ಅರ್ಥವಾಯಿತೆ?... ಅರ್ಥವಾಗದಿದ್ದೀತೆ?

21 Nov 2010

ಮಾತು ಮರೆತ ಕ್ಷಣ
ನಿನ್ನದೇ ನೆನಪು
ಅಲ್ಲೆಲ್ಲೋ ನೀನು
ಮೂಕವಾಗಿದ್ದೀ ಅಂತ

ದುಃಖ ಉಕ್ಕಿರಬೇಕು ಅಲ್ಲಿ
ನನ್ನ ಕಣ್ಣುಗಳು ಉಕ್ಕಿದವಿಲ್ಲಿ
ಹಿತ ನನಗೆ
ನಿನ್ನ ದುಃಖ ನನ್ನದಾಯಿತು ಅಂತ

ಕನಸಲ್ಲಿ ನಕ್ಕೆಯೇನೋ
ಇಲ್ಲಿ ಹೃದಯ ಹೂವಾಯಿತು
ನಿದ್ದೆಯಾಳದಲ್ಲೆಲ್ಲೋ
ನೆಮ್ಮದಿಯ ಹೊರಳು

ನಾನು ನಾನಾಗಿಲ್ಲ
ನೀನಾಗಿದ್ದೇನೆ
ನೀನು ನೀನಾಗಿಲ್ಲ
ನಾನಾಗಿದ್ದೀ

ಹೆಚ್ಚೇನ ಹೇಳಲಿ?
ಅಲ್ಲಿಯ ಕಿಚ್ಚು
ಇಲ್ಲಿ ಧಗಿಸುತ್ತದೆ
ಅಲ್ಲಿಯ ಕಣ್ಣೀರು
ಇಲ್ಲಿ ಹನಿಯುತ್ತದೆ
ಅಲ್ಲಿಯ ಖುಷಿಗೆ
ಇಲ್ಲಿ ಉಕ್ಕುತ್ತದೆ

ಅಲ್ಲಿಗೂ ಇಲ್ಲಿಗೂ
ಏನದು ನಂಟು
ಮಾಯೆಯೋ ಮಮತೆಯೋ
ಎಲ್ಲ ಮೀರಿದ
ಪ್ರೀತಿಯ ಒರತೆಯೋ

ಇದು
ಅಕ್ಷರ ಮೀರಿದ ಭಾವ

ಅರ್ಥವಾಯಿತೆ?
ಅರ್ಥವಾಗದಿದ್ದೀತೆ?

- ಚಾಮರಾಜ ಸವಡಿ

6 comments:

ಕೃಷ್ಣಪ್ರಕಾಶ ಬೊಳುಂಬು said...

ಹೆಚ್ಚೇನೂ ಅರ್ಥವಾಗಲಿಲ್ಲ ಚಾಮರಾಜಗಾರು!
ಆದರೆ ಒನ್ದು ಅರ್ಥವಾಗಿದೆ, ಅದೇನೆನ್ದರೆ ಎಲ್ಲವನ್ನೂ ಮೀರಿದ ಪ್ರೀತಿಯ ಒರತೆಗೆ ಅಕ್ಷರರೂಪವನ್ನೀಯುತ್ತಿದ್ದೀರಿ.

kavinagaraj said...

ಚಾಮರಾಜರೇ, ಸುಂದರ ಅಭಿವ್ಯಕ್ತಿ.

samayakannada said...

ಥ್ಯಾಂಕ್ಸ್‌ ಕೃಷ್ಣಪ್ರಕಾಶ್‌. ನಿಮಗೆ ಅರ್ಥವಾಗದ್ದು ಕೇಳಿ ನಾನು ಇನ್ನೂ ಮಾಗಿಲ್ಲ ಅನಿಸಿತು :)

ಪ್ರೀತಿಯ ಒರತೆಯೇ ಹಾಗೆ. ಕ್ರಮೇಣ ಅರ್ಥವಾಗುತ್ತದೆ ಅಂದುಕೊಂಡಿದ್ದೇನೆ.

samayakannada said...

ಥ್ಯಾಂಕ್ಸ್‌ ನಾಗರಾಜ್‌ ಅವರೇ. ನಿಮಗೆ ಅಭಿವ್ಯಕ್ತಿ ಸುಂದರವಾಗಿ ಕಂಡಿದೆ. ನನಗೆ ಅದನ್ನು ಜೀರ್ಣಿಸಿಕೊಳ್ಳುವುದು ಕಷ್ಟಕರವಾಗಿದೆ. :)

ಕೃಷ್ಣಪ್ರಕಾಶ ಬೊಳುಂಬು said...

ನಿಮ್ಮ ಬರೆಹಗಳನ್ನು ಮತ್ತೂ ಓದಿದ ನಂತರ ಅರ್ಥವಾಗುತ್ತಿದೆ ಚಾಮರಾಜಗಾರು. ಮನಸ್ಸಿಗೆ ತಟ್ಟುವಂತೆ ಬರೆದಿದ್ದೀರಿ.

Swarna said...

ಸುಂದರ ಭಾವ ಸರ್
ಸ್ವರ್ಣಾ