ಕೂಗಾಟ ಅಸಮರ್ಥತೆಯ ಸಂಕೇತ

4 Nov 2010

ಇಂಗ್ಲಿಷ್‌ನಲ್ಲಿ ಒಂದು ಮಾತಿದೆ: Bad carpenter quarrels with tools ಅಂತ. ಅಂದರೆ, ಕೆಲಸ ಬಾರದ ಬಡಗಿ ಉಪಕರಣಗಳೊಂದಿಗೆ ಗುದ್ದಾಡುತ್ತಾನೆ ಅಂತ. ಇದರರ್ಥ ಇಷ್ಟೇ: ವಿಷಯವೊಂದು ಅಥವಾ ಮಾಡುವ ವಿಧಾನ ಗೊತ್ತಿರದಿದ್ದಾಗ ಮನುಷ್ಯ ಹತಾಶನಾಗುತ್ತಾನೆ. ಉದ್ರಿಕ್ತನಾಗುತ್ತಾನೆ. ಷಂಡ ಸಿಟ್ಟು ಆವರಿಸಿಕೊಂಡು ಮಂಡೆ ಬಿಸಿಯಾಗುತ್ತದೆ. ಆಗ ತನಗಿಂತ ಚಿಕ್ಕವರ ಮೇಲೆ, ಕೆಳಗಿನವರ ಮೇಲೆ ಕೂಗಾಡಲು ಶುರು ಮಾಡುತ್ತಾನೆ.

ನಿಮಗೆ ಅನುಮಾನವಿದ್ದರೆ, ನಿಮ್ಮ ಸುತ್ತಮುತ್ತಲಿನ ವಾತಾವರಣವನ್ನೊಮ್ಮೆ ಸೂಕ್ಷ್ಮವಾಗಿ ಪರಿಶೀಲಿಸಿ. ನಿಮಗಿಂತ ಮೇಲಿನ ಅಧಿಕಾರಿ ಅಥವಾ ಹಿರಿಯ ವ್ಯಕ್ತಿಗೆ ಆಗಾಗ ಕೂಗಾಡುವ ಚಟ ಇದೆ ಎಂದರೆ, ಅದು ಅವನ ಅಸಮರ್ಥತೆಯ ಸಂಕೇತವಷ್ಟೇ. ತನಗೊಪ್ಪಿಸಿದ ಕೆಲಸ ಅವನಿಗೆ ಸರಿಯಾಗಿ ಗೊತ್ತಿರುವುದಿಲ್ಲ ಅಥವಾ ಅದನ್ನು ಸರಿಯಾಗಿ ಜಾರಿಗೊಳಿಸಲು ಆತ ಅಸಮರ್ಥನಾಗಿರುತ್ತಾನೆ.
 

ಯಾವುದೇ ಕಚೇರಿಗೆ ಹೋಗಿ ನೋಡಿದರೂ ಇಂಥ ಕೂಗುಮಾರಿಗಳು ಸಿಕ್ಕೇ ಸಿಗುತ್ತಾರೆ. ತಮಗಿಂತ ಕಿರಿಯರಾದವರ ಮೇಲೆ ಹರಿಹಾಯುವುದೇ ಅವರ ಫುಲ್‌ ಟೈಂ ಕೆಲಸ. ಹೀಗೆ ಕೂಗಾಡುವುದೇ ಸೀನಿಯಾರಿಟಿಯ ಮುಖ್ಯ ಲಕ್ಷಣ ಅಂತ ಕೆಲವರು ಅವರು ಅಂದುಕೊಂಡಿರುತ್ತಾರೆ. ಕೂಗಾಡದಿದ್ದರೆ ಕೆಲಸವಾಗುವುದಿಲ್ಲ ಎಂಬ ಭ್ರಮೆಯೂ ಅವರಿಗಿರುತ್ತದೆ. ತಾನೊಬ್ಬನೇ ಬುದ್ಧಿವಂತ, ಇತರರೆಲ್ಲ ದಡ್ಡರು ಎಂಬ ತನ್ನ ಭ್ರಮೆಯಿಂದಾಗಿ ಕೂಗಾಟ ಶುರುವಾಗಿದೆ ಎಂಬುದನ್ನೇ ಅವರು ಮರೆತಿರುತ್ತಾರೆ. ಕ್ರಮೇಣ ಕೂಗಾಟವೇ ಚಟವಾಗಿ, ಫುಲ್‌ಟೈಂ ಡ್ಯೂಟಿಯಾಗಿ ಬದಲಾಗುತ್ತದೆ. ಕಚೇರಿಗೆ ಬಂದ ಕೂಡಲೇ ಶುರುವಾಗುವ ಕೂಗು ರೋಗ ಮನೆಗೆ ಹೋದ ನಂತರವೂ ಮುಂದುವರಿಯುತ್ತದೆ.
 

ಇವರೆಲ್ಲ ನಿಜಕ್ಕೂ ಅತೃಪ್ತ ಆತ್ಮಗಳು. ಅವರಿಗೆ ಸ್ವಂತ ಬುದ್ಧಿ ಇರುವುದು ಕಡಿಮೆ. ಇರುವ ಅಲ್ಪ ಬುದ್ಧಿಯನ್ನು ಸರಿಯಾಗಿ ಬಳಸಿಕೊಳ್ಳುವ ದಾರಿ ಗೊತ್ತಿರುವ ಸಂಭವ ಇನ್ನೂ ಕಡಿಮೆ. ಇದೊಂಥರಾ ಅತ್ತೆ ಮನಃಸ್ಥಿತಿ. ಸೊಸೆಯನ್ನು ನೋಡಿದ ಕೂಡಲೇ ಹೇಗೆ ಅತ್ತೆಯ ನಾಲಿಗೆ ಕಡಿಯತೊಡಗುತ್ತದೋ ಹಾಗೆ ತಮಗಿಂತ ಕಿರಿಯರನ್ನು ನೋಡಿದ ತಕ್ಷಣ ಇವರ ನಾಲಿಗೆ ಕಡಿಯತೊಡಗುತ್ತದೆ. ಸಣ್ಣ ಸಣ್ಣ ವಿಷಯಗಳಿಗೂ ದೊಡ್ಡ ದನಿಯಲ್ಲಿ ಕೂಗಾಡುತ್ತ, ಆ ಮೂಲಕ ತಮ್ಮ ಅಸಮರ್ಥತೆಯನ್ನು ಮುಚ್ಚಿಹಾಕಲು, ಅಧಿಕಾರ ಸ್ಥಾಪಿಸಲು ಮುಂದಾಗುತ್ತಾರೆ.
 

ಇಂಥವರನ್ನು ನೋಡಿದಾಗ ಮರುಕ ಎನಿಸುತ್ತದೆ. ಕೂಗಾಡುವುದಕ್ಕೂ ಮುನ್ನ, ಈ ವಿಷಯವನ್ನು ಸರಳವಾಗಿ ಪರಿಹರಿಸುವುದು ಹೇಗೆ ಎಂದು ಒಮ್ಮೆ ಯೋಚಿಸಿದರೂ ಸಾಕು, ಕೂಗಾಟ ತನಗೆ ತಾನೇ ಬಂದಾಗುತ್ತದೆ. ತನಗೆ ಗೊತ್ತಿರುವುದನ್ನು ಇತರರಿಗೆ ಕಲಿಸುವ, ಇತರರಿಗೆ ಗೊತ್ತಿರುವುದನ್ನು ತಾನು ಕಲಿಯುವ ವಿವೇಚನೆ ಮೂಡುತ್ತದೆ. ಸಮೃದ್ಧ ಮನಸ್ಸಿನ ಸಂಕೇತ ಅದು. ಅದಿಲ್ಲದಿದ್ದರೆ, ಬರೀ ಕೂಗಾಟ, ಹಾರಾಟ, ಚೀರಾಟ. ಖಾಲಿ ಡಬ್ಬ ಹೆಚ್ಚು ಶಬ್ದ ಮಾಡುವಂತೆ, ಟೊಳ್ಳು ಪ್ರತಿಭೆಗಳು ಕೂಗಾಡೋದೇ ಹೆಚ್ಚು.

ತಲೆ ಸರಿಯಾಗಿ ಕೆಲಸ ಮಾಡುತ್ತಿದ್ದರೆ ಅಲ್ಲಿ ಬಾಯಿಗೇನು ಕೆಲಸ?
 

- ಚಾಮರಾಜ ಸವಡಿ

9 comments:

Mahesh Bhat said...

ನಿಮ್ಮ ಮಾತು ನೂರಕ್ಕೆ ನೂರು ಸತ್ಯ

hariharapurasridhar said...

ಚಾಮರಾಜ್,
ಲೇಖನ ಓದುವಾಗ ನನಗೇ ಹೇಳ್ತಾ ಇದ್ದೀರಿ! ಅನ್ನಿಸ್ತು.ಎಂಥಾ ಕಟು ಸತ್ಯವನ್ನು ಎಷ್ಟು ಸರಳವಾಗಿ ಮನಮುಟ್ಟುವಂತೆ ಬರೆದಿದ್ದೀರಿ! ಇಲ್ಲಿ ನಾ ಕಂಡಿದ್ದು ಎರಡು ವಿಚಾರ ಚಾಮರಾಜ್.ನನ್ನ ಸರ್ವೀಸ್ ಮುಗೀತಾ ಬಂತು. ನನ್ನ ಸೇವಾ ಅವಧಿಯಲ್ಲಿ ಹತ್ತಾರು ಜನ ಅಧಿಕಾರಿಗಳ ಕೈಕೆಳಗೆ ಕೆಲಸವನ್ನು ಮಾಡಿದ್ದೀನಿ.ಒಬ್ಬರೂ ಇದುವರೆವಿಗೆ ನನ್ನ ಮೇಲೆ ಕೂಗಾಡಿಲ್ಲ. ಆದರೆ ನನ್ನ ಕಣ್ಣ ಮುಂದೆಯೇ ಬೇರೆಯವರ ಮೇಲೆ ಕೂಗಾಡಿರುವುದನ್ನು ಕಂಡು ಒಮ್ಮೊಮ್ಮೆ ಅಂತಾ ಅಧಿಕಾರಿಗಳಿಗೆ ವೈಯಕ್ತಿಕವಾಗಿ ಮಾತಾಡಿದ್ದೇ ಅಲ್ಲದೆ, ಒಮ್ಮೊಮ್ಮೆ ಅವರ ಪತ್ನಿಯರಿಗೂ ಮಾತನಾಡಿ" ನೋಡೀ ನಿಮ್ಮೆಜಮಾನ್ರು ಕೂಗಾಡಿ ಅವರ ಬಿ.ಪಿ. ಜಾಸ್ತಿಮಾಡಿಕೊಳ್ತಾರೆಯೇ ಹೊರತೂ ನಮ್ ಜನಾ ಏನೂ ಬದಲಾಗೋಲ್ಲ. ಸ್ವಲ್ಪ ತಿಳಿಹೇಳಿ, ಅಂತಾ ಕೂಡ ಹೇಳಿ ಆಫೀಸ್ ವಿಚಾರವನ್ನು ಅವರ ಮನೆಯವರೆಗೂ ಕೊಂಡೊಯ್ದ ಉಧಾಹರಣೆಗಳಿವೆ.ನನ್ನ ಅನುಭವದಲ್ಲಿ ಹೇಳಬೇಕೂಂದ್ರೆ ನನ್ನ ಕೈ ಕೆಳಗೆ ಕೆಲಸ ಮಾಡೋ ಸಿಬ್ಬಂಧಿಗಳನ್ನು ಪ್ರೀತಿಸಿದಾಗ ಕೆಲಸ ಮಾಡಿದ್ದು ಕಡಿಮೆ. ಕೂಗಾಡಿದಾಗಲೇ ಹೆಚ್ಚು. ಎಲ್ಲಾ ಸಂದರ್ಭದಲ್ಲೂ ಒಂದೇ ಸೂತ್ರ ಅಪ್ಲೆ ಮಾಡಲು ಬರೋದಿಲ್ಲ. ಎಲ್ಲಾ ಅವರವರ ವಿವೇಚನೆಗೆ ಬಿಟ್ಟಿದ್ದು.
ಅಂತೂ ನಿಮ್ಮ ಮಾತು ಸತ್ಯ. ಆದರೆ ಅಪರೂಪಕ್ಕೆ ಕೂಗಾಡಲೂ ಬೇಕಾಗುತ್ತೆ. ಇಲ್ಲದಿದ್ದರೆ ಕೆಲಸಾ ಆಗೋದಿಲ್ಲ. ದಪ್ಪ ಚರ್ಮದವರಿಗೆ ದಪ್ಪ ನಾಲಗೆಯೇ ಬೇಕಾಗುತ್ತೆ.

Chamaraj Savadi said...

ಕೆಲವೊಂದು ವಿನಾಯಿತಿಗಳು ಇರುತ್ತವೆ ಶ್ರೀಧರ ಸರ್‌. ನೀವು ಆ ಪಟ್ಟಿಯಲ್ಲಿದ್ದೀರಿ. ಈ ಬರಹ ನಿಮ್ಮಂಥವರಿಗೆ ಅನ್ವಯವಾಗಲ್ಲ ಬಿಡಿ.

ಕೂಗಾಡೋದು ಎಂಬ ಶಬ್ದದ ಅರ್ಥ ಬೇರೆ. ಗದರಿಸಿ ಹೇಳೋದು ಬೇರೆ. ನಿಮಗೆ ಇವೆರಡರ ನಡುವಿನ ವ್ಯತ್ಯಾಸ ಚೆನ್ನಾಗಿ ಗೊತ್ತಿದೆ.

ಆದರೆ, ಏನೂ ಗೊತ್ತಿರದ ದಡ್ಡರು, ತಿಳಿಸಿ ಹೇಳಲಾಗದ ಅವಿವೇಕಿಗಳಿಗೆ ಮಾತ್ರ ಈ ಬರಹ ಅನ್ವಯ.

ನಿಮ್ಮ ಮನಃಸ್ಥಿತಿ ನನಗೆ ಗೊತ್ತು. ನಿಮ್ಮಂಥವರ ಸಂತತಿ ಸಾವಿರವಾಗಲಿ ಅಂತ ಹಾರೈಸುತ್ತೇನೆ.

ಹರಿಹರಪುರ ಶ್ರೀಧರ್ said...

ಶ್ರೀ ಚಾಮರಾಜ್,
ನನ್ನ ಬಗ್ಗೆ ನಿಮ್ಮ ಅಭಿಮಾನದ ಮಾತುಗಳಿಂದ ಮುಜುಗರವಾಗಿದೆ. ಅಂತೆಯೇ ಎಲ್ಲಾ ಪತ್ರಕರ್ತರೂ ನಿಮ್ಮಂತಿದ್ದರೆ ಈ ದೇಶದ ಪರಿಸ್ಥಿತಿಯೇ ಬೇರೆ ರೀತಿ[ಉನ್ನತವಾಗಿ] ಇರುತ್ತಿತ್ತು.[ನಿಮ್ಮಂಥವರ ಸಂತತಿ ಸಾವಿರವಾಗಲಿ ಅಂತ ಹಾರೈಸುತ್ತೇನೆ] ನಿಮ್ಮ ಮಾತು ನಿಮಗೇ ಹೆಚ್ಚು ಸೂಕ್ತ. ನಿಮ್ಮಂತಹ ಪತ್ರಕರ್ತರ ಸಂಖ್ಯೆ ಸಾವಿರವಾದರೆ ತಾಯಿ ಭಾರತಿಯ ಗೌರವವು ಜಗತ್ತಿನಲ್ಲಿ ಅತ್ಯಂತ ಭವ್ಯವಾಗಿರುತ್ತದೆಂದು ವಯಸ್ಸಿನಲ್ಲಿ ನಿಮಗಿಂತ ಹಿರಿಯನಾಗಿ ಹಾರೈಸುತ್ತೇನೆ.
ನಮಸ್ತೆ.

ashwath said...

ಸರ್ ನಿಮ್ಮ ಮಾತು ನೂರಕ್ಕೆ ನೂರು ನಿಜ. ಹಾಗೆನೇ ತಮ್ಮ ಕೈಕೆಳಗಿನವರು ಉತ್ತಮವಾಗಿ ಕೆಲಸ ಮಾಡ್ತಿದ್ರೂ ಅವ್ರಿಗೆ ಸಹಿಸೋದಕ್ಕೆ ಆಗಲ್ಲ ಅನ್ನಿಸುತ್ತೆ. ಎಲ್ಲೋ ಒಮ್ಮೆ ಸಣ್ಣ ತಪ್ಪು ಆಗ್ಬಿಟ್ರೆ ಅವರ ಕೂಗಾಟ ಮತ್ತೂ ಹೆಚ್ಚಾಗ್ಬಿಡುತ್ತೆ. ತನಗಿಂತ ಇವ ಚೆನ್ನಾಗಿ ಕೆಲಸ ಮಾಡ್ಬಿಡುತ್ತಾನಲ್ಲಾ ಅನ್ನೋ ಹೊಟ್ಟೆಕಿಚ್ಚಾ ಇವರಿಗೆ ?

Chamaraj Savadi said...

ಪ್ರೀತಿಯ ಅಶ್ವಥ್‌, ನಿಮ್ಮ ಅನಿಸಿಕೆ ಸರಿ. ತನಗಿಂತ ಇವ ಚೆನ್ನಾಗಿ ಕೆಲಸ ಮಾಡುತ್ತಾನಲ್ಲಾ ಎಂಬುದೇ ಕೂಗಾಟದ ಹಿಂದಿನ ಮರ್ಮ. ಅದು ಅವರ ಅಸಮರ್ಥತೆತೆಯ ಸಂಕೇತವೂ ಹೌದು. ಕೂಗಾಟ ನಿರ್ಲಕ್ಷ್ಯಿಸುವುದೇ ಉತ್ತಮ ಉತ್ತರ. ಎಂದಿನಂತೆ ಕೆಲಸ ಮಾಡುತ್ತಾ ಹೋಗುವುದು ಇನ್ನೂ ಉತ್ತಮ.

ಶಿವಪ್ರಕಾಶ್ said...

Well said sir.. :)

samayakannada said...

ಥ್ಯಾಂಕ್ಸ್‌ ಶಿವಪ್ರಕಾಶ್‌. ನಿಮಗೂ ಇಂಥ ಅನುಭವಗಳಾಗಿರಬಹುದು ಅಂತ ಅಂದುಕೊಂಡಿದ್ದೇನೆ. :)

manjunath said...

ಚೆನ್ನಾಗಿದೆ