮಧ್ಯೆ ಕೂತು ಭವಿಷ್ಯದ ಕನಸುಗಳನ್ನು ಮಾತಾಗಿಸಿದ್ದು, ಕಾಡುತ್ತಿದ್ದ ಅಪಾರ ಹಸಿವು, ಏನು ಸಿಕ್ಕರೂ ಓದುವ ತೀವ್ರ ತುಡಿತ, ಕಾಣದ ಜಗತ್ತಿನೆಡೆಗಿನ ಬೆರಗು, ಪಟ್ಟಣಗಳು ಹುಟ್ಟಿಸುತ್ತಿದ್ದ ಕೀಳರಿಮೆ, ಅರಳುತ್ತಿದ್ದ ಪ್ರಾಯ, ಹೇಳತೀರದ ದುಗುಡ- ಇಂಥ ನೂರಾರು ಭಾವನೆಗಳಿಗೆ ಬಿಸಿಲು ಸಾಕ್ಷಿಯಾಗಿದೆ.
ಇವತ್ತಿಗೂ ಶಿವರಾತ್ರಿ ಕಳೆದ ನಂತರ, ಮನಸ್ಸಿಗೆ ಸಣ್ಣಗೆ ದುಗುಡ ಕವಿಯಲಾರಂಭಿಸುತ್ತದೆ. ಬಿಸಿಲು ಬಲಿಯುತ್ತಿದ್ದಂತೆ ಊರಿನ ಹಂಬಲ, ಆಗಿನ ದಿನಗಳ ನೆನಪುಗಳು ಉಕ್ಕತೊಡಗುತ್ತವೆ. ಪತ್ರಿಕೆ ಓದುವಾಗ, ಬಿಸಿಲಿನ ಬಗ್ಗೆ ಬಂದ ವರದಿಗಳು ಊರನ್ನು ನೆನಪಿಸುತ್ತವೆ. ಅಲ್ಲಿ, ನನ್ನಂಥ ಇನ್ಯಾರದೋ ಪಾಲಿಗೆ ಈ ಬಿರು ಬಿಸಿಲು ಸಂಜೀವಿನಿಯಾಗುತ್ತಿದೆಯೇನೋ ಎಂಬ ಕುತೂಹಲ. ರಾತ್ರಿಯಾಗುತ್ತಿದ್ದಂತೆ, ಮಣ್ಣಿನ ಮನೆಗಳ ಮಾಳಿಗೆಗಳ ಮೇಲೆ ವಲಸೆ ಹೋಗುತ್ತಿದ್ದ ಜನ, ಅವರ ಕಷ್ಟಸುಖದ ಮಾತುಕತೆ, ಕಾಣುತ್ತಿದ್ದ ಕನಸು, ಮೇಲೆ ಕಪ್ಪಡರಿರುವ ಆಗಸದ ಚಾದರದೊಳಗಿಂದ ಕಿಂಡಿ ಕೊರೆದು ಇಣುಕಿ ನೋಡುವ ನಕ್ಷತ್ರ ಕಂಗಳು, ಅಲುಗದೇ ನಿಂತ ಮರದ ಎಲೆಗಳು, ಅಪರಾತ್ರಿ ಎಚ್ಚರವಾದಾಗ ತಾಕುತ್ತಿದ್ದ ನೀರವತೆ ಮತ್ತೆ ಮತ್ತೆ ನನಪಾಗುತ್ತವೆ.
ಎಷ್ಟೋ ಸಾರಿ ರಾತ್ರಿ ಯೋಚಿಸುತ್ತ ಅಡ್ಡಾಗಿದ್ದವನಿಗೆ ಜೆಟ್ ವಿಮಾನಗಳ ಮಿಣುಕು ದೀಪಗಳು ಅಪಾರ ಅಚ್ಚರಿ ಹುಟ್ಟಿಸಿದ್ದಿದೆ. ನನ್ನೂರಾಚೆಯ ಜಗತ್ತು ನನಗೆ ತಿಳಿದಿರುವುದಕ್ಕಿಂತ ವಿಶಾಲವಾಗಿದೆ ಎಂಬ ಅಸ್ಪಷ್ಟ ಭಾವನೆಯನ್ನು ಬೆಳೆಸಿದ್ದಿದೆ. ಆ ಜಗತ್ತಿನೆಡೆಗೆ ನಾನು ಹೋಗಲೇಬೇಕಾಗುತ್ತದೆ ಎಂಬ ಅಸ್ಪಷ್ಟ ಅನಿಸಿಕೆ ದಿಗಿಲು ಮೂಡಿಸಿದ್ದಿದೆ. ಅಲ್ಲಿಯ ಜನ ಹೇಗೋ, ಅವರ ಬದುಕಿನ ರೀತಿ-ನೀತಿಗಳೇನೋ, ನಾನು ಅವನ್ನೆಲ್ಲ ಹೇಗೆ ಕಲಿತೇನು ಎಂಬ ಕಳವಳ ಉಕ್ಕಿಸಿದ್ದಿದೆ. ರಾತ್ರಿಯ ಕಡು ನೀರವತೆಯಲ್ಲಿ ಒಬ್ಬನೇ ಎದ್ದು ಕೂತು, ಜೋರು ನಿದ್ದೆಯಲ್ಲಿರುವವರನ್ನು ಕಂಡು ಅಚ್ಚರಿಪಟ್ಟಿದ್ದೇನೆ. ಸುತ್ತಲೂ ಹಬ್ಬಿದ ಕತ್ತಲನ್ನು ಮೂದಲಿಸುವಂತೆ ಬೆಳಗುವ ನಕ್ಷತ್ರಗಳನ್ನು ಕಂಡು ಮೋಹಗೊಂಡಿದ್ದೇನೆ. ಸಾವಿರಾರು ಸುನೀತ ಭಾವನೆಗಳು ಆ ಕತ್ತಲಲ್ಲಿ ಮೂಡಿವೆ. ನಿರಾಶೆಗಳಿಗೆ ಸಮಾಧಾನ ದೊರೆತಿದೆ.
ರಾತ್ರಿ ತುಂಬ ಹೊತ್ತು ಒಬ್ಬನೇ ಕೂತು ಓದುವ, ಬರೆಯುವ ಈ ದಿನಗಳಲ್ಲಿ ಬಿಸಿಲು ಮತ್ತೆ ಮತ್ತೆ ಕಾಡುತ್ತದೆ. ನನ್ನೂರು ಅಳವಂಡಿ ಮತ್ತೆ ಮತ್ತೆ ನೆನಪಾಗುತ್ತದೆ. ಎಲ್ಲರೂ ಜರಿಯುವ, ಶಪಿಸುವ, ಭಯಪಡುವ ಈ ಬಿರುಬಿಸಿಲು ಅದ್ಹೇಗೆ ನನ್ನ ಪಾಲಿಗೆ ಚೇತೋಹಾರಿಯಾಗಿದೆ ಎಂದು ನೆನೆನೆನೆದು ಅಚ್ಚರಿಪಡುತ್ತೇನೆ. ಮೆತ್ತಗೇ ಗೇಟು ತೆರೆದು, ರಸ್ತೆ ಮಧ್ಯೆ ನಿಂತು, ಆಗಸ ದಿಟ್ಟಿಸಿದರೆ, ನಗರದ ರಾತ್ರಿ ಬೆಳಕಿನ ರಭಸಕ್ಕೆ ನಕ್ಷತ್ರಗಳು ಮಂಕಾಗಿರುವುದು ರಾಚುತ್ತದೆ.
ಅದನ್ನು ನೋಡುತ್ತಿದ್ದಂತೆ, ನನ್ನ ಮನಸ್ಸೂ ಏಕೋ ಮಂಕಾಗುತ್ತದೆ.
- ಚಾಮರಾಜ ಸವಡಿ
ಗುಳೆ ಹೋದವರ ಹಿಂದೆ ಹೊರಟಿದೆ ಮನಸು...
3 Nov 2009
ಹಲವು ವರ್ಷಗಳ ಹಿ೦ದಿನ ಘಟನೆ.ಆಗ ನಾನು ಬೆ೦ಗಳೂರಿನ ಎಲ್ಲಾ ನ೦ಟನ್ನು ಕಡಿದುಕೊ೦ಡು, ಇನ್ನು ಮು೦ದೆ ನಮ್ಮೂರಲ್ಲೇ ಏನಾದರೂ ಮಾಡಬೇಕೆ೦ದು ಕೊಪ್ಪಳಕ್ಕೆ ಬ೦ದು ಪೂರ್ಣಪ್ರಮಾಣದ ನಿರುದ್ಯೋಗಿಯಾಗಿದ್ದೆ. ನನ್ನ ಬ೦ಡವಾಳವೇನಿದ್ದರೂ ತಲೆಯಲ್ಲಿತ್ತೇ ಹೊರತು ಜೇಬಿನಲ್ಲಿರಲಿಲ್ಲ. ಸಹಜವಾಗಿ ಕೊಪ್ಪಳ ನನ್ನನ್ನು ತಿರಸ್ಕರಿಸಿತು. ಯಾರಾದರೂ ಸರಿ, ದುಡ್ಡಿಲ್ಲದಿದ್ದರೆ ಅವನು ತಿರಸ್ಕಾರಕ್ಕೇ ಯೋಗ್ಯ. ಜಗತ್ತಿಗೆ ಸುಲಭವಾಗಿ ಅರ್ಥವಾಗುವ ಭಾಷೆಗಳೆ೦ದರೆ ಎರಡೇ- ಒ೦ದು ಹಣ, ಇನ್ನೊ೦ದು ಬೆದರಿಕೆ. ನನ್ನ ಹತ್ತಿರ ಎರಡೂ ಇಲ್ಲದಿದ್ದರಿ೦ದ ಪತ್ರಿಕೆಯೊ೦ದನ್ನು ಪ್ರಾರ೦ಭಿಸಬೇಕೆನ್ನುವ ನನ್ನ ಆಸೆಗೆ ಯಾವ ಬೆ೦ಬಲವೂ ಸಿಗಲಿಲ್ಲ. ಯಾರಾದರೂ ಬ೦ಡವಾಳಶಾಹಿಗಳು ಮು೦ದೆ ಬ೦ದರೆ, ಅಚ್ಚುಕಟ್ಟಾದ ದಿನಪತ್ರಿಕೆಯೊ೦ದನ್ನು ರೂಪಿಸಿಕೊಟ್ಟೇನೆ೦ದು ನಾನು ಹ೦ಬಲಿಸುತ್ತಿದ್ದೆ. ಆದರೆ ದುಡ್ಡು ಹಾಕುವ ಹ೦ಬಲ ಮಾತ್ರ ಕೊಪ್ಪಳದ ಯಾವ ಬ೦ಡವಾಳಗಾರನಲ್ಲೂ ಇರಲಿಲ್ಲ. ಅ೦ಥವರ ಪರಿಚಯ ಕೂಡಾ ನನಗಿರಲಿಲ್ಲ.
ಹಾಗಿದ್ದರೂ ನನ್ನಲ್ಲೊ೦ದು ಆತ್ಮವಿಶ್ವಾಸವಿತ್ತು. ಏನಾದರೂ ಮಾಡಿ ಕೊಪ್ಪಳದಲ್ಲಿ ಪತ್ರಿಕೆಯೊ೦ದನ್ನು ಹುಟ್ಟು ಹಾಕಬೇಕೆನ್ನುವ ತುಡಿತವಿತ್ತು. ಕಾಲ ಪಕ್ವವಾಗುವವರೆಗೆ ಏನಾದರೂ ಮಾಡಬೇಕಲ್ಲವೇ? ವಾಪಸ್ ಬೆ೦ಗಳೂರಿಗೆ ಹೋಗುವ ಮನಸ್ಸಿಲ್ಲದ್ದರಿ೦ದ ಕೊಪ್ಪಳದಲ್ಲೇ ಮಾಡುವ೦ಥ ಕೆಲಸವನ್ನು ಹಿಡಿಯಬೇಕಿತ್ತು. ಆಗ ಸಹಾಯಕ್ಕೆ ಬ೦ದಿದ್ದು ಟ್ಯೂಷನ್. ಗ್ರಾಮೀಣ ಪ್ರದೇಶದಲ್ಲಿ ಕಾಣಸಿಗುವಂತೆ ಕೊಪ್ಪಳದಲ್ಲಿಯೂ ಆಗ ಇ೦ಗ್ಲಿಷ್ ಟ್ಯೂಶನ್ ಕ್ರಾ೦ತಿ. ಯಾವ ಓಣಿಗೆ ಹೊಕ್ಕರೂ ಅಲ್ಲೊ೦ದು ಟ್ಯುಟೇರಿಯಲ್ಲು, ಯಾವ ನಿರುದ್ಯೋಗಿಯನ್ನು ನೋಡಿದರೂ ಆತನದೊ೦ದು ಟ್ಯೂಶನ್ ಬ್ಯಾಚ್ ಇರುತ್ತಿತ್ತು. ಆದರೆ, ಪರಿಚಿತರು ತೀರಾ ಕಡಿಮೆ ಸಂಖ್ಯೆಯಲ್ಲಿದ್ದ ನನ್ನ ಪಾಲಿಗೆ ವಿದ್ಯಾರ್ಥಿಗಳು ಸಿಗುವುದು ಸಾಧ್ಯವೇ ಇರಲಿಲ್ಲ.
ಹೀಗಾಗಿ ನಾನು ಕೊಪ್ಪಳದಿಂದ ೨೨ ಕಿಮೀ ದೂರದ ಯಲಬುರ್ಗಾ ತಾಲ್ಲೂಕಿನ ಮ೦ಗಳೂರಿಗೆ ಟ್ಯೂಶನ್ ಹೇಳಲು ಹೋಗುವುದು ಅನಿವಾರ್ಯವಾಯಿತು. ಸುಮಾರು ಎ೦ಟು ತಿ೦ಗಳುಗಳ ಕಾಲ ನಾನು ಅಲ್ಲಿದ್ದೆ. ಟ್ಯೂಶನ್ ಹೇಳುತ್ತಲೇ ಬೇರೆ ಬೇರೆ ಪತ್ರಿಕೆಗಳಿಗೆ ಲೇಖನ ಬರೆದೆ. ನನ್ನ ಬೆ೦ಗಳೂರಿನ ನೆನಪುಗಳ ಪೈಕಿ ಒ೦ದಷ್ಟನ್ನು ಬರೆದಿಟ್ಟುಕೊ೦ಡೆ. ಬೆ೦ಗಳೂರು ಅಷ್ಟೆಲ್ಲಾ ದಿನಗಳಲ್ಲಿ ನನಗೆ ಏನೆಲ್ಲವನ್ನೂ ಕಲಿಸಿತ್ತೋ, ಅಷ್ಟೇ ಪ್ರಮಾಣದ ಪಾಠವನ್ನು ಮ೦ಗಳೂರು ನನಗೆ ಎ೦ಟೇ ತಿ೦ಗಳುಗಳ ಕ್ಲುಪ್ತ ಅವಧಿಯಲ್ಲಿ ಕಲಿಸಿತ್ತು. ಆಗಾಗ ಇ೦ಥ ಅಜ್ಞಾತವಾಸಗಳಿಗೆ ಹೊರಟು ಹೋಗುವುದು ಒ೦ದರ್ಥದಲ್ಲಿ ಒಳ್ಳೆಯದೇ ಎ೦ದು ಈಗಲೂ ನಾನು ನಂಬುತ್ತೇನೆ. ಎಲ್ಲಾ ರೀತಿಯ ಒ೦ಟಿತನ ನಮ್ಮೊಳಗಿನ ಅಸಲಿ ವ್ಯಕ್ತಿತ್ವವನ್ನು ಹೊರ ಹಾಕುತ್ತದೆ. ಯಾರು ಒಳ್ಳೆಯವರು? ಕೆಟ್ಟವರು ಯಾರು? ನಮ್ಮೊಳಗಿನ ನಿಜವಾದ ಶಕ್ತಿ ಏನು? ದೌರ್ಬಲ್ಯಗಳು ಯಾವುವು? ನಮ್ಮ ವಲಯದ ಸಮಯಸಾಧಕರು ಯಾರು? ಅವರ ಕಾರ್ಯತ೦ತ್ರಗಳೆ೦ಥವು? ಮು೦ದಿನ ದಿನಗಳಲ್ಲಿ ನಾನು ಯಾರನ್ನು ನ೦ಬಬಹುದು? ಯಾರನ್ನು ಕೈ ಬಿಡಬೇಕು? ಯಾರನ್ನು ಪೂರ್ತಿಯಾಗಿ ದೂರವಿಡಬೇಕು? ಎ೦ಬ ವಿಷಯಗಳು ಆಜ್ಞಾತವಾಸದ ಅವಧಿಯಲ್ಲಿ ಚೆನ್ನಾಗಿ ಗೊತ್ತಾಗುತ್ತವೆ.
ಮ೦ಗಳೂರಿನ ಎ೦ಟು ತಿ೦ಗಳುಗಳ ಆವಧಿ ನನ್ನ ಅಂಥ ಅಜ್ಞಾತವಾಸಗಳ ಪೈಕಿ ಒ೦ದು.
ಆ ಸ೦ದರ್ಭದಲ್ಲಿ ನನ್ನ ಗೆಳೆಯರೆನಿಸಿಕೊ೦ಡವರಿ೦ದ, ಬ೦ಧುಗಳಿ೦ದ, ಹಿತೈಷಿಗಳಿ೦ದ ನಾನು ದೂರವಿದ್ದೆ. ಬೆ೦ಗಳೂರು ಬಿಟ್ಟು ಸಣ್ಣ ಹಳ್ಳಿಯಾದ ಮ೦ಗಳೂರಿಗೆ ಟ್ಯೂಶನ್ ಹೇಳಲು ಬ೦ದು ನಿ೦ತ ನನ್ನ ಬಗ್ಗೆ ಆಶಾದಾಯಕವಾಗಿ ಯೋಚಿಸುವ ವ್ಯಕ್ತಿಗಳ ಸ೦ಖ್ಯೆ ಆಗ ತು೦ಬಾ ಕಡಿಮೆಯಿತ್ತು.
ನನಗೂ ಬೇಕಾಗಿದ್ದೂ ಅದೇ.
ನನ್ನ ನಿಜವಾದ ಮಿತ್ರರು ಯಾರು? ಹಿತೈಷಿಗಳು ಎ೦ಥವರು? ಭವಿಷ್ಯದ ದಿನಗಳಲ್ಲಿ ನಾನು ಯಾರನ್ನು ನ೦ಬಬಹುದು? ಎ೦ಬುದನ್ನು ಅರಿಯಲು ಅಜ್ಞಾತವಾಸ ನನಗೆ ತು೦ಬಾ ಸಹಾಯ ಮಾಡಿತು. ಹಾಗೆ ನೋಡಿದರೆ ಪ್ರತಿಯೊ೦ದು ಆಜ್ಞಾತವಾಸವೂ ನನಗೆ ಒಳ್ಳೆಯ ಪಾಠ ಕಲಿಸಿದೆ. ಹೊಸ ಹೊಸ ಗೆಳೆಯರನ್ನು ತ೦ದು ಕೊಟ್ಟಿದೆ. ಯಾವ ರಿಸ್ಕುಗಳನ್ನು ತೆಗೆದುಕೊಳ್ಳಬಹುದು? ಅವನ್ನು ಎಷ್ಟರ ಮಟ್ಟಿಗೆ ತೆಗೆದುಕೊಳ್ಳಬಹುದು? ಎ೦ಬುದನ್ನು ತೀರ್ಮಾನಿಸಲು ಸಹಾಯ ಮಾಡಿದೆ. ಆದ್ದರಿ೦ದ ನಾನು ಇಂಥ ಅಜ್ಞಾತವಾಸಗಳನ್ನು ಇಷ್ಟಪಡುತ್ತೇನೆ. ಆ ಅವಧಿ ಎಷ್ಟೇ ವೇದನಾಪೂರ್ಣವಾಗಿದ್ದರೂ ಕೂಡ ಅದನ್ನು ಆನುಭವಿಸಲು ಸಿದ್ಧನಾಗುತ್ತೇನೆ.
ಯಲಬುರ್ಗಾ ತಾಲ್ಲೂಕಿನ ಮ೦ಗಳೂರು ನನಗೆ ಗೆಳೆಯರನ್ನಷ್ಟೇ ಅಲ್ಲ, ಅನುಭವಗಳನ್ನು ಕೂಡಾ ದೊರಕಿಸಿಕೊಟ್ಟಿತು. ಆ ದಿನಗಳನ್ನು ನೆನಪಿಸಿಕೊ೦ಡರೆ ಇವತ್ತಿಗೂ ನಾನು ಮೌನವಾಗುತ್ತೇನೆ. ನನ್ನ ಅಹ೦ಕಾರ ತಾನಾಗಿ ಕಡಿಮೆಯಾಗುತ್ತದೆ. ಇದೆಲ್ಲಾ ನಶ್ವರ ಎ೦ಬ ವಿವೇಕ ಸುಲಭವಾಗಿ ಮೂಡುತ್ತದೆ. ಏಕೆ೦ದರೆ, ಮ೦ಗಳೂರಿನಲ್ಲಿ ನಾನು ನಿಜವಾದ ಬಡತನವನ್ನು ನೋಡಿದೆ. ಪ್ರತಿಯೊ೦ದು ವರ್ಷವೂ ಗುಳೆ ಹೋಗುವ ಕುಟು೦ಬಗಳನ್ನು ಅಲ್ಲಿ ಕ೦ಡೆ. ಸರಕಾರಗಳು ಏನೇ ಘೋಷಿಸಲಿ, ಜನಪ್ರತಿನಿಧಿಗಳು ಎಷ್ಟೇ ಬಡಾಯಿ ಕೊಚ್ಚಿಕೊಳ್ಳಲಿ, ಅಧಿಕಾರಿಗಳು ಅದೆಷ್ಟೇ ಅ೦ಕಿ ಅ೦ಶಗಳನ್ನು ನೀಡಿ ನ೦ಬಿಸಲು ಪ್ರಯತ್ನಿಸಲಿ. ಒ೦ದು ಮಾತ೦ತೂ ಸತ್ಯ-
ನಮ್ಮ ಹಳ್ಳಿಗಳಲ್ಲಿ ತೀವ್ರವಾದ ಬಡತನವಿದೆ. ಒ೦ದೇ ಒ೦ದು ಬೆಳೆ ವಿಫಲವಾದರೂ ಸಾಕು - ಸಾವಿರಾರು ಕುಟು೦ಬಗಳು ಗುಳೆ ಹೋಗಬೇಕಾಗುತ್ತದೆ.
ಅ೦ಥ ಒ೦ದಷ್ಟು ಕುಟು೦ಬಗಳನ್ನು, ಅವು ಗುಳೆ ಹೋದ ದುರ೦ತವನ್ನು ನಾನು ಮ೦ಗಳೂರಿನಲ್ಲಿ ಕಣ್ಣಾರೆ ಕ೦ಡೆ. ಇದೆಲ್ಲಾ ನನ್ನ ಗಮನಕ್ಕೆ ಬ೦ದಿದ್ದು ಕೂಡ ತೀರಾ ಆಕಸ್ಮಿಕವಾಗಿದ. ಕಾಲೇಜು ಉಪನ್ಯಾಸಕರಾಗಿದ್ದ ಗೆಳೆಯ ರಾಜಶೇಖರ ಪಾಟೀಲ ಅವರ ರೂಮಿನಲ್ಲಿ ಇರುತ್ತಿದ್ದ ನಾನು ಟ್ಯೂಶನ್ ಕೂಡಾ ಅಲ್ಲಿಯೇ ನಡೆಸುತ್ತಿದ್ದೆ. ಒಬ್ಬ ಪಿಯುಸಿ ಹುಡುಗ ಆಗಾಗ ಟ್ಯೂಶನ್ ತಪ್ಪಿಸುವುದು ಒಮ್ಮೆ ನನ್ನ ಗಮನಕ್ಕೆ ಬ೦ದಿತು. ಅವನನ್ನು ಕರೆಸಿ ಕಾರಣ ವಿಚಾರಿಸಿದೆ. ಅವನಿ೦ದ ಸಮರ್ಪಕ ಉತ್ತರ ಬರಲಿಲ್ಲ. ಬೈದೆ. ಅವನು ದೂಸರಾ ಮಾತನಾಡದೇ ಬೈಸಿಕೊ೦ಡ. ಅವನು ಆಚೆ ಹೋದ ನ೦ತರ, ಗೆಳೆಯ ರಾಜಶೇಖರ ಪಾಟೀಲ ಜೊತೆ ಆ ಹುಡುಗ ಕ್ಲಾಸ್ ತಪ್ಪಿಸುವ ಬಗ್ಗೆ ಮಾತಾಡಿದೆ. ‘ಅವನ ಮನೆಯ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ ಎ೦ಬ ಕಾರಣಕ್ಕೆ ನಾನು ಟ್ಯೂಶನ್ ಫೀ ತೆಗೆದುಕೊಳ್ಳುತ್ತಿರಲಿಲ್ಲ. ಆದರೂ ಈ ಹುಡುಗ ಚೆನ್ನಾಗಿ ಓದುವುದನ್ನು ಬಿಟ್ಟು ಇದೇನು ನಡೆಸಿದ್ದಾನೆ ನೋಡಿ’ ಎ೦ದು ದೂರಿದೆ.
ಒ೦ದು ಕ್ಷಣ ರಾಜಶೇಖರ ಪಾಟೀಲ್ ಮಾತಡಲಿಲ್ಲ. ನ೦ತರ ಉತ್ತರರೂಪವಾಗಿ ತಮ್ಮದೊ೦ದು ಅನುಭವ ಹೇಳಿದರು.
ಆ ಹುಡುಗ ಹತ್ತನೆಯ ತರಗತಿಯಲ್ಲಿ ಓದುತ್ತಿದ್ದಾಗ ನಡೆದ ಘಟನೆಯಿದು.
ಇಡೀ ತರಗತಿಯಲ್ಲಿ ಇವನೊಬ್ಬ ಮಾತ್ರ ಸರಿಯಾದ ಸಮಯಕ್ಕೆ ಫೀ ಕಟ್ಟುತ್ತಿರಲಿಲ್ಲ. ಸರಿಯಾಗಿ ತರಗತಿಗಳಿಗೂ ಬರುತ್ತಿರಲಿಲ್ಲ. ಕಾರಣ ಕೇಳಿದರೆ ಬಡತನದ ಬಗ್ಗೆ ಹೇಳುತ್ತಿದ್ದ. ಫೀಗಾಗಿ ಒತ್ತಾಯಿಸಿದರೆ ತರಗತಿಗಳಿಗೇ ಬರುತ್ತಿರಲಿಲ್ಲ ಹೀಗಾಗಿ ಅವನ ಬಗ್ಗೆ ಸಹೃದಯಿಗಳಿಗೆ ಅನುಕ೦ಪವಿದ್ದರೆ, ಇತರರಿಗೆ ತಿರಸ್ಕಾರವಿತ್ತು. ಕೊನೆಗೊ೦ದು ದಿನ ಎಸ್.ಎಸ್.ಎಲ್.ಸಿ. ಮುಗಿಯುವ ದಿನಗಳು ಹತ್ತಿರವಾದವು. ಅವತ್ತು ಹತ್ತನೆಯ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸ೦ದರ್ಭ. ದಿನವಿಡೀ ಹಾಜರಿದ್ದ ಈ ಹುಡುಗ ಗ್ರೂಪ್‌ಫೋಟೋ ಸಮಯಕ್ಕೆ ಸರಿಯಾಗಿ ನಾಪತ್ತೆಯಾದ. ಎಲ್ಲಿ ಹುಡುಕಿದರೂ ಸಿಗಲಿಲ್ಲ. ಮನೆಗೇನಾದರೂ ಹೋಗಿದ್ದಾನೋ ನೋಡ್ರೋ ಎ೦ದು ಶಿಕ್ಷಕರು ಹುಡುಗರನ್ನು ಕಳಿಸಿಕೊಟ್ಟರು. ಅಲ್ಲಿ೦ದಲೂ ಇಲ್ಲ ಎ೦ಬ ಉತ್ತರ ಬ೦ದಿತು. ಎಲ್ಲಿಗೆ ಹೋದ? ಎ೦ದು ಎಲ್ಲರೂ ಕೋಪ ಹಾಗೂ ಬೇಸರದಿ೦ದ ಮಾತನಾಡುತ್ತಿರುವಾಗ ಈ ಹುಡುಗ ತೇಕುತ್ತಾ ಓಡಿ ಬ೦ದ. ಮುಖ ಬಾಡಿತ್ತು. ಎಲ್ಲರೂ ತನ್ನ ದಾರಿಯನ್ನೇ ಕಾಯುತ್ತಿದ್ದಾರೆ ಎ೦ಬುದು ಗೊತ್ತಾದಾಗಲ೦ತೂ ಅವನು ಅಪರಾಧಿ ಭಾವನೆಯಿ೦ದ ಕುಗ್ಗಿ ಹೋದ.
ರಾಜಶೇಖರ್ ಪಾಟೀಲ್ ಮೊದಲೇ ಮು೦ಗೋಪಿ. "ಲೇ, ಎಲ್ಲೋಗಿದ್ದೀ? ಎಲ್ಲರೂ ನಿನ್ನ್ ದಾರಿ ಕಾಯಬೇಕೇನೋ?" ಎ೦ದು ತರಾಟೆಗೆ ತೆಗೆದುಕೊ೦ಡರು. ಹುಡುಗನಿಗೆ ಏನು ಹೇಳಬೇಕೆ೦ಬುದೇ ತೋಚಲಿಲ್ಲ. ಸುಮ್ಮನೇ ನಿ೦ತ. ಇನ್ನಷ್ಟು ದಬಾಯಿಸಿದಾಗ ಸಣ್ಣ ಧ್ವನಿಯಲ್ಲಿ ಹೇಳಿದ. "ಬಸ್ ಸ್ಟ್ಯಾ೦ಡಿಗೆ ಹೋಗಿದ್ದೆ ಸಾರ್. ನಮ್ಮವ್ವ ಮತ್ತು ತಮ್ಮ ಗುಳೆ ಹೊ೦ಟಿದ್ರೀ. ಅವರು ಮತ್ತೆ ಯಾವಾಗ ಬರುತ್ತಾರೋ ಗೊತ್ತಿಲ್ಲ.... ಅದಕ್ಕೆ ಲೇಟಾಯಿತು". ರಾಜಶೇಖರ್ ಮ೦ಕಾದರು. ಹುಡುಗ ಹೇಳಿದ ಕಾರಣ ಅವರ ಸಿಟ್ಟನ್ನು ತಣಿಸಿ ಅಪರಾಧಿ ಭಾವನೆಯನ್ನು ಮೂಡಿಸಿತ್ತು. ಮು೦ದೆ ಯಾವತ್ತೂ ಅವರು ಆ ಹುಡುಗನನ್ನು ಬೈಯಲು ಹೋಗಲಿಲ್ಲ.
ಮೇಲಿನ ಘಟನೆಯನ್ನು ವಿವರಿಸಿದ ರಾಜಶೇಖರ, "ಅವನ ಮನೆ ಪರಿಸ್ಥಿತಿ ಸರಿ ಇಲ್ರೀ... ಅದಕ್ಕ ಅವ ಆಗಾಗ ಕೂಲಿ ಮಾಡಾಕ ಹೋಗಬೇಕಾಗುತ್ತ. ಇಲ್ಲಾ ಅ೦ದರೆ ಮನಿ ನಡ್ಯಾ೦ಗಿಲ್ಲ. ಬಹುಶ: ಟ್ಯೂಶನ್ ತಪ್ಪಿಸಿದ್ದು ಇದೇ ಕಾರಣಕ್ಕೆ ಇರಬೇಕು" ಎ೦ದು ಹೇಳಿದಾಗ ನನ್ನ ಮನಸ್ಸಿನಲ್ಲೂ ಅಪರಾಧಿ ಭಾವನೆ.
ಮು೦ದೆ ನಾನು ಮ೦ಗಳೂರಿನಲ್ಲಿ ಬಡತನದ ಅನೇಕ ಮುಖಗಳನ್ನು ನೋಡಿದೆ. ಪ್ರತಿಭೆಗಳನ್ನು ಅದು ಎಳೆಯ ವಯಸ್ಸಿನಲ್ಲಿಯೇ ಹೇಗೆ ಹೊಸಕಿ ಹಾಕಿ ಬಿಡುತ್ತದೆ ಎ೦ಬುದನ್ನು ನೋಡಿದೆ. ರಾಜಕಾರಣಿಗಳು ಹಾಗೂ ಅಧಿಕಾರಿಗಳ ಅವಿವೇಕತನದ ಹೇಳಿಕೆಗಳು, ನಿಜವಾದ ಬರ, ನಿಜವಾದ ಬಡತನ, ನಮ್ಮ ಹಳ್ಳಿಗಳ ದು:ಸ್ಥಿತಿ, ಅದಕ್ಕೆ ಕಾರಣಗಳು, ಸಾಧ್ಯವಿರಬಹುದಾದ ಪರಿಹಾರಗಳು ಎಲ್ಲವೂ ನನಗೆ ಕ೦ಡು ಬ೦ದಿದ್ದು ಮ೦ಗಳೂರಿನ ಆಜ್ಞಾತವಾಸದಲ್ಲಿ!
ಮು೦ದೆ ಕೊಪ್ಪಳಕ್ಕೆ ಬ೦ದೆ. "ವಿಜಯ ಕರ್ನಾಟಕ" ದಿನಪತ್ರಿಕೆಯ ಜಿಲ್ಲಾ ವರದಿಗಾರನ ಕೆಲಸ ಸಿಕ್ಕಿತು. ಬದುಕು ಮತ್ತೆ ಒ೦ದು ಸುತ್ತು ಬ೦ದಿತು. ಆದರೆ ಮ೦ಗಳೂರಿನ ಕಟು ಅನುಭವಗಳನ್ನು ನಾನು ಮರೆಯಲಿಲ್ಲ. ಗ್ರಾಮೀಣ ಬದುಕಿನ ಸಾವಿರಾರು ಅ೦ಶಗಳನ್ನು ನನ್ನನ್ನು ಮತ್ತೆ ಮತ್ತೆ ಕೆಣಕುತ್ತಿದ್ದವು. ಅವುಗಳ ಬಗ್ಗೆ ಅನೇಕ ವರದಿಗಳನ್ನು ಮಾಡಿದೆ. ಬೇರೆ ಬೇರೆ ಪತ್ರಿಕೆಗಳಿಗೆ ಲೇಖನ ಬರೆದೆ. ಸ್ವಲ್ಪ ಬುದ್ಧಿವ೦ತಿಕೆ ಹಾಗೂ ಸಾಕಷ್ಟು ಪರಿಶ್ರಮ ಇದ್ದರೆ ಹಳ್ಳಿಯ ಬದುಕು ಹೇಗೆ ಬದಲಾಗಬಹುದು ಎ೦ಬ ಬಗ್ಗೆ ಅನೇಕ ಲೇಖನಗಳು ಬ೦ದವು. ಬರ ಎ೦ಬುದು ಪ್ರಕೃತಿ ವಿಕೋಪವಲ್ಲ. ಅದನ್ನು ಧಾನ್ಯ ವರ್ತಕರು ಸೃಷ್ಟಿಸುತ್ತಾರೆ ಎ೦ಬ ಮಾತು ಎಷ್ಟೊ೦ದು ಸತ್ಯ ಎ೦ಬುದನ್ನು ಹೇಳಲು ಪ್ರಯತ್ನಿಸಿದೆ.
ಈಗ ಮತ್ತೂಮ್ಮೆ ಅಂಥ ಪರಿಸ್ಥಿತಿ ಉತ್ತರ ಕರ್ನಾಟಕಕ್ಕೆ ಬ೦ದಿದೆ. ನೀರಿಲ್ಲದ ಬವಣೆ ಮೀರಿಸುವಂತೆ ನೀರಿನ ಬವಣೆ ಉತ್ತರ ಕರ್ನಾಟಕವನ್ನು ಗುಳೆ ಎಬ್ಬಿಸುತ್ತಿದೆ. ‘ಆಸರೆ’ ನೀಡಬೇಕಾದ ಜನಪ್ರತಿನಿಧಿಗಳು ತಮ್ಮ ಆಸರೆ ಭದ್ರಪಡಿಸಿಕೊಳ್ಳುವಲ್ಲಿ ಮಗ್ನರಾಗಿದ್ದಾರೆ. ಊರ ಕಡೆ ಹೋಗಿ ನೋಡಿದರೆ, ಎಲ್ಲ ದಿಕ್ಕಿನಲ್ಲಿ ಗುಳೇ ಹೋಗುವ ಜನರ ಗು೦ಪುಗಳೇ. ಇನ್ನಾರು ತಿ೦ಗಳು ಇವರಾರಿಗೂ ಹಬ್ಬವಿಲ್ಲ. ಜಾತ್ರೆಯಿಲ್ಲ. ಊರಿನ ಸುದ್ದಿಯಿಲ್ಲ. ಮತ್ತೊಂದು ಮುಂಗಾರು ಬಂದು, ಮುಗಿಲ ತು೦ಬ ಮೋಡಗಳು ತು೦ಬಿಕೊ೦ಡು ಮಳೆಯು ರಭಸವಾಗಿ ಅಪ್ಪಳಿಸಿ ಕಾಯ್ದ ನೆಲವನ್ನು ತಣಿಸುವವರೆಗೆ ಇವರು ವಾಪಸ್ ಬರುವುದಿಲ್ಲ. ದೂರದ ಅಪರಿಚಿತ ಊರುಗಳಲ್ಲಿ ರಸ್ತೆ ಹಾಕುತ್ತಾ, ಕಟ್ಟಡ ಕಟ್ಟುತ್ತಾ, ಅರ್ಧ ಕಟ್ಟಿದ ಕಟ್ಟಡಗಳ ಮೂಲೆಯಲ್ಲಿ ಮೂರು ಕಲ್ಲಿನ ಒಲೆ ಹೂಡಿ, ರೊಟ್ಟಿ ಬೇಯಿಸಿಕೊ೦ಡು ದಿನಗಳನ್ನು ತಳ್ಳುತ್ತಾರೆ. ಮುಂಚೆ ಅಂದುಕೊಳ್ಳುತ್ತಿದ್ದ, ‘ಬರ ಬರದಿರಲಿ ದೇವರೇ’ ಎಂಬ ಪ್ರಾರ್ಥನೆಯ ಜೊತೆಗೆ, ‘ಪ್ರವಾಹವೂ ಬಾರದಿರಲಿ ದೇವರೇ’ ಎಂದು ಬೇಡಿಕೊಳ್ಳುತ್ತಾರೆ. ಊರಲ್ಲಿ ಇದ್ದಿದ್ದರೆ ಇವತ್ತು ಜಾತ್ರೆ ನೋಡಬಹುದಿತ್ತು. ಉಗಾದಿ ಆಚರಿಸಬಹುದಿತ್ತು ಎ೦ದು ಕನಸು ಕಾಣುತ್ತಾರೆ. ಹಾಗೆ ಕನಸು ಕಾಣುತ್ತಲೇ ಯಾರೋ ಅಪರಿಚಿತನ ಕನಸಿನ ಮನೆ ಕಟ್ಟುತ್ತಾರೆ. ಮು೦ದಿನ ಆರು ತಿ೦ಗಳವರೆಗೆ ಇದೇ ಅವರ ಬದುಕು!
ಗುಳೆ ಹೋದವರನ್ನು ಯಾರು ನೆನಪಿಟ್ಟುಕೊಳ್ಳುತ್ತಾರೆ. ಎಂದಿನಂತೆ ಊರಿನಲ್ಲಿ ಹಬ್ಬ ಬರುತ್ತದೆ, ಜಾತ್ರೆ ಬರುತ್ತದೆ. ಎ೦ದಿನ೦ತೆ ಈ ವರ್ಷ ಕೂಡ ನಾಟಕ ಬಯಲಾಟಗಳು, ಸಭೆ-ಸಮಾರ೦ಭಗಳು ಬರುತ್ತವೆ. ಬೇರೆ ಊರಿನಲ್ಲಿದ್ದು ನೌಕರಿ ಮಾಡುವ ಜನರೆಲ್ಲಾ ಅವತ್ತು ಊರಿಗೆ ಬರುತ್ತಾರೆ. ಅವರ ಸ೦ಬ೦ಧಿಕರು ಬರುತ್ತಾರೆ. ಅ೦ಗಡಿ ಮು೦ಗಟ್ಟುಗಳೆಲ್ಲ ಬರುತ್ತವೆ. ಆದರೆ ಗುಳೆ ಹೋದವರು ಮಾತ್ರ ಬರುವುದಿಲ್ಲ. ಯಾವ ಊರಿನ ಜಾತ್ರೆ ನೋಡಿದರೂ ನನಗೆ ಗುಳೆ ಹೋದ ಬಡವರ ನೆನಪೇ. ದೂರದ ಅಪರಿಚಿತ ಊರುಗಳಲ್ಲಿ ಅವರು ದುಡಿಯುತ್ತಿರುವ ಚಿತ್ರಗಳೇ ಕಣ್ಣ ಮು೦ದೆ,
ಆಗೆಲ್ಲ ನನಗೆ, "ದೇಶ ಪ್ರಗತಿಯತ್ತ ಧಾವಿಸುತ್ತಿದೆ" ಎ೦ದು ಸರಕಾರ ನೀಡುವ ಸುಳ್ಳು ಜಾಹೀರಾತುಗಳು ನೆನಪಾಗುತ್ತವೆ. ಮಾಹಿತಿ ಹಾಗೂ ಸ೦ಪರ್ಕ ಕ್ರಾ೦ತಿ ಸಾಧ್ಯವಾಗಿರುವ ಈ ದಿನಗಳಲ್ಲಿ ಕೂಡಾ ಹಳ್ಳಿಯ ಜನರಿಗೆ ಹಳ್ಳಿಯಲ್ಲೇ ಕೆಲಸ ದೊರೆಯುವ೦ತೆ ಮಾಡಲು ಏಕೆ ಸಾಧ್ಯವಾಗುತ್ತಿಲ್ಲ? ಎ೦ಬ ಪ್ರಶ್ನೆ ಎದ್ದು ನಿಲ್ಲುತ್ತದೆ.
ಆದರೆ ಉತ್ತರ ಮಾತ್ರ ಸಿಗುವುದಿಲ್ಲ. ಮನಸ್ಸು ಗುಳೆ ಹೋದವರ ಹಿ೦ದೆಯೇ ಗುಳೆ ಹೊರಡುತ್ತದೆ. ನರಳುತ್ತದೆ. ನಿಟ್ಟುಸಿರಿಡುತ್ತದೆ.
- ಚಾಮರಾಜ ಸವಡಿ
ಕೊಪ್ಪಳದಲ್ಲೊಂದು ಕರಡೀಪುರ
20 Oct 2009
‘ನಾನು ಹೇಳುವವರೆಗೆ ಯಾವ ಕಾರಣಕ್ಕೂ ಕ್ಯಾಮೆರಾ ಹೊರತೆಗೆಯಬಾರದು’ ಎಂದು ತಾಕೀತು ಮಾಡಿಯೇ ಛಾಯಾಗ್ರಾಹಕ ಮಿತ್ರ ಪ್ರಕಾಶ ಕಂದಕೂರರನ್ನು ಜತೆಗೆ ಕರೆದುಕೊಂಡು ಹೋಗಿದ್ದೆ.
ನಾವು ಅಲ್ಲಿಗೆ ಹೋದಾಗ ಭಾರಿ ಗಾತ್ರದ ಹೆಣ್ಣು ಕರಡಿಯೊಂದು ಆಸ್ಥೆಯಿಂದ ಬೆರಳುಗಳನ್ನು ಚೀಪುತ್ತ ಅಲ್ಲೇ ಬಾಗಿಲ ಎದುರೇ ಕೂತಿತ್ತು. ಪಕ್ಕದಲ್ಲೇ ನೇತಾಡುತ್ತಿದ್ದ ಸೀರೆಯ ತೊಟ್ಟಿಲಲ್ಲಿ ಮಗುವೊಂದು ತನ್ನ ಬೆರಳು ಚೀಪುತ್ತ ಆಟವಾಡುತ್ತಿತ್ತು. ಈ ವಿಚಿತ್ರ ದೃಶ್ಯವನ್ನು ನಾವು ಅವಾಕ್ಕಾಗಿ ನೋಡುತ್ತಿದ್ದರೆ, ‘ಯಾರಿವರು ಹೊಸಬರು?’ ಎಂಬಂತೆ ಕರಡಿ ಮಾಲೀಕ ನಮ್ಮನ್ನು ಅನುಮಾನದಿಂದ ದಿಟ್ಟಿಸುತ್ತಿದ್ದ.
ನಮ್ಮ ರೋಮಾಂಚಕ ಯಾತ್ರೆ ಶುರುವಾಗಿದ್ದು ಹೀಗೆ.
ಅದು ಮಂಗಳಾಪುರ ಎಂಬ ಸಣ್ಣ ಹಳ್ಳಿ. ಕೊಪ್ಪಳದಿಂದ ಬರೀ ಮೂರು ಕಿಲೊಮೀಟರ್ ದೂರ. ಕೊಪ್ಪಳ-ಗದಗ್ ರಸ್ತೆಯಲ್ಲಿ ಹಿರೆಹಳ್ಳ ಸೇತುವೆ ಬರುವುದಕ್ಕೂ ಮುನ್ನ ಎಡಕ್ಕೆ ತಿರುಗಿಕೊಂಡು ಕೊಂಚ ಮುಂದೆ ಹೋದರೆ ಹಚ್ಚಹಸಿರು ಹೊಲಗಳು ಗಮನ ಸೆಳೆಯುತ್ತವೆ. ‘ಕಲ್ಲು ಬೆಟ್ಟಗಳ ಪಕ್ಕದಲ್ಲಿ ಇದೆಂಥ ಹಸಿರು ಮಾರಾಯ’ ಎಂದು ಅಚ್ಚರಿಪಡುತ್ತಿರುವಾಗಲೇ ಬೆಟ್ಟಗಳ ಅಡಿಯಲ್ಲಿ ಧುತ್ತೆಂದು ಪ್ರತ್ಯಕ್ಷವಾಗುತ್ತದೆ ಈ ಊರು.
‘ಯಾರ್ರೀ ನೀವು?’ ಎಂದಿತು ಒರಟು ಧ್ವನಿಯೊಂದು. ಕರಡಿಗಳ ಮೇಲಿನ ದೃಷ್ಟಿಯನ್ನು ಪ್ರಯತ್ನಪೂರ್ವಕವಾಗಿ ಕಿತ್ತು ಅತ್ತ ತಿರುಗುವಷ್ಟರಲ್ಲಿ ಐವತ್ತಕ್ಕೂ ಹೆಚ್ಚು ಜನ ಸುತ್ತುವರೆದ್ದಿದರು. ಅವರ ಮುಖಗಳಲ್ಲಿ ಅನುಮಾನ. ಬಂದವರು, ಬಡವರಿಗಷ್ಟೇ ರೂಲ್ಸು ಹೇಳುವ ಅರಣ್ಯ ಇಲಾಖೆಯವರೇ ಅಥವಾ ಸಮಾಜಸೇವಕರ ಸೋಗಿನಲ್ಲಿ ದುಡ್ಡು ಕೀಳಲು ಬಂದಿರುವವರೆ? ಎಂಬ ಕೆಟ್ಟ ಗುಮಾನಿ.
‘ಕರಡಿ ನೋಡಾಕ ಬಂದಿದ್ವಿ’ ಎನ್ನುತ್ತ ಪ್ರಕಾಶ ಕಂದಕೂರ ನಿಯಮ ಮರೆತು ಮೆಲ್ಲಗೇ ಕ್ಯಾಮೆರಾ ಕವರ್ ಕಳಚಿದರು.
‘ನೀವು ಪೇಪರ್‍ನವ್ರಾ?’ ತೆಳ್ಳಗೆ, ಆದರೆ ತಂತಿಯಂತೆ ಗಟ್ಟಿಯಾಗಿದ್ದ ಯುವಕನೊಬ್ಬ ಇನ್ನಷ್ಟು ಅನುಮಾನದಿಂದ ಪ್ರಶ್ನಿಸಿದ.
ಏನಂತ ಉತ್ತರಿಸಿದರೆ ಸೂಕ್ತ ಎಂದು ಯೋಚಿಸುತ್ತಿರುವಾಗಲೇ ಆ ಯುವಕ, ರಾಜೇಸಾಬ್, ಪ್ರಕಾಶ್ ಕೈಲಿರುವ ಕ್ಯಾಮೆರಾ ಕಸಿದುಕೊಂಡ. ಸುತ್ತ ನಿಂತಿರುವ ಜನರ ಮುಖದಲ್ಲೀಗ ಕೆಟ್ಟ ಕೋಪ. ಅವರೊಳಗೇ ಗುಜುಗುಜು. ನಮ್ಮ ಧೈರ್ಯ ಬೆವರಾಗಿ ಸಣ್ಣಗೆ ಕರಗತೊಡಗಿತು.
ಕರಡಿ ಮಾತ್ರ ಆರಾಮವಾಗಿ ಬೆರಳು ನೆಕ್ಕುತ್ತ ಕೂತಿದೆ!
‘ನೋಡಪ್ಪಾ, ನಾವು ಕರಡಿ ಬಗ್ಗೆ ಬರಿಯಾಕ ಬಂದೀವಿ. ನೀನು ಹ್ಞೂಂ ಅಂದ್ರ ಒಂದಿಷ್ಟು ಫೋಟೊ ತಕ್ಕೊಂತೀವಿ. ಅಷ್ಟ...’ ನನ್ನ ಮಾತಿನ್ನೂ ಮುಗಿದಿದ್ದಿಲ್ಲ, ರಾಜೇಸಾಬ್ ಮುಖದಲ್ಲಿ ತಿರಸ್ಕಾರ ಮಿಶ್ರಿತ ಕೋಪ ಕಾಣಿಸಿಕೊಂಡಿತು.
‘ಮೊದ್ಲು ಇಲಿಂದ ಸುಮ್ನ ಹೋಗ್ರಿ. ಫೋಟೊನೂ ಬ್ಯಾಡ ಏನೂ ಬ್ಯಾಡ. ನಮ್ಮ ಪಾಡಿಗೆ ನಮ್ಮನ್ನ ಇರಾಕ ಬಿಡ್ರಿ, ಅಷ್ಟ್ ಸಾಕು’ ಎಂದು ಅಬ್ಬರಿಸಿದ. ನಾವು ಸುಮ್ಮನೇ ನಿಂತಿದ್ದು ನೋಡಿ, ‘ಹೊಕ್ಕೀರೋ ಇಲ್ಲಾ ಕಲ್ಲಿಂದ ಈ ಕ್ಯಾಮರಾ ಕುಟ್ಟಿ ಹಾಕ್ಲೊ’ ಎಂದು ಬೆದರಿಸಿದ.
ಅಷ್ಟೊತ್ತಿಗೆ ಗುಂಪು ಇನ್ನಷ್ಟು ದೊಡ್ಡದಾಗಿತ್ತು.
***
ಅಂದಾಜು ನೂರು ಮನೆಗಳಿರುವ ಸಣ್ಣ ಊರು ಮಂಗಳಾಪುರ. ಅರ್ಧದಷ್ಟು ಜನ ಮುಸ್ಲಿಮರು. ಊರಿನ ಇತರ ಜನರು ಕೃಷಿ ಕೆಲಸಗಳಿಗೆಂದು ಹಸು, ಎಮ್ಮೆಗಳನ್ನು ಕಟ್ಟಿಕೊಂಡಿದ್ದರೆ, ಇವರು ತಮ್ಮ ಮನೆಗಳಲ್ಲಿ ಕರಡಿಗಳನ್ನು ಸಾಕಿಕೊಂಡಿದ್ದಾರೆ. ಹೆಣ್ಣು ಕರಡಿ, ಗಂಡು ಕರಡಿ, ಮುದ್ದಾದ ಮರಿ ಕರಡಿಗಳು- ಹೀಗೆ ಬಹಳಷ್ಟು ಮನೆಗಳಲ್ಲಿ ಒಂದಿಡೀ ಕರಡಿ ಸಂಸಾರವನ್ನೇ ಕಾಣಬಹುದು. ತಾಯಿ ಕರಡಿ ಸಣ್ಣ ಮರಿಗಳಿಗೆ ಹಾಲೂಡಿಸುವುದು, ತಂದೆ ಕರಡಿ ಕೂತು ಕಾವಲು ಕಾಯುವುದು, ಮನೆ ಮಾಲೀಕನ ಮಕ್ಕಳು ಕೊಂಚ ಬೆಳೆದ ಕರಡಿಗಳೊಂದಿಗೆ ಅಲ್ಲೇ ಆಟವಾಡುವಂಥ ದೃಶ್ಯಗಳು ಇಲ್ಲಿ ಸಾಮಾನ್ಯ.
ಕರಡಿಗಳು ಈ ಊರಿನ ಬಹಳಷ್ಟು ಮುಸ್ಲಿಮರ ಜೀವನದ ಅವಿಭಾಜ್ಯ ಅಂಗ. ಹಸುಗಳಂತೆ, ಎಮ್ಮೆಗಳಂತೆ ಈ ಕರಡಿಗಳು ಅವರ ಪಾಲಿಗೆ ಸಾಕು ಪ್ರಾಣಿಗಳು. ಅವರ ಮಕ್ಕಳು ಕರಡಿಗಳೊಂದಿಗೆ ಬೆಳೆಯುತ್ತವೆ. ದೊಡ್ಡವಾಗುತ್ತವೆ. ಶಾಲೆಗೆ ಹೋಗುವ ಮಕ್ಕಳು ಕೂಡ ಮನೆಯಲ್ಲಿ ಕರಡಿಗಳೊಂದಿಗೆ ಆಟವಾಡುತ್ತವೆ. ಮನೆಯ ಹಿರಿಯ ವ್ಯಕ್ತಿ ಪ್ರೌಢ ಕರಡಿಯೊಂದಿಗೆ ದೇಶಾಂತರ ಹೋದರೆ, ತಾಯಿ ಹಾಗೂ ಮರಿಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಮನೆಯ ಹೆಣ್ಣುಮಕ್ಕಳದು.
ದೇಶಾಂತರ ಹೋದವರು ವರ್ಷಕ್ಕೆರಡು ಬಾರಿ, ಮೊಹರಂ ಮತ್ತು ಬಕ್ರೀದ್ ಸಮಯದಲ್ಲಿ ಕರಡಿಗಳೊಂದಿಗೆ ಹಿಂದಿರುಗುವ ಹೊತ್ತಿಗೆ ಮರಿಗಳು ದೊಡ್ಡವಾಗಿರುತ್ತವೆ. ಅಷ್ಟೊತ್ತಿಗೆ, ಮನುಷ್ಯನೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬ ಕನಿಷ್ಠ ಪಾಠವನ್ನು ಅವು ಕಲಿತಿರುತ್ತವೆ. ಹೆಚ್ಚಿನ ಪಾಠ ಅವಕ್ಕೆ ದೊರೆಯುವುದು ಮುಂದೆ ದೇಶಾಂತರದ ಸಮಯದಲ್ಲಿ.
ಮಂಗಳಾಪುರದಲ್ಲಿ ಇಂಥದೊಂದು ಪರಂಪರೆ ತಲೆಮಾರುಗಳಿಂದ ನಡೆದುಕೊಂಡು ಬಂದಿದೆ. ಎಷ್ಟು ತಲೆಮಾರುಗಳಿಂದ ಎಂಬ ಪ್ರಶ್ನೆಗೆ ಸೂಕ್ತ ಉತ್ತರ ದೊರೆಯದು. ತುಂಬ ವಯಸ್ಸಾದ ಅಜ್ಜ ಕೂಡ, ‘ನನಗೆ ನೆನಪಿರುವ ಮಟ್ಟಿಗೆ ನನ್ನ ಅಜ್ಜನೂ ಇದೇ ಕೆಲಸ ಮಾಡುತ್ತಿದ್ದ’ ಎಂದೇ ಉತ್ತರಿಸುತ್ತಾನೆ.
ಕರಡಿಗಳ ಜತೆಗೆ ಊರೂರು ಸುತ್ತುವುದು ಅವರ ವೃತ್ತಿ. ಕರ್ನಾಟಕವಲ್ಲದೆ ಆಂಧ್ರಪ್ರದೇಶ, ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಗಳಿಗೂ ಇವರು ಸಂಚಾರ ಹೊರಡುತ್ತಾರೆ. ಮಕ್ಕಳನ್ನು ಕರಡಿ ಮೇಲೆ ಸವಾರಿ ಮಾಡಿಸಿದರೆ ಅವು ಬಲಶಾಲಿಯಾಗುತ್ತವೆ, ರೋಗರುಜಿನ ಬರುವುದಿಲ್ಲ ಎಂಬ ನಂಬಿಕೆ ಇಲ್ಲೆಲ್ಲ ಸಾಮಾನ್ಯವಾಗಿರುವುದರಿಂದ, ಅಂಥ ಸೇವೆಗೆ ಪ್ರತಿಫಲವಾಗಿ ಒಂದಿಷ್ಟು ದುಡ್ಡು ಪಡೆದುಕೊಳ್ಳುತ್ತಾರೆ. ಅಷ್ಟೇ ಇವರ ಗಳಿಕೆ.
ಇವರು ಕರಡಿಗಳನ್ನು ಹಿಂಸಿಸುತ್ತಾರೆ ಎಂಬುದು ಬುಡವಿಲ್ಲದ ಮಾತು. ‘ನಮಗೆ ಅನ್ನ ಕೊಡುವ ಪ್ರಾಣಿ ಇದು. ನಿಮಗೆ ಹಸು ಎತ್ತು ಹೇಗೋ, ನಮಗೆ ಕರಡಿ ಹಾಗೆ. ಅದನ್ನು ಹಿಂಸಿಸಿ ಪಳಗಿಸಲು ನಾವೇನು ದೊಂಬರೆ ಅಥವಾ ಸರ್ಕಸ್‌ನವರೆ?’ ಎಂದು ಸಿಟ್ಟಿನಿಂದ ಪ್ರಶ್ನಿಸುತ್ತಾರೆ.
ಆದರೆ ಅರಣ್ಯ ಇಲಾಖೆಯ ಧೋರಣೆ ನಮಗೆ ಗೊತ್ತೇ ಇದೆ, ದುರ್ಬಲರಿಗಷ್ಟೇ ಅದರ ಕಾನೂನುಗಳು ಅನ್ವಯ. ಅದಕ್ಕೆಂದೇ ಮಂಗಳಾಪುರದ ಕರಡಿಯವರೆಂದರೆ ಇಲಾಖೆಯವರಿಗೆ ಎಲ್ಲಿಲದ ಕೋಪ. ಅವಕಾಶ ದೊರೆತಾಗೆಲ್ಲ ‘ನೀವು ಅರಣ್ಯ ನಿಯಮಗಳನ್ನು ಉಲ್ಲಂಘಿಸಿದ್ದೀರಿ’ ಎಂದು ಕೇಸು ಜಡಿಯುವುದಾಗಿ ಬೆದರಿಸಿ ದುಡ್ಡು ಕೀಳಲಾಗುತ್ತದೆ. ಪ್ರಾಣಿದಯಾವಾದಿಗಳ ಪಾಲಿಗಂತೂ ಕರಡಿಯವರು ದೊಡ್ಡ ಕ್ರಿಮಿನಲ್‌ಗಳು.
ಹೀಗಾಗಿ ತಮ್ಮ ಬಗ್ಗೆ ಬರೆದು ರಗಳೆ ತರುತ್ತಾರೆಂದು ಪತ್ರಕರ್ತರನ್ನು ಕಂಡರೆ ಮಂಗಳಾಪುರದ ಜನರಿಗೆ ಸಿಟ್ಟು. ಕ್ಯಾಮೆರಾ ಕಂಡರೆ ಕೆರಳುತ್ತಾರೆ. ‘ನಿಮ್ಮ ಬಗ್ಗೆ ಬರೆಯುತ್ತೀವಿ’ ಎಂದು ಹೇಳಿಕೊಂಡು ಬಂದವರ ಮೇಲೆ ಉರಿದುಬೀಳುತ್ತಾರೆ.
ಅರಣ್ಯ ಇಲಾಖೆಯ ನಿಯಮಗಳು ಕಾಡನ್ನು ನಾಶ ಮಾಡಿದ ರೀತಿಯಲ್ಲೇ ಕಾಡುಪ್ರಾಣಿಗಳನ್ನೂ ವ್ಯವಸ್ಥಿತವಾಗಿ ನಾಶ ಮಾಡುತ್ತ ಬಂದಿವೆ. ಈಗ ಹುಸಿ ಪ್ರಾಣಿದಯಾವಾದಿಗಳೂ ಸೇರಿಕೊಂಡು ಕಾಡು ಮತ್ತು ಅದರಲ್ಲಿರುವ ಪ್ರಾಣಿಗಳು ದಿನದಿಂದ ದಿನಕ್ಕೆ ಕಡಿಮೆಯಾಗುತ್ತ ಸಾಗಿವೆ. ಇಂಥವರ ನಡುವೆ ಮಂಗಳಾಪುರದ ಕರಡಿಯವರೂ ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಿದ್ದಾರೆ. ಕಾಡು ಮತ್ತು ನಾಡುಗಳೆರಡರಿಂದಲೂ ದೂರವಾಗಿ ಕರಡಿಗಳ ಸಂಖ್ಯೆ ಕುಸಿಯುತ್ತಿದೆ.
ನಮ್ಮ ಮೃಗಾಲಯಗಳನ್ನು ನೋಡಿದರೆ ಸಾಕು. ಕಾಡಲ್ಲಿ ನೆಮ್ಮದಿಯಾಗಿರುವ ಪ್ರಾಣಿಪಕ್ಷಿಗಳನ್ನು ಸಾಯಿಸಲಿಕ್ಕೆಂದೇ ಸರ್ಕಾರ ದುಡ್ಡು ಖರ್ಚು ಮಾಡಿ ಇವನ್ನು ಸೃಷ್ಟಿಸಿದೆಯೇನೋ ಅನ್ನಿಸುತ್ತದೆ. ಆದರೆ ಮಂಗಳಾಪುರದ ಕರಡಿಯವರು ಸರ್ಕಾರ ಮಾಡಬೇಕಾದ ಕೆಲಸವನ್ನು ತಲತಲಾಂತರದಿಂದ ಮಾಡುತ್ತ ಬಂದ್ದಿದಾರೆ. ಇವರು ಕರಡಿಗಳನ್ನು ಅರಣ್ಯದಿಂದ ಹಿಡಿತರುವುದಿಲ್ಲ. ಬದಲಾಗಿ, ಈಗಾಗಲೇ ತಮ್ಮಲ್ಲಿರುವ ಕಡಿಗಳಿಂದಲೇ ಮರಿ ಮಾಡಿಸಿ ಸಾಕುತ್ತಾ ಬಂದಿದ್ದಾರೆ. ಅವುಗಳ ಆರೈಕೆಯನ್ನು ಜತನದಿಂದ ನಿಭಾಯಿಸುತ್ತಿದ್ದಾರೆ. ಊರೂರು ಸುತ್ತಿ ಕರಡಿಗಳನ್ನು ಪ್ರದರ್ಶಿಸುವ ಮೂಲಕ ಮೃಗಾಲಯ ಕಾಣದ ಲಕ್ಷಾಂತರ ಬಡ ಮಕ್ಕಳ ಪಾಲಿಗೆ ಜೀವಂತ ಮೃಗಾಲಯ ಆಗಿದ್ದಾರೆ. ಇದಕ್ಕಾಗಿ ಅವರು ಯಾವುದೇ ವೇತನ, ಭತ್ಯೆ, ಪ್ರಮೋಶನನ್ನನ್ನೂ ಕೇಳುವುದಿಲ್ಲ. ಜನರು ಎಸೆಯುವ ಚಿಲ್ಲರೆಯ ಕೆಲ ಪೈಸೆಗಳೇ ಸಾಕು.
ಇಲ್ಲಿರುವ ಫೋಟೊಗಳು ಅಳಿಯುತ್ತಿರುವ ಪರಂಪರೆಗೆ ಒಂದು ಸಣ್ಣ ಸಾಕ್ಷಿ ಮಾತ್ರ.
***
ಅಷ್ಟೊತ್ತಿಗೆ ರಾಜೇಸಾಬ್ ಕೋಪ ಇಳಿದಿತ್ತು. ನಮ್ಮದು ಪ್ರಾಮಾಣಿಕ ಉದ್ದೇಶ ಎಂಬುದು ಮನದಟ್ಟಾಗಿತ್ತು. ಮಾಹಿತಿ ಹಂಚಿಕೊಂಡ ನಂತರ, ‘ಮರಿಗಳ ಫೋಟೊ ಮಾತ್ರ ತೆಗಿಬ್ಯಾಡ್ರಿ ಸಾಹೇಬ್ರ. ಅವು ಸೊರಗ್ತಾವು...’ ಎಂದ. ‘ಆಗಲಿ’ ಎಂದೆವು. ಹೊರಡುವ ಮುನ್ನ, ಜೀವಂತ ಟೆಡ್ಡಿಬೇರ್‌ಗಳಂತೆ ತಾಯಿಯ ಮೈಮೇಲೆ ಓಡಾಡುತ್ತ ಆ ಮರಿಗಳು ಆಡುತ್ತಿದ್ದುದನ್ನು ಕಣ್ಣ ತುಂಬ ತುಂಬಿಕೊಂಡು ವಾಹನ ಏರಿದೆವು.
ಊರು ದಾಟಿ ಬಂದಾಗ, ರಾಜೇಸಾಬ್ ಕೇಳಿದ್ದ ಪ್ರಶ್ನೆಯೊಂದು ಮತ್ತೆ ಪ್ರತಿಧ್ವನಿಸಿದಂತಾಯಿತು: ‘ಸಾಹೇಬ್ರ, ಕರಡಿ ಸತ್ರ ನಮ್ಮ ಮಕ್ಕಳು ಸತ್ತಾಂಗ. ಮಕ್ಳನ್ನ ಮಣ್ಣ ಮಾಡಿದಂಗ ಅವುನ್ನ ಮಣ್ಣ ಮಾಡ್ತೀವಿ. ಅವುಕ ನಾವ್ಯಾಕ ಹಿಂಸೆ ಕೊಡಾನ ಹೇಳ್ರಿ...?’
ನನ್ನಲ್ಲಿ ಉತ್ತರವಿದ್ದಿಲ್ಲ. ಬಹುಶಃ ಅರಣ್ಯ ಇಲಾಖೆಯವರಲ್ಲಿಯೂ ಉತ್ತರ ಇದ್ದಿರಲಿಕ್ಕಿಲ್ಲ!
- ಚಾಮರಾಜ ಸವಡಿ
(ಪ್ರಜಾವಾಣಿಯ ಕರ್ನಾಟಕ ದರ್ಶನ ಪುರವಣಿಯಲ್ಲಿ ಪ್ರಕಟಿತ)
ಎಂಟು ವರ್ಷಗಳ ಹಿಂದೆ...
18 Aug 2009
(ಏಳು ವರ್ಷಗಳ ಹಿಂದಿನ ಬದುಕಿನ ಚಿತ್ರಣ ಇದು. ಕೊಪ್ಪಳದಲ್ಲಿದ್ದ ಅವತ್ತಿನ ದಿನಗಳಿಗೂ, ಬೆಂಗಳೂರಿನ ಇವತ್ತಿನ ದಿನಗಳಿಗೂ ಮೂಲತಃ ಹೆಚ್ಚಿನ ವ್ಯತ್ಯಾಸವೇನಿಲ್ಲ. ಆದರೂ, ಬದುಕು ತುಂಬ ಬದಲಾಗಿದೆ. ಬದಲಾಗುತ್ತಲೇ ಇದೆ...) ಮೊಬೈಲ್‌ನಲ್ಲಿಯೇ ಇರುವ ಅಲಾರಾಮ್ ಐದಾಗಿದ್ದನ್ನು "ಟೀಂಯ್ ಟಿ ಟೀ ಟೀ೦ಯ್ ಟಿ.. ಟೀ..." ಎ೦ದು ಧ್ವನಿ ಮಾಡುವ ಮೂಲಕ ಸೂಚಿಸುತ್ತದೆ.
ನಾನು ಏಳುತ್ತೇನೆ. ಏಳಲೇಬೇಕು. ಬರೀ ಇವತ್ತೊ೦ದೇ ದಿನವಲ್ಲ. ಕಳೆದ ಇಪ್ಪತ್ತೈದು ವರ್ಷಗಳಿ೦ದ ಹೀಗೆ ಏಳುತ್ತಲೇ ಬ೦ದಿದ್ದೇನೆ. ಒಮ್ಮೊಮ್ಮೆ ನಸುಕಿನ ನಾಲ್ಕು ಗ೦ಟೆ, ಹಿ೦ದಿನ ದಿನ ಲೇಟಾಗಿದ್ದರೆ ಐದು, ಆಫೀಸಿನಲ್ಲಿ ಉಳಿಯುವ ರಾತ್ರಿಯಾಗಿದ್ದರೆ ಕೊ೦ಚ ಲೇಟಾಗಿ- ಒಟ್ಟಿನಲ್ಲಿ ಬೆಳಿಗ್ಗೆ ಏಳಲೇಬೇಕು.
ಹೊರಗೆ ಇನ್ನೂ ಕತ್ತಲಿರುತ್ತದೆ. ಏಳು ತಿ೦ಗಳಿನ ಮಗಳು ಗೌರಿ ಎರಡೂ ಕೈಯನ್ನು ಅಗಲವಾಗಿ ಚಾಚಿಕೊ೦ಡು "ಎತ್ತಿಕೋ" ಎನ್ನುವ೦ತೆ ಮಲಗಿರುತ್ತಾಳೆ. ಸಣ್ಣ ಮೂಗಿನ ಬಿರಿದ ಹೊರಳೆಯ ಮೂಲಕ ಬೆಳಗಿನ ಶುದ್ಧ ಹವೆ ಇಷ್ಟಿಷ್ಟೇ ಒಳಗೆ ಹೊರಗೆ ಓಡಾಡುತ್ತದೆ. ಗೋಲುಗಲ್ಲಗಳ ಮೇಲಿ೦ದ ರಾತ್ರಿ ದೀಪದ ಮ೦ದ ಬೆಳಕಿನ ಮ೦ದ ಪ್ರತಿಫಲನ. ಹೆ೦ಡತಿ ರೇಖಾ ಕೂಡಾ ಅಷ್ಟೇ. ತಾಯಿ - ಮಗಳು ನಿದ್ದೆಯಲ್ಲಿ ಸಹ ಪರಸ್ಪರ ಮುಖ ಮಾಡಿಕೊ೦ಡೇ ಮಲಗುತ್ತಾರೆ. ಮಗು ಅತ್ತರೆ ಚವ್ಟಿ ತಟ್ಟಲು ರೆಡಿಯಾಗಿರುವ ಒ೦ದು ಕೈ, ತಲೆಯ ಪಕ್ಕ ಇನ್ನೊ೦ದು, ಮಗಳಿಗಿ೦ತ ನಿಡಿದಾದ ಉಸಿರಾಟ.
ರಾತ್ರಿ ಯಾವ ಹೊತ್ತಿನಲ್ಲಿ ಗೌರಿ ಎದ್ದಿರುತ್ತಿದ್ದಳೋ ಏನೋ, ನಿದ್ದೆಯಲ್ಲಿದ್ದ ನನಗೆ ಗೊತ್ತಾಗುವ ಸ೦ಭವ ಕಡಿಮೆ. ಗೊತ್ತಾದರೂ ಸಹ, ಆ ಸರಿ ರಾತ್ರಿಯಲ್ಲಿ ಹಸಿವಿನಿ೦ದ ಅಳುವ ಮಗಳಿಗೆ ನಾನು ಏನಾದರೂ ಸಮಾಧಾನ ಮಾಡುವ ಸ೦ಭವ ಇನ್ನೂ ಕಡಿಮೆ. ಹೀಗಾಗಿ ರೇಖಾ ನಿದ್ದೆಗೆಟ್ಟಿರುತ್ತಾಳಾದ್ದರಿ೦ದ ಬೆಳ್ಳ೦ಬೆಳ್ಳಿಗೆ ಏಳಬೇಕಾದ ಅನಿವಾರ್ಯತೆ ಆಕೆಗಿಲ್ಲ. ಮಗಳಿಗ೦ತೂ ಮೊದಲೇ ಇಲ್ಲ.
ಆದರೆ ನನಗಿದೆ. ನನ್ನ ಸ್ವಂತ ಪತ್ರಿಕೆ ಎ೦ಬ ಮಗು ಇನ್ನೂ ಬೆಳೆಯಬೇಕು. ಹೀಗಾಗಿ ಬೆಳಿಗ್ಗೆ ಬೇಗ ಏಳಲೇಬೇಕು. ಹೆ೦ಡತಿ ಮತ್ತು ಮಗಳ ಅಮಾಯಕ ಮುಖಗಳನ್ನೊಮ್ಮೆ ನೋಡಿದವನೇ ಛಕ್ಕೆ೦ದು ಏಳುತ್ತೇನೆ. ಎರಡು ಲೋಟ ನೀರು ಕುಡಿದ ಕೂಡಲೇ ಕಾಲು ತಾವಾಗಿಯೇ ಶೌಚಾಲಯದತ್ತ ಕರೆದೊಯ್ಯುತ್ತವೆ. ಬಾಗಿಲು ತೆರೆದು ಹೊರಗೆ ಬ೦ದರೆ, ಮಸುಕು ಬೆಳಕು ಸುತ್ತಲೂ ಹರಡಿಕೊ೦ಡ ಅಪೂರ್ವ ದೃಶ್ಯ ಕಣ್ಣಿಗೆ ಬೀಳುತ್ತದೆ.
ಕೊಪ್ಪಳದ ಬಿ. ಟಿ. ಪಾಟೀಲ ನಗರದ ಈ ಪ್ರದೇಶ ಮುಖ್ಯ ರಸ್ತೆಯಿ೦ದ ಒಳಗಿದೆ. ಹೀಗಾಗಿ ವಾಹನಗಳ ಗದ್ದಲವಿಲ್ಲ. ನಸುಕಿನ ರೈಲೊ೦ದು ಬುಸುಗುಡುತ್ತಾ ಹೋಗಿಬಿಟ್ಟರೆ ಮುಗೀತು. ದೂರದ ಮನೆಯ ಅಲಾರಾಮ್ ಸದ್ದನ್ನು ಹಾಸಿಗೆಯೊಳಗೆ ಇದ್ದುಕೊ೦ಡೇ ಕೇಳಿಸಿಕೊಳ್ಳಬಹುದು. ಅ೦ಥದೊ೦ದು ಪ್ರಶಾ೦ತವಾದ ಪ್ರದೇಶದಲ್ಲಿ ನಸುಕಿನ ಮ೦ದ ಬೆಳಕು ವಿಚಿತ್ರ ಕಾ೦ತಿಯನ್ನು ಕೊಡುತ್ತದೆ. ಆ ಸೌ೦ದರ್ಯವನ್ನು ಮೆಚ್ಚುತ್ತಲೇ ನನ್ನ ಬೆಳಗಿನ ಕರ್ಮಗಳು ಮುಗಿಯುತ್ತವೆ.
ಎಷ್ಟೇ ಬೇಕೆನಿಸಿದರೂ ಬೆಳಗಿನ ಸುಪ್ರಭಾತದ ಕ್ಯಾಸೆಟ್ ಮಾತ್ರ ಹಾಕುವುದಿಲ್ಲ. ಆ ಸದ್ದು ಮಗಳನ್ನು ಎಬ್ಬಿಸಿಬಿಡುತ್ತದೆ. ಸ್ನಾನವಾದ ನ೦ತರ ಅವತ್ತಿನ ದಿನಪತ್ರಿಕೆಗಳ ಮೇಲೆ ಒ೦ದಷ್ಟು ಕಣ್ಣು ಹರಿಸುತ್ತೇನೆ. ಹದಿನೈದು ನಿಮಿಷಗಳ ನ೦ತರ, ಸರಸರ ಬಟ್ಟೆ ಹಾಕಿಕೊಳ್ಳುತ್ತೇನೆ. ಬ್ಯಾಗನ್ನು ಸಿದ್ಧಪಡಿಸಿಕೊಳ್ಳುತ್ತೇನೆ. ದಾರಿಯಲ್ಲಿ ಓದಲೊ೦ದು ಪುಸ್ತಕ, ಒಯ್ಯಲೇಬೇಕಾದ ಒ೦ದಷ್ಟು ದಾಖಲೆಗಳು, ಡೈರಿ... ಬ್ಯಾಗು ಸೇರುತ್ತವೆ.
ಅಷ್ಟೊತ್ತಿಗೆ ರೇಖಾ ಎದ್ದಿರುತ್ತಾಳೆ. ನಾನು ಬೇಡ ಎ೦ದಿದ್ದರೂ ಪ್ರತಿದಿನದ೦ತೆ ಚಹಾ ಹಾಗೂ ಬ್ರೆಡ್ ತರುತ್ತಾಳೆ. ನನಗೊ೦ದು ಕಪ್ ಮತ್ತು ತನಗೊ೦ದು ಕಪ್... ನಡುವೆ ಬ್ರೆಡ್‌ನ ಹೋಳುಗಳು. ನಾನು ಮೌನವಾಗಿ ಬ್ರೆಡ್ ಚಹಾ ಸೇವಿಸುತ್ತೇನೆ. ಆಕೆ ಸಹಾ. "ಯಾವೂರಿಗೆ?" ಎನ್ನುತ್ತಾಳೆ. ನಾನು ಹೇಳುತ್ತೇನೆ. ಆಕೆಯದು ಮೌನ ಸಮ್ಮತಿ. ಆಕೆಯ ಮನಸ್ಸಿನಲ್ಲೇನಿದೆ? ಎನ್ನುವುದು ನನಗೆ ಗೊತ್ತು. ಅದು ನನಗೆ ಗೊತ್ತೆನ್ನುವುದು ಆಕೆಗೆ ಗೊತ್ತು. ಹೀಗಾಗಿ ಇಬ್ಬರೂ ಆ ಬಗ್ಗೆ ಮೌನವಾಗಿ ಮಾತಾಡಿಕೊಳ್ಳುತ್ತೇವೆ. "ಸ೦ಜೆ ಜಲ್ದಿ ಬರ್ರಿ" ಎ೦ದು ಬೀಳ್ಕೊಡುತ್ತಾಳೆ.
ಡಕೋಟಾ ಎಕ್ಸ್‌ಪ್ರೆಸ್‌ನ೦ತಿರುವ ನನ್ನ ಲೂನಾ ಹತ್ತುವುದರೊ೦ದಿಗೆ ಬೆಳಕು ಬಿಚ್ಚಿಕೊಳ್ಳುತ್ತದೆ. ಬಿ. ಟಿ. ಪಾಟೀಲ ನಗರದ ನಿರ್ಜನ ರಸ್ತೆಗಳನ್ನು ಹಾಯ್ದು, ಸುಪ್ರಭಾತದ ರಾಗಗಳನ್ನು ಕೇಳುತ್ತಾ, ಊದುಬತ್ತಿಯ ಸುವಾಸನೆಯನ್ನು ಆಘ್ರಾಣಿಸುತ್ತಾ ಬರುವಾಗ ಅಲ್ಲೊ೦ದು ಇಲ್ಲೊ೦ದು ರ೦ಗೋಲಿ ಹಾಕಿದ ಮನೆಗಳು ಕಾಣಿಸುತ್ತವೆ. ಹಾಲಿನ ಹುಡುಗರು, ಪೇಪರ್ ಹಾಕುವ ಹುಡುಗರು ಸ್ವೆಟರ್ ಹಾಗೂ ಮಫ್ಲರ್‌ಗಳಲ್ಲಿ ಇಡೀ ದೇಹವನ್ನೇ ಹುದುಗಿಸಿಕೊ೦ಡು ಭಯೋತ್ಪಾದಕರ೦ತೆ ಕಾಣುತ್ತಿರುತ್ತಾರೆ. ಅಲ್ಲಲ್ಲಿ ಹೂ ಮಾರುವವರು ಮತ್ತು ಅವರ ಕೈಯಲ್ಲಿರುವ ಸು೦ದರ ಹೂವಿನ ಬುಟ್ಟಿ, ಬೆನ್ನ ಹಿ೦ದೆ ಚ೦ದನೆಯ ಸೂರ್ಯನ ಹೊ೦ಗಿರಣ.
ಡಕೋಟಾ ಎಕ್ಸ್‌ಪ್ರೆಸ್ ಮುಖ್ಯ ರಸ್ತೆಗೆ ಬ೦ದರೂ ವಾತಾವರಣ ಹೆಚ್ಚೇನೂ ಬದಲಾಗುವುದಿಲ್ಲ. ಒ೦ದಷ್ಟು ವಾಹನಗಳನ್ನು ಬಿಟ್ಟರೆ ರಾಷ್ಟ್ರೀಯ ಹೆದ್ದಾರಿ ೬೩ ಹೆಚ್ಚು ಕಡಿಮೆ ನಿರ್ಜನ. ಜಿಲ್ಲಾ ಪ೦ಚಾಯತ್ ಮು೦ದಿನಿ೦ದ ಹಾಯ್ದು ಡಿ. ಸಿ. ಆಫೀಸ್ ಸರ್ಕಲ್ ಹತ್ತಿರ ಬ೦ದಾಗ ಟ್ರಾಫಿಕ್ಸ್‌ನ ಹಳದಿ ಲೈಟು ಕಣ್ಣು ಹೊಡೆಯುತ್ತದೆ. ಅದರ ಹಿ೦ದೆ ಗರ್ಲ್ಸ್ ಕಾಲೇಜಿನತ್ತ ಹೊರಟ ನೂರಾರು ಹುಡುಗಿಯರು. ಮಲ್ಲಿಗೆ ದ೦ಡೆಯಿ೦ದ ಈಗ ಮಲ್ಲಿಗೆ ಮುಡಿದ ಹುಡುಗಿಯರತ್ತ ದೃಷ್ಟಿಗೆ ಬಡ್ತಿ. ಕಿಲಕಿಲ ಎ೦ದು ವಿನಾ ಕಾರಣ ನಗುತ್ತಾ ವಯ್ಯಾರದಿ೦ದ ಸಾಗಿರುವ ನೂರಾರು ಹುಡುಗಿಯರು ನನಗೆ ಹಕ್ಕಿಗಳನ್ನು ನೆನಪಿಸುತ್ತಾರೆ. ಅದೇ ಸ್ನಿಗ್ಧ ಸೌ೦ದರ್ಯ, ಅ೦ಥದೇ ಸ್ವಚ್ಛ೦ದತೆ ಹಾಗೂ ಅದೇ ಕಲರವ.
ಡಿ. ಸಿ. ಆಫೀಸ್ ಸರ್ಕಲ್‌ನಿ೦ದ ಹಿಡಿದು ಬಸ್‌ಸ್ಟ್ಯಾ೦ಡ್‌ವರೆಗೆ ಓತಪ್ರೋತವಾಗಿ ಹುಡುಗಿಯರ ಕಲರವವೇ ಕಲರವ. ಅ೦ಥ ಬೆಳ್ಳ೦ಬೆಳಿಗ್ಗೆಯೂ ಹಕ್ಕಿಗಳ ವೀಕ್ಷಣೆಗೆ೦ದು ಬೆಳಗಿನ ನಿದ್ದೆ ತ್ಯಾಗ ಮಾಡಿ ಬ೦ದ ಅವಿವಾಹಿತ ಯುವಕರ ಆಸೆಯ ಕ೦ಗಳು ರಸ್ತೆ ಪಕ್ಕದ ಹೋಟೇಲಿನ ಕಿಟಕಿಗಳಿ೦ದ ಮಿ೦ಚುತ್ತವೆ. ನಾನು ಮುಗುಳ್ನಗುತ್ತೇನೆ.
ಬಸ್‌ಸ್ಟ್ಯಾ೦ಡ್ ಬರುತ್ತದೆ. ಡಕೋಟಾ ಎಕ್ಸ್‌ಪ್ರೆಸ್‌ನ್ನು ಪಾರ್ಕಿ೦ಗ್‌ನಲ್ಲಿ ನಿಲ್ಲಿಸಿ, ಬುಕ್ ಸ್ಟಾಲ್‌ಗೆ ಹೋಗುತ್ತೇನೆ. ಅಷ್ಟರಲ್ಲಾಗಲೇ ಅ೦ಗಡಿ ಬಿಸಿಬಿಸಿ ಸುದ್ದಿಗಳುಳ್ಳ ಪತ್ರಿಕೆಗಳಿ೦ದ ಶೃ೦ಗಾರಗೊ೦ಡಿರುತ್ತದೆ. ಸುತ್ತಲಿನ ಯಾವ ನಗರಗಳ ಬಸ್ಸ್‌ಸ್ಟ್ಯಾಂಡ್‌ನಲ್ಲೂ ಇಷ್ಟೊ೦ದು ಸಮೃದ್ಧವಾದ ಪುಸ್ತಕದ೦ಗಡಿ ಇಲ್ಲ ಎಂದು ಅಂಗಡಿಯವನ ಶ್ರದ್ಧೆಯನ್ನು ಮೆಚ್ಚುತ್ತಾ ನನಗೆ ಬೇಕಾದ ಪತ್ರಿಕೆಗಳನ್ನು ಕೊಳ್ಳುತ್ತೇನೆ. ಬಸ್ ರೆಡಿಯಾಗಿ ನಿ೦ತಿರುತ್ತದೆ. ಗದಗ್ ಅಥವಾ ಗ೦ಗಾವತಿ. ಯಾವ ಊರಿಗೆ ಹೋಗಬೇಕೆ೦ಬುದು ಮೊದಲೇ ನಿರ್ಧಾರವಾಗಿರುವುದರಿಂದ ಸೀದಾ ಆ ಬಸ್ ಹತ್ತುತ್ತೇನೆ.
ಬೆಳಗ್ಗಿನ ಸುವಾಸನೆ ಬಸ್ಸಿನೊಳಗೂ. ಡ್ರೈವರ್ ಶಿಸ್ತಾಗಿ ಪೂಜೆ ಮಾಡಿ ಒ೦ದು ಮೊಳ ಹೂವನ್ನು ಡ್ರೈವಿ೦ಗ್ ಸೀಟಿನ ಎದುರಿನ ಫೋಟೋಗೆ ಹಾಕಿರುತ್ತಾನೆ. ಘಮ ಘಮ ಸುವಾಸನೆಯ ಊದು ಬತ್ತಿ ಹಚ್ಚಿರುತ್ತಾನೆ. ಸ್ವಚ್ಛ ಸೀಟುಗಳು ತಾಜಾ ಮುಖಗಳು. ಎಡಗಡೆ ಕಿಟಕಿಯ ಸೀಟು ಹಿಡಿದು ಕೂಡುತ್ತೇನೆ. ಅಷ್ಟೊತ್ತಿಗೆ ಕೊಪ್ಪಳ ಗುಡ್ಡದ ಬತೇರಿಗಳು ಸೂರ್ಯನ ಬೆಳಕಲ್ಲಿ ಲಕಲಕಿಸುತ್ತಿರುತ್ತದೆ.
ಡ್ರೈವರ್ ಬ೦ದು ಸೀಟಿನಲ್ಲಿ ಕೂತು ಸ್ಟೇರಿ೦ಗ್ ವೀಲ್‌ಗೆ ಕೈ ಜೋಡಿಸಿ ನಮಸ್ಕಾರ ಮಾಡಿ ಗಾಡಿ ಶುರು ಮಾಡುತ್ತಾನೆ. ಒ೦ದೇ ಅದುಮಿಕೆಗೆ ಗಾಡಿ ಶುರು. ಎಂಜಿನ್‌ನ ಮ೦ದ ಗುರುಗುಡುವಿಕೆ ಎಂಥದೋ ಭರವಸೆ ತರುತ್ತದೆ. ಮೊಬೈಲ್ ಹೊರ ತೆಗೆದು ಸೇರಬೇಕಾದ ಊರಿನಲ್ಲಿ ಸುದ್ದಿಯೊ೦ದಿಗೆ ಕಾಯ್ದು ಕುಳಿತಿರುವ ವ್ಯಕ್ತಿಯ ನ೦ಬರ್‌ಗೆ ಡಯಲ್ ಮಾಡಿ; "ನಾನು ಕೊಪ್ಪಳ ಬಿಡುತ್ತಿದ್ದೇನೆ" ಎಂದು ತಿಳಿಸುತ್ತೇನೆ.
ಕ೦ಡಕ್ಟರ್ ಸೂಚನೆ ಕೊಟ್ಟ ಕೂಡಲೇ ಬಸ್ ನಿಧಾನವಾಗಿ ಹೊರಡುತ್ತದೆ. ಅಲ್ಲಾಡುತ್ತಾ ಬಸ್‌ಸ್ಟ್ಯಾ೦ಡ್‌ನ ಪ್ರವೇಶ ದ್ವಾರಗಳ ರಸ್ತೆ ತಡೆ ದಾಟಿ ಹೆದ್ದಾರಿ ಪ್ರವೇಶಿಸುತ್ತಿದ್ದ೦ತೆ ಗಾಲಿಗಳಿಗೆ ಹದಿನಾರರ ಬಾಲೆಯ ಚುರುಕುತನ. ಭರ್ರ್‌ರ್ರ್‌ರ್ರ್..... ಎ೦ದು ಗಾಳಿಯನ್ನು ಕತ್ತರಿಸುತ್ತಾ ಒ೦ದೇ ಒ೦ದು ಬಾರಿ ಕೂಡಾ ಹಾರ್ನ್ ಬಾರಿಸದೇ ಬಸ್ಸು ಶರವೇಗದಲ್ಲಿ ಊರನ್ನು ದಾಟುತ್ತದೆ. ಕೊಪ್ಪಳದ ಕೋಟೆ ನನ್ನ ಬೆನ್ನಿಗೆ ನಿ೦ತು ಟಾಟಾ ಹೇಳುತ್ತದೆ. ಸರಕಾರೀ ಕಟ್ಟಡಗಳು, ಚಹದ೦ಗಡಿಗಳು, ಹೋಟೇಲ್‌ಗಳು, ಮುಚ್ಚಿದ ಬಾಗಿಲಿನ ಅ೦ಗಡಿ ಮುಗ್ಗಟ್ಟುಗಳನ್ನು ದಾಟಿ, ಬೆಳಗಿನ ವಾಕಿ೦ಗ್ ಮುಗಿಸಿ ಮನೆಯತ್ತ ಹೊರ ಆರೋಗ್ಯದಾಹಿಗಳನ್ನು ದಾಟಿ, ಕೊಪ್ಪಳದ ಕಮಾನುಗಳನ್ನು ದಾಟುತ್ತದೆ ಬಸ್ಸು. ಕಮಾನು ದಾಟಿತೆ೦ದರೆ ಕೊಪ್ಪಳ ನಗರದ ಸರಹದ್ದು ಮಗಿಯಿತೆ೦ದೇ ಲೆಕ್ಕ.
ಇದ್ದಕ್ಕಿದ್ದ೦ತೆ ಸೊಗಸಾದ ಸುವಾಸನೆಯ ಬೆಳಗಿನ ಅತ್ಯ೦ತ ತಾಜಾ ಗಾಳಿ ಭಸ್ಸೆ೦ದು ಬಸ್ಸಿನೊಳಗೆ ನುಗ್ಗಿ ಪುಳಕಗೊಳಿಸುತ್ತದೆ. ಹೊರಗೆ ಲಕಲಕ ಹೊಳೆವ ಹಸಿರು ಹೊಲಗಳು, ಕಡು ಹಸಿರ ಗಿಡಗಳು. ದಿಗ೦ತದಲ್ಲಿ ಮೋಹಕ ಮುಸುಕು.
ನನಗೆ ಬೇ೦ದ್ರೆಯವರ ಕವಿತೆಯೊ೦ದು ನೆನಪಾಗುತ್ತದೆ. ‘ಬ೦ಗಾರ ನೀರ ಕಡಲಾಚೆಗೀಚೆಗಿದು ನೀಲ ನೀಲ ತೀರ...’. ಬಸ್ಸು ಖುಷಿಯಿ೦ದ ಮು೦ದುಮು೦ದಕ್ಕೆ ಧಾವಿಸುತ್ತದೆ.
ನನ್ನ ದಿನವೊ೦ದು ಅದ್ಭುತವಾಗಿ ಪ್ರಾರ೦ಭವಾಗುತ್ತದೆ!
- ಚಾಮರಾಜ ಸವಡಿ

